Wednesday, September 05, 2007

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

ಹೀಗೇ ಒಂದ್ ಕ್ಷಣ ಸೋಮಾರಿತನದ ಪರಮಾವಧಿಯಲ್ಲಿ ಗದ್ದಕ್ಕೆ ಕೈ ಕೊಟ್ಟು ಕುಳಿತು ಯೋಚಿಸುತ್ತಿರುವಾಗ ಈ ಸೋಮಾರಿತನವೆನ್ನುವುದು ಏಕೆ ಅಷ್ಟೊಂದು ಸಹಜವಾಗಿ ಎಲ್ಲರಿಗೂ ಅನ್ವಯವಾಗೋದು ಒಂದು ಸಣ್ಣ ಚಿಂತೆ ಶುರುವಾಯಿತು. ಮೊದಲಿಗೆ ಮಾಮೂಲಿನ ಪ್ರತಿಕ್ರಿಯೆಯಂತೆ ಯಾರಪ್ಪಾ ಅದನ್ನು ಕುರಿತು ಯೋಚನೆ ಮಾಡೋದು ಎಂದು ಒಮ್ಮೆ ಉದಾಸೀನತೆ ಪುಟಿದೆದ್ದು ನಿಂತರೆ, ಮತ್ತೊಂದು ಕಡೆ ಅದೇನ್ ಆಗೇ ಬಿಡುತ್ತೋ ನೋಡಿಯೇ ಬಿಡೋಣ ಎನ್ನುವ ಛಲ ಅದಕ್ಕೆ ವಿರುದ್ಧ ಧ್ವನಿ ಎತ್ತಿತ್ತು. ಈ ಹೊತ್ತಿನ ತತ್ವದ ಮಟ್ಟಿಗೆ ಕಂಡುಬಂದ ಸತ್ಯಗಳು ಇವು, ಉದಾಸೀನತೆ ಹಾಗೂ ಛಲದ ವಿರುದ್ಧ ನಡೆಯುವ ಮುಖಾಮುಕಿಯಲ್ಲಿ ಯಾರು ಗೆಲ್ಲುತ್ತಾರೋ ಬಿಡುತ್ತಾರೋ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧರಿತವಾಗಬೇಕಿದೆ.

ಅದೂ ನಿಜಾ ಅನ್ನಿ, ಜೀವನದಲ್ಲಿ ಪ್ರತಿಯೊಂದನ್ನೂ ಮ್ಯಾನೆಜ್ ಮಾಡಬೇಕಾಗುತ್ತೆ, ಪ್ರತಿಯೊಂದನ್ನೂ ಮೈಂಟೇನ್ ಮಾಡಬೇಕಾಗುತ್ತೆ. ಚಕ್ರದ ಹಾಗೆ ಸುತ್ತಿ ಸುತ್ತಿ ಬರೋ ಪ್ರತಿಯೊಂದು ಬದಲಾವಣೆಗಳು ಮೇಲ್ನೋಟಕ್ಕೆ ಮಾಡಿದ್ದೇ ಮಾಡು ಎಂದು ಅಣಗಿಸುವಂತೆ ತೋರಿದರೂ ಮಾಡದೇ ಇದ್ದರೇ ವಿಧಿಯಿಲ್ಲ ಎಂದು ಕಿಚಾಯಿಸುವ ಪ್ರಸಂಗಗಳೇ ಹೆಚ್ಚು. ಸವಲತ್ತುಗಳನ್ನು ಮ್ಯಾನೇಜ್ ಮಾಡಬೇಕು, ಸಂಬಂಧಗಳನ್ನು ಮ್ಯಾನೇಜ್ ಮಾಡಬೇಕು, ಇನ್ನು ಕೆಲವನ್ನು ನಿಗದಿತ ಸಮಯದಲ್ಲಿ ಮೇಂಟೈನ್ ಮಾಡಬೇಕು ಇಲ್ಲವೆಂದರೆ ಬೇಕು ಎಂದಾಗಲೇ ಕೈಕೊಡುತ್ತವೆ. ಗಾಳಿ ಇದ್ದಲ್ಲೆಲ್ಲ ಧೂಳು ಇರೋದು ಸಹಜ ಎನ್ನುವುದು ’ಅಂತರಂಗ’ ಕಂಡುಕೊಂಡ ಸರಳ ಸತ್ಯಗಳಲ್ಲೊಂದು. ಅದರ ಅರ್ಥವೇನಪ್ಪಾ ಅಂದ್ರೆ ನಾವು ಉಪಯೋಗಿಸದೇ ಬಿಟ್ಟಿರೋ ಜಾಗ ಅಥವಾ ಕೋಣೆಯನ್ನು ಗುಡಿಸಿ ಶುಭ್ರವಾಗಿಟ್ಟುಕೊಳ್ಳಲೇ ಬೇಕಾಗುತ್ತೆ. ಕಿಟಕಿ-ಬಾಗಿಲು ಎಲ್ಲವನ್ನು ಭದ್ರಪಡಿಸಿ ಯಾರೂ ಉಪಯೋಗಿಸದ ಕೋಣೆಯನ್ನು ಒಂದು ವಾರ ಬಿಟ್ಟು ತೆರೆದು ನೋಡಿ, ಅದ್ಯಾವುದೋ ಅಗೋಚರ ಶಕ್ತಿ ನಿಮಗೆ ವಿರುದ್ಧವಾಗಿ ತಿರುಗಿ ಬಿದ್ದಂತೆ ಎಲ್ಲದರ ಮೇಲೂ ತೆಳುವಾದ ಧೂಳಿನ ಒಂದು ಲೇಪನ ಮಾಡಿರುತ್ತೆ. ಹೀಗೆ ತೆಳುವಾದ ಧೂಳನ್ನು ಒಂದು ಕಡೆ ಒರೆಸಿದರಷ್ಟೇ ಸಾಲದು, ಅಲ್ಲಿ-ಇಲ್ಲಿ, ಅತ್ತ-ಇತ್ತ ಒರೆಸುತ್ತಾ ಹಿಂದೆ ಮುಂದೆ ನೋಡುವಷ್ಟರಲ್ಲಿ ಇಡೀ ಕೊಠಡಿಯೇ ಸ್ವಚ್ಛತೆಯನ್ನು ಬೇಡಲು ತೊಡಗುತ್ತದೆ. ಇದು ಎಂದೂ ಉಪಯೋಗಿಸದೇ ಇರುವ ಕೋಣೆಯ ಕಥೆಯಾದರೆ ಇನ್ನು ಪ್ರತಿದಿನವೂ ಉಪಯೋಗಿಸುವ ಕೊಠಡಿ, ಪರಿಕರಗಳ ಕಥೆ ಇನ್ನೊಂದು ರೀತಿ. ನೀವು ಆಯಾ ವಸ್ತುಗಳನ್ನು ಉಪಯೋಗಿಸಿದಂತೆಲ್ಲಾ ಅಲ್ಲೆಲ್ಲಾ ನಿಮ್ಮ ಸಿಗ್ನೇಚರ್ ಬೀಳಲುತೊಡಗುತ್ತದೆ. ಸೂಕ್ಷ್ಮವಾದವರಿಗೆ ಬೆರಳಿನ ಗುರುತು ಕಾಣತೊಡಗಿದರೆ, ಕೊಂಕಣೀ ಎಮ್ಮೆಗೆ ಕೊಡತಿ ಪೆಟ್ಟು ಅನ್ನೋ ಹಾಗೆ ಅವರವರ ಚರ್ಮದ ಥಿಕ್‌ನೆಸ್‌ಗೆ ಅನುಸಾರವಾಗಿ ಆಯಾ ವಸ್ತುವಿನ ಫಲಾನುಭವ ಕಣ್ಣಿಗೆ ರಾಚುತ್ತದೆ.

ಈ ದಿನ ನಿತ್ಯ ಉಪಯೋಗಿಸುವ ವಸ್ತುಗಳ ರಂಪಾಟವೇ ಸೋಮಾರಿತನಕ್ಕೆ ಮೂಲಭೂತ ಕಾರಣ. ಹೊಸ ಬಟ್ಟೆಗಳನ್ನು ಧರಿಸಿ ಶೋಕಿ ಮಾಡುವುದರ ಸುಖ ಕೊಳೆಯಾದ ಅದನ್ನು ಒಗೆದು, ಒಣಗಿಸಿ, ಇಸ್ತ್ರಿ ತಾಗಿಸಿ ಜೋಪಾನವಾಗಿ ಹ್ಯಾಂಗರ್‌ಗೆ ಹಾಕುವವರೆಗೂ ಇರೋದಿಲ್ಲ. ಜನರು ವಾರಕ್ಕೆ ಐದು ದಿನಗಳಿಗಾಗೋಷ್ಟು ಬಟ್ಟೆಯ ನಾಲ್ಕು ಪಟ್ಟು ಬಟ್ಟೆಯನ್ನು ಇಟ್ಟುಕೊಳ್ಳುವುದೇಕೆ ಎಂದುಕೊಂಡಿರಿ? ಉಪಯೋಗಿಸಿ ಉಪಯೋಗಿಸಿ ಕೊಳೆ ಬಟ್ಟೆಗಳು ರಾಶಿ ಬಿದ್ದ ನಂತರ ಒಂದು ದಿನ ಅವುಗಳಿಗೆಲ್ಲ ಗ್ರಹಚಾರ ಬದಲಾವಣೆಯಾದ ಪ್ರಯುಕ್ತ ನೀರಿನ ಮುಖ ಕಾಣಿಸುತ್ತದೆ. ನಂತರ ಒಗೆದು, ಒಣಗಿಸಿದಂತೆ ಮಾಡಿದ ಮೇಲೆ ಕೆಟ್ಟ ಮುಖವನ್ನು ಮಾಡಿಕೊಂಡು (ಅದೂ ಎಷ್ಟೋ ದಿನಗಳ ನಂತರ) ಬಟ್ಟೆಗಳನ್ನು ಮಡಚಿಡಲಾಗುತ್ತದೆ. ಇನ್ನು ಇಸ್ತ್ರಿ ತಾಗಿಸುವ ಅಗತ್ಯವಿದ್ದರೆ, ಅದು ಆಯಾ ದಿನದ ಮುಂಜಾನೆಯ ಕರ್ತವ್ಯಗಳಲ್ಲೊಂದು. ಈ ಕೊಳೆಯಾಗಿ ಮತ್ತೆ ಸುಸ್ಥಿತಿಯನ್ನು ಕಾಣುವ ಬಟ್ಟೆಗಳ ಗೋಳು ಬೇಡವೆಂದೇ ನ್ಯೂಡಿಷ್ಟ್ ಬೀಚುಗಳು ಇತ್ತೀಚೆಗೆ ಹೆಚ್ಚುತ್ತಿರೋದು ಎಂದು ಕಾಣಿಸುತ್ತೆ! ಮಕ್ಕಳಿದ್ದವರು ಕೊರಗುವುದನ್ನು ನೋಡಿ ನಮಗೆ ಮಕ್ಕಳೇ ಬೇಡ ಎಂದು ನಿರ್ಧರಿಸಿಬಿಡುವ ದಂಪತಿಗಳ ಹಾಗೆ ನ್ಯೂಡಿಷ್ಟ್ ಜನರು ಬಟ್ಟೆಯನ್ನೇ ಹಾಕೋದಿಲ್ಲವಂತೆ, ಬಟ್ಟೆ ಹಾಕಿದರೆ ತಾನೇ ಅದರ ಕಷ್ಟಾ-ನಷ್ಟಾ ಎಲ್ಲಾ?

ಈ ಬಟ್ಟೆಗಳ ಸವಾಸ ಬೇಕು ಆದರೆ ಕಸ ಹೊಡೆಯುವುದಾಗಲೀ ಪಾತ್ರೆ ತಿಕ್ಕುವುದರ ಸಹವಾಸ ಬೇಡವೇ ಬೇಡ. ಅದೂ ದಿನಕ್ಕೆ ಮೂರು ಹೊತ್ತು ಮುಕ್ಕಿ ಮಿಕ್ಕಿದ್ದೆಲ್ಲವನ್ನೂ ಮುಗಿಸುವ ಜಾಯಮಾನವಿರುವವರೆಗೆ ಬದುಕು ಬಹಳ ಕಷ್ಟಾ. ಎಷ್ಟೇ ನೀಟಾಗಿ ಸಿಂಕು ತೊಳೆದಿಟ್ಟರೂ ಒಂದಲ್ಲಾ ಒಂದು ಪಾತ್ರೆಗಳು ಬಂದು ಬೀಳುತ್ತಲೇ ಇರೋದನ್ನ ನೋಡಿದ್ರೆ ಯಾರೋ ನಮಗೆ ಆಗದವರು ಮಾಟಾ-ಮಂತ್ರ ಮಾಡಿಸಿಟ್ಟಿದ್ದಾರೇನೋ ಅನ್ನಿಸುತ್ತೆ. ಅದೂ ಈ ದೇಶದಲ್ಲಂತೂ ಎಲ್ಲವನ್ನೂ ನಾವೇ ಮಾಡಿಕೂಳ್ಳಬೇಕಪ್ಪ. ವಾರವಿಡೀ ದುಡಿದು ತರೋದು ಅಲ್ಲಿಂದಲ್ಲಿಗೆ ಆಗುತ್ತೆ. ವಾರಾಂತ್ಯದಲ್ಲಿ ಇರೋ ಬರೋದನ್ನೆಲ್ಲ ಮ್ಯಾನೇಜೂ ಮೇಂಟೇನೂ ಮಾಡಿಕೊಂಡೇ ಇರಬೇಕಾಗುತ್ತೆ.

ಹೀಗೆ ಸೃಷ್ಟಿಯಲ್ಲಿ ನಮ್ಮ ವಿರುದ್ಧ ನಿಲ್ಲಬಲ್ಲ ಸಂಕೋಲೆಗಳನ್ನು ಜಯಿಸಲು ವಿಕಾಸವಾದದ ಬುನಾದಿಯ ಅಡಿಯಲ್ಲಿ ನಾವು ಪಡೆದುಕೊಂಡ ಶಕ್ತಿಯ ಸ್ವರೂಪವೇ ಸೋಮಾರಿತನ. ಅದನ್ನ ನಾವೆಲ್ಲರೂ ಪೂಜಿಸೋಣ, ಆರಾಧಿಸೋಣ. ಪ್ರಾಣಿಗಳು ನಗೋದಿಲ್ಲ, ಮನುಷ್ಯರು ನಗ್ತಾರೆ ಎನ್ನುವವರಿಗೆ ನಿಜ ಸ್ಥಿತಿಯ ಪೂರ್ತಿ ಅರಿವಂತೂ ಇಲ್ಲ. ಪ್ರಾಣಿಗಳು ಸೋಮಾರಿಗಳಾಗೋದಕ್ಕೆ ಸಾಧ್ಯವೇ ಇಲ್ಲ.

***

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

Monday, September 03, 2007

ಏನು ಸುಖವಮ್ಮಾ, ಯಾವುದು ಸುಖವಮ್ಮಾ

ನಮ್ಮಮ್ಮ ತೂಕದ ಮಾತನ್ನಾಡೋದೇ ಹೆಚ್ಚು, ಯಾವಾಗ್ ನೋಡುದ್ರೂ ಈ ಥರದ ಒಂದ್ ಮಾತನ್ನ ಎಸೀತಾನೇ ಇರ್ತಾಳೆ...’ಎಲ್ಲಾ ಸುಖವಾಗಿದೀರಾ ತಾನೇ?’, ಅನ್ನೋ ಪ್ರಶ್ನೆ ಕೆಲವೊಮ್ಮೆ ’ಎಲ್ಲಾ ಅರಾಮಾ...’ ಅನ್ನೋದರ ಮುಂದಿನ ವಾಕ್ಯವಾಗಬಹುದು ಅಥವಾ ಎಷ್ಟೋ ವಾಕ್ಯಗಳನ್ನು ಅಂತ್ಯಗೊಳಿಸುವ ಒಂದು ಲಯವಾಗಿರಬಹುದು. ಒಂದೊಂದ್ ಸಾರಿ ಸಾರ್‌ಕ್ಯಾಸಮ್ ನಲ್ಲಿ ಹೇಳ್ತಾ ಇರೋ ಹಾಗೆ ಅನ್ನಿಸಿದರೆ, ಇನ್ನೊಂದಿಷ್ಟು ಸಾರಿ ನಿಜವಾದ ಕಳಕಳಿ ಅಭಿವ್ಯಕ್ತಗೊಳ್ಳುತ್ತೆ. ಅದು ಸರಿ, ’ಅರಾಮಾ?’ ಅನ್ನೋ ಪ್ರಶ್ನೆಗೆ ’ಹೂಞ್!’ ಎಂದು ಉತ್ತರ ಕೊಟ್ರೆ, ’ಸುಖವಾಗಿದ್ದೀರಾ?’ ಅನ್ನೋ ಪ್ರಶ್ನೆಗೆ ಏನಂತ ಉತ್ತರ ಕೊಡೋಣ, ಅದೂ ಹೋಗೀ ಹೋಗಿ ಅಡಿಗರ ’ಇರುವುದೆಲ್ಲವ ಬಿಟ್ಟು...’ ಬಂದ ಮನಸ್ಸಿನವರಾದ ಮೇಲೆ. ಎಷ್ಟೋ ಸಾರಿ ಅನ್ನಿಸಿದೆ, ಹೆಚ್ಚಿನ ಪಕ್ಷ ಒಂದ್ ಕೆಟ್ಟ ಸಿಟ್ಟಿನಲ್ಲೇ, ’ಯಾವುದು ಸುಖವಮ್ಮಾ?’ ಎಂದು ಕೇಳೋಣವೆನ್ನಿಸಿದೆ, ಆಕೆಯ ವೃದ್ದಾಪ್ಯದಲ್ಲಾದರೂ ಸುಖದ ಬಗ್ಗೆ ಆಕೆಗೆ ತಿಳಿದಿದೆಯೋ ಏನೋ ಎನ್ನುವ ಸ್ವಾರ್ಥ ನನ್ನದು, ಏಕೆಂದರೆ ಕೊನೆಗೆ ಸುಖಾ ಎನ್ನುವುದು ವೃದ್ದಾಪ್ಯದಲ್ಲಾದರೂ ಸಿಗುವ ನಿಧಿಯಾಗಬಹುದೇನೋ ಎನ್ನುವ ಕಾತರತೆಯಿಂದಲಾದರೂ ಕಾಲ ಕಳೆಯಬಹುದಲ್ಲಾ.

ಈ ತಳಮಳದ ಹಿಂದೆ ಅನೇಕ ಸಂವೇದನೆಗಳಿವೆ, ಭಾವನೆಗಳಿವೆ, ಅನುಭವಗಳಿವೆ. ಮನಸ್ಸು ಮತ್ತು ತಲೆಯನ್ನು ಖರ್ಚು ಮಾಡಿಕೊಂಡು ಜೀವನ ಸಾಗಿಸುವವರ ಪ್ರತಿಯೊಂದು ಸೂಕ್ಷ್ಮತೆಯೂ ಅಡಕವಾಗಿದೆ. ಅದಕ್ಕೆಂದೇ ಅನ್ನಿಸೋದು ನಾನು ದೈಹಿಕ ಶಕ್ತಿಯನ್ನು ನಂಬಿಕೊಂಡು ಪ್ರಿಮಿಟಿವ್ ಕೆಲಸವನ್ನು ಮಾಡಿಕೊಂಡಿದ್ದರೆ ಹೇಗಿತ್ತು ಎಂದು. ಒಬ್ಬ ಕಾರ್ಪೆಂಟರ್ ಆಗಿ, ದಿನಗೂಲಿ ಮಾಡುವವನಾಗಿ, ಕನ್‌ಸ್ಟ್ರಕ್ಷನ್ ಕೆಲಸಗಾರನಾಗಿ, ರಸ್ತೆ ರಿಪೇರಿ ಮಾಡುವವನಾಗಿ, ಎಲೆಕ್ಟ್ರಿಷಿಯನ್ ಆಗಿ, ಇತ್ಯಾದಿ. ಉತ್ತಮ ಆದಾಯವೇನೂ ಇರುತ್ತಿರಲಿಲ್ಲವೇನೋ, ಆದರೆ ದಿನದ ದೈಹಿಕ ಚಿಂತೆ ಅಗತ್ಯಗಳ ಮುಂದೆ ಮನಸ್ಸಿಗೆ ದೊಡ್ಡ ಕಡಿವಾಣ ಬೀಳುತ್ತಿತ್ತು. ಆ ಮಟ್ಟಿಗೆ ಗಳಿಸಿ, ಅದೇ ಮಟ್ಟದಲ್ಲಿ ಖರ್ಚು ಮಾಡಿ ಅವತ್ತಿಂದವತ್ತಿಗೆ ಬದುಕಿದರೂ ಅಲ್ಲಿ ಇನ್ಯಾವ ರೀತಿಯ ಕೊರಗುಗಳಿರುತ್ತಿದ್ದವೋ ಆದರೆ ತಲೆಯಲ್ಲಿ ಶಾಶ್ವತವಾದ ಮರಕುಟಿಗನ ಹಾಗೆ ಕುಟುಕುತ್ತಲೇ ಇರುತ್ತಿರುವ ಒಂದು ಧ್ವನಿ ಇರುತ್ತಿರಲಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಹಾಗೆ ಬೇರೆ ವೃತ್ತಿ, ಪ್ರವೃತ್ತಿಗಳಲ್ಲಿರುವ ಕಷ್ಟ ಸುಖವನ್ನು ನಾನೇನು ಬಲ್ಲೆ, ಅಲ್ಲಿನ ಪೀಕಲಾಟಗಳನ್ನು ದಿನವೂ ಏಗುತ್ತಿರುವವರಿಗೆ ನಮ್ಮ ಬದುಕು ಸುಂದರವಾಗಿ ಕಾಣುವುದೇ ಒಂದು ದೊಡ್ಡ ರಹಸ್ಯವಲ್ಲದೇ ಇನ್ನೇನು?

ಸುಖವೆನ್ನುವುದು ಏನು ಹಾಗಾದರೆ? ಅದು ಮಾನಸಿಕ ನೆಲೆಗಟ್ಟೇ, ಭೌತಿಕ ಸ್ಥಿತಿಯೇ, ಸಾಮಾಜಿಕ ಸಂಕಲ್ಪವೇ, ಬೇಕು ಎನ್ನುವವುಗಳಿಗೆಲ್ಲ ಸಿಕ್ಕ ಉತ್ತರವೇ, ಇಲ್ಲವೆನ್ನುವವುಗಳ ಬೆಂಬಿಡದ ಪ್ರಶ್ನೆಗಳೇ? ಸುಖವೆನ್ನುವುದು ಆಂತರಿಕವಾದದ್ದೇ, ಅಥವಾ ಪ್ರತಿಯೊಬ್ಬರೂ ಕಂಡು, ಅನುಭವಿಸಿ, ಗುರುತುಹಿಡಿಯಬಲ್ಲ ಬಹಿರಂಗದ ರೂಪವೇ? ಈ ಪ್ರಪಂಚದ ಮನುಷ್ಯ ಕುಲದಲ್ಲಿ ಯಾರಾದರೂ ಸುಖವಾಗಿದ್ದಾರೆಯೇ? ಅಥವಾ ಯಾರೂ ಸುಖವಾಗಿರದೇ ಸುಖವೆನ್ನುವ ಮರೀಚಿಕೆಯನ್ನು ಅರಸುವುದೇ ಬದುಕೇ? ಸುಖವೆನ್ನುವುದು ವಿಧಿ ಲಿಖಿತ ಸಂಕೋಲೆಯೇ, ಅಥವಾ ಮಾನವ ನಿರ್ಮಿತ ಬಂಧನವೇ?

ಸುಖವೆನ್ನುವುದಕ್ಕೆ ಉತ್ತರ ಕಂಡುಕೊಳ್ಳುತ್ತಾ ಹೋದಂತೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಇನ್ನೂ ಹಲವು ಸ್ಥರಗಳಲ್ಲಿ ಯೋಚಿಸಿಕೊಳ್ಳುವಂತಾಯಿತು. ಒಮ್ಮೆ ಇರುವ ಸದರಿ ಸ್ಥಿತಿಯಿಂದ ಮುಕ್ತವಾಗಿ ಒಡನೆಯೇ ಮತ್ತೊಂದು ಸ್ಥಿತಿಯನ್ನು ತಲುಪುವುದು ಸುಖವೆಂದು ಕಂಡುಬಂದರೆ, ಮತ್ತೊಮ್ಮೆ ಇನ್ನು ಎಷ್ಟೋ ವರ್ಷಗಳ ನಂತರ ಬರಬಹುದಾದ ಸಾಮಾಜಿಕ ಸಾಧ್ಯತೆಯೂ ಸುಖವಾಗಿ ಕಂಡುಬಂದಿತು. ಹಲ್ಲು ನೋವಿರುವವನಿಗೆ ತಾತ್ಕಾಲಿಕ ಉಪಶಮನಕ್ಕೆಂದು ಕೊಟ್ಟ ನೋವಿನ ಮಾತ್ರೆ ಒಡನೆಯೇ ಸುಖವನ್ನು ತಂದುಕೊಟ್ಟರೆ, ಲಾಟೀನ್ ದೀಪದ ಬೆಳಕಿನಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಹತ್ತನೇ ತರಗತಿಯ ಪರೀಕ್ಷೆಗೆ ತಯಾರಾಗುತ್ತಿರುವ ಬಡಹುಡುಗನ ಒಂದು ದಿನ ನಾನೂ ಇಂಜಿನಿಯರ್ ಆಗುತ್ತೇನೆ ಎನ್ನುವ ದೀಪದ ಬೆಳಕಿಗೆ ತೊನಲಾಡುತ್ತಿರುವ ನೆರಳಿನಂತಿರುವ ಕನಸು ಎಷ್ಟೋ ವರ್ಷಗಳ ನಂತರ ಸುಖಕ್ಕೆ ಸಂಬಂಧಿಸಿದಂತೆ ತೋರಿತು. ’ಸುಖವಾಗಿದ್ದೀಯಾ?’ ಎನ್ನುವ ಪ್ರಶ್ನೆಯನ್ನು ಪ್ರತಿದಿನವೂ ಕೇಳಿ (Rhetorical) ಅದರಿಂದ ಯಾವ ಉತ್ತರವನ್ನು ನಿರೀಕ್ಷಿಸದೆಯೂ ಇರಬಹುದು, ಅದೇ ಪ್ರಶ್ನೆಯನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, ಜನ್ಮಕ್ಕೊಮ್ಮೆ ಕೇಳಿಯೂ ವಿವರವನ್ನು ಹುಡುಕಬಹುದು. ಅದೇ ಪ್ರಶ್ನೆಯನ್ನು ಯಾರು, ಎಷ್ಟು ದೂರದಲ್ಲಿರುವವರು, ಎಲ್ಲಿರುವವರು ಕೇಳಿದರು ಎನ್ನುವುದರ ಮೇಲೆ ಉತ್ತರ ಬದಲಾಗಬಹುದು.

ನನ್ನಗ್ಗೊತ್ತು - ನಾಳೆ ಬೆಳಿಗ್ಗೆ ಮಾರ್ಗದ ಮಧ್ಯೆ ರಸ್ತೆ ರಿಪೇರಿ ಮಾಡುವ ಕೆಲಸಗಾರರಿಗೆ ಈ ಬಗೆಯ ಚಿಂತೆ ಇರುವುದಿಲ್ಲವೆಂದು. ಅಂತಹವರನ್ನು ’ಸುಖವಾಗಿದ್ದೀಯಾ?’ ಎಂದು ಯಾರೂ ಕೇಳೋದೇ ಇಲ್ಲವೇನೋ, ಅಥವಾ ಕೇಳುತ್ತಾರೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಕೆಲಸದ ಮಧ್ಯೆ ತೊಡಗಿದ ಅವರ ಮನಸ್ಸು ಒಂದಲ್ಲ ಒಂದು ಹೊಯ್ದಾಟಕ್ಕೆ ತೂಗುತ್ತಿರಬೇಕಲ್ಲ - ಅವರುಗಳಂತೂ ಖಂಡಿತ ಸಂತರಲ್ಲವೇ ಅಲ್ಲ - ಅವರ ನೆಲ ನೋಡುತ್ತಿರುವ ಕಣ್ಣುಗಳ ಹಿಂದಿನ ಮನಸ್ಸಿನಲ್ಲೇನಿದೆ? ಜ್ಯಾಕ್ ಹ್ಯಾಮರ್ ಸೃಷ್ಟಿಸುತ್ತಿರುವ ಕರ್ಕಷ ಸದ್ದಿಗೂ ಹೊಂದಿಕೊಂಡ ಒರಟುತನದ ಸುಖವೆನ್ನುವುದು ಎಲ್ಲಿ ಹುದುಗಿದೆ? ಅವರ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೊಸ ರಂಗನ್ನು ಕಣ್ಣುಗಳಲ್ಲಿ ಹುಟ್ಟಿಸಿಕೊಳ್ಳುವುದು ಅವರಿಗೆ ಸುಖವಾಗಿ ಕಂಡೀತೇ? ಇವತ್ತಲ್ಲ ನಾಳೆ ನಮ್ಮ ಮಕ್ಕಳು ಸುಖವಾಗಿರಲಿ, ಬಿಳಿ ಕಾಲರ್ ಕೆಲಸಗಾರರಾಗಲಿ ಎನ್ನುವ ಕನಸು ಅವರ ಸುಖವನ್ನು ನಿರ್ಧರಿಸೀತೇ? ರಸ್ತೆಗೆ ಟಾರು ಬಳಿಯುವ ಅವರ ಋಣಾನುಬಂಧ ಹೇಗಿದ್ದಿರಬಹುದು - ಅಕ್ಕ, ತಮ್ಮ, ತಂಗಿ, ಅಣ್ಣ ಇವರುಗಳ ಒಡನಾಟ ಅವರಿಗೆ ಏನನ್ನಿಸಬಹುದು? ಒಂದು ಕ್ಷಣ ಅವರ ಮನಸ್ಸಿನಾಳಕ್ಕಿಳಿದು ಅದರ ವ್ಯಾಖ್ಯೆಯನ್ನು ಅರಿಯಬಯಸುವ ನನ್ನ ಪ್ರಯತ್ನ ರಸ್ತೆಯ ಮೇಲೆ ಸಿಗುವ ಕೆಲವೇ ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾಗುತ್ತದೆ. ಕಣ್ಣ ಮುಂದಿನ ರಸ್ತೆ ಬದಲಾದ ಹಾಗೆ ಅದರ ವ್ಯಾಖ್ಯಾನ, ಅಂತಹ ವ್ಯಾಖ್ಯಾನದ ಹಿಂದಿನ ಅವತರಣಿಕೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ.

ಹಾಗಾದರೆ, ’...ಸುಖವಾಗಿದೀಯಾ ತಾನೇ?’ ಎನ್ನುವ ಪ್ರಶ್ನೆಗೆ ನಿಖರವಾದ ಉತ್ತರವಿದೆಯೋ ಅಥವಾ ದಿನೇದಿನೇ ಅದೂ ಬದಲಾಗುತ್ತದೆಯೋ? ಸದಾ ಬದಲಾಗುವುದನ್ನು ಏಕೆ ಒಂದೇ ಪದದಿಂದೇಕೆ ಅಳೆಯಬೇಕು? ಸುಖವೆನ್ನುವುದು ಎಲ್ಲರಿಗೂ ಸಮನಾದುದು ಎಂದಾದಲ್ಲಿ ಅವರವರಿಗೆ ತಕ್ಕ (ಮಟ್ಟಿನ) ಸುಖವನ್ನು ಬಿಂಬಿಸುವ ಪದಗಳೇಕೆ ಸೃಷ್ಟಿಯಾಗಲಿಲ್ಲ?

***

ನೀವು ಸುಖವಾಗಿದ್ದೀರಾ? ಯಾಕಿಲ್ಲ?

Friday, August 31, 2007

ಅಬ್ಬಾ, ಒಂದು ದಶಕವೆಂದರೆ...

ಕೇವಲ ಹತ್ತೇ ವರ್ಷಗಳ ಹಿಂದೆ...ಮಾರ್ರಿಸ್ ಕೌಂಟಿಯ ಪಾರ್ಸಿಪನಿ (Parsippany) ಎಂಬ ಪಟ್ಟಣದ ಮಾರ್ಕ್ ಫುಸಾರಿ ಎಂಬೊಬ್ಬರ ಮನೆಯ ಬೇಸ್‌ಮೆಂಟಿನಲ್ಲಿ ಎರಡು ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಹಿಡಿದು ಸಿಸ್ಟಮ್ ಅನಲಿಸ್ಟ್ ಕೆಲಸವನ್ನು ಕೆಲವು ತಿಂಗಳುಗಳ ಹಿಂದೆ ಆರಂಭಿಸಿ, ಇನ್ನೂ ಅಂಬೆಕಾಲಿಡುತ್ತಿದ್ದ ಇಂಟರ್‌ನೆಟ್ಟ್ ಅನ್ನು ಸರ್ಫ್ ಮಾಡುತ್ತಿದ್ದ ಕಾಲ. ನನಗ್ಗೊತ್ತು, ಇದು ’ಬೀಸ್ ಸಾಲ್ ಬಾದ್’ ನಂತಹ ಹಳೇ ಹಿಂದೀ ಸಿನಿಮಾದ ಯಾದಿಯಲ್ಲೇ ಆರಂಭವಾದ ಬರಹ ಮುಂದೆ ಎಲ್ಲಿಗೆ ಮುಟ್ಟೀತು ಎಂದು. ಆದರೆ ನಿನ್ನೆ ವಿಶೇಷವಾಗಿ ಈ ಹತ್ತು ವರ್ಷಗಳನ್ನು ನೆನಪಿಸಿಕೊಳ್ಳಬೇಕಾಯಿತು, ರೆಡಿಯೋದಲ್ಲಿ ಪ್ರಿನ್ಸೆಸ್ ಡಯಾನಾ ಸತ್ತು ಹತ್ತು ವರ್ಷವಾದ ಸುದ್ದಿಯನ್ನು ಕೇಳಿದ ಬಳಿಕ.

ಆಗೆಲ್ಲಾ ಎಂಟು ವರ್ಷಗಳ ಡೆಮಾಕ್ರಟಿಕ್ ಪಕ್ಷದ ಆಡಳಿತವನ್ನು ಸಹಿಸಿಯೋ ಸಹಿಸಲಾರೆದೆಯೋ ರಿಪಬ್ಲಿಕನ್ ಪಕ್ಷದವರು ಸೆಡ್ಡು ಹೊಡೆದು ನಿಂತು ಮುಂಬರುತ್ತಿದ್ದ ಬುಷ್ ಚುನಾವಣೆಗೆ ಹೊಂಚು ಹಾಕುತ್ತಿದ್ದ ಕಾಲ. ಕೆನೆತ್ ಸ್ಟಾರ್ ಎನ್ನುವ ಮುತ್ಸದ್ದಿ ಪ್ರತಿದಿನವೂ ಅಂದಿನ ಪ್ರೆಸಿಡೆಂಟ್ ಬಿಲ್ ಕ್ಲಿಂಟನ್ನರ ಕಾಲು ಎಳೆಯುತ್ತಿದ್ದ ಕಾಲ - ಯಾವ ನ್ಯೂಸ್ ಚಾನೆಲ್ ತಿರುಗಿಸಿದರೂ ಮೊನಿಕಾ ಲ್ಯುಯಿನ್ಸ್ಕೀಯೇ ಪ್ರತ್ಯಕ್ಷವಾಗುತ್ತಿದ್ದಳು. ಅಂತಹ ನ್ಯೂಸ್ ಹಂಗ್ರೀ ಮಾಧ್ಯಮಗಳಿಗೆ ಸ್ವಲ್ಪ ತಿರುವು ನೀಡಿದ್ದೆ ಡಯಾನ ಕಾಲವಾದ ವಿಚಾರ. ಜನಮನಗಳಲ್ಲಿ ಆಕೆ ಹೇಗೆ ನಿಂತು ಹೋಗಿದ್ದಳು, ಬೆರೆತು ಹೋಗಿದ್ದಳು ಎನ್ನುವುದಕ್ಕೆ ಸಾಕ್ಷಿಯಾಗುವಂತೆ ಜನರ ಪ್ರತಿಕ್ರಿಯೆ ವ್ಯಕ್ತವಾಗತೊಡಗಿ ಅಮೇರಿಕನ್ ಮಾಧ್ಯಮಗಳೂ ತಮ್ಮ ಕ್ಯಾಮರಾಗಳನ್ನು ಯುರೋಪಿನ ಕಡೆಗೆ ಮುಖಮಾಡಿ ನಿಂತಿದ್ದಂತಹ ಘಳಿಗೆಯೊಂದು ಸೃಷ್ಟಿಯಾಗಿತ್ತು.

ಅಂದಿನ ದಿನಗಳಲ್ಲಿ ನಾನೂ ಒಂದು ಹೊಸ ಕಂಪ್ಯೂಟರ್ ಕೊಂಡಿದ್ದೆ - ಆಫೀಸಿನಲ್ಲಿ ನನಗೆ ಬೇಕಾದ ವೆಬ್‌ಸೈಟುಗಳನ್ನು ನೋಡಿದರೆ, ನೋಡಿದ್ದು ಗೊತ್ತಾದರೆ ಎಲ್ಲಿ ಮನೆಗೆ ಕಳಿಸುತ್ತಾರೋ ಎಂಬ ಭಯ ಬೇರೆ ಇತ್ತು! ಹತ್ತು ವರ್ಷಗಳ ಹಿಂದೆ ಇಂತಹ ಪ್ರತೀ ಶುಕ್ರವಾರ ಸಂಜೆಯಿಂದ ಹಿಡಿದು ಶನಿವಾರದವರೆಗೆ ನಾನು ನಿದ್ರೆ ಮಾಡುತ್ತಿದ್ದುದೇ ಕಡಿಮೆ. ಅದರ ಬದಲಿಗೆ ಓದಲಿಕ್ಕೆ ಬೇಕಾದಷ್ಟು ವೆಬ್ ಸೈಟುಗಳು. ಮೊಟ್ಟ ಮೊದಲ ಬಾರಿಗೆ ನನ್ನ ತಮಿಳು ಸ್ನೇಹಿತ ಕಳಿಸಿದ ಲಿಂಕ್‌ನ ದಯೆಯಿಂದಾಗಿ ಸಂಜೆವಾಣಿ ಪತ್ರಿಕೆಯ ಅಂತರ್ಜಾಲ ದರ್ಶನ - ಬೆಂಗಳೂರಿನ ಸುದ್ದಿಯಾಗಿರಲಿ, ಇನ್ಯಾವುದಾಗಿರಲಿ ಕನ್ನಡವನ್ನು ಕಂಪ್ಯೂಟರ್ರ್‌ನಲ್ಲಿ ನೋಡುತ್ತಿದ್ದೇನಲ್ಲಾ ಅನ್ನೋ ಸಂತೋಷವೇ ದೊಡ್ಡದಾಗಿತ್ತು. ಯಾರೋ ಪುಣ್ಯಾತ್ಮರು ಹಾಕಿದ ’ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ...’ ಹಾಡು ರಾಜ್‌ಕುಮಾರ್ ಧ್ವನಿಯಲ್ಲಿ ಕೇಳಿದಷ್ಟೂ ತಣಿಯದು, ಅದರ ಜೊತೆಯಲ್ಲಿ ’ಅಳುವಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ’. ನನ್ನ ತೆಲುಗು ರೂಮ್ ಮೇಟ್ ಪವನ್ ಕೂಡಾ ’ಅಮೃತವಾಹಿನಿ...’, ಹಾಗೂ ’ಅಳುವಕಡಲೊಳು...’ ಹಾಡನ್ನು ಬಾಯಿಪಾಟ ಮಾಡಿಕೊಂಡಿದ್ದ, ಏಕೆಂದರೆ ಅವೇ ಪದೇ-ಪದೇ ನನ್ನ ಕಂಪ್ಯೂಟರ್‌ನಿಂದ ಕೇಳಿಬರುತ್ತಿದ್ದವು.

ಓಹ್, ಅಲ್ಲೊಂದು ದೊಡ್ಡ ಚಾಟ್ ಪ್ರಪಂಚವೇ ಇತ್ತು. ನಾನೂ, ಪವನ್ ಹಾಗೂ ನಮ್ಮನ್ನು ಬಹಳ ಮುತುವರ್ಜಿಯಿಂದ ಪದೇಪದೇ ಭೇಟಿಯಾಗುತ್ತಿದ್ದ ಆಕಾಶ್‌ಗೆ ಕಂಪ್ಯೂಟರ್‌ನಲ್ಲಿನ ಚಾಟ್ ಬಹಳ ಮಹತ್ವಪೂರ್ಣದಾಗಿತ್ತು. ಫ್ಲ್ಯಾಟ್‌ಲೈನ್ ಫೋನ್ ಸರ್ವೀಸ್‌ನಲ್ಲಿ ಡಯಲ್ ಅಪ್ ಕನೆಕ್ಷನ್ ಇದ್ದುದಾದರೂ ನಮಗೆ ವೀಕ್ ಎಂಡ್‌ಗಳಲ್ಲಿ ನಿರಂತರವಾಗಿ ಚಾಟ್ ಮಾಡಲು ಯಾವ ತೊಂದರೆಯೂ ಇರುತ್ತಿರಲಿಲ್ಲ. ಕೆಲವೊಮ್ಮೆ ಪಾಳಿಯ ಮೇಲೆ ಒಬ್ಬರಾದ ಮೇಲೆ ಒಬ್ಬರು, ನಾಲ್ಕು-ಐದು-ಆರು ಘಂಟೆಗಳ ನಿರಂತರ ಚಾಟ್‌ಗಳಲ್ಲಿ ತೊಡಗಿದ್ದೂ ಉಂಟು. ಹೀಗಿನ ನಿರಂತರ ತಪಸ್ಸಿನ ಚಾಟ್‌ನಿಂದ ನಾನೂ ಹಾಗೂ ಪವನ್ ಕೆಲವೇ ವಾರಗಳಲ್ಲಿ ಹೊರಗೆ ಬಂದು ಮುಕ್ತರಾದೆವು. ನಮ್ಮ ಪ್ರಬುದ್ಧತೆ ಬದಲಾಯಿತೋ, ಅಥವಾ ವರ್ಚುವಲ್ ಪ್ರಪಂಚದ ಇತಿಮಿತಿಗಳು ಸ್ಪಷ್ಟವಾದವೋ ಗೊತ್ತಿಲ್ಲ, ಆದರೆ ಆಕಾಶ್ ಅದರಿಂದೆಂದೂ ಮುಕ್ತನಾಗಲೇ ಇಲ್ಲ. ನಾನೂ-ಪವನ್ ಚಾಟ್‌ಗೆ ಬಳಸದ ಕಂಪ್ಯೂಟರ್ ಆಕಾಶನ ಪೂರ್ಣ ಸ್ವತ್ತಾಯಿತು. ಕೆಲವೊಮ್ಮೆ ಮಧ್ಯೆ ಯಾವುದಾದರೊಂದು ಕರೆ ಮಾಡಬೇಕೆಂದರೂ ಬಿಡುವು ಕೊಡದ ಹಾಗೆ ಆಕಾಶ್ ನಮ್ಮ ಮನೆಯ ಕಂಪ್ಯೂಟರ್ರ್ ಅನ್ನು ಬಳಸುವುದನ್ನು ನೋಡಿ ಪವನ್‌ಗೆ ಆಗಾಗ ಸಿಟ್ಟುಬರಲು ತೊಡಗಿತು. ಇದ್ದಕ್ಕಿದ್ದಂತೆ ಒಂದು ದಿನ ಪವನ್‌ಗೂ ಆಕಾಶ್‌ಗೂ ಸ್ವಲ್ಪ ಮಾತು ಬೆಳೆದಂತೆ ನೆನಪು. ನಂತರ ನಮ್ಮ ಮನೆಗೆ ಆಕಾಶ್ ಬರುವುದನ್ನು ಕಡಿಮೆ ಮಾಡಿದ, ಆದರೆ ಅಷ್ಟೊತ್ತಿಗಾಗಲೇ ಅವನ ಮನೆಯಲ್ಲೇ ಒಂದು ಕಂಪ್ಯೂಟರ್ ಇತ್ತು ಎಂದು ಕೇಳಿದ ನೆನಪು. ಆಕಾಶ್ ಚಾಟ್‌ನಿಂದ ಮುಕ್ತನಾಗಲೇ ಇಲ್ಲ ಎಂದು ಹೇಳಿದ್ದಕ್ಕೆ ಕಾರಣವಿದೆ. ಆಕಾಶ್‌ಗೂ ಹಾಗೂ ಕ್ಯಾತಿ ಎನ್ನುವ ಬಿಳಿ ಅಮೇರಿಕನ್ ಹುಡುಗಿಗೂ ಸ್ನೇಹ ಬೆಳೆದು ಅದು ಮುಂದೆ ಪ್ರೀತಿಯಾಗಿ ಮದುವೆಯಾಗುವಲ್ಲಿಯವರೆಗೂ ಹೋಯಿತು. ಆ ದಿನಗಳಲ್ಲಿ ಆಕಾಶ್ ಕ್ಯಾತಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಕ್ಕಾಗಿ ನನ್ನ ಕಂಪ್ಯೂಟರ್ರ್ ಅನ್ನು ಹೊಗಳುತ್ತಿದ್ದನೆಂದು ತೋರುತ್ತದೆ, ಈ ದಿನ ಅವನ ನಿಲುವು ಹೇಗಿದೆಯೋ ಗೊತ್ತಿಲ್ಲ. ಆಕಾಶ್ ಜೊತೆಯಲ್ಲಿ ನಾನು ಕ್ಯಾತಿಯನ್ನು ನೋಡಿದ್ದು ನ್ಯೂ ಬ್ರನ್ಸ್‌ವಿಕ್‌ನ ಒಂದು ಇಂಡಿಯನ್ ಹೊಟೇಲಿನಲ್ಲಿ, ಕೆಲವು ವರ್ಷಗಳ ನಂತರ - ಆಗ ಅವನು ಕ್ಯಾತಿಯನ್ನು ತನ್ನ ಹೆಂಡತಿ ಎಂದು ಪರಿಚಯ ಮಾಡಿಕೊಟ್ಟಿದ್ದ ನೆನಪು. ಮುಂದೆ ಆಕಾಶ್, ಪವನ್ ಅವರವರ ದಿಕ್ಕು ಹಿಡಿದು ನಡೆದವರು ಇವತ್ತಿಗೂ ಭೇಟಿಯಾದದ್ದಿಲ್ಲ. ನನ್ನ ಹಾಗೇ ಅವರೂ ಹತ್ತು ವರ್ಷಗಳನ್ನು ನೆನೆಸಿಕೊಳ್ಳುತ್ತಿರಬಹುದು.

೧೯೯೭ ರಿಂದ ೨೦೦೦-೨೦೦೧ ರ ಹೊತ್ತಿಗೆಲ್ಲಾ ಸ್ಟಾಕ್ ಮಾರ್ಕೇಟ್, ಟೆಕ್ನಾಲಜಿ ಮಾರ್ಕೇಟ್ ತುಂಬಾ ಮೇಲು ಹೋಗುತ್ತಿದ್ದ ಕಾಲ. ರಿಯಲ್ ಎಸ್ಟೇಟ್ ಸಹಾ ಆಗಷ್ಟೇ ಚಿಗುರಿಕೊಳ್ಳುತಲಿತ್ತು. ಆದರೆ ನಾನು, ಹಾಗೂ ನನ್ನ ಹಾಗಿನವರು ದಿನವೂ ಆಫೀಸಿಗೆ ಹೋಗಿ ಬರುವುದನಷ್ಟೇ ಕಾಯಕವೆಂದುಕೊಂಡು ಇವತ್ತಿನವರೆಗೂ ಅನುಸರಿಸಿಕೊಂಡು ಬಂದೆವೇ ವಿನಾ ಯಾವೊಂದು ರಿಸ್ಕ್ ಅನ್ನೂ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಿಲ್ಲ. ಉದ್ಯಮವನ್ನು ಆರಂಭಿಸುವುದಕ್ಕೆ, ತಮ್ಮದೇ ಆದ ಕಂಪನಿಯನ್ನು ಶುರು ಮಾಡಲಿಕ್ಕೆ, ಆಯಕಟ್ಟಿನ ಜಾಗಗಳಲ್ಲಿ ಹಣ ಹೂಡುವುದಕ್ಕೆ, ಮನೆ-ಮಠ ಖರೀದಿ ಮಾಡುವುದಕ್ಕೆ ಎಲ್ಲದಕ್ಕೂ ಹೇಳಿ ಮಾಡಿಸಿದ ಸಮಯವಾಗಿತ್ತು. ೨೦೦೧ ರ ಸೆಪ್ಟೆಂಬರ್ ಬರುತ್ತಿದ್ದ ಹಾಗೆ, ಅಲ್ಲ, ಬುಷ್ ಚುಕ್ಕಾಣಿ ಹಿಡಿದು ಶ್ವೇತಭವನವನ್ನು ಸೇರಿದ ಘಳಿಗೆ ಸರಿ ಇರದಿದ್ದ ಕಾರಣ ಏನೇನೋ ಅನಾಹುತಗಳಾದವು. ಪ್ರಪಂಚದ ರೀತಿ-ನೀತಿಗಳೇ ಬದಲಾಗಿ ಹೋದವು. ಎಲ್ಲವೂ ಅಮೇರಿಕಮಯವಾಯಿತು. ಉದಯವಾಣಿಯಂತಹ ಪತ್ರಿಕೆಗಳು ನಮ್ಮಲ್ಲಿನ ಬಸ್ಸುಲೋಡು ಜನರು ತುಂಬಿ ಅಮೇರಿಕದಿಂದ ಭಾರತಕ್ಕೆ ಹಿಂತಿರುಗುವ ಹಾಗೆ ವೃತ್ತಿಕರ್ಮಿಗಳನ್ನು ಬಿಂಬಿಸತೊಡಗಿ, ಆಗಾಗ್ಗೆ ಊರಿನಿಂದ ಅಣ್ಣ ಫೋನ್ ಮಾಡಿ ’ಎಲ್ಲಾ ಚೆನ್ನಾಗಿದೆಯಾ?’ ಎಂದು ಕೇಳುವಂತಾಗಿತ್ತು. ಎಷ್ಟೋ ಜನ ಕಂಪನಿಗಳನ್ನು ಬದಲಾಯಿಸಿದರು. ಎಷ್ಟೊ ಜನ ಹಿಂತಿರುಗಿ ಹೋದರು. ಇನ್ನೆಷ್ಟೋ ಜನ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿದರು. ಗ್ರೀನ್‌ಕಾರ್ಡ್ ಸುಳಿಯಲ್ಲಿ ಸಿಕ್ಕವರ ಅವಸ್ಥೆ ಹೇಳತೀರದಾಗಿತ್ತು, ಕೊನೆಯ ಹಂತದವರೆಗೆ ಬಂದು ಕಂಪನಿಯನ್ನು ಬಿಟ್ಟವರ ಕೊರಗು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಹತ್ತು ವರ್ಷಗಳಲ್ಲಿ ಏನೇನೆಲ್ಲ ಆಗಿ ಹೋದವು. ಹತ್ತು ವರ್ಷ ಕೋಮಾದಲ್ಲಿದ್ದ ವ್ಯಕ್ತಿ ಇಂದು ಎಚ್ಚೆತ್ತು ಪ್ರಪಂಚವನ್ನು ನೋಡಿದ್ದೇ ಹೌದಾದರೆ ಅಗಾಧವಾದ ವ್ಯತ್ಯಾಸ ಎಲ್ಲ ಸ್ಥರಗಳಲ್ಲಿ ಕಂಡುಬರುವುದು ಸಾಮಾನ್ಯ. ಕಂಪ್ಯೂಟಿಂಗ್ ಪವರ್‌ನಿಂದ ಹಿಡಿದು ಟೆಕ್ನಾಲಜಿವರೆಗೆ, ಜಾಗತಿಕ ವಿಷಯಗಳನ್ನು ಲೆಕ್ಕ ಹಾಕಿಕೊಂಡರೆ, ಬಂದು ಹೋದವರ, ಕಾಲವಾದವರ ನೆನಪು ಮಾಡಿಕೊಂಡರೆ ಈ ಹತ್ತು ವರ್ಷಗಳು ಬಹಳ ದೊಡ್ಡವೇ. ಅಬ್ಬಾ, ಒಂದು ದಶಕವೆಂದರೆ ಎಷ್ಟು ದೊಡ್ಡದು! ಹೀಗೆ ಹತ್ತು ದಶಕಗಳಷ್ಟು ಬಾಳ ಬಹುದಾದ ಮಾನವ ಜೀವನ ದೊಡ್ಡದೇ ಎಂದು ಈ ಹೊತ್ತಿನಲ್ಲಿ ಅನ್ನಿಸಿದ್ದು ಸುಳ್ಳಲ್ಲ.

ಹತ್ತು ವರ್ಷಗಳ ನಂತರ ನಾನು ಇಂದೂ ಮಾರ್ರಿಸ್ ಕೌಂಟಿಯ ಮತ್ತೊಂದು ಪಟ್ಟಣ ಫ್ಯ್ಲಾಂಡರ್ಸ್ (Flanders) ನಲ್ಲಿ ನೆಲೆನಿಂತಿದ್ದೇನೆ - ಒಂದು ರೀತಿ ಫುಲ್ ಸೈಕಲ್ ಬಂದ ಹಾಗನ್ನಿಸುತ್ತೆ.

Thursday, August 30, 2007

ಗಾಳಿ

ಏನು ಗೊತ್ತಾ? ಸುಮ್ನೇ ಗಾಳೀ ಮೇಲೆ ಬರೀ ಬೇಕು ಅಂತ ನಿನ್ನೆಯಿಂದ ಅನ್ನಿಸ್ತಿದ್ದದ್ದು ನಿಜ. ಅಂತಿಂತ ಗಾಳಿ ಬಗ್ಗೆ ಅಲ್ಲ, ಎಲ್ಲ ಥರದ ಗಾಳಿಯ ಬಗ್ಗೆ, ಪ್ರಪಂಚವನ್ನು ಅಲ್ಲೋಲಕಲ್ಲೋಲ ಮಾಡುವ ಗಾಳಿಯಿಂದ ಹಿಡಿದು ಚಿಗುರೆಲೆಗಳ ಮೈ ಸವರಿ ’ಹೇಗಿದ್ದೀರಿ?’ ಎಂದು ವಿಚಾರಿಸುವ ಗಾಳಿಯವರೆಗೆ, ಕೆಲವು ಕಡೆ ಕತ್ತಲು ಆರಂಭವಾಗುವ ಸೂಚನೆ ನೀಡುವ ಗಾಳಿಯಿಂದ ಹಿಡಿದು, ಇನ್ನೆಲ್ಲೋ ಬೆಳಕು ಹುಟ್ಟುವ ಮುನ್ಸೂಚನೆ ಕೊಡುವ ಗಾಳಿಯವರೆಗೆ.

ಎಷ್ಟೋ ಸಾರಿ ಯೋಚಿಸಿದ್ದಿದೆ ಹೀಗೆ: ಯಾವುದೋ ಒಂದು ದಿನ ಅಪರೂಪಕ್ಕೆ ಶನಿವಾರ ಸಂಜೆ ನಿದ್ರೆಯಿಂದ ಎದ್ದು ಹೊರಗೆ ನೋಡಿದರೆ ಪಕ್ಕನೆ ಒಂದು ದಿಕ್ಕಿನಲ್ಲಿ ಕಂಡು ಬರುವ ಸೂರ್ಯ, ಅವೇ ಮೋಡಗಳ ನಡುವಿನ ಕಿರಣಗಳು ಇವೆಲ್ಲ ಏಕ್ ದಂ ಆ ಸಮಯ ಹಗಲು ರಾತ್ರಿಯಾಗುತ್ತಿರುವುದೋ ಅಥವಾ ರಾತ್ರಿ ಇದ್ದದ್ದು ಹಗಲಾಗುವುದೊ ಎಂಬ ಗೊಂದಲವನ್ನು ಹುಟ್ಟಿಸುತ್ತದೆ. ನಿಮಗೆ ಹಾಗೆ ಆಗಿರಲೇ ಬೇಕೆಂದೇನೂ ಇಲ್ಲ ಆದರೆ ನನಗಂತೂ ಹಾಗೆ ಅನ್ನಿಸಿದೆ, ಸಂಜೆ ನಿದ್ರೆಯಿಂದ ಎದ್ದವನಿಗೆ ಅದೇ ತಾನೆ ಬೆಳಗು ಹರಿದ ಅನುಭವವಾಗಿದ್ದಿದೆ. ಆ ಸಮಯಕ್ಕೆ ಸಹಾಯಕ್ಕೆ ಬರುವ ಸ್ನೇಹಿತನೆಂದರೆ ಲಘುವಾಗಿ ತೀಡುವ ಗಾಳಿ, ಮುಂಜಾನೆ ಬೀಸುವ ಗಾಳಿಯಲ್ಲಿ ಒಂದು ರೀತಿಯ ಆರ್ದ್ರತೆ ಇದ್ದರೆ, ಅದೇ ಸಂಜೆ ಹೊತ್ತಿಗೆಲ್ಲಾ ಒಣಗಿ ಹೋಗುತ್ತಿರುವ ದಿನದಲ್ಲಿ ಈಗಾಗಲೇ ಅಲ್ಲಿಲ್ಲಿ ಸುಳಿದ ಗಾಳಿಯೇ ಹೆಚ್ಚು.

ಉತ್ತಮ ಗಾಳಿ ಅನ್ನೋದೇನಿದ್ದರೂ ಪಶ್ಚಿಮದಲ್ಲೇ ಹುಟ್ಟಬೇಕು, ಹಾಗೆ ಹುಟ್ಟಿ ಅದು ಪೂರ್ವಾಭಿಮುಖವಾಗಿ ಹರಿಯಬೇಕು ಅಲ್ಲಿನ ಜನರ ಸ್ಥಿತಿಗತಿಗಳನ್ನು ಅರಿತಂತೆ ಆಲಿಸಿ ಅವರನ್ನು ಆಳಬೇಕು - ಹೀಗೆ ಇತಿಹಾಸವಿದೆ, ಅನುಭವವಿದೆ. ಸೂರ್ಯ ಮೊದಲು ಹುಟ್ಟಿ ಬರುವ ನಾಡಿನಲ್ಲಿನ ಕತ್ತಲನ್ನು ಹೋಗಲಾಡಿಸಲು ಪಶ್ಚಿಮದಲ್ಲಿ ಅವರವರ ಕತ್ತಲಲ್ಲಿ ಬಳಲುತ್ತಿರುವ ಜನರೇ ಆಗಬೇಕು.

***
ಓಹ್, ಯಾಕ್ ನಿಲ್ಲಿಸ್ ಬಿಟ್ಟೇ ಅಂತೀರಾ? ಏನ್ ಹೇಳ್ತಾ ಇದ್ದೆ?

ಅದೇ ಗಾಳಿ ಬಗ್ಗೆ.

ಯಾವ್ ಗಾಳಿ?

ಅದೇ - ಕತ್ಲು, ಬೆಳಕೂ, ಪೂರ್ವಾ, ಪಶ್ಚಿಮಾ, ರಾತ್ರೀ, ಹಗಲೂ..

ಓ, ಅದಾ - ಏನಿಲ್ಲ, ಗಾಳಿ ಒಂದ್ ಕಡೇಯಿಂದ ಮತ್ತೊಂದ್ ಕಡೇ ಹೋಯ್ತು ಅಂತ ಇಟ್ಕೊಳ್ಳಿ...ಆಗ ಏನಾಗುತ್ತೇ ಅಂದ್ರೆ ಅಲ್ಲೊಂದು ನಿರ್ವಾತ ಹುಟ್ಟತ್ತೆ. ಆದ್ರೆ, ಆ ನಿರ್ವಾತವನ್ನು ತುಂಬೋದಕ್ಕೆ ಸುತ್ತಲಿನ ಗಾಳಿ ರಭಸದಿಂದ ನುಗ್ಗುತ್ತೆ. ಹಾಗೆ ಆಗೋದರಿಂದ ಎರಡು ಬದಲಾವಣೆ ಆಗುತ್ತೆ - ಒಂದು, ಹಳೇ ಗಾಳಿ ಇದ್ದಲ್ಲಿ ಹೊಸ ಗಾಳಿ ಬಂದಂತಾಯ್ತು, ಇನ್ನೊದು, ಇರೋ ಗಾಳೀನೇ ಹೆಚ್ಚು ವಾಲ್ಯೂಮ್ ತುಂಬಿಕೊಂಡು ಒತ್ತಡ ಕಡಿಮೆ ಆಯ್ತು. ಹೌದೋ ಅಲ್ವೋ.

ಹೌದು.

ಅದರಿಂದ ಏನ್ ಗೊತ್ತಾಗುತ್ತೇ?

ಏನ್ ಗೊತ್ತಾಗುತ್ತೇ?

ಅದೇ, ಇರೋ ಗಾಳಿಯ ಜಾಗದಲ್ಲಿ ಮತ್ತೆನೋ ಬಂದ್ ಸೇರ್ಕೊಂಡು, ವಾಲ್ಯೂಮ್ ಜಾಸ್ತಿ ಆಯ್ತು, ಒತ್ತಡಾ ಕಡಿಮೆ ಆಯ್ತು, ಇದರಿಂದ ಎಲ್ಲ ವೇರಿಯಬಲ್‌ಗಳು ಬದಲಾದ್ವೇ ಹೊರತು ಒಟ್ಟು ಸ್ಥಿತಿಗತಿಯಲ್ಲಿ ಏನೇನೂ ಬದಲಾವಣೇ ಅನ್ನೋದಾಗ್ಲಿಲ್ಲ ನೋಡಿ.

ಏನೋ ನನಗೆ ಅರ್ಥ ಆಗ್ಲಿಲ್ಲಪ್ಪಾ.

ನಿಮಗೆಲ್ರೀ ಅರ್ಥ ಆಗುತ್ತೇ ಇಂತಾ ಸುಲಭವಾದ ಸಮೀಕರಣಾ, ಅದೂ ಕಂಪ್ಯೂಟರ್ರ್ ಕಾಲದ ಜನ್ರಪ್ಪಾ ನೀವು, ಎಲ್ಲದಕ್ಕೂ ಕ್ಯಾಲ್ಕುಲೇಟರ್ ಬಳಸೋ ಪರಂಪರೆಯವರು.

***

ಈ ಪಂಚಭೂತಗಳಲ್ಲೊಂದಾದ ಗಾಳಿಗೆ ದುಡ್ಡು ಕೊಡಬೇಕಾಗಿಲ್ಲ ಅನ್ನೋ ಕಾಲ ಬಹಳ ಹಳೆಯದಾಯ್ತು. ನಾವು ನೀರನ್ನು ದುಡ್ಡುಕೊಟ್ಟು ಕೊಂಡು ಗೊತ್ತಿದೆ, ಆದರೆ ಗಾಳಿಗೆ ದುಡ್ಡುಕೊಟ್ಟಿಲ್ಲ ಅನ್ನೋಕಾಗಲ್ಲ. ನಾವು ಉಪಯೋಗಿಸೋ ಮ್ಯಾನುಫ್ಯಾಕ್ಚರ್ ಮಾಡಿರೋ ಪ್ರತಿಯೊಂದು ವಸ್ತುವೂ ವಾತಾವರಣಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡುತ್ತೆ. ಬೇಕಾದಷ್ಟು ರೀತಿಯ ಅನಿಲಗಳನ್ನು ಕಾರ್ಖಾನೆಗಳಿಂದ ಹೊರಗೆ ಬರೋದನ್ನ ನೋಡೇ ಇರ್ತೀವಿ. ಬಿಯರ್ ತಯಾರಿಕೆ, ಫರ್ಮೆಂಟೇಷನ್ ಮುಂತಾದ ಸರಳ ಮ್ಯಾನುಫ್ಯಾಕ್ಚರಿಂಗ್ ನಿಂದ ಹಿಡಿದು ಟಯರ್ ಮೊದಲಾದ ಪ್ಲಾಸ್ಟಿಕ್, ರಬ್ಬರ್ ಆಧಾರಿತ ವಸ್ತುಗಳ ಉತ್ಪಾದನೆ ಬೇಕಾದಷ್ಟು ಅನಿಲವನ್ನು ಹೊರಗಡೆ ಹರಿಯಬಿಡುತ್ತೆ. ಹೀಗೆ ಹೊರಬಂದ ಅನಿಲಗಳಲ್ಲಿ ಎಷ್ಟೋ ಒಳ್ಳೆಯವು, ಇನ್ನೆಷ್ಟೋ ಕೆಟ್ಟವು. ಅವೆಲ್ಲಾ ಸೇರಿ ಸುಮ್ಮನೇ ಇರ್ತಾವೆ ಅಂತೇನೂ ಇಲ್ಲ. ಗ್ರೀನ್‍ಹೌಸ್ ಗ್ಯಾಸ್‌ಗಳಿಂದ ಗ್ಲೋಬಲ್ ವಾರ್ಮಿಂಗ್ ಆಗೋದರ ಬಗ್ಗೆ ಎಲ್ಲರಿಗೂ ಗೊತ್ತು, ಆಸಿಡ್ ಮಳೆ ಬೀಳೋದರ ಬಗ್ಗೆ ಗೊತ್ತಿದೆ, ಇನ್ನು ವಾಯು ಮಾಲಿನ್ಯದ ಬಗ್ಗೆ ನಾವೆಲ್ಲಾ ಕೇಳೇ ಇರ್ತೀವಿ. ಹೀಗೆ ಹೊರಸೂಸಿದ ಅನಿಲಗಳ ದುಷ್ಪರಿಣಾಮವೇ ನಾವು ಗಾಳಿಗೆ ತೆರುತ್ತಿರುವ ಬೆಲೆ.

ನಮ್ಮ ಕಡೆ ದೆವ್ವ-ಭೂತ ಮೆಟ್ಟಿಕೊಂಡೋರಿಗೆ ’ಗಾಳಿ ಬಡದಿದೆ’ ಅಂತಾರೆ. ಯಾವ ಗಾಳಿಯಲ್ಲಿ ಏನೇನಿದೆಯೋ? ಆತ್ಮಗಳ ಸಂವಹನೆಗೆ, ಭೂತಗಳ ಮಾತುಕಥೆಗೆ ಈ ಗಾಳಿಯೇ ಮಾಧ್ಯಮವಾಗೇಕಿರಬಾರದು. ನೀವ್ ಮಾತ್ರ ಎಲ್ಲ್ ಹೋದ್ರೂ ಹುಶಾರಾಗಿರಿ. ಯಾವ್ ಯಾವ್ ಗಾಳೀಲೀ ಏನೇನಿದೆಯೋ? ಕೊನೆಗೆ ಬೇಡವಾದದ್ದ್ಯಾವ್ದಾದ್ರೂ ಮೆಟ್ಟಿಕೊಂಡ್ರೆ ಕಷ್ಟಾ. ಹಿಂದೆಲ್ಲಾ ಒಂದಿಷ್ಟು ಗಾಳೀಸುದ್ದೀ ಅಂತ ಹುಟ್ತಿತ್ತು, ಈಗೆಲ್ಲಾ ಟಿವಿ ಚಾನೆಲ್ಲುಗಳಿಗೆ ಜನ ಒಗ್ಗಿಕೊಂಡ್ ಹೋಗೀರೋ ಸಮಯದಲ್ಲೂ ಇನ್ನೂ ಗಾಳೀಸುದ್ದಿಯಾಗಲೀ, ಗಾಳೀಮಾತಾಗಲೀ ಪ್ರಸ್ತುತವಾಗುತ್ತಾ? ನೀವ್ ಏನೇ ಹೇಳಿ ಅವರವರು ಮೂಗಿನಲ್ಲಿ ಎಳೆದುಕೊಳ್ಳೋ ಗಾಳಿ ಅವರವರಿಗೇ ಸೇರಿದ್ದು, ನಮಗೆಲ್ಲಾ ಜೀವವಾಯುವಾದ ಆಮ್ಲಜನಕವನ್ನ ವಾತಾವರಣದಿಂದ ಯಾರಾದ್ರೂ ದೋಚಿಕೊಳ್ದೇ ಇದ್ರೆ ಸಾಕಪ್ಪಾ.

ಒಂದು ಕೆಟ್ಟ ಗಾಳಿ ಸಾಕು ಲೋಕವನ್ನ ಕಂಗೆಡಿಸೋದಕ್ಕೆ. ಅದು ಬಿರುಗಾಳಿ ಆಗಿರಬಹುದು, ಸುಂಟರಗಾಳಿ ಆಗಿರಬಹುದು, ಅಥವಾ ಮೂಡಗಾಳಿ ಆಗಿರಬಹುದು. ತುಂಬಾ ಛಳಿ ಇದ್ದಾಗ ಬೀಸೋ ಗಾಳಿ ಇಂದ ಹೇಗೆ ತೊಂದರೆ ಇದೆಯೋ ಹಾಗೇ ತುಂಬಾ ಬಿಸಿ ಇದ್ದಾಗ ಬೀಸೋ ಗಾಳಿಯಿಂದ್ಲೂ ತೊಂದರೇನೇ. ನೀವು ಎಲ್ಲೇ ಇರಿ ಹೇಗೇ ಇರಿ, ನಿಮ್ಮನ್ನ ನೀವು ಗಾಳಿಯಿಂದ ರಕ್ಷಣೆ ಮಾಡಿಕೊಳ್ಳಿ, ಅಷ್ಟೇ ಸಾಕು ಮಿಕ್ಕಿದ್ದೆಲ್ಲ ತನ್ನಷ್ಟಕ್ಕೆ ತಾನೇ ಸರಿಹೋಗುತ್ತೆ. ಯಾವುದೇ ಕೆಟ್ಟಗಾಳಿ-ಸುಳಿಗಾಳೀ ಸಹವಾಸ ಮಾಡ್ದೇ ನೀವು ಸದಾ ಒಳ್ಳೇ ವಾತಾವರಣದಲ್ಲೇ ಇರಬೇಕು ಅನ್ನೋದು ನನ್ನ ಆಶಯ.

Tuesday, August 28, 2007

ಪರಿಮಿತ ಮನಸ್ಸು ಅಪರಿಮಿತ ಜೀವಸಂಕುಲ

ಜೀವ ಸಂಕುಲ ಅನ್ನೋದು ಬಹಳ ಸ್ವಾರಸ್ಯಕರವಾದದ್ದು ಎಂದು ಅನ್ನಿಸಿದ್ದು ಪ್ರತೀ ದಿನ ಆಫೀಸಿನಿಂದ ಬರುವ ದಾರಿಯಲ್ಲಿ ಕಾಣುವ ಒಂದು ಹಸಿರುಕಟ್ಟಿದ ನೀರು ತುಂಬಿದ ಹೊಂಡವನ್ನು ನೋಡಿದಾಗ. ಮಳೆ ಬಾರದಿದ್ದ ದಿನಗಳಲ್ಲಿ ಅಲ್ಲಿ ಹೆಚ್ಚು ಪಾಚಿ ಬೆಳೆಯದೇ ಅಲ್ಲಲ್ಲಿ ತ್ಯಾಪೆ ಹಾಕಿದವರ ಹಾಗೆ ಬರಿ ನೀರು ಕಾಣಿಸುತ್ತಿತ್ತು, ಕಳೆದ ಒಂದೆರಡು ವಾರಗಳಲ್ಲಿ ಹುಲುಸಾದ ಮಳೆಯಿಂದಾಗಿ ಈಗ ಎಲ್ಲಿ ನೋಡಿದರಲ್ಲಿ ಹಸಿರೇ ಹಸಿರು, ಅಲ್ಲಿ ನೀರೇ ಇಲ್ಲವೇನೋ ಎನ್ನಿಸುವಂತೆ ಅಗಾಧವಾದ ಶಾಂತಿಯನ್ನು ತನ್ನ ಮುಖದಲ್ಲಿ ಪ್ರತಿಫಲಿಸುವ ಸಂತನ ನಿಷ್ಕಲ್ಮಷ ಮುಖದಂತೆ ಒಂದು ರೀತಿಯ ಸ್ತಬ್ದಚಿತ್ರ. ಬರೀ ಕೀಟಗಳನ್ನು ಅಧ್ಯಯನ ಮಾಡಿಯೇ ಎಷ್ಟೋ ಜನುಮಗಳನ್ನು ಕಳೆಯಬಹುದು, ಪ್ರಪಂಚದಾದ್ಯಂತ ಇರುವ ಇನ್ನೂ ಹೆಸರಿಡದ ಕೀಟಗಳ ಸಂತಾನವನ್ನು ಅವುಗಳ ಚಲನವಲನವನ್ನು ಶೋಧಿಸಿಕೊಂಡು ಹೊರಟರೆ ಕೀಟಗಳ ಸಾಮಾಜಿಕ ಬದುಕಿನ ಬಗ್ಗೆ ಏನೇನೆಲ್ಲವನ್ನು ಕಂಡುಹಿಡಿಯಬಹುದು. ಸ್ಥಿರ ಸಸ್ಯಗಳು, ನಡೆದಾಡುವ ಸಸ್ಯಗಳು, ಸಸ್ಯಗಳಂತಿರುವ ಕೀಟಗಳು, ಕೀಟದ ಹಾಗಿರುವ ಕೀಟಗಳನ್ನು ಭಕ್ಷಿಸುವ ಸಸ್ಯಗಳು ಇನ್ನೂ ಏನೇನೆಲ್ಲವನ್ನು ಅಗಾಧವಾದ ಬ್ರಹ್ಮಾಂಡ ತನ್ನ ಒಡಲಲ್ಲಿ ತುಂಬಿಕೊಂಡಿದೆ ಎಂದು ಒಮ್ಮೆ ಸೋಜಿಗವಾಯಿತು.

ಒಂದು ವೇಳೆ ಈ ಪ್ರಪಂಚದಲ್ಲಿರುವ ಅಣು ಬಾಂಬುಗಳು, ರಸಾಯನಿಕ ಬಾಂಬುಗಳು ಮತ್ತಿತರ ಆಯುಧ-ಸ್ಫೋಟಕಗಳೆಲ್ಲವನ್ನೂ ಉರಿಸಿ-ಸಿಡಿಸಿದರೆ ಏನಾಗಬಹುದು ಎಂಬ ಯೋಚನೆ ಬಂತು. ಈ ಭೂಮಿಯ ಮೇಲ್ಮೈ, ಒಳಗೆ, ನೀರಿನೊಳಗೆ ಅದೆಷ್ಟೋ ಶಾಖ ಉತ್ಪನ್ನವಾದರೂ, ಇಡೀ ಭೂಮಂಡಲದಲ್ಲಿನ ನೀರು ಕೊತಕೊತನೆ ಕುದ್ದು ಆವಿಯಾದರೂ ಅಥವಾ ಅತಿಶೀತದಲ್ಲಿ ಮಂಜುಗಡ್ಡೆಯಾಗಿ ಪರಿವರ್ತನೆಗೊಂಡು ನೂರು ವರ್ಷ ಸೂರ್ಯನ ಕಿರಣಗಳು ಕಾರ್ಮೋಡವನ್ನು ದಾಟಿ ಭೂಮಿಯನ್ನು ತಲುಪದೇ ಇದ್ದರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವುದಾದರೊಂದಿಷ್ಟು ಜೀವ ಜಂತುಗಳು ಬದುಕೇ ಇರುತ್ತವೆ ಎನ್ನುವುದು ನನ್ನ ನಂಬಿಕೆಯಾಗಿ ಹೋಗಿದೆ. ಜೀವರಾಶಿಗಳಲ್ಲಿ ಮಾನವ ಅತಿಪ್ರಭಲ, ಬುದ್ಧಿಜೀವಿ ಎಂದೇನೇನೆಲ್ಲ ಖ್ಯಾತಿಯನ್ನು ಪಡೆದುಕೊಂಡಿದ್ದರೂ, ಅದೇ ತಾನೆ ಹುಟ್ಟಿದ ಮೀನಿನ ಮರಿಯಿಂದ ಹಿಡಿದು, ಮರ್ಕಟ-ಮಾರ್ಜಾಲ ಸಂತಾನಗಳಿಗೆ ತುಲನೆ ಮಾಡಿದಲ್ಲಿ ಮಾನವ ಶಿಶು ಎಷ್ಟೊಂದು ದುರ್ಬಲವಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂದಿಲ್ಲದ ಜಾಗೆಯಲ್ಲಿ ನಾಳೆ ಹುಟ್ಟಿ ಅಂದೇ ಸತ್ತು ಜೀರ್ಣಗೊಳ್ಳುವ ನಾಯಿಕೊಡೆಗಳಿಂದ ಹಿಡಿದು, ಆಕಳಿನ ಸಗಣಿಯಲ್ಲೇ ಹುಟ್ಟಿಬೆಳೆದು ವಿಜೃಂಬಿಸುವ ಗೆದ್ದಲು ಹುಳಗಳಿಂದ ಹಿಡಿದು, ಶೀತಕಗಳಲ್ಲೂ ಸಂತಾನ ವರ್ಧಿಸುವ ಜಿರಲೆಗಳನ್ನು ನೋಡಿ ಸೋಜಿಗಗೊಂಡಿದ್ದೇನೆ. ಇಂತಹ ವಿಭಿನ್ನ ಪ್ರಾಣಿ-ಪಕ್ಷಿ ಕಶೇರುಕ-ಅಕಶೇರುಕ ಸಂತಾನಗಳ ನಡುವೆ ಅದೆಂತಹ ಸಂಭಾಷಣೆ ನಡೆದೀತು ಎಂದು ಯೋಚಿಸತೊಡಗುತ್ತೇನೆ. ಸಮುದ್ರ ತೀರದಲ್ಲಿ ನಡೆದಾಡುವವರಿಗೆ ದಿಢೀರನೆ ಸುನಾಮಿ ಅಲೆಗಳು ಕಾಣಿಸಿಕೊಂಡ ಹಾಗೆ ಬಚ್ಚಲು ಮೋರಿಯಲ್ಲಿ ಆಹಾರವನ್ನು ಹೊಂಚುತ್ತಿರುವ ಇರುವೆಗೆ ಪಕ್ಕನೆ ತನ್ನ ಮೇಲೆ ಬಿದ್ದ ನೀರು ಅದರದ್ದೇ ಆದ ಲೋಕದ ಒಂದು ಸುನಾಮಿಯ ಅನುಭವಕ್ಕೆ ಸಮನಾಗುವುದೇ ಎಂದು ತೂಗತೊಡಗುತ್ತೇನೆ.

ತಾನು ಸಾಕಿಯಾಗಲೀ, ಸಲಹಿಯಾಗಲೀ, ಬೇಟೆಯಾಡಿಯಾಗಲೀ ಉಳಿದ ಜೀವಜಂತುಗಳನ್ನು ಕೊಂದು ಬದುಕುವ ಹಕ್ಕನ್ನು ಯಾರು ಯಾರಿಗೆ ಕೊಟ್ಟರು? ಆಹಾರ ಸರಪಳಿಯ ನ್ಯಾಯದಲ್ಲಿ ಯಾರು ಯಾರನ್ನು ಬೇಕಾದರೂ ಭಕ್ಷಿಸಬಹುದಾಗಿದ್ದರೆ ಮಾನವ ಜನಾಂಗಕ್ಕೆ ಪ್ರಾಣಿಗಳಿಂದಾಗುವ ಅಪಾಯಗಳನ್ನು ವಿಶೇಷವಾಗಿ ನೋಡಬೇಕಿತ್ತೇಕೆ? ನಾವು ಯಾವ ಪ್ರಾಣಿಯ ಸಂತತಿಯನ್ನಾದರೂ ಕೊಲ್ಲಬಹುದು, ಆದರೆ ಮನುಷ್ಯನ ಸಂತತಿಗೆ ಇನ್ಯಾವುದೇ ಪ್ರಾಣಿ ಅಪಾಯ ತಂದೊಡ್ಡಿದ್ದೇ ಆದಲ್ಲಿ ಅದನ್ನು ಆಕ್ರಮಣ-ಅತಿಕ್ರಮಣ ಎಂಬ ಹಣೆಪಟ್ಟಿಯನ್ನಿಟ್ಟೇಕೆ ನೋಡುತ್ತೇವೆ?

ಪ್ರತಿಯೊಂದರಲ್ಲೂ ಜೀವವಿರುತ್ತದೆ ನೋಡುವ ಕಣ್ಣುಗಳಿದ್ದರೆ - ನಾವು ನಮ್ಮೊಳಗಿನ ಪ್ರಪಂಚದಲ್ಲೇ ಹೂತು ಹೋಗುವುದರ ಬದಲು ನಮ್ಮ ನೆರೆಹೊರಯನ್ನು ವೀಕ್ಷಿಸಿದಲ್ಲಿ ನಿಸರ್ಗದ ಒಂದು ಚಕ್ರ ಉರುಳತಲೇ ಇರುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಭುವಿಯನ್ನು ಬೆಳಗಿ ಹುಣ್ಣಿಮೆ ಚಂದ್ರ ಬರುತ್ತಾನೆ, ಒಂದು ದಿನವೂ ತಪ್ಪಿಸದೇ ಸೂರ್ಯಬರುತ್ತಾನೆ. ಈ ಸೂರ್ಯನ ಕಿರಣಗಳು ದ್ಯುತಿಸಂಶ್ಲೇಷಣೆಗೆ ಇಂಬುಕೊಡುತ್ತವೆ. ಎಂತಹ ಛಳಿ-ಮಳೆ-ಗಾಳಿಯಲ್ಲೂ ಗಿಡಮರಗಳು ಬದುಕಿ ಬಾಳುವುದೂ ಅಲ್ಲದೇ ಬುಡದಿಂದ ಹೀರಿ-ಗ್ರಹಿಸಿದ್ದನ್ನು ತಲೆಯವರೆಗೆ ಏರಿಸುವ ಯಂತ್ರರಹಿತ ತಂತ್ರವನ್ನು ತಮ್ಮೊಳಗಿಟ್ಟುಕೊಂಡಿವೆ. ಯಾರೋ ಉದುರಿಸಿ ಹಾಕಿದರೆಂದು ತಾವು ಕಟ್ಟಿದ ಜೇನುಗೂಡನ್ನು ಸಂರಕ್ಷಿಸಲು ಹೋಗಿ ಜೇನುನೊಣಗಳು ಕುಟುಕಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ, ಅಗಾಧವಾದ ಜೇನು ಹುಳಗಳ ಮಹಾಯಾಗದಲ್ಲಿ ಒಂದೇ ಒಂದು ರಾಣಿ ಜೇನು ಎಲ್ಲ ಕಾರ್ಯಗಳನ್ನೂ ನಿರ್ವಹಿಸಿ ತನ್ನ ದೊಡ್ಡತನವನ್ನು ಮೆರೆಯುತ್ತದೆ. ಈ ಕೀಟ-ಪಕ್ಷಿ-ಸಸ್ಯಗಳ ಇನ್‌ಸ್ಟಿಂಕ್ಟ್ ಏನು? ಅವುಗಳು ನಮ್ಮಂತಹ ನೀಚರ ನಡುವೆ ಬದುಕುವುದಾದರೂ ಹೇಗೆ ಎಂದೆನಿಸೋಲ್ಲವೇ?

ಯಾವುದೇ ವಾತಾವರಣದಲ್ಲಿಯೂ ಕಾರಿನ ವಿಂಡ್‌ಶೀಲ್ಡ್‌ಗೆ ಬಡಿದು ಅನೇಕ ಹುಳ-ಜೀವ-ಜಂತುಗಳ ಜೀವ ಹಾರಿ ಹೋಗುತ್ತದೆ. ಹೀಗೆ ಜೀವ ಇರುವವುಗಳಲ್ಲಿ ಒಂದು ಲೌಕಿಕ ಆತ್ಮವೆನ್ನುವುದು ಇರುವುದೇ ಹೌದಾದರೆ, ಆತ್ಮಕ್ಕೆ ಹಾಗೂ ಶರೀರಕ್ಕೆ ಸಂಬಂಧವೇ ಇಲ್ಲದೇ ಹೋದರೆ ಇರುವೆಯ ಆತ್ಮಕ್ಕೂ ಮಾನವನ ಆತ್ಮಕ್ಕೂ ವ್ಯತ್ಯಾಸವೇನು ಉಳಿಯುತ್ತದೆ ಎನ್ನುವುದು ಈ ಕ್ಷಣದ ಪ್ರಶ್ನೆ ಅಷ್ಟೇ.

ಹಸಿರುಕಟ್ಟಿದ ಪಾಚಿಯ ನೀರಿನ ಹೊಂಡ ಅಥವಾ ಕೊಳ ತನ್ನದೇ ಒಂದು ಸ್ಟೇಟ್‌ಮೆಂಟನ್ನು ಪ್ರಪಂಚಕ್ಕೆ ಪ್ರಚುರಪಡಿಸುತ್ತದೆ. ಪಾಚಿಯ ಕೆಳಗೆ ಮೇಲೆ ಹಾಗೂ ನಡುವೆ ನಡೆಯುತ್ತಿರುವ ಬೇಕಾದಷ್ಟು ಸಾಧನೆಗಳನ್ನು ನಾವು ಗಮನಿಸೋದೇ ಇಲ್ಲ. ನಮಗೆಲ್ಲ ನಮ್ಮ ನಮ್ಮ ಪ್ರಪಂಚವೇ ದೊಡ್ಡದು, ಅದರ ಸುತ್ತಮುತ್ತಲೇ ಎಲ್ಲವೂ ಸುತ್ತೋದು ಎಂದು ಪಿಚ್ಚೆನಿಸುತ್ತದೆ. ಪಾಚಿಯನ್ನು ಫೋಟೋ ತೆಗೆಯೋಣವಾ ಎಂದು ಒಮ್ಮೆ ಕ್ಯಾಮೆರಾಕ್ಕೆ ಕೈ ಚಾಚುತ್ತದೆ, ಎಲ್ಲವನ್ನೂ ಫೋಟೋ ಹೊಡೆದೂ ಹೊಡೆದೂ ನನ್ನ ಸಂಗ್ರಹಿಸಬೇಕು ಎನ್ನುವ ಸ್ವಾರ್ಥವನ್ನು ಮೊಟ್ಟಮೊದಲ ಸಾರಿ ಗೆದ್ದೆನೆಂಬ ಹರ್ಷವನ್ನು ಕಣ್ಣುಗಳು ಪ್ರತಿಬಿಂಬಿಸ ತೊಡಗುತ್ತವೆ.

Sunday, August 26, 2007

ಅಲೆಗಳು ಮತ್ತು ಹಾಸಿಗೆಗಿಂತ ಹೊರಗೆ ಚಾಚುವ ಕಾಲು

ಮಹಾಸಾಗರವನ್ನ ಅಷ್ಟೊಂದು ಹತ್ತಿರದಿಂದ ನೋಡದೇ ಅಥವಾ ಅನುಭವಿಸದೇ ವರ್ಷದ ಮೇಲೆ ಆಗಿ ಹೋಗಿತ್ತು. ನಿನ್ನೆ ಅಟ್ಲಾಂಟಿಕ್ ಮಹಾಸಾಗರದ ಹತ್ತಿರ ಹೋದಂತೆಲ್ಲ ಸೃಷ್ಟಿಯ ಅದಮ್ಯ ಶಕ್ತಿಯೆಲ್ಲಾ ಮಹಾಸಮುದ್ರದ ರೂಪದಲ್ಲಿ ನೆಲೆ ನಿಂತಿರುವಂತನ್ನಿಸಿತು. ಬೆಲ್‌ಮಾರ್ ತೀರಕ್ಕೆ ಇನ್ನೆಂದೂ ಹೋಗೋದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡಂದಾಗಿನಿಂದ ನಾವು ಹೋಗೋದು ಸ್ಯಾಂಡಿ ಹುಕ್ ಇಲ್ಲಾ ಅಟ್ಲಾಂಟಿಕ್ ಸಿಟಿ ತೀರಗಳಿಗೆ ಮಾತ್ರ. ಹಾಗೇ ನಿನ್ನೆ ಮಹಾಸಾಗರದ ಸಹವಾಸವೂ ಆಯ್ತು, ಜೊತೆಯಲ್ಲಿ ಕೈಲಿದ್ದ ದುಡ್ಡೂ (ಗ್ಯಾಂಬಲಿಂಗ್‌ನಲ್ಲಿ) ಎನ್ನುವ ಅನುಭವಕ್ಕೆ ಮತ್ತೆ ಇಂಬುಕೊಟ್ಟಿದ್ದು ಬಹಳ ತಿಂಗಳುಗಳ ನಂತರ ನಮಗೆ ನಾವೇ ಕಂಡುಕೊಂಡ ಒಂದು ವೆಕೇಷನ್ ಕ್ಷಣವಷ್ಟೇ.

ಅದ್ಯಾವುದೋ ಪುಸ್ತಕಗಳನ್ನು ಓದಿ ಬಡವ-ಬಲ್ಲಿದ, ಎಕಾನಮಿ ಮುಂತಾದವುಗಳನ್ನು ತಲೆಯಲ್ಲಿಟ್ಟು ಬೇಯಿಸುತ್ತಿದ್ದ ನನಗೆ ಮಹಾಸಾಗರದ ಸ್ವರೂಪವೂ ಭಿನ್ನವಾಗೇನೂ ಕಾಣಿಸಲಿಲ್ಲ. ದಡದಿಂದ ನೀರ ಕಡೆಗೆ ನಡೆದು ಮೊಟ್ಟ ಮೊದಲು ನೀರು ಕಾಲಿಗೆ ಸೋಕಿದಾಗ ಎಂಥಾ ಬಿಸಿಲಿನಲ್ಲೂ ಮೊದಲು ಛಳಿಯ ಅನುಭವವಾಗಿ ಕೆಲವೇ ಕ್ಷಣಗಳಲ್ಲಿ ನಾವು ಅದಕ್ಕೆ ಹೊಂದಿಕೊಂಡು ಬಿಟ್ಟೆವು. ಇನ್ನೊಂದು ಹತ್ತು ಹೆಜ್ಜೆ ಮುಂದಕ್ಕೆ ನಡೆದು ಮೊಣಕಾಲು ಮುಳುಗುವಲ್ಲಿಯವರೆಗೆ ಹೋಗಿ ನಿಂತರೆ ಅಲ್ಲಿ ಅಲೆಗಳ ರಭಸಕ್ಕೆ ಕಾಲುಗಳು ನಿಂತಲ್ಲೇ ಮರಳಿನಲ್ಲಿ ಕುಸಿದ ಅನುಭವ, ಅಥವಾ ಸುತ್ತಲಿನ ತೆರೆಗಳ ಹೊಡೆತಕ್ಕೆ ಕಾಲಿನಡಿಯ ನೆಲವೂ ಜಾರುತ್ತಿರುವ ಹಾಗೆ. ಆದರೆ ಸಮುದ್ರದ ಪ್ರತಿಯೊಂದು ಅಲೆಯೂ ಭಿನ್ನವಂತೆ, ಒಂದರ ಹಿಂದೆ ಮತ್ತೊಂದರಂತೆ ಯಾವುದೋ ವ್ರತಧರ್ಮಕ್ಕೆ ಕಟ್ಟುಬಿದ್ದವರ ಹಾಗೆ ಅಲೆಗಳು ಬರುತ್ತಲೇ ಇದ್ದವು. ತಮ್ಮ ಶಕ್ತ್ಯಾನುಸಾರ ಸುತ್ತಲಿನ ಜನರು ಹತ್ತು, ಇಪ್ಪತ್ತು, ಐವತ್ತು ಅಡಿಗಳವರೆಗೂ ನೀರಿನಲ್ಲಿ ಮುಂದಕ್ಕೆ ಹೋಗಿದ್ದರು. ದಡದಿಂದ ಹತ್ತಡಿ ನೀರಿನಲ್ಲಿ ಮೊಳಕಾಲು ಉದ್ದ ಮುಳುಗಿ ನಿಂತವರಿಗೆ ಅವರದ್ದೇ ಆದ ಸವಾಲುಗಳು, ಹಾಗೇ ಐವತ್ತು ಅಡಿ ದೂರದಲ್ಲಿ ಎದೆ ಮಟ್ಟಕ್ಕೆ ನಿಂತಿರುವವರಿಗೆ ಇನ್ಯಾವುದೋ ಸವಾಲು. ಒಟ್ಟಿನಲ್ಲಿ ನೀರನ್ನು ಅನುಭವಿಸುವವರಿಗೆ ಅವರ ಇಚ್ಛೆ ಹಾಗೂ ಶಕ್ತಿಯನ್ನು ಪ್ರತಿಬಿಂಬಿಸಬಲ್ಲ ಸ್ವರೂಪ.

ಒಮ್ಮೆ ಅನಿಸಿತು - ಮೊಳಕಾಲು ಉದ್ದದ ನೀರಿನಲ್ಲಿ ನಿಂತವರದ್ದೇನು, ಅಂತಹ ಕಷ್ಟವೇನಿದು ಎಂದು. ಆದರೆ ನಾನೇ ಹೋಗಿ ಅಲ್ಲಿ ನಿಂತ ಮೇಲೆ ಅಲ್ಲಿನ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟವಾಗಲಿಲ್ಲ. ಅಭಿಮುಖವಾಗಿ ಬರುವ ಅಲೆ ದಡವನ್ನು ಮುಟ್ಟುತ್ತಿರುವ ಹಾಗೆ ತನ್ನ ಉಬ್ಬು-ತಗ್ಗುಗಳನ್ನು ಕಳೆದುಕೊಂಡು, ಚಪ್ಪಟೆಯಾಗುವುದರ ಜೊತೆಗೆ ಸಾಕಷ್ಟು ನೊರೆಯನ್ನು, ಅದರ ಜೊತೆಯಲ್ಲಿ ಮರಳಿನ ಕಣಗಳನ್ನೂ ಎತ್ತಿಕೊಂಡು ಬರುತ್ತಿತ್ತು. ಹಾಗೆ ಬಂದ ಒಂದೊಂದು ಅಲೆಯೂ ಅದ್ಯಾವುದೋ ಸಂಕಲ್ಪ ತೊಟ್ಟವರಂತೆ ನಿಂತ ನಮ್ಮನ್ನು ದಡದ ಕಡೆಗೆ ತಳ್ಳುವುದೇ ಕಾಯಕವೆಂದುಕೊಂಡಂತಿತ್ತು. ಅಭಿಮುಖವಾಗಿ ಬಂದ ಅಲೆ ದಡದ ಕಡೆಗೆ ಎಷ್ಟು ಜೋರಾಗಿ ನೂಕುತ್ತಿತ್ತೋ ಅಷ್ಟೇ ಜೋರಾಗಿ ದಡಕ್ಕೆ ಬಡಿದು ಮತ್ತೆ ಹಿಂದೆ ಹೋಗುವಾಗಲೂ ಅದೇ ರೀತಿಯ ಒತ್ತಡವನ್ನು ಕಾಲಿನ ಮೇಲೆ ಹೇರುತ್ತಿತ್ತು. ಪಾದಗಳ ಕೆಳಗಿನ ಮರಳು ಕುಸಿಯೋದರ ಜೊತೆಗೆ ದೇಹದ ಸಮತೋಲನವೂ ತಪ್ಪಿ ಎಂಥವರೂ ಬೀಳುತ್ತಿದ್ದುದರಲ್ಲಿ ಅಚ್ಚರಿಯೇನೂ ಇರಲಿಲ್ಲ.

ದಡದಿಂದ ಮೂವತ್ತು ನಲವತ್ತು ಅಡಿ ದೂರದಲ್ಲಿರುವವರನ್ನು ನೋಡಿ ನಾನೂ ಅಲ್ಲಿಗೇಕೆ ಹೋಗಬಾರದೇಕೆನ್ನಿಸಿತಾದ್ದರಿಂದ ನಿಧಾನವಾಗಿ ಮುಂದೆ ಹೆಜ್ಜೆ ಇರಿಸತೊಡಗಿದೆ. ನೊರೆ ತುಂಬಿದ ಅಲೆಗಳನ್ನು ತಪ್ಪಿಸಿಕೊಳ್ಳುವುದು ದೊಡ್ಡ ಕಷ್ಟದ ಕೆಲಸವಾಗಿತ್ತು. ಒಮ್ಮೆ ನೊರೆಯ ವಲಯದಿಂದ ಮುಂದೆ ಹೋಗಿ ಬರೀ ನೀರಿನ ಅಲೆಗಳನ್ನು ಅನುಭವಿಸತೊಡಗಿದೆ. ಇವು ಭಾರೀ ಅಲೆಗಳು, ಅಲೆಗಳು ಸುರುಳಿಯಾಕಾರದಲ್ಲಿ ಬಂದು ಮುರಿಯುತ್ತಿದ್ದ (curl, break) ಸನ್ನಿವೇಶ ಮೋಹಕವಾಗಿತ್ತು. ಎದೆ ಮಟ್ಟದ ನೀರಿನಲ್ಲಿ ದೇಹ ಹಗುರವಾದಂತೆನಿಸಿ, ಬಂದ ಪ್ರತಿಯೊಂದು ಅಲೆಯೂ ಅದರ ಚಲನೆಗನುಗುಣವಾಗಿ ಸಾಕಷ್ಟು ಮೇಲಕ್ಕೊಯ್ದು ಕೆಳಕೆ ತರುತ್ತಿತ್ತು. ಅಲೆಯ ಮುರಿತಕ್ಕೆ ಸಿಕ್ಕು ಅದರ ಜೊತೆಯಲ್ಲಿಯೇ ದಡದ ಕಡೆಗೆ ಹೋಗುವುದು ಒಂದು ರೀತಿ, ಅಲೆಯ ಒಳಗೆ ತಲೆಯನ್ನು ತೂರಿ ಈಜಿ ಮುಂದೆ ಹೋಗುವುದು ಮತ್ತೊಂದು ರೀತಿ, ಅಲೆಯು ಮುಂದೆ ಹೋದ ಹಾಗೆಲ್ಲ ಅದರ ಎತ್ತರಕ್ಕೆ ಎತ್ತಿ ಇಳಿದು ಅಲ್ಲೇ ಇರುವುದು ಮತ್ತೊಂದು ರೀತಿ. ಮಹಾಸಾಗರದ ಆಳಕ್ಕೆ ತಕ್ಕಂತೆ ಹಾಗೂ ಪ್ರತಿಯೊಂದು ಅಲೆಯ ಏರಿಳಿತಕ್ಕೆ ಸಿಕ್ಕಂತೆ ಹಲವು ಅನುಭವಗಳನ್ನು ಎಂತಹವರೂ ಬೇಕಾದರೂ ಪಡೆದುಕೊಳ್ಳಬಹುದಾದದ್ದು ಸಹಜ ಹಾಗೂ ಮುಕ್ತವಾದದ್ದು. ಈ ಅನುಭವಗಳು ಇನ್ನೂ ನಿಸರ್ಗದತ್ತ ಕೊಡುಗೆಗಳಾಗಿ ಎಂದಿಗೂ ಹಾಗೇ ಇರಲಿ.

ದಡದಲ್ಲೋ ಸಾಕಷ್ಟು ಜನ - ಬೇಕಾದಷ್ಟು ಭಾವ ಭಂಗಿಯಲ್ಲಿ ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿದ್ದಾರೆ. ಎಲ್ಲರೂ ಸಮುದ್ರರಾಜನ ಕಡೆಗೆ ಮುಖಮಾಡಿಕೊಂಡು ಯಾವುದೋ ತಪಸ್ಸಿಗೆ ಕುಳಿತ ಹಾಗೆ. ಪ್ರತಿಯೊಬ್ಬರೂ ತಮ್ಮ ಶಕ್ತಿ, ಇಚ್ಛೆ, ಅಲೋಚನೆಗಳಿಗನುಸಾರವಾಗಿ ಮರಳಿನ ಮೇಲೆ ಹಾಸಲು ಟವೆಲ್ಲಿನಿಂದ ಹಿಡಿದು, ಪ್ಲಾಸ್ಟಿಕ್ ಶೀಟ್, ಕುಳಿತು ಕೊಳ್ಳಲು ಖುರ್ಚಿ, ತಿಂದು ಕುಡಿಯಲು ಬೇಕಾದವುಗಳು, ಮುಖ ಮೈ ಕೈಗೆ ಮೆತ್ತಿಕೊಳ್ಳುವ ಸನ್‌ಸ್ಕ್ರೀನ್ ಕ್ರೀಮ್ ಮುಂತಾದವುಗಳನ್ನು ತಂದಿದ್ದನ್ನು ಸಾಮಾನ್ಯವಾಗಿ ನೋಡಬಹುದಿತ್ತು. ಅಲ್ಲಲ್ಲಿ ಟವೆಲ್ಲನ್ನು ಹಾಸಿಕೊಂಡು ಮಲಗಿರುವವರ ಕಾಲುಗಳು ಟವೆಲ್ಲಿಂದ ಬೇಕಾದಷ್ಟು ಹೊರಗೆ ಚಾಚಿಕೊಂಡಿದ್ದವು. ಹಾಸಿಗೆಯಿದ್ದಷ್ಟೇ ಕಾಲು ಚಾಚು - ಎನ್ನುವುದು ನಮ್ಮೂರಿನ ನುಡಿಕಟ್ಟಾದ್ದರಿಂದ ಅದು ಇಲ್ಲಿ ಅನ್ವಯಿಸುವುದಿಲ್ಲವೋ ಏನೋ? ಎಲ್ಲ ದೇಶಗಳ ಹಾಗೆ ಅಮೇರಿಕವೂ ಸಾಲದ ಮೇಲೇ ಇದೆ, ಇಲ್ಲಿನ ಕಾರ್ಪೋರೇಷನ್ನುಗಳೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯೆಲ್ಲವೂ ಸಾಲದ ಮೇಲೇ ನಿಂತಿದೆ, ಇಂತಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂದರೆ ಹಾಸ್ಯಾಸ್ಪದವೆನಿಸುವುದಿಲ್ಲವೇ?

’ನಾವು ಯಾವತ್ತೂ ಸಾಲವನ್ನು ಮಾಡಬಾರದು...’ ಎಂದು ದುಡಿಮೆಯ ದುಡ್ಡನ್ನೇ ನಂಬಿಕೊಂಡ ಗವರ್ನಮೆಂಟ್ ನೌಕರ ನನ್ನ ಅಜ್ಜ, ಕೊನೆಯವರೆಗೂ ಸಂಸಾರವನ್ನು ನಡೆಸುವುದಕ್ಕೆ ಬಹಳಷ್ಟು ಶ್ರಮಿಸಿದ್ದರು, ಕಷ್ಟದ ಸಮಯದಲ್ಲಿ ಮನೆಯಲ್ಲಿದ್ದ ಸಾಮಾನುಗಳನ್ನು, ಆಭರಣಗಳನ್ನು ಮಾರಿಕೊಂಡು ಬದುಕಿದ್ದರೇ ವಿನಾ ಒಂದು ದಮಡಿಯನ್ನೂ ಸಾಲವನ್ನಾಗಿ ತಂದವರಲ್ಲ. ಆದರೆ ಆ ಪರಂಪರೆ ಅವರಷ್ಟರಮಟ್ಟಿಗೆ ಮಾತ್ರ ನಿಂತು ಹೋಯಿತು, ನಾನಾಗಲಿ, ನನ್ನ ಅಪ್ಪನಾಗಲೀ, ಸಹೋದರರಾಗಲೀ ಅಜ್ಜನ ಮನಸ್ಥಿತಿಗೆ ತದ್ವಿರುದ್ದವಾಗಿ ಸಾಲದಲ್ಲೇ ಬೆಳೆದು ಬಂದವರು. ಇವರೆಲ್ಲರ ಯಾದಿಯಲ್ಲಿ ಹೆಚ್ಚಿನ ಸಾಲದ ಬಾಬ್ತು ನನ್ನ ತಲೆಯ ಮೇಲೇ ಇರೋದು ಮತ್ತೊಂದು ವೈಶಿಷ್ಟ್ಯ. ಅರ್ಥಶಾಸ್ತ್ರದ ಬಗ್ಗೆ, ಪ್ರಪಂಚದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡಷ್ಟೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹಂತಹಂತವಾಗಿ ಮೇಲೇರಿದಂತೆಲ್ಲ ನನ್ನ ತಲೆಯ ಮೇಲಿನ ಸಾಲದ ಮೊತ್ತ ಮೇಲೇರುತ್ತಿದೆಯೇ ವಿನಾ ಕಡಿಮೆಯಾದದ್ದೇ ಇಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದಾದರೂ ಹೇಗೆ? ಅಕಸ್ಮಾತ್ ಕಾಲನ್ನು ಹಾಸಿಗೆಗಿಂತ ಮುಂದೆ ಚಾಚಿದರೆ ಏನಾದೀತು? ನಮ್ಮ ಕಾಲುಗಳು, ಅವುಗಳ ಉದ್ದ, ಚಾಚಿಕೊಳ್ಳಬೇಕೆನ್ನುವ ನಿಲುವು ನಮ್ಮ ಸ್ವಂತಿಕೆ ಹಾಗೂ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುವುದಾದರೆ ’ಇಷ್ಟಕ್ಕೇ ಇರಲಿ!’ ಎಂದು ಕಾನೂನನ್ನು ಮಾಡಿದವರಾರು? ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನಸ್ಥಿತಿಯಿಂದ ಕಾಲು ಇದ್ದಷ್ಟು ಮನಸ್ಸು ಬಯಸಿದಷ್ಟು ಹಾಸಿಗೆಯನ್ನು ಚಾಚುವ ಸಮಯಬರೋದು ಯಾವಾಗ? ಅಂತಹ ಸಮಯ ಬಂದರೂ ಆ ರೀತಿ ಕಳೆಯಬಹುದಾದ ಒಂದೆರಡು ಕ್ಷಣಗಳಿಗೋಸ್ಕರ ಜೀವಮಾನವನ್ನೇಕೆ ಮುಡುಪಾಗಿಡಬೇಕು?

ಈ ಪ್ರಶ್ನೆಗಳ ಯಾದಿಯೇ ಇಷ್ಟು - ಅಲೆಗಳ ಥರ, ಒಂದಾದ ಮೇಲೊಂದು ಬಂದು ಅಪ್ಪಳಿಸುತ್ತಲೇ ಇರುತ್ತವೆ, ನೀವು ಯಾವ ನೀರಿನಲ್ಲಿ ಎಷ್ಟೇ ಆಳದಲ್ಲಿ ನಿಂತಿದ್ದರೂ ಈ ಅಲೆಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಸ್ಥಿತಿಗತಿಯಲ್ಲಿಯೂ ಸಾಲದ ಹೊರೆ, ಬರುವ ಸಂಬಳಕ್ಕಾಗಿ ಬಕಪಕ್ಷಿಯಂತೆ ಕಾದುಕೊಂಡಿರುವುದು ಒಂದು ಮಾನಸಿಕ ನೆಲೆಗಟ್ಟು ಅಷ್ಟೇ, ಅದನ್ನು ಮೀರಿ ಮುಂದೆ ಹೋಗುವುದಿದೆಯಲ್ಲಾ ಅದು ಸ್ವಾತ್ಯಂತ್ರ್ಯಕ್ಕಿಂತಲೂ ಹೆಚ್ಚಿನದು. ಸಾಲದ ಜೊತೆಗೆ ಬರುವ ಸ್ವಾತಂತ್ರ್ಯ ಒಂದು ರೀತಿ ಪ್ರಿವಿಲೇಜಿನ ಹಾಗೆ, ಅದು ನಿಜವಾದ ಮುಕ್ತಿಯಲ್ಲ, ಅದೇ ಯಾವುದೇ ಹೊರೆಯಿಲ್ಲದ ಬದುಕು, ಸಾಲವಿಲ್ಲದೇ ಇನ್ನೊಬ್ಬರಿಗೆ ಕೊಡಬೇಕು ಎನ್ನುವ ಕಾಟವಿಲ್ಲದೇ ಇರುವ ಬದುಕು ನಿಜವಾಗಿಯೂ ಸ್ವತಂತ್ರವಾದದ್ದು. ಈ ನಿಜ, ನನ್ನ ಅಜ್ಜ, ಮುತ್ತಜ್ಜರಿಗೆ ಅದ್ಯಾವಾಗಲೋ ಹೊಳೆದು ಹೋಗಿದ್ದರೆ, ನಂತರದ ಸಂತತಿಯ ಪ್ರತೀಕವಾಗಿರುವ ನಾವುಗಳು ಇನ್ನೂ ಸಾಲದ ಕೂಪದಲ್ಲೇ ಬಿದ್ದು ತೊಳಲಾಡುತ್ತಿರುವುದೇಕೋ?

Friday, August 24, 2007

ವರ್ಷಾವಧಿ ಶ್ರಾವಣ...ಬೋರ್ ಹೊಡೆಸೋ ಮಾಧ್ಯಮ

ಹಾಳಾದ್ದು, ಈ ವಾರ ಏನ್ ಬರೆದ್ರೂ ಅನಿವಾಸಿ ವಿಷಯಗಳೇ ತುಂಬ್‌ಕೊಂಡ್ ಬರ್ತಾ ಇವೆ, ಒಂಥರಾ ಈ ರಸ್ತೆ ಸುರಕ್ಷಾ ಸಪ್ತಾಹ ಇದ್ದ ಹಾಗೆ - ಎಲ್ಲಿ ನೋಡಿದ್ರೂ ಪರಕೀಯತೆ ಪ್ರತಿಬಿಂಬವಾಗದೇ ಇದ್ರೆ ಸಾಕು! ಆ ಕಡೆ ಕರ್ನಾಟಕದಲ್ಲಿ ರಾಜಕೀಯ ಗೊಂದಲಗಳಿವೆ ಬೇಕಾದಷ್ಟು ಆಲೋಚಿಸೋದಕ್ಕೆ, ಕೂತಗೊಂಡ್ ಓದಿದ್ರೆ ಇನ್ನೂ ಮುಗಿಸದೇ ಇರೋ 'ಆವರಣ' ಇದೆ, ಬರೆಯದೇ ಬಿಟ್ಟು ಮಾಡೋದಕ್ಕೆ ಸಾವಿರ ಕೆಲಸಾ ಇದೆ, ಇತ್ತೀಚೆಗಂತೂ ಹುಲುಸಾಗಿ ಬೆಳಿತಾ ಇರೋ ಕನ್ನಡ ಬ್ಲಾಗ್ ಪ್ರಪಂಚಾ ಇದೆ ವಾರಗಟ್ಟಲೇ ಓದೋದಕ್ಕೆ. ಇವೆಲ್ಲಾ ಇದ್ರೂ ಜೋನೀ ಮಳೇ ಹೊಡೆದ ಹಾಗೆ ಅನಿವಾಸಿತನದ ಬಗ್ಗೆ ಬರೆಯಲೇ ಬೇಕೆನ್ನುವ ಹುಮ್ಮಸ್ಸು ಹುಟ್ಟಿ ಬರ್ತಾ ಇದೆ ಮನದೊಳಗೆ. ಗೊತ್ತಲ್ಲಾ, ಶ್ರಾವಣದ ಮಳೆ ಹೊಡ್ತಾ - ಎಲ್ಲಿ ನೋಡಿದ್ರೂ ಗಿಚಿಪಿಚಿ ಮಳೆ, ಕಿಚಿಪಿಚಿ ಕೆಸರು? ಕಾಲು ಬೆರಳಿನ ಸಂದಿಗಳಲ್ಲಿ ಆ ಕೆಸರು ಮೆತ್ತಿಕೊಂಡು ಆಗೋ ಸ್ಲರ್‌ಪೀ ಅನುಭವ? ಪ್ಯಾಂಟಿನ ತುದಿ ಹಸಿಯಾಗೇ ಇರೋದು ಮಳೆಯಲ್ಲಿ ನೆನೆದು? ಏನೂ ಬ್ಯಾಡಪ್ಪಾ - ಬಟ್ಟೆಗಳು ಒಗೆದು ಒಣಗಿ ಹಾಕಿದಾಗ ಅವು ಸರಿಯಾಗಿ ಒಣಗದೇ ಹುಟ್ಟೋ ಕುಮಟು ವಾಸನೆ? ಏನಾದ್ರೂ ನೆನಪಿಗ್ ಬರುತ್ತಾ ಅಥವಾ ಎಲ್ಲವನ್ನೂ ಅಮೇರಿಕನ್ ಮಯಮಾಡಿಕೊಂಡು ಬಿಟ್ಟಿದ್ದೇವಾ?

ಅಟ್ಟದ ಮೇಲಿನಿಂದ ಪ್ಲಾಸ್ಟಿಕ್ ಚಪ್ಪಲಿಗಳನ್ನು ಇಳಿಸ್ತಿದ್ವಿ, ಕೊಡೇ ರಿಪೇರಿ ಮಾಡಿಸಿಕೊಂಡು ಮನೆ ಮಂದಿಗೊಂದರಂತೆ ಶಸ್ತ್ರ ಸಜ್ಜಿತರಾಗ್ತಿದ್ವಿ. ಬಚ್ಚಲುಮನೆ ಒಲೆಯ ಮುಂದೆ ಬೆಳ್ಳಂಬೆಳಗ್ಗೆ ಬೇಕಾದಷ್ಟು ಹೊತ್ತು ಕೂತು ಛಳಿ ಕಾಯಿಸಿಕೊಳ್ತಿದ್ವಿ. ಒಣಗಿದ ಕಟ್ಟಿಗೆಯಾದ್ರೂ ಅದೆಲ್ಲಾದ್ರೂ ನೀರಿನ ಪಸೆ ತಾಗಿ ಹಸಿಯಾಗಿದ್ದಕ್ಕೆ ಉರಿಯದ ಬೆಂಕಿಯನ್ನ ಊದುಗೊಳಪೆಯಿಂದ ಊಸೀ ಊಸೀ ಆ ಬೆಂಕಿಯ ಜ್ವಾಲೆಯ ಜೊತೆಗೆ ಹುಟ್ಟೋ ಹೊಗೆ ಕಣ್ಣಿನಲ್ಲಿ ನೀರು ತರುಸ್ತಿದ್ದದ್ದು? ಏನಾದ್ರೂ ನೆನೆಪಿದೆಯಾ...ಅಥವಾ ಅವೆಲ್ಲಾ ಪ್ರಾಚೀನ ಕಾಲದ ಕಥೆಯಾಗಿ ಹೋದವೋ? ಮಜಾ ಅಂತಂದ್ರೆ, ಹಳೇ ಕೊಡೇ ಕಡ್ಡಿಗೆ ಸಿಕ್ಕಿಸಿ ಸುಟ್ಟು ತಿನ್ನೋ ಹಲಸಿನ ಬೀಜ, ಗೋಡಂಬಿ ಬೀಜಗಳದ್ದು. ವಾವ್, ಏನ್ ರುಚಿ - ಎಂಥಾ ಪ್ರಾಸೆಸ್ಸದು? ಗೋಡಂಬಿ ಬೀಜ ಸುಟ್ಟಾಗ ಸಿಟ್ಟು ಮಾಡಿಕೊಂಡು ಅದರಲ್ಲಿರೋ ಎಣ್ಣೆ ಸುಟ್ಟು ಹೋದ ಹಾಗೆಲ್ಲಾ ಬೆಂಕಿ ಒಂದ್ ರೀತಿ ಗ್ಯಾಸ್ ಬರ್ನರ್‌ನಲ್ಲಿ ಹೊರ ಬರೋ ಜ್ವಾಲೆ ಥರಾ ಹೊರಗೆ ಬರ್ತಿತ್ತು ಯಾವ್ ಯಾವುದೋ ದಿಕ್ಕಿನಲ್ಲಿ ಕೆಲವೊಂದ್ ಸಮಯ ಹೆದರಿಸೋ ಅಷ್ಟರ ಮಟ್ಟಿಗೆ, ಆ ರೀತಿ ಸುಟ್ಟ ಹಸಿ ಗೋಡಂಬಿ ಬೀಜದ ಟೇಸ್ಟು ಇಲ್ಲಿ ಸಿಕ್ಕೋ ಪ್ಲಾಂಟರ್ಸ್ ಡಬ್ಬದಲ್ಲಿರೋ ಹುರಿದ ಹಾಗೂ ಸಂಸ್ಕರಿಸಿದ ಗೋಡಂಬಿ ಬೀಜಗಳಲ್ಲೂ ಇರೋದಿಲ್ಲ, ಅದರ ರುಚಿ ಬಲ್ಲವರೇ ಬಲ್ಲರು. ಇನ್ನೂ ಚುಮು ಚುಮು ಕತ್ತಲು ಇದ್ದ ಹಾಗೆ ಎದ್ದೇಳಿಸೋ ಅಮ್ಮನನ್ನು ಬೈದುಕೊಂಡು ಎಷ್ಟು ಸಾರಿ ಹೊದ್ದುಕೊಂಡು ಮಲಗಿದರೂ ಮುಗಿಯಲಾರದ ಸಿಹಿನಿದ್ರೆ, ಅಡುಗೆ ಮನೆಯಿಂದ ಈಗಾಗಲೇ ತಯಾರಾಗಿದ್ದೇವೆ ಎಂದು ಬರ್ತಾ ಇದ್ದ ದೋಸೆಯ ಗಮಲು, ಅದರ ಜೊತೆಯಲ್ಲಿ ಕಾಫಿ ಪರಿಮಳ - ಮೊನ್ನೇ ಇನ್ನೂ ಮುಗಿದು ಹೋದ ನಾಗರ ಪಂಚಮಿ ಹಬ್ಬದ ಥರಾವರಿ ಉಂಡೆಗಳು - ತಿನ್ನೋದಕ್ಕೆ ಯಾವತ್ತೂ ಕಮ್ಮೀ ಅಂತಾನೇ ಇರಲಿಲ್ಲ ನೋಡಿ. ಇವತ್ತಿಗೂ ಇಲ್ಲಿ ನಮ್ಮನೇನಲ್ಲಿ ಯಾವತ್ತೂ ಏನೂ ಕಡಿಮೆ ಅಂತ ಏನಿಲ್ಲ, ಆದರೆ ನಮ್ಮನೇ ಡಬ್ಬಗಳನ್ನು ತಡಕಾಡಿದ್ರೆ ಅವುಗಳಲ್ಲಿ ಯಾವ ಉಂಡೆಗಳೂ ಕಾಣೋದಿಲ್ಲ. ಇಡೀ ಮನೆಯಲ್ಲಿರೋ ಎಲ್ಲರಿಗೂ ಸಕ್ಕರೇ ಕಾಯಿಲೆ ಬಂದು ಅದ್ಯಾವುದೋ ಕಣ್ಣ್ ಕಾಣದ ಡಾಕ್ಟರು ಆರ್ಡರು ಮಾಡಿದ ಹಾಗೆ ಈ ಸೀಜನ್ನಿನಲ್ಲಿ ಉಂಡೆಗಳನ್ನು ತಿನ್ನೋದಿರಲಿ ನೋಡೋದಕ್ಕೂ ಸಿಕ್ಕಿಲ್ಲ ನೋಡಿ, ನಮ್ ಹಣೇಬರಾನ. ಇವತ್ತು ವರಮಹಾಲಕ್ಷ್ಮಿ ಪೂಜೆ ಅಂತೆ, ಅದ್ಯಾಕಪ್ಪಾ ನೀನು ಗಂಡುಹುಡುಗ ತಲೆಕೆಡಿಸಿಕೊಳ್ತೀ ಅಂತ ಯೋಚಿಸ್ತೀರೋ? ಅಲ್ಲಾಗಿದ್ರೆ ಅದನ್ನ್ ಮಾಡು, ಇದನ್ನು ಮಾಡು ಅಂತ ಅಕ್ಕ-ತಂಗಿ-ಅಮ್ಮ ಇವರೆಲ್ಲ ತಲೆ ತಿಂದಿರೋರು. ಮಾವಿನ ಎಲೆ ತೋರಣ ಮಾಡಿಕೊಡಬೇಕಿತ್ತು. ಬೆಳಿಗ್ಗೆ ಎದ್ದೋರೇ ಸಾರಿಸೋದಕ್ಕೆ ಸಗಣಿ ಒಟ್ಟು ಮಾಡಿಕೊಡಬೇಕಿತ್ತು. ಓಹ್, ಎಲ್ಲದಕ್ಕಿಂತ ಮುಖ್ಯವಾಗಿ ಕಟ್ಟಿರೋ ಜೋಕಾಲಿ ಬಿಚ್ಚಿ ಹಾಕ್ತೀನಿ ನೋಡು ಅಂತ ಹೆದರ್ಸಿ ಹೆದರ್ಸಿ ಕೆಲಸ ಮಾಡಿಸ್ಕೊಳ್ಳೋರುದ್ದೇನು ಕಾರುಬಾರು ಇರ್ತಿತ್ತು...ಅವೆಲ್ಲಾ ಈಗ ಇತಿಹಾಸ ಆಗ್ತಾ ಇದೆಯಲ್ಲಪ್ಪಾ.

'ಹೋಗ್ ಹೋಗು, ಬಂದ್ ಬಿಟ್ಟಾ ಶುಕ್ರವಾರ...' ಅಂತ ಇಷ್ಟೊತ್ತಿಗೆ ಕೊನೇಪಕ್ಷ ಒಬ್ರರಾದ್ರೂ ಬೈಸಿಕೊಳ್ತಾ ಇದ್ರು ಅಮ್ಮನ ಹತ್ರ ದುಡ್ಡು ಕೇಳೋದಕ್ಕೆ ಹೋಗಿ. ಅದೇನೋ ನಮ್ಮ ಮನೆತನದ ಪದ್ಧತಿಯಾಗಿ ಹೋಗಿದೆ, ನಾನೂ ಅಷ್ಟೇ ಇಲ್ಲಿರೋ ಅಟೋಮ್ಯಾಟಿಕ್ ಬಿಲ್ ಪೇಯರ್‌ನಲ್ಲೂ ಸಹ ಶುಕ್ರವಾರ ಯಾವ ಪೇಮೆಂಟನ್ನೂ ಮಾಡೋದಿಲ್ಲ. ಲಕ್ಷ್ಮೀ ಕಟಾಕ್ಷ ಅಂದ್ರೆ ಸುಮ್ಮನೇನಾ? ಅದೂ ಹೋಗೀ ಹೋಗೀ ಅವಳೇನಾದ್ರೂ ನಮ್ಮನೇ ಪಕ್ಕದಲ್ಲಿರೋ ಯಹೂದಿಗಳ ಮನೆಗೋ ಕ್ರಿಶ್ಚಿಯನ್ನರ ಮನೆಗೋ ಹೋಗಿಬಿಟ್ರೆ? ಅಯ್ಯಪ್ಪಾ, ಸುಮಂಗಲಿ ಹಿಂದೂ ದೇವತೆಯನ್ನ ಹೇಗ್ ಬೇಕ್ ಹಾಗೆ ನಡೆಸಿಕೊಳ್ಳೋಕ್ ಬರುತ್ತೇನ್ರಿ? ನೀವೊಂದು. ನೀವ್ ದೇವ್ರನ್ನ ನಂಬಾಂದ್ರೂ ನಂಬ್ರಿ, ಬಿಟ್ಟಾದ್ರೂ ಬಿಡ್ರಿ...ಕೊನೇ ಪಕ್ಷ ಲಕ್ಷ್ಮೀನಾದ್ರೂ ಒಲಿಸಿಕೊಳ್ರಿ, ಈ ದೇಶ್ದದಲ್ಲಿ ಬಾಳಾ ಮುಖ್ಯಾ ಸ್ವಾಮಿ...ಕೊನೆಗೆ ಲಕ್ಷ್ಮೀ ಗಂಡ ಶ್ರೀಮನ್ ನಾರಾಯಣನ್ನ ಬಿಟ್ರೂ ಪರವಾಗಿಲ್ಲ, ಲಕ್ಷ್ಮೀನ ಏನಾದ್ರೂ ಮಾಡಿ ಉಳಿಸ್ಕೊಳ್ರಿ. ಶುಕ್ರವಾರ ದುಡ್ಡ್ ಕೊಡಬಾರ್ದು ಅಂತ ಕಾನೂನ್ ಇದೆಯಾ? ಹ್ಞೂ, ಅಂತೀನ್ ನಾನು. ಇಲ್ಲಾ ಅಂದ್ರೆ, ನಮ್ ಭಾರತೀಯರು Saturn ಕಾರನ್ನ್ ಯಾಕ್ ತಗೊಳೊಲ್ಲಾ ಹೇಳಿ ನೊಡಾಣಾ? 'ಏನ್ ಕಾರ್ ತಗೊಂಡಿಯೋ?' ಅಂತ ಕೇಳೋ ನಿಮ್ಮ್ ಅಜ್ಜಿಗೆ, 'ಅಜ್ಜೀ, ನನ್ ಕಾರು ಹೆಸ್ರೂ, - ಶನಿ' ಅಂದ್ ನೋಡಿ, ಏನಾಗುತ್ತೇ ಅಂತ ನಿಮಗೇ ಗೊತ್ತಾಗುತ್ತೆ!

'ಏನ್ ಸಾರ್ ನೀವು, ಬರೀ ಹಳೇದನ್ನೇ ಹೇಳೀ ಹೇಳೀ ಕೊರೀತರಲ್ಲಾ?' ಅಂತ ಅನ್ನಬೇಡಿ. ನೀವು ಶ್ರಾವಣದ ಮಳೆಯಲ್ಲಿ ನೆನೀದೇ ಇದ್ರೇನಂತೆ, ಉಂಡೆ ತಿನ್ನದೇ ಇದ್ರೇನಂತೆ? ಉಪಾಕರ್ಮಕ್ಕೆ ಜನಿವಾರ ಬದಲಾಯಿಸ್ದಿದ್ರೇನಂತೆ? ವರಮಹಾಲಕ್ಷ್ಮೀ ವ್ರತಕ್ಕೆ ಅಕ್ಕ-ತಂಗಿಯರಿಗೆ ಸಹಾಯ ಮಾಡದಿದ್ರೇನಂತೆ? ಕೊನೇಪಕ್ಷಾ ನಿಮ್ ಮನಸಿಗೆ ವರ್ಷಾವಧಿ ಶ್ರಾವಣವನ್ನಾದ್ರೂ ಈ ಬೋರ್ ಹೊಡೆಯೋ ಆನ್‌ಲೈನ್ ಮಾಧ್ಯಮದ ಮೂಲಕಾ ನೆನಪಿಸ್ತೀನಾ? ಮತ್ತಿನ್ಯಾಕ್ ತಡಾ, ಆ ಫೋನ್ ಎತ್ತಿಕೊಳ್ಳಿ, ಮಾಡೀ ಒಂದ್ ಕರೇನಾ ಇಂಡಿಯಾಕ್ಕೆ - ನೆನೆಸಿಕೊಳ್ಳೀ ಎಲ್ಲಾ ಅಕ್ಕ-ತಂಗಿ ದೇವತೆಗಳನ್ನ...ಸುಮ್ನೇ, 'ಹೆಂಗಿದೀರಾ...' ಅಂತ ಕೇಳಿ...ನೋಡಿ ಅದ್ರ ಮಜಾನ. ಅವರೇನಾದ್ರೂ ತಮ್ಮ್ ತಮ್ಮ್ ಡಬ್ಬದಲ್ಲಿರೋ ಉಂಡೆಗಳನ್ನ ಕಳಿಸಿದ್ರೆ ನನಗೂ ಒಂದೆರಡನ್ನ ಕಳಿಸೋಕೆ ಮರೀ ಬೇಡಿ ಮತ್ತೆ, ಏನು?

Tuesday, August 21, 2007

ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ

'ಅರೆ! ಏನಪ್ಪಾ ಇದು ಇಷ್ಟು ಬೇಗ ಬಂದೀದೀಯಾ?' ಅನ್ನೋ ಪ್ರಶ್ನೆ ಬೇರೆ ಯಾರನ್ನೂ ಕುರಿತು ಬಂದದ್ದಲ್ಲ, ಈ ಅವಧಿಗೆ ಮುಂಚೆ ಬರಬೇಕಾದ ಛಳಿಗಾಲವನ್ನು ಕುರಿತು. ಇನ್ನೂ ಸೆಪ್ಟೆಂಬರ್ ಬಂದಿಲ್ಲಾ ಆಗ್ಲೇ ಹತ್ತ್‌ಹತ್ರ ಐವತ್ತು ಡಿಗ್ರಿ (ಫ್ಯಾರನ್‌ಹೈಟ್) ವರೆಗೆ ಪಾದರಸ ಇಳಿದು ಹೋಗಿದೆಯೆಲ್ಲಾ ಏನನ್ನೋಣ? ಅದೂ ಮೊನ್ನೆ ದಿನಾ ರಾತ್ರಿ ನಲವತ್ತೊಂದರ ಹತ್ರ ಹೋಗಿ ಬಿಟ್ಟಿತ್ತು. ಬೇಸಿಗೆ ನಂಬಿ ಬದುಕೋನ್ ನಾನು, ಛಳಿಗಾಲ ಬಂತೂ ಅಂತಂದ್ರೆ ಅದೆಷ್ಟು ಜನರಿಗೆ ಕತ್ತಲು, ಕೊರೆಯೋ ಛಳಿ, ಕಿತ್ತು ತಿನ್ನೋ ಬೇಸರ ಹೆದರಿಸೋದೂ ಅಲ್ದೇ ಡಿಪ್ರೆಷ್ಷನ್ ತರುತ್ತೋ ಯಾರಿಗ್ ಗೊತ್ತು?

ಈ ಕಂಟ್ರಿ ಲಿವಿಂಗ್ ಅಂದ್ರೆ ಸುಮ್ನೇ ಬರಲ್ಲ. ನ್ಯೂ ಯಾರ್ಕ್ ಸಿಟಿಗೂ ನಮ್ಮನೇಗೂ ಕೊನೇ ಪಕ್ಷಾ ಆರೇಳ್ ಡಿಗ್ರಿನಾದ್ರೂ ವ್ಯತ್ಯಾಸಾ ಇರುತ್ತೆ, ಬೇಸಿಗೆಯಲ್ಲಿ ಎಷ್ಟು ತಣ್ಣಗಿರುತ್ತೋ ಛಳಿಯಲ್ಲೂ ಅದಕ್ಕಿಂತ ಹೆಚ್ಚು ತಣ್ಣಗಿನ ಅನುಭವವಾಗುತ್ತೆ. ಒಂಥರಾ ಈ ಅಮೇರಿಕದ ಬೇಸಿಗೆ ಅನ್ನೋದು ಕೆಟ್ಟ ಕಾನ್ಸೆಪ್ಟಪಾ, ಯಾಕೆ ಅಂದ್ರೆ ಜೂನ್ ಇಪ್ಪತ್ತೊಂದಕ್ಕೆ ಆರಂಭವಾಗೋ ಬೇಸಿಗೆ ಅದೇ ದಿನವೇ ಹೆಚ್ಚು ದೊಡ್ಡ ದಿನವಾಗಿ (ಡೇ ಲೈಟ್ ಘಂಟೆಗಳಲ್ಲಿ) ಬೇಸಿಗೆ ಆರಂಭವಾದ ದಿನದಿಂದ್ಲೇ ದಿನಗಳು ಸಂಕುಚಿತಗೊಳ್ತಾ ಹೋಗೋದು. ಒಂಥರಾ ಬಿರು ಬೇಸಿಗೆಯಲ್ಲಿ ಐಸ್ ಕ್ಯಾಂಡಿಯನ್ನು ಡಬ್ಬದಿಂದ ಹೊರಗೆ ತೆಗೆದ ಹಾಗೆ, ತೆಗೆದ ಘಳಿಗೆಯಿಂದ್ಲೂ ಅದು ಕರಗ್ತಾನೇ ಹೋಗುತ್ತೆ - ಅನುಭವಿಸಿ ಅಥವಾ ಬಿಡಿ. ಇತ್ತೀಚೆಗೆಲ್ಲಾ ಎಷ್ಟೊಂದ್ ಕತ್ಲು ಅಂತಂದ್ರೆ ಬೆಳಿಗ್ಗೆ ಏಳ್ ಘಂಟೆ ಆದ್ರೂ ಲೈಟ್ ಹಾಕ್ಕೋಂಡೇ ಇರಬೇಕು, ಸಂಜೇನೂ ಅಷ್ಟೇ ಬೇಗ ಕತ್ಲಾಗುತ್ತೆ.

ಓಹ್, ಅಮೇರಿಕದ ಬೇಸ್ಗೇನಾ? ಇಲ್ಲ್ಯಾವನೂ ಶೇಕ್ಸ್‌ಪಿಯರ್ ಇಲ್ಲಾ - Shall I Compare Thee To A Summer's Day? ಅಂತ ಬರೆಯೋಕೆ. ಅದೂ ಅಲ್ದೇ ಈ ದೊಡ್ಡ ದೇಶದಲ್ಲಿ ಕೆಲವರು ಯಾವಾಗ್ಲೂ ಬೇಸಿಗೆಯಲ್ಲೇ ನಲುಗ್ತಾ ಇದ್ರೆ, ಇನ್ನ್ ಕೆಲವರು ಛಳಿಯಲ್ಲೇ ಮುಲುಗ್ತಾ ಇರ್ತಾರೆ - ಅದೇನ್ ದೇಶಾನೋ ಕಾಣೆ. ನಮ್ ದೇಶ್ದಲ್ಲೂ ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಥರ್ಮಾಮೀಟರ್‌ನಲ್ಲಿ ಅಗಾಧವಾದ ವೇರಿಯೇಷನ್ನೇನೋ ಇತ್ತು, ಆದ್ರೆ ಆ ಹಿಮಾಲಯಾನಾ ಯಾವ್ ಯಾವ್ದೋ ದೇಶ್ದೋರು ಹತ್ತಿ ಇಳಿಯೋಕ್ ಪ್ರಾಕ್ಟೀಸ್ ಮಾಡೋ ಜಾಗ ಮಾಡ್ಕಂಡ್ರೇ ವಿನಾ ನಾವ್ ನೋಡ್ಲೇ ಇಲ್ಲಾ ಒಂದಿನಾನು. ಅಲ್ಲಿ ಕಾಣದ ಮಂಜು, ಹಿಮವನ್ನ ಇಲ್ಲಿ ಕಾಣು ಎಂದು ಯಾರೋ ಬರೆದಿಟ್ಟ ಹಾಗೆ (ಹಣೇ ಮೇಲೆ), ಅಲ್ಲಿ ಕುಡಿಯದ ನೀರನ್ನ ಇಲ್ಲಿ ಬೇರೆ ಬೇರೆ ಫಾರ್ಮಿನಲ್ಲಿ ಕುಡಿದು ಅನುಭವಿಸು ಎಂದು ಯಾವುದೋ ಕಾನೂನಿಗೆ ಒಳಪಟ್ಟವರ ಹಾಗೆ ನಮ್ಮ ಬದುಕು...ಬ್ಯಾಡಾ ಅನ್ನೋದು ಆಪ್‌ಷನ್ನಿನ್ನಲ್ಲೇ ಇಲ್ಲಾ ಅಂತ ಪರೀಕ್ಷೆಗೆ ತಯಾರಾಗ್ತಾ ಇರೋ ಹುಡುಗನ್ನ ಹೆದರಿಸೋ ವರಸೇ ಬೇರೆ ಕೇಡಿಗೆ!

'ಏನ್ ಸಾರ್ ನೀವು? ಇಷ್ಟ್ ವರ್ಷಾ ಆಯ್ತು ಇಲ್ಲಿಗ್ ಬಂದು, ಇನ್ನೂ ಸುತ್ಲನ್ನ್ ನೋಡ್ಕಂಡ್ ಕೊರಗ್ತಾನೇ ಇರ್ತೀರಲ್ಲಾ... (ನಿಮ್ ಬಂಡ್ ಬಾಳ್ವೇಗ್ ಇಷ್ಟ್ ಬೆಂಕೀ ಹಾಕಾ). ಪುಲ್ ಪ್ಯಾಕೇಜ್ ಡೀಲ್ ಅಂತ ಪಡಕಂಡ್ ಬಂದ್ ಮೇಲೆ ಅನುಭವಿಸ್ ಬೇಕಪ್ಪಾ, ಅದನ್ನ್ ಬಿಟ್ಟು ಕೊರಗಿದ್ರೆ?' ಎಂದು ಯಾವ್ದೋ ಧ್ವನಿಯೊಂದು ಕೇಳಿಸಿದಂತಾಗಿ ಸುತ್ಲೂ ನೋಡ್ದೆ ಯಾರೂ ಕಾಣ್ಲಿಲ್ಲ. 'ಹಂಗಲ್ಲ್ ರೀ...' ಎಂದು ಸಮಾಧಾನ ಹೊರಡ್ತು, ಆದ್ರೆ ಅದು ಯಾರನ್ನ್ ಉದ್ದೇಶಿಸಿ ಎನ್ನೋ ಪ್ರಶ್ನೇ ಬಂದಿದ್ದೇ ತಡಾ ಒಂಥರಾ ಹೋಟ್ಲು ಮಾಣಿ ತಪ್ಪಾಗಿ ತಂದು ದೋಸೆಯನ್ನ ನಮ್ಮ ಮುಂದೆ ಇಟ್ಟು ಹಿಂದೆ ತೆಗೆದುಕೊಂಡು ಹೋದ ಹಾಗೆ, ಆ ಸಮಜಾಯಿಷಿ ಅಲ್ಲೇ ಅಡಗಿಕೊಂಡಿತು. ಅದ್ಯಾವ್ದೋ ಗೀತೇನಲ್ಲಿ ಬರೆದವ್ರೆ ಅನ್ನೋ ಥರ ನಮ್ಮ್ ಭಾರತೀಯರ ಮನೆಗಳಲ್ಲಿ (ಎಲ್ಲೆಲ್ಲಿ ಅವರವರೇ ಗ್ಯಾಸೂ-ಕರೆಂಟ್ ಬಿಲ್ಲ್ ಕೊಡಬೇಕೋ ಅಲ್ಲಿ) ಯಾವತ್ತಿದ್ರೂ ಒಂದ್ ಡಿಗ್ರಿ ಕಮ್ಮೀನೇ ಇರುತ್ತೇ ಥರ್ಮೋಸ್ಟ್ಯಾಟು, ಸೋ ನಡುಗೋದು ನಮ್ಮ್ ಹಣೇಬರ, ಇನ್ನು ಆರು ತಿಂಗ್ಳು.

ನಮ್ಮ್ ತಲೇಲ್ ಬರೆದಿದ್ದು ಇಷ್ಟೂ ಅಂತ ಬೇಸರಾ ಮಾಡ್ಕೊಂಡು ಕಿಟಕಿಯಿಂದ ದೂರ ನೋಡಿದ್ರೆ, ನಿಧಾನವಾಗಿ ಪಕ್ಕದ ಮರಗಳಿಂದ ಎಲೆಗಳೆಲ್ಲಾ ಒಂದೊಂದೇ ನೆಲದ ಹಾದಿ ಹಿಡಿಯುತ್ತಿದ್ದವು. ಈ ತಣ್ಣಗೆ ಕೊರೆಯೋ ಗಾಳಿ ಒಂದೇ ಒಂದು ದಿನದಲ್ಲೇ ಅದೆಷ್ಟು ಎಲೆಗಳ ಬದುಕನ್ನು ಬದಲಾಯಿಸಿಬಿಡ್ತಲ್ಲಾ ಅಂತ ಅನ್ನಿಸ್ತು. ಪಾಪ, ಈ ಛಳಿಯಲ್ಲಿ ಎಲೆ ಕಳೆದುಕೊಳ್ಳೋ ಮರಗಳೂ, ಪ್ರವಾಹದಲ್ಲಿ ಕೊಚ್ಚೆ ತುಂಬಿ ಹರಿಯೋ ನದಿಗಳಿಗೂ ಅದ್ಯಾವತ್ತ್ ಮುಕ್ತಿ ಸಿಗುತ್ತೋ, ಅದ್ಯಾವ್ ಋಷಿ ಶಾಪ ಕೊಟ್ಟಿದ್ನಪಾ? ಹೂಞ್, ಇಲ್ಲಾ, ಇಲ್ಲಾ...ಈ ಮುಂದೆ ಬೀಳೋ ಛಳಿಗೆ, ಅದ್ರಲ್ಲೂ ರಾಶಿ ರಾಶಿ ಬೀಳೋ ಹಿಮಕ್ಕೆ, ಅದರ ಭಾರಕ್ಕೆ ಮರದ ಟೊಂಗೆಗಳು ಮುರಿದು ಬೀಳದಿರಲಿ ಎಂದು ನೇಚರ್ ಕಂಡುಕೊಂಡ ಪರಿಹಾರವಿದ್ದಿರಬಹುದು...ಹಗುರವಾದವನು ಎಂತಹ ಭಾರವನ್ನೂ ಸಹಿಸಬಲ್ಲ ಎನ್ನೋ ಅದರದ್ದೇ ಆದ ತತ್ವ ಅಂತ ಏನಾದ್ರೂ ಇದ್ದಿರಬಹುದಾ ಅನ್ನೋ ಶಂಕೆ ಬಂತು. ಈ ನಿತ್ಯಹರಿದ್ವರ್ಣ (ಎವರ್‌ಗ್ರೀನ್) ಗಳದ್ದು ಇನ್ನೊಂದ್ ಪರಿ - ತಾವ್ ಎವರ್‌ಗ್ರೀನ್ ಏನೋ ಆದ್ವು, ಆದ್ರೆ ಅವು ಚಿಗುರಿ ಬೆಳೆಯೋ ಬೆಳವಣಿಗೆ ಇದೇ ನೋಡಿ ಬಾಳಾ ಸ್ಲೋ ಒಂಥರಾ ಥರ್ಡ್‍ವರ್ಲ್ಡ್ ದೇಶಗಳು ಮುಂದೆ ಬರೋ ಹಾಗೆ. ನಾವು ಏನೇ ಆದ್ರೂ ಹಸಿರಾಗೇ ಇರ್ತೀವಿ ಅಂತ ಹಠವನ್ನೇನೋ ತೊಟ್ವು, ಆದ್ರೆ ಮಂಜಿನ ಭಾರಕ್ಕೆಲ್ಲಾ ಕುಬ್ಜರಾಗಿ ಹೋದ್ವು. ಆದ್ರೂ ಅವುಗಳದ್ದೂ ಒಂದು ಧೈರ್ಯಾ ಸ್ವಾಮೀ, ಎಂಥಾ ಛಳೀನಲ್ಲೂ ಬದುಕಿ ಉಳೀತಾವೆ. ಹೊರಗಡೇ ಮೈನಸ್ ಇಪ್ಪತ್ತ್ ಡಿಗ್ರಿ ಇರೋ ಛಳೀನಲ್ಲಿ ಅದೆಂಗ್ ಬದುಕ್ತಾವೋ ಯಾರಿಗ್ಗ್ ಗೊತ್ತು?

ನಿಮ್ಮೂರಲ್ಲಿ ಹೆಂಗಿದೆ ಈಗ? ಮಳೇಬೆಳೇ ಬಗ್ಗೆ ತಲೆಕೆಡಿಸಿಕೊಳ್ತೀರೋ ಇಲ್ವೋ? ಮಳೇಬೆಳೆ ಬಗ್ಗೆ ತಲೆಕೆಡಿಸಿಕೊಂಡ್ ಯಾರಿಗ್ ಏನಾಗಿದೇ ಅಂತೀರಾ, ಅದೂ ಸರೀನೇ...ನಮ್ಮೂರ್‌ನಲ್ಲ್ ನೋಡಿ, ಯಾವತ್ತಿದ್ರೂ ಜನ ಮುಗಿಲ್ ನೋಡ್ತಾನೇ ಇರ್ತಾರೆ ಇವತ್ತಲ್ಲ ನಾಳೆ ಅದೇನೋ ಬಂದು ಬೀಳುತ್ತೇ ಅನ್ನೋ ಹಾಗೆ.

Sunday, August 19, 2007

ರಿವರ್ಸ್ ಮೈಂಗ್ರಟ್ ಎನ್ನುವ ಹೊಸ ಆಯಾಮ

ಇದನ್ನು ಬರೀತಾ ಇರಬೇಕಾದ್ರೆ ಭಾನುವಾರ ಸಾಯಂಕಾಲ - ಇನ್ನೇನು ನಾಳೆ ಬರೋ ಸೋಮವಾರ ಹೆದರ್ಸೋ ಹೊತ್ತಿಗೆ ಇವತ್ತಿನ ಉಳಿದ ಭಾನುವಾರವನ್ನಾದ್ರೂ ಅನುಭವಿಸೋಣ ಎಂದುಕೊಂಡು ಕುಳಿತ್ರೆ ಹಾಳಾದ್ ಆಲೋಚ್ನೆಗಳು ಬಹಳ ದಿನಗಳ ನಂತರ ಸಿಕ್ಕಿರೋ ಸ್ನೇಹಿತ್ರ ಥರ ತಬ್ಬಿಕೊಂಡ್ ಬಿಡೋದೂ ಅಲ್ದೇ ಒಂದೇ ಉಸಿರಿನಲ್ಲಿ ಏನೇನೆಲ್ಲ ಪ್ರಶ್ನೆಗಳನ್ನು ಕೇಳೋ ಹಾಗೆ ಅಲೆಗಳನ್ನು ಹುಟ್ಟಿಸ್ತಾವೆ! ಭಾನುವಾರ ರಾತ್ರೆ ಆಗುತ್ತಿದ್ದ ಹಾಗೆ ಸುಬ್ಬನ ಆಲಾಪನೆ ಆರಂಭಿಸಿ ಹಗುರವಾದ ಹಾಸ್ಯಕ್ಕೆ ಕೈ ಹಾಕ್ಲೋ ಅಥವಾ ಮನದ ಮೂಲೆಯಲ್ಲಿ ಕೊರೀತಾ ಇರೋ ರಿವರ್ಸ್ ಮೈಗ್ರಂಟ್ ಅನ್ನೋ ಹುಳುವನ್ನು ಹೊರಕ್ಕೆ ಹಾಕ್ಲೋ ಅಂತ ಯೋಚಿಸ್ತಿದ್ದಾಗ ರಿವರ್ಸ್ ಮೈಗ್ರಂಟೇ ಫುಲ್ ಸ್ವಿಂಗ್‌ನಲ್ಲಿ ಹೊರಗ್ ಬರ್ತಾ ಇದೆ...ನಿಮ್ಮ ಕಷ್ಟ ನಿಮಗೆ!

***

ಈ ರಿವರ್ಸ್ ಮೈಗ್ರಂಟ್‌ ಅನ್ನೋ ಮಹಾನುಭಾವರು ಮತ್ಯಾರೂ ಅಲ್ಲಾ - ನಾವೂ ನೀವೂ ಹಾಗೂ ನಮ್ಮೊಳಗಿನ ಇವತ್ತಲ್ಲಾ ನಾಳೆ, ನಾಳೆ ಅಲ್ಲಾ ನಾಳಿದ್ದು ವಾಪಾಸ್ ಹೋಗ್ತೀವಿ ಅನ್ನೋ ಧ್ವನಿ ಅಷ್ಟೇ. ಯಾಕ್ ವಾಪಾಸ್ ಹೋಗ್ತೀವಿ, ಹೋಗ್ಬೇಕು ಅನ್ನೋ ಪ್ರಶ್ನೆಗಳಿಗೆ ಉತ್ರ ಸುಲಭವಾಗಿ ಮೆಲ್ನೋಟಕ್ಕೆ ಸಿಕ್ಕಂತೆ ಕಂಡ್ರೂ ಅದರ ಆಳ ಅವರವರ ಎತ್ರದಷ್ಟೇ ಇರುತ್ತೆ. ಸ್ಯಾಟಿಸ್‌ಫ್ಯಾಕ್ಷನ್ ಅಥವಾ ತೃಪ್ತಿ ಅನ್ನೋದು ಉತ್ತರಗಳ ಯಾದಿಯಲ್ಲಿ ಮೊದಲು ನಿಲ್ಲೋ ಭೂಪ ಅಷ್ಟೇ, ಅಲ್ಲಿಂದ ಆರಂಭವಾದದ್ದು - ಸುಖವಾದ ಜೀವನ (whatever that means), ಮಕ್ಕಳ ವಿದ್ಯಾಭ್ಯಾಸ, ಬಂಧು-ಬಳಗದ ಆಸರೆ ಆರೈಕೆ, ಸಾಯೋದ್ರೊಳಗೆ ಏನಾದ್ರೊಂದ್ ಮಾಡಿ ಸಾಯ್‌ಬೇಕು ಅನ್ನೋ ಬಯಕೆ, ನಮ್ ನಮಗೆ ಬೇಕಾದ ವೃತ್ತಿ-ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು ಅನ್ನೋ ಆಸೆ, ಇಲ್ಲಿಯಷ್ಟೇ ಅಲ್ಲೂ ಕಮಾಯಿಸಬಹುದು ಅನ್ನೋ ಅದಮ್ಯ ಉತ್ಸಾಹ - ಇತ್ಯಾದಿ ಹೀಗೆ ಈ ಸಾಲಿನಲ್ಲಿ ತುಂಬುವ ಪದಗಳಿಗೆ ಕೊರತೆಯೇ ಇರೋದಿಲ್ಲ. ನಾವು, ನಮ್ಮ ಸಂಸ್ಕೃತಿ, ನಮ್ಮ ಜನ, ನಮ್ಮ ನೆರೆಹೊರೆ, ನಮ್ಮ ಸಮಾಜ ಮುಂತಾಗಿ ನಮ್ಮನ್ನು ಸುತ್ತುಬಳಸಿಕೊಂಡಿರೋ ಕನಸುಗಳು ಇವತ್ತಿಗೂ ನಮ್ಮೂರಿನ ಸುತ್ಲೂ ಗಿರಕಿ ಹೊಡೆಯೋದು ನನ್ನಂತಹವರ ಅನುಭವ, ಅದಕ್ಕೆ ತದ್ವಿರುದ್ಧವಾಗಿ ಕೆಲವರಿಗೆ ಇನ್ನು ಬೇರೆಬೇರೆ ರೀತಿಯ ಕನಸುಗಳು ಇರಬಹುದು. ಕನಸುಗಳು ಹೇಗೇ ಬೀಳಲಿ - ಅವುಗಳು ಬಣ್ಣದವೋ, ಅಥವಾ ಕಪ್ಪು-ಬಿಳಿಪಿನವೋ ಯಾರು ಹೇಳಬಲ್ಲರು? ಒಂದೇ ಸಾಲಿನಲ್ಲಿ ಹೇಳಬೇಕೆಂದರೆ (ಕಡ್ಡಿ ಮುರಿದ ಹಾಗೆ), ಇಲ್ಲಿ ಬಂದು ಕಲಿತ ವಿದ್ಯೆ-ಅನುಭವವನ್ನು ಬೇರೆಡೆ ಬಳಸಿ ಅಲ್ಲಿ ಬದಲಾವಣೆಗಳನ್ನು ಮಾಡುವುದು ರಿವರ್ಸ್ ಮೈಂಗ್ರಂಟುಗಳ ಮನಸ್ಸಿನಲ್ಲಿ ಇರುವ ಮತ್ತೊಂದು ಚಿಂತನೆ.

ಭಾರತದಿಂದ ಅಮೇರಿಕಕ್ಕೆ ಬರೋದು ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೋ ಅಥವಾ ಇಸ್ಲಾಮಿಗೋ ಮತಾಂತರವಾದಷ್ಟೇ ಸುಲಭ (ಅಥವಾ ಕಷ್ಟ) - ಅದೇ ಅಮೇರಿಕದಿಂದ ಭಾರತಕ್ಕೆ ಹಿಂತಿರುಗಿ ಹೋಗೋದಿದೆಯಲ್ಲಾ ಅದು ಬೇರೆ ಯಾವುದೋ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಷ್ಟೇ ಸಂಕೀರ್ಣವಾದದ್ದು. ಹಿಂದೂ ಧರ್ಮಕ್ಕೆ ಮತಾಂತರಗೊಂಡವರು ಯಾವ ಜಾತಿಗೆ ಸೇರುತ್ತಾರೆ, ಯಾವ ಭಾಷೆ, ಸಂಸ್ಕೃತಿಯನ್ನು ಅನುಸರಿಸುತ್ತಾರೆ? ಹಾಗೇ ನಮ್ಮ ಅನಿವಾಸಿ ನೆಲೆಯಿಂದ ನಾವು ಹಿಂತಿರುಗುವುದೆಲ್ಲಿಗೆ? ಬರೀ ಭಾರತದ ಗಡಿಯೊಳಗೆ ನುಸುಳೋಣವೋ, ದೆಹಲಿ, ಬಾಂಬೆ, ಮದ್ರಾಸ್‌ನಲ್ಲಿ ನೆಲೆಸೋಣವೋ? ನಮ್ಮದಲ್ಲದ ಬೆಂಗಳೂರಿಗೆ ಹಿಂತಿರುಗೋಣವೋ? ವೃದ್ದಾಪ್ಯದ ಹೊಸ್ತಿಲಲ್ಲಿರುವವರನ್ನು ಹೊರತು ಪಡಿಸಿ ಬೇರೆ ಯಾರೂ ನಮ್ಮನ್ನು ಗುರುತಿಸದ ನಮ್ಮೂರಿಗೆ ಹೋಗೋಣವೋ? ಎಲ್ಲಿ ಕೆಲಸ ಮಾಡುವುದು? ಯಾವ ಕೆಲಸ ಮಾಡುವುದು? ಎಲ್ಲಿ ನೆಲೆಸುವುದು? ಯಾವ ಭಾಷೆ ಮಾತನಾಡುವುದು? ಹೀಗೆ ಪ್ರಶ್ನೆಗಳ ಯಾದಿ ಬೆಳೆಯುತ್ತಾ ಹೋಗುತ್ತೇ ವಿನಾ ಅವುಗಳ ಹಿಂದಿನ ಉತ್ತರದ ವ್ಯಾಪ್ತಿ ಕಡಿಮೆ ಏನೂ ಆಗೋದಿಲ್ಲ.

***

ನಾವು ಅಲ್ಲಿಗೆ ಹೋಗಿ ಮಾಡಬೇಕಾದ ಬದಲಾವಣೆಯ ಬಗ್ಗೆ, ಅಂತಹ ಉನ್ನತವಾದ ಪರಿಕಲ್ಪನೆಗಳ ಬಗ್ಗೆ ಒಂದಿಷ್ಟು ಯೋಚಿಸಬೇಕು. ನಾವು ಸಾಮಾಜಿಕ ಹರಿಕಾರರಲ್ಲ - ಬಸವಣ್ಣ, ಬುದ್ಧ, ಗಾಂಧಿಯವರು ಕಲಿಯುಗದಲ್ಲಿ ಮತ್ತೆ ಹುಟ್ಟೋಲ್ಲ. ನಮ್ಮ ನೆರೆಹೊರೆ, ನಮ್ಮ ಆಸುಪಾಸು, ನಮ್ಮ ಹಿತ್ತಲು-ಅಂಗಳಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಒಂದು ಬದಲಾವಣೆ, ನಾವು ಶಿಸ್ತಿನ ಜೀವನವನ್ನು ಸಾಗಿಸಿಕೊಂಡು ಹೋಗಬೇಕಾದ್ದು ಮತ್ತೊಂದು ಬದಲಾವಣೆ, ದೊಡ್ಡ ಸಾಗರದ ಅಲೆಗಳಲ್ಲಿ ಮಾತ್ರ ನಮ್ಮನ್ನು ನಾವು ಕಳೆದುಕೊಳ್ಳದೇ ಅಗಾಧವಾದ ಸಮುದ್ರದಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಂಡು ಅದರಲ್ಲಿ ಈಸಿ-ಜಯಿಸುವುದು ದೊಡ್ಡ ಬದಲಾವಣೆ. ಇಷ್ಟೆಲ್ಲಾ ಆಗುತ್ತಿರುವಲ್ಲೇ ಏನಾದರೊಂದನ್ನು ಮಾಡಬೇಕು ಎನ್ನುವ ತುಡಿತಕ್ಕೆ ಉತ್ತರವನ್ನು ಕಂಡುಕೊಳ್ಳಬೇಕು, ಅದು ಇನ್ನೂ ದೊಡ್ಡ ಬದಲಾವಣೆ - ಒಂಥರಾ ಕಷ್ಟಪಟ್ಟು ಜೀಕೀ ಜೀಕಿ ಹಳೆಯ ಸೈಕಲ್ಲ್‌ನಲ್ಲಿ ಬೆಟ್ಟವನ್ನು ಹತ್ತುತ್ತಿರುವ ಹುಡುಗನಿಗೆ ಹಾಗೆ ಹತ್ತುತ್ತಿರುವಾಗಲೇ ರಾಷ್ಟ್ರಗೀತೆಯನ್ನು ಹಾಡು ಎಂದು ಆದೇಶಿಸಿದ ಹಾಗೆ. ಓಹ್, ಈ ಮೇಲಿನ ವಾಕ್ಯಗಳಲ್ಲಿ ಬದಲಾವಣೆಯ ಬಗ್ಗೆ ಬರೆಯಬೇಕಿತ್ತು, ಕ್ಷಮಿಸಿ - ಸವಾಲುಗಳು ಬದಲಾವಣೆಗಳಾಗಿ ನನಗರಿವಿಲ್ಲದಂತೆಯೇ ಹೊರಬಂದುಬಿಟ್ಟವು. ಇಲ್ಲಿನದನ್ನು ಕಂಡು ಅನುಭವಿಸಿ, ಅಲ್ಲಿ ಬದಲಾವಣೆಯನ್ನು ತರಬಯಸುವ ನಾವು ಅದಕ್ಕೆ ಮೊದಲು ಅಲ್ಲಿಯದನ್ನು ಪುನಃ ಅವಲೋಕಿಸಬೇಕಾಗುತ್ತದೆ, ಏಕೆಂದರೆ ನಮ್ಮ ಅನುಭವದ ಭಾರತ ಬಹಳಷ್ಟು ಬದಲಾಗಿದೆ ಈಗಾಗಲೇ. ಮೊದಲು ಅಲ್ಲಿ ಹೋಗಿ ನೆಲೆಸಿ, ಅಲ್ಲಿಯದನ್ನು ಅನುಭವಿಸಿ, ನಂತರ ಎರಡನ್ನೂ ಕಂಡ ಮನಸ್ಸಿಗೆ ಅಲ್ಲಿನ ಸವಾಲುಗಳನ್ನು ಎದುರಿಸಿ ಇನ್ನೂ ಚೈತನ್ಯವೆನ್ನೋದೇನಾದರೂ ಉಳಿದಿದ್ದರೆ, ಮುಂದೆ ಬದಲಾವಣೆಯ ಮಾತು ಬರುತ್ತದೆ!

ನಿಮಗ್ಗೊತ್ತಾ, ಎಷ್ಟೋ ಜನ ಇಲ್ಲಿಂದ ಹಿಂತಿರುಗಿ ಹೋದವರು ಇಲ್ಲಿ ಸುಖವಾಗೇ ಇದ್ದರು - ಒಳ್ಳೆಯ ಸಂಬಳ ಮನೆ ಎಲ್ಲವೂ ಇತ್ತು. ಅಂಥಹದ್ದನ್ನು ತೊರೆದು ತಮ್ಮ ತಾಯ್ನಾಡಿಗೆ ಮರಳುವುದು ಬಹಳ ಕಷ್ಟದ ನಿರ್ಧಾರ. ಒಂದೆರಡು ವರ್ಷಗಳ ದುಡಿಮೆಗೆ ಬಂದು ಹಿಂತಿರುಗಿದವರ ಬಗ್ಗೆ ಹೇಳ್ತಾ ಇಲ್ಲಾ ನಾನು. ಸುಮಾರು ಹತ್ತು-ಹದಿನೈದು ವರ್ಷ ಇದ್ದು ಇಲ್ಲಿನದ್ದನ್ನು ಸಾಕಷ್ಟು ಕಂಡು ಅನುಭವಿಸಿ ಮುಂದೆ ಆ ಮಹತ್ತರ ನಿರ್ಧಾರವನ್ನು ಕೈಗೊಂಡ ಮಹಾನುಭಾವರ ಬಗ್ಗೆ. ಕೆಲವರು ಅವರವರ ಹೆಂಡತಿ ಮಕ್ಕಳು ತಮ್ಮ ವೃತ್ತಿಯ ಬಗ್ಗೆ ಮಾತ್ರ ಯೋಚಿಸಿ ಅಂತಹ ನಿರ್ಧಾರವನ್ನು ಸೆಪ್ಪೆಯಾಗಿಸಿಬಿಡುತ್ತಾರೆ, ಆದರೆ ಒಟ್ಟಾರೆ ಕುಟುಂಬದ ಮೇಲಿನ ಪರಿಣಾಮ - ಲಾಂಗ್‌ಟರ್ಮ್ ಹಾಗೂ ಶಾರ್ಟ್‌ಟರ್ಮ್ - ಬಹಳ ಹೆಚ್ಚಿನದ್ದು. ಹೀಗೆ ಹಿಂತಿರುಗುವ ಮನಸ್ಥಿತಿಗಳು ಹಲವು, ಅವುಗಳ ಹಿಂದಿನ ಕಾರಣಗಳು ಬೇಕಾದಷ್ಟಿರುತ್ತವೆ, ಇಂತಹ ಕಾರಣಗಳ ಹಿಂದಿನ ಸ್ವರೂಪವನ್ನು ಶೋಧಿಸಿ ನೋಡಿದಾಗ, ಅಂತಹ ಮನಸ್ಥಿತಿಗಳ ಆಳಕ್ಕೆ ಇಳಿದಾಗಲೇ ಅದರಲ್ಲಿನ ಸೊಗಸು ಗೊತ್ತಾಗೋದು. ಇಲ್ಲವೆಂದಾದರೆ ಈ ರಿವರ್ಸ್ ಮೈಂಗ್ರಂಟ್‌ಗಳ ಮನಸ್ಸು ಯಾವುದೋ ಒಂದು ಸಣ್ಣಕಥೆಯ ನಾಯಕಪಾತ್ರವಾಗಿ ಹೋದೀತು, ಅಥವಾ ಯಾರೋ ಒಬ್ಬರು ಅಮೇರಿಕವನ್ನು ಆರು ತಿಂಗಳ ಪ್ರವಾಸದಲ್ಲಿ ನೋಡಿ ಬರೆದ ಕಥನವಾದೀತು. ಮುಗಿಲಿನಿಂದ ಬೀಳುವ ಮಳೆ ಹನಿಯನ್ನು ಕೇವಲ ಕೆಲವೇ ಅಡಿಗಳ ಎತ್ತರದಲ್ಲಿ ನೋಡಿ ಅದು ನೆಲವನ್ನು ಅಪ್ಪುವುದನ್ನು ಪೂರ್ಣ ಅನುಭವ ಎಂದು ಹೇಗೆ ಒಪ್ಪಲಾದೀತು, ಆ ನೀರು ಎಲ್ಲಿಂದ ಬಂತು ಎಲ್ಲಿಗೆ ಸೇರುತ್ತೆ, ಹೇಗೆ ಸೇರುತ್ತೆ ಎಂದು ಕೆದಕಿ ನೋಡದ ಹೊರತು?

ಅದಕ್ಕೋಸ್ಕರವೇ ಅನಿವಾಸಿಗಳ ಮನಸ್ಥಿತಿ ಅನಿವಾಸಿಗಳಿಗೇ ತಿಳಿಯದಷ್ಟು ಸಂಕೀರ್ಣವಾಗಿ ಹೋಗೋದು. ನಾವು ಅಂಚೆಗೆ ಹಾಕಬೇಕಾದ ಪತ್ರಗಳು ಸಾಕಷ್ಟು ತಡವಾಗೋದು, ನಾವು ಕರೆ ಮಾಡುತ್ತೇವೆ ಎಂದು ಮಾತುಕೊಟ್ಟದ್ದು ತಪ್ಪೋದು ಅಥವಾ ವಿಳಂಬವಾಗೋದು, ಅಥವಾ ನಮ್ಮವರೊಡಗೋಡಿ ಒಂದಿಷ್ಟರ ಮಟ್ಟಿಗೆ ನಕ್ಕು ನಲಿಯದೇ ಹೋಗೋ ಹಾಗೆ ಚಪ್ಪಟೆ ಮುಖವನ್ನು ಹೊರಹಾಕೋದು, ಸಮಯವನ್ನು ಜಯಿಸುತ್ತೇವೆ ಅನ್ನೋ ಉತ್ಸಾಹ ಕ್ರಮೇಣ ಕಡಿಮೆಯಾಗೋದು, ಊಟ-ತಿಂಡಿ ಆಚಾರ-ವಿಚಾರಗಳ ವಿಷಯದಲ್ಲಿ ಸಾಕಷ್ಟು ಕಲಸುಮೇಲೋಗರವಾಗೋದು. ಇಲ್ಲವೆಂದಾದರೆ ಮನೆಯಲ್ಲಿ ಯಾವ ಆರ್ಡರಿನಲ್ಲಿ ಹುಟ್ಟಿಬೆಳೆದಿದ್ದರೂ ಉಳಿದವರೆಲ್ಲರಿಗೂ ಆದೇಶಿಸುವಷ್ಟು ದಾರ್ಷ್ಟ್ಯವೆಲ್ಲಿಂದ ಬರುತ್ತಿತ್ತು? ಪ್ರತಿಯೊಂದು ಸವಾಲುಗಳಿಗೂ ನಮ್ಮಲ್ಲಿ ಉತ್ತರವಿದೆಯೆನ್ನೋ ಭ್ರಮೆಯಲ್ಲಿ ನಾವು ಸ್ವಲ್ಪ ಕಾಲ ಬಳಲಿ, ನಮ್ಮನ್ನು ನಂಬಿದವರು ಅದನ್ನು ಕೊನೆಯವರೆಗೂ ನಂಬಿಕೊಂಡೇ ಇರುವಂತೇಕಾಗುತ್ತಿತ್ತು? ಅಥವಾ ನಾವು ಹೀಗೆ ಮಾಡುತ್ತೇವೆ, ಹಾಗೆ ಮಾಡುತ್ತೇವೆ ಎನ್ನೋ ಮಾತುಗಳು 'ಹಾಗೆ ಮಾಡಬಲ್ಲೆವು' ಎಂದು ಬದಲಾಗಿ, ಮುಂದೆ 'ಹಾಗೆ ಮಾಡಬಹುದಿತ್ತು' ಎಂದು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಗೊಳ್ಳುತ್ತಿತ್ತೇಕೆ?

***

ರಿವರ್ಸ್ ಮೈಂಗ್ರಂಟುಗಳ ಮನದಾಳದಲ್ಲೇನಿದೆ, ಸುಖವಾಗಿ ಬದುಕುವ ಅದಮ್ಯ ಆಸೆಯೊಂದನ್ನು ಹೊರತುಪಡಿಸಿ? ಸರಿ, ಸುಖವಾಗಿ ಬದುಕುವುದು ಎಂದರೇನು - ಇಲ್ಲದ್ದನ್ನು ಊಹಿಸಿ ಕೊರಗದಿರುವುದೇ? ಇನ್ನೂ ಸರಳವಾದ ಪ್ರಶ್ನೆ - ನಮಗೆ ಎಂದಿದ್ದರೂ ಯಾವುದೋ ಒಂದು ವಸ್ತುವಿನ ಕೊರತೆ ಇದ್ದೇ ಇರುತ್ತದೆ ಎನ್ನುವುದು ಸತ್ಯವಾದರೆ, ಅದನ್ನು ಆದಷ್ಟು ಬೇಗ ಮನಗಂಡು ಅದರ ಬಗ್ಗೆ ಮುಂದೆ ಯೋಚಿಸದೇ ಇರುವಂತೇಕೆ ಸಾಧ್ಯವಾಗುವುದಿಲ್ಲ?

***

ಸದ್ಯಕ್ಕೆ ಇವೆಲ್ಲ ಪ್ರಶ್ನೆಗಳ ರೂಪದಲ್ಲೇ ಕೂತಿವೆ, ಒಂದು ರೀತಿ ತನ್ನ ಸುತ್ತಲಿನ ಎಲೆಗಳನ್ನು ಕಬಳಿಸುತ್ತಾ ಬೆಳೀತಾ ಇರೋ ಕಂಬಳಿ ಹುಳುವಿನ ಥರ. ಮುಂದೆ ಅದೊಂದು ಗೂಡನ್ನು ಸೇರಿ ಅಲ್ಲಿ ಸುಖನಿದ್ರೆಯನ್ನು ಅನುಭವಿಸುತ್ತೆ. ಒಂದುವೇಳೆ, ನಿದ್ರೆಯಿಂದ ಎಚ್ಚರವಾಗಿ ನೆರೆಹೊರೆ ಕಂಬಳಿಹುಳು ಚಿಟ್ಟೆಯಾಗುವ ಬದಲಾವಣೆಯನ್ನು ಸಹಿಸಿಕೊಳ್ಳುವುದೆಂದಾದರೆ ಒಂದಲ್ಲ ಒಂದು ಆ ಚಿಟ್ಟೆ ತನ್ನ ಪಯಣವನ್ನು ಆರಂಭಿಸುವುದು ನಿಜ - ಆದರೆ ಈ ಪರಿವರ್ತನೆ ಬಹಳ ದೊಡ್ಡದು, ಅದರ ವ್ಯಾಪ್ತಿ ಇನ್ನೂ ಹೆಚ್ಚು ಹಾಗೂ ಅದರ ಹಿಂದಿನ ಮನಸ್ಥಿತಿಯ ಸಂಕೀರ್ಣತೆ ಬಹಳ ಮುಖ್ಯವಾದದ್ದು.

Thursday, August 16, 2007

ಖುರ್ಚೀ ಕೆಲ್ಸಕ್ಕೇ ಜೈ!

ಬರೀ ಖುರ್ಚೀ ಮೇಲೆ ಕುಳಿತು ಕಾಲ ಕಳೆಯೋ ಈ ಕೆಲಸ ಯಾರಿಗಪ್ಪಾ ಬೇಕು ಅಂತ ಎಷ್ಟೋ ಸರ್ತಿ ಅನ್ಸೋದಿಲ್ವಾ? ಈ ರೀತಿ ಕೆಲ್ಸಾನ ಒಂದು ಐದು ಹತ್ತು ವರ್ಷ ಮಾಡಿ ಸುಸ್ತಾಗಿ ಹೋಗಿರುವವರಿಗೆ ಈ ಹೊಸದಾಗಿ ಕೆಲಸಕ್ಕೆ ಸೇರಿಕೊಳ್ಳೋರನ್ನು ನೋಡಿ ಮರುಕ ಹುಟ್ಟಿದರೂ ಅದೇನು ಅತಿಶಯೋಕ್ತಿ ಅಲ್ಲ. ಒಂದು ಕಾಲದಲ್ಲಿ ಸಿವಿಲ್ಲು, ಮೆಕ್ಯಾನಿಕಲ್ಲು, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಮುಂತಾದ ವಿಭಾಗಗಳಿಗೆ ಸೇರಿಕೊಂಡು ಇ೦ಜಿನಿಯರಿಂಗ್ ಮುಂದುವರೆಸೋರಿಗಿಂತ ಇನ್‍ಫರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಸೇರಿ ಓದುವವರೇ ಹೆಚ್ಚಾಗಿದ್ದರು, ಆದರೆ ಈಗ ಕಾಲ ಬದಲಾಗಿರಬಹುದು. ನನಗೇನಾದರೂ ಇನ್ನೊಂದು ಅವಕಾಶ ಸಿಕ್ಕಿದ್ರೆ ಬೇರೆ ವಿಷ್ಯಾನೇ ಆಯ್ದುಕೊಳ್ತೀನಿ ಅನ್ನೋದು ನಿಜ.

ನಮ್ ನಮ್ ವೆಕೇಷನ್ನ್ ಎಲ್ಲವೂ ಅಪರೂಪಕ್ಕೊಮ್ಮೆ ಹೋಗಿ ಬರೋ ಭಾರತ ಪ್ರವಾಸಕ್ಕೇ ಮುಡಿಪಾಗಿಟ್ಟುಕೊಂಡಿದ್ದಾಯ್ತು. ಈಗಂತೂ ವಿಪರೀತ ಕೆಲಸ, ಇದೇ ದೇಶದವರು ಬೇಸಿಗೆ ಉದ್ದಕ್ಕೂ ಅಲ್ಲೊಂದ್ ವಾರ ಇಲ್ಲೊಂದ್ ವಾರ ವೆಕೇಷನ್ನ್ ತಗೊಂಡು ಹಾಯಾಗಿ ಇದ್ರೆ, ನಾವು ನಾಳೆಗಳಿಗೋಸ್ಕರ ಬದುಕೋ ನಮ್ಮ ತತ್ವದ ಪ್ರಕಾರವಾಗಿ ನಮ್ಮ ರಜೆಗಳನ್ನೂ ಮುಂದಿನ ಭಾರತದ ಪ್ರವಾಸಕ್ಕಿಟ್ಟುಕೊಂಡು ಕಾಯೋದಾಯ್ತು. ಸೋಮವಾರದಿಂದ ಶುಕ್ರವಾರ ಅದು ಹೇಗೆ ಬರುತ್ತೋ ಹೇಗೆ ಹೋಗುತ್ತೋ ಗೊತ್ತಾಗಲ್ಲ, ಮೊನ್ನೆ ಮೊನ್ನೆ ಆರಂಭವಾದ ಸೋಮವಾರ ಇದ್ದಕ್ಕಿಂದ್ದಂತೆ ಶುಕ್ರವಾರವಾಗಿ ಮಿಂಚಿ ಮರೆಯಾಗಿ ಹೋಗುತ್ತೆ. ವಾರಾಂತ್ಯ ಬಂದ್ರೆ ಏನೋ ಕಡಿಯೋರ ಹಾಗೆ ಅದು ಮಾಡೋಣ, ಇದು ಮಾಡೋಣ ಅನ್ನೋ ಸರಣಿ ಮನಸ್ಸಲ್ಲಿ ಹುಟ್ಟುತ್ತೇ ಅನ್ನೋದೇನೋ ನಿಜ, ಅದು ಕಾರ್ಯರೂಪಕ್ಕೆ ಬರೋದೇ ಇಲ್ಲ. ವಾರದ ದಿನಗಳಲ್ಲಿ ಆಫೀಸಿನ ಕೆಲಸವನ್ನು ಬಿಟ್ಟು ಏನಾದರೊಂದು ಒಂದು ಪರ್ಸನಲ್ ಕೆಲಸ - ಲೈಬ್ರರಿಗೆ ಹೋಗೋದೋ, ಕಿರಾಣಿ ತರೋದೋ, ಮತ್ತೊಂದೋ ಮಾಡುವಷ್ಟರಲ್ಲಿ ಆ ದಿನ ಮುಗಿದೇ ಹೋಗಿರುತ್ತೆ. ಇನ್ನು ವಾರಾಂತ್ಯದಲ್ಲಿ ದಿನಕ್ಕೆ ಎರಡು ಕೆಲಸ ಆದರೆ ಹೆಚ್ಚು - ಅದರಲ್ಲಿ ಮನೆ ಸ್ವಚ್ಛ ಮಾಡೋದೂ, ಬಟ್ಟೆ ಒಗೆದು ಒಪ್ಪಮಾಡಿಕೊಳ್ಳೋದು ಒಂದು.

ನಿಮ್ಮ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದ್ರೆ ನನಗೆ ಯಾಕೆ ಅಂತ ತಿಳಿಸ್ತೀರಾ ತಾನೆ?

***

ಛೇ! ಇನ್ನೊಲ್ಪ ಚೆನ್ನಾಗಿ ಓದಿದ್ರೆ ಡಾಕ್ಟರ್ ಆಗಿಬಿಡಬಹುದಿತ್ತು - ಏನಿಲ್ಲ ಅಂದ್ರೂ ಆಸ್ಪತ್ರೆ ತುಂಬಾ ಓಡಾಡಿಕೊಂಡಿರಬಹುದಿತ್ತು, ಈ ಕಂಪ್ಯೂಟರ್ ಪರದೇ ನೋಡೋ ಕಷ್ಟಾ ಯಾವನಿಗ್ ಬೇಕು? ಏ, ಬ್ಯಾಡಪ್ಪಾ - ಡಾಕ್ಟರ್ ಆಗೋದಕ್ಕೆ ಎಷ್ಟ್ ಓದಿದ್ರೂ ಸಾಲ್ದೂ, ಜೊತೆಗೆ ಏನೇ ಸರ್ವೀಸ್ ಮೆಂಟಾಲಿಟ್ ಇಟ್ಕೊಂಡ್ ಯಾರಿಗ್ ಸಹಾಯ ಮಾಡಿದ್ರೂ ಎಲ್ಲಾದ್ರೂ ಲಾ ಸೂಟ್ ಹಾಕ್ಕೋದೇ ಹೆಚ್ಚು, ಅದ್ಯಾವನಿಗ್ ಬೇಕು ಆ ಕರ್ಮ.

ಅದು ಬ್ಯಾಡಪ್ಪಾ, ಸಿವಿಲ್ ಇಂಜಿನಿಯರ್ ಆಗಿದ್ರೆ ಎಷ್ಟ್ ಮಜಾ ಇರ್ತಿತ್ತು - ಪ್ರತೀ ದಿನ ಫೀಲ್ಡ್ ಸರ್ವೇ ಅದೂ ಇದೂ ಅಂತ ಹೊರಗಡೆ ಓಡಾಡಿಕೊಂಡಿರಬಹುದಿತ್ತು. ಅಯ್ಯೋ, ಬೇಸಿಗೆ ಬಿಸಿಲನ್ನಾದರೂ ತಡಕೋಬಹುದು, ಈ ವಿಂಟರ್‌ನಲ್ಲಿ ರಸ್ತೆ ಅಳೆಯೋ ಕೆಲ್ಸಾ ಯಾವನಿಗ್ ಬೇಕು, ನೀವೊಂದು.

ಸುಮ್ನೇ, ಲೈಬ್ರರಿ ಸೈನ್ಸ್ ಓದಿಕೊಂಡು ಯಾವ್ದಾದ್ರೂ ದೊಡ್ಡದೊಂದು ಲೈಬ್ರರಿ ಸೇರಿಕೊಂಡ್ ಬಿಡಬೇಕಿತ್ತು, ಅರಾಮಾಗಿ ದಿನವೂ ಒಂದಿಷ್ಟು ಓದಿಕೊಂಡು ಕಾಲ ಕಳೀಬಹುದಿತ್ತು. ಛೇ, ಅದೂ ಕೂತಕೊಂಡ್ ಮಾಡೋ ಕೆಲ್ಸಾನೇ ಅಲ್ವೇ, ಬ್ಯಾಡಪ್ಪಾ...ಅದೂ ಅಲ್ದೇ, ಅಪರೂಪಕ್ಕೊಂದ್ ಪುಸ್ತಕಾ ಓದ್ಕೊಂಡೇ ಲೈಫ್ ಇಷ್ಟೊಂದು ಕಾಂಪ್ಲಿಕೇಟೆಡ್ ಆಗಿರೋವಾಗ ಇನ್ನು ದಿನವೂ ಪುಸ್ತಕಾ ಓದ್ತಾನೇ ಇರೋದು ಅಂದ್ರೆ? ಅಲ್ಲದೇ, ಯಾವ ಲೈಬ್ರರಿಯನ್ ಅದೇನ್ ಅಂಥಾ ಮಹಾನ್ ಓದಿ ಏನು ಕಡಿದು ಹಾಕಿರೋದು ಇಲ್ಲೀವರೆಗೆ?

ಯಾವ್ದೂ ಬ್ಯಾಡಪ್ಪಾ, ಈ ನ್ಯೂ ಯಾರ್ಕ್ ನಗರದಲ್ಲಿ ಹಾಯಾಗಿ ಟ್ಯಾಕ್ಸಿ ಓಡಿಸ್ಕೊಂಡಿರಬೇಕಿತ್ತು, ನಾವೇ ನಮ್ಮ ಬಾಸು, ಎಷ್ಟೊತ್ತಿಗೆ ಬೇಕಾದ್ರೂ ಹೋದಾ, ಎಷ್ಟೊತ್ತಿಗೆ ಬೇಕಾದ್ರೂ ಬಂದ. ಕೆಲ್ಸಿಲ್ಲ ನಿಮಗೆ, ಅಲ್ಲೇನಾರಾ ಒಂದ್ ತಿಂಗಳು ಕಾರ್ ಓಡ್ಸಿ ಕರಿಯರಿಂದ ಆಕ್ರಮಣಕ್ಕೊಳಗಾಗದೇ ಬದುಕಿ ಬಂದ್ರೇನೇ ಹೆಚ್ಚು, ಅದೂ ಅಲ್ದೇ ದಿನಾನೂ ರಸ್ತೇ ಮೇಲೆ ಬಿದ್ದಿರೋ ಕೆಲ್ಸಾ ಯಾವನಿಗ್ರೀ ಬೇಕು? ಹೋಗೀಬಂದೂ ಡ್ರೈವ್ ಮಾಡ್ಕೊಂಡೇ ಬಿದ್ದಿರೂ ಅಂದ್ರೆ? ಬ್ಯಾಡಾ ಶಿವಾ.

ದೊಡ್ಡ ಕಂಪನಿ ಅಧಿಕಾರಿ ಆದ್ರೆ ಹೆಂಗೆ? ಎಷ್ಟು ಚಂದ ಇರೋ ಆಫೀಸು, ಕಾರು, ಬಂಗ್ಲೇ ಎಲ್ಲಾ ಕೊಡ್ತಾರಂತೆ, ನಿಜವಾ. ದಿನವೂ ಬಿಳೀ ಕಾಲರ್ ಅಂಗೀ ತೊಟ್ಕೊಂಡೇ ಇರಬಹುದಂತೆ, ಮಜಾ ಅಂದ್ರೆ ಅದಪ್ಪಾ. ರೀ, ನಿಮಗ್ಗೊತ್ತಿಲ್ಲ, ದೊಡ್ಡೋರಿಗಿರೋ ತಲೇನೋವುಗಳು, ಅಲ್ಲಿರೋ ಸ್ಟ್ರೆಸ್ ಮತ್ತೆಲ್ಲೂ ಇರೋಲ್ಲ, ಆ ಸ್ಟ್ರೆಸ್ಸಿಗೆ ಯಾವಾಗ ಹಾರ್ಟ್ ಅಟ್ಯಾಕ್ ಆಗುತ್ತೇ ಅಂತಾನೇ ಹೇಳೋಕ್ ಬರೋಲ್ಲವಂತೆ!

***

ಈ ಅನೇಕ ಕೆಲಸಗಳ ಸಾಧಕ-ಬಾಧಕಗಳು ಮಿಂಚಿ ಮರೆಯಾದವು. ನನ್ನ ಕೆಲ್ಸಾನೂ ಸೇರಿ ಯಾವ್ ಕೆಲ್ಸಾನೂ ರುಚಿಸ್ತಾನೇ ಇಲ್ಲಾ... ನಮ್ ಅಣ್ಣಾ ಯಾವಾಗ್ ನೋಡಿದ್ರೂ ಹೆಳ್ತಿರ್ತಾನೆ, ನಮ್ ದೇಶದಲ್ಲಿ ನಾವು ನೀರು ಕುಡಕಂಡ್ ಬದುಕ್ತೀವಿ ಅಂತ. ನಮಿಗೆ ಇಲ್ಲಿ ಹಾಗಂತೂ ಇರೋಕ್ ಸಾಧ್ಯವೇ ಇಲ್ಲ. ಇವತ್ತು ದುಡೀಬೇಕು, ನಾಳೆ ತಿನ್ನಬೇಕು, ತಿನ್ನದಿದ್ರೂ ಪರವಾಗಿಲ್ಲ ಇರೋ ಸಾಲಗಳನ್ನ ತೀರುಸ್‌ಬೇಕು...ಅದಪ್ಪಾ ಬದುಕು. ಕೆಲವೊಂದ್ ಸರ್ತಿ ಅನ್ಸುತ್ತೆ, ಇದನ್ನ ಬದುಕು ಅಂತ ಕರದೋರು ಯಾರು ಅಂತ? ಸುಮ್ನೇ ದೊಂಬರಾಟ ಅಂತ ಕರೆದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತಲ್ವಾ?

ನಾನು ನನ್ನ ಕೆಲ್ಸಕ್ಕೆ ಬಯ್ದೆ ಅಂತ ನಮ್ ಮನೆಯವರಿಗಾಗ್ಲೀ ನಮ್ ಬಾಸಿಗಾಗ್ಲೀ ಹೇಳಿಬಿಟ್ಟೀರಾ, ಅವುರಿಗೆಲ್ಲ ನನ್ನ ಮೇಲೆ ಪ್ರೀತಿ-ವಿಶ್ವಾಸ ಇರೋದು ಇದ್ದೇ ಇರುತ್ತೇ, ಆದ್ರೆ ನಾಳೆ ಮಾಡೋ ಕೆಲ್ಸಗಳನ್ನು ಎಲ್ಲಾದ್ರೂ ತಪ್ಪಿಸಿಕೊಂಡ್ ಬಿಟ್ಟಾನು ಅಂತ ಸುಳಿವೇನಾದ್ರೂ ಸಿಕ್ಕಿದ್ರೆ ಕಷ್ಟಾ, ಹೇಳಿಬಿಡಬೇಡಿ ಮತ್ತೆ! ಖುರ್ಚೀ ಕೆಲ್ಸಕ್ಕೇ ಜೈ!

Tuesday, August 14, 2007

ಯಶಸ್ಸಿನ ಹಿಂದಿರುವ ಗುಟ್ಟು

ಓರಿಯಂಟಲ್ ಮೂಲದ ವೈದ್ಯ ದಂಪತಿಗಳಿಬ್ಬರು ನನಗೆ ಪರಿಚಯ, ಕೊರಿಯಾದಿಂದ ಅವರು ನಾಲ್ಕೈದು ವರ್ಷಗಳ ಹಿಂದೆ ಬಂದವರು, ಅಮೇರಿಕಕ್ಕೆ ಬಂದ ಮೊದಲಲ್ಲಿ ಒಂದು ಸ್ವಲ್ಪವೂ ಇಂಗ್ಲೀಷ್ ಬರುತ್ತಿರಲಿಲ್ಲವಂತೆ. ಆದರೆ ಇಲ್ಲಿಗೆ ಬಂದ ಮೊದಲೆರಡು ವರ್ಷಗಳಲ್ಲಿ ಅವರು ಪಟ್ಟ ಪರಿಶ್ರಮದಿಂದ ಎಮ್.ಡಿ. ಆಗಲು ಬೇಕಾದ ಪೂರ್ವಭಾವೀ ಪರೀಕ್ಷೆಗಳಲ್ಲಿ ನೂರಕ್ಕೆ ೯೯ ಅಂಕಗಳನ್ನು ಗಳಿಸಿ, ಯಶಸ್ವಿಯಾಗಿ ತಮ್ಮ ಪದವಿಯನ್ನು ಮುಗಿಸಿ ಈಗ ಒಂದು ಗೌರವಾನ್ವಿತ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಮೆಡಿಕಲ್ ಪರೀಕ್ಷೆಗಳ ಬಗ್ಗೆ (ಯು.ಎಸ್.ಎಮ್.ಎಲ್.ಇ.) ಹೆಚ್ಚು ಜನರಿಗೆ ಅದರ ಆಳ-ವಿಸ್ತಾರ ಗೊತ್ತಿರದಿರಬಹುದು. ಪ್ರತಿಯೊಂದು ಹಂತದ ಪರೀಕ್ಷೆಗಳು ಸುಮಾರು ಎಂಟು ಘಂಟೆಗಳ ವ್ಯಾಪ್ತಿಯವು, ಸುಮಾರು ೩೫೦ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಉತ್ತರಿಸಿಕೊಂಡು ಹೋಗಬೇಕಾಗುತ್ತದೆ. ಪ್ರತಿಯೊಂದು ಪ್ರಶ್ನೆಯೂ, ಅದರ ನಿರೀಕ್ಷಿತ ಉತ್ತರವೂ ಸರಿಯಾದ ತಯಾರಿಯನ್ನು ಬೇಡುತ್ತದೆ. ಎಲ್ಲಕ್ಕೂ ಮಿಗಿಲಾಗಿ ಪ್ರಶ್ನೆಗಳನ್ನು ನಿಗದಿತ ಸಮಯದಲ್ಲಿ ಓದಿ ಮುಗಿಸಿ ಸರಿಯಾಗಿ ಉತ್ತರ ಕೊಡಬೇಕಾದ ಜಾಣತನ ಬರುವುದಕ್ಕೆ ಸಾಕಷ್ಟು ತಯಾರಿಯನ್ನು ನಡೆಸಬೇಕಾಗುತ್ತದೆ.

ಬೇಕಾದಷ್ಟು ಜನರು ನೂರಕ್ಕೆ ೯೯ ಅಂಕಗಳನ್ನು ಇಂತಹ ಪರೀಕ್ಷೆಗಳಲ್ಲಿಗಳಿಸುತ್ತಾರಾದ್ದರಿಂದ ಅದೇನು ವಿಶೇಷವಲ್ಲ, ಆದರೆ ಕೇವಲ ನಾಲ್ಕು ವರ್ಷಗಳ ಹಿಂದೆ ಇಂಗ್ಲೀಷ್ ಸ್ವಲ್ಪವೂ ಬರದೆ, ಅವರ ಮೆಡಿಕಲ್ ವಿದ್ಯಾಭ್ಯಾಸವನ್ನು ಅವರ ನೇಟಿವ್ ಭಾಷೆಯಲ್ಲಿಯೇ ನಡೆಸಿ, ಒಂದೇ ವರ್ಷದಲ್ಲಿ - ಅಮೇರಿಕಕ್ಕೆ ಬಂದು ಇಂಗ್ಲೀಷನ್ನು ಕಲಿತು, ಟೊಫೆಲ್ ಪರೀಕ್ಷೆಯನ್ನು ಕೊಟ್ಟು, ಮುಂದೆ ಮೆಡಿಕಲ್ ಪರೀಕ್ಷೆಗಳಿಗೆ ತಯಾರಾಗಿ ಅದರಲ್ಲೂ ಹೆಚ್ಚಿನ ಅಂಕಗಳನ್ನು ಗಳಿಸುವುದು ನನಗಂತೂ ಸಾಕಷ್ಟು ಬೆರಗನ್ನು ಮೂಡಿಸಿದೆ. ಅವರ ಮೂಲ ವಿದ್ಯಾಭ್ಯಾಸ, ಬುದ್ಧಿವಂತಿಕೆ ಇಲ್ಲಿ ಹೆಚ್ಚಿನ ಮಟ್ಟದ ಪಾತ್ರವನ್ನು ತೋರಿದ್ದರೂ, ಅವರು ಅತ್ಯಂತ ಕಠಿಣ ಪರಿಶ್ರಮದಿಂದ ಇಂಗ್ಲೀಷನ್ನು ಕಲಿತು ತಮ್ಮ ಹೆಚ್ಚುತನವನ್ನು ಅಲ್ಲಿಯೂ ಮೆರೆಯುವುದನ್ನು ನೋಡಿದರೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ.

ಈ ಕೊರಿಯನ್ ವೈದ್ಯ ದಂಪತಿಗಳ ಮಾತು (spoken English) ಅಂತಹ ಹೆಚ್ಚಿನ ಮಟ್ಟದ್ದೇನೂ ಅಲ್ಲ, ಅದರೆ ಅವರ ಇಂಗ್ಲೀಷಿನ ಕೊರತೆ ಅವರನ್ನೆಂದೂ ನಿಲ್ಲಿಸಿದ್ದಿಲ್ಲ.

***

ನಮ್ಮ ಕಂಪನಿಯ ಭಾರತದ ಎರಡು ಬ್ರ್ಯಾಂಚುಗಳಲ್ಲಿನ ಕೆಲಸಗಾರರೊಂದಿಗೆ ಆಗಾಗ್ಗೆ ಒಡನಾಡುವುದು ಇಲ್ಲಿನ ನನ್ನಂತಹ ಕೆಲಸಗಾರರಿಗೆ ದಿನನಿತ್ಯದ ಕೆಲಸದ ಒಂದು ಭಾಗವಾಗಿ ಹೋಗಿದೆ. ದಿನೇದಿನೇ ಹೆಚ್ಚಿನ ಕೆಲಸ ಕಾರ್ಯಗಳು ಭಾರತದಿಂದಲೇ ಆಗುತ್ತಿರುವುದು ಒಂದು ರೀತಿಯ ಡಿಪೆಂಡೆನ್ಸಿ ಆಗಿ ಹೋಗಿದೆ. ಹೀಗೆ ಭಾರತದ ಕೆಲಸಗಾರರೊಂದಿಗೆ ಒಡನಾಡುವಾಗ ಗಮನಿಸಿದ ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳುವುದು ನನ್ನ ಆಶಯ.

ಬಿಸಿನೆಸ್ ಮ್ಯಾನೇಜ್‌ಮೆಂಟ್, ಅಥವಾ ಸಾಫ್ಟ್‌ವೇರ್ ಡೆವಲಪ್‌ಮೆಂಟ್‌ ಕೆಲಸಕ್ಕೆ ಸಂಬಂಧಿಸಿದಂತೆ ಕಮ್ಮ್ಯೂನಿಕೇಷನ್ನಿಗೆ ಬಹಳ ಮಹತ್ವದ ಸ್ಥಾನವಿದೆ. ಹೊಸ ಪ್ರಾಜೆಕ್ಟಾಗಲೀ, ಇದ್ದ ಪ್ರೋಗ್ರಾಮಿನ ಮಾಡಿಫಿಕೇಷನ್ನಾಗಲೀ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಒಬ್ಬರಿಂದ ಇನ್ನೊಬ್ಬರಿಗೆ ಮಾತುಕಥೆ ನಡೆದು, ಅದರಲ್ಲಿ ಎಷ್ಟು ಪರಿಣಾಮಕಾರಿಯಾಗಿ ವಿಷಯಗಳು ವಿನಿಮಯಪಡಲ್ಪಡುತ್ತವೆ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧರಿತವಾಗುತ್ತದೆ. ಯಾವುದಾದರೊಂದು ಸಣ್ಣ ಕೆಲಸದ ಔಟ್‌ಪುಟ್ ಆಗಿರಬಹುದು, ಅಥವಾ ಹೀಗೆ ಮಾಡಿದರೆ ಹಾಗೆ ಬರುತ್ತದೆ ಎನ್ನುವ ನಿರೀಕ್ಷೆ ಇರಬಹುದು - ಇವೆಲ್ಲವೂ ಸರಿಯಾಗಿ ಕಮ್ಮ್ಯೂನಿಕೇಟ್ ಆಗದೇ ಹೋದರೆ - ನಾನು ಹೇಳಿದ್ದು ಒಂದು, ಅವರು ಮಾಡಿದ್ದು ಇನ್ನೊಂದು ಎನ್ನುವಂತಾಗುತ್ತದೆ.

ನಾನು ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಗಮನಿಸಿದ ಹಾಗೆ ಭಾರತಲ್ಲಿನ ಬೆಳವಣಿಗೆಯ ವೇಗಕ್ಕೆ ಅಲ್ಲಿ ಹೆಚ್ಚು ಜನರು ಹೆಚ್ಚು ಸಮಯ ಒಂದು ಬಿಸಿನೆಸ್‌ಗಾಗಲೀ, ಒಂದೇ ಪ್ರಾಜೆಕ್ಟ್‌ಗಾಗಲೀ ಕಟ್ಟಿ ಬೀಳುವ ಸಾಧ್ಯತೆ ಕಡಿಮೆ. ಅವರ ಹೆಚ್ಚಿನ ಅನುಭವ ಇಲ್ಲದಿರುವ ವಿಷಯ ಅವರ ಸಂವಹನಕ್ಕೆ ಹೇಗೆ ಮಾರಕವಾಗುತ್ತದೆಯೋ ಹಾಗೇ ಒಮ್ಮೆ ಕೈಗೆತ್ತಿಕೊಂಡ ಕೆಲಸದ ಪೂರ್ಣ ವಿವರಗಳನ್ನು ಅರಿಯದೇ ಹೊರಡಿಸಿದ ಔಟ್‌ಪುಟ್ ಸಹಾ ಅಷ್ಟೇ ಹಗುರವಾಗಿರುತ್ತದೆ. ಅಲ್ಲಿಯ ವೇಗ, ಕಡಿಮೆ ಜೀರ್ಣಿಸಿಕೊಂಡು ಹೆಚ್ಚು ಉತ್ಪಾದಿಸುವ ಒತ್ತಡ, ಅವರವರೇ ಹುಟ್ಟಿಸಿಕೊಂಡ ಲೇಯರ್ರುಗಳು ಇವನ್ನೆಲ್ಲಾ ಮೀರಿ ಬೆಳೆಯುವುದಾಗಲೀ, ಅದಕ್ಕೆ ಪೂರಕವಾದ ಬೆಳವಣಿಗೆಗಳಾಗಲೀ ಅಷ್ಟೊಂದು ಕಾಣಸಿಗುವುದೇ ಇಲ್ಲ.

ಹುಟ್ಟಿದಾಗಿನಿಂದ ಇಂಗ್ಲೀಷ್ ಮೀಡಿಯಮ್ಮಲ್ಲೇ ಓದಿ ಇಂಜಿನಿಯರಿಂಗ್ ಮುಗಿಸಿರುವ ನಮ್ಮ ಭಾರತದ ಕೆಲಸಗಾರರ ಬುದ್ಧಿಮತ್ತೆಯಲ್ಲಿ ಯಾರಿಗೇನೂ ಕಡಿಮೆ ಇಲ್ಲ, ಆದರೆ ಎಫೆಕ್ಟಿವ್ ಕಮ್ಮ್ಯೂನಿಕೇಷನ್ನ್ ಎನ್ನುವುದರಲ್ಲಿ ಹತ್ತಕ್ಕೆ ನಾಲ್ಕು ಅಂಕಳನ್ನೂ ಗಳಿಸುವುದಿಲ್ಲ. ಆತ ಒಂದು ಘಂಟೆ ನಮ್ಮೊಡನೆ ಕಾನ್‌ಫರೆನ್ಸ್ ಕಾಲ್‌ನಲ್ಲಿದ್ದರೆ ಆತ ಆರಂಭಿಸುವ ಪ್ರತಿಯೊಂದು ವಾಕ್ಯಗಳೂ 'Actually...' ಯಿಂದ ಆರಂಭವಾಗುವುದೇತಕ್ಕೆ ಎಂದು ನನಗಿನ್ನೂ ಗೊತ್ತಿಲ್ಲ, ಅವನು Actually ಎಂದು ಶುರು ಮಾಡಿದರೆ, ಇನ್ನು ಕೆಲವರು Basically ಎನ್ನುತ್ತಾರೆ, ಮತ್ತೆ ಕೆಲವರು 'I think...' ಎಂದೇ ತಮ್ಮ ಪ್ರತಿಯೊಂದು ವಾಕ್ಯವನ್ನೂ ಅರಂಭಿಸುವ ರೂಢಿಯಲ್ಲಿರುತ್ತಾರೆ. ಈ ಬಗೆಯ ವಾಕ್ಯ, ವಾಕ್ಯರಚನೆ ಭಾರತದಲ್ಲಿ ಹೇಗೆ ಚಾಲ್ತಿಗೆ ಬಂದು ಅಲ್ಲಿ ಹೇಗೆ ಅರ್ಥ ಮಾಡಿಕೊಳ್ಳಲ್ಪಡುವುದೋ ನನಗೆ ತಿಳಿಯದು, ಆದರೆ ಒಂದು ನೇಟಿವ್ ಇಂಗ್ಲೀಷ್ ಪರಿಸರದ ಹಿನ್ನೆಲೆಯಲ್ಲಿ ನೋಡಿದರೆ ಹಾಸ್ಯಾಸ್ಪದವೆನ್ನಿಸುವುದಿಲ್ಲವೇ? ಹೋಗಲಿ, ಇಂಗ್ಲೀಷ್ ಇವರ ಜಾಯಮಾನದ ಭಾಷೆಯಲ್ಲಾ ಹೇಗಾದರೂ ಆರಂಭಿಸಲಿ ಎಂದುಕೊಂಡರೆ, ಹೆಚ್ಚೂ ಕಡಿಮೆ ಪ್ರತಿಯೊಂದು ವಾಕ್ಯವೂ ಸರಿಯಾಗಿ ಕೊನೆಗೊಳ್ಳದೆ ವಾಕ್ಯಗಳು ಮಧ್ಯದಲ್ಲಿಯೇ ನಿಂತುಹೋಗುವುದು ಮತ್ತೊಂದು ರೀತಿಯ ಅನುಭವವನ್ನು ಮೂಡಿಸುತ್ತವೆ. ಅಂತಹ ಧ್ವನಿಯ ಹಿಂದೆ ಯಾವ ಭಾವನೆಯಾಗಲೀ ಆತ್ಮವಿಶ್ವಾಸವಾಗಲೀ ನನಗೆಂದೂ ಕಂಡುಬಂದಿಲ್ಲ. ಇಲ್ಲಿ ನಮ್ಮೊಡನೆ ಕೆಲಸ ಮಾಡುವ ಆರ್ಕಿಟೆಕ್ಟ್ ನಾಲ್ಕು-ಐದು ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿ ಏನೋ ಒಂದು ಸಿದ್ಧಾಂತವನ್ನು ಮಂಡಿಸುತ್ತಾನೆ, ಅದಕ್ಕೆ ಉತ್ತರ ಅಥವಾ ಸಾಧಕ/ಬಾಧಕವಾಗಿ ಆ ಕಡೆಯಿಂದ ಹರಿದು ಹೋದ ಗಂಟಲಿನಿಂದ ಬರುವ ಧ್ವನಿಯ ಹಾಗೆ 'yes / no' ಉತ್ತರಬರುತ್ತದೆ, ನನಗೆ ಪೀಕಲಾಟಕ್ಕಿಟ್ಟುಕೊಂಡು ಎರಡೂ ಪಕ್ಷಗಳ ವಿವರಗಳನ್ನು ಮತ್ತೆ ಪುನರಾವರ್ತಿಸುತ್ತೇನೆ, ಅದಕ್ಕೂ ಆ ಕಡೆಯಿಂದ ಸರಿಯಾದ ಮಾತೇ ಹೊರಡಲಿಲ್ಲವೆಂದರೆ ನಾವು ಒಂದೇನು ಹತ್ತು ಘಂಟೆಗಳ ಕಾಲ ಕಾನ್‌ಫರೆನ್ಸ್ ನಲ್ಲಿದ್ದರೂ ಅದಕ್ಯಾವ ಅರ್ಥವೂ ಹುಟ್ಟೋದಿಲ್ಲ.

***

ಏನಾಗಿದೆ ನಮ್ಮ ಬುದ್ಧಿವಂತ ಇಂಜಿನಿಯರುಗಳಿಗೆ? ನನಗೆ ಇಂತಹ ವಿಷಯ ಗೊತ್ತಿಲ್ಲ ಎಂದು ನಿರಾತಂಕವಾಗಿ ಹೇಳುವ ಜನರಿಗೆ ಅದರ ಹಿಂದಿನ implied ಜವಾಬ್ದಾರಿಯೊಂದು ಕಣ್ಣಿಗೇಕೆ ಕಾಣಿಸದು? ಆರು ತಿಂಗಳುಗಳ ಕಾಲ ಕೆಲಸ ಮಾಡಿದ ಹುಡುಗನಿಗೆ ಆ ವ್ಯವಸ್ಥೆಯ ಮೂಲಭೂತ ವಿಷಯಗಳ ಬಗ್ಗೆಯೂ ಒಂದು ಐದು ನಿಮಿಷ ಮಾತನಾಡದಿರುವ ಕೊರತೆ ಏನಿದೆ? ತಾವು ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಳ್ಳುವವರು ತಮ್ಮ ಕೆಲಸದ ಬಗ್ಗೆ ತಿಳಿದುಕೊಳ್ಳಲಾರದ ಅಭಾವವನ್ನು ಏಕೆ ಸೃಷ್ಟಿಸಿಕೊಳ್ಳುತ್ತಾರೆ? ಹೀಗೆ ಪ್ರತಿದಿನವೂ ಬೇಕಾದಷ್ಟು ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ.

ಇತ್ತೀಚಿನ ಪದವಿ ತರಗತಿಗಳು ಕಮ್ಮ್ಯೂನಿಕೇಷನ್ನ್, ಪ್ರೆಸೆಂಟೇಷನ್ನಿಗೆ ಮಹತ್ವವನ್ನು ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಪ್ರಕಾರ ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಬ್ಬರೂ ತಮ್ಮ ತಮ್ಮ ವಿಷಯ, ಅಸೈನ್‌ಮೆಂಟ್ ವಿವರಗಳನ್ನೊಳಗೊಂಡು ಕೊನೇಪಕ್ಷ ತಿಂಗಳಿಗೊಂದಾದರೂ ಕ್ಲಾಸ್ ಪ್ರೆಸೆಂಟೇಷನ್ ಕೊಡಲೇಬೇಕು. ಹಾಗೆ ಮಾಡುವುದರಿಂದಲಾದರೂ ವಿಷಯದಲ್ಲಿ ಸಾಕಷ್ಟು ಹಿಡಿತ ಬಂದು ಅದನ್ನು ಇನ್ನೊಬ್ಬರ ಮುಂದೆ (ಸಭಿಕರಿಗೆ ತಕ್ಕಂತೆ) ವಿಷದಪಡಿಸುವ ಕಲೆ ಸಿದ್ಧಿಸಬಹುದು. ಪ್ರತಿಯೊಬ್ಬರೂ ಎಕ್ಸ್‌ಪರ್ಟ್ ಕಮ್ಯೂನಿಕೇಷನ್ ಮಾಡದೇ ಇರಬಹುದು, ಅದರಿಂದಾಗಿ ಕೊನೇಪಕ್ಷ ತಾವು ಏನು ಹೇಳಬೇಕೋ ಅದಕ್ಕೆ ತಕ್ಕ ತಯಾರಿಯನ್ನಾದರೂ ಮಾಡಿಕೊಂಡರೆ ಎಷ್ಟೋ ಸಹಾಯವಾದಂತಾಗುತ್ತದೆಯಲ್ಲವೇ?

ಬಿಳಿ ಕಾಲರಿನ ಕೆಲಸದಲ್ಲಿ ಒಂದಿಷ್ಟು ನಿರೀಕ್ಷೆಗಳು ಇದ್ದೇ ಇರುತ್ತವೆ - ಟೀಮ್ ಪ್ಲೇಯರ್, ಎಕ್ಸಲೆಂಟ್ ಕಮ್ಮ್ಯೂಕೇಷನ್ನ್, ಹಲವಾರು ವಿಷಯಗಳು ಗೊತ್ತಿರಬಹುದಾದ ಅಡಿಪಾಯ, ಕ್ಲಿಷ್ಟಕರ ಪರಿಸ್ಥಿತಿಗೆ ಒಡನೆಯೇ ಹೊಂದಿಕೊಂಡು ಫಲಿತಾಂಶ ಹೊರತರಬಹುದಾದ ಪ್ರಯತ್ನ, ಇತ್ಯಾದಿ.

ನನ್ನ ಪ್ರಕಾರ ಅಂದು ಒಂದಕ್ಷರ ಇಂಗ್ಲೀಷ್ ಬರದಿದ್ದ ಕೊರಿಯನ್ ವೈದ್ಯ ದಂಪತಿಗಳ ಇಂದಿನ ಯಶಸ್ಸಿನ ಹಿಂದಿರುವ ಗುಟ್ಟಿನಲ್ಲಿ ನಾವೆಲ್ಲರೂ ಕಲಿಯಬೇಕಾದ ಪಾಠವೊಂದಿದೆ!

Sunday, August 12, 2007

ತಮೀಗೆ ಯುನಿಕ್ಸೂ, ಮಂದೀಗೆ ವಿಂಡೋಸೂ...

'ಲೋ ಶಿಷ್ಯಾ ಇಲ್ಲಿ ಬಾ, ಬಂದಾ ನಿನ್ ಫ್ರೆಂಡೂ ಹಲ್ಲ್ ಕಿರಕಂಡೂ...' ಎಂದು ಸೋಫಾದಲ್ಲಿ ಕೂತು ಟಿವಿ ನೋಡುತ್ತಿದ್ದ ಸುಬ್ಬ ಒಂದೇ ಸಮನೇ ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ನಾನು ವಸ್ತ್ರಕ್ಕೆ ಕೈ ಒರೆಸಿಕೊಳ್ಳುತ್ತಲೇ ಓಡೋಡಿ ಬಂದೆ,

'ಏನಾಗ್ತಾ ಇದೆ?...' ಎಂದು ನಾನು ಬರುವಷ್ಟರಲ್ಲಿ ಪ್ರೆಸಿಡೆಂಟ್ ಬುಷ್ ಪತ್ರಿಕಾಕರ್ತರನ್ನುದ್ದೇಶಿಸಿ ಭಾಷಣ ಮಾಡಲು ಪೋಡಿಯಂ ಹತ್ತಿ ನಿಂತಾಗಿತ್ತು, 'ಏ, ಬುಷ್ಷ್ ಮಾತಾಡ್ತಾ ಇದಾನಾ..., ನಾನು ಏನೋ ಆಗ್ತಾ ಇದೆ ಅಂದುಕೊಂಡೆ. ಆದಿರ್ಲಿ ಅವನ್ಯಾವಾಗ ನನ್ನ ಫ್ರೆಂಡ್ ಆಗಿದ್ದು?' ಎಂದು ಪ್ರಶ್ನೆ ಎಸೆದೆ.

'ಮತ್ತೇ? ಅವನನ್ನ, ಈ ದೇಶವನ್ನ ನಂಬಿಕೊಂಡು ಬಂದಿದ್ದೀರಲ್ಲಾ, ಅವನು ನಿಮ್ಮ ಸ್ನೇಹಿತನಾಗ್ದೇ ಇನ್ನೇನ್ ವೈರಿ ಆಗ್ತಾನಾ?' ಎಂದು ನನ್ನನ್ನೇ ಕೆಣಕಿದ.

'ಏ, ಬುಷ್ಷನ್ನ ನಂಬಿಕೊಂಡು ನಾವ್ ಬರಲಿಲ್ಲ, ಅದ್ರಲ್ಲೂ ನಾನು ಈ ದೇಶಕ್ಕೆ ಬರೋವಾಗ ಕ್ಲಿಂಟನ್ನು ಇದ್ದ ಕಾಲ, ಎಲ್ಲವೂ ಸುಭಿಕ್ಷವಾಗಿತ್ತು, ಒಂದು ರೀತಿ ರಾಮರಾಜ್ಯ ಅಂತಾರಲ್ಲಾ ಹಾಗಿತ್ತು, ಇವನು ಅದೆಲ್ಲಿಂದ ಬಂದ್ನೋ ಬಂದ ಘಳಿಗೇನೇ ಸರೀ ಇಲ್ಲ ನೋಡು, ಒಂದಲ್ಲ ಒಂದು ಅಲ್ಲೋಲಕಲ್ಲೋಲ ನಡೆದೇ ಇದೆ ಮೊದಲಿನಿಂದ್ಲೂ...' ಎಂದು ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

'ಸ್ವಲ್ಪ ಸುಮ್ನಿರು, ವೆಕೇಷನ್ನಿಗೆ ಹೊಂಟು ನಿಂತಿದಾನಂತೆ, ಅದೇನ್ ಬೊಗೊಳ್ತಾನೇ ಅಂತ ಕೇಳೋಣ...' ಎಂದು ಟಿವಿಯ ಧ್ವನಿಗೆ ಕಿವಿ ಹಚ್ಚಿದ. ಸೆನೆಟ್ಟೂ ಕಾಂಗ್ರೇಸ್ಸೂ ಈಗಾಗಲೇ ಸಮರ್ ರಿಸೆಸ್‌ಗೆಂದ್ ಬಂದ್ ಆದ ಹಾಗೆ ಕಾಣ್ಸುತ್ತೆ, ಈಗ ಪ್ರೆಸಿಡೆಂಟೂ ವೆಕೇಷನ್ನಿಗೆ ಹೊರಟು ನಿಂತಿರೋದನ್ನ ಕೊನೇ ಆಪರ್ಚುನಿಟಿ ಎಂದು ಬೇಕಾದಷ್ಟು ಜನ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಕುಕ್ಕರುಗಾಲಿನಲ್ಲಿ ಕುಳಿತಿದ್ದರು. ಇನ್ನೊಂದ್ ವರ್ಷ ಚಿಲ್ಲರೆ ಅವಧಿಯಲ್ಲಿ ತನ್ನ ರಾಜ್ಯಭಾರ ಹೊರಟು ಹೋಗುತ್ತೇ ಅನ್ನೋ ನೋವಿಗೋ ಏನೋ ಬುಷ್ಷ್ ಇತ್ತೀಚೆಗೆ ಬಹಳ ಫಿಲಾಸಫಿಕಲ್ ಆದ ಹಾಗೆ ಕಾಣುತ್ತಿದ್ದ ಹಾಗನ್ನಿಸಿತು. ನಾನು ಪ್ರೆಸಿಡೆಂಟ್ ಹೇಳೋ ಮಾತುಗಳಿಗೆ ಅಷ್ಟೊಂದು ಗಮನ ಕೊಡದೇ ಬೇರೇನೋ ಯೋಚಿಸ್ತಾ ಇರೋದನ್ನ ಗಮನಿಸಿದ ಸುಬ್ಬ,

'ಅದ್ಸರಿ, ನನಗೆ ಮೊನ್ನೇ ಇಂದಾ ಈ ಪ್ರಶ್ನೆ ತಲೇ ಒಳಗೆ ಕೊರೀತಾ ಇದೆ, ನಿನಗೇನಾದ್ರೂ ಉತ್ತರಗೊತ್ತಿರಬಹುದು...' ಎಂದ.

ನಾನು ಬರೀ, 'ಹ್ಞಾ...' ಎಂದು ಸುಬ್ಬನ ಕಡೆಯೇ ಪ್ರಶ್ನಾರ್ಥಕವಾಗಿ ನೋಡಿದೆ.

ಸುಬ್ಬ ಮುಂದುವರೆಸಿದ, 'ಈ ಅಮೇರಿಕದೋರು ಇರಾಕ್ ಆಕ್ರಮಣ ಮಾಡೋದಕ್ಕೆ ಮೊದಲು ಅಲ್ಲಿ ಸದ್ದಾಮನ ಪ್ರೆಸಿಡೆಂಟ್ ರೂಲ್ ಇತ್ತೋ ಇಲ್ವೋ?'

'ಹೌದು, ಇತ್ತು'.

'ಆಂದ್ರೆ ಅಧ್ಯಕ್ಷೀಯ ಪದ್ದತಿ ಸರ್ಕಾರ ಅನ್ನು...'

'ಅದನ್ನ ಅಧ್ಯಕ್ಷೀಯ ಪದ್ದತಿ ಅನ್ನಬಹುದು, ಆದ್ರೆ ಪ್ರಜಾಪ್ರಭುತ್ವವೋ ಹೌದೋ ಅಲ್ವೋ ಗೊತ್ತಿಲ್ಲ, ಚುನಾವಣೆಗಳು ಆಗ್ತಿದ್ವು, ಆದ್ರೆ ಸದ್ದಾಮನೇ ಗೆಲ್ತಿದ್ದ!'

'ಇರ್ಲಿ, ಅಲ್ಲಿ ಅಧ್ಯಕ್ಷೀಯ ಪದ್ಧತಿ ಇತ್ತು ಅಂತ ಇಟಗೋ, ಇಲ್ಲೂ ಅಧ್ಯಕ್ಷೀಯ ಮಾದರಿ ಸರ್ಕಾರಾನೇ ಇರೋದು ಯಾವಾಗ್ಲೂ...'

ಇವನು ತನ್ನ ಈ ಲಾಜಿಕ್ಕಿನಿಂದ ಎಲ್ಲಿಗೆ ಹೊರಟವನೆ ಎಂದು ಹೇಳಲು ಬರದೇ ನಾನು ಈ ಬಾರಿ ಸುಮ್ಮನಿದ್ದವನನ್ನು ತಿವಿದು,

'ಹೌದೋ ಅಲ್ವೋ ಹೇಳು?' ಎಂದು ಒತ್ತಾಯಿಸಿದ.

'ಹೌದು' ಎನ್ನದೇ ಬೇರೆ ವಿಧಿ ಇರಲಿಲ್ಲ.

'ಸರಿ ಹಂಗಾದ್ರೆ, ಇರಾಕ್‍ನ ಆಕ್ರಮಣ ಮಾಡಿ, ಅಲ್ಲಿ ಹಳೇ ಸರಕಾರ ತೆಗೆದು ಹೊಸ ಸರ್ಕಾರ ಇಟ್ಟಾಗ ಅಲ್ಲಿ ಪ್ರಧಾನ ಮಂತ್ರಿ ವ್ಯವಸ್ಥೇನಾ ಯಾತಕ್ಕ್ ತಂದ್ರೂ ಅಂತಾ?'

'...'

'ಅಲ್ಲಪಾ, ಈ ನೂರಿ ಅಲ್ ಮಲ್ಲಿಕೀ, ಅಲ್ಲಿ ಪ್ರಧಾನ್ ಮಂತ್ರೀ ತಾನೆ? ಪ್ರಪಂಚಕ್ಕೆ ಡೆಮಾಕ್ರಸಿನಾ ಹಂಚೋಕ್ ಹೋಗೋರು ತಮ್ಮ ವ್ಯವಸ್ಥೇನೇ ಇನ್ನೊಬ್ರಿಗೂ ಯಾಕ್ ಕೊಡೋದಿಲ್ಲಾ? ಅದರ ಬದಲಿಗೆ ಇವರಿಗೇ ಗೊತ್ತಿರದ, ಇನ್ನು ಅವರಿಗೂ ಗೊತ್ತಿರದ ಪ್ರಧಾನಮಂತ್ರಿ ವ್ಯವಸ್ಥೇನಾ ಯಾತಕ್ ತಂದ್ರೂ ಅಂತ ನಿನಗೆನಾದ್ರೂ ಗೊತ್ತಾ? ಇದೇ ಪ್ರಶ್ನೇ ಸುಮಾರ್ ದಿನದಿಂದ ತಲೇ ಕೊರಿತಾನೇ ಇದೇ ನೋಡು' ಎಂದು ಸುಮ್ಮನಾದ ನನ್ನನ್ನು ಉತ್ತರಕ್ಕೆ ಪೀಡಿಸುವ ಒಂದು ನೋಟ ಬೀರಿ.

'ನಂಗೊತ್ತಿಲ್ಲ, ನನ್ನ ಊಹೆ ಪ್ರಕಾರ, ಎಲ್ಲಿ ಸಮ್ಮಿಶ್ರ ಸರಕಾರ ಇರುತ್ತೋ ಅಲ್ಲೆಲ್ಲಾ ಪ್ರಧಾನಮಂತ್ರಿ ಸಿಷ್ಟಮ್ಮೇ ವರ್ಕ್ ಆಗೋ ಹಂಗ್ ಕಾಣುತ್ತೇ...' ಎಂದು ನನಗೆ ತೋಚಿದ್ದನ್ನು ಹೇಳಿದೆ. ಅದಕ್ಕವನು, 'ಅದೆಲ್ಲಾ ಬ್ಯಾಡಾ, ಈ ನನ್ ಮಕ್ಳು ತಮಿಗೆ ಯುನಿಕ್ಸ್ ಆಪರೇಟಿಂಗ್ ಸಿಷ್ಟಂ ಇಟಗೊಂಡು, ಇನ್ನೊಬ್ರಿಗೆ ವಿಂಡೋಸ್ ಹಂಚ್‌ತಾರಲ್ಲಾ ಅದಕ್ಕೇನ್ ಅನ್ನಣ?' ಎಲ್ಲಿಂದ ಎಲ್ಲಿಗೋ ಒಂದು ಕನೆಕ್ಷನ್ ಮಾಡಿ ಮಾತನಾಡಿದ.

'ಎಲಾ ಇವನಾ, ನಿನಗೇನು ಗೊತ್ತೋ ಆಪರೇಟಿಂಗ್ ಸಿಷ್ಟಂ ಬಗ್ಗೆ?' ಎಂದು ವಿಶ್ವಾಸದ ನಗೆ ಬೀರಿದರೂ, ಅವನ ತುಲನೆಯನ್ನು ಪೋಷಿಸದೇ, 'ಒಂದ್ ದೇಶವನ್ನು ಅತಂತ್ರ ಮಾಡಿದೋರಿಗೆ ಅಲ್ಲಿ ಏನು ನಡೆಯುತ್ತೇ ಅನ್ನೋದು ಗೊತ್ತಿರದೇ ಇದ್ದೀತೇನು...ಅದಿರ್ಲಿ, ವಿಂಡೋಸ್‌ನಲ್ಲಿ ಏನ್ ಸಮಸ್ಯೆ ಇದೇ?' ಎಂದೆ.

'ಏನೋ ಅಲ್ಪಾ ಸೊಲ್ಪಾ ತಿಳಕಂಡೀದೀನಿ, ಅಲ್ಲೀ ಇಲ್ಲೀ ಓದಿ...ವಿಂಡೋಸ್ ನಲ್ಲಿ ಬರೀ ಬಗ್ಸ್ ಅಂತೇ...ದೊಡ್ಡ ದೊಡ್ಡ ಕಾರ್ಪೋರೇಷನ್ನಿನ ಸರ್ವರುಗಳೆಲ್ಲಾ ಯುನಿಕ್ಸ್ ಬೇಸ್ಡ್ ಸಿಷ್ಟಂ‍ಗಳಂತೆ...ಅಂತ ಎಲ್ಲೋ ಓದಿದ ನೆನಪು, ಅದಕ್ಕೇ ಅಂದೆ' ಎಂದು ಸಮಜಾಯಿಷಿ ನೀಡಿದ.

'ಪ್ರಧಾನಮಂತ್ರಿ ವ್ಯವಸ್ಥೆಯಲ್ಲಿ ತೊಂದ್ರೆ ಇದೇ ಅಂತ ಜನರಲೈಜ್ ಮಾಡಕ್ ಆಗಲ್ಲಾ, ಯುಕೆ ನಲ್ಲಿ ಹತ್ತು ವರ್ಷಾ ನಡೀಲಿಲ್ವೇ ಬ್ಲೇರ್‌ನ ಆಡಳಿತ? ಇನ್ನು ಇಂಡಿಯಾದವ್ರ ಕಥೆ ಬಿಡೂ ಅಲ್ಲಿ ಬರೋ ಮಂತ್ರಿ ಮಹೋದಯ್ರನ್ನ ಲೆಕ್ಕ ಇಟ್‌ಗಳಕೆ ಕೈ ಬೆರಳುಗಳು ಸಾಲಲ್ಲ!

ಸುಬ್ಬ, 'ಏನೋ...ಈ ವಯ್ಯಾ ವೆಕೇಷನ್ನ್ ಇಂದ ಬರೋ ಹೊತ್ತಿಗೆ ಇನ್ನೊಂದ್ ರಾಮಾಯ್ಣ ಆಗ್ದೇ ಇದ್ರೆ ಸಾಕು...' ಎಂದು ರಾಗ ಎಳೆದು ಮತ್ತೆ ಬುಷ್ಷನ ಕಾನ್‌ಫರೆನ್ಸ್ ಕಡೆಗೆ ಕಿವಿಕೊಟ್ಟ, ನಾನು ಅಡುಗೆಮನೆ ಕಡೆಗೆ ನಡೆದೆ.

Friday, August 10, 2007

ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

’ಎಲ್ಲಾ ವರ್ಚುವಲ್ ಬದುಕು - ಛೇ!’ ಎಂದು ನನಗೇ ಕೇಳುವ ಹಾಗೆ ನಾನೇ ಹೇಳಿಕೊಂಡೆ...ನಾವು ಮಾತನಾಡೋದು ಯಾವಾಗಲೂ ಇನ್ನೊಬ್ಬರ ಜೊತೆಗೇ ಎಂದು ಏನಾದರೂ ಕಾನೂನು ಇದೆಯೇ, ಮೈಥಿಲಿ ಶರಣ್ ಗುಪ್ತರ ಪಂಚವಟಿಯ ಲಕ್ಷಣ ತನ್ನಷ್ಟಕ್ಕೇ ತಾನು ಮಾತನಾಡಿಕೊಳ್ಳುತ್ತಿದ್ದನಂತೆ - ಹಾಗೂ ಈ ಜಗತ್ತಿನ ಹುಚ್ಚರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಾರೆ ಎನ್ನೋದನ್ನ ನಿಮ್ಹಾನ್ಸ್‌ನ ಹುಚ್ಚರ ವಿಭಾಗದಲ್ಲಿ ಯಾವತ್ತೋ ನೋಡಿ ನಕ್ಕು ಸುಮ್ಮನಾಗಿದ್ದೇನೆ, ಅಲ್ಲಿ ನಾನೇಕೆ ಹೋಗಿದ್ದೆ ಅನ್ನೋದು ದೊಡ್ಡ ಕಥೆ, ಇನ್ನೊಂದು ದಿನಕ್ಕಿರಲಿ.

ಬ್ಯಾಂಕಿನವರು ಮನಸ್ಸಿಗೆ ಬಂದಂತೆ ಏನೇನೋ ಚಾರ್ಜ್ ಮಾಡಿಕೊಂಡು ನೂರಾ ಎಂಭತ್ತು ಡಾಲರ್ರುಗಳನ್ನು ನನ್ನ ಕ್ರೆಡಿಟ್ ಕಾರ್ಡಿನ ಅಕೌಂಟಿನಲ್ಲಿ ಉಜ್ಜಿಕೊಂಡಿದ್ದನ್ನು ನೋಡಿ ಮೈ ಉರಿದು ಹೋಯಿತು. ಕೂಡಲೇ ಕಷ್ಟಮರ್ ಸರ್ವೀಸ್ ವಿಭಾಗಕ್ಕೆ ಫೋನಾಯಿಸಿ ಕೇಳಿದರೆ ಆ ಕಡೆಯಿಂದ ಕೇಳಿಸಿದ ಸ್ವರದಲ್ಲಿ ಯಾವ ಕಳಕಳಿಯಾಗಲಿ, ಕಕ್ಕುಲತೆಯಾಗಲೀ ಇರಲಿಲ್ಲ - ಏಕಿರಬೇಕು? ಎಲ್ಲವೂ ಕಂಪ್ಯೂಟರ್ ನಡೆಸಿದಂತೆ ನಡೆಯುವ ಬಿಸಿನೆಸ್ ರೂಲ್ಸ್‌ಗಳು, ಅವರೋ ನಮ್ಮಂಥವರ ಸಿಟ್ಟಿಗೆ ಆಹಾರವಾಗಬೇಕಾಗಿ ಬಂದ ಬಲಿಪಶುಗಳು, ಅದೂ ಕೇವಲ ನಮ್ಮ ಮಾತಿಗೆ ಮಾತ್ರ ಸಿಕ್ಕುವ ಹಾಗೆ ಅದ್ಯಾವುದೋ ಪ್ರಪಂಚದ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ...ಇಂದಿನ ವರ್ಚುವಲ್ ಪ್ರಪಂಚದಲ್ಲಿ ನಾನು ಭಾರತದ ನಮ್ಮೂರಿನ ಪಕ್ಕದ ಊರಿನ ಹುಡುಗ/ಹುಡುಗಿಯೊಂದಿಗೆ ಮಾತನಾಡುತ್ತಿದ್ದರೂ ಅವರೂ ಬೇರೆ, ನಾವೂ ಬೇರೆ. ಸಿಟ್ಟಿನಲ್ಲಿ ಯಾರು ಏನು ಸಾಧಿಸಿದ್ದಾರೆ ಹೇಳಿ? ಎಲ್ಲವನ್ನೂ ನಯವಾಗಿ ವಿವರಿಸಿದೆ, ನೂರಾ ಎಂಭತ್ತು ಡಾಲರುಗಳನ್ನು ತಪ್ಪಾಗಿ ಚಾರ್ಜ್ ಮಾಡಿದ್ದೀರಿ, ಹಿಂತಿರುಗಿಸಿ ಎಂದು ಕೇಳಿಕೊಂಡೆ. ಹತ್ತು ನಿಮಿಷ ಕಥೆ ಕೇಳಿದ ಚೆಲುವೆ ಮರುಕಪಟ್ಟವಳಂತೆ ಕಂಡುಬಂದರೂ, ’ಕ್ಷಮಿಸಿ, ಚಾರ್ಜ್ ಅನ್ನು ಹಿಂತಿರುಗಿಸುವ ಅಧಿಕಾರ ನನಗಿಲ್ಲ, ಮತ್ತೊಬ್ಬರಿಗೆ ಟ್ರಾನ್ಸ್‌ಫರ್ ಮಾಡುತ್ತೇನೆ...’ ಎಂದು ಕರೆಯನ್ನು ಇನ್ನೊಬ್ಬರಿಗೆ ಟ್ರಾನ್ಸ್‌ಫರ್ ಮಾಡಿದಳು. ಆಗ ಹೊಳೆಯಿತು, ನನ್ನ ತಾಳ್ಮೆ ಅಮೇರಿಕಕ್ಕೆ ಬಂದ ಮೇಲೆ ಏಕೆ ಹೆಚ್ಚಾಗಿದೆ ಎಂಬುದಾಗಿ! ಇಷ್ಟು ಹೊತ್ತು ಎಲ್ಲವನ್ನು ಹತ್ತು ನಿಮಿಷಗಳ ಕಾಲ ವಿಷದ ಪಡಿಸಿದ ಮೇಲೆ ಮತ್ತೆ ಅದೇ ರಾಗವನ್ನು ಇನ್ನೊಬ್ಬರ ಮುಂದೆ ಹಾಡಬೇಕಾಗಿ ಬಂದುದು. ಮತ್ತೆ ಆಲಾಪನೆಯೊಂದಿಗೆ ಶುರುಮಾಡಿದೆ, ಈ ಚೆಲುವೆ, ನಡುನಡುವೆ ’ಹ್ಞೂ...’ ಎನ್ನುತ್ತಿದ್ದಳಾದರೂ ಆಕೆ ನನ್ನ ಕಥೆಯನ್ನು ಕೇಳುತ್ತಿದ್ದ ಬಗ್ಗೆ, ನನ್ನ ವಿಚಾರದಲ್ಲಿ ಕಳಕಳಿಯ ವಿಶ್ವಾಸ ತೋರುತ್ತಿರುವುದರ ಬಗ್ಗೆ ಯಾವುದೇ ನಂಬಿಕೆಯೂ ನನಗಿರಲಿಲ್ಲವಾದ್ದರಿಂದ ನನ್ನ ಧ್ವನಿಯಲ್ಲಿ ಯಾವುದೇ ಭಾವೋದ್ವೇಗವೂ ಕಾಣಿಸಿಕೊಳ್ಳಲಿಲ್ಲ. ಅದರ ಬದಲಿಗೆ ಇದೇ ರೀತಿ ಹತ್ತು ಹದಿನೈದು ಜನರ ಮುಂದೆ ನನ್ನ ಕಥೆಯನ್ನು ತೋಡಿಕೊಂಡು, ಹತ್ತು ಇ-ಮೇಲ್‌ಗಳನ್ನು ಬರೆದು ನನ್ನ ತತ್ವವನ್ನು ಸಾಧಿಸಿಕೊಳ್ಳುವುದರ ಬಗ್ಗೆ ಮನಸ್ಸು ಆಲೋಚಿಸಿಕೊಂಡು ಮುಂದೆ ಬರಬಹುದಾದ ಕಷ್ಟಗಳನ್ನು ನೆನೆದು ಸಂಯಮದಿಂದಿತ್ತು. ತತ್ವದ ವಿಚಾರಕ್ಕೆ ಬಂತೆಂದರೆ, ಅದೂ ನನ್ನಂಥ ಮೂರ್ಖರ ವಿಚಾರದಲ್ಲಿ ಹಣದ ಸಂಖ್ಯೆಗೆ ಯಾವುದೇ ಮಹತ್ವವಿರದು, ಏನಾದರೂ ಮಾಡಿ ನನ್ನದನ್ನು ಸಾಧಿಸಿಕೊಂಡು ಅವರು ನನ್ನ ಹಣವನ್ನು, ಅದೂ ತಪ್ಪಾಗಿ ಚಾರ್ಜ್ ಮಾಡಿದ ಹಣವನ್ನು ಹಿಂತಿರುಗಿಸಬೇಕು. ಅಷ್ಟೇ! (ಈ ತತ್ವದ ಕುದುರೆ ಸವಾರಿ, ನನ್ನ ಬಲವಾದ ಅಂಶವೆನ್ನುವುದಕ್ಕಿಂತಲೂ, ನನ್ನ ವೀಕ್‌ನೆಸ್ ಎಂದರೇ ಸರಿ.)

ಸದ್ಯ, ಎರಡನೇ ಬಾರಿ ಕಥೆಯನ್ನು ಹೇಳುವಲ್ಲಿನ ಆರ್ತನಾದಕ್ಕೇ ಈ ಚೆಲುವೆ ಕರಗಿದಳು ಎಂದು ಕಾಣುತ್ತೆ...ನನ್ನ ಹಣವನ್ನು ಹಿಂತಿರುಗಿಸುತ್ತೇನೆ, ಎಂದು ಭರವಸೆಯನ್ನು ನೀಡಿಯೇ ಬಿಟ್ಟಳು...ಅಬ್ಬಾ, ದೊಡ್ಡದೊಂದು ಮೋಡ ಕರಗಿ ಮಳೆ ಸುರಿದು ಮತ್ತೆ ಬೆಳಗು ಬಂದಂತಾಯಿತು.

ಆದರೆ, ಈ ವರ್ಚುವಲ್ ಪ್ರಪಂಚದ ಯಾರಿಗೂ ಕಾಣದೇ ನಡೆದ, ನಡೆಯುವ ಟ್ರಾನ್ಸಾಕ್ಷನ್ನುಗಳಿಗಾಗಲೀ, ಸಂಭಾಷಣೆಗಳಿಗಾಗಲಿ ಅವುಗಳ ಪರಿಣಾಮವೇನೂ ತಟ್ಟದು. ಬರೀ ಸೋಮವಾರದಿಂದ-ಶುಕ್ರವಾರದವರೆಗೆ ಮುಂಜಾನೆ ಒಂಭತ್ತರಿಂದ ಸಂಜೆ ಐದರವರೆಗೆ ಗ್ರಾಹಕರ ಕಷ್ಟಗಳನ್ನು ಅರಿಯುವಂತೆ ನಟಿಸುವ ಲಲನಾಮಣಿಗಳನ್ನು ನಾನು ನನ್ನ ಆಫೀಸಿನ ಸಮಯದಲ್ಲೇ ಮಾತನಾಡಿಸಬೇಕು. ಅದರಿಂದ ಅವರ ಕೆಲಸ ನಡೆಯಿತು, ನನ್ನ ವೈಯುಕ್ತಿಕ ಕೆಲಸ ಪೂರೈಸಿತು. ಆದರೆ ಹನ್ನೆರೆಡು ಘಂಟೆಗೆ ತಯಾರಾಗಬೇಕಾಗಿದ್ದ ವರದಿ ’ತಯಾರಾಯ್ತಾ?’ ಎಂದು ಒಂದು ಘಂಟೆ ಮೊದಲೇ ಕೇಳುವ ಬಾಸಿಗೆ ಏನು ಹೇಳಲಿ? ಯಾರೋ ನೆಟ್ಟು ಬೆಳೆಸಿದ ಬಿಸಿನೆಸ್ ರೂಲ್ಸ್‌ಗಳಿಗೆ ಆಹಾರವಾಗಬೇಕಾಗಿ ಬಂದ ಕ್ಯಾಪಿಟಲ್ ಪ್ರಪಂಚದ ಸರಕುಗಳಿಗೆ ನೊಂದ ನನ್ನ ಅರ್ಧ ಘಂಟೆ ಸಮಯವನ್ನು ಹಿಂತಿರುಗಿಸುವವರಾರು? ಕ್ಯಾಪಿಟಲ್ ಪ್ರಪಂಚದ ಆರೋಪಗಳಿಗೆ ನೀವು ತಕ್ಕನಾಗಿ ಅಥವಾ ಪ್ರತಿಯಾಗಿ ಧ್ವನಿಯನ್ನು ಹೊರಡಿಸದೇ ಹೋದಲ್ಲಿ ನಿಮ್ಮ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಯೂನಿವರ್ಸಲ್ ಒಪ್ಪಂದವನ್ನು ಜಗತ್ತಿಗೆ ಹೇಳಿಕೊಟ್ಟವರು ಯಾರು? ನನ್ನ ಅರ್ಧ ಘಂಟೆ ಹಾಳಾಗಿ ಹೋಯಿತು, ಮನಸ್ಸು ನೊಂದಿತು, ಯಾರಿಗೂ ಬೇಡದ, ಕಂಪನಿಗಳಿಗೆ ಬೇಕಾದ ನೂರಾ ಎಂಭತ್ತು ಡಾಲರ್ ಅನ್ನು ’ಉಳಿಸಿದೆ’ ಎಂದು ಹೇಳುವಂತೆಯೂ ಇಲ್ಲದಂತಾಗಿ ಹೋಯಿತು...ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?

***

ಕ್ಯಾಪಿಟಲ್ ಪ್ರಪಂಚದ ದೊಡ್ಡ ಕಂಪನಿಯ ಏಣಿಯ ಕಣ್ಣುಗಳಲ್ಲಿ ಗೋಡೆಗೆ ಬಲವಾಗಿ ಒರಗಿಕೊಂಡಿರುವ ನನ್ನಂತಹವರ ಸಹೋದ್ಯೋಗಿಗಳನ್ನು ಬಿಟ್ಟು ಬೇರೆ ಬದುಕೇನಿದೆ? ಎಂದು ಬಲವಾದ ಯೋಚನೆ ಬಿಸಿಲು ಮಳೆಯಲ್ಲಿ ಹುಟ್ಟುವ ಕಾಮನಬಿಲ್ಲಿನಂತೆ ಅದ್ಯಾವುದೋ ಮನದ ಮೂಲೆಯಲ್ಲಿ ಎದ್ದು ನಿಂತಿತು. ಆಫೀಸಿನ ಬದುಕಿನ ಹೊರತಾಗಿ ನನ್ನ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟೇ ಸಂಬಂಧಗಳು, ಕೆಲವು ಇನ್ನೂ ಪೂರ್ಣ ಹೆಸರು ಗೊತ್ತಿರದವು, ಇನ್ನು ಕೆಲವು ಹೆಸರು ಗೊತ್ತಿದ್ದರೂ ಮುಖ ಪರಿಚಯವಿಲ್ಲದವು. ಆಗಾಗ್ಗೆ ವರ್ಚುವಲ್ ಪ್ರಪಂಚದ ಹರಿಕಾರರಂತೆ ಸಂದೇಶಗಳ ರೂಪದಲ್ಲಿ ಇನ್ಸ್ಟಂಟ್ ಮೆಸ್ಸೇಜುಗಳಾಗಿ ಬಂದು ಕಾಡುವವು. ನನ್ನ ಸ್ಪಂದನ, ಸಹಪಯಣವೇನಿದ್ದರೂ ಇಂಥವುಗಳ ಕೋರಿಕೆಗಳನ್ನು ಪೂರೈಸುವಲ್ಲಿ ಮಾತ್ರ ಸೀಮಿತವಾಗಿ ಹೋಗಿರುವುದೇ ಹೆಚ್ಚು. ನಿಮಗೆಲ್ಲರಿಗೂ ಆಗುವಂತೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಮದುವೆಯಾಗಲೀ, ಆತ್ಮೀಯ ಸ್ನೇಹಿತನ ಕಷ್ಟನಷ್ಟಗಳಿಗೆ ಸ್ಪಂದಿಸುವ ಧಾರ್ಮಿಕತೆಯಾಗಲೀ ಅದರಲ್ಲಿ ಇಲ್ಲ. ಇವತ್ತಿದ್ದವರು ನಾಳೆ ಇಲ್ಲವೆಂದರೂ ಏನೂ ಬದಲಾವಣೆಯಾದ ಹಾಗೆ ಕಾಣೋದಿಲ್ಲ.

ಯಾರನ್ನು ಸ್ನೇಹಿತರೆಂದು ಕರೆಯೋದು, ಸ್ನೇಹಿತರಿಗೆ ಇರಬೇಕಾದ ಕ್ವಾಲಿಫಿಕೇಷನ್ ಏನು? ಎಲ್ಲರೂ ಒಂದೇ ನೆಲೆಗಟ್ಟು, ಮನಸ್ಥಿತಿಯವರಾದರೆ ಅಲ್ಲಿ ಭಿನ್ನತೆ ಹೇಗೆ ಹುಟ್ಟಿ ಬೆಳೆಯುತ್ತದೆ? ಭಿನ್ನತೆ ಹುಟ್ಟಿ ಬೆಳೆಯದಿದ್ದಲ್ಲಿ, ವ್ಯತಿರಿಕ್ತ ಮನಸ್ಥಿತಿ ನಿರ್ಮಾಣವಾಗದಿದ್ದಲ್ಲಿ ಭಾಂದವ್ಯ ಬಂಜರುಭೂಮಿಯಾಗದಂತಿರುವುದಕ್ಕೆ ಏನು ಮಾಡುವುದು?

ಮಾಹಿತಿ ಜಾಲ, ಇಂಟರ್‌ನೆಟ್ ಸೂಪರ್‌ಹೈವೇ, ಮುಂತಾದ ಅಲ್ಟ್ರಾ ಮಾಡರ್ನ್ ಟೆಕ್ನಾಲಜೀ ಏನೇ ಬಂದರೂ ನಮ್ಮ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಸಣ್ಣ ಗೂಡಿನ ಚಿಕ್ಕ ಪಕ್ಷಿಯ ಧ್ವನಿಯಾಗಿ ಹೋಗಿರುವುದೇ ಹೆಚ್ಚು. ಈ ಹಕ್ಕಿಯ ರೆಕ್ಕೆಗಳು ಚಿಕ್ಕವು ಬಾನು ಮಿಗಿಲಾಗಿದ್ದರೇನಂತೆ ಹಾರಲು ಶಕ್ತಿ ಇಲ್ಲವಲ್ಲಾ...ಶಕ್ತಿ ಇದ್ದರೇನಂತೆ ಹಾರಲು ದಿಕ್ಕುಗಳು ಬೇಕಲ್ಲಾ. ಈ ಹಕ್ಕಿಯ ಕಿರಿದಾದ ಧ್ವನಿಯಲ್ಲಿನ ಸಂದೇಶಗಳೂ ಹೆಚ್ಚುಹೆಚ್ಚು ದೂರದವರೆಗೆ ಪಸರಿಸಲಾರದು. ಸಾವಿರದ ಒಂಭೈನೂರರ ಮೊದಲಲ್ಲಿ ಯಾವ ತಂತ್ರಜ್ಞಾನವಿಲ್ಲದಿದ್ದರೂ ಭಾರತದ ಉದ್ದಗಲಕ್ಕೆ ಸ್ವಾತಂತ್ರದ ಫೂರಕ ಸಂದೇಶಗಳು ಅದು ಹೇಗೆ ಹಬ್ಬುತ್ತಿದ್ದವು? ಇಂದಿನ ಮಾಹಿತಿ ಜಾಲದಲ್ಲಿ ನಮ್ಮ ಸಂದೇಶಗಳೇಕೆ ನರಸತ್ತವುಗಳಾಗಿ ಹೋಗುತ್ತವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಯಾವುದಾದರೂ ಋಷಿಗಳಿಗೆ ಮಾತ್ರ ಸಾಧ್ಯ. ಒಪ್ಪಿಕೊಳ್ಳೋಣ, ನಾವು ಬದಲಾಗಿದ್ದೇವೆ ಎನ್ನುವ ಸತ್ಯವನ್ನ. ನಮಗೆ ಅಂದು ಮುಖ್ಯವಾದದ್ದು ಇಂದು ನಿಷ್ಪ್ರಯೋಜಕ ಎಂಬ ಬೆಳವಣಿಗೆಯಾಗಿರುವುದನ್ನು ಸಹಜ ಎಂದು ಹೇಳಿ ಸುಮ್ಮನಾಗುವುದೇ ಒಳ್ಳೆಯದು.

Wednesday, August 08, 2007

ಒಮ್ಮೆ ಸುರಿಯೋಕ್ ಹಿಡೀತೂ ಅಂತಂದ್ರೆ....

'...ಇವತ್ತಾದ್ರೂ ಬೇಗ್ನೇ ಮನೇಗ್ ಹೋಗ್ಬೇಕು...' ಎಂದು ವಿಂಡ್‌ಶೀಲ್ಡ್‌ನ ಮೂಲಕ ಕಣ್ಣಿಗೆ ಕಾಣುವ ರಸ್ತೆಗಿಂತಲೂ ಯಾವಾಗಲೂ ಮುಂದೆಯೇ ಇರುವ ಮನಸ್ಸನ್ನು 'ಬುಶ್ಶ್...' ಎಂದು ಒಡೆದು ಹೋದ ಟಯರ್ ಸದ್ದು ಬ್ರೇಕ್ ಹಾಕಿ ಹಿಡಿದು ನಿಲ್ಲಿಸಿದಂತಾಗಿ ಯಾವಾಗಲೂ ಓಡುತ್ತಿರುವ ಮನಸ್ಸಿನ ಹಿಡಿತಕ್ಕೆ ಒಂದು ಕ್ಷಣ ಸಿಕ್ಕು ಬೆನ್ನು-ಕುತ್ತಿಗೆ ಮುಂದೆ ಬಗ್ಗಿದಂತಾಯಿತು. ರಸ್ತೆಯ ಬದಿಯಲ್ಲಿ ಯಾರದ್ದೋ ಪ್ರೈವೇಟ್ ಡ್ರೈವ್‌ವೇ ಇದ್ದುದರಿಂದ ಕಾರನ್ನು ಬದಿಗೆ ನಿಲ್ಲಿಸಿ ಹಿಂದಿನಿಂದ ಅಷ್ಟೇ ವೇಗದಲ್ಲಿ ಬರುತ್ತಿದ್ದ ಉಳಿದ ಕಾರುಗಳಿಂದ ಆ ಮಟ್ಟಿಗೆ ತಪ್ಪಿಸಿಕೊಂಡಂತಾಯಿತು. ಆದರೂ ಈ ಒಡೆದ ಟಯರನ್ನು ಹೇಗೆ ಸರಿಪಡಿಸುವುದು? ಯಾರನ್ನು ಕರೆಯುವುದು, ಹೇಗೆ ಕರೆಯುವುದು...ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಟ್ಟುವುದರ ಬದಲು ಅವುಗಳ ಬೆನ್ನ ಹಿಂದೆಯೇ ಏಳುತ್ತಿದ್ದ ಮತ್ತಷ್ಟು ಪ್ರಶ್ನೆಗಳು ನನ್ನನ್ನು ಇನ್ನಷ್ಟು ಕಂಗಾಲಾಗಿಸಿದವು.

ಸಮಯ: ಶುಕ್ರವಾರ ಸಂಜೆ ಐದು ಘಂಟೆ, ಮೂರು ನಿಮಿಷ...ನಾನು ಆರು ಘಂಟೆಯೊಳಗೆ ಡೇ ಕೇರ್ ತಲುಪಬೇಕು.

ಪರಿಸ್ಥಿತಿ: ಪ್ಯಾಸೆಂಜರ್ ಬದಿಯ ಮುಂದಿನ ಟಯರ್ ಒಡೆದು ಅದರಲ್ಲಿ ನನ್ನ ಕೈ ತೂರುವಷ್ಟು ದೊಡ್ಡ ತೂತಾಗಿದೆ. ಹಿಂದಿನ ಟಯರ್ ಏನಾಗಿದೆಯೋ ಎಂದು ಈ ವರೆಗೂ ನೋಡಿರದ ಉದಾಸೀನತೆ. ಇನ್ನು ಸ್ವಲ್ಪ ಹೊತ್ತಿನಲ್ಲೇ ಪ್ರಪಂಚದ ಕೊಳೆಯನ್ನೆಲ್ಲಾ ತೊಳೆಯುತ್ತೇನೆ ಎಂದು ಶಪಥ ತೊಟ್ಟಿರುವ ಮಳೆ. ಇದೇ ದಿನ ರಾತ್ರಿ ವಾರಂತ್ಯವನ್ನು ಕಳೆಯಲಿಕ್ಕೋಸ್ಕರ ಮನೆಗೆ ಕುಟುಂಬ ಸಮೇತರಾಗಿ ಇನ್ನು ಕೆಲವೇ ಘಂಟೆಗಳಲ್ಲಿ ಬರುತ್ತಿರುವ ಇಬ್ಬರು ಸ್ನೇಹಿತರು. ಮನೆಯನ್ನು ಒಪ್ಪ ಓರಣವಾಗಿ - 'ಹೀಗಿಡಬೇಕು, ಹಾಗಿಡಬೇಕು' ಎಂದು ಎಲ್ಲಿಂದಲೋ ಆರ್ಡರ್ ಕೊಟ್ಟು ಹೋಗುವ ಧ್ವನಿಗಳು.

ಉಡಾಫೆಯ ಪರಮಾವಧಿ: ಸೆಲ್ ಫೋನ್ ಬ್ಯಾಟರಿ ಖಾಲಿ, ಅಕಸ್ಮಾತ್ ಬ್ಯಾಟರಿ ಇದ್ದರೂ, ಇರುವ ಪೂರ್ಣ ದಾರಿಯಲ್ಲಿ ಮಧ್ಯೆ ಕಾಡಿನ ಒಂದು ಮಡಿಕೆಯಲ್ಲಿ ಸೆಲ್ ಕವರೇಜ್ ಎಲ್ಲಿ ಇಲ್ಲವೋ ಅಲ್ಲೇ ರಸ್ತೆ ಬದಿಯ ಕಲ್ಲಿಗೆ ಟಯರ್ ಬಡಿದು ಒಡೆದು ಹೋದ ಸ್ಥಿತಿ. ಟ್ರಿಪಲ್ ಎ ಮೆಂಬರ್‍ಶಿಪ್ ಎಕ್ಸ್‌ಪೈಯರ್ ಆದದ್ದು ಮೇ ತಿಂಗಳಿನಲ್ಲಿ, ಇನ್ನೂ ರಿನ್ಯೂ ಮಾಡಿಲ್ಲ. ಕಾರಿನಲ್ಲಿ ಇರುವ ಸ್ಪೇರ್ ಟಯರ್ ಅನ್ನು ಬಿಚ್ಚಿ ಜೀವಮಾನದಲ್ಲಿ ಇದುವರೆಗೆ ನಾನೇ ಸ್ವತಃ ಹಾಕಿಲ್ಲ. ಸ್ಪೇರ್ ಟಯರಿನ ಕೀ ಅನ್ನು ಮೊನ್ನೆ ಅಷ್ಟೇ ಕಾರ್ ಕ್ಲೀನ್ ಮಾಡುವಾಗ ಗರಾಜಿನಲ್ಲಿ ತೆಗೆದಿಟ್ಟ ನೆನಪು. ಹಾಳಾದ ಸಮಯ ಬೇರೆಓಡುತ್ತಿದೆ, ಅದಕ್ಕೆ ತಕ್ಕನಾಗಿ ತಲೆ ಓಡುತ್ತಿಲ್ಲ ಏನು ಮಾಡೋದು, ಬಿಡೋದು?

ಪ್ರಯತ್ನ: ಕಾರಿನಲ್ಲಿನ ಸ್ಪೇರ್ ಟಯರನ್ನು ಬಿಚ್ಚುವ ಹವಣಿಕೆ, ಬಿಚ್ಚಿ ಮತ್ತೆ ಪುನಃ ಟಯರ್ ಹಾಕೋಣವೆಂದರೆ, ಲಗ್ ನಟ್‌ನ ಕೀ ಮನೆಯಲ್ಲೇ ಬಿಟ್ಟುಬಂದಿದ್ದೇನೆ. ಅಕ್ಕ-ಪಕ್ಕದಲ್ಲಿರುವ ಮೂರು ಮನೆಗಳ ಬಾಗಿಲನ್ನು ಬಡಿದು, ಕಾಲಿಂಗ್ ಬೆಲ್ಲನ್ನು ಕೈ ಬೆರಳು ನೋವು ಬರುವವರೆಗೆ ಅದುಮಿದರೂ ಯಾರೂ ಉತ್ತರಿಸದ ಪರಿಸ್ಥಿತಿ...ಪಾಪ ನನ್ನ ಈ ಕಷ್ಟವನ್ನು ನೋಡಲಿಕ್ಕೋಸ್ಕರ ಅವರೇಕೆ ಐದು ಘಂಟೆಗೆಲ್ಲಾ ಆಫೀಸಿನಿಂದ ಮನೆಗೆ ಬಂದಿರಬೇಕು?

ಕಾರಿಗೆ ಹಿಂತಿರುಗಿ ಬಂದು ಹತಾಶೆಯ ನೋಟವೊಂದನ್ನು ಬೀರಿ, ನಿಟ್ಟುಸಿರೊಂದನ್ನು ಬಿಟ್ಟು ಇನ್ನು ಬೇರೆ ದಾರಿಯೇ ಇಲ್ಲದೇ ಅದೇ ದಾರಿಯಲ್ಲಿ ಬರುತ್ತಿದ್ದ ಒಂದು ಕಾರನ್ನು ತಡೆದು ನಿಲ್ಲಿಸಿದೆ, ನನ್ನ ಕಣ್ಣಿಗೆ ಬಿದ್ದ ಮೊದಲನೇ ಕಾರದು. ನಿಲ್ಲಲೋ ಬೇಡವೋ ಎಂಬ ಅನುಮಾನದಿಂದ ಕಾರು ನಿಂತಿತು, ವಿಂಡ್‌ಶೀಲ್ಡ್ ಕೆಳಗೆ ಇಳಿಯಿತು - Do you need any help? ಎಂದು ಹೆಣ್ಣು ಸ್ವರವೊಂದು ಉಲಿಯಿತು. ನಾನು ಎಲ್ಲಿಂದ ಶುರುಮಾಡಿಕೊಳ್ಳಲಿ ನನ್ನ ಕಷ್ಟವನ್ನು ತೋಡಿಕೊಳ್ಳಲು ಎಂದು ಮೇಷ್ಟ್ರ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟ ಹುಡುಗ ಬೆಂಚಿನ ಮೇಲೆ ನಿಲ್ಲುವಾಗ ಹೇಳುವ ಸಮಜಾಯಿಷಿಯಂತೆ ತಡವರಿಸತೊಡಗಿದೆ.

I need to make a phone call...
I have a flat...
My battery is dead, I don't have a spare tire key, my stupidity is at its peak...

ಮುಂತಾದ ಸಾಲುಗಳು ಕಣ್ಣಮುಂದೆ ಸುಳಿದು ಹೋದವು - ಸಿನಿಮಾ ರೀಲುಗಳಲ್ಲಿ ಪ್ರಯಾಣವನ್ನು ಸೂಚಿಸೋ ಹಾಗೆ. ನನ್ನ ಪ್ರಶ್ನೆ-ಉತ್ತರ-ಸಮಜಾಯಿಷಿ-ಅಹವಾಲುಗಳು ಆರಂಭವಾಗುವ ಮುನ್ನವೇ ಆಕೆಯೇ ಹೇಳಿದಳು - 'ಇಲ್ಲಿ ಸೆಲ್ ಕವರೇಜ್ ಇಲ್ಲ, ಬೇಕು ಅಂದ್ರೆ ಅರ್ಧ ಮೈಲು ದೂರದಲ್ಲಿ ಸೆಲ್ ಕವರೇಜ್ ಇದೆ, ಅಲ್ಲಿಯವರೆಗೆ ಡ್ರಾಪ್ ಕೊಟ್ಟು, ಮತ್ತೆ ಪುನಃ ಹಿಂದೆ ತಂದು ಬಿಡುತ್ತೇನೆ...' ನೀರಿನಲ್ಲಿ ಮುಳುಗಿದವನಿಗೆ ಸಿಕ್ಕ ಹುಲ್ಲುಕಡ್ಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡು 'ಆಯಿತು' ಎಂದು ಜೋರಾಗಿ ಹೇಳಿ ಹಣೇ ಮೇಲೆ ಸುರಿಯುತ್ತಿರುವ ಬೆವರನ್ನು ಒರಿಸಿಕೊಂಡು ಮೊಟ್ಟ ಮೊದಲನೇ ಬಾರಿಗೆ ಆಗಂತುಕ-ಅಪರಿಚಿತರೊಬ್ಬರ ಕಾರಿನಲ್ಲಿ ಕುಳಿತು ಹೊರಟೆ, ಬ್ರೇಕ್ ಡೌನ್ ಆಗಿ ಬಿದ್ದ ಕಾರನ್ನು ಲಾಕ್ ಮಾಡಿ ಕೀ ಯನ್ನು ಸರಿಯಾಗಿ ಜೇಬಿನಲ್ಲಿಡಲು ಮರೆಯಲಿಲ್ಲ.

ಸೆಲ್ ಕವರೇಜ್ ಸಿಗುವ ಸ್ಥಳಕ್ಕೆ ಬಂದಾಕ್ಷಣ ಎರಡು ಕರೆಗಳನ್ನು ಮಾಡಿದೆ - ಡೇ ಕೇರ್ ಸೆಂಟರ್‌ಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ, ಅವರಿಗೆ ನಾನು ಬರುವವರೆಗೂ ಕಾಯುವಂತೆ ಕೇಳಿಕೊಂಡೆ. ಹೆಂಡತಿಗೆ ಕರೆ ಮಾಡಿ ಹೇಳಿದರೆ ಆಕೆಗೆ ಈಗ ಬಿಡುವಿಲ್ಲ ಎಂದು ಗೊತ್ತಾಯಿತಷ್ಟೇ. ಈಗ ಮತ್ತೇನು ಮಾಡುವುದು? ಕಾರಿನ ಬಳಿಗೆ ವಾಪಾಸು ಬಂದರೂ ನನ್ನ ಬಳಿ ಲಗ್ ನಟ್‌ನ ಕೀ ಇರದಿದ್ದುದರಿಂದ ಯಾರು ಬಂದರೂ ಸ್ಪೇರ್ ಬಿಚ್ಚಿ ಹಾಕಲು ಸಾಧ್ಯವಿಲ್ಲವಾದ್ದರಿಂದ ನಾನು ಮನೆಗೆ ಆದಷ್ಟು ಬೇಗ ತಲುಪಬೇಕಾಗಿದ್ದುದು ಅನಿವಾರ್ಯ. ಈ ಆಗಂತುಕ ವ್ಯಕ್ತಿ, ಅಥವಾ ಸಹಾಯಕ್ಕೆಂದು ದೇವರ ರೂಪದಲ್ಲಿ ಬಂದ ವ್ಯಕ್ತಿಯನ್ನು ಹೇಗೆ ಕೇಳುವುದು? ಏನು ಹೇಳುವುದು ಎಂದು ಯೋಚಿಸಲು ತೊಡಗಿರುವಂತೆಯೇ ಆಕೆಯೇ ನನ್ನ ಕಷ್ಟಕ್ಕೆ ಉತ್ತರ ಕೊಟ್ಟರು...

'Where do you live? if it helps, I will drop you off at your place, you can go to day care and come to this spot with your wife's car...'

ಹಿಂದೇ ಮುಂದೇ ಯೋಚಿಸದೇ ಆ ಅವಕಾಶವನ್ನು ಅದೆಷ್ಟೋ ವರ್ಷಗಳಿಂದ ಕಾದು ಕುಳಿತಿದ್ದ ಋಷಿಯ ಹಾಗೆ ಗಬಕ್ಕನೆ ಹಿಡಿದುಕೊಂಡೆ. ಆಕೆ ನನ್ನ ಮನೆಯ ಹತ್ತಿರದವರೆಗೆ ಬಿಟ್ಟು ಹೋದರು - ಥ್ಯಾಂಕ್ಸ್ ಹೇಳಲು ಪದಗಳು ಅಥವಾ ಭಾಷೆ ಸೋಲುತ್ತದೆ ಎಂದು ನನಗೆ ಅಂದಿನವರೆಗೂ ಅನುಭವವಾದದ್ದಿಲ್ಲ. ನಂತರದ್ದೆಲ್ಲ ಸಲೀಸು...ನಾವು ಮಾಡಬೇಕಾದ್ದನ್ನು ಮಾಡಿ ಕಾರನ್ನು ತೆಗೆದುಕೊಂಡು ಮನೆಗೆ ಬರುವಾಗ ರಾತ್ರಿ ಹತ್ತು ಘಂಟೆ. ಒಬ್ಬ ಸ್ನೇಹಿತ ಕೆಟ್ಟ ಹವಾಮಾನ, ಬಹಳ ಮಳೆ ಇರುವುದರಿಂದ ಶನಿವಾರ ಬರುವುದಾಗಿಯೂ ಮತ್ತೊಬ್ಬ ಸ್ನೇಹಿತ ರಸ್ತೆಯಲ್ಲಿ ಮಳೆ ಹಾಗೂ ಟ್ರಾಫಿಕ್ ಇರುವುದರಿಂದ ತಡವಾಗಿ ಬರುತ್ತೇವೆ ಎಂದು ಮೆಸ್ಸೇಜ್ ಬಿಟ್ಟಿದ್ದರು. ಅದೇನೋ ಈ ದಿನ ದುತ್ತನೇ ಸಮಸ್ಯೆಗಳೆಲ್ಲ ಎಲ್ಲೆಲ್ಲಿಂದಲೋ ಬಂದು ತಮ್ಮಷ್ಟಕ್ಕೆ ತಾವೇ ಹೊರಟು ಹೋದವಂತೆ ಕಂಡುಬಂದವು. ಸಮಸ್ಯೆಗಳು ಕಂಡೊಡನೆ ನಾನು ಯಾವಾಗಲೂ ಬೊಬ್ಬೆ ಹೊಡೆಯಲು ಆರಂಭಿಸುವುದೇ ಹೆಚ್ಚು ಆದರೆ ಇಂದಿನ ಸಮಸ್ಯೆಗಳೆಲ್ಲಾ ನಾನು ಬಾಯಿ ಬಿಡುವ ಮೊದಲೇ ತಮ್ಮಷ್ಟಕ್ಕೇ ತಾವು ಪರಿಹಾರ ಕಂಡುಕೊಂಡಂತೆ ಕಂಡು ಬಂದವು.

ಅದೇನೋ ಹೇಳ್ತಾರಲ್ಲ, ಸಮಸ್ಯೆಗಳು ಬರೋದಾದರೆ ಒಂದರ ಹಿಂದೆ ಒಂದು ಬಂದೇ ಬರುತ್ತವೆ ಎಂದು, ಅದು ನಿಜ - ಯಾರೋ ನಮ್ಮ ವಿರುದ್ಧ ಯುದ್ಧ ಹೂಡಿದ್ದಾರೇನೋ ಎಂದು ಅಪರೂಪಕ್ಕೊಮ್ಮೆ ಅನ್ನಿಸುವುದು ನಿಜ, ಇಲ್ಲವೆಂದಾರೆ ಅದೆಷ್ಟು ಹುಡುಕಿದರೂ ಬಟ್ಟೆಯ ರಾಶಿಯಲ್ಲಿ ಮ್ಯಾಚಿಂಗ್ ಕಾಲುಚೀಲ (ಸಾಕ್ಸ್) ಸಿಗದಿರುವುದರಿಂದ ಹಿಡಿದು, ದಿನವೂ ಓಡಾಡುವ ರಸ್ತೆಯಲ್ಲಿ ಅರ್ಧ ಮೈಲು ದೂರದಲ್ಲಿ ಸೆಲ್ ಕವರೇಜ್ ಎಲ್ಲಿಲ್ಲವೋ ಅಲ್ಲಿ - ನನ್ನ ಸೆಲ್ ಫೋನ್ ಬ್ಯಾಟರಿ ಖಾಲಿ ಆಗಿರುವ ಘಳಿಗೆಯಲ್ಲಿ, ಸ್ಪೇರ್ ಟಯರಿನ ಕೀ ಇಲ್ಲದಿರುವ ಸಮಯದಲ್ಲಿ, ಇನ್ನೇನು ಜೋರಾಗಿ ಮಳೆ ಬಂದೇ ಬಿಡುತ್ತೇನೋ ಎನ್ನುವ ಹೊತ್ತಿನಲ್ಲಿ - ಎಷ್ಟೆಲ್ಲಾ ಕೆಲಸಗಳು ಬಾಕೀ ಇವೆ ಎಂದು ಕೇವಲ ಒಂದು ಘಂಟೆ ಆಫೀಸನ್ನು ಮುಂಚೆ ಬಿಟ್ಟು ಶುಕ್ರವಾರ ಸಂಜೆ ನನ್ನಷ್ಟಕ್ಕೆ ನಾನಿರುವಾಗ ಹೀಗೆಲ್ಲಾ ಆಗಬೇಕೆಂದರೆ...

Sunday, August 05, 2007

... ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!

ಶನಿವಾರ ಬೆಳಗ್ಗೆ ತಡವಾಗಿ ಎದ್ರೂ ನಡೆಯುತ್ತೇ ಎಂದು ಮಹದಾಸೆ ಇಟ್ಟುಕೊಂಡು ಮಲಗಿದ್ದ ನನ್ನನ್ನು ಅದ್ಯಾವುದೋ ಬ್ರಹ್ಮಲೋಕದಲ್ಲಿ ಸುಬ್ಬ ಜೋರು ಜೋರಾಗಿ ಮಾತನಾಡಿಕೊಳ್ಳುತ್ತಿರುವುದು ಕೇಳಿಬಂದು ನಿದ್ದೆಯಿಂದ ಎಚ್ಚರವಾದದ್ದೂ ಅಲ್ಲದೇ ಅವನು ಯಾರ ಹತ್ತಿರ ಅದೇನು ಮಾತನಾಡುತ್ತಿದ್ದಾನೆ ಎಂದು ಕಲ್ಪಿಸಿಕೊಳ್ಳುವಷ್ಟರ ಮಟ್ಟಿಗೆ ನನ್ನ ನಿದ್ರೆ ದೂರವಾಗಿ ಹೋಗಿದ್ದರಿಂದ ನನಗರಿವಿಲ್ಲದಂತೆ, 'ಥೂ ಇವನೊಬ್ಬ, ಸದ್ಯ ಇಂಡಿಯಾದವರ ಹತ್ತಿರ ಮಾತನಾಡಿದ್ರೆ ಹೀಗೆ ಅರಚಿಕೊಳ್ತಾನೆ, ಇನ್ನು ಮಂಗಳಗ್ರಹದವರ ಹತ್ತಿರ ಮಾತನಾಡಿದ್ರೆ ಹೆಂಗೋ!' ಬೈಗಳ ಹೊರಗೆ ಬಿತ್ತು. ಅದರಲ್ಲೂ ಸುಬ್ಬ ಫೋನ್ ಬಳಸುವ ಪರಿಯನ್ನು ನೋಡಿದರೆ ಅವನ ಧ್ವನಿಯ ಆವೇಶದಲ್ಲಿಯೇ ಆ ಕಡೆ ಇರುವವರ ದೂರವನ್ನು ಗುರುತುಹಿಡಿಯಬಹುದು, ದೂರ ಹೆಚ್ಚಾದಷ್ಟೂ ಅಬ್ಬರ ಹೆಚ್ಚು ಎನ್ನುವಂತೆ.

ಇಂಥವನೊಬ್ಬ ನಮ್ ಆಫೀಸಿನಲ್ಲಿ ಇರಬೇಕಿತ್ತು, ದಿನವೂ ಕ್ಯಾಲಿಫೋರ್ನಿಯಾದವರಿಗೆ ಕರೆ ಮಾಡಿದಾಗಲೆಲ್ಲ ಕಿರುಚಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳಬಹುದಿತ್ತು ಎನ್ನುವ ಕುಹಕ ಮನದಲ್ಲಿಯೇ ಸುಳಿದು ಅಲ್ಲೇ ನಿಂತಿತು.

ಕೆಳಗಿನಿಂದ ಬೇಡವೆಂದರೂ ಸುಬ್ಬನ ಮಾತುಗಳು ಕಿವಿಗೆ ಬಂದು ರಾಚುತ್ತಿದ್ದವು, ಒನ್ ವೇ ಮಾತುಗಳನ್ನು ಕೇಳಲಿಕ್ಕೆ ಕೆಲವೊಮ್ಮೆ ಎಷ್ಟೋ ಸರ್ತಿ ಚೆನ್ನಾಗಿರುತ್ತೇ ಅಂತ ಅನ್ಸಿದ್ದೇ ನಾನು ಸುಬ್ಬನ ಮಾತುಗಳಿಗೆ ಕಿವಿಕೊಟ್ಟಮೇಲೆ,

'ನಾನ್ ಬಡಕಂಡೆ ಕೇಳ್ತೀರಾ ನನ್ ಮಾತು, ಈಗ ಅನುಭವಿಸಿ'.

'...'

'ಅಲ್ಲಮ್ಮಾ, ಅವಳಿಗೆ ಸ್ವಲ್ಪಾ ಬುದ್ಧೀ ಅನ್ನದ್ ಬ್ಯಾಡಾ, ನಾನು ವಿದೇಶಿ ಕಂಪ್ನಿಗಳಿಗೆ ದುಡಿತೀನೀ ಅಂತ ಒಂದೇ ಸಮಾ ಉರೀತಾ ಇದ್ಲು, ಈಗ ನೋಡ್ರಿ ಹೆಂಗಾತು.'

'...'

'ಸಮಾಧಾನ ಮಾಡ್ಕಳ್ರಿ, ಎಲ್ಲ್ ಹೋಗ್ತಾಳೇ ಬಂದೆ ಬರ್ತಾಳೆ...ಇನ್ನೊಂದ್ ಅರ್ಧಾ ಘಂಟೇ ಬಿಟ್ಟು ನಾನೇ ಫೋನ್ ಮಾಡ್ತೀನಿ, ಇಡ್ಲಾ ಹಂಗಾರೆ'...ಎಂದು ಫೋನ್ ಇಟ್ಟ ಹಾಗೆ ಸದ್ದು ಕೇಳಿಸಿತು.

ಏನ್ ಅವಾಂತರ ಆಗಿದೆ ನೋಡೇ ಬಿಡೋಣ, ಈ ವೀರಾವೇಶಕ್ಕೇನಾದ್ರೂ ಕಾರ್ಣ ಇರ್ಲೇ ಬೇಕು ಎಂದುಕೊಂಡು ಮುಖಕ್ಕೊಂದಿಷ್ಟು ನೀರು ತೋರಿಸಿದಂತೆ ಮಾಡಿ, ಕೆಳಗೆ ಬಂದೆ. ಸುಬ್ಬನ ಮುಖ ಸಿಟ್ಟಿನಿಂದ ದುಮುಗುಡುತ್ತಿತ್ತು, ನಾನು ಇವನ ಸಿಟ್ಟಿಗೆ ಆಹಾರವಾಗದಿದ್ದರೆ ಸಾಕು ಎನ್ನುವ ದೂರಾಲೋಚನೆಯಲ್ಲಿ 'ಸುಮ್ಮನಿರು' ಎಂದು ಮನಸ್ಸು ಹೇಳುತ್ತಿದ್ದರೂ, ಅದಕ್ಕೆ ವಿರುದ್ಧವಾಗಿ ನಾಲಿಗೆ, 'ಏನಯ್ಯಾ, ಏನ್ ಸಮಾಚಾರ?' ಎಂದು ಕೇಳೇಬಿಟ್ಟಿತು.

'ನಮ್ಮ್ ಅಕ್ಕನ ಮಗಳು ಸುಶೀಲು ಇಷ್ಟೊತ್ತಾದ್ರೂ ಇನ್ನೂ ಮನೆಗೆ ಬಂದಿಲ್ಲವಂತೆ, ರಾತ್ರಿ ಕೆಲಸಕ್ಕ್ ಹೋದೋಳು ಬೆಳಿಗ್ಗೆಯೆಲ್ಲಾ ಬಂದಿರೋಳು, ಆದ್ರೆ ಈಗ ನೋಡು ಘಂಟೇ ಎಂಟಾದ್ರೂ ಇನ್ನೂ ಬಂದಿಲ್ಲ ಅಂತ ಎಲ್ಲರೂ ತಲೆಕೆಡಿಸಿಕೊಂಡು ಕುಂತವರಂತೆ'.

'ಎಲ್ಲಿ ಕೆಲ್ಸಾ ಮಾಡ್ತಾ ಇದಾಳವಳೂ?'

'ನನಗೆ ವಿವರ ಎಲ್ಲ್ಲಾ ಗೊತ್ತಿಲ್ಲ, ಅದ್ಯಾವುದೋ ಕಾಲ್‌ಸೆಂಟರ್‌ನಲ್ಲಿ ಆರೇಳ್ ತಿಂಗಳಿಂದ ಇದಾಳೆ ಅಂತ ಸುದ್ದಿ'.

'ನಿಮ್ಮನೆಯವರಿಗೆ ಕಾಲ್‌ಸೆಂಟರ್ ಫೋನ್ ನಂಬರ್ ತಗೊಂಡು ಫೋನ್ ಮಾಡಿ ಕೇಳೋಕ್ ಹೇಳು, ಸಾಮಾನ್ಯವಾಗಿ ಅವರದ್ದೇ ಕಂಪನಿ ಗಾಡಿ ಇರುತ್ತೇ, ಅದರಲ್ಲೇ ಓಡಾಡೋದ್ ತಾನೆ' ಎಂದೆ.

'ಅವರಪ್ಪಾ ಅಮ್ಮನ್ ಹತ್ರ ನಂಬರ್ ಇಲ್ಲವಂತೆ, ನಮ್ ಮಾವನ್ ಮಗ ನೋಡ್ಕಂಬರೋಕ್ ಹೋಗಿದ್ದಾನೆ' ಎಂದ ಕಷ್ಟಪಟ್ಟು.

'ಲೋ, ಇದೊಳ್ಳೇ ಕಥೆಯಾಯ್ತಲ್ಲೋ' ಎಂದು ಬುದ್ಧಿವಾದ ಹೇಳುವ ಟೋನ್‌ನಲ್ಲಿ ನಾನು ಮುಂದುವರೆಸಿದೆ, 'ಮಗಳು ಎಲ್ಲಿ ಕೆಲ್ಸಾ ಮಾಡ್ತಾಳೇ ಏನೂ ಅಂತ ಹ್ಯಾಗೆ ತಿಳಿದುಕೊಳ್ಳದೇ ಇರ್ತಾರೋ ಜನ?'

'ಸುಮ್ನಿರೋ ನಿಂದೊಳ್ಳೋ ಆಯ್ತು. ಹಂಗಾರೆ ಈಗ ನೀನು ಅದ್ಯಾವುದೋ ಕಂಪನಿಗೆ ದುಡೀತಿ ಅಂತ ನಿಮ್ಮನೆಯವರ ಹತ್ರ ಆ ಕಂಪನಿ ವಿವರಾ ಎಲ್ಲಾ ಇದೆಯಾ? ಕೆಲವೊಂದು ಮಾತು ಆಡೋಕಷ್ಟೇ ಚೆನ್ನಾ, ಸ್ವಲ್ಪ ಯೋಚ್ನೆ ಮಾಡ್ಭೇಕು ಮಾತು ಅನ್ನಬೇಕಾದ್ರೆ' ಎಂದು ನನ್ನನ್ನೇ ತಿವಿಯಲು ನೋಡಿದ.

'ಅದು ಹಾಗಲ್ಲಾ, ನಾನಿಲ್ಲಿ ಕೆಲ್ಸಾ ಮಾಡೋದು...' ಎಂದು ಸಮಜಾಯಿಷಿ ನೀಡಲು ಹೊರಟಿದ್ದ ನನ್ನನ್ನು ತಡೆದು, 'ಅಲ್ಲಿಗೊಂದು, ಇಲ್ಲಿಗೊಂದು ನ್ಯಾಯಾ ಅಂತಲ್ಲ, ನಿಮ್ ಮನೆಯವರಿಗೆ ನೀನು ಎಲ್ಲಿದ್ದೀ, ಹೇಗಿದ್ದೀ ಅಂತ ಗೊತ್ತಿರಬೇಕು, ಎಲ್ಲಾ ನೆಟ್ಟಗಿದ್ದಾಗ ಅದರ ಬೆಲೆ ಗೊತ್ತಾಗಂಗಿಲ್ಲ, ಇಂಥಾ ಸಮಯದಾಗ ಉಪಯೋಗಕ್ಕೆ ಬರತತಿ ನೋಡು.'

ನಾನು ಇನ್ನೇನು ಹೇಳುವುದೆಂದು ಸುಮ್ಮನಿದ್ದೆ, ಸುಬ್ಬ ತನ್ನ ಮಾತನ್ನು ಮುಂದುವರೆಸಿದ.

'ಇದೆಲ್ಲಾ ಹಾಳಾದೋರ್ ಸಂಸ್ಕೃತಿ! ಇಂಥಾ ಮನೇಹಾಳ್ ಜನರಿಂದ್ಲೇ ನಮ್ಮನೇ ನಮ್ಮ್ ಊರ್ ಹುಡುಗಾ-ಹುಡುಗೀರೆಲ್ಲ ರಾತ್ರೀ ಎಲ್ಲಾ ದುಡಿಯಂಗಾಗಿದ್ದು!' ಎಂದು ಒಂದು ಮಹಾನ್ ಬಾಂಬ್ ಎಸೆದು ಸುಮ್ಮನಾದ. ಅವನಷ್ಟಕ್ಕೇನಾದ್ರೂ ಹೇಳ್‌ಕೊಳ್ಲೀ ನಾನು ಸುಮ್ನೇ ಇದ್ರೇ ಹೆಂಗೆ ಅಂತ ಒಮ್ಮೆ ಯೋಚ್ನೇ ಬಂದ್ರೂ, ಇವನ ಮಾತನ್ನು ಕೇಳಿ ಸುಮ್ಮನಿದ್ರೆ ಇವನ ರೀತಿ-ನೀತಿಗಳಿಗೆ ಎಲ್ಲಿ ಒಪ್ಪಿದ ಹಾಗಾಗುತ್ತೋ ಎನ್ನುವ ಹಂಬನೀತಿಯ ಹಿನ್ನೆಲೆಯಲ್ಲಿ ಅವನನ್ನೇ ದಬಾಯಿಸಿದೆ.

'ಮೂವತ್ತು ವರ್ಷಾ ಮೇಷ್ಟ್ರಾಗಿ ದುಡಿದು ರಿಟೈರ್ ಆದೋರು ಮನೆಗೆ ತರೋ ದುಡ್ಡನ್ನ ಈ ಹುಡುಗಾ-ಹುಡುಗೀರು ಒಂದೇ ವರ್ಷದಲ್ಲಿ ದುಡಿಯೋ ದುಡ್ಡನ್ನ ಎಣಿಸೋವಾಗ ಈ ಸಂಸ್ಕೃತಿ ವಿಷ್ಯಾ ತಲೇಗ್ ಬರೋದಿಲ್ಲಂತೇನು?' ಎಂದೆ ಸ್ವಲ್ಪ ಖಾರವಾಗಿ.

ಅವನೂ ಅಷ್ಟೇ ಜೋರಾಗಿ, 'ಓಹೋಹೋ, ಯಾವನಿಗ್ ಬೇಕಿತ್ತು ಈ ಚಾಕರಿ... ನಾವೇನು ನಿಮ್ಮಲ್ಲಿದ್ದ ಬಿಸಿನೆಸ್ ಪ್ರಾಸೆಸ್ಸುಗಳನ್ನೆಲ್ಲ ಹಾಳುಬಡಿಸಿ ತಂದ್ ಹಾಕಿ ಎಂದು ಮಡಿಲು ಒಡ್ಡಿ ಹೋಗಿದ್ವೇನು ಇವರ ಹತ್ರ? ತಮ್ ದೇಶದಲ್ಲಿ ಕೂಲಿ ಕೊಟ್ಟು ಸುಧಾರಸ್ಕಾಗಲ್ಲ ಅಂತ ಇಡೀ ಪ್ರಪಂಚವನ್ನೇ ಹಾಳ್ ಮಾಡ್ತಾ ಇದಾರೆ ನನ್ ಮಕ್ಳು. ಇಂಥಾ ಬಂಡ್ ಗೆಟ್ಟೋರ್ ಎಣಿಸೋ ಯೂರೋ, ಡಾಲರ್ರು, ಪೌಂಡುಗಳಿಂದ್ಲೇ ಇಡೀ ಪ್ರಪಂಚಾ ಹಾಳಾಗ್ತಿರದು ಇವತ್ತು!' ಎಂದು ಅವಾಜ್ ಹಾಕಿದ.

ನಾನೆಂದೆ, 'ಹೌದು, ಎಲ್ಲೋ ಬೀಡುಬೀಸಾಗಿದ್ದ ಕಂಪನಿಗಳು ಬಿಲಿಯನ್ನ್ ಎಣಿಸೋಕ್ ಶುರುಮಾಡಿದ್ದೇ ಇಂಥಾ ಉದ್ಯಮದಿಂದ...ನೀವ್ ಅಲ್ದಿದ್ರೆ ಇನ್ಯಾವಾನಾದ್ರೂ ಮಾಡ್ತಾನೆ, ಅಷ್ಟು ದಮ್ಮಿದ್ರೆ ಈ ಕಾಲ್ ಸೆಂಟರುಗಳನ್ನೆಲ್ಲ ಇವತ್ತೇ ಮುಚ್ಚಿಕಳ್ರಿ ನೋಡಾಣಾ'.

'ಅದೇನೋ ಅಂತಾರಲ್ಲ, ಊರ ಕೊಳ್ಳೇ ಹೊಡೆದ ಮೇಲೇ ದಿಡ್ಡೀ ಬಾಗಿಲು ಹಾಕಿದ್ರಂತೆ ಅಂತ ಹಂಗಾಯ್ತು...ನಮ್ ಯುವ ಜನತೆ ಸಾಯ್ತಾ ಐತೆ ಕಣಯ್ಯಾ. ಅವರು ತರೋ ದುಡ್ಡಲ್ಲ ಮುಖ್ಯ, ನಮ್ಮಲ್ಲಿನ ಪದವೀಧರರನ್ನ ಅವರಿಗೆ ಬೇಕೋ ಬ್ಯಾಡ್ವೋ ಯಾವುದೋ ದೇಶದ ಯಾವ್ದೋ ಹೆಸರನ್ನ ಕಟ್ಟಿ ಯಾರ್ದೋ ರಾಗದಲ್ಲಿ ಹಾಡು, ಯಾವ್ದೋ ತಾಳಕ್ಕೆ ಕುಣೀ ಅಂತಾ ಅಂದ್ರೆ, ಹಗಲ್ ಮಲಗಿ ರಾತ್ರೀ ಒದ್ದಾಡೋ ಇಂಥಾ ನಿಶಾಚರರಿಂದ ಯಾವ್ ಲೋಕ ಉದ್ಧಾರಾಗುತ್ತೇ ನೀನೇ ಹೇಳು?'

'ಅಂದ್ರೇ ನೀನ್ ಹೇಳೋದರ ಅರ್ಥ, ಈ ಕಾಲ್‌ಸೆಂಟರುಗಳು ಬರೋಕ್ ಮುಂಚೆ ರಾತ್ರೋ ರಾತ್ರಿ ಏನೂ ಕೆಲ್ಸಗಳೇ ಆಗ್ತಿರಲಿಲ್ಲಾ ಅಂತಲೇ?'

'ಹಂಗಲ್ಲ, ವಾಚ್‌ಮನ್, ಫ್ಯಾಕ್ಟರಿ ಶಿಫ್ಟ್ ಕೆಲಗಳೆಲ್ಲ ಯಾವತ್ತಿನಿಂದ್ಲೋ ಇರೋವೇಯಾ, ಆದರೆ ಈ ಕಾಲ್‌ಸೆಂಟರುಗಳಿಂದ ಸಮಾಜಕ್ಕೆ ಬಹಳಷ್ಟು ದೊಡ್ಡ ಹೊಡೆತಾ ಇದೇ ನೋಡು, ಇವತ್ತಲ್ಲ ನಾಳೆ ಅದು ನಿಜವಾಗುತ್ತೆ - ನಮ್ಮ್ ಸಿಟಿಗಳು ಈಗಾಗ್ಲೇ ರಾತ್ರೀ-ಬೆಳಗೂ ದುಡದೂ ದುಡದೂ ಸಪ್ಪಗಾಗ್‌ಹೋಗಿರೋದು. ವೇಗಾ ಅನ್ನೋದು ಸಹಜವಾಗಿರ್ಬೇಕು, ಅದನ್ನ ಬಿಟ್ಟು ಸೈಕಲ್ ಟಯರ್ ಹಾಕ್ಕೊಂಡು ಐವತ್ತ್ ಮೈಲಿ ಸ್ಪೀಡ್ ಹೋಗಾಗ್ ಬರೋದಿಲ್ಲ ತಿಳಕೋ'.

'ನೋಡೋ, ಆರ್ಥಿಕವಾಗಿ ದೇಶ ಬೆಳೀತಾ ಇದೆ, ಅದು ಮುಖ್ಯ. ಮೊದಲೆಲ್ಲ ಕೆಲಸ ಇಲ್ಲದೇ ಅಲೀತಿದ್ದ ಪುಡುಪೋಕರಿಗಳಿಗೆ ಈಗ ಕೆಲ್ಸಾ ಅನೋದೊಂದಿದೆ, ಅದು ಮುಖ್ಯ. ಬದಲಾವಣೆಗೆ ನಾವು ಈಗ ಕಣ್ಣು ಮುಚ್ಚಿ ಕುಳಿತುಕೊಂಡಿದ್ರೆ, ಕೊನೇಗಷ್ಟೇ - ಚಿಂಕುಗಳು ನಮ್ಮನ್ನು ಹಿಂದಕ್ ಹಾಕಿ ಒಂದಲ್ಲ ಒಂದು ದಿನ ಮುಂದ್ ಹೋಗೇ ಹೋಗ್ತಾರೆ...ಆಗ ಬಾಯಿಮೇಲೆ ಬೆರಳಿಟ್ಟುಕೊಂಡು ನಮ್ಮ ಐದಾರು ಸಾವಿರವರ್ಷದ ಸಂಸ್ಕೃತಿಯನ್ನ ಉಪ್ಪಿನಕಾಯಿ ಹಾಕ್ಕೂಂಡು ನೆಕ್ಕೋಣಂತೆ'.

'ನೀನು ಏನಂದ್ರೂ ನಾನ್ ಒಪ್ಪಲ್ಲಪ್ಪಾ...' ತನ್ನ ಅಲ್ಟಿಮೇಟಮ್ಮ್ ಅನ್ನು ಮುಂದಿಟ್ಟ, '...ನಮ್ಮ್ ಸಂಸ್ಕೃತಿ ನಮಗೆ ದೊಡ್ದು, ರಾತ್ರೀ-ಹಗಲೂ ದುಡಿದು ಸುಖವನ್ನು ಕಂಡೆವು ಎನ್ನೋ ಮರೀಚಿಕೆಯನ್ನು ಸವಾರಿ ಮಾಡೋ ಸರದಾರರು ನಮಗೆ ಬ್ಯಾಡಾ'.

ನಾನು, 'ಸರಿ ನಿನ್ನಿಷ್ಟ...' ಎನ್ನುವಷ್ಟರಲ್ಲಿ ಫೋನ್ ರಿಂಗ್ ಆದದ್ದರಿಂದ ಇಂಡಿಯಾದಿಂದ ಬಂದಿರಬಹ್ದು ಎಂದು ಸುಬ್ಬ ಓಡಲುತೊಡಗಿದ್ದನ್ನು ನೋಡಿದರೆ ಅವನು ನಿಜವಾಗಿಯೂ ಚಿಂತಿತನಾದಂತೆ ಕಂಡುಬಂತು.