ನಮ್ಮಲ್ಲಿನ ಬದಲಾವಣೆಗಳು
ಹೇ, ಇನ್ನೂ ನಮ್ಮ ಕನ್ನಡದ ಬಗ್ಗೆ ಬರೆಯೋದಕ್ಕೇನೂ ತಡವಾಗಿಲ್ಲ, ಈ ತಿಂಗಳ ಒಳಗೆ ಯಾವಾಗ ಬರೆದರೂ ಅದು ಕನ್ನಡಮ್ಮನ ಸೇವೆಗೆ, ಪದತಲಕ್ಕೆ ಸೇರುವ ಮಾತೇ! ಈ ತಿಂಗಳು ಆರಂಭವಾಗುವ ಮುನ್ನ ರಾಜ್ಯೋತ್ಸವ ಆಚರಣೆಗಳೇನೇ ಇದ್ದರೂ ನವೆಂಬರ್ ಒಂದಕ್ಕೆ ಸೀಮಿತವಾಗಿರಲಿ ಎಂದು ಆಶಿಸಿದ್ದೇ ಬಂತು, ಕನ್ನಡಿಗರ ಗುಂಪು, ಸಂಘಗಳು, ಸಂಘಟನೆಗಳು ಮಂತ್ರಿ ಮಾಗಧರ ದಂಡನ್ನು ತಮ್ಮ ಸಭೆ ಸಮಾರಂಭಗಳಿಗೆ ಅಮಂತ್ರಿಸಿಕೊಂಡು ಕುತೂಹಲದಿಂದ ಕಾದಿದ್ದೇ ಬಂತು, ಈ ಅಕ್ಟೋಬರ್ ಕೊನೆಯಿಂದ ನವೆಂಬರ್ ಕೊನೆಯವರೆಗೆ ತೆರೆಯ ಮರೆಯಲ್ಲಿ, ರಾಜ್ಯ ದೇಶದ ರಾಜಕೀಯದ ಲೆಕ್ಕದಲ್ಲಿ ಬೇಕಾದಷ್ಟು ಘಟಿಸಿದೆ, ಹಾಗಿದ್ದರಿಂದಲೇ ಅನೇಕ ಶಿಲಾನ್ಯಾಸಗಳು ಸಮಾರಂಭಗಳು ಮುಖ್ಯ ಅತಿಥಿಗಳಿಲ್ಲದೇ ತೊಳಲಾಡುತ್ತಿವೆ ಎನ್ನಿಸಿದ್ದು ನನ್ನ ಅನಿಸಿಕೆ ಅಥವಾ ಭ್ರಮೆ ಇದ್ದಿರಬಹುದು.
ಸುಮಾರು ಎರಡೂವರೆ ವರ್ಷದಿಂದ ಮಾತನಾಡಿಸದ ಕನ್ನಡಿಗ ಸ್ನೇಹಿತನೊಬ್ಬ ನಿನ್ನೆ ಬೆಳಿಗ್ಗೆ ಫೋನ್ ಮಾಡಿದಾಗಲೇ ನನಗೆ ಬಹಳಷ್ಟು ಆಶ್ಚರ್ಯ ಕಾದಿತ್ತು. ಯಾವುದೋ ಕೆಲಸದ ನಡುವೆಯೇ ಗೋಣಿಗೆ ಫೋನಾಯಿಸಿಕೊಂಡು ಮತ್ತೆ ಹಳೆಯ ನೆನಪುಗಳನ್ನು ಕೆದಕಿಕೊಂಡ ನಮ್ಮಿಬ್ಬರ ಮನಸ್ಸಿನಲ್ಲಿ ಬಹಳ ಸಂತಸದಾಯಕ ವಾತಾವರಣ ಮೂಡಿತ್ತು. ನಮ್ಮಿಬ್ಬರ ನಡುವಿನ ಪರಿಚಯ ಅಥವಾ ಸ್ನೇಹ ಎನ್ನುವುದು ಸುಮಾರು ಹನ್ನೆರಡು ವರ್ಷಗಳ ಹಳೆಯದು, ಅಥವಾ ಅದಕ್ಕೂ ಹಿಂದಿನದ್ದಿರಬಹುದು. ಆದರೆ ಈ ಸ್ನೇಹಿತ ನನ್ನೊಡನೆ ಮಾತನಾಡಿದ ರೀತಿ ನನ್ನಲ್ಲಿ ಬಹಳಷ್ಟು ಆಶ್ಚರ್ಯವನ್ನು ಹುಟ್ಟಿಸಿತ್ತು. ಆ ಸ್ನೇಹದ ಸಲಿಗೆ ಅಥವಾ ಸದರದಿಂದಲೇ ನನಗೆ ಅನ್ನಿಸಿದ್ದನ್ನೂ ನಿಜವಾಗಿಯೂ ಹೇಳಿಬಿಟ್ಟೆ, ಅದೇ ನನ್ನನ್ನು ಈ ಲೇಖನ ಬರೆಯುವ ಕಷ್ಟಕ್ಕೆ ಸಿಕ್ಕು ಹಾಕಿಸಿದ್ದು.
ಅವನೊಡನೆ ನಡೆಸಿದ ಹದಿನೈದು ನಿಮಿಷದ ಮಾತುಕಥೆ ನನ್ನಲ್ಲಿ ಈ ಪ್ರಶ್ನೆಗಳನ್ನು ಹುಟ್ಟುಹಾಕಿದೆ: ನಮ್ಮಲ್ಲಿ ಬದಲಾವಣೆಗಳು ಸಹಜವೋ ಅಥವಾ ಬದಲಾವಣೆಗಳನ್ನು ನಾವೇ ನಮ್ಮ ಮೇಲೆ ಹೇರಿಕೊಳ್ಳುತ್ತೇವೋ, ನಾವು ಯಾವ ಯಾವ ರೀತಿ/ನಿಟ್ಟಿನಲ್ಲಿ ಬದಲಾಗಬೇಕು, ಬದಲಾದರೆ ಒಳ್ಳೆಯದು, ಇತ್ಯಾದಿ.
ನನ್ನ ಸ್ನೇಹಿತನ ಧ್ವನಿಯಲ್ಲಿ ಅಗಾಧವಾದ ಬದಲಾವಣೆಯಿದ್ದುದು ನನಗೆ ಮೊದಲ ಕ್ಷಣದಿಂದಲೇ ಗೊತ್ತಾಯಿತು. ಆತನ ಜೊತೆ ಎರಡು ವರ್ಷಗಳ ಹಿಂದೆ ಮಾತನಾಡುತ್ತಿರುವಾಗ ನಮ್ಮೂರಿನವನೇ ಅನ್ನಿಸಿದ ಮನುಷ್ಯ ಕೇವಲ ಎರಡೇ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗೊಂಡಿದ್ದ. ಅವನು ಉಚ್ಚರಿಸಿದ ಪ್ರತಿಯೊಂದು ಇಂಗ್ಲೀಷ್ ಪದಗಳಲ್ಲಿ ಸ್ಥಳೀಯ (ಅಮೇರಿಕನ್) ಪ್ರಭಾವವಿತ್ತು. ನಾನೂ ಪ್ರತಿದಿನವೂ ಸ್ಥಳೀಯರೊಡನೆ ಮಾತನಾಡುತ್ತೇನಾದರೂ ನನ್ನ ಭಾಷೆಯಲ್ಲಿಲ್ಲದ ಉಚ್ಚಾರ, ಸ್ವರಗಳೆಲ್ಲವೂ ನನ್ನ ಸ್ನೇಹಿತನಿಗೆ ಮೈಗೂಡಿತ್ತು. ನನ್ನ ಅನಿಸಿಕೆಯ ಪ್ರಕಾರ ಹೊರಗಿನಿಂದ ಭಾರತೀಯರು ಕಷ್ಟಪಟ್ಟು ಸ್ಥಳೀಯ ಅಮೇರಿಕನ್ ಆಕ್ಸೆಂಟಿನಲ್ಲಿ ಭಾಷೆಯನ್ನು ಬಳಸುತ್ತಾರೇನೋ ಎಂದು ಒಮ್ಮೆ ಅನಿಸಿದರೂ ಅವನು ತರ್ಕಬದ್ಧವಾದ ಮಾತುಗಳು ಕೃತಕವೆಂದು ಎಲ್ಲಿಯೂ ಅನ್ನಿಸಿಲಿಲ್ಲ.
’ನೀನು ಇಲ್ಲಿ ಯೂನಿವರ್ಸಿಟಿಯಲ್ಲಿ ಪಾಠ-ಪ್ರವಚನಗಳನ್ನೇನಾದರೂ ಮಾಡುತ್ತೀಯೇನು?’ ಎಂದಿದ್ದಕ್ಕೆ ’ಇಲ್ಲ, ಬರೀ ರಿಸರ್ಚ್ ಮಾತ್ರ’ ಎನ್ನುವ ಉತ್ತರ ಬಂತು. ಸ್ಥಳೀಯರ ಒಡನಾಟ ಅಷ್ಟೊಂದಿಲ್ಲದೇ ಒಂದು ಕಾಲದಲ್ಲಿ ನನ್ನೊಡನೆ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದ ಮನುಷ್ಯ ಆತನೇ ಮಾಡಿದ ಟೆಲಿಫೋನ್ ಕರೆಯ ಮೂಲಕವಾದರೂ ಮಾಮೂಲಿಯಾಗಿ ಹಾಗೂ ಸಹಜವಾಗಿ ಕನ್ನಡದಲ್ಲೇ ಮಾತನಾಡುತ್ತಾನೆ ಎಂದುಕೊಂಡರೆ, ಬರೀ ಸ್ಥಳೀಯ ಅಕ್ಸೆಂಟಿನಲ್ಲೇ ಇಂಗ್ಲೀಷು ತುಂಬಿರುವ ಮಾತುಗಳನ್ನು ಆಡುತ್ತಾನಲ್ಲಾ ಅದನ್ನು ಹೇಗಾದರೂ ಸ್ವೀಕರಿಸುವುದು?
ನಾನು ತಡೆಯದೇ ಹೇಳಿಯೇ ಬಿಟ್ಟೆ, ’ಅಲ್ಲಯ್ಯಾ, ನೀನು ನೀಡಿದ ಎರಡು ಶಾಕ್‌ಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ, ಸ್ವಲ್ಪ ತಡಿ.’
'What shock?'
'ಅದೇ, ಒಂದು ನೀನು ಇಷ್ಟೊಂದು ವರ್ಷ ಬಿಟ್ಟು ಫೋನ್ ಮಾಡುತ್ತೀದ್ದೀಯಲ್ಲಾ, ಹೇಗಿದ್ದೀಯಾ ಏನು ಕಥೆ? ಮತ್ತೊಂದು ನಿನ್ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ, ನಿನ್ನೂರಿನವರ ಹತ್ತಿರ ಹೀಗೇ ಮಾತನಾಡಿದೆಯಾದರೆ ಅವರು ಶಾಕ್‌ನಿಂದ ಚೇತರಿಸಿಕೊಳ್ಳುತ್ತಾರೆ ಎಂಬ ಗ್ಯಾರಂಟಿಯೇನೂ ಇಲ್ಲ’.
’ಏನ್ ಬದಲಾವಣೆ, ಗೊತ್ತಾಗಲಿಲ್ಲ...’
’ನಿನ್ನ ಇಂಗ್ಲೀಷ್ ಸ್ವರದಲ್ಲಿ ಉಚ್ಚಾರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ, ಯಾವಾಗಿನಿಂದ ಹೀಗೆ?’
’ಬದಲಾವಣೆಯಾ, ನನಗೇನೂ ಬದಲಾದ ಹಾಗೆ ಅನ್ನಿಸೋದಿಲ್ಲ!’
’ಬರೀ ಶಾಕ್‌ಗಳನ್ನೇ ಕೊಡ್ತಾ ಇರ್ತೀಯೋ, ಅಥವಾ ನಿನ್ನ ಬಗ್ಗೆ ಮತ್ತಿನ್ನೊಂದಿಷ್ಟೇನಾದರೂ ಹೇಳ್ತೀಯೋ?’
ಹೀಗೆ ನಮ್ಮ ಸಂಭಾಷಣೆ ಬೆಳೆಯುತ್ತಾ ಹೋಯ್ತು, ಆದರೆ ನನ್ನ ಸ್ನೇಹಿತನಲ್ಲಾದ ಬದಲಾವಣೆಗಳು ನನಗೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನಮ್ಮ ಮಾತಿನ ಮಧ್ಯೆ ನನ್ನ ಸ್ನೇಹಿತ ಮತ್ತೆ ಮೊದಲಿನಂತಾಗಿ ಹೋಗಿದ್ದ ಎನ್ನುವ ಬದಲಾವಣೆಗಳು ನನಗೆ ಕಾಣಿಸತೊಡಗಿದವೋ ಅಥವಾ ನಾನು ಹಾಗೆ (ನನ್ನ ಸ್ವಾರ್ಥಕ್ಕೆ) ಊಹಿಸಿಕೊಳ್ಳತೊಡಗಿದೆನೋ ಗೊತ್ತಿಲ್ಲ. ಬರೀ ನಮ್ಮ ಮಾತನ್ನು ಬದಲಾಯಿಸಿಕೊಂಡರೆ ಸಾಕೆ, ಆ ರೀತಿಯ ಬದಲಾವಣೆಗಳು ಅನಿವಾರ್ಯವೇ ಎಂದು ನನ್ನನ್ನು ಹಲವಾರು ಬಾರಿ ಕೇಳಿಕೊಂಡೆ. ಕೇವಲ ಆರೇ ಆರು ವರ್ಷ ಅಮೇರಿಕದಲ್ಲಿ ಕಳೆದ ಸ್ನೇಹಿತನ ಹಾವಭಾವ ಮಾತುಕಥೆಗಳಲ್ಲಿ ಬದಲಾವಣೆ ಏಕಾಯಿತು? ಅದರ ಅಗತ್ಯವೇನು, ಹೇಗೆ? ಎಂದೆಲ್ಲಾ ಗೊಂದಲಗಳು ಗೋಜಲುಗಳು ಹುಟ್ಟಿಕೊಂಡು ತಳುಕು ಹಾಕಿಕೊಳ್ಳತೊಡಗಿದವು.
ನಾನೂ ಬದಲಾಗಿದ್ದೇನೆ, ದಶಕದ ಮೇಲಿನ ಅನಿವಾಸಿತನ ನನ್ನನ್ನು ಬದಲಾಯಿಸಿದೆ ಇಲ್ಲವೆಂದೇನಿಲ್ಲ - ನಾನು ಭಾರತದಲ್ಲಿ ಎಷ್ಟೋ ಇಂಗ್ಲೀಷ್ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದವನು ಇಲ್ಲಿಗೆ ಬಂದು ತಿದ್ದಿಕೊಂಡಿದ್ದೇನೆ. ಆದರೆ ನನ್ನ ಕನ್ನಡದ ಬಳಕೆಯಲ್ಲಿ, ಅಥವಾ ಅದರ ಮಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ ಎಂಬುದು ನನ್ನ ದೃಢ ನಂಬಿಕೆ. ಇವತ್ತಿಗೂ ಒಬ್ಬ ಸಾಮಾನ್ಯ ಮನುಷ್ಯನೊದನೆ ನಾನು ಸಹಜವಾಗಿ ಸಂವಾದವನ್ನು ಬೆಳೆಸಬಲ್ಲೆ ಎಂಬ ಹೆಗ್ಗಳಿಕೆ ನನ್ನದು. ಮಾನಸಿಕವಾಗಿ ’ಇವರು ಅಮೇರಿಕದಲ್ಲಿರುವವರು...’ ಎಂದು ಪೂರ್ವಭಾವಿ ಯೋಚನೆಯಲ್ಲಿ ಮಾತನಾಡಿಸುವವರನ್ನು ಹೊರತುಪಡಿಸಿ ಉಳಿದವರಿಗೆ ನನ್ನ ಅನಿವಾಸಿತನದ ಸೂಕ್ಷ್ಮವೂ ಗೊತ್ತಾಗದಿರುವಂತೆ ಬದುಕುವುದೂ ಸಾಧ್ಯವಿದೆ ಎಂಬುದು ಗೊತ್ತಿದೆ. ಜೊತೆಗೆ ನನ್ನ ಹಾಗೆಯೇ ಎಲ್ಲರೂ ಇರಲೇ ಬೇಕು ಎಂದೇನೂ ಇಲ್ಲ ಎನ್ನು ಸಾಮಾನ್ಯ ತಿಳುವಳಿಕೆಯೂ ಇದೆ. ಹೀಗಿದ್ದ್ಯಾಗ್ಯೂ, ನನ್ನ ಸ್ನೇಹಿತನಲ್ಲಿನ ಬದಲಾವಣೆಗಳು ನನ್ನಲ್ಲಿ ನಿರಾಶೆಯನ್ನುಂಟು ಮಾಡಿದವು ಎಂದರೆ ತಪ್ಪೇನೂ ಇಲ್ಲ. ಆತನಿಗಾದ ಬದಲಾವಣೆಗಳು ಸರಿ ತಪ್ಪು ಎನ್ನುವುದಕ್ಕಿಂತಲೂ ನನಗೇ ಗೊತ್ತಾಗುವಷ್ಟರ ಮಟ್ಟಿಗಿನ ಆತನಲ್ಲಿನ ಬದಲಾವಣೆಗಳು ಅಗತ್ಯವೇ ಎಂದು ಯೋಚಿಸತೊಡಗಿದೆ. ಇದೇ ದೇಶದಲ್ಲಿ ನೂರಾರು ವರ್ಷಗಳಿಂದ ತಲತಲಾಂತರದಿಂದ ನೆಲೆಸಿ ಬೆಳೆಯುತ್ತಿರುವ ಆಫ್ರಿಕನ್ ಅಮೇರಿಕನ್ ಜನರು ತಮ್ಮ ಆಕ್ಸೆಂಟುಗಳಲ್ಲಾಗಲೀ ತಮ್ಮ ವಾಕ್ಯ ರಚನೆಯ ಶೈಲಿಯಲ್ಲಾಗಲೀ ಬದಲಾವಣೆ ಮಾಡಿಕೊಳ್ಳದಿದ್ದರೂ ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲ ಮಾನ್ಯತೆಗಳನ್ನೂ ಪಡೆದುಕೊಂಡಿರುವಾಗ ನಮಗೆ ಆಕ್ಸೆಂಟು ಬದಲಾವಣೆ ಅಗತ್ಯವಿದೆಯೇ? ಬರೀ ಅಕ್ಸೆಂಟುಗಳನ್ನು ಬದಲಾಯಿಸಿಕೊಂಡ ಮಾತ್ರಕ್ಕೆ ಏನು ಸಾಧಿಸಿಕೊಂಡಂತಾಯಿತು, ಹೀಗೆ ಆರಂಭಗೊಂಡ ಬದಲಾವಣೆಯ ಆದಿ ಮತ್ತು ಅಂತ್ಯ ಎಲ್ಲಿ ಎನ್ನುವುದು ಇನ್ನೂ ಪ್ರಶ್ನೆಗಳಾಗೇ ತಲೆ ತಿನ್ನುತ್ತಲೇ ಇವೆ.
ನೀವು ಬದಲಾಗಿದ್ದೀರೇನು? ಏಕೆ ಬದಲಾಗಿದ್ದೀರಿ, ಇಲ್ಲವಾದರೆ ಏಕೆ ಬದಲಾಗಿಲ್ಲ?