ಜರ್ಸೀ ರಾಜ್ಯಕ್ಕೆ ಜೈ!
ಇರೋ ಐವತ್ತು ರಾಜ್ಯದೊಳಗೆ ಹೋಗೀ-ಹೋಗೀ ಈ ಜರ್ಸೀ ರಾಜ್ಯದೊಳಗೇ ಬಂದು ತಗೊಲಿಕೊಳ್ಳಬೇಕಾದ್ದಂಥದ್ದೇನಿತ್ತು? ಎಂದು ಎಷ್ಟೋ ಸಾರಿ ಯೋಚನೆ ಮಾಡಿಕೊಂಡ್ರೂ ಹೊಳೆಯದ ವಿಚಾರ - ನನ್ನ ಯಾವ ಜನ್ಮದ ಕರ್ಮ ಫಲವೋ ಎನ್ನುವಂತೆ ಈ ಜರ್ಸಿ ರಾಜ್ಯದ ನೀರು ಕುಡಿತಾ ಇದ್ದಿದ್ದಾಯ್ತು ಹೆಚ್ಚೂ ಕಡಿಮೆ ಒಂದು ದಶಕ.
ಹೆಚ್ಚೂ ಕಡಿಮೇ ಏನು ಬರೋಬ್ಬರಿ ಹತ್ತು ವರ್ಷವೇ ಕಳೆದು ಹೋಯ್ತು...ನಾಳೆಗೆ. ಇವತ್ತು ಗಾರ್ಡನ್ ಸ್ಟೇಟ್ ಪಾರ್ಕ್‌ವೇ ಎಕ್ಸಿಟ್ 138 ಪಕ್ಕದಲ್ಲಿ ಹೋಗುವಾಗ ದಿಢೀರನೆ ನೆನಪಾಯ್ತು. ನಾನು 1997 ರ ಜುಲೈ ನಾಲ್ಕರಂದು ಡೆನ್ವರ್, ಕೊಲೋರ್ಯಾಡೋನಿಂದ ಇಲ್ಲಿಗೆ ಟಿಕೇಟ್ ತೆಗೆದು ನೆವರ್ಕ್ ಲಿಬರ್ಟಿಯಲ್ಲಿ ಇಳಿದು ನಮ್ಮ ರಿಕ್ರ್ಯೂಟರ್ ಹೇಳಿದ್ದನೆಂದ್ ಕೆನಿಲ್‌ವರ್ತ್ ಇನ್ನ್‌ಗೆ ರೂಮ್ ಬುಕ್ ಮಾಡಿಕೊಂಡು ಇನ್ನೂ ಕೈಯಲ್ಲಿ ಕೆಲಸವಿಲ್ಲದಿದ್ದರೂ ಹಳೆಯ (ಭಾರತೀಯ) ಕಂಪನಿಗೆ ರಾತ್ರೋ ರಾತ್ರಿ ನಮಸ್ಕಾರ ಹೊಡೆದು (ಅದೂ ಅಂತಿಮ ನಮಸ್ಕಾರ), ಜರ್ಸೀ ರಾಜ್ಯಕ್ಕೆ ಬಂದು ಸೇರಿಕೊಂಡಿದ್ದು.
ಜುಲೈ ನಾಲ್ಕರಂದು ಕಾಂಟಿನೆಂಟಲ್ ಏರ್‌ಲ್ಲೈನ್‌ನಲ್ಲಿ ಡಿಸ್ಕೌಂಟ್ ಕೊಡುತ್ತಾರೆ ಎಂದು ಗೊತ್ತಿರಲಿಲ್ಲ, ಇನ್ನೇನು ಡೆನ್ವರ್‌ನಿಂದ ಜರ್ಸಿಗೆ ಆರು ನೂರು ಚಿಲ್ಲರೆ ಡಾಲರ್ ಕೊಡಬೇಕು ಎನ್ನುವಷ್ಟರಲ್ಲಿ -- are there any independence day special...? ಎಂದು ಪ್ರಶ್ನೆ ಹಾಕಿದೆ ಎನ್ನುವ ಒಂದೇ ಕಾರಣಕ್ಕೆ ಕೌಂಟರ್ ಹಿಂದಿದ್ದ ಲಲನಾಮಣೀ ಒಂದೇ ನಿಮಿಷದಲ್ಲಿ ನನ್ನ ಒನ್ ವೇ ಟಿಕೇಟ್ ಮೇಲೆ ಐನೂರು ಡಾಲರ್ ಡಿಸ್ಕೌಂಟ್ ಕೊಟ್ಟಿದ್ದಳು...ಕೆಳ ತಿಂಗಳ ಸಹವಾಸದಲ್ಲಿ ನಾನು ಡೆನ್ವರ್ ನಗರವನ್ನು ಅದೆಷ್ಟೇ ಮೆಚ್ಚಿಕೊಂಡಿದ್ದರೂ ಜರ್ಸಿಗೆ ಬರುತ್ತೇನೆ ಎನ್ನುವ ಹುರುಪಿನ ಮುಂದೆ ಆ ಮೆಚ್ಚುಗೆ ಭಾರತದ ಹಳೇ ಸ್ನೇಹಿತರ ಗೆಳೆತನದಂತೆ ನಿಧಾನವಾಗಿ ಕರಗಿ ಕೊನೆಗೆ ಮಾಯವಾದುದರಲ್ಲಿ ಹೊಸತೇನೂ ಇಲ್ಲ ಬಿಡಿ. ಹಾಗೂ ವರ್ಜೀನಿಯಾದಲ್ಲಿ ಕಳೆದ ಮೂರೂವರೆ ವರ್ಷಗಳು ಹಳ್ಳಿ ಹುಡುಗ ಹೈ ಸ್ಕೂಲಿಗೆ ಪಕ್ಕದ ಊರಿಗೆ ಹೋಗಿ ಬಂದ ಅನುಭವ ಅಷ್ಟೇ.
***
ಹತ್ತು ವರ್ಷ ಕಳೆದು ಹೋಗಿದೆಯೇ? ಏನೇನಾಗಿಲ್ಲ, ಏನೇನಾಗಿದೆ! ೧೯೯೭ ರ ಜುಲೈ ನಾಲ್ಕರಂದು ಬಿಟ್ಟ ಕಣ್ಣು ಮುಚ್ಚದ ಹಾಗೆ ಕೆನಿಲ್‌ವರ್ಥ್ ಇನ್‌ನ ಮಾಳಿಗೆಯಿಂದ ನೋಡಿದೆ ಫೈರ್ ವರ್ಕ್ಸ್‌ಗಳನ್ನು ಇನ್ನುಳಿದ ಯಾವ ವರ್ಷದಲ್ಲೂ ಅಷ್ಟು ಆಸಕ್ತಿಯಿಂದ ನೋಡಿಲ್ಲ. ಅಮೇರಿಕದಲ್ಲಿ ದುಡಿಯುವ ಎಲ್ಲರಿಗೂ ಆಗೋ ಹಾಗೆ ನನಗೂ ಒಂದಿಷ್ಟು ಕಾರ್ಡುಗಳು, ಸಾಲಗಳು ತಲೆ ಸುತ್ತಿಕೊಂಡಿವೆ. ಇಲ್ಲಿನ ರೀತಿ-ನೀತಿಗಳನ್ನು ಕಲಿತೆನೋ ಬಿಟ್ಟೆನೋ ಎಂದು ನನಗೆ ಆಗಾಗ ಅನುಮಾನವಾಗುತ್ತಿರುತ್ತದೆ. ಆಗಿನ ಹುರುಪು, ಭಂಡ ಧೈರ್ಯಗಳು ಈಗಿಲ್ಲವಾದರೂ ಇತ್ತೀಚಿನ ಜಾಗತಿಕ ವಿದ್ಯಮಾನಗಳನ್ನು ಕುರಿತು ಆಲೋಚಿಸಿದರೆ ಒಮ್ಮೊಮ್ಮೆ ಇಲ್ಲಿರುವುದೇ ಸೇಫ್ ಅಲ್ಲ ಅನ್ನಿಸೋದೂ ಇದೆ.
***
ಅಮೇರಿಕದ ಉಳಿದ ರಾಜ್ಯಗಳಲ್ಲಿ ದೇಸಿಗಳು ಹೆಚ್ಚೋ ಕಡಿಮೆಯೋ ಯಾರು ಬಲ್ಲರು, ನಮ್ಮ ಜರ್ಸೀ ರಾಜ್ಯದಲ್ಲಿ ಬೇಕಾದಷ್ಟು ಜನ ದೇಸಿಗಳಿದ್ದಾರೆ...ಎಲ್ಲಿ ಹೋದರಲ್ಲಿ ನಮ್ಮವರನ್ನು ನೋಡುವುದು ನಮಗೆ ಸಹಜ, ಅದು ಒಂದು ರೀತಿಯಲ್ಲಿ ನಮ್ಮನ್ನು ಇಲ್ಲಿ ಜನಪ್ರಿಯ ಮಾಡಿದೆ. ಏನಿಲ್ಲವೆಂದರೂ ಡೆನ್ವರ್‌ನಲ್ಲಿ ಕೇಳುತ್ತಿದ್ದ ಹಾಗೆ ’ಭಾರತ ಎಲ್ಲಿದೆ?’ ಎಂದು ಇಲ್ಲಿ ಯಾರೂ ಈವರೆಗೆ ಕೇಳಿದ್ದಿಲ್ಲ. ಜರ್ಸೀ ರಾಜ್ಯ ಹೆಸರಿಗೆ ಮಾತ್ರ ಸಣ್ಣ ರಾಜ್ಯಗಳಲ್ಲೊಂದು (ಭೂ ವಿಸ್ತಾರದಲ್ಲಿ), ಆದರೆ ಇಲ್ಲಿ ಜನಗಳು ಅಲೆದಾಡುವಷ್ಟು, ಇಲ್ಲಿನ ಜನಸಾಂದ್ರತೆ ಬಹಳಷ್ಟು ರಾಜ್ಯಗಳಲ್ಲಿರಲಾರದು.
***
’Happy 4th of July!...' ಎಂದು ನಾನು ಈ ವರ್ಷ ಹೇಳಿದಷ್ಟು ಬೇರೆ ಯಾವ ವರ್ಷವೂ ಹೇಳಿಲ್ಲ, ಅಮೇರಿಕತನ ನನ್ನಲ್ಲಿ ನಿಧಾನವಾಗಿ ಒಳಗಿಳಿತಿದೆಯೋ ಏನೋ!
***
ಹತ್ತು ವರ್ಷಗಳ ನಂತರವೂ ಅದೇ ಕೆನಿಲ್‌ವರ್ಥ್, ಅದೇ ಜುಲೈ ಫೋರ್ಥ್...ಇನ್ನೂ ಹತ್ತು ವರ್ಷ ಜರ್ಸೀ ರಾಜ್ಯದಲ್ಲಿ ಕಾಲ ಹಾಕದಿದ್ದರೆ ಸಾಕು...ನೀರಿನ ಋಣ ಅಂದ್ರೆ ಸಾಮ್ಯಾನ್ಯವೇನು?