ಐದೇ ಐದ್ ನಿಮಿಷ...
ನಾನು ಕೆಲ್ಸಾ ಮಾಡೋ ಕಂಪ್ಯೂಟರ್ರುಗಳ ಸ್ಪೀಡೂ ಪ್ರಾಸೆಸ್ಸರ್ರುಗಳ ಪವರ್ರು ಜಾಸ್ತೀ ಆದ ಹಾಗೆ, ನಾನು ಉಪಯೋಗಿಸೋ ಸಾಫ್ಟ್‌ವೇರ್ ಅಥವಾ ಅಪ್ಲಿಕೇಷನ್ನುಗಳ ವರ್ಷನ್ನುಗಳು ಹೆಚ್ಚಾದ ಹಾಗೆ ನನ್ನ ಧಕ್ಷತೇನೂ ಹೆಚ್ಚಾಗುತ್ತೇ ಅನ್ನೋದು ಬರೀ ಕನಸೇ ಆಗಿ ಹೋಗಿದೆ ಅನ್ನೋದು ಇತ್ತೀಚಿನ ನನ್ನ ಕೊರೆತಗಳಲ್ಲೊಂದು! ಯಾವಾಗ್ ನೋಡಿದ್ರೂ ’ಟೈಮೇ ಇಲ್ಲಾ ಸಾರ್!’ ಎಂದು ರಾಗ ಎಳಿತಾ ಇರೋ ನನಗೆ ನನ್ನ ಇದ್ದ ಬದ್ದ ಟೈಮ್ ಎಲ್ಲಾ ಎಲ್ಲಿ ಕರಗಿ ಹೋಗುತ್ತೇ ಅನ್ನೋದು ಹೊಳೆಯದೇ ಬಹಳ ಸಂಕಷ್ಟಕ್ಕೆ ಬಂದಿರೋದರ ಜೊತೆಗೆ ಟೈಮೇ ಇಲ್ಲವಲ್ಲ ಅಂಥ ಯೋಚಿಸೋದಕ್ಕೂ ಟೈಮ್ ಇಲ್ಲದ ಹಾಗೆ ಆಗಿದೆ ಅನ್ನೋದು ನನ್ನ ಹೊಸ ಕೀರ್ತನೆ ಅಷ್ಟೇ.
ನೀವೇ ನೋಡಿ, ಯಾವತ್ತಾದ್ರೂ ಎಲ್ಲಿಗೋ ಹೊರಟಿರೋ ಹೊತ್ತಿನಲ್ಲಿ ಒಂದು ನಿಮಿಷ ಕಂಪ್ಯೂಟರಿನಲ್ಲಿ ಏನೋ ನೋಡೋಣ ಅಂತ ಕೂತಿರೋದಷ್ಟೇ ನೆನೆಪು, ಅದು ಹೇಗೆ ನಿಮಿಷಗಳು-ಘಂಟೆಗಳು ಉರುಳುತ್ತವೋ ಗೊತ್ತೇ ಆಗಲ್ಲ. ದಿನಾ ಆನ್ ಮಾಡಿ ಆಫ್ ಮಾಡೀರೋ ಕಂಪ್ಯೂಟರಿನಿಂದ ಹಿಡಿದು ಎರಡು ವಾರಕ್ಕೊಮ್ಮೆ ಸ್ಟ್ಯಾಂಡ್ ಬೈ ಮೋಡ್ ನಲ್ಲೇ ಇರೋ ನನ್ನ ಲ್ಯಾಪ್‌ಟಾಪಿನ ವರೆಗೆ ಅದರಲ್ಲಿರೋ ಅಪ್ಲಿಕೇಷನ್ನಿನ ಗೊಂಚಲುಗಳಲ್ಲಿ ಒಬ್ಬನಲ್ಲ ಒಬ್ಬನು ಏನನ್ನಾದರೊಂದನ್ನು ಇನ್ಸ್ಟಾಲ್ ಮಾಡಿಕೊಂಡೇ ಇರ್ತಾನೆ. ಆಂಟಿ ವೈರಸ್ಸು ಪ್ಯಾಚುಗಳಿಂದ ಹಿಡಿದು ಅಪ್ಲಿಕೇಶನ್ನ್ ಪ್ಯಾಚುಗಳವರೆಗೆ ಸದಾ ಕರಕರಕರ ಶಬ್ದ ಮಾಡ್ತಾ ಹಾರ್ಡ್ ಡ್ರೈವ್ ತಿರುಗೋ ಶಬ್ದವನ್ನು ಕೇಳ್ದೇ ಇದ್ರೆ ತಿಂದ ಅನ್ನಾನೇ ಅರಗಲ್ಲ. ಹೀಗೆ ಅವರು ಬಿಟ್ಟು ಇವರು ಬಿಟ್ಟು ಯಾರ್ಯಾರೋ ಏನನ್ನೋ ಇನ್ಸ್ಟಾಲ್ ಮಾಡಿ ಅನಂತರ ಕಂಪ್ಯೂಟರಿನ ಪ್ರಾಸೆಸ್ಸರು ಫ್ರೀ ಇರೋ ಹೊತ್ತಿಗೆ ದಿನವೇ ಮುಗಿದು ಹೋಗಿರುತ್ತೆ. ಮೊದಲೆಲ್ಲ ಸರಳವಾಗಿದ್ದ ಇ-ಮೇಲ್ ಇಂಟರ್‌ಫೇಸುಗಳು ಈಗ ಇನ್ನಷ್ಟು ಸಂಕೀರ್ಣಗೊಂಡಿವೆ, ಮೊದಲೆಲ್ಲ ಡಿಸ್ಟಿಂಕ್ಟ್ ಆಗಿ ಸಿಗುತ್ತಿದ್ದ ವ್ಯವಸ್ಥೆಯ ಪರಿಕರಗಳೆಲ್ಲ ಒಂದಕ್ಕೊಂದು ಇಂಟೆಗ್ರೇಟ್ ಆದ ಮೇಲೆ ಇಷ್ಟೆಲ್ಲ ತಲೆ ನೋವು ಬಂದಿದ್ದು ಅನ್ನೋದು ನನ್ನ ಅಂಬೋಣ.
ಕಳೆದ ನಾಲ್ಕು ವಾರಗಳಿಂದ ಅವರ ಕಾಲ್ ಹಿಡಿದು ಇವರ ಕೈ ಹಿಡಿದು ಆಫೀಸಿನಲ್ಲಿ ಪರ್‌ಚೇಸ್ ಆರ್ಡರ್ ಒಂದನ್ನು ಇನ್ನೇನು ಕೊನೆಯ ಹಂತದವರೆಗೆ ತಂದೆ, ಮೇಲಿನವರ ಅಪ್ರೂವಲ್ ಸಿಕ್ಕೇ ಬಿಟ್ಟಿತು ಎಂದು ಮೀಸೇ ಮೇಲೆ ಕೈ ಹಾಕಿ ನಗುವನ್ನು ತಂದುಕೊಂಡಿದ್ದೇ ಬಂತು, ಅಪ್ರೂವ್ ಮಾಡುವವರು ಅಪ್ರೂವ್ ಮಾಡುವ ಸಿಸ್ಟಮ್‌ಗೆ ಲಾಗ್ ಇನ್ ಮಾಡಲು ಹೋದರೆ ಅಲ್ಲಿ ಬ್ಯಾಕ್ ಎಂಡಿನಲ್ಲಿ ಮೈಕ್ರೋ ಸಾಫ್ಟ್‌ನವರ ಸರ್ವರ್ ಮುಷ್ಕರ ಹೂಡಿ ಕುಳಿತುಕೊಂಡಿದೆ. ಸಾಯಂಕಾಲ ಎಷ್ಟೊತ್ತು ಕಾದರೂ ಸರ್ವರ್ ಎದ್ದು ಬರುವಂತೆ ಕಾಣಲಿಲ್ಲ, ನಾಳೆ ಈ ಅಪ್ರೂವ್ ಮಾಡುವ ಮನುಷ್ಯ ಬೇರೆ ಆಫೀಸಿನಲ್ಲಿ ಇಲ್ಲ, ಅವನು ಇನ್ಯಾವನಿಗೆ ಹೀಗೆ ಮಾಡು ಹಾಗೆ ಮಾಡು ಎಂದು ಹೇಳಿ, ಹೇಳಿಸಿಕೊಂಡವನು ನನ್ನ ಅನುಕೂಲಕ್ಕೆ ಸ್ಪಂದಿಸಿ ’ಅಪ್ರೂವ್ ಆಯ್ತು’ ಎಂದು ಬಟನ್ ಒತ್ತುವಷ್ಟರಲ್ಲಿ ನನ್ನ ತಲೆ ಕೂದಲೆಲ್ಲ ಬೆಳ್ಳಗಾಗದಿದ್ದರೆ ಸಾಕು. ಒಂದೊಂದು ಸರ್ವರ್ರುಗಳು ಅಂದ್ರೆ ಅದೆಷ್ಟು ಪವರ್ ಇರುವ ಮೆಷಿನುಗಳು, ಅಂಥವು ದಿನಕ್ಕೊಂದಲ್ಲ ಒಂದು ಔಟ್ ಆಗುತ್ತಲೇ ಇರುತ್ತವೆ, ಅದನ್ನ ಅಡ್ಮಿನಿಶ್ಟ್ರೇಷನ್ನವರು ಬೌನ್ಸ್ ಮಾಡಿ ಮತ್ತೆ ಜೀವ ಕೊಡುತ್ತಲೇ ಇರುತ್ತಾರೆ. ಹೀಗೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲ ಕ್ಲೈಂಟು-ಸರ್ವರುಗಳ ಕೈಂಕರ್ಯಕ್ಕೆ ಅದೆಷ್ಟು ಹೊಂದಿಕೊಂಡಿವೆ ಅಂದರೆ ಇನ್ನೊಂದು ಕೆಲವು ವರ್ಷಗಳಲ್ಲಿ ಸಾಯೋರಿಗೂ ಪರ್ಮಿಷನ್ನ್ ಸಿಗುವ ಹಾಗೆ ಮಾಡುತ್ತವೆ ಈ ಸರ್ವರುಗಳು ನೋಡ್ತಾ ಇರಿ.
ಐದೇ ಐದು ನಿಮಿಷ ಅಂತ ಯಾರೂ ಹೇಳೋದಿಲ್ಲ ಬಿಡಿ...’ಒಂದು ನಿಮಿಷ ಬಂದೇ ಬಿಟ್ಟೇ!’ ಅಂತಾರೆ, ಆದರೆ ಘಂಟೆಗಟ್ಟಲೆ ಆದ್ರೂ ತಮ್ಮ ಪ್ರಪಂಚದಿಂದ ಹೊರಗೆ ಬರೋದಿಲ್ಲ. ಒಂದು ನಿಮಿಷ, ಒಂದು ಸೆಕೆಂಡು ಅನ್ನೋ ಮಾತುಗಳು ಔಪಚಾರಿಕ ಮಾತುಕಥೆಗಳಾಗಿವೆ ಅಷ್ಟೇ. ನಾವೆಲ್ಲ ’ಒಂದ್ ಸೆಕೆಂಡ್’ ಅನ್ನೋದನ್ನ ಯಾರಾದ್ರೂ ಬೇರೆ ಗ್ರಹದ ಪ್ರಾಣಿಪಕ್ಷಿಗಳು ಕೇಳಿಕೊಂಡವು ಅಂತಂದ್ರೆ ಅವರ ಹೃದಯ ನಿಂತು ಹೋಗೋದು ಗ್ಯಾರಂಟಿ - ಅದೇನು ಒಂದು ಸೆಕೆಂಡಿನಲ್ಲಿ ಅದೇನೇನೆಲ್ಲ ಮಾಡ್ತಾರಲ್ಲ ಅಂತ. ನಮ್ಮ ಒಂದೊಂದು ಸೆಕೆಂಡುಗಳು ’ಬ್ರಹ್ಮ ಶೌಚ’ದ ಯೂನಿಟ್‌ನಲ್ಲಿವೆ ಅನ್ನೋದು ಅವರಿಗೇನು ಗೊತ್ತು?
ಯಾವ್ದೇ ಮ್ಯಾಪ್ ಅಪ್‌ಲೋಡ್ ಮಾಡಿ, ಯಾವ್ದೇ ಇ-ಮೇಲ್ ಕ್ಲೈಂಟ್ ಹೊರಗೆ ತನ್ನಿ, ಯಾವ್ದೇ ವೆಬ್ ಪೇಜ್ ಮೇಲೆ ಕಣ್ಣಾಡಿಸಿ - ಅದು ನಿಧಾನವಾಗಿ ಲೋಡ್ ಆಗುತ್ತಿದ್ದರೆ ನಿಮ್ಮ ಇಂಟರ್ನೆಟ್ ಕನೆಕ್ಷನ್ನನ್ನೋ ಅಥವಾ ಹಳೆಯ-ಹೊಸ ಕಂಪ್ಯೂಟರನ್ನ ನೀವು ಬೈದುಕೊಳ್ಳೋ ಸನ್ನಿವೇಶ ಬಂದೇ ಬರುತ್ತೆ. ’ಕನ್ನಡಪ್ರಭ’, ’ಪ್ರಜಾವಾಣಿ’ ಅಂಥ ವೆಬ್‌ಸೈಟ್‌ಗಳು ASP ತಂತ್ರಜ್ಞಾನವನ್ನು ಮೊರೆಹೊಕ್ಕರು, ಅವರಿಗೆಲ್ಲ ಅದರಿಂದ ಏನೇನು ಅನುಕೂಲವಾಗಿದೆಯೋ ಬಿಟ್ಟಿದೆಯೋ User friendliness ಮಾತ್ರ ಮಾಯವಾಗಿ ಬಿಟ್ಟಿದೆ. ಹನ್ನೊಂದು ವರ್ಷದ ಹಿಂದೆ ನನ್ನ ಪೆಂಟಿಯಮ್ 166 MHz ಕಂಪ್ಯೂಟರಿನಲ್ಲಿ 56 Mbps ಡಯಲ್ ಅಪ್ ಕನೆಕ್ಷನ್ನ್ ನಲ್ಲಿ ನನಗೆ ವೆಬ್‌ಸೈಟ್ ಓದುವಾಗ ಸಿಗುತ್ತಿದ್ದ ಫ್ರೀಡಮ್ ಈಗ ಕಡಿಮೆ ಆಗಿದೆ. ಆಗೆಲ್ಲ HTML ಪುಟಗಳಲ್ಲಿ ಆಡ್ರಸ್ ಬಾರ್ ನಲ್ಲಿ ಯಾವ ಯಾವ ದಿನದ ಪತ್ರಿಕೆಗಳ ದಿನಾಂಕಗಳನ್ನೆಲ್ಲ ಹಾಕಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದ್ರೂ ನೇವಿಗೇಟ್ ಮಾಡುತ್ತಿದ್ದ ನನಗೆ ಇಂದಿನ ASP ಯುಗದಲ್ಲಿ ದಿಕ್ಕೇ ತೋಚದ ಹಾಗಾಗುತ್ತೆ ಎಷ್ಟೋ ಸಲ. ಅದೂ ಅಲ್ದೇ ಯಾವ್ದಾದ್ರೂ ಫ್ಲಾಶ್ ಇರೋ ಪುಟಕ್ಕೆ ಹೋದ್ರಂತೂ ಆ ಪುಟದಲ್ಲಿ ಉಪಯೋಗಿಸಿರೋ ಫ್ಲ್ಯಾಶ್ ವರ್ಶನ್ ನನ್ನ ಹತ್ರ ಇರೋಲ್ಲ, ಅವರ ಪುಟಗಳನ್ನು ನೋಡೋಕೆ ಮತ್ತೊಂದೇನನ್ನ ಇನ್ಸ್ಟಾಲ್ ಮಾಡೂ ಅಂತಾನೆ, ಅವನು ಹೇಳಿದ್ದನ್ನ ಕೇಳಿದ್ರೆ ಇನ್ನೊಬ್ರ ಪುಟ ಮತ್ತೆನ್ನೆಲ್ಲೋ ಸರಿಯಾಗಿ ಲೋಡ್ ಆಗಲ್ಲ, ಬ್ಯಾಕ್‌ವರ್ಡ್ ಕಂಪ್ಯಾಟಿಬಿಲಿಟಿ ಇದ್ರೆ ಫಾರ್‌ವರ್ಡ್ ಇರಲ್ಲ, ಇವನನ್ನ ಓಲೈಸಿದ್ರೆ ಮತ್ತೊಬ್ಬನಿಗೆ ಸಿಟ್ಟು ಬರುತ್ತೆ ಅನ್ನೋ ಹಾಗೆ.
ಇವತ್ತೆಲ್ಲ 3-4 GB RAM ಇರೋ ಲ್ಯಾಪ್ ಟಾಪ್‌ಗಳೇ ಸಿಕ್ತಾವೆ, ಅವೇ ಹಲ್ಲು ಕಿರಿದು ನಿಲ್ಲೋ ಜನರ ಫೋಟೋ ಹೊಡೆಯೋಕೆ ಹದಿನೈದ್ ಪಿಕ್ಸೆಲ್ ವರೆಗಿನ ಕ್ಯಾಮರಾಗಳು ಬಂದಿರಬಹುದು. ಒಂದೊಂದು ಫೋಟೋ ಸೈಜೂ ಹತ್ತು MB ಆಗುತ್ತೋ ಏನೋ, ಅವನ್ನ ಸ್ಟೋರ್ ಮಾಡೋಕೆ, ಕಳಿಸೋಕೆ, ಬಳಸೋಕೆ ಹೆಚ್ಚು ಹೆಚ್ಚು ಜಾಗ ಬೇಕು, ಮೆಮರಿ ಬೇಕು - ಎಲ್ಲಿಂದ ತರಾಣಾ? ಹೊಸ ಕ್ಯಾಮರ ಕೊಂಡ್ರೆ ಹೊಸ ಕಂಪ್ಯೂಟರ್ ಬೇಕು ಅಂತ ಆಗುತ್ತೆ, ಹೊಸ ಕಂಪ್ಯೂಟರ್ ಕೊಂಡ್ರೆ ಹೊಸ ಸಾಫ್ಟ್‌ವೇರ್ ಬೇಕು ಅಂತ ಆಗುತ್ತೆ, ಹೊಸ ಸಾಫ್ಟ್‌ವೇರ್ ಸಿಕ್ರೆ ನಮಗೆ ಬೇಕಾದ್ದ್ ಎಲ್ಲ ಇರಲ್ಲ, ಇದೂ ಅದೆಲ್ಲೆಲ್ಲೋ ಹುದುಗಿಸಿ ಇಡ್ತಾರೆ - ಹೊಸದರ ಜೊತೆಗೆ ಹಳೆಯದು ಕೆಲ್ಸಾ ಮಾಡಲ್ಲ...ಹೀಗೆ ಇದರ ಪಟ್ಟಿ ಇಲ್ಲಿಗೆ ನಿಲ್ಲದೆ ಮುಂದೆ ಬೆಳಿಯುತ್ಲೇ ಇರುತ್ತೆ. ನಾನು ಇವತ್ತೇ ಹೋಗಿ ಸ್ಯಾಮ್ಸ್ ಕ್ಲಬ್ಬಿನಿಂದ ಏಳ್‌ನೂರ್ ಡಾಲರ್ ಕೊಟ್ಟು ಹೊಸ ಕಂಪ್ಯೂಟರ್ ತಂದು ಬಿಸಾಕೇನು, ಅದನ್ನ ಸಂಪೂರ್ಣವಾಗಿ ಕಷ್ಟಮೈಜ್ ಮಾಡಿ ನನಗೆ ಬೇಕಾದ್ದನ್ನೆಲ್ಲ ಇನ್ಸ್ಟಾಲ್ ಮಾಡಿ ರನ್ ಮಾಡೋ ಅಷ್ಟೊತ್ತಿಗೆ ನನ್ನ ಒಂದು ದಶಕದ ಆಯಸ್ಸೇ ಮುಗಿದು ಹೋಗುತ್ತೆ, ಅಷ್ಟೊತ್ತಿಗೆ ಆ ಕಂಪ್ಯೂಟರ್ರೇ ಹಳೆಯದಾಗಿರುತ್ತೆ. ಇವುಗಳ ಮುಂದೆ ಯಾವತ್ತೂ ಗೆಲ್ಲೋಕೇ ಆಗಲ್ಲ ಅನ್ಸಲ್ವಾ?
ನಮ್ ಜೀವ್ನಾ ಎಲ್ಲಾ ಐದೇ ಐದ್ ನಿಮಿಷ ಅಂದು ಒಂದೊಂದು ಘಂಟೆ ಸವೆಸೋದ್ರಲ್ಲೇ ಆಗ್ ಹೋಯ್ತು, ಇನ್ನು ಮುಂದಿನ ಜನರೇಷಿನ್ನಿನ ಕಥೆ ದೇವ್ರೇ ಕಾಪಾಡ್ ಬೇಕು.
ನಾವು ಸಾಮಾನ್ಯರು, ನಮಗೆ ಹೆಚ್ಗೆ ಪವರ್ ಬೇಡಾ, ಇವತ್ತು ಸಾವಿರ ಡಾಲರ್ ಕೊಟ್ಟು ತಂದ ಕಾರು ಇನೈದು ವರ್ಷ ಬಿಟ್ರೂ ಇವತ್ತಿನ ಹಾಗೇ ಓಡಾಡೋಲ್ವೇ ಅದೇ ಥರ ಈ ಕಂಪ್ಯೂಟರಿಗೊಂದು ಹೊಸ ಇಕ್ವೇಷನ್ನ್ ತಂದು, ’ಇಲ್ಲಿಗೆ ಸಾಕು, ಶಿವಾ’ ಅನ್ನೋ ಒಂದು ಕಾನ್‌ಫಿಗರೇಷನ್ನಿಗೆ ನಿಲ್ಲಿಸಿಬಿಡಿ, ಅಷ್ಟೇ ಸಾಕು. ಜಗತ್ತಿನ ಒಂದೊಂದು ಇಂಚನ್ನೂ IP ಅಡ್ರಸ್ಸುಗಳಿಂದ ಅಳೀತೀವಿ ಅನ್ನೋ ಜನರಿಗೆ ಯಾವನೋ ಎಲ್ಲೋ ಬರೆದ ಕಂಪ್ಯೂಟರ್ ವೈರಸ್ಸುಗಳನ್ನು ಕಂಡು ಹಿಡಿಯೋದ್ ಕಷ್ಟಾನೇ? ಹಾಗೆ ವೈರಸ್ಸುಗಳನ್ನು ಬರೆದು ಜನರನ್ನು ಹಿಂಸಿಸೋರನ್ನ ಪಬ್ಲಿಕ್‌ನಲ್ಲಿ ಕಲ್ ತಗೊಂಡ್ ಹೊಡೀರಿ ಅವಾಗ್ಲಾದ್ರೂ ಜನರಿಗ್ ಬುದ್ಧಿ ಬರುತ್ತೋ ಏನೋ. ನಮ್ಮ್ ನಮ್ಮ್ ಇ-ಮೇಲ್ ನೋಡ್ಕೊಂಡು ಜೀವ್ನಾ ಸಾಗ್ಸದೇ ಕಷ್ಟಾ ಅನ್ಸಿರುವಾಗ ಅದ್ಯಾವನಿಗೆ ಅದೆಲ್ಲಿಂದ ವೈರಸ್ ಬರೆಯೋಕ್ ಟೈಮ್ ಸಿಗುತ್ತೋ ಯಾರಿಗ್ ಗೊತ್ತು?