ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ...
ಸಾಯಂಕಾಲ ನಮ್ಮ ಟೌನ್‌ಶಿಪ್ಪ್‌ನಲ್ಲ್ ನಡೆಯೋ ವರ್ಷಾವಧಿ ಕಾರ್ನಿವಲ್ಲ್‌ಗೆ ಕರಕೊಂಡ್ ಹೋಗ್ತೀನಿ ಅಂತ ಬೆಳಿಗ್ಗೆ ಹೊರಡ್ ಬೇಕಾದ್ರೆ ನೆನಪಿಸಿದ್ದೂ ಅಲ್ದೇ ಮಧ್ಯಾಹ್ನ ಫೋನ್ ಮಾಡಿ ಹೇಳಿದ್ದರಿಂದ ಸುಬ್ಬ ರೆಡಿ ಆಗಿ ಕೂತಿರ್ತಾನೆ, ಒಂದು ಕಾಫೀನೋ ತಿಂಡೀನೋ ಮಾಡಿಕೊಂಡು ಎಂದು ಆಲೋಚಿಸಿಕೊಂಡು ಬಂದ ನನಗೆ ಸೋಫಾದ ಮೇಲೆ ಕುಳಿತ ಸುಬ್ಬನನ್ನು ನೋಡಿ ಸಂಪತ್ತಿಗೆ ಸವಾಲಿನ ವಜ್ರಮುನಿಯ ನೆನಪಾಯಿತು.
'ಲೋ, ರೆಡೀನಾ, ಅಲ್ಲಿ ಪಾರ್ಕಿಂಗ್ ಸಿಗೋದಿಲ್ಲ ಜಲ್ದೀ ಹೋಗ್ಬೇಕು - ನಾನು ಎದ್ನೋ ಬಿದ್ನೋ ಅಂತ ಬಂದ್ರೆ ಇನ್ನೂ ಹಾಳ್ ಮುಖಕ್ಕೆ ನೀರೂ ತೋರಿಸ್ದೇ ಕುತಗಂಡ್ ಇದ್ದೀಯಲ್ಲೋ?' ಎಂದು ಕಿಚಾಯಿಸಿದೆ, ನನ್ ಮಾತಿಗೆ ಉತ್ರ ಕೊಡೋ ಹಾಗೆ ಬಾಯಿ ತೆರದವನು 'ಅದ್ಯಾವ್ ಸೀಮೇ ಡಬ್ಬಾ ಇಸ್ತ್ರೀ ಪೆಟ್ಟಿಗೆ ಇಟ್ಟ್ಕೊಂಡಿದ್ದೀಯೋ...' ಒಮ್ಮೆ ಉಗುಳು ನುಂಗಿ, 'ನನ್ ಜೀನ್ಸ್ ಪ್ಯಾಂಟ್ ಮೇಲೆ ಇಡತಿದ್ದ ಹಾಗೇನೇ ಸುಟ್ಟು ಹೋಯ್ತು' ಎಂದು ಸಮಜಾಯಿಷಿ ಕೊಡಲು ನೋಡಿದನೋ ಆಗಲೇ ನನಗೆ ತಿಳಿದದ್ದು ಏನೋ ಎಡವಟ್ಟು ಆಗಿರಲೇ ಬೇಕು ಎಂದು.
'ನಿಜವಾಗೀ? ಸುಟ್ಟೇ ಹೋಯ್ತಾ...ಎಷ್ಟೋ ವರ್ಷದಿಂದ ಇಟ್ಟ್‌ಕೊಂಡಿದ್ದನಲ್ಲೋ...' ಎಂದು ನಾನು ಸುಟ್ಟು ಹೋದ ಐರನ್ ಬಾಕ್ಸ್ ಗತಿ ಕಂಡು ಮರುಕ ಪಡುತ್ತಿದ್ದರೆ, ಹಲ್ಲಿ ಮೇಲೆ ಆಕ್ರಮಣ ಮಾಡಿ ಬಾಲದ ತುಂಡಿನ ಜೊತೆ ಆಟವಾಡ್ತಾ ಇರೋ ಬೆಕ್ಕಿನ ಮರಿಯಂತೆ ಇವನ ಮುಖದ ಮೇಲೆ ಮಂದ ಹಾಸ ಸುಳಿಯತೊಡಗಿತು.
'ಅದ್ಕೇ ಅನ್ನೋದು ಅಮೇರಿಕದ ಪ್ರಾಡಕ್ಟ್‌ಗಳೆಲ್ಲಾ ಸರಿ ಇಲ್ಲಾ ಅನ್ನೋದು...'
'ಆಞ್, ನಿನಗೇನು ತಲೆಗಿಲೆ ಕೆಟ್ಟಿದಿಯೇನು?'
'ಮತ್ತೇನು, ಒಂದು ಇಪ್ಪತ್ ಡಾಲರ್ ಬಿಸಾಕಿ ನಿನ್ನಂಥಾ ಜುಜುಬಿ ನನ್ ಮಕ್ಳು ಇಸ್ತ್ರೀ ಪೆಟ್ಗೇ ತಗಂಡು ಅದನ್ನ ವರ್ಷಗಳ ಮಟ್ಟಿಗೆ ಬಳಸಿ ಬಾಳುಸ್ತಾ ಕುತಗಂಬಿಟ್ರೆ?' ಎಂದು ಅವನದ್ದೇ ಒಂದು ಭಾಷೆ, ತಾರ್ಕಿಕತೆಯಲ್ಲಿ ಸವಾಲನ್ನೊಡ್ಡಿದ, ನನ್ನ ಪರಿಸ್ಥಿತಿ ಮುಕ್ಕಾಲು ಘಂಟೇಯಿಂದ ಸಿಟಿಬಸ್ಸು ಕಾದು ಕುಳಿತ ಮಾರವಾಡಿ ಹುಡುಗ ಕೊನೆಗೂ ಬಂದ ಬಸ್ಸಿನ ಕನ್ನಡ ಅಂಕೆಗಳನ್ನು ಓದೋಕೆ ತಡವರಿಸೋರ ಥರ ಆಗಿತ್ತು.
'ಒಂದ್ ಸಾಮಾನ್ ತಗೊಂಡ್ರೆ ಅದು ಬಾಳಾ ದಿನಗಳವರೆಗೆ ಬಾಳಕೆ ಬರಲೀ ಅನ್ನೋದು ಲೋಕರೂಢಿ, ನಿನ್ನ ತಲೆ ಒಳಗೆ ಇನ್ನೇನಾದ್ರೂ ಇದ್ರೆ ಅದನ್ನು ದಯವಿಟ್ಟು ಬಿಡಿಸಿ ಹೇಳುವಂತವನಾಗು' ಎಂದೆ ನಾಟಕೀಯವಾಗಿ, ಅಲ್ಲಿ ನೋಡಿದ್ರೆ ಆಫೀಸ್ನಲ್ಲಿ ತಲೆ ತಿಂತಾರೆ, ಇಲ್ಲಿ ನೋಡಿದ್ರೆ ಇವನ್ದು ಬೇರೆ ಕೇಡಿಗೆ...ಎಂದು ಸ್ವಗತದಲ್ಲಿ ಹೇಳಿಕೊಳ್ಳುವವನಂತೆ.
'ನಿನಗೆ ಇಂಥವನ್ನೆಲ್ಲ ನನ್ನಂಥೋರ್ ಹೇಳ್ಕೊಡಬೇಕಾ? ನೋಡು, ನಮ್ ದೇಶದಲ್ಲಿ ಒಂದ್ ಸಾಮಾನ್ ತಗೊಂಡ್ರೆ, ಉದಾಹರಣೆಗೆ ಇಸ್ತ್ರೀ ಪೆಟ್ಗೇ ಅಂತಾನೇ ಇಟ್ಕೋ, ಅದು ವರ್ಷಕ್ಕೊಂದ್ ಸಾರೀನಾದ್ರೂ ಸುಟ್ಟ್ ಹೋಗುತ್ತೆ, ಅದರಿಂದ ದೇಶಕ್ಕೆ ಒಳ್ಳೇದೇ ಅಲ್ವೇ? ಯಾಕೇ ಅಂದ್ರೆ, ಹೀಗೆ ತಗೊಂಡ್ ಸಾಮಾನುಗಳು ಸುಟ್ಟು ಹೋಗೋದ್ರಿಂದ ಉತ್ಪತ್ತಿ ಹೆಚ್ಚುತ್ತೆ, ಅದರ ಪಾರ್ಟ್ಸು, ಸ್ಪೇರೂ ಅಂತ ಇನ್ನೊಂದಿಷ್ಟು ಬಿಸಿನೆಸ್ಸ್ ಬೆಳೆಯುತ್ತೆ, ಸರ್ವೀಸ್ ಸೆಂಟರುಗಳು ಹೆಚ್ಚುತ್ತೆ, ನಾಲ್ಕು ಜನಕ್ಕೆ ಕೆಲ್ಸಾ ಸಿಗುತ್ತೆ...ಅದನ್ನು ಬಿಟ್ಟು ಇಲ್ಲೀ ಥರ ಒಂದ್ಸರ್ತಿ ತಗೊಂಡ್ ಸಾಮಾನು ಹತ್ತು ವರ್ಷಾ ಬಂತು ಅಂತಂದ್ರೆ ಆ ಕಂಪನಿ ಬೆಳೆಯೋದ್ ಹೇಗೆ?' ಎಂದು ದೊಡ್ಡ ಸಾಮ್ರಾಜ್ಯವನ್ನು ಜಯಿಸಿದ ಸಾಮ್ರಾಟನ ನಗೆ ನಕ್ಕ.
'ಓಹೋ, ಹೀಗೋ...ವರ್ಷಾ ವರ್ಷಾ ತಗೊಂಡಿದ್ನೇ ತಗೊಳಕ್ಕೆ ದುಡ್ಡ್ ಯಾವಾನ್ ಕೊಡ್ತಾನೆ?' ನನ್ನ ಕುಹಕದ ಪ್ರಶ್ನೆ.
'ಅದೋ, ಬಾಳಾ ಸುಲ್ಬಾ, ಅಗತ್ಯ ವಸ್ತುವಿನ್ ಮೇಲೆ ಜನ ಖರ್ಚ್ ಮಾಡೋದ್ರಿಂದ ಅವರಲ್ಲಿರೋ ದುಡ್ಡ್ ಕಡಿಮೆಯಾಗಿ, ಕೆಟ್ಟ್ ಚಟಾ ಯಾವ್ದೂ ಬೆಳಸ್ಕೊಳ್ಳಿಕ್ಕೆ ಆಸ್ಪದಾನೇ ಇಲ್ಲಾ ನೋಡು!'
'ನೀನೋ ನಿನ್ ಲಾಜಿಕ್ಕೋ...ಒಂದ್ ಕೆಲ್ಸಾ ಮಾಡು, ಇಲ್ಲಿರೋ ಸಾಮಾನ್‌ಗಳನ್ನೆಲ್ಲಾ ಒಂದು ಸುತ್ಗೆ ತಗೊಂಡು ಕುಟಕೋಂತ ಬಾ...ಇಷ್ಟು ದಿನಾ ಚೆನ್ನಾಗ್ ಕೆಲ್ಸಾ ಮಾಡಿರೋ ಐರನ್ ಬಾಕ್ಸು ನೀನ್ ಕೈ ಹಾಕಿದ್ ಕೂಡ್ಲೇ ಕೈ ಕೊಡ್ತು ನೋಡು...ಏನು ಕೆಟ್ಟ ಕೈ ನೋಡು ನಿನ್ದು...ಅಲ್ಲಾದ್ರೆ ವೋಲ್ಟೇಜ್ ಏರುಪೇರು ಅಂತಾನಾದ್ರೂ ಅಂದು ಇನ್ನೊಬ್ರ ಕಡೇ ಬೆಟ್ಟ್ ಮಾಡಿ ತೋರಿಸ್‌ಬೋದಿತ್ತು, ಇಲ್ಲಿ ಬೇರೆ ಯಾರ್ದೂ ತಪ್ಪಿಲ್ಲ, ನಿನ್ದೇ, ಯೂಸರ್ ಎರರ್' ಎಂದಕೂಡ್ಲೇ ಶತಕವಂಚಿತ ತೆಂಡೂಲ್ಕರ್ ಪೆವಿಲಿಯನ್ ಕಡೆಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಿರುವಾಗ ಮಾಡಿಕೊಂಡ ಮುಖದ ಹಾಗೆ ಸುಬ್ಬನ ಮುಖದಲ್ಲಿನ ನಗು ಮಾಯವಾಗಿ ಅದರ ಬದಲಿಗೆ ಒಂದು ಗಡಿಗೆಯ ಮುಖಕ್ಕೆ ಕಣ್ಣು, ಮೂಗು, ಕಿವಿ ಬರೆದು ಬೋರಲಾಗಿ ಹಾಕಿದ ಹಾಗೆ ಕಾಣತೊಡಗಿತು.
'ಈಗ ಯಾವನ್ದಾರ್ರೂ ತಪ್ಪಿರ್ಲಿ, ನನ್ನ್ ಪ್ಯಾಂಟು ಅರ್ಧ ಇಸ್ತ್ರೀ ಆಗಿರೋದ್ರಿಂದ ನಾನು ಜೀನ್ಸ್‌ನ ಹಂಗೇ ಹಾಕ್ಕೊಂಡು ಬರ್ತೀನಿ, ದಾರಿಯಲ್ಲಿ ಯಾವನಾದ್ರೂ ಪರಿಚಯ ಮಾಡ್ಸಿ, ಬರೀ ಪ್ಯಾಂಟಿನ ಒಂದೇ ಕಾಲನ್ನು ಇಸ್ತ್ರೀ ಮಾಡಿ ಹಾಕ್ಕೊಳೋದೇ ಇವನ ಅಭ್ಯಾಸ ಅಂತ ಮತ್ತೆಲ್ಲಾದ್ರೂ ಅಪಹಾಸ್ಯ ಮಾಡಿದ್ರೆ ನೋಡ್ಕೋ ಮತ್ತೆ' ಎಂದು ಅಡ್ವಾನ್ಸ್ ವಾರ್ನಿಂಗ್ ಕೊಟ್ಟ. ಬಚ್ಚಲುಮನೆಯ ಕಡೆಗೆ ಮುಖ ತೊಳೆಯಲು ಹೋಗುತ್ತೇನೆ ಎಂದು ಸನ್ನೆ ಮಾಡಿ ಹೋಗುತ್ತಿರುವಾಗ - 'ಹೊಸ ಇಸ್ತ್ರೀ ಪೆಟ್ಗೇ ತರಬೇಕಾದ್ರೆ ಎರಡನ್ನ್ ತರೋದ್ ಮರೀಬೇಡಾ, ನಾನೂ ಒಂದ್ ತಗೊಂಡ್ ಹೋಗ್ತೀನಿ, ವೋಲ್ಟೇಜ್ ನೋಡ್ಕೊಂಡ್ ತರಬೇಕಷ್ಟೇ...' ಎಂದು ಹೊಸ ಬೇಡಿಕೆಯೊಂದನ್ನು ಮಂಡಿಸಿದ.
ಕಾರ್ನಿವಲ್‌ಗೆ ಹೋದಾಗ ಅದಾಗಲೇ ಬಹಳಷ್ಟು ಜನರು ಬಂದಿದ್ದರಿಂದ ಎಲ್ಲಿ ಬೇಕೋ ಅಲ್ಲಿ ಪಾರ್ಕಿಂಗ್ ಸಿಗದಿದ್ದುದರಿಂದ ದೂರದಲ್ಲಿ ಪಾರ್ಕ್ ಮಾಡಿ ಸ್ವಲ್ಪ ನಿಧಾನವಾಗಿ ಜಾತ್ರೆಗೆ ಬರುವಂತಾಯಿತು. ಅಲ್ಲಲ್ಲಿ ಇನ್ನೂ ಚುಮುಚುಮು ಬೆಳಕಿನಿಂದಲೂ ಹುಣ್ಣಿಮೆಯ ನಂತರದ ದಿನವಾದ್ದರಿಂದ ತಿಳಿಮುಗಿಲಲ್ಲಿ ಅದೀಗ ತಾನೇ ಊಟಮಾಡಿ ತೊಳೆದಿಟ್ಟ ಸ್ಟೀಲ್ ತಟ್ಟೆಯಂತೆ ಹೊಳೆಯುತ್ತಿದ್ದ ಚಂದ್ರನಿಂದಲೂ ಜಾತ್ರೆಗೆ ಮತ್ತಷ್ಟು ಮೆರುಗುಬಂದಿತ್ತು. ಅದು ಆಡ್ತೀಯಾ, ಇದು ಆಡ್ತೀಯಾ ಎಂದು ಏನೇನೆಲ್ಲವನ್ನು ತೋರಿಸಿದರೂ ಸುಬ್ಬ ಯಾವುದರಲ್ಲೂ ಆಸಕ್ತಿಯನ್ನು ತೋರಿಸುವವನಂತೆ ಕಂಡುಬರಲಿಲ್ಲ. ಕಾಟನ್ ಕ್ಯಾಂಡಿ ತರತೀನಿ ತಡಿ ಎಂದು ಹೋದವನು ಭಾಳಾ ಜನ ಇದಾರೆ ಲೈನ್‌ನಲ್ಲಿ ಎಂದು ಬರಿ ಕೈಲಿ ಹಿಂತಿರುಗಿ ಬಂದಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. ಇನ್ನು ಐದು ನಿಮಿಷಗಳಲ್ಲಿ ಫೈರ್‌ವರ್ಕ್ಸ್ ಆರಂಭವಾಗುತ್ತದೆ ಎಂದು ಧ್ವನಿವರ್ಧಕದಲ್ಲಿ ಬಂದ ಶಬ್ದ ಪುರಾಣ ಕಾಲದ ಅಶರೀರವಾಣಿಯನ್ನು ನೆನಪಿಗೆ ತಂದಿತ್ತು.
ಪಾರ್ಕ್‌ನ ಯಾವುದೋ ಒಂದು ಮೂಲೆಯಲ್ಲಿ ಫೈರ್‌ವರ್ಕ್ಸ್ ಕಾಣುವುದೋ ಇಲ್ಲವೋ ಎಂಬ ಅನುಮಾನದಲ್ಲೇ ಕುಳಿತ ನಮಗೆ ಇನ್ನೂರು ಅಡಿಗಳಷ್ಟು ದೂರದಲ್ಲಿ ಸ್ವಚ್ಚಂದ ನಭದಲ್ಲಿ ಶಬ್ದಮಾಡಿಕೊಂಡು ಹಾರಿ ಥರಥರನ ರಂಗು ಮೂಡಿಸಿ ಮರೆಯಾಗುತ್ತಿದ್ದ ಪಟಾಕಿ, ಬಾಣಬಿರುಸುಗಳು ಸಾಕಷ್ಟು ಮುದನೀಡತೊಡಗಿದವು.
'there goes your tax dollar...' ಎಂದು ಸುಬ್ಬನ ಧ್ವನಿ ಗುಹೆಯೊಳಗಿನಿಂದ ಬಂದಂತೆ ಕೇಳಿಸಿತು, ಮೊದಲ ಎರಡು ನಿಮಿಷ ಸುಂದರವಾದ ಬಣ್ಣ ಬಣ್ಣದ ಪಟಾಕಿಯ ವೈವಿಧ್ಯಗಳನ್ನು ನೋಡಿ ಹೇಳಿದ ಕಾಮೆಂಟ್ ಅದಾಗಿತ್ತು.
ನಾನು, 'ಬರೀ ಬಣ್ಣಗಳನ್ನು ಮಾತ್ರ ನೋಡ್ಬೇಡಾ, ಆ ಪಟಾಕಿ ಹತ್ತಿ ಹಾರಿ ಸಿಡಿಯುವಾಗ ಬಣ್ಣದ ಹಿಂದಿನ ಹೊಗೆಯ ವಿನ್ಯಾಸವನ್ನೂ ನೋಡು' ಎಂದೆ.
'ಹೌದಲ್ವಾ, ಬರೀ ನಿನ್ನ್ ಟ್ಯಾಕ್ಸ್ ಡಾಲರ್ ಅಷ್ಟೇ ಅಲ್ಲ, ಒಂದ್ ರೀತಿ ಗ್ಲೋಬಲ್ ಪೊಲ್ಲ್ಯೂಷನ್ ಇದ್ದ ಹಾಗೆ ಇದು, ಇಂಥವನ್ನೆಲ್ಲ ಬ್ಯಾನ್ ಮಾಡ್ಬೇಕು' ಎಂದು ಸುಬ್ಬ ಹತ್ತು ವರ್ಷದಿಂದ ವಿಚಾರಣೆಗೆ ಒಳಪಟ್ಟ ಖೈದಿಗೆ ಮರಣದಂಡನೆ ವಿಧಿಸುವ ನ್ಯಾಯಾಧೀಶನಂತೆ ಹೇಳಿದ.
ಸ್ವಲ್ಪ ಚುಚ್ಚೋಣವೆಂದುಕೊಂಡು ನಾನು, 'ಹೌದು, ಅದೆಲ್ಲಾ ಹೊಟ್ಟೆಗೆ ಹಿಟ್ಟ್ ಇಲ್ದಿರೋ ಬಡ ದೇಶದೋರು ಹೇಳೋ ಮಾತು' ಎಂದೆ.
ಸುಬ್ಬ ತನಗೆ ನೋವಾದರೂ ತೋರಿಸಿಕೊಳ್ಳದೇ, 'ಒಂದ್ ಹೊಸ ಐಡಿಯಾ ಬಂತು! ಎಂದ.
ಟಾಪಿಕ್ ಏನಾದ್ರೂ ಬದಲಾಯಿಸ್ತಾನೋ ಎಂದು ಕುಹಕ ಯೋಚನೆ ನನ್ನ ತಲೆಯಲ್ಲಿ ಒಂದು ಕ್ಷಣದ ಮಟ್ಟಿಗೆ ಬಂದರೂ, ಇರಲಿ ನೋಡೋಣವೆಂದುಕೊಂಡು, 'ಏನಪ್ಪಾ ಅಂತಾ ಮಹಾ ಐಡಿಯಾ?' ಎಂದೆ.
'ಏನಿಲ್ಲ, ನಿನ್ನಂಥ ಘನಂದಾರೀ ತಲೇ ಇರೋ ಬೃಹಸ್ಪತಿಗಳನ್ನ ಒಂದೇ ಈ ಉಪಗ್ರಹ ಉಡಾವಣೇ ಮಾಡ್ತಾರಲ್ಲ, ಆಗ ಅವುಗಳಿಗೆ ಕಟ್ಟಿ ಹಾರಿಸ್‌ಬೇಕು, ಇಲ್ಲಾ ಈ ಪಟಾಕಿಗಳಿಗಾದ್ರೂ ಕಟ್ಟಿ ಬಿಟ್ಟು ಸುಮ್ನೇ ಹಾರಿಸಿ ಯಾವ್ದಾದ್ರೂ ಲೋಕಾ ಸೇರಿಸ್‌ಬೇಕು ನೋಡು' ಎಂದ. ಇವನೇನಪ್ಪಾ ಬಯ್ಯೋಕ್ ಶುರು ಹಚ್ಕೊಂಡ್ನಲ್ಲಾ ಎಂದು ಯೋಚಿಸ್ತಿದ್ದ ನನ್ನನ್ನು ತಡೆದು, 'ಹೊಟ್ಟೆಗೆ ಹಿಟ್ಟಿಲ್ದಿರೋರು ಯಾವತ್ತೂ ವೇದಾಂತ ನುಡಿಯಲ್ಲ ತಿಳಕೋ!' ಎಂದು ಹೇಳಿ ಬಾಯಿ ಹೊಲಿಸಿಕೊಂಡವನಂತೆ ಸುಮ್ಮನಾಗಿ ಅದ್ಯಾವುದೋ ಪಥವನ್ನು ಹುಡುಕಿ ಮೇಲೆ ಹಾರುತ್ತಿದ್ದ ಪಟಾಕಿ ರಾಕೇಟುಗಳನ್ನು ನೋಡೋದರಲ್ಲಿ ತಲ್ಲೀನನಾಗಿ ಹೋದ, ನಾನು ನನ್ನ ಪ್ರಪಂಚದಲ್ಲಿ ಮುಳುಗಿಕೊಂಡೆ.