ಖಾಲೀ ಹಾಳೆ
ಓಹ್, ಬೇಡವೆಂದರೂ ತೆರೆದುಕೊಂಡು ಕುಳಿತಿದೆ ಖಾಲೀ ಹಾಳೆ! ಪಕ್ಕದಲ್ಲಿರುವ ದೀಪ ತನ್ನ ಸುತ್ತಲು ಚೆಲ್ಲುತ್ತಿರುವ ಬೆಳಕೆಷ್ಟೋ, ಅಪರಿಮಿತದಲ್ಲಿ ಪರಿಮಿತವಾಗಿರುವ ಈ ಬೆಳಕಿಗೆ ಬಿದ್ದ ನಾನಾ ವಸ್ತುಗಳು ಹೊಳೆಯ ತೊಡಗಿವೆ, ಅಂದರೆ ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿಕೊಂಡು. ಹಾಗೆ ಪ್ರತಿಫಲಿಸಿದ ಬೆಳಕು ಮತ್ತಿನ್ನೆಲ್ಲೋ ಬಿದ್ದು, ಮತ್ತೆ ಪ್ರತಿಫಲನ - ಹೀಗೆ ಕೋಣೆಯುದ್ದಕ್ಕೂ ತುಂಬಿದ ಹಲವು ರೇಖೆಗಳು. ಊಹ್ಞೂ, ರೇಖೆಗಳು ಅಂದರೆ ಅದು ನಮ್ಮ ಮಿತಿಯಾದೀತು, ಕಂಡಕಂಡಲ್ಲಿ ಹರಡಿಕೊಂಡಿರುವ ಒಂದು ವಸ್ತು ಎಂದು ಬಿಟ್ಟರೆ ಬೆಳಕಿಗೆ ಜೀವವಿಲ್ಲವೇ ಎಂದು ಯಾರಾದರೂ ಕೇಳಿಬಿಟ್ಟಾರು ಎಂಬ ಹೆದರಿಕೆ. ಇವೆಲ್ಲದರ ನಡುವೆ ಇದೊಂದು ಖಾಲೀ ಹಾಳೆ, ನನ್ನನ್ನು ತುಂಬಿಸು, ತುಂಬಿಸಿಕೋ ಎಂದು ಗೋಗರೆದರೆಂತೆ ಮೇಲ್ನೋಟಕ್ಕೆ ಕಂಡುಬಂದರೂ ಅದರ ಮನಸ್ಸು, ಅದರ ಹಿಂದಿನ ಸತ್ವವೆಲ್ಲ ಒಬ್ಬ ಋಷಿಯ ಹಾಗೆ - ಎಲ್ಲವನ್ನೂ ಬಲ್ಲೆ, ಎಲ್ಲವನ್ನೂ ಒಳಗೊಂಡಿಹೆ, ಆದರೆ ಏನನ್ನೂ ಅರಿಯದವನು ಎಂಬ ಸದಾ ಮುಗ್ಧ ಮುಖವನ್ನು ತೋರಿಸಿಕೊಂಡಿರುವಂತಹದು.
ಎಷ್ಟೇ ನಿಧಾನವಾಗಿ ಉಸಿರಾಡಿದರೂ ಕೇಳಿಸಬಹುದಾದಂತಹ ಮೌನ. ಬೆಳಕಿಗೆ ಹೊಳೆಯುತ್ತಿರುವ ಸುತ್ತಲಿನ ವಸ್ತುಗಳೆಲ್ಲ ನನ್ನ ಬಗ್ಗೆ ಬರಿ ನನ್ನ ಬಗ್ಗೆ...ಎಂದು ಕೂಗುತ್ತಿರುವವೇನೋ ಎಂಬ ಕೊರಗನ್ನು ಹೊತ್ತುಕೊಂಡಿರುವ ಭಾರವಾದ ಮೌನ. ನಮ್ಮ ಸುತ್ತಲಿನ ವಸ್ತು ವಿಷಯಗಳಿಗೆಲ್ಲ ಭಾಷೆ ಇದೆಯೇ ಎಂದು ಸೋಜಿಗಪಡುವಷ್ಟರ ಮಟ್ಟಿಗಿನ ಸಂಕೀರ್ಣವಾದ ಸಂವಾದ, ಅವುಗಳನ್ನು ಅರ್ಥ ಮಾಡಿಕೊಂಡಿದ್ದೇವೆಂಬ ಭ್ರಮೆಯಲ್ಲಿರಬಹುದಾದ ನಾವುಗಳು. ಜೊತೆಯಲ್ಲಿ ವಸ್ತುವಿನ ರೂಪ ನೋಡುಗರ ಕಣ್ಣಲ್ಲಿ ಎಂಬ ತಿಪ್ಪೆ ಸಾರಿಸುವ ಪ್ರಕ್ರಿಯೆ ಬೇರೆ!
ಈ ಖಾಲೀ ಹಾಳೆ ಯಾರಿಗೋಸ್ಕರ ತೆರೆದುಕೊಂಡಿದೆ? ಈ ಹಾಳೆಯ ಮೂಲೆ ಮೂಲೆಗಳಿಗೆ ಅಕ್ಷರವನ್ನು ಸ್ಥಾಪಿಸುತ್ತೇವೆಂದು ಯಾರೂ ಈ ವರೆಗೆ ಭಾಷೆ ನೀಡಿರದಿದ್ದರೂ ಬೆಳಕಿಗೆ ಹೊಳೆದು ಅದು ಬೀಗಿದಂತೆ ತೋರುವುದೇಕೆ? ಬಿಳಿ ಬಣ್ಣವೇ, ಅಂದರೆ ಖಾಲೀ ಹಾಳೆಗೂ ಒಂದು ಸ್ವರೂಪವಿದೆಯೆಂದಾಯಿತೇ? ಬಿಳಿಯಲ್ಲಿ ಬೇರೆಲ್ಲ ಬಣ್ಣಗಳಡಗಿವೆಯೆಂದಾದರೆ ಖಾಲೀ ಹಾಳೆಯಲ್ಲಿ ಎಲ್ಲವೂ ಇವೆಯೆಂದೇ? ಎಲ್ಲವೂ ಇದ್ದ ಮೇಲೆ ಅದು ಖಾಲೀ ಹೇಗಾಯಿತು? ಓಹ್, ಅಕ್ಷರಗಳು - ಇಂತಹ ಖಾಲೀ ಹಾಳೆಯನ್ನು ತುಂಬಿಸಿ ಮೋಕ್ಷ ನೀಡಬಲ್ಲ ಏಕೈಕ ಮಾರ್ಗ.
ಈ ಖಾಲೀ ಹಾಳೆಯ ಹೊರ ಮೈ ಹೀಗಿದ್ದರೆ ಒಳ ಮೈ ಹೇಗಿದ್ದಿರಬಹುದು ಎಂದು ಅನೇಕ ಸಾರಿ ಯೋಚನೆ ಬಂದಿದ್ದಿರಬಹುದು. ಹಾಳೆಗೆ ಎಷ್ಟು ಮುಖವೆಂದು ಕೇಳಿದರೆ ಎರಡು ಎಂದು ಮಕ್ಕಳು ಬೇಕಾದರೂ ಉತ್ತರಿಸಿಯಾರು, ಇದ್ದರೂ ಇಲ್ಲದಂತೆ ತೋರುವ ಇನ್ನು ನಾಲ್ಕು ಮುಖಗಳನ್ನು ಯಾರೋ ಹಾಗಾದರೇ ನೋಡೋದೇ ಇಲ್ಲವೇನು? ದೊಡ್ಡದಾಗಿ ಕಂಡ ಎರಡೇ ಎರಡು ಮುಖಗಳು ಇನ್ನುಳಿದ ನಾಲ್ಕು ಮುಖಗಳಿಗೆ ಧ್ವನಿಯಾಗಬೇಕು ಎಂದರೆ? ಯಾವುದೋ ಕಾಡಲ್ಲಿ ನೀರುಂಡು ಬೆಳಿದಿದ್ದ ಮರದ ಕಾಂಡ, ಅಥವಾ ತೊಗಟೆಯ ಪರಿಶ್ರಮವಿದಾಗಿರಬಹುದು, ಅಥವಾ ಮಾನವನ ಊಹೆಯ ಮಿತಿಯಲ್ಲಿ ಸಿಕ್ಕ ಅನೇಕ ವಸ್ತುಗಳ ಸಂಗಮದ ಸ್ವರೂಪವಾಗಿರಬಹುದು, ಬಿಳಿ ಅಲ್ಲದ್ದನ್ನು ಮೂಳೇ-ಇದ್ದಿಲನ್ನು ಹಾಕಿ ತೆಗೆದ ಹೊಸ ಮೇಲ್ಮೈ ಇದ್ದಿರಬಹುದು.
ಈ ಖಾಲೀ ಹಾಳೆ ತೆಳ್ಳಗಿದೆ, ಬೆಳ್ಳಗಿದೆ. ಬಳುಕುತ್ತದೆ, ಜೊತೆಗೆ ಗಾಳಿ ಬಂದೆಡೆಯೆಲ್ಲಾ ಹಾರಿ ಹೋಗುತ್ತದೆ. ಅದೊಂದು ಮಿತಿಯೇ ಸರಿ, ನಿರ್ವಾತದಲ್ಲಿ ಈ ಹಾಳೆಯ ಆಟವೇನೂ ನಡೆಯದು. ತನ್ನ ತೂಕಕ್ಕೆ ತಾನೇ ತೊನೆಯದ ಇದೂ ಒಂದು ವಸ್ತು, ಅದರದ್ದೂ ಒಂದು ಅಸ್ತಿತ್ವ. ಬರೀ ಅಕ್ಷರಗಳನ್ನು ಮೂಡಿಸಿ ಇದರ ಬದುಕನ್ನು ಪರಮಪಾವನ ಮಾಡಬೇಕೆಂದೇನೂ ಎಲ್ಲಾ ಸಮಯದಲ್ಲಿ ವಿಧಿ ಬರೆಯೋದಿಲ್ಲ, ಎಷ್ಟೋ ಸಾರಿ ಮೂಗು ಒರೆಸಿಯೋ, ಇಲ್ಲಾ ಕೈ ತೊಳೆದು ಹಸಿಯನ್ನು ವರ್ಗಾಯಿಸಿಯೋ ತಿಪ್ಪೆಗೆ ಬಿಸಾಡಿದ ಸನ್ನಿವೇಶಗಳು ಬೇಕಾದಷ್ಟಿವೆ. ತನ್ನ ಅಗಲವಾದ ಮುಖದ ಮೇಲೆ ಅಕ್ಷರಗಳನ್ನು ತುಂಬಿಸಿ ಹಾಗೆ ಮೋಕ್ಷ ಸಿಗುತ್ತದೆ ಎಂದು ಕಾದದ್ದು ಹುಸಿಯಾಗಿದೆ. ಬಾಯಿಂದಾಡಿದ್ದಷ್ಟೇ ಬಾಷೆಯಾಗುಳಿಯದೇ ಚಲನವಲನಗಳು ಸೃಷ್ಟಿಸೋ ಸ್ಪಂದನಗಳನ್ನು ಖಾಲೀ ಹಾಳೆ ತೆರೆದಿಡುವಲ್ಲಿ ಸೋತಿದೆ, ಮಸಿ ಬಿದ್ದರೇನೂ ಮೂಡುವುದು ಅಕ್ಷರವಾದರೆ ಇನ್ನು ಮಸಿಗೆ ಮೀರಿದ ಮಾತುಗಳಿಗೆ ಈ ಹಾಳೆ ಯಾವ ನೆಲೆಗಟ್ಟನ್ನು ಒದಗಿಸಿಕೊಡಬಲ್ಲದು? ಹೋಗಲಿ, ಅಂತಹವುಗಳನ್ನು ಈವರೆಗೆ ಯಾರಾದರೂ ಎಲ್ಲಾದರೂ ಹೇಗಾದರೂ ಬರೆಯಲು ಯತ್ನಿಸಿದ್ದಾರೇನು?
ಇಂತಹ ಖಾಲೀ ಹಾಳೆ ಯಾರಾದರೂ ನನ್ನ ಮುಖದ ಮೇಲೆ ಬರೆದಾರೇನೋ ಎಂದು ನಿರುಕಿಸುತ್ತದೆ - ಹೊರಗಿನ ಹವಾಮಾನವನ್ನು ಒಂದೇ ನೋಟದಲ್ಲಿ ಅಳೆಯೋ ಹುಡುಗನ ಹಾಗೆ, ಮುಂದೆ ಮಳೆಬರಬಹುದಾದ ಸೂಚನೆಯನ್ನು ಕಂಡು ಆಡಲು ಹೋಗಲಾಗುವುದಿಲ್ಲವಲ್ಲಾ ಎಂದು ಹಪಹಪಿಸೋ ದಾರುಣ ನೋಟವನ್ನು ನೀಡುತ್ತದೆ. ಎಷ್ಟೋ ಸಾರಿ ಅನ್ನಿಸಿದೆ, ಈ ಖಾಲೀ ಹಾಳೆಯದು ದೇವಸ್ಥಾನದ ಆವರಣದಲ್ಲಿ ಭಿಕ್ಷೆ ಬೇಡುವ ಭಿಕ್ಷುಕರ ಹಾಗಿನ ಪರಿಸ್ಥಿತಿ ಎಂದು. ಖಾಲೀ ಹಾಳೆಯ ಈ ಖಾಲೀ ತನ ಮುಖ್ಯ ಮುಂದೆ ಹೊಸದನ್ನೇನಾದರೂ ತುಂಬಿಕೊಳ್ಳಲು, ಒಮ್ಮೆ ತುಂಬಿಸಿಕೊಂಡ ಮೇಲೆ ಮತ್ತೆ ಖಾಲೀಯಾಗುವುದು ಎಂಬುದೇನೂ ಇಲ್ಲ, ಆದ್ದರಿಂದಲೇ ಬೇಡುವವನಿಗೆ ತನಗೇನು ಸಿಗಬಹುದು ಎಂಬ ಸೂಕ್ಷ್ಮವಿರಬೇಕು ಎನ್ನುವುದು. ಒಂದು ವೇಳೆ ಬಯಸಿದ್ದು ಸಿಕ್ಕೇ ಬಿಟ್ಟಿತು ಎನ್ನೋಣ ಆಗ ಖಾಲಿ ಇದ್ದದೂ ತುಂಬಿಕೊಳ್ಳುತ್ತದೆ, ಒಮ್ಮೆ ತುಂಬಿಕೊಂಡದ್ದು ಮತ್ತೆ ಖಾಲಿಯಾಗದು ಎಂಬ ಅಳುಕನ್ನು ಈವರೆಗೆ ಎಲ್ಲಿಯೂ ಯಾರಲ್ಲಿಯೂ ನೋಡಿದ್ದಿಲ್ಲ!