ಗಾಳಿ
ಏನು ಗೊತ್ತಾ? ಸುಮ್ನೇ ಗಾಳೀ ಮೇಲೆ ಬರೀ ಬೇಕು ಅಂತ ನಿನ್ನೆಯಿಂದ ಅನ್ನಿಸ್ತಿದ್ದದ್ದು ನಿಜ. ಅಂತಿಂತ ಗಾಳಿ ಬಗ್ಗೆ ಅಲ್ಲ, ಎಲ್ಲ ಥರದ ಗಾಳಿಯ ಬಗ್ಗೆ, ಪ್ರಪಂಚವನ್ನು ಅಲ್ಲೋಲಕಲ್ಲೋಲ ಮಾಡುವ ಗಾಳಿಯಿಂದ ಹಿಡಿದು ಚಿಗುರೆಲೆಗಳ ಮೈ ಸವರಿ ’ಹೇಗಿದ್ದೀರಿ?’ ಎಂದು ವಿಚಾರಿಸುವ ಗಾಳಿಯವರೆಗೆ, ಕೆಲವು ಕಡೆ ಕತ್ತಲು ಆರಂಭವಾಗುವ ಸೂಚನೆ ನೀಡುವ ಗಾಳಿಯಿಂದ ಹಿಡಿದು, ಇನ್ನೆಲ್ಲೋ ಬೆಳಕು ಹುಟ್ಟುವ ಮುನ್ಸೂಚನೆ ಕೊಡುವ ಗಾಳಿಯವರೆಗೆ.
ಎಷ್ಟೋ ಸಾರಿ ಯೋಚಿಸಿದ್ದಿದೆ ಹೀಗೆ: ಯಾವುದೋ ಒಂದು ದಿನ ಅಪರೂಪಕ್ಕೆ ಶನಿವಾರ ಸಂಜೆ ನಿದ್ರೆಯಿಂದ ಎದ್ದು ಹೊರಗೆ ನೋಡಿದರೆ ಪಕ್ಕನೆ ಒಂದು ದಿಕ್ಕಿನಲ್ಲಿ ಕಂಡು ಬರುವ ಸೂರ್ಯ, ಅವೇ ಮೋಡಗಳ ನಡುವಿನ ಕಿರಣಗಳು ಇವೆಲ್ಲ ಏಕ್ ದಂ ಆ ಸಮಯ ಹಗಲು ರಾತ್ರಿಯಾಗುತ್ತಿರುವುದೋ ಅಥವಾ ರಾತ್ರಿ ಇದ್ದದ್ದು ಹಗಲಾಗುವುದೊ ಎಂಬ ಗೊಂದಲವನ್ನು ಹುಟ್ಟಿಸುತ್ತದೆ. ನಿಮಗೆ ಹಾಗೆ ಆಗಿರಲೇ ಬೇಕೆಂದೇನೂ ಇಲ್ಲ ಆದರೆ ನನಗಂತೂ ಹಾಗೆ ಅನ್ನಿಸಿದೆ, ಸಂಜೆ ನಿದ್ರೆಯಿಂದ ಎದ್ದವನಿಗೆ ಅದೇ ತಾನೆ ಬೆಳಗು ಹರಿದ ಅನುಭವವಾಗಿದ್ದಿದೆ. ಆ ಸಮಯಕ್ಕೆ ಸಹಾಯಕ್ಕೆ ಬರುವ ಸ್ನೇಹಿತನೆಂದರೆ ಲಘುವಾಗಿ ತೀಡುವ ಗಾಳಿ, ಮುಂಜಾನೆ ಬೀಸುವ ಗಾಳಿಯಲ್ಲಿ ಒಂದು ರೀತಿಯ ಆರ್ದ್ರತೆ ಇದ್ದರೆ, ಅದೇ ಸಂಜೆ ಹೊತ್ತಿಗೆಲ್ಲಾ ಒಣಗಿ ಹೋಗುತ್ತಿರುವ ದಿನದಲ್ಲಿ ಈಗಾಗಲೇ ಅಲ್ಲಿಲ್ಲಿ ಸುಳಿದ ಗಾಳಿಯೇ ಹೆಚ್ಚು.
ಉತ್ತಮ ಗಾಳಿ ಅನ್ನೋದೇನಿದ್ದರೂ ಪಶ್ಚಿಮದಲ್ಲೇ ಹುಟ್ಟಬೇಕು, ಹಾಗೆ ಹುಟ್ಟಿ ಅದು ಪೂರ್ವಾಭಿಮುಖವಾಗಿ ಹರಿಯಬೇಕು ಅಲ್ಲಿನ ಜನರ ಸ್ಥಿತಿಗತಿಗಳನ್ನು ಅರಿತಂತೆ ಆಲಿಸಿ ಅವರನ್ನು ಆಳಬೇಕು - ಹೀಗೆ ಇತಿಹಾಸವಿದೆ, ಅನುಭವವಿದೆ. ಸೂರ್ಯ ಮೊದಲು ಹುಟ್ಟಿ ಬರುವ ನಾಡಿನಲ್ಲಿನ ಕತ್ತಲನ್ನು ಹೋಗಲಾಡಿಸಲು ಪಶ್ಚಿಮದಲ್ಲಿ ಅವರವರ ಕತ್ತಲಲ್ಲಿ ಬಳಲುತ್ತಿರುವ ಜನರೇ ಆಗಬೇಕು.
***
ಓಹ್, ಯಾಕ್ ನಿಲ್ಲಿಸ್ ಬಿಟ್ಟೇ ಅಂತೀರಾ? ಏನ್ ಹೇಳ್ತಾ ಇದ್ದೆ?
ಅದೇ ಗಾಳಿ ಬಗ್ಗೆ.
ಯಾವ್ ಗಾಳಿ?
ಅದೇ - ಕತ್ಲು, ಬೆಳಕೂ, ಪೂರ್ವಾ, ಪಶ್ಚಿಮಾ, ರಾತ್ರೀ, ಹಗಲೂ..
ಓ, ಅದಾ - ಏನಿಲ್ಲ, ಗಾಳಿ ಒಂದ್ ಕಡೇಯಿಂದ ಮತ್ತೊಂದ್ ಕಡೇ ಹೋಯ್ತು ಅಂತ ಇಟ್ಕೊಳ್ಳಿ...ಆಗ ಏನಾಗುತ್ತೇ ಅಂದ್ರೆ ಅಲ್ಲೊಂದು ನಿರ್ವಾತ ಹುಟ್ಟತ್ತೆ. ಆದ್ರೆ, ಆ ನಿರ್ವಾತವನ್ನು ತುಂಬೋದಕ್ಕೆ ಸುತ್ತಲಿನ ಗಾಳಿ ರಭಸದಿಂದ ನುಗ್ಗುತ್ತೆ. ಹಾಗೆ ಆಗೋದರಿಂದ ಎರಡು ಬದಲಾವಣೆ ಆಗುತ್ತೆ - ಒಂದು, ಹಳೇ ಗಾಳಿ ಇದ್ದಲ್ಲಿ ಹೊಸ ಗಾಳಿ ಬಂದಂತಾಯ್ತು, ಇನ್ನೊದು, ಇರೋ ಗಾಳೀನೇ ಹೆಚ್ಚು ವಾಲ್ಯೂಮ್ ತುಂಬಿಕೊಂಡು ಒತ್ತಡ ಕಡಿಮೆ ಆಯ್ತು. ಹೌದೋ ಅಲ್ವೋ.
ಹೌದು.
ಅದರಿಂದ ಏನ್ ಗೊತ್ತಾಗುತ್ತೇ?
ಏನ್ ಗೊತ್ತಾಗುತ್ತೇ?
ಅದೇ, ಇರೋ ಗಾಳಿಯ ಜಾಗದಲ್ಲಿ ಮತ್ತೆನೋ ಬಂದ್ ಸೇರ್ಕೊಂಡು, ವಾಲ್ಯೂಮ್ ಜಾಸ್ತಿ ಆಯ್ತು, ಒತ್ತಡಾ ಕಡಿಮೆ ಆಯ್ತು, ಇದರಿಂದ ಎಲ್ಲ ವೇರಿಯಬಲ್‌ಗಳು ಬದಲಾದ್ವೇ ಹೊರತು ಒಟ್ಟು ಸ್ಥಿತಿಗತಿಯಲ್ಲಿ ಏನೇನೂ ಬದಲಾವಣೇ ಅನ್ನೋದಾಗ್ಲಿಲ್ಲ ನೋಡಿ.
ಏನೋ ನನಗೆ ಅರ್ಥ ಆಗ್ಲಿಲ್ಲಪ್ಪಾ.
ನಿಮಗೆಲ್ರೀ ಅರ್ಥ ಆಗುತ್ತೇ ಇಂತಾ ಸುಲಭವಾದ ಸಮೀಕರಣಾ, ಅದೂ ಕಂಪ್ಯೂಟರ್ರ್ ಕಾಲದ ಜನ್ರಪ್ಪಾ ನೀವು, ಎಲ್ಲದಕ್ಕೂ ಕ್ಯಾಲ್ಕುಲೇಟರ್ ಬಳಸೋ ಪರಂಪರೆಯವರು.
***
ಈ ಪಂಚಭೂತಗಳಲ್ಲೊಂದಾದ ಗಾಳಿಗೆ ದುಡ್ಡು ಕೊಡಬೇಕಾಗಿಲ್ಲ ಅನ್ನೋ ಕಾಲ ಬಹಳ ಹಳೆಯದಾಯ್ತು. ನಾವು ನೀರನ್ನು ದುಡ್ಡುಕೊಟ್ಟು ಕೊಂಡು ಗೊತ್ತಿದೆ, ಆದರೆ ಗಾಳಿಗೆ ದುಡ್ಡುಕೊಟ್ಟಿಲ್ಲ ಅನ್ನೋಕಾಗಲ್ಲ. ನಾವು ಉಪಯೋಗಿಸೋ ಮ್ಯಾನುಫ್ಯಾಕ್ಚರ್ ಮಾಡಿರೋ ಪ್ರತಿಯೊಂದು ವಸ್ತುವೂ ವಾತಾವರಣಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಡುತ್ತೆ. ಬೇಕಾದಷ್ಟು ರೀತಿಯ ಅನಿಲಗಳನ್ನು ಕಾರ್ಖಾನೆಗಳಿಂದ ಹೊರಗೆ ಬರೋದನ್ನ ನೋಡೇ ಇರ್ತೀವಿ. ಬಿಯರ್ ತಯಾರಿಕೆ, ಫರ್ಮೆಂಟೇಷನ್ ಮುಂತಾದ ಸರಳ ಮ್ಯಾನುಫ್ಯಾಕ್ಚರಿಂಗ್ ನಿಂದ ಹಿಡಿದು ಟಯರ್ ಮೊದಲಾದ ಪ್ಲಾಸ್ಟಿಕ್, ರಬ್ಬರ್ ಆಧಾರಿತ ವಸ್ತುಗಳ ಉತ್ಪಾದನೆ ಬೇಕಾದಷ್ಟು ಅನಿಲವನ್ನು ಹೊರಗಡೆ ಹರಿಯಬಿಡುತ್ತೆ. ಹೀಗೆ ಹೊರಬಂದ ಅನಿಲಗಳಲ್ಲಿ ಎಷ್ಟೋ ಒಳ್ಳೆಯವು, ಇನ್ನೆಷ್ಟೋ ಕೆಟ್ಟವು. ಅವೆಲ್ಲಾ ಸೇರಿ ಸುಮ್ಮನೇ ಇರ್ತಾವೆ ಅಂತೇನೂ ಇಲ್ಲ. ಗ್ರೀನ್‍ಹೌಸ್ ಗ್ಯಾಸ್‌ಗಳಿಂದ ಗ್ಲೋಬಲ್ ವಾರ್ಮಿಂಗ್ ಆಗೋದರ ಬಗ್ಗೆ ಎಲ್ಲರಿಗೂ ಗೊತ್ತು, ಆಸಿಡ್ ಮಳೆ ಬೀಳೋದರ ಬಗ್ಗೆ ಗೊತ್ತಿದೆ, ಇನ್ನು ವಾಯು ಮಾಲಿನ್ಯದ ಬಗ್ಗೆ ನಾವೆಲ್ಲಾ ಕೇಳೇ ಇರ್ತೀವಿ. ಹೀಗೆ ಹೊರಸೂಸಿದ ಅನಿಲಗಳ ದುಷ್ಪರಿಣಾಮವೇ ನಾವು ಗಾಳಿಗೆ ತೆರುತ್ತಿರುವ ಬೆಲೆ.
ನಮ್ಮ ಕಡೆ ದೆವ್ವ-ಭೂತ ಮೆಟ್ಟಿಕೊಂಡೋರಿಗೆ ’ಗಾಳಿ ಬಡದಿದೆ’ ಅಂತಾರೆ. ಯಾವ ಗಾಳಿಯಲ್ಲಿ ಏನೇನಿದೆಯೋ? ಆತ್ಮಗಳ ಸಂವಹನೆಗೆ, ಭೂತಗಳ ಮಾತುಕಥೆಗೆ ಈ ಗಾಳಿಯೇ ಮಾಧ್ಯಮವಾಗೇಕಿರಬಾರದು. ನೀವ್ ಮಾತ್ರ ಎಲ್ಲ್ ಹೋದ್ರೂ ಹುಶಾರಾಗಿರಿ. ಯಾವ್ ಯಾವ್ ಗಾಳೀಲೀ ಏನೇನಿದೆಯೋ? ಕೊನೆಗೆ ಬೇಡವಾದದ್ದ್ಯಾವ್ದಾದ್ರೂ ಮೆಟ್ಟಿಕೊಂಡ್ರೆ ಕಷ್ಟಾ. ಹಿಂದೆಲ್ಲಾ ಒಂದಿಷ್ಟು ಗಾಳೀಸುದ್ದೀ ಅಂತ ಹುಟ್ತಿತ್ತು, ಈಗೆಲ್ಲಾ ಟಿವಿ ಚಾನೆಲ್ಲುಗಳಿಗೆ ಜನ ಒಗ್ಗಿಕೊಂಡ್ ಹೋಗೀರೋ ಸಮಯದಲ್ಲೂ ಇನ್ನೂ ಗಾಳೀಸುದ್ದಿಯಾಗಲೀ, ಗಾಳೀಮಾತಾಗಲೀ ಪ್ರಸ್ತುತವಾಗುತ್ತಾ? ನೀವ್ ಏನೇ ಹೇಳಿ ಅವರವರು ಮೂಗಿನಲ್ಲಿ ಎಳೆದುಕೊಳ್ಳೋ ಗಾಳಿ ಅವರವರಿಗೇ ಸೇರಿದ್ದು, ನಮಗೆಲ್ಲಾ ಜೀವವಾಯುವಾದ ಆಮ್ಲಜನಕವನ್ನ ವಾತಾವರಣದಿಂದ ಯಾರಾದ್ರೂ ದೋಚಿಕೊಳ್ದೇ ಇದ್ರೆ ಸಾಕಪ್ಪಾ.
ಒಂದು ಕೆಟ್ಟ ಗಾಳಿ ಸಾಕು ಲೋಕವನ್ನ ಕಂಗೆಡಿಸೋದಕ್ಕೆ. ಅದು ಬಿರುಗಾಳಿ ಆಗಿರಬಹುದು, ಸುಂಟರಗಾಳಿ ಆಗಿರಬಹುದು, ಅಥವಾ ಮೂಡಗಾಳಿ ಆಗಿರಬಹುದು. ತುಂಬಾ ಛಳಿ ಇದ್ದಾಗ ಬೀಸೋ ಗಾಳಿ ಇಂದ ಹೇಗೆ ತೊಂದರೆ ಇದೆಯೋ ಹಾಗೇ ತುಂಬಾ ಬಿಸಿ ಇದ್ದಾಗ ಬೀಸೋ ಗಾಳಿಯಿಂದ್ಲೂ ತೊಂದರೇನೇ. ನೀವು ಎಲ್ಲೇ ಇರಿ ಹೇಗೇ ಇರಿ, ನಿಮ್ಮನ್ನ ನೀವು ಗಾಳಿಯಿಂದ ರಕ್ಷಣೆ ಮಾಡಿಕೊಳ್ಳಿ, ಅಷ್ಟೇ ಸಾಕು ಮಿಕ್ಕಿದ್ದೆಲ್ಲ ತನ್ನಷ್ಟಕ್ಕೆ ತಾನೇ ಸರಿಹೋಗುತ್ತೆ. ಯಾವುದೇ ಕೆಟ್ಟಗಾಳಿ-ಸುಳಿಗಾಳೀ ಸಹವಾಸ ಮಾಡ್ದೇ ನೀವು ಸದಾ ಒಳ್ಳೇ ವಾತಾವರಣದಲ್ಲೇ ಇರಬೇಕು ಅನ್ನೋದು ನನ್ನ ಆಶಯ.