Monday, June 01, 2020

ಕೆಲಸಕ್ಕೆ ಜನರಿಲ್ಲ!



ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತುಲನೆ ಮಾಡಿ ನೋಡಿದಾಗ, ಹಿಂದಿನ ತಲೆಮಾರಿನವರು ಕಷ್ಟ ಜೀವಿಗಳು ಅನ್ನಿಸೋದು ಸಹಜ.  ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದ ಹಾಗೆ ನಾಗರೀಕತೆ, ನಗರೀಕರಣ, ಜನರ ವಲಸೆ ಮೊದಲಾದವು ಬದಲಾಗುತ್ತಿರುತ್ತವೆ.  ನಮ್ಮ ಪೂರ್ವಜರು ತಮ್ಮ ಇಡೀ ಜೀವಮಾನದಲ್ಲಿ ಪ್ರಯಾಣಿಸಿದ ದೂರವನ್ನು ನಾವು ಒಂದು ತಿಂಗಳಲ್ಲೇ ಪ್ರಯಾಣಿಸಿ ಅವರನ್ನು ಮೀರಿಸಬಲ್ಲೆವು.  ಆದರೆ,  ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹೆಚ್ಚಾಗುತ್ತಿರುವ ಅಂತರವನ್ನು ಗ್ರಹಿಸಲು ಈ ಕೆಳಗಿನ ಎರಡು ಸೂಕ್ಷ್ಮಗಳನ್ನು ಗಮನಿಸಿ:


1. ಹಿಂದೆಲ್ಲ ಕೆಲಸಗಾರರು ಸಿಗುತ್ತಿದ್ದರು, ಇಂದು ಕೆಲಸಗಾರರು ಸಿಗುವುದಿಲ್ಲ.  ಸಿಕ್ಕರೂ ಸಹ "ನಿಯತ್ತಿ"ನಿಂದ ಮೈ ಬಗ್ಗಿಸಿ ದುಡಿಯುವುದಿಲ್ಲ.  ಕಡಿಮೆ ಕೆಲಸಕ್ಕೆ ಹೆಚ್ಚು ಬೆಲೆ ಕೇಳುತ್ತಾರೆ.

2.  ಎಲ್ಲರೂ ಓದಿದವರಾಗಿ ಮೇಲ್ಮಟ್ಟದ ಕೆಲಸಗಳನ್ನೇ ಯಾಚಿಸುವುದಾದರೆ, ಉಳಿದೆಲ್ಲ ಕೆಲಸಗಳನ್ನು ಯಾರು ಮಾಡುವವರು? ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ರಸ್ತೆ ಗುಡಿಸಲು, ನೆಲ ಒರೆಸಲು, ಬಟ್ಟೆ ಒಗೆಯಲು, ಮನೆ ಕಟ್ಟಲು, ಮರಳು ಹೊರಲು, ಕಟ್ಟಿಗೆ ಒಡೆಯಲು, ಸುಣ್ಣ-ಬಣ್ಣ ಹಚ್ಚಲು, ತೆಂಗಿನಕಾಯಿ ಕೊಯ್ಯಲು, ಮನೆ ಕೆಲಸ ಮಾಡಲು... ಕೆಲಸಕ್ಕೆ ಯಾರು ಸಿಗುತ್ತಾರೆ?

***



ಕಳೆದ ಇಪ್ಪತ್ತು ವರ್ಷಗಳಲ್ಲಿ ಯು.ಎಸ್.ಎ. ಒಂದು ದೇಶದಲ್ಲಿಯೇ (ಒಂದು ಅಧ್ಯಯನದ ಪ್ರಕಾರ) ಸುಮಾರು 50 ಲಕ್ಷ ಮ್ಯಾನ್ಯುಫ್ಯಾಕ್ಚರಿಂಗ್ ಕೆಲಸಗಳು ಕಾಣೆಯಾದವು.  60 ರ ದಶಕದಲ್ಲಿ ಸುಮಾರು ನೂರಕ್ಕೆ 25% ಜನರು ಮ್ಯಾನ್ಯುಫ್ಯಾಕ್ಚರಿಂಗ್‌ನಲ್ಲಿ ತೊಡಗಿಕೊಂಡಿದ್ದರೆ, ಇಂದು ಅದರ ಪ್ರಮಾಣ ಸುಮಾರು 5% ಮಟ್ಟಿಗೆ ಇಳಿದಿದೆ.  ಒಂದು ಕಾಲದಲ್ಲಿ Ford ಅಂಥ ಕಂಪನಿಗಳು ತಮ್ಮ supply chainನಲ್ಲಿ ಬರುವ ಎಲ್ಲ ವಿಧವಾದ ಪರಿಕರ/ವಸ್ತುಗಳನ್ನು ತಮ್ಮಷ್ಟಕ್ಕೆ ತಾವೇ ತಯಾರಿಸುತ್ತಿದ್ದರು.  ಆದರೆ, ಈಗ ಅವರ ಮುಖ್ಯವಾದ components (such as engine parts) ಸಹ ಬೇರೆ ಕಡೆಯಿಂದ ಆಮದಾಗುವ ಪರಿಸ್ಥಿತಿ ಇದೆ.

ಮ್ಯಾನ್ಯುಫ್ಯಾಕ್ಚರಿಂಗ್ ವಲಯದಲ್ಲಿರುವ ಕೆಲಸಗಾರರು ಅಮೇರಿಕದಲ್ಲಿ ಒಂದು ಘಂಟೆಗೆ 20 ಡಾಲರ್‌ ಅಷ್ಟುಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ.  ಇದು, ಇಲ್ಲಿನ ಕನಿಷ್ಠ ವೇತನದ ಮೂರು ಪಟ್ಟು ಹೆಚ್ಚು ಎಂದುಕೊಳ್ಳಬಹುದು.  ಅದೇ ಗುಣಮಟ್ಟದ ವಸ್ತುಗಳು, ಹೊರದೇಶದಿಂದ ಕಡಿಮೆ ಬೆಲೆಗೆ ಸಿಗುವಂತೆ (ವಿಶೇಷವಾಗಿ ಚೀನಾದಿಂದ) ಆಮದಾಗುವ ಪರಿಸ್ಥಿತಿ ಇರುವುದಾದರೆ ಇಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಹೇಗೆ ಉಳಿಯುತ್ತದೆ? ಹೇಗೆ ಬೆಳೆಯುತ್ತದೆ?

***

ಸಾಮಾನ್ಯ ಜನರ ಅನುಕೂಲ: ತೊಂಭತ್ತರ ದಶಕದ ಕೊನೆಯಲ್ಲಿ ಭಾರತದ ಬ್ಯಾಂಕುಗಳಿಗೆ ನಿಧಾನವಾಗಿ ಕಂಪ್ಯೂಟರುಗಳು ನುಸುಳತೊಡಗಿದಾಗ ನಮ್ಮನಮ್ಮಲ್ಲಿ ವಾದ-ವಿವರಣೆಗಳು ನಡೆಯುತ್ತಿದ್ದವು.  ಒಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ಕೆಲಸವನ್ನು ನುಂಗಿ ಹಾಕುತ್ತವೆ ಎಂದೂ, ಇನ್ನೊಂದಿಷ್ಟು ಜನ ಈ ಕಂಪ್ಯೂಟರುಗಳು ಜನರ ದಕ್ಷತೆಯನ್ನೂ (efficiency), ಜನರ ಕೆಲಸದ ನಿಖರತೆಯನ್ನೂ (accuracy) ಹೆಚ್ಚಿಸುತ್ತವೆ ಎಂದೂ ವಾದವನ್ನು ಮಂಡಿಸುತ್ತಿದ್ದೆವು.  ಆಗಿನ ಕಾಲವೆಲ್ಲ ದಪ್ಪನಾದ ಲೆಡ್ಜರುಗಳ ಕಾಲ, ಎಲ್ಲಿ ನೋಡಿದರೂ ಅಲ್ಲಿ ಪೇಪರುಗಳದ್ದೇ ದರಬಾರು, ಅವುಗಳದ್ದೇ ಕಾರುಬಾರು.

ನಂತರ ಕಂಪ್ಯೂಟರುಗಳು ನಿಧಾನವಾಗಿ ಎಲ್ಲ ಕಡೆಗೆ ಹರಡಿಕೊಂಡ ಮೇಲೆ ನಾವೆಲ್ಲರೂ ಅದರ ಅನುಕೂಲವನ್ನು ಪಡೆದಿದ್ದೇವೆ.  ಆದರೆ, ಕಂಪ್ಯೂಟರುಗಳು ಬಂದ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಡಿಮೆ ಏನೂ ಆಗಿಲ್ಲ.  ಬ್ಯಾಂಕುಗಳು ಬೆಳೆದಂತೆ, ಬ್ರ್ಯಾಂಚುಗಳು ಹೆಚ್ಚಾದವು, ಎಟಿಎಮ್ ಮಿಷೀನುಗಳು ಎಲ್ಲ ಕಡೆ ತಲೆ ಎತ್ತಿದವು.  ಮುಂದೆ ಕ್ರೆಡಿಟ್ ಕಾರ್ಡ್, ನಂತರದಲ್ಲಿ ಆನ್‌ಲೈನ್ ಪೇಮೆಂಟ್, ಪೇಟಿಎಮ್ ನಂತಹ ಸೇವೆಗಳು ಬಂದು ಹಣ ವಿಲೇವಾರಿ ತ್ವರಿತವಾಯಿತು.  ಹಣದುಬ್ಬರ (inflation) ಹೆಚ್ಚಾದಂತೆ ಪ್ಯಾಂಟ್ ಜೇಬಿನಲ್ಲಿ ತೆಗೆದುಕೊಂಡು ಹೋಗುವ ಹಣ ಯಾವ ಕೆಲಸಕ್ಕೂ ಸಾಕಾಗದೇ ರಾಶಿ ರಾಶಿ ಹಣವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಅಲ್ಲಿಂದಿಲ್ಲಿಗೆ ವಹಿವಾಟು ನಡೆಸುವಂತಾಯಿತು.  ಈ ಅನುಕೂಲಗಳೆಲ್ಲ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಅವಿಷ್ಕಾರಗಳಿಂದಲೇ ಸಾಧ್ಯವಾದದ್ದು.

ಸಿರಿವಂತರ ನೋವು: ಯಾವುದಾದರೂ ಹಳೆಯ ಕನ್ನಡ ಸಿನಿಮಾಗಳನ್ನೋ ಅಥವಾ ಫೋಟೋಗಳನ್ನೋ ನೀವು ನೋಡಿದರೆ ಒಂದಂತೂ ನಿಮಗೆ ಗ್ಯಾರಂಟಿಯಾಗುತ್ತದೆ.  ನಾವು ನೋಡಿದ ಎಂಭತ್ತರ ದಶಕದಲ್ಲಿ ಟ್ರಾಫಿಕ್ ಜಾಮ್ ಅನ್ನೋ ಪರಿಸ್ಥಿತಿ ಇರುತ್ತಲೇ ಇರಲಿಲ್ಲ.  ಊರಿನಲ್ಲಿ ಕೆಲವೇ ಕೆಲವು ಮನೆಗಳಿಗೆ ಫೋನ್ ಕನೆಕ್ಷನ್ ಇರುತ್ತಿತ್ತು.  ದೂರದ ಊರುಗಳಿಂದ ಟ್ರಂಕ್ ಕಾಲ್ ಮಾಡಿ ಕರೆ ಮಾಡಬೇಕಿತ್ತು.  ಅದರ ಜೊತೆಗೆ ಊರಿನಲ್ಲಿ ನಿಗದಿತ ಸಮಯಕ್ಕೆ ಹೋಗಿ ಬರುತ್ತಿದ್ದ ಬಸ್ಸುಗಳು, ಆಗಾಗ್ಗೆ ಬಂದು ಹೋಗುತ್ತಿದ್ದ ಲಾರಿಗಳನ್ನು ಬಿಟ್ಟರೆ ಕೇವಲ ಶ್ರೀಮಂತರ ಮನೆಯ ಕಾರುಗಳಿಗೆ ರಸ್ತೆಗಳು ಮೀಸಲಾಗಿದ್ದವು. ಕೇವಲ ಹಳ್ಳಿಗಳಷ್ಟೇ ಏಕೆ, ಜಿಲ್ಲಾ ಕೇಂದ್ರಗಳೂ, ಬೆಂಗಳೂರಿನಲ್ಲೂ ಸಹ ಅಷ್ಟೊಂದು ಕಾರುಗಳು ಓಡಾಡುತ್ತಿರಲಿಲ್ಲ.  ಕಾರು ಇಟ್ಟುಕೊಂಡವರಿಗೆ ಯಾವತ್ತೂ ಪಾರ್ಕಿಂಗ್ ಸಮಸ್ಯೆ ಬಂದುದನ್ನು ನಾನು ನೋಡಿಲ್ಲ, ಕೇಳಿಲ್ಲ.

ಈಗ ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾರು ಇದೆ.  ಕೆಲವೊಂದು ಮನೆಗಳಲ್ಲಿ ಕಾರುಗಳನ್ನು ನಿಲ್ಲಿಸಲು ಜಾಗವಿರದಿದ್ದರೂ ಅವರ ಹತ್ತಿರ ಕನಿಷ್ಠ ಒಂದಾದರೂ ಕಾರು ಇರುವುದು ಸಾಮಾನ್ಯವಾಗಿದೆ.  ದೇಶದ ಉದ್ದಗಲಕ್ಕೂ ಇಂದು ಕಾರುಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ.  ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಕಳೆದ ನಲವತ್ತು ವರ್ಷಗಳಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ವಾಹನಗಳ ಪ್ರಮಾಣ 6000% ದಷ್ಟು ಏರಿರುವುದನ್ನು ಕಾಣಬಹುದು.

ಊರು-ಕೇರಿಯ ರಸ್ತೆಗಳು ಕೇವಲ ಸಿರಿವಂತರಿಗೆ ಮಾತ್ರ ಎನ್ನುವಂತಿದ್ದ ಒಂದು ಕಾಲಕ್ಕೂ ಈಗಿನ ಎಲ್ಲರೂ ರಸ್ತೆ ಮೇಲೆ ತಮ್ಮ ಸವಾರಿಯನ್ನು ಚಲಾಯಿಸುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.  ಇದರಿಂದ ಸಾಮಾನ್ಯ ಜನರಿಗಂತೂ ಅನುಕೂಲವೇ ಸರಿ, ಆದರೆ ಆಗಿನ ಸಿರಿವಂತರು ತಮ್ಮ ವಿಶೇಷವಾದ ಸೌಲಭ್ಯವನ್ನು ಕಳೆದುಕೊಂಡರು ಎನ್ನುವುದು ನನ್ನ ಅಭಿಪ್ರಾಯ.

***
ಇಂದಿನ ಚಿಕ್ಕದಾದ ಕುಟುಂಬಗಳಲ್ಲಿ ದಿನನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸುವಲ್ಲಿ ಮೆಷೀನುಗಳ ಪಾತ್ರ ಇರುವುದು ಹಿರಿದಾಗಿದೆ.  ನಗರದ  ಹೆಚ್ಚಿನ ಮನೆಗಳಲ್ಲಿ ಇಂದು ವಾಷಿಂಗ್ ಮೆಷೀನ್ ನುಸುಳಿದೆ.  ಸೋಲಾರ್ ಪವರ್‌ನಿಂದ ನೀರು ಕಾಯಿಸಿಕೊಳ್ಳುವ ಅನೇಕರು ಸ್ವಿಚ್ ಹಾಕಿದರೆ ಬಿಸಿ ನೀರು ಪಡೆಯುವ ಸ್ಥಿತಿಯನ್ನು ಕಾಣಬಹುದು.  ನೆಲವನ್ನು ಗುಡಿಸಲು, ಪಾತ್ರೆ ತೊಳೆಯಲು ಮತ್ತು ಬಟ್ಟೆ ಒಗೆಯಲು ಪ್ರತಿದಿನ ಕೆಲಸಕ್ಕೆ ಬಂದು ಹೋಗುವವರು ಸಿಗುತ್ತಾರೆ.  ತಿಂಗಳಿಗೆ ಇಷ್ಟು ಎನ್ನುವ ನಿಗದಿತ ಸಂಬಳಕ್ಕೆ ಕೆಲಸ ಮಾಡುವ ಇವರುಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ವಟಾರದ ಒಂದಿಷ್ಟು ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ.  ಹೆಚ್ಚಿನವರಿಗೆ ಒಳ್ಳೆಯ ಉತ್ಪನ್ನವೂ ಇರುವುದು ಕೇಳಿ ಬರುತ್ತದೆ.  ಇನ್ನು ಮನೆಯ ಚಿಕ್ಕ-ಪುಟ್ಟ ಕೆಲಸಗಳ ಜೊತೆಗೆ ಮನೆ ಮಂದಿಗೆ ಅಡುಗೆ ಮಾಡಿಕೊಂಡು ಹೋಗುವುದು ಮನೆಯವರ ಕೆಲಸ.  ಅದರಲ್ಲೂ ಸಹ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ತೊಂದರೆ ಹೆಚ್ಚು, ಎಲ್ಲದಕ್ಕೂ ಗಂಡ ಹೆಂಡತಿ ಹೊಂದಿಕೊಂಡು ಹೋಗಬೇಕಾಗುತ್ತದೆ.  ಇನ್ನು ಮನೆಯಲ್ಲಿ ಹಿಂದಿನ ತಲೆಮಾರಿನ ಹಿರಿಯರು ಯಾರಾದರೂ ಇದ್ದರೆ, ಅಡುಗೆಯ ಕೆಲಸದಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.  ನೂರು ಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ಎಲ್ಲರ ಮನೆಯೂ ಹೀಗೆ ಎಂದು ನಿರ್ದಿಷ್ಟವಾಗಿ ಹೇಳಲಾಗದು.  ಆದರೆ, ಸೀನಿಯರ್ ಸಿಟಿಜನ್ಸ್ ಜನಸಂಖ್ಯೆ ಹೆಚ್ಚುತ್ತಿರುವ ಭಾರತದಲ್ಲಿ ವ್ಯವಸ್ಥೆ ಅಷ್ಟೊಂದು ಮುಂದುವರೆದ ಹಾಗಿಲ್ಲ.  ಇವತ್ತಿಗೂ ಹೆಚ್ಚಿನ ವೃದ್ಧ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ನಂಬಿಕೊಂಡಿರುವುದು ಕಂಡು ಬರುತ್ತದೆ.  ಇಂಥವರ ಪೋಷಣೆಗೆ ಅದರಲ್ಲೂ ಖಾಯಿಲೆ ಬಿದ್ದಿರುವ ಹಿರಿಯರಿಗೆ ದಿನನಿತ್ಯದ ನೆರವಿಗೆ ಕೆಲಸಗಾರರು ಸಿಗುತ್ತಿಲ್ಲ.

ಸೀನಿಯರ್ ಸಿಟಿಜನ್ಸ್‌ಗಳನ್ನು ನೋಡಿಕೊಳ್ಳುವುದು ಬಹಳ ಸೂಕ್ಷ್ಮ ಹಾಗೂ ಕಷ್ಟದ ಕೆಲಸ.  ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಖಾಯಿಲೆ ಬಾಧಿಸುತ್ತಿರುತ್ತದೆ.  ಅವರ ಪ್ರಿನ್ಸಿಪಲ್ಸ್, ಅವರಿಗೆ ಬೇಕಾದ ಊಟ-ತಿಂಡಿ ಅಗತ್ಯಗಳು, ಅವರ ಮನರಂಜನೆ, ಇತ್ಯಾದಿ ಇವೆಲ್ಲವೂ ಬೇರೆಯ ಒಂದು ಆಯಾಮವನ್ನೇ ಪಡೆದುಕೊಂಡಿರುತ್ತವೆ.  ಹೀಗಿರುವಾಗ ಮನೆಯಲ್ಲಿ ಯಾರಿಗಾದರೊಬ್ಬರಿಗೆ ಗಂಭೀರ ಸ್ವರೂಪದ ಖಾಯಿಲೆ ಏನಾದರೂ ಬಂದರೆ, ಅವರನ್ನು ಸಂತೈಸುವುದು ಬಹಳ ಕಷ್ಟದ ವಿಷಯವಾಗುತ್ತದೆ... ಈ ನಿಟ್ಟಿನಲ್ಲಿ ಭಾರತದುದ್ದಕ್ಕೂ ವೃದ್ಧಾಶ್ರಮಗಳು ಅಷ್ಟೊಂದು ಬೆಳೆಯದಿದ್ದರೂ ಇನ್ನು ಮುಂದೆ ಬೆಳೆಯುವುದನ್ನು ಊಹಿಸಬಹುದು. 

ಆದರೆ, ಇತ್ತೀಚೆಗೆ ಮನೆಗಳಲ್ಲಿ ಕೆಲಸ ಮಾಡಲು ಸಿಗುವವರು "ನಿಯತ್ತಿ"ನಿಂದ ಕೆಲಸ ಮಾಡೋದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬರುತ್ತವೆ.  ಯುವ ಜನತೆ ಯಾವಾಗಲೂ ತಮ್ಮ ತಮ್ಮ ಮೊಬೈಲು ಫೋನುಗಳಿಗೆ ಶರಣಾಗಿರುತ್ತಾರೆ.  ಹಿಂದಿನ ಕಾಲದವರ ಹಾಗೆ ನಿಯತ್ತಿನಿಂದ ನಡೆದುಕೊಳ್ಳೋದಿಲ್ಲ, ಕೆಲಸಗಳ್ಳರು, ಯಾವಾಗಲೂ ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆಯೇ ಹೊರತು ವಹಿಸಿಕೊಂಡ ಕೆಲಸವನ್ನು ಮೈಬಗ್ಗಿಸಿ ಮಾಡೋದಿಲ್ಲ.  ಹೀಗೆ ಅನೇಕ ಹೇಳಿಕೆಗಳನ್ನು ಕೇಳುವುದು ಸಾಮಾನ್ಯವಾಗಿದೆ.  ಎಲ್ಲರೂ ಐಶಾರಾಮಿ ಬದುಕಿನ ಕನಸನ್ನು ಕಂಡು ಅದರಲ್ಲೇ ಬದುಕುವ ಹಾಗಿದ್ದರೆ, ಈ ಐಶಾರಾಮಿತನಕ್ಕೆ ಅರ್ಥವೂ ಬರೋದಿಲ್ಲ. ಜೊತೆಗೆ ಅದು ಸೃಷ್ಟಿಸುವ "ಟ್ರಾಫಿಕ್ ಜಾಮ್" ಕೂಡಾ ಭೀಕರವಾಗಿರುತ್ತದೆ.  ಊರಿನಲ್ಲಿ ಕೆಲವೇ ಕೆಲವು ಕಾರುಗಳಿದ್ದಾಗ ಹೇಗೆ ಒಂದು ವ್ಯವಸ್ಥೆ ಚಾಲನೆಯಲ್ಲಿತ್ತೋ, ಅದೇ ವ್ಯವಸ್ಥೆ ಊರಿನ ಪ್ರತಿಯೊಬ್ಬರೂ ಸಮತೋಲಿತದವರಾದಾಗ ಸಂತುಲನ (equilibrium) ವನ್ನು ಕಳೆದುಕೊಳ್ಳುತ್ತದೆ.  ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡಲು ಯಾರೂ ಸಿಗದೇ ಹೋಗುವ ಪರಿಸ್ಥಿತಿ ಬರುತ್ತದೆ.  ಕಿತ್ತ ಚಪ್ಪಲಿಗಳನ್ನು ದುರಸ್ತಿ ಮಾಡಿಸುವುದಾಗಲೀ, ಬಟ್ಟೆಯನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುವುದಾಗಲೀ ಕಡಿಮೆಯಾಗಿ ಎಲ್ಲರೂ ದಿನದಿನಕ್ಕೂ "ಹೊಸ"ತನ್ನು ನಂಬಿಕೊಳ್ಳುವ ಗ್ರಾಹಕ ಪ್ರವೃತ್ತಿ (consumerism) ಬೆಳೆಯುತ್ತದೆ.  ಅದರಿಂದ ಎಕಾನಮಿ ದೊಡ್ಡದಾಗುತ್ತದೆ ಎಂದು ಎಷ್ಟೋ ಜನ ತಮ್ಮ ತತ್ವಗಳನ್ನು ಮಂಡಿಸಬಹುದು.  ಆದರೆ, ಅದರಿಂದ ನಾವು ಅನೇಕ ವ್ಯತಿರಿಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.

ಹೀಗೆ ತಲೆಮಾರಿನಿಂದ ತಲೆಮಾರಿಗೆ ಪ್ರತಿಯೊಬ್ಬರೂ "ಸಿರಿವಂತ"ರಾಗುತ್ತಲೇ ಇದ್ದಾರೆ... ಆದರೆ, ಸಿರಿವಂತರೆನ್ನುವುದು ಒಂದು ತುಲನಾತ್ಮಕ ಹಣೆಪಟ್ಟಿ ಅಷ್ಟೇ.

No comments: