...ಎರಡು ಕಾಲಿಗೂ ಪೆಟ್ಟು ಬಿದ್ದ ಯೋಧ ಮತ್ತೆ ಯುದ್ಧಕ್ಕೆ ತಯಾರಿ ನಡೆಸಿದನಂತೆ
ಭೀಕರ ತಂಡಿ ಹವಾ...ಎಲ್ಲೆಡೆ ಮೋಡ ಮುಸುಕಿದ ವಾತಾವರಣ, ಮುಂಬರುವ ದೊಡ್ಡ ಬಿರುಗಾಳಿಗೆ ಮೊದಲು ಎಲ್ಲ ಕಡೆಗೆ ನಿಶ್ಶಬ್ಧ. ಆಗೊಮ್ಮೆ ಈಗೊಮ್ಮೆ ಸುಳಿದಾಡೋ ವಾಹನಗಳು, ರಸ್ತೆಗಳ ಮೇಲೆಲ್ಲಾ ಬೂದಿ ಹರಡಿದ ಹಾಗೆ ತೆಳುವಾಗಿ ಧೂಳಿನ ಹಾಗೆ ಹರಡಿದ ಮಂಜಿನ ತುಂತುರು ಹಾಗೂ ಪುರಸಭೆಯ ವಾಹನಗಳು ಹರಡಿದ ಪುಡಿ ಉಪ್ಪು. ಮರಗಿಡಗಳೆಲ್ಲ ತಮ್ಮ ಎಲೆಗಳನ್ನೆಲ್ಲ ಉದುರಿಸಿ ಗಾಳಿ ಬೀಸುತ್ತದೆಯೋ ಇಲ್ಲವೋ ಎನ್ನುವುದಕ್ಕೆ ಸಾಕ್ಷಿ ಹೇಳಲೂ ಮನಸ್ಸಿಲ್ಲದವರ ಹಾಗೆ ನಿಂತುಕೊಂಡಿದ್ದವು. ವರ್ಷದ ಮೇಲೆ ವರ್ಷ ಕಳೆದಿದೆ, ಎರಡು ವರ್ಷಗಳ ಹಿಂದೆ ಎಲ್ಲ ಒಳ್ಳೆಯದಾದೀತು ಎಂಬು ಆಶಾವಾದವನ್ನು ಹೊತ್ತುಕೊಂಡ ನೆಲ-ಮುಗಿಲು ಹಾಗೂ ಇವೆರೆಡರ ನಡುವಿನವೆಲ್ಲವೂ, ಚಪ್ಪೆ ಮುಖ ಹಾಕಿಕೊಂಡಿದ್ದಂತಿತ್ತು. ಈ ಛಳಿ, ಗಾಳಿಯ ಸಹವಾಸವೇ ಬೇಡ ಎಂದು ಸೂರ್ಯನೂ ಆಕಾಶದಲ್ಲಿ ಬೇಗ ಬೇಗ ಕರಗಿಹೋಗುವಂತೆ ದೌಡಾಯಿಸುತ್ತಿದ್ದ. ಸೂರ್ಯನ ಲಗುಬಗೆಯ ಪಯಣವನ್ನು ಗ್ರಹಿಸಿದ ಮೋಡಗಳು ಅವನನ್ನು ತಮ್ಮ ಮಡಿಲಿನಲ್ಲಿ ಹುದುಗಿಸಿಕೊಂಡು ಸಂತೈಸುತ್ತಿದ್ದವು.
ಎಲ್ಲ ಕಡೆಗೆ ಯುದ್ಧದ ವಾತಾವರಣವೇನಿರಲಿಲ್ಲ, ಶತ್ರುಗಳು ಸುತ್ತುವರೆದಿರಲಿಲ್ಲ, ಯುದ್ಧಕ್ಕೆ ಅಣಿಗೊಂಡು ಶಿಬಿರ ಹೂಡಿದವರಲ್ಲಿ ಯಾವುದೇ ಹೊಸ ಲವಲವಿಕೆಯೇನೂ ಮೇಲ್ನೋಟಕ್ಕೆ ಇದ್ದಂತೆ ಕಾಣಿಸಲಿಲ್ಲ. ಹೊರಗೆ ತೋರುವ ಯುದ್ಧದ ಬದಲಿಗೆ ಎಲ್ಲರ ಮನದೊಳಗೆ ಮಹಾಯುದ್ಧ ಘಟಿಸುತ್ತಿರುವಂತೆ ಮೌನ ನೆಲೆದಿತ್ತು. ತೋಪು-ಗುಂಡುಗಳೆಲ್ಲ ಎಂದಿನಿಂದಲೋ ತಯಾರಾಗಿ ಕುಳಿತು ಈಗ ತೂಕಡಿಸತೊಡಗಿದವರಂತೆ ಕಂಡು ಬಂದವು. ಕಹಳೆ-ಕೊಂಬುಗಳು ಧೂಳು ತಿನ್ನುತ್ತಿದ್ದವು.
ಇವೆಲ್ಲದರ ನಡುವೆ ಒಬ್ಬನೇ ಒಬ್ಬ ಯೋಧ ಯುದ್ಧಕ್ಕೆ ಸನ್ನದ್ಧನಾಗಿ ಕುಳಿತಿದ್ದಾನೆ, ಆದರೆ ಅವನ ಎರಡು ಕಾಲುಗಳಲ್ಲೂ ಈ ಹಿಂದೆ ನಡೆದ ಹೋರಾಟದ ದೆಸೆಯಿಂದ ಗಾಯಗಳಾಗಿ ಅಪಾರ ನೋವಿದೆ, ಅಲ್ಲಲ್ಲಿ ಈ ಹಿಂದೆ ಜಿನುಗಿ ಒಣಗಿದ ರಕ್ತದ ಕಲೆಯಿದೆ. ಈ ಮೇಲ್ಮೈಯಲ್ಲಿ ಸಣ್ಣವೆಂದು ಕಂಡು ಬಂದ ಗಾಯಗಳ ಆಳ ದೊಡ್ಡದಿದೆ, ಆಳ ಹೆಚ್ಚಿದ್ದಷ್ಟೂ ಅದರ ನೋವೂ ಹೆಚ್ಚು ಎಂಬುದು ಯೋಧನ ಮನದ ಸೂಕ್ತಿಯಾಗಿ ಹೋಗಿದೆ. ಅವನ ಭುಜವೇರಿದ ಬಾಣ-ಬಿರುಸುಗಳು ಕೆಳಗಿಳಿದಿವೆ, ದೂರದ ಮದ್ದು-ಗುಂಡುಗಳ ಗೋಜಿಗೆ ಹೋಗುವ ಯಾವ ಹುಮ್ಮಸ್ಸೂ ಕಾಣದು. ಈ ಛಳಿಗಾಲವೊಂದನ್ನು ಕಳೆದರೆ ಸಾಕು ಎನ್ನುವಷ್ಟರ ಮಟ್ಟಿಗೆ ನೈಜತೆ ಈ ಯೋಧನ ಮನದಲ್ಲಿ ಮನೆ ಮಾಡಿ ಅದು ಆಗಾಗ್ಗೆ ಸಣ್ಣ ಆಶಾವಾದದ ಕಿರಣವನ್ನು ಸೂಸಿ ಮತ್ತೆ ಕಮರಿಕೊಳ್ಳುತ್ತದೆ.
ಈ ಯುದ್ಧಗಳಲ್ಲಿ ಯಾರು ಶತ್ರು, ಯಾರು ಮಿತ್ರರು ಎಂಬುದು ಹಿಂದಿಗಿಂತ ಹೆಚ್ಚು ಗೊಂದಲವಾಗಿದ್ದರೂ, ಯೋಧನ ಮನದಲ್ಲಿ ಎಂದಿನಂತೆ ಯುದ್ಧಕ್ಕೆ ತಯಾರಿ ನಡೆಸಬೇಕು, ಯುದ್ಧವನ್ನು ಗೆಲ್ಲಬೇಕು ಎಂಬುದೇ ಬೀಜಮಂತ್ರವಾಗಿದೆ. ಅದಕ್ಕೆ ತಕ್ಕಂತೆ ಯೋಧ ಕುಂಟು-ಕುಂಟುತ್ತಲೇ ತನ್ನ ಕೈಯಾಡಿಸುತ್ತ ಕೈಗೆ ಸಿಕ್ಕ ಆಯುಧಗಳನ್ನೆಲ್ಲ ಒಮ್ಮೊಮ್ಮೆ ಪರೀಕ್ಷಿಸಿ ನೋಡುತ್ತಾನೆ. ಮುಂದೆ ನಡೆಯುವ ಘಟನಾವಳಿಗಳ ಅಸ್ಥಿರತೆ ಆತನನ್ನು ಅಶಕ್ತನನ್ನಾಗಿಸೋದಿಲ್ಲ, ನೋಯುವ ಕಾಲುಗಳೆರಡು ಅಲ್ಲಲ್ಲಿ ಅವನನ್ನು ನಿಂತು-ನಿಂತು ನಡೆಯುವಂತೆ ಮಾಡಿದ್ದರೂ ಪಯಣ ಸಾಗಿದೆ, ಸಾಗುತ್ತಿದೆ.
***
೨೦೦೮ ರ ಸೆಪ್ಟೆಂಬರ್ ಇಂದ ೨೦೧೦ ರ ಕೊನೆಯವರೆಗೆ ಬಹಳಷ್ಟು ನಡೆದು ಹೋಗಿದೆ. ಕೆಲವರು ಡಿಪ್ರೆಷ್ಷನ್ನ್ ಎಂದು ಕರೆಯುವಷ್ಟು ದೊಡ್ಡ ಮಟ್ಟಿನ ರಿಸೆಷ್ಷನ್ನ್ ಹುಟ್ಟಿ ಮರೆಯಾಗಿದೆ. ಮಾರ್ಕೆಟ್ಟಿನ ಮುಖ್ಯ ಇಂಡೆಕ್ಸ್‌ಗಳು ತಮ್ಮ ಹಳೆಯ ಲೆವೆಲ್‌ಗೆ ರಿಕವರ್ ಆಗಿವೆ. ಬ್ಲೂಮ್‌ಬರ್ಗ್, ಸಿಎನ್‌ಬಿಸಿ ಮೊದಲಾದ ಸ್ಟೇಷನ್ನುಗಳಲ್ಲಿ ಅರಚುವ ಧ್ವನಿಗಳಿಗೆಲ್ಲ ಶಕ್ತಿ ಬಂದಿದ್ದು, ಈ ವರ್ಷ ಎಲ್ಲ ಕಡೆಗೆ ಡಬಲ್ ಡಿಜಿಟ್ ಉನ್ನತಿ ಕಂಡಿದೆ ಎಂದು ಇನ್ನೂ ಜೋರಾಗಿ ಕಿರುಚಿಕೊಳ್ಳತೊಡಗಿವೆ. ಹಳೆಯದನೆಲ್ಲ ಎಲ್ಲರು ಮರೆತು, ಕ್ಯಾಲೆಂಡರ್ ಪುಟವನ್ನು ಬದಲಾಯಿಸಿ ಜನವರಿಯನ್ನು ನೋಡುತ್ತಿದ್ದಂತೆ ಎಲ್ಲರೂ ಮಹಾ ಬದಲಾವಣೆ ಆದೀತು ಎಂದು ಮುಗಿಲನ್ನು ನೋಡತೊಡಗಿದಂತೆ ಕಾಣಿಸುತ್ತಿದೆ.
ಈ ಕರಡೀ ತತ್ವದ (bear market) ಆಳ ಇಷ್ಟೇ - ಸಮಾಜದ ಎರಡು ಮುಖ್ಯ ಅಂಶಗಳಾದ ಉದ್ಯೋಗ (job) ಮತ್ತು ವಸತಿ (housing) ಇವೆರಡೂ ಈ ಎರಡು ವರ್ಷಗಳಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಉತ್ತರ ಅಮೇರಿಕದಲ್ಲಿ ನಿರುದ್ಯೋಗ 10% ಅಷ್ಟು ಇದ್ದರೆ, ೨೦೦೭ ರಿಂದ ಇಲ್ಲಿಯವರೆಗೆ ವಸತಿ ಮಾರುಕಟ್ಟೆ ಕುಸಿದು ಟ್ರಿಲಿಯನ್ನುಗಟ್ಟಲೆ ಡಾಲರ್ ಮಾಯವಾಗಿದೆ. ಹೀಗೆ ಎರಡು ಮುಖ್ಯ ಇಂಡಿಕೇಟರುಗಳು ಸಂಕಷ್ಟದಲ್ಲಿ ಸಿಕ್ಕಿಕೊಂಡಿರುವಾಗ ಒಂದಿಷ್ಟು ಆರ್ಥಿಕ ತಜ್ಞರು ಮತ್ತೊಂದು ರಿಸೆಷ್ಷನ್ ಅಥವಾ ದೊಡ್ಡ ಡಿಪ್ರೆಷ್ಷನ್ನೇ ಬರಬಹುದು ಎಚ್ಚರಿಕೆ ನೀಡಿದ್ದಾರೆ. ಆದರೆ ಮೈನ್ ಸ್ಟ್ರೀಮ್ ಸ್ಟಾಕ್ ಮಾರ್ಕೆಟ್‌ನಲ್ಲಿ ಮಾತ್ರ ಎಲ್ಲರು ಊರ್ಧ್ವಮುಖಿಗಳಾಗಿ ಘೂಳೀ ತತ್ವವನ್ನು (bull market) ನಂಬಿಕೊಂಡು ೨೦೧೧ರಲ್ಲಿ ಮಾರ್ಕೆಟ್ಟ್ ಇನ್ನೂ ಮೇಲೆ ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಉದ್ಯೋಗ ರಹಿತ ಗುಣಮುಖಿಯಾಗಿ ಆರ್ಥಿಕ ವ್ಯವಸ್ಥೆ ಬಲಗೊಂಡರೂ ಕುಸಿದ ಮನೆಯ ಬೆಲೆ ಹಾಗೂ ಕೆಲಸವಿಲ್ಲದ ಜನ ಇವೆರಡೂ ಮುಖ್ಯ ಚರ್ಚೆಯ ವಿಷಯವಾಗಿ ೨೦೧೧ ರಲ್ಲಿ ಉಳಿಯುವುದು ಖಂಡಿತ. ಈಗಾಗಲೇ ಉಳಿತಾಯ ಹಾಗೂ ಕಡಿಮೆ ಖರ್ಚಿಗೆ ತೊಡಗಿಕೊಂಡ ಅಮೇರಿಕದ ಬಿಸಿನೆಸ್ಸು ಮತ್ತು ಕುಟುಂಬಗಳು ಮುಂಬರುವ ವರ್ಷದಲ್ಲಿ ಹೇಗೆ ಬದಲಾಯಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ. ಫೋರ್‌ಕ್ಲೋಜರ್ ಅಂಕಿ ಅಂಶ ಗಣನೀಯವಾಗಿ ಏರುತ್ತಲೇ ಇರುವಾಗ ಮನೆ ಖರೀದಿ ಮಾಡಲು ಬಡ್ಡಿ ದರ ಇಳಿದಿದ್ದರೂ ಸಹ ಮಾರ್ಕೆಟ್ಟಿನಲ್ಲಿ ಮಾರಾಟಕ್ಕೆ ಇರುವ ಮನೆಗಳ ಪಟ್ಟಿ ದೊಡ್ಡದೇ ಇದೆ. ಮುಂದಿನ ವರ್ಷ ನಿರುದ್ಯೋಗ ಪ್ರಮಾಣ ಇಳಿಯದೇ ಹೋಗಿ, ಮನೆಗಳ ಬೆಲೆ ಇನ್ನೂ ಕುಸಿಯುತ್ತ ಹೋದಂತೆಲ್ಲ ಸ್ಟಾಕ್ ಮಾರ್ಕೆಟ್ಟ್ ಮೇಲೆ ಹೋದರೂ ಸಹ ಇವೆರಡೇ ಅಂಶಗಳು ಮತ್ತೊಂದು ರಿಸೆಷ್ಷನ್ನ್ ಅನ್ನು ತರುವಷ್ಟು ಪ್ರಬಲವಾಗಿವೆ.
***
’ಅಂತರಂಗ’ದ ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಹೊಸ ವರ್ಷ ಎಲ್ಲರಿಗೂ ಶುಭವನ್ನು ತರಲಿ...