ಪಾಪಾಸ್ ಕಳ್ಳಿಯೂ, ಬೆಲ್ ಬಾಟಮ್ ಪ್ಯಾಂಟೂ...
ಹೀಗೇ ಏನ್ ಬರೀಲೀ, ಯಾವುದರ ಬಗ್ಗೇ ಬರೀಲೀ ಅಂತ ಯೋಚಿಸ್ತಾ ಕುಳಿತಿರಬೇಕಾದ್ರೆ ಮೊನ್ನೆ ಮೊನ್ನೇ ಉದಯ ಟಿವಿಯಲ್ಲಿ ನೋಡಿದ ’ಸಿಂಗಪುರದಲ್ಲಿ ರಾಜಾಕುಳ್ಳ’ ಹಳೆಯ ಸಿನಿಮವೊಂದರ ನೆನಪಾಗಿ ಅದರಲ್ಲಿ ವಿಷ್ಣುವರ್ಧನ್-ದ್ವಾರಕೀಶ್ ಧರಿಸಿರೋ ಬೆಲ್ ಬಾಟಮ್ ಪ್ಯಾಂಟು ನೆನಪಿಗೆ ಬಂತು. ನೀವೆಲ್ಲಾ ಪ್ಯಾಂಟು ಹಾಕೋ ಜಮಾನ ಬಂದಿರೋವಾಗ ಆಗ್ಲೇ ಮುಲಂಗಿ ಪ್ಯಾಂಟಿನ ಕಾಲ ಬಂದಿತ್ತೋ ಏನೋ, ನಾನು ಹಾಕಿದ ಮೊದಲೇ ಪ್ಯಾಂಟಂತೂ ಬೆಲ್ ಬಾಟಮ್ ಪ್ಯಾಂಟೇ, ಅದೂ ಅದರ ವ್ಯಾಸ ಅಥವಾ ಬುಡ ಮುವತ್ತಾರು ಇಂಚು ಅಗಲವಾಗಿತ್ತು ಅನ್ನೋದನ್ನ ಇವತ್ತಿಗೂ ನೆನಸಿಕೊಂಡ್ರೆ ನಗುವೇ ಬರುತ್ತೆ.
ಹಿಂದೆ ಬೆಲ್ ಬಾಟಮ್ ಪ್ಯಾಂಟು ಧರಿಸಿ ಯುವ ಪೀಳಿಗೆಯಲ್ಲಿ ರೋಚಕತೆಯನ್ನು ಹೆಚ್ಚಿಸುತ್ತಿದ್ದ ರಜನೀಕಾಂತರೂ, ವಿಷ್ಣುವರ್ಧನ್ನರೂ ಕನ್ನಡದಲ್ಲಿ ಹೆಚ್ಚಿರಲಿಲ್ಲ. ಅಪರೂಪಕ್ಕೊಮ್ಮೆ ನೋಡೋ ಅಮಿತಾಬ್ ಬಚ್ಚನ್ನುಗಳ ಪರಿಣಾಮ ನಮ್ಮ ಮೇಲೆ ಆಗುತ್ತಿರಲಿಲ್ಲವೆಂದಲ್ಲ, ಆದರೂ ನಮ್ಮ ಕನ್ನಡ ನಾಯಕರ ಮುಂದೆ ಅವರುಗಳೆಲ್ಲ ಸಪ್ಪೆಯೇ ಅಲ್ಲವೇ? ನನ್ನ ಅಣ್ಣ ದೊಡ್ಡ ದೊಗಲೇ ಪ್ಯಾಂಟು ಹಾಕಿಕೊಳ್ಳುತ್ತಿದ್ದನೆಂದು ನಾನೂ ಹೈ ಸ್ಕೂಲು ಮೆಟ್ಟಿಲು ಹತ್ತುವ ಹೊತ್ತಿಗೆ ಮನೆಯಲ್ಲಿ ಹಠ ಹಿಡಿದದ್ದೇ ಬಂತು. ಅಣ್ಣನ ಪ್ಯಾಂಟುಗಳಿಗೆ ವಿಸ್ತಾರವಾದ ಬೆಲ್ ಇರೋದೂ, ಮುಂದೆ ಜೇಬುಗಳು ಇರೋದೂ, ಜೊತೆಯಲ್ಲಿ ಕೆಳಗೆ ತೂಕಕ್ಕೆಂದೋ ಅಥವಾ ಪ್ಯಾಂಟಿನ ಬುಡ ಸವೆಯ ಬಾರದೆಂದೋ ಹಾಕಿದ ಮೆಟಲ್ ಜಿಪ್ಪಿನ ತುಂಡುಗಳೋ ಇವೆಲ್ಲವೂ ಒಂದು ರೀತಿಯ ಬೆರಗನ್ನು ಹುಟ್ಟಿಸುವವೇ. ಇಂಥ ಹಿನ್ನೆಲೆಯಲ್ಲಿ ಹೈ ಸ್ಕೂಲಿಗೆ ನಾನು ಪ್ಯಾಂಟು ಧರಿಸದೇ ಹೋಗೋದು ಅಂದರೆ...
ಆನವಟ್ಟಿಯ ಬಟ್ಟೆ ಅಂಗಡಿಯಲ್ಲಿ ಬಟ್ಟೆ ತೆಗೆದಿದ್ದೂ ಆಯ್ತು, ಅದನ್ನು ದರ್ಜಿಗೆ ಕೊಟ್ಟಿದ್ದೂ ಆಯ್ತು, ’ಬೆಲ್ ಎಷ್ಟು ಬೇಕೋ?’ ಎಂದು ಕೊಟ್ಟರೂ ಕೊಡದಿದ್ದ ಹಾಗೆ ಚಾಯ್ಸ್ ಅನ್ನು ಕೊಟ್ಟ ದರ್ಜಿಗೆ ’ಮುವತ್ತಾರು ಇಂಚ್’ ಎಂದು ಉತ್ತರ ಕೊಡುವ ಧೈರ್ಯ ಬಂದಾಗಲೇ ಒಳಗೊಳಗೇ ನನಗೂ ಸಂತೋಷವಾಗಿತ್ತು. ’ಯಾವತ್ತ್ ಕೊಡ್ತೀರಿ?’ ಅಂದ್ರೆ ಅವನು ಕೊನೇಪಕ್ಷ ಎರಡು ವಾರಾನಾದ್ರೂ ಬಿಟ್ಟು ಬರ್ರಿ ಅನ್ನೋದೇ, ನನ್ನ ಪರಿಸ್ಥಿತಿಯಂತೂ ರಥದ ಗಾಲಿಗೆ ಸಿಕ್ಕ ನಿಂಬೇಹಣ್ಣಿನ ಹಾಗೆ ಆಗಿ ಹೋಗಿತ್ತು, ಅದರೂ ಕಾಯದೇ ಕೆನೆ ಕಟ್ಟುವುದೇ ಎಂದು ಮನಸ್ಸಿನಲ್ಲೇ ಅಂದುಕೊಂಡು ಮನೆಯ ಹಾದಿ ಹಿಡಿದದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.
***
ಕುತಂತ್ರಿಗಳ ಕೈಗೆ ಸಿಕ್ಕು ಆನವಟ್ಟಿ ಮಲೆನಾಡಿದ್ದುದು, ಅರೆ ಮಲೆನಾಡಾಗಿ, ಕೊನೆಗೆ ಬಯಲು ಸೀಮೆಯ ಎಲ್ಲ ಲಕ್ಷಣವನ್ನೂ ತಲುಪುವ ಹೊತ್ತಿಗೆ ನಮ್ಮೂರಿನ ಬೇಲಿಗಳಲ್ಲಿ ಬೆಳೆದುಕೊಳ್ಳುತ್ತಿದ್ದುದೇ ಹಲವಾರು ಕಳ್ಳಿ ಗಿಡಗಳು. ರಕ್ಕಸಕಳ್ಳಿ, ಪಾಪಾಸ್ ಕಳ್ಳಿ, ಆ ಕಳ್ಳಿ, ಈ ಕಳ್ಳೀ ಎಂದು ಹಲವಾರು ವಿಧಗಳನ್ನು ಗುರುತಿಸುತ್ತಿದ್ದೆವು, ಅದರಲ್ಲೇ ಕೆಲವೊಂದರಿಂದ ಎಷ್ಟೋ ಉಪಯೋಗವನ್ನೂ ಕಂಡುಕೊಂಡಿದ್ದೆವು. ಉದಾಹರಣೆಗೆ ರಕ್ಕಸಕಳ್ಳಿಯ ಎಲೆಗಳನ್ನು ಕತ್ತರಿಸಿ, ಅದನ್ನು ಉದ್ದುದ್ದವಾಗಿ ತೆಳ್ಳಗೆ ಸೀಳಿ ಅದನ್ನು ಹಗ್ಗದಂತೆ ಬಳಸುತ್ತಿದ್ದೆವು, ಹಾಗೆ ಹೊಸೆದ ಹಗ್ಗಗಳಿಂದ ಕಟ್ಟಿಗೆ ಹೊರೆಯನ್ನೋ ಅಥವಾ ಬೇಲಿಯ ಗೂಟಗಳನ್ನು ಮುಳ್ಳಿನ ಕಂಟಿಗಳಿಗೆ ಸೇರಿಸಿ ಕಟ್ಟುತ್ತಿದ್ದೆವು. ಎಂತಲ್ಲೂ ಸ್ವಚ್ಛಂದವಾಗಿ ಬೆಳೆಯುತ್ತಿದ್ದ ಈ ಕಳ್ಳಿಗಳಲ್ಲೂ ಹಾಲು ಒಸರುತ್ತಿತ್ತು, ಅಂತಹ ಹಾಲು ಕಣ್ಣಿನ ಮೇಲಾನಾದರೂ ಬಿದ್ದರೆ ಅಷ್ಟೇ ಎನ್ನುವ ಹೆದರಿಕೆಯೂ ನಮ್ಮಲ್ಲಿ ಮನೆ ಮಾಡಿತ್ತಾದರೂ ಇವತ್ತಿಗೂ ಮುಳ್ಳಿನ ಕಳ್ಳಿಗಳನ್ನು ಬರೀ ಕೈಯಲ್ಲಿ ಕತ್ತರಿಸಿ ಒಟ್ಟು ಮಾಡಿ ಗೊತ್ತೇ ವಿನಾ ಅದರಿಂದಾಗಬಹುದಾದ ಹಲವಾರು ದುಷ್ಪರಿಣಾಮಗಳಿಂದ ನಾವು ಯಾವತ್ತೂ ರಕ್ಷಣೆಯನ್ನು ಪಡೆಯದೇ ನೆಟ್ಟಗೆ ಕೈ ಕಾಲು ಮೈಯನ್ನು ಅದು ಹೇಗೆ ಇಲ್ಲಿಯವರೆಗೆ ಇರಿಸಿಕೊಂಡು ಬಂದೆವೆನ್ನುವುದು ಇವತ್ತಿಗೂ ನಿಗೂಢ.
***
ನಮ್ಮೂರಿನ ದರ್ಜಿಗಳು ಇಂದಿನ ಪ್ರಾಜೆಕ್ಟ್ ಮ್ಯಾನೇಜರುಗಳ ಹಾಗೆ ಯಾವತ್ತೂ ತಮ್ಮ ಸ್ಕೆಡ್ಯೂಲನ್ನು ಮುಂದೂಡತ್ತಲೇ ಇರುತ್ತಾರೆ ಅನ್ನೋ ಹಾಗೆ, ಎರಡು ವಾರ ಬಿಟ್ಟು ಹೋದ್ರೆ ಅವನೆಲ್ಲಿ ನನ್ನ ಪ್ಯಾಂಟನ್ನು ಕೊಟ್ಟಾನು? ಗಾಯದ ಮೇಲೆ ಉಪ್ಪು ಸವರೋ ಹಾಗೆ ಎರಡು ವಾರವಾದರೂ ನ್ಯಾಲೆಯ ಮೇಲಿನ ಬಟ್ಟೆ ನಾವು ಇಟ್ಟ ದಿನದಿಂದ ಹಾಗೇ ಧೂಳು ತಿನ್ನುತ್ತಲೇ ಕೂತಿದೆಯೇ ಹೊರತು, ಅದನ್ನವನು ಅಲುಗಾಡಿಸಿಯೂ ನೋಡಿಲ್ಲವೆಂದು ನನಗೆ ಗೊತ್ತಾದಾಗ ಇನ್ನು ಸ್ವಲ್ಪವಾದರೆ ಕೋಡಿ ತುಂಬಿ ಹರಿಯುವ ಕೆರೆಯ ಹಾಗೆ ಕಣ್ಣಾಲಿಗಳು ತುಂಬಿ ಬಂದಿದ್ದವು. ಆ ದರ್ಜಿಯನ್ನು ಫೈರ್ ಮಾಡಿ ನನ್ನ ಬಟ್ಟೆಯನ್ನು ನಾನೇ ನ್ಯಾಲೆಯಿಂದೆಳೆದುಕೊಂಡು ’ನಿನ್ನ ಸರ್ವೀಸ್ ಯ್ಯಾವನಿಗೆ ಬೇಕಲೇ?’ ಎಂದು ನಾನೇದರೂ ಅಂದು ಗಂಡೆದೆಯನ್ನು ತೋರಿಸಿದ್ದರೆ ಇಷ್ಟೊತ್ತಿಗೆ ಇಲ್ಲಿ ಕುಳಿತು ಈ ಬರಹವನ್ನೇಕೆ ಬರೆಯುತ್ತಿದ್ದೆ?! ಹಾಗಾಗಲಿಲ್ಲ ಬದಲಿಗೆ ಬದುಕು ಎಲ್ಲಿ ಹೋದರೂ ನಿರೀಕ್ಷಿಸಬಹುದಾದ ತಾಳ್ಮೆಯನ್ನು ಮೈಗೂಡಿಕೊಂಡು, ಬಾಯಿಗೆ ಬಂದ ಬೈಗಳನ್ನೂ ಎತ್ತಿ ಹೊಡೆಯಬೇಕೆಂಬ ಕೈಯನ್ನೂ ಅವರವರೊಳಗೇ ಸಮಾಧಾನ ಮಾಡಿ ನಮ್ಮ ದುಡ್ಡು, ಬಟ್ಟೆಯನ್ನು ತೆಗೆದುಕೊಂಡು ಅವನು ಹೇಳಿದ ಹೊತ್ತಿಗೆ ಹೊಲಿದು ಕೊಡುವ ದರ್ಜಿಗೂ ಬಾಯಿ/ಕೈ ತೋರಿಸದೆ ಮನೆಗೆ ಬಂದ ದಿನವೇ ದೊಡ್ಡದು. ಎರಡು ವಾರವಾಯಿತು, ಒಂದು ತಿಂಗಳಾದರೂ ’ಆ ನನ್ಮಗ ಕೊಡಂಗಿಲ್ಲ’ ಎಂದು ಎಲ್ಲರ ಎದುರು ಅವನಿಗೆ ಸಹಸ್ರನಾಮಾರ್ಚನೆ ಮಾಡಿದ್ದೇ ಬಂತು.
***
ಯಾರ ಮನೆಯಲ್ಲಿ ಏನನ್ನು ಬೆಳೆಸಿದರೂ ಕ್ಯಾಕ್ಟಾಸ್ ಅನ್ನು ಬೆಳೆಸಬಾರದು ಎನ್ನುವ ನಂಬಿಕೆ ನನ್ನ ಮನಸ್ಸಿನಲ್ಲಿ ಅದೆಲ್ಲಿಂದ ಬಂತೋ ಗೊತ್ತಿಲ್ಲ. ನಾನು ಬೇಡವೆಂದರೂ ನಮ್ಮನೆಯೊಳಗೆ ನುಸುಳಿದ ಎಲೆಯಂತಿರುವ ಅದ್ಯಾವುದೋ ಪ್ರಬೇಧವೂ ಅಪರೂಪಕ್ಕೊಮ್ಮೆ ನನ್ನನ್ನೇ ಅಣಗಿಸುತ್ತಿತ್ತು. ಡೈನಿಂಗ್ ರೂಮಿನ ಕಿಟಕಿಯ ಬಳಿ ಆ ಕಡೆಗೊಂದು ಈ ಕಡೆಗೊಂದು ಎಂದು ಇಟ್ಟ ಗಿಡಗಳು ನಳಿನಳಿಸುತ್ತಲೇನೋ ಇದ್ದವು. ಆದರೆ ನಾನು ಅದೆಷ್ಟೋ ದಿನಗಳಿಗೊಮ್ಮೆ ನಮ್ಮ ಮನೆಯಲ್ಲಿನ ತುಳಸಿ, ಮಲ್ಲಿಗೆ, ಬಸಳೆ, ಕೆಸುವು, ಅರಿಶಿಣ ಗಿಡಗಳಿಗೆ ನೀರು ಹಾಕುವ ಪದ್ದತಿಯ ಪ್ರಕಾರ ಈ ಕ್ಯಾಕ್ಟಸ್ ಗಿಡಗಳಿಗೆ ನೀರು ಹಾಕಿದ್ದೇ ಬಂತು, ಒಂದು ಮಾರನೇ ದಿನವೇ ನೆಗೆದು ಬಿದ್ದು ಹೋಯಿತು. ಈ ಸಗಣಿಯಲ್ಲಿರುವ ಹುಳುವನ್ನು ತೆಗೆದು ಮೇಲೆ ತೆಗೆದು ಬಿಟ್ಟರೆ ಮತ್ತೆ ಅದು ಸಗಣಿಯೊಳಗೇ ಹೋಗಿ ಸೇರಿಕೊಳ್ಳುತ್ತದೆಯಂತೆ ಹಾಗೇ ಈ ಮರುಭೂಮಿಯಲ್ಲಿ ಬೆಳೆದು ಹಿಗ್ಗಬೇಕಾದ ಕಳ್ಳಿ (ಕ್ಯಾಕ್ಟಸ್) ಸಸ್ಯ ಪ್ರಬೇಧಕ್ಕೆ ನಾನು ಅಪರೂಪಕ್ಕೊಮ್ಮೆ ನೀರುಣಿಸಿದ್ದೇ ತಪ್ಪಾಗಿ ಹೋಯಿತು! ಎರಡರಲ್ಲಿ ಒಂದು ಗಿಡ ನೆಗೆದು ಬಿದ್ದೇ ಹೋಯಿತು. ’ಅಂದು ನನ್ನ ಪ್ಯಾಂಟಿಗೆ ಒಂದು ಗತಿಯನ್ನು ಕಾಣಿಸಿದ ನಿಮ್ಮ ವಂಶದವರು ನನಗೆ ಕೊಡಬೇಕಾದ ಬೆಲೆಯನ್ನು ವಸೂಲಿ ಮಾಡಿದ್ದೇನೆ ಹೋಗ್’ ಎಂದು ಸತ್ತ ಗಿಡಕ್ಕೆ ನನ್ನ ಮನಸ್ಸು ಒಳಗೊಳಗೇ ಬೈದುಕೊಂಡಿದ್ದು ಸತ್ಯ.
***
ಎರಡು ವಾರ ಅಂದ ಪುಣ್ಯಾತ್ಮ ಕೊನೆಗೂ ಕೊಟ್ನಪಾ (ಸತ್ನಪಾ), ನನ್ನ ಪ್ಯಾಂಟು ಬಂತು, ಅಂಗಡಿಯಲ್ಲೇ ಹಾಕಿ ನೋಡು ಅಂತ ಅವನು ಕಿರುಚಿಕೊಂಡ್ರೆ ನನಗೂ ಮಾನಾ ಮರ್ಯಾದೆ ಅನ್ನೋದಿಲ್ವೇ, ಅಲ್ಲೇ ಎಲ್ಲರ ಮುಂದೆ ತೆಗೆದು ಹಾಕೋಕೇ? ಅಲ್ಲೇನಾದ್ರೂ ಡ್ರೆಸ್ಸಿಂಗ್ ರೂಮ್ ಗಳು ಅನ್ನೋದು ಇರೋಕೇ ನಮ್ಮೂರಿನ ಟೈಲರ್ ಅಂಗಡಿಗಳು ಮೇಸೀಸ್ ಕೆಟ್ಟೋದ್ವೇ? (ನಾನು ಮಂಡ್ಯಾ-ಮೈಸೂರಿನವರಿಂದ ಕಲಿತ ಈ ವಾಕ್ಯದ ಬಳಕೆ ಇವತ್ತಿಗೂ ನನ್ನನ್ನು ದಂಗುಬಡಿಸುತ್ತೆ, ಜೊತೆಗೆ ಒಂದು ಅವ್ಯಕ್ತ ಖುಷಿಯನ್ನೂ ಮೂಡಿಸುತ್ತೆ!). ದರ್ಜಿಯ ಅಂಗಡಿಯಿಂದ ಅವನು ಪ್ಯಾಂಟನ್ನು ತುರುಕಿಕೊಟ್ಟ ಪ್ಲಾಸ್ಟಿಕ್ ಚೀಲವನ್ನು ಹಿಡಿದು ಒಂದೇ ಉಸಿರಿಗೆ ಓಡಿದ್ದೇ ಓಡಿದ್ದು. ಮನೆಗೆ ಬಂದು ಯಾರಿಗೂ ಕಾಣದ ಜಾಗೆಯಲ್ಲಿ ನಿಂತು ಪ್ಯಾಂಟು ಹಾಕಿ ನನ್ನನ್ನು ನಾನೇ ಉದ್ದಾನುದ್ದಕ್ಕೆ ನೋಡಿಕೊಂಡಿದ್ದೇ ಕೊಂಡಿದ್ದು. ’ಓ ಪ್ರಿಯಾ...’ ಎಂದು ರಜನೀಕಾಂತ್ ಹಾಡುವಂತೆ ಹೆಜ್ಜೆ ಹಾಕಿದಲ್ಲೆಲ್ಲಾ ಓಲಾಡುವ ಬೆಲ್ ಬಾಟಮ್ ಪ್ಯಾಂಟ್ ನನ್ನನ್ನು ಬಹಳಷ್ಟು ಎತ್ತರದವನನ್ನಾಗಿ ಮಾಡಿತ್ತು. ಈ ಪ್ಯಾಂಟ್ ಹಾಕಿಕೊಂಡು ಯಾವ ಬಸ್ಸ್ ಹತ್ತಿದರೂ ಅರ್ಧ ಟಿಕೇಟ್ ಅನ್ನುವುದು ಕನಸೇ ಎಂದು ಮತ್ತೊಂದು ಥರ ಬೇಗನೇ ಬೆಳೆದು ದೊಡ್ಡವನಾಗಿ ಬಿಟ್ಟ ಹೆದರಿಕೆ ಕಾಡ ತೊಡಗಿತ್ತು.
ನೋಡಲು ಚಪಾತಿಯಂತಿದ್ದರೂ ಯ್ಯಾವನೂ ತಿನ್ನದ ಯಾವನೂ ಮುಟ್ಟದ ಈ ಕಳ್ಳಿ ಗಿಡಗಳಿಗೇಕೆ ಮುಳ್ಳು ಎನ್ನುವುದನ್ನು ಆ ಎವಲ್ಯೂಷನ್ನ್ ಪಿತಾಮಹರನ್ನೇ ಕೇಳಬೇಕು. ನನ್ನ ವಯಸ್ಸಿನ ಹುಡುಗರು ಗೋಲಿ, ಬುಗುರಿ, ಲಗೋರಿ, ಚಿಣ್ಣಿದಾಂಡುಗಳನ್ನು ಆಡುತ್ತಿದ್ದುದು ಸಾಮಾನ್ಯವಾದರೂ ಅಂದಿನ ಆಟ ಕಳ್ಳಾ-ಪೋಲೀಸ್! ಇನ್ನೇನ್ ಕೇಳೋದು, ಬೇಲಿ, ಸಂದಿಗೊಂದಿಗಳಲ್ಲಿ ಹುದುಗಿಕೊಳ್ಳೋದೇ ಆಟ. ವಿಶೇಷವೆಂದರೆ ಕಳ್ಳನಾಗಲೀ ಪೋಲೀಸಾಗಲೀ ಯಾವುದೇ ಗುಂಪಿಗೆ ಸೇರಿದರೂ ಒಬ್ಬರನ್ನೊಬ್ಬರು ಹುಡುಕೋದೆಂದೂ ತಪ್ಪಿದ್ದಿಲ್ಲ. ಹೀಗೇ ಒಂದು ಕತ್ತಲಿನ ಸೂಕ್ಷ್ಮ ಸನ್ನಿವೇಶದಲ್ಲಿ ಇನ್ನೇನು ಕಳ್ಳ ಸಿಕ್ಕಿಯೇ ಬಿಟ್ಟ ಎಂದು ನಾನು ಹುಮ್ಮಸ್ಸಿನಲ್ಲಿ ಓಡುವ ಹೊತ್ತಿಗೆ ಬೇಲಿಗೆ ಸಿಕ್ಕು ಪಾಪಾಸ್ ಕಳ್ಳಿಯ ಮುಳ್ಳಿಗೆ ಬಲಿಯಾದ ನನ್ನ ಬಲಗಾಲಿನ ಬೆಲ್ ಬಾಟಮ್ ಪ್ಯಾಂಟಿನ ಬಾಟಮ್ ಹರಿದೇ ಹೋಗೋದೇ? ಹರಿದದ್ದನ್ನು ಯಾರಿಗೂ ಗೊತ್ತಾಗದ ಹಾಗೆ ಹೇಗೆ ರಿಪೇರಿ ಮಾಡಿಸೋದು? ಅದನ್ನು ಮನೆಯಲ್ಲಿ ಹೇಳಿ ಯಾರ್ಯಾರು ಎಷ್ಟು ಹೊಡೆತವನ್ನು ಹೊಡೆಯುತ್ತಾರೋ? ಇನ್ನು ಈಗಷ್ಟೇ ಕೊಟ್ಟ ಟೈಲರ್ ಹತ್ತಿರ ಮತ್ತೆ ಹರಿದದ್ದನ್ನು ಯಾವ ಮುಖ ಹೊತ್ತುಕೊಂಡು ಹೋಗಲಿ ಎನ್ನುವ ಮೈಕ್ರೋ ಮಿನಿ ಆಲೋಚನೆಗಳೇ ತಲೆಯ ತುಂಬ. ಕಳ್ಳರನ್ನು, ಪೋಲೀಸರನ್ನೂ, ಅಂತಹವರನ್ನು ಸೃಷ್ಟಿಸಿದ ದೇವರನ್ನು ಎಲ್ಲರನ್ನು ಬೈದರೂ ನನ್ನ ಹರಿದ ಪ್ಯಾಂಟಿನ ಕಾಲು ಒಂದಾಗುವುದು ಹೇಗೆ?
ಇವತ್ತಿಗೂ ಕಳ್ಳಿಗೆ ನನ್ನ ಮನಸ್ಸಿನಲ್ಲಿ ಒಂದು ಕೋಣೆಯಲ್ಲಿ ಸ್ಥಾನವಿದೆ, ಜೊತೆಗೆ ಮನೆಯ ಮೂಲೆಯಲ್ಲಿ ಇನ್ನೂ ಅಳಿದುಳಿದ ಒಂದೇ ಒಂದು ಕಳ್ಳಿಯ ಗಿಡ ತನ್ನ ವಂಶದ ಹಿರಿಯರು ಮಾಡಿದ ತಪ್ಪಿನ ಫಲವನ್ನು ಒಬ್ಬೊಂಟಿಯಾಗಿ ಅನುಭವಿಸುತ್ತಲೇ ಇದೆ.