ಮುಂದ್ ಬರೋದು ಅಂತಂದ್ರೆ ಏನೋ ಒಂದಿಷ್ಟನ್ನ್ ಹಿಂದೆ ತಳ್ಳೀ...
ತೊಂಭತ್ತರ ದಶಕದಿಂದೀಚೆಗೆ, ಅದೂ ಐಟಿ-ಬಿಟಿ-ಬಿಪಿಓ ಮಹದಾಸೆಗಳು ದಿನಕ್ಕೊಂದೊಂದು ಶಿಖರವನ್ನು ಮುಟ್ಟುತ್ತಿರುವಾಗ ವೈಯಕ್ತಿಕ ಆಶೋತ್ತರಗಳು ನಮ್ಮನ್ನು ರಾತ್ರೋರಾತ್ರಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಸ್ಥಳಾಂತರಿಸಿಬಿಡಬಹುದಾದ ಬೃಹತ್ ಬದಲಾವಣೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಸಾಮಾಜಿಕ ಅವತಾರಗಳ ಮೇಲೆ ಈ ಬೆಳವಣಿಗೆ ಎಂತಹ ಮಹತ್ತರ ಪರಿಣಾಮಗಳನ್ನು ಬೀರಬಲ್ಲದು, ಆ ಬಗ್ಗೆ ಇಲ್ಲಿ ತೋಡಿಕೊಳ್ಳುವ ಆಶಯವಷ್ಟೇ.
***
ನಿನ್ನೆ ನನ್ನ ಎರಡನೆ ಅಣ್ಣ ಭಾರತದಿಂದ ಫೋನ್ ಮಾಡಿ, ’...ನಾನು ಈಗ ಮನೆಗೆ ಹೊರಟಿದ್ದೀನಿ, ಕೂಡ್ಲೇ ಫೋನ್ ಮಾಡು, ಅಮ್ಮ ನಿನ್ಹತ್ರ ಏನೋ ಮಾತಾಡ್‌ಬೇಕಂತೆ...’ ಎಂದು ನನ್ನ ಉತ್ತರಕ್ಕೆ ಕಾಯುವಂತೆ ಒಂದು ಕ್ಷಣ ನಿಲ್ಲಿಸಿದನಾದರೂ ನಾನು ಮತ್ತೇನನ್ನೂ ಹೇಳಲು ತೋಚದೆ ’ಸರಿ’ ಎಂದು ಬಿಟ್ಟೆ, ಅವನು ಆ ಕಡೆಯಿಂದ ಕಟ್ ಮಾಡಿದ. ನಾನು ಯಾವುದೋ ಮೀಟಿಂಗ್ ನಡೆವೆ ಇದ್ದಾಗ ಈಗಾಗಲೇ ಒಂದು ಬಾರಿ ಕರೆ ಮಾಡಿ ಯಾವುದೇ ಮೆಸ್ಸೇಜ್ ಅನ್ನು ಬಿಡದೇ ಹದಿನೈದು ನಿಮಿಷಗಳ ಕಾಲಾವಕಾಶದಲ್ಲಿ ಎರಡನೇ ಬಾರಿ ಭಾರತದಿಂದ ಕರೆ ಮಾಡಿದ್ದಾನೆ ಎನ್ನುವುದರಲ್ಲಿ ಏನೋ ವಿಶೇಷವಿದೆ ಎಂಬ ಹೆದರಿಕೆ ನನ್ನ ಮನದಲ್ಲಿತ್ತು.
ಪುಣ್ಯಕ್ಕೆ ಕಾಲಿಂಗ್ ಕಾರ್ಡ್ ಒಂದರ ಪಿನ್ ರೆಡಿ ಇದ್ದುದರಿಂದ, ನನ್ನ ಸೆಲ್‌ಫೋನ್ ಅನ್ನು ಹಿಡಿದುಕೊಂಡು ಯಾವುದೋ ದೊಡ್ಡ ಮೀಟಿಂಗ್ ಒಂದನ್ನು ನಡೆಸುವವರ ಹಾಗೆ ಗಂಭೀರವಾಗಿ ಹೋಗಿ ಕಾನ್‌ಪರೆನ್ಸ್ ರೂಮ್ ಒಂದನ್ನು ಸೇರಿಕೊಂಡು ಬಾಗಿಲು ಹಾಕಿಕೊಂಡೆ. ಏನಾಗಿದ್ದಿರಬಹುದು ಎಂಬ ಊಹೆಯಿಂದಲೇ ನಂಬರ್‌ಗಳನ್ನು ಡಯಲ್ ಮಾಡಿದ್ದೆನಾದರೂ ನನ್ನ ಊಹೆಗೆ ಯಾವುದೂ ಹೊಳೆಯಲಿಲ್ಲ.
ಒಂದೇ ರಿಂಗ್‌ಗೆ ಫೋನ್ ಎತ್ತಿಕೊಂಡ ಅಣ್ಣ ನನ್ನ ಫೋನಿನ ದಾರಿಯನ್ನೇ ಕಾಯುತ್ತಾ ಕುಳಿತವನಂತೆ ಕಂಡುಬಂದ, ಹೆಚ್ಚು ಏನನ್ನೂ ಹೇಳದೇ ’ತಡಿ, ಅಮ್ಮನಿಗೆ ಕೊಡ್ತೀನಿ, ಮಾತಾಡು’ ಎಂದು ಅಮ್ಮನಿಗೆ ಫೋನ್ ಕೊಟ್ಟ.
ಎಂದಿನಂತೆ ಕುಶಲೋಪರಿಗಳಾದ ಮೇಲೆ ’ಏನ್ ವಿಶೇಷ...’ ಎಂಬುದಕ್ಕೆ ಉತ್ತರವಾಗಿ, ’ಏನಿಲ್ಲ, ನಾಳೆ ನನಗೆ ಕಣ್ಣು ಆಪರೇಶನ್‌ಗೆ ಗೊತ್ತು ಮಾಡಿದ್ದಾರೆ, ಬೆಳಿಗ್ಗೆ ಎಂಟು ಘಂಟೆ ಬಸ್ಸಿಗೆ ಶಿವಮೊಗ್ಗಕ್ಕೆ ಹೋಗ್ತೀವಿ, ಅಲ್ಲಿ ಒಂದೆರಡು ದಿನ ಇರಬೇಕಾಗಿ ಬರುತ್ತೆ. ಒಂದು ಕಡೆ ನನಗೆ ಕಾಲೂ ಇಲ್ಲ, ಈ ಕಡೆ ಕಣ್ಣು ಇಲ್ಲದಂಗೆ ಆಗಿದೆ, ಒಂದು ಕಣ್ಣಲ್ಲಿ ದೃಷ್ಟಿ ಸ್ವಲ್ಪವೂ ಇಲ್ಲ, ಮತ್ತೊಂದು ಕಣ್ಣಲ್ಲಿ ಚೂರೂ-ಪಾರು ಕಾಣ್ಸುತ್ತೆ ನೋಡು’.
’ಹೌದಾ, ಯಾವಾಗ್ ಹೋಗಿದ್ರಿ ಟೆಸ್ಟ್ ಮಾಡ್ಸೋಕೆ, ಯಾವ್ ಡಾಕ್ಟ್ರು, ಎಲ್ಲಿ...’ ಮುಂತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದ ನನ್ನನ್ನು ಮಧ್ಯದಲ್ಲಿಯೇ ತಡೆದು, ’ನಿನಗೆ ಅವತ್ತೇ ಹೇಳಿದ್ದೆ, ಕಣ್ಣು ತೋರ್ಸೋಕೆ ಹೋಗ್ತೀವಿ ಅಂತ...ನೀನೋ ಬಹಳ ಬಿಜಿಯಾಗಿ ಬಿಟ್ಟೀ, ಮೊದಲೆಲ್ಲ ವಾರಕ್ಕೊಂದ್ ಸರ್ತಿಯಾದ್ರೂ ಫೋನ್ ಮಾಡ್ತಿದ್ದಿ, ಈಗ ಅದೂ ಕಡಿಮೆಯಾಗಿ ಹೋಯ್ತು, ಇಲ್ಲಿಗೆ ಬರೋದ್ ನೋಡಿದ್ರೆ ಎಷ್ಟೋ ವರ್ಷಕ್ಕೊಂದ್ ಸರ್ತಿ...ನಿನ್ಹತ್ರ ಹೇಳಿದ್ರೆಷ್ಟು ಬಿಟ್ರೆಷ್ಟು’ ಎಂದು ಸುಮ್ಮನಾದಳು.
ಒಂದೆರಡು ವಾರಗಳ ಹಿಂದೆ ಅಮ್ಮ ನನ್ನ ಬಳಿ ಕಣ್ಣು ಕಾಣದ ವಿಚಾರ, ಅದನ್ನು ಯಾವ್ದಾದ್ರೂ ಡಾಕ್ಟ್ರಿಗೆ ತೊರಿಸಬೇಕು ಎಂದು ಹೇಳಿದ ಇರಾದೆಗಳೆಲ್ಲವೂ ನೆನಪಿಗೆ ಬಂದವು, ಫಾಲ್ಲೋಅಪ್ ಮಾಡದಿದ್ದಕ್ಕೆ ಖಿನ್ನನಾದೆ.
’ಕಣ್ಣಿಗ್ ಏನಾಗಿದೆ, ಯಾವ ರೀತಿ ಆಪರೇಶನ್ನಂತೆ?’ ಎನ್ನುವ ಪ್ರಶ್ನೆಗೆ ’ಅದೆಲ್ಲ ನಂಗೊತ್ತಿಲ್ಲಪ್ಪಾ...’ ಎನ್ನುವ ಉತ್ತರಬಂತು.
’ದುಡ್ಡೆಷ್ಟು ಖರ್ಚಾಗುತ್ತಂತೆ?’ ಎನ್ನುವ ಪ್ರಶ್ನೆಗೆ ’ಒಂದು ಹತ್ತಿಪ್ಪತ್ತು ಸಾವ್ರ ರೂಪಾಯ್ ಆದ್ರೂ ಆಗುತ್ತೆ’ ಎನ್ನುವ ಧ್ವನಿ ಹೊರಬರುತ್ತಿದ್ದ ಹಾಗೇ ಸಣ್ಣಗಾದಂತೆನಿಸಿತು.
’ಅಮ್ಮಾ, ನೀನೇನೂ ಹೆದರ್ಕೋ ಬೇಡ, ಎಲ್ಲ ಸರಿ ಹೋಗುತ್ತೆ, ಸುರೇಶ್ನಿಗೆ ಫೋನ್ ಕೊಡು’ ಎಂದೆ, ಆ ಸಮಯದಲ್ಲೂ ’ನೀವೆಲ್ಲ ಆರಾಮಿದ್ದೀರಾ, ಊಟ ಆಯ್ತಾ, ಈಗ ಎಷ್ಟು ಘಂಟೇ ಅಲ್ಲಿ...’ ಎಂದು ಕೇಳುತ್ತಲೇ ಫೋನನ್ನು ಅಣ್ಣನಿಗೆ ಕೊಟ್ಟಳು.
’ಅಲ್ವೋ, ನಂಗೊಂದ್ ಮಾತು ಹೇಳೋದಲ್ವಾ?...’ ಎನ್ನುವ ಪ್ರಶ್ನೆಗೆ ಅಣ್ಣನ ಉತ್ತರ ತಯಾರಾಗಿದ್ದಂತೆ ಕಂಡು ಬಂತು, ’ತುಂಬಾ ಕೆಲ್ಸಾ ಇಲ್ಲಿ, ಒಂದ್ಸರ್ತಿ ಫೋನ್ ಮಾಡಿದ್ದೆ ನೀನು ಸಿಕ್ಲಿಲ್ಲಾ...’ಎಂದು ಏನನ್ನೋ ಹೇಳಲು ಹೊರಟವನನ್ನು ನಾನೇ ಮಧ್ಯೆ ತಡೆದು, ಸಮಾಧಾನ ಹೇಳಿ ಮಾತು ಮುಗಿಸಿದೆ. ಫೋನ್ ಡಿಸ್ಕನೆಕ್ಟ್ ಮಾಡಿದ ತರುವಾಯ ಒಂದು ಕ್ಷಣ ನೆಲೆಸಿದ ಮೌನದ ಹಿನ್ನೆಲೆಯಲ್ಲಿ ’ಅಕಸ್ಮಾತ್ ನಿನಗೆ ಈ ಮೊದಲೇ ಹೇಳಿದ್ರೂ ನೀನ್ ಏನನ್ನು ಕಡೀತಾ ಇದ್ದೆ?’ ಎಂದು ಎದುರುಗಡೆ ಖಾಲಿ ಇದ್ದ ಕಾನ್‌ಪರೆನ್ಸ್ ರೂಮಿನ ಚೇರಿನ ಕಡೆಯಿಂದ ಬಿಸಿನೆಸ್ ಮೀಟಿಂಗ್‌ನಲ್ಲಿನ ಪ್ರಶ್ನೆಯೊಂದರಂತೆ ಧ್ವನಿಯೊಂದು ಬಂದಂತಾಯಿತು. ಆ ಬಳಿಕ ಎಷ್ಟೋ ಹೊತ್ತಿನವರೆಗೆ ’ನೀನ್ ಏನನ್ನು ಕಡೀತಾ ಇದ್ದೆ, ಕಡಿದಿದ್ದೀಯಾ...’ ಎನ್ನುವ ಪ್ರಶ್ನೆಗಳು ಆಳದಲ್ಲಿ ಗುನುಗತೊಡಗಿದವು.
***
ಈಗ ಹಿಂದಿನ ಸನ್ನಿವೇಶಗಳನ್ನು ಅವಲೋಕಿಸ್ತಾ ಹೋದ್ರೆ ನಾನು ಅದೆಷ್ಟೋ ನಮ್ಮ ಪರಿವಾರದ ಮುದುವೆ-ಮುಂಜಿ ಮತ್ತಿತರ ಮುಖ್ಯ ಕಾರ್ಯಕ್ರಮಗಳಿಗೆ ಹೋಗೇ ಇಲ್ಲ, ಒಡಹುಟ್ಟಿದವರ ಕೆಲವರ ಮದುವೆಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಟ್ಟಿದ್ದೇನೆ, ಇನ್ನು ಕೆಲವಕ್ಕೆ ಫೋನ್‌ನಲ್ಲೇ ಶುಭಾಶಯಗಳನ್ನು ಕೋರಿದ್ದೇನೆ. ವೈಯಕ್ತಿಕ ಬೆಳವಣಿಗೆ, ಸ್ವಯಂ ಕೇಂದ್ರೀಕೃತ ಬದುಕು ಅನ್ನೋದಕ್ಕೂ ಒಂದು ಇತಿ-ಮಿತಿ ಎನ್ನೋದು ಬೇಡವೋ ಎಂದು ಎಷ್ಟೋ ಬಾರಿ ಅನ್ನಿಸಿದ್ದಿದೆ.
’ಯಾವ್ದಾದ್ರೂ ಮದುವೆಗೆ ಹೋಗೋ, ಆ ಊರಿಗೆ ಹೋಗಿ ಈ ಕೆಲ್ಸಾ ಮಾಡ್ಕೊಂಡ್ ಬಾ...’ ಎಂದು ಹೇಳಿದವರಿಗೆಲ್ಲಾ ’ನನಗೆ ಶಾಲೆ ಇದೆ, ಅದನ್ನ ತಪ್ಪಿಸೋಕೆ ಆಗೋದೇ ಇಲ್ಲ...’ ಎಂದೋ, ’ನಿಮ್ಮ ಮದುವೆ-ಮುಂಜಿ ಇವೆಲ್ಲ ನನಗ್ಗೊತ್ತಿಲ್ಲ, ನನ್ನ ಲೈಫೇ ಹಾಳಾಗುತ್ತೆ, ನಿಮ್ಮ ಮಾತು ಕೇಳಿದ್ರೆ...’ ಎಂದೋ ಆ ದಿನಗಳಲ್ಲಿ ಹಠ/ಸಿಟ್ಟುಗಳನ್ನು ಕಾಯ್ದುಕೊಂಡಿದ್ದರ ಪರಿಣಾಮವೋ ಎಂಬುವಂತೆ ಈ ದಿನ ನ್ಯೂಕ್ಲಿಯಸ್ ಆಫ್ ಎ ನ್ಯೂಕ್ಲಿಯರ್ ಫ್ಯಾಮಿಲಿ ಆಗಿ ಕೊರಗ್ತಾ ಯಾವ್ದೋ ಕಣ್ಣ್ ಕಾಣದ ದೇಶದಲ್ಲಿ ಬಿದ್ದಿರೋದು ನಾನು ಎಂದು ಎಷ್ಟೋ ತಣ್ಣನೆ ಘಳಿಗೆಗಳಲ್ಲಿ ನೊಂದುಕೊಂಡಿದ್ದಿದೆ.
’ಸದ್ಯ, ನಮ್ಮ್ ಮನೆಯಲ್ಲಿ ಎಲ್ಲರೂ ನನ್ನ್ ಹಾಗೆ ಆಗ್ಲಿಲ್ಲವಲ್ಲಾ, ಪ್ರಪಂಚ ಪೂರ್ತಿ ನನ್ನ ಥರದವರಿಂದಲೇ ತುಂಬಿಕೊಂಡಿಲ್ಲವಲ್ಲ...’ ಎಂದು ಬೇಕಾದಷ್ಟು ಬಾರಿ ಹರ್ಷಿಸಿದ್ದೇನೆ - ಒಂದ್ ಕಾಲದಲ್ಲಿ ’ಎಲ್ರೂ ನನ್ನ್ ಹಾಗೆ ಯಾಕಿರೋಲ್ಲ?’ ಎನ್ನೋ ಮೂರ್ಖ ಪ್ರಶ್ನೆಗಳು ಉದ್ಭವವಾಗುತ್ತಿದ್ದುದನ್ನು ನೆನ್ ನೆನ್ಸಿಕೊಂಡು.
ನನ್ನ ಒಡಹುಟ್ಟಿದವರಿಗೆಲ್ಲ ಅವ್ರಿವ್ರುದ್ದು ಸೇವೆ ಮಾಡೋಕ್ ಸಮಯ ಬೇಕಾದಷ್ಟು ತನ್ನಿಂದ್ ತಾನೇ ಹುಟ್ಟಿ ಬರುತ್ತೆ, ಆದ್ರೆ ನಮ್ಮಗಳಿಗೆ ಮಾತ್ರ ಇಲ್ಲಿ ಯಾವ ನೆಟ್‌ವರ್ಕೂ ಇಲ್ಲ, ನಮ್ಮ್ ನಮ್ಮ್ ಪ್ರಾಜೆಕ್ಟ್‌ಗಳ ಡೆಲಿವರೆಬಲ್ಲುಗಳೇ ದೊಡ್ಡ ಮೈಲುಗಲ್ಲುಗಳು - ನಾವು ಯಾವತ್ತಾದ್ರ್ರೂ ಎಲ್ಲಾದ್ರೂ ಹೋಗ್ತೀವಿ ಬರ್ತೀವಿ ಅಂದ್ರೆ - ಇಲ್ಲಿನ ವರ್ಕ್ ಲೈಫೇ ನಮ್ಮ ಬದುಕು, ಅದನ್ನ್ ಬಿಟ್ರೆ ಇನ್ನೊಂದಿಲ್ಲಾ ಅಂತ ಎಷ್ಟೋ ಸರ್ತಿ ಅನ್ಸುತ್ತೆ.
So, ಮುಂದ್ ಬರೋದು ಅಂತಂದ್ರೆ ಏನೋ ಒಂದಿಷ್ಟನ್ನ್ ಹಿಂದೆ ತಳ್ಳೀ...ಅನ್ನೋ ತತ್ವವನ್ನು ಪ್ರತಿಪಾದಿಸಿಕೊಂಡ ಹಾಗೆ.
***
’ಲೋ, ನನ್ ಮಗನೇ, ಸಾಕ್ ಮಾಡೋ ನಿನ್ನ್ ಪುರಾಣಾನಾ...’ ಎಂದು ಮತ್ತಿನ್ನೆಲ್ಲಿಂದಲೋ ಧ್ವನಿಯೊಂದು ಬಂದಂತಾಯಿತು - ನಾನು ಸುಮ್ಮನ್ನಿದ್ದುದನ್ನು ನೋಡಿ ಆ ಧ್ವನಿ ಹಾಗೇ ಮುಂದುವರೆಸಿ, ’ಆ ಕಡೆ ಕೂಸಿನ್ ಮುಕುಳಿ ಚೂಟೋನೂ ನೀನೇ, ಈ ಕಡೆ ತೊಟ್ಲುನ್ನ್ ತೂಗೋನೂ ನೀನೇ...ಅತ್ಲಾಗ್ ಊರಲ್ಲಿದ್ದವ್ರಿಗೆಲ್ಲಾ ಅಮೇರಿಕದ ದಾರಿ ಹಿಡೀರಿ ಅಂತೀಯಾ, ಇತ್ಲಾಗ್ ನೀನೇ ಕೊರಗ್ತೀಯಲ್ಲೋ... ಅದೂ ಒಂದೇ ಕಣ್ಣಲ್ಲಿ ಅತುಗೋಂತಾ...ಬಾಳ್ ಶಾಣ್ಯಾ ಇದೀ ಬಿಡಪ್ಪಾ ನೀನು...’
ನಾನು ಯಾರಿಗೆ ಯಾವ ಉತ್ತರ ಅಂತಾ ಕೊಡಲೀ ಎಂದು ಯೋಚಿಸೋರ ಹಾಗೆ ಮುಖ ಮಾಡಿಕೊಂಡಿದ್ದನ್ನು ನೋಡಿ ಹೆದರಿಕೊಂಡವುಗಳ ಹಾಗೆ ಮತ್ತಿನ್ಯಾವ ಧ್ವನಿಯೂ ಎಲ್ಲಿಂದಲೂ ಹೊರಡಲಿಲ್ಲ.