ಬಂದದ್ದೆಲ್ಲಾ ಬರಲಿ, ವೀಕೆಂಡ್‌ನಲ್ಲೇ ಬರಲಿ!
ಕೊನೇಪಕ್ಷ ನವೆಂಬರ್ ತಿಂಗಳು ಬಂತು ಈಗಾದರೂ ಪುರುಸೊತ್ತು ಮಾಡಿಕೊಂಡು ಕನ್ನಡವನ್ನು ಓದೋಣವೆಂದುಕೊಂಡರೆ ಟೈಮೇ ಸಿಗುತ್ತಿಲ್ಲ ಎನ್ನುವಂತಾಗಿದ್ದು ನನ್ನ ಪುಣ್ಯವೋ ಅಥವಾ ಕಾಕತಾಳೀಯವೋ ಯಾರಿಗೆ ಗೊತ್ತು ಅಂತ ಯೋಚಿಸ್ತಾ ಕೂತಿದ್ದೆ, ಸಡನ್ ಆಗಿ ನೆನಪಿಗೆ ಬಂತು, ನಮ್ಮ ರಾಜ್ಯದಲ್ಲಿ ಈ ತಿಂಗಳು ತುಂಬೆಲ್ಲಾ ಎಲ್ಲಾ ಕಡೆ ರಾಜ್ಯೋತ್ಸವ ಆಚರಿಸ್ತಾರೆ ಆದ್ದರಿಂದ ನನಗೂ ನಮ್ಮ ರಾಜ್ಯೋತ್ಸವ ಈ ವಾರಾಂತ್ಯದಲ್ಲೇ ಆಗಲೀ ಎಂದು ಕನ್ನಡ ರಾಜ್ಯೋತ್ಸವವನ್ನು ಅಮೇರಿಕನ್ ಮಯವಾಗಿ ಮಾಡಿಬಿಟ್ಟರೆ ಹೇಗೆ ಎಂದು ಯೋಚಿಸಿಕೊಂಡಾಗ ಒಮ್ಮೆ ನಗುಬಂತು. ಹೌದು ಮತ್ತೆ, ವಾರವಿಡೀ ತುಂಬಾ ವ್ಯಸ್ತರಾಗಿರೋ ನಮಗೆ ಆಗುಹೋಗೋ ಕೆಲಸಗಳೆಲ್ಲ ವೀಕೆಂಡ್‌ನಲ್ಲೇ ಬರಬೇಕಪ್ಪಾ, ವಾರದ ದಿನಗಳಲ್ಲಿ ಯಾವನಾದ್ರೂ ಮಹೂರ್ತ ನೋಡಿ ಮದುವೆ ಆಗ್ತಾನಾ ಈಗಿನ್ ಕಾಲದಲ್ಲಿ? ಹಾಗೇನಾದ್ರೂ ಆದ್ರೆ ಒಂದ್ ಲೆಕ್ಕಾ ಒಳ್ಳೇದೇ ಊಟಕ್ಕೆ ಜನ ಕಡಿಮೆ, ಖರ್ಚೂ ಕಡಿಮೆ. ಇದ್ದುದರಲ್ಲಿ ಯಾವುದು ಮಹಾಪಾಪ? ತಿಂಗಳು ತುಂಬೆಲ್ಲಾ ರಾಜ್ಯೋತ್ಸವ ಆಚರಿಸಿದೋ ಅಥವಾ ಮಾಡೋದೇನಿದ್ರೂ ವೀಕೆಂಡಿನಲ್ಲೇ ಇರಲಿ ಅನ್ನೋದೋ?
ಅದೂ ಸರಿ, ಈ ಐದು ದಿನಗಳ ಕೆಲಸ ನಡೆಯೋ ಒಂದು ವಾರಕ್ಕೆ ಎರಡು ದಿನಗಳ ಬ್ರೇಕ್ ಎಲ್ಲಿಯ ಸಮ? ಕೊನೇ ಪಕ್ಷ ಐದು ದಿನಕ್ಕೆ ಎನಿಲ್ಲಾ ಅಂದ್ರೂ ನಾಲ್ಕು ದಿನಾನಾದ್ರೂ ರಜೆ ಇರಬೇಕಪ್ಪಾ? ಹಂಗಾದ್ರೆ ಒಂದು ವಾರದಲ್ಲಿ ಒಂಭತ್ತು ದಿನಗಳು ಆದಹಾಗೆ ಆಗಲಿಲ್ವಾ? ಹೌದು ಮತ್ತೆ, ಒಂಭತ್ತು ದಿನಗಳು ಅಂದ್ರೆ ರವಿಯಿಂದ ಹಿಡಿದು ಶನಿಯವರೆಗೆ ಏಳು ಗ್ರಹಗಳಿಗೆ ಏಳುದಿನಗಳನ್ನು ಮೀಸಲಿಟ್ಟು ಒಂದು ವಾರ ಅಂತ ಕರೆದರೆ, ಇನ್ನುಳಿದ ಎರಡು ಗ್ರಹಗಳಿಗೇಕೆ ವಾರವಿಲ್ಲ? ಇದು ಅನ್ಯಾಯ, ಒಂಥರಾ ಡಿಸ್ಕ್ರಿಮಿನೇಷನ್ - ಸೈಜು ದೊಡ್ಡದಿದ್ದ ಗ್ರಹಗಳಿಗೆ ಒಂದು ರೀತಿ, ಸೂರ್ಯನಿಗೆ ಹತ್ತಿರವಿದ್ದ ಗ್ರಹಗಳಿಗೆ ಮತ್ತೊಂದು ರೀತಿ. ಇದು ಪಕ್ಕಾ ಅನ್ಯಾಯ, ಯಾವುದಾದ್ರೂ ಲಾಯರ್ ಕರೆದು ಸೂ ಮಾಡ್‌ಬೇಕು, ಕಂಪೆನ್ಸಟೋರಿ ಡ್ಯಾಮೇಜು, ಪ್ಯುನಿಟಿವ್ ಡ್ಯಾಮೇಜು ಎಲ್ಲಾ ಸೇರಿ ಸುಮಾರು ಒಂದು ನಾಲ್ಕು ನೂರು ಮಿಲಿಯನ್ ಡಾಲರ್‌ಗೆ ಸೂ ಮಾಡಿದ್ರೆ, ಅದರಲ್ಲಿ ಹತ್ತು ಪರ್ಸೆಂಟ್ ನಾನಿಟ್ಟುಕೊಂಡು ಇನ್ನು ಉಳಿದುದ್ದರಲ್ಲಿ ಅರ್ಧ ಬಾಚಿಕೊಂಡ ಲಾಯರ್‍ಗಳಿಗೆ ಗುಡ್‌ಬೈ ಹೇಳಿದ ಮೇಲೆ 'ಗ್ರಹಗಳ ಗ್ರಹಚಾರಕ್ಕೊಂದು ಫಂಡ್' ಎಂದು ಒಂದು ಚಾರಿಟೆಬಲ್ ಗ್ರೂಪ್ ಹುಟ್ಟಿಸಿದರೆ ಆಯಿತಪ್ಪಾ ಅದೇನು ಮಹಾ?
ಪಾಪ, ಆ ಪ್ಲುಟೋ ಗ್ರಹವನ್ನ ಗ್ರಹ ಅಂತಾನೇ ಕನ್ಸಿಡರ್ ಮಾಡಲ್ಲಾ ಅಂದರಂತೆ? ಛೇ, ಏನ್ ಟೈಮ್ ಬಂತಪ್ಪಾ, ನಮ್ ಕಾಲದಲ್ಲೇ ಎಷ್ಟೊಂದ್ ಚೆಂದಿತ್ತು, ನವಗ್ರಹಗಳು ಅಂತ ಪೂಜೆ ಮಾಡ್ತಿದ್ವಿ, ಪ್ಲುಟೋನೂ, ನೆಪ್ಚೂನೂ ಅಣ್ಣಾತಮ್ಮಾ ಇದ್ದಂಗೆ ಅಂತ ತಿಳಕೊಂಡು ನಮ್ ಪ್ರಪಂಚಕ್ಕೆ ನವಗ್ರಹ ಅಂತ ಹೇಳಿಕೊಂಡು ತಿರುಗುತಿದ್ವಿ, ಈಗ ನೋಡಿದ್ರೆ ನಮ್ ಪ್ರಪಂಚಕ್ಕೆ ಕೇವಲ ಎಂಟೇ ಎಂಟು ಗ್ರಹಗಳಂತೆ - ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ, ಗುರುಶುಕ್ರಶನಿಭ್ಯಶ್ಯ ರಾಹುವೇಕೇತುವೇ ನಮಃ - ಎಂದು ಹೇಳೋ ಮಂತ್ರದಲ್ಲಿ 'ರಾಹುವೇಕೇತುವೇ' ಅನ್ನೋದು ಪ್ಲುಟೋ ಜಾಗದಲ್ಲಿ ರಾಹು ಬಿಡ್ತೀರೋ ಕೇತು ಬಿಡ್ತೀರೋ ಅಂತ ಕೇಳಿದಂಗ್ ಆಗಲ್ವಾ? ನಾನು ಕೇಳಿದ ಮಟ್ಟಿಗೆ ಯಾವನಿಗಾದ್ರೂ ಗ್ರಹಗತಿಯಲ್ಲಿ ರಾಹು ಕೆಟ್ಟದಿದೆ ಅಂತ ಕೇಳಿದ್ದೀನಿಯೇ ವಿನಾ ಕೇತು ಕೆಟ್ಟದಿದೆ ಅಂತ ಎಲ್ಲೂ ಕೇಳಿಲ್ಲ, ಜೊತೆಗೆ ರಾಹುಕಾಲ ನಮಗ್ಯಾವತ್ತಿದ್ರೂ ಬೇಕು ಆದ್ರಿಂದ ಪ್ಲುಟೋಗೆ ಕೊಕ್ ಕೊಟ್ಟ್ ಹಾಗೆ ಕೇತುಗೆ ಕೊಟ್ರೆ ಹೆಂಗೆ ಅಂತ ಒಂದ್ಸರ್ತಿ ಯೋಚ್ನೆ ಬಂತು. ಆದ್ರೆ ಧರ್ಮರಾಯ ಅರ್ಜುನ, ಭೀಮರಂತ ಮಹಾ ಪರಾಕ್ರಮಿಗಳನ್ನೆಲ್ಲ ಬಿಟ್ಟು ನನಗೆ ಮಾದ್ರಿ ಮಗ ನಕುಲ ಬದುಕಿ ಬರಲಿ ಅಂತ ಆ ಮಾತನಾಡೋ ಸರೋವರದ ಹತ್ರ ಕೇಳಿರ್‌ಲಿಲ್ವೇ? ಹಂಗೆ ಕೇತುಗೆ ಏನೇನು ಲಾಬಿ ಇದೆಯೋ ಯಾರಿಗ್ ಗೊತ್ತು.
ನನ್ ಪ್ರಕಾರ ಎಂಟು ಗ್ರಹಗಳಿಗೆ ತಕ್ಕನಾಗಿ ಎಂಟು ವಾರದ ದಿನಗಳಿರಬೇಕು. ಅದ್ರಲ್ಲಿ ಐದು ದಿನ ಕೆಲ್ಸ ಇನ್ನು ಮೂರು ದಿನ ಖಾಲಿ ಇರಬೇಕು, ರಾವಣ ಅಷ್ಟ ದಿಕ್ಪಾಲಕರನ್ನೆಲ್ಲ ತನ್ನ ಕಾಲಡಿ ಕೂಡಿ ಹಾಕಿಟ್ಟುಕೊಂಡಿದ್ದ ಹಾಗೆ ನಾವೂ ಏನಾದರೊಂದು ಮಾಡಿ ನಮ್ ಹಬ್ಬ-ಹರಿದಿನ-ಆಚರಣೆಗಳೆಲ್ಲ ಈ ಮೂರುದಿನದ ವೀಕೆಂಡ್‌ನಲ್ಲೇ ಬರೋಹಾಗೆ ಮಾಡಬೇಕು. ಈ ಅಮೇರಿಕದೋರು ಆಕಾಶದಲ್ಲಿ ಸೂರ್ಯನಿಗೆ ಒಂದ್ ದೊಡ್ಡ ಕನ್ನಡಿ ಇಟ್ಟು ಯಾವತ್ ನೋಡಿದ್ರು ಇಲ್ಲಿ ೭೨ ಡಿಗ್ರೆ ಫ್ಯಾರನ್‌ಹೈಟ್ ಟೆಂಪರೇಚರ್ ಇರೋ ಹಾಗೆ ಮಾಡಬೇಕು ನೋಡಿ, ಅವಾಗಿರತ್ತೆ ಮಜಾ!
2 comments:
ಸತೀಶ್,
ಓ ನೀವು ಗ್ರಹಗಳ ಪರವಾಗಿ ಸೂ ಮಾಡಬೇಕು ಅಂತಾ ಇದೀರಾ..ಇದೋಳ್ಳೇ ಗ್ರಹಚಾರ ಆಯ್ತಲ್ಲ :)
ನಿಮ್ಮ ೪೦೦ ಮಿ ಡಾಲರ್ ಬಂದ ಮೇಲೆ ಎನು ಮಾಡಬೇಕು ಅಂತಾ??
ಅದ್ರೂ ರಾಹು-ಕೇತು ಅಗಲಿಸುವುದು ಸರಿ ಅನಿಸ್ತಾ ಇಲ್ಲ..
ಅದರಲ್ಲಿ ಹತ್ತು ಪರ್ಸೆಂಟ್ ಮಾತ್ರ ನನಗಿದ್ದರೆ ಸಾಕು, ಉಳಿದದ್ದು ಏನು ಬೇಕಾದರೂ ಆಗಿಕೊಳ್ಳಲಿ, ಇದು ಗ್ರಹಗಳ ವಿಚಾರವಲ್ಲವೇ? :-)
Post a Comment