ಸಹೋದ್ಯೋಗಿಯೊಬ್ಬನಿಗೆ ತಗುಲಿಕೊಂಡ ಕ್ಯಾನ್ಸರ್
ಇವತ್ತು ನಮ್ಮ ಆಫೀಸಿನಲ್ಲಿ ನನ್ನ ಸಹೋದ್ಯೋಗಿಯೊಬ್ಬನಿಗೆ ಅವನ ಡಾಕ್ಟರ್ ಚರ್ಮದ ಕ್ಯಾನ್ಸರ್ ಇರುವುದಾಗಿ ಡಯಾಗ್ನೋಸ್ ಮಾಡಿದ್ದಾಗಿ ತಿಳಿಸಿದ, ನನಗೆ ಒಂದು ಕ್ಷಣ ಅವನ ಮಾತುಗಳನ್ನು ನಂಬಲು ಕಷ್ಟವಾಯಿತು. ಎಷ್ಟೊಂದು ಸಂತೋಷವಾಗಿ ಆಡಿಕೊಂಡು ಹಾಡಿಕೊಂಡು ಇದ್ದವನಿಗೆ ಚರ್ಮದ ಕ್ಯಾನ್ಸರ್ ಈಗಾಗಲೇ ಉಲ್ಬಣಗೊಂಡಿರುವುದರಿಂದ ಅರ್ಜೆಂಟಾಗಿ ಸರ್ಜರಿ ಮಾಡಿಸಬೇಕು ಹಾಗೂ ಅನೇಕ ಕ್ಯಾನ್ಸರ್ ಸಂಬಂಧಿ ಟ್ರೀಟ್ಮೆಂಟುಗಳನ್ನು ಕೊಡಿಸಿಕೊಳ್ಳಬೇಕು ಎಂದು ಅವನ ವೈದ್ಯರು ತಾಕೀತು ಮಾಡಿದ್ದಾರಂತೆ. ನಾವು ಕುಶಾಲಕ್ಕೆ ಮಾತನಾಡುತ್ತಿದ್ದಾಗಲೇ ಅವನು ತನ್ನ ಖಾಯಿಲೆಯ ಬಗ್ಗೆ ಸಹಜವಾಗಿ ಪ್ರಸ್ತಾಪ ಮಾಡಿದ್ದು ನನಗೆ ಆಶ್ಚರ್ಯ ತರಿಸಿದರೂ ಅವನ ಮನದಾಳದಲ್ಲಿನ ದುಗುಡ ಸ್ವಲ್ಪ ಇಣುಕಿ ನೋಡಿದವರಿಗೆ ತಿಳಿಯುವಂತಿತ್ತು.
ಮಾನವನ ವೈದ್ಯಕೀಯ ಜ್ಞಾನ ಬೆಳೆದಂತೆ ತಿಳುವಳಿಕೆ ಬೆಳೆದಂತೆ ಅವನಿಗೆ ತಗಲುವ ರೋಗಗಳೂ ಅವುಗಳ ಕಾಂಪ್ಲಿಕೇಷನ್ನುಗಳೂ ಹೆಚ್ಚೆನಿಸೋದಿಲ್ಲವೇ? ನನಗೆ ಮೊದಲೆಲ್ಲ ನೆಲಗಡಲೆಯನ್ನು ತಿಂದೂ ಅಲರ್ಜಿಯಾಗುತ್ತದೆ ಅಮೇರಿಕದಲ್ಲಿ ಕೆಲವರಿಗೆ ಎಂದು ಕೇಳಿ ಬಹಳಷ್ಟು ಆಶ್ಚರ್ಯವಾಗುತ್ತಿತ್ತು, ಆದರೆ ಇತ್ತೀಚೆಗೆ ಅಂತಹ ಅಲರ್ಜಿ ಪೀಡಿತ ವ್ಯಕ್ತಿಯೊಬ್ಬರನ್ನು ನೋಡಿದಾಗ ನನ್ನ ನಂಬಿಕೆಯನ್ನು ಬದಲಿಸಿಕೊಳ್ಳಬೇಕಾಗಿ ಬಂತು. ನಮ್ಮ ಸೀನಿಯರ್ ಮೆಂಬರ್ ಒಬ್ಬರಿಗೆ ಅವರ ರಿಟೈರ್ಮೆಂಟು ಎಂದು ನಾವೆಲ್ಲರೂ ಕೇಕ್ ತಂದಿರಿಸಿದರೆ ಅವರು ನನಗೆ ಗೋಧಿ ಅಲರ್ಜಿ ಇದೆ ಎಂದಾಗ ನಂಬಲು ಕಷ್ಟವಾಯಿತು. ವೈರಾಣುಗಳೂ, ಬ್ಯಾಕ್ಟೀರಿಯಾಗಳು ನಮ್ಮ ವಿರುದ್ಧ ಸಮರ ಸಾರಿರುವಂತಿದೆ. ನಾವು ಮುಂದುವರೆದಂತೆಲ್ಲ ಅವುಗಳ ತಳಿ ಅಷ್ಟೇ ಪ್ರಭಲವಾಗುತ್ತಿದೆ. ಈಗೆಲ್ಲ ಮೊದಲಿನ ಹಾಗೆ ಕ್ಷಯ, ಸಿಡುಬಿನ ಪ್ಯಾಂಡೆಮಿಕ್ ಸನ್ನಿವೇಶ ಇಲ್ಲದಿರಬಹುದು, ಪ್ರಪಂಚದಾದ್ಯಂತ ಮಿಲಿಯನ್ನ್ ಗಟ್ಟಲೆ ಜನರನ್ನು ಆಕ್ರಮಿಸಿಕೊಂಡಿರುವ ಏಯ್ಡ್ಸ್ ರೋಗವೊಂದೇ ಸಾಕು ಕೆಲವೊಮ್ಮೆ ಮಾನವ ಸಂತಾನವನ್ನು ನಿರ್ಮೂಲನ ಮಾಡಲು ಎಂದು ಒಮ್ಮೆ ಭಯವಾಗುತ್ತದೆ.
ಕ್ಯಾನ್ಸರ್ ಬರುವುದರ ಹಿಂದೆ ನೂರಾರು ಕಾರಣಗಳಿದ್ದಿರಬಹುದು. ಒಬ್ಬ ವ್ಯಕ್ತಿ ನಲವತ್ತು ವರ್ಷ ನಿರಂತರವಾಗಿ ಹೊಗೆಬತ್ತಿ ಸೇದಿ ಆತನಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದರೆ ಅದನ್ನು ಕೇಳಿ ಆಶ್ಚರ್ಯವಾಗುವುದಕ್ಕಿಂತ ಹೆಚ್ಚು ಯಾವುದೇ ದುಶ್ಚಟ ಉಳ್ಳವರೂ, ಮಾಂಸಾಹಾರವನ್ನೂ ಮಾಡದವರೂ ಕ್ಯಾನ್ಸರ್ಗೆ ತುತ್ತಾಗುವುದನ್ನು ಕೇಳಿ ಬಹಳಷ್ಟು ಬೇಸರವಾಗುತ್ತದೆ. ಅವರವರ ಕರ್ಮ ಫಲ ಎಂದು ಸುಲಭವಾಗಿ ತಳ್ಳಿ ಹಾಕುವುದಕ್ಕಿಂತ ಮೊದಲು ಯಾರಿಗೂ ಹೇಳಿ ಯಾರನ್ನೂ ಕೇಳಿ ಬರದ ಈ ರೋಗಗಳಿಂದ ಮುಕ್ತಿಯನ್ನು ಪಡೆಯುವುದಾದರೂ ಎಂದು? ಚರ್ಮದ ಕ್ಯಾನ್ಸರ್ ಬಂದೀತೆಂದು ಮುಖ, ಮೈ, ಬೆನ್ನುಗಳನ್ನು ಪ್ರತೀ ದಿನವೂ ಪರೀಕ್ಷಿಸಿಕೊಳ್ಳಲಾಗುತ್ತದೆಯೇ? ಅಲ್ಲಲ್ಲಿ ಹುಟ್ಟಿ ಸಾಯುವ ಮಚ್ಚೆಗಳಿಗೆಲ್ಲ ಚರ್ಮ ರೋಗ ತಜ್ಞರ ಬಳಿ ಹೋಗಲಾಗುತ್ತದೆಯೇ? ಬಿಸಿಲಿಗೆ ಹೋದಾಗಲೆಲ್ಲ ಮುಖಕ್ಕೆ, ಮೈ ಕೈಗೆ ಸನ್ಸ್ಕ್ರೀನ್ ಲೋಷನ್ ಮೆತ್ತಿಕೊಳ್ಳಲಾಗುತ್ತದೆಯೇ? ಹಾಗಿದ್ದ ಮೇಲೆ ಎಲ್ಲೋ ಒಂದು ದಿನ ಕೇರ್ ಫ್ರೀ ಆಗಿ ಬದುಕುವವರು ತಮ್ಮ ಜೀವವನ್ನೇ ಆ ಒಂದು ಕೇರ್ ಫ್ರೀ ಕ್ಷಣಕ್ಕೆ ಬಲಿಕೊಡಬೇಕಾಗಿ ಬಂದಾಗ ಬದುಕು ಬಹಳ ದುಬಾರಿ ಅನ್ನಿಸೊದಿಲ್ಲವೇ? ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಕುಟುಂದ ಹಿರಿಯರನ್ನು ಕಳೆದುಕೊಂಡ ಸದಸ್ಯರು, ಅನಾಥರಾಗುವ ಮಕ್ಕಳು ಇವುಗಳಿಗೆಲ್ಲ ಕ್ಯಾನ್ಸರ್ ಎನ್ನುವ ಮಾರಕ ರೋಗ ಯಾವ ರೀತಿಯ ಪರಿಣಾಮ ಬೀರಬಲ್ಲದು ಎನ್ನಿಸಿ ಒಮ್ಮೆ ಮರುಕ ಹುಟ್ಟಿತು.
ವೈದ್ಯಕೀಯ ಪರಿಭಾಷೆಯಲ್ಲಿ ಆಯಾ ಹಂತದ ಕ್ಯಾನ್ಸರ್ಗಳನ್ನು ನೋಡಿ - ’ನೀನು ಸಾಯುವುದು ಗ್ಯಾರಂಟಿ’ ಎಂದು ತೀರ್ಪು ಕೊಟ್ಟಾಗ ಆ ವ್ಯಕ್ತಿಯ ಮನಸ್ಥಿತಿ ಹೇಗಿರಬಹುದು? ಅವನನ್ನು ನಂಬಿಕೊಂಡ, ಆಧರಿಸಿಕೊಂಡ ಕುಟುಂಬದವರ ಮೇಲಿನ ಪರಿಣಾಮ ಹೇಗಿರಬಹುದು? ಯಾರದೋ ತಪ್ಪಿಗೆ ಯಾರಿಗೆ ಶಿಕ್ಷೆ ಎನ್ನುವಂತೆ ಆ ವ್ಯಕ್ತಿ ಈ ರೋಗ ತನಗೇಕೆ ತಗಲಿಕೊಂಡಿತೋ ಎಂದು ಮನಪೂರ್ತಿ ಪರಿಪರಿ ಆಲೋಚಿಸುವ ರೀತಿ ಹೇಗಿರಬಹುದು? ಇವುಗಳನ್ನೆಲ್ಲ ಯೋಚಿಸಿಕೊಂಡಷ್ಟೂ ನನ್ನ ಮೇಲಿನ ನಿರಾಶೆಯ ಮೋಡ ದಟ್ಟವಾಗತೊಡಗಿತೇ ವಿನಾ ಎಲ್ಲೂ ಬೆಳಕಿನ ಕಿರಣಗಳು ಕಾಣಿಸಲಿಲ್ಲ.
ನನ್ನ ಸಹೋದ್ಯೋಗಿ, ನಮ್ಮಿಂದ ಸಹಾನುಭೂತಿ ಬಯಸದೇ ಇರಬಹುದು, ನಮ್ಮಿಂದ ಯಾವ ಸಹಾಯವನ್ನೂ ಬಯಸದೇ ಇರಬಹುದು. ಆದರೆ ಇಷ್ಟು ವರ್ಷಗಳ ನಮ್ಮೊಡನಿದ್ದು, ಅಕಸ್ಮಾತ್ ಈ ರೋಗಕ್ಕೆ ತುತ್ತಾಗಿ ಒಂದು ಇಲ್ಲವೆಂದಾಗುತ್ತಾನೆ ಎಂದು ಯೋಚಿಸಿಕೊಂಡಾಗ ಒಂದು ಕಡೆ ಜೀವನ ಕ್ಷಣಿಕ ಎನ್ನುವ ವೈರಾಗ್ಯವೂ ಮತ್ತೊಂದು ಕಡೆ ಜೀವನ ಎಷ್ಟೊಂದು ಅಮೂಲ್ಯ ಎನ್ನುವ ಶೋಧನೆಯೂ ಹೊರಕ್ಕೆ ಬಂದವು. ನನ್ನ ಸಹೋದ್ಯೋಗಿಯೇನೋ ದಿನವಿಡೀ ನಾನಾ ರೀತಿಯಲ್ಲಿ ಕ್ಯಾನ್ಸರ್ ಅನ್ನು ನೆನೆಸಿಕೊಂಡು ನಗುತ್ತಲೇ ಇದ್ದ, ಮುಂದೊಂದು ದಿನ ಆತನಿಗೆ ಅಂಟಿದ ರೋಗದಿಂದ ಅವನಿಗೆ ಮುಕ್ತಿ ಸಿಕ್ಕೀತು ಎನ್ನೋದು ನನ್ನ ಆಶಾಭಾವನೆ ಅಷ್ಟೇ.
ಕ್ಯಾನ್ಸರ್ಗೆ ಸಿಕ್ಕಿ ಸಾಯುವವರಿಗಿಂತ ಮೋಟಾರು ವಾಹನಗಳ ಅಫಘಾತದಲ್ಲಿ ಸಿಕ್ಕಿ ಸಾಯುವವರು ಹೆಚ್ಚಿರಬಹುದು, ಆದರೆ ಅವೆರಡೂ ಭಿನ್ನ ನೆಲೆಗಳೇ. ಸಂಖ್ಯಾ ಆಧಾರದಲ್ಲಿ ಇಂತದೊಂದು ರೋಗ ಹೆಚ್ಚು ಅಥವಾ ಕಡಿಮೆ ಎಂದು ಹೇಳುವುದು ಸುಲಭವಾಗಿರಬಹುದು. ತಮ್ಮಷ್ಟಕ್ಕೆ ದ್ವಿಗುಣ, ತ್ರಿಗುಣಗೊಂಡು ಬೆಳೆಯುವ ಜೀವ ಕೋಶಗಳು ಒಂದು ದಿನ ಏಡಿಗಂಥಿಗಳಾಗಿ ಎಲ್ಲೆಡೆ ಹರಡಿ ಮನುಷ್ಯನ ಬದುಕನ್ನು ಧಾರುಣಗೊಳಿಸುವಂತಹ ಕೆಟ್ಟ ಖಾಯಿಲೆ ಇನ್ನೊಂದಿರಲಾರದು. ಅಂತಹ ರೋಗಗಳಿಗೆ ಏನೇನೋ ಔಷಧಿ ಮತ್ತೊಂದು ಮಾಡಿ ಸಾಯುವವರೆಗೆ ಅನುಭವಿಸುವ ಬದಲು ಇದ್ದಕ್ಕಿದ್ದ ಹಾಗೆ ಹಾರ್ಟ್ ಆಟ್ಯಾಕ್ ಆಗಿ ಸಾಯುವುದೇ ಮೇಲೆಂದು ಅನ್ನಿಸಿದ್ದಂತೂ ನಿಜ!