Friday, August 24, 2007

ವರ್ಷಾವಧಿ ಶ್ರಾವಣ...ಬೋರ್ ಹೊಡೆಸೋ ಮಾಧ್ಯಮ

ಹಾಳಾದ್ದು, ಈ ವಾರ ಏನ್ ಬರೆದ್ರೂ ಅನಿವಾಸಿ ವಿಷಯಗಳೇ ತುಂಬ್‌ಕೊಂಡ್ ಬರ್ತಾ ಇವೆ, ಒಂಥರಾ ಈ ರಸ್ತೆ ಸುರಕ್ಷಾ ಸಪ್ತಾಹ ಇದ್ದ ಹಾಗೆ - ಎಲ್ಲಿ ನೋಡಿದ್ರೂ ಪರಕೀಯತೆ ಪ್ರತಿಬಿಂಬವಾಗದೇ ಇದ್ರೆ ಸಾಕು! ಆ ಕಡೆ ಕರ್ನಾಟಕದಲ್ಲಿ ರಾಜಕೀಯ ಗೊಂದಲಗಳಿವೆ ಬೇಕಾದಷ್ಟು ಆಲೋಚಿಸೋದಕ್ಕೆ, ಕೂತಗೊಂಡ್ ಓದಿದ್ರೆ ಇನ್ನೂ ಮುಗಿಸದೇ ಇರೋ 'ಆವರಣ' ಇದೆ, ಬರೆಯದೇ ಬಿಟ್ಟು ಮಾಡೋದಕ್ಕೆ ಸಾವಿರ ಕೆಲಸಾ ಇದೆ, ಇತ್ತೀಚೆಗಂತೂ ಹುಲುಸಾಗಿ ಬೆಳಿತಾ ಇರೋ ಕನ್ನಡ ಬ್ಲಾಗ್ ಪ್ರಪಂಚಾ ಇದೆ ವಾರಗಟ್ಟಲೇ ಓದೋದಕ್ಕೆ. ಇವೆಲ್ಲಾ ಇದ್ರೂ ಜೋನೀ ಮಳೇ ಹೊಡೆದ ಹಾಗೆ ಅನಿವಾಸಿತನದ ಬಗ್ಗೆ ಬರೆಯಲೇ ಬೇಕೆನ್ನುವ ಹುಮ್ಮಸ್ಸು ಹುಟ್ಟಿ ಬರ್ತಾ ಇದೆ ಮನದೊಳಗೆ. ಗೊತ್ತಲ್ಲಾ, ಶ್ರಾವಣದ ಮಳೆ ಹೊಡ್ತಾ - ಎಲ್ಲಿ ನೋಡಿದ್ರೂ ಗಿಚಿಪಿಚಿ ಮಳೆ, ಕಿಚಿಪಿಚಿ ಕೆಸರು? ಕಾಲು ಬೆರಳಿನ ಸಂದಿಗಳಲ್ಲಿ ಆ ಕೆಸರು ಮೆತ್ತಿಕೊಂಡು ಆಗೋ ಸ್ಲರ್‌ಪೀ ಅನುಭವ? ಪ್ಯಾಂಟಿನ ತುದಿ ಹಸಿಯಾಗೇ ಇರೋದು ಮಳೆಯಲ್ಲಿ ನೆನೆದು? ಏನೂ ಬ್ಯಾಡಪ್ಪಾ - ಬಟ್ಟೆಗಳು ಒಗೆದು ಒಣಗಿ ಹಾಕಿದಾಗ ಅವು ಸರಿಯಾಗಿ ಒಣಗದೇ ಹುಟ್ಟೋ ಕುಮಟು ವಾಸನೆ? ಏನಾದ್ರೂ ನೆನಪಿಗ್ ಬರುತ್ತಾ ಅಥವಾ ಎಲ್ಲವನ್ನೂ ಅಮೇರಿಕನ್ ಮಯಮಾಡಿಕೊಂಡು ಬಿಟ್ಟಿದ್ದೇವಾ?

ಅಟ್ಟದ ಮೇಲಿನಿಂದ ಪ್ಲಾಸ್ಟಿಕ್ ಚಪ್ಪಲಿಗಳನ್ನು ಇಳಿಸ್ತಿದ್ವಿ, ಕೊಡೇ ರಿಪೇರಿ ಮಾಡಿಸಿಕೊಂಡು ಮನೆ ಮಂದಿಗೊಂದರಂತೆ ಶಸ್ತ್ರ ಸಜ್ಜಿತರಾಗ್ತಿದ್ವಿ. ಬಚ್ಚಲುಮನೆ ಒಲೆಯ ಮುಂದೆ ಬೆಳ್ಳಂಬೆಳಗ್ಗೆ ಬೇಕಾದಷ್ಟು ಹೊತ್ತು ಕೂತು ಛಳಿ ಕಾಯಿಸಿಕೊಳ್ತಿದ್ವಿ. ಒಣಗಿದ ಕಟ್ಟಿಗೆಯಾದ್ರೂ ಅದೆಲ್ಲಾದ್ರೂ ನೀರಿನ ಪಸೆ ತಾಗಿ ಹಸಿಯಾಗಿದ್ದಕ್ಕೆ ಉರಿಯದ ಬೆಂಕಿಯನ್ನ ಊದುಗೊಳಪೆಯಿಂದ ಊಸೀ ಊಸೀ ಆ ಬೆಂಕಿಯ ಜ್ವಾಲೆಯ ಜೊತೆಗೆ ಹುಟ್ಟೋ ಹೊಗೆ ಕಣ್ಣಿನಲ್ಲಿ ನೀರು ತರುಸ್ತಿದ್ದದ್ದು? ಏನಾದ್ರೂ ನೆನೆಪಿದೆಯಾ...ಅಥವಾ ಅವೆಲ್ಲಾ ಪ್ರಾಚೀನ ಕಾಲದ ಕಥೆಯಾಗಿ ಹೋದವೋ? ಮಜಾ ಅಂತಂದ್ರೆ, ಹಳೇ ಕೊಡೇ ಕಡ್ಡಿಗೆ ಸಿಕ್ಕಿಸಿ ಸುಟ್ಟು ತಿನ್ನೋ ಹಲಸಿನ ಬೀಜ, ಗೋಡಂಬಿ ಬೀಜಗಳದ್ದು. ವಾವ್, ಏನ್ ರುಚಿ - ಎಂಥಾ ಪ್ರಾಸೆಸ್ಸದು? ಗೋಡಂಬಿ ಬೀಜ ಸುಟ್ಟಾಗ ಸಿಟ್ಟು ಮಾಡಿಕೊಂಡು ಅದರಲ್ಲಿರೋ ಎಣ್ಣೆ ಸುಟ್ಟು ಹೋದ ಹಾಗೆಲ್ಲಾ ಬೆಂಕಿ ಒಂದ್ ರೀತಿ ಗ್ಯಾಸ್ ಬರ್ನರ್‌ನಲ್ಲಿ ಹೊರ ಬರೋ ಜ್ವಾಲೆ ಥರಾ ಹೊರಗೆ ಬರ್ತಿತ್ತು ಯಾವ್ ಯಾವುದೋ ದಿಕ್ಕಿನಲ್ಲಿ ಕೆಲವೊಂದ್ ಸಮಯ ಹೆದರಿಸೋ ಅಷ್ಟರ ಮಟ್ಟಿಗೆ, ಆ ರೀತಿ ಸುಟ್ಟ ಹಸಿ ಗೋಡಂಬಿ ಬೀಜದ ಟೇಸ್ಟು ಇಲ್ಲಿ ಸಿಕ್ಕೋ ಪ್ಲಾಂಟರ್ಸ್ ಡಬ್ಬದಲ್ಲಿರೋ ಹುರಿದ ಹಾಗೂ ಸಂಸ್ಕರಿಸಿದ ಗೋಡಂಬಿ ಬೀಜಗಳಲ್ಲೂ ಇರೋದಿಲ್ಲ, ಅದರ ರುಚಿ ಬಲ್ಲವರೇ ಬಲ್ಲರು. ಇನ್ನೂ ಚುಮು ಚುಮು ಕತ್ತಲು ಇದ್ದ ಹಾಗೆ ಎದ್ದೇಳಿಸೋ ಅಮ್ಮನನ್ನು ಬೈದುಕೊಂಡು ಎಷ್ಟು ಸಾರಿ ಹೊದ್ದುಕೊಂಡು ಮಲಗಿದರೂ ಮುಗಿಯಲಾರದ ಸಿಹಿನಿದ್ರೆ, ಅಡುಗೆ ಮನೆಯಿಂದ ಈಗಾಗಲೇ ತಯಾರಾಗಿದ್ದೇವೆ ಎಂದು ಬರ್ತಾ ಇದ್ದ ದೋಸೆಯ ಗಮಲು, ಅದರ ಜೊತೆಯಲ್ಲಿ ಕಾಫಿ ಪರಿಮಳ - ಮೊನ್ನೇ ಇನ್ನೂ ಮುಗಿದು ಹೋದ ನಾಗರ ಪಂಚಮಿ ಹಬ್ಬದ ಥರಾವರಿ ಉಂಡೆಗಳು - ತಿನ್ನೋದಕ್ಕೆ ಯಾವತ್ತೂ ಕಮ್ಮೀ ಅಂತಾನೇ ಇರಲಿಲ್ಲ ನೋಡಿ. ಇವತ್ತಿಗೂ ಇಲ್ಲಿ ನಮ್ಮನೇನಲ್ಲಿ ಯಾವತ್ತೂ ಏನೂ ಕಡಿಮೆ ಅಂತ ಏನಿಲ್ಲ, ಆದರೆ ನಮ್ಮನೇ ಡಬ್ಬಗಳನ್ನು ತಡಕಾಡಿದ್ರೆ ಅವುಗಳಲ್ಲಿ ಯಾವ ಉಂಡೆಗಳೂ ಕಾಣೋದಿಲ್ಲ. ಇಡೀ ಮನೆಯಲ್ಲಿರೋ ಎಲ್ಲರಿಗೂ ಸಕ್ಕರೇ ಕಾಯಿಲೆ ಬಂದು ಅದ್ಯಾವುದೋ ಕಣ್ಣ್ ಕಾಣದ ಡಾಕ್ಟರು ಆರ್ಡರು ಮಾಡಿದ ಹಾಗೆ ಈ ಸೀಜನ್ನಿನಲ್ಲಿ ಉಂಡೆಗಳನ್ನು ತಿನ್ನೋದಿರಲಿ ನೋಡೋದಕ್ಕೂ ಸಿಕ್ಕಿಲ್ಲ ನೋಡಿ, ನಮ್ ಹಣೇಬರಾನ. ಇವತ್ತು ವರಮಹಾಲಕ್ಷ್ಮಿ ಪೂಜೆ ಅಂತೆ, ಅದ್ಯಾಕಪ್ಪಾ ನೀನು ಗಂಡುಹುಡುಗ ತಲೆಕೆಡಿಸಿಕೊಳ್ತೀ ಅಂತ ಯೋಚಿಸ್ತೀರೋ? ಅಲ್ಲಾಗಿದ್ರೆ ಅದನ್ನ್ ಮಾಡು, ಇದನ್ನು ಮಾಡು ಅಂತ ಅಕ್ಕ-ತಂಗಿ-ಅಮ್ಮ ಇವರೆಲ್ಲ ತಲೆ ತಿಂದಿರೋರು. ಮಾವಿನ ಎಲೆ ತೋರಣ ಮಾಡಿಕೊಡಬೇಕಿತ್ತು. ಬೆಳಿಗ್ಗೆ ಎದ್ದೋರೇ ಸಾರಿಸೋದಕ್ಕೆ ಸಗಣಿ ಒಟ್ಟು ಮಾಡಿಕೊಡಬೇಕಿತ್ತು. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಕಟ್ಟಿರೋ ಜೋಕಾಲಿ ಬಿಚ್ಚಿ ಹಾಕ್ತೀನಿ ನೋಡು ಅಂತ ಹೆದರ್ಸಿ ಹೆದರ್ಸಿ ಕೆಲಸ ಮಾಡಿಸ್ಕೊಳ್ಳೋರುದ್ದೇನು ಕಾರುಬಾರು ಇರ್ತಿತ್ತು...ಅವೆಲ್ಲಾ ಈಗ ಇತಿಹಾಸ ಆಗ್ತಾ ಇದೆಯಲ್ಲಪ್ಪಾ.

'ಹೋಗ್ ಹೋಗು, ಬಂದ್ ಬಿಟ್ಟಾ ಶುಕ್ರವಾರ...' ಅಂತ ಇಷ್ಟೊತ್ತಿಗೆ ಕೊನೇಪಕ್ಷ ಒಬ್ರರಾದ್ರೂ ಬೈಸಿಕೊಳ್ತಾ ಇದ್ರು ಅಮ್ಮನ ಹತ್ರ ದುಡ್ಡು ಕೇಳೋದಕ್ಕೆ ಹೋಗಿ. ಅದೇನೋ ನಮ್ಮ ಮನೆತನದ ಪದ್ಧತಿಯಾಗಿ ಹೋಗಿದೆ, ನಾನೂ ಅಷ್ಟೇ ಇಲ್ಲಿರೋ ಅಟೋಮ್ಯಾಟಿಕ್ ಬಿಲ್ ಪೇಯರ್‌ನಲ್ಲೂ ಸಹ ಶುಕ್ರವಾರ ಯಾವ ಪೇಮೆಂಟನ್ನೂ ಮಾಡೋದಿಲ್ಲ. ಲಕ್ಷ್ಮೀ ಕಟಾಕ್ಷ ಅಂದ್ರೆ ಸುಮ್ಮನೇನಾ? ಅದೂ ಹೋಗೀ ಹೋಗೀ ಅವಳೇನಾದ್ರೂ ನಮ್ಮನೇ ಪಕ್ಕದಲ್ಲಿರೋ ಯಹೂದಿಗಳ ಮನೆಗೋ ಕ್ರಿಶ್ಚಿಯನ್ನರ ಮನೆಗೋ ಹೋಗಿಬಿಟ್ರೆ? ಅಯ್ಯಪ್ಪಾ, ಸುಮಂಗಲಿ ಹಿಂದೂ ದೇವತೆಯನ್ನ ಹೇಗ್ ಬೇಕ್ ಹಾಗೆ ನಡೆಸಿಕೊಳ್ಳೋಕ್ ಬರುತ್ತೇನ್ರಿ? ನೀವೊಂದು. ನೀವ್ ದೇವ್ರನ್ನ ನಂಬಾಂದ್ರೂ ನಂಬ್ರಿ, ಬಿಟ್ಟಾದ್ರೂ ಬಿಡ್ರಿ...ಕೊನೇ ಪಕ್ಷ ಲಕ್ಷ್ಮೀನಾದ್ರೂ ಒಲಿಸಿಕೊಳ್ರಿ, ಈ ದೇಶ್ದದಲ್ಲಿ ಬಾಳಾ ಮುಖ್ಯಾ ಸ್ವಾಮಿ...ಕೊನೆಗೆ ಲಕ್ಷ್ಮೀ ಗಂಡ ಶ್ರೀಮನ್ ನಾರಾಯಣನ್ನ ಬಿಟ್ರೂ ಪರವಾಗಿಲ್ಲ, ಲಕ್ಷ್ಮೀನ ಏನಾದ್ರೂ ಮಾಡಿ ಉಳಿಸ್ಕೊಳ್ರಿ. ಶುಕ್ರವಾರ ದುಡ್ಡ್ ಕೊಡಬಾರ್ದು ಅಂತ ಕಾನೂನ್ ಇದೆಯಾ? ಹ್ಞೂ, ಅಂತೀನ್ ನಾನು. ಇಲ್ಲಾ ಅಂದ್ರೆ, ನಮ್ ಭಾರತೀಯರು Saturn ಕಾರನ್ನ್ ಯಾಕ್ ತಗೊಳೊಲ್ಲಾ ಹೇಳಿ ನೊಡಾಣಾ? 'ಏನ್ ಕಾರ್ ತಗೊಂಡಿಯೋ?' ಅಂತ ಕೇಳೋ ನಿಮ್ಮ್ ಅಜ್ಜಿಗೆ, 'ಅಜ್ಜೀ, ನನ್ ಕಾರು ಹೆಸ್ರೂ, - ಶನಿ' ಅಂದ್ ನೋಡಿ, ಏನಾಗುತ್ತೇ ಅಂತ ನಿಮಗೇ ಗೊತ್ತಾಗುತ್ತೆ!

'ಏನ್ ಸಾರ್ ನೀವು, ಬರೀ ಹಳೇದನ್ನೇ ಹೇಳೀ ಹೇಳೀ ಕೊರೀತರಲ್ಲಾ?' ಅಂತ ಅನ್ನಬೇಡಿ. ನೀವು ಶ್ರಾವಣದ ಮಳೆಯಲ್ಲಿ ನೆನೀದೇ ಇದ್ರೇನಂತೆ, ಉಂಡೆ ತಿನ್ನದೇ ಇದ್ರೇನಂತೆ? ಉಪಾಕರ್ಮಕ್ಕೆ ಜನಿವಾರ ಬದಲಾಯಿಸ್ದಿದ್ರೇನಂತೆ? ವರಮಹಾಲಕ್ಷ್ಮೀ ವ್ರತಕ್ಕೆ ಅಕ್ಕ-ತಂಗಿಯರಿಗೆ ಸಹಾಯ ಮಾಡದಿದ್ರೇನಂತೆ? ಕೊನೇಪಕ್ಷಾ ನಿಮ್ ಮನಸಿಗೆ ವರ್ಷಾವಧಿ ಶ್ರಾವಣವನ್ನಾದ್ರೂ ಈ ಬೋರ್ ಹೊಡೆಯೋ ಆನ್‌ಲೈನ್ ಮಾಧ್ಯಮದ ಮೂಲಕಾ ನೆನಪಿಸ್ತೀನಾ? ಮತ್ತಿನ್ಯಾಕ್ ತಡಾ, ಆ ಫೋನ್ ಎತ್ತಿಕೊಳ್ಳಿ, ಮಾಡೀ ಒಂದ್ ಕರೇನಾ ಇಂಡಿಯಾಕ್ಕೆ - ನೆನೆಸಿಕೊಳ್ಳೀ ಎಲ್ಲಾ ಅಕ್ಕ-ತಂಗಿ ದೇವತೆಗಳನ್ನ...ಸುಮ್ನೇ, 'ಹೆಂಗಿದೀರಾ...' ಅಂತ ಕೇಳಿ...ನೋಡಿ ಅದ್ರ ಮಜಾನ. ಅವರೇನಾದ್ರೂ ತಮ್ಮ್ ತಮ್ಮ್ ಡಬ್ಬದಲ್ಲಿರೋ ಉಂಡೆಗಳನ್ನ ಕಳಿಸಿದ್ರೆ ನನಗೂ ಒಂದೆರಡನ್ನ ಕಳಿಸೋಕೆ ಮರೀ ಬೇಡಿ ಮತ್ತೆ, ಏನು?

7 comments:

Anonymous said...

ಹಾ ಹಾ!! ಸ್ಯಾಟರ್ನ್ ಅಂದ್ರೆ ಶನಿ ಮುನ್ಡೆ ಕಾರ್!!! ತುಂಬಾ ಚೆನ್ನಾಗಿದೆ.

sritri said...

ನಿಮ್ಮ ಇವತ್ತಿನ ಪೋಸ್ಟ್ ಶ್ರಾವಣದ ಸಂಭ್ರಮವನ್ನು ಕಣ್ಮುಂದೆ ತಂದಿತು. ನಮ್ಮೂರಿನಲ್ಲಿ ಶ್ರಾವಣವನ್ನು ನೆನಪಿಸುವಂತೆ ಮಳೆ ಮಾತ್ರ ಚೆನ್ನಾಗಿ ಸುರಿಯುತ್ತಿದೆ. ನಿಮ್ಮ ಅಕ್ಕ,ತಂಗಿಯರಿಗೆ ಕರೆ ಮಾಡಿ, ಅವರ ಸಂಭ್ರಮದ ಬಗ್ಗೆನೂ ಒಂದು ಪೋಸ್ಟ್ ಬರೆಯಿರಿ
ವರಮಹಾಲಕ್ಷ್ಮಿ ಹಬ್ಬದ ಶುಭಾಶಗಳು. ಲಕ್ಷ್ಮೀ ಒಲಿದು ನಿಮ್ಮ ಮನಸ್ಸಿನಲ್ಲಿರುವ ಆಸೆಗಳನ್ನು ನೆರವೇರಿಸಲಿ.

"ಇಡೀ ಮನೆಯಲ್ಲಿರೋ ಎಲ್ಲರಿಗೂ ಸಕ್ಕರೆ ಕಾಯಿಲೆ ಬಂದು ಅದ್ಯಾವುದೋ ಕಣ್ಣ್ ಕಾಣದ ಡಾಕ್ಟರು ಆರ್ಡರು ಮಾಡಿದ ಹಾಗೆ ಈ ಸೀಜನ್ನಿನಲ್ಲಿ ಉಂಡೆಗಳನ್ನು ತಿನ್ನೋದಿರಲಿ ನೋಡೋದಕ್ಕೂ ಸಿಕ್ಕಿಲ್ಲ ನೋಡಿ" - ನಿಜ ನಿಜ :)

Satish said...

ಅನಾಮಧೇಯ,
ಅಂದ್ರೆ, ನಿಮ್ ಹತ್ರ ’ಶನಿ’ ಕಾರು ಇದೆಯೇ?

sritri,
ನಿಮಗೂ ಕೂಡ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಮಳೆ ಸುರೀತಾ ಇದೆ ಅನ್ನೋ ಬೇಸರ ಬೇಡ ಅಂತಲೇ ಶ್ರಾವಣ ಹಬ್ಬಗಳ ಹಿಂಡನ್ನು ತರೋದು!

S.K. Math said...

ಸತೀಶಾವ್ರ ಶರಣ್ರಿ,

ನೀವು ಬರ್ದಿದ್ದನ್ನಾ thatskannada.com ಆಗಾಗ ಓದಿ ಖುಷಿ ತಗೊತಿದ್ವಿ. ಈಗ ನಿಮ್ಮದ blog ಬಂದಿದ್ದ ನೋಡಿ ಭಾಳ ಸಂತೋಶ್ ಆತ್ರಿ. ನೀವು ಬರೀರಿ ನಾವ್ ಓದ್ತಿವಿ.

ನಿಮ್ಮವ,
ಶರಣೇಶ್ ಕರಸಿದ್ದಿಮಠ್

Satish said...

ಶರಣರ್ರೀ,

ಹ್ಯಾಂಗಿದೀರಿ, ಈಚೀಚಿಗ್ ನಿಮ್ ಸ್ವರೂಪಾನೇ ಅಪರೂಪ್ ಆತಲ.
ಹಿಂಗಾs ಬರತಿರ್ರಿ ಅವಾಗಾವಾಗ...ನೀವ್ ಓದೋದ್ ಹೆಚ್ಚೋ ನಾವ್ ಬರೆಯೋದ್ ಹೆಚ್ಚೂ?!

12 said...

Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

12 said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service