"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ
ಕಾರ್ಪೋರೇಷನ್ನುಗಳ ಜಗತ್ತಾದ ಅಮೇರಿಕದ ಬಗ್ಗೆ, ಇಲ್ಲಿನ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಪ್ರಪಂಚದ ಯಾವ ಮೂಲೆಗೆ ಹೋದರೂ ಅಮೇರಿಕದ ದೊಡ್ಡ ಕಂಪನಿಗಳನ್ನು, ಅವುಗಳ ಲಾಭಗಳನ್ನು ಕಂಡು ಅಸೂಯೆಯಿಂದ ಜನ ನೋಡುವುದನ್ನು ಬೇಕಾದಷ್ಟು ಕಡೆ ಗಮನಿಸಬಹುದು. ಅಮೇರಿಕದ ಅರ್ಥ ವ್ಯವಸ್ಥೆಯ ಜೀವಾಳವೇ ಈ ದೊಡ್ಡ ಕಂಪನಿಗಳು ಆಯಿಲ್ಲಿನಿಂದ ಹಿಡಿದು ಸಾಫ್ಟ್‌ವೇರುಗಳವರೆಗೆ, ಫ್ಯಾಷನ್ ಉದ್ಯಮದಿಂದ ಹಿಡಿದು ಹೋಟೇಲ್ ಉದ್ಯಮಗಳವರೆಗೆ ಪ್ರತಿಯೊಂದೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿದೆ. ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಇಲ್ಲಿನ ಅರ್ಥ ವ್ಯವಸ್ಥೆ ಎಷ್ಟೋ ದೇಶಗಳಿಗೆ ಮಾದರಿ ಹಾಗೂ ಇಲ್ಲಿ ತುಸು ತೊಡಕಾದರೂ ಉಳಿದ ದೇಶಗಳ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಹೆಚ್ಚು. ಇಂಥಾ ಒಂದು ವ್ಯವಸ್ಥೆಯಲ್ಲಿ ಚೇತರಿಸಿಕೊಳ್ಳುತ್ತಿರುವುದು ಫಾರ್ಮಾಸ್ಯೂಟಿಕಲ್ಸ್ ಇಂಡಸ್ಟ್ರಿ - ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡುವ ನನ್ನಂಥವರೂ ಬೇಡವೆಂದರೂ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಧಾರಿಗಳೇ ಆದ್ದರಿಂದ ನಾನು ಸಾಮಾನ್ಯವಾಗಿ ಕ್ಯಾಪಿಟಲಿಸ್ಟಿಕ್ ಪ್ರಪಂಚದ ಬಗ್ಗೆ ಬರೆಯುವುದು ಕಡಿಮೆ, ಆದರೆ ಈ ದಿನ ಸುಮ್ಮನೇ ಹಾಗೆ ಒಂದು ವಿಚಾರವನ್ನು ಹರಿಯಬಿಟ್ಟರೆ ಹೇಗೆ ಎಂದೆನಿಸಿತು.
ಫ್ಯಾಕ್ಟ್:
- ಗೂಗಲ್‌ನಂತಹ ಕಂಪನಿಯವರ ಮಾರ್ಕೇಟ್ ಕ್ಯಾಪಿಟಲ್ ಸುಮಾರು 210 ಬಿಲಿಯನ್ ಡಾಲರುಗಳು (ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ)
- ಎಕ್ಸಾನ್ ಮೋಬಿಲ್ ಕಂಪನಿ ಕಳೆದ ವರ್ಷ (2006) ರಲ್ಲಿ ಸುಮಾರು 40 ಬಿಲಿಯನ್ ಡಾಲರುಗಳ ವಾರ್ಷಿಕ ಆದಾಯವನ್ನು ದಾಖಲಿಸಿದೆ
- ಮೈಕ್ರೋಸಾಫ್ಟ್ ಕಂಪನಿಗೆ ಇತ್ತೀಚೆಗೆ (ಸೆಪ್ಟೆಂಬರ್) ಯೂರೋಪಿಯನ್ ಯೂನಿಯನ್‌ವರು 690 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಮರ್ಕ್ ಕಂಪನಿಗೆ ಎರಡು ವರ್ಷಗಳ ಹಿಂದೆ (2005) ಟೆಕ್ಸಾಸ್ ಜ್ಯೂರಿ Vioxx ಮಾತ್ರೆಗಳನ್ನುಪಯೋಗಿಸಿ ಅಸುನೀಗಿದ ವ್ಯಕ್ತಿಯ ಕುಟುಂಬಕ್ಕೆ 253 ಮಿಲಿಯನ್ ಡಾಲರುಗಳ ದಂಡವನ್ನು ವಿಧಿಸಿದ್ದಾರೆ
- ಎನ್ರಾನ್ ಹಾಗೂ ಎಮ್‌ಸಿಐ ಕಂಪನಿಗಳಲ್ಲಿ ಹಣ ತೊಡಗಿಸಿ ಸಹಸ್ರಾರು ಜನ ಹಣವನ್ನು ಕಳೆದುಕೊಂಡರು
ಹೀಗೆ ಬರೆದುಕೊಂಡು ಹೋದರೆ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಆಳ ಬಹು ದೊಡ್ಡದು. ಪ್ರಪಂಚದ ಎಲ್ಲರಿಗೂ ತಮ್ಮ ಅಂಕಿ-ಅಂಶಗಳನ್ನು ಮುಕ್ತವಾಗಿ ಹಂಚುತ್ತೇವೆ, ಕಂಪನಿಯಲ್ಲಿ ಹಣ ತೊಡಗಿಸಿದವರೇ ನಿಜವಾದ ಕಂಪನಿಯ ಓನರುಗಳು, ಎಲ್ಲರ ಒಳಿತಿಗಾಗೇ ನಾವು ದುಡಿಯುವುದು ಎಂದೇನೇನೆಲ್ಲ ಸಾರಿದರೂ ಪ್ರತಿಯೊಂದು ಕಂಪನಿಗೆ ಅವರವರದೇ ಆದ ರಹಸ್ಯಗಳಿವೆ. ಅದು ತಮ್ಮ ಕಂಪನಿ ಹುಟ್ಟು ಹಾಕಿದ ಪೇಟೆಂಟ್ ಇರಬಹುದು, ಕೆಮಿಕಲ್ ಫಾರ್ಮುಲಾ ಇರಬಹುದು ಅಥವಾ ಬಿಸಿನೆಸ್ ಸ್ಟ್ರಾಟೆಜಿ ಇರಬಹುದು. ಪ್ರತಿದಿನವೂ ತಮ್ಮ ಜೀವಂತಿಕೆಯನ್ನು ಜಗತ್ತಿಗೆ ಸಾರುವುದರ ಜೊತೆಗೆ ಪ್ರತಿಯೊಂದು ಕ್ವಾರ್ಟರ್‍ಗೂ ಅನಲಿಸ್ಟ್‌ಗಳ ಪ್ರಕಾರ ತಮ್ಮ ನಂಬರುಗಳನ್ನು ಹೊರಹಾಕಿ ಮಾರ್ಕೆಟ್ಟಿನ ಒತ್ತಡಕ್ಕೆ ಸಿಲುಕುವ ಸವಾಲೂ ಕೂಡ ಈ ಕಂಪನಿಗಳಿಗಿದೆ.
***
’ಓಹ್, ಇಂಡಿಯಾದಲ್ಲಾದರೆ ಈ ಮಾತ್ರೆಗಳನ್ನು ಮುಕ್ತವಾಗಿ ಎಲ್ಲರಿಗೂ ಫ್ರೀ ಆಗಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಘಟಕಗಳಲ್ಲೂ ಹಂಚುತ್ತಾರೆ, ಆದರೆ ಆಮೇರಿಕದಲ್ಲೇಕೆ ಇಷ್ಟೊಂದು ಬೆಲೆ?’ ಎನ್ನುವುದು ಇಲ್ಲಿಗೆ ಬಂದ ಹಲವರ ಸಹಜವಾದ ಪ್ರಶ್ನೆ. ಅವರು ಹೇಳುವ ಮಾತೂ ನಿಜ: ಮಾಲಾ-ಡಿ ಅಂತಹ ಸಂತಾನ ನಿರೋಧಕ ಮಾತ್ರೆಗಳಾಗಲೀ, ಸೆಪ್ಟ್ರಾನ್‌ನಂತಹ ಲಘು ಆಂಟಿಬಯಾಟಿಕ್‌ಗಳಾಗಲೀ ಬಹಳ ಕಡಿಮೆ ಬೆಲೆಗೆ ಅಲ್ಲಿ ಸಿಕ್ಕೀತು, ಆದರೆ ಅವುಗಳ ಬೆಲೆ ಇಲ್ಲಿ ಖಂಡಿತ ದುಬಾರಿ - ಏನಿಲ್ಲವೆಂದರೂ ಒಂದು ಡೋಸ್ ಮಾತ್ರೆಗೆ ಕನಿಷ್ಟ 25 ಡಾಲರ್ ಆಗಬಹುದು, ಅಂದರೆ ಭಾರತೀಯ ರುಪಾಯಿಯಲ್ಲಿ ಸಾವಿರವಾದೀತು. ಇಲ್ಲಿನ ವ್ಯವಸ್ಥೆ ಸರಿ ಇಲ್ಲ, ಎಲ್ಲ ಕಡೆ ಚೀಪ್ ಆಗಿ ಸಿಗುವ ಮಾತ್ರೆಗಳ ಬೆಲೆಯನ್ನು ಇಲ್ಲಿನವರು ಹೆಚ್ಚಿಸಿ ದುಡ್ಡು ಮಾಡುತ್ತಾರೆ ಆದ್ದರಿಂದಲೇ ಈ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಣ ಮಾಡಿ ಮುಂದುಬರುವುದು ಎಂದು ಏಕ್‌ದಂ ನಿರ್ಧಾರಕ್ಕೆ ಬಂದು ಬಿಟ್ಟೀರಿ, ಇಲ್ಲಿನ ವ್ಯವಸ್ಥೆಯನ್ನು ಪೂರ್ತಿ ಅರಿಯುವವರೆಗೆ ಆ ರೀತಿ ತೆಗೆದುಕೊಂಡ ನಿರ್ಣಯಗಳಲ್ಲಿ ಯಾವ ಹುರುಳೂ ಇಲ್ಲ. ಹತ್ತು ವರ್ಷದ ಹಿಂದೆ ಫಾರ್ಮಾ ಕಂಪನಿಗಳು ಹತ್ತಿರಹತ್ತಿರ ವರ್ಷಕ್ಕೆ 10-15 ಬಿಲಿಯನ್ ಡಾಲರುಗಳನ್ನು R&D Spending ಗಾಗಿ ಬಳಸುತ್ತಿದ್ದವು, ಆದರೆ ಇಂದು ಏನಿಲ್ಲವೆಂದರೂ ವರ್ಷಕ್ಕೆ 40 ಬಿಲಿಯನ್‌ಗಿಂತಲೂ ಹೆಚ್ಚು ಖರ್ಚು ಮಾಡುತ್ತಿವೆ (Source: Economist), ಹಾಗೆಯೇ ಒಂದು ನೋವು ನಿವಾರಕ ಮಾತ್ರೆಯಾಗಲೀ, ಕೊಲೆಷ್ಟರಾಲ್ ಕಡಿಮೆ ಆಗುವ ಮಾತ್ರೆಗಳಾಗಲೀ ಮಾರುಕಟ್ಟೆಗೆ ಬರಲು ಕಂಪನಿಯವರು ಸುಮಾರು 600-800 ಮಿಲಿಯನ್ ಡಾಲರುಗಳನ್ನು ಖರ್ಚು ಮಾಡುತ್ತಾರೆ. ಒಮ್ಮೆ ಹಾಗೆ ಮಾರುಕಟ್ಟೆಗೆ ಬಂದ ಮೇಲೂ ಈ ಔಷಧಿ-ಮಾತ್ರೆಗಳು ತುಂಬಾ ಕಂಟ್ರೋಲ್ಡ್ ಆಗಿ ಬಳಸಲ್ಪಡುತ್ತವೆ ಜೊತೆಗೆ ತುಂಬಾ ರೆಗ್ಯುಲೇಟೆಡ್ ವ್ಯವಸ್ಥೆಯಲ್ಲಿಯೇ ವ್ಯವಹಾರ ಮುಂದುವರೆಯುತ್ತದೆ.
ಪ್ರತಿಯೊಂದು ದೇಶ-ಖಂಡದಲ್ಲಿಯೂ ಅದರದ್ದೇ ಆದ ಒಂದು ಫಾರ್ಮಾಸ್ಯೂಟಿಕಲ್ ವ್ಯವಸ್ಥೆ ಇರುತ್ತದೆ. ಕೆಲವು ದೇಶಗಳಲ್ಲಿ ಮುಕ್ತ ಸಂಶೋಧನೆಗೆ ಅವಕಾಶ ಇದ್ದರೆ ಇನ್ನು ಕೆಲವು ದೇಶಗಳಲ್ಲಿ ಮುಕ್ತ ಮಾರುಕಟ್ಟೆ ಇದ್ದಿರಬಹುದು. ಅಫಘಾನಿಸ್ತಾನದಂತಹ ದೇಶಗಳಲ್ಲಿ ಮನೆಮನೆಯಲ್ಲಿ ಅಫೀಮು/ಗಾಂಜಾ ಬೆಳೆದರೆ ಇನ್ನು ಕೆಲವು ದೇಶಗಳಲ್ಲಿ ಹಾಗೆ ಇಟ್ಟುಕೊಳ್ಳುವುದು ಕಾನೂನು ಬಾಹಿರವಾಗಬಹುದು. ಹೀಗೆ ಹಲವು ಸೂತ್ರಗಳಿಗೆ ಕುಣಿಯುವ ಔಷಧಿ ಮಾರುಕಟ್ಟೆ ಹಾಗೂ ಮಾತ್ರೆಗಳನ್ನು ಕೇವಲ ಎರಡು ಕರೆನ್ಸಿಗಳಲ್ಲಿ ಅಳೆದು ನೋಡಿ ಅಲ್ಲಿ ತುಂಬಾ ಸಸ್ತಾ ಇಲ್ಲಿ ತುಂಬಾ ದುಭಾರಿ ಎನ್ನಲಾದೀತೆ? ಜೊತೆಗೆ ಇಲ್ಲಿ ಒಂದು ಮಾತ್ರೆಯನ್ನು ಸೇವಿಸಿ - ಸೇವಿಸಿದವನದೇ ತಪ್ಪು ಇದ್ದರೂ - ಆತ ಕಂಪನಿಯ ಮೇಲೆ ಮಿಲಿಯನ್ ಡಾಲರುಗಳ ಲಾ ಸೂಟ್ ಹಾಕುವ ಹೆದರಿಕೆ ಇದೆ, ಮತ್ತೊಂದು ಕಡೆ ಸತ್ತವರು ಹೇಗೆ ಸತ್ತರು ಎಂದು ಕೇಳುವ/ಹೇಳುವ ವ್ಯವಸ್ಥೆಯೂ ಇದ್ದಿರಲಾರದು. ಯಾವುದೇ ಒಂದು ಉತ್ಪನ್ನದಲ್ಲಿ ಏನಾದರೂ ಹೆಚ್ಚು-ಕಡಿಮೆ ಕಾಣಿಸಿಕೊಂಡರೆ ಇಲ್ಲಿ ಅಂತಹ ಉತ್ಪನ್ನವನ್ನು ರೀಕಾಲ್ ಮಾಡುವ ವ್ಯವಸ್ಥೆ ಇದೆ, ಉದಾಹರಣೆಗೆ ಎರಡು ವರ್ಷಗಳ ಹಿಂದೆ ನಾನೇ ಕೊಂಡು ಉಪಯೋಗಿಸಿದ ಮಕ್ಕಳಿಗೆ ಹಾಕುವ ಬಿಬ್ ಒಂದನ್ನು ಮೊನ್ನೆ ಟಿವಿಯ ವರದಿಯಲ್ಲಿ ತೋರಿಸಿದರೆಂದು - ಅದರಲ್ಲಿ ಲೆಡ್ ಪೇಂಟ್ ಇರಬಹುದಾದ ಬಗ್ಗೆ -ಇನ್ಯಾವುದೋ ಅಂಗಡಿಯೊಂದಕ್ಕೆ ತೆಗೆದುಕೊಂಡು ಹೋಗಿ ಕೊಟ್ಟರೆ ಅದರ ಪೂರ್ಣ ಬೆಲೆಯನ್ನು ಒಂದೂ ಪ್ರಶ್ನೆಯನ್ನು ಕೇಳದೇ ಹಿಂತಿರುಗಿಸಿದರು. ಹೀಗೆ ಒಂದು ಉತ್ಪನ್ನವನ್ನು ಅದೇ ಕೆಮಿಕಲ್ ಕಂಪೋಸಿಷನ್ ಇದ್ದ ಮಾತ್ರಕ್ಕೆ ಎರಡು ದೇಶಗಳ ಬೇರೆ ಬೇರೆ ವ್ಯವಸ್ಥೆಯಲ್ಲಿ ತೂಗಿ ನೋಡಲು ಬರೋದಿಲ್ಲ ಎನ್ನುವುದು ನನ್ನ ಅನಿಸಿಕೆ. ಇನ್ಯಾರಾದರೂ ನಿಮಗೆ ಭಾರತದಲ್ಲಿ ತಲೆ ನೋವಿನ ಮಾತ್ರೆ ರೂಪಾಯಿಗೆ ಒಂದು ಸಿಗುತ್ತದೆ ಎಂದು ಹೇಳಿದರೆ ನೀವು ಅವರಿಗೆ ಇಲ್ಲಿ ಗ್ಯಾಸೋಲಿನ್ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಮರು ಉತ್ತರ ಕೊಡಬಹುದು!
ಫಾರ್ಮಾಸ್ಯೂಟಿಕಲ್ ಕಂಪನಿಗಳವರು ಏನೇನನ್ನಾದರೂ ಮಾಡಿ ತಮ್ಮ ತಮ್ಮ ಮಾತ್ರೆ-ಔಷಧಿಗಳನ್ನು ಹೊರತರಬಹುದು - ಆದರೂ ಅಮೇರಿಕನ್ ವ್ಯವಸ್ಥೆಯಲ್ಲಿ ಅವರು ಬಹಳ ಕಷ್ಟನಷ್ಟವನ್ನು ಅನುಭವಿಸೋದಂತೂ ನಿಜ. ಇಷ್ಟು ಕಷ್ಟಪಟ್ಟು ಹೊರಡಿಸಿದ ಉತ್ಪನ್ನವನ್ನು ಉದಾಹರಣೆ ಏಡ್ಸ್ ಔಷಧಿ/ಮಾತ್ರೆಗಳನ್ನು ಆಫ್ರಿಕಾ ಖಂಡದಲ್ಲಿ ಕಾಲು ಭಾಗ ಜನರಿಗೆ ಏಡ್ಸ್ ಇದೆಯೆಂದ ಮಾತ್ರಕ್ಕೆ ಅಲ್ಲಿ ಪುಕ್ಕಟೆ ಮಾತ್ರೆಗಳನ್ನು ಹಂಚಲು ಹೇಗೆ ಸಾಧ್ಯ?
***
ಈ ರೀತಿ ಜನರ ಮನಸ್ಸಿನಲ್ಲಿ ಆಲೋಚನೆಗಳು ಬರಲು ಬೇಕಾದಷ್ಟು ಕಾರಣಗಳಿವೆ. ಪ್ರಿನ್ಸೆಸ್ ಡಯಾನಾ ಸತ್ತಳೆಂದು ಭಾರತದ ವೃತ್ತಪತ್ರಿಕೆಗಳು ವರದಿ ಮಾಡುವಾಗ ಆಕೆ ಕುಳಿತಿದ್ದ ಕಾರು ಅತಿವೇಗದಿಂದ ಚಲಿಸುತ್ತಿತ್ತು ಎಂದು ಬರೆಯುತ್ತಾ ಆಕೆ ಕುಳಿತ ಕಾರು ಘಂಟೆಗೆ ನೂರಾ ಇಪ್ಪತ್ತು (ಅಂದಾಜು) ಕಿಲೋ ಮೀಟರ್ ಓಡುತ್ತಿತ್ತು ಎಂದು ಭಾರತದಲ್ಲಿ ಘಂಟೆಗೆ ಅರವತ್ತು ಕಿಲೋಮೀಟರ್ ವೇಗದಲ್ಲಿ ಓಡಾಡುವ ಜನರಿಗೆ ದಂಗುಬಡಿಸುತ್ತಾರೆ, ಆವರಣದಲ್ಲಿ ಅಲ್ಲಿನ ಸ್ಪೀಡ್ ಲಿಮಿಟ್ ಅನ್ನು ಕೊಟ್ಟರೆ ಏನಿಲ್ಲವೆಂದರೂ ಮುಂದುವರೆದ ದೇಶದ ಹೈವೇಗಳಲ್ಲಿ ಘಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಜನರು ಕಾರು ಚಲಿಸುವುದು ಸರ್ವೇ ಸಾಮಾನ್ಯ ಎನ್ನುವ ಅಂಶ ಓದುಗರಿಗೆ ಮನವರಿಕೆಯಾದೀತು. ಇತ್ತೀಚೆಗೆ ಒಂದು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ ಒಬ್ಬ ಅಂಕಣಕಾರರು Al Gore ಗೆ ನೊಬೆಲ್ ಶಾಂತಿ ಪಾರಿತೋಷಕ ಬಂದಿದ್ದರ ಬಗ್ಗೆ ಬರೆಯುತ್ತಾ ಆಲ್ ಗೊರೆ ಎಂದು ಬರೆದಿದ್ದನ್ನು ನೋಡಿ ನಗು ಬಂತು. ನಾವೆಲ್ಲ ಶಾಲಾ ಕಾಲೇಜಿನಲ್ಲಿದ್ದ ದಿನಗಳಲ್ಲಿ ಬಿಬಿಸಿ ಅಥವಾ ಇತರ ಸುದ್ದಿಗಳನ್ನು ಕೇಳಿ ವಿದೇಶಿ ಹೆಸರುಗಳನ್ನು ಸರಿಯಾಗಿಯೇ ಉಚ್ಚರಿಸುತ್ತಿದ್ದೆವು. ಒಬ್ಬ ಅಂಕಣಕಾರ ’ಗೊರೆ’ ಎಂದು ಬರೆಯುತ್ತಾರೆಂದರೆ ಅವರು ರೆಫೆರೆನ್ಸ್ ಮಾಡಿರುವ ವಿಷಯ ಕೇವಲ ಇಂಟರ್‌ನೆಟ್‌ಗೆ ಮಾತ್ರ ಸೀಮಿತ ಎಂದು ಅನುಮಾನ ಬರುತ್ತದೆ. 1988 ರಲ್ಲಿ Seoul ನಲ್ಲಿ ಓಲಂಪಿಕ್ಸ್ ಆದಾಗ ಭಾರತದ ಮಾಧ್ಯಮಗಳು ಮೊದಮೊದಲು "ಸಿಯೋಲ್" ಎಂದು ವರದಿ ಮಾಡಿ ನಂತರ "ಸೋಲ್" ಎಂದು ತಿದ್ದಿಕೊಂಡಿದ್ದವು. ಹೆಸರಿನಲ್ಲೇನಿದೆ ಬಿಡಿ, ಅದು ನಾಮಪದ ಯಾರು ಹೇಗೆ ಬೇಕಾದರೂ ಉಚ್ಚರಿಸಬಹುದು ಬಳಸಬಹುದು, ಆದರೆ ನಮ್ಮ ವರದಿಗಾರರು ಅಲ್ಲಿಲ್ಲಿ ಕದ್ದು ವಿಷಯವನ್ನು ಪೂರ್ತಿ ಗ್ರಹಿಸದೇ ಮಾಡುವ ತಪ್ಪುಗಳಿಗೆ ಅಮಾಯಕ ಜನರು ಬಲಿಯಾಗಬೇಕಾಗುತ್ತದೆ ಎನ್ನುವುದು ನನ್ನ ಕಳಕಳಿ.
"ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ - ಆದ್ದರಿಂದ "ಆ ದೇಶ" ಸರಿ ಇಲ್ಲ - ಎನ್ನುವ ಮಾತುಗಳು ಇನ್ನಾದರೂ ಕಡಿಮೆಯಾಗಲಿ.