ಅವರ್‌ಗ್ಲಾಸ್ ಮತ್ತು ಇತರ ಪಾರ್ಶಿಯಲ್ ಅನಾಲಜಿಗಳು!
ನ್ಯೂ ಯಾರ್ಕ್ ನಗರಕ್ಕೆ ಕೂಗಳತೆಯಲ್ಲಿರೋ ಜರ್ಸೀ ಸಿಟಿಗೆ ಭಾರತದಿಂದ ಬರೋ ಹೊಸ ಐಟಿ ಕೆಲಸಗಾರರ ಸಂಖ್ಯೆ ಬಹಳ ಹೆಚ್ಚು, ಇಂಡಿಯಾ ಮಾರ್ಕೆಟ್‌ಗೆ ಹೋದಾಗ ಅಥವಾ ಟ್ರೈನ್ ಸ್ಟೇಷನ್ನುಗಳಲ್ಲಿ, ಅಥವಾ ದಾರಿಯಲ್ಲಿ ಬಸ್ಸಿಗೆ ಕಾಯುತ್ತಿರುವವರಾಗಿಯೋ ಹೀಗೆ ಹಲವಾರು ಅವತಾರಗಳಲ್ಲಿ ಕಾಣಸಿಗುವ ಯುವಕ/ಯುವತಿಯರನ್ನು ನೀವು ಬೇಡಾ ಅಂದ್ರೂ ಗಮನಿಸಲೇ ಬೇಕಾಗುತ್ತೆ. ನಮ್ಮ ಮನೆ ಹತ್ತಿರವಿರುವ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಒಂದಕ್ಕೆ ಬೆಂಗಳೂರಿನಿಂದ ನಮಗೆ ಪರಿಚಯವಿರುವ ಕನ್ನಡಿಗರೊಬ್ಬರು ಬಂದಿದ್ದಾರೆ, ಅವರ ಜೊತೆಯಲ್ಲಿ ಇನ್ನು ಮೂರು ಜನ ಸೇರಿಕೊಂಡು (ಒಬ್ಬರು ಒರಿಸ್ಸಾದವರು, ಇನ್ನಿಬ್ಬರು ತಮಿಳ್ನಾಡಿನವರು) ಒಂದು ಅಪಾರ್ಟ್‌ಮೆಂಟಿನಲ್ಲಿ ರೂಮ್ ಮೇಟ್‍ಗಳಾಗಿಕೊಂಡು ದಿನೇ-ದಿನೇ ಅಮೇರಿಕನ್ ಬದುಕಿಗೆ ಹೊಂದಿಕೊಂಡು ಬದುಕು ನಡೆಸುತ್ತಿದ್ದಾರೆ. ಇವರ ಸ್ಥಿತಿಗತಿಯಲ್ಲೇನೂ ವಿಶೇಷವಿಲ್ಲ, ಹೆಚ್ಚೂಕಡಿಮೆ ಎಲ್ಲರೂ ಹೀಗೇ ಇಲ್ಲಿ ಬದುಕನ್ನು ಆರಂಭಿಸೋದು, ನಾನೂ ಒಂದು ಕಾಲದಲ್ಲಿ ಹೀಗೇ ಇದ್ದೆ!
'ನಾನು ಇಲ್ಲಿಗೆ ಬಂದಾಗ ಹೇಗಿದ್ದೆ?' ಎನ್ನುವ ಪ್ರಶ್ನೆಗೆ ಹಳೆಯ ನೆನಪುಗಳನ್ನು ಹುಡುಕಿಕೊಂಡು ಹೋಗಿ ಉತ್ತರವನ್ನು ಕಂಡುಕೊಳ್ಳಬಹುದಾದರೂ ಈ ಹೊಸಬರ ಒಡನಾಟದಲ್ಲಿ ಅವರ ನಡೆನುಡಿ-ಆಚಾರವಿಚಾರಗಳನ್ನು ಕೂಲಕಂಷವಾಗಿ ನೋಡೋದರ ಮೂಲಕ ನನ್ನನ್ನು ನಾನು ಹುಡುಕಿಕೊಳ್ಳಲು ಪ್ರಯತ್ನಪಟ್ಟಿದ್ದೇನೆ, ಅದರ ಪರಿಣಾಮವಾಗಿಯೇ ಇಲ್ಲಿನ ಕೆಲವು ಪಾರ್ಶಿಯಲ್ ಅನಾಲಜಿಗಳು!
ಅವರ್‌ಗ್ಲಾಸ್ ಅಥವಾ ಸ್ಯಾಂಡ್‌ಕ್ಲಾಕ್ - ತನ್ನಲ್ಲಿದ್ದ ಮರಳನ್ನು ಗುರುತ್ವಾಕರ್ಷಣೆ ಬಲಕ್ಕೆ ಒಪ್ಪಿಸಿ ಸುರಿಸಿಕೊಂಡು ಕಾಲವನ್ನು ತನ್ನೊಳಗೆ ಕಟ್ಟಿಕೊಂಡಂತೆ ಮುಖ ಮಾಡಿಕೊಳ್ಳುವ ಹಳೆಕಾಲದ ಗಡಿಯಾರ; ಗುರುತ್ವಾಕರ್ಷಣಾ ಬಲ 9.8 meters per seconds square ಎಂದು ಭಾರತದಲ್ಲಿ ಸಾವಿರ ಸಾರಿ ಓದಿದ್ದರೂ ಇಲ್ಲಿಗೆ ಬಂದು ಕೆಲವೇ ದಿನಗಳಲ್ಲಿ feet per seconds square (ಅದೂ 32.17) ಎಂದು ಬದಲಾಗುವ ವಿಸ್ಮಯ. ಸೋರುತ್ತಿರುವ ಮರಳ ಕಣಗಳು ಅಲ್ಲೂ ಇಲ್ಲ, ಇಲ್ಲೂ ಇಲ್ಲ - ಯಾವುದೇ ತೂಕವಿಲ್ಲದಿದ್ದರೂ ಮೀಟರುಗಳ ಲೆಕ್ಕಕ್ಕೆ ಸಿಗದೇ ಇಲ್ಲಿನ ಅಡಿ-ಮೈಲುಗಳಲ್ಲಿ ಕರಗಿ ಹೋಗುವ ಸಂಭ್ರಮ! ಕೆಲವರ ಅಮೇರಿಕದ ಜೀವಮಾನವನ್ನು ಒಂದೇ ಅವರ್‌ಗ್ಲಾಸ್ ಪ್ರತಿಬಿಂಭಿಸಿದರೆ ಇನ್ನು ಕೆಲವರಿಗೆ ಅದು ಆಗಾಗ್ಗೆ ಖಾಲಿ ಆಗಿ, ಉಲ್ಟಾ ಹೊಡೆದು ಮತ್ತೆ ಅದೇ ಮರಳನ್ನು ಸುರಿಸಿಕೊಳ್ಳುವ ಚಕ್ರದಲ್ಲಿ ಸಿಕ್ಕಿ ಹೋಗುತ್ತದೆ!
ಕಾಂಪೋನೆಂಟ್ vs. ಕಂಪೋನೆಂಟ್ - ಇಷ್ಟು ವರ್ಷ ಕಲಿತು ಬಳಸಿದ ಭಾಷೆ, ಪದಗಳು, ಅವುಗಳ ಬಳಕೆ ಹಾಗೂ ಉಚ್ಛಾರಗಳು ಬದಲಾಗುವ ರೀತಿ ಇನ್ನೊಂದು ರೀತಿಯ ವಿಸ್ಮಯವನ್ನು ತನ್ನೊಳಗೆ ಕಲ್ಪಿಸಿಕೊಳ್ಳುತ್ತದೆ. ನಮ್ಮ ಎನ್ವಿರಾನ್‌ಮೆಂಟುಗಳು ಎನ್ವೈರ್ನ್‌ಮೆಂಟಾಗಿ, ಸ್ಟೇಟಸ್ಸ್ ಇದ್ದದ್ದು ಸ್ಟ್ಯಾಟಸ್ ಆಗಿ, ಡೆವೆಲಪರ್ ಇದ್ದೋನು ಡಿವ್ವೆಲಪರ್ ಆಗಿ, ನಮ್ಮನ್ನು ನೆಲದ ಮೇಲೆ ಎತ್ತಿ ನಿಲ್ಲಿಸಿ ನಡೆಸುವ ಕಾಂಪೋನೆಂಟುಗಳು ಕಂಪೋನೆಂಟುಗಳಾಗಿ ಬದಲಾಗುವ ಪದೇಪದೇ ಕಂಡುಬರುವ ಲೌಕಿಕ ಆಶ್ಚರ್ಯಗಳಲ್ಲೊಂದು!
ಉಷ್ಣತೆ - ಹವಾಮಾನ ಅಂದ್ರೆ ನಮ್ಮಲ್ಲಿ ಗಮನಿಸೋ ಉಷ್ಣತೆ ಇಲ್ಲಿ ಬಂದ ಮೇಲೆ ಶೀತ ಹವೆಯನ್ನು ಹೆಚ್ಚು ಗಮನಿಸೋ ಹಾಗೆ ಮಾಡೋದು ಮತ್ತೊಂದು ಅಶ್ಚರ್ಯಗಳಲ್ಲೊಂದು. All of a sudden, ಒಂದರಿಂದ ನೂರರವರೆಗಿನ ಫ್ಯಾರೆನ್‌ಹೈಟ್ ಸ್ಕೇಲ್ ಅಪ್ಯಾಯಮಾನವಾಗುತ್ತದೆ - thanks to the inbuilt calculator - ಫಸ್ಟ್ ಪಿಯುಸಿಯಲ್ಲಿ ಒದ್ದಾಡಿ ನೆನಪಿನಲ್ಲಿಟ್ಟುಕೊಂಡಿದ್ದ C = (F - 32) * (5/9) ಅನ್ನೋ ಸೂತ್ರ ಅಮೇರಿಕನ್‌ಮಯವಾಗಿ C = (F - 32)/2 ಆಗಿ ಕನ್ವರ್ಟ್ ಆಗೋದಷ್ಟೇ ಅಲ್ಲ, ನಿದ್ದೆಯಿಂದ ಎದ್ದೇಳಿಸಿ ಕೇಳಿದರೂ ಯಾವುದೇ ಟೆಂಪರೇಚರ್ ಅನ್ನು ಸೆಲ್ಸಿಯಸ್ ಇಂದ ಫ್ಯಾರನ್‌ಹೈಟ್‌ಗೆ ವೈಸಾ ವರ್ಸಾ ಕನ್ವರ್ಟ್ ಮಾಡುವ ಕಲೆ ಅಂಗೈನ ನೆಲ್ಲೀಕಾಯಿ ಆಗಿ ಹೋಗುತ್ತದೆ!
ಉದ್ದ ಕೂದಲ ಸೂತ್ರ - ಹೆಣ್ಣು ಮಕ್ಕಳಿಗೆ ಅನ್ವಯವಾಗದ ವಿಚಾರವಿದು - may be further down the road, but not right away - ಇಲ್ಲಿಗೆ ಬಂದ ಯುವಕರ ತಲೆ ಮೇಲೆ ಹುಲ್ಲುಕುತ್ರೆಯ ಹಾಗೆ ಬೆಳೆದ ಕೂದಲನ್ನು ನೋಡಿ ಅವರು ಅಮೇರಿಕದಲ್ಲಿ ಎಷ್ಟು ವರ್ಷದಿಂದ್ದಿರಬಹುದು ಎಂದು ಹೇಳಬಹುದಾದ ಒಂದು ಕಲೆ! ಬಂದ ಹೊಸದರಲ್ಲಿ ಸಂಬಳದ ಹೆಚ್ಚು ಭಾಗ ಅಪಾರ್ಟ್‌ಮೆಂಟ್ ರೆಂಟು, ಫೋನ್ ಕಾರ್ಡು ಅಥವಾ ಕಾರಿಗೆ ವ್ಯಯವಾಗುತ್ತಿರುವ ಕಾಲದಲ್ಲಿ, ನಮ್ಮ ತಲೆಯಲ್ಲಿ ಮೂರು ವಾರ, ನಾಲ್ಕು ವಾರಗಳಿಗೊಮ್ಮೆ ಬೆಳೆದುನಿಲ್ಲುವ ಕೂದಲನ್ನು ಕತ್ತರಿಸಿಕೊಳ್ಳಲು 12 ರಿಂದ 15 ಡಾಲರ್ರು ಪ್ಲಸ್ ಹದಿನೈದು ಪರ್ಸೆಂಟ್ ಟಿಪ್ಸು ಇದೆಲ್ಲ ಕೊಡೋದು ಯಾರು ಹಾಗೂ ಯಾಕೆ? ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಲ್ಲೋದು (thanks to the compost inside the head, the hair grows in any and every season - that too so much so for me/us!) ವರ್ಷಕ್ಕೆ ಹನ್ನೆರಡು ಸಾರಿ ಕಟ್ಟಿಂಗ್ ಮಾಡಿಸೋ ಬದಲಿಗೆ ಹನ್ನೊಂದ್ ಸಾರಿ ಮಾಡ್ಸಿದರೆ ಹತ್‌ಹತ್ರ ಇಪ್ಪತ್ತು ಡಾಲರ್ ಉಳಿಯೋಲ್ವೆ - ಇನ್ನು ಟಿಪ್ಸ್ ಕೊಡೋರ್ ಯಾರು? (ಲೋಕಲ್ ರೆಡಿಯೋ ಸ್ಟೇಷನ್ನುಗಳು ಭಾರತೀಯರು worst ಟಿಪ್ಸ್ ಕೊಡುತ್ತಾರೆ ಎಂದು ಈಗಾಗಲೇ ಸಾಧಿಸಿ ಜಗಜ್ಜಾಹೀರು ಮಾಡಿರೋವಾಗ).
ಮೂಗಿನಲ್ಲಿ ಬೆರಳಾಡಿಸಿಕೊಂಡು ಅನುಭವಿಸುವ ಸುಖ - ಹಲವಾರು ನ್ಯಾಷನಾಲಿಟಿಯ ಹಿನ್ನೆಲೆಯ ಜನರನ್ನು ಗಮನಿಸಿ ನಾನು ತೀರ್ಮಾನಿಸಿಕೊಂಡ ಅನಾಲಜಿ ಇದು - ನನ್ನಂತಹ ಭಾರತೀಯರು ತಮ್ಮ ಮೂಗನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ! ಎಲ್ಲಿ ಬೇಕಂದರಲ್ಲಿ nose pick ಮಾಡಿದ್ದೇನೆ, ಮಾಡುತ್ತಿದ್ದೇನೆ, ಮಾಡುತ್ತಲೇ ಇರುತ್ತೇನೆ (present continuous tense ಅನ್ನೋದು ಇರೋದಕ್ಕೂ ಒಂದ್ ಬೆಲೆ ಕೊಡೋದ್ ಬೇಡ್ವೇ?) ಇಷ್ಟಿಷ್ಟು ದಪ್ಪವಾಗಿರೋ ಭಾರತೀಯರ ಮೂಗುಗಳಿಗೆ ಐತಿಹಾಸಿಕವಾಗಿ ಇನ್ನೇನ್ ಕಾರಣವಿದ್ದಿರಬಹುದು? ಹೆಚ್ಚು ಬಳಸಿದ ಸ್ನಾಯುಗಳು ಬಲವಾಗಿ ಬೆಳೆಯುತ್ತವೆ ಅಂತ ಜೀವಶಾಸ್ತ್ರದಲ್ಲಿ ಓದಿದ್ದು ನೆನಪಿಗೆ ಬರೋದಿಲ್ಲಾ?
ಬೆಳ್ಳಗಿರೋದೆಲ್ಲ ಮಲ್ಲಿಗೆ ಎನ್ನುವ ಭ್ರಮೆ - 'ಈ ಕರಿಯರನ್ನು ಕಂಡ್ರೆ ಆಗೋದಿಲ್ಲಪ್ಪಾ ನನಗೆ' ಅನ್ನೋದು ಓಪನ್ಲಿ ಹೇಳಿ ಕೈ ಕೊಡಗಿಕೊಳ್ಳುವ ಒಂದು ಸಾಧಾರಣ ಸಾಲು - ಅಮೇರಿಕನ್ನರು ಅಂದ್ರೆ ಬಿಳಿಯರು ಮಾತ್ರ ಅನ್ನೋ ಭ್ರಮೆ - no one says European Americans, it is usually substituted by White! ಅನ್ನೋದು ಸುಬ್ಬನ ಉವಾಚ -("ನಿನ್ನನ್ನ ಏಷಿಯನ್ ಅಮೇರಿಕನ್ ಅಂತಲೂ, ಡಾಮಿನಿಕ್‌ನ್ನ ಆಫ್ರಿಕನ್ ಅಮೇರಿಕನ್ ಅಂತಲೂ ಕರೆಯೋರು, ಈ ಯೂರೋಪಿಂದ ಬಂದ ಜನಗಳ್ನ, ಅದರಲ್ಲೂ ಬಿಳಿಯರನ್ನ ಯುರೋಪಿಯನ್ ಅಮೇರಿಕನ್ ಅಂಥಾ ಯಾಕೆ ಕರೆಯಲ್ಲಾ, ಬರೀ ವೈಟ್ಸ್ ಅಂಥ ಯಾಕ್ ಅಂತಾರೆ!") - ಸುಪ್ರಿಮಸಿ, ಸುಪಿರಿಯಾರಿಟಿ ಅನ್ನೋದು ನಮ್ಮ ಮನಸ್ನಲ್ಲಿದೆಯೋ ಅಥ್ವಾ ಎಲ್ಲಿದೆಯೋ ಯಾರಿಗೆ ಗೊತ್ತು?
***
ನೀವು ಹೇಗಿದ್ದಿರಿ ಇಲ್ಲಿಗೆ ಬಂದಾಗ ಎಂದು ಕಂಡು ಹಿಡಿಯುವುದು ಬಹಳ ಸುಲಭ - ಹೊಸದಾಗಿ ಅಮೇರಿಕಕ್ಕೆ ಬಂದವರೊಡನೆ ಒಡನಾಡಿ ನೋಡಿ, ಅವರೇ ಹಿಡಿಯುತ್ತಾರೆ ನಿಮ್ಮ ಹಳೆಯ ಮನಸ್ಸಿಗೆ ಕನ್ನಡಿ!