Sunday, November 05, 2006

ವೀಸಾ ವಿವಾಹ

ಕನ್ನಡ ಚಿತ್ರಗಳು ನಮ್ಮಲ್ಲಿ ಬರೋದೇ ವೀಕೆಂಡ್‌ನಲ್ಲಿ, 'ತುಳಸೀ ಕಾರ್ತೀಕದ ದಿನ ಸಿನಿಮಾ ನೋಡ್ತೀರೇನ್ರೋ?' ಅಂತ ಅಜ್ಜಿ ಎಲ್ಲಿ ಬೈತಾರೇನೋ ಅನ್ನೋ ಭಯವನ್ನು ಮನದಲ್ಲಿ ಮೂಡಿಸಿಕೊಂಡು ಸಿನಿಮಾದ ಹಾದಿ ಹಿಡಿದರೆ ನಮ್ಮೂರುಗಳಲ್ಲಿ ರಸ್ತೆಯ ಉದ್ದಗಲಕ್ಕೆ ತಮ್ಮನ್ನು ತಾವು ತೆರೆದುಕೊಂಡ ನಾನಾ ಮೋಟಾರುವಾಹನಗಳ ದೆಸೆಯಿಂದ ಇವತ್ತೂ ಲೇಟೇ, ಅದೂ ಒಂದಲ್ಲ ಎರಡಲ್ಲ ಮೂವತ್ತು ನಿಮಿಷ! ಎರಡೂ ಕಾಲು ಘಂಟೆ ಸಿನಿಮಾದಲ್ಲಿ ಮೂವತ್ತು ನಿಮಿಷ ತಡವಾಗಿ ಹೋದ್ರೆ ಅದರಲ್ಲೇನು ಉಳಿದಿರೋದು ಅನ್ನೋ ಮಾತೇ ಬರೋಲ್ಲ, ಯಾಕೆಂದ್ರೆ ಇಲ್ಲಿ ಕನಿಷ್ಠ ಪಕ್ಷ ಒಂದು ಹದಿನೈದು ನಿಮಿಷವಾದ್ರೂ ತಡವಾಗಿ ಸಿನಿಮಾ ಆರಂಭವಾಗಿ ಆಯೋಜಕರು ತಡವಾಗಿ ಬರುವವರ ಸಹಾಯಕ್ಕೆ ಬರುತ್ತಾರೆ.

ಮೂವೀಸಿಟಿಯಲ್ಲಿ ಮಧ್ಯೆ ತೂತುಬಿದ್ದ ಬೆಳ್ಳಿ ತೆರೆಗೆ ಒಂದುಕಡೆ ತೇಪೆ ಹಚ್ಚಿದ್ದು ಕಂಡಕೂಡಲೇ ಇದೇನಪ್ಪಾ ನಮ್ಮೂರಿನ ಟೆಂಟ್ ಸಿನಿಮಾಗಳ ಪರದೆಯೇ ಇದಕ್ಕಿಂತ ಚೆನ್ನಾಗಿತ್ತಲ್ಲಾ! ಅನ್ನಿಸಿದ್ದೇನೋ ನಿಜ, ಅದರಲ್ಲೂ ನಾಯಕ-ನಾಯಕಿ ಹಾಗೂ ಚಿತ್ರದಲ್ಲಿ ಹೆಚ್ಚಾಗಿ ಪಾತ್ರವಹಿಸಿದವರೆಲ್ಲರೂ ತೊದಲು ತೊದಲು ಕನ್ನಡವನ್ನು, ಅದರಲ್ಲೂ ಶುದ್ಧ ಕನ್ನಡವನ್ನು ಹಾಸ್ಯಾಸ್ಪದವಾಗುವಷ್ಟರ ಮಟ್ಟಿಗೆ, ಉಚ್ಛಾರಮಾಡಿದಾಗಲಂತೂ ತಮಿಳು ಸಿನಿಮಾಗಳಲ್ಲಿ ನಡುನಡುವೆ ಕನ್ನಡ ಸಂಭಾಷಣೆಗಳನ್ನು ತೋರಿಸಿದ್ದಕ್ಕಿಂತ ಕಟುವಾಗಿ ಕಂಡುಬಂತು. ಉಳಿದವರ ನಿರೀಕ್ಷೆಗಳು ಏನೇನಿದ್ದವೋ ನನಗಂತೂ ಒಂದೇ ಸಮನೆ ನಿರಾಶೆಯಾಗತೊಡಗಿತು. ಆದರೆ ಮಧ್ಯಂತರದ ನಂತರ ಚಿತ್ರದಲ್ಲಿ ಆಸಕ್ತಿ ಹಾಗೂ ಅಭಿಮಾನ ಮೂಡಿಬರುವಂತೆ ಮಾಡಿದವರು ಡಾ. ರಾಘವರೆಡ್ಡಿ.

***

ನಮ್ಮ "ಘಮಘಮ" ವಿಶ್ವೇಶ್ ಅವರದ್ದಾಗಲೀ, ರಾಘವರೆಡ್ಡಿ ಅವರದ್ದಾಗಲೀ ಇಬ್ಬರದೂ ಒಂದೇ ರೀತಿಯ ಹಂಬಲ, ತಮ್ಮ ಸುತ್ತಮುತ್ತಲಿನಲ್ಲಿ ಕನ್ನಡವನ್ನು ಇವರುಗಳು ಹೋಗಿ ಬಂದಲ್ಲೆಲ್ಲ ಸೃಷ್ಟಿಸಿಕೊಳ್ಳಬಲ್ಲರು. ವಿಶ್ವೇಶ್ ಸಂಗೀತವನ್ನು ಅಭ್ಯಾಸಮಾಡಿ ಆಲ್ಬಮ್‌ಗಳನ್ನು ಮಾಡಿಕೊಳ್ಳಲು ತಮ್ಮ ಮನೆಯಲ್ಲೇ ರೆಕಾರ್ಡಿಂಗ್ ಸ್ಟೂಡಿಯೋ ಸ್ಥಾಪಿಸಿಕೊಂಡಿದ್ದರೆ, ರಾಘವ ಅವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮನೆಯಲ್ಲೇ ಒಂದು ಚಿಕ್ಕ ಮೂವಿ ಸ್ಟುಡಿಯೋವನ್ನು ಕಂಡುಕೊಂಡವರು. ಮಧ್ಯಂತರದಲ್ಲಿ ರಾಘವ ಅವರನ್ನು ಪರಿಚಯಿಸಿದ ಮೋಹನ್ - 'ಈಗ ಈ ಚಿತ್ರವನ್ನು ನಿರ್ಮಿಸಿದ ರಾಘವ ಅವರಿಂದ ಒಂದೆರೆಡು ಮಾತು...' ಎಂದು ಪೀಠಿಕೆ ಹಾಕಿಕೊಟ್ಟದ್ದೇ ತಡ ಬಹಳ ಉತ್ಸಾಹದಲ್ಲಿ ರಾಘವ ಅವರು ತಮ್ಮನ್ನು ತಾವು ಪರಿಚಯಿಸಿಕೊಂಡು ಎಲ್ಲರಿಗೂ ಅಪ್ತರಾಗಿ ಹೋದರು. ಅವರದೇ ಮಾತುಗಳಲ್ಲಿ ಈ ಚಿತ್ರವನ್ನು ಯಾವುದೇ ಫಿಲ್ಮ್ ರೋಲ್‌ಗಳಿಲ್ಲದೇ ಸಂಪೂರ್ಣವಾಗಿ ವಿದ್ಯುನ್ಮಾನವಾಗಿ ಮೂರು ವರ್ಷಗಳಲ್ಲಿ ತಯಾರಿಸಿದ್ದು, ಸುಮಾರು ೮೦ ಸಾವಿರ ಡಾಲರ್‌ಗಳನ್ನು ವ್ಯಯಿಸಿ ಕೇವಲ್ ವೀಕೆಂಡ್‌ನಲ್ಲಿ ಮಾತ್ರ ಈ ಚಿತ್ರವನ್ನು ನಿರ್ಮಿಸಲು ದುಡಿದದ್ದು, ಚಿತ್ರಕ್ಕೆ ಬೇಕಾದ ನಟ-ನಟಿಯರನ್ನು ಹೆಕ್ಕಿ ಅವರಿಗೆಲ್ಲ ಕನ್ನಡವನ್ನು ಕಲಿಸಿದ್ದು ಮುಂತಾದ ವಿಷಯಗಳನ್ನು ಭಾವುಕವಾಗಿ ಹಂಚಿಕೊಂಡರು. ಕ್ಯಾಲಿಫೋರ್ನಿಯಾದಲ್ಲಿ ಅದೆಷ್ಟೇ ಜನರು ಕನ್ನಡಿಗರಿದ್ದರೂ ಯಾರೂ ಸಹಾಯಕ್ಕೆ ಬರದಿರುವ ಸ್ಥಿತಿಯನ್ನು ಅವರು ವಿವರಿಸಿದಾಗ 'ಇಲ್ಲಿ ನ್ಯೂ ಜೆರ್ಸಿಯಲ್ಲಿ ಈ ಸಿನಿಮಾವನ್ನು ಮಾಡಿದ್ದರೆ ನಾವು ಸಹಾಯ ಮಾಡುತ್ತಿದ್ದೆವು...' ಎಂದು ಕೆಲವರು ಅಂದರೆ 'ಎಲ್ಲಾ ಕಡೆ ಅದೇ ಪರಿಸ್ಥಿತಿ, ಮೂರುವರ್ಷಗಳ ಈ ಪ್ರಾಜೆಕ್ಟಿನಲ್ಲಿ ಪ್ರತೀ ವೀಕೆಂಡ್‌ನಲ್ಲೂ ತಮ್ಮ ಸಮಯವನ್ನು ಮೀಸಲಾಗಿಡುವುದಕ್ಕೆ ಇಲ್ಲೂ ಹೆಚ್ಚು ಜನರಿಗೆ ಆಗೋದಿಲ್ಲ...' ಎಂದು ಕೆಲವರು ತಿದ್ದಿ ಹೇಳಿದರು.

ರಾಘವ ಅವರು ತಮ್ಮನ್ನು ಪರಿಚಯಿಸಿಕೊಂಡ ಹಾಗೆ ಅವರ ಕಾವ್ಯನಾಮ 'ಕನ್ನಡದಾಸ'. ಈ ಹೆಸರಿಗೆ ತಕ್ಕಂತೆ ನಿಜವಾಗಿಯೂ ಅವರು ಕನ್ನಡದಾಸರೇ. ಚಿತ್ರಮಂದಿರದಲ್ಲಿ ಪ್ರೇಕ್ಷರಿಗೆ 'ಈ ಚಿತ್ರದ ಮುಂದಿನ ಭಾಗ "ಅಮೇರಿಕಾ ಅನುಬಂಧ"ವಾಗಿ ಮುಂದುವರೆಸುತ್ತಿದ್ದೇನೆ...' ಎಂದು ಮಹಾಉತ್ಸಾಹದಲ್ಲಿ ತಮ್ಮನ್ನು ತಾವು ತೆರೆದುಕೊಂಡ ಅವರು 'ನಿಮ್ಮಲ್ಲಿ ಯಾರಾದರೂ ಸಹಾಯ ಮಾಡುವವರಿದ್ದರೆ ದಯವಿಟ್ಟು ಹಾಗೆ ಮಾಡಿ, ಡಬ್ಬಿಂಗ್ ಮಾಡುವಲ್ಲಿ, ಚಿತ್ರಕಥೆಯನ್ನು ಅಳವಡಿಸಿಕೊಳ್ಳುವಲ್ಲಿ ಯಾವುದೇ ರೀತಿಯ ಸಹಾಯಗಳಿಗೂ ನಾನು ಸಿದ್ಧ, ನಿಮಗೇ ಈ ಚಿತ್ರದ ಹಾರ್ಡ್‌ಡ್ರೈವ್ ಕಳಿಸುತ್ತೇನೆ ಬೇಕಾದರೆ' ಎಂದು ವಿನಯಪೂರ್ವಕವಾಗಿ ಮನವಿಮಾಡಿಕೊಂಡರು. ಚಿತ್ರವನ್ನು ತಯಾರಿಸುವಲ್ಲಿ ತಾವು ಅದರ ಉದ್ದಗಲಕ್ಕೂ ಅನುಭವಿಸಿದ ತೊಂದರೆಗಳನ್ನು ಹಂಚಿಕೊಂಡಿದ್ದನ್ನು ನೋಡಿ ನಮಗಂತೂ ಬಹಳ ಸಂತೋಷವಾಯಿತು. ಈ ರೀತಿಯೂ ಮಾಡುವವರಿದ್ದಾರೆ, ತಮ್ಮ ಅಭಿಮಾನವನ್ನು ತಮ್ಮ ಹವ್ಯಾಸವನ್ನು ಮಾತಿನಿಂದ ಕೃತಿಗೆ ತರುವವರಿದ್ದಾರೆ ಎನ್ನುವ ವಿಷಯವನ್ನು ಪ್ರೇಕ್ಷಕರು ಬಹಳ ಸಂತೋಷದಿಂದ ಸ್ವೀಕರಿಸಿ ರಾಘವ ಅವರಿಗೆ ಚಪ್ಪಾಳೆಗಳಿಂದ ಮೆಚ್ಚುಗೆ ಸೂಚಿಸಿದರು, ಈ ಹಿನ್ನೆಲೆ ಮೊದಲೇ ತಿಳಿದ್ದಿದ್ದರೆ ಎಂದುಕೊಂಡವರಲ್ಲಿ ನಾನೂ ಒಬ್ಬ - ಆಗಿನಿಂದಲೇ ಚಿತ್ರವನ್ನು ಮತ್ತೊಂದು ಕೋನದಲ್ಲಿ ನಾನು ನೋಡತೊಡಗಿದ್ದು. ಒಟ್ಟಿನಲ್ಲಿ ರಾಘವ ಅವರ ಸಾಧನೆ ಅಮೋಘವಾದದ್ದು, ಇಂತಹ ಸಾಧನೆಯನ್ನು ಪುಲ್‌ಟೈಮ್ ಜೀವಾಣುಶಾಸ್ತ್ರ ಸಂಶೋಧನೆ ಮಾಡಿಕೊಂಡು ಕೇವಲ ವೀಕೆಂಡ್‌ನಲ್ಲಿ ಮಾಡುವುದು ಸಾಮಾನ್ಯ ಕೆಲಸವೇನಲ್ಲ, ರಾಘವರಂತಹವರಿಗೆ ಶಹಬ್ಬಾಸ್ ಗಿರಿ ಕೊಡಲೇಬೇಕು.

***

ಕೋಲಾರದ ಚಿಂತಾಮಣಿಯ ಹುಡುಗ ಕೃಷ್ಣಾರೆಡ್ಡಿ ಅರಿಜೋನಾದ ಜೆ.ಎಫ್.ಕೆ ವಿಶ್ವವಿದ್ಯಾನಿಲಯಕ್ಕೆ ಪಿ.ಎಚ್‌ಡಿ. ಮಾಡಲೆಂದು ಬರುತ್ತಾನೆ, ಅವನ ಮೇಷ್ಟ್ರು ಡಾ.ಬ್ಲ್ಯಾಕ್ (ಕರಿಯಪ್ಪ) ಅವರ ಜೊತೆ ಬೋಧನೆಯಲ್ಲಿ ಸಹಾಯಕನಾಗಿ ಸೇರಿಕೊಂಡನಂತರ ಹಲವಾರು ಶಿಷ್ಯರಲ್ಲಿ ದಿವ್ಯಪ್ರಭಾ ಪಟೇಲ್ ಎಂಬ ಹುಡುಗಿಯ ಜೊತೆ ವಿಶೇಷವಾಗಿ ಸ್ನೇಹ ಬೆಳೆಯುತ್ತದೆ. ಪರೀಕ್ಷೆಯಲ್ಲಿ ಆಕೆಗೆ 'ಬಿ' ಗ್ರೇಡ್ ಗಳಿಸಿಕೊಡಲೆಂದು ರೆಡ್ಡಿ ಐದು ಕೃಪಾಂಕಗಳನ್ನು ನೀಡಿದ್ದು ಆತನ ಮೇಷ್ಟ್ರಿಗೆ ಸರಿಯೆಂದು ಕಂಡುಬರದೇ ತನ್ನ ಕೆಲಸವನ್ನು ಕಳೆದುಕೊಳ್ಳುವಂತಾಗುತ್ತದೆ, ತನ್ನ ವೀಸಾ ಸ್ಟೇಟಸ್ ಮೂರುತಿಂಗಳಿನಲ್ಲಿ ಮುಗಿದುಹೋಗುವುದರಿಂದ ಒಂದೇ ಭಾರತಕ್ಕೆ ಹೋಗಬೇಕು, ಅಥವಾ ಇಲ್ಲೇ ಯಾರನ್ನಾದರೂ ಅಮೇರಿಕನ್ ಪ್ರಜೆಯನ್ನು ವಿವಾಹವಾಗಬೇಕು ಎನ್ನುವ ಇಬ್ಬಂದಿಗೆ ನಾಯಕ ಬೀಳುತ್ತಾನೆ. ಒಬ್ಬಳು ಕಪ್ಪು ಹೆಂಗಸು, ಇನ್ನೊಬ್ಬಳು ಬಿಳಿಯ ಹುಡುಗಿ ಇವರೆನ್ನೆಲ್ಲ ಮದುವೆಯಾಗುವ ಪ್ರಸಂಗಗಳನ್ನು ಹುಟ್ಟುಹಾಕಿಕೊಂಡು ಅದರ ಹಿನ್ನೆಲೆಯಲ್ಲಿ ನಾಯಕ ದಿವ್ಯಾಳ ಸಲಹೆಯಂತೆ ಆಕೆಯನ್ನೇ ವಿವಾಹವಾಗುತ್ತಾನೆ. ವಿವಾಹವಾದರೂ ಆಕೆಯೊಡನೆ ದೈಹಿಕ ಸಂಬಂಧವನ್ನು ಮಾಡಬಾರದು, ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎನ್ನುವ ಅನೇಕ ಮಾನಸಿಕ ಬಂಧನಗಳಲ್ಲಿ ತೊಳಲಾಡುವುದೂ ಎನ್ನುವುದರಿಂದ ಹಿಡಿದು ಭಾರತದಲ್ಲಿ ಈಗಾಗಲೇ ತನ್ನ ಜೊತೆ ಮದುವೆ ನಿಶ್ಚಯವಾಗಿರುವ ಶೋಭಾಳನ್ನೂ ಕೈ ಬಿಡಬಾರದು ಎನ್ನುವ ನಿರ್ಧಾರಕ್ಕೆ ನಾಯಕಬರುತ್ತಾನೆ. ಒಂದು ಕಡೆ ತಾನು ಮದುವೆಯಾಗಬಾರದು ಎನ್ನುವ ಹಠದಲ್ಲಿರುವ ದಿವ್ಯಾ ಕೇವಲ ಉಪಕಾರ ಸ್ಮರಣೆಗೆ ರೆಡ್ಡಿಯನ್ನು ಮದುವೆಯಾದದ್ದೂ, ಮತ್ತೊಂದು ಕಡೆ ಶೋಭಾಳನ್ನು ಕೈಬಿಡಬಾರದು ಎನ್ನುವ ಗೊಂದಲವೂ, ಜೊತೆಯಲ್ಲಿ ಇಲ್ಲಿ ಡೆನ್ವರ್ ನಲ್ಲಿ ಕೆಲಸ ಮಾಡಿಕೊಂಡು ದೂರವಿರಬೇಕಾದ ಅನಿವಾರ್ಯತೆಯೂ ಇವುಗಳೆಲ್ಲ ಚಿತ್ರದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸುತ್ತವೆ. ರೆಡ್ಡಿ ಕೊನೆಯಲ್ಲಿ ಯಾರನ್ನು ಮದುವೆಯಾಗಿ ಮುಂದುವರೆಯುತ್ತಾನೆ, ದಿವ್ಯಾಳ ಅಣ್ಣ, ಅಮ್ಮ ಅವರ ಮದುವೆಗೆ ಸಮ್ಮತಿಸುತ್ತಾರೆಯೇ, ರೆಡ್ಡಿ ಗ್ರೀನ್‌ಕಾರ್ಡು ಪಡೆಯುವುದಕ್ಕೆ ಏನೇನು ಮಾಡಬೇಕಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ಖಂಡಿತವಾಗಿ ನೋಡಲೇಬೇಕು. ಅಮೆಚ್ಯೂರ್ ಆರ್ಟಿಸ್ಟ್‌ಗಳು ಮಾಡಿರುವ ಹೋಮ್‌ವಿಡಿಯೋ ಎಂದುಕೊಂಡು ಚಿತ್ರದಲ್ಲಿರುವ ನ್ಯೂನ್ಯತೆಗಳನ್ನೆಲ್ಲ ಬದಿಗೊತ್ತಿ ರಾಘವ ರೆಡ್ಡಿಯವರ ಸಾಧನೆಯನ್ನು ಕಣ್ಣಾರೆ ನೋಡಬೇಕು ಆಗಲೇ ನಿಮಗೆ ಒಂದು ಚಿತ್ರವನ್ನು ಮಾಡುವುದಕ್ಕೆ ಏನು ಪಾಡುಪಡಬೇಕಾಗುತ್ತದೆ ಎನ್ನುವುದು ಗೊತ್ತಾಗುತ್ತದೆ.

***

ರಾಘವ ಅವರ ಕನ್ನಡಾಭಿಮಾನ ಚಿತ್ರದುದ್ದಕ್ಕೂ ಧಾರಾಳವಾಗಿ ಹರಿದುಬಂದಿದೆ. ಚಿತ್ರದಲ್ಲಿ ಎಲ್ಲವೂ ಸಂಪೂರ್ಣವಾಗಿ ಕನ್ನಡಮಯ. ವಿಶ್ವವಿದ್ಯಾನಿಲಯದ ಪ್ರಾಂಗಣದಿಂದ ಹಿಡಿದು, ಮದುವೆ ಮಾಡಿಸುವ ಚರ್ಚಿನವರೆಗೆ, ದೊಡ್ಡ ಕೊಳ್ಳ (ಗ್ರ್ಯಾಂಡ್ ಕ್ಯಾನಿಯನ್)ದಿಂದ ಹಿಡಿದು, ಅರಿಜೋನಾದ ಫಾರ್ಮ್‌ಗಳವರೆಗೆ ಬರುವ ಪಾತ್ರಧಾರಿಗಳೆಲ್ಲ ಸಂಪೂರ್ಣ ಕನ್ನಡದಲ್ಲೇ ವ್ಯವಹರಿಸೋದು. ಚಿತ್ರದಲ್ಲಿ ಬರುವ ಅಮೇರಿಕದವರು, ರಷಿಯನ್ನರು, ಬ್ರೆಜಿಲಿಯನ್ನರು, ಈಜಿಪ್ಶ್ಯನ್ನರು, ಕರಿಯರು, ಬಿಳಿಯರು, ಭಾರತೀಯರು, ಎಲ್ಲರೂ ಶುದ್ಧಕನ್ನಡವನ್ನು ಮಾತನಾಡುವ ಪ್ರಯತ್ನ ಮಾಡಿಸಿರುವುದು ರಾಘವ ಅವರ ಹೆಗ್ಗಳಿಕೆ. ಆದಷ್ಟು ಪಾರಿಭಾಷಿಕ ಪದಗಳಿಗೆ ಕನ್ನಡದ ಪದವನ್ನು ಬಳಸಿರುವುದು ಒಮ್ಮೊಮ್ಮೆ ಹಾಸ್ಯಾಸ್ಪದವೆನಿಸಿದರೂ ರಾಘವ ಅವರ ನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಿದರೆ ಎಲ್ಲೂ ಅತಿಶಯವೆನಿಸೋದಿಲ್ಲ. ಚಿತ್ರದುದ್ದಕ್ಕೂ ರಾಜ್‌ಕುಮಾರ್ ನಟಿಸಿರುವ ಬಂಗಾರದ ಮನುಷ್ಯ, ಕಸ್ತೂರಿನಿವಾಸ ಮುಂತಾದ ಹಾಡಿನ ಹಿನ್ನೆಲೆಗಳನ್ನು ಬಹಳವಾಗಿ ಬಳಸಿಕೊಂಡು ಪಾತ್ರಗಳೂ ಈ ಹಾಡುಗಳ ಕೆಲವು ಪಂಕ್ತಿಗಳನ್ನು ಅನುಮೋದಿಸುವಂತೆ ಮಾಡಿರುವುದು ಹೆಗ್ಗಳಿಕೆ. ಶಂಕರ್‌ನಾಗ್ ಅವರ 'ಇದುಸಾಧ್ಯ' ಎನ್ನುವ ಚಲನಚಿತ್ರ ಕೇವಲ ೨೪ ಘಂಟೆಗಳಲ್ಲಿ ತಯಾರುಮಾಡಿದ ಮೊದಲ ಭಾರತೀಯ ಚಲನಚಿತ್ರ ಎನ್ನುವಂತೆ, ರಾಘವ ಅವರು ಏಕವ್ಯಕ್ತಿ ಸಂಪಾದನೆಯಲ್ಲಿ ಸಂಪೂರ್ಣವಾಗಿ ವೀಕೆಂಡ್‌ನಲ್ಲಿ ತೆಗೆದಿರುವ ಮೂರುವರ್ಷಗಳ ಪ್ರಾಜೆಕ್ಟ್ 'ವೀಸಾವಿವಾಹ' ಎನ್ನಬಹುದು.

ಈ ಚಿತ್ರದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಮೆಚ್ಚಿಗೆಯಾದದ್ದು ಪಾತ್ರಗಳ ಅಮೇರಿಕನ್ ನಿಲುವು. ಚಿಕ್ಕ ಹಾಗೂ ಚೊಕ್ಕವಾಗಿ ತಾವು ಹೇಳಬೇಕಾದುದನ್ನು ಹೇಳಿ ತಮ್ಮನ್ನು ಕಟ್ಟಿಕೊಳ್ಳುವ ಪಾತ್ರಗಳ ಮನಸ್ಸಿನ್ನಲ್ಲಿ ಅಮೇರಿಕನ್ ಪ್ರಭಾವ ಧಾರಾಳವಾಗಿ ಹೊರಹೊಮ್ಮಿದೆ - 'ಅದು ನನಗೆ ಇಷ್ಟವಿಲ್ಲ' ಎನ್ನುವ ಒಂದೇ ವಾಕ್ಯ ನಾಯಕಿಯ ಪಾತ್ರದಲ್ಲಿ ಬಹಳಷ್ಟು ಗಂಭೀರವಾಗಿ ಹೊರಹೊಮ್ಮಿದೆ. ನಾನು ಮದುವೆಯಾಗೋದಿಲ್ಲ ಎನ್ನುವ ಮಗಳನ್ನು ಅಮ್ಮ, ಅತ್ತಿಗೆ, ಅಣ್ಣಂದಿರು ಅಮೇರಿಕನ್ ಸಂಪ್ರದಾಯದಲ್ಲಿ ಉಪಚರಿಸುವುದೂ, ನಾಯಕಿ ತನ್ನ ವ್ಯಕ್ತಿತ್ವವನ್ನು ಎಲ್ಲಿ ಹೋದರೂ ಕಾಪಾಡಿಕೊಳ್ಳುವುದೂ ರಾಘವ ಅವರು ಬಹಳ ಚೆನ್ನಾಗಿ ಮೂಡಿಸಿದ್ದಾರೆ. ಇಮಿಗ್ರೇಷನ್ ಅಧಿಕಾರಿ ಸಂದರ್ಶನದಲ್ಲಿ ಹದ್ದುಮೀರಿ ವರ್ತಿಸುವುದನ್ನು ನಾಯಕಿಯ ಪಾತ್ರ ಅಮೇರಿಕನ್ ಮಹಿಳೆಯಾಗಿ ಖಂಡಿಸುತ್ತದೆ. 'ನಿನಗೆ ಎಲ್ಲರೂ ಬುದ್ದೂ ಎಂದರೆ, ನಿನ್ನನ್ನು ಎಲ್ಲರೂ ಅವಮಾನಿತನನ್ನಾಗಿ ಮಾಡಿದರೆ ಅದನ್ನು ನೋಡಿ ನೀನೇಕೆ ಸಹಿಸಿಕೊಳ್ಳಬೇಕು?' ಎನ್ನುವ ಮಾತಿಗೆ ನಾಯಕ 'ನನಗೆ ನಾನೇ ಹಾಗಂದುಕೊಳ್ಳುತ್ತೇನಲ್ಲ!' ಎಂದು ಹಾಸ್ಯವಾಗಿ ತೇಲಿಸಿಬಿಡುತ್ತಾನೆ. ಭಾರತೀಯ ಹಿನ್ನೆಲೆಯಲ್ಲಿ ಯೋಚಿಸುವ ನಾಯಕ, ಅಮೇರಿಕನ್ ಹಿನ್ನೆಲೆಯಲ್ಲಿ ಯೋಚಿಸುವ ನಾಯಕಿ, ಹಾಗೂ ಹಲವಾರು ಪಾತ್ರಗಳು ಬಹಳ ಸರಳವಾಗಿ ಬಿಂಬಿತವಾಗಿವೆ, ಈ ಪಾತ್ರಗಳ ಮಾನಸಿಕ ವ್ಯಾಪಾರ ಎಲ್ಲಿಯೂ ಅತಿ ಎನ್ನಿಸುವುದಿಲ್ಲ. ಹೀಗೆ ರಾಘವ ಅವರು ಪ್ರತಿಯೊಂದು ಪಾತ್ರಗಳಿಗೂ ಒಂದು ಸೈದ್ಧಾಂತಿಕ ನೆಲೆಯನ್ನು ಒದಗಿಸುವುದರ ಜೊತೆಗೆ ಅವುಗಳನ್ನು ಇದ್ದಹಾಗೇ ತೋರಿಸುವುದಕ್ಕೆ ಮುತುವರ್ಜಿಯನ್ನೂ ವಹಿಸಿದ್ದಾರೆ.

***

ರಾಘವ ಅವರ ಸಾಧನೆ ನಿಜವಾಗಿಯೂ ಶ್ಲಾಘನೀಯವಾದುದು. ಅಲ್ಲಲ್ಲಿ ಬರುವ ಧ್ವನಿಮುದ್ರಣ ದೋಷಗಳನ್ನು ಅವರು ಮುಂಬರುವ ಚಿತ್ರಗಳಲ್ಲಿ ಖಂಡಿತವಾಗಿ ತಿದ್ದಿಕೊಳ್ಳಬಲ್ಲರು. ಛಾಯಾಗ್ರಾಹಕರಾಗಿ ವೃತ್ತಿಪರರ ಹತ್ತಿರಹತ್ತಿರ ಬಂದರೂ ಸಂಭಾಷಣೆಗಳನ್ನು ಬರೆದು ಒಪ್ಪಿಸುವಲ್ಲಿ ಅವರು ತಮ್ಮನ್ನು ತಾವು ಬಹಳಷ್ಟು ತೊಡಗಿಸಿಕೊಳ್ಳಬೇಕು. ಚಿತ್ರದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸಂಕಲನಕ್ಕೆ ಅವರು ಆಧ್ಯತೆಯನ್ನು ಕೊಡಬೇಕು, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಶೂಟ್ ಮಾಡಿರುವ ಸಿನಿಮಾವಾದ್ದಾರಿಂದ ಅವರು ದೃಶ್ಯಗಳನ್ನು ಸಂಕಲಿಸಿ ಸಹಜವಾಗಿ ಕಥೆಯ ಓಟವನ್ನು ನಿರ್ಮಿಸುವಲ್ಲಿ ಶ್ರಮಿಸಬೇಕು. ಸಂಭಾಷಣೆ ಪೂರ್ಣ ಕನ್ನಡಮಯವಾಗಿರುವುದು ರಾಘವ ಅವರನ್ನ ಬಲ್ಲವರಿಗೆ ಅತಿ ಎನ್ನಿಸುವುದಿಲ್ಲ, ಅವರ ಫೋನ್ ನಂಬರ್ ಅನ್ನು ಕೇಳಿದರೆ ಅವರು ಸಂಖ್ಯೆಗಳನ್ನು ಕನ್ನಡದಲ್ಲಿಯೇ ಹೇಳೋದು! ಮುಕ್ತ ಹಾಗೂ ಸ್ನೇಹಮಯರಾಗಿರುವ ರಾಘವ ಅವರೊಂದಿಗೆ ಬಹಳಷ್ಟು ಜನ ಸಹೃದಯರು ಕೈಗೂಡಿಸಿದರೆ ಅವರ ಮುಂದಿನ ಚಿತ್ರಗಳು ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದೇ ಪಡೆಯುತ್ತವೆ ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ. ಮುಂಬರುವ ದಿನಗಳಲ್ಲಿ 'ವೀಸಾವಿವಾಹ'ವನ್ನು ಕೆನಡಾ, ಸಿಂಗಪುರ, ಹಾಂಗ್‌ಕಾಂಗ್, ಭಾರತ ಮುಂತಾದ ದೇಶಗಳಲ್ಲಿ ಬಿಡುಗಡೆ ಮಾಡಲಿರುವ ರಾಘವ ಅವರಿಗೆ ಅಭಿನಂದನೆಗಳು ಹಾಗೂ ಅವರಿಗೆ ಯಶಸ್ಸು ಸಿಗಲಿ ಎನ್ನುವುದು ನನ್ನ ಹಾರೈಕೆ.

No comments: