Friday, December 15, 2006

'ಅಂತರಂಗ'ಕ್ಕೆ ಒಂದಿಷ್ಟು ದಿನ ರಜೆ...

ಪ್ರತಿದಿನವೂ ಒಂದಲ್ಲ ಒಂದು ಲೇಖನವನ್ನು ಬರೆದು ಹಾಕಬೇಕು ಎನ್ನುವ ಉತ್ಸಾಹಕ್ಕೆ ಅಡ್ಡಿಬರುವ ಹಲವಾರು ಅಂಶಗಳಲ್ಲಿ ಮೈಗಳ್ಳತನವೂ ಒಂದು ಎಂದು ನೇರವಾಗಿ ಹೇಳಿಕೊಂಡುಬಿಟ್ಟಿದ್ದೇನೆ. ಆದರೆ ಈಗ ಸ್ವಲ್ಪ ದಿನಗಳ ಕಾಲ ರಜೆ ತೆಗೆದುಕೊಳ್ಳುತ್ತಿರುವುದು ಒಂದು ಮಹಾ ಕಾರಣಕ್ಕಾಗಿ, ಅದೇನೆಂದರೆ ಸುಮಾರು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಹೋಗುವ ಭಾಗ್ಯ ಬಂದಿದ್ದಕ್ಕೆ.

ನನಗೆ ಗೊತ್ತಿರುವ ಹಾಗೆ ಭಾರತದಲ್ಲಿ ಎಷ್ಟೋ ಜನ ತಮ್ಮ ಜಾತಕ, ಅಥವಾ ಹಸ್ತವನ್ನು ತೋರಿಸಿ ತಮ್ಮ ಹಣೆಯಲ್ಲಿ ವಿದೇಶ ಪ್ರಯಾಣದ ಬಗ್ಗೆ ಬರೆದಿದೆಯೇ ಎಂದು ಜ್ಯೋತಿಷಿಗಳಲ್ಲಿ ಕೇಳಿಕೊಳ್ಳುವುದು ಗೊತ್ತು. ಒಂದುವೇಳೆ 'ವಿದೇಶ ಪ್ರಯಾಣ ಯೋಗ'ವೆನ್ನುವುದು ನಿಜವೆಂದುಕೊಂಡರೆ ಸಧ್ಯಕ್ಕೆ ಅಮೇರಿಕವನ್ನು ಮನೆಯಾಗಿ ಮಾಡಿಕೊಂಡ ನನ್ನಂಥವರಿಗೆ ಭಾರತಕ್ಕೆ ಹೋಗುವುದೂ ಒಂದು ವಿದೇಶ ಪ್ರಯಾಣವೇ ಅಲ್ಲವೇ? ಅಂತಹ ಯೋಗಗಳು ಎಷ್ಟು ಸಾಧ್ಯವೋ ಅಷ್ಟು ಬರಲಿ ಎನ್ನುವುದು ಒಂದು ಯೋಚನೆಯಾದರೆ, ಆಗ ಬಹುದಾದ ಖರ್ಚಿನ ದೃಷ್ಟಿಯಿಂದಲೂ ಹಾಗೂ ಇಲ್ಲಿ ಮಾಡಿ ಮುಗಿಸಬೇಕಾದ ಕೆಲಸ ಕಾರ್ಯಗಳ ದೃಷ್ಟಿಯಿಂದಲೂ ಕೆಲವೊಮ್ಮೆ ಅತಿ ಪ್ರಯಾಣವೂ ಒಳ್ಳೆಯದಲ್ಲ ಎನ್ನುವ ವಾದವನ್ನೂ ಕೇಳಿದ್ದೇನೆ. ಅಪರೂಪಕ್ಕೆ ಬಂದವನನ್ನು 'ಅಮೇರಿಕದವನು...' ಎಂದು ಆದರಿಸಿಯಾರು ಇಲ್ಲವಾದರೆ ಆಗಾಗ್ಗೆ ಬರುವವನನ್ನು 'ಹಾಕ್‌ಮಣೆ, ನೂಕ್‌ಮಣೆ, ತೋರ್‌ಮಣೆ'ವಾದಗಳು ಹೆದರಿಸಿಬಿಟ್ಟಾವು!

ಏನೇ ಇರಲಿ, ನನ್ನ ಹೆಚ್ಚೂಕಡಿಮೆ ಬರಿದಾದ ಆಲೊಚನೆಗಳ ಚೀಲವನ್ನು ತುಂಬಿಕೊಳ್ಳುವುದಕ್ಕೆ ಮುಂಬರುವ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ. ಪುರುಸೊತ್ತು ಸಿಕ್ಕಾಗಲೆಲ್ಲ ಬರೆದುಕೊಳ್ಳುತ್ತೇನಾದರೂ ಅವುಗಳನ್ನೆಲ್ಲ ಕಂಪ್ಯೂಟರಿಗಿಳಿಸಿ 'ಅಂತರಂಗ'ದಲ್ಲಿ ಹಾಕಲು ಸಮಯ ಸಿಗಲಾರದು, ಅದ್ದರಿಂದ ಒಂದಿಷ್ಟು ದಿನಗಳ ರಜೆತೆಗೆದುಕೊಳ್ಳುವುದು ಎಂದು ತೀರ್ಮಾನಿಸಿಕೊಂಡಿದ್ದೇನೆ.

'ಅಂತರಂಗ'ದ ಓದುಗರಿಗೆ ನಿರಾಶೆಯಾಗದಿರಲಿ... ಮತ್ತೆ ಜನವರಿಯಲ್ಲಿ ಇದೇ ಬರವಣಿಗೆ, ಅಥವಾ ಕೊರೆತ ಇದ್ದೇ ಇರುತ್ತೆ. ಹಾಗೇ ಅಮೇರಿಕದಲ್ಲಿ ಕಳೆದ ಹತ್ತು ವರ್ಷಗಳನ್ನು ಸೆಲೆಬ್ರೇಟ್ ಮಾಡುವುದರ ಜೊತೆಗೆ, ಸೆಲ್‌ಫೋನ್ ಕ್ರಾಂತಿಯನ್ನು ಕಂಡ ಭಾರತವನ್ನು ಮೊಟ್ಟ ಮೊದಲ ಭಾರಿಗೆ ನೋಡಿ ಬಂದ ಸಂಭ್ರಮವನ್ನೂ, ಜೊತೆಗೆ 'ಅಂತರಂಗ'ದಲ್ಲಿ ಇನ್ನು ಸ್ವಲ್ಪ ದಿನಗಳಲ್ಲಿ ಪ್ರಕಟವಾಗುವ ಇನ್ನೂರನೇ ಲೇಖನವನ್ನೂ ಗುಂಪಿಗೆ ಸೇರಿಸಿಕೊಂಡರೆ ಒಟ್ಟಿಗೆ ಬೇಕಾದಷ್ಟು ಕಾರಣಗಳಿರುವುದರಿಂದ ನನ್ನ ಲೇಖನಿಯ ಮೊನಚು, ಅಥವಾ ಟೈಪ್ ಮಾಡುವ ಗತಿಗೆ ಯಾವುದೆ ದೋಷ ಬಾರದೇ ಇದ್ದರೇನೆ ಒಳ್ಳೆಯದು ಎಂದೆನಿಸಿದೆ!

ಭಾರತದಲ್ಲಿ ಏನು ಪ್ಲಾನ್ ಇದೆ ಅಂದ್ರಾ? ಏನೂ ಇಲ್ಲ ಅನ್ನೋದೇ ಈ ಭಾರಿಯ ವಿಶೇಷ, ಸುಮ್ಮನೆ ಹೀಗೆ ಹೋಗಿ ಹಾಗೆ ಬಂದರೆ ಆಯಿತಪ್ಪ, ಅದಕ್ಕೆ ಪ್ಲಾನಾದರೂ ಏಕೆ ಬೇಕು? :-)

***
'ದಾರಿ-ದೀಪ'ದ ಓದುಗರು ದಯವಿಟ್ಟು ಕ್ಷಮಿಸಿ, ಹಲವು ತಿಂಗಳುಗಳಿಂದ ಅಲ್ಲಿ ಯಾವುದೇ ಬರಹವನ್ನು ಬರೆಯಲಾಗುತ್ತಿಲ್ಲ.
***
ನಮ್ಮ-ನಿಮ್ಮ ಭೇಟಿ ಮತ್ತೆ ಜನವರಿಯಲ್ಲಿ...ಹ್ಯಾಪ್ಪಿ ನ್ಯೂ ಇಯರ್!

Thursday, December 14, 2006

ಬೆಸ (odd) ಸಂಖ್ಯೆಯ ಪಯಣ

ಒಂದು ರೀತಿ ಇದನ್ನು odd ಪ್ರಯಾಣ ಎಂದು ಬರೆದರೇನೇ ಚೆನ್ನ. ಹೆಚ್ಚಿನವರು ಭಾರತದಿಂದ ಅಮೇರಿಕಕ್ಕೋ ಅಥವಾ ಮತ್ತಿನ್ನೆಲ್ಲಿಗೋ ಅನಿವಾಸಿಗಳಾಗಿ ಬಂದವರು, ಸ್ಥಳೀಯ one-way ವಿಮಾನ ಪ್ರಯಾಣಗಳನ್ನು ಮಾಡಿರದಿದ್ದರೆ ಅಂಥವರು ಮಾಡುವ ವಿಮಾನಯಾನ ಯಾವಾಗಲೂ ಬೆಸ ಸಂಖ್ಯೆಯಲ್ಲಿಯೇ ಕೊನೆಯಾಗುತ್ತದೆ. ಮಧ್ಯೆ ಮಧ್ಯೆ ವೆಕೇಷನ್ ಅಥವಾ ಸ್ಥಳೀಯ ಪ್ರಯಾಣಗಳನ್ನು ಮಾಡಿದ್ದರೂ ಕೊನೆಯಲ್ಲಿ ಅದು ಬೆಸ ಸಂಖ್ಯೆಯಲ್ಲಿಯೇ ಅಂತ್ಯವಾಗುವುದು ಮೊದಮೊದಲು ನನಗೆ ಹಾಸ್ಯದ ವಿಷಯವಾಗಿತ್ತು - ಅನಿವಾಸಿಗಳ odd ಯಾತ್ರೆ - ಎಂದು ಅಲ್ಲಲ್ಲಿ ಮಾತನಾಡಿದ್ದಿದೆ, ಆದರೆ ಅನಿವಾಸಿಯಲ್ಲಿ 'ಅ' ಹೊರಟು ಹೋಗಿ 'ನಿವಾಸಿ'ಯ ಪಟ್ಟವನ್ನು ಸ್ವೀಕರಿಸುವ ಹೊತ್ತಿಗೆಲ್ಲ ಈ ಬೆಸ ಸಂಖ್ಯೆಯ ಪಯಣ ಎಲ್ಲಾದರೂ ಒಂದು ಮೂಲೆಯಲ್ಲಿ ಚುಚ್ಚುವುದಂತೂ ಇದ್ದೇ ಇರುತ್ತೆ, ಎಂಥ ಗಟ್ಟಿಗ ಮಲೆಯಾಳಿ ಕುಟ್ಟಿಗೂ ತಮ್ಮ ಊರು-ಕೇರಿಗಳು ಒಂದಲ್ಲ ಒಂದು ರೀತಿಯಲ್ಲಿ 'ಚೆನ್ನ' ಎನ್ನಿಸಿರಲೇ ಬೇಕು. ಮಲೆಯಾಳಿಗಳ ಉದಾಹರಣೆ ಏಕೆ ತೆಗೆದುಕೊಂಡೆನೆಂದರೆ ನನಗೆ ಗೊತ್ತಿರುವಂತೆ ಹೆಚ್ಚಿನ ಮಲಯಾಳಿಗಳು ತಮ್ಮ ಊರು-ದೇಶವನ್ನು ಬಿಡುವುದು ಒಂದೇ ಬಾರಿ, ಮತ್ತೆ ಜೀವಮಾನ ಪರ್ಯಂತ ಹಿಂತಿರುಗಿ ಹೋಗಿದ್ದನ್ನು ನಾನು ಕಾಣೆ.

ಬಾಂಬೆಯಲ್ಲಿ ನಾನು ಮೊಟ್ಟಮೊದಲ ಬಾರಿಗೆ ವಿಮಾನವನ್ನು ನೋಡಿದ್ದು, ಹತ್ತಿದ್ದು ಎಲ್ಲಾ. ಅದಕ್ಕೆ ಮೊದಲೆಲ್ಲ ಹಗಲು ಹೊತ್ತಿನಲ್ಲಿ ಕರ್ಕಷ ಶಬ್ದ ಮಾಡುವ ಆಕಾಶದ ಒಂದು ಭಾಗವಾಗಿಯೋ, ರಾತ್ರಿಯ ಹೊತ್ತು ಸದ್ದಿಲ್ಲದೆ ದೂರದಲ್ಲಿ ಬೆಳಕನ್ನು ಚಿಮುಕಿಸಿ ಎಲ್ಲಿಂದ-ಎಲ್ಲಿಗೋ ಹೋಗುವವರನ್ನು ಹೊತ್ತು ಹಲವೊಮ್ಮೆ ಉಲ್ಕೆಗಳೇನೋ ಎನ್ನುವ ಭ್ರಮೆಯನ್ನು ಹುಟ್ಟು ಮಾಡುವವಾಗಿಯೋ ಅಥವಾ ಯಾವುದಾದರೊಂದು ವಸ್ತು ಸಂಗ್ರಹಾಲಯದಲ್ಲಿ ಮಾದರಿಯಾಗಿಟ್ಟ ವಸ್ತುವಾಗಿಯೋ ಕಂಡಿದ್ದವು. ರಾತ್ರಿ ಒಂಭತ್ತು ಘಂಟೆಗೆಲ್ಲಾ ಹೊರಡಬೇಕಾಗಿದ್ದ ನನ್ನ ಮೊಟ್ಟ ಮೊದಲ ವಿಮಾನಯಾತ್ರೆ, ಅದೂ ದೂರದ ಅಮೇರಿಕಕ್ಕೆ ಫ್ರಾಂಕ್‌ಫರ್ಟ್ ಮುಖಾಂತರ ಸುಮಾರು ಐದಾರು ಘಂಟೆಗಳ ಕಾಲ ತಡವಾಗಿದ್ದು, ಜೊತೆಯಲ್ಲಿ ಹಸಿವು ಹಾಗೂ ನಿದ್ದೆಗಳಿಗೆ ಶರಣಾದ ದೇಹ ನನ್ನ ಸಂಭ್ರಮದ ಬೆಲೂನಿಗೆ ಸೂಜಿ ಚುಚ್ಚಲು ಹೆಚ್ಚು ಕಾಲ ತೆಗೆದುಕೊಂಡಿರಲಿಲ್ಲ. ಅದ್ಯಾರೋ ಏಳಿಸಿ ಊಟ ತಂದುಕೊಟ್ಟಾಗ ಬೆಳಗ್ಗಿನ ಜಾವ ನಾಲ್ಕು ಘಂಟೆಯಾಗಿ ಹೋಗಿತ್ತು, ನಿದ್ರೆಯಿಂದೆಂದ್ದು ಹಲ್ಲುಜ್ಜದೇ ತಿಂದು-ಕುಡಿಯುವ ಜಾಯಮಾನಕ್ಕೆ ಹುಟ್ಟು ಇನ್ನೆಲ್ಲಿಂದ ಬಂದಿತೆಂದುಕೊಂಡು ನಾನು ಅಂದುಕೊಂಡಾಗಲೆಲ್ಲ ನಾನು ಆಕಾಶದಲ್ಲಿ ಸಮುದ್ರದ ಮೇಲೆ ಹಾರುವಾಗ ಕಲಿತ ಗುಣ ಎಂದುಕೊಂಡು ನನ್ನಷ್ಟಕ್ಕೆ ನಾನೇ ಸಮಾಧಾನವನ್ನು ಮಾಡಿಕೊಳ್ಳುತ್ತೇನೆ. ಆ ಒಂದು ಪಯಣದಿಂದಲೇ ಎಷ್ಟೋ ಕಾಯಕಗಳು ತಮ್ಮಷ್ಟಕ್ಕೆ ತಾವೇ ಆರಂಭಗೊಂಡಿದ್ದವು, ಕೆಲವು ಗೊತ್ತಿದ್ದು, ಇನ್ನು ಕೆಲವು ಗೊತ್ತಿಲ್ಲದೆ. ಅಲ್ಲಿಯವರೆಗೆ ಬಸ್ಸು, ರೈಲುಗಳಲ್ಲಿ ಕಷ್ಟಪಟ್ಟು ಪ್ರಯಾಣಮಾಡಿದ್ದ ನನಗೆ ವಿಮಾನಯಾನವಾದರೂ ಸುಖಕರವಾಗಿತ್ತೆಂದುಕೊಂಡರೆ ಅದೂ ಇಲ್ಲ, ವಿಮಾನದಲ್ಲಿ ನಾನು ಪ್ರಯಾಣ ಮಾಡುವ ಸೀಟುಗಳೆಲ್ಲವೂ ನಮ್ಮ ಬಸ್ಸು ರೈಲಿನ ಸೀಟುಗಳಿಗಿಂತಲೂ ಕಿರಿದಾದವು. ಎಲ್ಲ ಪ್ರಯಾಣಿಕರು ಕುಳಿತುಕೊಂಡಿರುತ್ತಾರೆ, ನಿಲ್ಲುವವರು ಯಾರೂ ಇಲ್ಲವೆಂದುಕೊಂಡರೆ ಆಗಾಗ್ಗೆ ಅಲ್ಲಲ್ಲಿ ಓಡಾಡುವ ಫ್ಲೈಟ್ ಅಟೆಂಡೆಂಟ್‌ಗಳು ನಿಂತು ಪ್ರಯಾಣ ಮಾಡುವ ಪ್ರಯಾಣಿಕರ ಸಮನಾಗುತ್ತಾರೆ. ಈ ಬೆಸ ಸಂಖ್ಯೆಯ ಪ್ರಯಾಣದಲ್ಲಿ ಸೀಟುಗಳಾಗಲೀ, ವಾತಾವರಣವಾಗಲಿ, ಊಟವಾಗಲೀ ಏಕೆ ಅಷ್ಟೊಂದು ಅನುಕೂಲಕರವಾಗಿರೋದಿಲ್ಲವೋ?

ಏರ್‌ಪೋರ್ಟ್‌ಗಳಲ್ಲಿ ಸಮಾನತೆ ಇದೆ ಎಂದುಕೊಂಡರೆ ಅದೂ ಸುಳ್ಳು ಎಂದು ಅರ್ಥವಾಗಿದ್ದು, ಲಂಡನ್, ಪ್ಯಾರಿಸ್, ಜರ್ಮನಿಗಳ ಏರ್‌ಪೋರ್ಟ್‌ಗಳಲ್ಲಿ ಅಮೇರಿಕಕ್ಕೆ ಹೋಗುವ ಪ್ರಯಾಣಿಕರ ಲೌಂಝ್‌ಗೂ ಹಾಗೂ ಇತರ ದೇಶಗಳ ಕಡೆಗೆ ಪ್ರಯಾಣ ಬೆಳೆಸುವವರ ಲೌಂಝ್‌ಗೂ ವ್ಯತ್ಯಾಸವನ್ನು ನಾನು ಕಂಡುಹಿಡಿದಾಗ. ನಾನು ಅಮೇರಿಕದಿಂದ ಭಾರತಕ್ಕೆ ಹೊರಡುವಾಗ ಬಳಸುವ ರೆಸ್ಟ್‌ರೂಮ್‌ಗಳ ಕ್ವಾಲಿಟಿಗೂ ಅದೇ ಭಾರತದಿಂದ ಅಮೇರಿಕಕ್ಕೆ ಬರುವಾಗ ಬಳಸುವ ರೆಸ್ಟ್‌ರೂಮುಗಳ ಕ್ವಾಲಿಟಿಗೂ ಸಾಕಷ್ಟು ವ್ಯತ್ಯಾಸವನ್ನು ಗಮನಿಸಿದ್ದೇನೆ. ಸಮಾನತೆಯನ್ನು ಸಾರುವ ನಾಗರಿಕತೆಯಲ್ಲಿ ಈ ವ್ಯತ್ಯಾಸ ಹೇಗೆ ಸುಳಿಯಿತು, ಹೇಗೆ ಇನ್ನೂ ನಡೆದುಕೊಂಡು ಬಂದಿದೆ ಎಂದು ಬೇಕಾದಷ್ಟು ಬಾರಿ ಯೋಚಿಸಿದ್ದೇನೆ. ಕಷ್ಟಮರ್ ಸರ್ವಿಸ್ ಎಂದುಕೊಂಡು ಹೋದರೂ ಅಮೇರಿಕದವರಿಗೊಂದು ಬಗೆ, ಪ್ರಪಂಚದ ಉಳಿದ ದೇಶದವರಿಗೊಂದು ಬಗೆ ಎನ್ನುವ ಹಲವಾರು ಅಂಶಗಳನ್ನು ಗಮನಿಸಿದ್ದೇನೆ. ಈ ದೃಷ್ಟಿಯಿಂದಲೇ ನನ್ನಂತಹವರು ಅಮೇರಿಕನ್ ಆದರೂ ಅದೂ ಕೇವಲ ಪುಸ್ತಕ ದಾಖಲಾತಿಗಳಲ್ಲಿ ನಿಲ್ಲುತ್ತದೆಯೇ ವಿನಾ ಜನಮನದಲ್ಲಲ್ಲ - ಏಕೆಂದರೆ ಉಳಿದವರ ಕಣ್ಣಿಗೆ ನಾವು ಅಮೇರಿಕನ್ ಆಗಿ ಕಾಣುವಂತಹ ಬದಲಾವಣೆಗಳು ನಮ್ಮಲ್ಲಿಲ್ಲ.

ಈ ಬೆಸ ಸಂಖ್ಯೆಯ ಪ್ರಯಾಣಗಳು - ಅಂದರೆ ಪ್ರತಿಯೊಂದು ಬಾರಿ ಭಾರತಕ್ಕೆ ಹೋಗಿ ಮತ್ತೆ ಹಿಂತಿರಿಗುವ ಪ್ರಯಾಣ - ಮನಸ್ಸನ್ನು ನಾವು ಭಾರತದಿಂದ ತರುವ ಭಾರವಾದ ಸೂಟ್‌‍ಕೇಸ್‌ಗಳಂತೆಯೇ ಭಾರವಾಗಿಸಿ ಬಿಡುತ್ತವೆ. 'ಅಮೇರಿಕದಲ್ಲಿ ಅಪ್ಪ-ಅಮ್ಮ ಒಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲವೂ ಸಿಗುತ್ತದೆ' ಎನ್ನುವ ತತ್ವವನ್ನು ನಿಧಾನವಾಗಿ ಅಳವಡಿಸಿಕೊಂಡಂತೆ ಅಥವಾ ಇಲ್ಲಿ 'ಬೆಳೆದುಕೊಂಡ' ನಮ್ಮ ಕ್ವಾಲಿಟಿ ಕಾನ್ಸೆಪ್ಟಿನ ಕೃಪೆಯಿಂದ ಅಲ್ಲಿಯ ವಸ್ತುಗಳು ಕೀಳಾಗಿ ಕಂಡುಬರುವ ಮಾನಸಿಕ ದುಸ್ಥಿತಿ ಬರುವ ಹೊತ್ತಿಗೆ ಮನಸ್ಸು ಕಾರ್ಯ-ಕಾರಣಗಳ ಹಿಂದೆ ಹೋಗಿ ಯೋಚಿಸದೇ ಕೇವಲ ತೊಗಲಿಗಂಟಿದ ಬಣ್ಣವನ್ನು ಆರಾಧಿಸತೊಡಗುತ್ತದೆ. ಎಷ್ಟೋ ಜನರಿಗೆ ಕೇಳಿ ನೋಡಿದೆ 'ಭಾರತದಿಂದ ನಿಮಗೇನಾದರೂ ತರಬೇಕೇ?' ಎಂದು ಬಂದ ಉತ್ತರಗಳೆಲ್ಲ 'ಏನೂ ಬೇಡ' ಎನ್ನುವ ಅರ್ಥವನ್ನು ಕೊಡಲು ಶುರುಮಾಡಿದವು. ಅದು ಸರಿ, ನಾನೇನು ನನಗೋಸ್ಕರ ಅಲ್ಲಿಂದ ತರುತ್ತೇನೆ ಎಂದು ಯೋಚಿಸುವ ಹೊತ್ತಿಗೆ ಮನದೊಳಗೆ ಮುಂಬರುವ ಬೆಸ ಸಂಖ್ಯೆಯ ಪ್ರಯಾಣದ ಬಗ್ಗೆ ಇರುವ ಉತ್ಸಾಹಗಳು ನಿಧಾನವಾಗಿ (ಆ ಸಮಯಕ್ಕೆ) ಕಡಿಮೆಯಾಗತೊಡಗಿದಂತೆ ಕಂಡುಬಂದವು.

ಇಲ್ಲಿಗೆ ಬರುವ ಮೊಟ್ಟ ಮೊದಲ ಪ್ರಯಾಣ ನನ್ನ ಆಯ್ಕೆಯೋ ವಿಧಿಯೋ, ಆದರೆ ಇಲ್ಲಿಂದ ಈ ಬೆಸವನ್ನು 'ಸರಿ' (even) ಮಾಡಿ ಹಿಂತಿರುಗುವ ಆಯ್ಕೆ ನನ್ನದಾಗಿರಲಿ. ಅಲ್ಲಿ-ಇಲ್ಲಿನ ಮೌಲ್ಯಗಳ ಕೋಲಿನಲ್ಲಿ ಕಂಡದ್ದೆಲ್ಲವನ್ನು ಅಳತೆ ಮಾಡದೇ ಇದ್ದದ್ದನ್ನು ಇದ್ದಹಾಗೇ ನೋಡುವ ದೃಷ್ಟಿಕೋನ ಹುಟ್ಟಲಿ.

Thursday, December 07, 2006

ಸೂರ್ಯ-ಚಂದ್ರರ ನೆರಳಿನಲಿ...

ಅಯ್ಯೋ 'ಅಂತರಂಗ'ದಲ್ಲಿ ಏನೂ ಬರೆದೇ ಇಲ್ಲ ಇತ್ತೀಚೆಗೆ ಕಡೆಗಣೆಸಿ ಬಿಟ್ಟೆನೇ ಎಂದು ಕೊರಗುತ್ತಾ ಆಫೀಸ್ ಹಾದಿ ಹಿಡಿದ ನನಗೆ ಒಂದು ಕಡೆ ಗೌರೀ ಹುಣ್ಣಿಮೆಯ ಚಂದ್ರನ ಅಳಿದುಳಿದ ಕಳೇಬರ ಮತ್ತೊಂದು ಕಡೆಗೆ ಈಗ ತಾನೇ ಪ್ರಾಬಲ್ಯಕ್ಕೆ ಬರುತ್ತಿರುವ ಸೂರ್ಯನ ಕಿರಣಗಳು ಗೋಚರಿಸತೊಡಗಿದವು. ದೂರದ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಶ್ರೇಣಿಗಳಂತೆ ಹಬ್ಬಿರುವ ಮೋಡಗಳು ತಮ್ಮ ತುದಿಯಲ್ಲಿ ಸಾಲಾಗಿ ಸೂರ್ಯ ಕಿರಣಗಳನ್ನು ಪ್ರತಿಬಿಂಬಿಸುತ್ತಾ ಜರಿಯ ಅಂಚಿನಂತೆ ಕೋರೈಸುತ್ತಿದ್ದವು. ಸೂರ್ಯನ ದರ್ಶನವಾದದ್ದೇ ತಡ 'ಓಂ ಮಿತ್ರಾಯ ನಮಃ' ಎಂದು ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ. ನನ್ನ ವಾಹನವೂ ಸೇರಿ ನನ್ನ ಹಿಂದೆ ಸಾಲು ಸಾಲಾಗಿ ಬರುತ್ತಿದ್ದ ವಾಹನಗಳೆಲ್ಲ ವಿಶೇಷವಾದ ತೇರೊಂದನ್ನು ಎಳೆದುಕೊಂಡು ಹೋಗುವ ಸಂಭ್ರಮವನ್ನು ಹೊತ್ತು ಜೋರಾಗಿ ಸಾಗುತ್ತಿದ್ದವು. ಸೂರ್ಯನ ಪ್ರಖರತೆ ಹೆಚ್ಚಾದಂತೆ ನಿಧಾನವಾಗಿ ಚಂದ್ರ ಗೆಳೆಯರೆಲ್ಲರೂ ಆಟದ ಮಧ್ಯೆಯೇ ಕೈಕೊಟ್ಟು ಹೋದಂತೆ ಹ್ಯಾಪು ಮೋರೆಯನ್ನು ಹಾಕಿಕೊಂಡು ನಿಧಾನವಾಗಿ ಕೆಳಗಿಳಿಯುತ್ತಿದ್ದನೋ ಅಥವಾ ಮೇಲೇರುತ್ತಿದ್ದನೋ ಆದರೆ ಅವನನ್ನು ಕೇಳುವವರೇ ಯಾರೂ ಇಲ್ಲದಾಗಿ ಹೋದಂತಾದರು ಒಂದು ರೀತಿ ಡೆಮಾಕ್ರಟಿಕ್ ಪಕ್ಷ ಮೆಜಾರಿಟಿಗೆ ಬರುತ್ತಿದ್ದಂತೆ ಬುಷ್ ಅನ್ನು ಎಲ್ಲರು ಬದಿಗೆ ತಳ್ಳಿದ ಹಾಗೆ.

'ನಾನು ಹಾಡುವುದು ನನಗೆಂದು...ಎದೆ ಭಾರ ಇಳಿಯಳಲೆಂದು...' ಎಂದುಕೊಂಡು ಅದೂ-ಇದೂ ಬರೆಯಲು ಆರಂಭಿಸುವ ನನಗೆ ಇಂತಹುದೇ ವಿಷಯ/ವಿಚಾರವೆಂಬುದೇನೂ ಇಲ್ಲಿಯವರೆಗೆ ಯಾವುದೇ ಅಡ್ಡಿ-ಆತಂಕಗಳನ್ನು ತಂದಿಲ್ಲವಾದರೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಕಾಂಟ್ರೋವರ್ಸಿಯಿಂದ ದೂರವಿರುವುದು ಸಾಧುವೆನಿಸಿತ್ತು, ಜೊತೆಯಲ್ಲಿ ಅದು ಸೇಫ್ ಸಹ ಎನಿಸಿ ಒಂದು ರೀತಿ ನನ್ನದೇ ಆದ ಕಾಂಪ್ಲಸೆಂಟ್ ವಾತಾವರಣವನ್ನು ಹುಟ್ಟಿಹಾಕಿಕೊಂಡಿದ್ದು ನನ್ನ ಅನುಭವಕ್ಕೇ ಇತ್ತೀಚೆಗೆ ಗಾಢವಾಗತೊಡಗಿತು. ಹಾದಿಯಲ್ಲಿ-ಬೀದಿಯಲ್ಲಿ ಹೋಗಿಬರುವವರ ಬಗ್ಗೆ ಬರೆಯುವುದು ಒಂದು ರೀತಿಯದಾದರೆ, ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಬರೆಯುವುದು ಮತ್ತೊಂದು ಬಗೆ. ಒಂದು ರೀತಿ ಕತ್ತಲಿನಲ್ಲಿ ಕತ್ತಿ ಆಡಿಸಿದಂತೆ ಅದರಿಂದೆಂದೂ ಯಾವ ಪ್ರಯೋಜನವಂತೂ ನನಗಾಗಿಲ್ಲ. ಹೀಗೆ ನ್ಯೂಟ್ರಲ್ ಆಗಿ ಬರೆಯುವ ಪ್ರಯತ್ನದಲ್ಲಿ ನನ್ನ ಗೊಂದಲ, ಅಸಮಧಾನಗಳು ನನ್ನೊಳಗಿನ ಮೂಸೆಯಲ್ಲಿ ಬಿಸಿ ಮುಟ್ಟಿದಂತೆಲ್ಲ ಕುದಿದು ಮತ್ತೆ ತಣ್ಣಗಾಗಿ ಬಿರುಕುಬಿಟ್ಟ ಲೋಹದ ತುಣುಕುಗಳಂತೆ ಬಿರುಸಾಗಿ ಹರಳುಗಟ್ಟತೊಡಗಿದವು. ಇನ್ನು ಕೆಲವು ಆಲೋಚನೆಗಳು ಹೀಗೆ ಬಂದು ಹಾಗೆ ಹೋದವು. ಸರಿ, ತಪ್ಪು ಎನ್ನುವುದರಿಂದ ದೂರ ಉಳಿದು, ನನ್ನ ಅನಿಸಿಕೆಗಳು ಅನುಭವಗಳನ್ನು ಬರೆಯುವುದು ಒಂದು ಬಗೆ, ಪೊಲಿಟಿಕಲ್ ಆಗಿ ಬರೆಯುವುದು ಮತ್ತೊಂದು ಬಗೆ; ಕೆಲವರ ಪರ ವಾದಿಸುವುದು ಒಂದು ಬಗೆ, ಪ್ರತಿಯೊಬ್ಬರ ಧೋರಣೆಗಳನ್ನು ಬೆಂಬಲಿಸುವುದು ಮತ್ತೊಂದು ಬಗೆ. ಹೀಗೆ ಹಲವಾರು ಗೊಂದಲಗಳನ್ನು ಹೊರಹಾಕುವಲ್ಲಿ ನನ್ನ ಈವರೆಗಿನ ಲೇಖನಗಳು ಒಂದು ರೀತಿ ಕನ್ನಡಿಯ ಹಾಗೆ ನನ್ನ ಇತರ ಮುಖಗಳನ್ನು ನನಗೆ ದರ್ಶನ ಮಾಡಿಸಿವೆ.

Who cares for New Year resolutions...ಎಂದುಕೊಂಡು ನಾನು ಜನವರಿ ಒಂದನ್ನು ಉಪೇಕ್ಷಿಸುತ್ತಿದ್ದುದೇ ಈವರೆಗೆ ಸಾಮಾನ್ಯವಾಗಿತ್ತು. ಕಳೆದ ವರ್ಷ ಜಯಶ್ರೀ ಒತ್ತಾಯ ಮಾಡಿದ ಮೇಲೆ ಒಂದಿಷ್ಟು ಹೊಸ ವರ್ಷದ ರೆಸೊಲ್ಯೂಷನ್‌ಗಳನ್ನು ಬರೆದದ್ದೂ ಆಯಿತು, ಅವುಗಳನ್ನು ನಡೆಸಿಕೊಂಡು ಬಂದದ್ದೂ ಆಯಿತು. 'ನಾನು ಜನವರಿ ಒಂದನ್ನು ಹೊಸ ವರ್ಷವನ್ನಾಗಿ ಆಚರಿಸೋದಿಲ್ಲ, ನನಗೇನಿದ್ದರೂ ಯುಗಾದಿಯೇ ಹೊಸವರ್ಷ' ಎಂದು ಮೂರು ವರ್ಷಗಳ ಹಿಂದೆ ಯಾವುದೋ ಪ್ರಶ್ನೆಗೆ ಉತ್ತರವಾಗಿ ಹೇಳಿದ ನನ್ನನ್ನು ಭೂಮಿಗೆ ತಂದವನು ಕೃಪೇಶ - 'ನಿನ್ನ ಬರ್ತ್ ಡೇ, ಆಫೀಸ್‌ನಲ್ಲಿನ ಆಗುಹೋಗುಗಳು ಮತ್ತೆಲ್ಲವೂ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿರುವಾಗ ಈ ಹೊಸವರ್ಷವೊಂದನ್ನು ಮಾತ್ರ ಉಪೇಕ್ಷಿಸುತ್ತೀಯೇಕೆ?'. ಅಂದಿನಿಂದ ಜನವರಿ ಒಂದರಂದು ನಾನು ಕುಡಿದು-ಕುಣಿದು ಕುಪ್ಪಳಿಸುವುದಿಲ್ಲವಾದರೂ 'ಹೊಸ' ವರ್ಷವನ್ನು ಕಣ್ಣು ಬಿಟ್ಟು ನೋಡುವುದನ್ನು ಕಲಿತಿದ್ದೇನೆ, ಬ್ರಹ್ಮಾಂಡದಲ್ಲಿ ಅನೇಕ ಬದಲಾವಣೆಗಳನ್ನು ತರುವ ನಮ್ಮ ಸಂಭ್ರಮದ ಯುಗಾದಿಯನ್ನು ಅದ್ಯಾವ ಕಾರಣಗಳಿಂದಲು ಡಿಸೆಂಬರ್ ೩೧ ಹಾಗೂ ಜನವರಿ ೧ ರ ನಡುವಿನ ವ್ಯತ್ಯಾಸಕ್ಕೆ ನಾನು ತುಲನೆ ಮಾಡಲಾಗದಿದ್ದರೂ 'ಗುಂಪಿನಲ್ಲಿ ಗೋವಿಂದ' ಎನ್ನುವಂತೆ ಹೆಚ್ಚು ಜನರು ಆಚರಿಸುವ ನಡವಳಿಕೆಯನ್ನು ಅನುಮೋದಿಸುವ ಬೃಹತ್ ಮನಸ್ಸನ್ನು ಹೊಂದಿಸಿಕೊಂಡಿದ್ದೇನೆ. ನಮ್ಮದೇ ಸರಿ ಎನ್ನುವುದು ಒಂದು ಹಂತ, ಸರಿಯನ್ನು ಹೆಚ್ಚು ಜನರು ಒಪ್ಪಿಕೊಳ್ಳುವ ಬದಲಾವಣೆಯನ್ನು ಹುಟ್ಟು ಹಾಕುವ ಪ್ರವಾದಿಯಾಗುವುದು ಮತ್ತೊಂದು ಹಂತ. ಪಾಡ್ಯಬಿದಿಗೆಗಳಿಗೆ ಜನರನ್ನು ಹೊಂದಿಸುವುದಾಗಲೀ, ಇಂಗ್ಲೀಷ್ ಕ್ಯಾಲೆಂಡರಿನಲ್ಲಿ ತಿಂಗಳ ಮಧ್ಯೆ (೨೦ ನೇ ತಾರೀಖಿನ ಆಜುಬಾಜು) ಹೊಸ ಮಾಸವನ್ನು ಸೃಷ್ಟಿಸುವುದಾಗಲೀ, ಚೈತ್ರವನ್ನು-ವಸಂತವನ್ನು ಬದಲಾವಣೆಯ ಏಜೆಂಟರನ್ನಾಗಿ ಜಗತ್ತಿಗೆ ಸಾರುವುದು ನನ್ನ ಕರ್ಮವಂತೂ ಅಲ್ಲ, ಈ ಜನ್ಮದಲ್ಲಿ ಆ ಶಕ್ತಿಯೂ ನನಗಿಲ್ಲ ಎಂದು ಜಾರಿಕೊಂಡು ಹಾಡುಹಗಲೇ ಗುಂಪನ್ನು ಅನುಮೋದಿಸುವ ಪ್ರವೃತ್ತಿ ಸ್ವಭಾವವಾಗಿ ಪರಿವರ್ತನೆಯಾಗಿ ಹೋಗಿದೆ.

ನಾನು ಹೆಚ್ಚೇನು ಮಹತ್ವಕಾಂಕ್ಷೆಗಳನ್ನು ಇಟ್ಟುಕೊಂಡಿರದ ಮುಂಬರುವ ನನ್ನ ಭಾರತದ ಪ್ರವಾಸದ ಸಮಯದಲ್ಲಿ ಈ ರೀತಿಯ ಆಲೋಚನೆಗಳು ಹೆಚ್ಚೆಚ್ಚು ಬರಲಿ, ಆದಷ್ಟು ನನ್ನ ಬರಹಗಳು ನನ್ನೊಳಗಿನ ನಿಜವನ್ನು ಹೊರತರುವ ಕ್ರಾಂತಿಕಾರರಾಗಲಿ. ಗುಂಪನ್ನು ಅನುಮೋದಿಸುವುದೋ, ಬದಲಾವಣೆಯ ಹರಿಕಾರ (change agent) ನಾಗಿ ಉಳಿಯುವುದೋ ಎಂಬ ಪ್ರಶ್ನೆಗಳಿಗೆ ಹೆಚ್ಚಿನ ಆಳ ದೊರಕಲಿ ಹಾಗೂ ಇವೇ ಸೂರ್ಯ-ಚಂದ್ರರ ನೆರಳಿನಲ್ಲಿ ನನ್ನ ಸಂಸ್ಕಾರಗಳ ದರ್ಶನವಾಗಲಿ...

Sunday, December 03, 2006

ನೆಗಡೀ ಅಂತಾ ರೋಗಾ ಇಲ್ಲಾ...

ಏನೇ ಹೇಳಿ ಈ ಟೆಕ್ನಾಲಜಿ ಅನ್ನೋದು ಏನೇನ್ ಬಂದ್ರೂ ನೆಗಡಿ ಆದೋರ್ಗೇನೂ ಸಹಾಯ ಮಾಡೋ ಹಾಗ್ ಕಾಣ್ಸೋದಿಲ್ಲ. ಯಾಕೆ ಈ ಮಾತ್ ಹೇಳ್ತಾ ಇದ್ದೀನಿ ಅಂದ್ರೆ ನೀವೆಲ್ಲ ಈ ಮಾತನ್ನ ಕೇಳೇ ಇರ್ತೀರಿ - ನೆಗಡಿಗೆ ಔಷಧಿ ತೆಗೊಂಡ್ರೆ ಗುಣಾ ಆಗೋಕೆ ಒಂದ್ ವಾರ ಬೇಕು, ಇಲ್ಲಾ ಅಂತಂದ್ರೆ ಅದೇ ತನ್ನಷ್ಟಕ್ಕೆ ತಾನೆ ಏಳ್ ದಿನಗಳಲ್ಲಿ ಹೊರಟುಹೋಗುತ್ತೇ ಅಂತಾ. ನಮ್ ಕಡೇ ಒಂದ್ ಗಾದೇನೂ ಸೇರ್ಸಿ ಬಿಟ್ಟಿದ್ದಾರೆ - ನೆಗಡೀ ಅಂತಾ ರೋಗಾ ಇಲ್ಲಾ ಬುಗುಡೀ ಅಂತಾ ಒಡವೇ ಇಲ್ಲಾ! ಈಗಿನ್ ಕಾಲದಲ್ಲಿ ಸೊಂಟಕ್ಕೆ ಬುಗಡಿ-ಪಗಡೀ ಹಾಕ್ಕೋತಾರೋ ಬಿಡ್ತಾರೋ, ಯಾವ್ ಕಾಲ ಬಂದ್ರೂ ನೆಗಡೀ ಆಗೋದೇನೂ ನಿಂತ್ ಹಾಗ್ ಕಾಣ್ಸೋಲ್ಲ.

ಈ ಜಪಾನೂ ಜರ್ಮನೀಯವರು ಏನೇನೋ ಕಂಡ್ ಹಿಡೀತಾರೆ, ಈ ಟಾಯ್ಲೆಟ್ ಪೇಪರ್ ರೋಲಿನ ಹಾಗೇ ಟಿಶ್ಯೂ ಪೇಪರ್ರನ್ನು ಒಂದಿಷ್ಟು ತಲೇ ಮೇಲೇ ಸುತ್ತಿಕೊಳ್ಳೋ ಹಾಗೆ ಒಂದ್ ರೋಲನ್ನ ಯಾಕೆ ಯಾರೂ ಸೃಷ್ಟೀಸೋದಿಲ್ವೋ? ಹಾಗೇನಾದ್ರೂ ಮಾಡಿದ್ರೂ ಅಂದ್ರೆ ಅಂಥೋರಿಗೆ ಪೇಟೆಂಟ್ ಮಾಡಿಸ್‌ಕೊಳ್ಳಿಕ್ಕೆ ನಾನ್ ಸಹಾಯ ಮಾಡ್ತೀನಿ. ಇಲ್ಲಂತೂ ನಮ್ಮೂರುಗಳಲ್ಲಿ ಜೇಬಿನಲ್ಲಿ ಕರ್ಚೀಪು ತುರುಕಿಕೊಂಡ ಹಾಗೇ ಯಾರೂ ಕರ್ಚೀಪು ತುಂಬಿಕೊಳ್ಳೋದಿಲ್ಲ, ಬರೀ ಟಿಶ್ಯೂ ಪೇಪರುಗಳನ್ನ ಮಡಿಕೆ ಮಾಡಿ ಇಟ್ಟುಕೊಂಡು ಎಲ್ಲಿ ನೋಡಿದ್ರೆ ಅಲ್ಲಿ ಸೂ...ಸೂ... ಅಂತಾ ಮೂಗಿನ ಒರೆಸಿಕೊಳ್ತಾನೇ ಇರ್ತಾರೆ. ಆದ್ರೆ ಒಂದ್ ಮೂಗ್ನಲ್ಲಿ ಗಂಗಾ, ಮತ್ತೊಂದ್ ಮೂಗ್ನಲ್ಲಿ ಯಮುನಾ ಹರಿಯೋ ನನ್ನಂಥೋರಿಗೆ ಈ ಸಣ್ಣ ಸಣ್ಣ ಪೇಪರ್ ತುಂಡುಗಳು ಯಾವ್ ಲೆಕ್ಕಾ - ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಹಾಗೆ - ಸೋತ್ ಹೋಗ್ ಬಿಡ್ತಾವೆ.

ಯಾರ್ ಹತ್ರಾನೂ ಹೇಳೋಕ್ ಹೋಗ್ಬೇಡಿ, ಸುಮ್ನೇ ಹೀಗೊಂದು ಐಡಿಯಾ ಬಂತು - ಆಕಾಶ್‌‍ದಲ್ಲಿ ಬೆಳ್ಳಿ ಮೋಡಗಳು ತೇಲಿಕೊಂಡು ಹೋಗ್ತಾ ಇರ್ತಾವಲ್ಲ, ಅವುಗಳನ್ನು ಈ ನೆಗಡೀ ಪರಮಾತ್ಮನ ಸೇವೆಗೆ ಯಾಕ್ ಬಳಸ್‌ಬಾರ್ದು? 'ಬೆಳ್ಳಿ ಮೋಡವೇ, ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ...' ಎಂದು ಪ್ರೀತಿಯಿಂದ ಕರೆದು, ಹತ್ತಿ ಉಂಡೆಗಳಂತಿರೋ ಅವುಗಳನ್ನ ಸ್ವಲ್ಪ ಹಿಂಜಿ ಮೂಗನ್ನ ಒರೆಸಿ ಕಸದ ಡಬ್ಬಿಗೆ ಬಿಸಾಡೋ ಹಾಗಿದ್ರೆ ಹೇಗಿರ್ತಿತ್ತು? ಒಂಥರಾ ಗಗನಸಖಿಯರು ಕೊಡೋ ವೆಟ್ ಟವೆಲ್ಲುಗಳ ಹಾಗೆ... ನಮ್ ಕೈಯಲ್ಲೆಲ್ಲ ಮೋಡಗಳನ್ನ ಆಟ್ರ್ಯಾಕ್ಟ್ ಮಾಡೋ ಹಾಗೆ ಒಂದ್ ಅಯಸ್ಕಾಂತ ಇರಬೇಕಿತ್ತು, ಆಗ ಎಂಥಾ ನೆಗಡಿಗೂ ಔಷಧಿ ಅನ್ನೋದೇ ಬೇಡವಾಗ್ತಿತ್ತು, ಕಹಿ ಕಷಾಯ ಕುಡಿಯೋದಿರ್ಲಿ, ಪೇಪರ್ರನ್ನ ಉಪಯೋಗಿಸಿ ಮೂಗ್ ಒರೆಸೋದಿರಲಿ, ಶೇಕಡಾ ನೂರಕ್ಕೆ ನೂರು ನ್ಯಾಚುರ್ರಲ್ಲಾಗಿರೋ ಮೋಡಗಳಿಂದ ಮೂಗನ್ನ ಒರೆಸೋ ತಂತ್ರಜ್ಞಾನ ಯಾವತ್ತು ಬರುತ್ತೋ ಯಾರಿಗೆ ಗೊತ್ತು! ಆಗ 'ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ...' ಅನ್ನೋ ಹಾಡಿಗೆ ಬಹಳ ದೊಡ್ಡ ಅರ್ಥ ಬರ್ತಿತ್ತು.

'ರಾವಣನಿಗೆ ಎಷ್ಟು ತಲೆ ಅಂದ್ರೆ, ಶುಂಬಳಕ್ಕೂ ಕಫಕ್ಕೂ ಎನ್ ವ್ಯತ್ಯಾಸ' ಕೇಳಿದನಂತೆ... ಅನ್ನೋದು ನಾನು ಕಟ್ಟಿರೋ ಜಾಣ್ಣುಡಿ. ರಾವಣಗೆ ನೆಗಡಿ ಅನ್ನೋದೇನಾದ್ರೂ ಆದ್ರೆ ಹೆಂಗಿರತ್ತೆ ಅಂತ can you imagine? ಯಾವ ಮೂಗಲ್ಲಿ ಶುಂಬಳ ಬರುತ್ತೆ, ಯಾವ ಗಂಟಲಲ್ಲಿ ಕಫ ಇರುತ್ತೆ? ಅವನ ಕೈಗಳು ಒಳ್ಳೇ ಯಂತ್ರಗಳ ಹಾಗೆ ಒಂದೊಂದೇ ಮೂಗನ್ನ ಒರೆಸೀ ಒರೆಸೀ ಹಾಕ್ತಾ ಇರಬೇಕಾದ್ರೆ ಅದನ್ನ ನೋಡೋಕೇ ಎರಡು ಕಣ್ಣುಗಳು ಸಾಲವು. ಎಲ್ಲಿ ನೋಡಿದ್ರೂ ದಶಕಂಠ ಲಂಕೇಶ ಅನ್ನೋ ವಿವರಣೆ ಬರುತ್ತೇ ವಿನಾ ಇಪ್ಪತ್ತು ಕೈಗಳ್ಳುವನು ಅನ್ನೋ ಅರ್ಥ ಬರೋ ವಾಕ್ಯಗಳನ್ನಾಗಲಿ ಚಿತ್ರವನ್ನಾಗಲೀ ನೋಡ್ಲೇ ಇಲ್ಲಾ ನಾನು. ಅದೇ ನೋಡಿ, ದೇವತೆಗಳಿಗೆ ಒಂದು ತಲೆ ಅಥವಾ ಮಲ್ಟಿಪಲ್ ತಲೆ ಇದ್ದಲ್ಲೆಲ್ಲ ಮಲ್ಟಿಪಲ್ ಕೈಗಳನ್ನೂ ನಾನು ನೋಡಿದ್ದೀನಿ. ಅಂದ್ರೆ ಈ ದೇವಾನುದೇವತೆಗಳನ್ನು ಚಿತ್ರ ಬರೆದು ನಮ್ಮ ಮನಸ್ಸು ತುಂಬೋ ಈ ಕಲಾವಿದರು ಎಷ್ಟು ಪಾರ್ಷಿಯಾಲಿಟಿ ಮಾಡ್ತಾರೆ ಅನ್ಸಲ್ಲ್ವಾ? ಪಾಪ, ರಾವಣನಿಗೊಂದು ಥರಾ, ಬ್ರಹ್ಮನಿಗೊಂದು ಥರಾ. ಬ್ರಹ್ಮನಿಗಾದ್ರೆ ನಾಲ್ಕು ದಿಕ್ಕಿಗೆ ನಾಲ್ಕು ತಲೆಗಳು, ಅದೇ ರಾವಣನಿಗೆ ಎಲ್ಲಾ ತಲೆಗಳೂ ಒಂದೇ ದಿಕ್ಕಿಗೆ ಮುಖ ಮಾಡಿರೋವು, ಅಂದ್ರೆ ಒಂದು ಮುಸುಡಿಗೆ ನೆಗಡಿ ಆಯ್ತು ಅಂದ್ರೆ, ಇನ್ನೊಂದಕ್ಕೆ ತಗಲೋದು ಬಹಳ ಸುಲಭ ಅನ್ನೋ ಅರ್ಥದಲ್ಲಿ...ಪಾಪ ಅನ್ಸುತ್ತೆ ನೆಗಡಿ ಬಂದ ರಾವಣನನ್ನ ನೆನಸಿಕೊಂಡು.

ನಿಮಗೆಲ್ಲಾ ಹೀಗೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನನಗೆ ಅಪರೂಪಕ್ಕೊಮ್ಮೆ ಎರಡು ಮೂಗಿನ ಹೊಳ್ಳೆಗಳಲ್ಲಿ, ಒಂದೇ ಹೊಳ್ಳೆಗೆ ನೆಗಡಿ ಆಗಿ ಅದು ಕಟ್ಟಿಕೊಂಡು ಕೇವಲ ಒಂದೇ ಕಡೆಯಿಂದ ಉಸಿರಾಡೋ ಹಾಗಾಗುತ್ತೆ, ಒಂದು ರೀತಿ ಕಟ್ಟು ಬಿದ್ದು ಪ್ರಾಣಾಯಾಮಾ ಮಾಡೋರ್ ಥರಾ. ಹಾಗಿದ್ದಾಗ ನಾನು ನೆಗಡಿಗೆ ಔಷಧಿ ಏನಾದ್ರೂ ತೆಗೊಂಡ್ರೆ ಏನ್ ಆಗುತ್ತೋ ಅಂತ ಬಹಳ ಕುತೂಹಲ ಬೇರೆ. ಈ ಅಲೋಪಥಿಕ್ ಔಷಧದ ಅಣುಅಣುವಿಗೆ ಇಂಥಾ ಮೂಗಿನ ಹೊಳ್ಳೆಗೇ ನೆಗಡಿ ಆಗಿದೆ ಅನ್ನೋದ್ ಹೇಗೆ ತಿಳಿಯತ್ತೋ? ಎಲ್ಲಾ ವಿಚಿತ್ರಾನೇ - ಕಾಲಿಗೆ ನೋವಾದ್ರೂ ಔಷಧ ತಗೋಳೋದು ಮಾತ್ರ ಬಾಯಿನೇ.

ನಿಮಗೆ ನೆಗಡಿ ಆಗುತ್ತೋ ಬಿಡುತ್ತೋ, ನನಗೂ ಆಗುತ್ತೆ, once a year... ಆವಾಗ ನನ್ ಪಜೀತಿ ಬಿಡಿ, ಪ್ರತೀ ಸಾರಿ ನಾನು ಸೀನಿದಾಗೆಲ್ಲ ನನ್ ಪಕ್ಕದ ಕ್ಯೂಬಿನಲ್ಲಿ ಕೂತಿರೋ ಅಮೇರಿಕನ್ ಚೆಲುವೆ bless you! ಅನ್ನೋ ಕಷ್ಟಾ ಕೇಳಿ ನನಗೆ ಕೆಲವೊಮ್ಮೆ ಬೇಸರ, ಕೆಲವೊಮ್ಮೆ ಖುಷಿಯಾಗುತ್ತೆ...ಆದ್ರೆ ನಾನು ದಿನಕ್ಕೊಂದೇ ಸರ್ತಿ thank you! ಅನ್ನೋದು, ಅವಳು ಬ್ಲೆಸ್ ಯೂ ಅಂದಾಗೆಲ್ಲಾ ನಾನ್ ಥ್ಯಾಂಕ್ಯೂ ಅಂದ್ರೆ ಅವುಗಳ ಲೆಕ್ಕ ಇಟ್ಟ್ಕೊಳ್ಳೋದ್ ಯಾರು? ನನ್ನ ಸೀನಿನ ಧ್ವನಿಗೂ ಬಹಳ ವೇರಿಯೇಷನ್ನುಗಳಿವೆ, ನಾನು ಮನೆಯಲ್ಲಿ ಸೀನಿದ್ರೆ, ಕೆದಲಾಯ್ ಮೇಷ್ಟ್ರು ಥರಾ ಕೊನೇ ಪಕ್ಷ ಅಕ್ಕಪಕ್ಕದ ಎರಡು ಬೀದಿಗಳಿಗಾದ್ರೂ ಕೇಳುತ್ತೆ, ಆಫೀಸಿನಲ್ಲಿ ಅದರದ್ದೇ ಆದ ಒಂದು ಸ್ಮಾಲ್ ವರ್ಷನ್ ಇದೆ...ಏನೇ ಹೇಳಿ ಮನಸ್ಸು ಬಿಚ್ಚಿ ಗಟ್ಟಿಯಾಗಿ ಸೀನಿದ ತೃಪ್ತಿ ಬರೋದಿಲ್ಲ, ಅದಕ್ಕೇ ನಾನು ಹಾಡೊಂದನ್ನು ಕಟ್ಟಿದ್ದೀನಿ...'ಸೀನೋದರಲ್ಲೂ ಸುಖಾ ಇದೆ ಅಂತ ಗೊತ್ತೇ ಇರಲಿಲ್ಲಾ...'.

ನೆಗಡಿ ಬಂತು...ನೆಗಡಿ ಹೋಯ್ತು ಎನ್ನುವಾಗ ಒಂದು ವಾರವಾಯ್ತು... ಎಂಥಾ ರಾಜರುಗಳಿಂದ ಹಿಡಿದು ನನ್ನಂತ ಸಾಧಾರಣ ಜನರನ್ನೂ ಬಿಡದೇ ಒಂದೇ ಸಮನೆ ತಗಲಿಕೊಳ್ಳೋ ಈ ನೆಗಡಿಯ ವೈರಾಣುಗಳ ಸಮಾಜವಾದವನ್ನು ಕಂಡು ಅವುಗಳ ಮೇಲೆ ಬಹಳ ಅಭಿಮಾನ ಮೂಡಿ, ನಾನಂತೂ equality ಯನ್ನು ಪ್ರೂವ್ ಮಾಡೋ ಅವುಗಳ ಅಭಿಮಾನಿಯಾಗಿ ಹೋಗಿದ್ದೀನಿ, ನೀವು?