ಬಹಳ ದಿನಗಳ ಗೆಳೆಯ...
ಬಹಳ ದಿನಗಳ ಗೆಳೆಯನೆಂದರೆ, ನಮ್ಮೂರಿನಿಂದ ಕೇವಲ ಐವತ್ತು ಮೈಲು ದೂರದಲ್ಲಿರುವ ನ್ಯೂ ಯಾರ್ಕ್ ನಗರ! ನಮ್ಮ ಟ್ರೇನು ನೆವರ್ಕ್, ಜರ್ಸಿ ಸಿಟಿ, ಹೊಬೋಕನ್ನ್ ಮೊದಲಾದ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶಗಳನ್ನು ತಲುಪಿದಂತೆಲ್ಲ ಹಳಿಗಳು, ಗಾಲಿಗಳು ಆಗಾಗ್ಗೆ ತಿಕ್ಕಿಕೊಳ್ಳುತ್ತಿದ್ದ ಶಬ್ದ ಹಾಗೂ ಕಿಟಕಿಯಿಂದ ಹೊರಗೆ ಕಾಣುವ ಚಿತ್ರಣಗಳು ಇಪ್ಪತ್ತು ವರ್ಷದ ಹಿಂದಿನ ಯಶವಂತಪುರ ಮತ್ತು ಮೆಜೆಸ್ಟಿಕ್ ನಡುವಿನ ರೈಲು ಪ್ರಯಾಣದ ಅನುಭವವನ್ನು ಮನದಲ್ಲಿ ತಾಳೆ ಹಾಕಿ ಕೊಳ್ಳುತ್ತಿದ್ದವು.
ನಾಗರಾಜ್ ೧೯೯೬ ರ ನಿನಾಸಂನಲ್ಲಿ ಮಾಡಿದ ಭಾಷಣದ ಆವೃತ್ತಿಯ ನವ್ಯ ಸಾಹಿತ್ಯ ಸಂಸ್ಕೃತಿಯ ನಾಲ್ಕು ದೌರ್ಬಲ್ಯಗಳ ವಾಕ್ಯಗಳು ನನ್ನನ್ನು ಪದೇ-ಪದೇ ಓದುವಂತೆ ಮಾಡಿ ಚಿಂತನೆಗೆ ತೊಡಗಿಸಿದವು. ನಾನು ಬಹಳವಾಗಿ ಹಚ್ಚಿಕೊಂಡ ಅಡಿಗ, ಅನಂತಮೂರ್ತಿ, ಲಂಕೇಶ, ಕಂಬಾರ, ತೇಜಸ್ವಿ, ಮೊದಲಾದವರು ಶಂಬಾ ಜೋಷಿ, ಬೇಂದ್ರೆ, ಪುತಿನ, ತೀನಂಶ್ರೀ ಮೊದಲಾದವರಿಂದ ಹೇಗೆ ಭಿನ್ನರು - ಇವರ ವಿದ್ವತ್ತಿನಿಂದ ಕನ್ನಡ ಸಂಸ್ಕೃತಿಯನ್ನು ಅಖಂಡವಾಗಿ ಪುನರ್ ನಿರ್ಮಾಣ ಮಾಡಬಲ್ಲ ಒಬ್ಬ ಚಿಂತಕನೂ ನಮ್ಮಲ್ಲಿ ಮೂಡಿಬರಲಿಲ್ಲ - ಎಂಬ ವಾಕ್ಯಗಳು ಕಾಫಿ ಹೀರದ ಶುಕ್ರವಾರದ ಮುಂಜಾನೆಯ ಬಹಳ ದಿನಗಳ ನಂತರ ಕನ್ನಡವನ್ನು ಓದುತ್ತಿದ್ದ ಮನಸ್ಸಿಗೆ ಭಾರವಾಗಿ ಕಂಡುಬಂದವು. ಡಿ.ಆರ್.ಎನ್., ಎನ್ನುವ ಕನ್ನಡದ ಪ್ರವಾದಿ ಯಾರು? ನಮ್ಮಿಂದ ಅವರು ಚಿಕ್ಕ ವಯಸ್ಸಿನಲೇ ದೂರವಾದದ್ದು ಹೇಗೆ? ಯಾವಾಗಲಾದರೂ ಸಮಯ ಸಿಕ್ಕಾಗ ಅವರ ಸ್ನೇಹಿತ ಮತ್ತು ಪುಸ್ತಕದ ಸಂಪಾದಕರಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಬೇಕು, ೧೯೯೭ ರಲ್ಲಿ ನಾಗರಾಜ್ ಅವರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದ್ದ ಆಡಿಯೋ-ವೀಡಿಯೋ ಗಳಿದ್ದರೆ ಹುಡುಕಬೇಕು...ಹೀಗೆ ಅನೇಕ ಅನೇಕ ಗೊಂದಲಗಳು ತಲೆಯಲ್ಲಿ ಸುತ್ತಿಕೊಳ್ಳತೊಡಗಿದವು. ಜೊತೆಗೆ ನಾಗರಾಜ್ ಅವರ ಪುಸ್ತಕಗಳಲ್ಲಿ ಹೆಸರಿಸುವ, ಉದಾಹರಿಸುವ ಅನೇಕಾನೇಕ ಪುಸ್ತಕಗಳನ್ನೂ-ಪರಾಮರ್ಶೆಗಳನ್ನೂ ಖುದ್ದಾಗಿ ಪರಿಶೀಲಿಸಬೇಕು ಎಂಬೆಲ್ಲ ಮಲ್ಟಿ-ಜನ್ಮಗಳ ಟ್ಯಾಸ್ಕ್ ಲಿಸ್ಟುಗಳು ಹುಟ್ಟತೊಡಗಿದವು. ಜೊತೆಯಲ್ಲಿ ಒಂದು ಜನಾಂಗ, ಸಂಸ್ಕೃತಿ, ಭಾಷೆಯನ್ನು ಸ್ಥೂಲವಾಗಿ ಅರಿಯದೇ ಹುಟ್ಟಿನಿಂದ ಅದರ ಒಡನಾಟದಲ್ಲಿ ತೊಡಗದೇ ಹೊರಗಿನವರಾಗಿ ಸಂಸ್ಕೃತಿಯೊಂದನ್ನು ಅವಲೋಕಿಸುವುದರಲ್ಲಿನ ಮಿತಿಗಳು ಪರಕೀಯತೆಯನ್ನು ಹೆಚ್ಚು ದೊಡ್ಡದನ್ನಾಗಿ ಮಾಡಿ ತೋರಿಸತೊಡಗಿದ್ದು, ಒಂದು ರೀತಿ ಮ್ಯಾಪ್‌ಕ್ವೆಸ್ಟಿನಲ್ಲಿ ಚಿಕ್ಕದಾಗಿ ಕಾಣಸಿಗುವ ನ್ಯೂ ಯಾರ್ಕ್ ನಗರದ ಬಿಲ್ಡಿಂಗುಗಳು ನಮ್ಮ ಕಣ್ಣೆದುರೇ ಅವುಗಳ ಬೃಹತ್ ನೆಲೆಯನ್ನು ತೆರೆದುಕೊಂಡ ಹಾಗೆ ಬೆನ್ನ ಹುರಿಯಲ್ಲಿ ಮಿಂಚಿನ ಸಂಚಕಾರವಾಯಿತು. ನಾಗರಾಜ್ ಅವರ ಕಥನಗಳನ್ನು ಓದುತ್ತಿದ್ದ ಹಾಗೆ "ಪತ್ರಿಕೆ" ಹಾಗೂ ಅದರ ವಿಶೇಷಣಗಳ ನೆನಪುಗಳಾಗಿ - ಪುಂಡಲೀಕ ಶೇಟ್, ರವೀಂದ್ರ ರೇಶ್ಮೆ, ಕಟ್ಟೆ ಪುರಾಣ, ಬಂ, ಗುಂ, ಟೀಕೆ-ಟಿಪ್ಪಣಿ - ಮೊದಲಾದವುಗಳೆಲ್ಲ ಜಾತ್ರೆಯ ತೇರನ್ನು ಎಳೆಯಲು ತಯಾರಾಗಿ ನಿಂತ ಯುವಕರಂತೆ ಹಗ್ಗವನ್ನು ಹಿಡಿದುಕೊಂದು ಮನದಲ್ಲಿ ಪುಟಿದು ನಿಂತವು. ೧೯೯೭ರಲ್ಲಿ ಮೊದಲು ಇಂಟರ್ನೆಟ್ಟಿನಲ್ಲಿ "ಸಂಜೆವಾಣಿ"ಯನ್ನು ಓದಿದ ಪುಳಕಗಳಾಗಿ, ಅಂದೇ ಕನ್ನಡದ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿ ಅನಿವಾಸಿ ಕನ್ನಡಿಗರಿಗೆಲ್ಲ ಹೊಸ ಹುರುಪನ್ನು ನೀಡಿದ್ದ ಮಣಿಯವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವಲ್ಲಿ, ನಾಗರಾಜ್‌ರ ಅನುಭವಗಳು ಸಹಾಯಕಾರಿಯಾದವು.
ಕನ್ನಡದ ಹಿಂದಿನ ವಿದ್ವಾಂಸರ ಸಾಹಿತ್ಯ, ದಾರ್ಶನಿಕತೆ, ನವ್ಯರ ಕಲಸು ಮೇಲೋಗರ, ನವ್ಯೋತ್ತರ ಪ್ರಯೋಗಳು, ಬಂಡಾಯ-ದಲಿತರ ಧ್ವನಿಗಳು, ಜಾತಿ-ರಾಜಕೀಯದಲ್ಲಿ ಹೊರಬಂದ ಕೂಗುಗಳು, ದೊಡ್ಡ ದೊಡ್ಡ ಸಂಭ್ರಮಗಳನ್ನು ಸಣ್ಣ ಕಥೆಗಳಲ್ಲೇ ನೇಯ್ದ ಅಥವಾ ಕಟ್ಟು ಹಾಕಿದ ಬಂಧನಗಳ ರೂಪಗಳು, ಇನ್ನೂ ಹಳೆಯ ನಾಟಕಗಳಿಗೆ ಜೋತು ಬಿದ್ದು ಹೊಳಪನ್ನು ಕಾಣದ ರಂಗದ ಪರದೆಗಳು, ಸಿನಿಮಾ ಎಂಬ ಭ್ರಮಾಲೋಕಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡ ಇತರ ಕಲಾ ಪ್ರಕಾರಗಳು - ಹೀಗೆ ಅನೇಕಾನೇಕ ಯೋಚನೆಗಳ ಅಲೆಗಳನ್ನು ನಾಗರಾಜ್ ಅವರ ಪುಸ್ತಕ ಕೇವಲ ಇಪ್ಪತ್ತು-ಮೂವತ್ತು ನಿಮಿಷಗಳಲ್ಲಿ ಏಳಿಸಿ ಚಲಿಸುತ್ತಿರುವ ಟ್ರೈನಿನಲ್ಲಿ ಚಲನೆಯಿಲ್ಲದ ದೇಹದೊಳಗೆ ಅನೇಕ ರೋಚಕತೆಗಳನ್ನು ಹುಟ್ಟುವಲ್ಲಿ ಯಶಸ್ವಿಯಾಗಿತ್ತು. ಪಂಡಿತರಲ್ಲದವರಿಂದ ಎಂತಹ ಸಾಹಿತ್ಯ ಬರುತ್ತದೆ, ಮಾರಿ ಜಾತ್ರೆಯನ್ನು ಕಾಣದ, ಕೋಣನ ಬಲಿಯನ್ನೆ ನೋಡದ, ಗಡಿ-ಮಾರಿಗಳನ್ನು ಅರ್ಥ ಮಾಡಿಕೊಳ್ಳದ ಸಂತತಿ ಈ ಸಮುದಾಯಕ್ಕೆ ಎಂತಹ ರೂಪವನ್ನು ಕೊಟ್ಟೀತು? ಚಂದ್ರಗುತ್ತಿಯಲ್ಲಿನ ಬೆತ್ತಲೆ ಪೂಜೆಯ ಸುತ್ತಣ ನಡೆದ ಸಾಮಾಜಿಕ ಚಳುವಳಿ, ಅದೆಷ್ಟೋ ದೂರದಲ್ಲಿಂದ "ಉಧೋ ಉಧೋ" ಹಾಡಿಕೊಂಡು ಹೊರಟು ಹೋಗುತ್ತಿದ್ದ ಎತ್ತಿನ ಗಾಡಿಗಳು, ಬೆತ್ತಲನ್ನು ಮುಚ್ಚಲು ಬಳಕೆಗೆ ಯಥೇಚ್ಛವಾಗಿ ಸಿಗುತ್ತಿದ್ದ ಬೇವಿನ ಸೊಪ್ಪು, ನಾಗರಿಕರಷ್ಟೇ ಗುರುತಿಸುವ ಅನಾಗರಿಕ ವರ್ತನೆ - ಇತ್ಯಾದಿಗಳೆಲ್ಲ ನರ್ತಿಸತೊಡಗಿದವು. ಯಾರೋ ಮನದೊಳಗೆ ಮಲಗಿದ್ದ ಬುಗುರಿಗೆ ಹುರಿಯನ್ನು ಸುತ್ತಿ ಎಂತಿ ಅಂತರ ಪಿಚ್ಚನ್ನು ಹಾಕಿದಂತೆ ಗಾಳಿಯಲ್ಲಿ ಸುತ್ತಿ ಬಂದು ಅಂಗೈನ ಮಧ್ಯೆಯಲ್ಲಿನ ನನ್ನ ಆಟಿಕೆ ಸುತ್ತಿ-ಸುತ್ತಿ ಗಿರುಕಿ ಹೊಡೆಯಲಾರಂಭಿಸುವ ಹೊತ್ತಿಗೆ ನ್ಯೂ ಯಾರ್ಕ್ ನಗರ ದುತ್ತನೆ ಎದುರಾಗಿತ್ತು.
***
ಅದೇ ನ್ಯೂ ಯಾರ್ಕ್ ನಗರ?! ಅಲ್ಲ, ಬದಲಾಗಿರುವ ಚಿತ್ರ, ಇಲ್ಲ, ಅವೇ ಬಿಲ್ಡಿಂಗುಗಳು, ಅಲ್ಲ, ಹೊಸ ವಿನ್ಯಾಸಗಳು, ಅಲ್ಲ, ಅದೇ ನಿರಂತರತೆ.... ಹೀಗೆ ಅನೇಕ ಅಲ್ಲ-ಇಲ್ಲಗಳ ನಂತರ ನಾನಿದ್ದೇನೆ ಇಲ್ಲಿಯೇ - ಶತಶತಮಾನಗಳಿಂದ ಎನ್ನುವ ಅಖಂಡತೆ ಅನುಭವಕ್ಕೆ ಬಂತು. ಅದರ ಸೌಂದರ್ಯ, ವಿಸ್ತಾರ, ಅಬ್ಬರದ ಮುಂದೆ ನಮ್ಮ ಅನುಭವಗಳು ಎಷ್ಟು ಕನಿಷ್ಠವಾದವುಗಳು ಎಂದೂ ಅನಿಸಿತು, ಒಂದು ರೀತಿ ನೊಣ ದೊಡ್ಡದೊಂದು ಆನೆಯ ದೇಹದ ಮೇಲೆ ಕಾಣುವ ಧೂಳಿನ ಹಾಗೆ. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಅದೇ ಗಾಂಭೀರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್! ಉಳಿದ ಕಟ್ಟಡಗಳು ಹಾಗೂ ಕಲರವಗಳ ನಡುವೆ ನೋಡಿದರೆ ಅದು ಅಷ್ಟೊಂದು ದೊಡ್ಡದೇ ಎಂದು ಒಮ್ಮೆ ಅನುಮಾನವಾದರೂ ಕೆಲವೊಮ್ಮೆ ದೊಡ್ಡದನ್ನು ದೂರದಿಂದ ನೋಡಿಯೇ ತಿಳಿಯಬೇಕು ಎನ್ನಿಸಿದ್ದು ನಿಜ.
ಬಿಸಿನೆಸ್ಸು ಮೀಟಿಂಗ್‌ಗೆ ಹೊಗಿ ಅಲ್ಲಿ ಕಾಫಿ ಹೀರುತ್ತಿದ್ದ ಹಾಗೆ ಸರ್ವಾಂತರ್ಯಾಮಿ ಸಿಎನ್‌ಬಿಸಿ ವರದಿಗಳೆಲ್ಲ ನನ್ನ ಸಹೋದ್ಯೋಗಿಗಳಲ್ಲೂ ಪಸರಿಸಿ ನೈಸರ್ಗಿಕ ಪ್ರಕೋಪದ ಪರಿಣಾಮದ ಚರ್ಚೆಗಳು ಜಪಾನ್‌ನಿಂದ ದೂರದ ಹವಾಯಿಯಲ್ಲಿ ಸುನಾಮಿ ಅಲೆಗಳೆದ್ದು ತೊಂದರೆಯಾದ ಬಗ್ಗೆ ವಿಸ್ತಾರಗೊಂಡಿದ್ದವು. ಎಲ್ಲೇ ಏನಾದರೂ ತಮ್ಮ ಬಾಟಮ್‌ಲೈನಿನ ಬಗ್ಗೆ ಆಲೋಚಿಸುವ ಅಮೇರಿಕನ್ನ್ ಮನಸ್ಸಿನ ಮಿತಿ ಎಂದುಕೊಂಡರೆ ತಪ್ಪಾದೀತು. ಇಂದಿನ ಗ್ಲೋಬಲ್ ವ್ಯವಸ್ಥೆಯಲ್ಲಿ ದೊಡ್ಡ-ದೊಡ್ಡ ಆಟಗಾರರಿಗೆ ನೆಗಡಿ-ಜ್ವರ ಬಂದರೇ ಕಷ್ಟವಾಗುವಾಗ ಇನ್ನು ಭೂಕಂಪ, ಸುನಾಮಿಗಳು ಬರೀ ನೀರಿನ ಅಲೆಗಳಾಗಿ ಮಾತ್ರ ತಟ್ಟದೇ ಗಾಳಿ ಹಾಗೂ ಉಳಿದ ಮಾಧ್ಯಮಗಳಲ್ಲೂ ಸಂವಹಿಸಬಲ್ಲ ಶಕ್ತಿ ಅಥವಾ ದೌರ್ಬಲ್ಯವನ್ನು ಕುರಿತು ಚಿಂತಿಸುವಂತಾಯಿತು.
ಒಟ್ಟಿನಲ್ಲಿ, ಈ ವಿಶ್ವದ ದೊಡ್ಡಣ್ಣ ನ್ಯೂ ಯಾರ್ಕ್ ನಗರದ ಒಂದು ದಿನದ ಸಹವಾಸದಿಂದಾಗಿ, ನಾಗರಾಜ್ ಅಂಥವರ ಮಹಾನ್ ಚೇತನಗಳ ಬರಹದ ದೆಸೆಯಿಂದ "ಅಂತರಂಗ"ದ ಅನಿವಾಸಿ ಮನಸ್ಸು ಒಂದು ಕ್ಷಣದ ಮಟ್ಟಿಗಾದರೂ ದಿನನಿತ್ಯದ ಜಂಜಾಟಗಳಿಂದ ದೂರಗೊಂಡು ಕನ್ನಡ-ನಮ್ಮತನ-ನಾಡಿನ ಬಗ್ಗೆ ಯೋಚಿಸುವಂತೆ ಮಾಡಿದ್ದು ದೊಡ್ಡದೆ. ಈ ಅಗಾಧತೆಗಳ ನಡುವೆ ನಮ್ಮ ನಮ್ಮ ದೊಡ್ಡದನ್ನು ಚಿಕ್ಕದಾಗಿ ಪರಿವರ್ತಿಸಬಲ್ಲ ಇಂತಹ ಮಹಾನ್ ಅವಕಾಶಗಳು ಆಗಾಗ್ಗೆ ಬರುತ್ತಿರಲಿ.