What have you gained from all this?
ಜನವರಿ ೧೭ ರಂದು ಭಾರತದ ಪ್ರವಾಸದ ಬಗ್ಗೆ ಕಿರಿದಾಗಿ ಬರೆದಾಗ 'ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ' ಎಂದು ಬರೆದಿದ್ದೆ. ಈ ದಿನ ಅದರ ಮೇಲೆ ಸ್ವಲ್ಪ ಬೆಳಕು ಚೆಲ್ಲಿದರೆ ಹೇಗೆ ಎನ್ನಿಸಿತು.
ಎಷ್ಟೋ ವರ್ಷಗಳ ಹಿಂದೆ ಶಿವಮೊಗ್ಗ ಮಾರ್ಕೆಟ್‌ನಲ್ಲಿ ಸೇಬು ಹಣ್ಣುಗಳನ್ನು ಕೊಂಡಾಗ ನಮ್ಮನ್ನು ಬೇಸ್ತು ಬೀಳಿಸಿ ಒಳ್ಳೆಯ ಹಣ್ಣುಗಳ ಜೊತೆಗೆ ಸಾಧಾರಣ ಹಣ್ಣುಗಳನ್ನು ದಾಟಿಸಿ ತನ್ನ 'ಕೈಚಳಕ' ತೋರಿದ ವ್ಯಾಪಾರಿಯೊಬ್ಬನನ್ನು ಇಂದಿಗೂ ನೆನೆಸಿಕೊಳ್ಳುತ್ತೇನೆ. ನೀವು ಭಾರತದಲ್ಲಿ ವ್ಯವಹಾರ ಮಾಡುವಾಗ ಸೂಕ್ಷ್ಮವಾಗಿರದಿದ್ದರೆ ನಿಮ್ಮನ್ನು ಏಮಾರಿಸಿ ನೀವು ತೆರೆಳಿದ ಬಳಿಕ ಮೀಸೆ ಮೇಲೆ ಕೈ ಆಡಿಸುವವರೇ ಹೆಚ್ಚು. ಇನ್ನು ನೀವು ಎನ್.ಆರ್.ಐ. ಎಂದು ಗೊತ್ತಾದರಂತೂ ಮುಗಿದೇ ಹೋಯಿತು, ಒಂದಕ್ಕೆರಡು ಬೆಲೆ ಹಾಕುವುದು ಇರಲಿ, 'ಬೆಪ್ಪು ಮುಂಡೇವು, ಏನೂ ಗೊತ್ತಾಗೋದಿಲ್ಲ!' ಎಂಬ ಅಸಡ್ಡೆಯ ಪ್ರದರ್ಶನವೂ ರಾಜಾರೋಷವಾಗಿ ನಡೆಯುತ್ತದೆ, ಇಷ್ಟೆಲ್ಲಾ ಆದಮೇಲೂ ನನ್ನಂತಹವರು ಮುಗುಳು ನಗುತ್ತಾ 'ಥ್ಯಾಂಕ್ಯೂ' ಎಂದು ಬೇರೆ ಹೇಳುತ್ತೇವಲ್ಲ, ನಮ್ಮ ಪ್ರಾರಬ್ಧಕ್ಕೆ ಬೈದುಕೊಳ್ಳಬೇಕೇ ವಿನಾ ಮತ್ತೇನೂ ಮಾಡೋಕಾಗೋದಿಲ್ಲ.
ಒಂದು ಲೆಕ್ಕದಲ್ಲಿ ಈ ದಿನನಿತ್ಯದ ವ್ಯವಹಾರದಲ್ಲಿ ಸತ್ಯ-ಪ್ರಾಮಾಣಿಕತೆ ಅನ್ನೋದು ಸತ್ತೇ ಹೋಗಿದೆ ಎಂದೇ ಹೇಳಬೇಕು, ಸ್ಪರ್ಧಾತ್ಮಕವಾಗಿ ಬದುಕೋದು ಎಂದರೆ ಅದನ್ನು ಮೋಸ ಮಾಡಿ ಬದುಕುವುದು ಎಂದು ಬದಲಾಯಿಸಿಕೊಂಡ ಹಾಗೆ ತೋರೋದು ಕೇವಲ ನನ್ನ ಭ್ರಮೆ ಆದರೆ ಎಷ್ಟೋ ಚೆನ್ನಾಗಿತ್ತು. ಮೊದಲೇ ಹೆಚ್ಚು ಜನರಿರುವ, ಎಲ್ಲಿ ಹೋದರೂ 'ನೆಕ್ ಟು ನೆಕ್' ಸ್ಪರ್ಧೆಯನ್ನು ಜೊತೆಯಲ್ಲಿ ತರುವ ವಾತಾವರಣ, ಅದರ ಜೊತೆಯಲ್ಲಿ ಮೋಸ ಮಾಡುವವರಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡು ಬದುಕಿ ಬರಬೇಕು ಎಂದರೆ ಅದು ದಿನನಿತ್ಯದ ಚಕ್ರವ್ಯೂಹವೇ ಸರಿ. ಈ ಕೆಳಗಿನ ಉದಾಹರಣೆಗಳನ್ನು ನೋಡಿ:
- ಬೆಂಗಳೂರಿನಲ್ಲಿ ಸಂತೋಷ್ ಚಿತ್ರಮಂದಿರಕ್ಕೆ ಹೋಗಿ 'ಕಲ್ಲರಳಿ ಹೂವಾಗಿ' ಚಿತ್ರಕ್ಕೆ ಟಿಕೇಟು ತೆಗೆದುಕೊಂಡರೆ, ಕೌಂಟರಿನ ಹಿಂದಿರುವ ವ್ಯಕ್ತಿ ಕೇಳಿದ ಹೊರತೂ ಚಿಲ್ಲರೆಯನ್ನು ಕೊಡಲಿಲ್ಲ - ಟಿಕೇಟು ಕೊಟ್ಟವನಿಗೆ ಟಿಪ್ ಕೊಡಬೇಕು ಎಂದು ನಿಯಮೇನಾದರೂ ಇದೆಯೇ?
- ಆಟೋ ರಿಕ್ಷಾ ಡ್ರೈವರ್‌ಗೆ ಐವತ್ತು ರೂಪಾಯಿಯ ನೋಟೊಂದನ್ನು ಕೊಟ್ಟು, ಉಳಿದ ಚಿಲ್ಲರೆಯನ್ನು ಕೊಡಲು ದುಡ್ಡು ಎಣಿಸುತ್ತಿರುವಾಗ ಮೊದಲು ಕೊಟ್ಟ ಐವತ್ತು ರೂಪಾಯಿಯ ನೋಟನ್ನು 'ನೀವು ಕೊಟ್ಟೇ ಇಲ್ಲಾ ಸಾರ್' ಎಂದು ಸಾಧಿಸಿ ವಾದ ಮಾಡಿದರೆ ಹಾಡ ಹಗಲೇ ಸುಳ್ಳು ಹೇಳುವ ಅವನನ್ನು ನನ್ನಂತಹವರು ಏನು ಮಾಡೋದು?
- ಒಂದು ಮಸಾಲೆ ದೋಸೆ ೨೫ ರೂಪಾಯಿ ಚಾರ್ಚ್ ಮಾಡಿಯೂ ಅದರ ಜೊತೆಯಲ್ಲಿ ಕೊಟ್ಟಿರುವ ಚಟ್ನಿ ಹಳಸಿದೆ ಎಂದು ದೂರು ಕೊಟ್ಟರೆ ನಾನು all of a sudden ಶಿಲಾಯುಗದ ಮನುಷ್ಯನಂತೆ ಆಗಿ ಹೋದೆ ಎಂದು ಸಪ್ಲೈಯರ್‌ನಿಂದ ಹಿಡಿದು ನನ್ನ ಜೊತೆಯಲ್ಲಿದ್ದವರ ಅಂಬೋಣ - ಹಳಸಿದ ಚಟ್ನಿಯನ್ನು ತಿನ್ನೋದು ನನ್ನ ಕರ್ಮವಲ್ಲ, ಆ ಭಾಗ್ಯಕ್ಕೆ ಇಪ್ಪತ್ತೈದು ರೂಪಾಯಿಗಳನ್ನು ಬೇರೆ ಕೊಡಬೇಕೇಕೆ?
- ಮನೆ ಕಟ್ಟಿಸಿಕೊಳ್ಳಬೇಕು ಎಂದು ಒಂದು ಸೈಟು ತೆಗೆದುಕೊಂಡರೆ ಅದನ್ನು 'ರಕ್ಷಣೆ' ಮಾಡಿಕೊಳ್ಳಬೇಕಂತೆ: ರಾತ್ರೋರಾತ್ರಿ ಮಂದಿರ-ಮಸೀದಿಯನ್ನು ಕಟ್ಟುವುದರಿಂದ ಹಿಡಿದು, ನಿಮ್ಮ ಸೈಟುಗಳನ್ನು ಎರಡು ಮೂರು ಜನರಿಗೆ ಮಾರಿ ನೀವು ಯಾವ ಕೋರ್ಟಿಗೆ ಎಷ್ಟು ವರ್ಷ ಅಲೆದರೂ ನಿಮ್ಮ ಸೈಟು ನಿಮಗಿಲ್ಲವಾಗಿಸುವ ವ್ಯವಸ್ಥೆ, ಉದಾಹರಣೆಗಳು ಬೇಕಾದಷ್ಟಿವೆ.
ಪ್ರಾಮಾಣಿಕತೆ ಇಲ್ಲ, ಅಥವಾ ಮೊದಲಿಗಿಂತಲೂ ಪರಿಸ್ಥಿತಿ ಬದಲಾಗಿದೆ ಎಂದೋ ನಾನು ಜೆನರಲೈಸ್ ಮಾಡಿದರೆ ತಪ್ಪಾದೀತು. ಈ ವ್ಯವಸ್ಥೆಯಲ್ಲೇ ನಾನೂ ಹುಟ್ಟಿ ಬೆಳೆದವನೇ. ನನ್ನ ರಕ್ತ ಹೀರುವ ಸೊಳ್ಳೆಗಳನ್ನು - ನನಗೆ ಏಟು ಬಿದ್ದರೂ ಪರವಾಗಿಲ್ಲ ಆದರೂ ನನ್ನ ರಕ್ತ ಹೀರಿದ ಇದನ್ನು ಸುಮ್ಮನೇ ಬಿಡಬಾರದು - ಎಂದು ಬಲವಾಗಿಯೇ ಬಾರಿಸಿ ನಿಷ್ಕರುಣೆಯಿಂದ ಹೊಸಕಿ ಹಾಕುವ ಕ್ರೂರತೆ ನನ್ನಲ್ಲಿ ಎಂದೂ ಮಾಸಲಾರದು. ಆದರೆ ಇಂತಹ ಕ್ರೌರ್ಯವನ್ನೇ ಬದುಕಾಗಿ ಮಾಡಿಕೊಂಡಿರುವುದಾದರೆ ಹೇಗೆ ಎಂದೆನಿಸದಿರಲಿಲ್ಲ. ಭಾರತದಲ್ಲಿನ ವ್ಯವಸ್ಥೆಯಲ್ಲಿ ಸೊಳ್ಳೆಗಳು ಸಮಾಜದ ಒಂದು ಭಾಗ - ನಾವು, ನಮ್ಮ ಮನೆ, ನಮ್ಮ ನೆರೆಹೊರೆ ಇರುವ ಬಗೆ, ಮುಂದೆಯೂ ಹಾಗೆ ಇರುವ ಸೂಚನೆಗಳು ಇಂದು ನಿನ್ನೆಯವಲ್ಲ. ಹಲವು ದಿನಗಳ ಕಾಲ ಅಲ್ಲಿಗೆ ರಜೆಯಲ್ಲಿ ಹೋದ ನನಗೆ ರಕ್ತ ಹೀರುವ ಸೊಳ್ಳೆಗಳಿಂದ ಮುಕ್ತಿ ಸಿಗಲಿ ಎಂದುಕೊಂಡರೆ ಅದು ಅಪಹಾಸ್ಯವಾದೀತು. ಆದರೆ ಇಂದಿನ ಸೊಳ್ಳೆಗಳು ಕಾಲನ ಸವಾಲಿನಲ್ಲಿ ಬದಲಾಗಿವೆ, ನನಗೆ ಗೊತ್ತಿರುವ ಡಿಡಿಟಿ ಅಂತಹ ಔಷಧಗಳು, ಕೀಟನಾಶಕಗಳು ಇಂದು ಯಾವ ಕೆಲಸವನ್ನೂ ಮಾಡಲಾರವು - ಬದಲಿಗೆ ಟಾನಿಕ್ ಆಗಿ ಪರಿವರ್ತಿತಗೊಳ್ಳದಿದ್ದರೆ ಸಾಕು. ಇಂದಿನ ಸೊಳ್ಳೆಗಳು ಪ್ರದರ್ಶಿಸುವ ಹೊಸಹೊಸ ಚಾಲಾಕುಗಳಿಗೆ ನನ್ನ ಉತ್ತರಗಳು ಅಷ್ಟೇ ಮಾರ್ಪಾಡು ಹೊಂದಿಲ್ಲವಾದ್ದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ನನ್ನನ್ನು ಒಬ್ಬನೇ ಬಿಟ್ಟು ಬಂದಿದ್ದಾದರೆ ಒಮ್ಮೆ ತಡವರಿಸುವುದಂತೂ ಗ್ಯಾರಂಟಿ.
ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯಬಹುದಾದರೂ ಇಲ್ಲಿ ಒಂದೆರಡು ಸಾಲುಗಳನ್ನು ಹಾಕುವುದು ಪ್ರಸ್ತುತವೆನಿಸಿತು - ಅಮೇರಿಕದ ಬದುಕು ನನ್ನಲ್ಲಿ ಚಾಲಾಕಿತನವನ್ನು ಹೆಚ್ಚಿಸಿಲ್ಲ, ಇಲ್ಲಿ ಬಂದಮೇಲೆ ರಕ್ತ ಹೀರುವ ಸೊಳ್ಳೆಗಳಿಂದ ಇನ್ನೂ ಕಚ್ಚಿಸಿಕೊಂಡಿಲ್ಲ - ಸೊಳ್ಳೆಗಳಿವೆ, ಅವುಗಳು ಇರುವಲ್ಲಿ ನಾನು ಹೋಗಿ ಮಾಡಬೇಕಾದೇನೂ ಇಲ್ಲ. ಇಲ್ಲಿ ದುಡಿದ ಹಣ, ಅದರ ಮಹತ್ವವನ್ನು ತಿಳಿಸಿಕೊಟ್ಟಿದ್ದೂ ಅಲ್ಲದೇ ನಾನು ಖರ್ಚು ಮಾಡಬಹುದಾದ ಹಣಕ್ಕೆ ಅದಕ್ಕೆ ತಕ್ಕನಾಗಿ ಸೇವೆಯನ್ನು ಅಪೇಕ್ಷಿಸುವ ಮನಸ್ಥಿತಿಯನ್ನೂ ನಿರ್ಮಿಸಿಕೊಟ್ಟಿವೆ. ಮನೆ ಕೆಲಸದಿಂದ ಹಿಡಿದು ಉಳಿದೆಲ್ಲವನ್ನೂ ನಾವು-ನಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬಹುದಾದ ತಾಕತ್ತನ್ನೂ ಅದಕ್ಕೆ ಊರುಗೋಲಾಗಬಹುದಾದ ಮೈಂಡ್‌ಸೆಟ್ ಅನ್ನೂ ಹುಟ್ಟುಹಾಕಿವೆ. ಎಲ್ಲಿಯಾದರೂ ಸಾದುತನ ಕಂಡರೆ ನಾನು ಎಂದೂ ಮೋಸ ಮಾಡಲು ತಕ್ಕದಾದ ಪ್ರಾಣಿಯೊಂದು ಸಿಕ್ಕಿತು ಎಂದು ಯೋಚಿಸಿಕೊಳ್ಳದೇ ಅದರ ಬದಲಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಲು ಮನಸ್ಸು ಮಾಡುತ್ತೇನೆ. ಹನಿಹನಿಗೂಡಿ ಹಳ್ಳವಾದರೂ ಅಂತಹ ಹಳ್ಳ ಹುಟ್ಟಿ ಹೆಚ್ಚುಕಾಲ ನಿಲ್ಲುವಂತೆ ಶ್ರಮವಹಿಸುತ್ತೇನೆ. ಒಂದು ಡಾಲರಿಗೆ ಎರಡು ಸಿಗುವ ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಸಾವಿರಾರು ಡಾಲರಿಗೆ ಯಾವುದೇ ವಸ್ತುಕೊಂಡರೂ 'ಎದುರಿನ ವ್ಯಕ್ತಿ ಮಾಸ ಮಾಡುತ್ತಿರಬಹುದೇ' ಎಂದು ಒಮ್ಮೆಯೂ ಯೋಚಿಸುವುದಿಲ್ಲ...
ಹೀಗಿನ ನನ್ನ ವರ್ತನೆ ಭೋಳೇತನವಾಗಿ ಕಂಡುಬರಬಹುದು, 'ಬಿತ್ತು ಗಿರಾಕಿ'ಯಾಗಬಹುದು, ರಕ್ತ ಹೀರುವ ಸೊಳ್ಳೆಗಳಿಗೆ ಆಶ್ರಯವಾಗಬಹುದು... ನನಗೆ ಮೋಸವಾಗುತ್ತಿರುವುದು ಗೊತ್ತಾಗಿಯೂ ಅದನ್ನು ಸಹಿಸಿಕೊಂಡು ಏನೂ ಆಗೇ ಇಲ್ಲವೆನ್ನುವ ಮನಸ್ಥಿತಿಯಂತೂ ಇನ್ನೂ ಬಂದಿಲ್ಲ...ಹೀಗೆ ಮೋಸ ಮಾಡಿದವರನ್ನು ದುರುಗುಟ್ಟಿ ನೋಡಿಯೂ ಬಾಯಿಬಿಟ್ಟು ಕೇಳಿದರೆ ಅಂತಹವರ ಅಂತಃಕರಣವನ್ನೋದೇನಾದರೂ ಇದ್ದರೂ ಅವರು ಬದಲಾಗೋದಿಲ್ಲ. ಮೋಸ ಮಾಡುವುದು ಅವರವರ ಬದುಕಿನ ಒಂದು ಅಂಗವಾಗಿಹೋಗಿದೆ ಎನ್ನಿಸದಿರಲಿಲ್ಲ.
ಹೀಗೆ ಶತಮಾನಗಳಿಂದ ಮೋಸ ಮಾಡಿ, ಮಾಡಿಸಿಕೊಂಡು, ಇಂತಹ ಹಲವಾರು ಬದುಕುಗಳನ್ನು ಬದುಕಿ, ಎಲ್ಲವನ್ನೂ ಮಾಡಿ, ನೋಡಿ, ಕಂಡಂತಹವರಿಗೆ ನನ್ನ ಒಂದೇ ಒಂದು ಪ್ರಶ್ನೆ - what have you gained from all this?