ದಿನಗಳು ಬೇರೆ, ದಿನಚರಿ ಒಂದೇ...
ಇತ್ತೀಚೆಗಂತೂ ನಮ್ಮ ನೆರೆಹೊರೆಯಲ್ಲಿ, ನಮ್ಮ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಸ್ತಬ್ಧವಾಗಿವೆ. ಯಾವುದೇ ಮೋಟಾರು ವಾಹನದ ಸದ್ದೂ ದಿನವಿಡೀ ಕೇಳೋದಿಲ್ಲ. ಒಂದು ಹಂತದಲ್ಲಿ ಈ ಪ್ರಪಂಚದಲ್ಲಿ ನಾವಷ್ಟೇ ಇದ್ದೇವೇನೋ ಎಂದು ಅನುಮಾನ ಬರುವಷ್ಟು ಎಲ್ಲ ಕಡೆಗೆ ತಣ್ಣಗಾಗಿ ಬಿಟ್ಟಿದೆ. ಇವತ್ತಿಗೆ ನಾಲ್ಕು ವಾರಗಳ ಕಾಲ ಮನೆಯಲ್ಲೇ ಕುಳಿತು ದಿನ ಮತ್ತು ರಾತ್ರಿಗಳನ್ನು ಕಳೆದ ನಮಗೆ ಅವುಗಳು ಬಹಳ ಧೀರ್ಘವಾದಂತೆ ಕಂಡುಬರುತ್ತವೆ. ಮೊದಲಾಗಿದ್ದರೆ, ವಾರದ ದಿನಗಳು ಒಂದು ರೀತಿ ಓಡುತ್ತಿದ್ದವು. ವಾರಾಂತ್ಯದ ದಿನಗಳು ಮತ್ತಿನ್ನೊಂದು ರೀತಿ. ಆದರೆ ಈಗೆಲ್ಲ ಬದಲಾಗಿದೆ.
ವಾರದ ದಿನಗಳಲ್ಲಿ ನಾವೊಂದು ದಿನಚರಿಯನ್ನು ಅನುಸರಿಸಲೇ ಬೇಕು. ಮನೆಯಲ್ಲೇ ಕುಳಿತಿದ್ದೇವೆಂದಾಕ್ಷಣ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಯಾರಿಗೂ ಕೆಲಸ ಮಾಡಲಾಗದು. ಅಂತೆಯೇ ನಾವು ಎಷ್ಟು ಹೊತ್ತಿಗೆ ಕೆಲಸವನ್ನು ಆರಂಭಿಸುತ್ತೇವೆ, ಎಷ್ಟು ಹೊತ್ತಿಗೆ ಮುಗಿಸುತ್ತೇವೆ ಎಂಬುದೂ ಮುಖ್ಯ. ನನ್ನೆಲ್ಲ ಫೋನ್‌ಕಾಲ್‌ಗಳನ್ನು ಹೆಚ್ಚಿನ ಮಟ್ಟಿಗೆ ನಾನು ಸ್ಪೀಕರ್ ಫೋನ್‌ನಲ್ಲಿಯೇ ಹಾಕಿರೋದರಿಂದ ದಿನದ ಉದ್ದಕ್ಕೂ ಮನೆಯಲ್ಲಿ ಒಂದು ರೀತಿಯ ’ಕಲರವ’ ಇರುತ್ತದೆ. ಈ ದಿನ ಸಂಜೆ ಆರು ಘಂಟೆ ಆಗುವುದರೊಳಗೆ ಇಷ್ಟು ಕೆಲಸ ಮುಗಿಸುತ್ತೇನೆ ಎಂದು ಪ್ಲಾನ್ ಹಾಕಿಕೊಂಡು ಕೆಲಸ ಮಾಡಿದಾಗ ಎಲ್ಲ ಸುಲಭವಾಗುತ್ತದೆ. ದಿನಕ್ಕೊಂದು ಬಾರಿ ಇಂಗ್ಲೀಷ್ ನ್ಯೂಸ್, ಮಧ್ಯೆ ಮಧ್ಯೆ ಅಲ್ಲಿಲ್ಲಿ ಒಂದಿಷ್ಟು ಪ್ರಜಾವಾಣಿ, ನ್ಯೂಯಾರ್ಕ್ ಟೈಮ್ಸ್, ವಾಟ್ಸಾಪ್ ಇವನ್ನೆಲ್ಲ ನೋಡಿಕೊಂಡು ಹೋಗುತ್ತಿರುವಾಗ ವಾರದ ದಿನಗಳು ವೇಗವಾಗೇ ಹೋಗುತ್ತಿವೆ ಎನ್ನಿಸುತ್ತದೆ. ಇವುಗಳ ಜೊತೆಯಲ್ಲಿ ದಿನಕ್ಕೊಬ್ಬೊಬ್ಬರಿಗೆ ಫೋನ್ ಮಾಡಿ ಹಳೆಯ ಸ್ನೇಹಿತ, ಬಂಧು-ಬಳಗವರನ್ನು ಮಾತನಾಡಿಸಿಕೊಂಡು ಬರುವ ಪರಿಪಾಠ ಹುಟ್ಟಿದೆ.
ಎಲ್ಲಕ್ಕಿಂತ ಕಷ್ಟಕರವಾದುದು ಸೋಮವಾರ ಬೆಳಿಗ್ಗೆ - ಕೆಲಸ ಆರಂಭಿಸುವುದಕ್ಕೇ ಒಂದು ರೀತಿಯ ಕಷ್ಟವೆನಿಸುತ್ತದೆ. ಅದೇ ರೀತಿ ಶುಕ್ರವಾರ ಬಂದರೆ ಮಧ್ಯಾಹ್ನವಾದಂತೆಲ್ಲ ಮೊದಲಿನ ಹುರುಪಿರೋದಿಲ್ಲ. ಯಾರಿಗಾದರೂ, Have a good weekend! ಎಂದು ಅಚಾನಕ್ಕಾಗಿ ಹೇಳಿದರೂ, Stay safe! ಎಂದು ಕೊನೆಯಲ್ಲಿ ಸೇರಿಸುವುದು ಸಹಜವಾಗಿ ಹೋಗಿದೆ.
ವೀಕೆಂಡ್ ದಿನಗಳದ್ದು ಮೊದಲಿನಂತೆ ಅಲ್ಲಿಲ್ಲಿ ಓಡಾಡುವ ವಿಶೇಷಗಳೇನೂ ಇಲ್ಲವಾದರೂ, ಈಗ ಹೊಸ ಹೊಸ ಕಾರ್ಯಕ್ರಮಗಳು ನಮ್ಮ ಕ್ಯಾಲೆಂಡರುಗಳನ್ನು ಆವರಿಸಿಕೊಳ್ಳುತ್ತಿವೆ. ಶನಿವಾರ ಮುಂಜಾನೆ 9:30ಕ್ಕೆ ನಮ್ಮ ನೈಬರ್‌ಹುಡ್ ಜನರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ವರ್ಚುವಲ್ ಟೀ-ತಿಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಳೆದ ವಾರ ಒಬ್ಬೊಬ್ಬರನ್ನೇ ಕರೆ ಕರೆದು ಅವರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ, ಅವರೆಲ್ಲರೂ ಖುಶಿಯಿಂದಲೇ ಶನಿವಾರ "ತಿಂಡಿ"ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು. ನಂತರ ಭಾನುವಾರ (ಬೃಂದಾವನ ಕನ್ನಡ ಸಂಘದ) ಕಮ್ಯೂನಿಟಿ ಕಾಲ್ ಮತ್ತು ಕನ್ನಡ ಕಲಿ ವರ್ಚುವಲ್ ತರಗತಿಯನ್ನು ಮುಗಿಸುವಷ್ಟರಲ್ಲಿ ದಿನ ಆರಾಮವಾಗಿ ಕಳೆದು ಹೋಗುತ್ತದೆ. ಈ ನಡುವೆ, ಅವರಿವರು ಶೇರ್ ಮಾಡಿರುವ ಹಳೆ-ಹೊಸ ಸಿನಿಮಾವನ್ನೋ ಅಥವಾ ಡಾಕ್ಯುಮೆಂಟರಿಯನ್ನೋ ನೋಡುವುದು ರೂಢಿಯಾಗಿ ಬಿಟ್ಟಿದೆ.
ನಾವೆಲ್ಲ ಮನೆ ಒಳಗೆ ಸೇರಿಕೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಒಂದಿಷ್ಟು ನಿರಾಂತಕವಾಗಿ ಉಸಿರಾಡುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು. ಈ ನಾಲ್ಕು ವಾರಗಳಲ್ಲಿ ವಾಯು-ಶಬ್ದ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವೂ ಹೊಸತಾಗಿ ಹೊಳೆಯುವಂತೆ ಕಾಣುತ್ತದೆ. ಈ ಮೊದಲು ನಾವು ಅಷ್ಟೊಂದು ಗಮನವಿಟ್ಟು ನೋಡಲಾಗದ ನಿಸರ್ಗದ ಅದ್ಭುತಗಳನ್ನು ನೋಡುತ್ತಿದ್ದೇವೆ. ಪಕ್ಷಿಗಳ ಚಿಲಿಪಿಲಿ ಧ್ವನಿ ಈಗಾಗಲೇ ಎಲ್ಲರ ಕಿವಿಗೂ ಬಿದ್ದಿರಬೇಕು!
ಯಾವುದು ಅತಿಯಾದರೂ ಅಷ್ಟೊಂದು ಒಳ್ಳೆಯದಲ್ಲ - ಅದೇ ರೀತಿ, ಈ ಏಕತಾನತೆಯೂ ಒಂದಿಷ್ಟು ಕಾಲದೊಳಗೆ ತನ್ನ ಮುದವನ್ನು ಕಳೆದುಕೊಂಡೀತು. ವಿಶ್ವದಾದ್ಯಂತ ಎಷ್ಟೋ ವ್ಯವಹಾರಗಳು ನಿಂತು ಹೋಗಿವೆ, ಎಷ್ಟೋ ಜನರು ಕೆಲಸವಿಲ್ಲದೆ ಕೊರಗುತ್ತಿದ್ದಾರೆ, ಇಂತಹವರನ್ನೆಲ್ಲ ಮನೆಯಲ್ಲಿ ಕುಳಿತಿರಿ ಎಂದು ಯಾವ ಶಕ್ತಿಯೂ ಕಟ್ಟಿ ಹಾಕಲಾರದು. ಕಣ್ಣಿಗೆ ಕಾಣುವ ಹಸಿದ ಹೊಟ್ಟೆಯ ಸಂಕಟ ಕಣ್ಣಿಗೆ ಕಾಣದ ಕ್ರಿಮಿಯ ಚಮತ್ಕಾರದ ಹೆದರಿಕೆಗಿಂತಲೂ ಬಹಳಷ್ಟು ದೊಡ್ಡದು. ಹಸಿದ ಹೊಟ್ಟೆಗಳು ಕ್ರಾಂತಿ ಕೋಲಾಹಲವನ್ನೇ ಮಾಡಿದ ಅನೇಕ ನಿದರ್ಶನಗಳಿವೆ. ಈ ನಮ್ಮೆಲ್ಲರ ಗೃಹ ಬಂಧನ ಆದಷ್ಟು ಬೇಗ ಮುಗಿದು, ನಾವೆಲ್ಲ ನಮ್ಮ ನಮ್ಮ ಹೊಸ ಕಲಿಕೆಯೊಂದಿಗೆ ಪ್ರಕೃತಿಯನ್ನು ಗೌರವಿಸುತ್ತಾ ಮತ್ತೆ ನಮ್ಮ ಎಂದಿನ ದಿನಚರಿಗೆ ಹಿಂತಿರುಗೋಣ!