ಅಬ್ಬಾ, ಒಂದು ದಶಕವೆಂದರೆ...
ಕೇವಲ ಹತ್ತೇ ವರ್ಷಗಳ ಹಿಂದೆ...ಮಾರ್ರಿಸ್ ಕೌಂಟಿಯ ಪಾರ್ಸಿಪನಿ (Parsippany) ಎಂಬ ಪಟ್ಟಣದ ಮಾರ್ಕ್ ಫುಸಾರಿ ಎಂಬೊಬ್ಬರ ಮನೆಯ ಬೇಸ್‌ಮೆಂಟಿನಲ್ಲಿ ಎರಡು ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಹಿಡಿದು ಸಿಸ್ಟಮ್ ಅನಲಿಸ್ಟ್ ಕೆಲಸವನ್ನು ಕೆಲವು ತಿಂಗಳುಗಳ ಹಿಂದೆ ಆರಂಭಿಸಿ, ಇನ್ನೂ ಅಂಬೆಕಾಲಿಡುತ್ತಿದ್ದ ಇಂಟರ್‌ನೆಟ್ಟ್ ಅನ್ನು ಸರ್ಫ್ ಮಾಡುತ್ತಿದ್ದ ಕಾಲ. ನನಗ್ಗೊತ್ತು, ಇದು ’ಬೀಸ್ ಸಾಲ್ ಬಾದ್’ ನಂತಹ ಹಳೇ ಹಿಂದೀ ಸಿನಿಮಾದ ಯಾದಿಯಲ್ಲೇ ಆರಂಭವಾದ ಬರಹ ಮುಂದೆ ಎಲ್ಲಿಗೆ ಮುಟ್ಟೀತು ಎಂದು. ಆದರೆ ನಿನ್ನೆ ವಿಶೇಷವಾಗಿ ಈ ಹತ್ತು ವರ್ಷಗಳನ್ನು ನೆನಪಿಸಿಕೊಳ್ಳಬೇಕಾಯಿತು, ರೆಡಿಯೋದಲ್ಲಿ ಪ್ರಿನ್ಸೆಸ್ ಡಯಾನಾ ಸತ್ತು ಹತ್ತು ವರ್ಷವಾದ ಸುದ್ದಿಯನ್ನು ಕೇಳಿದ ಬಳಿಕ.
ಆಗೆಲ್ಲಾ ಎಂಟು ವರ್ಷಗಳ ಡೆಮಾಕ್ರಟಿಕ್ ಪಕ್ಷದ ಆಡಳಿತವನ್ನು ಸಹಿಸಿಯೋ ಸಹಿಸಲಾರೆದೆಯೋ ರಿಪಬ್ಲಿಕನ್ ಪಕ್ಷದವರು ಸೆಡ್ಡು ಹೊಡೆದು ನಿಂತು ಮುಂಬರುತ್ತಿದ್ದ ಬುಷ್ ಚುನಾವಣೆಗೆ ಹೊಂಚು ಹಾಕುತ್ತಿದ್ದ ಕಾಲ. ಕೆನೆತ್ ಸ್ಟಾರ್ ಎನ್ನುವ ಮುತ್ಸದ್ದಿ ಪ್ರತಿದಿನವೂ ಅಂದಿನ ಪ್ರೆಸಿಡೆಂಟ್ ಬಿಲ್ ಕ್ಲಿಂಟನ್ನರ ಕಾಲು ಎಳೆಯುತ್ತಿದ್ದ ಕಾಲ - ಯಾವ ನ್ಯೂಸ್ ಚಾನೆಲ್ ತಿರುಗಿಸಿದರೂ ಮೊನಿಕಾ ಲ್ಯುಯಿನ್ಸ್ಕೀಯೇ ಪ್ರತ್ಯಕ್ಷವಾಗುತ್ತಿದ್ದಳು. ಅಂತಹ ನ್ಯೂಸ್ ಹಂಗ್ರೀ ಮಾಧ್ಯಮಗಳಿಗೆ ಸ್ವಲ್ಪ ತಿರುವು ನೀಡಿದ್ದೆ ಡಯಾನ ಕಾಲವಾದ ವಿಚಾರ. ಜನಮನಗಳಲ್ಲಿ ಆಕೆ ಹೇಗೆ ನಿಂತು ಹೋಗಿದ್ದಳು, ಬೆರೆತು ಹೋಗಿದ್ದಳು ಎನ್ನುವುದಕ್ಕೆ ಸಾಕ್ಷಿಯಾಗುವಂತೆ ಜನರ ಪ್ರತಿಕ್ರಿಯೆ ವ್ಯಕ್ತವಾಗತೊಡಗಿ ಅಮೇರಿಕನ್ ಮಾಧ್ಯಮಗಳೂ ತಮ್ಮ ಕ್ಯಾಮರಾಗಳನ್ನು ಯುರೋಪಿನ ಕಡೆಗೆ ಮುಖಮಾಡಿ ನಿಂತಿದ್ದಂತಹ ಘಳಿಗೆಯೊಂದು ಸೃಷ್ಟಿಯಾಗಿತ್ತು.
ಅಂದಿನ ದಿನಗಳಲ್ಲಿ ನಾನೂ ಒಂದು ಹೊಸ ಕಂಪ್ಯೂಟರ್ ಕೊಂಡಿದ್ದೆ - ಆಫೀಸಿನಲ್ಲಿ ನನಗೆ ಬೇಕಾದ ವೆಬ್‌ಸೈಟುಗಳನ್ನು ನೋಡಿದರೆ, ನೋಡಿದ್ದು ಗೊತ್ತಾದರೆ ಎಲ್ಲಿ ಮನೆಗೆ ಕಳಿಸುತ್ತಾರೋ ಎಂಬ ಭಯ ಬೇರೆ ಇತ್ತು! ಹತ್ತು ವರ್ಷಗಳ ಹಿಂದೆ ಇಂತಹ ಪ್ರತೀ ಶುಕ್ರವಾರ ಸಂಜೆಯಿಂದ ಹಿಡಿದು ಶನಿವಾರದವರೆಗೆ ನಾನು ನಿದ್ರೆ ಮಾಡುತ್ತಿದ್ದುದೇ ಕಡಿಮೆ. ಅದರ ಬದಲಿಗೆ ಓದಲಿಕ್ಕೆ ಬೇಕಾದಷ್ಟು ವೆಬ್ ಸೈಟುಗಳು. ಮೊಟ್ಟ ಮೊದಲ ಬಾರಿಗೆ ನನ್ನ ತಮಿಳು ಸ್ನೇಹಿತ ಕಳಿಸಿದ ಲಿಂಕ್‌ನ ದಯೆಯಿಂದಾಗಿ ಸಂಜೆವಾಣಿ ಪತ್ರಿಕೆಯ ಅಂತರ್ಜಾಲ ದರ್ಶನ - ಬೆಂಗಳೂರಿನ ಸುದ್ದಿಯಾಗಿರಲಿ, ಇನ್ಯಾವುದಾಗಿರಲಿ ಕನ್ನಡವನ್ನು ಕಂಪ್ಯೂಟರ್ರ್‌ನಲ್ಲಿ ನೋಡುತ್ತಿದ್ದೇನಲ್ಲಾ ಅನ್ನೋ ಸಂತೋಷವೇ ದೊಡ್ಡದಾಗಿತ್ತು. ಯಾರೋ ಪುಣ್ಯಾತ್ಮರು ಹಾಕಿದ ’ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ...’ ಹಾಡು ರಾಜ್‌ಕುಮಾರ್ ಧ್ವನಿಯಲ್ಲಿ ಕೇಳಿದಷ್ಟೂ ತಣಿಯದು, ಅದರ ಜೊತೆಯಲ್ಲಿ ’ಅಳುವಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ’. ನನ್ನ ತೆಲುಗು ರೂಮ್ ಮೇಟ್ ಪವನ್ ಕೂಡಾ ’ಅಮೃತವಾಹಿನಿ...’, ಹಾಗೂ ’ಅಳುವಕಡಲೊಳು...’ ಹಾಡನ್ನು ಬಾಯಿಪಾಟ ಮಾಡಿಕೊಂಡಿದ್ದ, ಏಕೆಂದರೆ ಅವೇ ಪದೇ-ಪದೇ ನನ್ನ ಕಂಪ್ಯೂಟರ್‌ನಿಂದ ಕೇಳಿಬರುತ್ತಿದ್ದವು.
ಓಹ್, ಅಲ್ಲೊಂದು ದೊಡ್ಡ ಚಾಟ್ ಪ್ರಪಂಚವೇ ಇತ್ತು. ನಾನೂ, ಪವನ್ ಹಾಗೂ ನಮ್ಮನ್ನು ಬಹಳ ಮುತುವರ್ಜಿಯಿಂದ ಪದೇಪದೇ ಭೇಟಿಯಾಗುತ್ತಿದ್ದ ಆಕಾಶ್‌ಗೆ ಕಂಪ್ಯೂಟರ್‌ನಲ್ಲಿನ ಚಾಟ್ ಬಹಳ ಮಹತ್ವಪೂರ್ಣದಾಗಿತ್ತು. ಫ್ಲ್ಯಾಟ್‌ಲೈನ್ ಫೋನ್ ಸರ್ವೀಸ್‌ನಲ್ಲಿ ಡಯಲ್ ಅಪ್ ಕನೆಕ್ಷನ್ ಇದ್ದುದಾದರೂ ನಮಗೆ ವೀಕ್ ಎಂಡ್‌ಗಳಲ್ಲಿ ನಿರಂತರವಾಗಿ ಚಾಟ್ ಮಾಡಲು ಯಾವ ತೊಂದರೆಯೂ ಇರುತ್ತಿರಲಿಲ್ಲ. ಕೆಲವೊಮ್ಮೆ ಪಾಳಿಯ ಮೇಲೆ ಒಬ್ಬರಾದ ಮೇಲೆ ಒಬ್ಬರು, ನಾಲ್ಕು-ಐದು-ಆರು ಘಂಟೆಗಳ ನಿರಂತರ ಚಾಟ್‌ಗಳಲ್ಲಿ ತೊಡಗಿದ್ದೂ ಉಂಟು. ಹೀಗಿನ ನಿರಂತರ ತಪಸ್ಸಿನ ಚಾಟ್‌ನಿಂದ ನಾನೂ ಹಾಗೂ ಪವನ್ ಕೆಲವೇ ವಾರಗಳಲ್ಲಿ ಹೊರಗೆ ಬಂದು ಮುಕ್ತರಾದೆವು. ನಮ್ಮ ಪ್ರಬುದ್ಧತೆ ಬದಲಾಯಿತೋ, ಅಥವಾ ವರ್ಚುವಲ್ ಪ್ರಪಂಚದ ಇತಿಮಿತಿಗಳು ಸ್ಪಷ್ಟವಾದವೋ ಗೊತ್ತಿಲ್ಲ, ಆದರೆ ಆಕಾಶ್ ಅದರಿಂದೆಂದೂ ಮುಕ್ತನಾಗಲೇ ಇಲ್ಲ. ನಾನೂ-ಪವನ್ ಚಾಟ್‌ಗೆ ಬಳಸದ ಕಂಪ್ಯೂಟರ್ ಆಕಾಶನ ಪೂರ್ಣ ಸ್ವತ್ತಾಯಿತು. ಕೆಲವೊಮ್ಮೆ ಮಧ್ಯೆ ಯಾವುದಾದರೊಂದು ಕರೆ ಮಾಡಬೇಕೆಂದರೂ ಬಿಡುವು ಕೊಡದ ಹಾಗೆ ಆಕಾಶ್ ನಮ್ಮ ಮನೆಯ ಕಂಪ್ಯೂಟರ್ರ್ ಅನ್ನು ಬಳಸುವುದನ್ನು ನೋಡಿ ಪವನ್‌ಗೆ ಆಗಾಗ ಸಿಟ್ಟುಬರಲು ತೊಡಗಿತು. ಇದ್ದಕ್ಕಿದ್ದಂತೆ ಒಂದು ದಿನ ಪವನ್‌ಗೂ ಆಕಾಶ್‌ಗೂ ಸ್ವಲ್ಪ ಮಾತು ಬೆಳೆದಂತೆ ನೆನಪು. ನಂತರ ನಮ್ಮ ಮನೆಗೆ ಆಕಾಶ್ ಬರುವುದನ್ನು ಕಡಿಮೆ ಮಾಡಿದ, ಆದರೆ ಅಷ್ಟೊತ್ತಿಗಾಗಲೇ ಅವನ ಮನೆಯಲ್ಲೇ ಒಂದು ಕಂಪ್ಯೂಟರ್ ಇತ್ತು ಎಂದು ಕೇಳಿದ ನೆನಪು. ಆಕಾಶ್ ಚಾಟ್‌ನಿಂದ ಮುಕ್ತನಾಗಲೇ ಇಲ್ಲ ಎಂದು ಹೇಳಿದ್ದಕ್ಕೆ ಕಾರಣವಿದೆ. ಆಕಾಶ್‌ಗೂ ಹಾಗೂ ಕ್ಯಾತಿ ಎನ್ನುವ ಬಿಳಿ ಅಮೇರಿಕನ್ ಹುಡುಗಿಗೂ ಸ್ನೇಹ ಬೆಳೆದು ಅದು ಮುಂದೆ ಪ್ರೀತಿಯಾಗಿ ಮದುವೆಯಾಗುವಲ್ಲಿಯವರೆಗೂ ಹೋಯಿತು. ಆ ದಿನಗಳಲ್ಲಿ ಆಕಾಶ್ ಕ್ಯಾತಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಕ್ಕಾಗಿ ನನ್ನ ಕಂಪ್ಯೂಟರ್ರ್ ಅನ್ನು ಹೊಗಳುತ್ತಿದ್ದನೆಂದು ತೋರುತ್ತದೆ, ಈ ದಿನ ಅವನ ನಿಲುವು ಹೇಗಿದೆಯೋ ಗೊತ್ತಿಲ್ಲ. ಆಕಾಶ್ ಜೊತೆಯಲ್ಲಿ ನಾನು ಕ್ಯಾತಿಯನ್ನು ನೋಡಿದ್ದು ನ್ಯೂ ಬ್ರನ್ಸ್‌ವಿಕ್‌ನ ಒಂದು ಇಂಡಿಯನ್ ಹೊಟೇಲಿನಲ್ಲಿ, ಕೆಲವು ವರ್ಷಗಳ ನಂತರ - ಆಗ ಅವನು ಕ್ಯಾತಿಯನ್ನು ತನ್ನ ಹೆಂಡತಿ ಎಂದು ಪರಿಚಯ ಮಾಡಿಕೊಟ್ಟಿದ್ದ ನೆನಪು. ಮುಂದೆ ಆಕಾಶ್, ಪವನ್ ಅವರವರ ದಿಕ್ಕು ಹಿಡಿದು ನಡೆದವರು ಇವತ್ತಿಗೂ ಭೇಟಿಯಾದದ್ದಿಲ್ಲ. ನನ್ನ ಹಾಗೇ ಅವರೂ ಹತ್ತು ವರ್ಷಗಳನ್ನು ನೆನೆಸಿಕೊಳ್ಳುತ್ತಿರಬಹುದು.
೧೯೯೭ ರಿಂದ ೨೦೦೦-೨೦೦೧ ರ ಹೊತ್ತಿಗೆಲ್ಲಾ ಸ್ಟಾಕ್ ಮಾರ್ಕೇಟ್, ಟೆಕ್ನಾಲಜಿ ಮಾರ್ಕೇಟ್ ತುಂಬಾ ಮೇಲು ಹೋಗುತ್ತಿದ್ದ ಕಾಲ. ರಿಯಲ್ ಎಸ್ಟೇಟ್ ಸಹಾ ಆಗಷ್ಟೇ ಚಿಗುರಿಕೊಳ್ಳುತಲಿತ್ತು. ಆದರೆ ನಾನು, ಹಾಗೂ ನನ್ನ ಹಾಗಿನವರು ದಿನವೂ ಆಫೀಸಿಗೆ ಹೋಗಿ ಬರುವುದನಷ್ಟೇ ಕಾಯಕವೆಂದುಕೊಂಡು ಇವತ್ತಿನವರೆಗೂ ಅನುಸರಿಸಿಕೊಂಡು ಬಂದೆವೇ ವಿನಾ ಯಾವೊಂದು ರಿಸ್ಕ್ ಅನ್ನೂ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಿಲ್ಲ. ಉದ್ಯಮವನ್ನು ಆರಂಭಿಸುವುದಕ್ಕೆ, ತಮ್ಮದೇ ಆದ ಕಂಪನಿಯನ್ನು ಶುರು ಮಾಡಲಿಕ್ಕೆ, ಆಯಕಟ್ಟಿನ ಜಾಗಗಳಲ್ಲಿ ಹಣ ಹೂಡುವುದಕ್ಕೆ, ಮನೆ-ಮಠ ಖರೀದಿ ಮಾಡುವುದಕ್ಕೆ ಎಲ್ಲದಕ್ಕೂ ಹೇಳಿ ಮಾಡಿಸಿದ ಸಮಯವಾಗಿತ್ತು. ೨೦೦೧ ರ ಸೆಪ್ಟೆಂಬರ್ ಬರುತ್ತಿದ್ದ ಹಾಗೆ, ಅಲ್ಲ, ಬುಷ್ ಚುಕ್ಕಾಣಿ ಹಿಡಿದು ಶ್ವೇತಭವನವನ್ನು ಸೇರಿದ ಘಳಿಗೆ ಸರಿ ಇರದಿದ್ದ ಕಾರಣ ಏನೇನೋ ಅನಾಹುತಗಳಾದವು. ಪ್ರಪಂಚದ ರೀತಿ-ನೀತಿಗಳೇ ಬದಲಾಗಿ ಹೋದವು. ಎಲ್ಲವೂ ಅಮೇರಿಕಮಯವಾಯಿತು. ಉದಯವಾಣಿಯಂತಹ ಪತ್ರಿಕೆಗಳು ನಮ್ಮಲ್ಲಿನ ಬಸ್ಸುಲೋಡು ಜನರು ತುಂಬಿ ಅಮೇರಿಕದಿಂದ ಭಾರತಕ್ಕೆ ಹಿಂತಿರುಗುವ ಹಾಗೆ ವೃತ್ತಿಕರ್ಮಿಗಳನ್ನು ಬಿಂಬಿಸತೊಡಗಿ, ಆಗಾಗ್ಗೆ ಊರಿನಿಂದ ಅಣ್ಣ ಫೋನ್ ಮಾಡಿ ’ಎಲ್ಲಾ ಚೆನ್ನಾಗಿದೆಯಾ?’ ಎಂದು ಕೇಳುವಂತಾಗಿತ್ತು. ಎಷ್ಟೋ ಜನ ಕಂಪನಿಗಳನ್ನು ಬದಲಾಯಿಸಿದರು. ಎಷ್ಟೊ ಜನ ಹಿಂತಿರುಗಿ ಹೋದರು. ಇನ್ನೆಷ್ಟೋ ಜನ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿದರು. ಗ್ರೀನ್‌ಕಾರ್ಡ್ ಸುಳಿಯಲ್ಲಿ ಸಿಕ್ಕವರ ಅವಸ್ಥೆ ಹೇಳತೀರದಾಗಿತ್ತು, ಕೊನೆಯ ಹಂತದವರೆಗೆ ಬಂದು ಕಂಪನಿಯನ್ನು ಬಿಟ್ಟವರ ಕೊರಗು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಹತ್ತು ವರ್ಷಗಳಲ್ಲಿ ಏನೇನೆಲ್ಲ ಆಗಿ ಹೋದವು. ಹತ್ತು ವರ್ಷ ಕೋಮಾದಲ್ಲಿದ್ದ ವ್ಯಕ್ತಿ ಇಂದು ಎಚ್ಚೆತ್ತು ಪ್ರಪಂಚವನ್ನು ನೋಡಿದ್ದೇ ಹೌದಾದರೆ ಅಗಾಧವಾದ ವ್ಯತ್ಯಾಸ ಎಲ್ಲ ಸ್ಥರಗಳಲ್ಲಿ ಕಂಡುಬರುವುದು ಸಾಮಾನ್ಯ. ಕಂಪ್ಯೂಟಿಂಗ್ ಪವರ್‌ನಿಂದ ಹಿಡಿದು ಟೆಕ್ನಾಲಜಿವರೆಗೆ, ಜಾಗತಿಕ ವಿಷಯಗಳನ್ನು ಲೆಕ್ಕ ಹಾಕಿಕೊಂಡರೆ, ಬಂದು ಹೋದವರ, ಕಾಲವಾದವರ ನೆನಪು ಮಾಡಿಕೊಂಡರೆ ಈ ಹತ್ತು ವರ್ಷಗಳು ಬಹಳ ದೊಡ್ಡವೇ. ಅಬ್ಬಾ, ಒಂದು ದಶಕವೆಂದರೆ ಎಷ್ಟು ದೊಡ್ಡದು! ಹೀಗೆ ಹತ್ತು ದಶಕಗಳಷ್ಟು ಬಾಳ ಬಹುದಾದ ಮಾನವ ಜೀವನ ದೊಡ್ಡದೇ ಎಂದು ಈ ಹೊತ್ತಿನಲ್ಲಿ ಅನ್ನಿಸಿದ್ದು ಸುಳ್ಳಲ್ಲ.
ಹತ್ತು ವರ್ಷಗಳ ನಂತರ ನಾನು ಇಂದೂ ಮಾರ್ರಿಸ್ ಕೌಂಟಿಯ ಮತ್ತೊಂದು ಪಟ್ಟಣ ಫ್ಯ್ಲಾಂಡರ್ಸ್ (Flanders) ನಲ್ಲಿ ನೆಲೆನಿಂತಿದ್ದೇನೆ - ಒಂದು ರೀತಿ ಫುಲ್ ಸೈಕಲ್ ಬಂದ ಹಾಗನ್ನಿಸುತ್ತೆ.