Thursday, December 14, 2006

ಬೆಸ (odd) ಸಂಖ್ಯೆಯ ಪಯಣ

ಒಂದು ರೀತಿ ಇದನ್ನು odd ಪ್ರಯಾಣ ಎಂದು ಬರೆದರೇನೇ ಚೆನ್ನ. ಹೆಚ್ಚಿನವರು ಭಾರತದಿಂದ ಅಮೇರಿಕಕ್ಕೋ ಅಥವಾ ಮತ್ತಿನ್ನೆಲ್ಲಿಗೋ ಅನಿವಾಸಿಗಳಾಗಿ ಬಂದವರು, ಸ್ಥಳೀಯ one-way ವಿಮಾನ ಪ್ರಯಾಣಗಳನ್ನು ಮಾಡಿರದಿದ್ದರೆ ಅಂಥವರು ಮಾಡುವ ವಿಮಾನಯಾನ ಯಾವಾಗಲೂ ಬೆಸ ಸಂಖ್ಯೆಯಲ್ಲಿಯೇ ಕೊನೆಯಾಗುತ್ತದೆ. ಮಧ್ಯೆ ಮಧ್ಯೆ ವೆಕೇಷನ್ ಅಥವಾ ಸ್ಥಳೀಯ ಪ್ರಯಾಣಗಳನ್ನು ಮಾಡಿದ್ದರೂ ಕೊನೆಯಲ್ಲಿ ಅದು ಬೆಸ ಸಂಖ್ಯೆಯಲ್ಲಿಯೇ ಅಂತ್ಯವಾಗುವುದು ಮೊದಮೊದಲು ನನಗೆ ಹಾಸ್ಯದ ವಿಷಯವಾಗಿತ್ತು - ಅನಿವಾಸಿಗಳ odd ಯಾತ್ರೆ - ಎಂದು ಅಲ್ಲಲ್ಲಿ ಮಾತನಾಡಿದ್ದಿದೆ, ಆದರೆ ಅನಿವಾಸಿಯಲ್ಲಿ 'ಅ' ಹೊರಟು ಹೋಗಿ 'ನಿವಾಸಿ'ಯ ಪಟ್ಟವನ್ನು ಸ್ವೀಕರಿಸುವ ಹೊತ್ತಿಗೆಲ್ಲ ಈ ಬೆಸ ಸಂಖ್ಯೆಯ ಪಯಣ ಎಲ್ಲಾದರೂ ಒಂದು ಮೂಲೆಯಲ್ಲಿ ಚುಚ್ಚುವುದಂತೂ ಇದ್ದೇ ಇರುತ್ತೆ, ಎಂಥ ಗಟ್ಟಿಗ ಮಲೆಯಾಳಿ ಕುಟ್ಟಿಗೂ ತಮ್ಮ ಊರು-ಕೇರಿಗಳು ಒಂದಲ್ಲ ಒಂದು ರೀತಿಯಲ್ಲಿ 'ಚೆನ್ನ' ಎನ್ನಿಸಿರಲೇ ಬೇಕು. ಮಲೆಯಾಳಿಗಳ ಉದಾಹರಣೆ ಏಕೆ ತೆಗೆದುಕೊಂಡೆನೆಂದರೆ ನನಗೆ ಗೊತ್ತಿರುವಂತೆ ಹೆಚ್ಚಿನ ಮಲಯಾಳಿಗಳು ತಮ್ಮ ಊರು-ದೇಶವನ್ನು ಬಿಡುವುದು ಒಂದೇ ಬಾರಿ, ಮತ್ತೆ ಜೀವಮಾನ ಪರ್ಯಂತ ಹಿಂತಿರುಗಿ ಹೋಗಿದ್ದನ್ನು ನಾನು ಕಾಣೆ.

ಬಾಂಬೆಯಲ್ಲಿ ನಾನು ಮೊಟ್ಟಮೊದಲ ಬಾರಿಗೆ ವಿಮಾನವನ್ನು ನೋಡಿದ್ದು, ಹತ್ತಿದ್ದು ಎಲ್ಲಾ. ಅದಕ್ಕೆ ಮೊದಲೆಲ್ಲ ಹಗಲು ಹೊತ್ತಿನಲ್ಲಿ ಕರ್ಕಷ ಶಬ್ದ ಮಾಡುವ ಆಕಾಶದ ಒಂದು ಭಾಗವಾಗಿಯೋ, ರಾತ್ರಿಯ ಹೊತ್ತು ಸದ್ದಿಲ್ಲದೆ ದೂರದಲ್ಲಿ ಬೆಳಕನ್ನು ಚಿಮುಕಿಸಿ ಎಲ್ಲಿಂದ-ಎಲ್ಲಿಗೋ ಹೋಗುವವರನ್ನು ಹೊತ್ತು ಹಲವೊಮ್ಮೆ ಉಲ್ಕೆಗಳೇನೋ ಎನ್ನುವ ಭ್ರಮೆಯನ್ನು ಹುಟ್ಟು ಮಾಡುವವಾಗಿಯೋ ಅಥವಾ ಯಾವುದಾದರೊಂದು ವಸ್ತು ಸಂಗ್ರಹಾಲಯದಲ್ಲಿ ಮಾದರಿಯಾಗಿಟ್ಟ ವಸ್ತುವಾಗಿಯೋ ಕಂಡಿದ್ದವು. ರಾತ್ರಿ ಒಂಭತ್ತು ಘಂಟೆಗೆಲ್ಲಾ ಹೊರಡಬೇಕಾಗಿದ್ದ ನನ್ನ ಮೊಟ್ಟ ಮೊದಲ ವಿಮಾನಯಾತ್ರೆ, ಅದೂ ದೂರದ ಅಮೇರಿಕಕ್ಕೆ ಫ್ರಾಂಕ್‌ಫರ್ಟ್ ಮುಖಾಂತರ ಸುಮಾರು ಐದಾರು ಘಂಟೆಗಳ ಕಾಲ ತಡವಾಗಿದ್ದು, ಜೊತೆಯಲ್ಲಿ ಹಸಿವು ಹಾಗೂ ನಿದ್ದೆಗಳಿಗೆ ಶರಣಾದ ದೇಹ ನನ್ನ ಸಂಭ್ರಮದ ಬೆಲೂನಿಗೆ ಸೂಜಿ ಚುಚ್ಚಲು ಹೆಚ್ಚು ಕಾಲ ತೆಗೆದುಕೊಂಡಿರಲಿಲ್ಲ. ಅದ್ಯಾರೋ ಏಳಿಸಿ ಊಟ ತಂದುಕೊಟ್ಟಾಗ ಬೆಳಗ್ಗಿನ ಜಾವ ನಾಲ್ಕು ಘಂಟೆಯಾಗಿ ಹೋಗಿತ್ತು, ನಿದ್ರೆಯಿಂದೆಂದ್ದು ಹಲ್ಲುಜ್ಜದೇ ತಿಂದು-ಕುಡಿಯುವ ಜಾಯಮಾನಕ್ಕೆ ಹುಟ್ಟು ಇನ್ನೆಲ್ಲಿಂದ ಬಂದಿತೆಂದುಕೊಂಡು ನಾನು ಅಂದುಕೊಂಡಾಗಲೆಲ್ಲ ನಾನು ಆಕಾಶದಲ್ಲಿ ಸಮುದ್ರದ ಮೇಲೆ ಹಾರುವಾಗ ಕಲಿತ ಗುಣ ಎಂದುಕೊಂಡು ನನ್ನಷ್ಟಕ್ಕೆ ನಾನೇ ಸಮಾಧಾನವನ್ನು ಮಾಡಿಕೊಳ್ಳುತ್ತೇನೆ. ಆ ಒಂದು ಪಯಣದಿಂದಲೇ ಎಷ್ಟೋ ಕಾಯಕಗಳು ತಮ್ಮಷ್ಟಕ್ಕೆ ತಾವೇ ಆರಂಭಗೊಂಡಿದ್ದವು, ಕೆಲವು ಗೊತ್ತಿದ್ದು, ಇನ್ನು ಕೆಲವು ಗೊತ್ತಿಲ್ಲದೆ. ಅಲ್ಲಿಯವರೆಗೆ ಬಸ್ಸು, ರೈಲುಗಳಲ್ಲಿ ಕಷ್ಟಪಟ್ಟು ಪ್ರಯಾಣಮಾಡಿದ್ದ ನನಗೆ ವಿಮಾನಯಾನವಾದರೂ ಸುಖಕರವಾಗಿತ್ತೆಂದುಕೊಂಡರೆ ಅದೂ ಇಲ್ಲ, ವಿಮಾನದಲ್ಲಿ ನಾನು ಪ್ರಯಾಣ ಮಾಡುವ ಸೀಟುಗಳೆಲ್ಲವೂ ನಮ್ಮ ಬಸ್ಸು ರೈಲಿನ ಸೀಟುಗಳಿಗಿಂತಲೂ ಕಿರಿದಾದವು. ಎಲ್ಲ ಪ್ರಯಾಣಿಕರು ಕುಳಿತುಕೊಂಡಿರುತ್ತಾರೆ, ನಿಲ್ಲುವವರು ಯಾರೂ ಇಲ್ಲವೆಂದುಕೊಂಡರೆ ಆಗಾಗ್ಗೆ ಅಲ್ಲಲ್ಲಿ ಓಡಾಡುವ ಫ್ಲೈಟ್ ಅಟೆಂಡೆಂಟ್‌ಗಳು ನಿಂತು ಪ್ರಯಾಣ ಮಾಡುವ ಪ್ರಯಾಣಿಕರ ಸಮನಾಗುತ್ತಾರೆ. ಈ ಬೆಸ ಸಂಖ್ಯೆಯ ಪ್ರಯಾಣದಲ್ಲಿ ಸೀಟುಗಳಾಗಲೀ, ವಾತಾವರಣವಾಗಲಿ, ಊಟವಾಗಲೀ ಏಕೆ ಅಷ್ಟೊಂದು ಅನುಕೂಲಕರವಾಗಿರೋದಿಲ್ಲವೋ?

ಏರ್‌ಪೋರ್ಟ್‌ಗಳಲ್ಲಿ ಸಮಾನತೆ ಇದೆ ಎಂದುಕೊಂಡರೆ ಅದೂ ಸುಳ್ಳು ಎಂದು ಅರ್ಥವಾಗಿದ್ದು, ಲಂಡನ್, ಪ್ಯಾರಿಸ್, ಜರ್ಮನಿಗಳ ಏರ್‌ಪೋರ್ಟ್‌ಗಳಲ್ಲಿ ಅಮೇರಿಕಕ್ಕೆ ಹೋಗುವ ಪ್ರಯಾಣಿಕರ ಲೌಂಝ್‌ಗೂ ಹಾಗೂ ಇತರ ದೇಶಗಳ ಕಡೆಗೆ ಪ್ರಯಾಣ ಬೆಳೆಸುವವರ ಲೌಂಝ್‌ಗೂ ವ್ಯತ್ಯಾಸವನ್ನು ನಾನು ಕಂಡುಹಿಡಿದಾಗ. ನಾನು ಅಮೇರಿಕದಿಂದ ಭಾರತಕ್ಕೆ ಹೊರಡುವಾಗ ಬಳಸುವ ರೆಸ್ಟ್‌ರೂಮ್‌ಗಳ ಕ್ವಾಲಿಟಿಗೂ ಅದೇ ಭಾರತದಿಂದ ಅಮೇರಿಕಕ್ಕೆ ಬರುವಾಗ ಬಳಸುವ ರೆಸ್ಟ್‌ರೂಮುಗಳ ಕ್ವಾಲಿಟಿಗೂ ಸಾಕಷ್ಟು ವ್ಯತ್ಯಾಸವನ್ನು ಗಮನಿಸಿದ್ದೇನೆ. ಸಮಾನತೆಯನ್ನು ಸಾರುವ ನಾಗರಿಕತೆಯಲ್ಲಿ ಈ ವ್ಯತ್ಯಾಸ ಹೇಗೆ ಸುಳಿಯಿತು, ಹೇಗೆ ಇನ್ನೂ ನಡೆದುಕೊಂಡು ಬಂದಿದೆ ಎಂದು ಬೇಕಾದಷ್ಟು ಬಾರಿ ಯೋಚಿಸಿದ್ದೇನೆ. ಕಷ್ಟಮರ್ ಸರ್ವಿಸ್ ಎಂದುಕೊಂಡು ಹೋದರೂ ಅಮೇರಿಕದವರಿಗೊಂದು ಬಗೆ, ಪ್ರಪಂಚದ ಉಳಿದ ದೇಶದವರಿಗೊಂದು ಬಗೆ ಎನ್ನುವ ಹಲವಾರು ಅಂಶಗಳನ್ನು ಗಮನಿಸಿದ್ದೇನೆ. ಈ ದೃಷ್ಟಿಯಿಂದಲೇ ನನ್ನಂತಹವರು ಅಮೇರಿಕನ್ ಆದರೂ ಅದೂ ಕೇವಲ ಪುಸ್ತಕ ದಾಖಲಾತಿಗಳಲ್ಲಿ ನಿಲ್ಲುತ್ತದೆಯೇ ವಿನಾ ಜನಮನದಲ್ಲಲ್ಲ - ಏಕೆಂದರೆ ಉಳಿದವರ ಕಣ್ಣಿಗೆ ನಾವು ಅಮೇರಿಕನ್ ಆಗಿ ಕಾಣುವಂತಹ ಬದಲಾವಣೆಗಳು ನಮ್ಮಲ್ಲಿಲ್ಲ.

ಈ ಬೆಸ ಸಂಖ್ಯೆಯ ಪ್ರಯಾಣಗಳು - ಅಂದರೆ ಪ್ರತಿಯೊಂದು ಬಾರಿ ಭಾರತಕ್ಕೆ ಹೋಗಿ ಮತ್ತೆ ಹಿಂತಿರಿಗುವ ಪ್ರಯಾಣ - ಮನಸ್ಸನ್ನು ನಾವು ಭಾರತದಿಂದ ತರುವ ಭಾರವಾದ ಸೂಟ್‌‍ಕೇಸ್‌ಗಳಂತೆಯೇ ಭಾರವಾಗಿಸಿ ಬಿಡುತ್ತವೆ. 'ಅಮೇರಿಕದಲ್ಲಿ ಅಪ್ಪ-ಅಮ್ಮ ಒಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲವೂ ಸಿಗುತ್ತದೆ' ಎನ್ನುವ ತತ್ವವನ್ನು ನಿಧಾನವಾಗಿ ಅಳವಡಿಸಿಕೊಂಡಂತೆ ಅಥವಾ ಇಲ್ಲಿ 'ಬೆಳೆದುಕೊಂಡ' ನಮ್ಮ ಕ್ವಾಲಿಟಿ ಕಾನ್ಸೆಪ್ಟಿನ ಕೃಪೆಯಿಂದ ಅಲ್ಲಿಯ ವಸ್ತುಗಳು ಕೀಳಾಗಿ ಕಂಡುಬರುವ ಮಾನಸಿಕ ದುಸ್ಥಿತಿ ಬರುವ ಹೊತ್ತಿಗೆ ಮನಸ್ಸು ಕಾರ್ಯ-ಕಾರಣಗಳ ಹಿಂದೆ ಹೋಗಿ ಯೋಚಿಸದೇ ಕೇವಲ ತೊಗಲಿಗಂಟಿದ ಬಣ್ಣವನ್ನು ಆರಾಧಿಸತೊಡಗುತ್ತದೆ. ಎಷ್ಟೋ ಜನರಿಗೆ ಕೇಳಿ ನೋಡಿದೆ 'ಭಾರತದಿಂದ ನಿಮಗೇನಾದರೂ ತರಬೇಕೇ?' ಎಂದು ಬಂದ ಉತ್ತರಗಳೆಲ್ಲ 'ಏನೂ ಬೇಡ' ಎನ್ನುವ ಅರ್ಥವನ್ನು ಕೊಡಲು ಶುರುಮಾಡಿದವು. ಅದು ಸರಿ, ನಾನೇನು ನನಗೋಸ್ಕರ ಅಲ್ಲಿಂದ ತರುತ್ತೇನೆ ಎಂದು ಯೋಚಿಸುವ ಹೊತ್ತಿಗೆ ಮನದೊಳಗೆ ಮುಂಬರುವ ಬೆಸ ಸಂಖ್ಯೆಯ ಪ್ರಯಾಣದ ಬಗ್ಗೆ ಇರುವ ಉತ್ಸಾಹಗಳು ನಿಧಾನವಾಗಿ (ಆ ಸಮಯಕ್ಕೆ) ಕಡಿಮೆಯಾಗತೊಡಗಿದಂತೆ ಕಂಡುಬಂದವು.

ಇಲ್ಲಿಗೆ ಬರುವ ಮೊಟ್ಟ ಮೊದಲ ಪ್ರಯಾಣ ನನ್ನ ಆಯ್ಕೆಯೋ ವಿಧಿಯೋ, ಆದರೆ ಇಲ್ಲಿಂದ ಈ ಬೆಸವನ್ನು 'ಸರಿ' (even) ಮಾಡಿ ಹಿಂತಿರುಗುವ ಆಯ್ಕೆ ನನ್ನದಾಗಿರಲಿ. ಅಲ್ಲಿ-ಇಲ್ಲಿನ ಮೌಲ್ಯಗಳ ಕೋಲಿನಲ್ಲಿ ಕಂಡದ್ದೆಲ್ಲವನ್ನು ಅಳತೆ ಮಾಡದೇ ಇದ್ದದ್ದನ್ನು ಇದ್ದಹಾಗೇ ನೋಡುವ ದೃಷ್ಟಿಕೋನ ಹುಟ್ಟಲಿ.

1 comment:

sritri said...

'ಭಾರತದಿಂದ ನಿಮಗೇನಾದರೂ ತರಬೇಕೇ?' ಎಂಬ ಪ್ರಶ್ನೆಗೆ ಏನೂ ಬೇಡ ಎಂಬ ಉತ್ತರದಿಂದ ನಿಮಗೆ ಬೇಸರವಾಗಿದ್ದರೆ ನಿಮಗೊಂದು ದೊಡ್ಡ ಪಟ್ಟಿಯನ್ನು ನಾನೇ ಕೊಡಬಲ್ಲೆ :-)
ಭಾರತದಿಂದ ಸವಿನೆನಪುಗಳ ದೊಡ್ಡ ಬುತ್ತಿಯನ್ನು ಹೊತ್ತು ತಂದು ಅಂತರಂಗದಲ್ಲಿ ಇಷ್ಟಿಷ್ಟಾಗಿ ನಮಗೆಲ್ಲಾ ಉಣಬಡಿಸಿ.

ಎಲ್ಲಾ "ಸರಿ" ಇದೆ :-) ಸುಖ ಪ್ರಯಾಣವಿರಲಿ!