ನಿನ್ನೆ ಹೀಗಿತ್ತು - ಇಂದು ಹೀಗಿದೆ
ಬಹಳ ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಸೀಕೋ (Seiko) ರಿಸ್ಟ್ ವಾಚ್ ಒಂದನ್ನು ನನಗೆ ಉಡುಗೊರೆಯಾಗಿ ನೀಡಿದ್ದ. ಎಂಭತ್ತರ ದಶಕದಲ್ಲಿ ತಯಾರಿಸಲಾಗಿದ್ದ ಅದು ಬಹಳ ಸುಂದರವಾಗಿತ್ತು, ಅದರಲ್ಲಿ ಹೆಚ್ಚೇನು ಕಾಂಪ್ಲಿಕೇಷನ್ನುಗಳಿಲ್ಲದಿದ್ದರೂ (functions) ದಿನ ಹಾಗೂ ವಾರವನ್ನು ಸೂಚಿಸುತ್ತಿತ್ತು, ಜೊತೆಗೆ ಒಂದು ಸೆಕೆಂಡ್ ಮುಳ್ಳು ಕೂಡಾ ಇತ್ತು. ನನ್ನ ಲೇಮನ್ ಭಾಷೆಯಲ್ಲಿ ಹೇಳೋದಾದರೆ ಪ್ರಚನ್ನ ಶಕ್ತಿ (potential energy) ಯನ್ನು ಎದಿರು ಬದಿರು ಹಾಯಬಿಟ್ಟು ಕೆಲಸ ಮಾಡುವಂತಹ ಕೈ ಗಡಿಯಾರ ಅದು. ಅಂದರೆ ನಾನು ತಿಳಿದುಕೊಂಡ ಪ್ರಕಾರ ಅದರಲ್ಲಿ ಎರಡು ಸ್ಪ್ರಿಂಗ್ಗಳು, ಒಂದು ಅನ್ ವೈಂಡ್ ಆದ ಹಾಗೆ ಮತ್ತೊಂದು ಸುತ್ತಿಕೊಳ್ಳುತ್ತಿತ್ತು, ಹೀಗೆ ಬ್ಯಾಟರಿ ಇಲ್ಲದೆ ಎಷ್ಟೋ ವರ್ಷಗಳ ಕಾಲ ಅದು ನಡೆಯಬಲ್ಲದಾಗಿತ್ತು. ಅದು ಜಪಾನ್ನಲ್ಲಿ ಹುಟ್ಟಿ ಬಂದುದಾದರೂ ಸ್ಪಿಸ್ನಲ್ಲಿ ಹುಟ್ಟಿ ಬರುವ ಯಾವ ವಾಚುಗಳಿಗೂ ಕಡಿಮೆಯೇನೂ ಇದ್ದಿರಲಿಲ್ಲ, ಬಹಳ ನಿಖರವಾದ ಸಮಯವನ್ನು ತೋರಿಸುವ ನನ್ನ ಮೆಚ್ಚಿನ ಗಡಿಯಾರವೂ ಆಗಿತ್ತು.
ಆ ಗಡಿಯಾರದ ಬಗ್ಗೆ ಈಗ ಭೂತಕಾಲವನ್ನು ಬಳಸಿ ಬರೆಯುತ್ತಿರುವುದಕ್ಕೆ ಕಾರಣಗಳಿಲ್ಲದೇನಿಲ್ಲ. ಭಾರತದಲ್ಲಿ ಪ್ರತಿನಿತ್ಯವೂ ನನ್ನ ಒಡನಾಡಿಯಾಗಿದ್ದ ಸಮಯ ಪರಿಪಾಲಕ, ಒಂದು ದಿನವೂ ಮೈಂಟೇನನ್ಸ್ ಅನ್ನು ಬೇಡದ, ಬ್ಯಾಟರಿಯಾಗಲೀ ಮತ್ತೊಂದಾಗಲೀ ಕೇಳದ, ರಾತ್ರಿಯಲ್ಲೂ ಸಮಯ ತೋರಿಸುವ (ರೇಡಿಯಂ ಲೇಪಿಸಿದ) ಮುಳ್ಳುಗಳನ್ನು ಹೊಂದಿದ್ದ ಗಡಿಯಾರ ನಾನು ಅಮೇರಿಕಕ್ಕೆ ಬಂದ ಮೊದಮೊದಲಲ್ಲಿಯೇ ಇಲ್ಲಿನ ಸಮಯಗಳ ಬದಲಾವಣೆಯನ್ನು ತಾಳದೆ ಮಾನಸಿಕವಾಗಿ ನೊಂದು ನಿಂತು ಹೋಯಿತು. ಅದನ್ನು ಮತ್ತೆ ಭಾರತಕ್ಕೆ ಹೋದಾಗ ರಿಪೇರಿ ಮಾಡಿಸೋಣವೆಂದು ಎಲ್ಲೋ ತೆಗೆದಿರಿಸಿದ್ದರೆ ಇವತ್ತಿಗೂ ಇನ್ನೂ ಸಿಕ್ಕಿಲ್ಲ, ಅಲ್ಲಿಂದ-ಇಲ್ಲಿಂದ ಬಾಕ್ಸುಗಳಲ್ಲಿ ಬದುಕನ್ನು ಮೂವ್ ಮಾಡಿಕೊಂಡು ಅಲೆಯುವ ನಮ್ಮ ಅಮೇರಿಕದ ಬದುಕಿಗೆ, ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸುವ ಪರಿಪಾಟಲೆಗೆ ಹೆದರಿ ನನ್ನ ಪ್ರೀತಿಯ ಗಡಿಯಾರ ನನ್ನಿಂದ ದೂರವಾಯಿತು ಎಂದುಕೊಂಡು ಅದರ ನೆನಪಾದಾಗಲೆಲ್ಲ ನನ್ನ ಕಾಲಿನ ಕೆಳಗಿನ ನೆಲವನ್ನು ಗಟ್ಟಿಯಾಗಿ ತುಳಿದು ಅವಡುಗಚ್ಚುತ್ತೇನೆ. ವರ್ಷಗಳಿಂದ ಇನ್ನೂ ತೆರೆಯದ ಎಷ್ಟೋ ಬಾಕ್ಸುಗಳ ನಡುವೆ ನನ್ನ ಪ್ರೀತಿಯ ಸಮಯ ಪಾಲಕ ಎಲ್ಲೋ ಇದೆ, ಅದನ್ನು ಇವತ್ತಲ್ಲ ನಾಳೆ ಹುಡುಕಿಯೇ ತೀರುತ್ತೇನೆ ಎನ್ನುವುದು ನನ್ನ ಎಂದೂ ಬತ್ತದ ಛಲ ಅಥವಾ ಹುಂಬ ನಂಬಿಕೆ.
***
ಭಾರತದಲ್ಲಿ ನಾನು ಪಾಲಿಸುತ್ತಿದ್ದ ಸಮಯ ನಿಖರವಾಗಿತ್ತು. ಪಾಕಿಸ್ತಾನದವರು ಯಾವತ್ತೂ ನಮ್ಮಿಂದ ಅರ್ಧ ಘಂಟೆ ಹಿಂದಿದ್ದಾರೆ ಎಂದು ನಾವು ಯಾವತ್ತೂ ತಮಾಷೆ ಮಾಡಿಕೊಳ್ಳುತ್ತಿದ್ದೆವು. ಅದ್ಯಾವುದೋ ಒಂದು ವರ್ಷ ಪಾಕಿಸ್ತಾನದ ಸರ್ಕಾರ ಅಮೇರಿಕನ್ ಮಾದರಿಯಲ್ಲಿ ಸ್ಥಳೀಯ ಸಮಯವನ್ನು ಡೇ ಲೈಟ್ ಸೇವಿಂಗ್ಸ್ ನಿಯಮಕ್ಕನುಸಾರವಾಗಿ ಹಿಂದೆ-ಮುಂದೆ ಮಾಡುವ ಪ್ರಯೋಗವನ್ನು ನೆನೆನೆನೆದು ನಕ್ಕಿದ್ದಿದೆ. ನಾನು ಎನ್ನುವ ವ್ಯಕ್ತಿತ್ವ ನನ್ನ ಸಮಯ ಪಾಲನೆಗೆ ಅನುಗುಣವಾಗಿತ್ತು, ಅಥವಾ ನನ್ನ ಸಮಯಪಾಲನೆ ನನ್ನ ವ್ಯಕ್ತಿತ್ವವಾಗಿತ್ತು. ಹುಟ್ಟಿದಾಗಿನಿಂದ ನಮಗೊಂದೇ ವಾಚು, ನಾವು ಹೋದಲ್ಲಿ ಬಂದಲ್ಲಿ ಅದನ್ನು ಭಾರತದ ಉದ್ದಾನುದ್ದಕ್ಕೆ ಕೊಂಡೊಯ್ಯುತ್ತಿದ್ದೆವು, ನಮ್ಮ ಭಾಷೆ-ಸಂಸ್ಕೃತಿಗಳಲ್ಲೇನಾದರೂ ಬದಲಾವಣೆಗಳಿದ್ದರೂ, ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಉಷ್ಣತೆಯಲ್ಲಿ ಅಗಾಧವಾದ ಬದಲಾವಣೆ ಕಂಡು ಬಂದರೂ - ಭಾರತಕ್ಕೊಂದೇ ವಾಚು. ನಮ್ಮ ವಾಚಿನ ಸಮಯವನ್ನು ನಾವು ಬದಲಾಯಿಸುವ ಅಗತ್ಯವಿರಲಿಲ್ಲ. ಯಾವ ರೆಡಿಯೋ ಸ್ಟೇಷನ್ನುಗಳನ್ನು ಕೇಳಿಯಾದರೂ ನಾವು ಸಮಯವನ್ನು ತಿಳಿಯಬಹುದಿತ್ತು. ಯಾವ ಸೀಜನ್ನಿನಲ್ಲಿಯೂ ಒಂದೇ ಸಮಯ, ವರ್ಷದ ಹನ್ನೆರಡು ಮಾಸಗಳಲ್ಲಿ ಸೂರ್ಯನಿರುವ ಜಾಗೆಯನ್ನು ಇಂತಲ್ಲೇ ಎಂದು ನೆನಪಿಟ್ಟುಕೊಂಡು ಸಮಯವನ್ನು ಸೂಚಿಸುವ ಕಲೆ (instinct) ಈ ಅಕಶರೇಕ ಪ್ರಾಣಿಗಳಲ್ಲೋ ಅಥವಾ ಪಕ್ಷಿಗಳಲ್ಲೋ ವಂಶಪಾರಂಪರ್ಯವಾಗಿ ತಲೆಯಿಂದ ತಲೆಗೆ ಹರಿದು ಬಂದ ಮಹಾನ್ ಸೂತ್ರಗಳ ಹಾಗೆ ನಮಗೊಂದಾಗಿತ್ತು. ಒಮ್ಮೆ ಚೆನ್ನಾಗಿ ಸಮಯವನ್ನು ತೋರಿಸಿದ ಗಡಿಯಾರ ದೊಡ್ಡ ಹೊಡೆತ ಬಿದ್ದು ಒಡೆದು ಹೋಗಿ ಅಥವಾ ಕೆಟ್ಟು ಹೋಗದಿದ್ದರೆ ಯಾವತ್ತೂ ಸರಿಯಾದ ಸಮಯವನ್ನು ತೋರಿಸುವ ಸಂಭವನೀಯತೆಯೇ ಹೆಚ್ಚು. ಪ್ರತಿ ಆರು ತಿಂಗಳಿಗೊಮ್ಮೆ ಸಮಯವನ್ನು ಪುನರ್ವಿಮರ್ಶಿಸಿಕೊಂಡು ನಮ್ಮ performance ಅನ್ನಾಗಲೀ objectives ಅನ್ನಾಗಲೀ ಜಗಜ್ಜಾಹೀರು ಮಾಡುವುದಾಗಲೀ, ನಮ್ಮತನವನ್ನು ನಾವು ಪುನರ್-ವಿಂಗಡಣೆ ಮಾಡುವ ಅಗತ್ಯವೇ ಇರಲಿಲ್ಲ. ವಾಚಿನ ಡಯಲ್ ಅನ್ನು ತಿರುಗಿಸಬೇಕಾಗಿದ್ದುದು ಫೆಬ್ರುವರಿ ತಿಂಗಳಲ್ಲಿ ಮಾತ್ರ, ಪ್ರತೀವರ್ಷ, ಹಾಗೆ ಮೂರುವರ್ಷ ಫೆಬ್ರುವರಿ ತಿಂಗಳಿನಲ್ಲಿ ಒಂದು ದಿನವನ್ನು ಮುಂದೋಡಿಸಿ ಮಾರ್ಚ್ ಒಂದನ್ನು ಸಾರುವುದೇ ಮೇಂಟೆನೆನ್ಸ್ ಆಗಿತ್ತು, ಅಷ್ಟೇ.
ಅಮೇರಿಕದ ಸಮಯವೂ ನಿಖರವಾಗೇ ಇದೆ - ಅದರ ಪಾಲನೆಯಲ್ಲಿ ಆಚರಣೆಯಲ್ಲಿ ನನ್ನಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ. ಪೀಕ್ ಅವರ್ನಲ್ಲಿ ಒಂದೇ ಘಂಟೆಗೆ ನಾಲ್ಕು ನಾಲ್ಕು ಅಪಾಯಿಂಟ್ಮೆಂಟ್ಗಳನ್ನು ಬುಕ್ ಮಾಡಿ ದೊಡ್ಡ ರೂಮಿನಿಂದ ಸಣ್ಣ ರೂಮು, ಸಣ್ಣ ರೂಮಿನಿಂದ ಕಿರು ರೂಮಿನಲ್ಲಿ ನಮ್ಮನ್ನು ಕೂರಿಸಿ ಕಾಯಿಸುವಂತೆ (ಧ್ಯಾನಿಸುವಂತೆ) ಮಾಡುವ ರಿಸೆಪ್ಷನಿಷ್ಟುಗಳು ನನ್ನ ಸಮಯ ಪಾಲನೆಯ ವರ್ತನೆಯನ್ನು ಬೇಕಾದಷ್ಟು ಬದಲಾಯಿಸಿದ್ದಾರೆ. ವರ್ಷಕ್ಕೆ ಆರು ತಿಂಗಳಿಗೊಂದರಂತೆ ಎರಡು ಬಾರಿ ಬದಲಾಯಿಸುವ ಸಮಯ ನಮ್ಮ ಮನೆಯಲ್ಲಿರುವ ಗಡಿಯಾರಗಳಲ್ಲಿ ಕೊನೇಪಕ್ಷ ಒಂದಾದರೂ ಒಂದು ಘಂಟೆ ಹಿಂದೆ ಅಥವಾ ಮುಂದಿರುವಂತೆ ಮಾಡುತ್ತದೆ. ಇಲ್ಲಿರುವ ವಾಷಿಂಗ್ ಮಷೀನ್, ಕಾಫಿ ಮೇಕರ್, ಮೈಕ್ರೋವೇವ್ ಅವನ್, ಅವನ್, ಕಾರಿನಲ್ಲಿರುವ ಗಡಿಯಾರಗಳು, ಕಂಪ್ಯೂಟರ್ರಿನಲ್ಲಿರುವ ಗಡಿಯಾರಗಳು, ಇವುಗಳನ್ನೆಲ್ಲವನ್ನೂ ಆರಾರು ತಿಂಗಳಿಗೊಮ್ಮೆ ತಿರುಗಿಸಿ-ಬದಲಾಯಿಸಿ ಈಗಾಗಲೇ ನನಗೆ ಚಿಟ್ಟು ಹಿಡಿಯುವಂತೆ ಮಾಡಿರುವುದೂ ಅಲ್ಲದೇ ಒಂದೊಂದು ಗಡಿಯಾರ ಒಂದೊಂದು ಸಮಯವನ್ನು ತೋರಿಸಿ ಎಷ್ಟೋ ಸಾರಿ ಹಿಂಸಿಸುತ್ತವೆ. ನಿಮ್ಮ ಮನೆಯಲ್ಲೇನಾದರೂ ಇರುವ ಗಡಿಯಾರಗಳೆಲ್ಲ ಒಂದೇ ಸಮಯವನ್ನು ತೋರಿಸುತ್ತಿದ್ದರೆ (ನಿಖರವಾಗಿ) ನನ್ನ ಹ್ಯಾಟ್ಸ್ ಅಫ್! ನಾನಂತೂ ಸಮಯಪಾಲನೆಯನ್ನೇ ಮರೆತುಬಿಟ್ಟಿದ್ದೇನೆ - ಆಫೀಸಿನ ಫ್ಲೆಕ್ಸ್ ಅವರ್ಸ್ ಕೂಡಾ ಇದಕ್ಕೆ ಕಾರಣ ಎಂದರೆ ತಪ್ಪೇನೂ ಅಲ್ಲ.
ನಾವಷ್ಟೇ ಸಮಯವನ್ನು ಬದಲಾಯಿಸಿದರೆ ಸಾಲದು, ನಮ್ಮ ತಲೆಯಲ್ಲಿನ ಭಾರತದ ಸಮಯದ ಪ್ಲೆಸ್ಸು-ಮೈನಸ್ಸುಗಳು ಬದಲಾಗಬೇಕು, ಇದೇ ದೇಶದಲ್ಲಿರುವ ನಾಲ್ಕೈದು (ಹವಾಯಿಯನ್ನು ಸೇರಿಸಿ) ಟೈಮ್ ಝೋನ್ಗಳ ಬಗ್ಗೆ ಚಿಂತಿಸಬೇಕು, ಅದರಲ್ಲಿ ಮೂರೋ-ನಾಲ್ಕೋ ರಾಜ್ಯಗಳನ್ನು ಸಮಯವನ್ನು ಬದಲಾಯಿಸದೇ ಇರುವುದರ ಬಗ್ಗೆ ತಿಳಿದಿರಬೇಕು. ಪ್ರತಿ ಆರು ತಿಂಗಳಿಗೊಮ್ಮೆ ’ಈವರೆಗೆ ನೀನೇನು ಮಾಡಿದ್ದೀಯೋ, ಇನ್ನಾರು ತಿಂಗಳಿನಲ್ಲಿ ಏನನ್ನು ಮಾಡುವವನಿದ್ದೀಯೋ ಆ ಬಗ್ಗೆ ಫರ್ಫಾರ್ಮೆನ್ಸ್ ಆಬ್ಜೆಕ್ಟೀವ್ ಅನ್ನು ಬರೆ!’ ಎಂದು ಆದೇಶಿಸುವ ಬಾಸು-ವ್ಯವಸ್ಥೆಯ ಬಗ್ಗೆ ಹೇಳಲೇ ಬೇಕಾಗುತ್ತದೆ. ನಾವೇನು ಮಾಡಿದ್ದರೂ, ನಮ್ಮ ಇತಿಹಾಸವೇನಾಗಿದ್ದರೂ ಪ್ರತಿ ಆರು ತಿಂಗಳಿನ ಮಾಪನದಲ್ಲಿ ನಮ್ಮನ್ನು ಅಳೆಯುವುದರ ಕಾರಣ ಇಲ್ಲಿ ನಾವು ಹಿಂದಿನ goodies ಮೇಲೆ ನಂಬಿ ಕೂರುವಂತೆಯೇ ಇಲ್ಲ. ’ಆರು ತಿಂಗಳಿಗೊಮ್ಮೆ ಸಮಯವನ್ನು ಬದಲಾಯಿಸು ಹಾಗೇ ನಮ್ಮ ಆದೇಶವನ್ನು ಪೂರೈಸು!’ ಎನ್ನುವ ಹುಕುಮ್ ಗಳೇ ಹೆಚ್ಚು. ನಾನು ಅಂಥವನು, ನಾನು ಇಂಥವನು ಎಂದರೆ ’who cares?!' ಎನ್ನುವವರೇ ಹೆಚ್ಚು.
***
ನನಗೆ ಇವತ್ತಿಗೂ ಅನ್ನಿಸಿದೆ, ಇಲ್ಲಿನ ಆರಾರು ತಿಂಗಳ ಸಮಯದ ಬದಲಾವಣೆಯ ಒತ್ತಡವನ್ನು ತಾಳದೆಯೇ ನನ್ನ ಮುದ್ದಿನ ಸೀಕೋ ವಾಚು ನನ್ನಿಂದ ದೂರ ಉಳಿಯುವ ತೀರ್ಮಾನ ಮಾಡಿದ್ದು ಎಂಬುದಾಗಿ. ಭಾರತದಲ್ಲಿ ಸೊಂಪಾಗಿ ಬರೀ ಒಂದೇ ಒಂದು ಸಮಯವನ್ನು ನಿಖರವಾಗಿ ಪಾಲಿಸಿಕೊಂಡು ಇದ್ದ ಒಳ್ಳೆಯ ಹೆಸರನ್ನು ಉಳಿಸಿ-ಬೆಳೆಸಿಕೊಂಡು ಹಾಯಾಗಿದ್ದ ವಾಚು, ಕೇವಲ ನನ್ನ ನಡೆವಳಿಕೆಗಳಿಂದ ಆಹಾರವನ್ನು ಪಡೆದು ತನ್ನ ಆಂತರ್ಯದ ಪ್ರಚನ್ನ ಶಕ್ತಿಗಳ ಬಲದಿಂದ ಸದಾ ಮುಂದೆ ನಡೆಯುತ್ತಿದ್ದ ವಾಚು, ಇಲ್ಲಿ ಆರಾರು ತಿಂಗಳಿಗೊಮ್ಮೆ ಘಂಟೆಗಟ್ಟಲೆ ಮುಂದೆ ಅಥವಾ ಹಿಂದೆ ಹೋಗುವುದನ್ನು ಹೇಗಾದರೂ ಮಾನಸಿಕವಾಗಿ ಸಹಿಸಿಕೊಂಡೀತು ಎಂದು ಎಷ್ಟೋ ಸಾರಿ ನನ್ನ ಮನಸ್ಸು ಮಮ್ಮಲ ಮರುಗಿದ್ದಿದೆ. ಅಂಥ ಸುಂದರವಾದ ವಾಚು ನಿಮ್ಮ ಬಳಿಯೇನಾದರೂ ಇದೆಯೇ, ಇವತ್ತಿಗೂ ಅದು ಇಲ್ಲಿನ ಬದಲಾವಣೆಯ ಬದುಕಿಗೆ ಹೊಂದಿಕೊಂಡಿದೆಯೇ? ಹಾಗೆ ಹೊಂದಿಕೊಂಡು ಇನ್ನೂ ಜೀವಂತವಾಗಿದೆಯೇ?
ಕತ್ತಲು-ಬೆಳಕು, ಉಷ್ಣತೆ, ಅಕ್ಷಾಂಶ (altitude), ಸಮಯ, ಸಂಸ್ಕೃತಿ ಮುಂತಾದವುಗಳಲ್ಲಿ ಅಗಾಧವಾಗಿ ಭಿನ್ನವಾಗಿರುವ ನೆಲೆಗಟ್ಟು ಬಹಳಷ್ಟನ್ನು ನಿರೀಕ್ಷಿಸುತ್ತದೆ, ವ್ಯವಸ್ಥೆ ಪ್ರತಿಯೊಬ್ಬರನ್ನೂ ಅವರವರ ನಿಲುವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷಿಸುತ್ತದೆ ಅಥವಾ ಪುನರ್ವಿಮರ್ಶಿಸುತ್ತದೆ (redefine), ಈ ಬದಲಾವಣೆಗಳನ್ನು ಜಯಿಸುತ್ತಲೇ ಇರುವುದು ಸವಾಲಾಗುವುದಕ್ಕಿಂತ ಮುಖ್ಯವಾಗಿ ಬದುಕಾಗುತ್ತದೆ. ನಿನ್ನೆ ಹೀಗಿತ್ತು ಎನ್ನುವ ಹಳೆಯದು ಹೆಚ್ಚು ಪ್ರಚಲಿತವಾಗದೇ ಇಂದು ಹೀಗಿದೆ ಎನ್ನುವ ವರ್ತಮಾನಕ್ಕೆ ಇಂಬುಕೊಟ್ಟಹಾಗನ್ನಿಸುತ್ತದೆ.