Sunday, November 26, 2006

ಮೋಕ್ಷ ಸಿಗಲು ಮಿಲಿಯನ್ ವರ್ಷಗಳು ಬೇಕಂತೆ

ಇಬ್ಬರು ಋಷಿಗಳು ತಪ್ಪಸ್ಸು ಮಾಡ್ತಾ ಇದ್ದಿರಬೇಕಾದ್ರೆ ನಾರದ ಮಹರ್ಷಿಗಳು ಎದುರಾದರಂತೆ, ಈ ಇಬ್ಬರೂ ಋಷಿಗಳು ದೇವರ್ಷಿಗಳೇ ನಿಮ್ಮ ದಿವ್ಯಜ್ಞಾನದಿಂದ ನಮ್ಮಿಬ್ಬರಲ್ಲಿ ಯಾರಿಗೆ ಮೊದಲು ಮೋಕ್ಷ ಸಿಗುತ್ತದೆ, ಯಾವಾಗ ಸಿಗುತ್ತದೆ ತಿಳಿಸಬಲ್ಲಿರಾ ಎಂದು ಕೇಳಿದರಂತೆ, ಇವರ ಪ್ರಶ್ನೆಗೆ ಉತ್ತರಕೊಡುತ್ತಾ ನಾರದರು ನಿಮ್ಮಿಬ್ಬರಿಗೂ ಈ ಮರದಲ್ಲಿ ಎಷ್ಟು ಎಲೆಗಳು ಇವೆಯೋ ಅಷ್ಟು ಜನ್ಮಗಳು ಕಳೆದ ನಂತರ ಮೋಕ್ಷ ಸಿಗುತ್ತದೆ ಎನ್ನಲಾಗಿ ಒಬ್ಬ ಋಷಿ ನಾರದರ ಮಾತನ್ನು ಕೇಳಿ ಕುಣಿದು ಕುಪ್ಪಳಿಸಿದರೆ ಮತ್ತೊಬ್ಬ ಋಷಿ ಪೆಚ್ಚು ಮೋರೆ ಹಾಕಿಕೊಂಡು ನಿಂತಿದ್ದರಂತೆ. ಆ ಮರದಲ್ಲಿರುವ ಎಲೆಗಳು ಫೈನೈಟ್ ಆದದ್ದರಿಂದ ಒಬ್ಬ ಋಷಿಗೆ ಕೊನೆಗೆ ಅಷ್ಟು ಜನ್ಮಗಳು ಕಳೆದ ಮೇಲಾದರೂ ಮೋಕ್ಷ ಸಿಗುತ್ತದೆಯೆಲ್ಲಾ ಎನ್ನುವ ಹರ್ಷವಾದರೆ, ಅಯ್ಯೋ ಅಷ್ಟೊಂದು ಜನ್ಮಗಳನ್ನು ಕಾಯಬೇಕೇ ಎನ್ನುವ ಮತ್ತೊಬ್ಬ ಋಷಿಯ ಕೊರಗು ಎಂತಹವರಿಗೂ ಅರ್ಥವಾದೀತು ಅದೂ ಈ ವಿದ್ಯುನ್ಮಾನ ಯುಗದಲ್ಲಿ!

ಮೋಕ್ಷ ಅಂದ್ರೆ ಹುಡುಗಾಟಿಕೆಯೇ? ಮೋಕ್ಷ ಸಿಕ್ಕಮೇಲೆ ಜನನ-ಮರಣ ಚಕ್ರದಿಂದ ಒಂದು ರೀತಿ ಟ್ಯಾಂಜೆಂಟಿಯಲ್ ಆಗಿ ಬೇರ್ಪಟ್ಟು ಮುಂದೆ ಎಂದೂ ಹುಟ್ಟದ-ಸಾಯದ ಸ್ಥಿತಿಯಲ್ಲವೇ ಅದು? ಅಥವಾ ಮೋಕ್ಷ ಸಿಗುವ ಹೊತ್ತಿಗೆ ಪ್ರಪಂಚದ ಎಲ್ಲ ಜ್ಞಾನಗಳೂ ಕರತಲಾಮಲಕವಾಗಿರಬೇಕು, ಅಥವಾ ಅಷ್ಟೊಂದು ದೊಡ್ಡ ಜಿಜ್ಞಾಸೆ ಇರಬೇಕು ಅಥವಾ ಮೋಕ್ಷ ಸಿಗುವ ಹೊತ್ತಿಗೆ ದಿವ್ಯಜ್ಞಾನವಾಗಿರುತ್ತದೆ...ಎಂದು ಇನ್ನೇನೇನನ್ನೋ ಅಲ್ಲಲ್ಲಿ ಓದಿದ ಮೇಲೆ ಮೋಕ್ಷದ ಬಗ್ಗೆ ಬಹಳ ಕುತೂಹಲ ಹುಟ್ಟಿತು, ಅದೇ ಸಮಯಕ್ಕೆ ಎಲ್ಲವನ್ನೂ ತಿಳಿದುಕೊಳ್ಳುವುದು ಹೇಗೆ ಎಂಬ ವಾಸ್ತವವೂ ಅಂತರಿಕ್ಷದಲ್ಲಿ ಓಲಾಡುತ್ತಿದ್ದ ನನ್ನ ಹುಮ್ಮಸ್ಸನ್ನು ಭೂಮಿಗೆ ತಂದಿಳಿಸಿತು. ನಮ್ಮ ನಡುವಿನಲ್ಲಿ ಒಂದು ಸಣ್ಣ ವಿಷಯವನ್ನು ಕುರಿತು ಆಳವಾಗಿ ಅಧ್ಯಯನ ಮಾಡಿ ಪಿ.ಎಚ್‌ಡಿ. ಪದವಿ ಪಡೆದರೆ ಅಂಥವರನ್ನು 'he knows something about everything, everything about something!' ಉಡಾಫೆ ಮಾಡಿ ರೇಗಿಸುತ್ತಿದ್ದೆವು - ಅದರಲ್ಲಿ ಕೆಲವರು Jack of all, master of something, doctor of nothing ಎಂದೆನಿಸಿಕೊಳ್ಳುವವರ ವಿಶೇಷ ಗುಂಪನ್ನೂ ಕೂಡ ಗುರುತಿಸಿಕೊಂಡಿದ್ದೆವು. ಹೀಗೆ ಅಣುಅಣುವಿನಲ್ಲಿ ಪದವಿ ಪಡೆದು ಅವುಗಳನ್ನು ಹಿಗ್ಗಾಮುಗ್ಗಾ ಅಭ್ಯಾಸ ಮಾಡಿ ಮುಂದೆ ಬಂದವರನ್ನು ಮೋಕ್ಷ ಸಾಧಕರು ಎಂದು ಕರೆಯಬೇಕು ಎನ್ನುವುದು ನನ್ನ ಮನವಿ ಏಕೆಂದರೆ ಏನೇನೆಲ್ಲವನ್ನು ಕಲಿತು ಮುಂದುವರೆಯಬಹುದಾದ ಈ ಬ್ರಹ್ಮಾಂಡದಲ್ಲಿ ಇಂತಹದ್ದನ್ನೇ ಕಲಿಯಬೇಕು ಎಂದುಕೊಂಡು ಅದರಲ್ಲಿ ಏನನ್ನಾದರೂ ಮಾಡಿ ಸಾಧಿಸುವುದು ಅದೇನು ಕಡಿಮೆ ಕೆಲಸವೇ?

ಆದರೆ ಇಲ್ಲೊಂದು ವಿಶೇಷವಿದೆ - ಮೋಕ್ಷ ಸಿಗಲು ಮಿಲಿಯನ್ ಜನ್ಮ ಬೇಕಾದರೂ ಅಂತಹ ಪ್ರತಿಯೊಂದು ಜನ್ಮವನ್ನು ಮಾನವನಾಗೇ ಹುಟ್ಟಿ ಕಳೆಯಬೇಕೆಂದೇನೂ ಇಲ್ಲವಲ್ಲ. ಇವತ್ತಿಟ್ಟ ಸಗಣಿಯ ಪಿಂತೆಯನ್ನು ನಾಳೆ ಎತ್ತಿ ನೋಡಿದರೆ ಮಿಲಿಯನ್ ಗಟ್ಟಲೆ ಗೆದ್ದಲು ಹುಳುಗಳು ಅದರಲ್ಲಿ ಕಾಣ ಸಿಗೋದಿಲ್ಲವೇ, ಇಂದು ಬಿದ್ದ ಆಲಿಕಲ್ಲಿನ ಮಳೆಯ ಮರುದಿನ ಹಲವಾರು ನಾಯಿಕೊಡೆಗಳು ತಲೆ ಎತ್ತಿ ಮತ್ತೆ ಕಣ್ಮರೆ ಆಗುವುದಿಲ್ಲವೇ? ಎಷ್ಟೋ ಜೀವಜಂತುಗಳು ಈ ಬ್ರಹ್ಮಾಂಡದಲ್ಲಿ ಕೇವಲ ಕೆಲವು ಘಂಟೆ-ನಿಮಿಷಗಳಲ್ಲಿ ಹುಟ್ಟಿ ತಮ್ಮ ಆಯಸ್ಸನ್ನು ಕಳೆದು ಮತ್ತೊಂದು ಜನ್ಮವನ್ನು ಎತ್ತಿ ಅವತರಿಸುವುದಿಲ್ಲವೇ? ಕೇವಲ ನಿಮಿಷಗಳಲ್ಲಿ ಮುಗಿಯಬಹುದಾದ ಇಂತಹ ಅದೆಷ್ಟು ಜನ್ಮಗಳು ಒಂದು ರೀತಿ ಬೋನಸ್ ರೀತಿಯಲ್ಲಿ ಮೋಕ್ಷದ ಹಾದಿಯಲ್ಲಿ ನಮಗೆ ಸಿಗುತ್ತದೆಯೋ ಯಾರಿಗೆ ಗೊತ್ತು?

ನನ್ನ್ ಕೇಳಿದ್ರೆ ಈ ವಿಶ್ವದಲ್ಲಿ ಆತ್ಮಗಳು, ಜನ್ಮಗಳು ಇವೆಲ್ಲ ಫೈನೈಟ್ ಏಕೆಂದ್ರೆ ಪಿರಿಯಾಡಿಕ್ ಟೇಬಲ್ಲಿನಲ್ಲಿರೋ ಅಷ್ಟೇ ಮೂಲವಸ್ತುಗಳಿಂದ (elements) ಮಾಡಿದ ಈ ಶರೀರ ಹೇಗೆ ತಾನು ಒಂದು ರೂಪದಿಂದ ಮತ್ತೊಂದು ರೂಪವನ್ನು ಪಡೆಯುತ್ತದೆಯೋ - ವಯಸ್ಸಾಗಿ ಹುಟ್ಟುವ ನೆರೆಕೂದಲು, ಮುಖದ ಮೇಲೆ ಹುಟ್ಟುವ ನಿರಿಗೆಗಳ ಬಗ್ಗೆ ನಾನು ಹೇಳುತ್ತಿಲ್ಲ - ಹಾಗೇ ಎಲ್ಲೋ ಒಂದು ಆತ್ಮ ಹಾಗೂ ಜನ್ಮದ ಬ್ಯ್ಂಕ್ ಇದೆ, ಅದರ ಅಪಾರವಾದ ಖಜಾನೆಯಿಂದ ಆಗಾಗ್ಗೆ ಒಂದಲ್ಲ ಒಂದು ಹೊಸ ಪ್ರಾಡಕ್ಟ್ ಹುಟ್ಟಿ ಹೊರಬರುತ್ತಲೇ ಇರುತ್ತದೆ. ಈ ಪ್ರಾಡಕ್ಟ್‌ಗಳ ಚಲನವಲನವನ್ನು ಅದ್ಯಾವ ಪ್ರಾಜೆಕ್ಟ್ ಮ್ಯಾನೇಜರ್ ಟ್ರ್ಯಾಕ್ ಮಾಡುತ್ತಾನೋ ಬಿಡುತ್ತಾನೋ, ಅವನ ಬಳಿ ಎಂಥೆಂಥಾ ಡೇಟಾಬೇಸುಗಳಿವೆಯೋ, ಅವನ ಲೆಕ್ಕ ಯಾಅತ್ತೂ ತಪ್ಪಿದಂತಿಲ್ಲ.

ನಿಮಗೆ ಮೋಕ್ಷ ಸಿಗಬೇಕು ಎನ್ನೋದಾದರೆ ನೀವು ಹಿಡಿದ ಕೆಲಸವನ್ನು ಮಾಡಬೇಕು, ಹೀಗೆ ಹಿಡಿದ ಪ್ರತಿಯೊಂದು ಕೆಲಸವನ್ನು ಚಾಚೂತಪ್ಪದೆ ಮಾಡಿ ಮುಗಿಸಿದರೆಂದಾರೆ ನಿಮಗೆ ಮೋಕ್ಷ ಕಟ್ಟಿಟ್ಟ ಬುತ್ತಿ!

4 comments:

Anonymous said...

ಸತೀಶ್, ನಮಸ್ಕಾರ. ನಿಮ್ಮ ಈ ಲೇಖನಕ್ಕೆ ಪೂರಕ ಓದು ಈ ಪುಸ್ತಕಗಳಲ್ಲಿವೆ; ನೋಡಿ, ಹಿಡಿಸಿದರೆ ತಿಳಿಸಿ:
(1) Journey of Souls ಮತ್ತು
(2) Destiny of Souls : By Michael Newton.

(3)Many Lives, Many Masters ಮತ್ತು
(4)Messages from the Masters ಹಾಗೂ ಇನ್ನೂ ಐದು ಪುಸ್ತಕಗಳು : By Brian L Weiss.

ಇವುಗಳಲ್ಲಿ ನಾನು (1), (3), ಮತ್ತು (4) ಓದಿದ್ದೇನೆ.

ಇವರಿಬ್ಬರೂ ಅಮೆರಿಕದ ಸೈಕಾಲಾಜಿಸ್ಟ್, ಸೈಕೋಥೆರಪಿಸ್ಟ್. ಇವರಿಬ್ಬರ ಹಿಪ್ನೋಟಿಕ್ ಥೆರಪಿ ಸಮಯಗಳಲ್ಲಿ ವ್ಯಕ್ತಿ ಆತ್ಮ-ಜ್ಞಾನದ ಮಟ್ಟಕ್ಕೆ ತಲುಪಿ ಬಹಳಷ್ಟು ವಿಷಯಗಳನ್ನು ಅರಿತ ವಿವರಣೆಗಳು ಇಲ್ಲಿವೆ. ನಮ್ಮ ಹಿಂದೂ ಸಂಪ್ರದಾಯದ ಆತ್ಮ, ಪುನರ್ಜನ್ಮ, ಕರ್ಮ-ಸಿದ್ಧಾಂತಗಳ ಬಗ್ಗೆ ವೈಜ್ಞಾನಿಕವಾಗಿ ಓದುವಾಗ ರೋಮಾಂಚನವಾಗುತ್ತದೆ.

ನಿಮಗೇನನಿಸುತ್ತೋ ನೋಡಿ, ಹೇಳಿ.

Shrilatha Puthi said...

Raj haaDiruro omdu Raghavendra baktigeeteya charana heegide:

'ananta janumava keLONa, A mukutiyu bEDa ennONa, januma janumadallu raayara sEveya mADONa'

it's quite interesting!! specially when every other 'bakta' asks for 'mukti' or 'mOksha'!!!

Satish said...

ಜ್ಯೊತಿ ಅವರೆ ನಮಸ್ಕಾರ,

ನಾನು ನೀವು ತಿಳಿಸಿದ ಪುಸ್ತಕಗಳಲ್ಲಿ ಯಾವುದನ್ನೂ ಓದಿಲ್ಲ, ಪ್ರಯತ್ನಿಸುತ್ತೇನೆ.

Satish said...

ಶ್ರೀಲತಾ,

ರಾಜ್ ಅಂತಹ ಭಕ್ತರೂ ಅಪರೂಪ, ಮಿಲಿಯನ್ ವರ್ಷ ಕಾದರೂ ಪರವಾಗಿಲ್ಲ, ಮೋಕ್ಷ ಸಿಗಲಿ ಅನ್ನೋ ಭಕ್ತರು ಹೆಚ್ಚಿಲ್ಲ ಎನ್ನಿಸುತ್ತದೆ!