Friday, July 20, 2007

...ನೆರೆಹೊರೆಗೆ ನಮಿಸುತ್ತಾ....

ಸಾಕು, ಎಷ್ಟೂ ಅಂತ ಬರೆಯೋದು ಈ ಬ್ಲಾಗ್‌ನಲ್ಲಿ, ನಿಲ್ಲಿಸಿಬಿಡೋಣ ಒಂದು ದಿನ - ಎನ್ನೋ ಆಲೋಚನೆ ಬಂದಿದ್ದೇ ತಡ ನಾನು ಬರೆದದ್ದನ್ನೆಲ್ಲಾ ಒಮ್ಮೆ ನೋಡಿಕೊಂಡು ಬಂದೆ. ೨೦೦೬ ರ ಮೇ ತಿಂಗಳಿನಲ್ಲಿ ನನಗೆ ಅದ್ಯಾವ ಭೂತ ಆವರಿಸಿಕೊಂಡಿತ್ತೋ ಗೊತ್ತಿಲ್ಲ, ಮೂವತ್ತೊಂದು ದಿನಗಳಲ್ಲಿ ಮೂವತ್ತೊಂದು ಬರಹಗಳನ್ನು ಪ್ರಕಟಿಸಿದ ದಾಖಲೆ ಅದು!

ಏನಾಗಿತ್ತು ಮೇ ೨೦೦೬ ರಲ್ಲಿ ಎಂದು ಅಲ್ಲಿನ ಬರಹಗಳನ್ನು ತಿರುವಿ ಹಾಕಿಕೊಂಡು ಬಂದರೆ (ಇತರರು ಹೇಳುವಂತೆ) ಈ ಬ್ಲಾಗ್‌ನ ಎಷ್ಟೋ ಮುಖ್ಯ ಲೇಖನಗಳು ಅಲ್ಲಿ ಕಂಡು ಬಂದವು. ಕೆಲವು ದಿನಚರಿಗೆ ಸಂಬಂಧಿಸಿದ್ದು, ಇನ್ನು ಕೆಲವು ಹಾಸ್ಯ, ಇನ್ನು ಕೆಲವು ದೈನಂದಿನ ಅನುಭವ, ಕೆಲವು ಸಂವಾದ, ಒಂದಿಷ್ಟು ನ್ಯೂ ಯಾರ್ಕ್ ನಗರವನ್ನು ಕುರಿತು, ಇತ್ಯಾದಿ. ಹಳೆಯ ಆಫೀಸಿನಲ್ಲಿ ಹಳೆಯ ಕೆಲಸದಲ್ಲಿ ಕುಳಿತಿದ್ದಾಗ ಆಗ ಹೆಚ್ಚು ಸಮಯವಿರುತ್ತಿತ್ತೆಂದೋ, ಆಗಷ್ಟೇ ಹೊರ ಬರುತ್ತಿದ್ದ, ಹೊರಬಂದ ಬ್ಲಾಗ್ ಪ್ರಪಂಚದ ಅರಿವು ಇನ್ನೂ ಬಿಸಿಯಾಗೇ ಇತ್ತೆಂದೋ, ಬರೆಯುವ ಹುರುಪಿನಲ್ಲಿ ಏನೇನೆಲ್ಲವನ್ನು ಕುಟ್ಟಿಕೊಂಡು ಹೋಗುವ ಧೈರ್ಯವಿತ್ತೆಂದೋ ಯೋಚಿಸಿಕೊಂಡು ಬಂದೆ. ಊಹ್ಞೂ, ಅದೆಲ್ಲ ಸರಿಯಾದ ಕಾರಣವೇ ಅಲ್ಲ...ವ್ಯಸ್ತರಾದಷ್ಟೂ ಸೃಜನಶೀಲತೆ ಹೆಚ್ಚುತ್ತಂತೆ! ಎಂದು ಹೊಸ ಹೇಳಿಕೆಯನ್ನು ಕೊಡುವ ಯತ್ನವಷ್ಟೇ.

"...ಆದರೆ ಒಂದಂತೂ ಸತ್ಯ, ಇಲ್ಲಿ ಒಂದು ಸಾಲು ಬರೆಯಬೇಕಾದರೆ ಕೊನೇಪಕ್ಷ ಹತ್ತು ಸಾಲನ್ನಾದರೂ ಓದಬೇಕು (ಕಟ್ಟಿಕೊಂಡ ಬುತ್ತಿ ಎಷ್ಟು ಹೊತ್ತು ಬಂದೀತು?) " ಎಂದು ಹಿಂದೆ ಬರೆದ ಮಾತು ನಿಜ - ಹೆಚ್ಚು ಬರೆಯಬೇಕು ಎಂದರೆ ಹೆಚ್ಚು ಹೆಚ್ಚು ಓದಬೇಕು, ಅದಕ್ಕೇ ಬಂದಿರೋದು ದೊಡ್ಡ ಕೊರತೆ. ಸರಿ ಒಂದಿಷ್ಟು ಏನನ್ನಾದರೂ ಓದೋಣವೆಂದುಕೊಂಡು ಹಠಮಾರಿತನದಿಂದ ಲೈಬ್ರರಿಯಿಂದ ಆರೇಳು ಪುಸ್ತಕವನ್ನು ತಂದುಕೊಂಡು ಓದಲು ತೊಡಗಿದರೆ ಯಾವುದೂ ರುಚಿಸಲಿಲ್ಲ - ಈ ಬೆಸ್ಟ್ ಸೆಲ್ಲರ್ ಎನ್ನುವ ಹಣೆಪಟ್ಟಿ ಹೊತ್ತುಕೊಂಡ ಪುಸ್ತಕಗಳನ್ನು ಇನ್ನು ಮುಂದೆ ಓದಲೇ ಬಾರದು ಎನ್ನುವ ಇನ್‌ಫರೆನ್ಸ್ ಬರುವಷ್ಟು ನಿರಾಶೆ, ಅವುಗಳಲ್ಲೇ ಕಷ್ಟಪಟ್ಟು ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿದರೆ ಅದರ ಹೆಸರನ್ನು ನೆನಪಿನಲ್ಲಿಡಲಾರದಷ್ಟು ಯೋಗ್ಯ ಪುಸ್ತಕಗಳವು. ಅವುಗಳನ್ನು ತಂದ ತಪ್ಪಿಗೆ ಹೋಗಿ ಲೈಬ್ರರಿಗೆ ಹೋಗಿ ಬಿಸಾಕಿ ಬಂದದ್ದಾಯಿತು.

ಯಾವ್ದಾದ್ರೂ ಕನ್ನಡ ಪುಸ್ತಕ ಓದೋಣ ಎಂದರೆ ಹೊಸದೇನೂ ಕಾಣಿಸ್ತಿಲ್ಲ - ಕಂಡ ಕಂಡವರಿಗೆ ಫೋನ್ ಮಾಡಿ 'ಆವರಣ' ಇದ್ರೆ ಕೊಡಿ ಅಂತ ಕೇಳ್ಕೊಂಡೆ, ಇನ್ನೊಂದ್ ವಾರದಲ್ಲಿ ಯಾರಾದ್ರೂ ಪುಣ್ಯಾತ್ಮರು ಕಳಿಸ್ತಾರೆ ಅಂತ ಗೊತ್ತು - ಅದನ್ನಾದರೂ ಸ್ವಲ್ಪ ಅಸ್ಥೆಯಿಂದ ಓದಬೇಕು. ಆವರಣ ಓದಿದ ಮೇಲೆ ಓದೋಣ ಎಂದು ಬದಿಗೆ ಸರಿಸಿಟ್ಟ ಲೇಖನ, ವಿಮರ್ಶೆ, ಚರ್ಚೆಗಳ ಪಟ್ಟಿ ಬಹಳ ದೊಡ್ಡದಿದೆ - ನನ್ನ ಮೂಲ ಓದಿಗೆ ಧಕ್ಕೆಯಾಗಬಾರದು, ಅದರಲ್ಲಿ ಯಾರ ಇನ್‌ಫ್ಲುಯೆನ್ಸೂ ಇರಬಾರದು ಎಂಬ ಹಠಕ್ಕೆ ಬಿದ್ದು ನಾನು ಉಳಿದವನ್ನೆಲ್ಲಾ ಬದಿಗಿಟ್ಟಿದ್ದೇನೆ. ಕನ್ನಡ ಪುಸ್ತಕಗಳು ಹ್ಯಾರಿ ಪಾಟ್ಟರ್ ರೀತಿಯ ಪಬ್ಲಿಸಿಟಿಯನ್ನು ಕಾಣುವುದು ಯಾವ ಕಾಲಕ್ಕಿದೆಯೋ, ಆದರೆ ನನ್ನಂತಹವರಿಗೆ ದೇಹದಲ್ಲಿ ರಕ್ತ ಸ್ವಲ್ಪ ವೇಗವಾಗೇನಾದರೂ ಓಡಾಡುವುದಿದ್ದರೆ ಅದು ಹೊಸ ಕನ್ನಡ ಪುಸ್ತಕದ ಬಿಡುಗಡೆಯ ಸುದ್ದಿಯಿಂದಲೇ!

***

ತಿಂಗಳಿಗೆ ಹತ್ತು, ಇಪ್ಪತ್ತು, ಮೂವತ್ತು ಲೇಖನಗಳನ್ನು ಬರೆಯೋದು ದೊಡ್ಡ ವಿಷಯವಲ್ಲ, ಆ ಲೇಖನಗಳಲ್ಲಿ ಕ್ವಾಲಿಟಿ, ಕನ್‌ಸಿಸ್ಟೆನ್ಸಿ, ಹೊಸತೇನಾದರೊಂದನ್ನು ಪ್ರಸ್ತುತ ಪಡಿಸೋದು ಮುಖ್ಯ. ಎನ್‌.ಪಿ.ಆರ್‌ನ ಮಾರ್ನಿಂಗ್ ಎಡಿಷನ್‌ನಲ್ಲಿ ಬ್ರಿಟೀಷ್ ಸಿನಿಮಾ ನಿರ್ದೇಶಕ ಡ್ಯಾನ್ನಿ ಬಾಯ್ಲ್ (Danny Boyle) ಬಗ್ಗೆ Sunshine ಸಿನಿಮಾದ ರಿವ್ಯೂವ್‌‍ನಲ್ಲಿ ..., whose eclectic résumé, including Millions, Trainspotting, and 28 Days Later, reveals a refusal to make the same film twice...ಎಂದು ಕೆನೆತ್ ಟುರಾನ್ ಧ್ವನಿಯಲ್ಲಿ ಕೇಳಿದೊಡನೆ ಆ ಸಿನಿಮಾವನ್ನು ನೋಡಬೇಕು, ಈ ನಿರ್ದೇಶಕನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎನ್ನಿಸಿದ್ದಂತೂ ನಿಜ.

ಹೌದು, ನನ್ನ ಬರಹಗಳು ಸ್ಪೈಡರ್‌ಮ್ಯಾನ್ ಥ್ರೀ ತೋರಿಸೋ ಪಕ್ಕದ ಥಿಯೇಟರ್ರ್‌ನಲ್ಲಿನ ಕಪ್ಪೂ-ಬಿಳಿ ಚಿತ್ರದಂತಾಗಬಾರದು. ಹಾಗಂತ, ಅವುಗಳು ನಾನೇ ಓದಿ ಮುಗಿಸಲಾರದ ಬೆಸ್ಟ್ ಸೆಲ್ಲರ್ ಪುಸ್ತಕವಾಗಲೂ ಕೂಡದು. ಹೊಸತನ್ನಾಗಲೀ, ವಿಶೇಷವಾಗಿರೋದೇನನ್ನಾಗಲೀ ಬರೆಯೋದಾಗದಿದ್ದರೆ ಹಾಗೆ ಬರೆದವುಗಳನ್ನು ಓದಿ ಅವುಗಳನ್ನು ಪುರಸ್ಕರಿಸುವುದೇ ಮೇಲಲ್ಲವೇ?

***

ಈ 'ಅಂತರಂಗ'ದಲ್ಲಿ ಬೇಕಾದಷ್ಟು ದ್ವಂದ್ವಗಳು ಹೊರಬಂದಿವೆಯೇ ವಿನಾ ಯಾರ ಯಾವ ಪ್ರಶ್ನೆಗಳಿಗೂ ನಿಖರವಾದ ಉತ್ತರವೇನೂ ಈವರೆಗೆ ಸಿಕ್ಕಂತೆ ಕಂಡುಬಂದಿಲ್ಲ. ಕೆಲವು ಲೇಖನಗಳಂತೂ ಒಣಗಿದ ಗರಟೇ ಚಿಪ್ಪನ್ನು ತುಕ್ಕು ಹಿಡಿದ ಕೆರೆಮಣೆ ಮೇಲೆ ಹಾಕಿ ತಿಕ್ಕಿದ ಹಾಗೆ ಮೊದಲಿನಿಂದ ಕೊನೇವರೆಗೆ ಒಂದೇ ರಾಗವನ್ನು ಹೊರಡಿಸಿಕೊಂಡು ಬಂದಿವೆ. ಆದರೆ ಈ ಲೇಖನಗಳನ್ನು ಬರೆಯುವುದರ ಮೂಲ ಉದ್ದೇಶ ಈವರೆಗೆ ಜೊತೆ ಸೇರಿದ ಕೆಲವರಿಗೆ ಗೊತ್ತು - ಸೋಮಾರಿತನವನ್ನು ಹೋಗಲಾಡಿಸುವುದು, ಬರೆಯುವ ಶಿಸ್ತನ್ನು ಬೆಳೆಸಿಕೊಳ್ಳುವುದು ಹಾಗೂ ನನ್ನದೇ ಆದ ಒಂದು ಅಸ್ತಿತ್ವವನ್ನು ಗುರುತಿಸಿಕೊಳ್ಳುವುದು. ನನ್ನಲ್ಲಿನ ಸೋಮಾರಿತನವೆನ್ನುವುದನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಳ್ಳಲಾಗದಿದ್ದರೂ ವಿಶ್ವ ಸೋಮಾರಿಗಳ ಸಂಘದ ಅಧ್ಯಕ್ಷನಿಗಿರಬೇಕಾದ ಯೋಗ್ಯತೆಗಳು ನನ್ನಲ್ಲಿಲ್ಲದಿರುವುದರಿಂದ ಆ ಹುದ್ದೆಗೆ ರಾಜೀನಾಮೆಯನ್ನು ಈಗಾಗಲೇ ಸಲ್ಲಿಸಿಯಾಗಿದೆ. ಮೂವತ್ತು ನಿಮಿಷಗಳಲ್ಲಿ ಇದ್ದಬದ್ದದ್ದನ್ನೆಲ್ಲ ಕಕ್ಕಿಕೊಳ್ಳುವುದನ್ನು ಬರೆಯುವ ಶಿಸ್ತು ಎಂದು ಸಾಧಿಸಿಕೊಂಡರೆ ಅದೂ ಹೆಚ್ಚೂ ಕಡಿಮೆ ಸಿದ್ಧಿಸಿದಂತೆಯೇ. ಇನ್ನು ನನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದೆನೆಯೇ ಎಂದು ಯೋಚಿಸಿಕೊಂಡರೆ... 'ಈ ಹಾಳು ಬರಹಗಳೇನು ನನ್ನ ಅಸ್ತಿತ್ವವನ್ನು ಗುರುತಿಸುವುದು?' ಎಂದು ನನ್ನ ಹಾಗೂ ಈ ಕಂಪ್ಯೂಟರ್ ಸ್ಕ್ರೀನಿನ ನಡುವಿನ ಅವಕಾಶದಲ್ಲಿ ಈವರೆಗೆ ಬರೀ ಧ್ವನಿಯಿಂದಷ್ಟೇ ಹೆದರಿಸುತ್ತಿದ್ದ ಚೀತ್ಕಾರಗಳಿಗೆ ಸ್ವಲ್ಪ ಸ್ವಲ್ಪ ಮುಖವೂ ಮೂಡತೊಡಗಿರುವುದು ಸ್ವಷ್ಟವಾಗಿದೆ.

ನಿಖರವಾಗಿ ವ್ಯವಹರಿಸೋ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ದೂರ ಬಂದು ಬಿಸಿನೆಸ್ ಮ್ಯಾನೇಜ್‌ಮೆಂಟ್ ಕೈ ಹಿಡಿದುಕೊಂಡಮೇಲೆ ಬರೀ ಅಡ್ಡ ಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನಾಡುವುದನ್ನು ಪೋಷಿಸಿಕೊಂಡು ಬರುವಂತೆ ಮಾಡುತ್ತಿರುವ ನನ್ನ ನೆರೆಹೊರೆಗೆ ನಮಿಸುತ್ತಾ, ಅಂತರಂಗದಲ್ಲಿ ಬೇಕಾದಷ್ಟು ಸಾರಿ ಈ ಹಿಂದೆ ಹೇಳಿದಂತೆ ಈಗಲೂ ಹೇಳುತ್ತೇನೆ - ನೋಡೋಣ, ಇದು ಎಲ್ಲಿಯವರೆಗೂ ಬರುತ್ತೋ ಎಂದು!

Thursday, July 19, 2007

ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...

ಎಷ್ಟೋ ಬಾರಿ ಅನ್ಸಲ್ವಾ ನಾವೆಲ್ಲಾ ಬೆಳೀತಾ ಬೆಳೀತಾ ನಮ್ ನಮ್ ಮುಗ್ಧತೆನಾ ಕಳ್ಕೊತೀವಿ ಅಂತ? ಮಕ್ಕಳ ಹಾಗೆ ಇರಬೇಕಿತ್ತಪಾ ಮನಸ್ಥಿತಿ, ಈ ಪ್ರಬುದ್ಧತೆ, ವಿಚಾರವಂತಿಕೆ ಅನ್ನೋದೆಲ್ಲಾ ಅವರವರಲ್ಲಿರೋ ಮುಗ್ಧತೆಯನ್ನು ಹೊಡೆದೋಡಿಸಿ ಅದರ ಜಾಗದಲ್ಲಿ ಇನ್ನೇನೋ ಒಂದನ್ನ ತಂದು ಕೂರಿಸೋ ಪ್ರಭೃತಿಗಳು ಅನ್ಸಲ್ವಾ?

ಇವತ್ತು ನಾವೆಲ್ಲಾ ಆಫೀಸ್ನಲ್ಲಿ ಒಟ್ಟಿಗೇ ಮುಂಜಾನೆ ಕೆಫೆಟೇರಿಯಾಕ್ ಹೋಗ್ತಾ ಇದ್ವಿ, ಎಲ್ರೂ ಸಾವಕಾಶವಾಗಿ ನಡೀತಾ ಇದ್ರೆ, ನಾನೊಬ್ನು ಯಾವ್ದೋ ಘನಕಾರ್ಯ ಕಡಿದು ಹಾಕೋದಕ್ಕಿದೆ ಎನ್ನೋ ಹಾಗೆ ಅವಸರದಲ್ಲಿ ಮಹಡಿ ಮೆಟ್ಟಿಲುಗಳನ್ನ ಇಳೀತಾ ಇದ್ದೆ, ನನ್ನ ಸಹೋದ್ಯೋಗಿ ಒಬ್ಬನು ಕೇಳೇ ಬಿಟ್ಟ,

'ಏನಯ್ಯಾ ನೀನು ಅರ್ಜೆಂಟಿನಲ್ಲಿರೋ ಹಾಗಿದೆ?!'

ಅದಕ್ಕುತ್ತರವಾಗಿ ನಾನೆಂದೆ, 'ನೋಡು, ನೀನಗೂ ಮೂವತ್ತು ವರ್ಷ ದಾಟಿದ ಮೇಲೆ, ದಿನದ ಇಪ್ಪತ್ತ್ ನಾಲ್ಕು ಘಂಟೆಗಳು ಸಾಕೋದಿಲ್ಲ ಅಂತ ಯಾವಾಗ ಅನ್ಸುತ್ತೆ, ಆಗ ಎಕ್ಸರ್‍ಸೈಜ್ ಮಾಡೋಕೆ ಪುರುಸೊತ್ತು ಸಿಗೋದಿಲ್ಲ, ಅದರ ಬದಲಿಗೆ ಎಲ್ಲಿ ಹೋದ್ರೂ ಬಂದ್ರೂ ಈ ರೀತಿ ಅವಸರದಲ್ಲಿ ಓಡಾಡಿಕೊಂಡಿದ್ರೆ ಒಂದಿಷ್ಟು ಹಾರ್ಟ್ ರೇಟಾದ್ರೂ ಜಾಸ್ತಿ ಆಗಿ ಇನ್ನೂ ಸ್ವಲ್ಪ ದಿನ ಜಾಸ್ತಿ ಬದುಕ್‌ಬೋದು...'

ಎಲ್ಲರೂ ನಕ್ಕರೂ, ನಾನೂ ನಕ್ಕು ಮತ್ತೆ ಮುಂದುವರೆಸಿದೆ,

'ಈ ದೊಡ್ಡ ಮನುಷ್ಯರೆಲ್ಲಾ ಸೂಟ್ ಯಾಕ್ ಹಾಕ್ಕೊಂಡಿರ್ತಾರೆ ಗೊತ್ತಾ, ಅವರು ಯಾವಾಗ್ ನೋಡಿದ್ರೂ ಮುಕುಳಿಗೆ ಬೆಂಕಿ ಬಿದ್ದ ಹಾಗೆ ತಿರುಗಾಡ್‌ತಿರ್ತಾರೆ ಅನ್ನೋದ್ ಗೊತ್ತೇ ಇದೆ...'

ಆ ಕಡೆಯಿಂದ ಏನೂ ಉತ್ರ ಬರಲಿಲ್ಲ,

'ಈ ಬೇಸಿಗೆಯಲ್ಲಿ ಸೂಟ್ ಹಾಕ್ಕೊಂಡ್ ವೇಗವಾಗಿ ಓಡಾಡೋದೂ ಒಂದೇ, ಕೈಯಲ್ಲಿ ಐದು ಪೌಂಡ್ ಡಂಬೆಲ್ಲ್ ಹಿಡಿದುಕೊಂಡ್ ಜಾಗ್ ಮಾಡೋದೂ ಒಂದೆ...'

ಹೀಗೇ ಟೈಮ್ ಸಿಕ್ಕಾಗ ಅಲ್ಲಲ್ಲಿ ಸಣ್ಣ ಪುಟ್ಟ ನಗೆ ಚಾಟಿಕೆ ಹಾರಿಸಿಕೊಂಡು ಕಾಲ ಕಳೀತಿರ್ತೀನಿ - ಮತ್ತಿನ್ನೇನ್ ಮಾಡೋದು, ನಮ್ಮಂತಹವರಿಗೆ ಆಫೀಸೇ ಬದುಕು, ಬದುಕೇ ಆಫೀಸ್ ಆಗಿರೋವಾಗ, ಯಾವಾಗ್ ನೋಡಿದ್ರೂ ಎಲ್ಲರೂ ಒಂದಲ್ಲಾ ಒಂದು ಸಂದಿಗ್ಧದಲ್ಲಿ ಸಿಕ್ಕೊಂಡೇ ಇರೋವಾಗ, ಸ್ಟ್ರೆಸ್ ಅನ್ನೋದು ದಿನದ ಅವಿಭಾಜ್ಯ ಅಂಗವಾದಾಗ...

ಶುಕ್ರವಾರ ಬಂತೂ ಅಂತಂದ್ರೆ 'ಓಹ್, ಇನ್ನೇನು ವೀಕ್ ಎಂಡ್ ಬಂತೂ...' ಅಂತ ಎಲ್ಲರ ಕಣ್ಣರಳುತ್ತೆ, ವಾರಾಂತ್ಯದಲ್ಲಿ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಮಾಡೋಣ ಅಂತ ಏನೇನೆಲ್ಲ ತಲೆಯೊಳಗೆ ಬಂದು ಕೊರೆಯೋಕ್ ಶುರು ಹೊಡೀತಿರ್ತಾವೆ. ಶನಿವಾರ ಎದ್ದು ಮುಖತೊಳೆದು ತಿಂಡಿ ತಿಂದಂಗ್ ಮಾಡಿ, ಕಾಫಿ ಕುಡದಂಗ್ ಮಾಡಿ ಇನ್ನೇನು ಮೈ ಮುರೀ ಬೇಕು ಅನ್ನೋಷ್ಟರಲ್ಲಿ ಮಧ್ಯಾಹ್ನವಾಗಿ ಹೋಗುತ್ತೆ. ಒಂದಿಷ್ಟು ಟಿವಿ ರಿಮೋಟಿನ ಮೇಲೆ ಕೈ ಆಡ್ಸಿ ಟಿವಿ ನೋಡ್ದಂಗ್ ಮಾಡಿ, ಮನೆ ಕ್ಲೀನ್ ಮಾಡ್ಕೊಂಡ್ ಸಂಜೆ ಶಾಪ್ಪಿಂಗ್ ಮುಗಿಸಿ ಕಾಫಿ ಕುಡಿದು, ರಾತ್ರೆ ಊಟಾ ಮುಗಿದು ಇನ್ನೂ ಮಲಗಿರಲ್ಲ ಆಗ್ಲೇ ಭಾನುವಾರ ಬಂದ್ ಹೋಗ್‌ಬಿಡುತ್ತೆ. ಒಡಹುಟ್ಟಿದವರು, ಪೋಷಕರಿಗೆ ಒಂದಿಷ್ಟ್ ಫೋನ್ ಮಾಡಿ 'ಚೆನ್ನಾಗಿದೀರಾ' ಅಂತ ಕೇಳೋ ಹೊತ್ತಿಗೆ, ಡ್ರೈಯರ್ರ್‌ನಲ್ಲಿರೋ ಬಟ್ಟೇ ತೆಗೆದು ಮಡಚಿ ಇಡೋ ಹೊತ್ತಿಗೆಲ್ಲಾ ಭಾನುವಾರ ಕಥೆ ಗೊಳಂ - ಮತ್ತೆ ಸೋಮವಾರದ ಹಾಡು. ಐದು ದಿನದ ವಾರದ ದಿನಗಳು ವೇಗವಾಗಿ ಹೋಗ್ತಾವೋ, ಎರಡು ದಿನಗಳ ವಾರಾಂತ್ಯ ವೇಗವಾಗಿ ಹೋಗುತ್ತೋ ಅನ್ನೋದಕ್ಕೆ ಯಾವ ಸೂತ್ರವನ್ನೂ ಯಾರೂ ಇನ್ನೂ ಕಂಡು ಹಿಡಿದ ಹಾಗಿಲ್ಲ.

ಹಿಡಿದ ಕೆಲಸವನ್ನು ಟೈಮಿಗೆ ಸರಿಯಾಗಿ ಮುಗಿಸಬೇಕೋ, ಅಥವಾ ಟೈಮ್ ಎಷ್ಟು ತೊಗೊಂಡ್ರೂ ಪರವಾಗಿಲ್ಲ ಹಿಡಿದ ಕೆಲಸವನ್ನು ಸರಿಯಾಗಿ ಮಾಡಬೇಕೋ ಅನ್ನೋ ಆಲೋಚನೆಗಳಲ್ಲಿ ತೊಡಗಿಕೊಂಡರೆ ಟೈಮ್ ಹೋಗಿದ್ದೇ ಗೊತ್ತಾಗಲ್ಲ. ಒಂದ್ ಕಡೆ ಘಂಟೆಯ ಬೆನ್ನು ಹತ್ತಿ ಎಲ್ಲರೂ ಒಂದಲ್ಲಾ ಒಂದು ಸ್ಕೆಡ್ಯೂಲ್‌ನಲ್ಲಿ ತೊಡಗಿಕೊಂಡಿರ್ತಾರೆ, ಅವರಿಗೆ ಅವರ ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಇನ್ನೊಂದ್ ಕಡೆ ಯಾವ್ದಾದ್ರೂ ಒಂದ್ ಪ್ರಶ್ನೆಗೆ ಯೋಚಿಸಿ ಉತ್ರ ಹೇಳೋದಕ್ಕೆ ಪುರುಸೊತ್ತು ಕೊಡದ ಹಾಗಿನ ಇವತ್ತಿನ ಮೀಟಿಂಗ್‌ನ ವಾತಾವರಣ, ನೀವು ಸರಿಯಾಗಿ ಆಲಿಸಬೇಕು (listening skills) ಅನ್ನೋದು ಒಂದು ಕಡೆ, ಹಾಗೆ ಇನ್ನೊಬ್ಬರ ಪ್ರಶ್ನೆ ಅಥವಾ ಮಾತನ್ನು ಕೇಳುವಾಗ ನಮ್ಮ ಉತ್ತರವನ್ನು ಫಾರ್ಮುಲೇಟ್ ಮಾಡದೇ ಹೋದ್ರೆ ಈ ವ್ಯವಸ್ಥೆಗೆ ತಕ್ಕಂತೆ ಸ್ಪಂದಿಸೋದೇ ಕಷ್ಟವಾಗಿ ಹೋಗುತ್ತೆ. ಎಲ್ಲವೂ ಪಟ್ಟನೆ ಆಗಿ ಬಿಡಬೇಕು ಎಂದು ಯಾರೋ ಹೊರಡಿಸಿದ ಕಾಯಿದೆ ಬೇರೆ ಕೇಡಿಗೆ.

'My door is always open for you...' ಎನ್ನುವ ಬಾಸ್‌ನ ಬಾಸಿನ ಡೋರು ಯಾವತ್ತೂ ಗುಪ್ತ ಮೀಟಿಂಗ್‌ಗಳನ್ನು ಪುರಸ್ಕರಿಸಿಕೊಂಡು ಮುಚ್ಚೇ ಇರುತ್ತೆ...'I have an open door policy...' ಎನ್ನುವ ವಾಕ್ಯ ಫಿಗರೇಟಿವ್ ಆಗಿ ಮಾತ್ರ ಬಳಕೆಗೆ ಬರುತ್ತೆ...ನೀವು ಹೇಳಿದ್ದನ್ನೆಲ್ಲ ಕೇಳ್ತೀವಿ ಅನ್ನೋ ಜನರೇ ತಮ್ಮ ಕಿವಿಗೆ ಬಿದ್ದಿದ್ದೆಲ್ಲವನ್ನೂ ಕೇಳಿಸಿಕೊಳ್ಳದೇ ಇರೋರು, ನಾಯಕತ್ವ ಅನ್ನೋ ಹೆಸರಿನಲ್ಲಿ ತಮ್ಮ ಮನಸಲ್ಲಿದ್ದದ್ದೆನ್ನೆಲ್ಲ ಮುಕ್ತವಾಗಿ ಹಂಚೋರು.

ಹಾಸ್ಯದ ಮೊರೆ ಹೋಗೋರು ಜೀವ್ನಾನ ಗಂಭೀರವಾಗಿ ನೋಡೋದಿಲ್ಲ ಅಂತ ಯಾರ್ ಅಂದೋರು, ಈ ಬ್ಯೂರೋಕ್ರಸಿಯಿಂದ ತುಂಬಿರೋ ಅಫೀಸ್ ಜೀವ್ನಾನ ತುಸು ಹಾಸ್ಯದಿಂದ ನೋಡ್ದೇ ಹೋದ್ರೆ ಎಂತೋನ್ ಹೃದಯಾನಾದ್ರೂ ನಿಂತೇ ಹೋಗುತ್ತೆ! ಇನ್ನ್ ಮೇಲಾದ್ರೂ ತಮ್ಮನ್ನು ತಾವು ಅದೆಲ್ಲೋ ಕಳೆದುಕೊಂಡು ಅವಸರದಲ್ಲಿ ಓಡಾದೋರ್ ಕಂಡ್ರೆ ಸ್ವಲ್ಪ ದಾರಿ ಬಿಡ್ತೀರಾ ತಾನೆ? ಜೊತೆಗೆ ಅಂತಹವರೇನಾದ್ರೂ ಜೋಕ್ ಹೇಳಿದ್ರೆ ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...

Monday, July 16, 2007

ನಮ್ಮೊಳಗಿನ ಧ್ವನಿ

ಇವತ್ತು 92.3 ಯನ್ನು ಕೇಳ್ಕೊಂಡ್ ಆಫೀಸ್ನಿಂದಾ ಬರ್ತಾ ಇರ್ಬೇಕಾದ್ರೆ ಯಾವ್ದೋ ಒಂದು ಟ್ಯೂನ್ ಕೇಳಿ ದೀವಾನಾ ಹಿಂದೀ ಸಿನಿಮಾದ 'ಫಾಯಾಲಿಯಾ ಹೋ ಹೋ ಹೋ ಹೋ' ಹಾಡು ನೆನಪಿಗೆ ಬಂತು. ರೆಡಿಯೋದಲ್ಲಿ ಬರ್ತಾ ಇದ್ದ ಹಾಡಿನ ಧ್ವನಿಯನ್ನು ಕಡಿಮೆ ಮಾಡಿ, ನಾನು ಫಾಯಲಿಯಾ...ಟ್ಯೂನ್ ಗೆ ಗಂಟು ಬಿದ್ದೆ, ನನಗೇನೂ ಆ ಹಾಡಿನ ಸಾಹಿತ್ಯ ಬರದಿದ್ದರೂ ಗಟ್ಟಿಯಾಗಿ ಗುನುಗುವಷ್ಟು ಅದರ ರಾಗ ಮಾತ್ರ ಬರುತ್ತಿದ್ದುದರಿಂದ ದಾರಿಯಲ್ಲಿ ಸ್ವಲ್ಪ ಹೊತ್ತು ಟೈಮ್ ಪಾಸಾಗಿತ್ತು.

ನನಗೆ ಮೊದಲಿಂದಲೂ ಯಾವುದೇ ಹಾಡನ್ನಾದರೂ ಅದರ ಮೂಲ ಗಾಯಕರ ಧ್ವನಿಯಲ್ಲಿ ಕೇಳಿ ಅದನ್ನನುಕರಿಸಿ ಪ್ರಯತ್ನಿಸೋ ಒಂದು ಕೆಟ್ಟ ಅಭ್ಯಾಸ, ಆ ಅಭ್ಯಾಸ ಬಲಕ್ಕೆ ತಕ್ಕಂತೆ ಕುಮಾರ್ ಸಾನು ಧ್ವನಿಯನ್ನು ಅನುಕರಿಸಲು ಹೋದ ನನಗೆ ಏನು ಮಾಡಿದರೂ, ಎಷ್ಟು ಪ್ರಯತ್ನ ಪಟ್ಟರೂ ಮೊದ ಮೊದಲು ಕುಮಾರ್ ಸಾನು ಥರವೇ ಧ್ವನಿಯಾಗಿ ಮೇಲೆದ್ದರೂ ಮುಂದಿನ ಸ್ವರಗಳು ಪಕ್ಕಾ ಸೌತ್ ಇಂಡಿಯನ್ನ್ ಕ್ಲಾರಿಟಿಯಲ್ಲಿ ಹೊರಬರುತ್ತಿವೆ! ಮೊದಲೇ ಲಿರಿಕ್ಸ್ ಬರೋದಿಲ್ಲ, ಇನ್ನೂ ಧ್ವನಿಯೂ ಬಾಯಿಗೆ ಬಂದಂತಾಗಿ ಹೋಗಿ ಯಾವೊಂದು ವಿಷಯ-ವಸ್ತು-ಪದವನ್ನು ಪದೇಪದೇ ಹೇಳಿಕೊಂಡು ಬಂದರೆ ಅದು ತನ್ನ ಅರ್ಥವನ್ನು ಹೇಗೆ ಕಳೆದುಕೊಳ್ಳುವುದೋ ಅಂತೆಯೇ ಈ ದಿನಕ್ಕೆ ಫಾಯಲಿಯಾ ಹಾಡಿನಲ್ಲಿ ಸತ್ವವೆಲ್ಲವೂ ಇಂಗಿ ಹೋಗಿತ್ತು.

ಮೊದಮೊದಲೆಲ್ಲಾ ಕಿಶೋರ್ ಕುಮಾರ್ ಅನುಕರಿಸುತ್ತಾರೆ ಎಂದುಕೊಂಡು ಸುದ್ದಿ ಹುಟ್ಟಿಸಿದ ಕುಮಾರ್ ಸಾನೂದೂ ಈಗೊಂದು ಭಿನ್ನ ಧ್ವನಿ, ಅಂತಹ ಭಿನ್ನ ಧ್ವನಿಯನ್ನು ಅನುಕರಿಸೋಕ್ ಹೋಗೋ ನನ್ನಂಥವರದ್ದು ಹಲವಾರು ಧ್ವನಿಗಳು.

***

ಉದಯಾದಲ್ಲಿ ಆಪ್ತಮಿತ್ರದ 'ಇದು ಹಕ್ಕೀ ಅಲ್ಲಾ...ಬಾಲಾ ಇದ್ರೂನೂ ಕೋತೀ ಅಲ್ಲಾ...' ಎಂದು ಹಾಡೊಂದು ತೂರಿಕೊಂಡು ಬರುತ್ತಿತ್ತು. ವಿಷ್ಣುವರ್ಧನ್, ಪ್ರೇಮಾ, ರಮೇಶ್ ಹಾಗೂ ಇನ್ನಿತರ ಪರಿಚಿತರ ಮುಖಗಳ ಸುಂದರವಾದ ದೃಶ್ಯಗಳು, ಯಾವೊಂದು ಕನಸೊಂದರ ಸೀಕ್ವೆನ್ಸಿನಂತೆ ಬಣ್ಣಬಣ್ಣದ ಗಾಳಿಪಟಗಳು, ಎಲ್ಲವೂ ಸರಿ...ಏನೋ ಎಡವಟ್ಟಿದೆ ಇದರಲ್ಲಿ ಎಂದು ಯೋಚಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಿಂದೊಮ್ಮೆ ವಿಶೇಷವಾದ ಧ್ವನಿಗಳ ಬಗ್ಗೆ ಬರೆದದ್ದು ನೆನಪಿಗೆ ಬಂತು, ಈ ಹಾಡನ್ನೂ ಉದಿತ್ ನಾರಾಯಣ್ ಹಾಡಿರೋದು ಎಂದು ತಿಳಿದುಕೊಳ್ಳಲು ಹೆಚ್ಚು ಹೊತ್ತು ಬೇಕಾಗಲೇ ಇಲ್ಲ!

ನಮ್ಮದೇ ಒಂದು ವಿಶೇಷವಾದ ಧ್ವನಿ, ಅದಕ್ಕಿಂತಲೂ ಹೆಚ್ಚು ಒಂದು ವಿಶೇಷವಾದ ಪರಂಪರೆ - ಒಂದು ಸಾಧಾರಣವಾದ ಗಾಳಿಪಟದಂತಹ ವಿಷಯವಿದ್ದಿರಬಹುದು, ಅಥವಾ ಅದರ ಹಿನ್ನೆಲೆಯಲ್ಲಿ ಮರ್ಕಟವನ್ನು ಪ್ರತಿಬಿಂಬಿಸೋ ಮನಸ್ಸಿರಬಹುದು, ಅಥವಾ ನೋಡುಗ/ಕೇಳುಗರಿಗೆ ಇನ್ನೂ ಎನನ್ನೋ ಆಲೋಚಿಸುವಂತೆ ಮಾಡುವ ಪ್ರಯತ್ನವಿರಬಹುದು. ಇವೆಲ್ಲ ಪ್ರಯತ್ನಗಳಿಗೊಂದು ನಮ್ಮೊಳಗಿನ ಧ್ವನಿಯೇ ಇಲ್ಲದಂತಾಗಿ ಹೋದರೆ ಏನೋ ಸರಿ ಇಲ್ಲ ಎಂದು ಅನ್ನಿಸೋದು ನನ್ನಂತಹವರಿಗೆ ಸಹಜ, ಅದೂ ಇಂತಹ ಧ್ವನಿಯ ಹಿಂದೆಯೇ ಗಿರಕಿ ಹೊಡೆಯುತ್ತಾ ನಿಲ್ಲಬಹುದಾದ ನನ್ನ ತರ್ಕ ಅಲ್ಲಿಂದ ಮುಂದೆ ಸರಿಯದಿರಬಹುದು.

ಎಸ್.ಪಿ.ಬಿ. ಅದೆಷ್ಟೋ ಸಾವಿರ ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದರೂ ಸಹ ಅವರು ಕನ್ನಡ ಮಾತಾಡೋದನ್ನ ಕೇಳಿದಾಗ ಅವರು ನಮ್ಮವರು ಎಂದೆನಿಸೋದಿಲ್ಲ, ಮುದ್ದಿನ ಮಾವ ಸಿನಿಮಾದಲ್ಲೂ ಸಹ ಅವರ ಮೃದುವಾದ ಮಾವನ ಪಾತ್ರದ ಪ್ರಯತ್ನ ಚೆನ್ನಾಗೇನೋ ಇದೆ, ಆದರೆ ಭಾಷೆಯ ವಿಚಾರದಲ್ಲಿ ಅವರು ಹೊರಗಿನವರಾಗೇ ಉಳಿದುಬಿಟ್ಟರು. ಎಸ್.ಪಿ.ಬಿ. ಧ್ವನಿ ಉತ್ತರ ಭಾರತದವರಂತೆ (ಸೋನು ನಿಗಮ್, ಉದಿತ್ ನಾರಾಯಣ್, ಕುಮಾರ್ ಸಾನೂ) ವಿಶೇಷವಾಗೇನೂ ಇರದಿದ್ದರೂ, ಅವರ ಕನ್ನಡ ಹಾಡುಗಳು ನಮ್ಮೊಳಗಿನ ಧ್ವನಿಯಂತೆಯೇ ಇವೆ, ಅವರ ಕನ್ನಡ ಮಾತುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲದರಲ್ಲಿ ಅವರ ಪ್ರಯತ್ನ ಶ್ಲಾಘನೀಯ - ಬೆಂಕಿಯಬಲೆಯ ಚಿತ್ರದ ಹಾಡುಗಳನ್ನು ಅನಂತ್‌ನಾಗ್ ಅವರೇ ಹೇಳಿದ್ದಾರೇನೋ ಎನ್ನುವಂತೆ ಧ್ವನಿಯಲ್ಲಿ ವೇರಿಯೇಷನ್ನುಗಳನ್ನು ಹುಟ್ಟಿಸಿ, ಅದೇ ಟೆಕ್ನಿಕ್‌ ಮೂಲಕ ಶಿವರಾಜ್‌ಕುಮಾರ್ ಅವರಿಂದ ಹಿಡಿದು, ರಾಜ್‌ಕುಮಾರ್ ಒಬ್ಬರನ್ನು ಬಿಟ್ಟು ಮಿಕ್ಕೆಲ್ಲ ನಾಯಕರಿಗೆ ಅವರು ಧ್ವನಿಯಾಗಿದ್ದಾರೆ - ಈ ಒಂದು ಕಾರಣವೇ ಇದ್ದಿರಬೇಕು ಸಂಗೀತ ನಿರ್ದೇಶಕರು 'ಬಾಲೂ...ಬಾಲೂ' ಎಂದು ಅವರನ್ನು ಅಂಗಾಲಾಚಿಕೊಳ್ಳುವುದು, ಹಾಡುಗಳ ಧ್ವನಿ ಸುರುಳಿಯನ್ನು ತೆಗೆದುಕೊಂಡು ಅವರ ಮನೆ ಮುಂದೆ ಸಾಲು ನಿಲ್ಲುವುದು.

***

ಬಾಂಬೆ, ಮದ್ರಾಸು, ಹೈದರಾಬಾದು ದೊರೆಗಳನ್ನು ಪೋಷಿಸಿ ಕೈ ಹಿಡಿದು ಕನ್ನಡ ಸಿನಿಮಾಕ್ಕೆ ನಡೆಸಿಕೊಂಡು ಬರುವುದರ ಬದಲು ನಮ್ಮೊಳಗಿನ ಪ್ರತಿಭೆಗಳಿಗೆ ಜೀವ ತುಂಬಿ ಪೋಷಣೆ ನೀಡಿದ್ದರೆ...ರವಿಚಂದ್ರನ್ ಹಂಸಲೇಖರನ್ನು ಪರಿಚಯಿಸಿದ ಹಾಗೆ...ನಮ್ಮಲ್ಲಿಯೂ ಪ್ರತಿಭೆಗಳಿಗೇನೂ ಕೊರತೆ ಇಲ್ಲ ಎನ್ನುವುದನ್ನು ನಾವು ಯಾವತ್ತೋ ಸಾಧಿಸಿ ತೋರಿಸಬಹುದಿತ್ತು.

Friday, July 13, 2007

ಸುಮ್ನೇ ತಲೇ ತಿಂತಾರ್ ನೋಡಿ ಸಾರ್...

ಏನಾದ್ರೂ ಒಂದಿಷ್ಟು ಕುಟ್ಟಿ ಬಿಸಾಕೋಣಾ ಅಂತಂದು ಈ ಕಂಪ್ಯೂಟ್ರು ಶುರು ಮಾಡೋಕ್ ಹೋದ್ರೇ ಬಸವನ ಹುಳೂನಾದ್ರೂ ಬೇಕು, ಈ ಕಂಪ್ಯೂಟರ್ರ್ ಬ್ಯಾಡಾ, ಸ್ಲೋ ಅಂದ್ರೆ ಸ್ಲೋ...ಮೊದಲೇ ಗೊಲ್ಲೀ ಈಗಂತೂ ಹಡದಾಳೇ ಅಂತಾರಲ್ಲಾ ಹಾಗೆ ಇವತ್ತು ಅದೇನೋ ವೈರಸ್ ಪ್ಯಾಚ್ ಇನ್ಸ್ಟಾಲ್ ಮಾಡ್ತಾ ಇದ್ದೇನೆ ಅಂತ ಮೆಸ್ಸೇಜ್ ಬೇರೆ ಕೊಡುತ್ತೆ...ಈ ವೈರಸ್ಸೂ, ಪ್ಯಾಚೂ ಇವುಗಳೆಲ್ಲಾ ನಾವ್ ನಾವ್ ಸೃಷ್ಟಿಸಿಕೊಂಡಿರೋ ಟೆಂಪೋರರಿ ಮೆಂಟಲ್ ಸ್ಯಾಟಿಸ್‌ಫ್ಯಾಕ್ಷನ್ ಅಷ್ಟೇ ಅನ್ಸಲ್ಲಾ ಎಷ್ಟೊಂದ್ ಸರ್ತಿ? ಇವೆಲ್ಲಾ ಎಲ್ಲೀವರೆಗೆ ಚೆಂದ ಅಂದ್ರೆ ಅದ್ಯಾವ್ದೋ ಸಿನಿಮಾದಲ್ಲಿ ತೋರ್ಸೋ ಹಾಗೆ ಇವತ್ತಲ್ಲಾ ನಾಳೆ ಯಾವನೋ ಒಬ್ನು ಎಲೆಕ್ಟ್ರಿಕ್ ನೆಟ್‌ವರ್ಕ್ ಅಥವಾ ಕೇಬಲ್ ನೆಟ್‌ವರ್ಕ್ ಮೂಲ್ಕಾ ವೈರಸ್ ಕಳಿಸೋದನ್ನ ಕಂಡ್ ಹಿಡೀತಾನೇ ಅಲ್ಲೀವರೆಗೆ ಮಾತ್ರಾ ಅಷ್ಟೇ. ನನಗೆ ಎಷ್ಟೋ ಸರ್ತಿ ಅನ್ಸಿದೆ, ಈ ಅಂಟೀ ವೈರಸ್ ಕಂಪನಿಗಳೇ ವೈರಸ್ಸುಗಳ್ನ ಬರೀತಾವೇ ಅಂತ...ಯಾಕಂದ್ರೆ ಅವ್ರು ಬಿಸಿನೆಸ್ಸಲ್ಲಿ ಇರೋದ್ ಬ್ಯಾಡ್ವೇ? ಹಿಂಗಂದ್ ಕೂಡ್ಲೇ ನಮ್ ಕಡೇ ಇರೋ ಒಂದು ಪ್ರಚಲಿತ ಜೋಕ್ ನೆನಪಿಗೆ ಬಂತು...

'ನಿಮಗೆ ಹುಷಾರಿಲ್ದೇ ಇದ್ರೆ ಡಾಕ್ಟ್ರ ಹತ್ರ ಹೋಗ್ಬೇಕು, ಯಾಕೇಂದ್ರೆ ಡಾಕ್ಟರ್ ಬದುಕೋದ್ ಬ್ಯಾಡ್ವೇ?
ಡಾಕ್ಟ್ರು ಔಷ್ಧಿ ಬರ್ಕೊಟ್ರೆ, ಮೆಡಿಕಲ್ ಸ್ಟೋರ್‌ಗೆ ಹೋಗ್ಬೇಕು, ಯಾಕೇಂದ್ರೆ ಮೆಡಿಕಲ್ ಸ್ಟೋರ್‌ನೋರ್ ಬದುಕೋದ್ ಬ್ಯಾಡ್ವೇ?
ಮೆಡಿಕಲ್ ಸ್ಟೋರ್‌ನೋರ್ ಔಷ್ಧಿ ಕೊಟ್ರೆ ಅದ್ನ ನೀವ್ ತೊಗೋಬೇಡಿ, ಯಾಕೇಂದ್ರೆ ನೀವ್ ಬದ್ಕೋದ್ ಬ್ಯಾಡ್ವೇ!'

ಈ ವೈರಸ್ ಪ್ಯಾಚ್ ಇನ್ಸ್ಟಾಲ್ ಮಾಡ್ತಾ ಇದ್ನಾ, ಅಷ್ಟೋತ್ತಿಗ್ ತಗಳ್ಳಪ್ಪಾ ಮೈಕ್ರೋಸಾಫ್ಟ್‌ನೋನ್ ಶುರು ಮಾಡ್ಕೊಂಡಾ, ಅದೇನೋ ಪ್ಯಾಚ್ ಇನ್ಸ್ಟಾಲ್ ಅಂತ. ಅವನು ಐದು ನಿಮಿಷಾ ಕಂಪ್ಯೂಟರ್ರನ್ ಬಿಜಿಯಾಗಿಟ್ಟಿದ್ದೂ ಅಲ್ದೇ ಆಮೇಲೆ ಈಗಿನ್ನೂ ಶುರು ಮಾಡಿರೋ ಕಂಪ್ಯೂಟರ್ರನ್ನ ರೀ ಸ್ಟಾರ್ಟ್ ಮಾಡು ಅಂತ ಆದೇಶ ಬೇರೆ ಕೊಡ್ತಾನೆ! ಎಲ್ಲಾ ನನ್ನ ಮಕ್ಳೂ ಇಲ್ಲಿ ಆದೇಶ ಕೊಡೋರೇ...CALL NOW...1-800 ಅಂದ್‌ಕೊಂಡ್ ಟಿವಿ ನಲ್ಲಿ ನಂಬರ್‌ಗಳನ್ನ ಪ್ರವರ ಹೇಳೋ ಥರ ಒದರಿಕೊಂಡ್ ಹೋಗ್ತಾರೆ, Talk to your doctor ಅಂತ ಏನೇನೋ ಔಷಧಿಗಳ್ನ ತೋರಿಸ್ತಾರೆ - ಇಲ್ದಿರೋ ಕಾಯ್ಲೆಗಳನ್ನೆಲ್ಲ ಹುಟ್ಟಾಕಿ...ಅಷ್ಟ್ ತಾಕತ್ತಿದ್ರೆ ಏಯ್ಡ್ಸ್‌ಗೆ ಔಷಧಿ ಕಂಡ್ ಹಿಡೀಲಿ...ನಾವ್ ಹೋಗೀ ಡಾಕ್ಟರ್‌ನ ಇಂಥಾ ಮಾತ್ರೆ ಔಷಧಿ ಕೊಡೀ ಅಂತ ಕೇಳೋದೋ ಅವ್ರೇ ನಮ್ ನಮ್ ಕಂಡೀಷನ್ನ್ ನೋಡೀ ಬರ್ದು ಕೊಡೋದೋ? ಎಲ್ಲಾರೂ ಆರ್ಡರ್ ಮಾಡೋರೇ ಇಲ್ಲಿ... ಬೆಳ್ಳಂ ಬೆಳಗ್ಗೆ ಶುರು ಹಚ್ಕೊಂಡ್ ಬಿಡ್ತಾರೆ...do that, do this ಅಂದ್‌ಕೊಂಡು...ದುಡ್ಡೂ, ಸಮಯಾ ಇವ್ರ ಅಪ್ಪ ತಂದ್ ಕೊಡ್ತಾನೆ.

ಹಂಗಂತ ನನ್ನದಾಗ್ಲೀ, ಈ ಲೇಖ್ನಾ ಓದ್ತಾ ಇರೋ ನಿಮ್ಮ್ ಕಂಪ್ಯೂಟರ್ರಾಗ್ಲೀ ಹಳೇದೂ, ಔಟ್ ಡೇಟೆಡ್ಡೂ ಅಂತ ನಾನ್ ಹೇಳ್ತಾ ಇಲ್ಲಾ...ಇದರಲ್ಲಿ ಬೇಕಾದಷ್ಟು ಜ್ಯೂಸ್ ಇನ್ನೂ ಇದೆ...ಒಂದು ಗಿಗ್ ಮೆಮೆರಿ ಇದ್ರೂ ಈ ನನ್ ಮಕ್ಳು ಪ್ರೋಗ್ರಾಮ್ ಎಲ್ಲಾ ಲಾಂಚ್ ಆಗೋಕೆ ಎಷ್ಟೊಂದ್ ಸಮ್ಯಾ ಬೇಕು...ಹಾರ್ಡ್‌ವೇರೂ, ಸಾಫ್ಟ್‌ವೇರೂ ಅಂತ ತುಂಬ್ ತುಂಬ್‌ಕೊಂಡು ತಲೇ ಎಲ್ಲಾ ಚಿಟ್ಟ್ ಹಿಡಿಯೋ ಹಾಗ್ ಮಾಡಿದ್ದ್ ಯಾರು? ಒಂದ್ ಕಾಲ್ದಾಲ್ಲಿ ಕೇವ್ಲಾ 166 MHz ಕಂಪ್ಯೂಟ್ರೂ ಬಳಸಿ ನ್ಯಾಸಾದೋರು ಚಂದ್ರಯಾನ ಮಾಡ್ಲಿಲ್ವೇ? ಇವತ್ತಿನ್ ಕಂಪ್ಯೂಟ್ರುಗಳಿರ್ಲಿ, ಈಗಿನ್ ಕಾಲದ್ ಕಾರ್‌ಗಳಲ್ಲಿ ಅದಕ್ಕಿಂತ ಹೆಚ್ಚು ಕಂಪ್ಯೂಟಿಂಗ್ ಪವರ್ ಇರೋವಾಗ...ಏನಾಗಿದೆ ನಮ್ ಹೊಸ ಹೊಸಾ ಕಂಪ್ಯೂಟರ್ರ್ ಗಳಿಗೆ ಅನ್ಸೋಲ್ಲಾ? ಇವರ್ದೆಲ್ಲಾ ದೊಡ್ಡದೊಂದು ಕಾನ್ಸ್‌ಪಿರಸಿ, ಅದ್ಯಾವನೋ ಮೂರ್ (Moore) ಅನ್ನೋನ್ ಅದೇಷ್ಟೋ ವರ್ಷದ ಹಿಂದೆ ಪ್ರಿಡಿಕ್ಟ್ ಮಾಡ್ಲಿಲ್ಲಾ ಕಂಪ್ಯೂಟಿಂಗ್ ಪವರ್ರ್ ಬಗ್ಗೆ, ಪ್ರಾಸೆಸಿಂಗ್ ಬಗ್ಗೆ? ಆದ್ರೂ ಇಲ್ಲಿನ ಮಾರ್ಕೆಟಿಂಗೇ ಮಾರ್ಕೆಟಿಂಗು...ದಿನದಿನ ಬಿಟ್ಟು ದಿನಾ ಹೊಸ ಹೊಸ ಕಂಪ್ಯೂಟರ್ ತೊಗೊಳೋಕೆ ಯಾರ್ ಕೊಟ್ತಾರೆ ರೊಕ್ಕಾನಾ? ವಿಂಡೋಸ್ ವಿಸ್ತಾನಾದ್ರೂ ಬರ್ಲಿ, ಪಿಸ್ತಾನಾದ್ರೂ ಬರ್ಲಿ (ಸ್ಟಾರ್ಟ್ ಆಗೋಕೇ, ಶಟ್‌ಡೌನ್ ಆಗೋಕೇ ಏನಿಲ್ಲಾ ಅಂದ್ರೂ ಐದ್ ಐದ್ ನಿಮಿಷಾ ತೊಗೊಳುತ್ತೇ ಅದ್ ಬೇರೆ ವಿಷ್ಯಾ) ನನ್ ಈಗಿರೋ ಕಂಪ್ಯೂಟರ್ರ್ ಬದ್ಲೀ ಮಾಡಲ್ಲಾ ಅಂತ ಹಠ ಹಿಡಿದು ಕುಳಿತಿರೋ ಕಂಪ್ನಿ, ಬಳಕೆದಾರರಿಗೆ ಎಲ್ಲಾ ಇನ್ನು ಮುಂದೆ ನಾವು ನಮ್ಮ್ ಪ್ರಾಡಕ್ಟನ್ನ ಸಪ್ಫೋರ್ಟ್ ಮಾಡಲ್ಲಾ ಅಂತ ಹೆದರ್ಸಿ ಹೊಸ ಹೊಸದನ್ನ ಮಾರೋದು...ಮನುಷ್ಯಾ ಅನ್ನೋನು ಮಂಗಳಗ್ರಹಕ್ಕೆ ರಾಕೇಟ್ ಕಳ್ಸಿ ವಾಪಾಸ್ ಕರೆಸಿಕೊಂಡಿದ್ದು ಸಾಧ್ಯಾ ಆದ್ರೂ ಇಪ್ಪತ್ತು ವರ್ಷದ ಹಿನ್ನೆಲೇನಲ್ಲಿ ಒಂದ್ ನೆಟ್ಟಗಿರೋ ಆಪರೇಟಿಂಗ್ ಸಿಸ್ಟಂ‌ನ ಹೊರಗ್ ತರಲಿಲ್ಲಾ ಅಂದ್ರೆ ಏನ್ ಹೇಳೋಣ!

ಈ ಎಲ್ಲಾರ್ದೂ ಒಂದೊಂದು user interfaceಸೂ...ಸೆಲ್ ಫೋನ್ ತಗಳ್ಳಿ (ಅದೊಂದ್ ಡಬ್ಬಾ ಅದ್ ಬೇರೆ ವಿಷ್ಯಾ) ಅಲ್ಲಿ ಅವನ್ದೇ ಒಂದು ಆದೇಶ...ಹಂಗ್ ಮಾಡೀ, ಹಿಂಗ್ ಮಾಡಿ ಅಂತ...ಒಂದ್ ಕಾಮನ್ ಸೆನ್ಸಿನ್ ವಿಷ್ಯಾ...ಸೆಲ್ ಫೋನ್ನಲ್ಲಿ ಬ್ಯಾಟರಿ ಇನ್ನೇನ್ ಖಾಲಿ ಆಗ್ತಾ ಇದ್ರೆ ಅನ್ನೋವಾಗ ಶಟ್ ಡೌನ್ ಆಗೋವಾಗ್ಲೂ ದೊಡ್ಡದಾಗಿ ಗ್ರಾಫಿಕ್ ತೋರ್ಸಿ, ಸೌಂಡ್ ಮಾಡ್ಕೊಂಡೇ ಸಾಯ್‌ಬೇಕಾ...ಅದರ ಬದ್ಲಿ ಬ್ಯಾಟರಿ ಕನ್ಸರ್ವ್ ಮಾಡಿ ಕೊನೇ ಪಕ್ಷಾ ಒಂದೇ ಒಂದು ನಿಮಿಷಾ ಕಾಲ್ ಆದ್ರೂ ಮಾಡೋ ಹಾಗಿದ್ರೆ ಅನ್ಸಲ್ಲಾ?...ಈ ನನ್ ಮಕ್ಳು ಸೆಲ್ ಫೋನ್ ತೆಗೊಂಡಕ್ಷಾಣ ದಿನಾ ಬೆಳಗ್ಗೆ ಎದ್ದು ಸ್ಕ್ರೀನ್ ಆನ್ ಮಾಡಿದ್ರೆ ಇವ್ರ ಕಂಪನೀ, ಲೋಗೋಗಳ ಹೆಸರನ್ನ್ಯಾಕ್ ನೋಡ್ಬೇಕ್ ನಾವು...ಇವರಿವರ ಬ್ರ್ಯಾಂಡಿಂಗ್ ಕಟ್‌ಕೊಂಡ್ ನಮಿಗೇನಾಗ್ಬೇಕು? ಇದೇ ರೀತಿ ಇವರು ಹೇಳಿದ್ದನ್ನೆಲ್ಲಾ ನೋಡ್ತಾ, ತೋರಿಸ್ಕೊಳ್ತಾ ಹೋದ್ರೆ ಇವತ್ತಲ್ಲಾ ನಾಳೆ ನಮ್ಮನ್ನೂ ನ್ಯಾಸ್ ಕಾರ್ ಥರಾ ಮಾಡ್ ಬಿಡ್ತಾರೇನೋ ಅಂತ ಹೆದರಿಕೆ ಆಗುತ್ತೆ. ಕಷ್ಟಾ ಪಟ್ಟು ಸಂಪಾದ್ನೇ ಮಾಡಿ ಒಂದ್ ಟೀ ಶರ್ಟ್ ತೊಗೊಂಡ್ರೂ ಅದರ ಮೇಲೆ ಈ ನನ್ ಮಕ್ಳು ಲೋಗೋ ಬೇರೆ ಕೇಡಿಗೆ...ನಲವತ್ತ್ ಡಾಲರ್ ಖರ್ಚ್ ಮಾಡೀ ನನ್ ಎದೇ ಮೇಲೆ ದೊಡ್ಡದಾಗಿ Calvin...ನ್ನೋ ...Lauren ನ್ನೋ ಅಂತ ಬರಸಿಕೊಂಡು ಓಡಾಡೋಕೆ ನನಗೇನ್ ಹುಚ್ಚ್ ಹಿಡಿದಿದೇ ಅಂತ ತಿಳಕೊಂಡಿದಾರೋ ಇವರು? ಹೋಗ್ರೋಲೋ, ನಮ್ಮೂರ್ ಟೈಲರ್ರೂ ನಾನು ಹುಟ್ಟಿದಾಗ್ನಿಂದಾ ಬಟ್ಟೇ ಹೊಲಕೊಟ್ರೂ ಒಂದಿನಾ ಅವ್ನ ಹೆಸರನ್ನಾ ಕುತ್ತಿಗೆ ಹಿಂದಿನ ಕಾಲರ್ ಲೇಬಲ್ ಬಿಟ್ಟು ಮತ್ತೆಲ್ಲೂ ಹಾಕ್ಲಿಲ್ಲಾ, ಪಾಪ ಅಂತಾ ದೊಡ್ಡ ಮನುಷ್ಯನಿಗೆ ನಾನು ಒಂದ್ ಶರ್ಟ್ ಹೊಲ್ ಕೊಟ್ರೆ ಎರಡ್ ಡಾಲರ್ ಕೊಟ್ರೇ ಹೆಚ್ಚು! ಪ್ಯಾಂಟಿ‌ನ್ ಮೇಲೆ ಲೋಗೋ, ಶರಟಿನ್ ಮೇಲ್ ಲೋಗೋ, ಶೂ ಮೇಲ್ ಲೋಗೋ, ನಾವ್ ಮುಟ್ಟೋ ಎಲ್ಲದರ ಮೇಲೂ ಲೋಗೋನೇ...ಜನಿವಾರ ಒಂದ್ ಬಿಟ್ಟು ಹಾಕ್ಕೊಂಡಿರೋ ಮತ್ತೆಲ್ಲದರ ಮೇಲೂ ಒಂದೊಂದ್ ಲೋಗೋ...ಭೀಮಾ ಜ್ಯುಯೆಲರ್ಸ್ ಹತ್ರ ತೊಗೊಂಡಿರೋ ಕತ್ನಲ್ಲಿರೋ ಚಿನ್ನದ ಸರದ್ ಮೇಲೂ ಅವನಂಗಡೀಲೇ ತಗೊಂಡಿದ್ದೂ ಅಂತ ಸಣ್ಣದಾಗಿ ಏನೋ ಕೆತ್ತ್‌ಗೊಂಡಿದಾನೆ...ನೋಡಿದ್ರಾ ಎಲ್ಲೀವರೆಗೆ ಬಂದಿದೆ ಇದೂ ಅಂತ!

ಈ ನನ್ ಮಕ್ಳು ತಮ್ ತಮಿಗೆ ಬೇಕಾದ್ದು ಇನ್ಸ್ಟಾಲ್ ಮಾಡ್ಕೊಂಡ್ರಾ...ಈಗ ಒಂದೇ ಸಮನೆ ಅಳೋಕ್ ಸ್ಟಾರ್ಟ್ ಮಾಡಿದಾವೆ...Restart ಮಾಡೂ ಅಂತ. ನೀನೇ ಮಾಡ್ತೀಯೋ ಇಲ್ಲಾ ನಾವೇ ಮಾಡೋಣ್ವೋ ಅಂತ ಕೇಳಿದ್ದಕ್ಕೆ ನಾನೇ ಮಾಡ್ತೀನಿ ನನಗೆ ಬೇಕಾದಾಗ ಅಂತ ಒಂದ್ಸರ್ತಿ ಹೇಳಿದ್ರೆ ಅರ್ಥಾನೇ ಆಗಲ್ಲ ಇವುಗಳಿಗೆ...ಈ ಹದಿನೈದ್ ನಿಮಿಷದಲ್ಲಿ ಕೊನೇ ಪಕ್ಷ ಒಂದ್ ಐದು ಸರ್ತೀನಾದ್ರೂ ಪಾಪ್ ಅಪ್ ಮೆಸ್ಸೇಜ್‌ ಬಂದಿವೆ...Restart ಮಾಡೂ ಅಂತ...ಸಾಯ್ತಾರ್ ನನ್ ಮಕ್ಳು.

ನಿಮಿಗೆ ಮತ್ತೊಂದ್ ವಿಷ್ಯಾ ಹೇಳ್ಬೇಕು...ನನಗೆ ನಾನು ಯಾವ್ಯಾವ್ದೋ ದೇಶ್ದಲ್ಲಿ ಅದೆಷ್ಟೋ ಡಾಲರ್/ಯೂರೋ ಲಾಟರಿ ಗೆದ್ದಿದ್ದೀನಿ ಅಂತ ಮೆಸ್ಸೇಜ್‌ಗಳು ಬರೋಕ್ ಶುರುವಾಗಿವೆ! ಇಂಥಾ ಮೆಸ್ಸೇಜ್ ಬಂದಾಗೆಲ್ಲಾ ಒಂದೊಂದ್ ಡಾಲರ್ ನನಿಗೆ ಸಿಕ್ಕಿದ್ರೆ ಇಷ್ಟೋತ್ತಿಗೆ ಮಿಲಿಯನ್ನರ್ ಆಗ್ತಿದ್ನೋ ಏನೋ...ಎಲ್ಲಾ ಡಬ್ಬಾ ನನ್ ಮಕ್ಳೂ ಯಾವನ್ನಾದ್ರೂ ಬೇವಕೂಫನ್ನ ಬುಟ್ಟಿಗೆ ಬೀಳಿಸ್ ಕೊಂಡೂ ಏಮಾರ್ಸೋಕೋ ಕಾದಿರೋ ಹಾಗೆ ಕಾಣ್ಸುತ್ತೆ. ಇ-ಮೇಲ್ ಅನ್ನೋ ಕಮ್ಮ್ಯೂನಿಕೇಷನ್ ಮಾಧ್ಯಮವನ್ನಾ ಸ್ಪ್ಯಾಮ್ ಆಗಿ ಬಳಸಿ ಫಿಷಿಂಗ್ ಮಾಡಿ ಅಮಾಯಕರನ್ನ ಬಲೆಗೆ ಹಾಕ್ಕೊಂಡು ಬಲೀ ತೊಗೊಳೋರ್‌ನಾ ಹಿಡಿದು ಇರಾಕ್‌ನಲ್ಲಿ ತಲೆ ತೆಗೆದಂಗ್ ತೆಗೀಬೇಕು ಅಂತ ಎಷ್ಟೋ ಸರ್ತಿ ಸಿಟ್ಟೇ ಬರುತ್ತೆ.

ಈ ನನ್ ಮಕ್ಳುದ್ ಎಲ್ಲಾರ್ದೂ ಒಂದೊಂದ್ ಅಜೆಂಡಾ...ಬದುಕು ಅನ್ನೋದು ಅವರಿವರು ಹೇಳಿದಂಗೆ ಕುಣಿಯೋ ಸೂತ್ರದ ಬೊಂಬೆಯಾಗಿ ಹೋಗಿದೆ ಅನ್ನೋದಕ್ಕೆ ಇಷ್ಟು ಬರೀ ಬೇಕಾಯ್ತು...ನಮ್ ತಂತ್ರಜ್ಞಾನ ಮತ್ತೊಂದು ಎಷ್ಟೇ ಬೆಳೀಲಿ...ಗೋಡೇ ಮೇಲೆ ಏರಿದಂತೆಲ್ಲಾ ಏಣಿ ಗೋಡೆಗೇ ಹೆಚ್ಚ್ ಹೆಚ್ಚು ವಾಲಿಕೊಳ್ಳೋ ಹಾಗೆ ನಮ್ ಡಿಪೆಂಡೆನ್ಸಿ ಅವುಗಳ ಮೇಲೆಲ್ಲಾ ಜಾಸ್ತೀನೇ ಆಗುತ್ತೇ ಅನ್ಸಲ್ಲಾ? ಒಂದೊಂದ್ ಸರ್ತಿ ಇವೆಲ್ಲಾ ಬಿಟ್ಟು ಎಲ್ಲಾದ್ರೂ ಓಡ್ ಹೋಗ್ಭೇಕು ಅನ್ಸುತ್ತೆ, ಏನ್ ಮಾಡ್ಲೀ ಬೆಳಗ್ಗೆ ಒಂದು ಇಂಪಾರ್ಟೆಂಟ್ ಪ್ರೆಸೆಂಟೇಷನ್ನಿದೆ...(ಇಲ್ಲಾ ಅಂದ್ರೆ ಎಲ್ಲಾದ್ರೂ ದೇಶಾಂತ್ರ ಹೋಗ್ತಿದ್ನೋ ಇಲ್ಲ್ವೋ ಅದ್ ಬೇರೇ ವಿಷ್ಯಾ).

ಮತ್ತ್ ಶುರುವಾಯ್ತು ನೋಡಿ, Restart ಮಾಡ್ದೇ ಹೋದ್ರೆ Security compromise ಮಾಡಿದ ಹಾಗೆ ಅನ್ನೋ ಆದೇಶ...ಮಾಡ್ತೀನ್ ತಾಳಿ, ಇವ್ರುಗಳು ಹೇಳಿದ ಹಾಗೆ Restart ಯಾಕ್ ಮಾಡ್ಬೇಕು? Shutdown ಮಾಡಿ ನನಗ್ಯಾವಾಗ್ ಬೇಕೋ ಅವಾಗ್ Start ಮಾಡ್ಕೋತೀನಿ... ತಮಾಷೆ ವಿಷ್ಯಾ ಅಂದ್ರೆ Turn Off Computer ಅಂತ ಅನ್ನೋದಕ್ಕೂ Start button ಮೇಲೇ ಕ್ಲಿಕ್ ಮಾಡ್‌ಬೇಕು! ಒಂದ್ಸರ್ತಿ Turn-off ಮಾಡ್ಬೇಕು ಅನ್ನೋವಾಗ ಮತ್ತಿನ್ನೊಂದಿಷ್ಟ್ ಆಪ್ಷನ್ನುಗಳು ಯಾಕೆ ಅಂತ ಅನ್ಸಲ್ವಾ? ಈ ಮನುಷ್ಯನ್ ತಲೇ ಅನ್ನೋದು ಖತರ್‌ನಾಕ್ ಶಿವಾ...ಒಂದನೇ ಕ್ಲಾಸ್ ಮಕ್ಳಿಗೆ ಯಾವತ್ತಾದ್ರೂ ಹೇಳ್ಕೊಡಿ ಕಂಪ್ಯೂಟರ್ರ್ ಬಗ್ಗೆ ಆಗ ಗೊತ್ತಾಗುತ್ತೆ, ಇವರ ಕಮ್ಯಾಂಡ್ ಸೀಕ್ವೆನ್ಸುಗಳೆಲ್ಲಾ ಎಷ್ಟು ಇಲ್ಲಾಜಿಕಲ್ಲೂ ಅಂತ...ನಾನೇನಾದ್ರೂ ಆಪರೇಂಟಿಂಗ್ ಸಿಸ್ಟಂ ಬರೆದ್ರೆ Shutdown ಅಂತ ಒಂದು ಬಟನ್ ಬರೀತೀನಿ, ಅದನ್ನ್ ಕ್ಲಿಕ್ ಮಾಡಿದ್ರೆ shutdown ಆಗೋ ಹಾಗೆ ಮಾಡ್ತೀನಿ...as simple as that!

Wednesday, July 11, 2007

ಕಗಪ

ಎಷ್ಟೋ ಸರತಿ ಅನ್ಸಲ್ವಾ? ನಮಗೆ ಗೊತ್ತಿದ್ದೂ ಗೊತ್ತಿದ್ದೂ ಕೆಲವೊಮ್ಮೆ ನಾವು ನಮಗೆ ಗೊತ್ತಿರೋದನ್ನೇ ಮಾಡ್ತೀವೇ ವಿನಾ ಹೊಸದೇನನ್ನೂ ಪ್ರಯತ್ನಿಸೋಲ್ಲಾ ಅಂತಾ? ನಿನ್ನೆ ರಾತ್ರಿ "ಬರಹ"ದಲ್ಲಿ ಏನನ್ನೋ ಹುಡುಕುತ್ತಿದ್ದವನಿಗೆ ಕಗಪ ಕೀಲಿಮಣೆಯನ್ನು ಅಭ್ಯಾಸ ಮಾಡಿದರೆ ಹೇಗೆ ಎಂದು ಪ್ರಯೋಗಗಳನ್ನು ಮಾಡತೊಡಗಿ ಒಮ್ಮೆ ಹೂಟಿ ಸಿಕ್ಕರೆ ಕಗಪ ಕೀಲಿಮಣೆ ಬಹಳ ಸುಲಭ, ಅದೂ ಅಲ್ಲದೆ ಕಡಿಮೆ ಕೀ ಸ್ಟ್ರೋಕ್‌ಗಳನ್ನು ಉಪಯೋಗಿಸಿ ಹೆಚ್ಚು ಬರೆಯಬಹುದು ಎನ್ನಿಸಿದ್ದು ನಿಜ.

ಆದರೆ, ನನ್ನ ಬರಹದ Transliteration (ba ra ha) ಗೂ, ಕಗಪ ದ ವೇಗಕ್ಕೂ ಬಹಳ ವ್ಯತ್ಯಾಸವಿರೋದಂತೂ ನಿಜ. ದಿನನಿತ್ಯ ಬಳಸಿದರೆ ಕಗಪವೂ ಹೆಚ್ಚು ವೇಗವನ್ನು ದೊರಕಿಸಿಕೊಡಬಹುದು ಎಂದು ನನಗೆನ್ನಿಸುವ ಹೊತ್ತಿಗೆ ತುಂಬಾ ತಡವಾಗಿದೆ ಎಂದು ನನಗೆ ಗೊತ್ತು.

’ಅಂತರಂಗ’ದ ಬರಹಗಳನ್ನು ಲೆಕ್ಕ ಹಾಕಿದರೆ ಲೇಖನಗಳು ಸರಾಸರಿ ಏಳೆಂಟು ಕಿಲೋ ಬೈಟ್‌ಗಳು ಇರಬಹುದೇನೋ, 'ಕಗಪ'ದಲ್ಲಿ ಕಡಿಮೆ ಟೈಪ್ ಮಾಡಿ ಹೆಚ್ಚು ಬರೆಯುವಂತೆ ಮಾಡುವುದು ನನ್ನಂತಹ ಸೋಮಾರಿಗಳಿಗೆ ವರದಾನವಾಗಬಲ್ಲದು.

ಈ ಲೇಖನ ಚಿಕ್ಕದಾಗಿರುವುದಕ್ಕೆ ಕಾರಣ ನಿಮಗೆ ಈಗಾಗಲೇ ಗೊತ್ತಾಗಿರಬಹುದು!

(ಬರಹ ಬ್ರಹ್ಮನಿಗೆ ಡ್ಯೂ ಕ್ರೆಡಿಟ್ ಕೊಡುತ್ತಾ...’ಅಂತರಂಗ’ದ ನಮನಗಳು)

ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು ಕನ್ನಡಿಗರು ನೀವೆಂಬ ಅಭಿಮಾನವಿರಲಿ! (66)
ಬರಹದಲ್ಲಿ (ನಾನು ಎಣಿಸಿದ ಹಾಗೆ) ೬೬ ಕೀ ಸ್ಟ್ರೋಕ್‌ಗಳು.

ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು ಕನ್ನಡಿಗರು ನೀವೆಂಬ ಅಭಿಮಾನವಿರಲಿ! (51)
ಮೇಲಿನ ವಾಕ್ಯ ಕಗಪದಲ್ಲಿ ಬರೆದಾಗ ೫೧ ಕೀ ಸ್ಟ್ರೋಕ್‌ಗಳು.


ವ್ಯಂಜನಗಳನ್ನು ಬರೆಯುವಾಗ Transliteration ಸ್ಕೀಮ್ ನಲ್ಲಿ "ka" ಎಂದು ಟೈಪ್ ಮಾಡಿದರೆ "ಕ" ಆಗುವುದು ಎರಡು ಕೀ ಸ್ಟ್ರೋಕ್‌ಗಳನ್ನು ಬೇಡುತ್ತದೆ, ಅದೇ ಕಗಪದಲ್ಲಿ "k" ಟೈಪ್ ಮಾಡಿದರೆ "ಕ" ಆಗುವುದಕ್ಕೆ ಕೇವಲ ಒಂದೇ ಕೀ ಸ್ಟ್ರೋಕ್ ಬೇಕಾಗುತ್ತದೆ. ಆದರೆ, ಸ್ವರಗಳನ್ನು ಬಳಸುವಲ್ಲಿ, ಹಾಗೂ ಕಾಗುಣಿತದ (ಕಿ,ಕೀ,ಕು,ಕೂ,ಕೃ,ಕೆ,ಕೇ,ಕೈ,ಕೊ,ಕೋ,ಕೌ,ಕಂ,ಕಃ) ಬಳಕೆಯಲ್ಲಿ ಅಂತಹ ವ್ಯತ್ಯಾಸವೇನೂ ಕಾಣಲಿಲ್ಲ. ಇಂಗ್ಲೀಷ್ ಕೀ ಬೋರ್ಡ್‌ನ q, w, ಅಕ್ಷರಗಳನ್ನು ಟ, ಡ, ಎಂದು ಮನದಲ್ಲಿ ಆಲೋಚಿಸಿಕೊಳ್ಳಲು ನನಗೆ ಸ್ವಲ್ಪ ಸಮಯಬೇಕಾಯಿತು, ಜೊತೆಗೆ ಪ್ರತಿಯೊಂದು ಒತ್ತಕ್ಷರಕ್ಕೆ ’f' ಬಳಸುವುದು ತುಸು ಹಿಂಸೆ ಎನಿಸಿತು.


Tuesday, July 10, 2007

ನೈತಿಕ್ ಪಟೇಲ್ ಎಂಬೋ ಗ್ಯಾಸ್ ಸ್ಟೇಷನ್ ಕೆಲಸಗಾರ

ಹಿಲರಿ ಕ್ಲಿಂಟನ್ ಬೇಕಾದ್ರೆ ಗ್ಯಾಸ್ ಸ್ಟೇಷನ್ನಲ್ಲಿರೋ ಮಹಾತ್ಮ ಗಾಂಧಿಗಳು ಅಂತಾ ತಮಾಷೆ ಬೇಕಾದ್ರೆ ಮಾಡ್ಕೊಳ್ಳಿ, ನಮ್ಮೂರ್‌ನ್ನಲ್ಲಿ ಇಲ್ಲಿ ಗ್ಯಾಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಓನರ್ರು, ಕೆಲಸಗಾರ್ರು ಹೆಚ್ಚು ಮಟ್ಟಿಗೆ ಭಾರತೀಯರೇ. ಒಂದು ತಿಂಗಳ ಹಿಂದೆ ನಮ್ಮನೆಗೆ ಹತ್ತಿರದಲ್ಲಿರುವ ಸ್ಟೇಷನ್ನಲ್ಲಿ ಕಾರು ನಿಲ್ಲಿಸಿದಾಗ ಸುಮಾರು ಇಪ್ಪತ್ತರ ಹರೆಯದ ಯುವಕನೊಬ್ಬ ಬಂದು ಸುಮಾರಾದ ಇಂಗ್ಲೀಷಿನಲ್ಲಿ ಗ್ಯಾಸ್ (ಗ್ಯಾಸೋಲಿನ್) ಆರ್ಡರ್ ತೆಗೆದುಕೊಂಡು ನನ್ನ ಕ್ರೆಡಿಟ್‌ಕಾರ್ಡ್ ಹಿಡಿದುಕೊಂಡು ಹೋದ. ಅಲ್ಲಿ ಗ್ಯಾಸ್ ಪಂಪ್ ಮಾಡಲು ಶುರುಮಾಡಿ ಬೇರೆ ಯಾರೂ ಗಿರಾಕಿಗಳಿಲ್ಲದ ಕಾರಣ ಸುಮ್ಮನೆ ನಿಂತಿದ್ದವನನ್ನು ನಾನೇ ಕರೆದು ಮಾತನಾಡಿಸಿದೆ. ಅವನ ಬೆರಗು ಕಂಗಳು, ಅವನು ಸುತ್ತಲನ್ನು ನೋಡುತ್ತಿದ್ದ ಕುತೂಹಲ ನನ್ನಲ್ಲೂ ಅವನ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವಂತೆ ಮಾಡಿತ್ತು.

ಅವನು ಹಿಂದಿನ ದಿನವಷ್ಟೇ ಭಾರತದಿಂದ ಬಂದವನೆಂದೂ, ಇವತ್ತಾಗಲೇ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್‌ಗೆ ಅಪ್ಲೈ ಮಾಡಿದ್ದಾನೆಂದೂ ತಿಳಿಯಿತು. ಅಮೇರಿಕದ ಬಗ್ಗೆ ಏನೇನೆಲ್ಲ ತಿಳಿದುಕೊಂಡಿದ್ದೀಯೆ, ನಿನ್ನನ್ನು ಯಾರು ಕರೆದುಕೊಂಡು ಬಂದರು ಎಂದು ಕೇಳಲಾಗಿ - ನನಗೇನೂ ಗೊತ್ತಿಲ್ಲ, ನನ್ನ ಸೋದರ ಮಾವ ಕರೆದುಕೊಂಡು ಬಂದ - ಒಮ್ಮೆ ಸೋಷಿಯಲ್ಲ್ ಬಂದ ಕೂಡಲೇ ನಾನು ನನ್ನದೇ ಒಂದು ಅಂಗಡಿಯನ್ನು ತೆರೆದು ಬೇರೆಲ್ಲಾದರೂ ಹೊರಟು ಹೋಗುತ್ತೇನೆ, ಅದಕ್ಕೋಸ್ಕರ ಮಾವ ಸಹಾಯ ಮಾಡುವುದಾಗಿ ತಿಳಿಸಿದ.

'ಇಲ್ಲಿನ ಛಳಿಯ ಬಗ್ಗೆ ಕೇಳಿದ್ದೀಯೇನು?' ಎಂದು ನನ್ನ ವ್ಯಂಗ್ಯ ಮಿಶ್ರಿತ ನಗೆಚಾಟಿಕೆಗೆ ಉತ್ತರವಾಗಿ ಅವನ ಮುಗ್ಧ ನಗು ಜೊತೆಗೆ 'ನನಗೇನೂ ಗೊತ್ತಿಲ್ಲ, ಆ ದೇವ್ರು ಎಲ್ಲಿ ತೋರಿಸ್ತಾನೆ ಅಲ್ಲಿ...' ಎನ್ನುವ ಮಹದೌರ್ಯದ ಮಾತು ಬೇರೆ.

ವಾರಕ್ಕೊಮ್ಮೆ ಗ್ಯಾಸ್ ಹಾಕಿಸಲು ಹೋದಾಗಲೆಲ್ಲ ಇವನು ಹಾಕಿದ ಎಕ್ಸಾನ್ ಅವರು ಕೊಟ್ಟ ಅಂಗಿಯ ಮೇಲೆ Al ಎಂದೋ Shaw ಎಂದೋ ಮತ್ತಿನ್ನೇನಾದರೂ ಹೆಸರುಗಳಿರುತ್ತಿದ್ದವು. 'ಏನಯ್ಯಾ ಬದಲಾಗಿ ಹೋಗಿದ್ದೀಯೇ ಬಂದು ಕೆಲವೇ ದಿನಗಳಲ್ಲಿ' ಎಂದು ಚುಚ್ಚಿದರೆ, 'ನನ್ನ ಅಂಗಿ ಇನ್ನೂ ಬಂದಿಲ್ಲ, ಅದಕ್ಕೇ ಬೇರೆಯವ್ರದ್ದು ಹಾಕ್ಕೊಂಡಿದ್ದೆನೆ...' ಎಂದು ಉದ್ದವಾದ ತೋಳುಗಳನ್ನು ಮಡಚಿಕೊಂಡಿರುವುದರ ಬಗ್ಗೆ ತೋರಿಸಿ ಹೇಳುತ್ತಾನೆ.

***

ನನ್ನ ಸಹೋದ್ಯೋಗಿ ಕೆನ್ ಹೇಳ್ತಿದ್ದಾ 'ಅಲಸ್ಕಾದಲ್ಲಿ ಆಯಿಲ್ ಚೆಲ್ಲಿ ಪರಿಸರವನ್ನು ಹಾಳುಗೆಡವಿದರೆಂದು ಎಷ್ಟೋ ಜನ ಎಕ್ಸಾನ್‌ನಲ್ಲಿ ಇವತ್ತಿಗೂ ಗ್ಯಾಸ್ ಖರಿದಿಸೋದಿಲ್ಲ' ಎಂಬುದಾಗಿ. ಅವನ ಹೇಳಿಕೆ ಸುಳ್ಳೋ ನಿಜವೋ, ಸುಳ್ಳಿರಬಹುದು ಎನ್ನುವಂತೆ ಎಕ್ಸಾನ್ ಮೊಬಿಲ್ ಪ್ರಪಂಚದ ಎಲ್ಲ ಕಾರ್ಪೋರೇಷನ್ನುಗಳಲ್ಲಿನ ಲಾಭಕ್ಕಿಂತಲೂ ಹೆಚ್ಚಾಗಿ ಲಾಭದ ಮೇಲೆ ಲಾಭ ಮಾಡುತ್ತಲೇ ಬಂದಿದೆ, ಅದೂ ಇತ್ತೀಚೆಗಂತೂ ಹಲವು ದಾಖಲೆಗಳನ್ನೂ ಮೀರಿಸಿದೆ.

ನಾನು ಕಿವಿಯಲ್ಲಿ ಕೇಳುವ ಪರಿಸರ ವಾದದ ವಿವರಗಳು, ಕಣ್ಣಲ್ಲಿ ನೋಡೋ ನೋಟಕ್ಕಾಗಲೀ, ಮಾಡೋ ಕಾರ್ಯಕ್ಕಾಗಲೀ ಯಾವುದೇ ಸಂಬಂಧಗಳನ್ನು ಬೆಳೆಸಿಕೊಂಡು ಅನ್ಯೋನ್ಯವಾಗಿರದೇ ಇರೋದರಿಂದ ಹೇಳೋದೊಂದೂ ಮಾಡೋದೊಂದೂ ಅಂತಾರಲ್ಲ ಹಾಗೆ ನನ್ನ ಎಲ್ಲ ಕಾರ್ಯ ವೈಖರಿಗಳು ಅಮೇರಿಕನ್ ಮಯವಾಗಿದೆ. ಯಾವತ್ತೋ ಪರಿಸರವನ್ನು ಹಾಳುಮಾಡಿದವರು ಎನ್ನುವುದು ಎಮೋಷನಲ್ ಮಾತಾದ್ದರಿಂದ ಅದಕ್ಕೋಸ್ಕರ ಒಂದು ಮೈಲು ದೂರದಲ್ಲಿರೋ ಶೆಲ್ ಗ್ಯಾಸ್ ಸ್ಟೇಷನ್ನಿಗೆ ಹೋಗಿ ನಾನೇನು ಗ್ಯಾಸ್ ತುಂಬಿಸೋದಿಲ್ಲ. ಎಲ್ಲಿ ಬೆಲೆ ಕಡಿಮೆ ಇರುತ್ತದೋ ಅಲ್ಲಿ ಎನ್ನುವುದಕ್ಕೆ ಎರಡನೇ ಆದ್ಯತೆ, ಅದಕ್ಕಿಂತಲೂ ಮೊದಲು ಸಮಯಕ್ಕೆ ತಕ್ಕ ಹಾಗೆ ನನ್ನ ಟ್ಯಾಂಕ್ ತುಂಬಬೇಕು, ಅಷ್ಟೇ.

***

ನೈತಿಕ್ ಪಟೇಲನ ಹೊಳಪು ಕಂಗಳುಗಳು, ಅವನ ವಿಚಾರವಂತಿಕೆ ಹಾಗೂ Fresh of the boat ಎಂದು ಇಲ್ಲಿಗೆ ಬಂದಂತಹವರನ್ನು ಇಲ್ಲಿ ಹುಟ್ಟಿದ ಭಾರತೀಯರು ಕರೆಯುವ ಹಾಗಿನ ತಿಳುವಳಿಕೆ ಇವೆಲ್ಲವೂ ನನ್ನನ್ನು ಅವನ ಬಳಿ ಮಾತನಾಡುವಂತೆ ಪ್ರಚೋದಿಸುತ್ತವೆ.

ಇಂದು ಗ್ಯಾಸ್ ಹಾಕಿಸಲು ಹೋದರೆ ಬೇರೆ ಯಾರೋ ಬಂದು ಕ್ರೆಡಿಟ್ ಕಾರ್ಡ್ ಎತ್ತಿಕೊಂಡು ಹೋದರೂ, ದೂರದಲ್ಲಿದ್ದ ನೈತಿಕ್ ನನ್ನ ಕಾರನ್ನು ನೋಡಿ ತಾನೇ ಹತ್ತಿರ ಬಂದು ಮಾತನಾಡಿಸಿದ. ಇವತ್ತು ಮತ್ತೆ ಬೇರೆ ಯಾರದ್ದೋ ಹೆಸರಿನ ಅಂಗಿಯನ್ನು ಧರಿಸಿದ್ದ, ಮುಖದಲ್ಲಿ ಅದೇ ಮುಗ್ಧತೆ. ಅವನಿಗೆ ಸೋಷಿಯಲ್ (ಸೆಕ್ಯೂರಿಟಿ ಕಾರ್ಡ್) ಬಂದಿದೆ ಎಂದೂ, ಇನ್ನು ಕೆಲವೇ ದಿನಗಳಲ್ಲಿ ಅವನು ತನ್ನದೇ ಆದ ಒಂದು ಅಂಗಡಿಯನ್ನು ತೆರೆಯುತ್ತಾನೆಂದೂ ತಿಳಿಸಿದ. ಇನ್ನೂ ಎಲ್ಲಿ ಎಂಬುದು ತೀರ್ಮಾನವಾಗಿಲ್ಲ, ಹುಡುಕುತ್ತಿದ್ದೇವೆ ಆದರೆ ಅವನ ಮಾಮಾ ಎಲ್ಲದಕ್ಕೂ ಅನುಕೂಲ ಮಾಡಿಕೊಡುತ್ತಿರುವುದಾಗಿ ತಿಳಿಸಿದ. ಅವನ ಕೆಲವು ವಾರಗಳ ಪ್ರಗತಿಯನ್ನು ನೋಡಿ ಬಹಳ ಸಂತೋಷವಾಯಿತು, ಜೊತೆಗೆ ಒಬ್ಬ ಸ್ನೇಹಿತನನ್ನು ಕಳೆದುಕೊಳ್ಳುತ್ತಿರುವ ದುಃಖವೂ ಆಯಿತು.

ನೈತಿಕ್ ಒಂದೆರಡು ವಾರದಲ್ಲೇ ಗ್ಯಾಸ್ ಹಾಕಿ ತೆಗೆಯುವ ಚಟುವಟಿಕೆಗಳಲ್ಲಿ ನಿಪುಣನಾಗಿದ್ದ, ಅವನ ವೇಗ ಇಮ್ಮಡಿಸಿತ್ತು. ಥರಾವರಿ ಜನಗಳ ಬಳಿ ಮಾತನಾಡಿ ಈಗಾಗಲೇ ಇಂಗ್ಲೀಷ್ ಸುಧಾರಿಸಿದಂತೆ ಕಂಡುಬಂತು, ಎಲ್ಲಕ್ಕಿಂತ ಮುಖ್ಯವಾಗಿ ಅವನ ಹೆಚ್ಚಿದ ಆತ್ಮವಿಶ್ವಾಸ ಗಮನಕ್ಕೆ ಬಂತು.

'ಏನಯ್ಯಾ, ಅಮೇರಿಕಕ್ಕೆ ಬಂದು ಇಲ್ಲಿಯವರ ಹಾಗೆಯೇ ಗ್ಲೌಸ್ ಹಾಕ್ಕೊಂಡು ಕೆಲಸ ಮಾಡ್ತಾ ಇದ್ದೀಯಾ?' ಎಂದು ರೇಗಿಸಲು ನೋಡಿದೆ, ಅದಕ್ಕವನು ಶಾಂತವಾಗಿ 'ಮೊದಮೊದಲು ಕಷ್ಟವಾಗುತ್ತಿತ್ತು, ಈಗ ಅದೇ ರೂಢಿಯಾಗಿ ಹೋಗಿದೆ, ಒಂದು ರೀತಿಯಲ್ಲಿ ಒಳ್ಳೆಯದೇ ಅಲ್ವಾ?' ಎಂದು ಉತ್ತರಿಸಿದ.

ನಾನು ಗ್ಯಾಸ್ ಹಾಕಿಸಿಕೊಂಡು ಮನೆಯ ಹಾಡಿ ಹಿಡಿದೆ.

Sunday, July 08, 2007

’ಅವರೊಡನೆ’ ಒಂದು ಸಂವಾದ...

ನಮ್ಮೂರಿನ್ ಪೋಸ್ಟ್ ಮಾಸ್ಟರ್ ಆಚಾರ್ರು ತಮಿಗ್ ಬರೋ ಅಷ್ಟೊಂದ್ ಕಡಿಮೆ ಸಂಬಳದಲ್ಲಿ ಅದ್‌ಹೆಂಗ್ ಜೀವ್ನಾ ನಡೆಸ್ತಿದ್ರೋ, ಮಕ್ಳೂ-ಮರಿ ಇರೋವಂತ ದೊಡ್ಡ ಸಂಸಾರಾನೇ ಅವ್ರುದ್ದು, ಅಂತ ಎಷ್ಟೋ ಸರ್ತಿ ಯೋಚ್ನೆ ಬರುತ್ತೆ. ನಾನ್ ಕೆಲ್ಸಾ ಮಾಡೋಕ್ ಶುರು ಮಾಡ್ದಾಗ್ಲಿಂದ್ಲೂ ಒಂದಲ್ಲಾ ಒಂದ್ ರೀತಿಯಿಂದ ಸಂಬ್ಳಾ ಜಾಸ್ತಿ ಆಗ್ತಾ ಹೋಗ್ತಾ ಇರೋದು ಸಹಜವಾದಷ್ಟೇ ಕೈಗ್ ಬರೋ ಕಾಸು ಕಮ್ಮೀ ಅಂತ್ಲೇ ಅನ್ನಿಸ್ತಿರೋದೂ ಅಷ್ಟೇ ಸಹಜವಾಗಿ ಬಿಟ್ಟಿದೆ! ಈ ಆಸೆಗೊಳಿಗೊಂದ್ ಮಿತಿ ಅಂತಾ ಬ್ಯಾಡ್ವಾ ಅಂತ ಬಹಳಷ್ಟ್ ಸರ್ತಿ ಅನ್ಸಿರೋದೂ ನಿಜವೇ.

ಆ ಪೋಸ್ಟ್ ಮಾಸ್ಟರ್ರುಗಳಿಗೆ ಏನ್ ಕಡಿಮೆ ಇಲ್ಲಾ ಪ್ರತೀ ಸರ್ತಿ ಮನಿ ಆರ್ಡ್ರು ಹಂಚೋಕ್ ಹೋದಾಗ್ಲೆಲ್ಲಾ ಎರಡ್ ರೂಪಾಯ್, ಐದ್ ರೂಪಾಯ್ ಅಂತ ಜನ ಕೊಡ್ತ್ಲೇ ಇದಾರೆ, ಅವರ ಮೇಲ್ ಸಂಪಾದ್ನೇ, ಅದೇ ಗಿಂಬಳಾ ಅಂತರಲ್ಲಾ ಅದಕ್ಕ್ಯಾವಾಗ್ಲೂ ಕಮ್ಮೀ ಅಂತಿಲ್ಲ. ಬರೋ ಸಂಬ್ಳದಿಂದ ಜೀವ್ನಾ ಸಾಗ್ಸೋದ್ ಅಂದ್ರೆ ಹುಡುಗಾಟ್ವೇ, ಈಗಿನ್ ಕಾಲ್ದಲ್ಲಿ ಹಂಗ್ ಯಾವಾನಾದ್ರೂ ಮಾಡ್ತಾನೆ ಅಂತಂದ್ರೆ ಅಷ್ಟೇಯಾ, ತಿಂಗ್ಳು ಕೊನಿಗೆ ಹೊಟ್ಟೇಗ್ ತಣ್ಣೀರ್ ಬಟ್ಟೆಯೇ ಗತಿ.

ಏನ್ ಮೇಲ್ಸಂಪಾದ್ನೇ ಬಂದ್ರೂ ಅಷ್ಟೇ - ಒಬ್ ಅಂಚೆ ಇಲಾಖೆ ಕೆಲ್ಸಗಾರನಿಗೆ ಬಹಳಷ್ಟು ಕನಸುಗಳೇನಾದ್ರೂ ಇರೋಕಾಗುತ್ಯೇ? ಅವೇ - ನಮ್ ಮಕ್ಳುನ್ ಇಂಜಿನಿಯರಿಂಗೂ, ಮೆಡಿಕಲ್ಲೂ ಓದಿಸ್ಬೇಕು; ದೊಡ್ಡ ಬಂಗ್ಲೇ ಕಟ್ ಬೇಕು; ಹಾಯಾಗಿ ಇರ್‌ಬೇಕು, ಇತ್ಯಾದಿ. ಗೃಹಸ್ಥಾಶ್ರಮ ಅಂದ್ರೇನು ಅಂತ ಗೊತ್ತಾಗೋದೇ ಮನೇ ತುಂಬ ಮಕ್ಳಿರೋಂಥ ಮನೆಯ ಹಿರಿಯನಾಗಿ, ಸರ್ಕಾರಿ ಶಾಲೆ ಮೇಷ್ಟ್ರೋ ಅಥವಾ ಅಂಚೆ ಇಲಾಖೆ ನೌಕರನೋ ಆಗಿಕೊಂಡು ಮನೆ ಯಜಮಾನನಾಗಿ ಇಪ್ಪತ್ತು-ಮೂವತ್ತು ವರ್ಷ ಜೀತಾ ತೇದಿ-ತೇದಿ ಹಾಕ್ದಾಗ್ಲೇ. ಮಕ್ಳೂ-ಮರಿ ಓದಿಸೋದ್ ಹಾಗಿರ್ಲಿ, ಕಾಸಿಗ್ ಕಾಸು ಕೂಡಿ ಎರಡು ಹೆಣ್ ಮಕ್ಳು ಮದುವೆ ಮಾಡಿ ಸೈ ಅನ್ನಿಸ್ಕ್ಯಳ್ಳಿ ನೋಡಾಣಾ...ಇಂಥಾ ಒಂದ್ ಗೃಹಸ್ಥಾಶ್ರಮದಲ್ಲಿ ಬದುಕಿ ಜಯಿಸಿದಾ ಅಂತಂದ್ರೆ ಎಕ್ಸಿಕ್ಯೂಟಿವ್ ಆಗಿ ಕೈ ತುಂಬಾ ಸಂಪಾದ್ನೇ ಮಾಡೋ ಹತ್ ಹತ್ತು ಕೆಲ್ಸದ ಪುಣ್ಯ ಸಿಕ್ಕ ಹಾಗೆ...ಅದು ನೋಡ್ರ್ಯಪ್ಪಾ ನಿಜವಾದ ಸಂಸಾರ ಅಂದ್ರೆ. ಪಟ್‌ಪಟ್ಟಿ, ಸ್ಕೂಟ್ರು, ಕಾರ್‌ನ್ಯಾಗೆ ಹೋಗಿ ಚೈನಿ ಮಾಡ್‌ತಿರೋ ನಮ್ಮಂತೋರಿಗೆ ಗೊತ್ತಾಗಂಗಿಲ್ಲ. ಒಂದೋ ಎರಡೋ ಹಡಕಂಡೇ ನಮ್ ಆಕ್ರಂದನ ಮುಗಿಲು ಮುಟ್ಟೋ ಹೊತ್ತಿನೊಳಗ ಹಿಂದೆ ಹೆಂಗಪ್ಪಾ ಜನ ಸಂಸಾರ ಸಾಗಿಸ್ತಿದ್ರೂ ಅನ್ಸಂಗಿಲ್ಲಾ?

ಹಾಕ್ಯಂಡ್ ಚಪ್ಲೀ ಸೈತಾ ಸವಿಯಂಗಿಲ್ಲಾ ಇದೊಂದ್ ನಮನಿ ಕೆಲ್ಸಾ ನೋಡ್ರಿ...ಅಂಗಿ ಕಾಲರ್ ಕೊಳೀ ಆಗದಿರೋಂಥ ಹವಾಮಾನದೊಳಗೆ ಬೇಯೋ ನಮಗೆ ಅತ್ಲಾಗ್ ಹೋಗಿ ಇತ್ಲಾಗ್ ಬಂದ್ರೆ ಉಸ್ಸ್ ಅನ್ನುವಂಗ್ ಆಗ್ ಹೋಗ್ತತಿ. ಮೈ ಮುರ್ದು-ಬಗ್ಸಿ ಕೆಲ್ಸಾ ಮಾಡೋ ಹೊತ್ಯ್ನ್ಯಾಗೆ ಕೂತ್ ಕಾಲಾ ಹಾಕ್ತವಿ, ಇನ್ನು ಕೂತ್ ತಿನ್ನೋ ಹೊತ್ತಿಗೆ ತೆವಳಿ ಸಾಯ್ತೇವಿ ಅನ್ಸಂಗಿಲ್ಲಾ? ಮನ್ಷಾ ಅಂದೋನ್ ಓಡಾಡ್ ಬಕು, ಮೈ ಬಗ್ಸಿ ದುಡಿಬಕು, ಹಂಗಾದ್ರೆ ಒಂದಿಷ್ಟು ಪರಿಶ್ರಮಾನಾದ್ರೂ ಆಗ್ತತಿ, ಮೈ ಮನಸು ಗಟ್ಟೀನಾರೆ ಆಗ್ತಾವೆ, ಅದು ಬಿಟ್ಟು ಬರೀ ತಲಿ ಖರ್ಚ್ ಮಾಡಿಕೊಂಡು ಪ್ರಪಂಚದ್ ಜನಾ ಎಲ್ಲಾ ಹಿಂಗ್ ಕುಂತಾ ಕಾಲಾ ತೆಗದೂ-ತೆಗದೂ ಅದ್ ಏನ್ ಉದ್ದಾರ್ ಆಗೈತಿ ಅಂತ ನೀವಾ ಹೇಳ್ರಲ್ಲಾ.

ಅದಿರ್ಲಿ ಬಿಡ್ರಿ...ಏನ್ ಮಳೀರಿ ಈ ಸರ್ತಿ ಅವನೌವ್ನು, ಎಲ್ಲಾ ಕೆರೆ ಕಟ್ಟೇ ತುಂಬಿಕ್ಯಂಡ್ ಕೋಡೀ ಬಿದ್ದ್ ಹೋಗೋಷ್ಟೋ...ಇನ್ನೂ ನಿಂತಿಲ್ಲ ನೋಡ್ರಿ ಇದರ ಅರ್ಭಟಾ...ಗೊಂಧೀ ಹೊಳೀ ತುಂಬಿ ರಸ್ತೀ ಮ್ಯಾಗ್ ನೀರ್ ಬಂದು ಎಲ್ಲಾ ಬಸ್ನೂ ನಿಲ್ಲಿಸ್ಯಾರ್ರೀ, ಹಾನಗಲ್ಲೂ, ಹುಬ್ಬಳ್ಳಿ ಹೋಗ್‌ಬಕು ಅಂದ್ರ ತಿರುಕ್ಯಂಡ್ ಹೋಗ್‌ಬಕು. ವರದಾ ನದಿ ಇಷ್ಟು ಯಾವತ್ತೂ ತುಂಬಿ ಹರಿದಿದ್ದಾ ನನ್ ಜೀವ್‌ಮಾನ್‌ದಾಗ್ ನೋಡಿದ್ದಿಲ್ರಿ. ದೇಶಾ ಪೂರ್ತಿ ತೊಳದ್ ಹೋಗೋಷ್ಟು ಮಳೀ ಬಂದ್ರೂ ನಮ್ ದೇಶದಾಗ್ ತುಂಬಿರೋ ಕೋಳೀ ಎಲ್ಲೂ ಹೋಗೋಂಗ್ ಕಾಣ್ಸಲ್ಲ. ದೊಡ್ಡ ಮನ್ಷಾರು ತಮ್ ಪಾಡಿಗ್ ತಾವ್ ಇರ್ತಾರ, ಇತ್ಲಾಗ್ ಬಡವ್ರು ಸತ್‌ಗಂತ ಕುಂತಾರೆ, ಹೇಳೋರಿಲ್ಲ ಕೇಳೋರಿಲ್ಲ ಅನ್ನಂಗಾಗಿ ಹೋಗ್ಯದೆ. ಸಾಲಾ ಸೂಲಾ ಮಾಡೀ ಕಾಳೂ-ಕಡಿ ತಂದು ಬಿತ್ತಿ ಇನ್ನೇನು ಪೈರು ಚಿಗರ್ಕ್ಯಬಕು ಅನ್ನೋಷ್ಟರಲ್ಲಿ ಇದೊಂದ್ ಹಾಳ್ ಮಳಿ ಹೊಡಕಂತ ಕುಂತತ್ ನೋಡ್ರಿ...ಸಾಲಾ ಕೊಟ್ಟೋರ್‌ಗೇನ್ ಅನ್ನಣ, ಬಡ್ಡಿ ಹೆಂಗ್ ತೀರ್ಸಣ, ಹೆಂಡ್ರೂ-ಮಕ್ಳೂ ಮೈ ಮ್ಯಾಗ್ ಅರಿವೇ-ವಸ್ತ್ರಾನ್ ಎಲ್ಲಿಂದಾ ತರಣಾ. ಅತ್ಲಾಗ್ ಜೀವಾ ಕಳಕಂತವಿ ಅಂದ್ರೂ ಒಂದ್ ನಿಮ್ಷಾ ಮಳಿ ಬಿಡವಲ್ದು, ಮನ್ಯಾಗಾ ಬಿದ್ದು ಸಾಯ್‌ಬಕು...ಅದೂ ಅಲ್ಲೀ-ಇಲ್ಲೀ ಸೋರೀ-ಸೋರಿ ಎತ್ಲಾಗ್ ನೋಡಿದ್ರೂ ಹಸೀಹಸೀ ಮುಗ್ಗುಲು ವಾಸ್ನೆ ಹಿಡದ್‌ಬಿಟ್ಟತಿ.

***

’ಯಾರಿಗೆ ಟೀ ತರ್‌ಬೇಕು? ಇಲ್ಲಿ ಯಾರೂ ಇಲ್ಲವಲ್ಲಾ...’.

’ಏ ಇವಳೇ... ಇವರಿಗೊಂದು ಕಪ್ ಚಾ ತಂದ್ ಕೊಡು...’ ಅಂತ ಇನ್ನೇನೋ ಬಡಬಡಿಸುತ್ತಾ ಇದ್ರಿ... ಯಾವ್ದಾದ್ರೂ ಕನಸೇನಾದ್ರೂ ಬಿದ್ದಿತ್ತಾ?

Thursday, July 05, 2007

ಕ್ಲಿಷ್ಟಕರವಾದ ಸವಾಲುಗಳಿಗೆ ಉತ್ರಾ ಕಂಡ್ ಹಿಡಿ...

'ಕುಡಗೋಲು ನುಂಗ ಬ್ಯಾಡ್ರೋ ಅಂತ ನಾನು ಅವತ್ತೇ ಹೇಳಿರ್‌ಲಿಲ್ಲಾ... ಕೊನಿಗೆ ಅದು ಹೊರಗ ಬರಬೇಕಾದ್ರ ನಿಮದೇ ಹರಿತತಿ!' ಎಂದು ಸುಬ್ಬ ಯಾರ ಹತ್ರನೋ ಗಟ್ಟಿಯಾಗಿ ಫೋನ್‌ನಲ್ಲಿ ಮಾತನಾಡೋದನ್ನು ಕೇಳಿ According to Jim ನೋಡುತ್ತಾ ಕುಳಿತಿದ್ದ ನನ್ನ ಕಿವಿಗಳು ನೆಟ್ಟಗಾದವು, ಟಿವಿ ವಾಲ್ಯೂಮ್ ಕಡಿಮೆ ಮಾಡಿ ಫೋನ್ ಸಂಭಾಷಣೆಯತ್ತ ಕಿವಿಗೊಟ್ಟೆ, ಆ ಕಡೆಯ ಸಂಭಾಷಣೆ ಏನೂ ಕೇಳುತ್ತಿರಲಿಲ್ಲವಾದ್ದರಿಂದ ಒನ್‌ವೇ ಕಾನ್ವರ್‌ಸೇಷನ್ನ್ ಅನ್ನು ಊಹಿಸಿಕೊಂಡು ಮೊದಲ ಬಾರಿಗೆ ಸ್ನೇಹಿತರ ಒತ್ತಾಯಕ್ಕೆ ಹಿಂದಿ ಸಿನಿಮಾ ನೋಡುತ್ತಿದ್ದ ತಮಿಳಿನವನಂತಾಗಿತ್ತು ನನ್ನ ಊಹಾ ಶಕ್ತಿ.

'...'

'ಅದೂ ಇಲ್ಲಾ, ಗಿದೂ ಇಲ್ಲ, ಈಗೇನ್ ಮಾಡ್ತೀರಿ ಅನ್ನೋದ್ ನೋಡ್ರಿ, ನಿಮ್ಮ ಕರ್ಮ ನಿಮಗೆ... ನಾಯಿ ತಗೊಂಡ್ ಹೋಗಿ ಪಲ್ಲಕ್ಕಿ ಸೇರಿಸಿದ್ರೆ ಹೇಲ್ ಕಂಡಲ್ಲಿ ಹಾರಿತ್ತಂತೆ!' ಎಂದು ಮತ್ತೊಂದು ನುಡಿ ಮುತ್ತು ಹೊರಗೆ ಬಂತು - ನಮ್ ಸುಬ್ಬನೇ ಹೀಗೆ ಸಿಟ್ಟು ಬಂದಾಗೆಲ್ಲ ಅದೆಲ್ಲೆಲ್ಲಿಂದಲೋ ಹಿಡಿದುಕೊಂಡು ಬಂದ ಅಣಿಮುತ್ತುಗಳನ್ನು ಸಹಜವಾಗಿ ಉದುರಿಸುವವ.

'...'

'ನಾನ್ ಬರೋದು ಇನ್ನೂ ಯಾವ ಕಾಲಕ್ಕೋ, ಎಲ್ಲಾನೂ ನಿಮ್ ಕೈಯಲ್ಲೇ ಬಿಟ್ಟ್ ಬಂದೀದೀನಿ...ಒಂದಿಷ್ಟು ಪೋಲೀಸ್ ಗಿಲೀಸ್‍ರಿಗೆ ಲಂಚಾ ಕೊಟ್ಟಾದ್ರೂ ಕೆಲಸ ಮಾಡಿಸ್‌ಕೊಳ್ಳ್ರಿ, ಇಲ್ಲಾಂತಂದ್ರೆ ಕೊನಿಗೆ ಅದರ ಫಲಾ ನೀವೇ ಅನುಭವಿಸಬೇಕಾದೀತು, ಅವಾಗವಾಗ ಫೋನ್ ಮಾಡ್‌ತಿರ್‌ತೀನಿ...ಇಡಲಾ ಹಂಗರೆ?' ಎಂದು ಆ ಕಡೆಯ ಸ್ವರಕ್ಕೆ ಇನ್ನೊಂದು ಕ್ಷಣ ಕಿವಿ ಕೊಟ್ಟಂತೆ ಮಾಡಿ ಫೋನ್ ಇಟ್ಟು, ನನ್ನ ಕಡೆಗೆ ಒಮ್ಮೆ ನೋಡಿ, ಸೋಫಾದ ಪಕ್ಕದ ಚೇರ್ ಮೇಲೆ ಉಸ್ ಎಂದು ಶಬ್ದ ಮಾಡಿಕೊಂಡು ಆಸೀನನಾದ. ಏನಾದ್ರೂ ಹೇಳ್ತಾನೇನೋ ಅಂತ ನೋಡಿ ಒಂದು ನಿಮಿಷ ಸುಮ್ನೇ ಇದ್ದೇ, ಏನೋ ಅವಲೋಕನ ಮಾಡಿಕೊಳ್ಳೋನ ಹಾಗೆ ಮನಸ್ಸಲ್ಲಿ ಮಂಡಿಗೆ ತಿನ್ನೋರ ಹಾಗೆ ಕಂಡು ಬಂದ, ನಾನೇ ಪ್ರಶ್ನೆ ಹಾಕಿದೆ.

'ಏನಾಯ್ತು?'

'ಏನಿಲ್ಲ, ಮೈಲಾರಿ ಮಗನ ಮೇಲೆ ರೇಪ್ ಕೇಸ್ ಫೈಲ್ ಮಾಡವರಂತೆ!' ಒಂದು ಕ್ಷಣ ಸುಧಾರಿಸಿಕೊಂಡು, 'ದೇಸಾಯರ ಮಗಳ ಕೂಡೆ ಇವನ್ದೂ ಭಾಳಾ ದಿವಸದಿಂದ ನಡೆದಿತ್ತು, ಅವರಪ್ಪನ ಕೈ ಕಾಲು ಉದ್ದುದ್ದಕಿದಾವೆ, ಬ್ಯಾಡಲೇ ಅಂತ ಹೇಳಿದ್ರೂ, ಬೈಕ್ ಮ್ಯಾಲೆ ಕೂರಿಸಿಕೊಂಡು ಅದೆಲ್ಲಿಗೋ ಕರಕೊಂಡು ಹೊಂಟಿದ್ದೋನ ಹಿಡಿದು ನಾಕ್ ಮಂದಿ ಚೆನ್ನಾಗಿ ತದಕಿದ್ದೂ ಅಲ್ದೇ ಸ್ಟೇಷನ್ನಿಗೆ ಎಳಕೊಂಡ್ ಹೋಗಿ ಹೇರ್ ಬಾರ್ದಿದ್ ಕೇಸ್ ಎಲ್ಲಾ ಹೇರಿ ಎಫ್‌ಐಅರ್‍ ಫೈಲ್ ಮಾಡಿ ಕುಂತವರಂತೆ...'

'ಹುಡುಗಿ ಎಲ್ಲಿದ್ದಾಳೀಗ, ಅವಳೇನೂ ಅನ್ಲಿಲ್ಲವೇ?'

ಹುಬ್ಬುಗಳನ್ನು ತುರಿಸಿಕೊಳ್ಳುತ್ತಾ, 'ಅವಳನ್ನ ಅವರಪ್ಪ ಬಾಂಬೆಗೆ ಕರಕೊಂಡ್ ಹೋಗವನಂತೆ, ಈಗ ಅವಳ ಚಿಕ್ಕಪ್ಪನದೇ ಎಲ್ಲಾ ದರಬಾರು, ನಿಮ್ ಹುಡುಗನ್ನ ಸರಿ ಮಾಡ್ಲಿಲ್ಲಾ ಅಂತಂದ್ರೆ ನಿಮ್ ಮನೆ ಸರ್ವನಾಶ ಮಾಡ್ತೀವಿ ಅಂತ ಧಮಕಿ ಹಾಕಿ ಹೋಗವರಂತೆ ಅವರ ಕಡೆಯವರು...ಮೈಲಾರಿದೋ ಪಾಪ ಇತ್ಲಾಗ್ ಮಗನ್ನ ಬಿಡಕ್ಕಾಗಲ್ಲ, ಅತ್ಲಾಗ್ ದೇಸಾಯಿ ಕಡೆಯೋರ್ನ ಎದುರ್ ಹಾಕಿಕೊಳ್ಳಾಕ್ ಆಗಲ್ಲ ಅನ್ನೋ ಪರಿಸ್ಥಿತಿ'.

'ಪೋಲೀಸ್ ಗಿಲೀಸ್...'

ನನ್ನ ಮಾತನ್ನ ಅರ್ಧದಲ್ಲೇ ತಡೆದು, '...ಎಲ್ರೂ ದುಡ್ಡಿದ್ದೋರ್ ಕಡೆಯೇ'.

'ಮುಂದೆ...'

'ಮುಂದೂ ಇಲ್ಲಾ, ಹಿಂದೂ ಇಲ್ಲಾ...ನಾನು ಇತ್ಲಗೆ ಬರೋ ಮುಂದ ಹೇಳಿ ಬಂದಿದ್ದೆ, ಹಂಗೇ ಆತು. ಆ ಹುಡುಗ ಬದುಕಿ ಉಳ್ದಿದ್ದೇ ಹೆಚ್ಚು, ಇನ್ನೂ ಕಾಲೇಜ್ ಮೆಟ್ಲು ಹತ್ತಿ ಮುಗಿಸಿಲ್ಲಾ, ಥರಾವರಿ ಕೇಸು-ಗೀಸು ಅಂತ ಪೋಲೀಸ್ ಸ್ಟೇಷನ್ ಅಲೀಬೇಕು, ಕಾನೂನ್ ಏನೇ ಅಂದ್ರೂ ಇದ್ದೂರ್‍ನಾಗೆ ಅವರಪ್ಪಾಅಮ್ಮನಿಗೆ ಬಾಳಾ ಸುಮಾರ್ ಆಗುತ್ತೆ...'

ನಾನೆಂದೆ, 'ಆ ಹುಡುಗೀನ್ ಕರೆಸಿ ಕೇಳ್ರಿ...' ಅಂತ ಇವರು ಫಿರ್ಯಾದು ಹೊರಡಿಸ್‌ಬೇಕಪ್ಪಾ...

'ಏ ಸುಮ್ನಿರೋ, ನಿನಗ್ಗೊತ್ತಾಗಲ್ಲ...,ಮೈಲಾರಿ ಮಗನ ಮೇಲೆ ರೇಪ್ ಕೇಸ್ ಹೇರಿದಾರೆ ಅಂದ್ನಲ್ಲ, ಅದ್ರಲ್ಲಿ ಹುಡುಗೀನೇ ಇಲ್ಲ, ಅವಳ ಸ್ಟೇಟ್‌ಮೆಂಟೂ, ಡಾಕ್ಟರ್ ಎಕ್ಸಾಮಿನೇಷನ್ನೂ ಎಲ್ಲಾ ಪೇಪರ್ನಾಗೆ ಮುಗಿಸಿಬಿಟ್ಟವರೆ, ನನ್ನ ಬಲವಂತಾ ಮಾಡ್ದಾ ಅಂತ ಹುಡುಗೀನೇ ಸ್ಟೇಟ್‌ಮೆಂಟ್ ಕೊಟ್ಟಂಗೆ'.

'ಇನ್ನ್ ಉಳಿದಿರೋ ಉಪಾಯ...'

'ಉಪಾಯಾ ಏನೂ ಇಲ್ಲ, ಇವ್ರು ದೇಸಾಯರ ಕಾಲ್ ಹಿಡಿದು ಕೇಸ್ ವಾಪಾಸ್ ತೆಕ್ಕಬಕು, ಇನ್ನ್ ಇವರ ಹುಡುಗ ಅತ್ಲಾಗ್ ತಲೀ ಹಾಕಿ ಮಲಗಲ್ಲ ಅಂತ ಬರೆದುಕೊಡಬಕು, ಊರ್ ಜನ್ರ ಮುಂದ...ಅದ್ರೂ ಎಳೇ ಹುಡುಗನ್ನ ಸಮಾ ಹೊಡದವರಂತೆ, ಇನ್ನೊಂದ್ ಸ್ವಲ್ಪ ಆಗಿದ್ರೆ ಸತ್ತೇ ಹೋಗ್ತಿದ್ದ ಅನ್ನೋ ಹಾಗೆ'.

'ಮತ್ತೇ ಈ ಸಿನಿಮಾಗಳಲ್ಲಿ ಲವ್ ಮಾಡೋ ಹುಡುಗ್ರೆಲ್ಲಾ ವಜ್ರಮುನಿ ಹಂಗಿರೋ ದೇಸಾಯರನ್ನ ಗೆಲ್ತಾರಲ್ಲ, ಅದ್ ಹೆಂಗೆ?'

'ಅಯ್ಯೋ ಪೆಂಗೇ...ಅದ್ಕೇ ಅದನ್ನ ಸಿನಿಮಾ ಅನ್ನೋದು, ನಿಜ ಜೀವ್ನ ಅನ್ನೋದು ಬ್ಯಾರೇನೇ...ಇರೋ ನಿಜ ಜೀವ್ನಾನ ಸಿನಿಮಾ ಮಾಡಿ ತೋರಿಸ್ಲಿ, ಅಂಥದಕ್ಕೆ ರಾಷ್ಟ್ರಪ್ರಶಸ್ತಿ ಬರಬೋದೇ ವಿನಾ ಥೇಟರ್‌ನಾಗೆ ಒಂದ್ ನೊಣವೂ ಹೊಕ್ಕೋದಿಲ್ಲ...' ಈ ಸಾರಿ ಅವನ ಮಾತನ್ನ ನಾನು ಮಧ್ಯದಲ್ಲೇ ನಿಲ್ಲಿಸಿ,

'ನಿಜ ಜೀವನಕ್ಕೂ ಸಿನಿಮೀಯತೆಗೂ ಅಷ್ಟೊಂದು ವ್ಯತ್ಯಾಸ ಯಾಕಿರ್‌ಬೇಕು, ಇದ್ದದ್ದನ್ನು ಇರೋ ಹಾಗೆ ತೋರಿಸ್‌ಬೇಕಪ್ಪಾ, ನಮ್ಮಲ್ಲಿರದಿದ್ದುದನ್ನು ತೋರ್ಸಿ, ಮನುಷ್ಯರಿಗೆ ಮೀರಿದ್ದನ್ನು ಅಭಿನಯಿಸೋದನ್ನ ಮನರಂಜನೆ ಅಂಥ ಹೆಂಗ್ ಕರಿಯೋದು?'

'ನೀನ್ ತಿಳಕಂಡಂಗೆ ಜೀವ್ನಾ ಅನ್ನೋದು ಇಪ್ಪತ್ತೆರಡು ನಿಮಿಷದ According to Jim ಎಪಿಸೋಡ್ ಅಲ್ಲಾ, ಅದರ ಹಿಂದೇ ಮುಂದೇ ಬೇಕಾದಷ್ಟಿರುತ್ತೆ, ಬಾಲಿಶವಾದ ಪ್ರಶ್ನೆಗಳನ್ನು ಕೇಳೋದು ಬಿಟ್ಟು, ಕ್ಲಿಷ್ಟಕರವಾದ ಸವಾಲುಗಳಿಗೆ ಉತ್ರಾ ಕಂಡ್ ಹಿಡಿ...' ಎಂದು ನನ್ನ ಮನಸ್ಸಿನ್ನಲ್ಲಿ ಪುಂಖಾನುಪುಂಖವಾಗಿ ಏಳುತ್ತಿದ್ದ ಸಿನಿಮೀಯತೆಯ ಪ್ರಶ್ನೆಗಳಿಗೆಲ್ಲ ಒಂದು ಪೂರ್ಣವಿರಾಮವನ್ನಿಟ್ಟನು. ಇವನವ್ವನ... ಪ್ರಶ್ನೆಗಳೇ ಇನ್ನೂ ಅರ್ಥವಾಗಿಲ್ಲ, ಇನ್ನು ಉತ್ರ ಕಂಡ್ ಹಿಡಿಯೋದ್ ಎಲ್ಲಿಂದ ಎಂದು ಮನಸ್ಸು ಬೈದುಕೊಂಡಿತು.

Tuesday, July 03, 2007

ಜರ್ಸೀ ರಾಜ್ಯಕ್ಕೆ ಜೈ!

ಇರೋ ಐವತ್ತು ರಾಜ್ಯದೊಳಗೆ ಹೋಗೀ-ಹೋಗೀ ಈ ಜರ್ಸೀ ರಾಜ್ಯದೊಳಗೇ ಬಂದು ತಗೊಲಿಕೊಳ್ಳಬೇಕಾದ್ದಂಥದ್ದೇನಿತ್ತು? ಎಂದು ಎಷ್ಟೋ ಸಾರಿ ಯೋಚನೆ ಮಾಡಿಕೊಂಡ್ರೂ ಹೊಳೆಯದ ವಿಚಾರ - ನನ್ನ ಯಾವ ಜನ್ಮದ ಕರ್ಮ ಫಲವೋ ಎನ್ನುವಂತೆ ಈ ಜರ್ಸಿ ರಾಜ್ಯದ ನೀರು ಕುಡಿತಾ ಇದ್ದಿದ್ದಾಯ್ತು ಹೆಚ್ಚೂ ಕಡಿಮೆ ಒಂದು ದಶಕ.

ಹೆಚ್ಚೂ ಕಡಿಮೇ ಏನು ಬರೋಬ್ಬರಿ ಹತ್ತು ವರ್ಷವೇ ಕಳೆದು ಹೋಯ್ತು...ನಾಳೆಗೆ. ಇವತ್ತು ಗಾರ್ಡನ್ ಸ್ಟೇಟ್ ಪಾರ್ಕ್‌ವೇ ಎಕ್ಸಿಟ್ 138 ಪಕ್ಕದಲ್ಲಿ ಹೋಗುವಾಗ ದಿಢೀರನೆ ನೆನಪಾಯ್ತು. ನಾನು 1997 ರ ಜುಲೈ ನಾಲ್ಕರಂದು ಡೆನ್ವರ್, ಕೊಲೋರ್ಯಾಡೋನಿಂದ ಇಲ್ಲಿಗೆ ಟಿಕೇಟ್ ತೆಗೆದು ನೆವರ್ಕ್ ಲಿಬರ್ಟಿಯಲ್ಲಿ ಇಳಿದು ನಮ್ಮ ರಿಕ್ರ್ಯೂಟರ್ ಹೇಳಿದ್ದನೆಂದ್ ಕೆನಿಲ್‌ವರ್ತ್ ಇನ್ನ್‌ಗೆ ರೂಮ್ ಬುಕ್ ಮಾಡಿಕೊಂಡು ಇನ್ನೂ ಕೈಯಲ್ಲಿ ಕೆಲಸವಿಲ್ಲದಿದ್ದರೂ ಹಳೆಯ (ಭಾರತೀಯ) ಕಂಪನಿಗೆ ರಾತ್ರೋ ರಾತ್ರಿ ನಮಸ್ಕಾರ ಹೊಡೆದು (ಅದೂ ಅಂತಿಮ ನಮಸ್ಕಾರ), ಜರ್ಸೀ ರಾಜ್ಯಕ್ಕೆ ಬಂದು ಸೇರಿಕೊಂಡಿದ್ದು.

ಜುಲೈ ನಾಲ್ಕರಂದು ಕಾಂಟಿನೆಂಟಲ್ ಏರ್‌ಲ್ಲೈನ್‌ನಲ್ಲಿ ಡಿಸ್ಕೌಂಟ್ ಕೊಡುತ್ತಾರೆ ಎಂದು ಗೊತ್ತಿರಲಿಲ್ಲ, ಇನ್ನೇನು ಡೆನ್ವರ್‌ನಿಂದ ಜರ್ಸಿಗೆ ಆರು ನೂರು ಚಿಲ್ಲರೆ ಡಾಲರ್ ಕೊಡಬೇಕು ಎನ್ನುವಷ್ಟರಲ್ಲಿ -- are there any independence day special...? ಎಂದು ಪ್ರಶ್ನೆ ಹಾಕಿದೆ ಎನ್ನುವ ಒಂದೇ ಕಾರಣಕ್ಕೆ ಕೌಂಟರ್ ಹಿಂದಿದ್ದ ಲಲನಾಮಣೀ ಒಂದೇ ನಿಮಿಷದಲ್ಲಿ ನನ್ನ ಒನ್ ವೇ ಟಿಕೇಟ್ ಮೇಲೆ ಐನೂರು ಡಾಲರ್ ಡಿಸ್ಕೌಂಟ್ ಕೊಟ್ಟಿದ್ದಳು...ಕೆಳ ತಿಂಗಳ ಸಹವಾಸದಲ್ಲಿ ನಾನು ಡೆನ್ವರ್ ನಗರವನ್ನು ಅದೆಷ್ಟೇ ಮೆಚ್ಚಿಕೊಂಡಿದ್ದರೂ ಜರ್ಸಿಗೆ ಬರುತ್ತೇನೆ ಎನ್ನುವ ಹುರುಪಿನ ಮುಂದೆ ಆ ಮೆಚ್ಚುಗೆ ಭಾರತದ ಹಳೇ ಸ್ನೇಹಿತರ ಗೆಳೆತನದಂತೆ ನಿಧಾನವಾಗಿ ಕರಗಿ ಕೊನೆಗೆ ಮಾಯವಾದುದರಲ್ಲಿ ಹೊಸತೇನೂ ಇಲ್ಲ ಬಿಡಿ. ಹಾಗೂ ವರ್ಜೀನಿಯಾದಲ್ಲಿ ಕಳೆದ ಮೂರೂವರೆ ವರ್ಷಗಳು ಹಳ್ಳಿ ಹುಡುಗ ಹೈ ಸ್ಕೂಲಿಗೆ ಪಕ್ಕದ ಊರಿಗೆ ಹೋಗಿ ಬಂದ ಅನುಭವ ಅಷ್ಟೇ.

***

ಹತ್ತು ವರ್ಷ ಕಳೆದು ಹೋಗಿದೆಯೇ? ಏನೇನಾಗಿಲ್ಲ, ಏನೇನಾಗಿದೆ! ೧೯೯೭ ರ ಜುಲೈ ನಾಲ್ಕರಂದು ಬಿಟ್ಟ ಕಣ್ಣು ಮುಚ್ಚದ ಹಾಗೆ ಕೆನಿಲ್‌ವರ್ಥ್ ಇ‌ನ್‌ನ ಮಾಳಿಗೆಯಿಂದ ನೋಡಿದೆ ಫೈರ್ ವರ್ಕ್ಸ್‌ಗಳನ್ನು ಇನ್ನುಳಿದ ಯಾವ ವರ್ಷದಲ್ಲೂ ಅಷ್ಟು ಆಸಕ್ತಿಯಿಂದ ನೋಡಿಲ್ಲ. ಅಮೇರಿಕದಲ್ಲಿ ದುಡಿಯುವ ಎಲ್ಲರಿಗೂ ಆಗೋ ಹಾಗೆ ನನಗೂ ಒಂದಿಷ್ಟು ಕಾರ್ಡುಗಳು, ಸಾಲಗಳು ತಲೆ ಸುತ್ತಿಕೊಂಡಿವೆ. ಇಲ್ಲಿನ ರೀತಿ-ನೀತಿಗಳನ್ನು ಕಲಿತೆನೋ ಬಿಟ್ಟೆನೋ ಎಂದು ನನಗೆ ಆಗಾಗ ಅನುಮಾನವಾಗುತ್ತಿರುತ್ತದೆ. ಆಗಿನ ಹುರುಪು, ಭಂಡ ಧೈರ್ಯಗಳು ಈಗಿಲ್ಲವಾದರೂ ಇತ್ತೀಚಿನ ಜಾಗತಿಕ ವಿದ್ಯಮಾನಗಳನ್ನು ಕುರಿತು ಆಲೋಚಿಸಿದರೆ ಒಮ್ಮೊಮ್ಮೆ ಇಲ್ಲಿರುವುದೇ ಸೇಫ್ ಅಲ್ಲ ಅನ್ನಿಸೋದೂ ಇದೆ.

***

ಅಮೇರಿಕದ ಉಳಿದ ರಾಜ್ಯಗಳಲ್ಲಿ ದೇಸಿಗಳು ಹೆಚ್ಚೋ ಕಡಿಮೆಯೋ ಯಾರು ಬಲ್ಲರು, ನಮ್ಮ ಜರ್ಸೀ ರಾಜ್ಯದಲ್ಲಿ ಬೇಕಾದಷ್ಟು ಜನ ದೇಸಿಗಳಿದ್ದಾರೆ...ಎಲ್ಲಿ ಹೋದರಲ್ಲಿ ನಮ್ಮವರನ್ನು ನೋಡುವುದು ನಮಗೆ ಸಹಜ, ಅದು ಒಂದು ರೀತಿಯಲ್ಲಿ ನಮ್ಮನ್ನು ಇಲ್ಲಿ ಜನಪ್ರಿಯ ಮಾಡಿದೆ. ಏನಿಲ್ಲವೆಂದರೂ ಡೆನ್ವರ್‌ನಲ್ಲಿ ಕೇಳುತ್ತಿದ್ದ ಹಾಗೆ ’ಭಾರತ ಎಲ್ಲಿದೆ?’ ಎಂದು ಇಲ್ಲಿ ಯಾರೂ ಈವರೆಗೆ ಕೇಳಿದ್ದಿಲ್ಲ. ಜರ್ಸೀ ರಾಜ್ಯ ಹೆಸರಿಗೆ ಮಾತ್ರ ಸಣ್ಣ ರಾಜ್ಯಗಳಲ್ಲೊಂದು (ಭೂ ವಿಸ್ತಾರದಲ್ಲಿ), ಆದರೆ ಇಲ್ಲಿ ಜನಗಳು ಅಲೆದಾಡುವಷ್ಟು, ಇಲ್ಲಿನ ಜನಸಾಂದ್ರತೆ ಬಹಳಷ್ಟು ರಾಜ್ಯಗಳಲ್ಲಿರಲಾರದು.

***

’Happy 4th of July!...' ಎಂದು ನಾನು ಈ ವರ್ಷ ಹೇಳಿದಷ್ಟು ಬೇರೆ ಯಾವ ವರ್ಷವೂ ಹೇಳಿಲ್ಲ, ಅಮೇರಿಕತನ ನನ್ನಲ್ಲಿ ನಿಧಾನವಾಗಿ ಒಳಗಿಳಿತಿದೆಯೋ ಏನೋ!

***

ಹತ್ತು ವರ್ಷಗಳ ನಂತರವೂ ಅದೇ ಕೆನಿಲ್‌ವರ್ಥ್, ಅದೇ ಜುಲೈ ಫೋರ್ಥ್...ಇನ್ನೂ ಹತ್ತು ವರ್ಷ ಜರ್ಸೀ ರಾಜ್ಯದಲ್ಲಿ ಕಾಲ ಹಾಕದಿದ್ದರೆ ಸಾಕು...ನೀರಿನ ಋಣ ಅಂದ್ರೆ ಸಾಮ್ಯಾನ್ಯವೇನು?

Friday, June 29, 2007

ಅರ್ಧ ವರ್ಷದ ಅರಣ್ಯರೋಧನ

ಸಂಜೆ ಆಫೀಸ್ ಬಿಟ್ಟು ಬರುವಾಗ ’ವರ್ಷದ ಉತ್ತರಾರ್ಧದಲ್ಲಿ ಸಿಗೋಣ, ವೀಕ್ ಎಂಡ್ ಚೆನ್ನಾಗಿರಲಿ...’ ಎಂದು ಸಹೋದ್ಯೋಗಿ ಒಬ್ಬಳು ಹೇಳಿದಾಗಲೇ, ’ಅಯ್ಯೋ ಅರ್ಧ ವರ್ಷ ಆಗ್ಲೇ ಮುಗಿದು ಹೋಯ್ತೇ, ಮೊನ್ನೆ ಮೊನ್ನೆ ಇನ್ನೂ ಆರಂಭವಾದ ಹಾಗಿತ್ತಲ್ಲಪ್ಪಾ...’ ಎನ್ನುವ ಸ್ವರ ನನಗಿರಿವಿಲ್ಲದೇ ಹೊರಗೆ ಬಂತು. ಹೀಗೆ ವರ್ಷ, ತಿಂಗಳು, ವಾರಗಳನ್ನು ಕಳೆಕಳೆದುಕೊಂಡು ಇನ್ನೊಂದಿಷ್ಟು ದಿನಗಳಲ್ಲಿ ಈ ವರ್ಷವೂ ಮುಗಿದು ಮುಂದಿನ ವರ್ಷ ಬರೋದು ಮಿಂಚಿನ ಹಾಗೆ ಆಗಿ ಹೋಗುತ್ತೋ ಏನೋ ಎನ್ನುವ ಹೆದರಿಕೆಯೂ ಜೊತೆಯಲ್ಲಿ ಹುಟ್ಟಿತು.

’ಈ ತಿಂಗಳು, ಕ್ವಾರ್ಟರ್ರು, ವರ್ಷಗಳ ಲೆಕ್ಕವೆಲ್ಲ ನನಗಲ್ಲ, ನಮ್ಮದೇನಿದ್ರೂ ಯುಗಾದಿ ಆಧಾರಿತ ವರ್ಷಗಳ ಲೆಕ್ಕ, ಚೈತ್ರ ಮಾಸ, ವಸಂತ ಋತು ತರೋ ಸಂಭ್ರಮವೆಲ್ಲಿ, ಡಿಸೆಂಬರ್ ಮೂವತ್ತೊಂದರಿಂದ ಜನವರಿ ಒಂದರ ಬದಲಾವಣೆಯೆಲ್ಲಿ?’ ಎಂದು ನನ್ನೊಳಗಿನ ಧ್ವನಿಯೊಂದು ಕ್ರೆಷ್ಟ್ ಗೇಟ್ ತೆರೆದಾಗ ನೀರು ಭರದಿಂದ ಹೊರಬರುವಂತೆ ನುಗ್ಗಿ ಬಂತು. ’ಹಾಗಾದ್ರೆ ಇದು ಯಾವ ಸಂವತ್ಸರ ಹೇಳು ನೋಡೋಣ?’ ಎನ್ನುವ ಪ್ರಶ್ನೆಯ ಕೊಂಕು ಬೇರೆ...ಒಂದು ಕಾಲದಲ್ಲಿ ಅರವತ್ತು ಸಂವತ್ಸರಗಳನ್ನು ಹಾಡಿನಂತೆ ಹೇಳಿ ಒಪ್ಪಿಸುತ್ತಿದ್ದ ನನಗೆ ಇಂದು ಪ್ರಭವ, ವಿಭವರು ಯಾವುದೋ ಅನ್ಯದೇಶೀಯ ಹೆಸರುಗಳಾಗಿ ಕಂಡುಬಂದವು.

ಸೈನ್ಸ್ ಮ್ಯಾಗಜೀನ್‌ನಲ್ಲಿ ವರದಿ ಮಾಡಿದ ಹಾಗೆ ೯೦೦೦ ಸಾವಿರ ವರ್ಷಗಳ ಹಿಂದೆಯೇ ಮಿಡ್ಲ್ ಈಸ್ಟ್‌ನಲ್ಲಿ ಬೆಕ್ಕುಗಳನ್ನು ಸಾಕಿಕೊಂಡ ಪುರಾತನ ಕಥೆ, ಸುಮಾರು ೭೦೦೦ ವರ್ಷಗಳ ಹಿಂದೆ ಸಾಗುವ ಈಜಿಪ್ಟಿನ ವಂಶವೃಕ್ಷ, ಜೊತೆಯಲ್ಲಿ ಕೊನೇಪಕ್ಷ ಏನಿಲ್ಲವೆಂದರೂ ಒಂದು ಐದು ಸಾವಿರ ವರ್ಷಗಳನ್ನಾದರೂ ಕಂಡಿರುವ ಭರತ ಖಂಡ, ಅದರ ತಲೆಯ ಮೇಲೆ ಅಗಲವಾಗಿ ಹರಡಿಕೊಂಡ ಚೀನಾ ಪುರಾತನ ಪರಂಪರೆ. ಇಷ್ಟೆಲ್ಲಾ ಇದ್ದೂ ಸಹ, ಪ್ರಪಂಚವನ್ನು ನಡೆಸಲು ಕ್ರಿಸ್ತಶಕೆಯೇ ಏಕೆ ಬೇಕಾಯ್ತು ಎಂದು ವಿಸ್ಮಯಗೊಂಡಿದ್ದೇನೆ. ಯೂರೋಪಿನ ಸಾಮ್ರಾಟರು ತಮ್ಮ ತಮ್ಮ ಹೆಸರುಗಳಿಗೆ ಒಂದೊಂದು ತಿಂಗಳನ್ನು ಹುಟ್ಟಿಸಿಕೊಂಡರು...ಮುಂದೆ ಸೂರ್ಯನು ಮುಳುಗದ ಸಾಮ್ರಾಜ್ಯವಾಗಿ ಪ್ರಪಂಚವನ್ನೇ ಆಳಿದ ಇಂಗ್ಲೀಷರು - ಅಂದರೆ ಕೇವಲ ಒಂದು ನೂರು ಇನ್ನೂರು ಹೆಚ್ಚೆಂದರೆ ಐನೂರು ವರ್ಷಗಳ ಬೆಳವಣಿಗೆಯ ಮುಂದೆ ಆ ಸಾವಿರ ವರ್ಷಗಳ ಇತಿಹಾಸ ಗೌಣವಾದದ್ದಾದರೂ ಹೇಗೆ? ಪ್ರಪಂಚದ ಆರು ಬಿಲಿಯನ್ನ್ ಜನರಿಗೆಲ್ಲ ತಮ್ಮ ಭಾಷೆ, ಬಣ್ಣ, ಉಡಿಗೆ-ತೊಡಿಗೆಗಳೆಲ್ಲಾ ಬೇಡವಾಗಿ ಸಮಭಾಜಕ ವೃತ್ತದ ಬಳಿ ಇದ್ದವರೂ ಸೂಟು ತೊಡವಂತಾದದ್ದು ಹೇಗೆ?

***

ನಮ್ಮ ಭಾಷೆ ದೊಡ್ಡದು, ನಮ್ಮ ಧರ್ಮ ಬೆಳೆಯಲಿ - ಎನ್ನುವುದು ಕೆಲವರಿಗೆ ಕಳಕಳಿಯ ಅಂಶ, ಇನ್ನು ಕೆಲವರಿಗೆ ಅದು ರಾಜಕೀಯ ಅಜೆಂಡಾ. ನಮ್ಮ ಸಂಸ್ಕೃತಿಯಲ್ಲಿ ಜೀವಿಸಿ ಇತರ ಸಂಸ್ಕೃತಿಗಳನ್ನೂ ಪ್ರೀತಿಸೋಣ ಎನ್ನುವುದು ಕೆಲವರ ನಂಬಿಕೆ, ಇನ್ನು ಕೆಲವರಿಗೆ ತೇಲುಮಾತು. ಯೂರೋಪು, ಅಮೇರಿಕಾ ಖಂಡಗಳಿಂದ ಹರಿದು ಬರುವ ಹಣದ ಪ್ರಭಾವ ಉಳಿದೆಲ್ಲೆಡೆ ಗೆಲ್ಲಬಲ್ಲದು - ಪ್ರತಿಯೊಂದು ದೇಶದ ಕರೆನ್ಸಿಯೂ ದಿನವೂ ಇವುಗಳಿಗೆ ಹೋಲಿಸಿ ನೋಡಿಕೊಳ್ಳಬೇಕಾದ ಪರಿಸ್ಥಿತಿ. ಕಡಿಮೆ ಜನ ಹೆಚ್ಚು ಜನರನ್ನು ಆಳುವ, ಆಳಬಲ್ಲ ಕಟುಸತ್ಯ.

***

ಅದೂ ಸರೀನೇ, ನಾವು ಮದುವೆ-ಮುಂಜಿಗೆ ಮಾತ್ರ ಇಂತಹ ಸಂವತ್ಸರ, ಇಂತಹ ಪಕ್ಷ, ಇಂತಹ ತಿಥಿ-ನಕ್ಷತ್ರಗಳನ್ನು ಬಳಸಿದ್ದೇವೆ ವಿನಾ ನಮ್ಮ-ನಮ್ಮ ಹುಟ್ಟಿದ ದಿನಗಳಿಂದ ಹಿಡಿದು ಉಳಿದೆಲ್ಲ ದಿನಚರಿಗೆ ಸಂಬಂಧಿಸಿದವುಗಳು ಇಂಗ್ಲೀಷ್‌ಮಯವಾಗಿರುವಾಗ ಪ್ರತಿವರ್ಷ ಯುಗಾದಿಯ ದಿನದಂದು ’ಹೊಸವರ್ಷದ ಶುಭಾಶಯ’ಗಳನ್ನು ಪಿಸುಮಾತಿನಲ್ಲೋ, ಪ್ಯಾಸ್ಸೀವ್ ಇಮೇಲ್-ಮೆಸ್ಸೇಜ್‌ಗಳಲ್ಲೋ ಹಂಚಿಕೊಳ್ಳೋದನ್ನು ಎಷ್ಟು ದಿನಗಳವರೆಗೆ ಕಾಯ್ದುಕೊಂಡಿರಬಲ್ಲೆವು? ಮುಂಬರುವ ಸಂತತಿಗಳಿಗೆ ಏನೆಂದು ಹಂಚಬಲ್ಲೆವು, ಇನ್ನು ಬೇವು-ಬೆಲ್ಲದ ಮಾತು ಹಾಗಿರಲಿ. ಹಾಗಾದ್ರೆ, ಗಟ್ಟಿಯಾಗಿ ಅರಚುವವನೇ ಗೆಲ್ಲುವುದನ್ನು ಒಪ್ಪಿಕೊಂಡಿದ್ದೇವೆಯೇ? ಹಾಗಾದ್ರೆ, ನಾವೂ (ಎಲ್ಲರೂ) ಏಕೆ ಗಟ್ಟಿಯಾಗಿ ಕೂಗೋದಿಲ್ಲ?

ನಮ್ಮಲ್ಲಿನ ಬುದ್ಧಿವಂತರು, ಬುದ್ಧಿಜೀವಿಗಳಿಗೆ ದೇವರಿಂದ ದೂರವಿರುವುದು ಫ್ಯಾಶನ್ನಾಗುತ್ತದೆ - ನಾವು ಆಚರಿಸುವ ವಿಧಿ-ವಿಧಾನಗಳಿಗೆಲ್ಲ ಸಾಕಷ್ಟು ವೈಜ್ಞಾನಿಕ ಕಾರಣಗಳಿದ್ದರೂ ಸದಾ ನನ್ನ ಬಳಿ ನಿಖರವಾದ ಉತ್ತರವಿರೋದಕ್ಕೆ ಸಾಧ್ಯವಿಲ್ಲ, ನಮ್ಮ ಹಿರಿಯರ ಆಚರಣೆಗಳ ಹಿಂದಿರುವ ನಂಬಿಕೆ, ಆ ಬಳುವಳಿಯೇ ಸಾಕು ನಾವು ಅದನ್ನು ಇನ್ನಷ್ಟು ದೂರ ಕೊಂಡೊಯ್ಯಲು. ದೇವಸ್ಥಾನ-ಮಠ-ಮಂದಿರಗಳಿಗೇಕೆ ನಾವು ಹೋಗಬೇಕು ಎಂದು ನಮ್ಮ ಬುದ್ಧಿಮತ್ತೆ ನಮ್ಮನ್ನು ಅವುಗಳಿಂದ ದೂರವಿರುವಂತೆ ಮಾಡುತ್ತಿರುವ ಸಮಯದಲ್ಲಿ ಮುಂದುವರಿದ ಸಂಸ್ಕೃತಿ-ದೇಶಗಳಲ್ಲಿನ ಧಾರ್ಮಿಕ-ಸಾಂಸ್ಕೃತಿಕ ವಲಯಗಳು ಹಿಂದೆಂದಿಗಿಂತಲೂ ಬಲಶಾಲಿಯಾಗಿದ್ದನ್ನು ನೋಡಿಯೂ ನೋಡದವರಾಗಿ ಹೋಗುತ್ತೇವೆ. ಹಲವು ಸಂಸ್ಕೃತಿಗಳು ತಮ್ಮ ಹಿತ್ತಲಿನ ಆಲಿವ್ ಮರಕ್ಕೆ ನೀರೆರೆಯುವುದನ್ನು ನೋಡಿಕೊಂಡೂ, ವೈಯುಕ್ತಿಕ ಆದಾಯದ ಒಂದು ಪಾಲು ಧಾರ್ಮಿಕ ಸಮುದಾಯದ ಬೆಳವಣಿಗೆಗೆ ಗುರಿಯಾಗುವುದನ್ನು ಕಂಡೂ ಕಂಡು ಕುರುಡರಾಗಿ ಹೋಗುತ್ತೇವೆ. ದೂರದ ಚಿಂತನೆಗಳಲ್ಲಿ ನಮ್ಮನ್ನು ನಾವು (ಮುಖ್ಯವಾಗಿ ಹಣವನ್ನು) ತೊಡಗಿಸಿಕೊಳ್ಳುವುದು ಹಾಗಿರಲಿ, ನಾವು ಅದೆಷ್ಟೇ ಚಾಕಚಕ್ಯತೆ, ಜಾಣತನ, ಭ್ರಷ್ಟಾಚಾರಗಳ ಸುರುಳಿಗಳಲ್ಲಿ ಸಿಲುಕಿ ಹಣ ಉಳಿಸಿದವರಂತೆ ಕಂಡು ಬಂದರೂ ಜಾಗತಿಹ ತುಲನೆಯಲ್ಲಿ ಬಡವರಾಗುತ್ತೇವೆ.

ಎಲ್ಲದಕ್ಕೂ ಕಾಲನೇ ಉತ್ತರ ಹೇಳಲಿ ಎನ್ನುವುದು ಪೈಪೋಟಿಗೆ ನಾವು ಕೊಡಬಹುದಾದ ಉತ್ತರ, ಅಥವಾ (ಲೆಕ್ಕಕ್ಕೆ ಬಾರದ/ಇರದ) ಸಾವಿರ ವರ್ಷಗಳ ತತ್ವಗಳ ಸಾರ, ಅಥವಾ ಸೋಮಾರಿತನದ ಪರಮಾವಧಿ. ನಮ್ಮಲ್ಲಿನ ದೇವರುಗಳು, ದಾರ್ಶನಿಕರು, ನಂಬಿಕೆಗಳು ನಮ್ಮನ್ನು ಇನ್ನೊಬ್ಬರದ್ದನ್ನು ಸುಲಭವಾಗಿ ಒಪ್ಪಿಕೊಳ್ಳುವಂತೆ ಅದೇಕೆ ಪ್ರಚೋದಿಸುತ್ತವೆಯೋ ಯಾರು ಬಲ್ಲರು? ಅಥವಾ ಹುಲುಮಾನವನ ಶಕ್ತಿಗೆ ಮೀರಿ ಕಳೆದು ಹೋಗಬಹುದಾದ ಪ್ರತಿಯೊಂದು ಕ್ಷಣವೆನ್ನುವುದು ಸಾವಿರ-ಲಕ್ಷ-ಕೋಟಿ ವರ್ಷಗಳ ಗ್ರ್ಯಾಂಡ್ ಸ್ಕೇಲಿನಲ್ಲಿ ಲೆಕ್ಕಕ್ಕೆ ಸಿಗದಿರಬಹುದಾದ ಒಂದು ಸಣ್ಣ ಕಣ ಎಂದು ನಿರ್ಲಕ್ಷಿಸಬಹುದಾದ ಕಮಾಡಿಟಿಯಾಗಿರುವುದು ಇನ್ನೂ ದೊಡ್ಡ ತತ್ವವಿದ್ದಿರಬಹುದು.

ನಮ್ಮ ಬೇರುಗಳಿಗೆ ನಾವು ನೆಟ್ಟಗೆ ತಗಲಿಕೊಳ್ಳಲಾಗದವರು ಮುಂದೆ ಚಿಗುರಬಹುದಾದ ರೆಂಬೆ-ಕೊಂಬೆಗಳನ್ನು ಹೇಗೆ ಆಶ್ರಯಿಸುತ್ತೇವೆ, ಅಥವಾ ನಮ್ಮ ಬೇರುಗಳು ಇನ್ನೂ ಜೀವವನ್ನುಳಿಸಿಕೊಂಡಿರಬೇಕೇಕೆ?

Wednesday, June 27, 2007

"ಮುಮ"

ಈ ಜನವರಿಯಲ್ಲಿ "ಮುಮ" (ಮುಂಗಾರು ಮಳೆ) ಸಿನಿಮಾ ನೋಡಿದ್ದೆ...ಅದರ ಬಗ್ಗೆ ನಿನಗನ್ನಿಸಿದ್ದನ್ನು ಬರೀ ಅಂತ ಎಷ್ಟೋ ಜನ ಅಂದ್ರು, ಆದ್ರೆ ಸಿನಿಮಾದ ಪೂರ್ಣ ವಿವರವಂತೂ ನನಗೆ ನೆನಪಿಲ್ಲ - ನೆನಪಿನಲ್ಲಿಟ್ಟುಕೊಳ್ಳೋವಷ್ಟು ಯೋಗ್ಯವಲ್ಲದ್ದರಿಂದ ನೆನಪಿನಲ್ಲುಳಿಯಲಿಲ್ಲವೋ ಯಾರಿಗೆ ಗೊತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ, cut the chase (==crap) ಅಂತಾರಲ್ಲ ಹಾಗೆ, ನನಗೆ ಸಿನಿಮಾ ಅಷ್ಟೊಂದು ಇಷ್ಟವಾಗಲಿಲ್ಲ...ಮಳೆ, ಮಡಿಕೇರಿ, ಸಂಗೀತ, ಅಲ್ಲಲ್ಲಿ ಹೊಡೆದಾಟ ಎನ್ನುವ ಸ್ಪ್ರಿಂಗ್ ಬೋರ್ಡ್ ನಂಬಿಕೊಂಡ ಸಾಹಸಿಗರ ಮಾರಣ ಹೋಮ, ನಟನೆ ಬಾರದ ನಾಯಕಿ (my guess), ಎಲ್ಲಾ ಸೀನ್‌ನಲ್ಲೂ ನಗೋ ನಾಯಕ, ಜೊತೆಗೊಂದು ಎಡವಟ್ಟು ದೇವದಾಸ -- ಇನ್ನೇನ್ ಬೇಕು?

***

ಅನಿವಾಸಿ ಕನ್ನಡಿಗರ ನಡುವೆ ಕುಳಿತು ಸಿನಿಮಾ ಆಹ್ಲಾದಿಸೋದಕ್ಕೂ ನಮ್ಮ ಊರುಗಳಲ್ಲಿ ಥಿಯೇಟರುಗಳಲ್ಲಿ ಸಿನಿಮಾ "ನೋಡೋ"ದಕ್ಕೂ ಬಹಳಷ್ಟು ವ್ಯತ್ಯಾಸವಿದೆ, ಈಗಾಗಲೇ ನನ್ನಂತಹ ಅನಿವಾಸಿಗಳಿಗೆ ಆ ವಿಷಯ ಮನವರಿಕೆ ಆಗಿರಬಹುದು ಎನ್ನುವ ಭ್ರಮೆ (==ನಂಬಿಕೆ) ನನ್ನದು, ಅದರ ಬಗ್ಗೆ ಬರೀತಾ ಹೋದ್ರೆ ಅದೇ ಒಂದು ಪೋಸ್ಟ್ ಆಗಿ ಹೋಗುತ್ತೆ. ನಾನು ಮುಮ ವನ್ನು ನೋಡಿದ್ದು ಬೆಂಗಳೂರಿನ ವೈಭವ ಥಿಯೇಟರ್‍ನಲ್ಲಿ, ಸಿನಿಮಾ ಅದೆಷ್ಟು ದಿನಗಳಿಂದ ನಡೆಯುತ್ತಿತ್ತೋ ಗೊತ್ತಿಲ್ಲ, ಪ್ರೇಕ್ಷಕ ಪರಮಾತ್ಮರು ಸಾಕಷ್ಟು ಸಂಖ್ಯೆಯಲ್ಲಿಯೇ ಇದ್ದರು. ಸಿನಿಮಾದ ಉದ್ದಕ್ಕೂ ನನಗೆ ನಗುಬರದ ಸಮಯದಲ್ಲಿ ಅವರೆಲ್ಲಾ ನಗೋರು, ಅವರು ನಗದಿದ್ದಾಗ ನಾನು ನಗಬಹುದಾದ ಪ್ರಸಂಗ ಬಂದಂತಹ ಸಮಯದಲ್ಲಿ ಸ್ವಲ್ಪ ಫ್ರೀಕ್ವೆನ್ಸಿ ಮಿಸ್ ಮ್ಯಾಚ್ ಆದ ಹಾಗೆ ನನಗನ್ನಿಸಿದ್ದು ಹೌದು, ಅದು ನನ್ನ ತಪ್ಪು ಅಥವಾ ನನ್ನ ಭಾವನೆ ಇದ್ದಿರಬಹುದು.

ಶಾಲೆ-ಕಾಲೇಜಿನಲ್ಲಿ ಡುಮುಕಿ ಹೊಡೆಯೋ ನಾಯಕ - ಅವರಪ್ಪನ ಪಾತ್ರ (ಜೈ ಜಗದೀಶ್) ಹೇಳೋ ಹಾಗೆ ಮಗನ ಅಂಕಪಟ್ಟಿಯಲ್ಲಿರೋ ಅಂಕಗಳು ಪ್ರತಿ ವಿಷಯಕ್ಕೆ ಯಾರದ್ದೋ ಫೋನ್ ನಂಬರ್ ಥರ ಸಿಂಗಲ್ ಡಿಜಿಟ್ ಬಿಟ್ಟು ಮುಂದೆ ಹೋದ ಹಾಗೆ ಕಾಣದು. ಅವರಪ್ಪನ ದಯೆಯಿಂದ ಮಗನಿಗೆ ತಿರುಗಾಡೋದಕ್ಕೆ ಒಳ್ಳೇ ಕಾರು - ಶಾಪ್ಪಿಂಗ್ ಕಾಂಪ್ಲೆಕ್ಸ್‌ನಲ್ಲಿಂದ ವಾಚಿನ ಮೂಲಕ ಪ್ರೇಮ/ಪರಿಣಯ ಆರಂಭವಾದ ಹಾಗೆ ನೆನಪು, ಮ್ಯಾನ್ ಹೋಲ್‌ನಲ್ಲಿ ಬಿದ್ದ ನಾಯಕ, ಹುಡುಗಿ, ವಾಚು --- ಇಷ್ಟೆಲ್ಲಾ ಆಗುವಾಗ ಹಾಡುಗಳ ಭರಾಟೆ, ರೇಡಿಯೋ ಸ್ಟೇಷನ್ನವರ ಜೊತೆ ಮಾತನಾಡಿರುವ ಸಂಭಾಷಣೆಯ ತುಣುಕುಗಳು ಸಹಜವೆನಿಸಿದವು ಅಂತಾ ಧೈರ್ಯವಾಗಿ ಹೇಳಬಲ್ಲೆ.

ಇಷ್ಟೆಲ್ಲಾ ಆಗೋ ಹೊತ್ತಿಗೆ ಮಡಿಕೇರಿ ಪ್ರವಾಸ ಆರಂಭವಾಗುತ್ತೆ ನೋಡಿ. ಒಬ್ಬ ಖಳನಾಯಕ, ನಾಯಕಿಯನ್ನು ಬೇರೆ ಯಾರೂ ಮದುವೆಯಾಗೋದನ್ನೂ ಸಹಿಸದವ - ಪದೇಪದೇ ಕುತ್ತಿಗೆಯನ್ನು ತಿರುಗಿಸಿ ನರನಾಡಿಗಳಿಗೆ ನೋವನ್ನು ಹಂಚುವವ - ಹೊಡೆದಾಟ, ಬಡಿದಾಟ...ವಾರೆ ವ್ಹಾ, ನಾಯಕನಿಗೇ ಗೆಲುವು...ಭೇಷ್.

***

ನಾಯಕಿಯ ಅಪ್ಪನ ಪಾತ್ರದಲ್ಲಿ ಅನಂತ್‌ನಾಗ್ ಪರಕಾಯ ಪ್ರವೇಶ - ಮಿಲಿಟರಿ ಎಕ್ಸ್ ಸರ್ವೀಸ್‌ಮನ್ ಅನ್ನೋ ಪದವಿ ಬೇರೆ. ಅನಂತ್‌ನಾಗ್‌ಗೆ ಯಾವ ಪಾತ್ರ ಕೊಟ್ರೂ ಚೆನ್ನಾಗಿ ಒಪ್ಪುತ್ತೆ, ಒಪ್ಪೋ ಹಾಗೆ ಮಾಡ್ತಾರೆ ಅನ್ನೋದನ್ನು ಸುಳ್ಳು ಎಂದು ತೋರಿಸುವ ಪ್ರಯತ್ನ ಅನ್ನಿಸ್ತು. ಒಂದೇ ಒಂದು ಇಷ್ಟವಾಗಿದ್ದು ಅಂದ್ರೆ ಅವರ ನಿಜ ಜೀವನದ ಅಲ್ಕೋಹಾಲ್ ಬಳಕೆಗೂ ಚಿತ್ರದಲ್ಲಿನ ಬಳಕೆಗೂ ಬೇರೇನೂ ವ್ಯತ್ಯಾಸವಿರದಿದ್ದುದು, ಆ ಮಟ್ಟಿಗೆ ಅಭಿನಯ ಸಹಜವಾಗಿರದೇ ಇನ್ನೇನ್‌ ಆಗುತ್ತೆ?

***
Thats about it - ಇನ್ನೇನ್ ನೆನಪಲ್ಲುಳಿಯುತ್ತೆ...ತ್ಯಾಗ, ಪರರಿಗಿರಲಿ ಎಂಬ ದೊಡ್ಡ ಬುದ್ದಿ! ಸುಮ್ನೇ ಎಂತ್ ಎಂಥೋರಿಗೋ ಕೊಡಗು ಸೀಮೆ ಡ್ರೆಸ್ ಹಾಕಿ ಕುಣಿಸ್‌ಬೇಡ್ರಿ ಸಾರ್. ಅಲ್ದೇ ದಾರೀಲ್ ಸಿಗೋ ಮೊಲದ ಮರಿಗಳೆಲ್ಲ ಮಾತನ್ನ್ ಕಲಿತಿರಲ್ಲ ಅನ್ನೋ ಪರಿಜ್ಞಾನ ಬೇಡ್ವಾ ಅಂತ ಎಲ್ಲೋ ಮನದ ಮೂಲೆಯಲ್ಲಿ ಏಳೋ ಪ್ರಶ್ನೆಗಳನ್ನ rational ಆಗೀ ಯೋಚ್ನೇ ಮಾಡೋ ಯಾವನೂ ಕೆದಕೋ ಸಾಧ್ಯತೇನೇ ಕಂಡ್ ಬರೋದಿಲ್ಲ.

But, ಮುಮ best seller ಆಗಿರಬಹುದು, ಜನಪ್ರಿಯವಾಗಿರಬಹುದು... ಇಲ್ಲಿ, sell - ಅನ್ನೋದೇ ಆಪರೇಟಿವ್ ಪದ. ಒಂದು ಚಿತ್ರದ ನಿಜವಾದ ಯಶಸ್ಸು ಅಂದ್ರೆ ಏನು...ಬಾಕ್ಸ್ ಆಫೀಸ್ (ಗಲ್ಲಾ ಪೆಟ್ಟಿಗೆ)ನಲ್ಲಿ ಅದು ಹಣವನ್ನು ಮಾಡಿದೆಯೇ ಎಂಬ ಪ್ರಶ್ನೆ, ಆ ಪ್ರಶ್ನೆಗೆ ಮುಮ ಈಗಾಗಲೇ ಯಶಸ್ವಿಯಾಗಿ ಉತ್ತರವನ್ನು ಕೊಟ್ಟಿದೆ ಅನ್ನೋದು ಸುದ್ದಿಯಾಗಿ ಹಳಸಿ ಹೋಗಿರಬೇಕು.

ನಂಗ್ ಸಿನಿಮಾ ಇಷ್ಟಾ ಆಗ್ಲಿಲ್ಲಾ ಅಂತ ಉಳಿದವರಿಗೆ ಹಾಗೆ ಆಗಬೇಕು ಅಂತೇನಿಲ್ಲ...ಅದು ಅವರವರ ಅನಿಸಿಕೆ ಅಷ್ಟೇ. ಜೊತೆಯಲ್ಲಿ ಈ ಲೇಖನವನ್ನ ಸಿನಿಮಾ ವಿಮರ್ಶೆ ಅಂತ ಯಾರೂ ತಪ್ಪಾಗಿ ಓದಿಕೊಳ್ಳದಿದ್ದರೆ ಸಾಕು (ಒಂದು ಸಿನಿಮಾ ವಿಮರ್ಶೆಗೆ ಇರಬೇಕಾದ ಯಾವ ಲಕ್ಷಣವೂ ಈ ಬರಹದಲ್ಲಿಲ್ಲವಾದ್ದರಿಂದ)... ಇರೋ ಅರ್ಧ ಘಂಟೆಯಲ್ಲಿ ನನ್ನ ಆಲೋಚನೆಗಳನ್ನು ಹೊಟ್ಟೆಯೊಳಗಿಟ್ಟುಕೊಳ್ಳಲಾರದ ಸಂಕಟಕ್ಕೆ ಸಿಕ್ಕು ಕಕ್ಕಿಕೊಳ್ಳುವ ಸಂಕಷ್ಟದಲ್ಲಿ ತೊಡಗಿರುವ ಇಂತಹ ಬರಹಗಳು ಯಾವ ದಿಕ್ಕನ್ನೂ ಎಂದೂ ಬದಲಾಯಿಸೋದಿಲ್ಲ ಎನ್ನುವ ಪ್ರರಿಜ್ಞಾನ ಇದೇ ಅಂತ ನಂಬಿಕೊಂಡದ್ದು ಇನ್ನೂ ಹಾಗೆ ಉಳಿದಿದೆ.

Monday, June 25, 2007

ಏನ್ ತಲೇ ಸಾರ್ ಇವ್ರುಗಳ್ದೂ...

ಎಷ್ಟೋ ದೂರ್‌ದಲ್ಲಿರೋ ಡಿಶ್ ಆಪರೇಟರನ್ನು ಕರೆಸಿ ನಮ್ಮನೆ ತಲೆ ಮೇಲೂ ಒಂದ್ ಡಿಶ್ ಆಂಟೆನಾ ಹಾಕ್ಸಿ ಎಂಟ್ ಸಾವ್ರ ಮೈಲ್ ದೂರದ ಸಂವೇದನೆಗಳನ್ನ ಎಲೆಕ್ಟ್ರೋಮ್ಯಾಗ್ನೆಟಿಕ್ ಅಲೆಗಳಲ್ಲಿ ಹಿಡಿದುಕೊಂಡು ಭಿತ್ತರವಾಗ್ತಿರೋ ಉದಯ ಟಿವಿ ನೋಡೋ ಭಾಗ್ಯ ಲಭಿಸಿದ್ದು ಅಮೇರಿಕದ ಕನ್ನಡಗರಿಗೆ ಆಗಿರೋ ದೊಡ್ಡ ಲಾಭ ಅಂತ್ಲೇ ಹೇಳ್‌ಬೇಕು. ಬೇರೆ ಯಾವುದಾದ್ರೂ ಚಾನೆಲ್ ಕನ್ನಡವನ್ನು ಇಲ್ಲಿಯವರೆಗೆ ಹೊತ್ತು ತಂದಿದೆಯೋ ಇಲ್ವೋ ಆದ್ರೆ ನಮ್ಮಂತಹವರನ್ನು ನೆಚ್ಚಿಕೊಂಡಿರೋ ಉದಯ ಟಿವಿಯವರ ಧೈರ್ಯವನ್ನು ಮೆಚ್ಚಲೇ ಬೇಕು, ಕನ್ನಡಿಗರನ್ನು ನಂಬಿ ಯಾವನಾದ್ರೂ ಇನ್ವೆಷ್ಟ್‌ಮೆಂಟ್ ಮಾಡಿ ಉದ್ದಾರವಾಗಿದ್ದಿದೆ ಅಂದ್ರೆ ಎಂಥೋರು ನಗಾಡಿ ಬಿಟ್ಟಾರು!

***

೨೦೦೭ ನೇ ಇಸ್ವಿ ಬಂದ್ರೂ ಇನ್ನೂ ವಿಷ್ಣುವರ್ಧನ್ ನಾಯಕನಾಗಿ ಡ್ಯುಯೆಟ್ ಹಾಡಿಕೊಂಡು ಮರಸುತ್ತುವುದನ್ನು ಬಿಡಲಿಲ್ಲವಲ್ಲಾ...ಅಕಟಕಟಾ. ಒಬ್ಬ ಒಳ್ಳೇ ನಟ ಪೋಷಕನ ಪಾತ್ರದಲ್ಲೂ ಮಿಂಚಬಹುದು ಅಂತ ಯಾರಿಗೂ ಏಕೆ ಹೊಳೆಯೋದಿಲ್ಲ. ನಮ್ಮವರೆಲ್ಲ ನಾಯಕರುಗಳ ಮೇಲಿಟ್ಟಿರುವ ಗೌರವವೆಲ್ಲ ಅವರನ್ನು ಯಾವಾಗಲೂ ’ಹೀರೋ’ಗಳಾಗೆ ಮಿಂಚುವಂತೆ ಮಾಡ್ತಾ ಇದ್ರೆ ಅದೊಂದು ಒಳ್ಳೇ ಅವಕಾಶಾನೇ ಸರಿ. ಅವರ ಮಕ್ಕಳ ವಯಸ್ಸಿನ ನಟನಾಮಣಿಯರನ್ನು ನಾಯಕಿಯರನ್ನಾಗಿ ಮಾಡಿಕೊಂಡು ಇನ್ನೂ ಇಪ್ಪತ್ತು ವರ್ಷದ ಪೋರಿಯರ ಜೊತೆ ಹಾಡಿಕೊಂಡು ನರ್ತನ ಮಾಡ್ತಾರಲ್ಲಾ...ಏನ್ ಜನಾ ಸ್ವಾಮಿ, ಇವರು!

***

ವಾರ್ತಾ ಉಧ್ಘೋಷಕಿಯರು, ಉಧ್ಘೋಷಕರು ಸ್ವಲ್ಪ ಅತಿಯಾಗೇ ಡ್ರೆಸ್ ಮಾಡ್ತಾರೆ ಅನ್ನಿಸ್ತು, ಹೊರಗಡೆ ಸುಡು ಸುಡು ಬಿಸಿಲಿದ್ರೂ ಕೋಟ್ ಹಾಕ್ಕೋಂಡೇ ವಾರ್ತೆ ಓದಬೇಕು ಅನ್ನೋದನ್ನ ಎಲ್ಲಿಂದ ನೋಡಿ ಕಲಿತರೋ ಇವ್ರುಗಳೆಲ್ಲ. ಇತರ ಚೌಚೌ ಕಾರ್ಯಕ್ರಮಗಳಲ್ಲಂತೂ ಉಧ್ಘೋಷಕಿಯರು ಅತ್ತಿಂದಿತ್ತ ಆಡಿಸೋ ತಲೆಗಳನ್ನು ನೋಡಿ ಕೀಲಿಕೊಟ್ಟ ಬೊಂಬೆಗಳೋ ಎನ್ನಿಸ್ತು, ಏನ್ ತಲೆ ಸಾರ್ ಇವ್ರುಗಳ್ದೂ...

***

ಟಿವಿ ಸೀರಿಯಲ್ಲುಗಳು ಅಂದ್ರೆ ಈ ಮಟ್ಟಕ್ಕೂ ಇರುತ್ತೆ ಅಂತ ಕೇಳಿದ್ದೆ, ಆದ್ರೆ ಇದೇ ಪ್ರಪ್ರಥಮ ಬಾರಿಗೆ ನೋಡಿ ಅನುಭವಿಸಿದಂಗಾಯ್ತು...ಇಪ್ಪತ್ತು ನಿಮಿಷ ಸೀರಿಯಲ್ಲ್‌ನಲ್ಲಿ ಐದು ನಿಮಿಷ ಟೈಟಲ್ ಸಾಂಗ್ ತೋರ್ಸಿ, ಇನ್ನುಳಿದ ಸಮಯದಲ್ಲಿ ಪ್ರತಿಯೊಂದು ಸೀನಿನಲ್ಲೂ ತೋರ್ಸಿದ್ದೇ ತೋರ್ಸಿದ್ದು ಮುಖಗಳನ್ನ...ಅದೂ ಬೇರೆ ಬೇರೆ ಆಂಗಲ್‌ನಿಂದ. ಅದ್ಯಾವನೋ ಸ್ಕ್ರಿಪ್ಟ್ ಬರೀತಾನೆ, ’...ಆ ಸುದ್ಧಿ ಬರಸಿಡಿಲಿನಂತೆ ಬಂದೆರಗಿತು...’ ಅಂತ, ಅದಕ್ಕೆ ಕ್ಯಾಮರಾಮನ್ನು ತೋರಿಸಿದ ಮುಖವನ್ನು ಹತ್ತು ಸಾರಿ ಬ್ರೈಟ್ ಲೈಟ್‌ನಲ್ಲಿ ತೋರಿಸಿಕೋತಾನೆ, ಹಿನ್ನೆಲೆ ಸಂಗೀತದವರು ತಮ್ಮ ಮುಂದಿದ್ದ ವಾದ್ಯಗಳನ್ನೆಲ್ಲ ಒಮ್ಮೆ ಢಂಡಂ ಬಡೀತಾರೆ ಅಲ್ಲಿಗೆ ಆ ಸೀನ್ ಕ್ಯಾಪ್ಛರ್ ಆಗಿಹೋಯ್ತು! ಯಾಕ್ ಸಾರ್ ಹಿಂಗ್ ಮಾಡ್ತೀರಾ...

***

ಹಂಗಂತ ಎಲ್ಲವೂ ಕೆಟ್ಟ ಕಾರ್ಯಕ್ರಮ ಅಂತ ನಾನೆಲ್ಲಿ ಹೇಳ್ದೆ? ವಾರಕ್ಕೇನಿಲ್ಲ ಅಂದ್ರೂ ಅಲ್ಲಿನ ಸುದ್ದಿಗಳು ತಾಜಾವಾಗಿ ಸಿಗೋದರ ಜೊತೆಗೆ ನೀವು ನೋಡ್ತೀರೋ ಬಿಡ್ತೀರೋ ಒಂದೆರಡು ಸಿನಿಮಾಗಳನ್ನಾದರೂ ಡಿವಿಆರ್‌ಗೆ ಹಾಕಿಟ್ಟುಕೊಳ್ಳಬಹುದು. ನಾನಂತೂ ’ಅಮ್ಮಾ ನಾಗಮ್ಮ...’ ಸೀರಿಯಲ್ಲಿಗೆ ’ಬೇಗ ಸಾಗಮ್ಮ...’ ಅಂತ ಬೇಡಿಕೊಳ್ಳುತ್ತೇನೆ. ಅಪರೂಪಕ್ಕೊಮ್ಮೆ ನಮ್ಮವರ ನಡುವಿನ ತಾಜಾ ಜೋಕೇನಾದ್ರೂ ಬಂದ್ರೆ ಹೊಟ್ಟೆ ಹುಣ್ಣಾಗುವ ಹಾಗೆ ನಗ್ತೇನೆ - ಆ ನಗುವಿನ ಹಿಂದೆ ಲೋಕಲ್ ಸೊಗಡಿದೆ, ಅಲ್ಲಿನ ಸ್ವಾರಸ್ಯವಿದೆ...ಇದ್ಯಾವ್ದೂ ಬೇಡ ಅಂದ್ರೆ ರ್ಯಾಂಡಮ್ ಆಗಿ ರಾತ್ರಿ ಇಡೀ ಹಾಡುಗಳನ್ನೂ ಹಾಕ್ತಾನೇ ಇರ್ತಾರೆ, ಅದು ಒಳ್ಳೆಯ ಟೈಮ್ ಪಾಸ್.

ಸದ್ಯ ಆಡ್ವರ್‌ಟೈಸ್‌ಮೆಂಟುಗಳನ್ನೂ ಇನ್ನೂ ನೋಡೋ ಭಾಗ್ಯ ಸಿಕ್ಕಿಲ್ಲ, ಅವುಗಳನ್ನೆಲ್ಲ ವೇಗವಾಗಿ ಹಾರಿಸಿಕೊಂಡು ಹೋಗೋ ತಂತ್ರಜ್ಞಾನ ಬಂದಿರೋದು ಬಳಕೆದಾರರನ್ನು ಉಳಿಸೋದಕ್ಕೆ ದೇವರೇ ಕಳುಹಿಸಿದ ಕೊಡುಗೆ ಎಂದುಕೊಂಡು ಕೃತಾರ್ಥನಾಗಿದ್ದೇನೆ!

Friday, June 22, 2007

ಮುಂದ್ ಬರೋದು ಅಂತಂದ್ರೆ ಏನೋ ಒಂದಿಷ್ಟನ್ನ್ ಹಿಂದೆ ತಳ್ಳೀ...

ತೊಂಭತ್ತರ ದಶಕದಿಂದೀಚೆಗೆ, ಅದೂ ಐಟಿ-ಬಿಟಿ-ಬಿಪಿಓ ಮಹದಾಸೆಗಳು ದಿನಕ್ಕೊಂದೊಂದು ಶಿಖರವನ್ನು ಮುಟ್ಟುತ್ತಿರುವಾಗ ವೈಯಕ್ತಿಕ ಆಶೋತ್ತರಗಳು ನಮ್ಮನ್ನು ರಾತ್ರೋರಾತ್ರಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಸ್ಥಳಾಂತರಿಸಿಬಿಡಬಹುದಾದ ಬೃಹತ್ ಬದಲಾವಣೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಸಾಮಾಜಿಕ ಅವತಾರಗಳ ಮೇಲೆ ಈ ಬೆಳವಣಿಗೆ ಎಂತಹ ಮಹತ್ತರ ಪರಿಣಾಮಗಳನ್ನು ಬೀರಬಲ್ಲದು, ಆ ಬಗ್ಗೆ ಇಲ್ಲಿ ತೋಡಿಕೊಳ್ಳುವ ಆಶಯವಷ್ಟೇ.

***
ನಿನ್ನೆ ನನ್ನ ಎರಡನೆ ಅಣ್ಣ ಭಾರತದಿಂದ ಫೋನ್ ಮಾಡಿ, ’...ನಾನು ಈಗ ಮನೆಗೆ ಹೊರಟಿದ್ದೀನಿ, ಕೂಡ್ಲೇ ಫೋನ್ ಮಾಡು, ಅಮ್ಮ ನಿನ್ಹತ್ರ ಏನೋ ಮಾತಾಡ್‌ಬೇಕಂತೆ...’ ಎಂದು ನನ್ನ ಉತ್ತರಕ್ಕೆ ಕಾಯುವಂತೆ ಒಂದು ಕ್ಷಣ ನಿಲ್ಲಿಸಿದನಾದರೂ ನಾನು ಮತ್ತೇನನ್ನೂ ಹೇಳಲು ತೋಚದೆ ’ಸರಿ’ ಎಂದು ಬಿಟ್ಟೆ, ಅವನು ಆ ಕಡೆಯಿಂದ ಕಟ್ ಮಾಡಿದ. ನಾನು ಯಾವುದೋ ಮೀಟಿಂಗ್ ನಡೆವೆ ಇದ್ದಾಗ ಈಗಾಗಲೇ ಒಂದು ಬಾರಿ ಕರೆ ಮಾಡಿ ಯಾವುದೇ ಮೆಸ್ಸೇಜ್ ಅನ್ನು ಬಿಡದೇ ಹದಿನೈದು ನಿಮಿಷಗಳ ಕಾಲಾವಕಾಶದಲ್ಲಿ ಎರಡನೇ ಬಾರಿ ಭಾರತದಿಂದ ಕರೆ ಮಾಡಿದ್ದಾನೆ ಎನ್ನುವುದರಲ್ಲಿ ಏನೋ ವಿಶೇಷವಿದೆ ಎಂಬ ಹೆದರಿಕೆ ನನ್ನ ಮನದಲ್ಲಿತ್ತು.

ಪುಣ್ಯಕ್ಕೆ ಕಾಲಿಂಗ್ ಕಾರ್ಡ್ ಒಂದರ ಪಿನ್ ರೆಡಿ ಇದ್ದುದರಿಂದ, ನನ್ನ ಸೆಲ್‌ಫೋನ್ ಅನ್ನು ಹಿಡಿದುಕೊಂಡು ಯಾವುದೋ ದೊಡ್ಡ ಮೀಟಿಂಗ್ ಒಂದನ್ನು ನಡೆಸುವವರ ಹಾಗೆ ಗಂಭೀರವಾಗಿ ಹೋಗಿ ಕಾನ್‌ಪರೆನ್ಸ್ ರೂಮ್ ಒಂದನ್ನು ಸೇರಿಕೊಂಡು ಬಾಗಿಲು ಹಾಕಿಕೊಂಡೆ. ಏನಾಗಿದ್ದಿರಬಹುದು ಎಂಬ ಊಹೆಯಿಂದಲೇ ನಂಬರ್‌ಗಳನ್ನು ಡಯಲ್ ಮಾಡಿದ್ದೆನಾದರೂ ನನ್ನ ಊಹೆಗೆ ಯಾವುದೂ ಹೊಳೆಯಲಿಲ್ಲ.

ಒಂದೇ ರಿಂಗ್‌ಗೆ ಫೋನ್ ಎತ್ತಿಕೊಂಡ ಅಣ್ಣ ನನ್ನ ಫೋನಿನ ದಾರಿಯನ್ನೇ ಕಾಯುತ್ತಾ ಕುಳಿತವನಂತೆ ಕಂಡುಬಂದ, ಹೆಚ್ಚು ಏನನ್ನೂ ಹೇಳದೇ ’ತಡಿ, ಅಮ್ಮನಿಗೆ ಕೊಡ್ತೀನಿ, ಮಾತಾಡು’ ಎಂದು ಅಮ್ಮನಿಗೆ ಫೋನ್ ಕೊಟ್ಟ.

ಎಂದಿನಂತೆ ಕುಶಲೋಪರಿಗಳಾದ ಮೇಲೆ ’ಏನ್ ವಿಶೇಷ...’ ಎಂಬುದಕ್ಕೆ ಉತ್ತರವಾಗಿ, ’ಏನಿಲ್ಲ, ನಾಳೆ ನನಗೆ ಕಣ್ಣು ಆಪರೇಶನ್‌ಗೆ ಗೊತ್ತು ಮಾಡಿದ್ದಾರೆ, ಬೆಳಿಗ್ಗೆ ಎಂಟು ಘಂಟೆ ಬಸ್ಸಿಗೆ ಶಿವಮೊಗ್ಗಕ್ಕೆ ಹೋಗ್ತೀವಿ, ಅಲ್ಲಿ ಒಂದೆರಡು ದಿನ ಇರಬೇಕಾಗಿ ಬರುತ್ತೆ. ಒಂದು ಕಡೆ ನನಗೆ ಕಾಲೂ ಇಲ್ಲ, ಈ ಕಡೆ ಕಣ್ಣು ಇಲ್ಲದಂಗೆ ಆಗಿದೆ, ಒಂದು ಕಣ್ಣಲ್ಲಿ ದೃಷ್ಟಿ ಸ್ವಲ್ಪವೂ ಇಲ್ಲ, ಮತ್ತೊಂದು ಕಣ್ಣಲ್ಲಿ ಚೂರೂ-ಪಾರು ಕಾಣ್ಸುತ್ತೆ ನೋಡು’.

’ಹೌದಾ, ಯಾವಾಗ್ ಹೋಗಿದ್ರಿ ಟೆಸ್ಟ್ ಮಾಡ್ಸೋಕೆ, ಯಾವ್ ಡಾಕ್ಟ್ರು, ಎಲ್ಲಿ...’ ಮುಂತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದ ನನ್ನನ್ನು ಮಧ್ಯದಲ್ಲಿಯೇ ತಡೆದು, ’ನಿನಗೆ ಅವತ್ತೇ ಹೇಳಿದ್ದೆ, ಕಣ್ಣು ತೋರ್ಸೋಕೆ ಹೋಗ್ತೀವಿ ಅಂತ...ನೀನೋ ಬಹಳ ಬಿಜಿಯಾಗಿ ಬಿಟ್ಟೀ, ಮೊದಲೆಲ್ಲ ವಾರಕ್ಕೊಂದ್ ಸರ್ತಿಯಾದ್ರೂ ಫೋನ್ ಮಾಡ್ತಿದ್ದಿ, ಈಗ ಅದೂ ಕಡಿಮೆಯಾಗಿ ಹೋಯ್ತು, ಇಲ್ಲಿಗೆ ಬರೋದ್ ನೋಡಿದ್ರೆ ಎಷ್ಟೋ ವರ್ಷಕ್ಕೊಂದ್ ಸರ್ತಿ...ನಿನ್ಹತ್ರ ಹೇಳಿದ್ರೆಷ್ಟು ಬಿಟ್ರೆಷ್ಟು’ ಎಂದು ಸುಮ್ಮನಾದಳು.

ಒಂದೆರಡು ವಾರಗಳ ಹಿಂದೆ ಅಮ್ಮ ನನ್ನ ಬಳಿ ಕಣ್ಣು ಕಾಣದ ವಿಚಾರ, ಅದನ್ನು ಯಾವ್ದಾದ್ರೂ ಡಾಕ್ಟ್ರಿಗೆ ತೊರಿಸಬೇಕು ಎಂದು ಹೇಳಿದ ಇರಾದೆಗಳೆಲ್ಲವೂ ನೆನಪಿಗೆ ಬಂದವು, ಫಾಲ್ಲೋಅಪ್ ಮಾಡದಿದ್ದಕ್ಕೆ ಖಿನ್ನನಾದೆ.

’ಕಣ್ಣಿಗ್ ಏನಾಗಿದೆ, ಯಾವ ರೀತಿ ಆಪರೇಶನ್ನಂತೆ?’ ಎನ್ನುವ ಪ್ರಶ್ನೆಗೆ ’ಅದೆಲ್ಲ ನಂಗೊತ್ತಿಲ್ಲಪ್ಪಾ...’ ಎನ್ನುವ ಉತ್ತರಬಂತು.
’ದುಡ್ಡೆಷ್ಟು ಖರ್ಚಾಗುತ್ತಂತೆ?’ ಎನ್ನುವ ಪ್ರಶ್ನೆಗೆ ’ಒಂದು ಹತ್ತಿಪ್ಪತ್ತು ಸಾವ್ರ ರೂಪಾಯ್ ಆದ್ರೂ ಆಗುತ್ತೆ’ ಎನ್ನುವ ಧ್ವನಿ ಹೊರಬರುತ್ತಿದ್ದ ಹಾಗೇ ಸಣ್ಣಗಾದಂತೆನಿಸಿತು.

’ಅಮ್ಮಾ, ನೀನೇನೂ ಹೆದರ್ಕೋ ಬೇಡ, ಎಲ್ಲ ಸರಿ ಹೋಗುತ್ತೆ, ಸುರೇಶ್ನಿಗೆ ಫೋನ್ ಕೊಡು’ ಎಂದೆ, ಆ ಸಮಯದಲ್ಲೂ ’ನೀವೆಲ್ಲ ಆರಾಮಿದ್ದೀರಾ, ಊಟ ಆಯ್ತಾ, ಈಗ ಎಷ್ಟು ಘಂಟೇ ಅಲ್ಲಿ...’ ಎಂದು ಕೇಳುತ್ತಲೇ ಫೋನನ್ನು ಅಣ್ಣನಿಗೆ ಕೊಟ್ಟಳು.

’ಅಲ್ವೋ, ನಂಗೊಂದ್ ಮಾತು ಹೇಳೋದಲ್ವಾ?...’ ಎನ್ನುವ ಪ್ರಶ್ನೆಗೆ ಅಣ್ಣನ ಉತ್ತರ ತಯಾರಾಗಿದ್ದಂತೆ ಕಂಡು ಬಂತು, ’ತುಂಬಾ ಕೆಲ್ಸಾ ಇಲ್ಲಿ, ಒಂದ್ಸರ್ತಿ ಫೋನ್ ಮಾಡಿದ್ದೆ ನೀನು ಸಿಕ್ಲಿಲ್ಲಾ...’ಎಂದು ಏನನ್ನೋ ಹೇಳಲು ಹೊರಟವನನ್ನು ನಾನೇ ಮಧ್ಯೆ ತಡೆದು, ಸಮಾಧಾನ ಹೇಳಿ ಮಾತು ಮುಗಿಸಿದೆ. ಫೋನ್ ಡಿಸ್ಕನೆಕ್ಟ್ ಮಾಡಿದ ತರುವಾಯ ಒಂದು ಕ್ಷಣ ನೆಲೆಸಿದ ಮೌನದ ಹಿನ್ನೆಲೆಯಲ್ಲಿ ’ಅಕಸ್ಮಾತ್ ನಿನಗೆ ಈ ಮೊದಲೇ ಹೇಳಿದ್ರೂ ನೀನ್ ಏನನ್ನು ಕಡೀತಾ ಇದ್ದೆ?’ ಎಂದು ಎದುರುಗಡೆ ಖಾಲಿ ಇದ್ದ ಕಾನ್‌ಪರೆನ್ಸ್ ರೂಮಿನ ಚೇರಿನ ಕಡೆಯಿಂದ ಬಿಸಿನೆಸ್ ಮೀಟಿಂಗ್‌ನಲ್ಲಿನ ಪ್ರಶ್ನೆಯೊಂದರಂತೆ ಧ್ವನಿಯೊಂದು ಬಂದಂತಾಯಿತು. ಆ ಬಳಿಕ ಎಷ್ಟೋ ಹೊತ್ತಿನವರೆಗೆ ’ನೀನ್ ಏನನ್ನು ಕಡೀತಾ ಇದ್ದೆ, ಕಡಿದಿದ್ದೀಯಾ...’ ಎನ್ನುವ ಪ್ರಶ್ನೆಗಳು ಆಳದಲ್ಲಿ ಗುನುಗತೊಡಗಿದವು.

***
ಈಗ ಹಿಂದಿನ ಸನ್ನಿವೇಶಗಳನ್ನು ಅವಲೋಕಿಸ್ತಾ ಹೋದ್ರೆ ನಾನು ಅದೆಷ್ಟೋ ನಮ್ಮ ಪರಿವಾರದ ಮುದುವೆ-ಮುಂಜಿ ಮತ್ತಿತರ ಮುಖ್ಯ ಕಾರ್ಯಕ್ರಮಗಳಿಗೆ ಹೋಗೇ ಇಲ್ಲ, ಒಡಹುಟ್ಟಿದವರ ಕೆಲವರ ಮದುವೆಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಟ್ಟಿದ್ದೇನೆ, ಇನ್ನು ಕೆಲವಕ್ಕೆ ಫೋನ್‌ನಲ್ಲೇ ಶುಭಾಶಯಗಳನ್ನು ಕೋರಿದ್ದೇನೆ. ವೈಯಕ್ತಿಕ ಬೆಳವಣಿಗೆ, ಸ್ವಯಂ ಕೇಂದ್ರೀಕೃತ ಬದುಕು ಅನ್ನೋದಕ್ಕೂ ಒಂದು ಇತಿ-ಮಿತಿ ಎನ್ನೋದು ಬೇಡವೋ ಎಂದು ಎಷ್ಟೋ ಬಾರಿ ಅನ್ನಿಸಿದ್ದಿದೆ.

’ಯಾವ್ದಾದ್ರೂ ಮದುವೆಗೆ ಹೋಗೋ, ಆ ಊರಿಗೆ ಹೋಗಿ ಈ ಕೆಲ್ಸಾ ಮಾಡ್ಕೊಂಡ್ ಬಾ...’ ಎಂದು ಹೇಳಿದವರಿಗೆಲ್ಲಾ ’ನನಗೆ ಶಾಲೆ ಇದೆ, ಅದನ್ನ ತಪ್ಪಿಸೋಕೆ ಆಗೋದೇ ಇಲ್ಲ...’ ಎಂದೋ, ’ನಿಮ್ಮ ಮದುವೆ-ಮುಂಜಿ ಇವೆಲ್ಲ ನನಗ್ಗೊತ್ತಿಲ್ಲ, ನನ್ನ ಲೈಫೇ ಹಾಳಾಗುತ್ತೆ, ನಿಮ್ಮ ಮಾತು ಕೇಳಿದ್ರೆ...’ ಎಂದೋ ಆ ದಿನಗಳಲ್ಲಿ ಹಠ/ಸಿಟ್ಟುಗಳನ್ನು ಕಾಯ್ದುಕೊಂಡಿದ್ದರ ಪರಿಣಾಮವೋ ಎಂಬುವಂತೆ ಈ ದಿನ ನ್ಯೂಕ್ಲಿಯಸ್ ಆಫ್ ಎ ನ್ಯೂಕ್ಲಿಯರ್ ಫ್ಯಾಮಿಲಿ ಆಗಿ ಕೊರಗ್ತಾ ಯಾವ್ದೋ ಕಣ್ಣ್ ಕಾಣದ ದೇಶದಲ್ಲಿ ಬಿದ್ದಿರೋದು ನಾನು ಎಂದು ಎಷ್ಟೋ ತಣ್ಣನೆ ಘಳಿಗೆಗಳಲ್ಲಿ ನೊಂದುಕೊಂಡಿದ್ದಿದೆ.

’ಸದ್ಯ, ನಮ್ಮ್ ಮನೆಯಲ್ಲಿ ಎಲ್ಲರೂ ನನ್ನ್ ಹಾಗೆ ಆಗ್ಲಿಲ್ಲವಲ್ಲಾ, ಪ್ರಪಂಚ ಪೂರ್ತಿ ನನ್ನ ಥರದವರಿಂದಲೇ ತುಂಬಿಕೊಂಡಿಲ್ಲವಲ್ಲ...’ ಎಂದು ಬೇಕಾದಷ್ಟು ಬಾರಿ ಹರ್ಷಿಸಿದ್ದೇನೆ - ಒಂದ್ ಕಾಲದಲ್ಲಿ ’ಎಲ್ರೂ ನನ್ನ್ ಹಾಗೆ ಯಾಕಿರೋಲ್ಲ?’ ಎನ್ನೋ ಮೂರ್ಖ ಪ್ರಶ್ನೆಗಳು ಉದ್ಭವವಾಗುತ್ತಿದ್ದುದನ್ನು ನೆನ್ ನೆನ್ಸಿಕೊಂಡು.

ನನ್ನ ಒಡಹುಟ್ಟಿದವರಿಗೆಲ್ಲ ಅವ್ರಿವ್ರುದ್ದು ಸೇವೆ ಮಾಡೋಕ್ ಸಮಯ ಬೇಕಾದಷ್ಟು ತನ್ನಿಂದ್ ತಾನೇ ಹುಟ್ಟಿ ಬರುತ್ತೆ, ಆದ್ರೆ ನಮ್ಮಗಳಿಗೆ ಮಾತ್ರ ಇಲ್ಲಿ ಯಾವ ನೆಟ್‌ವರ್ಕೂ ಇಲ್ಲ, ನಮ್ಮ್ ನಮ್ಮ್ ಪ್ರಾಜೆಕ್ಟ್‌ಗಳ ಡೆಲಿವರೆಬಲ್ಲುಗಳೇ ದೊಡ್ಡ ಮೈಲುಗಲ್ಲುಗಳು - ನಾವು ಯಾವತ್ತಾದ್ರ್ರೂ ಎಲ್ಲಾದ್ರೂ ಹೋಗ್ತೀವಿ ಬರ್ತೀವಿ ಅಂದ್ರೆ - ಇಲ್ಲಿನ ವರ್ಕ್ ಲೈಫೇ ನಮ್ಮ ಬದುಕು, ಅದನ್ನ್ ಬಿಟ್ರೆ ಇನ್ನೊಂದಿಲ್ಲಾ ಅಂತ ಎಷ್ಟೋ ಸರ್ತಿ ಅನ್ಸುತ್ತೆ.

So, ಮುಂದ್ ಬರೋದು ಅಂತಂದ್ರೆ ಏನೋ ಒಂದಿಷ್ಟನ್ನ್ ಹಿಂದೆ ತಳ್ಳೀ...ಅನ್ನೋ ತತ್ವವನ್ನು ಪ್ರತಿಪಾದಿಸಿಕೊಂಡ ಹಾಗೆ.

***

’ಲೋ, ನನ್ ಮಗನೇ, ಸಾಕ್ ಮಾಡೋ ನಿನ್ನ್ ಪುರಾಣಾನಾ...’ ಎಂದು ಮತ್ತಿನ್ನೆಲ್ಲಿಂದಲೋ ಧ್ವನಿಯೊಂದು ಬಂದಂತಾಯಿತು - ನಾನು ಸುಮ್ಮನ್ನಿದ್ದುದನ್ನು ನೋಡಿ ಆ ಧ್ವನಿ ಹಾಗೇ ಮುಂದುವರೆಸಿ, ’ಆ ಕಡೆ ಕೂಸಿನ್ ಮುಕುಳಿ ಚೂಟೋನೂ ನೀನೇ, ಈ ಕಡೆ ತೊಟ್ಲುನ್ನ್ ತೂಗೋನೂ ನೀನೇ...ಅತ್ಲಾಗ್ ಊರಲ್ಲಿದ್ದವ್ರಿಗೆಲ್ಲಾ ಅಮೇರಿಕದ ದಾರಿ ಹಿಡೀರಿ ಅಂತೀಯಾ, ಇತ್ಲಾಗ್ ನೀನೇ ಕೊರಗ್ತೀಯಲ್ಲೋ... ಅದೂ ಒಂದೇ ಕಣ್ಣಲ್ಲಿ ಅತುಗೋಂತಾ...ಬಾಳ್ ಶಾಣ್ಯಾ ಇದೀ ಬಿಡಪ್ಪಾ ನೀನು...’

ನಾನು ಯಾರಿಗೆ ಯಾವ ಉತ್ತರ ಅಂತಾ ಕೊಡಲೀ ಎಂದು ಯೋಚಿಸೋರ ಹಾಗೆ ಮುಖ ಮಾಡಿಕೊಂಡಿದ್ದನ್ನು ನೋಡಿ ಹೆದರಿಕೊಂಡವುಗಳ ಹಾಗೆ ಮತ್ತಿನ್ಯಾವ ಧ್ವನಿಯೂ ಎಲ್ಲಿಂದಲೂ ಹೊರಡಲಿಲ್ಲ.

Tuesday, June 19, 2007

ಒಂದು ಸಾಮಾನ್ಯ ಮುಂಜಾವು

ಓಹ್, ಹೆಚ್ಚೂ ಕಡಿಮೆ ಒಂದು ಸುಂದರವಾದ ಮುಂಜಾವಿನ ಬಗ್ಗೆ ಬರೆದು ಒಂದು ವರ್ಷವೇ ಆಗಿ ಹೋಯಿತು, ಫ್ರೀ ವೇಯಲ್ಲಿ ಕಾರು ಓಡಿಸದೇ ಈ ಚಿಕ್ಕ ಪುಟ್ಟ ರಸ್ತೆಗಳಲ್ಲಿ ತಿರುವಿನ ನಂತರ ಮುಂದೇನಿದೆ ಎಂದು ಹೆಜ್ಜೆ ಹೆಜ್ಜೆಗೂ ಯಾರೋ ಕೇಳುವ ಪ್ರಶ್ನೆಗಳು ರಸ್ತೆಯ ಮೇಲೆ ಹೆಚ್ಚು ಗಮನವಿರಿಸುವಂತೆ ಯಾವುದೋ ಅವ್ಯಕ್ತ ಶಕ್ತಿ ನನ್ನನ್ನು ಪ್ರೇರೇಪಿಸುತ್ತಿರುವುದರಿಂದ ನನಗೆ ಬೇಕಾದ ಮತ್ತೊಂದು ಜಗತ್ತನ್ನು ಸಂಪೂರ್ಣವಾಗೆ ನಿರ್ಲಕ್ಷಿಸುತ್ತಿದ್ದೇನೆಯೇ ಎಂದು ಒಮ್ಮೆ ಪಿಚ್ ಎನಿಸಿದಾಗ ನನಗೆ ಕೇಳುವಷ್ಟರ ಮಟ್ಟಿಗೆ 'ಚ್ಚು' ಎಂದುಕೊಂಡು ಅಪರೂಪಕ್ಕಾದರೂ ಅಗಲುವ ಸ್ನೇಹಿತರಂತೆ ತುಟಿಗಳನ್ನು ಬೇರೆ ಮಾಡಿದೆ. ದಿನವೂ ಈ ಸುದ್ದಿ, ಅದರ ಸುತ್ತಲಿನ ವಿಚಾರಗಳನ್ನು ಕೇಳದಿದ್ದರೆ ಏನು ಗಂಟು ಹೋಗುತ್ತೆ? ಎಂದು ಎಲ್ಲಿಂದಲೋ ಅವ್ಯಕ್ತ ಪ್ರಶ್ನೆ ಬಂದಿತೆಂದು ಗೊತ್ತಾದ ತಕ್ಷಣ ತೋರು ಬೆರಳಿನಲ್ಲಿ ತುಸು ಚೈತನ್ಯ ಹುಟ್ಟಿ ರೇಡಿಯೋ ತನ್ನಷ್ಟಕ್ಕೆ ತಾನೇ ಬಂದ್ ಆದ ಹಾಗನ್ನಿಸಿ, ಏಕದಂ ಮೌನ ನೆಲೆಸಿ ಪರೀಕ್ಷೆಗೆ ತಯಾರಾಗುವ ಹುಡುಗನಿಗೆ ತನ್ನ ಪರೀಕ್ಷೆಗಳು ದಿಢೀರ್ ಮುಂದು ಹೋದಾಗ ಇನ್ನೂ ಓದಲು ಸ್ವಲ್ಪ ಸಮಯ ಸಿಕ್ಕಿತು ಎಂದು ಸಂತೋಷವಾಗುವ ಹಾಗೆ ಒಂದು ಸಣ್ಣ ನಗೆ ತುಟಿಗಳ ಮೇಲೆ ಸುಳಿದಾಡಿತು.

ದಾರಿ ಪಕ್ಕದ ಬೃಹದಾಕಾರದ ಗೋಲ್ಫ್ ಕ್ಲಬ್ಬಿನಲ್ಲಿ ಮುಂಜಾನೆ ಅಷ್ಟೊತ್ತಿಗಾಗಲೇ ಹಿಂಡುಗಟ್ಟತೊಡಗಿದ್ದ ಆಟಗಾರರು ಕಣ್ಣಿಗೆ ಕಂಡು ಅವರ ಕಣ್ಣುಗಳಲ್ಲಿದ್ದ ಶಾಂತಿಯನ್ನು ನೋಡಿ ಒಮ್ಮೆ ಹೊಟ್ಟೆ ಕಿಚ್ಚಾದ ಹಾಗೆನಿಸಿದರೂ - they've earned it! - ಎಂದು ಸಂತೈಸುವ ಧ್ವನಿಯೊಂದು ಎಲ್ಲಿಂದಲೋ ಕೇಳಿದಂತೆನಿಸಿ ನನ್ನ ಪರಿತಾಪ ತುಸು ಕಡಿಮೆಯಾಯಿತು. ಈ ಮೌನ, ನಿಶ್ಶಬ್ದದ ಹಿಂದೆ ಏನಿದೆ ನೋಡೋಣ ಎಂದುಕೊಂಡು ಕಿವಿಗಳನ್ನು ಜಾಗೃತಗೊಳಿಸಿ ಬದಿಯ ವಿಂಡ್‌ಶೀಲ್ಡ್‌ನ್ನು ಒಂದು ಇಂಚು ಕೆಳಗಿಳಿಸಿದಾಗ ರಸ್ತೆಯನ್ನು ತಿಕ್ಕುವ ಟೈರುಗಳ ಶಬ್ದ ಸಂಗೀತ ಕಚೇರಿಯ ಆಲಾಪನೆಯಂತೆ ಕೇಳಿಬಂತು. ಇಷ್ಟೊತ್ತಿನವರೆಗೆ ಗಿಡಮರಗಳ ಮೇಲೆ ಹಗರುವಾಗಿ ಬೀಸಿ ಎಲೆಗಳ ಮೇಲೆ ನಿಂತಿದ್ದ ನೀರಿನ ಹನಿಗಳನ್ನು ಕೆಳಗೆ ಬೀಳಿಸುತ್ತಿದ್ದ ತಣ್ಣನೆ ಹವೆ ಅತ್ತಿಂದಿತ್ತ ಬೀಸುತ್ತಾ ತನ್ನ ಅಸ್ತಿತ್ವವನ್ನು ಶಬ್ದದ ಮೂಲಕವೂ ತೋರಿಸಬಲ್ಲೆ ಎಂದು ಒಂದೆರಡು ಬಾರಿ ಜೋರಾಗಿ ಬೀಸಿ ತನ್ನ ಇರುವನ್ನು ಪ್ರದರ್ಶಿಸಿತು.

ರೇಡಿಯೋ ಇಲ್ಲದ ಡ್ರೈವ್ ಕಾಫಿ ಇಲ್ಲದ ಮುಂಜಾವಿನಂತೆ ಸಪ್ಪಗಾಗಿ ಹೋಗಿತ್ತು - ರೇಡಿಯೋ ಇಲ್ಲದಿದ್ದರೂ ಗಡಿಯಾರದ ಪ್ರಕಾರ ಇಷ್ಟೊತ್ತಿಗೆ ಏನೇನು ಸುದ್ದಿಗಳು ಪ್ರಕಟವಾಗುತ್ತಿದ್ದವೋ ಅವುಗಳ ಬಗ್ಗೆ ಮನಸ್ಸು ಚಿಂತಿಸತೊಡಗಿದ್ದನ್ನು ನೋಡಿ ನನ್ನ control freak ಮನಸ್ಸು 'ಓಹೋ ಇಷ್ಟೊಂದು ರೆಡಿಯೋಗೆ ಅಡಿಕ್ಟ್ ಆಗಿದ್ದೀಯಾ...ಇನ್ನೊಂದು ವಾರ ರೆಡಿಯೋ ಹಾಕದಿರು!' ಎಂದು ಆದೇಶ ನೀಡಿದಂತಾಗಿ ಒಮ್ಮೆ ಬೆಚ್ಚಿ ಬಿದ್ದೆ - ಕೈಲಿದ್ದ ಹಾಲ್ ಐಸ್ ಕ್ರೀ ಇನ್ನೂ ತಿನ್ನುವುದಕ್ಕಿಂತ ಮೊದಲೇ ನೆಲದ ಮೇಲೆ ಕಡ್ಡಿಯಿಂದ ಜಾರಿ ಬಿದ್ದ ಹಾಗೆ ಮುಖ ಮಾಡಿಕೊಂಡು 'ನೀನ್ಯಾವನಯ್ಯಾ ನನಗೆ ಉಪದೇಶ ಕೊಡೋಕೆ...' ಎಂದು ಬೈದುಕೊಂಡೆನಾದರೂ ಕಂಟ್ರೋಲ್ ಬಹು ಮುಖ್ಯ ಎನಿಸಿ ಪೆಚ್ಚನೆ ಮುಖ ಸೆಕೆಂಡರಿಯಾಗಿಹೋಗಿ, after all - ರೆಡಿಯೋ ಕೇಳದಿದ್ದರೇನಂತೆ ಮನೆಯಲ್ಲಿರೋ ಒಂದಿಷ್ಟು MP3 ಹಾಡುಗಳಿಗೋ ಅಥವಾ ಅಲ್ಲಿಲ್ಲಿ ಬಿದ್ದುಕೊಂಡಿರೋ ಸಿಡಿಗಳಿಗೋ ಜೀವ ತುಂಬಿದರೆ ಹೇಗೆ ಎಂದು ಒಂದು ಸಣ್ಣ ಸಂತೋಷದ ಎಳೆಯೂ ಮಿಂಚಿ ಮಾಯವಾಯಿತು.

Thank goodness - ಈ ರಿಯರ್‌ವ್ಯೂ ಮಿರರ್‌ಗಳನ್ನು ಚಿಕ್ಕದಾಗಿ ಮಾಡಿದ್ದಾರೆ - can you imagine otherwise? ಹಿಂದಿನವುಗಳನ್ನು ಎಷ್ಟು ಅವಲೋಕಿಸಬೇಕೋ ಅಷ್ಟಿದ್ದರೆ ಚೆನ್ನ, ಹೆಚ್ಚೇನಾದರೂ ಆಯಿತೆಂದರೆ ಯಾವುದಾದರೂ ಡಿಪ್ರೆಷ್ಷನ್ನ್ ಔಷಧಿಗಳಿಗೆ ಆಹಾರವಾಗಬೇಕಾಗಿ ಬಂದುಬಿಡಬಹುದು. ಈ ಅವಲೋಕನ ಅನ್ನೋದು ಇರಬೇಕು ಒಂದು ರೀತಿ ಊಟದಲ್ಲಿನ ಉಪ್ಪಿನಕಾಯಿಯ ಹಾಗೆ - ಅದು ಬಿಟ್ಟು ಬರೀ ಉಪ್ಪಿನಕಾಯಿಯ ರಸವನ್ನು ಹಾಕಿಕೊಂಡು ಸಾರಿನಂತೆ ಕಲಸಿ ಎಷ್ಟು ಅನ್ನವನ್ನು ತಿನ್ನಲಾದೀತು. ಹಾಗಂತ ಈ ಅವಲೋಕನವೇ ಬೇಡ ಅನ್ನೋ ರೀತಿ ಆ ಚಿಕ್ಕ ರಿಯರ್ ವ್ಯೂ ಮಿರರ್ ಅನ್ನು ಮತ್ತೆಲ್ಲಿಗೋ ತಿರುಗಿಸಿ ಇಡೋದು ಬೇಡ, ಅವರವರ control freak ಮನಸ್ಸುಗಳಿಗೆ ಈ ವಿಚಾರದಲ್ಲಿ ಮೂಗು ತೂರಿಸುವ ಯಾವ ಆಸ್ಪದವೂ ಇಲ್ಲದಿರಲಿ...

***

ಹೊರಗಿನ ಶಬ್ದಗಳನ್ನು ಆಲಿಸಿದ್ದಾಯಿತು, ಒಳಗಿನ ಸದ್ದುಗಳನ್ನು ನಿಲ್ಲಿಸಿದ್ದಾಯಿತು, ಇನ್ನೊಂದು ವಾರ ರೆಡಿಯೋ ರಜೆ ತೆಗೆದುಕೊಂಡ ಸ್ನೇಹಿತನಾಯಿತು - ಏನಾದರೂ ಮಾಡಿ ಗದ್ದಲ ಮಾಡೋಣ ಎಂದುಕೊಂಡಾಗ - 'ಎಮ್ ಟೀವೀ ಸುಬ್ಬು ಲಕ್ಷ್ಮಿಗೆ ಬರಿ ಓಳು, ಬರಿ ಓಳು...' ಎಂದು ನನ್ನ ಬಾಯಿಂದ ಹಾಡಿನ ತುಣುಕೊಂದು ಹೊರಗೆ ಬಿತ್ತು! ಅಲ್ಲಾ, ಈ 'ಓಳು' ಅನ್ನೋ ಪದದ ಸರಿಯಾದ ಅರ್ಥ ಏನು? ಆ ಪದದ ಮೂಲ ಏನು, ಹೇಗೆ derive ಆಯ್ತು? ಯಾವ context ನಲ್ಲಿ ಕರ್ನಾಟಕದ ಯಾವ ಭಾಗದ ಜನ ಆ ಪದವನ್ನು ಬಳಸ್ತಾರೆ? ನಾನೇಕೆ ಇಷ್ಟು ದಿನ ಆ ಪದವನ್ನು ಕೇಳಲಿಲ್ಲ (ಈ ಹಾಡನ್ನು ಬರೆದು ಪ್ರಕಟಿಸೋವರೆಗೆ) - ಅಫೀಸ್ನಲ್ಲಿ ಟೈಮ್ ಸಿಕ್ಕಾಗ ಇಂಟರ್ನೆಟ್‌ನಲ್ಲಿ ನೋಡು! ಎಂದೊಂದು action item ಹುಟ್ಟಿಕೊಂಡಿದ್ದೂ ಅಲ್ಲದೇ ಜೊತೆಯಲ್ಲಿ ಯಾರನ್ನು ಕೇಳಿದರೆ ತಿಳಿಯುತ್ತೆ? ಎನ್ನೋ ಪ್ರಶ್ನೆಗಳು ಇಷ್ಟೊತ್ತು ತಿಳಿಯಾಗಿ ನಿಂತಿದ್ದ ನೀರಿನಲ್ಲಿ ಕಲ್ಲೊಂದು ಬಿದ್ದು ಅಲೆಗಳೋಪಾದಿಯಲ್ಲಿ ಹುಟ್ಟತೊಡಗಿದವು.

ಛೇ, on a weekday ಬೆಳಿಗ್ಗೆ ಏಳ್ ಘಂಟೇಗಿಂತ ಮೊದಲು ಫೋನ್ ಮಾಡಿ ಇಂತಾ ಪ್ರಶ್ನೆಗಳನ್ನು ಕೇಳಿದರೂ ಬೈಯದಿರೋ ಸ್ನೇಹಿತರಿರಬೇಕಪ್ಪಾ...ಒಂದು ಖಿನ್ನವಾದ ಮನಸ್ಥಿತಿ ಇನ್ನೆನು ಹುಟ್ಟಿ ಬಿಡಬೇಕು ಎನ್ನುವಷ್ಟರಲ್ಲಿ ಇಷ್ಟೊತ್ತು ಮರಗಳ ನಡುವೆ ಮರೆಯಾಗಿದ್ದ ಸೂರ್ಯನ ಕಿರಣಗಳು 'ಏನ್ ಸಾರ್, ಮುಂಜಾನೆ ಬಗ್ಗೆ ಯೋಚ್ನೆ ಮಾಡ್ತಿದ್ದದ್ದೇನೋ ಖರೆ, ಆದ್ರೆ ನಮ್ಮಗಳನ್ನ್ ಮರೆತೆ ಬಿಟ್ರಲ್ಲಾ!' ಎಂದು ನಕ್ಕಂತೆ ಹೊರಗೆ ಬರತೊಡಗಿ ಖಿನ್ನತೆ ದೂರವಾಗಿ, ಒಡನೆ 'ಅಲ್ವಾ?' ಅನ್ನೋ ಪ್ರಶ್ನೆಯೇ ಅದಕ್ಕುತ್ತರವಾಗಿ ಹೋಗಿ ಮತ್ತೆ ನಿಶ್ಶಬ್ದ ತಾಂಡವವಾಡತೊಡಗಿತು!

Sunday, June 17, 2007

ನಮ್ಮ ನುಡಿ - ಕನ್ನಡ!

ಇಂದು ತಂದೆಯಂದಿರ ದಿನವಂತೆ! Fathers ಅನ್ನೋದನ್ನ 'ತಂದೆಗಳು' ಎಂದು ಬರೆಯೋದಕ್ಕೆ, ಹೇಳೋದಕ್ಕಾಗುತ್ತದೆಯೇ ಅಥವಾ 'ತಂದೆಯರು' ಎಂದು ಹೇಳಿದರೆ ಹೇಗೆ? ಎಂದು ಯೋಚಿಸಿಕೊಂಡಂತೆಲ್ಲಾ ಕೆಲವು ವರ್ಷಗಳ ಹಿಂದೆ ಬೆಂಗಳೂರು ಕನ್ನಡಿಗ ಬಾಬು 'ಸೊಳ್ಳೆ' ಅನ್ನೋ ಪದ 'ಸೊಳ್ಳೆಗಳು' ಆದ ಹಾಗೆ 'ಸೂಳೆ' ಇದ್ದದ್ದು 'ಸೂಳೆಗಳು' ಆಗಬೇಕಪ್ಪಾ ಎಂದು ವಾ ಮಾಡಿದ ನೆನಪು, ನಾನೆಷ್ಟೇ ಹೇಳಿದರೂ ನಾನು ಮಾತನ್ನು ಕೇಳಲಾರದ ಹಠ ಬೇರೆ. 'ಅಮ್ಮ' ಪದ ಬಹುವಚನ 'ಅಮ್ಮಗಳು ಆದ ಹಾಗೆ ಅಕ್ಕಗಳು, ಅಣ್ಣಗಳು, ಆಗದೇ ಅಮ್ಮಂದಿರು, ಅಕ್ಕಂದಿರು, ಅಣ್ಣಂದಿರು ಆಗೋದು ನಮ್ಮ ಭಾಷೆಯ ವಿಶೇಷವಷ್ಟೇ. ಹೀಗೆ ಯೋಚಿಸಿಕೊಂಡೊಡನೆ ಗೋವಿನ ಹಾಡು ನೆನಪಿಗೆ ಬಂತು - 'ಅಮ್ಮಗಳಿರಾ, ಅಕ್ಕಗಳಿರಾ, ಎನ್ನ ತಾಯ್ ಒಡಹುಟ್ಟುಗಳಿರಾ...', ಹಾಗಾದರೆ ಈ ಹಳೆಯ ಹಾಡಿನಲ್ಲಿ 'ಅಮ್ಮಗಳು' ಎನ್ನುವ ಪದವನ್ನು ನಾವೇಕೆ ಒಪ್ಪಿಕೊಂಡೆವು - ಅಥವಾ ಅದು ಗೋವಿನ ಕರು ತನ್ನ ಬಳಗದವರಿಗೆ ಹೇಳುವ ಮಾತೆಂದೇ?

***

ಹಿಂದೀ ಭಾಷೆಯಲ್ಲಿ ಎಷ್ಟು ಒಡನಾಡಿದರೂ ಅದು ನನಗೆ ಮಾತೃ ಭಾಷೆಯಲ್ಲದ ಕಾರಣ ಆ ಭಾಷೆಯ ಸಹಜವಾದ ಅಭಿವ್ಯಕ್ತಿಯಂತೆ ಪ್ರತಿಯೊಂದು ವಸ್ತುವಿಗೂ ಲಿಂಗ ಕಲ್ಪನೆ ಮಾಡಿಕೊಂಡು ಅದೇ ರೀತಿಯಲ್ಲಿ ವಾಕ್ಯ (ಕ್ರಿಯಾಪದ) ವನ್ನು ಬದಲಾಯಿಸಿಕೊಳ್ಳುವ ರೀತಿ ನನಗೆಂದೂ ಸಹಜವಾಗಿ ಬಂದಿದ್ದಿಲ್ಲ. ಉದಾಹರಣೆಗೆ, ಕನ್ನಡದಲ್ಲಿ 'ರೈಲು ಬಂತು' ಅಥವಾ 'ರೈಲು ಬರುತ್ತಾ ಇದೆ' ಎನ್ನುವಲ್ಲಿ ರೈಲನ್ನು ನಪುಂಸಕ ಲಿಂಗವನ್ನಾಗಿ ಮಾಡಿಕೊಂಡಿದ್ದಕ್ಕೆ 'ಬಂತು, ಹೋಯ್ತು, ನಿಂತಿತು, ಬರುತ್ತಿದೆ' ಎಂದು ಸುಲಭವಾಗಿ ಹೇಳಬಹುದು. ಅದೇ ಹಿಂದಿಯಲ್ಲಿ, 'ರೈಲು ಬರುತ್ತಿದ್ದಾಳೆ!' ಎನ್ನುವುದನ್ನು 'ರೈಲ್ ಆ ರಹೀ ಹೈ' ಎನ್ನುವುದಿಲ್ಲವೇ? ರೈಲು/ಟ್ರೈನು, ಪೋಲಿಸ್, ಮೀಸೆ, mUಲಿ...ಮುಂತಾದ ಪದಗಳನ್ನು ಸ್ತ್ರೀ ಲಿಂಗದ ಗುಂಪಿಗೆ ಯಾರು ಏಕೆ ಸೇರಿಸಿದರೋ - ನೇಟಿವ್ ಆಗಿ (ಮಾತೃಭಾಷೆಯನ್ನಾಗಿ) ಮಾತನಾಡುವ ಪ್ರತಿಯೊಬ್ಬರೂ ಅದ್ಯಾವುದೋ ಒಡಂಬಡಿಕೆ ಒಪ್ಪಿಕೊಂಡವರಂತೆ ತಾವು ಬಳಸುವ ನಾಮ ಪದವನ್ನು ಪುಲ್ಲಿಂಗ ಅಥವಾ ಸ್ತ್ರೀ ಲಿಂಗವನ್ನಾಗಿ ವಿಂಗಡಿಸಿಕೊಂಡು "ಅಲೂ ಪಕತಾ ಹೈ, mUಲಿ ಪಕತೀ ಹೈ" ಎಂದು ಹೇಳುವಲ್ಲಿ ಯಾವುದೋ ಗುಪ್ತಶಕ್ತಿಯ ಕೈವಾಡ ಇದ್ದಂತೆನ್ನಿಸೋದಿಲ್ಲವೇ?

***

ಉತ್ತರ ಕರ್ನಾಟಕದ ಭಾಷೆಯಲ್ಲಿ 'ಬಂಡಿ' ಎನ್ನುವ ಪದವನ್ನು - ಚಕ್ಕಡಿ (ಎತ್ತಿನ ಗಾಡಿ), ಮೋಟಾರು ವಾಹನ, ಬಸ್ಸು, ಕಾರು...ಮುಂತಾದವುಗಳಿಗೆ ಬಳಸುವ ಸಾಮಾನ್ಯ ಪದವಾಗಿ ಗುರುತಿಸಬಹುದು. ಅದು ವಿದ್ಯಾವಂತ ಕನ್ನಡಿಗರ ಬಳಕೆಯಲ್ಲಿ - ಕೊಂಬು ಕೊಟ್ಟು ಕನ್ನಡೀಕರಿಸುವ ಹವ್ಯಾಸಕ್ಕೆ ಸಿಕ್ಕು - ಕಾರು, ಬಸ್ಸು, ಮೋಟಾರ್ ಸೈಕಲ್ಲು...ಇತ್ಯಾದಿಯಾಗಿ ಕನ್ನಡದ ಪದಗಳೇ ಆಗಿ ಹೋಗಿ ಕನ್ನಡದ ಬಳಕೆಯಲ್ಲಿರುವ ಪದಗಳಿಗಿಂತಲೂ ಮಾತಿನಲ್ಲಿ ಸ್ಪಷ್ಟತೆಯನ್ನು ತಂದುಕೊಡಬಲ್ಲದು. ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು "ಸ್ಟುಡಿಯೋ" ಎನ್ನುವ ಪದಕ್ಕೆ ಕನ್ನಡದಲ್ಲಿ ಏನೆನ್ನಬೇಕು? ಎಂದು ಪ್ರಶ್ನೆಯನ್ನೆಸೆದಿದ್ದರು. ನಾನು ಅದಕ್ಕೆ ಉತ್ತರವಾಗಿ 'ಸ್ಟುಡಿಯೋ ಅಂದರೆ ಯಾವ ಅರ್ಥದಲ್ಲಿ...ಫೋಟೋಗ್ರಾಫರ್ ಸ್ಟುಡಿಯೋ ಅಂತಲೇ, ರೆಕಾರ್ಡಿಂಗ್ ಸ್ಟುಡಿಯೋ ಅಂತಲೇ, ಅಥವಾ ಅಪಾರ್ಟ್‌ಮೆಂಟ್ ಸ್ಟುಡಿಯೋ ಎಂಬುದಾಗಿಯೋ' ಎಂದು ಸ್ಪಷ್ಟೀಕರಣ ಕೇಳಿದ್ದೆ. ಅದಕ್ಕುತ್ತರವಾಗಿ ಅವರು 'ರೆಕಾರ್ಡಿಂಗ್ ಸ್ಟುಡಿಯೋ' ಎಂದರು ನಾನು ಆ ಪದವನ್ನು ಇದ್ದ ಹಾಗೆ ಬಳಸಿಕೊಳ್ಳುವುದೆ ಸೂಕ್ತ ಎಂದುಕೊಂಡಿದ್ದೆ. ಹಾಗೆ ಹೇಳಲು ಕಾರಣವೂ ಇದೆ. (ಇಲ್ಲವೆಂದಾದರೆ, ಫೋಟೋ ಸ್ಟುಡಿಯೋಗೆ "ಛಾಯಾಚಿತ್ರಗಾರನ ಕಾರ್ಯಶಾಲೆ" ಎಂದು ಯಾವುದಾದರೊಂದು ವಾಕ್ಯದಲ್ಲಿ ಬರೆದು ಏನನ್ನು ಸಾಧಿಸಿದಂತಾಯಿತು?)

ಇಂಗ್ಲೀಷ್ ಭಾಷೆಗೆ ಪ್ರಪಂಚದ ಬಹುತೇಕ ಭಾಷೆಗಳಿಂದ ಪದಗಳು ಬಂದಿವೆ. ನಮ್ಮ ದಿನ ನಿತ್ಯದ ಬಳಕೆಯಲ್ಲಿ - ವ್ಯಾವಹಾರಿಕವಾಗಿ ಹಾಗೂ ವೈಯಕ್ತಿಕವಾಗಿ ಬಳಸುವ ಇಂಗ್ಲೀಷ್‌ನಲ್ಲಿ - ಬೇಕಾದಷ್ಟು ಗ್ರೀಕ್, ಲ್ಯಾಟಿನ್, ಫ್ರೆಂಚ್, ಜರ್ಮನ್ ಇತ್ಯಾದಿ ಭಾಷೆಗಳ ಪದಗಳ ಬಳಕೆ ಸರ್ವೇ ಸಾಮಾನ್ಯ. ಗುರು, ಪಂಡಿತ, ಅವತಾರ - ಮುಂತಾದ ಸಂಸ್ಕೃತ mUಲದ ಪದಗಳಿಗೂ ಕಡಿಮೆ ಏನಿಲ್ಲ. ಆದರೆ, ಒಮ್ಮೆ ಇಂಗ್ಲೀಷ್ ನಿಘಂಟನ್ನು ಸೇರಿದ ಪದಗಳು ಇಂಗ್ಲೀಷ್‌ನವೇ ಆಗಿ ಹೋಗಿಬಿಡುತ್ತವೆ, ಅದೇ ಕನ್ನಡ ಭಾಷೆಗೆ ಸೇರಿದ ಪದಗಳು ಅನ್ಯಭಾಷೀಯವಾಗೇ ಉಳಿಯಲು ಕಾರಣವೇನು ಎಂಬುದನ್ನು ಕುರಿತು ಯೋಚಿಸೋಣ. ನಾವು ಬಳಸುವ ಪದ 'ಕಾರು' ಕನ್ನಡವೇಕಾದೋದಿಲ್ಲ - ಅದಕ್ಕೋಸ್ಕರ ಇನ್ನೊಂದು ಕನ್ನಡದ್ದೇ ಆದ ಪದವನ್ನು ಸೃಷ್ಟಿಸುವ ಅಗತ್ಯವಿದೆಯೇ? ನಾವು ಪೂರ್ತಿಯಾಗಿ ನೂರಕ್ಕೆ ನೂರರಷ್ಟು ಕನ್ನಡದ ಪದಗಳನ್ನು ಬಳಸಿಯೇ ಮಾತನಾಡಲು ಸಾಧ್ಯವಿದೆ, ಆದರೆ ನಮ್ಮ ಸಂವಾದ ಕೇವಲ ಕೆಲವೇ ಪದಗಳಿಗೆ ಸೀಮಿತವಾಗಿ ಹೋಗಿ, ಕೈ ಸನ್ನೆ-ಬಾಯ್ ಸನ್ನೆಗೆ ಆದ್ಯತೆಕೊಡಬೇಕಾಗಿ ಬರಬಹುದು. ಇಲ್ಲಿ ಇಂಗ್ಲೀಷ್ ಹೆಚ್ಚು, ಕನ್ನಡ ಕಡಿಮೆ ಎಂಬ ಮಾತನ್ನು ನಾನು ವಾದಕ್ಕೆ ಬಳಸುತ್ತಿಲ್ಲ, ಆದರೆ ಕನ್ನಡಕ್ಕೆ ಬಂದ ಪದಗಳು ಕನ್ನಡದವಾಗೇಕೆ ಉಳಿಯುವುದಿಲ್ಲ ಎಂದು ಯೋಚಿಸತೊಡಗುತ್ತೇನೆ, ಒಂದು ಭಾಷೆಗೆ ಒಂದು ನೀತಿ ಮತ್ತೊಂದು ಭಾಷೆಗೆ ಅದೇ ನೀತಿ ಅನ್ವಯವೇಕಾಗದು? ಕನ್ನಡಲ್ಲಿ ಬಳಸುವ ಸಂಸ್ಕೃತ, ಇಂಗ್ಲೀಷ್ (ಅಥವಾ ಅದರ mUಲ ಪದ) ಕನ್ನಡವೇ ಆಗಿ ಉಳಿಯಲಿ ಹಾಗೂ ಬೆಳೆಯಲಿ ಅಲ್ಲವೇ?

***

'ತಂದೆಯರ' ಅಥವಾ 'ತಂದೆಯಂದಿರ' ದಿನಾಚರಣೆ ನಮಗೆ ಹೊಸದು - ಪ್ರತಿ ವರ್ಷಕ್ಕೊಮ್ಮೆ ಮಾತ್ರ ತಂದೆ-ತಾಯಿಯರನ್ನು ಫೋನ್‌ನಲ್ಲಿ ಮಾತನಾಡಿಸುವಷ್ಟೇನು ನಾವು ವ್ಯಸ್ತರಾಗಿಲ್ಲ ಹಾಗೂ ನಮ್ಮ ಸಂಸ್ಕೃತಿ ಬದಲಾಗಿಲ್ಲ. ಹೀಗೆ ಅನೇಕ ದಿನಾಚರಣೆಗಳು - ಕೆಲವೊಂದಿಷ್ಟು ರಾಜಕೀಯ ಪ್ರೇರಿತವಾದುದು, ಇನ್ನೊಂದಿಷ್ಟು ಧಾರ್ಮಿಕವಾಗಿ ಬೆಳೆದು ಬಂದುದು, ಮತ್ತಿಷ್ಟು ವಿಶ್ವಸಂಸ್ಥೆಗಳು ಹೇರುವಂತಹದು (ಮೊನ್ನೆ ಹೊಸತಾಗಿ ಸೇರಿಸಿದ ಅಕ್ಟೋಬರ್ ಎರಡು, ವಿಶ್ವ ಶಾಂತಿದಿನ) - ನಮ್ಮ ಸಂಸ್ಕೃತಿಯಲ್ಲಿ ಇನ್ನೂ ಹಾಸು ಹೊಕ್ಕಾಗಿ ಬೆಳೆದಿಲ್ಲ. ಗ್ರೀಟಿಂಗ್ ಕಾರ್ಡ್ ಕೊಡುವಷ್ಟರ ಮಟ್ಟಿಗೆ ನಾವು ಬೆಳೆಯುವುದಕ್ಕೆ ಇನ್ನೂ ಬಹಳಷ್ಟು ವರ್ಷಗಳೇ ಬೇಕು. ಹೀಗೆ ಅಲ್ಲಿಂದಿಲ್ಲಿಂದ ಎರವಲಾಗಿ ಪಡೆದು ಬಂದವುಗಳನ್ನು ಸ್ವೀಕರಿಸಿ ನಮ್ಮದೇ ಆದ ಸಂಸ್ಕೃತಿಯಲ್ಲಿ, ಆಚಾರ-ವಿಚಾರಗಳಲ್ಲಿ ಒಂದು ಮಾಡಿಕೊಂಡು ಅದರ mUಲವೇ ಗೊತ್ತಾಗದ ಮಟ್ಟಿಗೆ ಬೆಳೆಯುವ ಕಾಲ ಬಹಳಷ್ಟು ದೂರವಿದೆ. ಅಲ್ಲಿಯವರೆಗೆ 'Happy Fathers' day!" ಎಂದು ಹೇಳಿದಷ್ಟು ಸಲೀಸಾಗಿ "ತಂದೆಯಂದಿರ ದಿನದ ಶುಭಾಶಯಗಳು!" ಎನ್ನುವ ಕನ್ನಡದ ನುಡಿ ಕಿವಿಗೆ ಇಂಪಾಗಿ ಕೇಳಲಾರದು. ನಾವು "Happy..." ಸಂಸ್ಕೃತಿಗೆ ಮೊರೆ ಹೋಗಿ ಸಂತೋಷವಾಗಿರಬೇಕೆ ಅಥವಾ "ಶುಭಾಶಯ"ಗಳನ್ನು ಹಂಚಿಕೊಂಡು ಆನಂದವಾಗಿರಬೇಕೆ ಎನ್ನುವುದು ನಾವು, ನೀವು, ಮುಂದೆ ಕನ್ನಡ ನುಡಿಯನ್ನು ಆಡಿ-ಬೆಳೆಸುವವರು ಪ್ರಶ್ನಿಸಿ, ಉತ್ತರಿಸಿಕೊಳ್ಳಬಹುದಾದ ಮಹದವಕಾಶ, ಅಲ್ಲವೇ?