Monday, May 18, 2020

ಹುಲು ಮಾನವರು ಹೊರಗಡೆ ಬರುತ್ತಿದ್ದಾರೆ, ಹುಷಾರ್!


... ಹೀಗನಿಸಿದ್ದು, ನಮ್ಮ ಹಿತ್ತಲಿನ ಹಿಂಬಾಗದಲ್ಲಿ ಮೇಯುತ್ತಿದ್ದ ಎರಡು ಜಿಂಕೆಗಳು ಹಟಾತ್ತನೆ ಹೊರಗೆ ಬಂದ ನನ್ನನ್ನು ನೋಡಿ ಓಡಿ ಹೋಗಿದ್ದನ್ನು ಕಂಡು.  ಸುಮಾರು ಎಂಟು ವಾರಗಳ ಕಾಲ ನಾವೆಲ್ಲ ನಮ್ಮ ಚಲನವಲನಗಳನ್ನು ಮನೆಯ ಒಳಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೆವು.  ಈ ಎರಡು ತಿಂಗಳುಗಳಲ್ಲಿ ಹೆಚ್ಚೆಂದರೆ ಇಪ್ಪತ್ತು ಮೈಲುಗಳ ದೂರವನ್ನು ಕಾರಿನಲ್ಲಿ ಕ್ರಮಿಸಿರಬಹುದು, ಅದೂ ಸಹ ಮನೆಯ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಬರುವುದಕ್ಕೆ ಮಾತ್ರ.  ಎರಡು ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದ ಪ್ರಾಣಿ-ಪಕ್ಷಿಗಳು ಮತ್ತೆ ಈ ಮಾನವ ಪ್ರಾಣಿಯ ಸಹವಾಸಕ್ಕೆ ಮರು-ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆಯೋ, ಏನೋ?

ಕೊರೋನಾ ವೈರಸ್ ಹಲವಾರು ತೊಂದರೆಗಳನ್ನು ಮನುಕುಲಕ್ಕೆ ಬಳುವಳಿಯಾಗಿ ಕೊಟ್ಟರೂ ಸಹ, ಅದು ನಿಸರ್ಗಕ್ಕೆ ಒಳ್ಳೆಯದನ್ನೇ ಮಾಡಿದೆ. ಗಾಳಿಯಲ್ಲಿ  ಪೊಲ್ಯೂಷನ್ ಲೆವೆಲ್‌ಗಳು ಕಡಿಮೆಯಾಗಿರುವುದು, ಸಮುದ್ರದಲ್ಲಿ ಮತ್ಸ್ಯ ಸಂತತಿ ಹೆಚ್ಚಾಗಿರುವುದು, ಅಲ್ಲಲ್ಲಿ ಎಸೆಯುವ ಕಸ-ಪ್ಲಾಸ್ಟಿಕ್‌ಗಳ ಕಡಿಮೆಯಾಗಿರುವುದು, ವಾಹನಗಳ ಸಂಚಾರವಿಲ್ಲದೆ ಇಂಧನ ಉಳಿತಾಯವಾಗಿರುವುದು... ಹೀಗೆ ಅನೇಕಾನೇಕ ಅನುಕೂಲಗಳಾಗಿವೆ.

ಆದರೆ, ಈ ಪ್ರಶ್ನೆ ಆಗಾಗ್ಗೆ ಎದ್ದು ನಿಲ್ಲುತ್ತದೆ - ನಮ್ಮ ನಡವಳಿಕೆಯಲ್ಲಿ ಇನ್ನು ಮುಂದಾದರೂ ಬದಲಾವಣೆಗಳನ್ನು ಕಾಣುತ್ತೇವೆಯೋ ಅಥವಾ ಎರಡು ತಿಂಗಳ ನಂತರ ಏನೂ ಆಗಿರದವರಂತೆ ಮೈ ಕೊಡವಿಕೊಂಡು ಮತ್ತೆ ನಮ್ಮ ನಮ್ಮ ಜೀವನಕ್ರಮದಲ್ಲಿ ತೊಡಗಿಕೊಳ್ಳುತ್ತೇವೆಯೋ? ಈ ಕೊರೋನಾ ವೈರಸ್ ಸುದ್ದಿ ಹೆಚ್ಚು ಮಾಡಿತೇ ವಿನಾ, ಹಿಂದಿನ ಮಹಾಮಾರಿಗಳಿಗೆ ಹೋಲಿಸಿದರೆ ಇದರ ಪರಿಣಾಮ ಕಡಿಮೆ ಎಂದೇ ಹೇಳಬೇಕು.  ಹದಿನಾರು ವರ್ಷಗಳ ಹಿಂದೆ ಸುನಾಮಿ ಬಂದಾಗ ಇಷ್ಟೇ ಜನ ಸತ್ತು ಹೋಗಿದ್ದ ನೆನಪು... ಆದರೆ, ಆ ನೆನಪು ನಮ್ಮ ಅವಶೇಷಗಳ ಅಡಿಯಲ್ಲಿ ಅದೆಂದೋ ಸಿಕ್ಕಿ ನಲುಗಿ ಹೋಗಿದೆ. ಅಂತೆಯೇ, ಈ ಕೊರೋನಾ ವೈರಸ್ಸಿನ ಸಾಹಸವೂ ಕೂಡ.   ಕೇವಲ ಮೂರು ಲಕ್ಷ ಜನರು ವಿಶ್ವದಾದ್ಯಂತ ಸತ್ತು ಹೋದರಲ್ಲ ಎಂದು ಸಾಡಿಸ್ಟ್ ಆಗಿ ಈ ಮಾತನ್ನು ಹೇಳುತ್ತಿಲ್ಲ... ಸಾವು ಯಾವತ್ತಿದ್ದರೂ ನೋವಿನ ವಿಚಾರವೇ, ಆದರೆ ನಾವು ಈ ಮಹಾಮಾರಿಯಿಂದೇನೂ ಒಳ್ಳೆಯದನ್ನು ಕಲಿಯದೇ ಇರುವಂತಾದರೆ, ಅದು ನಮ್ಮ ದುರ್ದೈವ ಅಷ್ಟೇ.



ಈ ಕೋವಿಡ್‌ನಿಂದಾಗಿ ವಾಹನ ಅಪಘಾತಗಳು ಕಡಿಮೆಯಾಗಿವೆ.  ತುರ್ತಾಗಿ ಬೇಕಾಗಿಲ್ಲದ ಶಸ್ತ್ರ ಚಿಕಿತ್ಸೆಗಳು ಮುಂದೂಡಲ್ಪಟ್ಟಿವೆ.  ಅನಗತ್ಯವಾಗಿ ಆಸ್ಪತ್ರೆಗಳನ್ನು ಸುತ್ತುವವರ ಸಂಖ್ಯೆ ಕಡಿಮೆ ಆಗಿದೆ.  ಅಂಥವರನ್ನು ಸುಲಿಯುವ ಬಿಸಿನೆಸ್ ಮೈಂಡೆಡ್ ನರ್ಸಿಂಗ್ ಹೋಮ್‌ಗಳು ಬಾಗಿಲು ಹಾಕಿ ಸುಮ್ಮನಿದ್ದವು.  ಎಲ್ಲದಕ್ಕಿಂತ ಮುಖ್ಯ ಅನಗತ್ಯ ಖರ್ಚುಗಳು ಕಡಿಮೆ ಆಗಿದ್ದವು.  ಹೊರಗಡೆಯ ಚಟುವಟಿಕೆಳೆಲ್ಲ ಕಡಿಮೆಯಾದ್ದರಿಂದ ಜೇಬಿಗೂ ಒಂದಿಷ್ಟು ಹೊರೆ ಕಡಿಮೆ ಎನಿಸಿತ್ತು.

ಇದೀಗ ತಾನೆ ಹೊರಬರುತ್ತಿರುವ ನಮ್ಮನ್ನೆಲ್ಲ ನೋಡಿ - ಹುಲುಮಾನವರು ಹೊರಗೆ ಬರುತ್ತಿದ್ದಾರೆ, ಹುಷಾರ್! ಎಂದು ನಮ್ಮ ಸುತ್ತಲಿನ ಎಲ್ಲ ಜೀವಿಗಳೂ ಸಹ ಒಂದು ಕ್ಷಣ ದಂಗಾಗಿರಬಹುದಲ್ಲವೇ?

No comments: