ಸಮುದ್ರ ತೀರ
ಸಮುದ್ರ ತೀರ, ಅದನ್ನ ಒಂದು ದಂಡೆ ಅಂತ ಕರೆದರೆ ಸಾಲದು. ನದಿಗಳಿಗಾಗಲಿ, ಒರತೆಗಳಿಗಾಗಲಿ, ಒಂದು ಹರಿಯುವ ಗುಣ ಇರುವ ಇವಕ್ಕೆಲ್ಲ ಒಂದು ದಂಡೆ ಅಂತ ಇರಲೇ ಬೇಕು. ಹರಿಯುವುದಕ್ಕೆ ಮಾತ್ರ ದಂಡೆಗಳು, ಶರಧಿಯಂತೆ ಇರುವವಕ್ಕೆ ಏಕೆ?
ಈ ಸಮುದ್ರದ ತೀರದ ಸಹವಾಸವೇ ಹಾಗೆ, ಎಂತಹ ಗುಂಡು ಕಲ್ಲಿನ ಮನಸ್ಸಿನವರಲ್ಲಿಯೂ ಒಂದು ರೀತಿಯ ತುಮುಲಗಳನ್ನು ಏಳಿಸುವಂತಹದು. ಈ ತೀರದ ಮೇಲಿನ ಪ್ರೀತಿಯಿಂದ ಸಮುದ್ರ, ತನ್ನ ಆಂತರ್ಯದೊಳಗಿನ ಅಲೆಗಳನ್ನ, ಮೊಗೆ ಮೊಗೆದು ತೀರಕ್ಕೆ ತಲುಪಿಸಿದಂತೆಲ್ಲ, ಮತ್ತೆ ಮತ್ತೆ ಹುಟ್ಟುವಂತಹದು. ಇದೇ ಕಾರಣಕ್ಕಾಗಿ ಇರಬೇಕು, ಅದನ್ನು ಸಮುದ್ರ ತೀರ ಎನ್ನುವುದು - ಅದು ಎಂದೂ ತೀರದು, ಅಂತಹ ವಿಶಿಷ್ಟ ಸ್ವಭಾವವನ್ನು ಒಳಗೊಂಡಿಹದು. ಈ ತೀರವನ್ನು ಕುರಿತು, ಅದನ್ನೇ ಗುರಿಯಾಗಿಸಿಕೊಂಡು, ಪದೇ ಪದೇ ಎದ್ದು ಬಿದ್ದು, ಓಲಾಡಿ, ಸಂತೈಸಿಕೊಳ್ಳುವ ಅಲೆಗಳಿಗೂ ತೀರದ ದಾಹವಿದೆ, ಅವುಗಳ ಆಂತರ್ಯದಲ್ಲಿ ಒಂದು ರೀತಿಯ ಕಕ್ಕುಲತೆಯಿದೆ, ಸದಾ ವ್ಯವಧಾನವಿಲ್ಲದವರ ಮನದಲ್ಲೂ ತಳಮಳಗಳ ನಿಗೂಢತೆಯಲ್ಲಿ ಒಂದು ರೀತಿಯ ಸಮಾಧಾನವಿರುತ್ತಲ್ಲ ಹಾಗೆ.
ಈ ತೀರವನ್ನಾಗಲೀ, ಅಲೆಯನ್ನಾಗಲೀ ನೋಡದೇ, ಅವುಗಳು ತೋರುವ ದಿಗ್ಮೂಢತೆಯ ಬಂಧನಲ್ಲಿ ಬೀಳದೇ ಇರುವುದಾದರೂ ಹೇಗೆ? ಅಲೆಗಳನ್ನು ನೋಡದೇ ಮಹಾಸಾಗರದ ಮಹಾನತೆಯನ್ನು ನೋಡಿ ಎಂದು ಹೇಳುವುದು ಮಾತ್ರ ಸುಲಭ ಸಾಧ್ಯ. ಈ ತೀರವನ್ನು, ದಂಡೆ, ಮಗ್ಗಲು, ತಟ, ದಡ ಎಂದು ಇನ್ನೇನಾದರೂ ಸೇರಿಸಿಕೊಂಡು ಹೇಳಿ, ತೀರ ತೀರವೇ. ತೀರವೆನ್ನದೆ ಬೇರೆ ಏನನ್ನೂ ಹೇಳಲು ಬಾರದ ಥರದಲ್ಲಿ ತನ್ನನ್ನು ತಾನು ಸಮುದ್ರ ಇದ್ದಲ್ಲೆಲ್ಲ ಸೃಷ್ಟಿಸಿಕೊಂಡು ಅದರ ಉದ್ದಕ್ಕೂ ಮೈ ಚಾಚಿಕೊಂಡು ಬಿದ್ದಿರುವ ತೀರಕ್ಕೆ ಯಾರೂ ಅಷ್ಟೊಂದು ಮಹತ್ವವನ್ನೇಕೆ ಕೊಟ್ಟಿಲ್ಲ ಎಂದು ಪ್ರಶ್ನೆ ಏಳುತ್ತದೆ.
ಹಿಂದೆಲ್ಲಾ ಸಮುದ್ರದಲ್ಲಿ ನಾವೆಯ ಮೂಲಕ ಪ್ರಯಾಣ ಬೆಳೆಸುತ್ತಿದ್ದವರು, ಯಾವಾಗಲೂ ತಮ್ಮ ದೂರ ತೀರದ ಯಾನದ ಬಗ್ಗೆಯೇ ತಾನೆ ಮಾತನಾಡುತ್ತಿದ್ದುದು? ಈ ಭೂಮಿಯ ಬಹುಭಾಗ ಕಡಲಿನ ನೀರಿನಿಂದ ಆವರಿಸಿದ್ದರೇನಂತೆ? ಕಡಲಿನ ಮಕ್ಕಳೆಲ್ಲ ತಲುಪುತ್ತಿದ್ದುದು ತೀರವನ್ನೇ! ಕಡಲಿನಿಂದ ನೋಡಿದವರಿಗೆ ತೀರವು ಅಪ್ಯಾಯಮಾನವಾಗಿ ಕಂಡು ಬಂದಷ್ಟು ತೀರದಲ್ಲೇ ಇದ್ದವರಿಗೆ ಕಂಡು ಬಂದಿರಲಾರದು - ಒಂದು ರೀತಿಯಲ್ಲಿ ನೀರಿನಲ್ಲಿ ಮುಳುಗುವವನಿಗೆ ದಡದ ಮೇಲಿನ ಪ್ರೀತಿ ವಿಶ್ವಾಸಗಳು ಒಂದೇ ಸಮನೆ ಹೆಚ್ಚು ಬರುವಂತೆ. ಕಡಲಿಲ್ಲದೇ ತೀರವಿಲ್ಲ ಎಂದು ಹೇಳುವವರಿಗೆ, ತೀರದ ಮೇಲಿನ ಪ್ರೀತಿ ಮತ್ತು ತೀರದ ಪರವಾದ ತೀವ್ರ ವಾದಗಳ ಮುಖಾಂತರ ನಾನು, ತೀರವಿಲ್ಲದೇ ಕಡಲಿಲ್ಲ, ಎಂದು ಸಾಧಿಸಿಕೊಂಡರೆ ತಪ್ಪೇನು?
ಕಡಲು ಜಲಚರಿಗಳಿಗೆ ಮಾತ್ರ ತವರಾಗಬಹುದು. ಆದರೆ, ತೀರದ ಒಡಲಿನಲ್ಲಿ ಸರೀಸೃಪಗಳು, ಉಭಯವಾಸಿಗಳು, ಚಿಕ್ಕ ಇರುವೆಗಳಿಂದ ಹಿಡಿದು, ದೊಡ್ಡ ಕಶೇರುಕಗಳ ವರೆಗೆ ಅನೇಕ ಸಸ್ತನಿಗಳಿಗೆ ಅದು ಗೂಡು ಮಾಡಿಕೊಟ್ಟಿಲ್ಲವೇ? ತನ್ನಲ್ಲೇಳುವ ತಲ್ಲಣಗಳನ್ನು ಅಲೆ ಅಲೆಗಳ ಮೂಲಕ ಸದ್ದು ಮಾಡುತ್ತ ಕಡಲು ಎತ್ತಿ ಹಾಕಿದಷ್ಟೇ ಶಾಂತವಾಗಿ ತೀರ ತನ್ನನ್ನು ತಾನು ಸಂಬಾಳಿಸಿಕೊಳ್ಳುತ್ತಿಲ್ಲವೇನು? ಹುಣ್ಣಿಮೆ-ಅಮಾವಾಸ್ಯೆಗಳಂದು ಹೆಚ್ಚುವ ಉಬ್ಬರಗಳಾಗಲೀ, ಇಳಿತಗಳಾಗಲೀ ಈ ತೀರದ ಅಹವಾಲನ್ನು ಯಾವತ್ತೂ ಬದಲಾಯಿಸಲು ಸಾಧ್ಯವೇ ಇಲ್ಲ ಎನ್ನುವಂತೆ ಸಡ್ಡು ಹೊಡೆದು ನಿಂತ ಗರಡಿ ಮನೆಯಲ್ಲಿ ಪಳಗಿದ ಪೈಲ್ವಾನನಂತೆ ಈ ತೀರಗಳು ನನಗೆ ಕಂಡುಬರುತ್ತವೆ.
ಈ ತೀರದ ಮೇಲಿನ ಮೋಹಕ್ಕೆಂತಲೋ ಏನೋ, ತನ್ನ ಬಣ್ಣವಿಲ್ಲದ ಬಿನ್ನಾಣದ ನೀರಿಗೂ ಬಿಳಿಯ ನೊರೆಯ ಲೇಪನ ಮಾಡಿ, ಸಮುದ್ರ, ತೀರವನ್ನು ಕಾಡುತ್ತದೆಯೋ ಏನೋ! ನೀರಿರಲಿ, ನೊರೆ ಇರಲಿ, ಎಲ್ಲದಕ್ಕೂ ಒಂದೇ ಉತ್ತರ, ಈ ಸಮುದ್ರ ತೀರದ್ದು, ಒಂದು ರೀತಿಯಲ್ಲಿ ಯಾವುದೋ ಒಂದು ಅಗಾಧವಾದ ತಪಸ್ಸಿಗೆ ನಿಂತ ಮಹಾ ಋಷಿಯ ಹಾಗೆ.
ತೀರ ಮೊದಲೋ, ಸಮುದ್ರ ಮೊದಲೋ ಎಂದು ನೀವು ನನ್ನನ್ನು ಕೇಳಿದರೆ, ಎಂದೂ ತೀರದ ತೀರವೇ ಮೊದಲು ಎಂದು ನಿಮ್ಮ ಕೂಡ ವಾದ ಮಾಡಿಯೇನು. ಹಾಗೆಯೇ ಮುಂದುವರೆದು, ತೀರವಿಲ್ಲದ ನೀರು ತರವೇ ಎಂದು ಕಡಲನ್ನೇ ಹಾಸ್ಯ ಮಾಡಿಬಿಟ್ಟೇನು. ಸ್ಥಾವರಕ್ಕೆ ಅಳಿವುಂಟು ಎನ್ನುವ ಚಿಂತನೆ ಸದಾ ಚಿರಸ್ಥಾಯಿಯಾದ ತೀರದ ಒಡಲನ್ನು ಇನ್ನೂ ಕೊರೆದಿಲ್ಲ, ಹಾಗಂತ ಜಂಗಮಕ್ಕಳಿವಿಲ್ಲ ಎನ್ನುವ ಚಿಂತೆಯೇ ಸಮುದ್ರದ ನೀರನ್ನು ನಿಂತಲ್ಲಿ ನಿಲ್ಲಲು ಬಿಡುತ್ತಿಲ್ಲ ಎಂದು ಸಂಶೋಧಕರು ತೋರಿಸಿಕೊಡಬಹುದು. ನದಿಯ, ತೊರೆಗಳ ದಂಡೆಗಳಂತೆ ಈ ತೀರವು ತನ್ನನ್ನು ತಾನು ಮತ್ತೊಂದು ಕಡೆಯ ಭೂಮಿಗೆ ತುಲನಾತ್ಮಕವಾಗಿ ನೋಡಿಕೊಳ್ಳುವ ಮುಲಾಜಂತೂ ಈ ತೀರಕಿಲ್ಲ, ಇದು ಎಂದಿದ್ದರೂ ಹೇಗಿದ್ದರೂ, ಒಂದೇ ತೀರ. ಹಾಗೇ ಮುಂದೆ ಹೋಗಿ ನೋಡಿದರೆ, ಎಲ್ಲ ತೀರಗಳೂ ಇದರ ಮುಂದುವರೆದ ಭಾಗವಾಗಿ ಕಂಡು ಬಂದಾವು.
ಅಲೆ, ಆಕಾಶ, ಎಲರುಗಳಿಗೆ ಹೆದರದ, ಕಂಗೆಡದ, ಅಧೀರಗೊಳ್ಳುವ ಮನಸ್ಥಿತಿ ಈ ತೀರದ ಬೆನ್ನಿಗಿದೆ. ಸದಾ ಶುಷ್ಕವಾದ ಮೇಲ್ಮೈಯನ್ನು ಕಂಡು ಕಾಯ್ದುಕೊಂಡರೂ, ಅದನ್ನ ಸಪ್ಪೆ, ನೀರಸ, ಬರಡು ಎಂದು ಮಾತ್ರ ಹೇಳಲಾಗದು. ಮೇಲ್ನೋಟಕ್ಕೆ ನಿಷ್ಕಲ್ಮಶನಾಗಿ ಕಂಡೂ, ತನ್ನ ಆಂತರ್ಯದಲ್ಲಿ ಅನೇಕ ಕೋಮಲತೆಗಳನ್ನ ಸಂಪೋಷಣೆ ಮಾಡಿಕೊಂಡ ಮಾತ್ರಕ್ಕೆ, ತೀರವನ್ನ ನಿಸ್ಸಾರ ಎಂದು ಹೇಳುವ ಕಠಿಣ ಬುದ್ಧಿ ಯಾರಿಗೆ ತಾನೆ ಬರಲು ಸಾಧ್ಯ?
ನನ್ನ ಪೋಷಣೆ ಏನಿದ್ದರೂ, ಆಗಾಧವಾದ ಸಮುದ್ರಕ್ಕೆ ಒಂದು ಪರಿಕಲ್ಪನೆಯನ್ನು ಕೊಟ್ಟ ಈ ತೀರವನ್ನು ಕುರಿತೇ ಇರುತ್ತದೆ. ಆಳ ಅಂತಃಸತ್ವವನ್ನೆಲ್ಲ ಸಮುದ್ರಕ್ಕೆ ಬಿಡೋಣ. ಒಂದು ನಿಶ್ಚಿತ, ನಿಸ್ಸೀಮ ಕಲ್ಪನೆಯಲ್ಲಿ ತನ್ನನ್ನು ಪೋಷಿಸಿಕೊಂಡು, ತನ್ನೊಡಲ ಒಳಗೆ ಅನೇಕರಿಗೆ ಅವಾಸಸ್ಥಾನವನ್ನು ಕಲ್ಪಿಸಿಕೊಟ್ಟು, ದೂರದಿಂದ ನೋಡುವವರಿಗೆ ಎಂದೂ ಬೇಕಾಗಿ, ಅನೇಕ ದೇಶ-ಭಾಷೆ-ಭಾವನಗೆಳಿಗೆ ಬುನಾದಿಯಾಗಿ ನಿಯಮಕ್ಕೆ ಮೀರಿ ನಿಂತ ತೀರವನ್ನು ಅದು ಹೇಗೆ ತಾನೆ ಮರೆಯಲು ಸಾಧ್ಯ?ಮುಂದಿನ ಸಾರಿ ಯಾರಾದರೂ ಸಮುದ್ರವನ್ನು ಕಂಡೀರಾ? ಎಂದು ಪ್ರಶ್ನೆ ಮಾಡಿದಾಗ ಸಮುದ್ರದ ತೀರವನ್ನು ಕಂಡೀರಾ? ಎಂದು ತಿದ್ದಬೇಕಾಗುತ್ತದೆ. ತೀರದಿಂದಲೇ ನಮ್ಮ ಬದುಕು, ಬವಣೆಗಳು ಆರಂಭ - ನಮ್ಮ ನಾಗರಿಕತೆ ಆರಂಭವಾಗಿದ್ದೇ ಇಂತಹ ಯಾವುದೋ ಒಂದು ತೀರದಿಂದ. ಈ ತೀರಕ್ಕೂ ಮುಂದಿನ ತೀರಕ್ಕೂ ಅದೇನೋ ಪದಗಳಿಗೆ ಮೀರಿದ ಅವಿನಾಭಾವ ಅನುಬಂಧ! ತೀರದಿಂದ ತೀರಕ್ಕೆ, ನಮ್ಮ ಪ್ರಯಾಣ ಮುಂದುವರೆಯುತ್ತಲೇ ಇರಲಿ, ಯಾವುದೇ ತಿಮಿರಾಂಧತೆಯಾಗಲೀ, ಕರಾಳತೆಯಾಗಲೀ ನಮ್ಮನ್ನು ಬಾಧಿಸದಿರಲಿ.
ತೀರವು ನಿಂತಿದೆ ಅಚಲವಾಗಿ, ಶಾಶ್ವತವಾಗಿ. ಅದು ಸಮುದ್ರದ ಅಲೆಗಳಿಗೆ ಧೈರ್ಯದಿಂದ ಉತ್ತರಿಸುವ ತತ್ವಜ್ಞಾನಿಯಂತೆ, ನಿಶಬ್ದವಾಗಿ.
ಜೈ ಸಮುದ್ರ ತೀರ! ನಿನ್ನ ಗುಣಾ-ಪರಾಕಾಷ್ಠೆಗಳು ಅಪಾರ!