Tuesday, June 30, 2020

ನಮ್ಮೊಳಗಿನ ಶತ್ರು


ನಮ್ಮೊಳಗಿನ ಶತ್ರು (...why it is not easy to boycott Chinese products)

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಇಂದಿನವರೆಗೆ "ಸ್ವದೇಶೀ ಬಳಕೆ"ಯನ್ನು ಅನುಮೋದಿಸಲಾಗುತ್ತಿದೆ.  "ಸ್ವದೇಶಿ" ಸ್ವಾಯುತ್ತತೆ, ಸ್ವಾವಲಂಬನೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ಇತ್ತೀಚೆಗೆ ಅನೇಕ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯೋಚಿಸುವುದನ್ನು ಕಾಣಬಹುದು.  ಹೊರಗಿನವರು ಬಂದು ನಮ್ಮ jobs ಗಳನ್ನು ಕಸಿದುಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು, Make America Great Again! ಎನ್ನುವ ಕ್ಯಾಂಪೇನಿನ ಮೂಲದಲ್ಲಿ ಸ್ವದೇಶೀ ಸ್ವಾವಲಂಬನೆಯ ಅಗತ್ಯದ ಬಗ್ಗೆ ಚಿಂತನೆ ಎದ್ದು ಕಾಣುತ್ತದೆ.  ಯಾರು ಸ್ವದೇಶಿಗಳು, ಯಾರು ವಿದೇಶಿಗಳು, ಯಾವುದು "ನಮ್ಮ" ದೇಶದಲ್ಲೇ ಉತ್ಪಾದಿತವಾದದ್ದು, ಯಾವುದು ಹೊರಗಿನಿಂದ ಬಂದಿದ್ದು ಎಂಬುದನ್ನು ಕುರಿತು ಯೋಚಿಸಿದಾಗ, ಹೊರಗಿನವರನ್ನು "ಶತ್ರು"ಗಳು ಎಂದು ಕಂಡುಕೊಂಡಾಗ ಆ ಶತ್ರುಗಳು ನಮ್ಮೊಳಗೆ ಎಷ್ಟರ ಮಟ್ಟಿಗೆ ವಿಲೀನವಾಗಿಬಿಟ್ಟಿವೆಯೆಂದರೆ ಅದನ್ನು ಬೇರ್ಪಡಿಸುವುದೂ ಅಷ್ಟೇ ಕ್ಲಿಷ್ಟಕರವಾಗಿದೆ.

***

ನಾಲ್ಕು ಟ್ರಿಲಿಯನ್ ಡಾಲರಿಗಿಂತಲೂ ಹೆಚ್ಚು ವಸ್ತುಗಳನ್ನು ಉತ್ಪಾದಿಸುತ್ತಿರುವ ಚೀನಾ, ಇಡೀ ಪ್ರಪಂಚದ ಎಲ್ಲ ದೇಶಗಳಿಗೂ ತನ್ನ ವಸ್ತುಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲ ರಾಷ್ಟ್ರಗಳಿಗಿಂತ ಅಗ್ರಗಣ್ಯ ಸ್ಥಾನದಲ್ಲಿದೆ.  ಚೀನಾ ದೇಶವನ್ನು ವಿಶ್ವದ ಮ್ಯಾನುಫ್ಯಾಕ್ಚರಿಂಗ್ ದೇಶವೆಂದು ಸುಲಭವಾಗಿ ಕರೆಯಬಹುದು.  USA ಮುಖ್ಯವಾಗಿ ಯುದ್ಧ ಸಾಮಗ್ರಿಗಳ ತಯಾರಿಕೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿ 2.3 ಟ್ರಿಲಿಯನ್ ಡಾಲರ್‌ ಉತ್ಪನ್ನದಿಂದ  ನಂತರದ ಸ್ಥಾನದಲ್ಲಿ ನಿಲ್ಲುತ್ತದೆ.  ಒಂದು ಟ್ರಿಲಿಯನ್ ಉತ್ಪನ್ನದಿಂದ ಜಪಾನ್ ಮೂರನೇ ಸ್ಥಾನದಲ್ಲಿದ್ದರೆ ಕೇವಲ 412 ಬಿಲಿಯನ್ ಡಾಲರ್ ಉತ್ಪನ್ನದಿಂದ ಭಾರತ ದಕ್ಷಿಣ ಕೊರಿಯಾಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ತನ್ನನ್ನು ತಾನು ಕಂಡುಕೊಂಡಿದೆ.

ಇದು ಕೇವಲ ಭೌತಿಕ ವಸ್ತುಗಳ ಉತ್ಪಾದನೆ ಮತ್ತು ಆಮದು-ರಫ್ತಿನ ವಿಚಾರವಾಗಿರಬಹುದು.  ಇದರ ಜೊತೆಯಲ್ಲಿ ತಂತ್ರಜ್ಞಾನದ ಕೊಡು ತೆಗೆದುಕೊಳ್ಳುವಿಕೆ ಮತ್ತು ಬಳಸುವಿಕೆಯೂ ತಳುಕು ಹಾಕಿಕೊಂಡಿದೆ.  ಉದಾಹರಣೆಗೆ, ಭಾರತದಲ್ಲಿ ಜನರು ಬಳಸುವ ಮೈಕ್ರೋಸಾಫ್ಟ್ ಲೈಸನ್ಸ್ ಇರುವ ಪ್ರಾಡಕ್ಟ್‌ಗಳನ್ನು USA ಲೆಕ್ಕಕ್ಕೆ ಹಾಕಿಕೊಳ್ಳೋಣ.  ಅದೇ ರೀತಿ Boeing, Apple, Amazon ಮೊದಲಾದ ಕಂಪನಿಗಳ ಉತ್ಪನ್ನದ ಬಳಕೆಯ "ಕ್ರೆಡಿಟ್" ಅನ್ನು ಆಯಾ ಕಂಪನಿಗಳು ಹುಟ್ಟಿದ ದೇಶಗಳಿಗೆ ಕೊಡೋಣ.  ಹೀಗೆ ಮಾಡುವುದರಿಂದ ಪ್ರತಿಯೊಂದು ರಾಷ್ಟ್ರವೂ ಇನ್ನೊಂದು ರಾಷ್ಟ್ರದ ಉತ್ಪನ್ನವನ್ನು (product) ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೇಗೆ ಬಳಸುತ್ತಿದೆ ಎಂದು ಗೊತ್ತಾಗುತ್ತದೆ.  ಮೇಲ್ಮಟ್ಟದಲ್ಲಿ, ಇದು ಅಷ್ಟೊಂದು ಸುಲಭವಾಗಿ ಗೋಚರಿಸಿದರೂ, ಆಳದಲ್ಲಿ ಆಯಾ ಕಂಪನಿಗೆ ಸೇರಿಕೊಂಡ ಅನೇಕ ಎಂಟಿಟಿಗಳು ಅದೇ ಕಂಪನಿಯ ಹೆಸರಿನ subsidiary ಆಗಿ ಹಲವಾರು ದೇಶಗಳಲ್ಲಿ ನೋಂದಾವಣೆ ಮಾಡಿಕೊಂಡು ಅಲ್ಲಿಯ ಟ್ಯಾಕ್ಸ್ ಅನ್ನು ಕೊಡುವುದು ಅಥವಾ ಕೊಡದಿರುವುದು - ಟ್ಯಾಕ್ಸ್ ಸಂಬಂಧಿ ಅನುಕೂಲವಾಗಿ - ಎದ್ದು ಕಾಣುತ್ತದೆ.  ಆದ್ದರಿಂದ, ಒಂದು ಕಂಪನಿಯ ವಾರಸುದಾರಿಕೆ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಒಂದು ದೇಶದ ಅಸ್ತಿತ್ವವನ್ನು ಹೀಗೇ ಇದೆ ಎಂದು ಅಷ್ಟು ಸುಲಭವಾಗಿ ವ್ಯಾಖ್ಯಾನಿಸಲಾಗದು.

ಆದರೆ, ಇದೇ ಸೀಳು ನೋಟವನ್ನು ಇನ್ನೂ focus ಮಾಡಿ ನೋಡಿದಾಗ ಹಲವಾರು ಗೊಂದಲ ಅಥವಾ ಜಟಿಲತೆಯ (complications) ಅರಿವಾಗುತ್ತದೆ.  ಯಾವುದೇ ಕಂಪನಿಯ ನಿಜವಾದ ಮಾಲೀಕ/ಮಾಲೀಕರು ಎಂದರೆ ಆಯಾ ಕಂಪನಿಯ ಶೇರ್ ಹೋಲ್ಡರ್‌ಗಳು.  ಅಂತೆಯೇ ಒಂದು ಕಂಪನಿಯ ಶೇರುಗಳನ್ನು ಓಪನ್ ಮಾರುಕಟ್ಟೆಯಲ್ಲಿ ಯಾರು ಬೇಕಾದರೂ ಖರೀದಿಸಬಹುದು.  ನಾವು ಅಮೇರಿಕದಲ್ಲಿ ಕುಳಿತು ಚೀನಾ ದೇಶದ ಕಂಪನಿಯ ಎಕ್ಸ್‌ಚೇಂಜ್‌ನಲ್ಲಿ ಬಿಕರಿಯಾಗುವ ಕಂಪನಿಯ ಶೇರುಗಳನ್ನು ADR (American Depository Receipt) ವ್ಯಾಪ್ತಿಯಲ್ಲಿ ಖರೀದಿಸುತ್ತೇವೆ.  ಅಂತೆಯೇ ಚೀನಾದವರೂ ಸಹ ಬೇರೆ ದೇಶದ ಕಂಪನಿಗಳ ಶೇರುಗಳನ್ನು ಖರೀದಿಸುತ್ತಾರೆ.
ಇದೇ ವಿಶ್ಲೇಷಣೆಯನ್ನು ಇನ್ನೂ ತೀಕ್ಷ್ಣವಾಗಿಸಿದರೆ, ಒಂದು ದೇಶದ ಸರ್ಕಾರ ಅಥವಾ ಸರ್ವಾಧಿಕಾರಿ ರಾಜಸತ್ತೆ ಮತ್ತೊಂದು ದೇಶದ ಹೂಡಿಕೆಯ(ways to invest) ಮಾರ್ಗಗಳನ್ನು treasury, bonds, stocks, derivatives, futures, real estate, fixed assets ಹೀಗೆ ಇನ್ನೂ ಅನೇಕಾನೇಕ ಸಾಧನಗಳಲ್ಲಿ ತೊಡಗಿಸಬಹುದು.  ಉದಾಹರಣೆಗೆ, ಚೀನಾ ದೇಶದ ಪ್ರಜೆ, ತನ್ನ ಕಂಪನಿಯ ಮುಖೇನ ನ್ಯೂ ಯಾರ್ಕ್‌ನಲ್ಲಿನ ತುಂಡು ಭೂಮಿಯನ್ನು ಖರೀದಿಸಬಹುದು.  ಅದೇ ರೀತಿ, ಚೀನಾ ದೇಶದ ಸರ್ಕಾರ ತನ್ನ ಹೂಡಿಕೆಗಳನ್ನು (for hedging or for growth), ಅಮೇರಿಕದ treasury billsಗಳ ಮೇಲೆ ಮಾಡಬಹುದು.  ಹೀಗೆ ಯೋಚಿಸುತ್ತಾ ಹೋದಾಗಲೆಲ್ಲಾ ಯಾರು ಯಾವುದನ್ನು ಖರೀದಿಸುತ್ತಾರೆ, ಬಿಡುತ್ತಾರೆ, ಯಾರಿಗೆ ಎಷ್ಟು ಪರ್ಸೆಂಟ್ ಯಾವುದರ ಮೇಲೆ ownership ಇದೆ ಎಂಬುದನ್ನು ಯೋಚಿಸಿದಂತೆ ನಾವು ನಿಜವಾಗಿಯೂ ವಿಶ್ವ ಮಾನವರಾಗಿ ಕಂಡುಬರುತ್ತೇವೆ!
ಭಾರತದಲ್ಲಿ FDI (Foreign Direct Investment) ಅನ್ನೋ ಹೆಸರಿನಲ್ಲಿ ನಾವು ಹೊರ ದೇಶಗಳಿಗೆ ನಮ್ಮ ದೇಶದ "ಆಗುಹೋಗು"ಗಳಲ್ಲಿ ಹೂಡಿಕೆ ಮಾಡಲು ಅನುಮೋದಿಸಿದೆವು.  ಹೀಗೆ ಭಾರತಕ್ಕೆ ಹರಿದು ಬಂದ ಹಣವುಳ್ಳ ದೇಶಗಳ ಮುಂಚೂಣಿಯಲ್ಲಿ ಅಮೇರಿಕ, ಚೀನಾ, ರಷ್ಯಾ, ಜಪಾನ್, ಸೌದಿ, ಮೊದಲಾದ ದೇಶಗಳಿವೆ.  ಇದ್ದುದರಲ್ಲಿ, ಕನ್ಸೂಮರ್ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು-ರೈತಾಪಿ ಮಿಷೀನುಗಳವರೆಗೆ, ಆಟದ ಸಾಮಾನಿನಿಂದ ಹಿಡಿದು ಟೆಲಿಫೋನ್ ತಂತ್ರಜ್ಞಾನದ ವರೆಗೆ, ಹೀಗೆ ಅನೇಕ ಕಡೆ ವಿದೇಶಿ ಬಂಡವಾಳ ಹೂಡಿಕೆಯಾಗಿದೆ.  ಅದರಲ್ಲಿ ಚೀನಾದ ಸಿಂಹ ಪಾಲು ಇದೆ.  ನಾವೆಲ್ಲ Hero ಸೈಕಲ್ಲುಗಳನ್ನು ಓಡಿಸುತ್ತಿದ್ದಾಗ, ಜಪಾನ್ ನವರು ಬಂದು Hero ಕಂಪನಿಯ ಜೊತೆ ಸಂಬಂಧ ಕುದುರಿಸಿಕೊಂಡು Hero-Honda ಎಂಬ ಮೋಟಾರು ಬೈಕುಗಳನ್ನು ಹೊರ ತಂದರಲ್ಲ! ಹಾಗೆ ವಿದೇಶಿ ಹೂಡಿಕೆ ನೀವು ಬೇಡವೆಂದರೂ ನಮ್ಮ ಪಂಚಭೂತಗಳಲ್ಲಿ ಈಗಾಗಲೇ ಸೇರಿ ಹೋಗಿದೆ.

***
ಹಾಗಾದರೆ, ಈ ವಿದೇಶಿ ಕಂಪನಿಗಳ ನಿಜವಾದ (ಮಾಲಿಕರು) ಓನರುಗಳು ಯಾರು?  ವಿದೇಶಿ ಹೂಡಿಕೆಯಿಂದ ಒಂದು ದೇಶದ ಸ್ವಾಯುತ್ತತೆಗೆ ಭಂಗ ಬರುತ್ತದೆಯೇ? ವಿದೇಶಿ ಹೂಡಿಕೆ ಇಲ್ಲದೇ ಸ್ವಾವಲಂಬನೆಯನ್ನು ನಂಬಿಕೊಂಡೇ ಒಂದು ದೇಶದ (ಮತ್ತು ಅದರ ನಿವಾಸಿಗಳು) ಬೆಳೆಯಲು ಸಾಧ್ಯವೇ? ಚೀನಾ ದೇಶದಲ್ಲಿ ತಯಾರು ಮಾಡಿದ ಪ್ರಾಡಕ್ಟ್‌ಗಳನ್ನು ನಮ್ಮಲ್ಲಿ ನಿಜವಾಗಿಯೂ ಬ್ಯಾನ್ ಮಾಡಿ ಬದುಕಲು ಸಾಧ್ಯವೇ? ಒಂದು ವೇಳೆ,  ನಮ್ಮ ನಡೆಗೆ ಪ್ರತಿಯಾಗಿ ವಿದೇಶಿಗಳು ತಮ್ಮ ಹಣದ ಹೂಡಿಕೆಯಲ್ಲಿ ವ್ಯತ್ಯಯ ಉಂಟು ಮಾಡಿದರೆ, ಅಥವಾ ತಮ್ಮ "ಶೇರ್"ಗಳನ್ನು "ಸೆಲ್" ಮಾಡಿದರೆ ಅದರಿಂದ ನಮ್ಮ ಎಕಾನಮಿ ಮೇಲೆ ಯಾವ ರೀತಿಯ ಪ್ರಭಾವವಾಗುತ್ತದೆ?  ಹೆಚ್ಚುತ್ತಿರುವ ಗ್ಲೋಬಲೈಜೇಷನ್ ನಮ್ಮ "ವಸುಧೈವ ಕುಟುಂಬಕಂ" ಅನ್ನುವ ತತ್ವವನ್ನು ಅನುಮೋದಿಸುತ್ತದೆಯೋ ಅಥವಾ ವಿರೋಧಿಸುತ್ತದೆಯೋ?  ವಿಶ್ವವೇ ಒಂದು ಚಿಕ್ಕ ಹಳ್ಳಿಯಾಗಿ ಎಲ್ಲರಿಗೂ ಎಲ್ಲದರ access ಇರುವಾಗ ಒಂದು ದೇಶ ತನ್ನ ಬಾರ್ಡರ್ ವಿವಾದವನ್ನು ಪ್ರತಿಪಾದಿಸುವುದಕ್ಕೋಸ್ಕರ "ದೇಶೀಯ ವಸ್ತುಗಳನ್ನು ಬಳಸಿ, ಚೈನೀಸ್ ವಸ್ತುಗಳನ್ನು ತಿರಸ್ಕರಿಸಿ" ಎಂದು ಸ್ಲೋಗನ್ ಕೊಡಲು ಸಾಧ್ಯವೇ?  ಒಂದು ವೇಳೆ ಹಾಗೆ ಮಾಡಿದರೆ ಅದರ ಪರಿಣಾಮಗಳೇನಾಗಬಹುದು? ಇಂದು ಮಿತ್ರ ದೇಶವಾಗಿರುವವರನ್ನು ಒಳಕರೆದು ಮಣೆ ಹಾಕಿ ಕೂರಿಸಿಕೊಂಡ ಮೇಲೆ, ಕಾಲಾನಂತರ ಅವರು ತಿರುಗಿ ಬಿದ್ದರೆ, ಆಯಾ ಸಂಬಂಧಗಳನ್ನು ಮುರಿದುಕೊಳ್ಳುವುದು ಮತ್ತು ಕಳೆದುಕೊಂಡ ಸಂಪನ್ಮೂಲದ ಕೊಂಡಿಯನ್ನು ಇನ್ನೊಂದು ದೇಶದ ಜೊತೆಗೆ ಬೆಳೆಸಿಕೊಳ್ಳುವುದು ಅಷ್ಟು ಸುಲಭದ ವಿಚಾರವೇ?

***
ಹೀಗೆ, ಧೀರ್ಘವಾಗಿ ಯೋಚಿಸಿದಂತೆಲ್ಲ, ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತವೆ.  ನಮ್ಮ "ದೇಶಿ-ಸ್ವದೇಶಿ" ಎನ್ನುವ ನಿಲುವು ಒಂದು ರೀತಿಯ ಭಾವನಾತ್ಮಕ ಉದ್ವಿಗ್ನತೆಯಾಗಿ ಗೋಚರಿಸುತ್ತದೆಯೇ ವಿನಾ ಅರ್ಥಶಾಸ್ತ್ರದ ಯಾವುದೋ ಪುಸ್ತಕದ ಅಧ್ಯಾಯದಂತಲ್ಲ.  ನಮಗೆ ಎದುರಾಗಿರುವ ಶತ್ರು ಒಂದು ರೀತಿಯ ಕೊರೋನಾ ವೈರಸ್ಸಿನ ಹಾಗೆ ಗಾಳಿಯಲ್ಲಿ ವ್ಯಾಪಿಸಿಕೊಂಡು ತನ್ನ ಕಬಂಧ ಬಾಹುಗಳನ್ನು ದಿನೇದಿನೇ ಹರಡಿಕೊಳ್ಳುತ್ತಿರುವಾಗ ಈ ಎಲ್ಲ ವಿದೇಶಿ ಬಂಡವಾಳವನ್ನು "ಸ್ವದೇಶಿ ಬಳಸಿ" ಎನ್ನುವ ಒಂದು ಹೇಳಿಕೆಯನ್ನು ಹೇಳಿ ಪರಿಹರಿಸುತ್ತೇವೆ ಎನ್ನುವುದು ಹಾಸ್ಯಾಸ್ಪದವಾಗುತ್ತದೆ.  ಇಡೀ ಉತ್ತರ ಅಮೇರಿಕವನ್ನೇ ಅಲುಗಾಡಿಸುವಷ್ಟು ಸಾಮರ್ಥ್ಯವನ್ನು ಹೊಂದಿರುವ ಚೀನಾ ದೇಶದವರನ್ನು ನಮ್ಮ ದೇಶದ ಎಮೋಷನಲ್ ಮುತ್ಸದ್ದಿಗಳು ಇನ್ನಾದರೂ ಹಗುರವಾಗಿ ತೆಗೆದುಕೊಳ್ಳದಿದ್ದರೆ ಸಾಕು!

ನಾವು ಭಾವಜೀವಿಗಳು.  ಕ್ರೂರ ಪಾಕಿಸ್ತಾನದವರಿಗೆ ನಾವು ಭಾವನಾತ್ಮಕವಾಗಿ ಉತ್ತರಕೊಡುತ್ತೇವೆ.  ಮುಳ್ಳನ್ನು ಮುಳ್ಳಿನಿಂದ ತೆಗಿ ಎನ್ನುವ ಗಾದೆಯನ್ನು ಮರೆತು ನಮ್ಮ ಹೃದಯ ವಿಶಾಲತೆಯನ್ನು ಮೆರೆಯುತ್ತೇವೆ.  ಅದೇ ರೀತಿ ಉತ್ತರದ ಒಂದು ಆಯಕಟ್ಟಿನ ಜಾಗಕ್ಕೋಸ್ಕರ (strategic place) ಚೀನಾದವರು ಹೊಂಚು ಹಾಕಿ ನಮ್ಮ ಸೈನಿಕರನ್ನು ಮುಳ್ಳು-ಮೊಳೆಕಟ್ಟಿದ ಕಬ್ಬಿಣದ ರಾಡುಗಳಿಂದ ಹೊಡೆದಾಕ್ಷಣ ನಮ್ಮ emotional response ಅನ್ನು ಜಾಗರೂಕಗೊಳಿಸಿಕೊಂಡು ಅನೇಕ (ಸಾಮಾಜಿಕ) ಮಾಧ್ಯಮಗಳಲ್ಲಿ ದೊಡ್ಡ ಭಾಷಣವನ್ನು ಬಿಗಿಯುತ್ತೇವೆ.  ಆದರೆ, ಕಳೆದ 25 ವರ್ಷಗಳಿಂದ ಚೈನಾದವರು ನಿಧಾನವಾಗಿ ಅಮೇರಿಕ ಮತ್ತಿತರ ದೇಶಗಳಿಂದ ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಈಗ ಇಡೀ ವಿಶ್ವವೇ ತಲೆತಗ್ಗಿಸಿ ನಿಲ್ಲುವಂತ ತಮ್ಮದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡರು.  ಹಾಗೆಯೇ, ಉತ್ತರದ ಆಯಕಟ್ಟಿನ ಜಾಗದ ಹೋರಾಟದ ಹಿಂದೆಯೂ ಅವರದ್ದೇ ಆಳವಾದ ಒಂದು ಚಿಂತನೆ ಇದೆ.  ಈ "ಸಿಲ್ಕ್ ರೋಡಿ"ನ ಮಾಲಿಕತ್ವ ಅವರಿಗೆ ಬೇಕಾಗಿದೆ.  ಹಣದ ಆಮಿಶ ಒಡ್ಡಿ ಪಾಕಿಸ್ತಾನಕ್ಕೆ ನೆರವಾಗಿ ಭಾರತದ ಮೇಲೆ ಛೂ ಬಿಟ್ಟು, ಭಾರತ ಭೂಮಿಯನ್ನು ಅಸ್ಥಿರವಾಗಿಟ್ಟರೆ ಅವರ ಬೇಳೆಕಾಳುಗಳು ಸಲೀಸಾಗಿ ಬೇಯುತ್ತವೆ.  ದಿನೇದಿನೇ ಹೆಚ್ಚುವ ಜನಸಂಖ್ಯೆಯ ಹೊಟ್ಟೆ ತುಂಬುವುದು ಭಾರತದ ಸಂಕಷ್ಟವಾಗಿರುವಾಗ ಭಾರತದಲ್ಲಿ ತಯಾರಾದ ಯಾವುದೇ ಉತ್ಪನ್ನಗಳ ಮುಖದ ಮೇಲೆ ಸೆಡ್ಡು ಹೊಡೆಯುವ ಪ್ರಾಡಕ್ಟ್ ಅನ್ನು ಕಡಿಮೆ ಬೆಲೆಗೆ ತಯಾರಿಸಿ, ಬಿಡುಗಡೆ ಮಾಡಿ, ಮಾರುವ ದಕ್ಷತೆ ಇದೆ.  ಈಗಾಗಲೇ ನಮ್ಮ ಜನಜೀವನದಲ್ಲಿ ಸೇರಿಕೊಂಡ ಚೀನಾದ ಉತ್ಪನ್ನಗಳನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲಾಗದು.  ಒಳ್ಳೆಯದೋ ಕೆಟ್ಟದ್ದೋ ಒಂದು ವಸ್ತುವನ್ನು displace ಮಾಡುವುದಾದರೆ, ಅದನ್ನು ಯಾವುದರಿಂದ ಮಾಡುತ್ತೇವೆ ಅನ್ನುವುದು ಮುಖ್ಯವಾಗುತ್ತದೆ.  ಹತ್ತು ರೂಪಾಯಿಗೆ ದೊರೆಯುವ ಚೀನಾದ ವಸ್ತುವನ್ನು ನೂರು ರೂಪಾಯಿಗೆ ಸಿಗುವ ಭಾರತದಲ್ಲಿ ತಯಾರು ಮಾಡಿದ ವಸ್ತುವಿನಿಂದ displace ಮಾಡಲಾಗದು... ಯೋಚನೆ ಮಾಡಿ!

Sunday, June 14, 2020

ಓಡುವುದೇ ಗುರಿ...

ನಾವು ಗ್ರೇಡ್ ಸ್ಕೂಲಿನಲ್ಲಿದ್ದಾಗ ನಮಗೆ "ಪರೀಕ್ಷೆ" ಎನ್ನುವ ಈ ರೀತಿಯ ಒಂದು ಪದ್ಯ ಇತ್ತು...
ಸತ್ವವನು ಪರಿಕಿಸುವ ಸಮಯ ಬಂದಿಹುದು
ಬಲ ಕುಶಲ ಸಾಹಸಗಳಿವೆ ನೋಡು|
ಆರು ಯೋಜನ ನೀರನೀಜಿ ಬರಬಲ್ಯಾ?
ನೂರು ಮೈಲಿಯ ಓಟ ಓಡಬಲ್ಯಾ?
ಮದಿಸಿದ ಸಲಗವ ಕಟ್ಟಿ ಹಿಡಿಯಬಲ್ಯಾ?

ಇತ್ಯಾದಿ ಪ್ರಶ್ನೆಗಳಿಂದ ಕೊನೆಯಾಗುವ ಈ ಪರೀಕ್ಷೆಯ ಪರಿ ಬಹಳ ಇಷ್ಟವಾಗಿತ್ತು... ಇದರಲ್ಲಿ ವರ್ಣಿಸಿರುವ ಈ ಉಪಾದಿಗಳಲ್ಲಿ ಯಾವುದಾದರೊಂದನ್ನು ಯಾರಾದರೂ ಮಾಡುತ್ತಾರೆಯೇ ಎಂದು ಆಲೋಚಿಸಿ ಸೋಜಿಗಗೊಳ್ಳುವ ಕ್ಷಣಗಳನ್ನು ಅಂದಿನ ಕನ್ನಡ ತರಗತಿಗಳು ತಂದುಕೊಟ್ಟಿದ್ದವು.  ಈ ಎಲ್ಲ ಬಲ ಕುಶಲ ಸಾಹಸಗಳನ್ನು ಯೋಚಿಸಿಕೊಂಡರೆ ಇತ್ತೀಚಿನ ದಿನಗಳಲ್ಲಿ "ಓಡು"ವುದಕ್ಕೆ ಹೆಚ್ಚಿನ ಜನರು ಒಲವು ತೋರಿಸುತ್ತಾರಾದ್ದರಿಂದ, ಓಡುವುದನ್ನು ಕುರಿತು ಧೀರ್ಘವಾಗಿ ಆಲೋಚಿಸಿಕೊಂಡಾಗ ಈ ಲೇಖನ ಹುಟ್ಟಿತು.
***

ಕ್ರಿಸ್ತಪೂರ್ವ 490 ರಲ್ಲಿ ಗ್ರೀಸ್‌ನ ಫೈಡಿಪಿಡಿಸ್ ಎಂಬಾತ ಮ್ಯಾರಥಾನ ಪಟ್ಟಣದಿಂದ ರಾಜಧಾನಿ ಏಥೆನ್ಸ್‌ವರೆಗಿನ ದೂರ (26.2 ಮೈಲಿ ಅಥವಾ 42 ಕಿ.ಮಿ.) ದೂರವನ್ನು ಓಡಿ ಕ್ರಮಿಸಿದ.  ಗ್ರೀಕ್ ಸೈನಿಕರು ಪರ್ಶಿಯನ್‌ರ ವಿರುದ್ಧ ಗೆದ್ದ ಸಂದೇಶವನ್ನು ಸಾರುವುದು ಅವನ ಕೆಲಸವಾಗಿತ್ತು.  ಆ ದೂರವನ್ನು ಕ್ರಮಿಸಿ, ಅವನು ಓಡಿ ನಿತ್ರಾಣನಾದ್ದರಿಂದ ಸತ್ತು ಹೋದನೆಂದು ಪ್ರತೀತಿ ಇದೆ.  ಇದು ನಮ್ಮ ಆಧುನಿಕ "ಮ್ಯಾರಥಾನ್" ಎಂಬ ಕ್ರೀಡೆಗೆ ಹಿನ್ನೆಲೆ.  ಫೈಡಿಪಿಡಿಸ್ ಸತ್ತು ಹೋದನೆಂದು ಯಾರೂ ಹೇಳೋದಿಲ್ಲ, ಆದರೆ ಅವನ ನೆನಪಿಗಾಗಿ 26.2 ಮೈಲು ದೂರವನ್ನು ಕ್ರಮಿಸುವ ಓಟ ಇಂದಿಗೂ ಬಹಳ ಜನಪ್ರಿಯವಾಗಿದೆ.  ಅಷ್ಟೇ ಅಲ್ಲ, ದಿನೇ ದಿನೇ ಹೆಚ್ಚು ಹೆಚ್ಚು ಜನರನ್ನು ಓಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇಪ್ಪತ್ತಾರು ಮೈಲಿಯ ಮ್ಯಾರಥಾನ್ ಓಟ ಬಹಳ ಹೊತ್ತು ತೆಗೆದುಕೊಳ್ಳುತ್ತದೆ ಹಾಗೂ ಸರಿಯಾಗಿ ಟ್ರೈನಿಂಗ್ ಮಾಡದೇ ಓಡಲು ಸಾಧ್ಯವಿಲ್ಲ ಎಂಬಿತರ ಕಾರಣಗಳಿಗಾಗಿ ದೊಡ್ಡ ಮ್ಯಾರಥಾನ್ ಓಟದ ಕಸಿನ್‌ಗಳಾಗಿ ಅರ್ಧ ಮ್ಯಾರ್‌ಥಾನ್ (13.1 ಮೈಲು), 10ಕೆ (6.2 ಮೈಲು), 5ಕೆ (3.1 ಮೈಲು), ಇತ್ಯಾದಿಗಳೂ ಇವೆ.  ಮ್ಯಾರಥಾನ್ ಎನ್ನುವ ಕ್ರೀಡೆಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡ್ಯೊಯ್ಯುವ ನೆಲೆಯಲ್ಲಿ ಆಧುನಿಕ ಕ್ರೀಡಾಳುಗಳು, 50 ರಿಂದ 200 ಮೈಲಿಯ ದೂರದ ಅಲ್ಟ್ರಾ ಮ್ಯಾರಥಾನ್ ಎನ್ನುವ ಬಗೆಯನ್ನು ಕಂಡುಕೊಂಡಿದ್ದಾರೆ.  ಈ ಅಲ್ಟ್ರಾ ಮ್ಯಾರಥಾನ್‌ಗಳು ಕೆಲವೊಮ್ಮೆ ಕೆಲವು ದಿನಗಳ ವರೆಗೆ ನಡೆಯುವುದೂ ಉಂಟು (ರಾತ್ರಿ ಮತ್ತು ಹಗಲೂ ಸೇರಿ).

ಈ ಓಡುವುದರ ಹಿಂದಿನ ವಿಶೇಷತೆಯನ್ನು ತಿಳಿದುಕೊಳ್ಳೋಣ.  ಈ ಆಧುನಿಕ ಪ್ರಪಂಚದಲ್ಲಿ ಯಾರಾದರೂ ಏಕೆ 26 ಮೈಲಿಗಳ ದೂರವನ್ನು ಓಡುತ್ತಾರೆ, ಅದರಿಂದ ಸಿಗುವ ಮಜವೇನು? ಅದರ ಹಿಂದಿನ ರಹಸ್ಯವೇನು?

ಪ್ರಾಣಿ ಸಂಕುಲದಲ್ಲಿ ಎರಡು ಕಾಲಿನ ಮೇಲೆ ಓಡಾಡುವ ಅನೇಕ ಪಕ್ಷಿ-ಪ್ರಾಣಿ ಪ್ರಬೇಧಗಳಿದ್ದರೂ ಮನುಷ್ಯನಷ್ಟು ನೇರವಾಗಿ ನಿಲ್ಲುವಂತಹ ದೈಹಿಕ ಕ್ಷಮತೆ ಇನ್ನೊಂದು ಪ್ರಾಣಿಗೆ ವಿಕಾಸಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ಬಂದಿರಲಾರದು.  ಹುಟ್ಟುವಾಗ ಅತ್ಯಂತ ಅಸಹಾಯಕವಾಗಿ ಹುಟ್ಟುವ ನಾವು ಅದೆಷ್ಟು ಬೇಗ ನಮ್ಮ ದೈಹಿಕ ಸಮತೋಲನವನ್ನು ಕಂಡುಕೊಂಡು ನಿಲ್ಲುತ್ತೇವೆ.  ಒಮ್ಮೆ ನಿಂತೆವೆಂದರೆ ಓಡುವುದೇ ಗುರಿ... ಈ ಕಾರಣಕ್ಕಾಗಿಯೇ ಕವಿ ನಿಸಾರ್ ಅಹ್ಮದ್ ಅವರು ತರುಣ ಮಿತ್ರನಿಗೆ ಎಂಬ ಕವನದಲ್ಲಿ "ಓಡುವುದೇ ಗುರಿಯೇ? ಓಡುವುದಿರಲಿ, ನಡುನಡುವೆ ನಿಂತು ನೋಡುವ ತಾಳ್ಮೆಯೂ ನಿನಗೆ ಬರಲಿ" ಎಂದು ಹೇಳಿರಬೇಕು.  ಹಿಂದಿನ ಕಾಲದಲ್ಲಿ ಓಡುವುದು ನಿಜವಾಗಲೂ ಗುರಿಯಾಗಿದ್ದಿತು... ಗವಿಗಳಲ್ಲಿ ವಾಸಿಸುತ್ತಿದ್ದ ನಮ್ಮ ಪೂರ್ವಜರು ಪ್ರಾಣಿಗಳಿಗಿಂತ ಹೆಚ್ಚು ವೇಗವಾಗಿ ಓಡಬಲ್ಲವರಾಗಿದ್ದರು, ಅವರು ಅಂದಿನ ದಿನಗಳಲ್ಲಿ ಬೇಟೆಯಾಡಿ ಬದುಕಿದ್ದರಿಂದಲೇ ನಾವು ಇಂದಿಗೂ ಜೀವಂತವಾಗಿರುವುದು, ಅಷ್ಟೇ ಅಲ್ಲ, ನಮ್ಮ ವಂಶಾವಳಿಗಳಲ್ಲಿ ಓಡುವುದು ಸಹಜವಾಗಿರುವುದು... ಆದ್ದರಿಂದ ನಡೆಯಬಲ್ಲವರೆಲ್ಲ ಓಡಬಲ್ಲರು ಎಂದರೆ ತಪ್ಪೇನಿಲ್ಲ!  ಓಡುವುದಕ್ಕೋಸರವೆಂದೇ ಮಿಲಿಯನ್ನುಗಟ್ಟಲೆ ವರ್ಷಗಳ ? ಕಾಲಮಾನದಲ್ಲಿ ನಮ್ಮ ಶರೀರ ತಕ್ಕನಾಗಿ ಅನುವಾಗಿದೆ.  ನಮ್ಮ ದೈಹಿಕ ಸಮತೋಲನವನ್ನು ಕೇವಲ ಪುಟ್ಟ ಪಾದಗಳಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ನಾವು ನಿಲ್ಲುವ, ನಡೆಯುವ ಮತ್ತು ಓಡುವ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಕಾಸ ವಾದದಲ್ಲಿ ನಾವು ಹೇಗೆ ಬೆಳೆದು ಬಂದಿದ್ದೇವೆ ಎಂದು ಆಶ್ಚರ್ಯವಾಗುತ್ತದೆ.

ಇಂದಿನ ಟೆಕ್ನಾಲಜಿ ಕೆಲಸಗಾರರು ಹೆಚ್ಚಿನ ಮಟ್ಟಿಗೆ ಆಫೀಸುಗಳಲ್ಲಿ ದಿನಕ್ಕೆ ಎಂಟು ಘಂಟೆ ಕೂತು ಮೀಟಿಂಗುಗಳಲ್ಲಿ ಕಳೆಯುವ ಅಭ್ಯಾಸಕ್ಕೆ ಒಗ್ಗಿಕೊಂಡು ಹೋಗಿದ್ದಾರೆ ಎನ್ನಬಹುದು.  ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ರೋಗಗಳಿಗೆ ನಾವು ದಕ್ಷಿಣ ಏಷ್ಯಾದ ಜನರು ಬಲಿಯಾಗುವುದನ್ನು ನಾವು ಅಂಕಿ-ಅಂಶಗಳಲ್ಲಿ ನೋಡಬಹುದು.  ಈ ನಿಟ್ಟಿನಲ್ಲಿ ಒಳಾಂಗಣ ಜಿಮ್‌ನಲ್ಲಿ ಟ್ರೆಡ್‌ಮಿಲ್ ಉಪಯೋಗಿಸಿಕೊಂಡಾಗಲೀ, ಅಥವಾ ಹೊರಾಂಗಣದಲ್ಲಿ ಒಂದು ಸುತ್ತು ಓಡಿದರಾಗಲೀ ದೇಹದ ನರನಾಡಿಗಳಲ್ಲಿ ಸಂವೇದನೆ ಉಂಟಾಗಿ ಓಡುವವರಿಗೆ ಒಂದು ರೀತಿಯ ಸ್ಪೂರ್ತಿ ಸಿಕ್ಕಂತಾಗುವುದು ಅವರ ಅನುಭವದ ಮಾತು.  ಕೆಲವರಿಗೆ ಓಡುವುದು ಒಂದು ರೀತಿಯ ಮೆಡಿಟೇಷನ್‌ಗೆ ಸಮನಾದರೆ, ಇನ್ನು ಕೆಲವರಿಗೆ ಓಡುವುದು ಒಂದು ರೀತಿಯ "ಕೆಲಸ", ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸುವ ಆತುರ.  ಇನ್ನು ಕೆಲವರಿಗೆ ಹೊರಗಡೆ ನಿಸರ್ಗದ ಜೊತೆಗೆ ಬೆರೆಯುವ ಒಂದು ಅವಕಾಶ.  ಕೆಲವರು ಸೂರ್ಯೋದಯಕ್ಕೂ ಮೊದಲಿನ ಸದ್ದಿಲ್ಲದ, ತಣ್ಣಗಿನ ವಾತಾವರಣವನ್ನು ಆಯ್ದುಕೊಂಡರೆ, ಇನ್ನು ಕೆಲವರು ಸಂಜೆಯ ಹೊತ್ತನ್ನು ಆರಿಸಿಕೊಳ್ಳುವುದುಂಟು.

ಓಡುವುದರಿಂದ ಉಪಯೋಗಗಳು ಎಷ್ಟೋ, ಸರಿಯಾದ ರೀತಿಯಲ್ಲಿ ಓಡದಿದ್ದರೆ ಅದರಿಂದ ಅಷ್ಟೇ ಅನಾನುಕೂಲಗಳೂ ಇವೆ.  68 ಕೆಜಿ (150 ಪೌಂಡ್) ತೂಕ ಇರುವ ಒಬ್ಬ ವ್ಯಕ್ತಿ ಹತ್ತು ನಿಮಿಷಕ್ಕೆ ಒಂದು ಮೈಲು ಓಡುತ್ತಾ ಆರು ಮೈಲು (ಒಂದು ಘಂಟೆಯಲ್ಲಿ) ದೂರವನ್ನು ಓಡಿದರೆ ಸುಮಾರು 750 ಕ್ಯಾಲೊರಿ ಖರ್ಚು ಮಾಡಿದಂತಾಗುತ್ತದೆ.  ಇದೇ ಸಮಯದಲ್ಲಿ, ಆ ವ್ಯಕ್ತಿಯ ಹೃದಯದ ಬಡಿತ ಕೂಡ ಎರಡರಷ್ಟು ವೇಗವಾಗಿ ಹೊಡೆದುಕೊಳ್ಳತೊಡಗುತ್ತದೆ.  ಹೀಗೆ, ದೇಹವನ್ನು ಅತಿಯಾಗಿ "ಶಿಕ್ಷಿಸುವ" ಕಾಯಕವಾದ ಓಡುವಿಕೆ, ಎಲ್ಲರಿಗೂ ಹೇಳಿ ಮಾಡಿಸಿದ್ದಲ್ಲ.  ಅಕಸ್ಮಾತ್, ತನಗೆ ಗೊತ್ತಿಲ್ಲದೇ ಹೃದಯ ಸಂಬಂಧಿ ಖಾಯಿಲೆಗೆ ತೊಡಗಿದ ವ್ಯಕ್ತಿ, ಸ್ಥಳದಲ್ಲೇ ಸತ್ತು ಹೋಗುವ ಅಪಾಯವಿದೆ.  ಆದ್ದರಿಂದ, ಓಡುವ ಇಷ್ಟ ಇರುವ ಯಾರಾದರೂ ತಮ್ಮ ಓಡುವ ವೇಗ ಹಾಗೂ ದೂರವನ್ನು ನಿಧಾನವಾಗಿ ಹೆಚ್ಚಿಸಿಕೊಂಡು ತಮ್ಮ ಫಿಟ್‌ನೆಸ್ ಅನ್ನು ಪರೀಕ್ಷಿಸಿಕೊಳ್ಳುವುದು ಸಾಮಾನ್ಯ.

ಮೊದಮೊದಲು ಅರ್ಧ, ಒಂದು, ಎರಡು... ಮೂರು ಹೀಗೆ ನಿಧಾನವಾಗಿ ಮೈಲುಗಳನ್ನು ಓಡುತ್ತಾ ಬಂದಾಗ ದೇಹಕ್ಕೆ ಅಭ್ಯಾಸವಾಗತೊಡಗಿ ನಿಧಾನವಾಗಿ ದಿನೇದಿನೇ ಮೈಲುಗಳು ಹೆಚ್ಚುತ್ತಾ ಹೋಗುತ್ತವೆ.  ಹೀಗೆ ಒಂದೆರಡು ವರ್ಷ ವಾರಕ್ಕೆ ಕನಿಷ್ಥ ಪಕ್ಷ ಮೂರು ಬಾರಿಯಾದರೂ ಓಡುತ್ತಾ ಹೋದರೆ ಆಗ ಮ್ಯಾರಥಾನ್ ಓಡುವಷ್ಟು ಆತ್ಮವಿಶ್ವಾಸ ಮೂಡುತ್ತದೆ.  ಓಡುವುದಕ್ಕೆ ಅನುವಾಗುವಲ್ಲಿ ದೇಹದ ಕೆಲಸ ಎಷ್ಟು ಮುಖ್ಯವೋ ಮನಸ್ಸಿನ ಕೆಲಸವೂ ಅಷ್ಟೇ ಮುಖ್ಯ.  ಅವರೆಡರ ತಾಳಮೇಳವಿಲ್ಲದಿದ್ದಲ್ಲಿ ಒಂದು ಮೈಲು ಓಡುವುದೂ ಅಸಾಧ್ಯವಾದೀತು.
***

ನಾನೇಕೆ ಓಡುತ್ತೇನೆ?
ಈ ಪ್ರಶ್ನೆಯನ್ನು ಕೇಳಿಕೊಂಡಾಗಲೆಲ್ಲ ಅನೇಕ ಉತ್ತರಗಳು ಹೊಳೆಯುತ್ತವೆಯಾದರೂ, ಅವುಗಳಲ್ಲೆಲ್ಲಾ ಮುಖ್ಯವಾದುದು "ಅದು ಒಂದು ರೀತಿಯ ಮೆಡಿಟೇಶನ್ ಇದ್ದ ಹಾಗೆ".  You compete against yourself and you meditate as you run!


***
ಕಳೆದ ವರ್ಷ (2019) ಉತ್ತರ ಅಮೇರಿಕದಲ್ಲಿ ಮ್ಯಾರಥಾನ್ ಓಟವನ್ನು ಪೂರೈಸಿದವರ ಸಂಖ್ಯೆ:

    MonthRacesFinishers
    January4028,589
    February4614,220
    March7146,252
    April7355,060
    May8642,352
    June6123,344
    July259,012
    August426,744
    September9419,964
    October107122,194
    November6190,903
    December2941,050

    2019 gÀ°è 53,518 d£ÀgÀÄ £ÀÆå AiÀiÁPïð ¹n ªÀiÁågÀxÁ£ï C£ÀÄß ¥ÀÇgÉʹzÀgÀÄ.
    GvÀÛgÀ CªÉÄÃjPÀzÀ mÁ¥ï 10 ªÀiÁågÀxÁ£ï NlªÀ£ÀÄß DAiÉÆÃf¹zÀ £ÀUÀgÀUÀ¼ÀÄ ºÁUÀÆ ¥ÀÇgÉʹzÀªÀgÀÄ.

    RaceFinishers
    New York City Marathon53,518
    Chicago Marathon45,858
    Boston Marathon26,632
    Los Angeles Marathon20,081
    Honolulu Marathon18,804
    Marine Corps Marathon18,357
    Walt Disney World Marathon11,968
    Philadelphia Marathon10,068
    California International Marathon7,504
    Twin Cities Marathon6,747

    NqÀ®Ä DtªÁVgÀĪÀ d£À¸ÁUÀgÀ!

    Monday, June 08, 2020

    ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...


    ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು...ಹೀಗೆನಿಸಿದ್ದು ನಮ್ಮ ಇತ್ತೀಚಿನ ಸ್ಟಾಕ್ ಮಾರ್ಕೆಟ್ ಮತ್ತು ಎಕಾನಮಿ ಇವುಗಳನ್ನು ಗಮನಿಸಿದಾಗಿನಿಂದ.  ಕೊರೋನಾ ವೈರಸ್ಸಿನ ಕೃಪೆಯಿಂದ ಎಷ್ಟೊಂದು ಜನರು ನಿರುದ್ಯೋಗಿಗಳಾಗಿದ್ದಾರೆ, ಎಷ್ಟೋ ಉದ್ಯಮಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ.  ಇನ್ನು ಎಷ್ಟೋ ಸೆಕ್ಟರುಗಳು ಚೇತರಿಸಿಕೊಳ್ಳಲಾರದ ಮಟ್ಟಕ್ಕೆ ದೈನ್ಯ ಸ್ಥಿತಿಯನ್ನು ತಲುಪಿರುವಾಗ, ಇವತ್ತಿನ ಸ್ಟಾಕ್ ಮಾರ್ಕೆಟ್ಟಿನ ಪ್ರತಿಕ್ರಿಯೆಯನ್ನು ನೋಡಿದರೆ ಒಂದಕ್ಕೊಂದು ತಾಳೆಯಂದಂತೆನಿಸುವುದಿಲ್ಲ, ಅಲ್ಲವೇ?

    ಎಕಾನಮಿ ಹದಗೆಟ್ಟಿದೆ, ಇನ್ನು ಚಿಗುರಿಕೊಳ್ಳಲು ಹಲವು ತಿಂಗಳುಗಳೇ ಬೇಕು, ವಿಶ್ವದಾದ್ಯಂತ ಎಲ್ಲ ಕಡೆಗೆ ರಿಸೆಶ್ಶನ್ನು ಎಂದು ನೀವು ಬೇಕಾದಷ್ಟು ಕಡೆ ಓದಿರುತ್ತೀರಿ, ಕೇಳಿರುತ್ತೀರಿ.  ಆದರೆ, ಇದನ್ನೆಲ್ಲ ಬದಿಗಿಟ್ಟು ವಿಶ್ವದಾದ್ಯಂತ ಮುಖ್ಯ ಮಾರುಕಟ್ಟೆಗಳು ತಮ್ಮ ಸ್ಟಾಕ್ ಇಂಡೆಕ್ಸುಗಳನ್ನು ಕಳೆದ ಎರಡು ತಿಂಗಳ ಕುಸಿತದಿಂದ ಸಂಪೂರ್ಣ ಚೇತರಿಸಿಕೊಂಡಂತೆ ಕಾಣಿಸುತ್ತಿದೆ.  ಮಾರ್ಚ್ ತಿಂಗಳ ಕೆಳ ಮಟ್ಟದ ಸೂಚ್ಯಂಕಗಳು, ಎರಡು-ಮೂರು ತಿಂಗಳುಗಳಲ್ಲಿ V ಆಕಾರದ ರಿಕವರಿಯನ್ನು ಪಡೆದುಕೊಂಡಿವೆ, ಇದಕ್ಕೆ ಏನು ಕಾರಣವಿರಬಹುದು?

    - ಬೇರೆ ಕಡೆಗೆ ಹೂಡಿಕೆ ಮಾಡಲಾರದೆ ಹೆಚ್ಚಿನ ರಿಟರ್ನ್‌ಗೋಸ್ಕರ ಸ್ಟಾಕ್ ಮಾರ್ಕೆಟ್ ನಂಬಿಕೊಂಡು ಹೆಚ್ಚು ಹೆಚ್ಚು ಹಣ ಹೂಡುವ ಶ್ರೀಮಂತರು ಇನ್ನೂ ಇರಬಹುದೇ?
    - ಮೊದಲೆಲ್ಲ ಮನುಷ್ಯರು ಮಾಡುವ ಕೆಲಸವನ್ನು ಈಗೀಗ ಕಂಪ್ಯೂಟರುಗಳು (algo trading) ಮಾಡುತ್ತಿರುವುದರಿಂದ, ಅಂತಹ ಟ್ರೇಡಿಂಗ್ ಸಿಸ್ಟಂಗಳಲ್ಲಿ ಜನ ಸಾಮಾನ್ಯರ ಯಾವುದೇ ಎಮೋಷನ್‌ಗೆ ಬೆಲೆ ನೀಡುತ್ತಿಲ್ಲವೇ?
    - ಸೊರಗಿದ ಆರ್ಥಿಕತೆ, ರಿಸೆಶನ್ ಇತರ ಪದಪುಂಜಗಳೆಲ್ಲ ಕೇವಲ ಬಡವರಿಗೆ ಮಾತ್ರ ಅನ್ವಯಿಸುವಂತಹವೇ?
    - ಕೊಳ್ಳುಬಾಕತನದ ಕನ್ಸೂಮರುಗಳು ಇಲ್ಲದಿದ್ದರೂ ಈ ಸ್ಟಾಕ್ ಮಾರ್ಕೆಟ್ ಅನ್ನು ಯಾವುದೋ ಅವ್ಯಕ್ತ ಶಕ್ತಿಯೊಂದು [ವಿದೇಶಿ ಹೂಡಿಕೆ (foreign investment), ಸರ್ಕಾರೀ ಮಧ್ಯವರ್ತಿತನ (quantitative easing), ಪುನಃ ಕೊಳ್ಳುವಿಕೆ (trade buyback), ಇತ್ಯಾದಿ] ಮುನ್ನಡೆಸುತ್ತಿರಬಹುದೇ?

    ಈ ವರ್ಷ, ಬೆಳೆಯುವ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರಿಗೂ ಹೊಸ ಬಟ್ಟೆ ಬೇಕಾಗಿರಲಾರದು.  ಎಲ್ಲರ ಸಮ್ಮರ್ ವೆಕೇಶನ್ ಕೂಡ ಒಂದಲ್ಲ ಒಂದು ರೀತಿಯಿಂದ ಕೊರೋನಾ ವೈರಸ್ಸಿನ ಪ್ರಭಾವಕ್ಕೆ ಒಳಗಾಗಿದೆ.  ಮುಂದೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಅಮೇರಿಕದಲ್ಲಿ ಶಾಲೆಗಳು ತೆರೆಯದೇ ಮಕ್ಕಳು ಮನೆಯಲ್ಲೇ ಇದ್ದರೆ, ಬ್ಯಾಕ್-ಟು-ಸ್ಕೂಲ್ ಖರೀದಿಗೂ ದಕ್ಕೆಯಾಗುತ್ತದೆ.  ಜನರು ಕಡಿಮೆ ಡ್ರೈವ್ ಮಾಡುತ್ತಿದ್ದಾರೆ, ಹೆಚ್ಚಿನ ಕಾರುಗಳನ್ನು ಕೊಳ್ಳುತ್ತಿಲ್ಲ.  ಕಾರುಗಳು ರೀಪೇರಿಗಾಗಲೀ, ಸರ್ವೀಸಿಗಾಗಲೀ ಬರುತ್ತಿಲ್ಲ.  ರೆಸ್ಟೋರಂಟುಗಳಿಗೆ ಜನರು ಹೋಗುವುದು ಕಡಿಮೆಯಾಗಿದೆ.  ಜನರ ತಿಂಗಳ ಖರ್ಚು ಕನಿಷ್ಠ ಪ್ರಮಾಣಕ್ಕೆ ಬಂದು ನಿಂತಿದೆ.  ಇನ್ನು ಏರ್‌ಲೈನ್ಸ್ ಪ್ರಯಾಣ ಹೆಚ್ಚಿನ ಪ್ರಮಾಣದಲ್ಲಿ ನೆನೆಗುದ್ದಿಗೆ ಬಿದ್ದಿದೆ. ಹೀಗೆ, ರೀಟೈಲ್-ಹೋಲ್‌ಸೇಲ್ ಎಲ್ಲ ಖರೀದಿಗಳೂ ಸಹ ಕಷ್ಟಕ್ಕೆ ಒಳಗಾಗಿ ಸೊರಗಿವೆ.  ಹಾಗಿದ್ದರೆ, ಇವುಗಳೆಲ್ಲದರ ಒಟ್ಟು ಹೊಡೆತ ಸ್ಟಾಕ್ ಮಾರ್ಕೆಟ್ಟಿನ ಮೇಲೆ ಒಂದಲ್ಲ ಒಂದು ರೀತಿಯಿಂದ ಆಗಲೇ ಬೇಕಲ್ಲವೇ?

    ಒಂದು ವರದಿಯ ಪ್ರಕಾರ, ಅಮೇರಿಕದಲ್ಲಿ ನೂರಕ್ಕೆ ಐವತ್ತೈದು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೂಡಿಕೆ ಮಾಡುತ್ತಾರೆ.  ಈ ರೀತಿ ಹೂಡಿಕೆ ಮಾಡುವವರಲ್ಲಿ individual (retail) traders ಮತ್ತು institutional traders ಎಂದು ಎರಡು ರೀತಿಯವರನ್ನು ಗುರುತಿಸಬಹುದು.  ರೀಟೈಲ್ ಟ್ರೇಡರ್ಸ್ ತಮ್ಮ ಚಿಕ್ಕ ಚಿಕ್ಕ ಪೋರ್ಟ್‌ಫೋಲಿಯೋ ಗಳನ್ನು ಸ್ವಯಂ ಮ್ಯಾನೇಜು ಮಾಡುತ್ತಾರೆ, ಹೆಚ್ಚಿನವರು ಹಣ ಕಳೆದುಕೊಳ್ಳುತ್ತಾರೆ ಎಂಬುದು ಗೊತ್ತಿರುವ ವಿಷಯ.  ಆದರೆ, Institutional traders ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿ ಬಿಲಿಯನ್ ಗಟ್ಟಲೆ ಲಾಭಗಳಿಸುತ್ತಾರೆ... ಇವರ ಪ್ರಮಾಣ ಸಾವಿರದಲ್ಲಿ ಒಬ್ಬರ ಲೆಕ್ಕ. ಇಂಥ ಶ್ರೀಮಂತರು ಎಂತಹ ಎಕಾನಮಿ ಇದ್ದರೂ ಅದರಲ್ಲಿ ಲಾಭಗಳಿಸುವ "ತಂತ್ರ" ಉಳ್ಳವರಾಗಿರುತ್ತಾರೆ.  ಇವರಿಗೆ ಸಾಧಾರಣವಾಗಿ ಯಾವುದೇ ರೀತಿಯಲ್ಲಿ ಹೊಡೆತ ಬೀಳದಂತೆ ತಮ್ಮ ಪೋರ್ಟ್‌ಫೋಲಿಯೋಗಳಲ್ಲಿ ಹೆಡ್ಜ್ (hedge) ಮಾಡಿರುತ್ತಾರೆ.

    ಈಗ ಈ ಎಲ್ಲ ವಿವರಗಳನ್ನಿಟ್ಟುಕೊಂಡು (ನಿಜವನ್ನು) ಯೋಚಿಸಿದರೆ, ಇಲ್ಲಿನ ಸ್ಟಾಕ್ ಮಾರ್ಕೆಟ್ಟುಗಳನ್ನು drive ಮಾಡುವವರು ಎಂಬುದು ನಿಮಗೆ ಗೊತ್ತಾಗುತ್ತದೆ.  ಒಂದು ಕಡೆಗೆ ಜನರ pension funds ಮತ್ತಿತರ long term investment ಗಳಿಗೆ ಕಾಲಕ್ರಮೇಣ ಹೂಡಿಕೆ ಮಾಡುವುದರ ಅಗತ್ಯ ಯಾವತ್ತೂ ಇದ್ದೇ ಇರುವಾಗ ಮಾರುಕಟ್ಟೆಗೆ ನಿಧಾನವಾಗಿ ಹಣ ಬರುತ್ತಲೇ ಇರುತ್ತದೆ.  ಮತ್ತೊಂದು ಕಡೆಗೆ, ಹಣವುಳ್ಳವರು ಇನ್ನೂ ಶ್ರೀಮಂತರಾಗುವ ಅನೇಕ ಸೌಲಭ್ಯಗಳ ವರದಾನವೇ ಅವರಿಗೆ ಸಿಗುತ್ತದೆ.   ಈ ಎಲ್ಲದರ ನಡುವೆ ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಪ್ರತಿದಿನದ ತಿಣುಕಾಟ-ಗೊಣಗಾಟಗಳು ಹಾಗೆ ಮುಂದುವರೆಯುತ್ತವೆ.  ಕಷ್ಟದ ಕಾಲದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ.  ಪ್ರಪಂಚದಾದ್ಯಂತ ನೀವು ಯಾವುದೇ ದೇಶವನ್ನು ಯಾವುದೇ "ಇಸಂ" (ism) ಮಸೂರದಲ್ಲಿ ನೋಡಿದರೂ ಎಲ್ಲ ಒಂದೇ ರೀತಿಯಲ್ಲಿ ಕಾಣುತ್ತದೆ!

    Saturday, June 06, 2020

    ಗೋಲ್ಫ್ ಆಡುತ್ತಾರೆ ಬಿಡಿ...ಗೋಲ್ಫ್ ಆಡುತ್ತಾರೆ ಬಿಡಿ

    ಉಳ್ಳವರಿಗೇನು ಬಿಡಿ ಸ್ವಾಮಿ ಬಿಸಿಲೇ ನೆರಳೇ 
    ಇನ್ಯಾರೋ ಸೃಷ್ಟಿಸಿದ ಕಷ್ಟ ಕಾರ್ಪಣ್ಯಗಳ ಗೋಳೇ
    ತಮ್ಮ ತನವನು ಇನ್ಯಾರೋ ಕಲಿತು ಬಿಟ್ಟಾರೇನೋ ಎಂದು
    ಛಲ ಬಿಡದ ತ್ರಿವಿಕ್ರಮರು ಎಲ್ಲ ಕಡೆ ಗೋಲ್ಫ್ ಆಡುತ್ತಾರೆ ಬಿಡಿ|

    ಸುತ್ತ ಮುತ್ತಲು ಮನಸುಗಳು ಚದುರಿ
    ಕನಸುಗಳು ಫಾಲ್ ಎಲೆಗಳ ತರಹ ಉದುರಿ
    ನಾವೇ ಹುಟ್ಟಿಸಿದ ರಣರಂಗ ನಮ್ಮನ್ನೇ 
    ಅಣಕಿಸುತ್ತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

    ಇವರ ತಲೆಯ ಮೇಲಿನ ಟೋಪಿ ಬಿಸಿಲನ್ನು ನಾಚಿಸಿ
    ಇವರ ಮುಖಗಳ ಮೇಲಿನ ಮಂದಹಾಸವ ಉಳಿಸಿ
    ಕಡಕ್ಕಾಗಿ ಇಸ್ತ್ರಿ ಕಾಣಿಸಿದ ಇವರ ಪೋಷಾಕುಗಳು
    ಸೆಟೆದು ನಿಂತಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

    ನೆಲೆದ ಮೇಲೆ ನಿಂತ ನೀರಿರಲಿ ಇಲ್ಲದಿರಲಿ
    ಪ್ರಪಂಚದ ಆಗುಹೋಗುಗಳು ಆಗದೇ ಇರಲಿ
    ಇವರ ಶಾಂತಿಗೆಂದೂ ಭಂಗ ಬಾರದು ನಿಂತ ನೆಲವೂ
    ಕದಲದೇ ಶಾಂತವಾಗಿರುವಾಗ ಗೋಲ್ಫ್ ಆಡುತ್ತಾರೆ ಬಿಡಿ|

    ಆಡುತ್ತಲೇ ಕಾಸು ಮಾಡುವ, ಕಾಸು ಮಾಡಲೆಂದೇ ಆಡುವ
    ತಂಪು ಕನ್ನಡಕದೊಳಗಿಂದ ದೂರದ ನೋಟ ನೋಡುವ
    ಜಡ ಹಿಡಿದ ಬಿಳಿ ಚೆಂಡು ಎನಿಸಿಕೊಳ್ಳುವ ಗಟ್ಟಿ ಉರುಳನು
    ದೂರದ ಗುಂಡಿಯಲಿ ತೂರುವ ಗಂಡಸರು ಗೋಲ್ಫ್ ಆಡುತ್ತಾರೆ ಬಿಡಿ|

    ಬಡವರೆಲ್ಲೂ ಸುತ್ತ ಸುಳಿಯದ ಶ್ರೀಮಂತರ ಆಟವಿದು
    ದುಡ್ಡು ಹೆಚ್ಚಾದಂತೆ ಚೆಂಡಿನ ಗಾತ್ರ ಚಿಕ್ಕದಾಗುವ ಸೂತ್ರವಿದು
    ಯಾರೂ ಹೇಗಾದರೂ ಇರಲಿ ಅವರವರ ನಿರ್ಲಿಪ್ತತೆಯ ಮುಸುಕಿನಲಿ
    ಸುಮ್ಮಿನಿರುವ ಪಾಠ ಉರು ಹೊಡೆದ ಸೋಗಿನಲಿ ಗೋಲ್ಫ್ ಆಡುತ್ತಾರೆ ಬಿಡಿ|

    ಇವರು ನಡೆದ ದಾರಿಯಲ್ಲಿ ಹುಲ್ಲು ಬೆಳೆಸಿ ನೀರು ಕುಡಿಸಲು ಒಬ್ಬ
    ಆಡುವುದು ಇವರೇ ಕಂಡುಕೊಂಡ ಪರಿ ಕರಗಿಸಲು ಕೊಬ್ಬ
    ತಗ್ಗಿದ್ದಲ್ಲಿ ಬಂದು ಸೇರುವ ಚೆಂಡಿನ ಹಾಗೆ ಹಣಬಂದು ಕೂಡುತಿರುವಾಗ
    ಇನ್ನೇನು ತಾನೇ ಮಾಡಬಲ್ಲರು? ಗೋಲ್ಫ್ ಆಡುತ್ತಾರೆ ಬಿಡಿ|

    Monday, June 01, 2020

    ಕೆಲಸಕ್ಕೆ ಜನರಿಲ್ಲ!



    ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತುಲನೆ ಮಾಡಿ ನೋಡಿದಾಗ, ಹಿಂದಿನ ತಲೆಮಾರಿನವರು ಕಷ್ಟ ಜೀವಿಗಳು ಅನ್ನಿಸೋದು ಸಹಜ.  ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದ ಹಾಗೆ ನಾಗರೀಕತೆ, ನಗರೀಕರಣ, ಜನರ ವಲಸೆ ಮೊದಲಾದವು ಬದಲಾಗುತ್ತಿರುತ್ತವೆ.  ನಮ್ಮ ಪೂರ್ವಜರು ತಮ್ಮ ಇಡೀ ಜೀವಮಾನದಲ್ಲಿ ಪ್ರಯಾಣಿಸಿದ ದೂರವನ್ನು ನಾವು ಒಂದು ತಿಂಗಳಲ್ಲೇ ಪ್ರಯಾಣಿಸಿ ಅವರನ್ನು ಮೀರಿಸಬಲ್ಲೆವು.  ಆದರೆ,  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೆಚ್ಚಾಗುತ್ತಿರುವ ಅಂತರವನ್ನು ಗ್ರಹಿಸಲು ಈ ಕೆಳಗಿನ ಎರಡು ಸೂಕ್ಷ್ಮಗಳನ್ನು ಗಮನಿಸಿ:


    1. ಹಿಂದೆಲ್ಲ ಕೆಲಸಗಾರರು ಸಿಗುತ್ತಿದ್ದರು, ಇಂದು ಕೆಲಸಗಾರರು ಸಿಗುವುದಿಲ್ಲ.  ಸಿಕ್ಕರೂ ಸಹ "ನಿಯತ್ತಿ"ನಿಂದ ಮೈ ಬಗ್ಗಿಸಿ ದುಡಿಯುವುದಿಲ್ಲ.  ಕಡಿಮೆ ಕೆಲಸಕ್ಕೆ ಹೆಚ್ಚು ಬೆಲೆ ಕೇಳುತ್ತಾರೆ.

    2.  ಎಲ್ಲರೂ ಓದಿದವರಾಗಿ ಮೇಲ್ಮಟ್ಟದ ಕೆಲಸಗಳನ್ನೇ ಯಾಚಿಸುವುದಾದರೆ, ಉಳಿದೆಲ್ಲ ಕೆಲಸಗಳನ್ನು ಯಾರು ಮಾಡುವವರು? ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ರಸ್ತೆ ಗುಡಿಸಲು, ನೆಲ ಒರೆಸಲು, ಬಟ್ಟೆ ಒಗೆಯಲು, ಮನೆ ಕಟ್ಟಲು, ಮರಳು ಹೊರಲು, ಕಟ್ಟಿಗೆ ಒಡೆಯಲು, ಸುಣ್ಣ-ಬಣ್ಣ ಹಚ್ಚಲು, ತೆಂಗಿನಕಾಯಿ ಕೊಯ್ಯಲು, ಮನೆ ಕೆಲಸ ಮಾಡಲು... ಕೆಲಸಕ್ಕೆ ಯಾರು ಸಿಗುತ್ತಾರೆ?

    ***



    ಕಳೆದ ಇಪ್ಪತ್ತು ವರ್ಷಗಳಲ್ಲಿ ಯು.ಎಸ್.ಎ. ಒಂದು ದೇಶದಲ್ಲಿಯೇ (ಒಂದು ಅಧ್ಯಯನದ ಪ್ರಕಾರ) ಸುಮಾರು 50 ಲಕ್ಷ ಮ್ಯಾನ್ಯುಫ್ಯಾಕ್ಚರಿಂಗ್ ಕೆಲಸಗಳು ಕಾಣೆಯಾದವು.  60 ರ ದಶಕದಲ್ಲಿ ಸುಮಾರು ನೂರಕ್ಕೆ 25% ಜನರು ಮ್ಯಾನ್ಯುಫ್ಯಾಕ್ಚರಿಂಗ್‌ನಲ್ಲಿ ತೊಡಗಿಕೊಂಡಿದ್ದರೆ, ಇಂದು ಅದರ ಪ್ರಮಾಣ ಸುಮಾರು 5% ಮಟ್ಟಿಗೆ ಇಳಿದಿದೆ.  ಒಂದು ಕಾಲದಲ್ಲಿ Ford ಅಂಥ ಕಂಪನಿಗಳು ತಮ್ಮ supply chainನಲ್ಲಿ ಬರುವ ಎಲ್ಲ ವಿಧವಾದ ಪರಿಕರ/ವಸ್ತುಗಳನ್ನು ತಮ್ಮಷ್ಟಕ್ಕೆ ತಾವೇ ತಯಾರಿಸುತ್ತಿದ್ದರು.  ಆದರೆ, ಈಗ ಅವರ ಮುಖ್ಯವಾದ components (such as engine parts) ಸಹ ಬೇರೆ ಕಡೆಯಿಂದ ಆಮದಾಗುವ ಪರಿಸ್ಥಿತಿ ಇದೆ.

    ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿರುವ ಕೆಲಸಗಾರರು ಅಮೇರಿಕದಲ್ಲಿ ಒಂದು ಘಂಟೆಗೆ 20 ಡಾಲರ್‌ ಅಷ್ಟುಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.  ಇದು, ಇಲ್ಲಿನ ಕನಿಷ್ಠ ವೇತನದ ಮೂರು ಪಟ್ಟು ಹೆಚ್ಚು ಎಂದುಕೊಳ್ಳಬಹುದು.  ಅದೇ ಗುಣಮಟ್ಟದ ವಸ್ತುಗಳು, ಹೊರದೇಶದಿಂದ ಕಡಿಮೆ ಬೆಲೆಗೆ ಸಿಗುವಂತೆ (ವಿಶೇಷವಾಗಿ ಚೀನಾದಿಂದ) ಆಮದಾಗುವ ಪರಿಸ್ಥಿತಿ ಇರುವುದಾದರೆ ಇಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಹೇಗೆ ಉಳಿಯುತ್ತದೆ? ಹೇಗೆ ಬೆಳೆಯುತ್ತದೆ?

    ***

    ಸಾಮಾನ್ಯ ಜನರ ಅನುಕೂಲ: ತೊಂಭತ್ತರ ದಶಕದ ಕೊನೆಯಲ್ಲಿ ಭಾರತದ ಬ್ಯಾಂಕುಗಳಿಗೆ ನಿಧಾನವಾಗಿ ಕಂಪ್ಯೂಟರುಗಳು ನುಸುಳತೊಡಗಿದಾಗ ನಮ್ಮನಮ್ಮಲ್ಲಿ ವಾದ-ವಿವರಣೆಗಳು ನಡೆಯುತ್ತಿದ್ದವು.  ಒಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ಕೆಲಸವನ್ನು ನುಂಗಿ ಹಾಕುತ್ತವೆ ಎಂದೂ, ಇನ್ನೊಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ದಕ್ಷತೆಯನ್ನೂ (efficiency), ಜನರ ಕೆಲಸದ ನಿಖರತೆಯನ್ನೂ (accuracy) ಹೆಚ್ಚಿಸುತ್ತವೆ ಎಂದೂ ವಾದವನ್ನು ಮಂಡಿಸುತ್ತಿದ್ದೆವು.  ಆಗಿನ ಕಾಲವೆಲ್ಲ ದಪ್ಪನಾದ ಲೆಡ್ಜರುಗಳ ಕಾಲ, ಎಲ್ಲಿ ನೋಡಿದರೂ ಅಲ್ಲಿ ಪೇಪರುಗಳದ್ದೇ ದರಬಾರು, ಅವುಗಳದ್ದೇ ಕಾರುಬಾರು.

    ನಂತರ ಕಂಪ್ಯೂಟರುಗಳು ನಿಧಾನವಾಗಿ ಎಲ್ಲ ಕಡೆಗೆ ಹರಡಿಕೊಂಡ ಮೇಲೆ ನಾವೆಲ್ಲರೂ ಅದರ ಅನುಕೂಲವನ್ನು ಪಡೆದಿದ್ದೇವೆ.  ಆದರೆ, ಕಂಪ್ಯೂಟರುಗಳು ಬಂದ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡಿಮೆ ಏನೂ ಆಗಿಲ್ಲ.  ಬ್ಯಾಂಕುಗಳು ಬೆಳೆದಂತೆ, ಬ್ರ್ಯಾಂಚುಗಳು ಹೆಚ್ಚಾದವು, ಎಟಿಎಮ್ ಮಿಷೀನುಗಳು ಎಲ್ಲ ಕಡೆ ತಲೆ ಎತ್ತಿದವು.  ಮುಂದೆ ಕ್ರೆಡಿಟ್ ಕಾರ್ಡ್, ನಂತರದಲ್ಲಿ ಆನ್‌ಲೈನ್ ಪೇಮೆಂಟ್, ಪೇಟಿಎಮ್ ನಂತಹ ಸೇವೆಗಳು ಬಂದು ಹಣ ವಿಲೇವಾರಿ ತ್ವರಿತವಾಯಿತು.  ಹಣದುಬ್ಬರ (inflation) ಹೆಚ್ಚಾದಂತೆ ಪ್ಯಾಂಟ್ ಜೇಬಿನಲ್ಲಿ ತೆಗೆದುಕೊಂಡು ಹೋಗುವ ಹಣ ಯಾವ ಕೆಲಸಕ್ಕೂ ಸಾಕಾಗದೇ ರಾಶಿ ರಾಶಿ ಹಣವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದಿಲ್ಲಿಗೆ ವಹಿವಾಟು ನಡೆಸುವಂತಾಯಿತು.  ಈ ಅನುಕೂಲಗಳೆಲ್ಲ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಅವಿಷ್ಕಾರಗಳಿಂದಲೇ ಸಾಧ್ಯವಾದದ್ದು.

    ಸಿರಿವಂತರ ನೋವು: ಯಾವುದಾದರೂ ಹಳೆಯ ಕನ್ನಡ ಸಿನಿಮಾಗಳನ್ನೋ ಅಥವಾ ಫೋಟೋಗಳನ್ನೋ ನೀವು ನೋಡಿದರೆ ಒಂದಂತೂ ನಿಮಗೆ ಗ್ಯಾರಂಟಿಯಾಗುತ್ತದೆ.  ನಾವು ನೋಡಿದ ಎಂಭತ್ತರ ದಶಕದಲ್ಲಿ ಟ್ರಾಫಿಕ್ ಜಾಮ್ ಅನ್ನೋ ಪರಿಸ್ಥಿತಿ ಇರುತ್ತಲೇ ಇರಲಿಲ್ಲ.  ಊರಿನಲ್ಲಿ ಕೆಲವೇ ಕೆಲವು ಮನೆಗಳಿಗೆ ಫೋನ್ ಕನೆಕ್ಷನ್ ಇರುತ್ತಿತ್ತು.  ದೂರದ ಊರುಗಳಿಂದ ಟ್ರಂಕ್ ಕಾಲ್ ಮಾಡಿ ಕರೆ ಮಾಡಬೇಕಿತ್ತು.  ಅದರ ಜೊತೆಗೆ ಊರಿನಲ್ಲಿ ನಿಗದಿತ ಸಮಯಕ್ಕೆ ಹೋಗಿ ಬರುತ್ತಿದ್ದ ಬಸ್ಸುಗಳು, ಆಗಾಗ್ಗೆ ಬಂದು ಹೋಗುತ್ತಿದ್ದ ಲಾರಿಗಳನ್ನು ಬಿಟ್ಟರೆ ಕೇವಲ ಶ್ರೀಮಂತರ ಮನೆಯ ಕಾರುಗಳಿಗೆ ರಸ್ತೆಗಳು ಮೀಸಲಾಗಿದ್ದವು. ಕೇವಲ ಹಳ್ಳಿಗಳಷ್ಟೇ ಏಕೆ, ಜಿಲ್ಲಾ ಕೇಂದ್ರಗಳೂ, ಬೆಂಗಳೂರಿನಲ್ಲೂ ಸಹ ಅಷ್ಟೊಂದು ಕಾರುಗಳು ಓಡಾಡುತ್ತಿರಲಿಲ್ಲ.  ಕಾರು ಇಟ್ಟುಕೊಂಡವರಿಗೆ ಯಾವತ್ತೂ ಪಾರ್ಕಿಂಗ್ ಸಮಸ್ಯೆ ಬಂದುದನ್ನು ನಾನು ನೋಡಿಲ್ಲ, ಕೇಳಿಲ್ಲ.

    ಈಗ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾರು ಇದೆ.  ಕೆಲವೊಂದು ಮನೆಗಳಲ್ಲಿ ಕಾರುಗಳನ್ನು ನಿಲ್ಲಿಸಲು ಜಾಗವಿರದಿದ್ದರೂ ಅವರ ಹತ್ತಿರ ಕನಿಷ್ಠ ಒಂದಾದರೂ ಕಾರು ಇರುವುದು ಸಾಮಾನ್ಯವಾಗಿದೆ.  ದೇಶದ ಉದ್ದಗಲಕ್ಕೂ ಇಂದು ಕಾರುಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.  ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ನಲವತ್ತು ವರ್ಷಗಳಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ವಾಹನಗಳ ಪ್ರಮಾಣ 6000% ದಷ್ಟು ಏರಿರುವುದನ್ನು ಕಾಣಬಹುದು.

    ಊರು-ಕೇರಿಯ ರಸ್ತೆಗಳು ಕೇವಲ ಸಿರಿವಂತರಿಗೆ ಮಾತ್ರ ಎನ್ನುವಂತಿದ್ದ ಒಂದು ಕಾಲಕ್ಕೂ ಈಗಿನ ಎಲ್ಲರೂ ರಸ್ತೆ ಮೇಲೆ ತಮ್ಮ ಸವಾರಿಯನ್ನು ಚಲಾಯಿಸುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಇದರಿಂದ ಸಾಮಾನ್ಯ ಜನರಿಗಂತೂ ಅನುಕೂಲವೇ ಸರಿ, ಆದರೆ ಆಗಿನ ಸಿರಿವಂತರು ತಮ್ಮ ವಿಶೇಷವಾದ ಸೌಲಭ್ಯವನ್ನು ಕಳೆದುಕೊಂಡರು ಎನ್ನುವುದು ನನ್ನ ಅಭಿಪ್ರಾಯ.

    ***
    ಇಂದಿನ ಚಿಕ್ಕದಾದ ಕುಟುಂಬಗಳಲ್ಲಿ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಲ್ಲಿ ಮೆಷೀನುಗಳ ಪಾತ್ರ ಇರುವುದು ಹಿರಿದಾಗಿದೆ.  ನಗರದ  ಹೆಚ್ಚಿನ ಮನೆಗಳಲ್ಲಿ ಇಂದು ವಾಷಿಂಗ್ ಮೆಷೀನ್ ನುಸುಳಿದೆ.  ಸೋಲಾರ್ ಪವರ್‌ನಿಂದ ನೀರು ಕಾಯಿಸಿಕೊಳ್ಳುವ ಅನೇಕರು ಸ್ವಿಚ್ ಹಾಕಿದರೆ ಬಿಸಿ ನೀರು ಪಡೆಯುವ ಸ್ಥಿತಿಯನ್ನು ಕಾಣಬಹುದು.  ನೆಲವನ್ನು ಗುಡಿಸಲು, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಪ್ರತಿದಿನ ಕೆಲಸಕ್ಕೆ ಬಂದು ಹೋಗುವವರು ಸಿಗುತ್ತಾರೆ.  ತಿಂಗಳಿಗೆ ಇಷ್ಟು ಎನ್ನುವ ನಿಗದಿತ ಸಂಬಳಕ್ಕೆ ಕೆಲಸ ಮಾಡುವ ಇವರುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ವಟಾರದ ಒಂದಿಷ್ಟು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ.  ಹೆಚ್ಚಿನವರಿಗೆ ಒಳ್ಳೆಯ ಉತ್ಪನ್ನವೂ ಇರುವುದು ಕೇಳಿ ಬರುತ್ತದೆ.  ಇನ್ನು ಮನೆಯ ಚಿಕ್ಕ-ಪುಟ್ಟ ಕೆಲಸಗಳ ಜೊತೆಗೆ ಮನೆ ಮಂದಿಗೆ ಅಡುಗೆ ಮಾಡಿಕೊಂಡು ಹೋಗುವುದು ಮನೆಯವರ ಕೆಲಸ.  ಅದರಲ್ಲೂ ಸಹ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ತೊಂದರೆ ಹೆಚ್ಚು, ಎಲ್ಲದಕ್ಕೂ ಗಂಡ ಹೆಂಡತಿ ಹೊಂದಿಕೊಂಡು ಹೋಗಬೇಕಾಗುತ್ತದೆ.  ಇನ್ನು ಮನೆಯಲ್ಲಿ ಹಿಂದಿನ ತಲೆಮಾರಿನ ಹಿರಿಯರು ಯಾರಾದರೂ ಇದ್ದರೆ, ಅಡುಗೆಯ ಕೆಲಸದಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.  ನೂರು ಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ಎಲ್ಲರ ಮನೆಯೂ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲಾಗದು.  ಆದರೆ, ಸೀನಿಯರ್ ಸಿಟಿಜನ್ಸ್ ಜನಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ವ್ಯವಸ್ಥೆ ಅಷ್ಟೊಂದು ಮುಂದುವರೆದ ಹಾಗಿಲ್ಲ.  ಇವತ್ತಿಗೂ ಹೆಚ್ಚಿನ ವೃದ್ಧ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಂಬಿಕೊಂಡಿರುವುದು ಕಂಡು ಬರುತ್ತದೆ.  ಇಂಥವರ ಪೋಷಣೆಗೆ ಅದರಲ್ಲೂ ಖಾಯಿಲೆ ಬಿದ್ದಿರುವ ಹಿರಿಯರಿಗೆ ದಿನನಿತ್ಯದ ನೆರವಿಗೆ ಕೆಲಸಗಾರರು ಸಿಗುತ್ತಿಲ್ಲ.

    ಸೀನಿಯರ್ ಸಿಟಿಜನ್ಸ್‌ಗಳನ್ನು ನೋಡಿಕೊಳ್ಳುವುದು ಬಹಳ ಸೂಕ್ಷ್ಮ ಹಾಗೂ ಕಷ್ಟದ ಕೆಲಸ.  ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಖಾಯಿಲೆ ಬಾಧಿಸುತ್ತಿರುತ್ತದೆ.  ಅವರ ಪ್ರಿನ್ಸಿಪಲ್ಸ್, ಅವರಿಗೆ ಬೇಕಾದ ಊಟ-ತಿಂಡಿ ಅಗತ್ಯಗಳು, ಅವರ ಮನರಂಜನೆ, ಇತ್ಯಾದಿ ಇವೆಲ್ಲವೂ ಬೇರೆಯ ಒಂದು ಆಯಾಮವನ್ನೇ ಪಡೆದುಕೊಂಡಿರುತ್ತವೆ.  ಹೀಗಿರುವಾಗ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಗಂಭೀರ ಸ್ವರೂಪದ ಖಾಯಿಲೆ ಏನಾದರೂ ಬಂದರೆ, ಅವರನ್ನು ಸಂತೈಸುವುದು ಬಹಳ ಕಷ್ಟದ ವಿಷಯವಾಗುತ್ತದೆ... ಈ ನಿಟ್ಟಿನಲ್ಲಿ ಭಾರತದುದ್ದಕ್ಕೂ ವೃದ್ಧಾಶ್ರಮಗಳು ಅಷ್ಟೊಂದು ಬೆಳೆಯದಿದ್ದರೂ ಇನ್ನು ಮುಂದೆ ಬೆಳೆಯುವುದನ್ನು ಊಹಿಸಬಹುದು. 

    ಆದರೆ, ಇತ್ತೀಚೆಗೆ ಮನೆಗಳಲ್ಲಿ ಕೆಲಸ ಮಾಡಲು ಸಿಗುವವರು "ನಿಯತ್ತಿ"ನಿಂದ ಕೆಲಸ ಮಾಡೋದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬರುತ್ತವೆ.  ಯುವ ಜನತೆ ಯಾವಾಗಲೂ ತಮ್ಮ ತಮ್ಮ ಮೊಬೈಲು ಫೋನುಗಳಿಗೆ ಶರಣಾಗಿರುತ್ತಾರೆ.  ಹಿಂದಿನ ಕಾಲದವರ ಹಾಗೆ ನಿಯತ್ತಿನಿಂದ ನಡೆದುಕೊಳ್ಳೋದಿಲ್ಲ, ಕೆಲಸಗಳ್ಳರು, ಯಾವಾಗಲೂ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆಯೇ ಹೊರತು ವಹಿಸಿಕೊಂಡ ಕೆಲಸವನ್ನು ಮೈಬಗ್ಗಿಸಿ ಮಾಡೋದಿಲ್ಲ.  ಹೀಗೆ ಅನೇಕ ಹೇಳಿಕೆಗಳನ್ನು ಕೇಳುವುದು ಸಾಮಾನ್ಯವಾಗಿದೆ.  ಎಲ್ಲರೂ ಐಶಾರಾಮಿ ಬದುಕಿನ ಕನಸನ್ನು ಕಂಡು ಅದರಲ್ಲೇ ಬದುಕುವ ಹಾಗಿದ್ದರೆ, ಈ ಐಶಾರಾಮಿತನಕ್ಕೆ ಅರ್ಥವೂ ಬರೋದಿಲ್ಲ. ಜೊತೆಗೆ ಅದು ಸೃಷ್ಟಿಸುವ "ಟ್ರಾಫಿಕ್ ಜಾಮ್" ಕೂಡಾ ಭೀಕರವಾಗಿರುತ್ತದೆ.  ಊರಿನಲ್ಲಿ ಕೆಲವೇ ಕೆಲವು ಕಾರುಗಳಿದ್ದಾಗ ಹೇಗೆ ಒಂದು ವ್ಯವಸ್ಥೆ ಚಾಲನೆಯಲ್ಲಿತ್ತೋ, ಅದೇ ವ್ಯವಸ್ಥೆ ಊರಿನ ಪ್ರತಿಯೊಬ್ಬರೂ ಸಮತೋಲಿತದವರಾದಾಗ ಸಂತುಲನ (equilibrium) ವನ್ನು ಕಳೆದುಕೊಳ್ಳುತ್ತದೆ.  ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡಲು ಯಾರೂ ಸಿಗದೇ ಹೋಗುವ ಪರಿಸ್ಥಿತಿ ಬರುತ್ತದೆ.  ಕಿತ್ತ ಚಪ್ಪಲಿಗಳನ್ನು ದುರಸ್ತಿ ಮಾಡಿಸುವುದಾಗಲೀ, ಬಟ್ಟೆಯನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುವುದಾಗಲೀ ಕಡಿಮೆಯಾಗಿ ಎಲ್ಲರೂ ದಿನದಿನಕ್ಕೂ "ಹೊಸ"ತನ್ನು ನಂಬಿಕೊಳ್ಳುವ ಗ್ರಾಹಕ ಪ್ರವೃತ್ತಿ (consumerism) ಬೆಳೆಯುತ್ತದೆ.  ಅದರಿಂದ ಎಕಾನಮಿ ದೊಡ್ಡದಾಗುತ್ತದೆ ಎಂದು ಎಷ್ಟೋ ಜನ ತಮ್ಮ ತತ್ವಗಳನ್ನು ಮಂಡಿಸಬಹುದು.  ಆದರೆ, ಅದರಿಂದ ನಾವು ಅನೇಕ ವ್ಯತಿರಿಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.

    ಹೀಗೆ ತಲೆಮಾರಿನಿಂದ ತಲೆಮಾರಿಗೆ ಪ್ರತಿಯೊಬ್ಬರೂ "ಸಿರಿವಂತ"ರಾಗುತ್ತಲೇ ಇದ್ದಾರೆ... ಆದರೆ, ಸಿರಿವಂತರೆನ್ನುವುದು ಒಂದು ತುಲನಾತ್ಮಕ ಹಣೆಪಟ್ಟಿ ಅಷ್ಟೇ.

    Tuesday, May 26, 2020

    ಮತ್ತೆ ಬಾ ಕರೋನಾ...


    ಇಂದಲ್ಲ ನಾಳೆ ನಮ್ಮವರಿಗೆಲ್ಲ ತಿಳಿ ಹೇಳುವುದಕ್ಕಾಗಿ
    ಇಂದು ತಿಳಿಯದ ಮಂದಿಗೆ ತಿದಿಯ ತಿವಿದು
    ಬಗ್ಗಿದರೂ ಬಾಗದ ಜನರ ನಡುವಿಗೆ ಒದೆದು
    ಸರಳ ಸೂತ್ರವನು ಎಲ್ಲರಲ್ಲೂ ಅಳವಡಿಸುವುದಕ್ಕಾಗಿ...

    ಮತ್ತೆ ಬಾ ಕರೋನಾ...
    ವಿಶ್ವ ಜೀವ ಸಂಕುಲಗಳನ್ನೆಲ್ಲ ಕಡೆಗಣಿಸಿ ದುಡಿಸಿದ್ದಕ್ಕಾಗಿ
    ಹಡೆದವ್ವನ ಕೆಡವಿ ಸಲಹದವರಿಗೆ ನೀರು ಕುಡಿಸಿ
    ಅವರವರ ಹೊಟ್ಟೆಯಲ್ಲಿರುವ ವಿಷವ ಕಕ್ಕಿಸಿ
    ಎಲ್ಲರೆದೆಯೆಲ್ಲೂ ಸಾವಿನ ಭಯವ ಹುಟ್ಟಿಸುವುದಕ್ಕಾಗಿ...

    ಮತ್ತೆ ಬಾ ಕರೋನಾ...
    ಜೀವ ಜಂತುಗಳ ಸಂಹರಿಸಿ ತಮ್ಮ ಸಂತತಿ ಬೆಳೆಸಿದ್ದಕ್ಕಾಗಿ
    ಮುಗಿಲಿನಲ್ಲೂ ತಮ್ಮ ಕಚಡವನ್ನು ಹರಡುವ
    ನೆಲದಾಳವನ್ನು ಬಗೆದು ತಮ್ಮ ದಾಹ ತೀರಿಸಿಕೊಳ್ಳುವ
    ನಮಗೆ ಕ್ಷುದ್ರ ಜೀವಿಗಳಿಂದ ಬದುಕಿನ ಪಾಠ ಕಲಿಸುವುದಕ್ಕಾಗಿ...

    ಮತ್ತೆ ಬಾ ಕರೋನಾ...
    ವಸುಧೈವ ಕುಟುಂಬದ ನಿಜ ಮೌಲ್ಯ ಬಿತ್ತರಿಸುವುದಕ್ಕಾಗಿ
    ಕಣ್ಣೀರಲ್ಲಿ ಕೈ ತೊಳೆಯುವರಿಗೆ ಸಮತೆಯ ಸಾರುತ
    ಹೊಟ್ಟೆಯ ಬೆಂಕಿಯನು ನೀಗಿಸಲು ಹಾರಾಡುತ
    ಅಸಮಾನತೆಯಲ್ಲಿ ತೂಗುವವರ ಸಮಾಧಾನದ ಹಾಡಾಗಿ...

    ಮತ್ತೆ ಬಾ ಕರೋನಾ...
    ಎಲ್ಲವನೂ ಸ್ತಬ್ಧ ಸ್ತಂಬೀಭೂತಗೊಳಿಸುವುದಕ್ಕಾಗಿ
    ಓಡುವುದನ್ನೇ ಬದುಕಾಗಿಸಿಕೊಂಡವರ ತುಸು ನಿಲ್ಲಿಸಿ
    ಜೀವ ಜಲ ವಾಯು ಸುತ್ತಲಿನ ಪ್ರಕೃತಿಯನ್ನು ಲಾಲಿಸಿ
    ಎಲ್ಲರಿಗೂ ಮತ್ತೆ ಮತ್ತೆ ಬುದ್ಧಿ ಹೇಳುವುದಕ್ಕಾಗಿ|

    ಮತ್ತೆ ಬಾ ಕರೋನಾ...  ಮತ್ತೆ ಬಾ ಕರೋನಾ...

    Thursday, May 21, 2020

    ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ

    ನಾವು ತೊಂಭತ್ತರ ದಶಕದ ಕೊನೆಯ ದಿನಗಳಲ್ಲಿ ನಮ್ಮ ಗ್ರಹಚಾರ ನೆಟ್ಟಗಿದ್ದುದರಿಂದ ಒಂದು ರೀತಿಯಲ್ಲಿ ಕೆಂಪು ಬಸ್ಸಿಗೆ ಕೈ ಮಾಡಿ ಹತ್ತಿ ಸಾರಾಸಗಟು Technology ಎನ್ನುವ ರೋಲರ್ ಕೋಸ್ಟರ್ ರೈಡ್ ಮಾಡಿ ಬಂದಂಥವರು.  ನಮಗೆಲ್ಲ ಆಗ ಬಹಳ ಡಿಮ್ಯಾಂಡು!  ನಮಗೆಲ್ಲ ನಮ್ಮ ಜೇಬುಗಳಲ್ಲಿ ಕನಿಷ್ಠವೆಂದರೆ ಮೂರು ಸಾವಿರ ಡಾಲರ್‌ಗಳಷ್ಟು ಮೊತ್ತದ ಟ್ರಾವೆಲರ್ಸ್ ಚೆಕ್ ಅನ್ನು ಕೊಟ್ಟು ಕಳಿಸುವುದರ ಜೊತೆಗೆ ಏರ್‌ಪೊರ್ಟ್‌ನಲ್ಲಿ ಪಿಕ್‌ಅಪ್ ಮಾಡೋದರಿಂದ ಹಿಡಿದು ನಮಗೆಲ್ಲ ತಲೆಗೊಂದರಂತೆ Homestead village ನಲ್ಲಿ ರೂಮ್ ಸಹ ಬುಕ್ ಮಾಡಿದ್ದರು.  ಆ ಸಮಯದಲ್ಲಿ ಯಾವುದೇ ಬ್ರಾಂಚ್‌ನ ಇಂಜಿನಿಯರುಗಳಾದರೂ ಇಲ್ಲಿ ಬರಬಹುದಿತ್ತು... ನಮ್ಮ ಜೊತೆಯಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್ ಇಂಜಿನಿಯರ್ಸ್ ಸಹ ಇದ್ದರು.

    ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!

    ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು.  ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು.  ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.

    "ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು.  ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ.  ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು.  ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು.  ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು.  ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು.  ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.

    ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು.  ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು.  ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ.  ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು.  ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ?  ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು?  ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.

    ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.

    ಹೀಗಿರುವಾಗ... ಕುಮರೇಸನ್‌ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!"  ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!

    ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್‌ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ.  ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.

    ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್‌ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು.  ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.

    ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು!  ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?

    ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ.  ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!

    Tuesday, May 19, 2020

    ಯಾರನ್ನ ನಂಬುವುದು? ಬಿಡುವುದು?

    ಈಗಿನ ಕಾಲದ ನ್ಯೂಸ್ ಚಾನೆಲ್‌ಗಳನ್ನ ನೋಡ್ತಾ ಇದ್ರೆ ಒಂದು ರೀತಿ ವಾಕರಿಕೆ ಬಂದಂಗೆ ಆಗೋಲ್ಲ?  ಒಂದು ಕಾಲದಲ್ಲಿ ಎಷ್ಟೊಂದು ಚೆನ್ನಾಗಿ ನಾವು ವಿಶ್ವದ ಆಗುಹೋಗುಗಳನ್ನು ಫಾಲೋ ಮಾಡುತ್ತಿದ್ದೆವು.  ರೇಡಿಯೋ ಇಟ್ಟುಕೊಂಡು BBC, VoA, SLBC, AIR ಮೊದಲಾದ ಸ್ಟೇಷನ್ನುಗಳನ್ನು ತಿರುಗಿಸಿ ನೋಡುತ್ತಿದ್ದೆವು.  ಆಗಿನ ಕಾಲದಲ್ಲಿ ಮ್ಯಾಗಜೀನುಗಳು, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದುತ್ತಿದ್ದೆವು.  ಆಗಿನ ಕಾಲದ ಜರ್ನಲಿಸಮ್ ಅಂದ್ರೆ ಅದರಲ್ಲಿ ತಿರುಳಿತ್ತು, ಹುರುಳಿತ್ತು, ಎಲ್ಲಕ್ಕಿಂತ ಮುಖ್ಯವಾಗಿ ನ್ಯೂಸ್ ಇತ್ತು.  ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡುವ ಪ್ರಕ್ರಿಯೆ ಇತ್ತು.  ಓದುಗರನ್ನು, ಕೇಳುಗರನ್ನು ಪತ್ರಿಕಾ ಸಿಬ್ಬಂದಿ ಸೀರಿಯಸ್ ಆಗಿ ಪರಿಗಣಿಸುತ್ತಿದ್ದರು, ಗಮನಿಸುತ್ತಿದ್ದರು.

    ಇದನ್ನು ಬೇಕಾದ್ರೆ, ನಾಸ್ಟಾಲ್ಜಿಯಾ ಎಂದು ಕರೆದು ಬದಿಗೆ ತಳ್ಳಬಹುದು, ಆದರೆ ಇಂದಿನ ನ್ಯೂಸ್‌ ನೆಟ್‌ವರ್ಕ್‌ಗಳಲ್ಲಿ  ಯಾವುದೇ ಹುರುಳಿದ್ದಂತೆ ನನಗನ್ನಿಸೋದಿಲ್ಲ.  ನ್ಯೂಸ್‌ಗಿಂತ ಹೆಚ್ಚಾಗಿ ಒಪಿನಿಯನ್ (Op Ed) ನಿಂದ ಎಲ್ಲ ಅಂಕಣಗಳು ತುಂಬಿರುತ್ತವೆ.  ಕೆಲವೊಂದು ನ್ಯೂಸ್ ಪೇಪರುಗಳು, ಚಾನೆಲ್ಲುಗಳಂತೂ ಆಯಾ ಪೊಲಿಟಿಕಲ್ ಮ್ಯಾನಿಫೆಸ್ಟೋ ಅನ್ನು ಸಪೋರ್ಟ್ ಮಾಡುತ್ತಾ, ತಮ್ಮ ರಾಜಕೀಯ/ದುರೀಣರ ಮೌತ್‌ಪೀಸ್ ಆಗಿ ಬಿಟ್ಟಿವೆ.

    ***
    ನಾನು ಈ ಕೊರೋನ ಬೆಳವಣಿಗೆಯನ್ನು ಪ್ರತಿದಿನ ರಾತ್ರಿ ಒಂಭತ್ತು ಘಂಟೆಗೆ ಪ್ರಸಾರವಾಗುವ ABD News Live ನೋಡುತ್ತೇನೆ.  Linsey Davis ಇದ್ದವರಲ್ಲಿ ಒಳ್ಳೆಯ anchor ಎಂದೇ ಹೇಳಬೇಕು.  ಸ್ಫುಟವಾಗಿ ಯಾವ ತಪ್ಪೂ ಇಲ್ಲದೇ ಉತ್ತಮ ಧ್ವನಿಯಿಂದ ಈಕೆ ABC ನ್ಯೂಸ್ ನೋಡುಗರಿಗೆ ಇಷ್ಟವಾಗುತ್ತಾರೆ.  ಜೊತೆಗೆ, ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವಷ್ಟರ ಮಟ್ಟಿನ objectivity ಯನ್ನು ನಾನು ಈವರೆಗೆ ಕಂಡಿದ್ದೇನೆ, ಅದರಲ್ಲೂ ಯಾವುದೇ "ಸ್ವಾಮಿನಿಷ್ಠೆ" ಈವರೆಗೆ ನನ್ನ ಅರಿವಿಗೆ ಬಂದಿಲ್ಲ.


    ಒಂದು ಮೂವತ್ತು ನಿಮಿಷದ ನ್ಯೂಸ್ ದಿನಕ್ಕೊಮ್ಮೆ ಸಿಕ್ಕರೆ ಸಾಕು ಪ್ರಪಂಚದಲ್ಲಿ ಏನಾಗುತ್ತದೆ ಎಂದು ಗೊತ್ತಾಗಲು.  ಅದಲ್ಲದೇ ನಮ್ಮನ್ನೆಲ್ಲ ಯಾವಾಗಲೂ ತಮ್ಮ ಕಡೆಗೆ ತಿರುಗಿಕೊಂಡಿರುವಂತೆ ಮಾಡುವ ಸೋಶಿಯಲ್ ಮೀಡಿಯಾ "ಚಾನಲ್ಲು"ಗಳಂತೂ ಇದ್ದೇ ಇರುತ್ತಾವಲ್ಲ, ನೀವು ಬೇಡವೆಂದರೂ ನಿಮ್ಮನ್ನು ಸುತ್ತಿಕೊಳ್ಳಲು?!

    ಅಪ್ಪಿ-ತಪ್ಪಿಯೇನಾದರೂ ಒಳ್ಳೆಯ ಇಂಗ್ಲೀಷ್ ಬರವಣಿಗೆ ಸಿಗುತ್ತದೆಯೆಂದು NY Times ಏನಾದರೂ ನೋಡಿದರೆ ಸಾಕು, Trump ಮಹಾಶಯ ತಪ್ಪು ಮಾಡುವುದನ್ನೇ ಕಾಯುತ್ತಿರುವವರ ಹಾಗೆ ಇಲ್ಲಿನ ರಿಪೋರ್ಟರುಗಳು, ಅಲ್ಲ ಬರಹಗಾರರು ವರದಿ ಒಪ್ಪಿಸಿಯಾರು.  ಅವರಿಗೆ ಮತಿ ಇಲ್ಲ, ಇವರಿಗೆ ಗತಿ ಇಲ್ಲ ಎನ್ನುವುದು ಖಚಿತವಾಯಿತು.

    ಅಲ್ಲದೇ ಈ ಸೊಫೆಸ್ಟಿಕೇಟೆಡ್ ಚಾನೆಲ್‌ನ anchor ಗಳೆಲ್ಲ ಯಾವಾಗಲೂ breaking news ಗಳಲ್ಲೇ ತಮ್ಮನ್ನೇ ಕಳೆದುಕೊಂಡು ಅದು ಯಾಕಾದರೂ ಅರಚುತ್ತಿರುತ್ತಾರೋ, ಯಾರು ಬಲ್ಲರು?

    Monday, May 18, 2020

    ಹುಲು ಮಾನವರು ಹೊರಗಡೆ ಬರುತ್ತಿದ್ದಾರೆ, ಹುಷಾರ್!


    ... ಹೀಗನಿಸಿದ್ದು, ನಮ್ಮ ಹಿತ್ತಲಿನ ಹಿಂಬಾಗದಲ್ಲಿ ಮೇಯುತ್ತಿದ್ದ ಎರಡು ಜಿಂಕೆಗಳು ಹಟಾತ್ತನೆ ಹೊರಗೆ ಬಂದ ನನ್ನನ್ನು ನೋಡಿ ಓಡಿ ಹೋಗಿದ್ದನ್ನು ಕಂಡು.  ಸುಮಾರು ಎಂಟು ವಾರಗಳ ಕಾಲ ನಾವೆಲ್ಲ ನಮ್ಮ ಚಲನವಲನಗಳನ್ನು ಮನೆಯ ಒಳಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೆವು.  ಈ ಎರಡು ತಿಂಗಳುಗಳಲ್ಲಿ ಹೆಚ್ಚೆಂದರೆ ಇಪ್ಪತ್ತು ಮೈಲುಗಳ ದೂರವನ್ನು ಕಾರಿನಲ್ಲಿ ಕ್ರಮಿಸಿರಬಹುದು, ಅದೂ ಸಹ ಮನೆಯ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಬರುವುದಕ್ಕೆ ಮಾತ್ರ.  ಎರಡು ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದ ಪ್ರಾಣಿ-ಪಕ್ಷಿಗಳು ಮತ್ತೆ ಈ ಮಾನವ ಪ್ರಾಣಿಯ ಸಹವಾಸಕ್ಕೆ ಮರು-ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆಯೋ, ಏನೋ?

    ಕೊರೋನಾ ವೈರಸ್ ಹಲವಾರು ತೊಂದರೆಗಳನ್ನು ಮನುಕುಲಕ್ಕೆ ಬಳುವಳಿಯಾಗಿ ಕೊಟ್ಟರೂ ಸಹ, ಅದು ನಿಸರ್ಗಕ್ಕೆ ಒಳ್ಳೆಯದನ್ನೇ ಮಾಡಿದೆ. ಗಾಳಿಯಲ್ಲಿ  ಪೊಲ್ಯೂಷನ್ ಲೆವೆಲ್‌ಗಳು ಕಡಿಮೆಯಾಗಿರುವುದು, ಸಮುದ್ರದಲ್ಲಿ ಮತ್ಸ್ಯ ಸಂತತಿ ಹೆಚ್ಚಾಗಿರುವುದು, ಅಲ್ಲಲ್ಲಿ ಎಸೆಯುವ ಕಸ-ಪ್ಲಾಸ್ಟಿಕ್‌ಗಳ ಕಡಿಮೆಯಾಗಿರುವುದು, ವಾಹನಗಳ ಸಂಚಾರವಿಲ್ಲದೆ ಇಂಧನ ಉಳಿತಾಯವಾಗಿರುವುದು... ಹೀಗೆ ಅನೇಕಾನೇಕ ಅನುಕೂಲಗಳಾಗಿವೆ.

    ಆದರೆ, ಈ ಪ್ರಶ್ನೆ ಆಗಾಗ್ಗೆ ಎದ್ದು ನಿಲ್ಲುತ್ತದೆ - ನಮ್ಮ ನಡವಳಿಕೆಯಲ್ಲಿ ಇನ್ನು ಮುಂದಾದರೂ ಬದಲಾವಣೆಗಳನ್ನು ಕಾಣುತ್ತೇವೆಯೋ ಅಥವಾ ಎರಡು ತಿಂಗಳ ನಂತರ ಏನೂ ಆಗಿರದವರಂತೆ ಮೈ ಕೊಡವಿಕೊಂಡು ಮತ್ತೆ ನಮ್ಮ ನಮ್ಮ ಜೀವನಕ್ರಮದಲ್ಲಿ ತೊಡಗಿಕೊಳ್ಳುತ್ತೇವೆಯೋ? ಈ ಕೊರೋನಾ ವೈರಸ್ ಸುದ್ದಿ ಹೆಚ್ಚು ಮಾಡಿತೇ ವಿನಾ, ಹಿಂದಿನ ಮಹಾಮಾರಿಗಳಿಗೆ ಹೋಲಿಸಿದರೆ ಇದರ ಪರಿಣಾಮ ಕಡಿಮೆ ಎಂದೇ ಹೇಳಬೇಕು.  ಹದಿನಾರು ವರ್ಷಗಳ ಹಿಂದೆ ಸುನಾಮಿ ಬಂದಾಗ ಇಷ್ಟೇ ಜನ ಸತ್ತು ಹೋಗಿದ್ದ ನೆನಪು... ಆದರೆ, ಆ ನೆನಪು ನಮ್ಮ ಅವಶೇಷಗಳ ಅಡಿಯಲ್ಲಿ ಅದೆಂದೋ ಸಿಕ್ಕಿ ನಲುಗಿ ಹೋಗಿದೆ. ಅಂತೆಯೇ, ಈ ಕೊರೋನಾ ವೈರಸ್ಸಿನ ಸಾಹಸವೂ ಕೂಡ.   ಕೇವಲ ಮೂರು ಲಕ್ಷ ಜನರು ವಿಶ್ವದಾದ್ಯಂತ ಸತ್ತು ಹೋದರಲ್ಲ ಎಂದು ಸಾಡಿಸ್ಟ್ ಆಗಿ ಈ ಮಾತನ್ನು ಹೇಳುತ್ತಿಲ್ಲ... ಸಾವು ಯಾವತ್ತಿದ್ದರೂ ನೋವಿನ ವಿಚಾರವೇ, ಆದರೆ ನಾವು ಈ ಮಹಾಮಾರಿಯಿಂದೇನೂ ಒಳ್ಳೆಯದನ್ನು ಕಲಿಯದೇ ಇರುವಂತಾದರೆ, ಅದು ನಮ್ಮ ದುರ್ದೈವ ಅಷ್ಟೇ.



    ಈ ಕೋವಿಡ್‌ನಿಂದಾಗಿ ವಾಹನ ಅಪಘಾತಗಳು ಕಡಿಮೆಯಾಗಿವೆ.  ತುರ್ತಾಗಿ ಬೇಕಾಗಿಲ್ಲದ ಶಸ್ತ್ರ ಚಿಕಿತ್ಸೆಗಳು ಮುಂದೂಡಲ್ಪಟ್ಟಿವೆ.  ಅನಗತ್ಯವಾಗಿ ಆಸ್ಪತ್ರೆಗಳನ್ನು ಸುತ್ತುವವರ ಸಂಖ್ಯೆ ಕಡಿಮೆ ಆಗಿದೆ.  ಅಂಥವರನ್ನು ಸುಲಿಯುವ ಬಿಸಿನೆಸ್ ಮೈಂಡೆಡ್ ನರ್ಸಿಂಗ್ ಹೋಮ್‌ಗಳು ಬಾಗಿಲು ಹಾಕಿ ಸುಮ್ಮನಿದ್ದವು.  ಎಲ್ಲದಕ್ಕಿಂತ ಮುಖ್ಯ ಅನಗತ್ಯ ಖರ್ಚುಗಳು ಕಡಿಮೆ ಆಗಿದ್ದವು.  ಹೊರಗಡೆಯ ಚಟುವಟಿಕೆಳೆಲ್ಲ ಕಡಿಮೆಯಾದ್ದರಿಂದ ಜೇಬಿಗೂ ಒಂದಿಷ್ಟು ಹೊರೆ ಕಡಿಮೆ ಎನಿಸಿತ್ತು.

    ಇದೀಗ ತಾನೆ ಹೊರಬರುತ್ತಿರುವ ನಮ್ಮನ್ನೆಲ್ಲ ನೋಡಿ - ಹುಲುಮಾನವರು ಹೊರಗೆ ಬರುತ್ತಿದ್ದಾರೆ, ಹುಷಾರ್! ಎಂದು ನಮ್ಮ ಸುತ್ತಲಿನ ಎಲ್ಲ ಜೀವಿಗಳೂ ಸಹ ಒಂದು ಕ್ಷಣ ದಂಗಾಗಿರಬಹುದಲ್ಲವೇ?

    Sunday, May 17, 2020

    ಕೆಲಸಕ್ಕೆ ಜನರಿಲ್ಲ ಕೆಲಸಕ್ಕೆ ಮನಸಿಲ್ಲ

    ಕೆಲಸಕ್ಕೆ ಜನರಿಲ್ಲ ಕೆಲಸಕ್ಕೆ ಮನಸಿಲ್ಲ
    ಆಲಸ್ಯವೇ ನಮಗಂಟಿದ ದೊಡ್ಡ ಶಾಪ|

    ಕೆಲಸವಿರೆ ಹೆಚ್ಚೆಂಬರು, ಇಲ್ಲದಿರೆ ಕೊರಗುವರು
    ಕಾಯಕವೇ ಕೈಲಾಸ ಎನುವ ಧರ್ಮ
    ಹಣವಂತರು ಬೆಳೆಯುವರು ಸುಖ ಕಾಣದೆ ಸೊರಗುವರು
    ಎಲ್ಲಿದೆ ಕೆಲಸ-ಹಣ-ಸುಖ ಸಮಾಧಾನದ ಮರ್ಮ|

    ದಿನ ನಿತ್ಯ ತಮ್ಮ ಕೆಲಸವ ಮಾಡೆ ಮಂದಿ ಬೇಕು
    ನಮ್ಮ ಕೆಲಸ ಕಾರ್ಯಗಳನು ನಾವು ಮಾಡುವುದು ತರವೇ
    ದಿನ ದಿನ ಸುತ್ತಿ ತಿರುಗಿ ಮತ್ತೆ ಬರುವ ಬಂಧ ಸಾಕು
    ಮೈಬಗ್ಗಿಸಿ ದುಡಿಯುವುದೂ ಒಂದು ವರವೇ|

    ನಿನ್ನ ಕರ್ಮಗಳನು ನೀ ಮಾಡು ಫಲ ನಾನು ಕಾಯ್ವೆನೆನಿಸಿ
    ಪರಮಾತ್ಮ ಕೆಲಸ-ಕಾರ್ಯ-ಕರ್ಮಗಳಿಗೆ ಜೋತು ಬಿದ್ದ
    ವಿಪುಲ ಸಂಸಾರದ ಜೋಳಿಗೆಯ ಕೊರಳಿಗೆ ಸಿಂಗರಿಸಿ
    ಕರ್ಮ ಭೂಮಿಯ ಪಳೆಯುಳಿಕೆಯೊಳಂದಾಗಿ ಎಡವಿ ಬಿದ್ದ|

    Saturday, May 16, 2020

    ಹಾಲು-ನೀರಿನ ಅನ್ಯೋನ್ಯತೆ!

    "ಕಾಯದಿದ್ರೆ ಕೆನೆ ಕಟ್ಟೋದಿಲ್ಲ!" ಎಂದು ಎನಿಸಿದ್ದು ಇವತ್ತು ಚಹಾ ಮಾಡೋದಕ್ಕೋಸ್ಕರ ಹಾಲು ಕಾಯಿಸುತ್ತಿರುವಾಗ.  ನಾವು ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟು ಸಲ ನೀರು ಅಥವಾ ಹಾಲನ್ನು ಬಿಸಿ ಮಾಡಿರೋದಿಲ್ಲ?  ಕೆಲವೊಮ್ಮೆ ಈ ಗೊತ್ತಿರುವ ವಿಷಯಗಳನ್ನೂ ಗಹನವಾಗಿ ನೋಡಿದಾಗ, ಅವುಗಳಲ್ಲಿನ ಜೀವನ ಸೂಕ್ಷ್ಮ ನಮಗೆ ಗೊತ್ತಾಗುತ್ತದೆ.  ಈ ವಿಚಾರದಲ್ಲಿ ನಿಸರ್ಗ ನಮಗೆಲ್ಲರಿಗೂ ಕಲಿಸೋ ಪಾಠಗಳು ಜೀವನ ಪರ್ಯಂತ ಅನೇಕಾನೇಕ ಇದ್ದೇ ಇರುತ್ತವೆ, ನಾವು ನೋಡಬೇಕು, ಗಮನಿಸಬೇಕು ಅಷ್ಟೇ.

    ನಮ್ಮ ಕಡೆ ನೀರು ಕುದ್ದು (ಕುದಿದು) ಮರಳುತ್ತದೆ ಎನ್ನುತ್ತಾರೆ... ಅದನ್ನು ಇಂಗ್ಲೀಷಿನಲ್ಲಿ rolling boil ಅಂತಲೂ ಹೇಳ್ತಾರೆ.  ಕಾಯುವ, ಕುದಿಯುವ ಪ್ರಕ್ರಿಯೆ ಬಹಳ ಸುಲಭವಾದದ್ದು.  ನಾವು ಒಲೆ/ಸ್ಟೋವ್ ಮೇಲೆ ನೀರನ್ನು ಕಾಯಲು ಇಟ್ಟಾಗ ಅದರ ತಳ ಬೆಂಕಿಯಿಂದ ಬಿಸಿಯಾಗಿ ತಳಕ್ಕೆ ಹತ್ತಿರವಿರುವ ನೀರಿನ ಅಣುಗಳು ಬಿಸಿಯನ್ನು ತಗುಲಿಕೊಂಡು ಮೇಲೆ ಬರುತ್ತವೆ.  ಅವುಗಳು ಮೇಲೆ ಬಂದಂತೆಲ್ಲ, ಮೇಲಿನ ತಂಪಾಗಿರುವ (relatively) ಅಣುಗಳು ಕೆಳಗೆ ಹೋಗುತ್ತವೆ.  ಹೀಗೆ ನೀರು ಕುದಿಯುವ ಮಟ್ಟವನ್ನು ತಲುಪಿದ ಹಾಗೆ, ಈ ನೀರಿನ ಅಣುಗಳು, ಕೆಳಗೆ ಹೋದವು, ಮತ್ತೆ "ಮರಳು"ವ ಹೊತ್ತಿಗೆ ಅವುಗಳ ವೇಗ ಹೆಚ್ಚಾಗುತ್ತದೆ... ನಂತರ ನೀರು ಕೊತ ಕೊತ ಕುದಿಯತೊಡಗುತ್ತದೆ.

    ಆದರೆ, ಹಾಲನ್ನು ಬಿಸಿ ಮಾಡಿದಾಗ ಅದೇ ರೀತಿ ಹಾಲಿನ ಕಣಗಳು ಮೇಲೆ ಕೆಳಗೆ ಹೋಗುತ್ತಿದ್ದರೂ ಸಹ, ಹಾಲು ಬಿಸಿ ಆದಂತೆಲ್ಲ, ಅದರ ಮೇಲ್ಮೈ ಮೇಲೆ ಒಂದು ತೆಳುವಾದ ಕೆನೆಯ ಪರದೆ ಹುಟ್ಟಲು ಆರಂಭವಾಗುತ್ತದೆ.  ಹಾಲು ನೀರಿಗಿಂತ ಸ್ವಲ್ಪ "ದಪ್ಪ"ನಾದ ದ್ರವ ಪದಾರ್ಥವಾದರೂ ಕೂಡ, ಹಾಲಿನ boiling point ನೀರಿಗಿಂತ ಹೆಚ್ಚೇನೂ ಭಿನ್ನವಾಗಿರೋದಿಲ್ಲ, ಆದರೆ ಈ ಎರಡೂ ದ್ರವ ಪದಾರ್ಥಗಳು ಕುದಿಯುವ ಹೊರಮುಖ ಬೇರೆ ಬೇರೆ ಅಷ್ಟೇ.

    ಹಾಲು ಕುದಿಯುತ್ತಾ ಹೋದಂತೆಲ್ಲ ಅದರ ಮೇಲ್ಮೈಯಲ್ಲಿರುವ ಕೆನೆಯ ದಪ್ಪ ಹೆಚ್ಚಾಗುತ್ತಾ ಹೋಗುತ್ತದೆ.  ಪಾತ್ರೆಯ ಬುಡದಲ್ಲಿ ಬಿಸಿ ಎಲ್ಲ ರೀತಿಯಲ್ಲೂ ಒಂದೇ ಸಮನಾಗಿ ಇದೆಯೆಂದು ಭಾವಿಸಿದರೆ, ಹಾಲು ಕುದಿಯುವ ಮಟ್ಟವನ್ನು ತಲುಪಿದಾಗ, ಅದರ ಮೇಲ್ಮೈಯಲ್ಲಿ ಕಟ್ಟಿರುವ ಕೆನೆಯ ಪರದೆ ಒಡೆದು ಒಂದೇ ಸಮನೆ ಮೇಲೆ ಉಕ್ಕಲು ಆರಂಭಿಸುತ್ತದೆ.  ಆದರೆ ನೀರು ಹೀಗು ಕುದ್ದು ಉಕ್ಕೋದಿಲ್ಲ.


    ಇದನ್ನು ಇಬ್ಬರು ಗೆಳೆಯರ ಅನಾಲಜಿಯನ್ನು ಉಪಯೋಗಿಸಿಯೂ ವಿವರಿಸಬಹುದು!  ಹಾಲು ಮತ್ತು ನೀರು ಇಬ್ಬರೂ ಜೀವದ ಗೆಳೆಯರು. ಹಾಲಿನಲ್ಲಿ ಸಾಮಾನ್ಯವಾಗಿ ನೀರನ್ನು ಮಿಶ್ರ ಮಾಡಿರುತ್ತಾರೆ, ಅಥವಾ ನೀರಿನ ಪ್ರಮಾಣ ಇದ್ದೇ ಇರುತ್ತದೆ. ಹಾಲು ಕುದಿಯುತ್ತಾ ಬಂದ ಹಾಗೆ ನಿಧಾನವಾಗಿ ಹಬೆಯಾಡತೊಡಗುತ್ತದೆ... ಅಂದರೆ, ಅದರಲ್ಲಿನ ನೀರು ಆವಿಯಾಗಲು ತೊಡಗುತ್ತದೆ... ಅಂದರೆ, ಹಾಲಿನ ಸ್ನೇಹಿತ ನಿಧಾನವಾಗಿ ಹೊರಗಡೆ ಹೋಗುತ್ತಾನೆ.  ಆದರೆ, ತನ್ನ ಸ್ನೇಹಿತ ನೀರು ಇನ್ನೇನು ಪೂರ್ಣ ಪ್ರಮಾಣದಲ್ಲಿ ಆವಿಯಾಗಿ ಹೋಗೇ ಬಿಟ್ಟಿತು ಎಂದು ಹೆದರಿಕೆಯಿಂದ ಹಾಲೂ ಸಹ "ನೀನು ಹೋದಲ್ಲಿಗೆ ನಾನೂ ಬರುತ್ತೇನೆ!" ಎಂದು ಹಠ ಹಿಡಿದು ಉಕ್ಕುತ್ತಾನಂತೆ.  ಅದೇ ಸಮಯಕ್ಕೆ ನೀವು ಸ್ವಲ್ಪ ನೀರನ್ನು ಪಾತ್ರೆಯ ಮೇಲೆ ಚಿಮುಕಿಸಿದರೆ ಉಕ್ಕುವ ಹಾಲು ಸುಮ್ಮನಾಗುತ್ತಾನಂತೆ!

    ಹೀಗೆ, ಈ ದಿನ ಚಹಾ ಮಾಡಲು ಹೋಗಿ, ಹಾಲು-ನೀರಿನ ಜೋಡಿಗಳನ್ನು ಬೆಂಕಿಯ ಸಹವಾಸದಲ್ಲಿ ಕುದಿಯುವಂತೆ ಮಾಡಿದ್ದು, ಅವುಗಳ ಅನ್ಯೋನ್ಯ ಗೆಳೆತನವನ್ನು ಪರೀಕ್ಷೆಗೆ ಒಡ್ಡಿ ಹತ್ತಿರದಿಂದ ನೋಡಿದ್ದು ಕೋವಿಡ್ ಕವಿದು ಮನೆಯಲ್ಲೇ ಮುದುರಿಕೊಂಡಿರುವ ನಮ್ಮಂತಹವರು ಮಾಡಿದ ದೊಡ್ಡ ಕಾರ್ಯ!

    Wednesday, May 13, 2020

    Time ಇದ್ರೆ Photo organize ಮಾಡಿ!

    ಹೆಚ್ಚು ಜನರಿಗೆ ಈಗ ನೆನಪಿನಲ್ಲಿರಲಿಕ್ಕಿಲ್ಲ... ಒಂದು ಕಾಲದಲ್ಲಿ ನಾವೂ ಸಹ ಕ್ಯಾಮೆರಾದಲ್ಲಿ ರೀಲುಗಳನ್ನು ಹಾಕಿ ಮತ್ತೆ ಅವುಗಳನ್ನ ಡೆವಲಪ್ ಮಾಡಿ, ಬೇಕಾದ ಚಿತ್ರಗಳನ್ನು ಪ್ರಿಂಟ್ ಹಾಕಿಸಿಕೊಂಡು ನೋಡುತ್ತಿದ್ದೆವು.  ಆದರೆ, ಒಮ್ಮೆ ಡಿಜಿಟಲ್ ಕ್ಯಾಮೆರಾ ಪ್ರಪಂಚ ತೆರೆದುಕೊಂಡ ಮೇಲೆ,  ರೀಲುಗಳು ಮತ್ತು ರೀಲು ಹಾಕುವ ಕ್ಯಾಮೆರಾಗಳು ಔಟ್‌ಡೇಟೆಡ್ ಆದವು.  ಜೊತೆಗೆ ಡಿಜಿಟಲ್ ಕ್ಯಾಮೆರಾದ ಮತ್ತೊಂದು ಕೊಡುಗೆಯೆಂದರೆ ಎಲ್ಲರ ಮನೆಯಲ್ಲೂ ಅಗಾಧವಾಗ ಚಿತ್ರ ಸಂಗ್ರಹಗಳು.  ರೀಲು ಹಾಕುತ್ತಿದ್ದಾಗ ನಾವುಗಳು ಎಷ್ಟು ಕ್ಲಿಕ್ ಮಾಡಬೇಕು, ಬಿಡಬೇಕು ಎಂದೆಲ್ಲಾ ಯೋಚಿಸುತ್ತಿದ್ದೆವು... ಆದರೆ, ಡಿಜಿಟಲ್ ಕ್ಯಾಮೆರಾದ ಶಕ್ತಿಯೆಂದರೆ ಎಷ್ಟು ಸಾಧ್ಯವೋ ಅಷ್ಟು ಪಿಕ್ಚರುಗಳನ್ನು ತೆಗೆಯೋದು... ನಂತರ ಅವುಗಳನ್ನು ಸರಿಯಾಗಿ ಆರ್ಗನೈಜ್ ಮಾಡಿ ಇಡದೇ ಇದ್ದರೆ, ಬೇಕಾದ ಚಿತ್ರ ಯಾವಾಗ ಬೇಕೋ ಆಗ ಸಿಗದೇ ತೊಂದರೆಯಾಗೋದು.  ಜೊತೆಗೆ, ಕೆಲವೊಮ್ಮೆ ಕಂಪ್ಯೂಟರ್ ಹಾರ್ಡ್‌ಡ್ರೈವ್ ಅಥವಾ ಸ್ಟೋರೇಜ್ ಏನಾದ್ರೂ ಫೇಲ್ ಆದ್ರೆ, ಹಳೆಯದೆಲ್ಲ ಚಿತ್ರಗಳನ್ನು ಕಳೆದುಕೊಳ್ಳುವುದೂ ಆಗಿ ಹೋಗಿ ಹೋಗಿದೆ.

    ಹೀಗೆ, ಕೋವಿಡ್‌ಮಯವಾದ ಈಗಿನ ದಿನಗಳಲ್ಲಿ ಮಾಡುವುದಕ್ಕೆ ಏನಾದರೂ ಕೆಲಸವೊಂದಿರಬೇಕಲ್ಲ? ಅದಕ್ಕೋಸ್ಕರ ಕಳೆದ ಎರಡು ದಿನಗಳಿಂದ ಹಳೆಯ ಫೋಟೋಗಳನ್ನೆಲ್ಲ ಹರಡಿಕೊಂಡು ಕುಳಿತುಕೊಂಡಿದ್ದೇನೆ.  ಅದನ್ನು ಆರ್ಗನೈಜ್ ಮಾಡುವುದು ಹೇಗೆ ಎಂದು ಗಮನಿಸಿದಾಗ ಫೋಟೋ ಅರ್ಗನೈಜ್ ಮಾಡುವುದರ ಬಗ್ಗೆ ಓದುತ್ತಾ ಹೋದೆ.  ಅದರಲ್ಲೂ ಆರ್ಗನೈಜ್ ಮಾಡುವುದಕ್ಕೆ ಯಾವ ಯಾವ ಸಾಫ್ಟ್‌ವೇರ್‌ಗಳಿವೆ ಎಂದು ಹುಡುಕಿದಾಗ ಈ ಸೈಟು ದೊರೆಯಿತು, 25 photo organizing software & apps ಅದರಲ್ಲೂ ಮತ್ತೆ ಕೆದಕುತ್ತಾ ಹೋದ ಹಾಗೆ ಈ ಕೆಳಗಿನ ಫ್ರೀ ಸಾಫ್ಟ್‌ವೇರ್/ಅಪ್ಲಿಕೇಶನ್‌ಗಳು ಕಣ್ಣಿಗೆ ಬಿದ್ದವು:

    Adobe bridge
    StudioLine
    DigiKam
    Nomacs
    Apple Photos (Mac)
    Mylio
    ಮತ್ತು
    Google Photos

    ಗೂಗಲ್ ಫೋಟೋಸ್ ಫ್ರೀ ಇರಬಹುದು, ಆದರೆ ಈ ದೊಡ್ಡ ಮನುಷ್ಯರ ಸಹವಾಸ ಬೇಡ, ಎಂದು ಸಣ್ಣ ಕಂಪನಿಗಳ ಪ್ರಾಡಕ್ಟ್‍ಗಳನ್ನು ನೋಡುತ್ತಾ ಅವುಗಳ ರಿವ್ಯೂ ಓದುತ್ತಾ ಸಮಯ ಕಳೆದೆ.  ಅಡೋಬಿ ಬ್ರಿಜ್ ಕೂಡಾ ಅಷ್ಟೊಂದು ಇಷ್ಟವಾಗಲಿಲ್ಲ.  ಅಲ್ಲದೇ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಕೆಲಸ ಮಾಡುವ ಅಪ್ಲಿಕೇಶನ್ ಬೇಕಾಗಿದ್ದರಿಂದ, ಇದ್ದವುಗಳಲ್ಲಿ Mylio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದೆ.

    ಅದಕ್ಕೆ ನನ್ನಲ್ಲಿದ್ದ ಸುಮಾರು 8 TB ಸ್ಟೋರೇಜ್ ಇರುವ NAS ಅನ್ನು import ಮಾಡಿ, ಅದರ ಜೊತೆಗೆ ಒಂದೆರಡು ಹಳೆಯ 4 TB USB storageಗಳನ್ನೂ ಸಹ ಕನೆಕ್ಟ್ ಮಾಡಿಟ್ಟೆ.  ನನ್ನ ಘನಂದಾರಿ ಕಂಪ್ಯೂಟರ್ ನಿನ್ನೆಯಿಂದ ತಿರುಗುತ್ತಲೇ ಇದೆ.  ಈಗಾಗಲೇ ಸುಮಾರು 25,000ಕ್ಕೂ ಹೆಚ್ಚು photo/videoಗಳನ್ನು ಅದು ಹುಡುಕಿದ್ದು, ಕಳೆದ 15 ವರ್ಷದ ಹಳವಂಡಗಳೆಲ್ಲ ಹೊರಗೆ ಬರುತ್ತಲಿದೆ!

    ಇನ್ನು ಕೆಲವೇ ದಿನಗಳಲ್ಲಿ ನನ್ನ ಎಲ್ಲ ಫೋಟೋಗಳೂ ಸಹ ಆರ್ಗನೈಜ್ ಆಗಿ, ಎಲ್ಲರ ಮುಖಗಳನ್ನೂ ಗುರುತಿಸಿ, ಎಲ್ಲ ಲೊಕೇಶನ್ನುಗಳನ್ನೂ ಸಹ ಪಟ್ಟಿ ಮಾಡಿಕೊಂಡು, ಅದರಲ್ಲಿದ್ದ ಡ್ಯೂಪ್ಲಿಕೇಟುಗಳನ್ನೆಲ್ಲ ತೆಗೆದುಹಾಕಿದ ಮೇಲೆ, ಪ್ರತಿಯೊಂದು ಇವೆಂಟುಗಳ ಟ್ಯಾಗ್ ಪ್ರಕಾರ ಆರ್ಗನೈಜ್ ಮಾಡಿ ಬಿಟ್ಟರೆ... ನನ್ನ ಕೆಲಸ ಮುಗಿದಂತೆ.  ಆದರೆ, ಈ ಸಂಪೂರ್ಣ "ಎಡಿಟಿಂಗ್" ಕೆಲಸ ಮುಗಿಯಬೇಕಾದರೆ - ನನ್ನ ಕೆಲಸ ಕಾರ್ಯಗಳ ಮಧ್ಯೆ, ಕೇವಲ ಪಾರ್ಟ್‌ಟೈಮ್ ಮಾತ್ರ ಈ ಕೆಲಸಕ್ಕೆ ವ್ಯಯಿಸುತ್ತಿರುವುದರಿಂದ - ಏನಿಲ್ಲವೆಂದರೂ ಒಂದು ತಿಂಗಳಾದರೂ ಬೇಕು!

    ***
    ಹದಿನೈದು ಇಪ್ಪತ್ತು ವರ್ಷಗಳ ಫೋಟೋಗಳನ್ನು ಹರವಿಕೊಂಡು ಒಮ್ಮೆ ನೋಡಿ - ನಿಮ್ಮ ಪ್ರಬುದ್ಧತೆ, ಒಳ-ಹೊರಗುಗಳೆಲ್ಲ ಸ್ವಲ್ಪ ಸ್ವಲ್ಪವೇ ಬದಲಾಯಿಸುವುದನ್ನು ಕಣ್ಣಾರೆ ನೋಡಬಹುದು!

    Tuesday, May 12, 2020

    ಕೊರೋನಾ ಹೇರ್ ಕಟಿಂಗ್ ಪ್ರಹಸನ...

    ಹತ್ತು ವರ್ಷಗಳ ಹಿಂದೆ ಪೋಸ್ಟ್ ಡಾಕ್ ಕೆಲಸಕ್ಕೋಸ್ಕರ ಜರ್ಮನಿಯಲ್ಲಿ ಕೆಲವು ತಿಂಗಳು ಶ್ರಮಿಸಬೇಕಾಗಿದ್ದ ಡಾ. ಪೆರುಮಾಳ್‌ಗೆ ಅಲ್ಲಿನ ಭಾಷಾ ಸಮಸ್ಯೆಗಿಂತ ಹೆಚ್ಚಾಗಿ, ತಲೆ ಕೂದಲು ಕತ್ತರಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿತ್ತಂತೆ!  ಮೊದಲೇ ತಲೆಯಲ್ಲಿ ಕೂದಲು ವಿರಳವಾಗಿದ್ದ ಮನುಷ್ಯ, ಮತ್ತು ತಾನು ಹೇಳಿದ್ದೊಂದು, ಕತ್ತರಿಸುವಾತ/ಕತ್ತರಿಸುವಾಕೆ ಮತ್ತೊಂದನ್ನು ಮಾಡಿ ಬಿಟ್ಟರೆ? ಅದಕ್ಕೆ ತನ್ನಷ್ಟಕ್ಕೆ ತಾನೇ ತನ್ನ ಕೂದಲನ್ನು ಕತ್ತರಿಸುವುದನ್ನು ಕಲಿತುಕೊಂಡಿದ್ದರಂತೆ.  ಮೊದ ಮೊದಲು ಕಷ್ಟವಾಗುತ್ತಿತ್ತಾದರೂ ಕೊನೆಗೆ ಅದೇ ಅಭ್ಯಾಸವಾಗಿ, ಈ ಜರ್ಮನಿಯವರ ದೆಸೆಯಿಂದ ಜೀವನ ಪರ್ಯಂತ ತನ್ನ ಕೂದಲನ್ನು ತಾನೇ ಕತ್ತರಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಸ್ಕಿಲ್ಸ್ ಸಿಕ್ಕಂತಾಗಿತ್ತಂತೆ!

    ಈ ಕೊರೋನಾ ವೈರಸ್ ಹೇರಿದ ವರ್ಕಿಂಗ್ ಫ್ರಮ್ ಹೋಮ್ ಕಟ್ಟಳೆಯನ್ನು ಆಚರಿಸುತ್ತಾ ನಾನೂ ಋಷಿ ಮುನಿಗಳ ಹಾಗೆ ಉದ್ದ ಕೂದಲನ್ನೂ ಹಾಗೇ ಗಡ್ಡವನ್ನೂ ಬಿಟ್ಟು ಎಂಟು ವಾರಗಳಾಗಿತ್ತು.  ಮತ್ತೆ ನಮ್ಮ ಆಫೀಸಿನಲ್ಲಿ ವಿಡಿಯೋ ಕಾನ್‌ಫರೆನ್ಸ್‌ಗಳು ಹೆಚ್ಚಾಗ ತೊಡಗಿ, ನಾನೂ ಕೂದಲು ಕತ್ತರಿಸಿಕೊಳ್ಳೋದು ಅನಿವಾರ್ಯವಾಯಿತು.

    ತಲೆಯ ಮೇಲೆ ಕೂದಲು ಕಡಿಮೆ ಇದ್ದವರದ್ದು ಒಂದು ರೀತಿಯ ಸಂಕಟವಾದರೆ, ನನ್ನಂತಹವರಿಗೆ ಹುಲುಸಾಗಿ ಕೂದಲು ಬೆಳೆಯುವುದು ಇನ್ನೊಂದು ರೀತಿಯ ಸಂಕಟ.  ಸರಿಯಾಗಿ ಮೂರು ಹೆಚ್ಚೆಂದರೆ ನಾಲ್ಕು ವಾರಗಳಲ್ಲಿ ಕೂದಲು ಕತ್ತರಿಸದಿದ್ದರೆ ತಲೆಯ ಮೇಲೆ ಒಂದು ಕಿರೀಟ ಬಂದ ಹಾಗಿರುತ್ತದೆ.  ಹಾಗಿರುವಾಗ, ನಾನೂ ಏಕೆ ಪ್ರಯತ್ನ ಮಾಡಬಾರದು ಎಂದು ಕಳೆದ ಶನಿವಾರ ಮನೆಯಲ್ಲಿದ್ದ ಹತ್ಯಾರಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಬಚ್ಚಲು ಮನೆಯಲ್ಲಿ ಉಪಸ್ಥಿತನಾದೆ.

    ಇಲ್ಲೇ ಯಡವಟ್ಟಾಗಿದ್ದು, ನೋಡಿ!  ನಮ್ಮ ಕೂದಲನ್ನು ನಾವೇ ಕತ್ತರಿಸುವುದು ನಾನು ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ.  ಮೊದಲು ಕಿವಿಯ ಅಕ್ಕ-ಪಕ್ಕ ಒಂದು ಕಡೆಯಿಂದ ಟ್ರಿಮ್ಮರ್ ಹಿಡಿದುಕೊಂಡು ಕತ್ತರಿಸಲು ಶುರುಮಾಡಿದ ನನಗೆ ಸ್ವಲ್ಪ ಸಮಯದ ನಂತರ ಮೆಟ್ಟಿಲು-ಮೆಟ್ಟಿಲಿನ ಹಾಗೆ ಕೂದಲು ಕತ್ತರಿಸಿಕೊಂಡು ಅಲ್ಲಲ್ಲಿ ಸ್ಟೆಪ್ಪುಗಳಾದವು.  ಒಮ್ಮೊಮ್ಮೆ ಸ್ವಲ್ಪ ಒತ್ತಿ ತೆಗೆದಿದ್ದಕ್ಕೋ ಏನೋ ಕೆಲವು ಕಡೆ ಬುರುಡೆ ಕಾಣುವಷ್ಟು ಸಣ್ಣಕೂ ಅದರ ಪಕ್ಕದಲ್ಲಿ ಸ್ವಲ್ಪ ಉದ್ದಕೂ ಬಿಟ್ಟುಕೊಂಡು ಹೋಯಿತು.  ಸೈಡು ಮತ್ತೆ ಮುಂದೇನೋ ಸರಿ, ಆದರೆ ಹಿಂದಿನ ಭಾಗವನ್ನು ಹೇಗೆ ಕತ್ತರಿಸೋದು?  ಅದರಲ್ಲೂ ಮಿರರ್ ಇಮೇಜ್ ನೋಡಿಕೊಂಡು?  ಸ್ವಲ್ಪ ಹೊತ್ತಿನ ನಂತರ ಕೈ ಮತ್ತು ಬೆರಳುಗಳೂ ಕೂಡ ನೋವು ಕೊಡತೊಡಗಿದವು.  ಕೊನೆಗೆ ಅರ್ಧ ಘಂಟೆಯ ಹೊತ್ತಿಗೆಲ್ಲ ಸುಮಾರು ಒಂದು ಪೌಂಡ್ ಅಷ್ಟು ಕೂದಲು ನೆಲದ ಮೇಲೆ ಕರಿಮುಗಿಲು ಕವುಚಿಕೊಂಡ ಹಾಗೆ ಬಿದ್ದುಕೊಂಡಿತ್ತು!

    ಇಷ್ಟು ಹೊತ್ತಿಗಾಗಲೇ ನಮ್ಮ ಮನೆಯವರಿಗೆಲ್ಲ ನಾನು ಹಾಸ್ಯದ ವಸ್ತುವಾಗಿದ್ದೆ.  ತಲೆಯ ಹಿಂದಿನ ಭಾಗವಷ್ಟೇ ಏನೂ ಪೂರ್ಣ ತಲೆಯನ್ನೇ ನನ್ನ ಹನ್ನೊಂದು ವರ್ಷದ ಮಗನಿಗೂ ಮತ್ತು ಹೆಂಡತಿಗೂ ವಹಿಸಿ (ಏನು ಬೇಕಾದರೂ ಮಾಡಿ, ಆದರೆ ಇದಕ್ಕಿಂತ ಕೆಟ್ಟದಾಗಿ ಮಾಡಬೇಡಿ), ಆರ್ತನಾಗಿ ಒಪ್ಪಿಸಿಕೊಂಡ ಮೇಲೆ ನನಗೆ ಸಮಾಧಾನವಾಗುವ ಮಟ್ಟವನ್ನು ತಲುಪಿದೆ.  ಒಟ್ಟು ನಲವತ್ತೈದು ನಿಮಿಷಗಳ ನಂತರ ತಲೆ ಹಗುರವಾಗಿ ಸ್ನಾನ ಮಾಡಿ ಹೊರಬಂದೆ.  ಅದಕ್ಕಿಂತ ಮುಂಚೆ, ಹತ್ತು ನಿಮಿಷ ಇಡೀ ಬಚ್ಚಲುಮನೆಯನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛ ಮಾಡಿದ್ದೂ ಸಹ ತುಸು ಹೆಚ್ಚೇ ಕೆಲಸವೆನಿಸಿತು.

    ಸ್ನಾನ ಮಾಡಿ ಎಂದಿನಂತೆ ತಲೆ ಬಾಚಿ ನೋಡಿದರೆ, ಕೆಲವು ಕಡೆ ಕಡಿಮೆ, ಕೆಲವು ಕಡೆ ಹೆಚ್ಚು ಕೂದಲು ಇದ್ದ ನಾನು ಎಲ್ಲೋ ಇಲಿಗಳು ಭತ್ತದ ಚೀಲವನ್ನು ತಿಂದು ಹಾಕಿ ಧ್ವಂಸಮಾಡಿದ ವಿಷಯವನ್ನು ನೆನಪಿಗೆ ತಂದವು.  ಮೊದಲೆಲ್ಲ ಸ್ಟೆಪ್ಪುಗಳಾಗಿ ಕೆಟ್ಟದಾಗಿ ಕಾಣುತ್ತಿದ್ದ ಬದಿಯ ಕೂದಲು, ಈಗ ಯಾವುದೋ ಪುರಾತನ ದೇವಸ್ಥಾನದ ಅವಶೇಷದಂತೆ ಕಂಡುಬಂದು, ನಗುಬಂದಿತು.  ಅಲ್ಲದೇ, ಒಂದು ಬದಿಯ ಕೋನದಲ್ಲಿ ನೋಡಿದಾಗ ನನ್ನ ತಲೆ, ಮಾಗಿದ ಉತ್ತುತ್ತಿಯಂತೆ ಕಂಡುಬಂತು!

    ಆದರೆ ಕೊರೋನಾ ಮಹಿಮೆ ಇಲ್ಲಿಗೇ ಮುಗಿಯಲಿಲ್ಲ... ಹೇರ್ ಕಟ್ ಕೆಟ್ಟದಾಗಿರಲಿ, ಬಿಡಲಿ... ಇನ್ನೆರಡು ವಾರಗಳಲ್ಲಿ ಮತ್ತೆ ಪ್ರಯತ್ನಿಸುವ ಛಲವಂತೂ ಹುಟ್ಟಿದೆ!  ದಿನೇದಿನೇ ನೋಡುವ ಮನೆಮಂದಿಗೆ ಇದೀಗ ಕೆಟ್ಟ ಹೇರ್ ಕಟ್ಟೂ ಸಹ ಒಗ್ಗಿ ಹೋಗಿ ಅದೇ ಒಂದು ಸ್ಟೈಲ್ ಆಗಿದೆ!  ಇನ್ನೆರಡು ವಾರಗಳಲ್ಲಿ ಒಂದಿಷ್ಟು ಒಳ್ಳೆಯ ಟ್ರಿಮ್ಮರ್ ಮೇಲೆ ಹಣ ಹೂಡಿದರೆ, ಜೀವಮಾನ ಪರ್ಯಂತ ಹೊರಗೆ ಕೂದಲು ಕತ್ತರಿಸುವ ಪ್ರಸಂಗ ಬರದೆಯೂ ಇರಬಹುದು! ಯಾರು ಬಲ್ಲರು?

    Monday, May 11, 2020

    ಕೊರೋನಾ ಕೃಪೆ: ಸಾಲುಗಟ್ಟಿದ To-do list

    ನಿಮಗೂ ಹೀಗೆ ಅನಿಸಿರಬಹುದು... ಈ ಕೊರೋನಾ ವೈರಸ್ಸಿನ ಉಪಟಳ ಬಹಳ ಹೆಚ್ಚಾಗಿದೆ, ಅದರ ಉಪದ್ರವಕ್ಕಿಂತ ಉಪಟಳವೇ ಹೆಚ್ಚು!

    ಕಳೆದ ಎಂಟು ವಾರಗಳಿಂದ ಮನೆಯಲ್ಲೇ ಕುಳಿತ ನಮಗೆ ನಿಧಾನವಾಗಿ ನಮ್ಮೆಲ್ಲ ಚಟುವಟಿಕೆಗಳು online ಮಾಧ್ಯಮದಲ್ಲಿ ಹೊರಹೊಮ್ಮತೊಡಗಿದವು.  ಆಫೀಸಿನ ಕಾನ್‌ಫರೆನ್ಸ್‌ಗೆಂದು ಅಣಿವಾಗಿದ್ದ ಟೂಲ್‍ಗಳೆಲ್ಲ ಏಕ್‌ದಂ ಮನರಂಜನಾ ಮಾಧ್ಯಮಗಳಾಗಿ ಬದಲಾದವು.  ಮಾಹಿತಿ, ಮನರಂಜನೆ, ಕಮ್ಯೂನಿಟಿ ಚಟುವಟಿಕೆ, ಆಟ-ಪಾಠ, ದೇಣಿಗೆ, ಚಾರಿಟಿ... ಮೊದಲಾದ ವಿಷಯಗಳೆಲ್ಲ ಈ ಆನ್‌ಲೈನ್ ಮಾಧ್ಯಮಗಳಲ್ಲೇ ಆಗತೊಡಗಿ ಒಂದು ತಲೆ ಚಿಟ್ಟು ಹಿಡಿದಂತಾಗಿದೆ.

    ವಾರದ ಉದ್ದಕ್ಕೂ ಆಫೀಸಿನ ಕಾಲ್‌ಗಳು.  ವಾರಾಂತ್ಯ ಹತ್ತಿರ ಬರುತ್ತಿದ್ದಂತೆ ಕಮ್ಯುನಿಟಿಗೆ ಸಂಬಂಧಿಸಿದ Zoom, WebEx, Group ಮೀಟಿಂಗ್‍ಗಳು.  ಇವೆಲ್ಲದರ ಮಧ್ಯೆ ನೋಡ(ಲೇ) ಬೇಕಾದ ಅದೆಷ್ಟೋ ಸಿನಿಮಾಗಳು, ಓದಬೇಕಾದ ಅದೆಷ್ಟೋ ಪುಸ್ತಕಗಳು, ತೆಗೆದುಕೊಳ್ಳಬಹುದಾದ ಅದೆಷ್ಟೋ ಟ್ರೈನಿಂಗ್‌ಗಳು, ಮಾತನಾಡಿಸಬೇಕಾದ ಅದೆಷ್ಟೋ ನೆಂಟರು-ಇಷ್ಟರುಗಳು, ಕೇಳಬೇಕಾದ ಹಾಡುಗಳು, ಪಾಡ್‌ಕ್ಯಾಸ್ಟ್‌ಗಳು, ಸಂಶೋಧಿಸ ಬೇಕಾದ ವಿಷಯಗಳು, ಕ್ಲೀನ್ ಮಾಡಬಹುದಾದ ಕ್ಲಾಸೆಟ್ಟುಗಳು, ಹೇಳಬಹುದಾದ ಅದೆಷ್ಟೋ ಹಾಡುಗಳು, ಕೇಳಬೇಕಾದ ಪ್ರವಚನಗಳು... ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ.  ಈ ಪಟ್ಟಿಗೆ ತಿಲಕ ಪ್ರಾಯವಾಗಿ ಮಾಡಬಹುದಾದ ಮೆಡಿಟೇಷನ್‍ ಅನ್ನು ಸೇರಿಸಿ ಬಿಟ್ಟರೆ, ದಿನದ 24 ಘಂಟೆಗಳು ನಿಜವಾಗಿಯೂ ಸಾಲವು ಎಂದೆನಿಸೋದಿಲ್ಲವೇ?

    ಹೀಗೆ ದೊಡ್ಡದಾಗುವ ಹಳವಂಡಗಳ ಪಟ್ಟಿ ನನಗೊಬ್ಬನಿಗೆ ಮಾತ್ರ ಸೀಮಿತವಲ್ಲ ಎಂದು ಖಂಡಿತವಾಗಿ ಹೇಳಬಹುದು.  ಮೊದಲೇ "ಓಡುವುದೇ ಗುರಿ"ಯಾಗಿದ್ದ ನಮಗೆ, ಇದು ಮನೆಯಲ್ಲೇ ಕುಳಿತು ಸದಾ ಓಡುತ್ತಲೇ ಇರಿ ಎಂದು ಒಂದು ರೀತಿಯಲ್ಲಿ ಟ್ರೆಡ್‌ಮಿಲ್ ಹತ್ತಿಸಿ ಕುಳಿತಂತಿದೆ.

    ಏನೇ ಹೇಳಲಿ, ಈಗಿನ ತಂತ್ರಜ್ಞಾನದ ಪ್ರಕಾರ ಜನರು 4K videoಗೆ ಹೆಚ್ಚು ಆದ್ಯತೆ ಕೊಟ್ಟರೇ ವಿನಾ, ಈ ಗ್ರೂಪ್‌ ಮೀಟಿಂಗುಗಳ ಆಡಿಯೋ ಕ್ವಾಲಿಟಿ ಸ್ವಲ್ಪವೂ ಚೆನ್ನಾಗಿರೋದಿಲ್ಲ... ಅದರಲ್ಲೂ ನಮ್ಮನೆಯ ಸೊರಗಿದ ಇಂಟರ್‌ನೆಟ್ ವೇಗದ ಮುಂದೆ ಗಂಟಲು ಕೊಸರಿಕೊಂಡು ಮಾನೋ ಟ್ಯೂನ್‌ನಲ್ಲಿ ಹಾಡುಗಳು ಕೇಳಿಸುವಂತೆ ಅನುಭವವಾಗುತ್ತವೆ.

    ನಿಮ್ಮ (catch up ಮಾಡುತ್ತಿರುವ) ಹಳವಂಡಗಳ ಪಟ್ಟಿ ಉದ್ದವಿದೆಯೇ? ಅದನ್ನು ಇಲ್ಲಿ ಹಂಚಿಕೊಳ್ಳಬಹುದಲ್ಲ?

    Friday, May 08, 2020

    ಕೊರೋನಾಗೂ ಮತ್ತು ಊಟ-ತಿಂಡಿಗೂ ಎತ್ತಣ ಸಂಬಂಧ?

    ಊಟ-ತಿಂಡಿಯ ವಿಷಯವನ್ನು ಎಂದೂ ಲಘುವಾಗಿ ತೆಗೆದುಕೊಳ್ಳಲೇ ಬಾರದು ಎನ್ನುವುದು ಈ ಹೊತ್ತಿನ ತತ್ವ.  ಈ ಕೋವಿಡ್ ದೆಸೆಯಿಂದ ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಹೊತ್ತು ಮನೆಯ ಪಾಕವೇ ಗತಿಯಾದ್ದರಿಂದ ಎಲ್ಲರಂತೆ ನಾನೂ ಸಹ ಕುಕಿಂಗ್ ಶೋ, ರೆಸಿಪಿಗಳನ್ನು ಹುಡುಕಿಕೊಂಡು ಹೋಗಿರುವುದು ಇತ್ತೀಚಿನ ಬೆಳವಣೆಗೆಗಳಲ್ಲೊಂದು!  ಮೊದಲೆಲ್ಲವಾದರೆ, ಮಧ್ಯಾಹ್ನದ ಊಟಕ್ಕೆ ಸಾಕಾಗುವಷ್ಟು ಬೆಳಿಗ್ಗೆಯೇ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಿ, ಆಫೀಸಿನ ಕೆಲಸದ ಮಧ್ಯೆ ಮೈಕ್ರೋವೇವ್ ಅವನ್‌ನಲ್ಲಿ ಬಿಸಿಮಾಡಿಕೊಂಡು ತಿಂದ ಹಾಗೆ ಶಾಸ್ತ್ರ ಮಾಡುವುದನ್ನು ಊಟವೆಂದು ಕರೆಯುತ್ತಿದ್ದೆವು.  ಕೊರೋನಾ ವೈರಸ್ಸಿನ ಸಹಾಯದಿಂದಾಗಿ ನಾವು ಈಗ ಮನೆಯಲ್ಲೇ ಬಿಸಿಬಿಸಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೀತಿಯಲ್ಲಿ "ಸಾತ್ವಿಕ"ವಾಗಿ ಆಹಾರವನ್ನು ಸವಿದು ಸೇವಿಸುತ್ತಿದ್ದೇವೆಂದರೆ ಅತಿಶಯೋಕ್ತಿಯೇನಲ್ಲ!

    ***
    ಅಮೇರಿಕಕ್ಕೆ ಬಂದು ಎರಡು ದಶಕದ ಮೇಲಾದರೂ ಇವತ್ತಿಗೂ ನಾನು ಭಾರತದ ಅನುಕೂಲಗಳ ಪೈಕಿ ಅತ್ಯಂತ ಮಿಸ್ ಮಾಡಿಕೊಳ್ಳುವುದೆಂದರೆ ಹೊಟೆಲ್/ಖಾನಾವಳಿಯಲ್ಲಿ ದೊರೆಯುವ ಸಾಂಬಾರು, ಪಲ್ಯಗಳು, ಸರಿ ರಾತ್ರಿ ಎರಡು-ಮೂರು ಘಂಟೆಯವರೆಗೂ ಬಸ್‌ಸ್ಟ್ಯಾಂಡಿನ ಬದಿಯಲ್ಲಿ ಇಟ್ಟುಕೊಂಡ ಚಾ ಅಂಗಡಿಗಳು, ಯಾವತ್ತಿಗೂ ಎಲ್ಲೆಲ್ಲಿಯೂ ಸಿಗುವ ಇಡ್ಲಿ-ಚಟ್ಣಿಗಳು!  ನಾನು ವಿದ್ಯಾರ್ಥಿ ದೆಸೆಯಿಂದಲೇ (ಸುಮಾರು ಹದಿನೈದು ವರ್ಷ ವಯಸ್ಸಿನವಾಗಿದ್ದಾಗಿನಿಂದ) ಮನೆಯಿಂದ ಹೊರಗೆ ಉಳಿದವನಾಗಿದ್ದರಿಂದ ಈ ಹೊಟೇಲು-ಖಾನಾವಳಿಗಳಲ್ಲಿ ಎರಡು ರೂಪಾಯಿಗೆ ಕೊಡುತ್ತಿದ್ದ ಸಾಂಬಾರು-ಪಲ್ಯಗಳು ಎಷ್ಟೋ ಸಾರಿ ದಿನದ ಹಸಿವನ್ನ ತಣಿಸಿವೆ ಎನ್ನಬಹುದು.  ಅದೂ ಪರೀಕ್ಷೆ ಹತ್ತಿರ ಬರುತ್ತಿದ್ದ ಸಂದರ್ಭಗಳಲ್ಲಿ ನನ್ನ ರೂಮಿನಲ್ಲಿ ಒಂದಿಷ್ಟು ಅನ್ನ ಮಾಡಿಕೊಂಡು ಹತ್ತಿರದ ಹೊಟೇಲಿನಿಂದ ಸಾರು ತಂದು ಊಟ ಮಾಡಿದ ದಿನಗಳು ಎಷ್ಟೋ ಇವೆ. ಅಲ್ಲದೇ ರಾತ್ರಿಯ ಹೊತ್ತು ಓದಿ ಬೋರಾದರೆ ಸ್ನೇಹಿತರ ಜೊತೆಗೆ ಎಷ್ಟು ಹೊತ್ತಿಗೆ ಬೇಕಾದರೂ ಟೀ ಕುಡಿಯಲು ಕೈಗಾಡಿಗಳ ಬಳಿಗೆ ಹೋಗಬಹುದಿತ್ತು.

    ಅಮೇರಿಕದಲ್ಲಿ ಊಬರ್ ಈಟ್ಸ್ ಇರಲಿ ಮತ್ತೊಂದು ಇರಲಿ, ಆಗ ಅಲ್ಲಿ ಸಿಗುತ್ತಿದ್ದ ಅನುಕೂಲಗಳನ್ನು ಮಾತ್ರ ಸೃಷ್ಟಿಸಲಾರವು.  ಒಂದು ರೀತಿಯಲ್ಲಿ ಇವತ್ತಿಗೂ ಭಾರತದಲ್ಲಿ ಈ ರೀತಿಯ ಸರ್ವಿಸುಗಳು ಇರಬಹುದೇನೋ.  ಆಗ ಜೇಬಿನಲ್ಲೆಲ್ಲಾ ಹತ್ತು ರೂಪಾಯಿ ಇದ್ದರೆ ಅದು ಬಹಳ "ದೂರ" ಬರುತ್ತಿತ್ತು... ಈಗಂತೂ ಹಣದುಬ್ಬರ ಹಣದ ಬೆಲೆಯನ್ನೇ ತಿಂದು ಹಾಕಿತಂತಾಗಿ, ನೂರು ರೂಪಾಯಿ ನೋಟಿನಲ್ಲಿ ಗಾಂಧೀ ಮುಖವೂ ಬಾಡಿದಂತಿದೆ.

    ***
    ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಎಷ್ಟು ಕೊಂಡಾಡಿದರೂ ಸಾಲದು.  ಈ ಸಾಲನ್ನು ಬರೆಯಲು ನನಗೆ ಯಾವ ಅಥಾರಿಟಿಯೂ ಇಲ್ಲ, ಹಾಗೆ ಇರಬೇಕೆಂದೇನೂ ಇಲ್ಲ... ಶತಮಾನಗಳಿಂದ ನಮ್ಮ ಆಹಾರ ಪದ್ದತಿ ಬಹಳಷ್ಟು ಬೆಳೆದು ಬಂದಿದೆ.  ಈ ಕೊರೋನಾ ವೈರಸ್ ಸೃಷ್ಟಿಸಿದ ಒಂದು ತಾತ್ಕಾಲಿಕ ನಿರ್ವಾತವನ್ನು ಮುಚ್ಚಿಕೊಳ್ಳಲು ನಾವೆಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಂತೆ, ಇತ್ತೀಚೆಗೆ ನಾನು ನಡೆಸಿದ "ಸಾತ್ವಿಕ" ಆಹಾರದ ಬಗ್ಗೆ "ಸಂಶೋಧನೆ"ಯೂ ಒಂದು... ಅದರ ಬಗ್ಗೆ ಇನ್ನೊಮ್ಮೆ ಬರೆದರೆ ಆಗದೇ?!

    ನಿಮಗೆ ಹೊತ್ತು ಹೊತ್ತಿಗೆ ಊಟ-ತಿಂಡಿಯ ಅಗತ್ಯವೇನು ಅದರ ಮಹತ್ವವೇನು ಎಂದು ತಿಳಿಯಲು ಹೆಚ್ಚಿನ ಅಧ್ಯಯನವನ್ನೇನೂ ಮಾಡಬೇಕಾಗಿಲ್ಲ... ಇಬ್ಬರು ಮಿಡ್ಲ್‌ಸ್ಕೂಲ್ ಮಕ್ಕಳನ್ನು ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಊಟಕೊಟ್ಟು ಅವರನ್ನು ಸಾಕಿ ನೋಡಿ... ನಿಮಗೆ ಗೊತ್ತಿರದಂತೆ ನೀವೊಬ್ಬ ದೊಡ್ಡ ಎಕ್ಸ್‌ಪರ್ಟ್ ಆಗಿರುತ್ತೀರಿ!

    Thursday, May 07, 2020

    ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

    ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
    ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

    ***
    ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

    ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

    ***

    ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

    ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!