ನವೆಂಬರ್ ನೆನಪುಗಳು
ಇನ್ನೇನು ರಾಜ್ಯೋತ್ಸವ ಮಾಸ ಕಳೀತಾ ಬಂತು, ಆದರೆ ಕನ್ನಡಿಗರ ರಾಜಕೀಯ ಆಶೋತ್ತರಗಳು ಚಿಗುರೊಡೆಯುವುದೇನಿದ್ದರೂ ಮುಂದಿನ ವರ್ಷವೇ ಗತಿ ಎನ್ನುವ ಹಾಗೆ ದುತ್ತನೇ ಆವರಿಸಿದ ರಾಜಕಾರಣಿಗಳ ಅಜ್ಞಾತವಾಸ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಎಂದೂ ನೋಡದಿದ್ದ ಉದಯ ಟಿವಿ ನ್ಯೂಸ್ ಅನ್ನೂ ಸೋಫಾದ ತುದಿಯಲ್ಲಿ ಕುಳಿತು ನೋಡುವಂತೆ ಮಾಡಿದ್ದು ಈ ವರ್ಷದ ಸೋಜಿಗಗಳಲ್ಲಿ ಒಂದು! ಅವರು ಬಿಟ್ಟು ಇವರು ಬಿಟ್ಟು ಇವರ್ಯಾರು ಎಂದು ಕೇಳಿದ ರಾಜಕೀಯ ಧುರೀಣರು ಕೊನೆಗೆ ಅಧಿಕಾರವನ್ನು ವಹಿಸಿಕೊಟ್ಟಿದ್ದು ಮತ್ತೆ ರಾಜ್ಯಪಾಲರಿಗೇ. ಅದೆಷ್ಟು ಪಕ್ಷಗಳು, ಅದೆಷ್ಟೇ ಪಕ್ವವಾದ ತಲೆಗಳು, ಸಿದ್ಧಾಂತಗಳಿದ್ದರೂ ನಮ್ಮ ರಾಜಕೀಯ ಅಧೋಗತಿ ಎಲ್ಲರ ಮುಂದೆ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿತ್ತು ಎನ್ನುವುದು ನಿಜ, ಇಲ್ಲವೆಂದಾದರೆ ಆಫೀಸಿನಲ್ಲಿ ಎಂದೂ ನನ್ನೊಡನೆ ರಾಜಕೀಯದ ಬಗ್ಗೆ ಚಕಾರವೆತ್ತದ ತೆಲುಗು ಸ್ನೇಹಿತರು, ’ಏನಯ್ಯಾ, ನಿಮ್ಮ ಮುಖ್ಯಮಂತ್ರಿಗಳಿಗೆ ಬೇಧಿ ಹಿಡಿದ ಹಾಗಿದೇ!’ ಎಂದು ಕುಚೋದ್ಯವನ್ನು ಮಾಡುತ್ತಿದ್ದರೇಕೆ?
***
ಮೊದಲೆಲ್ಲಾ ಹಿತ್ತಲಿನಲ್ಲಿ ಬಿದ್ದ ದರಲೆಗಳನ್ನು ಒಟ್ಟು ಮಾಡಿ ಬಚ್ಚಲು ಒಲೆ ತುಂಬಿಸಿ ಮೈ ಹಾಗೂ ನೀರು ಕಾಯಿಸಿಕೊಳ್ಳುತ್ತಿದ್ದ ನನಗೆ ಈಗ ದರಲೆಗಳನ್ನು ಟ್ರ್ಯಾಷ್ ರೂಪದಲ್ಲಿ ತುಂಬಿ ಚೀಲ ಕಟ್ಟಿಡುವುದೋ ಅಥವಾ ಮರಗಳ ಬುಡಕ್ಕೆ ತಳ್ಳುವುದೋ ಒಂದು ಹೊಸ ಅಭ್ಯಾಸ. ಹಗಲಿರದ ಛಳಿ ಸಂಜೆ ಅದೆಲ್ಲಿಂದಲೋ ದೂರದಿಂದ ಬಂದ ನೆಂಟನ ಹಾಗೆ ಮನೆ ತುಂಬಿಕೊಂಡಿದ್ದನ್ನು ನೋಡಿ, ತಕ್ಷಣ ಫೈರ್ ಪ್ಲೇಸ್‌ಗೆ ಕಟ್ಟಿಗೆಯನ್ನು ತುಂಬಿಸಿ ಬೆಂಕಿ ಹೊತ್ತಿಸಲು ಕಾತರನಾದೆ. ಒಂದೊಂದು ಕಟ್ಟಿಗೆಗೆ ಮತ್ತೊಂದು ಕಟ್ಟಿಗೆಯನ್ನು ಕ್ರಾಸ್ ಆಗಿ ಇಟ್ಟು ಬೆಂಕಿ ಹೊತ್ತಿಸಿದ ಹುಮ್ಮಸ್ಸಿನಲ್ಲಿ ಅದರ ಕಿಡಿ ಕಾವಿಗೆ ಇದು, ಇದರ ಕಿಡಿ ಕಾವಿಗೆ ಅದು ಎನ್ನುವ ಪೈಪೋಟಿಯಲ್ಲಿ ಒಂದರ ಬೆಂಕಿಗೆ ಮತ್ತೊಂದು ಸಿಕ್ಕು ಹೊತ್ತಿಕೊಂಡು ಉರಿಯುವುದನ್ನು ನೋಡುವುದು ರೋಚಕವಾಗಿತ್ತು. ’ಕೆಟ್ಟ ಗುಣ ಅನ್ನೋದು ಬೆಂಕಿ ಇದ್ದ ಹಾಗೆ ಕಣೋ, ಅದು ತಾನಿದ್ದ ಜಾಗವನ್ನು ಮೊದಲು ಸುಡುತ್ತದೆಯಂತೆ’ ಎಂಬ ನಮ್ಮಮ್ಮನ ಅಣಿಮುತ್ತುಗಳು ಬೇರೆ ಮನಃಪಟಲದಲ್ಲಿ ಹಾದುಹೋದವು. ಮೊದಮೊದಲು ನೋಡಲು ಗಟ್ಟಿಮುಟ್ಟಾಗಿದ್ದ ಬೊಡ್ಡೆಗಳು ಬೆಂಕಿಯ ಉರಿಗೆ ಸಿಕ್ಕು ಮೆದಗರಾದಂತಾಗಿ ಕಂಡು, ಉರಿಯುತ್ತಲೇ ನಿಗಿನಿಗಿ ಕೆಂಡಗಳನ್ನು ಪ್ರದರ್ಶಿಸಿ ತನ್ನ ವಿರೋಧಿ ಕಟ್ಟಿಗೆಗಳನ್ನಿರಲಿ ಬೆಂಕಿಯ ಜ್ವಾಲೆಯನ್ನೇ ಕೆಂಗಣ್ಣಿನಿಂದ ನೋಡಿ ಹೆದರಿಸುವಂತೆ ಕಂಡುಬಂದರೂ, ಕೊನೆಗೆ ಕೆಂಪನೆ ಕೆಂಡ ಉಳಿಸಿದ್ದು ಕಪ್ಪು ಇದ್ದಿಲು ಹಾಗೂ ಬಿಳಿ ಬೂದಿಯನ್ನೇ ಹೊರತು ಮತ್ತೀನೇನಲ್ಲ. ಇಷ್ಟು ಹೊತ್ತು ಶಕ್ತಿ ಪ್ರದರ್ಶನ ಮಾಡಿದ ಕಟ್ಟಿಗೆ ಬೊಡ್ಡೆಗಳು ಬೆಂಕಿಯ ಕಾವಿಗೆ ಕಾದು ಒಂದು ಘಂಟೆಯ ಆಸುಪಾಸಿನಲ್ಲಿ ಪೈರ್‌ಪ್ಲೇಸ್ ಖಾಲಿಯಾಗುವಂತೆ ಉರಿದು ಬೂದಿಯಾಗಿ ಹೋದವು. ಹಾಗೆ ಉರಿದ ಅದೆಷ್ಟೋ ಬೊಡ್ಡೆಗಳನ್ನು ನೋಡಿ ತನ್ನಷ್ಟಕ್ಕೆ ತಾನೇ ಋಷಿಗಳ ಮೌನವನ್ನು ತಾಳಿಕೊಂಡು ಬಿಸಿಯಿಂದ ತಣ್ಣಗಿನ ವಾತಾವರಣಕ್ಕೆ ಸಂಕ್ರಮಣಗೊಳ್ಳುತ್ತಿದ್ದ ಫೈರ್‌ಪ್ಲೇಸಿನ ಗೋಡೆಗಳಲ್ಲಿ ಭದ್ರವಾಗಿ ಕುಳಿತ ಟೈಲ್‌ಗಳು ಯಾವುದೇ ಮನೋಭಾವವನ್ನು ಹೊರಕ್ಕೆ ಪ್ರಸ್ತುತಪಡಿಸುತ್ತಿರಲಿಲ್ಲ ಎನ್ನುವುದು ನನ್ನ ಗಮನಕ್ಕೂ ಬಂತು. ಉರಿದು ಹೋದ ಬೊಡ್ಡೆಗಳು ಈಗ ಇತಿಹಾಸ, ನಾಳಿನ ದಿನಕ್ಕೆ ಒಡ್ಡಲು ಇನ್ನಷ್ಟು ಕಟ್ಟಿಗೆಗಳನ್ನು ಈಗಾಗಲೇ ಕೂಡಿಸಿಟ್ಟಿದ್ದೇನೆ ಎನ್ನುವ ನೆನಪು ಬಂದಿದ್ದೇ ತಡ, ನನ್ನ ಮನಸ್ಸಿನಲ್ಲಿ ಹುಮ್ಮಸ್ಸು ಇಮ್ಮಡಿಯಾಯಿತು.
***
ನೀವು ಈವರೆಗೆ ನೋಡಿರದಿದ್ದರೆ maps.live.com ನೋಡಿ, ಉತ್ತರ ಅಮೇರಿಕದ ಜನಪ್ರಿಯ ಸ್ಥಾನಗಳನ್ನು ಅದರಲ್ಲಿ ಒಮ್ಮೆ ವೀಕ್ಷಿಸಿ ಆಗ ಗೊತ್ತಾಗುತ್ತದೆ ತಂತ್ರಜ್ಞಾನ ಎಷ್ಟೊಂದು ಬೆಳೆದಿದೆಯೆಂದು. ನನ್ನ ಸ್ನೇಹಿತನೊಬ್ಬ ಹೇಳಿದನೆಂದು ನಾನು ನ್ಯೂ ಯಾರ್ಕ್ ನಗರದ ಹತ್ತಿರದ ಕೆಲವೊಂದು ಸ್ಥಳಗಳನ್ನು ಖುದ್ದಾಗಿ ನೋಡಿ ದಂಗುಬಡಿದಂತಾದೆ, ಅದರಲ್ಲಿನ Bird's eye ವ್ಯೂವ್ ನಲ್ಲಿ ಎಷ್ಟೊಂದು ಸುಂದರ ಹಾಗೂ ಸ್ಪಷ್ಟವಾಗಿ ಈ ಸ್ಥಳಗಳು ಕಾಣುತ್ತಿದ್ದವೆಂದರೆ ನನ್ನ ಕಣ್ಣುಗಳನ್ನು ನಾನೇ ನಂಬದವನಾದೆ. ಗೂಗಲ್ ಅರ್ಥ್ ಇದರ ಮುಂದೆ ಏನೇನೂ ಅಲ್ಲ ಎನ್ನುವಂತಿತ್ತು, ಜೊತೆಗೆ ಬೇಕಾದ ಪಾಪ್ಯುಲರ್ ಡೆಸ್ಟಿನೇಷನ್ನುಗಳನ್ನು ನಾನು ಯಾವ ದಿಕ್ಕು/ಕೋನದಲ್ಲಿ ತಿರುಗಿಸಿ ಬೇಕಾದರೂ ನೋಡಬಹುದು. ನನ್ನ ಸ್ನೇಹಿತನೊಬ್ಬನ ಮನೆಯ ಮುಂದಿನ ನಿಂತ ಕಾರಿನ ಮೇಕ್ ಮಾಡೆಲ್ ಗೊತ್ತಾಗುವಷ್ಟರ ಮಟ್ಟಿಗೆ ಚಿತ್ರ ಸ್ಪಷ್ಟವಾಗಿತ್ತು ಎನ್ನುವುದು ಅತಿಶಯೋಕ್ತಿಯೇನಲ್ಲ.
***
ರಜೆಯ ಗುಂಗು ಈಗಾಗಲೇ ಬಂದಂತಾಗಿದೆ, ಆಫೀಸಿನಲ್ಲಿ ಜನ ಸಂದಣಿ ಕಡಿಮೆ ಆಗುತ್ತಿರುವಂತೆ ತೋರುತ್ತಿದೆ, ನನಗೂ ಬೇಕಾದಷ್ಟು ರಜೆಗಳು ಹಾಕದೇ ಬಿದ್ದಿರೋದರಿಂದ ಒಂದಿಷ್ಟು ರಜೆ ತೆಗೆದುಕೊಳ್ಳೋಣವೆಂದರೆ ಯಾರಿಗೂ ಬೇಡವಾದ ಕೆಲಸ ಹಾಗೂ ಜವಾಬ್ದಾರಿಗಳು ನನಗೇ ಬಂದು ತಗುಲಿಕೊಳ್ಳಬೇಕೆ? ಕೆಲಸ ಮಾಡುತ್ತಿದ್ದರೆ ರಜೆಗಳು ಬೇಕಾಗುತ್ತವೆ, ಕೆಲಸವೇ ಇಲ್ಲದಿದ್ದರೆ ರಜೆಗಳು ಇದ್ದರೆಷ್ಟು ಬಿಟ್ಟರೆಷ್ಟು ಎನ್ನುವುದು ಹಿಂದಿನ ತರ್ಕವಾಗಿತ್ತು. ಇತ್ತೀಚೆಗೆ ರಜೆಗಳು ಇದ್ದರೂ ತೆಗೆದುಕೊಳ್ಳದೇ ಕೆಲಸವನ್ನು ಮಾಡಿಕೊಂಡೇ ಇರಬೇಕಾದ್ದು ಇರೋ ಅನಿವಾರ್ಯಗಳಲ್ಲಿ ಒಂದು.