ಅರ್ಧ ವರ್ಷದ ಅರಣ್ಯರೋಧನ
ಸಂಜೆ ಆಫೀಸ್ ಬಿಟ್ಟು ಬರುವಾಗ ’ವರ್ಷದ ಉತ್ತರಾರ್ಧದಲ್ಲಿ ಸಿಗೋಣ, ವೀಕ್ ಎಂಡ್ ಚೆನ್ನಾಗಿರಲಿ...’ ಎಂದು ಸಹೋದ್ಯೋಗಿ ಒಬ್ಬಳು ಹೇಳಿದಾಗಲೇ, ’ಅಯ್ಯೋ ಅರ್ಧ ವರ್ಷ ಆಗ್ಲೇ ಮುಗಿದು ಹೋಯ್ತೇ, ಮೊನ್ನೆ ಮೊನ್ನೆ ಇನ್ನೂ ಆರಂಭವಾದ ಹಾಗಿತ್ತಲ್ಲಪ್ಪಾ...’ ಎನ್ನುವ ಸ್ವರ ನನಗಿರಿವಿಲ್ಲದೇ ಹೊರಗೆ ಬಂತು. ಹೀಗೆ ವರ್ಷ, ತಿಂಗಳು, ವಾರಗಳನ್ನು ಕಳೆಕಳೆದುಕೊಂಡು ಇನ್ನೊಂದಿಷ್ಟು ದಿನಗಳಲ್ಲಿ ಈ ವರ್ಷವೂ ಮುಗಿದು ಮುಂದಿನ ವರ್ಷ ಬರೋದು ಮಿಂಚಿನ ಹಾಗೆ ಆಗಿ ಹೋಗುತ್ತೋ ಏನೋ ಎನ್ನುವ ಹೆದರಿಕೆಯೂ ಜೊತೆಯಲ್ಲಿ ಹುಟ್ಟಿತು.
’ಈ ತಿಂಗಳು, ಕ್ವಾರ್ಟರ್ರು, ವರ್ಷಗಳ ಲೆಕ್ಕವೆಲ್ಲ ನನಗಲ್ಲ, ನಮ್ಮದೇನಿದ್ರೂ ಯುಗಾದಿ ಆಧಾರಿತ ವರ್ಷಗಳ ಲೆಕ್ಕ, ಚೈತ್ರ ಮಾಸ, ವಸಂತ ಋತು ತರೋ ಸಂಭ್ರಮವೆಲ್ಲಿ, ಡಿಸೆಂಬರ್ ಮೂವತ್ತೊಂದರಿಂದ ಜನವರಿ ಒಂದರ ಬದಲಾವಣೆಯೆಲ್ಲಿ?’ ಎಂದು ನನ್ನೊಳಗಿನ ಧ್ವನಿಯೊಂದು ಕ್ರೆಷ್ಟ್ ಗೇಟ್ ತೆರೆದಾಗ ನೀರು ಭರದಿಂದ ಹೊರಬರುವಂತೆ ನುಗ್ಗಿ ಬಂತು. ’ಹಾಗಾದ್ರೆ ಇದು ಯಾವ ಸಂವತ್ಸರ ಹೇಳು ನೋಡೋಣ?’ ಎನ್ನುವ ಪ್ರಶ್ನೆಯ ಕೊಂಕು ಬೇರೆ...ಒಂದು ಕಾಲದಲ್ಲಿ ಅರವತ್ತು ಸಂವತ್ಸರಗಳನ್ನು ಹಾಡಿನಂತೆ ಹೇಳಿ ಒಪ್ಪಿಸುತ್ತಿದ್ದ ನನಗೆ ಇಂದು ಪ್ರಭವ, ವಿಭವರು ಯಾವುದೋ ಅನ್ಯದೇಶೀಯ ಹೆಸರುಗಳಾಗಿ ಕಂಡುಬಂದವು.
ಸೈನ್ಸ್ ಮ್ಯಾಗಜೀನ್‌ನಲ್ಲಿ ವರದಿ ಮಾಡಿದ ಹಾಗೆ ೯೦೦೦ ಸಾವಿರ ವರ್ಷಗಳ ಹಿಂದೆಯೇ ಮಿಡ್ಲ್ ಈಸ್ಟ್‌ನಲ್ಲಿ ಬೆಕ್ಕುಗಳನ್ನು ಸಾಕಿಕೊಂಡ ಪುರಾತನ ಕಥೆ, ಸುಮಾರು ೭೦೦೦ ವರ್ಷಗಳ ಹಿಂದೆ ಸಾಗುವ ಈಜಿಪ್ಟಿನ ವಂಶವೃಕ್ಷ, ಜೊತೆಯಲ್ಲಿ ಕೊನೇಪಕ್ಷ ಏನಿಲ್ಲವೆಂದರೂ ಒಂದು ಐದು ಸಾವಿರ ವರ್ಷಗಳನ್ನಾದರೂ ಕಂಡಿರುವ ಭರತ ಖಂಡ, ಅದರ ತಲೆಯ ಮೇಲೆ ಅಗಲವಾಗಿ ಹರಡಿಕೊಂಡ ಚೀನಾ ಪುರಾತನ ಪರಂಪರೆ. ಇಷ್ಟೆಲ್ಲಾ ಇದ್ದೂ ಸಹ, ಪ್ರಪಂಚವನ್ನು ನಡೆಸಲು ಕ್ರಿಸ್ತಶಕೆಯೇ ಏಕೆ ಬೇಕಾಯ್ತು ಎಂದು ವಿಸ್ಮಯಗೊಂಡಿದ್ದೇನೆ. ಯೂರೋಪಿನ ಸಾಮ್ರಾಟರು ತಮ್ಮ ತಮ್ಮ ಹೆಸರುಗಳಿಗೆ ಒಂದೊಂದು ತಿಂಗಳನ್ನು ಹುಟ್ಟಿಸಿಕೊಂಡರು...ಮುಂದೆ ಸೂರ್ಯನು ಮುಳುಗದ ಸಾಮ್ರಾಜ್ಯವಾಗಿ ಪ್ರಪಂಚವನ್ನೇ ಆಳಿದ ಇಂಗ್ಲೀಷರು - ಅಂದರೆ ಕೇವಲ ಒಂದು ನೂರು ಇನ್ನೂರು ಹೆಚ್ಚೆಂದರೆ ಐನೂರು ವರ್ಷಗಳ ಬೆಳವಣಿಗೆಯ ಮುಂದೆ ಆ ಸಾವಿರ ವರ್ಷಗಳ ಇತಿಹಾಸ ಗೌಣವಾದದ್ದಾದರೂ ಹೇಗೆ? ಪ್ರಪಂಚದ ಆರು ಬಿಲಿಯನ್ನ್ ಜನರಿಗೆಲ್ಲ ತಮ್ಮ ಭಾಷೆ, ಬಣ್ಣ, ಉಡಿಗೆ-ತೊಡಿಗೆಗಳೆಲ್ಲಾ ಬೇಡವಾಗಿ ಸಮಭಾಜಕ ವೃತ್ತದ ಬಳಿ ಇದ್ದವರೂ ಸೂಟು ತೊಡವಂತಾದದ್ದು ಹೇಗೆ?
***
ನಮ್ಮ ಭಾಷೆ ದೊಡ್ಡದು, ನಮ್ಮ ಧರ್ಮ ಬೆಳೆಯಲಿ - ಎನ್ನುವುದು ಕೆಲವರಿಗೆ ಕಳಕಳಿಯ ಅಂಶ, ಇನ್ನು ಕೆಲವರಿಗೆ ಅದು ರಾಜಕೀಯ ಅಜೆಂಡಾ. ನಮ್ಮ ಸಂಸ್ಕೃತಿಯಲ್ಲಿ ಜೀವಿಸಿ ಇತರ ಸಂಸ್ಕೃತಿಗಳನ್ನೂ ಪ್ರೀತಿಸೋಣ ಎನ್ನುವುದು ಕೆಲವರ ನಂಬಿಕೆ, ಇನ್ನು ಕೆಲವರಿಗೆ ತೇಲುಮಾತು. ಯೂರೋಪು, ಅಮೇರಿಕಾ ಖಂಡಗಳಿಂದ ಹರಿದು ಬರುವ ಹಣದ ಪ್ರಭಾವ ಉಳಿದೆಲ್ಲೆಡೆ ಗೆಲ್ಲಬಲ್ಲದು - ಪ್ರತಿಯೊಂದು ದೇಶದ ಕರೆನ್ಸಿಯೂ ದಿನವೂ ಇವುಗಳಿಗೆ ಹೋಲಿಸಿ ನೋಡಿಕೊಳ್ಳಬೇಕಾದ ಪರಿಸ್ಥಿತಿ. ಕಡಿಮೆ ಜನ ಹೆಚ್ಚು ಜನರನ್ನು ಆಳುವ, ಆಳಬಲ್ಲ ಕಟುಸತ್ಯ.
***
ಅದೂ ಸರೀನೇ, ನಾವು ಮದುವೆ-ಮುಂಜಿಗೆ ಮಾತ್ರ ಇಂತಹ ಸಂವತ್ಸರ, ಇಂತಹ ಪಕ್ಷ, ಇಂತಹ ತಿಥಿ-ನಕ್ಷತ್ರಗಳನ್ನು ಬಳಸಿದ್ದೇವೆ ವಿನಾ ನಮ್ಮ-ನಮ್ಮ ಹುಟ್ಟಿದ ದಿನಗಳಿಂದ ಹಿಡಿದು ಉಳಿದೆಲ್ಲ ದಿನಚರಿಗೆ ಸಂಬಂಧಿಸಿದವುಗಳು ಇಂಗ್ಲೀಷ್‌ಮಯವಾಗಿರುವಾಗ ಪ್ರತಿವರ್ಷ ಯುಗಾದಿಯ ದಿನದಂದು ’ಹೊಸವರ್ಷದ ಶುಭಾಶಯ’ಗಳನ್ನು ಪಿಸುಮಾತಿನಲ್ಲೋ, ಪ್ಯಾಸ್ಸೀವ್ ಇಮೇಲ್-ಮೆಸ್ಸೇಜ್‌ಗಳಲ್ಲೋ ಹಂಚಿಕೊಳ್ಳೋದನ್ನು ಎಷ್ಟು ದಿನಗಳವರೆಗೆ ಕಾಯ್ದುಕೊಂಡಿರಬಲ್ಲೆವು? ಮುಂಬರುವ ಸಂತತಿಗಳಿಗೆ ಏನೆಂದು ಹಂಚಬಲ್ಲೆವು, ಇನ್ನು ಬೇವು-ಬೆಲ್ಲದ ಮಾತು ಹಾಗಿರಲಿ. ಹಾಗಾದ್ರೆ, ಗಟ್ಟಿಯಾಗಿ ಅರಚುವವನೇ ಗೆಲ್ಲುವುದನ್ನು ಒಪ್ಪಿಕೊಂಡಿದ್ದೇವೆಯೇ? ಹಾಗಾದ್ರೆ, ನಾವೂ (ಎಲ್ಲರೂ) ಏಕೆ ಗಟ್ಟಿಯಾಗಿ ಕೂಗೋದಿಲ್ಲ?
ನಮ್ಮಲ್ಲಿನ ಬುದ್ಧಿವಂತರು, ಬುದ್ಧಿಜೀವಿಗಳಿಗೆ ದೇವರಿಂದ ದೂರವಿರುವುದು ಫ್ಯಾಶನ್ನಾಗುತ್ತದೆ - ನಾವು ಆಚರಿಸುವ ವಿಧಿ-ವಿಧಾನಗಳಿಗೆಲ್ಲ ಸಾಕಷ್ಟು ವೈಜ್ಞಾನಿಕ ಕಾರಣಗಳಿದ್ದರೂ ಸದಾ ನನ್ನ ಬಳಿ ನಿಖರವಾದ ಉತ್ತರವಿರೋದಕ್ಕೆ ಸಾಧ್ಯವಿಲ್ಲ, ನಮ್ಮ ಹಿರಿಯರ ಆಚರಣೆಗಳ ಹಿಂದಿರುವ ನಂಬಿಕೆ, ಆ ಬಳುವಳಿಯೇ ಸಾಕು ನಾವು ಅದನ್ನು ಇನ್ನಷ್ಟು ದೂರ ಕೊಂಡೊಯ್ಯಲು. ದೇವಸ್ಥಾನ-ಮಠ-ಮಂದಿರಗಳಿಗೇಕೆ ನಾವು ಹೋಗಬೇಕು ಎಂದು ನಮ್ಮ ಬುದ್ಧಿಮತ್ತೆ ನಮ್ಮನ್ನು ಅವುಗಳಿಂದ ದೂರವಿರುವಂತೆ ಮಾಡುತ್ತಿರುವ ಸಮಯದಲ್ಲಿ ಮುಂದುವರಿದ ಸಂಸ್ಕೃತಿ-ದೇಶಗಳಲ್ಲಿನ ಧಾರ್ಮಿಕ-ಸಾಂಸ್ಕೃತಿಕ ವಲಯಗಳು ಹಿಂದೆಂದಿಗಿಂತಲೂ ಬಲಶಾಲಿಯಾಗಿದ್ದನ್ನು ನೋಡಿಯೂ ನೋಡದವರಾಗಿ ಹೋಗುತ್ತೇವೆ. ಹಲವು ಸಂಸ್ಕೃತಿಗಳು ತಮ್ಮ ಹಿತ್ತಲಿನ ಆಲಿವ್ ಮರಕ್ಕೆ ನೀರೆರೆಯುವುದನ್ನು ನೋಡಿಕೊಂಡೂ, ವೈಯುಕ್ತಿಕ ಆದಾಯದ ಒಂದು ಪಾಲು ಧಾರ್ಮಿಕ ಸಮುದಾಯದ ಬೆಳವಣಿಗೆಗೆ ಗುರಿಯಾಗುವುದನ್ನು ಕಂಡೂ ಕಂಡು ಕುರುಡರಾಗಿ ಹೋಗುತ್ತೇವೆ. ದೂರದ ಚಿಂತನೆಗಳಲ್ಲಿ ನಮ್ಮನ್ನು ನಾವು (ಮುಖ್ಯವಾಗಿ ಹಣವನ್ನು) ತೊಡಗಿಸಿಕೊಳ್ಳುವುದು ಹಾಗಿರಲಿ, ನಾವು ಅದೆಷ್ಟೇ ಚಾಕಚಕ್ಯತೆ, ಜಾಣತನ, ಭ್ರಷ್ಟಾಚಾರಗಳ ಸುರುಳಿಗಳಲ್ಲಿ ಸಿಲುಕಿ ಹಣ ಉಳಿಸಿದವರಂತೆ ಕಂಡು ಬಂದರೂ ಜಾಗತಿಹ ತುಲನೆಯಲ್ಲಿ ಬಡವರಾಗುತ್ತೇವೆ.
ಎಲ್ಲದಕ್ಕೂ ಕಾಲನೇ ಉತ್ತರ ಹೇಳಲಿ ಎನ್ನುವುದು ಪೈಪೋಟಿಗೆ ನಾವು ಕೊಡಬಹುದಾದ ಉತ್ತರ, ಅಥವಾ (ಲೆಕ್ಕಕ್ಕೆ ಬಾರದ/ಇರದ) ಸಾವಿರ ವರ್ಷಗಳ ತತ್ವಗಳ ಸಾರ, ಅಥವಾ ಸೋಮಾರಿತನದ ಪರಮಾವಧಿ. ನಮ್ಮಲ್ಲಿನ ದೇವರುಗಳು, ದಾರ್ಶನಿಕರು, ನಂಬಿಕೆಗಳು ನಮ್ಮನ್ನು ಇನ್ನೊಬ್ಬರದ್ದನ್ನು ಸುಲಭವಾಗಿ ಒಪ್ಪಿಕೊಳ್ಳುವಂತೆ ಅದೇಕೆ ಪ್ರಚೋದಿಸುತ್ತವೆಯೋ ಯಾರು ಬಲ್ಲರು? ಅಥವಾ ಹುಲುಮಾನವನ ಶಕ್ತಿಗೆ ಮೀರಿ ಕಳೆದು ಹೋಗಬಹುದಾದ ಪ್ರತಿಯೊಂದು ಕ್ಷಣವೆನ್ನುವುದು ಸಾವಿರ-ಲಕ್ಷ-ಕೋಟಿ ವರ್ಷಗಳ ಗ್ರ್ಯಾಂಡ್ ಸ್ಕೇಲಿನಲ್ಲಿ ಲೆಕ್ಕಕ್ಕೆ ಸಿಗದಿರಬಹುದಾದ ಒಂದು ಸಣ್ಣ ಕಣ ಎಂದು ನಿರ್ಲಕ್ಷಿಸಬಹುದಾದ ಕಮಾಡಿಟಿಯಾಗಿರುವುದು ಇನ್ನೂ ದೊಡ್ಡ ತತ್ವವಿದ್ದಿರಬಹುದು.
ನಮ್ಮ ಬೇರುಗಳಿಗೆ ನಾವು ನೆಟ್ಟಗೆ ತಗಲಿಕೊಳ್ಳಲಾಗದವರು ಮುಂದೆ ಚಿಗುರಬಹುದಾದ ರೆಂಬೆ-ಕೊಂಬೆಗಳನ್ನು ಹೇಗೆ ಆಶ್ರಯಿಸುತ್ತೇವೆ, ಅಥವಾ ನಮ್ಮ ಬೇರುಗಳು ಇನ್ನೂ ಜೀವವನ್ನುಳಿಸಿಕೊಂಡಿರಬೇಕೇಕೆ?