ಅಕ್ಕಿ ಆರಿಸುವಾಗ...
ಕವಿ: ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ ಮತ್ತು ಗಾಯನ: ಸಿ. ಅಶ್ವಥ್
ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಮನಸ್ಸಿಗೆ ಹಿಡಿಸುವ ಕವನಗಳಲ್ಲಿ ಇದೂ ಒಂದು. ಈ ಹಾಡನ್ನು ಸುಗಮ ಸಂಗೀತಕ್ಕೆ ಒಳಪಡಿಸಿದ ಸಿ. ಅಶ್ವಥ್ ಅವರು ಒಂದು ಬಡತನದ ವಾತಾವರಣದಲ್ಲಿ ಬೆಳೆದು ನಿಂತ ಹೆಣ್ಣುಮಗಳ ಮನದಾಳವನ್ನು ವಿಷದ ಪಡಿಸುವಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಖಂಡಿತವಾಗಿ ಹೇಳಬಹುದು. ಹೆಣ್ಣಿನ ಅಂತರಾಳದ ಒಳತೋಟಿಯನ್ನು ಹೊರಹೊಮ್ಮಿಸುವ ಗಾಯನಕ್ಕೆ ಗಂಡು ಧ್ವನಿ ಎಷ್ಟು ಹೊಂದೀತು ಎಂಬ ಪ್ರಶ್ನೆ ಪಲ್ಲವಿಯಲ್ಲಿ ನಮ್ಮ ಮನಸ್ಸಿನಲ್ಲಿ ಉದ್ಭಸಿದರೂ, ಹಾಡು ಮುಂದುವರಿದತೆಲ್ಲ ಅಶ್ವಥ್ ಅವರ ಗಾಯನ ಹೆಣ್ಣಿನ ನಿರ್ಲಿಪ್ತತೆಯನ್ನು ವರ್ಣಿಸುವುದರ ಮೂಲಕ ನಿರಾಯಾಸವಾಗಿ ಕೇಳುಗರನ್ನು ಕಟ್ಟಿ ಹಾಕುತ್ತದೆ. ಇದು ಈ ಹಾಡಿನ ಮಹತ್ವದ ಅಂಶ ಎಂದರೆ ತಪ್ಪಾಗಲಾರದು.
ಹಾಡಿನ ಮೊದಲಿಗೆ ಕೆಲವು ಕ್ಷಣಗಳ ಕಾಲ ಕೇಳಿಸುವ ದನಕರುಗಳ ಕೂಗು, ಒಂದು ಕೊಟ್ಟಿಗೆಯ ಪರಿಸರವನ್ನು ಕೇಳುಗರಿಗೆ ಕಟ್ಟಿಕೊಡುತ್ತದೆ. ನಿಧಾನವಾಗಿ ಒಂದು ಸರಳ ಸಂಭ್ರಮವನ್ನು ಸೂಚಿಸುವಂತೆ ಆರಂಭವಾಗುವ ಕೊಳಲಿನ ಧ್ವನಿ, ನಂತರ ಮುಂಬರುವ ವಯಲಿನ್‌ಗಳ ಮೊರೆತಕ್ಕೆ ಸೋತು ಹೋಗುವುದಕ್ಕೆ ಮೊದಲು ಭಾರವಾದಂತೆನಿಸಿ, ಈ ಹಾಡಿಗೆ ಒಂದು ಗಟ್ಟಿಯಾದ ತಳಹದಿಯನ್ನು ಒದಗಿಸುತ್ತದೆ.
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು
ಇತ್ತೀಚಿನ ಕಾಲದಲ್ಲಿ ಅಕ್ಕಿಯನ್ನು ಜನರು ಜರಡಿಯಾಡಿ, ಮೊರದಲ್ಲಿ ಆರಿಸುತ್ತಾರೋ ಇಲ್ಲವೋ, ಆದರೆ ಆಗಿನ ಕಾಲದ ಒಂದು ಹಳ್ಳಿಯ ಪರಿಸರದಲ್ಲಿ ಮೊರದಲ್ಲಿ ಅಕ್ಕಿಯನ್ನು ಗೇರಿ ಅಥವಾ ಜರಡಿ ಹಿಡಿದು, ನುಚ್ಚು ಮತ್ತು ಕಲ್ಲುಗಳನ್ನು ಬೇರ್ಪಡಿಸುವ ಕೆಲಸ ಪ್ರತಿನಿತ್ಯವೂ ನಮ್ಮ ಹೆಣ್ಣು ಮಕ್ಕಳು ಮಾಡುವಂಥದಾಗಿತ್ತು. ಕವಿ ಈ ಹಾಡಿನಲ್ಲಿ ಬರೆದಂತೆ "ಅಕ್ಕಿ ಆರಿಸುವುದು" ಒಂದು ವಿಶೇಷ ಸೂಚಕ. ಏಕೆಂದರೆ ಅಕ್ಕಿಯ ನಡುವೆ ಸಿಕ್ಕುವ ಕಲ್ಲು, ನುಚ್ಚನ್ನು ಆರಿಸುವ ಕೆಲಸಕ್ಕೂ ನಾವು "ಅಕ್ಕಿ ಆರಿಸುವುದು" ಎಂದೇ ಹೇಳುವುದು ಸಾಮಾನ್ಯ. ಒಂದು ರೀತಿಯಲ್ಲಿ ಅಮೇರಿಕದಲ್ಲಿ ನಾವೆಲ್ಲ "hot water heater" ಎಂದು ಹೇಳುತ್ತೇವಲ್ಲ ಹಾಗೆ, ನಾವು ನಿಜವಾಗಿಯೂ cold water ಅನ್ನು heat ಮಾಡುತ್ತಿದ್ದರೂ, ಅದನ್ನು "hot water heater" ಎಂದೇ ಕರೆಯುತ್ತೇವೆ! ಭತ್ತವನ್ನು ತೆಗೆದುಕೊಂಡು ಹೋಗಿ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ, ಅಕ್ಕಿಗೆ ಪಾಲೀಷ್ ಕೊಟ್ಟ ಮೇಲೆ ನುಚ್ಚು ಉತ್ಪಾದನೆ ಆಗುವುದು ಸಹಜ. ಆದರೆ ಮಾಡಿದ ಅನ್ನ ಬಿಡಿ ಬಿಡಿಯಾಗಿ, ಉದುರಾಗಿ ಇರಬೇಕು ಎನ್ನುವುದಾದರೆ ಅದರಲ್ಲಿ ನುಚ್ಚು ಇರಬಾರದು. ಅದು ಎಂಥಾ ನುಚ್ಚು? "ಚಿಕ್ಕ ನುಚ್ಚು", ಅದನ್ನು ಆರಿಸಿ, ಜೊತೆಗೆ ಕಲ್ಲನ್ನೆಲ್ಲ ಹೆಕ್ಕಿದ ಮೇಲೆ ಉಳಿದ ಬರೀ ಅಕ್ಕಿಯನ್ನು ಮಾತ್ರ ಅನ್ನ ಮತ್ತಿನ್ನ್ಯಾವುದೋ ಅಡುಗೆಗೆ ಬಳಸೋದು ವಾಡಿಕೆ. ಇಂಥಾ ಚಿಕ್ಕ ನುಚ್ಚಿನ ನಡುವೆ ಹೋರಾಟಕ್ಕೆ ಇರುವುವು "ಬಂಗಾರವಿಲ್ಲದ ಬೆರಳು"ಗಳು. ಕವಿ ಬಂಗಾರವಿಲ್ಲದ ಬೆರಳು ಎನ್ನುವಾಗ ಅದೇ ಹಳ್ಳಿಯ ಪರಿಸರದ ಲೇಪಕ್ಕೆ ಮತ್ತೆ ಬಡತನದ ವಾತಾವರಣದ ಕಳೆಯನ್ನು ಕಟ್ಟುತ್ತಾರೆ. ಎಷ್ಟೇ ಶ್ರೀಮಂತರಿದ್ದರೂ, ಅಕ್ಕಿ ಆರಿಸುವಾಗ ಅಂದರೆ ಮನೆ ಕೆಲಸ ಮಾಡುವಾಗ ಬಂಗಾರ ಧರಿಸುವುದು ಸಹಜವಲ್ಲ. ಒಂದು ವೇಳೆ ಮನೆಯಲ್ಲಿದ್ದಾಗಲೂ ಬಂಗಾರವನ್ನು ಧರಿಸಿಯೇ ಇರುತ್ತಾರೆಂದರೆ ಅವರು ಬಡತನದ ವಾತಾವರಣವನ್ನು ಮೀರಿದವರಾಗಿರುತ್ತಾರೆ ಎನ್ನುವುದು ವಾಡಿಕೆ. ಇಲ್ಲಿ ಕವಿ ಬಂಗಾರವಿಲ್ಲದ ಬೆರಳನ್ನು (ಬೆರಳುಗಳನ್ನು), ಒಂದು ರೀತಿಯ ದೈನಂದಿನ ಹೋರಾಟದ ಸಿಪಾಯಿಗಳನ್ನಾಗಿ ಬಿಂಬಿಸಿದ್ದಾರೆ. ಹಾಗೂ ಅದೇ ಸಾಲನ್ನು ಸುಗಮ ಸಂಗೀತದ ಗಾಯಕರು ಪ್ರತಿ ಪ್ಯಾರಾದ ನಂತರ ಹಾಡಿ ಅದನ್ನೇ ಒಂದು ಚುಟುಕು ಪಲ್ಲವಿಯನ್ನಾಗಿಸುವುದುರ ಮೂಲಕ ಈ ಸಿಪಾಯಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ಹೊರೆಸಿದಂತೆ ಕಾಣುತ್ತದೆ.
ತಗ್ಗಿರುವ ಕೊರಳಿನ ಸುತ್ತ ಕರಿಮಣಿ ಒಂದೇ
ಸಿಂಗಾರ ಕಾಣದ ಹೆರಳು
ಬಂಗಾರವಿಲ್ಲದ ಬೆರಳೂ|
ಯಾವುದೇ ಭಂಗಿಯಲ್ಲಿ ಕುಳಿತರೂ ಮೊರದಲ್ಲಿ ಅಕ್ಕಿಯನ್ನು ಆರಿಸುವಾಗ ಕೊರಳು ತಗ್ಗಿರುತ್ತದೆ. ಅಂತಹ ಕೊರಳಿನ ಸುತ್ತ ಕರಿಮಣಿ ಒಂದೇ ಇರುವುದು ಮತ್ತ್ಯಾವ ಬಂಗಾರದ ಆಭರಣಗಳೂ ಇಲ್ಲದಿರುವುದನ್ನು ಸೂಚಿಸಿ ಮತ್ತೆ ಬಡತನದ ವಾತಾವರಣದ ಪ್ರತಿಮೆಯನ್ನು ಕೇಳುಗರ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಕರಿಮಣಿ ಒಂದೆ ಎನ್ನುವುದು ಕರಿಮಣಿ ಸರದ ರೂಪಕ, ಅದರಲ್ಲಿ ಅನೇಕ ಕಪ್ಪು ಮಣಿಗಳಿದ್ದರೂ ಅದನ್ನು ಕರಿಮಣಿ ಎಂದೇ ಕರೆಯುವುದು ರೂಢಿ. ಈ ಬಡತನದ ಚಿತ್ರಣದ ಜೊತೆ ಜೊತೆಗೆ ಸಿಂಗಾರ ಕಾಣದ ಹೆರಳು ಹೊಸತಾಗಿ ಈ ಹೆಣ್ಣಿನ ಅಂತರಂಗದ ಅಭಿವ್ಯಕ್ತಿಯನ್ನು ಸಾಬೀತು ಮಾಡಲು ಪ್ರಯತ್ನಿಸುತ್ತದೆ. ಮನೆಯಲ್ಲೇ ಕೆಲಸದ ನಡುವೆ ಇರುವವರು ಸಾಮಾನ್ಯವಾಗಿ ಹೆರಳನ್ನು ಸಿಂಗರಿಸಿಕೊಳ್ಳದಿದ್ದರೂ ಒಂದಿಷ್ಟು ಮೇಲು ಬಾಚಣಿಕೆಯನ್ನು ಮಾಡಿಕೊಂಡು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ವಾಡಿಕೆ, ಆದರೆ ಇಲ್ಲಿ ಈ ಹೆಣ್ಣಿನ ಅಂಗ-ಭಂಗಿಗಳ ಮೂಲಕ ಮನದಾಳದಲ್ಲಿ ಹುದುಗಿದ ಅವ್ಯಕ್ತ ಯಾತನೆ ಅಥವಾ ತವಕವನ್ನು ಹೊರಕಾಕುವ ಕವಿಯ ಚಾಕಚಕ್ಯತೆ ಎದ್ದು ಕಾಣುತ್ತದೆ. ಮತ್ತೆ ಹೊರ ಹೊಮ್ಮುವ "ಬಂಗಾರವಿಲ್ಲದ ಬೆರಳು" ಮೇಲಿನ ಅಂಶಗಳಿಗೆ ಪುಷ್ಠಿಕೊಡುತ್ತದೆ.
ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ದೀಪದಂತರಳಿದಾ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳೂ|
ಸಿಂಗಾರ ಕಾಣದ ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆ ಕಥಾನಾಯಕಿಯ ಯೌವನವನ್ನು ಪ್ರಚುರಪಡಿಸುತ್ತದೆ, ಸುಮಾರು ಹದಿನಾರು ವರ್ಷದ ಆಸುಪಾಸು ಇರಬಹುದಾದ ವಯಸ್ಸು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಬೇಗನೆ ಲಗ್ನ ಮಾಡುತ್ತಿದ್ದರಾದ್ದರಿಂದ ಹದಿನಾರು ವರ್ಷಕ್ಕೆಲ್ಲ ಸಾಕಷ್ಟು ಪ್ರಬುದ್ಧತೆ ಈ ಹೆಣ್ಣು ಮಕ್ಕಳಿಗೆ ಇರುತ್ತಿದ್ದುದು ಸಹಜ. ಎರಡು ಬಾರಿ ಹಾಡಿದ ದೀಪದಂತೆ ಅರಳಿದ ಸಿರಿಗಣ್ಣ ಸನ್ನೆ ಏನನ್ನೋ ನೆನಪಿಸಿಕೊಳ್ಳುತ್ತವೆಯೇನೋ ಎಂದು ಕೊಂಡರೆ ನಿಲ್ಲದ ಮುಂಗಾರಿನಲ್ಲಿ ತುಂಬಿ ಹರಿಯುವ ಹೊಳೆಯ ರೀತಿಯಲ್ಲಿರುವ ಮುಂಗುರಳನ್ನು ನೆನಪಿಗೆ ತರುತ್ತವೆ. ತಲೆ ಹಾಗೂ ಕಣ್ಣು ಅತ್ತಿತ್ತ ಚಲಿಸಿದಂತೆಲ್ಲ ಮುಖದೊಂದಿಗೆ ಆಟವಾಡುವ ಈ ಮುಂಗುರುಳು ಒಮ್ಮೊಮ್ಮೆ ಕಾಡುವ ಮಳೆಯಂತಾಗಿರುವುದನ್ನು ಇಲ್ಲಿ ಗಮನಿಸಬಹುದು. ಮತ್ತೆ ಬಂಗಾರವಿಲ್ಲದ ಬೆರಳನ್ನು ಪುನರಾವರ್ತಿಸಿ ಗಾಯಕ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿರುವ ಮನಸ್ಸನ್ನು ಅಭಿವ್ಯಕ್ತಗೊಳಿಸಿದ್ದಾರೆ.
ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು
ನಿಮಗೆ ಗೊತ್ತಿರುವಂತೆ ನಮಗೆ ಭಾರತದಲ್ಲಿ ಟ್ರ್ಯಾಷ್ ಎಸೆಯೋದಕ್ಕೆ ಮನೆಯ ಒಳಗೆ ಒಂದು ನಿಖರವಾದ ಜಾಗ ಅಂತೇನು ಇರುತ್ತಿರಲಿಲ್ಲ. ಅದರಲ್ಲೂ ಅಕ್ಕಿಯಲ್ಲಿ ಸಿಗುವ ಕಲ್ಲನ್ನು ಇಂತಲ್ಲೇ ಎಸೆಯಬೇಕು ಎಂಬ ನಿಯಮವೇನೂ ಇರಲಿಲ್ಲ. ಆದರೆ ಮನೆಯನ್ನು ದಿನಕ್ಕೆರಡು ಬಾರಿಯಾದರೂ ಗುಡಿಸಿ-ಒರೆಸಿ ಇಟ್ಟುಕೊಂಡಿರುವಾಗ ಅಕ್ಕಿಯಲ್ಲಿ ಆರಿಸಿದ ಕಲ್ಲು ಗೌಣವಾಗುತ್ತಿತ್ತು. ಅದು ಎಲ್ಲ ಕಸದ ಜೊತೆಗೆ ತಿಪ್ಪೆ ಸೇರುತ್ತಿತ್ತು. ಆದರೆ ಇಲ್ಲಿ, ಕಲ್ಲ ಹರಳನು ಹುಡುಕಿ ತೆಗೆದ ಕೈಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ, ಅದನ್ನು ಇಂತಲ್ಲಿಗೆ ಎಸೆಯಬೇಕು ಎಂಬ ನಿಯಮವೇನೂ ಇಲ್ಲ, ಜೊತೆಗೆ ಕಲ್ಲು ಅಕ್ಕಿಯಿಂದ ಬೇರ್ಪಡುವ ಪ್ರಕ್ರಿಯೆಗೆ ಮಾತ್ರ ಪ್ರಾಮುಖ್ಯತೆ ಇದೆ, ಕಲ್ಲು ಹೊರ ಹೋಗುವಾಗ ಎಲ್ಲಿಗೆ ಬೇಕಾದರೂ ಹೋಗಬಹುದು. ಇಂಥ ಸಂದರ್ಭದಲ್ಲಿ ಪೂರ್ಣ ನಿಶ್ಶಬ್ದ ಆವರಿಸಿರುತ್ತದೆ, ಆದರೆ ಆ ಕಲ್ಲನ್ನು ಎಸೆದ ಕೈಗಳಲ್ಲಿದ್ದ ಬಳೆಗಳು ಝಲ್ಲೆಂದು ಸದ್ದು ಮಾಡುವುದು ಸ್ವಾಭಾವಿಕ... ಆದರೆ ಇಲ್ಲಿ ಝಲ್ಲೆಂದು ಸದ್ದು ಮಾಡುವ ಬಳೆಗಳು ಗಾಜಿನ ಬಳೆಗಳು, ಮತ್ತೆ ಬಡತನದ ವಾತವರಣವನ್ನು ಶ್ರೋತೃಗಳ ಗಮನಕ್ಕೆ ತರುತ್ತವೆ.
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿತ್ತು
ಬಂಗಾರವಿಲ್ಲದ ಬೆರಳೂ|
ಸಾಮಾನ್ಯವಾಗಿ ಮನೆಯ ಜಗುಲಿ ಅಥವಾ ಮುಂಗಟ್ಟುಗಳಲ್ಲಿ ಕುಳಿತು ಅಕ್ಕಿ ಆರಿಸುವುದು ಸಹಜ. ಒಳಮನೆ ಹಾಗೂ ಆಡುಗೆ ಮನೆಗಳಲ್ಲಿ ಅಷ್ಟೊಂದು ಬೆಳಕಿಲ್ಲದಿರಬಹುದು, ಅಲ್ಲದೇ ಹಿತ್ತಲ ಬಾಗಿಲನ್ನು ಈ ರೀತಿಯ ಕೆಲಸಗಳಿಗೆ ಹೆಚ್ಚಿನ ಜನರು ಆಯ್ಕೆ ಮಾಡಿಕೊಂಡಿರಲಾರರು. ಈ ನಿರ್ಲಿಪ್ತತೆಯಲ್ಲಿ ಕಾರ್ಯತತ್ಪರವಾಗಿರುವ ಹೆಣ್ಣಿಗೆ ಊರಿನ ಬೀದಿಯಲ್ಲಿ ಆ ಕಡೆ ಈ ಕಡೆ ಜನರು ಓಡಾಡಿದ ದೃಶ್ಯ ಅರಿವಿಗೆ ಬರುತ್ತದೆ. ಅವರು ಹೋದಕಡೆ, ಬಂದಕಡೆಗೆಲ್ಲ ಕಣ್ಣು ಬೀಳುವುದು ಮತ್ತೆ ಯಾವುದೋ ದುಗುಡವನ್ನು ಹೊತ್ತು ಕೊಂಡ ಭಾರದ ಮನಸ್ಸಿನ ಹೆಣ್ಣಿನ ಚಿತ್ರಣವನ್ನು ಸಾಬೀತು ಮಾಡುತ್ತವೆ. ಕೊನೆಯಲ್ಲಿ ಬರುವ "ಬಂಗಾರವಿಲ್ಲದ ಬೆರಳು" ಈ ಬಾರಿ ಚಂಚಲ ಮನಸ್ಸು ಮತ್ತೆ ಕಾರ್ಯಮಗ್ನವಾಗುವುದನ್ನು ಬಿಂಬಿಸುತ್ತದೆ.
ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು
ಇಲ್ಲಿ ಮನಸ್ಸಿನ ಭಾರದ ಭಾವಕ್ಕೆ ಕಾರಣವೇನೋ ಎನ್ನುವಂತೆ ಬೆಟ್ಟದಷ್ಟಿರುವ ಮನೆಕೆಲಸವನ್ನು ಕವಿ ಸೂಕ್ಷ್ಮವಾಗಿ ಹೊರಹೊಮ್ಮಿಸುತ್ತಾರೆ. ಹಾಗಿದ್ದರೂ ಕೂಡ ಶೀಘ್ರವಾಗಿ ಹಿಡಿದ ಕೆಲಸವನ್ನು ಮುಂದುವರೆಸಬೇಕು ಎನ್ನುವ ಯೋಚನೆಯಿಲ್ಲದೆ, ನಿಶ್ಚಲವಾಗಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ಚಿತ್ರದಲ್ಲಿರುವ ಬೊಂಬೆಯಂತೆ ಇರುವ ಹೆಣ್ಣಿನ ವರ್ಣನೆಯಲ್ಲಿ ಉದಾಸೀನತೆ ಹೊರಹೊಮ್ಮುತ್ತದೆ. ಮನೆಕೆಲಸ ಬೆಟ್ಟದಷ್ಟಿವೆ, ಎನ್ನುವ ಮಾತು ಸಾಮಾನ್ಯವಾಗಿ ಬಳಕೆಯಲ್ಲಿರುವುದೇ ಆದರೂ, ಸುಮ್ಮನೆ ಇರುವ ಇವಳು, ಅದನ್ನು ಗೌಣವಾಗಿಸುತ್ತಾಳೆ.
ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದ ಬೆರಳೂ|
ಈ ಕಥಾನಾಯಕಿಯ ಬೇಸರಿಕೆಯನ್ನು ಮುಚ್ಚಿಡುವಂತೆ ಈ ಬಾರಿ ಎಲ್ಲಾ ಹತ್ತು ಬೆರಳುಗಳೂ ಶ್ರಮಿಸುತ್ತವೆ ಎನ್ನುವ ಮಾತು ಒಂದು ರೀತಿಯಲ್ಲಿ ನಿರಂತರವಾಗಿ ತನ್ನ ಕೆಲಸದಲ್ಲಿ ತೊಡಗಿದ ಹೆಣ್ಣಿನ ಚಿತ್ರಣವನ್ನು ಮುಂದುವರೆಸುತ್ತದೆ, ಮತ್ತೊಂದು ರೀತಿಯಲ್ಲಿ ಅಕ್ಕಿಯಲ್ಲಿರುವ ಕಲ್ಲನ್ನು ಹುಡುಕುವುದು, ಅದೇ ಅಕ್ಕಿಯ ನುಚ್ಚಿನಲ್ಲಿ ಅದೇನನ್ನೋ ಮುಚ್ಚಿಡುವಂತೆ ಕಾಣಿಸುವುದು ವಿಶೇಷ. ಮತ್ತೆ ಕೊನೆಯಲ್ಲಿ ಬರುವ ಬಂಗಾರವಿಲ್ಲದ ಬೆರಳು ಈ ಬಾರಿ ಬಡತನವನ್ನು ಮೀರಿ ಸಹಜತೆಗೆ ಒತ್ತು ಕೊಡುತ್ತದೆ. ಕೊನೆಗೂ ಈ ಕಥಾ ನಾಯಕಿಯ ಬೇಸರಕ್ಕೆ ಇಂಥದೇ ಕಾರಣವೆಂಬುದು ವ್ಯಕ್ತವಾಗದಿದ್ದರೂ ಆಕೆಯ ಮನಸ್ಥಿತಿಯನ್ನು ಅವಳ ಭಾವ-ಭಂಗಿಗಳಿಂದ ವ್ಯಕ್ತಪಡಿಸಲು ಪ್ರಯತ್ನಿಸಲಾಗಿದೆ. ಅಕ್ಕಿ ಆರಿಸುವ ಈಕೆ ಚಿಕ್ಕ ನುಚ್ಚಿನ ಜೊತೆಗೆ ತನ್ನ ಮನಸ್ಸಿನ ತಳಮಳವನ್ನು ಅವ್ಯಕ್ತವಾಗಿ ಹಂಚಿಕೊಳ್ಳುತ್ತಿದ್ದಾಳೇನೋ ಎನ್ನಿಸಿ, ನಡು ನಡುವೆ ಅಕ್ಕಿಯಲ್ಲಿ ಸಿಗುವ ಚಿಕ್ಕ ಕಲ್ಲುಗಳು ಅವಳ ಕಷ್ಟ ಅಥವಾ ಬೇಸರಿಕೆಯ ಕುರುಹಾಗಿ ಎತ್ತಲೋ ಎಸೆಯುವುದರ ಮೂಲಕ ಹೊರಹಾಕಲ್ಪಡುತ್ತವೆ. ಹಾಡಿನ ಕೊನೆಯಲ್ಲಿ ಕೊಳಲು ಮತ್ತೆ ಹಾಡಿನಲ್ಲಿ ವ್ಯಕ್ತವಾದ ಭಾವನೆಗಳನ್ನೇ ಮುಂದುವರೆಸುವುದು ವಿಶೇಷ.
ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.