ತಮೀಗೆ ಯುನಿಕ್ಸೂ, ಮಂದೀಗೆ ವಿಂಡೋಸೂ...
'ಲೋ ಶಿಷ್ಯಾ ಇಲ್ಲಿ ಬಾ, ಬಂದಾ ನಿನ್ ಫ್ರೆಂಡೂ ಹಲ್ಲ್ ಕಿರಕಂಡೂ...' ಎಂದು ಸೋಫಾದಲ್ಲಿ ಕೂತು ಟಿವಿ ನೋಡುತ್ತಿದ್ದ ಸುಬ್ಬ ಒಂದೇ ಸಮನೇ ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ನಾನು ವಸ್ತ್ರಕ್ಕೆ ಕೈ ಒರೆಸಿಕೊಳ್ಳುತ್ತಲೇ ಓಡೋಡಿ ಬಂದೆ,
'ಏನಾಗ್ತಾ ಇದೆ?...' ಎಂದು ನಾನು ಬರುವಷ್ಟರಲ್ಲಿ ಪ್ರೆಸಿಡೆಂಟ್ ಬುಷ್ ಪತ್ರಿಕಾಕರ್ತರನ್ನುದ್ದೇಶಿಸಿ ಭಾಷಣ ಮಾಡಲು ಪೋಡಿಯಂ ಹತ್ತಿ ನಿಂತಾಗಿತ್ತು, 'ಏ, ಬುಷ್ಷ್ ಮಾತಾಡ್ತಾ ಇದಾನಾ..., ನಾನು ಏನೋ ಆಗ್ತಾ ಇದೆ ಅಂದುಕೊಂಡೆ. ಆದಿರ್ಲಿ ಅವನ್ಯಾವಾಗ ನನ್ನ ಫ್ರೆಂಡ್ ಆಗಿದ್ದು?' ಎಂದು ಪ್ರಶ್ನೆ ಎಸೆದೆ.
'ಮತ್ತೇ? ಅವನನ್ನ, ಈ ದೇಶವನ್ನ ನಂಬಿಕೊಂಡು ಬಂದಿದ್ದೀರಲ್ಲಾ, ಅವನು ನಿಮ್ಮ ಸ್ನೇಹಿತನಾಗ್ದೇ ಇನ್ನೇನ್ ವೈರಿ ಆಗ್ತಾನಾ?' ಎಂದು ನನ್ನನ್ನೇ ಕೆಣಕಿದ.
'ಏ, ಬುಷ್ಷನ್ನ ನಂಬಿಕೊಂಡು ನಾವ್ ಬರಲಿಲ್ಲ, ಅದ್ರಲ್ಲೂ ನಾನು ಈ ದೇಶಕ್ಕೆ ಬರೋವಾಗ ಕ್ಲಿಂಟನ್ನು ಇದ್ದ ಕಾಲ, ಎಲ್ಲವೂ ಸುಭಿಕ್ಷವಾಗಿತ್ತು, ಒಂದು ರೀತಿ ರಾಮರಾಜ್ಯ ಅಂತಾರಲ್ಲಾ ಹಾಗಿತ್ತು, ಇವನು ಅದೆಲ್ಲಿಂದ ಬಂದ್ನೋ ಬಂದ ಘಳಿಗೇನೇ ಸರೀ ಇಲ್ಲ ನೋಡು, ಒಂದಲ್ಲ ಒಂದು ಅಲ್ಲೋಲಕಲ್ಲೋಲ ನಡೆದೇ ಇದೆ ಮೊದಲಿನಿಂದ್ಲೂ...' ಎಂದು ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.
'ಸ್ವಲ್ಪ ಸುಮ್ನಿರು, ವೆಕೇಷನ್ನಿಗೆ ಹೊಂಟು ನಿಂತಿದಾನಂತೆ, ಅದೇನ್ ಬೊಗೊಳ್ತಾನೇ ಅಂತ ಕೇಳೋಣ...' ಎಂದು ಟಿವಿಯ ಧ್ವನಿಗೆ ಕಿವಿ ಹಚ್ಚಿದ. ಸೆನೆಟ್ಟೂ ಕಾಂಗ್ರೇಸ್ಸೂ ಈಗಾಗಲೇ ಸಮರ್ ರಿಸೆಸ್‌ಗೆಂದ್ ಬಂದ್ ಆದ ಹಾಗೆ ಕಾಣ್ಸುತ್ತೆ, ಈಗ ಪ್ರೆಸಿಡೆಂಟೂ ವೆಕೇಷನ್ನಿಗೆ ಹೊರಟು ನಿಂತಿರೋದನ್ನ ಕೊನೇ ಆಪರ್ಚುನಿಟಿ ಎಂದು ಬೇಕಾದಷ್ಟು ಜನ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಕುಕ್ಕರುಗಾಲಿನಲ್ಲಿ ಕುಳಿತಿದ್ದರು. ಇನ್ನೊಂದ್ ವರ್ಷ ಚಿಲ್ಲರೆ ಅವಧಿಯಲ್ಲಿ ತನ್ನ ರಾಜ್ಯಭಾರ ಹೊರಟು ಹೋಗುತ್ತೇ ಅನ್ನೋ ನೋವಿಗೋ ಏನೋ ಬುಷ್ಷ್ ಇತ್ತೀಚೆಗೆ ಬಹಳ ಫಿಲಾಸಫಿಕಲ್ ಆದ ಹಾಗೆ ಕಾಣುತ್ತಿದ್ದ ಹಾಗನ್ನಿಸಿತು. ನಾನು ಪ್ರೆಸಿಡೆಂಟ್ ಹೇಳೋ ಮಾತುಗಳಿಗೆ ಅಷ್ಟೊಂದು ಗಮನ ಕೊಡದೇ ಬೇರೇನೋ ಯೋಚಿಸ್ತಾ ಇರೋದನ್ನ ಗಮನಿಸಿದ ಸುಬ್ಬ,
'ಅದ್ಸರಿ, ನನಗೆ ಮೊನ್ನೇ ಇಂದಾ ಈ ಪ್ರಶ್ನೆ ತಲೇ ಒಳಗೆ ಕೊರೀತಾ ಇದೆ, ನಿನಗೇನಾದ್ರೂ ಉತ್ತರಗೊತ್ತಿರಬಹುದು...' ಎಂದ.
ನಾನು ಬರೀ, 'ಹ್ಞಾ...' ಎಂದು ಸುಬ್ಬನ ಕಡೆಯೇ ಪ್ರಶ್ನಾರ್ಥಕವಾಗಿ ನೋಡಿದೆ.
ಸುಬ್ಬ ಮುಂದುವರೆಸಿದ, 'ಈ ಅಮೇರಿಕದೋರು ಇರಾಕ್ ಆಕ್ರಮಣ ಮಾಡೋದಕ್ಕೆ ಮೊದಲು ಅಲ್ಲಿ ಸದ್ದಾಮನ ಪ್ರೆಸಿಡೆಂಟ್ ರೂಲ್ ಇತ್ತೋ ಇಲ್ವೋ?'
'ಹೌದು, ಇತ್ತು'.
'ಆಂದ್ರೆ ಅಧ್ಯಕ್ಷೀಯ ಪದ್ದತಿ ಸರ್ಕಾರ ಅನ್ನು...'
'ಅದನ್ನ ಅಧ್ಯಕ್ಷೀಯ ಪದ್ದತಿ ಅನ್ನಬಹುದು, ಆದ್ರೆ ಪ್ರಜಾಪ್ರಭುತ್ವವೋ ಹೌದೋ ಅಲ್ವೋ ಗೊತ್ತಿಲ್ಲ, ಚುನಾವಣೆಗಳು ಆಗ್ತಿದ್ವು, ಆದ್ರೆ ಸದ್ದಾಮನೇ ಗೆಲ್ತಿದ್ದ!'
'ಇರ್ಲಿ, ಅಲ್ಲಿ ಅಧ್ಯಕ್ಷೀಯ ಪದ್ಧತಿ ಇತ್ತು ಅಂತ ಇಟಗೋ, ಇಲ್ಲೂ ಅಧ್ಯಕ್ಷೀಯ ಮಾದರಿ ಸರ್ಕಾರಾನೇ ಇರೋದು ಯಾವಾಗ್ಲೂ...'
ಇವನು ತನ್ನ ಈ ಲಾಜಿಕ್ಕಿನಿಂದ ಎಲ್ಲಿಗೆ ಹೊರಟವನೆ ಎಂದು ಹೇಳಲು ಬರದೇ ನಾನು ಈ ಬಾರಿ ಸುಮ್ಮನಿದ್ದವನನ್ನು ತಿವಿದು,
'ಹೌದೋ ಅಲ್ವೋ ಹೇಳು?' ಎಂದು ಒತ್ತಾಯಿಸಿದ.
'ಹೌದು' ಎನ್ನದೇ ಬೇರೆ ವಿಧಿ ಇರಲಿಲ್ಲ.
'ಸರಿ ಹಂಗಾದ್ರೆ, ಇರಾಕ್‍ನ ಆಕ್ರಮಣ ಮಾಡಿ, ಅಲ್ಲಿ ಹಳೇ ಸರಕಾರ ತೆಗೆದು ಹೊಸ ಸರ್ಕಾರ ಇಟ್ಟಾಗ ಅಲ್ಲಿ ಪ್ರಧಾನ ಮಂತ್ರಿ ವ್ಯವಸ್ಥೇನಾ ಯಾತಕ್ಕ್ ತಂದ್ರೂ ಅಂತಾ?'
'...'
'ಅಲ್ಲಪಾ, ಈ ನೂರಿ ಅಲ್ ಮಲ್ಲಿಕೀ, ಅಲ್ಲಿ ಪ್ರಧಾನ್ ಮಂತ್ರೀ ತಾನೆ? ಪ್ರಪಂಚಕ್ಕೆ ಡೆಮಾಕ್ರಸಿನಾ ಹಂಚೋಕ್ ಹೋಗೋರು ತಮ್ಮ ವ್ಯವಸ್ಥೇನೇ ಇನ್ನೊಬ್ರಿಗೂ ಯಾಕ್ ಕೊಡೋದಿಲ್ಲಾ? ಅದರ ಬದಲಿಗೆ ಇವರಿಗೇ ಗೊತ್ತಿರದ, ಇನ್ನು ಅವರಿಗೂ ಗೊತ್ತಿರದ ಪ್ರಧಾನಮಂತ್ರಿ ವ್ಯವಸ್ಥೇನಾ ಯಾತಕ್ ತಂದ್ರೂ ಅಂತ ನಿನಗೆನಾದ್ರೂ ಗೊತ್ತಾ? ಇದೇ ಪ್ರಶ್ನೇ ಸುಮಾರ್ ದಿನದಿಂದ ತಲೇ ಕೊರಿತಾನೇ ಇದೇ ನೋಡು' ಎಂದು ಸುಮ್ಮನಾದ ನನ್ನನ್ನು ಉತ್ತರಕ್ಕೆ ಪೀಡಿಸುವ ಒಂದು ನೋಟ ಬೀರಿ.
'ನಂಗೊತ್ತಿಲ್ಲ, ನನ್ನ ಊಹೆ ಪ್ರಕಾರ, ಎಲ್ಲಿ ಸಮ್ಮಿಶ್ರ ಸರಕಾರ ಇರುತ್ತೋ ಅಲ್ಲೆಲ್ಲಾ ಪ್ರಧಾನಮಂತ್ರಿ ಸಿಷ್ಟಮ್ಮೇ ವರ್ಕ್ ಆಗೋ ಹಂಗ್ ಕಾಣುತ್ತೇ...' ಎಂದು ನನಗೆ ತೋಚಿದ್ದನ್ನು ಹೇಳಿದೆ. ಅದಕ್ಕವನು, 'ಅದೆಲ್ಲಾ ಬ್ಯಾಡಾ, ಈ ನನ್ ಮಕ್ಳು ತಮಿಗೆ ಯುನಿಕ್ಸ್ ಆಪರೇಟಿಂಗ್ ಸಿಷ್ಟಂ ಇಟಗೊಂಡು, ಇನ್ನೊಬ್ರಿಗೆ ವಿಂಡೋಸ್ ಹಂಚ್‌ತಾರಲ್ಲಾ ಅದಕ್ಕೇನ್ ಅನ್ನಣ?' ಎಲ್ಲಿಂದ ಎಲ್ಲಿಗೋ ಒಂದು ಕನೆಕ್ಷನ್ ಮಾಡಿ ಮಾತನಾಡಿದ.
'ಎಲಾ ಇವನಾ, ನಿನಗೇನು ಗೊತ್ತೋ ಆಪರೇಟಿಂಗ್ ಸಿಷ್ಟಂ ಬಗ್ಗೆ?' ಎಂದು ವಿಶ್ವಾಸದ ನಗೆ ಬೀರಿದರೂ, ಅವನ ತುಲನೆಯನ್ನು ಪೋಷಿಸದೇ, 'ಒಂದ್ ದೇಶವನ್ನು ಅತಂತ್ರ ಮಾಡಿದೋರಿಗೆ ಅಲ್ಲಿ ಏನು ನಡೆಯುತ್ತೇ ಅನ್ನೋದು ಗೊತ್ತಿರದೇ ಇದ್ದೀತೇನು...ಅದಿರ್ಲಿ, ವಿಂಡೋಸ್‌ನಲ್ಲಿ ಏನ್ ಸಮಸ್ಯೆ ಇದೇ?' ಎಂದೆ.
'ಏನೋ ಅಲ್ಪಾ ಸೊಲ್ಪಾ ತಿಳಕಂಡೀದೀನಿ, ಅಲ್ಲೀ ಇಲ್ಲೀ ಓದಿ...ವಿಂಡೋಸ್ ನಲ್ಲಿ ಬರೀ ಬಗ್ಸ್ ಅಂತೇ...ದೊಡ್ಡ ದೊಡ್ಡ ಕಾರ್ಪೋರೇಷನ್ನಿನ ಸರ್ವರುಗಳೆಲ್ಲಾ ಯುನಿಕ್ಸ್ ಬೇಸ್ಡ್ ಸಿಷ್ಟಂಗಳಂತೆ...ಅಂತ ಎಲ್ಲೋ ಓದಿದ ನೆನಪು, ಅದಕ್ಕೇ ಅಂದೆ' ಎಂದು ಸಮಜಾಯಿಷಿ ನೀಡಿದ.
'ಪ್ರಧಾನಮಂತ್ರಿ ವ್ಯವಸ್ಥೆಯಲ್ಲಿ ತೊಂದ್ರೆ ಇದೇ ಅಂತ ಜನರಲೈಜ್ ಮಾಡಕ್ ಆಗಲ್ಲಾ, ಯುಕೆ ನಲ್ಲಿ ಹತ್ತು ವರ್ಷಾ ನಡೀಲಿಲ್ವೇ ಬ್ಲೇರ್‌ನ ಆಡಳಿತ? ಇನ್ನು ಇಂಡಿಯಾದವ್ರ ಕಥೆ ಬಿಡೂ ಅಲ್ಲಿ ಬರೋ ಮಂತ್ರಿ ಮಹೋದಯ್ರನ್ನ ಲೆಕ್ಕ ಇಟ್‌ಗಳಕೆ ಕೈ ಬೆರಳುಗಳು ಸಾಲಲ್ಲ!
ಸುಬ್ಬ, 'ಏನೋ...ಈ ವಯ್ಯಾ ವೆಕೇಷನ್ನ್ ಇಂದ ಬರೋ ಹೊತ್ತಿಗೆ ಇನ್ನೊಂದ್ ರಾಮಾಯ್ಣ ಆಗ್ದೇ ಇದ್ರೆ ಸಾಕು...' ಎಂದು ರಾಗ ಎಳೆದು ಮತ್ತೆ ಬುಷ್ಷನ ಕಾನ್‌ಫರೆನ್ಸ್ ಕಡೆಗೆ ಕಿವಿಕೊಟ್ಟ, ನಾನು ಅಡುಗೆಮನೆ ಕಡೆಗೆ ನಡೆದೆ.