ಸಲಿಂಗ ಕಾಮ ಬದುಕಾಗಬೇಕು ಎಂದರೆ...
ಈ ವಿಷಯದ ಬಗ್ಗೆ ಈವರೆಗೆ ಬರೆದೇ ಇಲ್ಲ ಅನ್ಸುತ್ತೆ...
ಈ ಸಾರಿ ಭಾರತಕ್ಕೆ ಹೋದಾಗ ಸುಮ್ನೆ 'ಲೂಸ್ ಟಾಕ್' ಅಂತಾರಲ್ಲ ಹಾಗೆ ಒಮ್ಮೆ ಆಗಿ ಹೋಯಿತು, ನಾವೆಲ್ಲ ನಮ್ಮ ಮನೆಯಲ್ಲಿ ಊಟಕ್ಕೆ ಕುಳಿತಿದ್ದೆವು, ನನ್ನ ಅಕ್ಕನ ಮಗ ಅರುಣ ನನ್ನ ಎದುರುಗಡೆ ಕುಳಿತಿದ್ದ, ದಿನವೂ ವ್ಯಾಯಾಮ ಮಾಡಿ ಚೆನ್ನಾಗಿ ಮೈಕಟ್ಟು ಬೆಳೆಸಿಕೊಂಡಿದ್ದಾನೆ ಎಂದು ಎಲ್ಲರ ನಡುವೆ ಒಂದು ಮಾತು ಬಂದಿತು. ನಾನು ಗಮನಿಸಿದಂತೆ ಅವನು ಹಾಕುತ್ತಿದ್ದ ಟೀ ಶರ್ಟ್ ಹಾಗೂ ಪ್ಯಾಂಟುಗಳು ಅವನಿಗೆ ಸ್ವಲ್ಪ ಬಿಗಿಯಾಗೇ ಇರುತ್ತಿದ್ದವು, ತೀರಾ ಮೈಗೆ ಹತ್ತಿಕೊಂಡು ಮೈಕಟ್ಟುಗಳನ್ನು ತೋರಿಸುವ ಹಾಗೆ. ನನಗೆ ಅದೆಲ್ಲಿಂದ ಹೊಳೆಯಿತೋ ಗೊತ್ತಿಲ್ಲ - 'ನಿನ್ನ ವೇಷ ಭೂಷಣ ನೋಡಿದ್ರೆ ಯಾವ್ ಥರ ಕಾಣ್ತೀಯಾ ಗೊತ್ತಾ?' ಎಂದು ಎಲ್ಲರ ಎದುರೇ ಕೇಳಿಬಿಟ್ಟೆ, ಎಲ್ಲರೂ ಗೊತ್ತಿಲ್ಲ ಅಥವಾ ನೀನೇ ಹೇಳು ಅನ್ನೋ ಹಾಗೆ ನನ್ನ ಮುಖ ನೋಡಿದ್ರು. ನಾನು ನನ್ನ ಹೆಂಡತಿಯ ಕಡೆಗೆ ನೋಡಿದೆ, ಆಕೆಯಾದರೂ ನನ್ನನ್ನು ಸುಮ್ಮನಿರಿಸಬಾರದಿತ್ತೇ ಎಂದು ಈಗ ಅನ್ನಿಸುತ್ತಿದೆ, ಒಂದು ಕ್ಷಣ ತಡೆದು 'ಒಳ್ಳೇ ನ್ಯೂ ಯಾರ್ಕ್ ಸಿಟಿಯಲ್ಲಿರೋ ಹೋಮೋಗಳ ಥರಾ ಕಾಣ್ತೀಯ ನೋಡು...' ಎಂದು ನಾನು ಏನೋ ಹೇಳಬಾರದ್ದನ್ನು ಹೇಳಿದವನ ಹಾಗೆ ತುಟಿಕಚ್ಚಿಕೊಂಡೆ, ಎಲ್ಲರೂ ಒಂದು ಸಲ ಗೊಳ್ಳನೆ ನಕ್ಕರೂ, ಅರುಣನನ್ನೂ ಸೇರಿಸಿಕೊಂಡು ಯಾರಿಗೂ ನಾನು ಹೇಳಿದ್ದು ಗೊತ್ತಾದಂತೆ ಕಂಡುಬರಲಿಲ್ಲ. ನಾನು ಏನೂ ಆಗಲಿಲ್ಲವೆನ್ನುವಂತೆ ಬೇರೆ ಟಾಪಿಕ್ ಅನ್ನು ಎತ್ತಿಕೊಂಡು ಮಾತು ಬದಲಿಸಿದೆ.
ಒಂದೆರಡು ವರ್ಷಗಳ ಹಿಂದೆ ನಮ್ಮ ಮನೆ ಜರ್ಸಿ ಸಿಟಿಯ ಡೌನ್ ಟೌನ್ಗೆ ಹತ್ತಿರದಲ್ಲಿತ್ತು. ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ ಗೇ/ಲೆಸ್ಬಿಯನ್ ದಂಪತಿಗಳ ಮದುವೆಗೆ ಅನುಮತಿ ಕೊಟ್ಟಂದಿನಿಂದಲೋ, ಕ್ಯಾಲಿಫೋರ್ನಿಯಾದ ಕೆಲವು ನಗರಗಳಲ್ಲಿ ಮೇಯರುಗಳು ಗೇ/ಲೆಸ್ಬಿಯನ್ಗಳ ಮದುವೆಯನ್ನು ಕಾನೂನಿನ ವ್ಯಾಪ್ತಿಯಲ್ಲಿ ತಂದ ಸುದ್ದಿ ಹೊರಗೆ ಬಂದಂದಿನಿಂದಲೋ ಜರ್ಸಿ ಸಿಟಿಯ ಹಲವೆಡೆ ಹುಡುಗ-ಹುಡುಗರು ಸಾರ್ವಜನಿಕ ಸ್ಥಳಗಳಲ್ಲಿ ಮುದ್ದಿಸಿಕೊಳ್ಳುವುದು ನನ್ನ ಗಮನಕ್ಕೆ ಬರತೊಡಗಿತು. ಮೊದಲೆಲ್ಲ ಹೀಗೆ ಇರಲಿಲ್ಲ, ಆದರೆ ಒಂದೇ ಸಮನೆ ನಾಯಿಕೊಡೆಗಳು ರಾತ್ರೋ ರಾತ್ರಿ ಹುಟ್ಟಿಬಂದವೇನೋ ಎನ್ನುವಷ್ಟೇ ಸಹಜವಾಗಿತ್ತು ಈ ಬೆಳವಣಿಗೆ. ಮೊದಮೊದಲು ನನ್ನಂಥವರಿಗೆ ಇಂಥದ್ದನ್ನು ನೋಡಲು ಮುಜುಗರವಾಗುತ್ತಿತ್ತು, ನಂತರ ಅದು 'ಮಾಮೂಲಿ'ಯಾಗಿ ಹೋಯಿತು. ಏಕೆ ಈ ಬೆಳವಣಿಗೆ ಅಷ್ಟೊಂದು ದಿಢೀರ್ ಆಗಿತ್ತು ಎನ್ನುವುದು ನನಗೆ ಈಗಲೂ ತಿಳಿದಿಲ್ಲ. ಇಂಥ 'ಕಪಲ್'ಗಳೇ ನೋಡುವುದಕ್ಕೆ ಕಟ್ಟುಮಸ್ತಿನ ಯುವಕರು, ಒಂದೇ ಸ್ಯಾಲ್ಮನ್ ಬಣ್ಣದ ಅಂಗಿಯನ್ನು ಧರಿಸಿಯೋ, ಅಥವಾ ಬಾಳೆ ಎಲೆ ಬಣ್ಣದ ಪ್ಯಾಂಟನ್ನು ಧರಿಸಿಯೋ ಎಷ್ಟೋ ದೂರದಿಂದಲೂ ಗುರುತಿಸಲು ಸಿಗುವಂತ ಪ್ರತಿಮೆಯನ್ನು ನನ್ನ ಮನಸ್ಸಿನಲ್ಲಿ ಹುಟ್ಟುಹಾಕಿದ್ದರು. ನೋಡುವುದಕ್ಕೆ ಆಕರ್ಷಕವಾದ ಈ ಯುವಕರು ಏಕೆ ಹೀಗಾದರು? ಮೊದಲಿನಿಂದ ಹೀಗೆಯೇ ಇದ್ದರೋ ಅಥವಾ ಇಂದಿನ 'ಮುಂದುವರಿದ' ಸಾಮಾಜಿಕ ಸ್ಥಿತಿಯಲ್ಲಿ ತಮ್ಮ ನಿಲುವನ್ನು ಹರವಿಕೊಂಡಿದ್ದರೋ ಯಾರಿಗೆ ಗೊತ್ತು?
ಅಮೇರಿಕದಲ್ಲಿ ರಾಜಾರೋಷವಾಗಿ ಇರುವ ಇಂತಹ ಸಾಮಾಜಿಕ ಸ್ಥಿತಿ ಭಾರತದಲ್ಲಿ ಇಲ್ಲವೇ ಎಂದು ಕೇಳಿದವರಿಗೆ ನಾನು 'ಅಲ್ಲೂ ಇದೆ, ಆದರೆ ಸಮಾಜದ ಬಾಜೂಕಟ್ಟೆಯಲ್ಲಿ ಒಂದು ಹಂಬಲವಾಗಿ ಹಬ್ಬಿಕೊಂಡಿದೆಯೇ ವಿನಾ ಇನ್ನೂ ವೈಯಕ್ತಿಕ ನಿಲುವಾಗಿ ಅದೇ ಬದುಕಾಗಿ ರೂಪುಗೊಂಡಿಲ್ಲ' ಎಂದು ಉತ್ತರಿಸುತ್ತೇನೆ. ನಾನು ಸಾಗರದಲ್ಲಿ ಓದುತ್ತಿರುವಾಗ ನನ್ನ ರೂಮಿನ ಪಕ್ಕದಲ್ಲಿ ಗುಡವಿಯ ರಾಮು ಎನ್ನುವ ಹುಡುಗನೂ ಒಬ್ಬ ಇದ್ದ. ಎದುರಿನ ರೂಮಿನಲ್ಲಿ ಪಿ.ಡಬ್ಲು.ಡಿ.ಯಲ್ಲಿ ಗ್ಯಾಂಗ್ಮನ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಗಲ್ನ ತಿಮ್ಮಪ್ಪನೂ ಇದ್ದ. ಈ ತಿಮ್ಮಪ್ಪನ ರೂಮಿಗೆ ಪಿ.ಡಬ್ಲ್ಯು.ಡಿ. ಲಾರಿ ಡ್ರೈವರ್ ಕೃಷ್ಣಪ್ಪ ಆಗಾಗ್ಗೆ ಭೇಟಿಕೊಡುತ್ತಿದ್ದರು. ನಮ್ಮೆಲ್ಲರಿಗಿಂತಲೂ ವಯಸ್ಸಿನಲ್ಲಿ ಹಿರಿಯರಾದ ಕೃಷ್ಣಪ್ಪ ಆಗಾಗ್ಗೆ ಅದೂ ಇದೂ ಜೋಕ್ ಹೇಳಿಕೊಂಡು ನಕ್ಕು ನಗಿಸಿಕೊಂಡಿರುತ್ತಿದ್ದರು. ತಿಮ್ಮಪ್ಪ ಕೃಷ್ಣಪ್ಪನ ಜೊತೆಯಲ್ಲಿ ಆಗಾಗ್ಗೆ ಡ್ಯೂಟಿಗೆ ಹೋಗುವುದು ಇರುತ್ತಿತ್ತು, ಕೆಲವೊಮ್ಮೆ ರಾತ್ರಿ ಪಾಳಿಯೂ ಇರುತ್ತಿತ್ತು. ಹೀಗೇ ಒಂದು ದಿನ ಯಾವುದೋ ರಜಾ ದಿನದಲ್ಲಿ ರಾಮು ಕೃಷ್ಣಪ್ಪನ ಜೊತೆಯಲ್ಲಿ ಹೋಗಿದ್ದನಂತೆ, ರಾತ್ರಿ ಪ್ರವಾಸಿ ಮಂದಿರದಲ್ಲಿ ತಂಗಬೇಕಾಗಿ ಬಂತಂತೆ, ರಾತ್ರಿ ರಾಮು ಮಲಗಿದ ಹೊತ್ತಿನಲ್ಲಿ...ಅವನೇ ಹೇಳಿದ ಹಾಗೆ 'ಈ ಕೃಷ್ಣಪ್ಪ ಏನೇನೋ ಮಾಡ್ತಾನೆ, ಎಲ್ಲೆಲ್ಲೋ ಕೈ ಹಾಕ್ತಾನೆ!' ಎಂದಿದ್ದನ್ನು ನಾವು ಬೇಕಾದಷ್ಟು ಸಾರಿ ನೆನೆಸಿಕೊಂಡು ತಮಾಷೆ ಮಾಡಿದ್ದಿದೆ. ಕೃಷ್ಣಪ್ಪನಿಗೆ ಮದುವೆಯಾಗಿ ಎರಡು ಮೂರು ಮಕ್ಕಳಿದ್ದರೂ ತಿಮ್ಮಪ್ಪ, ರಾಮುವಿನಂತಹ ಯುವಕರ ಒಡನಾಟ ಆತನ ಮನದಾಳದಲ್ಲಿನ ಹಂಬಲವನ್ನು ಜಾಗೃತಗೊಳಿಸುತ್ತಿದ್ದಿರಬಹುದು, ಮೈನ್ ಸ್ಟ್ರೀಮ್ ಹೋಮೋ ಸೆಕ್ಸ್ಯುಯಲ್ ಅಲ್ಲದಿದ್ದರೂ ಆಗಾಗ್ಗೆ ಆ ಅವತಾರವನ್ನು ಎತ್ತುತ್ತಿದ್ದಿರಬಹುದು.
ನಮ್ಮಲ್ಲಿ ಬಾಂಬೆ, ಡೆಲ್ಲಿ ಮುಂತಾದ ನಗರಗಳಲ್ಲಿನ ಘಟನೆಗಳನ್ನು ಬಿಟ್ಟರೆ ಓಪನ್ ಆಗಿ ಹುಡುಗನೊಬ್ಬ ಮತ್ತೊಬ್ಬ ಹುಡುಗನನ್ನು ಮದುವೆಯಾಗಿ ರಾಜಾರೋಷವಾಗಿ ಬದುಕುವ ಕಾಲ ಇನ್ನೂ ಬಂದಿಲ್ಲವೆಂದೇ ಹೇಳಬೇಕು. ಭಾರತದಲ್ಲಿ ನಮ್ಮ ಹಾಗೂ ನಮ್ಮ ಸಮಾಜದ ನಡುವಿನ ಸಂಬಂಧ ಬಹಳ ಹತ್ತಿರವಾದದ್ದು, 'ಯಾರು ಏನು ಅಂದುಕೊಂಡಾರೋ' ಎನ್ನುವಲ್ಲಿಂದ ಹಿಡಿದು ನಮ್ಮ ಬದುಕನ್ನೇ ಎಲ್ಲರಿಗೋಸ್ಕರ ಬದುಕಬೇಕಾದ ಪರಿಸ್ಥಿತಿ ಇನ್ನೂ ಇದೆ, ಒಬ್ಬ ವ್ಯಕ್ತಿ ಸಮಾಜದ ಮೇಲೆ ಹೆಚ್ಚು ಅವಲಂಭಿತನಾಗಿದ್ದಾನೆ ಎನ್ನುವ ಪರಿಸ್ಥಿತಿಯಲ್ಲಿ 'ನನಗೆ ಹೇಗೆ ಬೇಕೋ ಹಾಗೆ ಬದುಕುತ್ತೇನೆ' ಎನ್ನುವುದು ಸ್ವಲ್ಪ ದೂರವೇ ಉಳಿದ ಮಾತು. ಹೊಮೋಸೆಕ್ಸ್ಯುಯಲ್ ಎನ್ನುವುದು 'ಹಂಬಲ'ಕ್ಕಿಂತ ಮುಂದುವರಿದು 'ಜೀವನಶೈಲಿ' ಅಥವಾ 'ಮನಸ್ಥಿತಿ'ಯಾಗಿಲ್ಲ ಎನ್ನುವುದು ನನ್ನ ಅಭಿಮತ ಅಥವ ತಿಳುವಳಿಕೆ, ಆದರೂ ಹತ್ತು ವರ್ಷ ಅಲ್ಲಿನ ಆಗುಹೋಗುಗಳಿಂದ ದೂರ ಉಳಿದ ನನಗೆ ನನ್ನ ತಿಳುವಳಿಕೆ ಕೆಲವೊಮ್ಮೆ ಓಲ್ಡ್ ಸ್ಕೂಲ್ ಆಗಿ ಕಂಡುಬಂದಿದ್ದೂ ಇದೆ.
ಹೋಮೋಸೆಕ್ಸ್ಯುಯಲ್ ಅಂದರೆ ಸಲಿಂಗಕಾಮ ಎನ್ನುವುದಷ್ಟೇ ಎಲ್ಲರಿಗೆ ಕಂಡುಬರುತ್ತದೆ, ಆದರೆ ಸಮಾಜದ ಮಾರ್ಜಿನ್ನಲ್ಲಿ ಬೆಳೆದು ಮುಖ್ಯವಾಹಿನಿಗೆ ಎದುರಾಗಿ ಈಜಬಹುದಾದ ಶಕ್ತಿಯಾಗಿ, ಅದೊಂದು ಬದುಕಾಗಿ ಕಂಡುಬರಬೇಕಾದರೆ ಭಾರತದಲ್ಲಿ ಬಹಳ ಕಷ್ಟವಿದೆ. ಜಾತಿ-ಧರ್ಮಗಳ ಸಂಕೀರ್ಣತೆಯಲ್ಲೇ ಒದ್ದಾಡುತ್ತಿರುವ ಭಾರತದ ಜೀವನ ಶೈಲಿಗೆ ಹೊಸ ಯುಗದ ಕೊಡುಗೆಯಾಗಿ ಸಲಿಂಗ ಕಾಮ, ಮಿಗಿಲಾಗಿ ಅದನ್ನು ಆವರಿಸಿಕೊಂಡ ಬದುಕು ಯಾವ ಆಯಾಮವನ್ನು ಕೊಡಬಲ್ಲುದು ಎನ್ನುವ ಜಿಜ್ಞಾಸೆ ನನ್ನನ್ನು ಬಲವಾಗಿ ಕಾಡಿಸಿದೆ.
ನನ್ನ ಸೋದರಳಿಯ ಅರುಣನಿಗೆ ತಮಾಷೆಗೇನೋ ಅಂದೆ, ಆದರೆ ಭಾರತದಲ್ಲಿ ಇಂತಹದ್ದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ನನ್ನ ಊಹೆಗೆ ನಿಲುಕದು, ಫೈರ್ ಅಂತಹ ಚಲನಚಿತ್ರಗಳ ಹಿಂದೆ ಯಾವ ಸ್ಪೂರ್ತಿ ಇದೆಯೋ ಗೊತ್ತಿಲ್ಲ, ಆದರೆ ಅದು ಮುಖ್ಯವಾಹಿನಿಯ ಒಂದು ಭಾಗವಾಗುವಾಗ ಭಾರತದಲ್ಲಿ ಇನ್ನು ಏನೇನೆಲ್ಲ ಬದಲಾವಣೆಗಳಾಗಿರಬಹುದು, ಹಾಗಾಗಲು ಇನ್ನೆಷ್ಟು ವರ್ಷ ತೆಗೆದುಕೊಳ್ಳಬಹುದು ಎನ್ನುವುದು ಒಂದು ಚಿಂತೆ ಅಥವಾ ಚಿಂತನೆ ಅಷ್ಟೇ.