Thursday, November 16, 2006

ಅಂಗವಿಕಲರು

ನಿನ್ನೆ ಆಫೀಸಿನಿಂದ ಮನೆಗೆ ಹೊರಡೋಣ ಎಂದು ಎಲಿವೇಟರ್‍ಗೆ ಹೋಗುತ್ತಿರುವಾಗ ಎಲಿವೇಟರ್ ಬಾಗಿಲ ಬಳಿ ಅತಿ ಸಣ್ಣದಾಗಿ ಬ್ರೈಲ್ ಲಿಪಿಯಲ್ಲಿ ಫ್ಲೋರ್ ನಂಬರ್ ಅನ್ನು ಕೊರೆದಿದ್ದುದು ಕಂಡು ಬಂತು - ಅಂಗವಿಕಲರಿಗೆ ಈ ದೇಶದಲ್ಲಿ ಬಹಳಷ್ಟು ಸವಲತ್ತುಗಳೇನೋ ಇವೆ ನಿಜ, ಆದರೆ ಒಬ್ಬ ಕುರುಡನಾದವನಿಗೆ ಈ ಬಾಗಿಲಿನ ಹತ್ತಿರವೇ ಇಂಥಾ ಸ್ಥಳಕ್ಕೆ ಬರಬೇಕೆಂದು ಹೇಗೆ ಗೊತ್ತಾಗುತ್ತದೆ? ಕಣ್ಣಿದ್ದವರು ಈ ಬ್ರೈಲ್ ಲಿಪಿಯಲ್ಲಿ ಬರೆದ ಫ್ಲೋರ್ ನಂಬರನ್ನು ಹುಡುಕಲೇ ಕಷ್ಟವಾಗುತಿರುವಾಗ ಇನ್ನು ಕಣ್ಣಿಲ್ಲದವರ ಕಥೆ ಏನಾಗಬೇಕು ಎಂದು ನಗುಬಂತು. ಹಾಗೇ ಪ್ರತಿಯೊಂದು ಕ್ಯೂಬಿಕಲ್ ನಂಬರ್ ಅನ್ನೂ, ಆಫೀಸ್ ನಂಬರ್ ಅನ್ನೂ ಬ್ರೈಲ್ ಲಿಪಿಯಲ್ಲಿ ತಿಳಿಸಿರುವುದೂ ಕಂಡು ಬಂತು. ಇಲ್ಲಿ ನಾನು ನೋಡಿದ ಹಾಗೆ ವೀಲ್ ಚೇರ್ ಬಳಸುವವರ ಸಂಖ್ಯೆ ಹೆಚ್ಚಿದೆಯೇ ವಿನಾ ನಮ್ಮೂರುಗಳಲ್ಲಿ ಕಂಡುಬರುವಂತೆ ಮೂಗರು, ಕಿವುಡರು, ಕುರುಡರು ಹೆಚ್ಚು ಸಂಖ್ಯೆಯಲ್ಲೇನು ಕಂಡು ಬರೋದಿಲ್ಲ.

ನನ್ನ ವಾರಿಗೆಯ ಲಿಂಗರಾಜ, ಮೂಕ - ಬಾಯಿ ಬಾರದವನು. ಅವನ ಅಪ್ಪ-ಅಮ್ಮ ಮಾತ್ರ ಅವನ ಅಂಕಿತ ನಾಮ ಲಿಂಗರಾಜ ಎಂದು ಕರೆಯುವುದನ್ನು ನೋಡಿದ್ದೇನೆಯೇ ಹೊರತು, ಮಿಕ್ಕೆಲ್ಲರೂ ರೂಢನಾಮವನ್ನೇ ಅದರಿಸಿ ಅವನನ್ನು 'ಮೂಕ' ಎಂದು ಕರೆಯುವವರೇ. ಬಹಳಷ್ಟು ಜನರು ಮೂಕರಾಗುವುದು ಅವರವರ ಧ್ವನಿ ಪೆಟ್ಟಿಗೆಯಲ್ಲಿನ ನ್ಯೂನತೆಗಿಂತಲೂ ಅವರ ಕಿವಿ ಸರಿಯಾಗಿ ಕೇಳದಿರುವುದರಿಂದ ಎಂದು ತಿಳಿದುಕೊಳ್ಳಲು ನನಗೆ ಬಹಳೇ ವರ್ಷಗಳು ಬೇಕಾಗಿದ್ದವು. ಭಾರತದಲ್ಲಿ ಈಗೆಲ್ಲ ಹೇಗಿದೆಯೋ ಗೊತ್ತಿಲ್ಲ, ಅಮೇರಿಕದಲ್ಲಂತೂ ಹುಟ್ಟಿದ ಮಕ್ಕಳನ್ನು ಕೆಲವೇ ದಿನ/ಘಂಟೆಗಳೊಳಗೆ ಮಗುವಿನ ಶ್ರವಣ ಶಕ್ತಿಯನ್ನು ಪರೀಕ್ಷಿಸೋದರಿಂದ ಮುಂದೆ ಅವರು ಮೂಕರಾಗಬಹುದಾದ ಸಾಧ್ಯತೆಯನ್ನು ನಿವಾರಿಸಲಾಗುತ್ತದೆ.

ಅಂಗವಿಕಲರಿಗೂ ಸಮಾನ ಸವಲತ್ತುಗಳು ಸಿಗಲಿ ಎಂದು ಬೇಡಲು, ಆಗ್ರಹಿಸಲು ಇಲ್ಲಿ ಹಲವಾರು ಸಂಘ-ಸಂಸ್ಥೆಗಳಿವೆ. ಮುಂದುವರೆದ ಸಮಾಜದ ಇತಿಹಾಸದ ಲಾ ಸೂಟ್‌ಗಳು ಮತ್ತೆ ಇನ್ಯಾವ ವಿಕಲಾಂಗರನ್ನು ತಿರಸ್ಕರಿಸದಂತೆ ನೋಡಿಕೊಳ್ಳುತ್ತವೆ. ಶೌಚಾಲಯದಿಂದ ಹಿಡಿದು ಸಾರ್ವಜನಿಕ ಬಸ್ಸುಗಳವರೆಗೆ, ಆಫೀಸು ಕಟ್ಟಡಗಳಿಂದ ಹಿಡಿದು ಪುಟ್‌ಪಾತ್‌ನಲ್ಲಿ ರಸ್ತೆ ದಾಟುವಂತೆ ಸಹಾಯ ಮಾಡುವ ದೀಪ ಹಾಗೂ ಶಬ್ದ ಸೂಚಕಗಳವರೆಗೆ ಕಾಣುವ ಬೇಕಾದಷ್ಟು ಸವಲತ್ತುಗಳನ್ನು ನೋಡಿ ನಮ್ಮ ದೇಶದಲ್ಲಿ ಅಂಗವಿಕಲರನ್ನು ಸಮಾಜ ಎಷ್ಟೊಂದು ಹಿಂದೆ ತಳ್ಳಿದೆ ಹಾಗೂ ನಿರ್ಲಕ್ಷಿಸಿದೆ ಎಂದು ಬೇಸರವಾಗುತ್ತದೆ. 'ಕುಂಟನಿಗೆ ಎಂಟು ಬುದ್ಧಿ...' ಎಂತಲೋ 'ಕುಂಟಾ ಕುಂಟ ಕುರುವತ್ತಿ, ರಂಟೆ ಹೊಡೆಯೋ ಬಸವಣ್ಣ' ಎಂದು ನಾವು ಅಣಗಿಸಿ, ಆಡಿದ್ದು ನೆನಪಿಗೆ ಬರುತ್ತದೆಯೇ ವಿನಾ ಕೈ ಕಾಲಿಲ್ಲದವರಿಗೆ ಆಧರಿಸಿದ್ದು ಎಲ್ಲೂ ನೆನಪಿಗೆ ಬರುವುದಿಲ್ಲ...ಧೃತರಾಷ್ಟ್ರನಿಂದ ಹಿಡಿದು ಲಿಂಗರಾಜನವರೆಗೆ ಅವರಿಗೆ ಬೇಕಾಗಿರದ ಸಹಾನುಭೂತಿ ಮಾತ್ರ ಧಾರಾಳವಾಗಿ ಸಿಕ್ಕುತ್ತದೆ. ಕೈ ಇಲ್ಲದವನು ಚೊಂಚ, ಕಾಲಿಲ್ಲದವನು ಕುಂಟ, ಕಣ್ಣಿಲ್ಲದವ ಕುರುಡ, ಕಿವಿ ಕೇಳದವನು ಕೆಪ್ಪ, ಮಾತು ಬಾರದವನು ಮೂಗನಾಗೇ ಬದುಕನ್ನು ಸವೆಸುತ್ತಾನೆಯೇ ಹೊರತು ಅವರ ನಿಜನಾಮವನ್ನೂ ಸಹ ಯಾರೂ ಕರೆದು ಗೌರವಿಸದಿರುವ ಹಾಗಿದ್ದುದು ನನ್ನ ನೆನಪಿನಲ್ಲಿದೆ.

ಅತ್ತಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ...ಎನ್ನುವ ಬಸವಣ್ಣನವರ ವಚನದ ಸಾಲುಗಳನ್ನು ಆದರಿಸಿ 'ಅಂಗವಿಕಲನಾಗುವಂತಾದರೆ ಅಮೇರಿಕದಲ್ಲೆ ಹುಟ್ಟುವಂತೆ ಮಾಡಯ್ಯ ತಂದೆ...' ಎಂದು ಯಾರು ಬೇಕದರೂ ಮೊರೆ ಇಡಬಹುದು. ನಿಜವಾಗಿ ಅಂಗವಿಕಲರಾದವರಿಗೆ ಪಾರ್ಕಿಂಗ್ ಸ್ಥಳದಲ್ಲಿ ಸಿಗುವ ಪ್ರಾಶಸ್ತ್ಯವನ್ನು ನೋಡಿ ಕೆಲವೊಮ್ಮೆ ನನಗೆ ಸಿಟ್ಟು ಬಂದಿದ್ದಿದೆ, ಆದರೆ ಅಂಗವಿಕಲರ ಕಷ್ಟವನ್ನು ನೋಡಿದಾಗ ನಿಜವಾಗಿಯೂ ಅವರಿಗೆ ಎಲ್ಲಕಡೆ ಪ್ರಾಶಸ್ತ್ಯ ಸಿಕ್ಕಬೇಕು ಎನ್ನೋದು ನಿಜ. ಆದರೆ ನನಗೆ ಸಿಟ್ಟು ಬರೋ ಹಾಗೆ ಅಂಗವಿಕಲರ ಸ್ಥಾನದಲ್ಲಿ ಒಬೆಸಿಟಿ ಇದ್ದವರು ಕಾಣಿಸಿಕೊಳ್ಳುವ ಪರಿಸ್ಥಿತಿ ಹುಟ್ಟಿದೆ. ವೈಯುಕ್ತಿಕ ಕಾರಣಗಳಿಗೋ ಅಥವಾ ಜೀವನಶೈಲಿಯ ಫಲವಾಗಿಯೋ ಅತಿಬೊಜ್ಜು ಬೆಳೆಸಿ ನಡೆದಾಡುವುದಕ್ಕೆ ಬಹಳ ತ್ರಾಸು ಪಡುವ ಅತಿ ತೂಕದ ಜನರು ಮೋಟಾರ್ ವೆಹಿಕಲ್ ಡಿಪಾರ್ಟ್‌ಮೆಂಟಿನಿಂದ ಅಂಗವಿಕಲರ ಪರವಾನಿಗೆಯನ್ನು ಪಡೆದು ಕೈ ಕಾಲು ಇಲ್ಲದವರ ಎಲ್ಲ ಸವಲತ್ತುಗಳನ್ನು ಬಾಚಿಕೊಂಡಂತೆ ಒಮ್ಮೆ ಕಂಡು ಬರುತ್ತದೆ. ಕೈ ಕಾಲು ಇಲ್ಲದವರದ್ದು ಒಂದು ರೀತಿಯ ಕಷ್ಟವಾದರೆ ಇವರದ್ದು ಇನ್ನೊಂದು ಥರ ಎಂದು ಮರುಕ ಹುಟ್ಟುತ್ತದೆ.

***

ಹೊಟ್ಟೆ ತುಂಬಿದ ದೇಶಗಳಲ್ಲಿ ಉಪವಾಸ ಸತ್ಯಾಗ್ರಹ ಎಂದೂ ಜನಪ್ರಿಯವಾಗೋದಿಲ್ಲ ಎಂದು ಎಲ್ಲಿಯೋ ಓದಿದ್ದೆ - ಇತ್ತೀಚೆಗೆ ಒಬೆಸಿಟಿಯ ಬಗ್ಗೆ ಓದಿ/ಕೇಳಿದ ಮೇಲೆ ಅದು ನಿಜವಿದ್ದಿರಬಹುದು ಎನ್ನಿಸುತ್ತಿದೆ.

1 comment:

Sushrutha Dodderi said...

ಮೊನ್ನೆ ಯಾವುದೋ ಚಾನಲ್ಲಿನಲ್ಲಿ ಕುರುಡರ ಕಷ್ಟಗಳನ್ನು ತೋರಿಸುತ್ತಿದ್ದರು. ಅವರು ಪ್ಲಾಸ್ಟಿಕ್ ಕುರ್ಚಿಗಳನ್ನು ಹೆಣೆದು ಜೀವನ ಸಾಗಿಸುವ ಶ್ರಮಿಕರು. ಅವರಲ್ಲೊಬ್ಬ ಹೇಳುತ್ತಿದ್ದ: 'ಒಂದು ಕುರ್ಚಿ ಹೆಣೆದಿದ್ದಕ್ಕೆ 80 ರುಪಾಯಿ ಕೊಡ್ತಾರೆ ಸಾರ್. ಪ್ಲಾಸ್ಟಿಕ್ ದಾರದ ಖರ್ಚೆಲ್ಲಾ ನಮ್ದೇ. ಪ್ಲಾಸ್ಟಿಕ್ಕಿನ ಬೆಲೆ ದಿನೇದಿನೇ ಹೆಚ್ಚಾಗ್ತಾ ಇದೆ; ನಮ್ಮ ಕೂಲಿ ಮಾತ್ರ ಇದ್ದಹಂಗೇ ಇದೆ. ನಾವು ಬಳ್ಳಾರಿಯ ಹತ್ತಿರದ ಹಳ್ಳಿಯೊಂದರಿಂದ ಬೆಂಗಳೂರಿಗೆ ಬರಬೇಕು. ಬಸ್ ಚಾರ್ಜು, ಅದು ಇದು ಅಂತ ಏನೂ ಉಳಿಯೊಲ್ಲ...' ಅಂತ ಹೇಳುತ್ತಾ ತನ್ನ ಕಪ್ಪು ಕನ್ನಡಕವನ್ನು ತೆಗೆದು ಕಣ್ಣೀರನ್ನು ಒರೆಸಿಕೊಂಡ.

ದೃಶ್ಯವನ್ನು ನೋಡಿ ನನ್ನ ಕಣ್ಣೂ ತುಂಬಿ ಬಂದವು. ನಿಮ್ಮ ಲೇಖನ ಓದಿದ ಮೇಲೆ ಹೇಳಿಕೊಳ್ಳಬೇಕೆನಿಸಿತು.