"ಮುಮ"
ಈ ಜನವರಿಯಲ್ಲಿ "ಮುಮ" (ಮುಂಗಾರು ಮಳೆ) ಸಿನಿಮಾ ನೋಡಿದ್ದೆ...ಅದರ ಬಗ್ಗೆ ನಿನಗನ್ನಿಸಿದ್ದನ್ನು ಬರೀ ಅಂತ ಎಷ್ಟೋ ಜನ ಅಂದ್ರು, ಆದ್ರೆ ಸಿನಿಮಾದ ಪೂರ್ಣ ವಿವರವಂತೂ ನನಗೆ ನೆನಪಿಲ್ಲ - ನೆನಪಿನಲ್ಲಿಟ್ಟುಕೊಳ್ಳೋವಷ್ಟು ಯೋಗ್ಯವಲ್ಲದ್ದರಿಂದ ನೆನಪಿನಲ್ಲುಳಿಯಲಿಲ್ಲವೋ ಯಾರಿಗೆ ಗೊತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ, cut the chase (==crap) ಅಂತಾರಲ್ಲ ಹಾಗೆ, ನನಗೆ ಸಿನಿಮಾ ಅಷ್ಟೊಂದು ಇಷ್ಟವಾಗಲಿಲ್ಲ...ಮಳೆ, ಮಡಿಕೇರಿ, ಸಂಗೀತ, ಅಲ್ಲಲ್ಲಿ ಹೊಡೆದಾಟ ಎನ್ನುವ ಸ್ಪ್ರಿಂಗ್ ಬೋರ್ಡ್ ನಂಬಿಕೊಂಡ ಸಾಹಸಿಗರ ಮಾರಣ ಹೋಮ, ನಟನೆ ಬಾರದ ನಾಯಕಿ (my guess), ಎಲ್ಲಾ ಸೀನ್ನಲ್ಲೂ ನಗೋ ನಾಯಕ, ಜೊತೆಗೊಂದು ಎಡವಟ್ಟು ದೇವದಾಸ -- ಇನ್ನೇನ್ ಬೇಕು?
***
ಅನಿವಾಸಿ ಕನ್ನಡಿಗರ ನಡುವೆ ಕುಳಿತು ಸಿನಿಮಾ ಆಹ್ಲಾದಿಸೋದಕ್ಕೂ ನಮ್ಮ ಊರುಗಳಲ್ಲಿ ಥಿಯೇಟರುಗಳಲ್ಲಿ ಸಿನಿಮಾ "ನೋಡೋ"ದಕ್ಕೂ ಬಹಳಷ್ಟು ವ್ಯತ್ಯಾಸವಿದೆ, ಈಗಾಗಲೇ ನನ್ನಂತಹ ಅನಿವಾಸಿಗಳಿಗೆ ಆ ವಿಷಯ ಮನವರಿಕೆ ಆಗಿರಬಹುದು ಎನ್ನುವ ಭ್ರಮೆ (==ನಂಬಿಕೆ) ನನ್ನದು, ಅದರ ಬಗ್ಗೆ ಬರೀತಾ ಹೋದ್ರೆ ಅದೇ ಒಂದು ಪೋಸ್ಟ್ ಆಗಿ ಹೋಗುತ್ತೆ. ನಾನು ಮುಮ ವನ್ನು ನೋಡಿದ್ದು ಬೆಂಗಳೂರಿನ ವೈಭವ ಥಿಯೇಟರ್ನಲ್ಲಿ, ಸಿನಿಮಾ ಅದೆಷ್ಟು ದಿನಗಳಿಂದ ನಡೆಯುತ್ತಿತ್ತೋ ಗೊತ್ತಿಲ್ಲ, ಪ್ರೇಕ್ಷಕ ಪರಮಾತ್ಮರು ಸಾಕಷ್ಟು ಸಂಖ್ಯೆಯಲ್ಲಿಯೇ ಇದ್ದರು. ಸಿನಿಮಾದ ಉದ್ದಕ್ಕೂ ನನಗೆ ನಗುಬರದ ಸಮಯದಲ್ಲಿ ಅವರೆಲ್ಲಾ ನಗೋರು, ಅವರು ನಗದಿದ್ದಾಗ ನಾನು ನಗಬಹುದಾದ ಪ್ರಸಂಗ ಬಂದಂತಹ ಸಮಯದಲ್ಲಿ ಸ್ವಲ್ಪ ಫ್ರೀಕ್ವೆನ್ಸಿ ಮಿಸ್ ಮ್ಯಾಚ್ ಆದ ಹಾಗೆ ನನಗನ್ನಿಸಿದ್ದು ಹೌದು, ಅದು ನನ್ನ ತಪ್ಪು ಅಥವಾ ನನ್ನ ಭಾವನೆ ಇದ್ದಿರಬಹುದು.
ಶಾಲೆ-ಕಾಲೇಜಿನಲ್ಲಿ ಡುಮುಕಿ ಹೊಡೆಯೋ ನಾಯಕ - ಅವರಪ್ಪನ ಪಾತ್ರ (ಜೈ ಜಗದೀಶ್) ಹೇಳೋ ಹಾಗೆ ಮಗನ ಅಂಕಪಟ್ಟಿಯಲ್ಲಿರೋ ಅಂಕಗಳು ಪ್ರತಿ ವಿಷಯಕ್ಕೆ ಯಾರದ್ದೋ ಫೋನ್ ನಂಬರ್ ಥರ ಸಿಂಗಲ್ ಡಿಜಿಟ್ ಬಿಟ್ಟು ಮುಂದೆ ಹೋದ ಹಾಗೆ ಕಾಣದು. ಅವರಪ್ಪನ ದಯೆಯಿಂದ ಮಗನಿಗೆ ತಿರುಗಾಡೋದಕ್ಕೆ ಒಳ್ಳೇ ಕಾರು - ಶಾಪ್ಪಿಂಗ್ ಕಾಂಪ್ಲೆಕ್ಸ್ನಲ್ಲಿಂದ ವಾಚಿನ ಮೂಲಕ ಪ್ರೇಮ/ಪರಿಣಯ ಆರಂಭವಾದ ಹಾಗೆ ನೆನಪು, ಮ್ಯಾನ್ ಹೋಲ್ನಲ್ಲಿ ಬಿದ್ದ ನಾಯಕ, ಹುಡುಗಿ, ವಾಚು --- ಇಷ್ಟೆಲ್ಲಾ ಆಗುವಾಗ ಹಾಡುಗಳ ಭರಾಟೆ, ರೇಡಿಯೋ ಸ್ಟೇಷನ್ನವರ ಜೊತೆ ಮಾತನಾಡಿರುವ ಸಂಭಾಷಣೆಯ ತುಣುಕುಗಳು ಸಹಜವೆನಿಸಿದವು ಅಂತಾ ಧೈರ್ಯವಾಗಿ ಹೇಳಬಲ್ಲೆ.
ಇಷ್ಟೆಲ್ಲಾ ಆಗೋ ಹೊತ್ತಿಗೆ ಮಡಿಕೇರಿ ಪ್ರವಾಸ ಆರಂಭವಾಗುತ್ತೆ ನೋಡಿ. ಒಬ್ಬ ಖಳನಾಯಕ, ನಾಯಕಿಯನ್ನು ಬೇರೆ ಯಾರೂ ಮದುವೆಯಾಗೋದನ್ನೂ ಸಹಿಸದವ - ಪದೇಪದೇ ಕುತ್ತಿಗೆಯನ್ನು ತಿರುಗಿಸಿ ನರನಾಡಿಗಳಿಗೆ ನೋವನ್ನು ಹಂಚುವವ - ಹೊಡೆದಾಟ, ಬಡಿದಾಟ...ವಾರೆ ವ್ಹಾ, ನಾಯಕನಿಗೇ ಗೆಲುವು...ಭೇಷ್.
***
ನಾಯಕಿಯ ಅಪ್ಪನ ಪಾತ್ರದಲ್ಲಿ ಅನಂತ್ನಾಗ್ ಪರಕಾಯ ಪ್ರವೇಶ - ಮಿಲಿಟರಿ ಎಕ್ಸ್ ಸರ್ವೀಸ್ಮನ್ ಅನ್ನೋ ಪದವಿ ಬೇರೆ. ಅನಂತ್ನಾಗ್ಗೆ ಯಾವ ಪಾತ್ರ ಕೊಟ್ರೂ ಚೆನ್ನಾಗಿ ಒಪ್ಪುತ್ತೆ, ಒಪ್ಪೋ ಹಾಗೆ ಮಾಡ್ತಾರೆ ಅನ್ನೋದನ್ನು ಸುಳ್ಳು ಎಂದು ತೋರಿಸುವ ಪ್ರಯತ್ನ ಅನ್ನಿಸ್ತು. ಒಂದೇ ಒಂದು ಇಷ್ಟವಾಗಿದ್ದು ಅಂದ್ರೆ ಅವರ ನಿಜ ಜೀವನದ ಅಲ್ಕೋಹಾಲ್ ಬಳಕೆಗೂ ಚಿತ್ರದಲ್ಲಿನ ಬಳಕೆಗೂ ಬೇರೇನೂ ವ್ಯತ್ಯಾಸವಿರದಿದ್ದುದು, ಆ ಮಟ್ಟಿಗೆ ಅಭಿನಯ ಸಹಜವಾಗಿರದೇ ಇನ್ನೇನ್ ಆಗುತ್ತೆ?
***
Thats about it - ಇನ್ನೇನ್ ನೆನಪಲ್ಲುಳಿಯುತ್ತೆ...ತ್ಯಾಗ, ಪರರಿಗಿರಲಿ ಎಂಬ ದೊಡ್ಡ ಬುದ್ದಿ! ಸುಮ್ನೇ ಎಂತ್ ಎಂಥೋರಿಗೋ ಕೊಡಗು ಸೀಮೆ ಡ್ರೆಸ್ ಹಾಕಿ ಕುಣಿಸ್ಬೇಡ್ರಿ ಸಾರ್. ಅಲ್ದೇ ದಾರೀಲ್ ಸಿಗೋ ಮೊಲದ ಮರಿಗಳೆಲ್ಲ ಮಾತನ್ನ್ ಕಲಿತಿರಲ್ಲ ಅನ್ನೋ ಪರಿಜ್ಞಾನ ಬೇಡ್ವಾ ಅಂತ ಎಲ್ಲೋ ಮನದ ಮೂಲೆಯಲ್ಲಿ ಏಳೋ ಪ್ರಶ್ನೆಗಳನ್ನ rational ಆಗೀ ಯೋಚ್ನೇ ಮಾಡೋ ಯಾವನೂ ಕೆದಕೋ ಸಾಧ್ಯತೇನೇ ಕಂಡ್ ಬರೋದಿಲ್ಲ.
But, ಮುಮ best seller ಆಗಿರಬಹುದು, ಜನಪ್ರಿಯವಾಗಿರಬಹುದು... ಇಲ್ಲಿ, sell - ಅನ್ನೋದೇ ಆಪರೇಟಿವ್ ಪದ. ಒಂದು ಚಿತ್ರದ ನಿಜವಾದ ಯಶಸ್ಸು ಅಂದ್ರೆ ಏನು...ಬಾಕ್ಸ್ ಆಫೀಸ್ (ಗಲ್ಲಾ ಪೆಟ್ಟಿಗೆ)ನಲ್ಲಿ ಅದು ಹಣವನ್ನು ಮಾಡಿದೆಯೇ ಎಂಬ ಪ್ರಶ್ನೆ, ಆ ಪ್ರಶ್ನೆಗೆ ಮುಮ ಈಗಾಗಲೇ ಯಶಸ್ವಿಯಾಗಿ ಉತ್ತರವನ್ನು ಕೊಟ್ಟಿದೆ ಅನ್ನೋದು ಸುದ್ದಿಯಾಗಿ ಹಳಸಿ ಹೋಗಿರಬೇಕು.
ನಂಗ್ ಸಿನಿಮಾ ಇಷ್ಟಾ ಆಗ್ಲಿಲ್ಲಾ ಅಂತ ಉಳಿದವರಿಗೆ ಹಾಗೆ ಆಗಬೇಕು ಅಂತೇನಿಲ್ಲ...ಅದು ಅವರವರ ಅನಿಸಿಕೆ ಅಷ್ಟೇ. ಜೊತೆಯಲ್ಲಿ ಈ ಲೇಖನವನ್ನ ಸಿನಿಮಾ ವಿಮರ್ಶೆ ಅಂತ ಯಾರೂ ತಪ್ಪಾಗಿ ಓದಿಕೊಳ್ಳದಿದ್ದರೆ ಸಾಕು (ಒಂದು ಸಿನಿಮಾ ವಿಮರ್ಶೆಗೆ ಇರಬೇಕಾದ ಯಾವ ಲಕ್ಷಣವೂ ಈ ಬರಹದಲ್ಲಿಲ್ಲವಾದ್ದರಿಂದ)... ಇರೋ ಅರ್ಧ ಘಂಟೆಯಲ್ಲಿ ನನ್ನ ಆಲೋಚನೆಗಳನ್ನು ಹೊಟ್ಟೆಯೊಳಗಿಟ್ಟುಕೊಳ್ಳಲಾರದ ಸಂಕಟಕ್ಕೆ ಸಿಕ್ಕು ಕಕ್ಕಿಕೊಳ್ಳುವ ಸಂಕಷ್ಟದಲ್ಲಿ ತೊಡಗಿರುವ ಇಂತಹ ಬರಹಗಳು ಯಾವ ದಿಕ್ಕನ್ನೂ ಎಂದೂ ಬದಲಾಯಿಸೋದಿಲ್ಲ ಎನ್ನುವ ಪ್ರರಿಜ್ಞಾನ ಇದೇ ಅಂತ ನಂಬಿಕೊಂಡದ್ದು ಇನ್ನೂ ಹಾಗೆ ಉಳಿದಿದೆ.