Sunday, August 26, 2007

ಅಲೆಗಳು ಮತ್ತು ಹಾಸಿಗೆಗಿಂತ ಹೊರಗೆ ಚಾಚುವ ಕಾಲು

ಮಹಾಸಾಗರವನ್ನ ಅಷ್ಟೊಂದು ಹತ್ತಿರದಿಂದ ನೋಡದೇ ಅಥವಾ ಅನುಭವಿಸದೇ ವರ್ಷದ ಮೇಲೆ ಆಗಿ ಹೋಗಿತ್ತು. ನಿನ್ನೆ ಅಟ್ಲಾಂಟಿಕ್ ಮಹಾಸಾಗರದ ಹತ್ತಿರ ಹೋದಂತೆಲ್ಲ ಸೃಷ್ಟಿಯ ಅದಮ್ಯ ಶಕ್ತಿಯೆಲ್ಲಾ ಮಹಾಸಮುದ್ರದ ರೂಪದಲ್ಲಿ ನೆಲೆ ನಿಂತಿರುವಂತನ್ನಿಸಿತು. ಬೆಲ್‌ಮಾರ್ ತೀರಕ್ಕೆ ಇನ್ನೆಂದೂ ಹೋಗೋದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡಂದಾಗಿನಿಂದ ನಾವು ಹೋಗೋದು ಸ್ಯಾಂಡಿ ಹುಕ್ ಇಲ್ಲಾ ಅಟ್ಲಾಂಟಿಕ್ ಸಿಟಿ ತೀರಗಳಿಗೆ ಮಾತ್ರ. ಹಾಗೇ ನಿನ್ನೆ ಮಹಾಸಾಗರದ ಸಹವಾಸವೂ ಆಯ್ತು, ಜೊತೆಯಲ್ಲಿ ಕೈಲಿದ್ದ ದುಡ್ಡೂ (ಗ್ಯಾಂಬಲಿಂಗ್‌ನಲ್ಲಿ) ಎನ್ನುವ ಅನುಭವಕ್ಕೆ ಮತ್ತೆ ಇಂಬುಕೊಟ್ಟಿದ್ದು ಬಹಳ ತಿಂಗಳುಗಳ ನಂತರ ನಮಗೆ ನಾವೇ ಕಂಡುಕೊಂಡ ಒಂದು ವೆಕೇಷನ್ ಕ್ಷಣವಷ್ಟೇ.

ಅದ್ಯಾವುದೋ ಪುಸ್ತಕಗಳನ್ನು ಓದಿ ಬಡವ-ಬಲ್ಲಿದ, ಎಕಾನಮಿ ಮುಂತಾದವುಗಳನ್ನು ತಲೆಯಲ್ಲಿಟ್ಟು ಬೇಯಿಸುತ್ತಿದ್ದ ನನಗೆ ಮಹಾಸಾಗರದ ಸ್ವರೂಪವೂ ಭಿನ್ನವಾಗೇನೂ ಕಾಣಿಸಲಿಲ್ಲ. ದಡದಿಂದ ನೀರ ಕಡೆಗೆ ನಡೆದು ಮೊಟ್ಟ ಮೊದಲು ನೀರು ಕಾಲಿಗೆ ಸೋಕಿದಾಗ ಎಂಥಾ ಬಿಸಿಲಿನಲ್ಲೂ ಮೊದಲು ಛಳಿಯ ಅನುಭವವಾಗಿ ಕೆಲವೇ ಕ್ಷಣಗಳಲ್ಲಿ ನಾವು ಅದಕ್ಕೆ ಹೊಂದಿಕೊಂಡು ಬಿಟ್ಟೆವು. ಇನ್ನೊಂದು ಹತ್ತು ಹೆಜ್ಜೆ ಮುಂದಕ್ಕೆ ನಡೆದು ಮೊಣಕಾಲು ಮುಳುಗುವಲ್ಲಿಯವರೆಗೆ ಹೋಗಿ ನಿಂತರೆ ಅಲ್ಲಿ ಅಲೆಗಳ ರಭಸಕ್ಕೆ ಕಾಲುಗಳು ನಿಂತಲ್ಲೇ ಮರಳಿನಲ್ಲಿ ಕುಸಿದ ಅನುಭವ, ಅಥವಾ ಸುತ್ತಲಿನ ತೆರೆಗಳ ಹೊಡೆತಕ್ಕೆ ಕಾಲಿನಡಿಯ ನೆಲವೂ ಜಾರುತ್ತಿರುವ ಹಾಗೆ. ಆದರೆ ಸಮುದ್ರದ ಪ್ರತಿಯೊಂದು ಅಲೆಯೂ ಭಿನ್ನವಂತೆ, ಒಂದರ ಹಿಂದೆ ಮತ್ತೊಂದರಂತೆ ಯಾವುದೋ ವ್ರತಧರ್ಮಕ್ಕೆ ಕಟ್ಟುಬಿದ್ದವರ ಹಾಗೆ ಅಲೆಗಳು ಬರುತ್ತಲೇ ಇದ್ದವು. ತಮ್ಮ ಶಕ್ತ್ಯಾನುಸಾರ ಸುತ್ತಲಿನ ಜನರು ಹತ್ತು, ಇಪ್ಪತ್ತು, ಐವತ್ತು ಅಡಿಗಳವರೆಗೂ ನೀರಿನಲ್ಲಿ ಮುಂದಕ್ಕೆ ಹೋಗಿದ್ದರು. ದಡದಿಂದ ಹತ್ತಡಿ ನೀರಿನಲ್ಲಿ ಮೊಳಕಾಲು ಉದ್ದ ಮುಳುಗಿ ನಿಂತವರಿಗೆ ಅವರದ್ದೇ ಆದ ಸವಾಲುಗಳು, ಹಾಗೇ ಐವತ್ತು ಅಡಿ ದೂರದಲ್ಲಿ ಎದೆ ಮಟ್ಟಕ್ಕೆ ನಿಂತಿರುವವರಿಗೆ ಇನ್ಯಾವುದೋ ಸವಾಲು. ಒಟ್ಟಿನಲ್ಲಿ ನೀರನ್ನು ಅನುಭವಿಸುವವರಿಗೆ ಅವರ ಇಚ್ಛೆ ಹಾಗೂ ಶಕ್ತಿಯನ್ನು ಪ್ರತಿಬಿಂಬಿಸಬಲ್ಲ ಸ್ವರೂಪ.

ಒಮ್ಮೆ ಅನಿಸಿತು - ಮೊಳಕಾಲು ಉದ್ದದ ನೀರಿನಲ್ಲಿ ನಿಂತವರದ್ದೇನು, ಅಂತಹ ಕಷ್ಟವೇನಿದು ಎಂದು. ಆದರೆ ನಾನೇ ಹೋಗಿ ಅಲ್ಲಿ ನಿಂತ ಮೇಲೆ ಅಲ್ಲಿನ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟವಾಗಲಿಲ್ಲ. ಅಭಿಮುಖವಾಗಿ ಬರುವ ಅಲೆ ದಡವನ್ನು ಮುಟ್ಟುತ್ತಿರುವ ಹಾಗೆ ತನ್ನ ಉಬ್ಬು-ತಗ್ಗುಗಳನ್ನು ಕಳೆದುಕೊಂಡು, ಚಪ್ಪಟೆಯಾಗುವುದರ ಜೊತೆಗೆ ಸಾಕಷ್ಟು ನೊರೆಯನ್ನು, ಅದರ ಜೊತೆಯಲ್ಲಿ ಮರಳಿನ ಕಣಗಳನ್ನೂ ಎತ್ತಿಕೊಂಡು ಬರುತ್ತಿತ್ತು. ಹಾಗೆ ಬಂದ ಒಂದೊಂದು ಅಲೆಯೂ ಅದ್ಯಾವುದೋ ಸಂಕಲ್ಪ ತೊಟ್ಟವರಂತೆ ನಿಂತ ನಮ್ಮನ್ನು ದಡದ ಕಡೆಗೆ ತಳ್ಳುವುದೇ ಕಾಯಕವೆಂದುಕೊಂಡಂತಿತ್ತು. ಅಭಿಮುಖವಾಗಿ ಬಂದ ಅಲೆ ದಡದ ಕಡೆಗೆ ಎಷ್ಟು ಜೋರಾಗಿ ನೂಕುತ್ತಿತ್ತೋ ಅಷ್ಟೇ ಜೋರಾಗಿ ದಡಕ್ಕೆ ಬಡಿದು ಮತ್ತೆ ಹಿಂದೆ ಹೋಗುವಾಗಲೂ ಅದೇ ರೀತಿಯ ಒತ್ತಡವನ್ನು ಕಾಲಿನ ಮೇಲೆ ಹೇರುತ್ತಿತ್ತು. ಪಾದಗಳ ಕೆಳಗಿನ ಮರಳು ಕುಸಿಯೋದರ ಜೊತೆಗೆ ದೇಹದ ಸಮತೋಲನವೂ ತಪ್ಪಿ ಎಂಥವರೂ ಬೀಳುತ್ತಿದ್ದುದರಲ್ಲಿ ಅಚ್ಚರಿಯೇನೂ ಇರಲಿಲ್ಲ.

ದಡದಿಂದ ಮೂವತ್ತು ನಲವತ್ತು ಅಡಿ ದೂರದಲ್ಲಿರುವವರನ್ನು ನೋಡಿ ನಾನೂ ಅಲ್ಲಿಗೇಕೆ ಹೋಗಬಾರದೇಕೆನ್ನಿಸಿತಾದ್ದರಿಂದ ನಿಧಾನವಾಗಿ ಮುಂದೆ ಹೆಜ್ಜೆ ಇರಿಸತೊಡಗಿದೆ. ನೊರೆ ತುಂಬಿದ ಅಲೆಗಳನ್ನು ತಪ್ಪಿಸಿಕೊಳ್ಳುವುದು ದೊಡ್ಡ ಕಷ್ಟದ ಕೆಲಸವಾಗಿತ್ತು. ಒಮ್ಮೆ ನೊರೆಯ ವಲಯದಿಂದ ಮುಂದೆ ಹೋಗಿ ಬರೀ ನೀರಿನ ಅಲೆಗಳನ್ನು ಅನುಭವಿಸತೊಡಗಿದೆ. ಇವು ಭಾರೀ ಅಲೆಗಳು, ಅಲೆಗಳು ಸುರುಳಿಯಾಕಾರದಲ್ಲಿ ಬಂದು ಮುರಿಯುತ್ತಿದ್ದ (curl, break) ಸನ್ನಿವೇಶ ಮೋಹಕವಾಗಿತ್ತು. ಎದೆ ಮಟ್ಟದ ನೀರಿನಲ್ಲಿ ದೇಹ ಹಗುರವಾದಂತೆನಿಸಿ, ಬಂದ ಪ್ರತಿಯೊಂದು ಅಲೆಯೂ ಅದರ ಚಲನೆಗನುಗುಣವಾಗಿ ಸಾಕಷ್ಟು ಮೇಲಕ್ಕೊಯ್ದು ಕೆಳಕೆ ತರುತ್ತಿತ್ತು. ಅಲೆಯ ಮುರಿತಕ್ಕೆ ಸಿಕ್ಕು ಅದರ ಜೊತೆಯಲ್ಲಿಯೇ ದಡದ ಕಡೆಗೆ ಹೋಗುವುದು ಒಂದು ರೀತಿ, ಅಲೆಯ ಒಳಗೆ ತಲೆಯನ್ನು ತೂರಿ ಈಜಿ ಮುಂದೆ ಹೋಗುವುದು ಮತ್ತೊಂದು ರೀತಿ, ಅಲೆಯು ಮುಂದೆ ಹೋದ ಹಾಗೆಲ್ಲ ಅದರ ಎತ್ತರಕ್ಕೆ ಎತ್ತಿ ಇಳಿದು ಅಲ್ಲೇ ಇರುವುದು ಮತ್ತೊಂದು ರೀತಿ. ಮಹಾಸಾಗರದ ಆಳಕ್ಕೆ ತಕ್ಕಂತೆ ಹಾಗೂ ಪ್ರತಿಯೊಂದು ಅಲೆಯ ಏರಿಳಿತಕ್ಕೆ ಸಿಕ್ಕಂತೆ ಹಲವು ಅನುಭವಗಳನ್ನು ಎಂತಹವರೂ ಬೇಕಾದರೂ ಪಡೆದುಕೊಳ್ಳಬಹುದಾದದ್ದು ಸಹಜ ಹಾಗೂ ಮುಕ್ತವಾದದ್ದು. ಈ ಅನುಭವಗಳು ಇನ್ನೂ ನಿಸರ್ಗದತ್ತ ಕೊಡುಗೆಗಳಾಗಿ ಎಂದಿಗೂ ಹಾಗೇ ಇರಲಿ.

ದಡದಲ್ಲೋ ಸಾಕಷ್ಟು ಜನ - ಬೇಕಾದಷ್ಟು ಭಾವ ಭಂಗಿಯಲ್ಲಿ ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿದ್ದಾರೆ. ಎಲ್ಲರೂ ಸಮುದ್ರರಾಜನ ಕಡೆಗೆ ಮುಖಮಾಡಿಕೊಂಡು ಯಾವುದೋ ತಪಸ್ಸಿಗೆ ಕುಳಿತ ಹಾಗೆ. ಪ್ರತಿಯೊಬ್ಬರೂ ತಮ್ಮ ಶಕ್ತಿ, ಇಚ್ಛೆ, ಅಲೋಚನೆಗಳಿಗನುಸಾರವಾಗಿ ಮರಳಿನ ಮೇಲೆ ಹಾಸಲು ಟವೆಲ್ಲಿನಿಂದ ಹಿಡಿದು, ಪ್ಲಾಸ್ಟಿಕ್ ಶೀಟ್, ಕುಳಿತು ಕೊಳ್ಳಲು ಖುರ್ಚಿ, ತಿಂದು ಕುಡಿಯಲು ಬೇಕಾದವುಗಳು, ಮುಖ ಮೈ ಕೈಗೆ ಮೆತ್ತಿಕೊಳ್ಳುವ ಸನ್‌ಸ್ಕ್ರೀನ್ ಕ್ರೀಮ್ ಮುಂತಾದವುಗಳನ್ನು ತಂದಿದ್ದನ್ನು ಸಾಮಾನ್ಯವಾಗಿ ನೋಡಬಹುದಿತ್ತು. ಅಲ್ಲಲ್ಲಿ ಟವೆಲ್ಲನ್ನು ಹಾಸಿಕೊಂಡು ಮಲಗಿರುವವರ ಕಾಲುಗಳು ಟವೆಲ್ಲಿಂದ ಬೇಕಾದಷ್ಟು ಹೊರಗೆ ಚಾಚಿಕೊಂಡಿದ್ದವು. ಹಾಸಿಗೆಯಿದ್ದಷ್ಟೇ ಕಾಲು ಚಾಚು - ಎನ್ನುವುದು ನಮ್ಮೂರಿನ ನುಡಿಕಟ್ಟಾದ್ದರಿಂದ ಅದು ಇಲ್ಲಿ ಅನ್ವಯಿಸುವುದಿಲ್ಲವೋ ಏನೋ? ಎಲ್ಲ ದೇಶಗಳ ಹಾಗೆ ಅಮೇರಿಕವೂ ಸಾಲದ ಮೇಲೇ ಇದೆ, ಇಲ್ಲಿನ ಕಾರ್ಪೋರೇಷನ್ನುಗಳೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯೆಲ್ಲವೂ ಸಾಲದ ಮೇಲೇ ನಿಂತಿದೆ, ಇಂತಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂದರೆ ಹಾಸ್ಯಾಸ್ಪದವೆನಿಸುವುದಿಲ್ಲವೇ?

’ನಾವು ಯಾವತ್ತೂ ಸಾಲವನ್ನು ಮಾಡಬಾರದು...’ ಎಂದು ದುಡಿಮೆಯ ದುಡ್ಡನ್ನೇ ನಂಬಿಕೊಂಡ ಗವರ್ನಮೆಂಟ್ ನೌಕರ ನನ್ನ ಅಜ್ಜ, ಕೊನೆಯವರೆಗೂ ಸಂಸಾರವನ್ನು ನಡೆಸುವುದಕ್ಕೆ ಬಹಳಷ್ಟು ಶ್ರಮಿಸಿದ್ದರು, ಕಷ್ಟದ ಸಮಯದಲ್ಲಿ ಮನೆಯಲ್ಲಿದ್ದ ಸಾಮಾನುಗಳನ್ನು, ಆಭರಣಗಳನ್ನು ಮಾರಿಕೊಂಡು ಬದುಕಿದ್ದರೇ ವಿನಾ ಒಂದು ದಮಡಿಯನ್ನೂ ಸಾಲವನ್ನಾಗಿ ತಂದವರಲ್ಲ. ಆದರೆ ಆ ಪರಂಪರೆ ಅವರಷ್ಟರಮಟ್ಟಿಗೆ ಮಾತ್ರ ನಿಂತು ಹೋಯಿತು, ನಾನಾಗಲಿ, ನನ್ನ ಅಪ್ಪನಾಗಲೀ, ಸಹೋದರರಾಗಲೀ ಅಜ್ಜನ ಮನಸ್ಥಿತಿಗೆ ತದ್ವಿರುದ್ದವಾಗಿ ಸಾಲದಲ್ಲೇ ಬೆಳೆದು ಬಂದವರು. ಇವರೆಲ್ಲರ ಯಾದಿಯಲ್ಲಿ ಹೆಚ್ಚಿನ ಸಾಲದ ಬಾಬ್ತು ನನ್ನ ತಲೆಯ ಮೇಲೇ ಇರೋದು ಮತ್ತೊಂದು ವೈಶಿಷ್ಟ್ಯ. ಅರ್ಥಶಾಸ್ತ್ರದ ಬಗ್ಗೆ, ಪ್ರಪಂಚದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡಷ್ಟೂ, ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಹಂತಹಂತವಾಗಿ ಮೇಲೇರಿದಂತೆಲ್ಲ ನನ್ನ ತಲೆಯ ಮೇಲಿನ ಸಾಲದ ಮೊತ್ತ ಮೇಲೇರುತ್ತಿದೆಯೇ ವಿನಾ ಕಡಿಮೆಯಾದದ್ದೇ ಇಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದಾದರೂ ಹೇಗೆ? ಅಕಸ್ಮಾತ್ ಕಾಲನ್ನು ಹಾಸಿಗೆಗಿಂತ ಮುಂದೆ ಚಾಚಿದರೆ ಏನಾದೀತು? ನಮ್ಮ ಕಾಲುಗಳು, ಅವುಗಳ ಉದ್ದ, ಚಾಚಿಕೊಳ್ಳಬೇಕೆನ್ನುವ ನಿಲುವು ನಮ್ಮ ಸ್ವಂತಿಕೆ ಹಾಗೂ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುವುದಾದರೆ ’ಇಷ್ಟಕ್ಕೇ ಇರಲಿ!’ ಎಂದು ಕಾನೂನನ್ನು ಮಾಡಿದವರಾರು? ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನಸ್ಥಿತಿಯಿಂದ ಕಾಲು ಇದ್ದಷ್ಟು ಮನಸ್ಸು ಬಯಸಿದಷ್ಟು ಹಾಸಿಗೆಯನ್ನು ಚಾಚುವ ಸಮಯಬರೋದು ಯಾವಾಗ? ಅಂತಹ ಸಮಯ ಬಂದರೂ ಆ ರೀತಿ ಕಳೆಯಬಹುದಾದ ಒಂದೆರಡು ಕ್ಷಣಗಳಿಗೋಸ್ಕರ ಜೀವಮಾನವನ್ನೇಕೆ ಮುಡುಪಾಗಿಡಬೇಕು?

ಈ ಪ್ರಶ್ನೆಗಳ ಯಾದಿಯೇ ಇಷ್ಟು - ಅಲೆಗಳ ಥರ, ಒಂದಾದ ಮೇಲೊಂದು ಬಂದು ಅಪ್ಪಳಿಸುತ್ತಲೇ ಇರುತ್ತವೆ, ನೀವು ಯಾವ ನೀರಿನಲ್ಲಿ ಎಷ್ಟೇ ಆಳದಲ್ಲಿ ನಿಂತಿದ್ದರೂ ಈ ಅಲೆಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಸ್ಥಿತಿಗತಿಯಲ್ಲಿಯೂ ಸಾಲದ ಹೊರೆ, ಬರುವ ಸಂಬಳಕ್ಕಾಗಿ ಬಕಪಕ್ಷಿಯಂತೆ ಕಾದುಕೊಂಡಿರುವುದು ಒಂದು ಮಾನಸಿಕ ನೆಲೆಗಟ್ಟು ಅಷ್ಟೇ, ಅದನ್ನು ಮೀರಿ ಮುಂದೆ ಹೋಗುವುದಿದೆಯಲ್ಲಾ ಅದು ಸ್ವಾತ್ಯಂತ್ರ್ಯಕ್ಕಿಂತಲೂ ಹೆಚ್ಚಿನದು. ಸಾಲದ ಜೊತೆಗೆ ಬರುವ ಸ್ವಾತಂತ್ರ್ಯ ಒಂದು ರೀತಿ ಪ್ರಿವಿಲೇಜಿನ ಹಾಗೆ, ಅದು ನಿಜವಾದ ಮುಕ್ತಿಯಲ್ಲ, ಅದೇ ಯಾವುದೇ ಹೊರೆಯಿಲ್ಲದ ಬದುಕು, ಸಾಲವಿಲ್ಲದೇ ಇನ್ನೊಬ್ಬರಿಗೆ ಕೊಡಬೇಕು ಎನ್ನುವ ಕಾಟವಿಲ್ಲದೇ ಇರುವ ಬದುಕು ನಿಜವಾಗಿಯೂ ಸ್ವತಂತ್ರವಾದದ್ದು. ಈ ನಿಜ, ನನ್ನ ಅಜ್ಜ, ಮುತ್ತಜ್ಜರಿಗೆ ಅದ್ಯಾವಾಗಲೋ ಹೊಳೆದು ಹೋಗಿದ್ದರೆ, ನಂತರದ ಸಂತತಿಯ ಪ್ರತೀಕವಾಗಿರುವ ನಾವುಗಳು ಇನ್ನೂ ಸಾಲದ ಕೂಪದಲ್ಲೇ ಬಿದ್ದು ತೊಳಲಾಡುತ್ತಿರುವುದೇಕೋ?

4 comments:

Anonymous said...

ನಮಸ್ಕಾರ ಸತೀಶ್,

ನೀವು ಬರೆದ ಎಲ್ಲಾ ಲೇಖನಗಳು ಒಂದಕ್ಕಿಂತ ಒಂದು ಅತ್ಯುತ್ತಮವಾಗಿ ಮೂಡಿ ಬಂದಿವೆ. ಶ್ರಾವಣ ಮಾಸದ ಮಳೆ, ಹಿಂದೆ ಹಬ್ಬಗಳ ಸರದಿಯ ಸಾಲು, ಎಲ್ಲವನ್ನು ಓದಿದಾಗ ಮತ್ತೆ ಹಬ್ಬಕ್ಕೆ ಹೋಗಿ ಬಂದಷ್ಟು ಖುಷಿ ಆಯಿತು. ಹಾಗೆಯೇ ಎಲ್ಲ ಲೇಖನಗಳು ಸಹ ಒಂದೊಂದು ವಿಭಿನ್ನ ರೀತಿಯಲ್ಲಿ ಚೆನ್ನಾಗಿ ಬರೆದಿದ್ದೀರಿ. ಈ ಎಲ್ಲಾ ಲೇಖನಗಳನ್ನು ಓದಿದ ಮೇಲೆ ನನಗೆ ಅನ್ನಿಸಿದ್ದೇನೆಂದರೆ, ನಿಮ್ಮಲ್ಲಿ ಒಬ್ಬ ಕಥೆಗಾರನಿದ್ದಾನೆ. ನಿಮ್ಮ ಎಲ್ಲಾ ಕಲ್ಪನೆ, ದಿನಚರಿ, ಹೀಗೆ ಎಲ್ಲವನ್ನು ಸೇರಿಸಿ
ಬರೆದ ಒಂದು ಕಥಾಗುಚ್ಚವನ್ನು ಪುಸ್ತಕದ ಮೂಲಕ ಹೊರಹೊಮ್ಮಿದರೆ ಇನ್ನೂ ಚೆನ್ನಾಗಿರುತ್ತದೆ.

ಮೇದಿನಿ

Satish said...

ನಮಸ್ಕಾರ ಮೇದಿನಿ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಶ್ರಾವಣವನ್ನು ಕುರಿತ ಬರಹ ನಿಮಗೊಂದಿಷ್ಟು ಹಬ್ಬದ ವಾತಾವರಣವನ್ನು ನೆನಪಿಗೆ ತಂದುಕೊಟ್ಟಿದ್ದರೆ ನನ್ನ ಶ್ರಮ ಸಾರ್ಥಕ.

ಈ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಬಗ್ಗೆ ಯೋಚಿಸುತ್ತೇನೆ.

Karthik CS said...

ಮೊದಲಿಗೆ ನಮಸ್ಕಾರಗಳು,
ನಿಮ್ಮ ಲೇಖನ ಬಹಳ ಅರ್ಥಪೂರ್ಣವಾಗಿದೆ. ಸಾಲವಿಲ್ಲದೆ ಏನೂ ಮಾಡಲೊಲ್ಲದ ನಮ್ಮಂತಹವರ ಹೃದಯಕ್ಕೆ ಮುಟ್ಟುವ ಹಾಗಿದೆ. ನನ್ನ ಅನುಭವವೂ ಅಷ್ಟೆ, ಸಾಲದಿಂದ ತತ್ತರಿಸುತ್ತೇವೆಯೇ ಹೊರತು, ನೆಮ್ಮದಿಯಿಂದ ಜೀವನ ಮಾಡುವುದಿಲ್ಲ.

"ಹಾಸಿಗೆಗಿಂತ ಕಾಲು ಚಾಚು; ಆದರೆ, ಇಡೀ ಮಯ್ಯೇ ನೆಲದ ಮೇಲೆ ಬರುವ ಹಾಗಲ್ಲ"

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service