’ಅವರೊಡನೆ’ ಒಂದು ಸಂವಾದ...
ನಮ್ಮೂರಿನ್ ಪೋಸ್ಟ್ ಮಾಸ್ಟರ್ ಆಚಾರ್ರು ತಮಿಗ್ ಬರೋ ಅಷ್ಟೊಂದ್ ಕಡಿಮೆ ಸಂಬಳದಲ್ಲಿ ಅದ್‌ಹೆಂಗ್ ಜೀವ್ನಾ ನಡೆಸ್ತಿದ್ರೋ, ಮಕ್ಳೂ-ಮರಿ ಇರೋವಂತ ದೊಡ್ಡ ಸಂಸಾರಾನೇ ಅವ್ರುದ್ದು, ಅಂತ ಎಷ್ಟೋ ಸರ್ತಿ ಯೋಚ್ನೆ ಬರುತ್ತೆ. ನಾನ್ ಕೆಲ್ಸಾ ಮಾಡೋಕ್ ಶುರು ಮಾಡ್ದಾಗ್ಲಿಂದ್ಲೂ ಒಂದಲ್ಲಾ ಒಂದ್ ರೀತಿಯಿಂದ ಸಂಬ್ಳಾ ಜಾಸ್ತಿ ಆಗ್ತಾ ಹೋಗ್ತಾ ಇರೋದು ಸಹಜವಾದಷ್ಟೇ ಕೈಗ್ ಬರೋ ಕಾಸು ಕಮ್ಮೀ ಅಂತ್ಲೇ ಅನ್ನಿಸ್ತಿರೋದೂ ಅಷ್ಟೇ ಸಹಜವಾಗಿ ಬಿಟ್ಟಿದೆ! ಈ ಆಸೆಗೊಳಿಗೊಂದ್ ಮಿತಿ ಅಂತಾ ಬ್ಯಾಡ್ವಾ ಅಂತ ಬಹಳಷ್ಟ್ ಸರ್ತಿ ಅನ್ಸಿರೋದೂ ನಿಜವೇ.
ಆ ಪೋಸ್ಟ್ ಮಾಸ್ಟರ್ರುಗಳಿಗೆ ಏನ್ ಕಡಿಮೆ ಇಲ್ಲಾ ಪ್ರತೀ ಸರ್ತಿ ಮನಿ ಆರ್ಡ್ರು ಹಂಚೋಕ್ ಹೋದಾಗ್ಲೆಲ್ಲಾ ಎರಡ್ ರೂಪಾಯ್, ಐದ್ ರೂಪಾಯ್ ಅಂತ ಜನ ಕೊಡ್ತ್ಲೇ ಇದಾರೆ, ಅವರ ಮೇಲ್ ಸಂಪಾದ್ನೇ, ಅದೇ ಗಿಂಬಳಾ ಅಂತರಲ್ಲಾ ಅದಕ್ಕ್ಯಾವಾಗ್ಲೂ ಕಮ್ಮೀ ಅಂತಿಲ್ಲ. ಬರೋ ಸಂಬ್ಳದಿಂದ ಜೀವ್ನಾ ಸಾಗ್ಸೋದ್ ಅಂದ್ರೆ ಹುಡುಗಾಟ್ವೇ, ಈಗಿನ್ ಕಾಲ್ದಲ್ಲಿ ಹಂಗ್ ಯಾವಾನಾದ್ರೂ ಮಾಡ್ತಾನೆ ಅಂತಂದ್ರೆ ಅಷ್ಟೇಯಾ, ತಿಂಗ್ಳು ಕೊನಿಗೆ ಹೊಟ್ಟೇಗ್ ತಣ್ಣೀರ್ ಬಟ್ಟೆಯೇ ಗತಿ.
ಏನ್ ಮೇಲ್ಸಂಪಾದ್ನೇ ಬಂದ್ರೂ ಅಷ್ಟೇ - ಒಬ್ ಅಂಚೆ ಇಲಾಖೆ ಕೆಲ್ಸಗಾರನಿಗೆ ಬಹಳಷ್ಟು ಕನಸುಗಳೇನಾದ್ರೂ ಇರೋಕಾಗುತ್ಯೇ? ಅವೇ - ನಮ್ ಮಕ್ಳುನ್ ಇಂಜಿನಿಯರಿಂಗೂ, ಮೆಡಿಕಲ್ಲೂ ಓದಿಸ್ಬೇಕು; ದೊಡ್ಡ ಬಂಗ್ಲೇ ಕಟ್ ಬೇಕು; ಹಾಯಾಗಿ ಇರ್‌ಬೇಕು, ಇತ್ಯಾದಿ. ಗೃಹಸ್ಥಾಶ್ರಮ ಅಂದ್ರೇನು ಅಂತ ಗೊತ್ತಾಗೋದೇ ಮನೇ ತುಂಬ ಮಕ್ಳಿರೋಂಥ ಮನೆಯ ಹಿರಿಯನಾಗಿ, ಸರ್ಕಾರಿ ಶಾಲೆ ಮೇಷ್ಟ್ರೋ ಅಥವಾ ಅಂಚೆ ಇಲಾಖೆ ನೌಕರನೋ ಆಗಿಕೊಂಡು ಮನೆ ಯಜಮಾನನಾಗಿ ಇಪ್ಪತ್ತು-ಮೂವತ್ತು ವರ್ಷ ಜೀತಾ ತೇದಿ-ತೇದಿ ಹಾಕ್ದಾಗ್ಲೇ. ಮಕ್ಳೂ-ಮರಿ ಓದಿಸೋದ್ ಹಾಗಿರ್ಲಿ, ಕಾಸಿಗ್ ಕಾಸು ಕೂಡಿ ಎರಡು ಹೆಣ್ ಮಕ್ಳು ಮದುವೆ ಮಾಡಿ ಸೈ ಅನ್ನಿಸ್ಕ್ಯಳ್ಳಿ ನೋಡಾಣಾ...ಇಂಥಾ ಒಂದ್ ಗೃಹಸ್ಥಾಶ್ರಮದಲ್ಲಿ ಬದುಕಿ ಜಯಿಸಿದಾ ಅಂತಂದ್ರೆ ಎಕ್ಸಿಕ್ಯೂಟಿವ್ ಆಗಿ ಕೈ ತುಂಬಾ ಸಂಪಾದ್ನೇ ಮಾಡೋ ಹತ್ ಹತ್ತು ಕೆಲ್ಸದ ಪುಣ್ಯ ಸಿಕ್ಕ ಹಾಗೆ...ಅದು ನೋಡ್ರ್ಯಪ್ಪಾ ನಿಜವಾದ ಸಂಸಾರ ಅಂದ್ರೆ. ಪಟ್‌ಪಟ್ಟಿ, ಸ್ಕೂಟ್ರು, ಕಾರ್‌ನ್ಯಾಗೆ ಹೋಗಿ ಚೈನಿ ಮಾಡ್‌ತಿರೋ ನಮ್ಮಂತೋರಿಗೆ ಗೊತ್ತಾಗಂಗಿಲ್ಲ. ಒಂದೋ ಎರಡೋ ಹಡಕಂಡೇ ನಮ್ ಆಕ್ರಂದನ ಮುಗಿಲು ಮುಟ್ಟೋ ಹೊತ್ತಿನೊಳಗ ಹಿಂದೆ ಹೆಂಗಪ್ಪಾ ಜನ ಸಂಸಾರ ಸಾಗಿಸ್ತಿದ್ರೂ ಅನ್ಸಂಗಿಲ್ಲಾ?
ಹಾಕ್ಯಂಡ್ ಚಪ್ಲೀ ಸೈತಾ ಸವಿಯಂಗಿಲ್ಲಾ ಇದೊಂದ್ ನಮನಿ ಕೆಲ್ಸಾ ನೋಡ್ರಿ...ಅಂಗಿ ಕಾಲರ್ ಕೊಳೀ ಆಗದಿರೋಂಥ ಹವಾಮಾನದೊಳಗೆ ಬೇಯೋ ನಮಗೆ ಅತ್ಲಾಗ್ ಹೋಗಿ ಇತ್ಲಾಗ್ ಬಂದ್ರೆ ಉಸ್ಸ್ ಅನ್ನುವಂಗ್ ಆಗ್ ಹೋಗ್ತತಿ. ಮೈ ಮುರ್ದು-ಬಗ್ಸಿ ಕೆಲ್ಸಾ ಮಾಡೋ ಹೊತ್ಯ್ನ್ಯಾಗೆ ಕೂತ್ ಕಾಲಾ ಹಾಕ್ತವಿ, ಇನ್ನು ಕೂತ್ ತಿನ್ನೋ ಹೊತ್ತಿಗೆ ತೆವಳಿ ಸಾಯ್ತೇವಿ ಅನ್ಸಂಗಿಲ್ಲಾ? ಮನ್ಷಾ ಅಂದೋನ್ ಓಡಾಡ್ ಬಕು, ಮೈ ಬಗ್ಸಿ ದುಡಿಬಕು, ಹಂಗಾದ್ರೆ ಒಂದಿಷ್ಟು ಪರಿಶ್ರಮಾನಾದ್ರೂ ಆಗ್ತತಿ, ಮೈ ಮನಸು ಗಟ್ಟೀನಾರೆ ಆಗ್ತಾವೆ, ಅದು ಬಿಟ್ಟು ಬರೀ ತಲಿ ಖರ್ಚ್ ಮಾಡಿಕೊಂಡು ಪ್ರಪಂಚದ್ ಜನಾ ಎಲ್ಲಾ ಹಿಂಗ್ ಕುಂತಾ ಕಾಲಾ ತೆಗದೂ-ತೆಗದೂ ಅದ್ ಏನ್ ಉದ್ದಾರ್ ಆಗೈತಿ ಅಂತ ನೀವಾ ಹೇಳ್ರಲ್ಲಾ.
ಅದಿರ್ಲಿ ಬಿಡ್ರಿ...ಏನ್ ಮಳೀರಿ ಈ ಸರ್ತಿ ಅವನೌವ್ನು, ಎಲ್ಲಾ ಕೆರೆ ಕಟ್ಟೇ ತುಂಬಿಕ್ಯಂಡ್ ಕೋಡೀ ಬಿದ್ದ್ ಹೋಗೋಷ್ಟೋ...ಇನ್ನೂ ನಿಂತಿಲ್ಲ ನೋಡ್ರಿ ಇದರ ಅರ್ಭಟಾ...ಗೊಂಧೀ ಹೊಳೀ ತುಂಬಿ ರಸ್ತೀ ಮ್ಯಾಗ್ ನೀರ್ ಬಂದು ಎಲ್ಲಾ ಬಸ್ನೂ ನಿಲ್ಲಿಸ್ಯಾರ್ರೀ, ಹಾನಗಲ್ಲೂ, ಹುಬ್ಬಳ್ಳಿ ಹೋಗ್‌ಬಕು ಅಂದ್ರ ತಿರುಕ್ಯಂಡ್ ಹೋಗ್‌ಬಕು. ವರದಾ ನದಿ ಇಷ್ಟು ಯಾವತ್ತೂ ತುಂಬಿ ಹರಿದಿದ್ದಾ ನನ್ ಜೀವ್‌ಮಾನ್‌ದಾಗ್ ನೋಡಿದ್ದಿಲ್ರಿ. ದೇಶಾ ಪೂರ್ತಿ ತೊಳದ್ ಹೋಗೋಷ್ಟು ಮಳೀ ಬಂದ್ರೂ ನಮ್ ದೇಶದಾಗ್ ತುಂಬಿರೋ ಕೋಳೀ ಎಲ್ಲೂ ಹೋಗೋಂಗ್ ಕಾಣ್ಸಲ್ಲ. ದೊಡ್ಡ ಮನ್ಷಾರು ತಮ್ ಪಾಡಿಗ್ ತಾವ್ ಇರ್ತಾರ, ಇತ್ಲಾಗ್ ಬಡವ್ರು ಸತ್‌ಗಂತ ಕುಂತಾರೆ, ಹೇಳೋರಿಲ್ಲ ಕೇಳೋರಿಲ್ಲ ಅನ್ನಂಗಾಗಿ ಹೋಗ್ಯದೆ. ಸಾಲಾ ಸೂಲಾ ಮಾಡೀ ಕಾಳೂ-ಕಡಿ ತಂದು ಬಿತ್ತಿ ಇನ್ನೇನು ಪೈರು ಚಿಗರ್ಕ್ಯಬಕು ಅನ್ನೋಷ್ಟರಲ್ಲಿ ಇದೊಂದ್ ಹಾಳ್ ಮಳಿ ಹೊಡಕಂತ ಕುಂತತ್ ನೋಡ್ರಿ...ಸಾಲಾ ಕೊಟ್ಟೋರ್‌ಗೇನ್ ಅನ್ನಣ, ಬಡ್ಡಿ ಹೆಂಗ್ ತೀರ್ಸಣ, ಹೆಂಡ್ರೂ-ಮಕ್ಳೂ ಮೈ ಮ್ಯಾಗ್ ಅರಿವೇ-ವಸ್ತ್ರಾನ್ ಎಲ್ಲಿಂದಾ ತರಣಾ. ಅತ್ಲಾಗ್ ಜೀವಾ ಕಳಕಂತವಿ ಅಂದ್ರೂ ಒಂದ್ ನಿಮ್ಷಾ ಮಳಿ ಬಿಡವಲ್ದು, ಮನ್ಯಾಗಾ ಬಿದ್ದು ಸಾಯ್‌ಬಕು...ಅದೂ ಅಲ್ಲೀ-ಇಲ್ಲೀ ಸೋರೀ-ಸೋರಿ ಎತ್ಲಾಗ್ ನೋಡಿದ್ರೂ ಹಸೀಹಸೀ ಮುಗ್ಗುಲು ವಾಸ್ನೆ ಹಿಡದ್‌ಬಿಟ್ಟತಿ.
***
’ಯಾರಿಗೆ ಟೀ ತರ್‌ಬೇಕು? ಇಲ್ಲಿ ಯಾರೂ ಇಲ್ಲವಲ್ಲಾ...’.
’ಏ ಇವಳೇ... ಇವರಿಗೊಂದು ಕಪ್ ಚಾ ತಂದ್ ಕೊಡು...’ ಅಂತ ಇನ್ನೇನೋ ಬಡಬಡಿಸುತ್ತಾ ಇದ್ರಿ... ಯಾವ್ದಾದ್ರೂ ಕನಸೇನಾದ್ರೂ ಬಿದ್ದಿತ್ತಾ?