ಕಾಡುವ ಹಾಡು: ಕೆಂಪಾದವೋ...
ಕವಿ: ಪಿ. ಲಂಕೇಶ್
ಸಂಗೀತ: ವಿಜಯ ಭಾಸ್ಕರ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್
ಚಿತ್ರ: ಎಲ್ಲಿಂದಲೋ ಬಂದವರು (೧೯೮೦)
ಅಕ್ಕ, ಅಬಚೂರಿನ ಪೋಸ್ಟ್ ಆಫೀಸು, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ, ಟೀಕೆ-ಟಿಪ್ಪಣಿ, ನೀಲು...ಇತ್ಯಾದಿ ಬರಹಗಳಿಂದಾಗಿ ಕನ್ನಡಿಗರನ್ನು ಹಲವು ದಶಕಗಳ ಕಾಲ ಕಾಡಿದ ಹಾಗೂ ಇನ್ನೂ ಕಾಡುತ್ತಿರುವ ನಮ್ಮ ಮೇಷ್ಟ್ರು, ನಮ್ಮ ಮಲೆನಾಡಿನ ಮನೆಮಾತು, ಪಿ. ಲಂಕೇಶ್ ಅವರು ಬರೆದಿರುವ ಗೀತೆಗಳು ಬಹಳ ಕಡಿಮೆ. ಅದರಲ್ಲೂ ಅವರದ್ದೇ ಆದ ಸಿನಿಮಾಗಳಿಗೆ ಅಳವಡಿಸಿದ ಎಲ್ಲ ಹಾಡುಗಳೂ ಕೂಡ ಕನ್ನಡಿಗರಿಗೆ ಎಂದೆಂದಿಗೂ ಚಿರಪರಿಚಿತವೆಂದೇ ಹೇಳಬೇಕು. ’ಎಲ್ಲಿದ್ದೇ ಇಲ್ಲೀತನಕ, ಎಲ್ಲಿಂದ ಬಂದ್ಯವ್ವ..." ಮೊದಲಾದ ಹಾಡುಗಳು ನಮ್ಮನ್ನೆಲ್ಲ ಅವುಗಳ ಅಂತರಾಳದಲ್ಲಿ ಮುಳುಗಿಸಿಕೊಂಡು ಬಿಡುತ್ತವೆ. ಈ ನಿಟ್ಟಿನಲ್ಲಿ ಒಂದು ಈ "ಕೆಂಪಾದವೋ..." ಹಾಡು ಕೂಡ ಒಂದು.
ಹಾಡಿನ ಚಿತ್ರಣ ಹಳ್ಳಿಯ ಚಿತ್ರಣ. ೮೦ರ ದಶದದಲ್ಲಿ ಹೊರಬಂದ ಈ ಚಿತ್ರ ಕಪ್ಪು-ಬೆಳಕಿನಲ್ಲಿ ಒಂದು ಪತ್ತೇದಾರಿಯ ಕಥೆಯನ್ನು ಹೊರಹಾಕಲು ಹವಣಿಸುತ್ತದೆ. ಊರಿನಲ್ಲಿ ಹತ್ತು ಎಕರೆ ಜಮೀನಿನಲ್ಲಿ ಕಷ್ಟಗಳ ಕೋಟಲೆಗಳಲ್ಲಿ ಮುಳುಗಿಹೋಗಿರೋ ದಂಪತಿಗಳಿಗೆ ಆಕಸ್ಮಿಕವಾಗಿ ಕೆಲಸಗಾರನಾಗಿ ಸಿಕ್ಕ ಅತಿ ಕಡಿಮೆ ಮಾತಿನ ಬ್ಯಾಲನ ಹಿನ್ನೆಲೆಯನ್ನು ರಾತ್ರಿ ಚರ್ಚಿಸುತ್ತ ಇನ್ನೇನು ನಿದ್ದೆಗೆ ಹೋಗಬೇಕು ಎನ್ನುವ ಸಮಯದಲ್ಲಿ ಬ್ಯಾಲನ ಆಂತರಾಳದಿಂದ ಈ ಹಾಡು ಹುಟ್ಟುತ್ತದೆ. ಜಗಲಿಯ ಕಂಬಕ್ಕೆ ಒರಗಿಕೊಂಡು ಅದೆತ್ತಲೋ ನಿರ್ವಿಣ್ಣನಾಗಿ ನೋಡುವ ಬ್ಯಾಲ "ಕೆಂಪಾದವೋ" ಎನ್ನುವುದನ್ನು ಆಗಷ್ಟೇ ಮುಗಿದ ಸೂರ್ಯಾಸ್ತವನ್ನು ಕುರಿತು ಹೇಳುತ್ತಾನೋ ಅಥವಾ ಮುಂಬರುವ ಸೂರ್ಯೋದಯವನ್ನು ಕುರಿತು ಹೇಳುತ್ತಾನೋ ಎಂಬ ಕುತೂಹಲ ನೋಡುಗರಲ್ಲಿ ಮೂಡುತ್ತದೆ. ಅಥವಾ ಬ್ಯಾಲನ ಮನದಲ್ಲಿ ದೊಡ್ಡದೊಂದು ಕ್ರಾಂತಿಯ ಸಂಘರ್ಷವೇ ನಡೆಯುತ್ತಿರಬಹುದು.
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿಧ್ಹಾಂಗೆ ಕೆಂಪಾದವು.
ಈ ಎರಡು ಸಾಲುಗಳಲ್ಲಿ ಒಂದು ವಿಜೃಂಬಣೆಯ ಧೋರಣೆ ಇದೆ, ಸೂರ್ಯನಂತೆ ಅವನ ಕಾರ್ಯತಂತ್ರದಿಂದ ದಿನಕ್ಕೆರಡು ಬಾರಿ ಭೂಮಂಡಲವನ್ನೆಲ್ಲ ಕೆಂಪಿನಿಂದ ಆವರಿಸುವ ಶಕ್ತಿ ಇನ್ಯಾರಿಗಿದೆ? ಆತನ ಈ ಶಕ್ತಿಯ ವಿಶೇಷತೆಯನ್ನು ಎಲ್ಲ ದೇಶಗಳಲ್ಲೂ ಕವಿಗಳು ಹಾಡಿ ಹೊಗಳಿದ್ದಾರೆ, ಹಾಗೂ ಇಲ್ಲೂ ಕೂಡ. ಕೆಂಪು ಬಣ್ಣ ಯಾವುದರ ದ್ಯೋತಕ, ಇದು ಕ್ರಾಂತಿಕಾರಕವೋ ಅಲ್ಲವೋ ಎಂಬುದನ್ನು ಕೂಡ ಇಲ್ಲಿ ಚರ್ಚಿಸಬಹುದು. ಹಾಗೇ ಕೇವಲ ಕೆಲವೇ ಕೆಲವು ವಸ್ತುಗಳನ್ನು ಹೆಸರಿಸಿ - ಹಸುರಾಗಿದ್ದ ಗಿಡಮರ, ಬೆಳ್ಳಗಿದ್ದ ಹೂವು - ಇವೆಲ್ಲವೂ ರಕ್ತವನ್ನು ಕುಡಿದ ಹಾಗೆ ಕೆಂಪಾದವು! ನಾವು ನೆತ್ತರ ಎಂದು ಕನ್ನಡದಲ್ಲಿ ಬಳಸಿದಾಗ ಆ ಪದಕ್ಕೆ ಅಷ್ಟು ಕಟುವಾದ ಶಕ್ತಿ ಬರುವುದಿಲ್ಲ, ಅದು ಕ್ರಾಂತಿ ಎನ್ನಿಸುವುದಿಲ್ಲ, ಅದೇ ರಕ್ತ ಎಂದು ಬಳಸಿದಾಗ ಅದನ್ನು ಹಲವಾರು ಕ್ರಾಂತಿಕಾರಕ ವಿಚಾರಗಳಿಗೆ ಹೋಲಿಸಬಹುದು. ಅದೇ ಇಲ್ಲಿ ಕವಿಯ ಹೆಗ್ಗಳಿಕೆ - ಹಗುರವಾದ ಪದಗಳನ್ನು ಬಳಸಿ ಸೂಕ್ತವಾದ ಅರ್ಥವನ್ನು ಕಟ್ಟುವುದು.
ಹುಲ್ಲೂ ಬಳ್ಳಿಗಳೆಲ್ಲ ಕೆಂಪಾದವೂ
ಊರು ಕಂದಮ್ಮಗಳು ಕೆಂಪಾದವೂ
ಹಸುರಿದ್ದ ಗಿಡಮರ ಬೆಳಗಿದ್ದ ಹೂವುಗಳು, ಅವುಗಳ ಜೊತೆಗೆ ಹುಲ್ಲೂಬಳ್ಳಿಗಳೆಲ್ಲ ಕೆಂಪಾಗೋದು ಸಹಜ. ಅವುಗಳ ಜೊತೆಗೆ ಊರು ಕಂದಮ್ಮಗಳು ಕೆಂಪಾಗೋದು ಏಕೆ ಮತ್ತು ಹೇಗೆ ಅನ್ನಿಸೋಲ್ಲ? ಇಲ್ಲಿ ಕವಿ ಊರಿನ ಜನಗಳಿಗೆಲ್ಲ ಒಟ್ಟಿನಲ್ಲಿ "ಕಂದಮ್ಮಗಳು" ಎಂದು ಸೂಚ್ಯವಾಗಿ ಹೇಳಿದ್ದಾರೆ. ಊರಿನ ಕಂದಮ್ಮಗಳು ಎಂದರೆ ಬರೀ ಮನುಷ್ಯರಿಗೆ ಮೀಸಲಾಗಬೇಕು ಎಂದೇನು ಇಲ್ಲ, ಊರಿನಲ್ಲಿ ಉಸಿರಾಡುವ ಎಲ್ಲವೂ ಊರಿನ ಕಂದಮ್ಮಗಳೇ!
ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿದೂ ಹೋದಾಗ ಪಚ್ಯಾಯ ತೆನೆಯಂತ
ಭೂಮಿಯೂ ಎಲ್ಲಾನೂ ಕೆಂಪಾದವೋ
ಈ ಮೇಲಿನ ಸಾಲುಗಳಲ್ಲಿ ಸೂರ್ಯ-ಭೂಮಿಯ ಸಾಂಗತ್ಯವನ್ನು ಕವಿ ವರ್ಣಿಸುತ್ತಿದ್ದಾರೆಯೇ? ಅಪಾರವಾದ ಮುಗಿಲಿನ ನೀಲಿಯಲ್ಲಿ ನಲಿಯುವ, ಸಂಜೆಯಾದ ನಂತರ ರಾತ್ರಿಯಲ್ಲಿ ಕಪ್ಪಾಗುವ, ಸೂರ್ಯನ ಮಾಂತ್ರಿಕ ಶಕ್ತಿಯಿಂದ ಹಸಿರು ತೆನೆಯಂತೆ ಕಂಗೊಳಿಸುವ ಭೂಮಿಯೇ ಕೆಂಪಾದಂತೆ. ಅಥವಾ...ಬ್ಯಾಲನ ಪಾತ್ರದ ಮನದಲ್ಲಿ ತನ್ನ ಪ್ರೇಯಸಿಯೊಡನೆ ಕಳೆದ ಒಡನಾಟದ ನೆನಪಿನ ಜೊತೆಜೊತೆಯ ನಡುಗೆಯೇ? ಕಾಯುತ್ತ ಕುಳಿತಾಗ ಮೂಡುವ ಬೇಸರ ಅಥವಾ ವಿರಹವೇ ಅಥವಾ ಮತ್ತಿನ್ಯಾವ ಸೂಚ್ಯವಿರಬಹುದು? ಈ ಮೇಲಿನ ಸಾಲುಗಳನ್ನು ಹಲವಾರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು, ಪಚ್ಚೆಯ ತೆನೆ ಎಂದರೆ ಹಸಿರು ತೆನೆ ಎಂದೋ ಅಥವಾ ಪಚ್ಯಾಯ ತೆನೆ ಎಂದರೆ ಏನಿರಬಹುದು ಎಂಬುದನ್ನು ಊಹಿಸಿಕೊಂಡಷ್ಟೂ ಗಹನವಾಗುತ್ತದೆ.
ನನಗಾಗ ಕೆಂಪಾದವೋ.
ಈ ಮೇಲಿನ ಉಪಮೆಗಳ ಪೂರಕಗಳ ಜೊತೆಗೆ ಕೊನೆಯ ಈ ಸಾಲು ಬಹಳ ಮುಖ್ಯವಾದುದು. ದಿಢೀರನೆ ನೆನಪಿನಂಗಳದಿಂದ ಹೊರಬಂದ ಮನಸ್ಸು ’ನನಗಾಗ ಕೆಂಪಾದವೋ’ ಎಂದು, ನನಗೆ ಹಾಗನ್ನಿಸಿತು ಎಂದು ಹಂಚಿಕೊಂಡ ಹಾಗಿದೆ. ಹೇಳುವುದನಲ್ಲೆವ ಹೇಳಿ ಅದು ನನ್ನ ಅಭಿಪ್ರಾಯ ಮಾತ್ರ ಎಂದೋ ಇಲ್ಲಾ ನನಗೆ ಆಗ ಕೆಂಪಾದವೋ ಎಂದು ಊಹಿಸಿಕೊಂಡಿರಲಿಕ್ಕೂ ಸಾಧ್ಯ.
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಈ ಹಾಡಿನ ಬಗ್ಗೆ ಯೋಚಿಸುತ್ತಿರುವಾಗ ಗೀತೆ ಎಲ್ಲೋ ಅಪೂರ್ಣವಾಯಿತೇನೋ ಎಂದು ಒಮ್ಮೆ ಅನ್ನಿಸಿತು. ಈ ಪದ್ಯಕ್ಕೆ ಇನ್ನೊಂದು ಪ್ಯಾರಾವೂ ಇರಬಹುದು. ಆದರೆ, ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚಿತ್ರದಲ್ಲಿ ಮುಂಬರುವ ನಿಗೂಢ ಕಥೆಯ ಸುಳಿವನ್ನು ನೀಡುವಂತೆ ಅರ್ಧದಲ್ಲೇ ಈ ಹಾಡನ್ನು ಉದ್ದೇಶ ಪೂರಕವಾಗಿ ಮೊಟಕುಗೊಳಿಸಿದ್ದಾರೆ ಅನ್ನಿಸುತ್ತದೆ. ಹಾಡಿನುದ್ದಕ್ಕೂ ಅಪರೂಪಕೊಮ್ಮೆ ಸಂಸ್ಕೃತ ಪದಗಳನ್ನು ಬಳಸಿರುವುದನ್ನು ಬಿಟ್ಟರೆ ಮತ್ತೆಲ್ಲ ಗ್ರಾಮೀಣ ಅಚ್ಚ ಕನ್ನಡದ ಭಾಷೆಯಲ್ಲಿ ಮೂಡಿಬರುತ್ತದೆ. ಚಿಕ್ಕ ಹಾಗೂ ಚೊಕ್ಕವಾದ ಸಾಹಿತ್ಯ ಅನೇಕ ನೆನಪಿನ ತರಂಗಗಳನ್ನು ನಿಮ್ಮ ಮನದಲ್ಲಿ ಮೂಡಿಸಬಹುದು. ಪಾತ್ರಧಾರಿ ಬ್ಯಾಲಾ ’ಹ್ಮೂ’ ಗುಟ್ಟುತ್ತಲೇ ಮಂಡಿಯನ್ನು ಮಡಿಚಿದ ಕಾಲಿನಲ್ಲಿ ಸಣ್ಣಗೆ ತಾಳ ಹಾಕುತ್ತಾ ಹಾಡನ್ನು ಮುಗಿಸಿ ನಿಸ್ತೇಜನಾಗಿ ಬಿಟ್ಟಕಣ್ಣು ಬಿಡುತ್ತಲೇ ಕುಳಿತಿರುವುದರ ಮೂಲಕ ಹಾಡನ್ನು ಕೊನೆಯಾಗಿಸಿ ಬಹಳ ವಿಶೇಷವಾಗಿ ಸೆರೆಹಿಡಿಯಲಾಗಿದೆ. ಈ ಹಾಡಿನ ಗುಂಗಲ್ಲೇ ನೀವು ಮುಂದುವರೆದು ’ಎಲ್ಲಿದ್ದೇ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವಾ..." ಹಾಡನ್ನು ನೋಡಿ, ಪೂರ್ತಿ ಸಿನಿಮಾವನ್ನೂ ನೋಡಿದಿರೆಂದರೆ ಒಮ್ಮೆ ೮೦ರ ದಶಕದ ಕರ್ನಾಟಕಕ್ಕೆ ಹೋಗಿಬಂದಾಗುವುದಂತೂ ಖಂಡಿತ!
ಈ ಹಾಡನ್ನು ನೀವು ಇಲ್ಲಿ ಕೇಳಬಹುದು ಹಾಗೂ ನೋಡಬಹುದು.