...ನೆರೆಹೊರೆಗೆ ನಮಿಸುತ್ತಾ....
ಸಾಕು, ಎಷ್ಟೂ ಅಂತ ಬರೆಯೋದು ಈ ಬ್ಲಾಗ್ನಲ್ಲಿ, ನಿಲ್ಲಿಸಿಬಿಡೋಣ ಒಂದು ದಿನ - ಎನ್ನೋ ಆಲೋಚನೆ ಬಂದಿದ್ದೇ ತಡ ನಾನು ಬರೆದದ್ದನ್ನೆಲ್ಲಾ ಒಮ್ಮೆ ನೋಡಿಕೊಂಡು ಬಂದೆ. ೨೦೦೬ ರ ಮೇ ತಿಂಗಳಿನಲ್ಲಿ ನನಗೆ ಅದ್ಯಾವ ಭೂತ ಆವರಿಸಿಕೊಂಡಿತ್ತೋ ಗೊತ್ತಿಲ್ಲ, ಮೂವತ್ತೊಂದು ದಿನಗಳಲ್ಲಿ ಮೂವತ್ತೊಂದು ಬರಹಗಳನ್ನು ಪ್ರಕಟಿಸಿದ ದಾಖಲೆ ಅದು!
ಏನಾಗಿತ್ತು ಮೇ ೨೦೦೬ ರಲ್ಲಿ ಎಂದು ಅಲ್ಲಿನ ಬರಹಗಳನ್ನು ತಿರುವಿ ಹಾಕಿಕೊಂಡು ಬಂದರೆ (ಇತರರು ಹೇಳುವಂತೆ) ಈ ಬ್ಲಾಗ್ನ ಎಷ್ಟೋ ಮುಖ್ಯ ಲೇಖನಗಳು ಅಲ್ಲಿ ಕಂಡು ಬಂದವು. ಕೆಲವು ದಿನಚರಿಗೆ ಸಂಬಂಧಿಸಿದ್ದು, ಇನ್ನು ಕೆಲವು ಹಾಸ್ಯ, ಇನ್ನು ಕೆಲವು ದೈನಂದಿನ ಅನುಭವ, ಕೆಲವು ಸಂವಾದ, ಒಂದಿಷ್ಟು ನ್ಯೂ ಯಾರ್ಕ್ ನಗರವನ್ನು ಕುರಿತು, ಇತ್ಯಾದಿ. ಹಳೆಯ ಆಫೀಸಿನಲ್ಲಿ ಹಳೆಯ ಕೆಲಸದಲ್ಲಿ ಕುಳಿತಿದ್ದಾಗ ಆಗ ಹೆಚ್ಚು ಸಮಯವಿರುತ್ತಿತ್ತೆಂದೋ, ಆಗಷ್ಟೇ ಹೊರ ಬರುತ್ತಿದ್ದ, ಹೊರಬಂದ ಬ್ಲಾಗ್ ಪ್ರಪಂಚದ ಅರಿವು ಇನ್ನೂ ಬಿಸಿಯಾಗೇ ಇತ್ತೆಂದೋ, ಬರೆಯುವ ಹುರುಪಿನಲ್ಲಿ ಏನೇನೆಲ್ಲವನ್ನು ಕುಟ್ಟಿಕೊಂಡು ಹೋಗುವ ಧೈರ್ಯವಿತ್ತೆಂದೋ ಯೋಚಿಸಿಕೊಂಡು ಬಂದೆ. ಊಹ್ಞೂ, ಅದೆಲ್ಲ ಸರಿಯಾದ ಕಾರಣವೇ ಅಲ್ಲ...ವ್ಯಸ್ತರಾದಷ್ಟೂ ಸೃಜನಶೀಲತೆ ಹೆಚ್ಚುತ್ತಂತೆ! ಎಂದು ಹೊಸ ಹೇಳಿಕೆಯನ್ನು ಕೊಡುವ ಯತ್ನವಷ್ಟೇ.
"...ಆದರೆ ಒಂದಂತೂ ಸತ್ಯ, ಇಲ್ಲಿ ಒಂದು ಸಾಲು ಬರೆಯಬೇಕಾದರೆ ಕೊನೇಪಕ್ಷ ಹತ್ತು ಸಾಲನ್ನಾದರೂ ಓದಬೇಕು (ಕಟ್ಟಿಕೊಂಡ ಬುತ್ತಿ ಎಷ್ಟು ಹೊತ್ತು ಬಂದೀತು?) " ಎಂದು ಹಿಂದೆ ಬರೆದ ಮಾತು ನಿಜ - ಹೆಚ್ಚು ಬರೆಯಬೇಕು ಎಂದರೆ ಹೆಚ್ಚು ಹೆಚ್ಚು ಓದಬೇಕು, ಅದಕ್ಕೇ ಬಂದಿರೋದು ದೊಡ್ಡ ಕೊರತೆ. ಸರಿ ಒಂದಿಷ್ಟು ಏನನ್ನಾದರೂ ಓದೋಣವೆಂದುಕೊಂಡು ಹಠಮಾರಿತನದಿಂದ ಲೈಬ್ರರಿಯಿಂದ ಆರೇಳು ಪುಸ್ತಕವನ್ನು ತಂದುಕೊಂಡು ಓದಲು ತೊಡಗಿದರೆ ಯಾವುದೂ ರುಚಿಸಲಿಲ್ಲ - ಈ ಬೆಸ್ಟ್ ಸೆಲ್ಲರ್ ಎನ್ನುವ ಹಣೆಪಟ್ಟಿ ಹೊತ್ತುಕೊಂಡ ಪುಸ್ತಕಗಳನ್ನು ಇನ್ನು ಮುಂದೆ ಓದಲೇ ಬಾರದು ಎನ್ನುವ ಇನ್ಫರೆನ್ಸ್ ಬರುವಷ್ಟು ನಿರಾಶೆ, ಅವುಗಳಲ್ಲೇ ಕಷ್ಟಪಟ್ಟು ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿದರೆ ಅದರ ಹೆಸರನ್ನು ನೆನಪಿನಲ್ಲಿಡಲಾರದಷ್ಟು ಯೋಗ್ಯ ಪುಸ್ತಕಗಳವು. ಅವುಗಳನ್ನು ತಂದ ತಪ್ಪಿಗೆ ಹೋಗಿ ಲೈಬ್ರರಿಗೆ ಹೋಗಿ ಬಿಸಾಕಿ ಬಂದದ್ದಾಯಿತು.
ಯಾವ್ದಾದ್ರೂ ಕನ್ನಡ ಪುಸ್ತಕ ಓದೋಣ ಎಂದರೆ ಹೊಸದೇನೂ ಕಾಣಿಸ್ತಿಲ್ಲ - ಕಂಡ ಕಂಡವರಿಗೆ ಫೋನ್ ಮಾಡಿ 'ಆವರಣ' ಇದ್ರೆ ಕೊಡಿ ಅಂತ ಕೇಳ್ಕೊಂಡೆ, ಇನ್ನೊಂದ್ ವಾರದಲ್ಲಿ ಯಾರಾದ್ರೂ ಪುಣ್ಯಾತ್ಮರು ಕಳಿಸ್ತಾರೆ ಅಂತ ಗೊತ್ತು - ಅದನ್ನಾದರೂ ಸ್ವಲ್ಪ ಅಸ್ಥೆಯಿಂದ ಓದಬೇಕು. ಆವರಣ ಓದಿದ ಮೇಲೆ ಓದೋಣ ಎಂದು ಬದಿಗೆ ಸರಿಸಿಟ್ಟ ಲೇಖನ, ವಿಮರ್ಶೆ, ಚರ್ಚೆಗಳ ಪಟ್ಟಿ ಬಹಳ ದೊಡ್ಡದಿದೆ - ನನ್ನ ಮೂಲ ಓದಿಗೆ ಧಕ್ಕೆಯಾಗಬಾರದು, ಅದರಲ್ಲಿ ಯಾರ ಇನ್ಫ್ಲುಯೆನ್ಸೂ ಇರಬಾರದು ಎಂಬ ಹಠಕ್ಕೆ ಬಿದ್ದು ನಾನು ಉಳಿದವನ್ನೆಲ್ಲಾ ಬದಿಗಿಟ್ಟಿದ್ದೇನೆ. ಕನ್ನಡ ಪುಸ್ತಕಗಳು ಹ್ಯಾರಿ ಪಾಟ್ಟರ್ ರೀತಿಯ ಪಬ್ಲಿಸಿಟಿಯನ್ನು ಕಾಣುವುದು ಯಾವ ಕಾಲಕ್ಕಿದೆಯೋ, ಆದರೆ ನನ್ನಂತಹವರಿಗೆ ದೇಹದಲ್ಲಿ ರಕ್ತ ಸ್ವಲ್ಪ ವೇಗವಾಗೇನಾದರೂ ಓಡಾಡುವುದಿದ್ದರೆ ಅದು ಹೊಸ ಕನ್ನಡ ಪುಸ್ತಕದ ಬಿಡುಗಡೆಯ ಸುದ್ದಿಯಿಂದಲೇ!
***
ತಿಂಗಳಿಗೆ ಹತ್ತು, ಇಪ್ಪತ್ತು, ಮೂವತ್ತು ಲೇಖನಗಳನ್ನು ಬರೆಯೋದು ದೊಡ್ಡ ವಿಷಯವಲ್ಲ, ಆ ಲೇಖನಗಳಲ್ಲಿ ಕ್ವಾಲಿಟಿ, ಕನ್ಸಿಸ್ಟೆನ್ಸಿ, ಹೊಸತೇನಾದರೊಂದನ್ನು ಪ್ರಸ್ತುತ ಪಡಿಸೋದು ಮುಖ್ಯ. ಎನ್.ಪಿ.ಆರ್ನ ಮಾರ್ನಿಂಗ್ ಎಡಿಷನ್ನಲ್ಲಿ ಬ್ರಿಟೀಷ್ ಸಿನಿಮಾ ನಿರ್ದೇಶಕ ಡ್ಯಾನ್ನಿ ಬಾಯ್ಲ್ (Danny Boyle) ಬಗ್ಗೆ Sunshine ಸಿನಿಮಾದ ರಿವ್ಯೂವ್ನಲ್ಲಿ ..., whose eclectic résumé, including Millions, Trainspotting, and 28 Days Later, reveals a refusal to make the same film twice...ಎಂದು ಕೆನೆತ್ ಟುರಾನ್ ಧ್ವನಿಯಲ್ಲಿ ಕೇಳಿದೊಡನೆ ಆ ಸಿನಿಮಾವನ್ನು ನೋಡಬೇಕು, ಈ ನಿರ್ದೇಶಕನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎನ್ನಿಸಿದ್ದಂತೂ ನಿಜ.
ಹೌದು, ನನ್ನ ಬರಹಗಳು ಸ್ಪೈಡರ್ಮ್ಯಾನ್ ಥ್ರೀ ತೋರಿಸೋ ಪಕ್ಕದ ಥಿಯೇಟರ್ರ್ನಲ್ಲಿನ ಕಪ್ಪೂ-ಬಿಳಿ ಚಿತ್ರದಂತಾಗಬಾರದು. ಹಾಗಂತ, ಅವುಗಳು ನಾನೇ ಓದಿ ಮುಗಿಸಲಾರದ ಬೆಸ್ಟ್ ಸೆಲ್ಲರ್ ಪುಸ್ತಕವಾಗಲೂ ಕೂಡದು. ಹೊಸತನ್ನಾಗಲೀ, ವಿಶೇಷವಾಗಿರೋದೇನನ್ನಾಗಲೀ ಬರೆಯೋದಾಗದಿದ್ದರೆ ಹಾಗೆ ಬರೆದವುಗಳನ್ನು ಓದಿ ಅವುಗಳನ್ನು ಪುರಸ್ಕರಿಸುವುದೇ ಮೇಲಲ್ಲವೇ?
***
ಈ 'ಅಂತರಂಗ'ದಲ್ಲಿ ಬೇಕಾದಷ್ಟು ದ್ವಂದ್ವಗಳು ಹೊರಬಂದಿವೆಯೇ ವಿನಾ ಯಾರ ಯಾವ ಪ್ರಶ್ನೆಗಳಿಗೂ ನಿಖರವಾದ ಉತ್ತರವೇನೂ ಈವರೆಗೆ ಸಿಕ್ಕಂತೆ ಕಂಡುಬಂದಿಲ್ಲ. ಕೆಲವು ಲೇಖನಗಳಂತೂ ಒಣಗಿದ ಗರಟೇ ಚಿಪ್ಪನ್ನು ತುಕ್ಕು ಹಿಡಿದ ಕೆರೆಮಣೆ ಮೇಲೆ ಹಾಕಿ ತಿಕ್ಕಿದ ಹಾಗೆ ಮೊದಲಿನಿಂದ ಕೊನೇವರೆಗೆ ಒಂದೇ ರಾಗವನ್ನು ಹೊರಡಿಸಿಕೊಂಡು ಬಂದಿವೆ. ಆದರೆ ಈ ಲೇಖನಗಳನ್ನು ಬರೆಯುವುದರ ಮೂಲ ಉದ್ದೇಶ ಈವರೆಗೆ ಜೊತೆ ಸೇರಿದ ಕೆಲವರಿಗೆ ಗೊತ್ತು - ಸೋಮಾರಿತನವನ್ನು ಹೋಗಲಾಡಿಸುವುದು, ಬರೆಯುವ ಶಿಸ್ತನ್ನು ಬೆಳೆಸಿಕೊಳ್ಳುವುದು ಹಾಗೂ ನನ್ನದೇ ಆದ ಒಂದು ಅಸ್ತಿತ್ವವನ್ನು ಗುರುತಿಸಿಕೊಳ್ಳುವುದು. ನನ್ನಲ್ಲಿನ ಸೋಮಾರಿತನವೆನ್ನುವುದನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಳ್ಳಲಾಗದಿದ್ದರೂ ವಿಶ್ವ ಸೋಮಾರಿಗಳ ಸಂಘದ ಅಧ್ಯಕ್ಷನಿಗಿರಬೇಕಾದ ಯೋಗ್ಯತೆಗಳು ನನ್ನಲ್ಲಿಲ್ಲದಿರುವುದರಿಂದ ಆ ಹುದ್ದೆಗೆ ರಾಜೀನಾಮೆಯನ್ನು ಈಗಾಗಲೇ ಸಲ್ಲಿಸಿಯಾಗಿದೆ. ಮೂವತ್ತು ನಿಮಿಷಗಳಲ್ಲಿ ಇದ್ದಬದ್ದದ್ದನ್ನೆಲ್ಲ ಕಕ್ಕಿಕೊಳ್ಳುವುದನ್ನು ಬರೆಯುವ ಶಿಸ್ತು ಎಂದು ಸಾಧಿಸಿಕೊಂಡರೆ ಅದೂ ಹೆಚ್ಚೂ ಕಡಿಮೆ ಸಿದ್ಧಿಸಿದಂತೆಯೇ. ಇನ್ನು ನನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದೆನೆಯೇ ಎಂದು ಯೋಚಿಸಿಕೊಂಡರೆ... 'ಈ ಹಾಳು ಬರಹಗಳೇನು ನನ್ನ ಅಸ್ತಿತ್ವವನ್ನು ಗುರುತಿಸುವುದು?' ಎಂದು ನನ್ನ ಹಾಗೂ ಈ ಕಂಪ್ಯೂಟರ್ ಸ್ಕ್ರೀನಿನ ನಡುವಿನ ಅವಕಾಶದಲ್ಲಿ ಈವರೆಗೆ ಬರೀ ಧ್ವನಿಯಿಂದಷ್ಟೇ ಹೆದರಿಸುತ್ತಿದ್ದ ಚೀತ್ಕಾರಗಳಿಗೆ ಸ್ವಲ್ಪ ಸ್ವಲ್ಪ ಮುಖವೂ ಮೂಡತೊಡಗಿರುವುದು ಸ್ವಷ್ಟವಾಗಿದೆ.
ನಿಖರವಾಗಿ ವ್ಯವಹರಿಸೋ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ದೂರ ಬಂದು ಬಿಸಿನೆಸ್ ಮ್ಯಾನೇಜ್ಮೆಂಟ್ ಕೈ ಹಿಡಿದುಕೊಂಡಮೇಲೆ ಬರೀ ಅಡ್ಡ ಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನಾಡುವುದನ್ನು ಪೋಷಿಸಿಕೊಂಡು ಬರುವಂತೆ ಮಾಡುತ್ತಿರುವ ನನ್ನ ನೆರೆಹೊರೆಗೆ ನಮಿಸುತ್ತಾ, ಅಂತರಂಗದಲ್ಲಿ ಬೇಕಾದಷ್ಟು ಸಾರಿ ಈ ಹಿಂದೆ ಹೇಳಿದಂತೆ ಈಗಲೂ ಹೇಳುತ್ತೇನೆ - ನೋಡೋಣ, ಇದು ಎಲ್ಲಿಯವರೆಗೂ ಬರುತ್ತೋ ಎಂದು!