ಏನು ಸುಖವಮ್ಮಾ, ಯಾವುದು ಸುಖವಮ್ಮಾ
ನಮ್ಮಮ್ಮ ತೂಕದ ಮಾತನ್ನಾಡೋದೇ ಹೆಚ್ಚು, ಯಾವಾಗ್ ನೋಡುದ್ರೂ ಈ ಥರದ ಒಂದ್ ಮಾತನ್ನ ಎಸೀತಾನೇ ಇರ್ತಾಳೆ...’ಎಲ್ಲಾ ಸುಖವಾಗಿದೀರಾ ತಾನೇ?’, ಅನ್ನೋ ಪ್ರಶ್ನೆ ಕೆಲವೊಮ್ಮೆ ’ಎಲ್ಲಾ ಅರಾಮಾ...’ ಅನ್ನೋದರ ಮುಂದಿನ ವಾಕ್ಯವಾಗಬಹುದು ಅಥವಾ ಎಷ್ಟೋ ವಾಕ್ಯಗಳನ್ನು ಅಂತ್ಯಗೊಳಿಸುವ ಒಂದು ಲಯವಾಗಿರಬಹುದು. ಒಂದೊಂದ್ ಸಾರಿ ಸಾರ್‌ಕ್ಯಾಸಮ್ ನಲ್ಲಿ ಹೇಳ್ತಾ ಇರೋ ಹಾಗೆ ಅನ್ನಿಸಿದರೆ, ಇನ್ನೊಂದಿಷ್ಟು ಸಾರಿ ನಿಜವಾದ ಕಳಕಳಿ ಅಭಿವ್ಯಕ್ತಗೊಳ್ಳುತ್ತೆ. ಅದು ಸರಿ, ’ಅರಾಮಾ?’ ಅನ್ನೋ ಪ್ರಶ್ನೆಗೆ ’ಹೂಞ್!’ ಎಂದು ಉತ್ತರ ಕೊಟ್ರೆ, ’ಸುಖವಾಗಿದ್ದೀರಾ?’ ಅನ್ನೋ ಪ್ರಶ್ನೆಗೆ ಏನಂತ ಉತ್ತರ ಕೊಡೋಣ, ಅದೂ ಹೋಗೀ ಹೋಗಿ ಅಡಿಗರ ’ಇರುವುದೆಲ್ಲವ ಬಿಟ್ಟು...’ ಬಂದ ಮನಸ್ಸಿನವರಾದ ಮೇಲೆ. ಎಷ್ಟೋ ಸಾರಿ ಅನ್ನಿಸಿದೆ, ಹೆಚ್ಚಿನ ಪಕ್ಷ ಒಂದ್ ಕೆಟ್ಟ ಸಿಟ್ಟಿನಲ್ಲೇ, ’ಯಾವುದು ಸುಖವಮ್ಮಾ?’ ಎಂದು ಕೇಳೋಣವೆನ್ನಿಸಿದೆ, ಆಕೆಯ ವೃದ್ದಾಪ್ಯದಲ್ಲಾದರೂ ಸುಖದ ಬಗ್ಗೆ ಆಕೆಗೆ ತಿಳಿದಿದೆಯೋ ಏನೋ ಎನ್ನುವ ಸ್ವಾರ್ಥ ನನ್ನದು, ಏಕೆಂದರೆ ಕೊನೆಗೆ ಸುಖಾ ಎನ್ನುವುದು ವೃದ್ದಾಪ್ಯದಲ್ಲಾದರೂ ಸಿಗುವ ನಿಧಿಯಾಗಬಹುದೇನೋ ಎನ್ನುವ ಕಾತರತೆಯಿಂದಲಾದರೂ ಕಾಲ ಕಳೆಯಬಹುದಲ್ಲಾ.
ಈ ತಳಮಳದ ಹಿಂದೆ ಅನೇಕ ಸಂವೇದನೆಗಳಿವೆ, ಭಾವನೆಗಳಿವೆ, ಅನುಭವಗಳಿವೆ. ಮನಸ್ಸು ಮತ್ತು ತಲೆಯನ್ನು ಖರ್ಚು ಮಾಡಿಕೊಂಡು ಜೀವನ ಸಾಗಿಸುವವರ ಪ್ರತಿಯೊಂದು ಸೂಕ್ಷ್ಮತೆಯೂ ಅಡಕವಾಗಿದೆ. ಅದಕ್ಕೆಂದೇ ಅನ್ನಿಸೋದು ನಾನು ದೈಹಿಕ ಶಕ್ತಿಯನ್ನು ನಂಬಿಕೊಂಡು ಪ್ರಿಮಿಟಿವ್ ಕೆಲಸವನ್ನು ಮಾಡಿಕೊಂಡಿದ್ದರೆ ಹೇಗಿತ್ತು ಎಂದು. ಒಬ್ಬ ಕಾರ್ಪೆಂಟರ್ ಆಗಿ, ದಿನಗೂಲಿ ಮಾಡುವವನಾಗಿ, ಕನ್‌ಸ್ಟ್ರಕ್ಷನ್ ಕೆಲಸಗಾರನಾಗಿ, ರಸ್ತೆ ರಿಪೇರಿ ಮಾಡುವವನಾಗಿ, ಎಲೆಕ್ಟ್ರಿಷಿಯನ್ ಆಗಿ, ಇತ್ಯಾದಿ. ಉತ್ತಮ ಆದಾಯವೇನೂ ಇರುತ್ತಿರಲಿಲ್ಲವೇನೋ, ಆದರೆ ದಿನದ ದೈಹಿಕ ಚಿಂತೆ ಅಗತ್ಯಗಳ ಮುಂದೆ ಮನಸ್ಸಿಗೆ ದೊಡ್ಡ ಕಡಿವಾಣ ಬೀಳುತ್ತಿತ್ತು. ಆ ಮಟ್ಟಿಗೆ ಗಳಿಸಿ, ಅದೇ ಮಟ್ಟದಲ್ಲಿ ಖರ್ಚು ಮಾಡಿ ಅವತ್ತಿಂದವತ್ತಿಗೆ ಬದುಕಿದರೂ ಅಲ್ಲಿ ಇನ್ಯಾವ ರೀತಿಯ ಕೊರಗುಗಳಿರುತ್ತಿದ್ದವೋ ಆದರೆ ತಲೆಯಲ್ಲಿ ಶಾಶ್ವತವಾದ ಮರಕುಟಿಗನ ಹಾಗೆ ಕುಟುಕುತ್ತಲೇ ಇರುತ್ತಿರುವ ಒಂದು ಧ್ವನಿ ಇರುತ್ತಿರಲಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಹಾಗೆ ಬೇರೆ ವೃತ್ತಿ, ಪ್ರವೃತ್ತಿಗಳಲ್ಲಿರುವ ಕಷ್ಟ ಸುಖವನ್ನು ನಾನೇನು ಬಲ್ಲೆ, ಅಲ್ಲಿನ ಪೀಕಲಾಟಗಳನ್ನು ದಿನವೂ ಏಗುತ್ತಿರುವವರಿಗೆ ನಮ್ಮ ಬದುಕು ಸುಂದರವಾಗಿ ಕಾಣುವುದೇ ಒಂದು ದೊಡ್ಡ ರಹಸ್ಯವಲ್ಲದೇ ಇನ್ನೇನು?
ಸುಖವೆನ್ನುವುದು ಏನು ಹಾಗಾದರೆ? ಅದು ಮಾನಸಿಕ ನೆಲೆಗಟ್ಟೇ, ಭೌತಿಕ ಸ್ಥಿತಿಯೇ, ಸಾಮಾಜಿಕ ಸಂಕಲ್ಪವೇ, ಬೇಕು ಎನ್ನುವವುಗಳಿಗೆಲ್ಲ ಸಿಕ್ಕ ಉತ್ತರವೇ, ಇಲ್ಲವೆನ್ನುವವುಗಳ ಬೆಂಬಿಡದ ಪ್ರಶ್ನೆಗಳೇ? ಸುಖವೆನ್ನುವುದು ಆಂತರಿಕವಾದದ್ದೇ, ಅಥವಾ ಪ್ರತಿಯೊಬ್ಬರೂ ಕಂಡು, ಅನುಭವಿಸಿ, ಗುರುತುಹಿಡಿಯಬಲ್ಲ ಬಹಿರಂಗದ ರೂಪವೇ? ಈ ಪ್ರಪಂಚದ ಮನುಷ್ಯ ಕುಲದಲ್ಲಿ ಯಾರಾದರೂ ಸುಖವಾಗಿದ್ದಾರೆಯೇ? ಅಥವಾ ಯಾರೂ ಸುಖವಾಗಿರದೇ ಸುಖವೆನ್ನುವ ಮರೀಚಿಕೆಯನ್ನು ಅರಸುವುದೇ ಬದುಕೇ? ಸುಖವೆನ್ನುವುದು ವಿಧಿ ಲಿಖಿತ ಸಂಕೋಲೆಯೇ, ಅಥವಾ ಮಾನವ ನಿರ್ಮಿತ ಬಂಧನವೇ?
ಸುಖವೆನ್ನುವುದಕ್ಕೆ ಉತ್ತರ ಕಂಡುಕೊಳ್ಳುತ್ತಾ ಹೋದಂತೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಇನ್ನೂ ಹಲವು ಸ್ಥರಗಳಲ್ಲಿ ಯೋಚಿಸಿಕೊಳ್ಳುವಂತಾಯಿತು. ಒಮ್ಮೆ ಇರುವ ಸದರಿ ಸ್ಥಿತಿಯಿಂದ ಮುಕ್ತವಾಗಿ ಒಡನೆಯೇ ಮತ್ತೊಂದು ಸ್ಥಿತಿಯನ್ನು ತಲುಪುವುದು ಸುಖವೆಂದು ಕಂಡುಬಂದರೆ, ಮತ್ತೊಮ್ಮೆ ಇನ್ನು ಎಷ್ಟೋ ವರ್ಷಗಳ ನಂತರ ಬರಬಹುದಾದ ಸಾಮಾಜಿಕ ಸಾಧ್ಯತೆಯೂ ಸುಖವಾಗಿ ಕಂಡುಬಂದಿತು. ಹಲ್ಲು ನೋವಿರುವವನಿಗೆ ತಾತ್ಕಾಲಿಕ ಉಪಶಮನಕ್ಕೆಂದು ಕೊಟ್ಟ ನೋವಿನ ಮಾತ್ರೆ ಒಡನೆಯೇ ಸುಖವನ್ನು ತಂದುಕೊಟ್ಟರೆ, ಲಾಟೀನ್ ದೀಪದ ಬೆಳಕಿನಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಹತ್ತನೇ ತರಗತಿಯ ಪರೀಕ್ಷೆಗೆ ತಯಾರಾಗುತ್ತಿರುವ ಬಡಹುಡುಗನ ಒಂದು ದಿನ ನಾನೂ ಇಂಜಿನಿಯರ್ ಆಗುತ್ತೇನೆ ಎನ್ನುವ ದೀಪದ ಬೆಳಕಿಗೆ ತೊನಲಾಡುತ್ತಿರುವ ನೆರಳಿನಂತಿರುವ ಕನಸು ಎಷ್ಟೋ ವರ್ಷಗಳ ನಂತರ ಸುಖಕ್ಕೆ ಸಂಬಂಧಿಸಿದಂತೆ ತೋರಿತು. ’ಸುಖವಾಗಿದ್ದೀಯಾ?’ ಎನ್ನುವ ಪ್ರಶ್ನೆಯನ್ನು ಪ್ರತಿದಿನವೂ ಕೇಳಿ (Rhetorical) ಅದರಿಂದ ಯಾವ ಉತ್ತರವನ್ನು ನಿರೀಕ್ಷಿಸದೆಯೂ ಇರಬಹುದು, ಅದೇ ಪ್ರಶ್ನೆಯನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, ಜನ್ಮಕ್ಕೊಮ್ಮೆ ಕೇಳಿಯೂ ವಿವರವನ್ನು ಹುಡುಕಬಹುದು. ಅದೇ ಪ್ರಶ್ನೆಯನ್ನು ಯಾರು, ಎಷ್ಟು ದೂರದಲ್ಲಿರುವವರು, ಎಲ್ಲಿರುವವರು ಕೇಳಿದರು ಎನ್ನುವುದರ ಮೇಲೆ ಉತ್ತರ ಬದಲಾಗಬಹುದು.
ನನ್ನಗ್ಗೊತ್ತು - ನಾಳೆ ಬೆಳಿಗ್ಗೆ ಮಾರ್ಗದ ಮಧ್ಯೆ ರಸ್ತೆ ರಿಪೇರಿ ಮಾಡುವ ಕೆಲಸಗಾರರಿಗೆ ಈ ಬಗೆಯ ಚಿಂತೆ ಇರುವುದಿಲ್ಲವೆಂದು. ಅಂತಹವರನ್ನು ’ಸುಖವಾಗಿದ್ದೀಯಾ?’ ಎಂದು ಯಾರೂ ಕೇಳೋದೇ ಇಲ್ಲವೇನೋ, ಅಥವಾ ಕೇಳುತ್ತಾರೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಕೆಲಸದ ಮಧ್ಯೆ ತೊಡಗಿದ ಅವರ ಮನಸ್ಸು ಒಂದಲ್ಲ ಒಂದು ಹೊಯ್ದಾಟಕ್ಕೆ ತೂಗುತ್ತಿರಬೇಕಲ್ಲ - ಅವರುಗಳಂತೂ ಖಂಡಿತ ಸಂತರಲ್ಲವೇ ಅಲ್ಲ - ಅವರ ನೆಲ ನೋಡುತ್ತಿರುವ ಕಣ್ಣುಗಳ ಹಿಂದಿನ ಮನಸ್ಸಿನಲ್ಲೇನಿದೆ? ಜ್ಯಾಕ್ ಹ್ಯಾಮರ್ ಸೃಷ್ಟಿಸುತ್ತಿರುವ ಕರ್ಕಷ ಸದ್ದಿಗೂ ಹೊಂದಿಕೊಂಡ ಒರಟುತನದ ಸುಖವೆನ್ನುವುದು ಎಲ್ಲಿ ಹುದುಗಿದೆ? ಅವರ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೊಸ ರಂಗನ್ನು ಕಣ್ಣುಗಳಲ್ಲಿ ಹುಟ್ಟಿಸಿಕೊಳ್ಳುವುದು ಅವರಿಗೆ ಸುಖವಾಗಿ ಕಂಡೀತೇ? ಇವತ್ತಲ್ಲ ನಾಳೆ ನಮ್ಮ ಮಕ್ಕಳು ಸುಖವಾಗಿರಲಿ, ಬಿಳಿ ಕಾಲರ್ ಕೆಲಸಗಾರರಾಗಲಿ ಎನ್ನುವ ಕನಸು ಅವರ ಸುಖವನ್ನು ನಿರ್ಧರಿಸೀತೇ? ರಸ್ತೆಗೆ ಟಾರು ಬಳಿಯುವ ಅವರ ಋಣಾನುಬಂಧ ಹೇಗಿದ್ದಿರಬಹುದು - ಅಕ್ಕ, ತಮ್ಮ, ತಂಗಿ, ಅಣ್ಣ ಇವರುಗಳ ಒಡನಾಟ ಅವರಿಗೆ ಏನನ್ನಿಸಬಹುದು? ಒಂದು ಕ್ಷಣ ಅವರ ಮನಸ್ಸಿನಾಳಕ್ಕಿಳಿದು ಅದರ ವ್ಯಾಖ್ಯೆಯನ್ನು ಅರಿಯಬಯಸುವ ನನ್ನ ಪ್ರಯತ್ನ ರಸ್ತೆಯ ಮೇಲೆ ಸಿಗುವ ಕೆಲವೇ ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾಗುತ್ತದೆ. ಕಣ್ಣ ಮುಂದಿನ ರಸ್ತೆ ಬದಲಾದ ಹಾಗೆ ಅದರ ವ್ಯಾಖ್ಯಾನ, ಅಂತಹ ವ್ಯಾಖ್ಯಾನದ ಹಿಂದಿನ ಅವತರಣಿಕೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ.
ಹಾಗಾದರೆ, ’...ಸುಖವಾಗಿದೀಯಾ ತಾನೇ?’ ಎನ್ನುವ ಪ್ರಶ್ನೆಗೆ ನಿಖರವಾದ ಉತ್ತರವಿದೆಯೋ ಅಥವಾ ದಿನೇದಿನೇ ಅದೂ ಬದಲಾಗುತ್ತದೆಯೋ? ಸದಾ ಬದಲಾಗುವುದನ್ನು ಏಕೆ ಒಂದೇ ಪದದಿಂದೇಕೆ ಅಳೆಯಬೇಕು? ಸುಖವೆನ್ನುವುದು ಎಲ್ಲರಿಗೂ ಸಮನಾದುದು ಎಂದಾದಲ್ಲಿ ಅವರವರಿಗೆ ತಕ್ಕ (ಮಟ್ಟಿನ) ಸುಖವನ್ನು ಬಿಂಬಿಸುವ ಪದಗಳೇಕೆ ಸೃಷ್ಟಿಯಾಗಲಿಲ್ಲ?
***
ನೀವು ಸುಖವಾಗಿದ್ದೀರಾ? ಯಾಕಿಲ್ಲ?