ಸೂರ್ಯ-ಚಂದ್ರರ ನೆರಳಿನಲಿ...
ಅಯ್ಯೋ 'ಅಂತರಂಗ'ದಲ್ಲಿ ಏನೂ ಬರೆದೇ ಇಲ್ಲ ಇತ್ತೀಚೆಗೆ ಕಡೆಗಣೆಸಿ ಬಿಟ್ಟೆನೇ ಎಂದು ಕೊರಗುತ್ತಾ ಆಫೀಸ್ ಹಾದಿ ಹಿಡಿದ ನನಗೆ ಒಂದು ಕಡೆ ಗೌರೀ ಹುಣ್ಣಿಮೆಯ ಚಂದ್ರನ ಅಳಿದುಳಿದ ಕಳೇಬರ ಮತ್ತೊಂದು ಕಡೆಗೆ ಈಗ ತಾನೇ ಪ್ರಾಬಲ್ಯಕ್ಕೆ ಬರುತ್ತಿರುವ ಸೂರ್ಯನ ಕಿರಣಗಳು ಗೋಚರಿಸತೊಡಗಿದವು. ದೂರದ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಶ್ರೇಣಿಗಳಂತೆ ಹಬ್ಬಿರುವ ಮೋಡಗಳು ತಮ್ಮ ತುದಿಯಲ್ಲಿ ಸಾಲಾಗಿ ಸೂರ್ಯ ಕಿರಣಗಳನ್ನು ಪ್ರತಿಬಿಂಬಿಸುತ್ತಾ ಜರಿಯ ಅಂಚಿನಂತೆ ಕೋರೈಸುತ್ತಿದ್ದವು. ಸೂರ್ಯನ ದರ್ಶನವಾದದ್ದೇ ತಡ 'ಓಂ ಮಿತ್ರಾಯ ನಮಃ' ಎಂದು ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ. ನನ್ನ ವಾಹನವೂ ಸೇರಿ ನನ್ನ ಹಿಂದೆ ಸಾಲು ಸಾಲಾಗಿ ಬರುತ್ತಿದ್ದ ವಾಹನಗಳೆಲ್ಲ ವಿಶೇಷವಾದ ತೇರೊಂದನ್ನು ಎಳೆದುಕೊಂಡು ಹೋಗುವ ಸಂಭ್ರಮವನ್ನು ಹೊತ್ತು ಜೋರಾಗಿ ಸಾಗುತ್ತಿದ್ದವು. ಸೂರ್ಯನ ಪ್ರಖರತೆ ಹೆಚ್ಚಾದಂತೆ ನಿಧಾನವಾಗಿ ಚಂದ್ರ ಗೆಳೆಯರೆಲ್ಲರೂ ಆಟದ ಮಧ್ಯೆಯೇ ಕೈಕೊಟ್ಟು ಹೋದಂತೆ ಹ್ಯಾಪು ಮೋರೆಯನ್ನು ಹಾಕಿಕೊಂಡು ನಿಧಾನವಾಗಿ ಕೆಳಗಿಳಿಯುತ್ತಿದ್ದನೋ ಅಥವಾ ಮೇಲೇರುತ್ತಿದ್ದನೋ ಆದರೆ ಅವನನ್ನು ಕೇಳುವವರೇ ಯಾರೂ ಇಲ್ಲದಾಗಿ ಹೋದಂತಾದರು ಒಂದು ರೀತಿ ಡೆಮಾಕ್ರಟಿಕ್ ಪಕ್ಷ ಮೆಜಾರಿಟಿಗೆ ಬರುತ್ತಿದ್ದಂತೆ ಬುಷ್ ಅನ್ನು ಎಲ್ಲರು ಬದಿಗೆ ತಳ್ಳಿದ ಹಾಗೆ.
'ನಾನು ಹಾಡುವುದು ನನಗೆಂದು...ಎದೆ ಭಾರ ಇಳಿಯಳಲೆಂದು...' ಎಂದುಕೊಂಡು ಅದೂ-ಇದೂ ಬರೆಯಲು ಆರಂಭಿಸುವ ನನಗೆ ಇಂತಹುದೇ ವಿಷಯ/ವಿಚಾರವೆಂಬುದೇನೂ ಇಲ್ಲಿಯವರೆಗೆ ಯಾವುದೇ ಅಡ್ಡಿ-ಆತಂಕಗಳನ್ನು ತಂದಿಲ್ಲವಾದರೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಕಾಂಟ್ರೋವರ್ಸಿಯಿಂದ ದೂರವಿರುವುದು ಸಾಧುವೆನಿಸಿತ್ತು, ಜೊತೆಯಲ್ಲಿ ಅದು ಸೇಫ್ ಸಹ ಎನಿಸಿ ಒಂದು ರೀತಿ ನನ್ನದೇ ಆದ ಕಾಂಪ್ಲಸೆಂಟ್ ವಾತಾವರಣವನ್ನು ಹುಟ್ಟಿಹಾಕಿಕೊಂಡಿದ್ದು ನನ್ನ ಅನುಭವಕ್ಕೇ ಇತ್ತೀಚೆಗೆ ಗಾಢವಾಗತೊಡಗಿತು. ಹಾದಿಯಲ್ಲಿ-ಬೀದಿಯಲ್ಲಿ ಹೋಗಿಬರುವವರ ಬಗ್ಗೆ ಬರೆಯುವುದು ಒಂದು ರೀತಿಯದಾದರೆ, ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಬರೆಯುವುದು ಮತ್ತೊಂದು ಬಗೆ. ಒಂದು ರೀತಿ ಕತ್ತಲಿನಲ್ಲಿ ಕತ್ತಿ ಆಡಿಸಿದಂತೆ ಅದರಿಂದೆಂದೂ ಯಾವ ಪ್ರಯೋಜನವಂತೂ ನನಗಾಗಿಲ್ಲ. ಹೀಗೆ ನ್ಯೂಟ್ರಲ್ ಆಗಿ ಬರೆಯುವ ಪ್ರಯತ್ನದಲ್ಲಿ ನನ್ನ ಗೊಂದಲ, ಅಸಮಧಾನಗಳು ನನ್ನೊಳಗಿನ ಮೂಸೆಯಲ್ಲಿ ಬಿಸಿ ಮುಟ್ಟಿದಂತೆಲ್ಲ ಕುದಿದು ಮತ್ತೆ ತಣ್ಣಗಾಗಿ ಬಿರುಕುಬಿಟ್ಟ ಲೋಹದ ತುಣುಕುಗಳಂತೆ ಬಿರುಸಾಗಿ ಹರಳುಗಟ್ಟತೊಡಗಿದವು. ಇನ್ನು ಕೆಲವು ಆಲೋಚನೆಗಳು ಹೀಗೆ ಬಂದು ಹಾಗೆ ಹೋದವು. ಸರಿ, ತಪ್ಪು ಎನ್ನುವುದರಿಂದ ದೂರ ಉಳಿದು, ನನ್ನ ಅನಿಸಿಕೆಗಳು ಅನುಭವಗಳನ್ನು ಬರೆಯುವುದು ಒಂದು ಬಗೆ, ಪೊಲಿಟಿಕಲ್ ಆಗಿ ಬರೆಯುವುದು ಮತ್ತೊಂದು ಬಗೆ; ಕೆಲವರ ಪರ ವಾದಿಸುವುದು ಒಂದು ಬಗೆ, ಪ್ರತಿಯೊಬ್ಬರ ಧೋರಣೆಗಳನ್ನು ಬೆಂಬಲಿಸುವುದು ಮತ್ತೊಂದು ಬಗೆ. ಹೀಗೆ ಹಲವಾರು ಗೊಂದಲಗಳನ್ನು ಹೊರಹಾಕುವಲ್ಲಿ ನನ್ನ ಈವರೆಗಿನ ಲೇಖನಗಳು ಒಂದು ರೀತಿ ಕನ್ನಡಿಯ ಹಾಗೆ ನನ್ನ ಇತರ ಮುಖಗಳನ್ನು ನನಗೆ ದರ್ಶನ ಮಾಡಿಸಿವೆ.
Who cares for New Year resolutions...ಎಂದುಕೊಂಡು ನಾನು ಜನವರಿ ಒಂದನ್ನು ಉಪೇಕ್ಷಿಸುತ್ತಿದ್ದುದೇ ಈವರೆಗೆ ಸಾಮಾನ್ಯವಾಗಿತ್ತು. ಕಳೆದ ವರ್ಷ ಜಯಶ್ರೀ ಒತ್ತಾಯ ಮಾಡಿದ ಮೇಲೆ ಒಂದಿಷ್ಟು ಹೊಸ ವರ್ಷದ ರೆಸೊಲ್ಯೂಷನ್‌ಗಳನ್ನು ಬರೆದದ್ದೂ ಆಯಿತು, ಅವುಗಳನ್ನು ನಡೆಸಿಕೊಂಡು ಬಂದದ್ದೂ ಆಯಿತು. 'ನಾನು ಜನವರಿ ಒಂದನ್ನು ಹೊಸ ವರ್ಷವನ್ನಾಗಿ ಆಚರಿಸೋದಿಲ್ಲ, ನನಗೇನಿದ್ದರೂ ಯುಗಾದಿಯೇ ಹೊಸವರ್ಷ' ಎಂದು ಮೂರು ವರ್ಷಗಳ ಹಿಂದೆ ಯಾವುದೋ ಪ್ರಶ್ನೆಗೆ ಉತ್ತರವಾಗಿ ಹೇಳಿದ ನನ್ನನ್ನು ಭೂಮಿಗೆ ತಂದವನು ಕೃಪೇಶ - 'ನಿನ್ನ ಬರ್ತ್ ಡೇ, ಆಫೀಸ್‌ನಲ್ಲಿನ ಆಗುಹೋಗುಗಳು ಮತ್ತೆಲ್ಲವೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿರುವಾಗ ಈ ಹೊಸವರ್ಷವೊಂದನ್ನು ಮಾತ್ರ ಉಪೇಕ್ಷಿಸುತ್ತೀಯೇಕೆ?'. ಅಂದಿನಿಂದ ಜನವರಿ ಒಂದರಂದು ನಾನು ಕುಡಿದು-ಕುಣಿದು ಕುಪ್ಪಳಿಸುವುದಿಲ್ಲವಾದರೂ 'ಹೊಸ' ವರ್ಷವನ್ನು ಕಣ್ಣು ಬಿಟ್ಟು ನೋಡುವುದನ್ನು ಕಲಿತಿದ್ದೇನೆ, ಬ್ರಹ್ಮಾಂಡದಲ್ಲಿ ಅನೇಕ ಬದಲಾವಣೆಗಳನ್ನು ತರುವ ನಮ್ಮ ಸಂಭ್ರಮದ ಯುಗಾದಿಯನ್ನು ಅದ್ಯಾವ ಕಾರಣಗಳಿಂದಲು ಡಿಸೆಂಬರ್ ೩೧ ಹಾಗೂ ಜನವರಿ ೧ ರ ನಡುವಿನ ವ್ಯತ್ಯಾಸಕ್ಕೆ ನಾನು ತುಲನೆ ಮಾಡಲಾಗದಿದ್ದರೂ 'ಗುಂಪಿನಲ್ಲಿ ಗೋವಿಂದ' ಎನ್ನುವಂತೆ ಹೆಚ್ಚು ಜನರು ಆಚರಿಸುವ ನಡವಳಿಕೆಯನ್ನು ಅನುಮೋದಿಸುವ ಬೃಹತ್ ಮನಸ್ಸನ್ನು ಹೊಂದಿಸಿಕೊಂಡಿದ್ದೇನೆ. ನಮ್ಮದೇ ಸರಿ ಎನ್ನುವುದು ಒಂದು ಹಂತ, ಸರಿಯನ್ನು ಹೆಚ್ಚು ಜನರು ಒಪ್ಪಿಕೊಳ್ಳುವ ಬದಲಾವಣೆಯನ್ನು ಹುಟ್ಟು ಹಾಕುವ ಪ್ರವಾದಿಯಾಗುವುದು ಮತ್ತೊಂದು ಹಂತ. ಪಾಡ್ಯಬಿದಿಗೆಗಳಿಗೆ ಜನರನ್ನು ಹೊಂದಿಸುವುದಾಗಲೀ, ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ತಿಂಗಳ ಮಧ್ಯೆ (೨೦ ನೇ ತಾರೀಖಿನ ಆಜುಬಾಜು) ಹೊಸ ಮಾಸವನ್ನು ಸೃಷ್ಟಿಸುವುದಾಗಲೀ, ಚೈತ್ರವನ್ನು-ವಸಂತವನ್ನು ಬದಲಾವಣೆಯ ಏಜೆಂಟರನ್ನಾಗಿ ಜಗತ್ತಿಗೆ ಸಾರುವುದು ನನ್ನ ಕರ್ಮವಂತೂ ಅಲ್ಲ, ಈ ಜನ್ಮದಲ್ಲಿ ಆ ಶಕ್ತಿಯೂ ನನಗಿಲ್ಲ ಎಂದು ಜಾರಿಕೊಂಡು ಹಾಡುಹಗಲೇ ಗುಂಪನ್ನು ಅನುಮೋದಿಸುವ ಪ್ರವೃತ್ತಿ ಸ್ವಭಾವವಾಗಿ ಪರಿವರ್ತನೆಯಾಗಿ ಹೋಗಿದೆ.
ನಾನು ಹೆಚ್ಚೇನು ಮಹತ್ವಕಾಂಕ್ಷೆಗಳನ್ನು ಇಟ್ಟುಕೊಂಡಿರದ ಮುಂಬರುವ ನನ್ನ ಭಾರತದ ಪ್ರವಾಸದ ಸಮಯದಲ್ಲಿ ಈ ರೀತಿಯ ಆಲೋಚನೆಗಳು ಹೆಚ್ಚೆಚ್ಚು ಬರಲಿ, ಆದಷ್ಟು ನನ್ನ ಬರಹಗಳು ನನ್ನೊಳಗಿನ ನಿಜವನ್ನು ಹೊರತರುವ ಕ್ರಾಂತಿಕಾರರಾಗಲಿ. ಗುಂಪನ್ನು ಅನುಮೋದಿಸುವುದೋ, ಬದಲಾವಣೆಯ ಹರಿಕಾರ (change agent) ನಾಗಿ ಉಳಿಯುವುದೋ ಎಂಬ ಪ್ರಶ್ನೆಗಳಿಗೆ ಹೆಚ್ಚಿನ ಆಳ ದೊರಕಲಿ ಹಾಗೂ ಇವೇ ಸೂರ್ಯ-ಚಂದ್ರರ ನೆರಳಿನಲ್ಲಿ ನನ್ನ ಸಂಸ್ಕಾರಗಳ ದರ್ಶನವಾಗಲಿ...
No comments:
Post a Comment