ಎಂಥಾ ಪ್ರಖರವಾದ ಸೂರ್ಯನೂ ಒಂದು ದಿನ ಸತ್ತು ಹೋಗುತ್ತಾನಂತೆ...
ಇದೇ ನಮ್ಮ ತಪ್ಪು ಎನಿಸಿದ್ದು - ಬಿರು ಬೇಸಿಗೆಯ ನಡುವೆ ಮುಂಬರುವ ಛಳಿಗಾಲದ ಬಗ್ಗೆ ಮನದಲ್ಲಿ ಚಿಂತೆಯ ಬುಗ್ಗೆಗಳು ಏಳುತ್ತಿದ್ದಾಗ. ಮನೆಯ ಹೊರಗಿರುವ ಟಪಾಲು ಡಬ್ಬದಲ್ಲಿ ಕೈಯಾಡಿಸಿ ಅದರ ಅಂತಃಸತ್ವವನ್ನು ಎತ್ತಿ ಹಿಡಿದುಕೊಂಡು ಬರುತ್ತಿದ್ದಾಗ ಗಾಳಿಯ ಪದರಗಳಲ್ಲಿ ನಿಧಾನವಾಗಿ ತೇಲುತ್ತಾ ನನ್ನ ಮುಂದೆ ಬಿದ್ದಿದ್ದು ಒಂದು ಹಳದಿ ಎಲೆ. ಓಹ್, ಇನ್ನೂ ಕೆಲವೇ ದಿನಗಳಲ್ಲಿ ಹಣ್ಣಾಗಿ (ಕೆಂಪಾಗಿ) ಮಾಗಿ ಉದುರ ಬೇಕಾಗಿದ್ದ ಎಲೆಗಳಿಗೇಕೆ ಬದುಕಿನ ನಡುವಿನ ಹಳದಿಯಲ್ಲೇನು ವಿಯೋಗ ಎಂದು ಯೋಚಿಸಲಾರಂಭಿಸಿ, ಮುಂದಿನ ಕೆಲವು ಕ್ಷಣಗಳಲ್ಲಿ ನನ್ನ ಮನಸ್ಸು - ಇಂಥಾ ಬಿರು ಬೇಸಿಗೆಯ ನಡುವೆಯೂ ಮುಂಬರುವ ಛಳಿಗಾಲದ ಬಗ್ಗೆ ಯೋಚಿಸೋದೇ? ಛೇ, ಎನಿಸದೆ ಇರಲಿಲ್ಲ.
ನಾನು ಮೂರು ತಿಂಗಳ ಕೆಟ್ಟ ಛಳಿಗಾಲದ ನಡುವೆ ಎಷ್ಟೋ ಸಾರಿ ಬೇಸಿಗೆಯ ನೆನಪು ಮಾಡಿಕೊಂಡಿದ್ದೇನೆ, ಆದರೆ ಕೊರೆಯುವ ಛಳಿಯಲ್ಲಿ ನಿಂತು ಹಂಬಲಿಸುವ ಬೇಸಿಗೆಯ ನಿರೀಕ್ಷೆಗೂ, ಬಿಸಿಲಿನಲ್ಲಿ ಬಾಡುತ್ತಲೇ ದೂರ ತಳ್ಳುವ ಛಳಿಯ ಅರಿವಿಗೂ ವ್ಯತ್ಯಾಸವಿದೆ ಎನ್ನುವುದು ಈ ಹೊತ್ತಿನ ತತ್ವ. ಹಿತವಾದ ಅನುಭವಗಳು ಅಥವಾ ಅಹಿತವಾದ ನೆನಪುಗಳು ಇವುಗಳ ಸಂಗ್ರಹಣೆಗಾರ ಮಿದುಳಿನಲ್ಲಿ ಏನಾದರೂ ಭಿನ್ನವಾದ ಸಂಸ್ಕರಣೆ ಇದೆಯೇನು? ನಾವು ಆಶಾವಾದ, ಸುಖ, ಸಂತೋಷ, ನಗು, ಮೊದಲಾದವುಗಳನ್ನು ಹೆಚ್ಚು ಹೆಚ್ಚಾಗಿ ಪೇರಿಸಿಕೊಳ್ಳುತ್ತೇವೋ ಅಥವಾ ನಿರಾಶೆ, ದುಃಖ, ಅಳು ಮೊದಲಾದವುಗಳನ್ನು ಒಂದು ಕಡೆ ಒಟ್ಟುಗೂಡಿ ಮುನ್ನಡೆಯುತ್ತೇವೋ ಯಾರು ಬಲ್ಲರು?
ಇದು ಇಂದು-ನಿನ್ನೆಯ ಸತ್ಯವಷ್ಟೇ ಅಲ್ಲ, ನನ್ನ ಯಾವತ್ತಿನ ಅನುಭವವೂ ಹೌದು; ಈ ಕ್ಷಣದಲ್ಲಿನ ನಮ್ಮ ಅಗತ್ಯಗಳು ಎಂದಿಗೂ ಮಲತಾಯಿ ದೋರಣೆಗಳಿಗೆ ಒಳಪಟ್ಟು ಮನಸ್ಸು ಯಾವಾಗಲೂ ಮುಂಬರುವ ಕಾಲಮಾನದ ಬಗ್ಗೆ ಹೆಚ್ಚು ಸ್ಪಂದಿಸುತ್ತದೆ. ನಾವು ಆಧುನಿಕ ಬದುಕಿನ ಏನೇನೋ ಗೊಂದಲಗಳಲ್ಲಿ ಮುಂಬರುವ ದಿನಗಳ ಬಗ್ಗೆ ವಿಸ್ತಾರವಾದ ಯೋಜನೆಗಳನ್ನು ರೂಪಿಸುವ ಸಂಕೀರ್ಣದಲ್ಲಿ ತೊಡಗಿಕೊಂಡು ಪ್ರಸ್ತುತ ಸ್ಥಿತಿಯನ್ನು ಭೂತ(ಕಾಲ)ರಾಯನಿಗೆ ಬಲಿಕೊಡುತ್ತಾ ಹೋಗುತ್ತೇವೆ. ’ಇಂದು’ ಎನ್ನುವ ಹಲವಾರು ಉಗಿಬಂಡಿಯ ಡಬ್ಬಿಗಳು ಅನತಿ ದೂರದವರೆಗೆ ಹಾಸಿದ ಕಂಬಿಗಳ ಮೇಲೆ ಓಡುತ್ತಾ ನಿನ್ನೆಗಳಾಗಿ ಹಿಂದೆ ಸರಿಯುತ್ತಾ ಹೋದಂತೆ ಮಾತ್ರ, ಮುಂದೆ ಅಥವಾ ’ನಾಳೆ’ ಎನ್ನುವ ಅವಕಾಶ ಬರುತ್ತದೆ. ಅಗಮ್ಯವಾದ ನಾಳೆಗಳಲ್ಲಿ ಸಣ್ಣ ಪ್ರಮಾಣದ ’ಇಂದು’ ನಗಣ್ಯವಾಗುತ್ತದೆ.
ಎಂಥಾ ಪ್ರಖರವಾದ ಸೂರ್ಯನೂ ಸಹ ಒಂದಲ್ಲ ಒಂದು ದಿನ ಸತ್ತು ಹೋಗುತ್ತಾನಂತೆ. ಸಂಜೆ ಇನ್ನೂ ಹೊಳಪು ಕಳೆದುಕೊಳ್ಳದ ಅಲ್ಲಲ್ಲಿ ನಕ್ಷತ್ರಗಳನ್ನು ಚದುರಿಕೊಂಡು ಮುಸ್ಸಂಜೆಯಲ್ಲಿ ಮನೆಯ ಮುಂದಿನ ಅಂಗಳದಲ್ಲಿ ನೀರೆರಚಿ ಚಿತ್ರ ಬರೆದಂತೆ ಹರವಿಕೊಂಡಿದ್ದ ಆಕಾಶವನ್ನು ನೋಡಿದಾಗ ದೂರದ ಸಂಬಂಧಿಯೊಬ್ಬರು ದಿಢೀರನೆ ಪ್ರತ್ಯಕ್ಷವಾದ ಅನುಭವ ಬಂತು. ನಮ್ಮ ವ್ಯಸ್ತ ಬದುಕಿನಲ್ಲಿ ನಾವು ನೋಡೋದೇನಿದ್ದರೂ ನಮ್ಮ ಸುತ್ತಮುತ್ತಲು ಹರವಿದ ಸಣ್ಣಪುಟ್ಟ ಪರದೆಗಳು - ಕಿರುತೆರೆಗಳು, ಅನತಿ ದೂರದಲ್ಲಿ ಅಮಿತವಾಗಿ ಹರಡಿದ ಆ ವಿಶಾಲ ಪರದೆಯನ್ನು ನೋಡಿ ಅದೆಷ್ಟು ದಿನವಾಗಿತ್ತೋ ಎನ್ನುವ ಸೋಜಿಗದ ಜೊತೆಗೆ ಈ ನಕ್ಷತ್ರಗಳೂ ಒಂದಲ್ಲ ಒಂದು ಆ ಹಳದಿ ಎಲೆಯಂತೆ ಉದುರುತ್ತಾವೇನೂ ಎನ್ನಿಸದೆಯೂ ಇರಲಿಲ್ಲ. ನಿಶ್ಶಬ್ದದ ನಡುವೆ ಎದ್ದು ಬರುವ ಸಂಗೀತದ ಅಲೆಯಂತೆ ಸೂರ್ಯ-ಮೋಡಗಳಿಲ್ಲದ ನೀಲಾಕಾಶದಲ್ಲಿ ಅಲ್ಲಲ್ಲಿ ಮಿಂಚುವ ನಕ್ಷತ್ರಗಳು ತಮ್ಮದೇ ರಾಗದಲ್ಲಿ ತೊಡಗಿಕೊಂಡಿದ್ದವು. ನಮ್ಮನ್ನು ಸುತ್ತಿಕೊಂಡಿರುವ ಗೋಲಾಕಾರದ ಎಲ್ಲ ಅವಕಾಶಗಳಲ್ಲಿ ಆ ನಕ್ಷತ್ರಗಳು ನನ್ನಿಂದ ಎಷ್ಟು ದೂರವಿರಬಹುದು ಎಂಬ ಸರಳರೇಖೆಯ ಪ್ರಶ್ನೆಯನ್ನು ಹಾಕುವಷ್ಟು ಮನಸ್ಸು ಕ್ಷುಲ್ಲಕವಾಗಲಿಲ್ಲ, ಬದಲಿಗೆ ಸುತ್ತಲಿನಲ್ಲಿ ಎಲ್ಲವೂ ಸುತ್ತಿಕೊಂಡಿರುವಾಗ ನೇರದ ನೆರವೇಕೆ ಎಂದು ಜಗಳಕಾಯದೇ ಸುಮ್ಮನಾದ ಹಠವಾದಿಯಂತಾಯಿತು.
ಮುಂಬರುವ ನಾಳೆಗಳ ಪ್ರಶಂಸೆಗೋಸ್ಕರ ನಾವು ಇಂದನ್ನು ಬಲಿಕೊಡುತ್ತಾ ಇದ್ದೇವೇನೋ ಎಂದು ಯೋಚಿಸಿಕೊಳ್ಳುವಷ್ಟರಲ್ಲಿ ಮನಸ್ಸು ಒಂದು ಕಡೆ ಅರ್ಧ ದಾರಿ ಸವೆಸಿ ಮುಂದೆ ಎಲ್ಲಿ ಹೋಗಬೇಕು ಅಥವಾ ಹೋಗಬಾರದು ಎಂದು ಗೊಂದಲಕ್ಕೆ ಬಿದ್ದ ಪ್ರವಾಸಿಯಾದಂತಾಯಿತು. ಚಿಕ್ಕ-ಚಿಕ್ಕ ತೆರೆಗಳ ಮರೆಯಲ್ಲಿ, ಸಣ್ಣ-ಪುಟ್ಟವುಗಳಿಗೆ ಸ್ಪಂದಿಸಿ ಸೊರಗುವ ನಾವು ದೊಡ್ಡದರುಗಳ ಬಗ್ಗೆ ಆಲೋಚಿಸುವುದಾದರೂ ಎಂದು? ಈ ಇವತ್ತಿನ ದಿನದಲ್ಲಿ ಬದುಕುತ್ತ, ಈ ಘಳಿಗೆಯ ಮಹತ್ವವನ್ನು ಮೆರೆಯುವ ಒಂದು ಸಂಸ್ಕೃತಿಯ ದಾರಿಯಲ್ಲಿ, ನಿನ್ನೆ-ಇಂದು-ನಾಳೆಗಳ ಚೀಲಗಳ ಹೆಗಲಿಗ್ಯಾವಾಗಲೂ ಏರಿಸಿಕೊಂಡು ಬದುಕು ನೂಕಿದಂತೆ ಓಡುತ್ತಿರುವಾಗ ಉಬ್ಬಸ ಬರದೇ, ಆಯಾಸವಾಗದೇ ಇನ್ನೇನಾದೀತು?
6 comments:
ತುಂಬಾ ಮನಸ್ಸಿಗೆ ಚಿಂತನೆ ಕೊಡುವ ಬರಹ
ಸೂರ್ಯ ಸಾಯುತ್ತಾನೆ ಎನ್ನುವ ಕಲ್ಪನೆಯೇ ಮನಸ್ಸಿಗೆ ಖೇಧ ಕೊಡುತ್ತದೆ
ಬದುಕುವುದು ಹೇಗೆ ಎಂಬ ಯೋಚನೆ ಕಾಡುತ್ತದೆ,
ಆ ಬದುಕು ಹೇಗಿರುತ್ತದೆ ಎಂಬ ಕುತೂಹಲ ಮೂಡುತ್ತಿದೆ
ಸತೀಶ್, ನಿಮ್ಮ ಈ ಬರಹ ಮನಸ್ಸಿನಲ್ಲಿ ಅನೇಕ ಚಿಂತನೆಗಳನ್ನು ಎಬ್ಬಿಸುವಂತಹುದು. ಹುಟ್ಟು ಸಾವುಗಳು ಪ್ರಕೃತಿಯ ನಿರಂತರ ಕ್ರಿಯೆ. ನಿನ್ನೆ ಹೋಗಾಯ್ತು, ನಾಳೆ ಹೇಗೋ ಏನೋ. ನಮ್ಮ ಮುಂದಿರುವುದು ಈ ದಿನ, ಈ ಕ್ಷಣ.ಅದನ್ನು ಪೂರ್ಣವಾಗಿ ಸವಿಯುವ, ಆನಂದಿಸುವ ಹಾಗೂ ತೊಡಗುವ ಕ್ರಿಯೆಗಳಲ್ಲೇ ಆದಷ್ಟು ತೃಪ್ತಿ ಹೊಂದುವ ಅರಿವು, ಶಕ್ತಿ ಬಂದಂತಾದರೆ ನಾವು ಗೆದ್ದೇವು!
ಧನ್ಯವಾದಗಳು - ರುದ್ರಕುಮಾರ್
ಸತೀಶ್
ಮನುಷ್ಯ ಭೂತ ಮತ್ತು ಬವಿಶ್ಯಗಳ ಕೈಧೀ
ಇಧರುಗಳ ಮದ್ಯೆ ಪ್ರಸ್ತುತ ಬಹು ಅನುಪಸ್ಥಿಥ, ಇಧು ನಮ್ಮ ವ್ಯಾಧಿ .
ಈ ಕ್ಷಣ ಎಷ್ಟು ನೀಜ, ಗ್ರಹಿಸು ನೀನು ಮನುಜ.
Thnx for ವೌನ್ದೆರ್ಫುಲ್ bit.
ಸತೀಶ್,
ನಿಮ್ಮ ಬ್ಲಾಗ್ ಓದಿದೆ.
ಬೇಸಿಗೆಯಲ್ಲಿ ಚಳಿಯ ಶೀತಲ ಸುಖದ ಬಗ್ಗೆ, ಚಳಿಗಾಲದಲ್ಲಿ ಬೇಸಿಗೆಯ ಬಿಸುಪಿನ ಬಗ್ಗೆ ಯೋಚಿಸುವುದು ಮನುಷ್ಯನ ಸಹಜ ಗುಣವಲ್ಲವೇ. "ಇರುವುದೆಲ್ಲವ ಬಿಟ್ಟು ಇಲ್ಲದಿರುವುದಕ್ಕೆ" ಹಂಬಲಿಸುವುವರಲ್ಲವೇ ನಾವು?
ಆದರೆ, ಎಂತಹ ಪ್ರಖರ ಸೂರ್ಯನೂ ಒಂದಲ್ಲಾ ಒಂದು ದಿನ ಸಾಯುತ್ತಾನೆಂಬ ಅರಿವು ನಮ್ಮಲ್ಲಿದ್ದಾಗ, ನಮ್ಮ ನಗಣ್ಯ ಅಸ್ತಿತ್ವ ಮತ್ತು ನಶ್ವರತೆಗಳ ಬಗ್ಗೆ ನಮಗೆ ವಿಷಾದವೆನಿಸುವುದಿಲ್ಲ. ವಿಶ್ವದ ವಿಸ್ತಾರತೆಯಲ್ಲಿರುವ ಎಲ್ಲವೂ ಒಂದೇ ಸಾರ್ವಕಾಲಿಕ ಸತ್ಯವನ್ನೊಳಗೊಂಡಿದೆಯೆಂಬ ಈ ಅರಿವು ನಮ್ಮನ್ನು ವಿಶ್ವದೆಲ್ಲದರ ಜತೆಗಿನ ಸಹಬಾಳ್ವೆಗೆ ಪ್ರೇರೇಪಿಸುತ್ತದೆಂದು ನನಗನ್ನಿಸುತ್ತದೆ. ಈ ಅರಿವನ್ನೇ ನಮ್ಮ ಹಿರಿಯರು ವಸುದೈವಕ ಕುಟುಂಬಕo ಅಂದಿರಬೇಕಲ್ಲವೇ?
ನಮ್ಮೆಲ್ಲರ ಮತ್ತು ನಮ್ಮ ಸುತ್ತಲಿನ ಎಲ್ಲವುಗಳ ಬಾಳಿಗೆ ಕಾರಣನಾದ ಸೂರ್ಯನೇ ಸಾಯುತ್ತಾನೆಂಬ ವಾಸ್ತವಿಕತೆಯ ಆರಿವಿದ್ದಾಗಲಷ್ಟೇ "ನಿನ್ನೆ-ಇಂದು ಮತ್ತು ನಾಳೆಗಳ ಜೋಳಿಗೆಗಳನ್ನು ಹೊತ್ತುಕೊಂಡು, ಬಾಳು ದೂಡಿದ ಕಡೆ ಓಡುತ್ತಾ" ನಾವು ಸುಖವಾಗಿರಲು ಸಾಧ್ಯ. ಇಲ್ಲಿದಿದ್ದರೆ ನಾನು ನನ್ನ ಬಾಳನ್ನು ನಿಯಂತ್ರಿಸುತ್ತೇನೆಂಬ ಸುಳ್ಳು ಅಹಂನಿಂದಾಗಿ ಮನುಷ್ಯ ನಿರಾಶನಾಗುವುದಂತೂ ನಿಜ.
nice sir
i will fallow ur blog sir. pl. visit my blog once
sir baduku lekhana chintanaasheela vaagide.abhinandanegalu.
Post a Comment