Sunday, November 19, 2006

ಕಾಯೋ ಕಷ್ಟಾ...ಯಾರಿಗ್ ಬೇಕು

ಕಾಯೋ ಕಷ್ಟಾ ಇದೇ ನೋಡಿ ಅದರಂಥಾ ಸ್ಲೋ ಪಾಯಿಜನ್ ಇನ್ನೊಂದಿಲ್ಲ! ಯಾಕೆ ಅಂತೀರೋ, ಇನ್ನೇನು ಮತ್ತೆ - ಪ್ಲಾನ್ ಮಾಡೀ ಮಾಡೀ ಇಂಥಾ ದಿನಾ ಬರುತ್ತೇ ಹೀಗ್ ಹೀಗೇ ಆಗುತ್ತೇ ಎಂದು ಮನಸ್ಸು ಏನೇನೋ ತಿಪ್ಪರ್‌ಲಾಗಾ ಹಾಕಿದ್ರೂ ಕೊನೇಗೆ ಆಗೋದೇ ಬೇರೆ, ಆದ್ದರಿಂದ ನಾನು ಇವತ್ತಿಂದ ಕಾಯೋದೋ ಬೇಡಾ ಪ್ಲ್ಯಾನ್ ಮಾಡೋದ್ ಬೇಡಾ ಅನ್ನೋ ಹೊಸಾ ನೀತಿಯೊಂದನ್ನ ಪ್ರಪಂಚಕ್ಕೆ ಸಾರೋ ಪಣಾ ತೊಟ್ಟಿದ್ದೇನೆ. ನನ್ ಪ್ರಕಾರ ಯಾರೂ ಕಾಯ್ಲೂ ಬಾರ್ದೂ ಪ್ಲಾನ್ ಮಾಡ್ಲೂ ಬಾರ್ದೂ, ಆವಾಗ್ಲೇ ಚೆಂದ, ಏನಂತೀರಿ?

ಮದ್ನ್ಯಾಹ್ನ ಆಫೀಸ್‌ನಲ್ಲಿ ಒಂದೊಂದ್ ದಿನಾ ಪಿಜ್ಜಾ ತಿನ್ನೋದೇ ಗತಿಯಾಗಿ ಹೋಗುತ್ತೆ, ಒಂದು ಸಮಯಕ್ಕೆ ಸರಿಯಾಗಿ ಕ್ಯಾಫೆಟೇರಿಯಾಕ್ಕೆ ಹೋಗೋದಕ್ಕೆ ಆಗದೇ ಇರೋದರ ಪರಿಣಾಮ, ಇನ್ನೊಂದು ಹೊಟ್ಟೆ ಪರಮಾತ್ಮನ ಆರ್ತ ಮೊರೆಗೆ ಓಗೊಟ್ಟು ಅರ್ಜೆ‌ನ್ಟಾಗಿ ಏನಾದ್ರೂ ಸಿಗುತ್ತೇನೋ ಅಂದ್ರೆ - ಅದೂ ವೆಜಿಟೇರಿಯನ್ನೇ ಆಗಬೇಕು ನೋಡಿ, ಈ ದೇಶದಲ್ಲಿ ವೆಜಿಟೇರಿಯನ್ ತಿನ್ನೋ ಈ ಹಣೇಬರಹಕ್ಕೆ ಒಂದಿಷ್ಟು ಬೆಂಕಿ ಹಾಕಾ - ನಮ್ಮಲ್ಲಿ ಸಿಗೋದೇ ವೆಜ್ಜಿ ಪಿಜ್ಜಾ - ಅದನ್ನ ತಗೊಂಡು ನಮ್ ಚೆಫ್ ಹೈ ಸ್ಪೀಡ್ ಅವನ್ ನಲ್ಲಿಟ್ಟು ಒಂದೆರಡು ನಿಮಿಷ ಕಾಯಿ ಅಂತಾನೆ, ಅವಾಗಿರೋ ತಹತಹ ಇದೇ ನೋಡಿ ಅದರಂಥ ಕೆಟ್ಟ ಸ್ಥಿತಿ ಇನ್ನೊಂದಿಲ್ಲ. ಹೊಟ್ಟೆ ಒಂದೆರಡು ಸರ್ತಿ ಮುರ್ದು ಕುರ್ರ್ ಅಂತ ಬೇರೆ ಬೇರೆ ಸೌಂಡ್ ಮಾಡಿ 'ನನಗೆ ಹಸಿವಾಗಿದೆ' ಅಂತ ಹೇಳಿ ಚುರುಗುಟ್ಟೋ ಹೊತ್ನಲ್ಲಿ ಎಂಥಾ ಆಧುನಿಕ ತಂತ್ರಜ್ಞಾನದ ಹೈ ಸ್ಪೀಡ್ ಅವನ್ನೂ ನಿಧಾನ ಅನ್ನಿಸಿಬಿಡುತ್ತೆ. ಎಷ್ಟೋ ಸಾರಿ ಹಾಗೆ ತಣ್ಣಗಿರೋದನ್ನೇ ಯಾಕೆ ತಿನ್ನಬಾರ್ದೂ ಅಂತ ಅನ್ನಿಸಿಯೂ ಬಿಟ್ಟಿದೆ.

ಅದಿರ್ಲಿ, ಊಟತಿಂಡಿ ವಿಚಾರ ಬಿಡಿ, ಇನ್ನ್ಯಾವುದರಲ್ಲಾದರೂ ನೀವು ಯಾವತ್ತಾದ್ರೂ ಆಲೋಚಿಸಿದ ಹಾಗೆ, ಪ್ಲಾನ್ ಮಾಡಿದ ಹಾಗೆ ಆಗಿದೆಯಾ? ಅಕಸ್ಮಾತ್ ಹಾಗೆ ಆಗಿದ್ರೂ ಎಲ್ಲೋ ಕಡಿಮೆ ಪ್ರಮಾಣದಲ್ಲಿ ಅನ್ನೋದನ್ನ ನೀವೂ ಒಪ್ಪೋದಿಲ್ವೇ? ನಾವು ಅಂದ್‌ಕೊಂಡ ಹಾಗೆ ಆಗೋದಿಲ್ಲ ಅನ್ನೋದಾದ್ರೆ ಪ್ಲ್ಯಾನ್ ಯಾಕ್ ಮಾಡಬೇಕು ಅನ್ನೋದು ಇವತ್ತಿನ ಹೊಸ ಜಿಜ್ಞಾಸೆ. ಅಲ್ದೇ ಪ್ರತಿಯೊಂದ್ ಪ್ಲ್ಯಾನ್‌ನಲ್ಲೂ ಒಂದಿಷ್ಟು ಕಾಯಲೇ ಬೇಕಾದ ಖಾಯಿಲೆಯನ್ನೂ ನಾವು ಏನು ಮಾಡಿದ್ರೂ ಅವಾಯ್ಡ್ ಮಾಡೋಕಾಗಲ್ಲ ಅಂದ್‌ಮೇಲೆ ಮೊದಲೇ ಪೂರ್ವಯೋಜಿತವಾದ 'ಕಾಯುವಿಕೆ'ಯನ್ನ ಕಾಯುವಿಕೆ ಅಂತ ಕರೆಯದೇ ಅದನ್ನ ಇನ್ನ್ಯಾವುದಾದ್ರೂ ಒಂದ್ ಹೆಸರಲ್ಲಿ ಕರೆದ್ರೆ ಹೆಂಗೆ?

ನೀವು 'ಕಾಯೋ ತಂದೆಯೇ, ದೇವಾ ಕರುಣಿಸು...' ಅನ್ನೋ ಹಾಡು ಕೇಳಿಲ್ವಾ? ಅದನ್ನ ಬರೆದ ಕವಿ, ದೇವರಿಗೇ 'ಸ್ವಲ್ಪ ತಡಿ - ಕರುಣಿಸುವ ಮುನ್ನ' ಅಂತ ಯಾಕೆ ಹೇಳಿದ ಅಂತಾ ನಾನು ಬಹಳ ಯೋಚ್ನೇ ಮಾಡಿದ್ದೇನೆ. ಇಲ್ಲವೆಂದ್ರೆ ದೇವರಿಗೆ 'ನಮ್ಮನ್ನು ಕಾಯೋ' ಅಂತ ಹೇಳೋದರಲ್ಲೇನಾದ್ರೂ ಅರ್ಥಾ ಇದೆಯಾ? ಅಥವಾ ದೇವರಿಗೆ ನಾವು 'ಕಾಯ್‌ಬೇಡಾ' ಅಂದ್ರೆ ಕಾಯೋದಿಲ್ಲಾ ಅಂತ ಅರ್ಥವೇ? ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ 'ಕೃಷ್ಣಾ ನೀ ಬೇಗನೆ ಬಾರೋ...' ಕೂಡಾ ಒಂದು. ಮತ್ತೆ, ಆತ ಕೃಷ್ಣಾ ಪರಮಾತ್ಮ ಆದರೇನು, ಯಾರ್ ಆದರೇನು 'ಬೇಗನೆ' ಬರಬೇಕಪ್ಪಾ! ಆವಾಗ್ಲೇ ಮಜಾ ಇರೋದು...ಅಕಸ್ಮಾತ್ ಒಂದ್ ಘಳಿಗೆ ಏನಾದ್ರೂ ಬರೋದು ಹೆಚ್ಚೂ ಕಡಿಮೆ ಆದ್ರೆ ದುರುಳ ದುಶ್ಯಾಸನನಂತಹವರು ಎಷ್ಟೋ ಜನ ದ್ರೌಪದಿಯಂತಹವರ ಸೀರೆ ಸೆರೆಯೋದಕ್ಕೆ ರೆಡಿ ಇರ್ತಾರೆ, ಆ ಸಮಯದಲ್ಲಿ ದುಶ್ಯಾಸನನಂತಹವರಿಗೆ ತಡೆಯೋಕ್ ಆಗೋದಿಲ್ಲ, ಇನ್ನು ದ್ರೌಪದಿಯಂತಹವರಿಗೆ ಹೇಗೆ ಆಗುತ್ತೆ? ಆದ್ರಿಂದ್ಲೇ ಕೃಷ್ಣ ಬೇಗನೆ ಬರಬೇಕು. ನಮ್ ಕವಿಗಳಿಗೆ ಇನ್ನು ಮುಂದೆ ಏನ್ ಬೇಕಾದ್ರೂ ಬರೀರಿ, ಎಲ್ಲಾ ಕಡೆ ಬರೋದು-ಹೋಗೋದು, ಆಗೋದು-ಬಿಡೋದು ಇವನ್ನೆಲ್ಲ ಆದಷ್ಟು ಬೇಗನೆ ಮಾಡಲು ಹುಮ್ಮಸ್ಸು ಕೊಡುವಂತೆ ನನ್ನ ಚಿಕ್ಕದೊಂದು ಮನವಿ ಸಲ್ಲಿಸಿಬಿಟ್ರೆ ಅಂತಾ ಎಷ್ಟೋ ಸರ್ತಿ ಯೋಚ್ನೇ ಮಾಡಿದ್ದೇನೆ.

ಬದುಕು ಅಂದ್ರೆ ಒಂದ್ ಸಿನಿಮಾ ಇದ್ದಂಗಿರಬೇಕಪ್ಪಾ, ಹುಟ್ಟಿದ ಮಕ್ಳು ಕಾಲೇಜ್ ಸೇರೋದಕ್ಕೆ ಕೇವಲ ಕೆಲವೇ ನಿಮಿಷಗಳು ಬೇಕಾಗೋ ಹಾಗೇ, ಯುವಕರಿಂದ ಮುದುಕರು ಆಗೋದಕ್ಕೆ ಒಂದೆರಡು ಘಂಟೆ ಮಾತ್ರ ಸಾಕಾಗೋ ಹಾಗೆ, ದಿನಗಳು ಉರುಳೋದಕ್ಕೆ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರನ್ನು ಗಾಳಿಗೆ ಹಾರಿಸೋದನ್ನು ತೋರಿಸಿದ ಹಾಗೆ - ಎಲ್ಲವೂ ವೇಗಮಯ. ಇಲ್ಲಾ ಅಂದ್ರೆ 'ಬೀಸ್ ಸಾಲ್ ಬಾದ್' ಅನ್ನೋ ಸಿನಿಮಾನ ಮೊದಲ ಭಾಗ ಶುರೂ ಮಾಡಿ, ಮುಂದಿನ ಭಾಗವನ್ನ ಇಪ್ಪತ್ತು ವರ್ಷ ಬಿಟ್ಟು ಬಂದ್ ನೋಡಿ ಅನ್ನೋ ಹಾಗಿದ್ರೆ ಏನ್ ಮಜಾ ಇರ್ತಿತ್ತು ಅದರಲ್ಲಿ? ಬೀಸ್ ಸಾಲ್ ಪೆಹಲೆ ಆಗಿರೋ ಘಟನೆಗಳನ್ನೆಲ್ಲ ಚಿಕ್ ಚಿಕ್ ಹುಡುಗ್ರು ನೆನಪಿಟ್ಟುಕೊಂಡು ಪ್ರತಿಯೊಂದರ ಡೀಟೈಲನ್ನೂ ಹೇಳೀ ಹೇಳೀ ಖಳನಾಯಕನಿಗೆ ಒದೆಯೋದಿಲ್ವಾ? ಒಂದೆರಡು ಘಂಟೆ ಆದಮೇಲೆ ಬರೋ ಇಂಥಾ ಸನ್ನಿವೇಶಗಳು ನಮೆಗೆಲ್ಲಾ ಮಜಾ ಕೊಟ್ಟು ಇಂಥಾ ಚಿತ್ರಗಳು ನೂರು ಇನ್ನೂರು ದಿನಾ ಓಡೋದಿಲ್ವಾ? ಹಾಗಿರಬೇಕು ನೋಡಿ ಬದುಕು ಅಂದ್ರೆ - ಅದನ್ನ ಬಿಟ್ಟು ಪ್ರತಿಯೊಂದಕ್ಕೂ ಕಾಯಿ ಅಂತ ಯಾರೋ ಒಂದು ಗೆರೆ ಎಳೆದು ಹೋದ ಹಾಗಿದೆ ಅನ್ಸುತ್ತೇ ಎಷ್ಟೋ ಸರ್ತಿ. It is not fair, if I have to wait, I will lose weight ಅಂತಾ ಎಷ್ಟ್ ಕೂಗಿದ್ರೂ ಯಾರೂ ಕೇಳೋದಿಲ್ಲ - ಎಲ್ಲಾ ಬಿಡಿ ನಾವು ಮಾಡೋ ಚಾಟ್ ವಿಂಡೋಗಳಲ್ಲೂ brb ಅಂಥಾ ಹೋದೋರು ಎಷ್ಟೋ ಸರ್ತಿ ಹಿಂತಿರುಗಿ ಬರೋದೇ ಇಲ್ಲಾ. ಹೋಗ್ತೀವಿ ಅಂತ ಹೇಳಿ ಹೋದ್ರೆ ಅವರಪ್ಪನ್ ಮನೆ ಗಂಟೇನು ಖರ್ಚಾಗುತ್ತೇ? ಇನ್ನೇನು ಬಂದೆ ಅಂಥ ಹೇಳೀ ಒಂದ್ ರೀತಿ ಬ್ರಹ್ಮಶೌಚಕ್ಕೆ ಹೋದ ಹಾಗೆ ಹೋಗೋರನ್ನ ನಾನು ಕೂತು ಕಾಯೋದೇ ಬಂತು, ಅವರು ಬರೋ ಹೊತ್ತಿಗೆ ಒಂದೆರಡು ಕೇಜಿ ತೂಕ ಕಡಿಮೆ ಆಗೋದಿರಲಿ, ಒಂದೆರಡು ತಿಂಗಳ ವಯಸ್ಸೂ ಹೆಚ್ಚಾಗಿ ಹೋಗಿರುತ್ತೆ!

ನೀವೂ ಎಲ್ಲಾ ಕಡೆ ಕಾಯ್‌ತೀರಾ? ನಾನಂತೂ ಎಲ್ಲಾ ಕಡೆ ಕಾಯ್ತೀನಿ - ಸೋಮವಾರ ಬೆಳಿಗೆ ಆರಂಭವಾಗುವ ಟ್ರಾಫಿಕ್ ಲೈಟ್‌ಗಳಿಂದ ಹಿಡಿದು ಬದುಕು ಹೀಗಾಗುತ್ತೇ ಹಾಗಾಗುತ್ತೆ ಅಂತ ದೊಡ್ಡ ದೊಡ್ಡ ಯೋಚ್ನೆಗಳನ್ನೆಲ್ಲ ತಲೆ ತುಂಬ ಹೊತ್ತ್‌ಕೊಂಡು, ಕಣ್ಣಲ್ಲಿ ಬಣ್ಣವನ್ನು ತುಂಬಿಕೊಂಡು ಯಾವುಯಾವುದಕ್ಕೋ ಕಾಯ್ತೀನಿ. ಪ್ರತಿಯೊಂದು ಕಾಯುವಿಕೆಯೂ ಒಂದ್ ರೀತಿ ರೊಟ್ಟಿ ಹೆಂಚಿನ ಮೇಲೆ ಕಾದ ಅನುಭವಕ್ಕೆ ಸರಿಸಮವಾಗಿ (ಹೆಚ್ಚೂ ಕಡಿಮೆ) ಇದ್ರೂ, ಕಾಯೋದೇ ಕೈಲಾಸ ಅಂತ ಯಾವತ್ತೂ ಅನ್ಸಿದ್ದೇ ಇಲ್ಲ. ಕಾಯೋದು ಕೈಲಾಸ ಆದ್ರೆ, ಆ ದೇವ್ರಾಣೆ ನನಗೆ ಅದು ಬ್ಯಾಡಪ್ಪಾ, ಕೈಲಾಸವಾಸಿಗಳಾದ ಮೇಲೂ ಇನ್ನೂ ಕಾಯೋದೂ ಅಂದ್ರೆ ಯಾವುದಕ್ಕಾಗಿ, ಮುಂದಿನ ಜನ್ಮಾಕ್ಕಾಗಿಯೇ? ಅಥವಾ ಇಂಥಹ ಹಲವು ಮಿಲಿಯನ್ ಜನ್ಮಗಳ ನಂತರ ಬರೋ ಮೋಕ್ಷಕ್ಕಾಗಿಯೇ? ನೀವೇ ಹೇಳಿ ಇವತ್ತೂ ನಾಳೆ ಆಗದಿರೋ ಹೋಗದಿರೋದು ಮೋಕ್ಷ ಯಾವನಿಗ್ ಬೇಕಾಗಿದೆ? ಅಂಥ ಮೋಕ್ಷ ನಿಮಗೇ ಇರಲಿ, ಅಲ್ಲೀ ತನಕ 'ನಾರಾಯಣ ನಾರಾಯಣ' ಎಂದು ಜಪತಪ ಮಾಡ್‌ಕೊಂಡ್ ಕಾಯ್ತಾನೇ ಇರಿ, ನನಗಂತೂ ಬೇಕಾಗಿಲ್ಲಪ್ಪ!

***

ಕಾಯೋದು ನನ್ ಹಣೇಬರಹ, ಅದಕ್ಕೇನು ಮಾಡೋಕಾಗಲ್ಲ ಅಂತ ಈಗತಾನೇ ಯಾರೋ ಒಬ್ರು ಹೇಳಿದ್ರು. ಸರಿ, ನನ್ನ್ ಜೊತೆ ಲೋಕಾನೇ ಕಾಯೋ ಹಾಗಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು, ಎಲ್ಲಾ ಕಡೇ ನಾನೊಬ್ಬನೇ ಕಾಯ್‌ಬೇಕಾ...ನನ್ ಹಾಗೆ ಈ ಕಾಯೋದು ಅನ್ನೋದು ಎಲ್ಲರಿಗೂ ಕಾಮನ್ ಆಗಿದ್ರೆ, ಅದನ್ನ ಯಾಕೆ ಬ್ರಾಕೆಟ್ ಇಂದ ಹೊರಗೆ ತೆಗೀಬಾರ್ದು? ಪ್ರತಿಯೊಬ್ಬರಿಗೂ ಅಪ್ಲೈ ಮಾಡೋ ಬದ್ಲು ಒಂದು ದೊಡ್ಡ ವೇರಿಯಬಲ್ ಅನ್ನು ಎಲ್ಲರಿಗೂ ಯಾಕೆ ಸೃಷ್ಟಿಸಬಾರ್ದು? ಇಷ್ಟು ಹೇಳಿ ಅಲ್ಲಲ್ಲ ಬರೆಯೋ ಹೊತ್ನಲ್ಲಿ 'ಕಾಯ್ದೇ ಕೆನೆ ಕಟ್ಟೋದಿಲ್ಲಾ...' ಅಂತ ಅಡುಗೆಮನೆಯಿಂದ ಸ್ವರ ಬರ್ತಾ ಇದೆ, ಸ್ವಲ್ಪ ನೋಡ್ತೀನಿ ನನಗೋಸ್ಕರ ಏನ್ ಕಾದಿದೆಯೋ ಎಂದು!

***

ಹೀಗೆ ಹೋಗಿ ಹಾಗೆ ಎಮ್. ಎಸ್. ಮಾಡಿ ಬಂದೆ, ಅಥವಾ ಎಚ್.ಒನ್. ವೀಸಾದಲ್ಲಿ ಸಿಕ್ಕಿರೋ ಕೆಲ್ಸಾ ಕೇವಲ ಆರೇ ವರ್ಷಾ ಅಂತ ಹೇಳಿ ಬಂದಿರೋ ನನ್ನಂತಹವರನ್ನ ಎಷ್ಟು ಜನ ಎಲ್ಲೆಲ್ಲಿ ಕಾಯ್ತಾ ಇದ್ದಾರೋ, ಅವರಿಗೆಲ್ಲ ನನ್ನಂಥವರು brb ಅಂತ ಹೇಳಿ ಎಷ್ಟು ವರ್ಷಗಳಾಯ್ತೋ ಅಂತ ಅನ್ನಿಸ್ತು ಈ ಲೇಖನ ಮುಗಿಸಿ ಪೋಸ್ಟ್ ಮಾಡೋದಕ್ಕೆ ಕಾಯೋದೊರಳಗೆ!

No comments: