ಇದನ್ನು ಬರೀತಾ ಇರಬೇಕಾದ್ರೆ ಭಾನುವಾರ ಸಾಯಂಕಾಲ - ಇನ್ನೇನು ನಾಳೆ ಬರೋ ಸೋಮವಾರ ಹೆದರ್ಸೋ ಹೊತ್ತಿಗೆ ಇವತ್ತಿನ ಉಳಿದ ಭಾನುವಾರವನ್ನಾದ್ರೂ ಅನುಭವಿಸೋಣ ಎಂದುಕೊಂಡು ಕುಳಿತ್ರೆ ಹಾಳಾದ್ ಆಲೋಚ್ನೆಗಳು ಬಹಳ ದಿನಗಳ ನಂತರ ಸಿಕ್ಕಿರೋ ಸ್ನೇಹಿತ್ರ ಥರ ತಬ್ಬಿಕೊಂಡ್ ಬಿಡೋದೂ ಅಲ್ದೇ ಒಂದೇ ಉಸಿರಿನಲ್ಲಿ ಏನೇನೆಲ್ಲ ಪ್ರಶ್ನೆಗಳನ್ನು ಕೇಳೋ ಹಾಗೆ ಅಲೆಗಳನ್ನು ಹುಟ್ಟಿಸ್ತಾವೆ! ಭಾನುವಾರ ರಾತ್ರೆ ಆಗುತ್ತಿದ್ದ ಹಾಗೆ ಸುಬ್ಬನ ಆಲಾಪನೆ ಆರಂಭಿಸಿ ಹಗುರವಾದ ಹಾಸ್ಯಕ್ಕೆ ಕೈ ಹಾಕ್ಲೋ ಅಥವಾ ಮನದ ಮೂಲೆಯಲ್ಲಿ ಕೊರೀತಾ ಇರೋ ರಿವರ್ಸ್ ಮೈಗ್ರಂಟ್ ಅನ್ನೋ ಹುಳುವನ್ನು ಹೊರಕ್ಕೆ ಹಾಕ್ಲೋ ಅಂತ ಯೋಚಿಸ್ತಿದ್ದಾಗ ರಿವರ್ಸ್ ಮೈಗ್ರಂಟೇ ಫುಲ್ ಸ್ವಿಂಗ್ನಲ್ಲಿ ಹೊರಗ್ ಬರ್ತಾ ಇದೆ...ನಿಮ್ಮ ಕಷ್ಟ ನಿಮಗೆ!
***
ಈ ರಿವರ್ಸ್ ಮೈಗ್ರಂಟ್ ಅನ್ನೋ ಮಹಾನುಭಾವರು ಮತ್ಯಾರೂ ಅಲ್ಲಾ - ನಾವೂ ನೀವೂ ಹಾಗೂ ನಮ್ಮೊಳಗಿನ ಇವತ್ತಲ್ಲಾ ನಾಳೆ, ನಾಳೆ ಅಲ್ಲಾ ನಾಳಿದ್ದು ವಾಪಾಸ್ ಹೋಗ್ತೀವಿ ಅನ್ನೋ ಧ್ವನಿ ಅಷ್ಟೇ. ಯಾಕ್ ವಾಪಾಸ್ ಹೋಗ್ತೀವಿ, ಹೋಗ್ಬೇಕು ಅನ್ನೋ ಪ್ರಶ್ನೆಗಳಿಗೆ ಉತ್ರ ಸುಲಭವಾಗಿ ಮೆಲ್ನೋಟಕ್ಕೆ ಸಿಕ್ಕಂತೆ ಕಂಡ್ರೂ ಅದರ ಆಳ ಅವರವರ ಎತ್ರದಷ್ಟೇ ಇರುತ್ತೆ. ಸ್ಯಾಟಿಸ್ಫ್ಯಾಕ್ಷನ್ ಅಥವಾ ತೃಪ್ತಿ ಅನ್ನೋದು ಉತ್ತರಗಳ ಯಾದಿಯಲ್ಲಿ ಮೊದಲು ನಿಲ್ಲೋ ಭೂಪ ಅಷ್ಟೇ, ಅಲ್ಲಿಂದ ಆರಂಭವಾದದ್ದು - ಸುಖವಾದ ಜೀವನ (whatever that means), ಮಕ್ಕಳ ವಿದ್ಯಾಭ್ಯಾಸ, ಬಂಧು-ಬಳಗದ ಆಸರೆ ಆರೈಕೆ, ಸಾಯೋದ್ರೊಳಗೆ ಏನಾದ್ರೊಂದ್ ಮಾಡಿ ಸಾಯ್ಬೇಕು ಅನ್ನೋ ಬಯಕೆ, ನಮ್ ನಮಗೆ ಬೇಕಾದ ವೃತ್ತಿ-ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು ಅನ್ನೋ ಆಸೆ, ಇಲ್ಲಿಯಷ್ಟೇ ಅಲ್ಲೂ ಕಮಾಯಿಸಬಹುದು ಅನ್ನೋ ಅದಮ್ಯ ಉತ್ಸಾಹ - ಇತ್ಯಾದಿ ಹೀಗೆ ಈ ಸಾಲಿನಲ್ಲಿ ತುಂಬುವ ಪದಗಳಿಗೆ ಕೊರತೆಯೇ ಇರೋದಿಲ್ಲ. ನಾವು, ನಮ್ಮ ಸಂಸ್ಕೃತಿ, ನಮ್ಮ ಜನ, ನಮ್ಮ ನೆರೆಹೊರೆ, ನಮ್ಮ ಸಮಾಜ ಮುಂತಾಗಿ ನಮ್ಮನ್ನು ಸುತ್ತುಬಳಸಿಕೊಂಡಿರೋ ಕನಸುಗಳು ಇವತ್ತಿಗೂ ನಮ್ಮೂರಿನ ಸುತ್ಲೂ ಗಿರಕಿ ಹೊಡೆಯೋದು ನನ್ನಂತಹವರ ಅನುಭವ, ಅದಕ್ಕೆ ತದ್ವಿರುದ್ಧವಾಗಿ ಕೆಲವರಿಗೆ ಇನ್ನು ಬೇರೆಬೇರೆ ರೀತಿಯ ಕನಸುಗಳು ಇರಬಹುದು. ಕನಸುಗಳು ಹೇಗೇ ಬೀಳಲಿ - ಅವುಗಳು ಬಣ್ಣದವೋ, ಅಥವಾ ಕಪ್ಪು-ಬಿಳಿಪಿನವೋ ಯಾರು ಹೇಳಬಲ್ಲರು? ಒಂದೇ ಸಾಲಿನಲ್ಲಿ ಹೇಳಬೇಕೆಂದರೆ (ಕಡ್ಡಿ ಮುರಿದ ಹಾಗೆ), ಇಲ್ಲಿ ಬಂದು ಕಲಿತ ವಿದ್ಯೆ-ಅನುಭವವನ್ನು ಬೇರೆಡೆ ಬಳಸಿ ಅಲ್ಲಿ ಬದಲಾವಣೆಗಳನ್ನು ಮಾಡುವುದು ರಿವರ್ಸ್ ಮೈಂಗ್ರಂಟುಗಳ ಮನಸ್ಸಿನಲ್ಲಿ ಇರುವ ಮತ್ತೊಂದು ಚಿಂತನೆ.
ಭಾರತದಿಂದ ಅಮೇರಿಕಕ್ಕೆ ಬರೋದು ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೋ ಅಥವಾ ಇಸ್ಲಾಮಿಗೋ ಮತಾಂತರವಾದಷ್ಟೇ ಸುಲಭ (ಅಥವಾ ಕಷ್ಟ) - ಅದೇ ಅಮೇರಿಕದಿಂದ ಭಾರತಕ್ಕೆ ಹಿಂತಿರುಗಿ ಹೋಗೋದಿದೆಯಲ್ಲಾ ಅದು ಬೇರೆ ಯಾವುದೋ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಷ್ಟೇ ಸಂಕೀರ್ಣವಾದದ್ದು. ಹಿಂದೂ ಧರ್ಮಕ್ಕೆ ಮತಾಂತರಗೊಂಡವರು ಯಾವ ಜಾತಿಗೆ ಸೇರುತ್ತಾರೆ, ಯಾವ ಭಾಷೆ, ಸಂಸ್ಕೃತಿಯನ್ನು ಅನುಸರಿಸುತ್ತಾರೆ? ಹಾಗೇ ನಮ್ಮ ಅನಿವಾಸಿ ನೆಲೆಯಿಂದ ನಾವು ಹಿಂತಿರುಗುವುದೆಲ್ಲಿಗೆ? ಬರೀ ಭಾರತದ ಗಡಿಯೊಳಗೆ ನುಸುಳೋಣವೋ, ದೆಹಲಿ, ಬಾಂಬೆ, ಮದ್ರಾಸ್ನಲ್ಲಿ ನೆಲೆಸೋಣವೋ? ನಮ್ಮದಲ್ಲದ ಬೆಂಗಳೂರಿಗೆ ಹಿಂತಿರುಗೋಣವೋ? ವೃದ್ದಾಪ್ಯದ ಹೊಸ್ತಿಲಲ್ಲಿರುವವರನ್ನು ಹೊರತು ಪಡಿಸಿ ಬೇರೆ ಯಾರೂ ನಮ್ಮನ್ನು ಗುರುತಿಸದ ನಮ್ಮೂರಿಗೆ ಹೋಗೋಣವೋ? ಎಲ್ಲಿ ಕೆಲಸ ಮಾಡುವುದು? ಯಾವ ಕೆಲಸ ಮಾಡುವುದು? ಎಲ್ಲಿ ನೆಲೆಸುವುದು? ಯಾವ ಭಾಷೆ ಮಾತನಾಡುವುದು? ಹೀಗೆ ಪ್ರಶ್ನೆಗಳ ಯಾದಿ ಬೆಳೆಯುತ್ತಾ ಹೋಗುತ್ತೇ ವಿನಾ ಅವುಗಳ ಹಿಂದಿನ ಉತ್ತರದ ವ್ಯಾಪ್ತಿ ಕಡಿಮೆ ಏನೂ ಆಗೋದಿಲ್ಲ.
***
ನಾವು ಅಲ್ಲಿಗೆ ಹೋಗಿ ಮಾಡಬೇಕಾದ ಬದಲಾವಣೆಯ ಬಗ್ಗೆ, ಅಂತಹ ಉನ್ನತವಾದ ಪರಿಕಲ್ಪನೆಗಳ ಬಗ್ಗೆ ಒಂದಿಷ್ಟು ಯೋಚಿಸಬೇಕು. ನಾವು ಸಾಮಾಜಿಕ ಹರಿಕಾರರಲ್ಲ - ಬಸವಣ್ಣ, ಬುದ್ಧ, ಗಾಂಧಿಯವರು ಕಲಿಯುಗದಲ್ಲಿ ಮತ್ತೆ ಹುಟ್ಟೋಲ್ಲ. ನಮ್ಮ ನೆರೆಹೊರೆ, ನಮ್ಮ ಆಸುಪಾಸು, ನಮ್ಮ ಹಿತ್ತಲು-ಅಂಗಳಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಒಂದು ಬದಲಾವಣೆ, ನಾವು ಶಿಸ್ತಿನ ಜೀವನವನ್ನು ಸಾಗಿಸಿಕೊಂಡು ಹೋಗಬೇಕಾದ್ದು ಮತ್ತೊಂದು ಬದಲಾವಣೆ, ದೊಡ್ಡ ಸಾಗರದ ಅಲೆಗಳಲ್ಲಿ ಮಾತ್ರ ನಮ್ಮನ್ನು ನಾವು ಕಳೆದುಕೊಳ್ಳದೇ ಅಗಾಧವಾದ ಸಮುದ್ರದಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಂಡು ಅದರಲ್ಲಿ ಈಸಿ-ಜಯಿಸುವುದು ದೊಡ್ಡ ಬದಲಾವಣೆ. ಇಷ್ಟೆಲ್ಲಾ ಆಗುತ್ತಿರುವಲ್ಲೇ ಏನಾದರೊಂದನ್ನು ಮಾಡಬೇಕು ಎನ್ನುವ ತುಡಿತಕ್ಕೆ ಉತ್ತರವನ್ನು ಕಂಡುಕೊಳ್ಳಬೇಕು, ಅದು ಇನ್ನೂ ದೊಡ್ಡ ಬದಲಾವಣೆ - ಒಂಥರಾ ಕಷ್ಟಪಟ್ಟು ಜೀಕೀ ಜೀಕಿ ಹಳೆಯ ಸೈಕಲ್ಲ್ನಲ್ಲಿ ಬೆಟ್ಟವನ್ನು ಹತ್ತುತ್ತಿರುವ ಹುಡುಗನಿಗೆ ಹಾಗೆ ಹತ್ತುತ್ತಿರುವಾಗಲೇ ರಾಷ್ಟ್ರಗೀತೆಯನ್ನು ಹಾಡು ಎಂದು ಆದೇಶಿಸಿದ ಹಾಗೆ. ಓಹ್, ಈ ಮೇಲಿನ ವಾಕ್ಯಗಳಲ್ಲಿ ಬದಲಾವಣೆಯ ಬಗ್ಗೆ ಬರೆಯಬೇಕಿತ್ತು, ಕ್ಷಮಿಸಿ - ಸವಾಲುಗಳು ಬದಲಾವಣೆಗಳಾಗಿ ನನಗರಿವಿಲ್ಲದಂತೆಯೇ ಹೊರಬಂದುಬಿಟ್ಟವು. ಇಲ್ಲಿನದನ್ನು ಕಂಡು ಅನುಭವಿಸಿ, ಅಲ್ಲಿ ಬದಲಾವಣೆಯನ್ನು ತರಬಯಸುವ ನಾವು ಅದಕ್ಕೆ ಮೊದಲು ಅಲ್ಲಿಯದನ್ನು ಪುನಃ ಅವಲೋಕಿಸಬೇಕಾಗುತ್ತದೆ, ಏಕೆಂದರೆ ನಮ್ಮ ಅನುಭವದ ಭಾರತ ಬಹಳಷ್ಟು ಬದಲಾಗಿದೆ ಈಗಾಗಲೇ. ಮೊದಲು ಅಲ್ಲಿ ಹೋಗಿ ನೆಲೆಸಿ, ಅಲ್ಲಿಯದನ್ನು ಅನುಭವಿಸಿ, ನಂತರ ಎರಡನ್ನೂ ಕಂಡ ಮನಸ್ಸಿಗೆ ಅಲ್ಲಿನ ಸವಾಲುಗಳನ್ನು ಎದುರಿಸಿ ಇನ್ನೂ ಚೈತನ್ಯವೆನ್ನೋದೇನಾದರೂ ಉಳಿದಿದ್ದರೆ, ಮುಂದೆ ಬದಲಾವಣೆಯ ಮಾತು ಬರುತ್ತದೆ!
ನಿಮಗ್ಗೊತ್ತಾ, ಎಷ್ಟೋ ಜನ ಇಲ್ಲಿಂದ ಹಿಂತಿರುಗಿ ಹೋದವರು ಇಲ್ಲಿ ಸುಖವಾಗೇ ಇದ್ದರು - ಒಳ್ಳೆಯ ಸಂಬಳ ಮನೆ ಎಲ್ಲವೂ ಇತ್ತು. ಅಂಥಹದ್ದನ್ನು ತೊರೆದು ತಮ್ಮ ತಾಯ್ನಾಡಿಗೆ ಮರಳುವುದು ಬಹಳ ಕಷ್ಟದ ನಿರ್ಧಾರ. ಒಂದೆರಡು ವರ್ಷಗಳ ದುಡಿಮೆಗೆ ಬಂದು ಹಿಂತಿರುಗಿದವರ ಬಗ್ಗೆ ಹೇಳ್ತಾ ಇಲ್ಲಾ ನಾನು. ಸುಮಾರು ಹತ್ತು-ಹದಿನೈದು ವರ್ಷ ಇದ್ದು ಇಲ್ಲಿನದ್ದನ್ನು ಸಾಕಷ್ಟು ಕಂಡು ಅನುಭವಿಸಿ ಮುಂದೆ ಆ ಮಹತ್ತರ ನಿರ್ಧಾರವನ್ನು ಕೈಗೊಂಡ ಮಹಾನುಭಾವರ ಬಗ್ಗೆ. ಕೆಲವರು ಅವರವರ ಹೆಂಡತಿ ಮಕ್ಕಳು ತಮ್ಮ ವೃತ್ತಿಯ ಬಗ್ಗೆ ಮಾತ್ರ ಯೋಚಿಸಿ ಅಂತಹ ನಿರ್ಧಾರವನ್ನು ಸೆಪ್ಪೆಯಾಗಿಸಿಬಿಡುತ್ತಾರೆ, ಆದರೆ ಒಟ್ಟಾರೆ ಕುಟುಂಬದ ಮೇಲಿನ ಪರಿಣಾಮ - ಲಾಂಗ್ಟರ್ಮ್ ಹಾಗೂ ಶಾರ್ಟ್ಟರ್ಮ್ - ಬಹಳ ಹೆಚ್ಚಿನದ್ದು. ಹೀಗೆ ಹಿಂತಿರುಗುವ ಮನಸ್ಥಿತಿಗಳು ಹಲವು, ಅವುಗಳ ಹಿಂದಿನ ಕಾರಣಗಳು ಬೇಕಾದಷ್ಟಿರುತ್ತವೆ, ಇಂತಹ ಕಾರಣಗಳ ಹಿಂದಿನ ಸ್ವರೂಪವನ್ನು ಶೋಧಿಸಿ ನೋಡಿದಾಗ, ಅಂತಹ ಮನಸ್ಥಿತಿಗಳ ಆಳಕ್ಕೆ ಇಳಿದಾಗಲೇ ಅದರಲ್ಲಿನ ಸೊಗಸು ಗೊತ್ತಾಗೋದು. ಇಲ್ಲವೆಂದಾದರೆ ಈ ರಿವರ್ಸ್ ಮೈಂಗ್ರಂಟ್ಗಳ ಮನಸ್ಸು ಯಾವುದೋ ಒಂದು ಸಣ್ಣಕಥೆಯ ನಾಯಕಪಾತ್ರವಾಗಿ ಹೋದೀತು, ಅಥವಾ ಯಾರೋ ಒಬ್ಬರು ಅಮೇರಿಕವನ್ನು ಆರು ತಿಂಗಳ ಪ್ರವಾಸದಲ್ಲಿ ನೋಡಿ ಬರೆದ ಕಥನವಾದೀತು. ಮುಗಿಲಿನಿಂದ ಬೀಳುವ ಮಳೆ ಹನಿಯನ್ನು ಕೇವಲ ಕೆಲವೇ ಅಡಿಗಳ ಎತ್ತರದಲ್ಲಿ ನೋಡಿ ಅದು ನೆಲವನ್ನು ಅಪ್ಪುವುದನ್ನು ಪೂರ್ಣ ಅನುಭವ ಎಂದು ಹೇಗೆ ಒಪ್ಪಲಾದೀತು, ಆ ನೀರು ಎಲ್ಲಿಂದ ಬಂತು ಎಲ್ಲಿಗೆ ಸೇರುತ್ತೆ, ಹೇಗೆ ಸೇರುತ್ತೆ ಎಂದು ಕೆದಕಿ ನೋಡದ ಹೊರತು?
ಅದಕ್ಕೋಸ್ಕರವೇ ಅನಿವಾಸಿಗಳ ಮನಸ್ಥಿತಿ ಅನಿವಾಸಿಗಳಿಗೇ ತಿಳಿಯದಷ್ಟು ಸಂಕೀರ್ಣವಾಗಿ ಹೋಗೋದು. ನಾವು ಅಂಚೆಗೆ ಹಾಕಬೇಕಾದ ಪತ್ರಗಳು ಸಾಕಷ್ಟು ತಡವಾಗೋದು, ನಾವು ಕರೆ ಮಾಡುತ್ತೇವೆ ಎಂದು ಮಾತುಕೊಟ್ಟದ್ದು ತಪ್ಪೋದು ಅಥವಾ ವಿಳಂಬವಾಗೋದು, ಅಥವಾ ನಮ್ಮವರೊಡಗೋಡಿ ಒಂದಿಷ್ಟರ ಮಟ್ಟಿಗೆ ನಕ್ಕು ನಲಿಯದೇ ಹೋಗೋ ಹಾಗೆ ಚಪ್ಪಟೆ ಮುಖವನ್ನು ಹೊರಹಾಕೋದು, ಸಮಯವನ್ನು ಜಯಿಸುತ್ತೇವೆ ಅನ್ನೋ ಉತ್ಸಾಹ ಕ್ರಮೇಣ ಕಡಿಮೆಯಾಗೋದು, ಊಟ-ತಿಂಡಿ ಆಚಾರ-ವಿಚಾರಗಳ ವಿಷಯದಲ್ಲಿ ಸಾಕಷ್ಟು ಕಲಸುಮೇಲೋಗರವಾಗೋದು. ಇಲ್ಲವೆಂದಾದರೆ ಮನೆಯಲ್ಲಿ ಯಾವ ಆರ್ಡರಿನಲ್ಲಿ ಹುಟ್ಟಿಬೆಳೆದಿದ್ದರೂ ಉಳಿದವರೆಲ್ಲರಿಗೂ ಆದೇಶಿಸುವಷ್ಟು ದಾರ್ಷ್ಟ್ಯವೆಲ್ಲಿಂದ ಬರುತ್ತಿತ್ತು? ಪ್ರತಿಯೊಂದು ಸವಾಲುಗಳಿಗೂ ನಮ್ಮಲ್ಲಿ ಉತ್ತರವಿದೆಯೆನ್ನೋ ಭ್ರಮೆಯಲ್ಲಿ ನಾವು ಸ್ವಲ್ಪ ಕಾಲ ಬಳಲಿ, ನಮ್ಮನ್ನು ನಂಬಿದವರು ಅದನ್ನು ಕೊನೆಯವರೆಗೂ ನಂಬಿಕೊಂಡೇ ಇರುವಂತೇಕಾಗುತ್ತಿತ್ತು? ಅಥವಾ ನಾವು ಹೀಗೆ ಮಾಡುತ್ತೇವೆ, ಹಾಗೆ ಮಾಡುತ್ತೇವೆ ಎನ್ನೋ ಮಾತುಗಳು 'ಹಾಗೆ ಮಾಡಬಲ್ಲೆವು' ಎಂದು ಬದಲಾಗಿ, ಮುಂದೆ 'ಹಾಗೆ ಮಾಡಬಹುದಿತ್ತು' ಎಂದು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಗೊಳ್ಳುತ್ತಿತ್ತೇಕೆ?
***
ರಿವರ್ಸ್ ಮೈಂಗ್ರಂಟುಗಳ ಮನದಾಳದಲ್ಲೇನಿದೆ, ಸುಖವಾಗಿ ಬದುಕುವ ಅದಮ್ಯ ಆಸೆಯೊಂದನ್ನು ಹೊರತುಪಡಿಸಿ? ಸರಿ, ಸುಖವಾಗಿ ಬದುಕುವುದು ಎಂದರೇನು - ಇಲ್ಲದ್ದನ್ನು ಊಹಿಸಿ ಕೊರಗದಿರುವುದೇ? ಇನ್ನೂ ಸರಳವಾದ ಪ್ರಶ್ನೆ - ನಮಗೆ ಎಂದಿದ್ದರೂ ಯಾವುದೋ ಒಂದು ವಸ್ತುವಿನ ಕೊರತೆ ಇದ್ದೇ ಇರುತ್ತದೆ ಎನ್ನುವುದು ಸತ್ಯವಾದರೆ, ಅದನ್ನು ಆದಷ್ಟು ಬೇಗ ಮನಗಂಡು ಅದರ ಬಗ್ಗೆ ಮುಂದೆ ಯೋಚಿಸದೇ ಇರುವಂತೇಕೆ ಸಾಧ್ಯವಾಗುವುದಿಲ್ಲ?
***
ಸದ್ಯಕ್ಕೆ ಇವೆಲ್ಲ ಪ್ರಶ್ನೆಗಳ ರೂಪದಲ್ಲೇ ಕೂತಿವೆ, ಒಂದು ರೀತಿ ತನ್ನ ಸುತ್ತಲಿನ ಎಲೆಗಳನ್ನು ಕಬಳಿಸುತ್ತಾ ಬೆಳೀತಾ ಇರೋ ಕಂಬಳಿ ಹುಳುವಿನ ಥರ. ಮುಂದೆ ಅದೊಂದು ಗೂಡನ್ನು ಸೇರಿ ಅಲ್ಲಿ ಸುಖನಿದ್ರೆಯನ್ನು ಅನುಭವಿಸುತ್ತೆ. ಒಂದುವೇಳೆ, ನಿದ್ರೆಯಿಂದ ಎಚ್ಚರವಾಗಿ ನೆರೆಹೊರೆ ಕಂಬಳಿಹುಳು ಚಿಟ್ಟೆಯಾಗುವ ಬದಲಾವಣೆಯನ್ನು ಸಹಿಸಿಕೊಳ್ಳುವುದೆಂದಾದರೆ ಒಂದಲ್ಲ ಒಂದು ಆ ಚಿಟ್ಟೆ ತನ್ನ ಪಯಣವನ್ನು ಆರಂಭಿಸುವುದು ನಿಜ - ಆದರೆ ಈ ಪರಿವರ್ತನೆ ಬಹಳ ದೊಡ್ಡದು, ಅದರ ವ್ಯಾಪ್ತಿ ಇನ್ನೂ ಹೆಚ್ಚು ಹಾಗೂ ಅದರ ಹಿಂದಿನ ಮನಸ್ಥಿತಿಯ ಸಂಕೀರ್ಣತೆ ಬಹಳ ಮುಖ್ಯವಾದದ್ದು.