Monday, April 15, 2024

ಒಂದು ಬಿಂದು

ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು.  ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು!

ಈ ಅರಿವು ಮೂಡಿದ್ದು ಇತ್ತೀಚೆಗೆ, ನಾನು ಸಮುದ್ರದ ತಟದಲ್ಲಿ ನಿರಂತರವಾಗಿ ಕಾಲಿಗೆ ಬಂದು ರಾಚುತ್ತಿದ್ದ ಅಲೆಗಳ ಮಡಿಲಿನಿಂದ, ಬೊಗಸೆಯಲ್ಲಿ ನೀರನ್ನು ಮೊಗೆದು, ಸೂರ್ಯನಿಗಭಿಮುಖವಾಗಿ ವಿಸರ್ಜಿಸುತ್ತಿರುವಾಗ, ಕೊನೆಯಲ್ಲಿ ಉಳಿದ ಹನಿಗಳು ತಮ್ಮೊಳಗಿನ ಹೊಸದೊಂದು ಪ್ರಪಂಚವನ್ನೇ ತೋಡಿಕೊಂಡವು.

ಅಬ್ಬಾ! ಈ ಒಂದೊಂದು ಹನಿಯೂ ತನ್ನೊಳಗೆ ಅಪಾರವಾದ ಸಾಗರವನ್ನೇ ಹೊತ್ತಿಕೊಂಡಿದೆಯಲ್ಲಾ! ಸಣ್ಣ ಗಾಳಿಗೆ ಅದುರಿ ಹೋಗುವಂತೆ ಇರುವ ಹನಿಯ ಅಂತರಾಳದಲ್ಲಿ ಯಾವ ದರ್ಪವೂ ಕಾಣಲಿಲ್ಲ. ಆದರೆ, ಹತ್ತಿರದಲ್ಲೇ ಮೊರೆಯುತ್ತಿದ್ದ ಮಾತೃ ಹೃದಯದಿಂದ ದೂರವಾಗಿದ್ದಕ್ಕೆ ಅದರಲ್ಲಿ ಅಳುಕು ಮೂಡಿದಂತೆ ಕಾಣಿಸಿತು. ತನ್ನ ಮೇಲೆ ಬಿದ್ದ ಸೂರ್ಯನ ಕಿರಣಗಳ ದೆಸೆಯಿಂದ ಈ ಹನಿಗಳಿಗೂ ಕಣ್ಣಿರುವಂತೆ ಗೋಚರಿಸಿತು.

ಹೀಗೆ, ಮಹಾ ನೀರಿನಿಂದ ಬೇರೆಯಾಗಿ ಮರಳನ್ನು ಸೇರಿಯೋ, ಅಥವಾ ಹವೆಯಲ್ಲಿಯೇ ಲೀನವಾಗಿ ಮತ್ತೊಮ್ಮೆ ಮೋಡವಾಗಿ-ಮಳೆಯಾಗಿ ಇಳೆಯನ್ನು ಸೇರುವ ತವಕ ನೀರಿನ ಪ್ರತಿ ಹನಿಹನಿಯಲ್ಲಿಯೂ ಇರುವುದು ಸಹಜವೇ ಹೌದು.  ಆದರೆ, ಈ ಮಹಾ ನೀರಿನಿಂದ ಪ್ರತ್ಯೇಕಗೊಂಡ, ಆ ಸಣ್ಣ ಹನಿ, ಕೊಂಚ ಮಟ್ಟಿಗೆ ಹೆದರಿಕೊಂಡಿದ್ದಾದರೂ ಏಕಿರಬಹುದು? ನೀರು ಎಂದರೆ ಒಂದು ರೀತಿಯ ಶಕ್ತಿ, ಈ ಅಗಾಧವಾದ ಶಕ್ತಿಯಿಂದ ಬೇರ್ಪಟ್ಟು, ಮತ್ತೆ ಅದನ್ನು ಸೇರುವ ಹೊತ್ತಿಗೆ ಅದೆಷ್ಟು ಜನ್ಮಗಳನ್ನು ತಳೆದು, ರೂಪಗಳಲ್ಲಿ ಲೀನವಾಗಿ, ಕಾಡು-ಮೇಡುಗಳನ್ನು ತಿರುಗಿ, ಅನುಭವಿಸಬಾರದ್ದೆನ್ನೆಲ್ಲ ಅನುಭವಿಸಿ ಮತ್ತೆ ಸಮುದ್ರವನ್ನು ಸೇರುವುದು ಎಂದೋ, ಏನೋ, ಹೇಗೆಯೋ... ಎಂಬ ಆತಂಕದಿಂದ ಇರಬಹುದೇ?

ಈ ಒಂದೊಂದು ನೀರಿನ ಬಿಂದುವೂ ಒಂದೊಂದು ಆತ್ಮದ ಹಾಗೆ. ಅದು ಪ್ರತಿ ಜನ್ಮಕ್ಕೊಮ್ಮೆ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗಿ, ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಸೇರಿಕೊಂಡು, ಎಲ್ಲಿಯೂ ಸಮಾಧಾನಿಯಾಗಿರದೇ, ಮತ್ತೆ ಅಗಾಧವಾದ ಕಡಲನ್ನು ಸೇರುವ ತವಕದಲ್ಲಿಯೇ ಬಿರುಗು ಕಣ್ಣನ್ನು ಬಿಟ್ಟಂತೆ ಇರುವ ಅತಂತ್ರ ಜೀವಿ! ಪ್ರತಿಯೊಂದು ಹನಿಯಲ್ಲಿಯೂ ಜೀವವಿದೆ, ಸಾಗರದ ಅಷ್ಟೂ ನೀರಿನ ಸತ್ವವನ್ನು ಒಂದೇ ಒಂದು ಬಿಂದುವಿನಲ್ಲಿ ಹಿಡಿದಿಟ್ಟುರುವ ಹಾಗೆ, ಇದರಲ್ಲಿ ಎಲ್ಲ ಗುಣಗಳೂ ಇವೆ.

ನೀರಿನಿಂದ ಬೇರ್ಪಟ್ಟ ಈ ಹನಿಗಳು, ತಮ್ಮ ಪಯಣದುದ್ದಕ್ಕೂ ಒಂದೇ ರೀತಿ ಇರುತ್ತವೆ ಎಂದೇನೂ ಹೇಳಲಾಗದು. ಕೆಲವು ಅಲ್ಲಿಯೇ ಬಿದ್ದು ಮತ್ತೆ ಸಾಗರವನ್ನು ಸೇರಿದರೆ, ಇನ್ನು ಕೆಲವು ಹಲವಾರು ಜನ್ಮಗಳನ್ನು ತಳೆದ ಮೇಲೂ, ಹಿಂತಿರುಗಲು ಒದ್ದಾಡುವ ಹಪಾಹಪಿಗಳಾಗೇ ಇನ್ನೂ ಕಂಡು ಬರುತ್ತವೆ.

***

ತಿಳಿಯಾದ ಕೊಳದಲ್ಲಿ ಕಲ್ಲೊಂದನ್ನು ಹಾಕಿದರೆ, ವೃತ್ತಾಕಾರಗಳಲ್ಲಿ ಸಣ್ಣ ಅಲೆಗಳು ಎದ್ದು, ಅದೆಷ್ಟು ಬೇಗ ದಡವನ್ನು ಸೇರಿಯೇವೋ ಎಂದು ದಾವಂತದಲ್ಲಿ ಹರಡುವುದನ್ನು ನೀವು ನೋಡಿರಬಹುದು. ಆದರೆ, ಸಮುದ್ರ, ಅಥವಾ ಮಹಾಸಾಗರದ ನೀರಿನಲ್ಲಿ ಕಲ್ಲೊಂದನ್ನು ಹಾಕಿ, ಅದು ಯಾವ ರೀತಿಯ ಕಂಪನ/ತಲ್ಲಣಗಳನ್ನು ಅಲೆಯಾಕಾರದಲ್ಲಿ ಮೂಡಿಸುತ್ತದೆ ಎಂದು ಯೋಚನೆ ಮಾಡಬೇಕಾಗುತ್ತದೆ. ಸಮುದ್ರದಲ್ಲಿ ಹಾಕಿದ ಕಲ್ಲು, ಅಗಾಧವಾದ ಸಾಗರದ ಆಂತರ್ಯದಲ್ಲಿ ಅಲ್ಲೋಲ ಕಲ್ಲೋಲಗಳನ್ನು ಉಂಟು ಮಾಡುವುದರಲ್ಲಿ ಸೋತು ಹೋಗುತ್ತದೆ.

Image Source: https://www.usgs.gov/media/images/all-earths-water-a-single-sphere

ಈ ಪೃಥ್ವಿಯ ಬಹುಭಾಗ (71%) ನೀರಿನಿಂದಲೇ ಮುಚ್ಚಿಕೊಂಡಿದೆಯಂತೆ. ಉಳಿದ ಗ್ರಹಗಳಿಗೆ ಹೋಲಿಸಿದಾಗ ಭೂಮಿಯ ಮೇಲಿನ ನೀರಿನಿಂದಲೇ ಅದಕ್ಕೊಂದು ಶಕ್ತಿ ಮತ್ತು ಚೈತನ್ಯ ಬಂದದ್ದಲ್ಲವೇ?

ನನ್ನ ಪ್ರಕಾರ, ಪಂಚಭೂತಗಳಲ್ಲಿ ನೀರಿಗೆ ಹೆಚ್ಚಿನ ಮಹತ್ವ ಇರಬೇಕು. ಇನ್ನುಳಿದ ಗಾಳಿ, ಅಗ್ನಿ, ಆಕಾಶ, ಮತ್ತು ಭೂಮಿಯ ಸಣ್ಣ ಸಣ್ಣ ತುಂಡುಗಳಲ್ಲಿನ ಮಹತ್ವ ಈ ಒಂದು ನೀರಿನಷ್ಟು ಇರಲಾರದು. ಗಾಳಿ ಎಲ್ಲ ಕಡೆಗೂ ಒಂದೇ ರೀತಿ ಇರಬೇಕೆಂದೇನೂ ಇಲ್ಲ. ಬೆಂಕಿ ಎಲ್ಲ ಕಡೆಗೂ ಒಂದೇ ರೀತಿ ಕಂಡರೂ, ಅದು ನೀರಿನ ಹನಿಯಂತೆ ಪಯಣಿಸಲಾರದು. ಇನ್ನು ಆಕಾಶ ಅನಂತವೂ, ಅಪರಿಮಿತವೂ ಆಗಿರುವುದಾದರೂ, ಅದನ್ನು ಚಿಕ್ಕ ಹನಿಯ ಗಾತ್ರದಲ್ಲಿ ನಾವೆಂದೂ ಊಹಿಸಿಕೊಳ್ಳಲಾರೆವು. ನಿಜವಾಗಿಯೂ ನಿಮಗೆ ಸಮುದ್ರದ ಶಕ್ತಿ ಎಲ್ಲವೂ ಅಲ್ಲಿನ ಒಂದೊಂದು ಹನಿಯಲ್ಲಿಯೂ ಸಮನಾಗಿ ಹಂಚಿಕೊಂಡಿದೆ ಎಂದರೆ ನಂಬಲಿಕ್ಕೆ ಅಸಾಧ್ಯವಾದರೂ, ಅದು ನಿಜವೇ!

***

ಕೊಳದ ನೀರಿಗೂ, ಕೆರೆಯ ನೀರಿಗೂ, ಸರೋವರದ ನೀರಿಗೂ, ದೊಡ್ಡ ಜಲಾಶಯಗಳಲ್ಲಿ ಶೇಖರಣೆಗೊಂಡ ನೀರಿಗೂ, ಪುಷ್ಕರಣಿಯಲ್ಲಿ ಸಿಕ್ಕಿಕೊಂಡ ನೀರಿಗೂ, ತಮ್ಮ ತಮ್ಮದೇ ಆದ ಒಂದು ನಿಲುವು, ಅಥವಾ ಮನೋಭಾವ (attitude) ಇದೆ. ಹಾಗೆಯೇ, ಸಮುದ್ರ, ಸಾಗರ, ಮಹಾಸಾಗರದ ನೀರುಗಳಿಗೂ ಕೂಡ ತಕ್ಕನಾದ ಮನೋವೃತ್ತಿ ಇರಲೇ ಬೇಕು. ಈ ನೀರುಗಳ ಸಾರವೇ ಸಂಪೂರ್ಣವಾಗಿ ಒಂದು ನೀರಿನ ಬಿಂದುವಿಗೂ ಅಳವಡಿಸಲ್ಪಡುತ್ತದೆ. ಎಂತಲೇ, ಕೆರೆಯ ನೀರಿಗೂ, ಸಮುದ್ರದ ನೀರಿಗೂ ಅಜಗಜಾಂತರ ವ್ಯತ್ಯಾಸವಿರುವುದು. ಈ ಎಲ್ಲ ನೀರಿನ "ಹಳ್ಳ" (waterhole) ಗಳೂ ಒಂದೇ ಕಡೆ ಸಂಗ್ರಹಿತವಾಗಿದ್ದರೆ, ನದಿ-ಉಪನದಿಗಳೆಲ್ಲಾ ಸದಾ ಹರಿಯುವವೇ. ಈ ಎಲ್ಲದರ ಮೂಲ, ಮಳೆ... ಅಥವಾ ಆವಿ.  ನಿಮಗೆ ಎಲ್ಲೇ ಒಂದು ನೀರಿನ ಬಿಂದು ಕಂಡು ಬಂದರೆ, ಅದರ ಮೂಲಧರ್ಮ ಮಹಾಸಾಗರವನ್ನು ಸೇರುವುದು, ಅದನ್ನೆಂದೂ ಅದು ಮರೆಯುವುದಿಲ್ಲ, ತನ್ನತನವನ್ನು ಎಂದೂ ತೊರೆಯುವುದೂ ಇಲ್ಲ!

ಹೇಗೋ, ಒಂದು ಹನಿ ನೀರಿನಿಂದ, ಈ ಎಲ್ಲ ಆಲೋಚನೆಗಳೂ ಪುಂಖಾನುಪುಂಕವಾಗಿ ಹೊರಹೊಮ್ಮಿ ಬಂದವು. ಈ ಬಿಂದುವಿನ ಆತ್ಮಾವಲೋಕನದಿಂದ ನಮ್ಮ ಆತ್ಮಗಳ ಅವಲೋಕನವೂ ಆದಂತಾಯಿತು. ಅದಕ್ಕೆಂದೇ ಇರಬೇಕು, ಎಲ್ಲರಲ್ಲೂ ಸದಾ, ಸದಾ ಸಪ್ತ ಸಾಗರದಾಚೆಯ ಲೋಕದ ತುಡಿತ ಎಂದಿಗೂ ಜಾಗೃತವಾಗೇ ಇರುತ್ತದೆ!

Saturday, March 02, 2024

ಸರಿಯಾದ ದಾರಿ...

"ಬೆಳ್ಳಂಬೆಳಗ್ಗೆ ಇವ್ರು ಯಾರೋ ನಿಧಾನವಾಗಿ ಡ್ರೈವ್ ಮಾಡಿಕೊಂಡ್ ಹೋಗೋರು ಸಿಕ್ಕಿಕೊಂಡ್ರಲ್ಲ!" ಎಂದು ಪ್ರಲಾಪನೆಗೆ ಮೊರೆ ಹೋದವನಿಗೆ, "ಅಷ್ಟಕ್ಕೂ ಅವರು ಮಾಡುತ್ತಿರುವ ತಪ್ಪಾದರೂ ಏನು?" ಎನ್ನುವ ತಂತಾನೆ ಹುಟ್ಟಿದ ಉತ್ತರ, ಆಂತರಿಕ ತಲ್ಲಣಗಳಿಗೆ ಸೂಕ್ಷ್ಮವಾಗಿ ಪೂರ್ಣ ವಿರಾಮವನ್ನು ನೀಡುವ ಹಾಗೆ ಕಂಬದ ನೆರಳಿನಂತೆ ಎದ್ದು ನಿಂತಿತ್ತು.



ನಾನು ದಿನಾ ಡ್ರೈವ್ ಮಾಡಿಕೊಂಡು ಫ಼್ರೀವೇ ದಾಟಿ ಎಕ್ಸಿಟ್ ತೆಗೆದುಕೊಂಡ ಕೂಡಲೇ ದುತ್ತನೇ ಎದುರಾಗುವ ಸ್ಟಾಪ್ ಸೈನಿಗೆ ಮರ್ಯಾದೆ ತೋರಿಸಿದಂತೆ ಮಾಡಿ, ಏದುಸಿರು ಬಿಡುತ್ತಾ ಏರಿಯನ್ನು ಹತ್ತುವ ಓಟಗಾರನಂತೆ ಮುಂದೆ ಹೋಗುವ ಕಾರು. ಮುಂದಿನ ಅರ್ಧ-ಮುಕ್ಕಾಲು ಮೈಲು ಏನಿದ್ದರೂ ಬರೀ ಇಪ್ಪತ್ತೈದರ ಸ್ಪೀಡೇ ಎಂದು ಅದು ತನಗೆ ಎದುರಾಗುವ ಸ್ಪೀಡ್ ಸೈನುಗಳಿಗೆ ಮೂತಿ ತಿರುವಿ ಅಣಗಿಸಿಕೊಂಡು ಹೋಗೋ ರೀತಿ ಕಾಣುತ್ತದೆ. ಅಪರೂಪಕ್ಕೊಮ್ಮೆ ಕ್ರಾಸಿಂಗ್‌ನಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾ ನಿಧಾನವಾಗಿ ನಡೆದು ರಸ್ತೆ ದಾಟುವ ಪಾದಚಾರಿಗಳಿಗೆ ಒಮ್ಮೊಮ್ಮೆ ಹಿಡಿ ಶಾಪ ಹಾಕಿದ್ದೂ ಉಂಟು. ಆದರೆ, ಮರೆಯಲ್ಲಿ ನಿಂತು ಕಾಯುವ ಮಾಮಾಗಳನ್ನು ಯಾವತ್ತೂ ನಾವು ದೂರದೃಷ್ಟಿಯಿಂದ ನೋಡುತ್ತೇವೆಯೇ ಹೊರತು, ದುರುಳ ದೃಷ್ಟಿಯಿಂದಂತೂ ಅಲ್ಲ!

ಈ ಜಾಗದಲ್ಲಿ (ಮತ್ತು ಎಲ್ಲಕಡೆ), ಸ್ಪೀಡ್ ಲಿಮಿಟ್ ಇಪ್ಪತ್ತೈದು ಇದ್ದರೂ ಎಲ್ಲರೂ ಮೂವತ್ತರ ಮೇಲೇ ಹೋಗುವವರು. ಹಾಗಾಗಿ, ಎಲ್ಲರೂ ವೇಗವಾಗಿ ಹೋದಾಗ ಅದು ಸರಿಯಾಗಿ ತೋರುವುದರ ಜೊತೆಗೆ, ಅಪರೂಪಕ್ಕೊಮ್ಮೆ ಸರಿಯಾದ ವೇಗದಲ್ಲಿ ಹೋಗುವವರು ತಪ್ಪಾಗಿ ಕಂಡು ಬರುವುದು, ಒಂದು ರೀತಿಯಲ್ಲಿ ವಿಚಕ್ಷಣೆ ಇಲ್ಲದ ವ್ಯಾಖ್ಯಾನ ಎಂದರೆ ತಪ್ಪೇನೂ ಇಲ್ಲ!

ಆದರೆ, ಇಂದು ನನ್ನ ಮುಂದಿನ ಕಾರು ಅದೇನೇ ಆಗಲಿ, ಈ ದಾರಿಯಲ್ಲಿ ನಾನು ಇಪ್ಪತ್ತೈದರ ಲಿಮಿಟ್ ಅನ್ನು ದಾಟುವುದಿಲ್ಲ ಎಂದು ಯಾರಿಗೋ ಪ್ರತಿಜ್ಞೆ ಮಾಡಿ ಬಂದಂತಿದೆ. ಒಬ್ಬರು ಸರಿಯಾದ ದಾರಿಯಲ್ಲಿ, ಸರಿಯಾದ ವೇಗದಲ್ಲಿ ನಡೆದರೆ, ಅವರ ಹಿಂಬಾಲಕರಿಗೆ ಅವರನ್ನು ವ್ಯವಸ್ಥಿತವಾಗಿ ಹಿಂಬಾಲಿಸದೇ ಬೇರೆ ದಾರಿಯೇನಿದೆ ಎಂಬ ಯೋಚನೆ ಬಂತು. ಬೇರೆ ದಾರಿ ಎನ್ನುವುದು ಇಲ್ಲದಿದ್ದಾಗ ಇರುವುದು ಸರಿಯಾದ ದಾರಿ ಆಗುತ್ತದೆ ಎನ್ನುವ (corollary) ಉಪಸಿದ್ಧಾಂತ ಬೇರೆ ಹುಟ್ಟಿತು.

ಜನ ವೇಗವಾಗಿ ಏಕೆ ಡ್ರೈವ್ ಮಾಡುತ್ತಾರೆ? ಸ್ಪೀಡ್ ಲಿಮಿಟ್ ಇಷ್ಟೇ ಎಂದು ಸೈನ್‌ಗಳು ಸಾರಿ ಸಾರಿ ಹೇಳುತ್ತಲೇ ಇದ್ದರೂ ಜನರು ಅದಕ್ಕಿಂತ ಹೆಚ್ಚು ವೇಗವಾಗಿ ಏಕೆ ಚಲಾಯಿಸುತ್ತಾರೆ? ಹೀಗೆ ವೇಗವಾಗಿ ಹೋಗುವ ಗಾಡಿಗಳು ಮತ್ತುಅವುಗಳ ಸವಾರರು ಅದೇನನ್ನು ಕಟ್ಟಿ-ಕಡಿದು ಹಾಕುತ್ತಾರೆ? ಹಾಕಿರಬಹುದು? Conditions permitting... ಎಂದು ತಮ್ಮ ಆಂತರ್ಯದಲ್ಲಿ ಮೇಳೈಸಿದ ಸತ್ಯದ ಹಿನ್ನೆಲೆಯಲ್ಲಿ ಮಿತಿಯನ್ನು ತೋರಿ ಜನರ ಸುರಕ್ಷತೆಗೆ ಆದ್ಯತೆ ಕೊಡುವ ಈ ಮೂಕ ಜೀವಿಗಳನ್ನು ಜನರು ಅಷ್ಟೊಂದು ಅಗೌರವದಿಂದ ನೋಡುವುದಾದರೂ ಏಕೆ? ದಿನದ 24 ಗಂಟೆ ತಮ್ಮ ಕೆಲಸವನ್ನು ತಾವು ಮಾಡಿಕೊಂಡಿರುವ ಈ ರಕ್ಷಕರನ್ನು ಆರಕ್ಷಕರ ಸಹಾಯವಿಲ್ಲದೇ ಆದರಿಸುವವರು ಇಲ್ಲವೇ?... ಹೀಗೆ ಪ್ರಶ್ನೆಗಳೋಪಾದಿಯಲ್ಲಿ ಮತ್ತಿಷ್ಟು ಪ್ರಶ್ನೆಗಳು ಮೂಡಿದವು.

***

ಬೇರೆಯವರು ತಮ್ಮ ಕಾರನ್ನು ವೇಗವಾಗಿ ಚಲಾಯಿಸುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ, ನಾನು ಮತ್ತಿನ್ನೆಲ್ಲೋ ತಡವಾಗಿ ಹೋಗಬಾರದಲ್ಲ ಎಂಬ ಕಾರಣಕ್ಕೆ ವೇಗವಾಗಿ ಚಲಾಯಿಸುತ್ತೇನೆ. ಹಾಗಾದರೆ, ವೇಗದ ಮಿತಿಯಲ್ಲಿ ಚಲಾಯಿಸುವುದು ಎಂದಾದರೆ, ಮನೆಯನ್ನು ಐದು-ಹತ್ತು ನಿಮಿಷ ಮೊದಲೇ ಬಿಡಬಹುದಲ್ಲ? ಹಾಗೆ ಹೆಚ್ಚಿನ ಸಮಯ ಆಗೋದಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹೋಗುವವರು ಮತ್ತು ಸೂಚಿಸಿದ ಸಮಯಕ್ಕೆ ಮೊದಲೇ ಹೋಗಿ ತಲುಪುವವರು ವಿರಳ. ಅಂದ ಮೇಲೆ ಎಲ್ಲರೂ (ಮಿತಿಯನ್ನು ಮೀರಿ) ವೇಗವಾಗಿ ಚಲಾಯಿಸುತ್ತಾರೆ ಅಂತಲೇ ಆಯಿತು.

ಇನ್ನು ಸಮಯಕ್ಕೆ ಸರಿಯಾಗಿ ತಲುಪುವವರು, ಸಮಯ ಪಾಲನೆಯನ್ನು ಮಾಡುವವರು, ತಮ್ಮ ತಮ್ಮ ರಸ್ತೆಯಲ್ಲಿ ವೇಗದ ಮಿತಿಗೆ ಅನುಸಾರವಾಗಿ ಚಲಿಸಿದರೆ, ಅದರಿಂದ ಅವರಿಗೇನೂ ಹಾನಿ ಇಲ್ಲ - ಆದರೆ ಅವರ ಬೆನ್ನಿಗೆ ಬಿದ್ದ ವೇಗಿಗಳ ರಕ್ತದೊತ್ತಡ ಹೆಚ್ಚಾಗುವುದಂತೂ ನಿಜ.

ನನ್ನ ಇಪ್ಪತ್ತೈದು ವರ್ಷಗಳ ಡ್ರೈವಿಂಗ್ ಜೀವನದಲ್ಲಿ ಎಲ್ಲ ರೀತಿಯ ಡ್ರೈವರುಗಳನ್ನು ನೋಡಿದ್ದೇನೆ. ಮಿರಿ ಮಿರಿ ಮಿಂಚುವ ಸ್ಪೋರ್ಟ್ಸ್ ಕಾರುಗಳನ್ನು ಓಡಿಸುವ ಹದಿಹರೆಯದವರಿಂದ ಹಿಡಿದು, ತಮಗೆ ಬೇಕಾದಕ್ಕಿಂತಲೂ ದೊಡ್ಡ ಸೈಜಿನ ಹಳೆಯ ಕಾರುಗಳನ್ನು ಓಡಿಸುವ ಹಿರಿಯವರೆಗೆ. ಕಾರಿನಲ್ಲಿ ಹುಷಾರಿಲ್ಲದೆ ರಚ್ಚೆ ಹಿಡಿದು ಅಳುವ ಮಗುವನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ಪೋಷಕರಿಂದ ಹಿಡಿದು, ಹೆರಿಗೆ ನೋವು ಅನುಭವಿಸುತ್ತಿರುವ ಗರ್ಬಿಣಿ ಹೆಂಡತಿಯನ್ನು ತುರಂತಾಗಿ ಆಸ್ಪತ್ರೆ ಸೇರಿಸುವ ಗಂಡಂದಿರವರೆಗೆ. ಶವವನ್ನು ಸಾಗಿಸುತ್ತಿರುವ ಹರ್ಸ್ (hearse) ವಾಹನದ ಹಿಂದೆ ಮೌನವಾಗಿ ದುಃಖತಪ್ತರಾಗಿ ರೋಧಿಸುತ್ತಾ ಡ್ರೈವ್ ಮಾಡುವ ಕುಟುಂಬಸ್ಥರಿಂದ ಹಿಡಿದು, ತಮ್ಮ ಕುಟುಂಬಕ್ಕೆ ಇದೀಗ ತಾನೇ ಸೇರಿಕೊಂಡ ಹೊಸ ಮಗುವನ್ನು ಹೆಮ್ಮೆಯಿಂದ ಜೋಪಾನವಾಗಿ  ಕಾರು ಸೀಟಿನಲ್ಲಿ ಕರೆದುಕೊಂಡು ಹೋಗುತ್ತಿರುವ ದಂಪತಿಗಳವರೆಗೆ. ಎರಡು ಚಕ್ರದವರ ಆಟಾಟೋಪಗಳಿಂದ ಹಿಡಿದು ಹದಿನಾರು ಚಕ್ರದ (ಶೋಡಷ/ಷಿ) ಒಡೆಯರ ಒನಪು-ವೈಯಾರದಿಂದ ರಸ್ತೆಯನ್ನು ಅಪ್ಪಿಕೊಳ್ಳುವ ವರೆಗೆ...

ಹೀಗೆ, ಪ್ರತಿಯೊಂದು ಸಂದರ್ಭಕ್ಕೂ ಈ ರಸ್ತೆಗಳು ಒಂದು ರೀತಿಯಲ್ಲಿ ಸಾಮಾಜಿಕ ಸ್ಥಿತಿ-ಗತಿಯನ್ನು ಮಟ್ಟ ಮಾಡುವ ಲೆವೆಲ್ಲರುಗಳು ಇದ್ದ ಹಾಗೆ. ಈ ರಸ್ತೆಗಳ ಮೇಲೆ ನಿಮ್ಮ ನಿಮ್ಮ ಖಾಸಗೀ ವಿಚಾರಗಳು, ಅವುಗಳನ್ನು ಕುರಿತು ಶಾಂತವಾಗಿಯಾಗಲೀ ಉದ್ವೇಗದಿಂದಾಗಲೀ ಏಳುವ ನಿಮ್ಮ ಸ್ಪಂದನೆಗಳು ಇವೆಲ್ಲಕ್ಕೂ ಯಾವ ಬಿಡಿಗಾಸು ಬೆಲೆಯೂ ಇಲ್ಲ. ಈ ರಸ್ತೆಗಳು, ತಮ್ಮ ಹೊಳೆಯುವ ಕಪ್ಪು ಮುಖದ ಮೇಲೆ ನಿರ್ಧಾಕ್ಷಿಣ್ಯವನ್ನು ಮೈವೆತ್ತುಕೊಂಡಂತೆ ಸದಾ ಸುಮ್ಮನಿರುವ ಸರದಾರರು. ಇಂಥ ರಸ್ತೆಗಳಿಗೆ ಸಾತ್ ಕೊಡುವ ಬದಿಯ ವಾರ್ನಿಂಗ್ ಸೈನುಗಳು! ಇವೆಲ್ಲವೂ ಒಂದು ವ್ಯವಸ್ಥೆ - ಇವುಗಳನ್ನು ಮೀರಿದರೆ ಆಪತ್ತು ಕಾದಿದೆ, ಎನ್ನುವ ಕುತಂತ್ರವನ್ನು ತಮ್ಮೊಡಲೊಳಗೆ ಹೂತುಕೊಂಡಿರುವ ಸಭ್ಯರು ಎನ್ನಬೇಕು.

***



ಎಲ್ಲರೂ ಮಿತಿಗಿಂತ ಹೆಚ್ಚು ವೇಗವಾಗಿ ಹೋಗುತ್ತಿರುವಾಗ, ವೇಗದ ಮಿತಿಗೆ ಸರಿಯಾಗಿ ಹೋಗುವವರು ನಮ್ಮ ಸಮಾಜದಲ್ಲಿ ಒಂದು ರೀತಿಯ ಉಪಟಳ ಕೊಡುವ ಉಪದ್ರವಿಗಳಾಗಿ (nuisance) ಕಂಡುಬರುತ್ತಾರೆ.  ಇವರೊಬ್ಬರು ಸರಿಯಾದ ಹಾದಿಯಲ್ಲಿ ಸರಿಯಾದ ವೇಗದಲ್ಲಿ ನಡೆದು ಬಿಟ್ಟರೆ... ಎಲ್ಲವೂ ಸರಿ ಹೋದೀತೇ? ಮೇಲೆ ಹೇಳಿದ ವೇಗಿಗಳು, ದುಃಖಿಗಳು, ಸುಖಿಗಳು, ತೀವ್ರವಾಗಿ ಬದಲಾವಣೆಯನ್ನು ಅಪ್ಪಿಕೊಳ್ಳುತ್ತಿರುವ ಜನಸಮುದಾಯ ಇವರನ್ನು ಒಪ್ಪಿಕೊಳ್ಳಲು ಸಾಧ್ಯವೇ? ಮೌನದ ಮೊರೆಯಲ್ಲಿಯೇ ವೇಗದ ಮಿತಿಯನ್ನು ತೋರಿಸುವ, Conditions permitting...ಎನ್ನುವ ಅದಮ್ಯ ತತ್ವವನ್ನು ಯಾರು ಗೌರವಿಸುತ್ತಾರೆ ಈಗಿನ ಕಾಲದಲ್ಲಿ? ಒಬ್ಬ ಮಿತಿಗಿಂತ ಹೆಚ್ಚಾಗಿ ವೇಗವಾಗಿ ಹೋದರೆ, ಅವನನ್ನು ಅನುಸರಿಸಲು ಹಿಂಬಾಲಿಕರಿಗೇನೂ ಕೊರತೆ ಇಲ್ಲ... ಆದರೆ, ಒಬ್ಬ ಸರಿಯಾದ ವೇಗದಲ್ಲಿ ಹೋದಾಗ ಅವನನ್ನು ಹಿಂಬಾಲಿಸಲು ಹಿಂಜರಿಯುವ ಜನ ಹೆಚ್ಚು! ಹಾಗಾದರೆ, ಸರಿಯಾದ ವೇಗದಲ್ಲಿ ಹೋಗುವುದು ಹೆಚ್ಚು ಜನರಿಗೆ ಇಷ್ಟವಾಗದಂಥ ವ್ಯವಸ್ಥೆಯನ್ನು, ಹೆಚ್ಚು ಜನರ ಮೇಲೆ ಇಲ್ಲಿನ ಜನತಂತ್ರ ವ್ಯವಸ್ಥೆ ಹೇರುವುದಾದರೂ ಏಕೆ?

ತಮ್ಮ ತಮ್ಮ ನಿಧಾನಗಳನ್ನು, ತಮ್ಮ ಯೋಜನೆಯ ಹುಳುಕುಗಳನ್ನು, ತಾವು ತಡವಾಗಿ ಹೊರಟಿರುವುದರ ಕಾರಣ ಮತ್ತು ಪರಿಣಾಮಗಳನ್ನು ಈ ಮೌನವಾಗಿ ಬಿದ್ದುಕೊಂಡ ರಸ್ತೆಗಳ ಮೇಲೆ ತೀರಿಸಿಕೊಳ್ಳುವ ಹಕ್ಕನ್ನ  (ಸಿಕ್ಕಿ ಬಿದ್ದರೆ, ಕಾನೂನಿನ ದೃಷ್ಟಿಯಲ್ಲಿ ತಪ್ಪಾಗುವ) ಈ ವೇಗಿಗಳಿಗೆ ಯಾರು ಕೊಟ್ಟಿದ್ದು? ವ್ಯವಸ್ಥೆಯ ಮಿತಿಯನ್ನು ಮೀರಿ ವೇಗವಾಗಿ ಹೋಗುವವರಿಗೆ ಹಲವಾರು ಕಾರಣಗಳಿರಬಹುದು, ಆದರೆ, ಸಮಾಜದಲ್ಲಿ ನೆಟ್ಟಗೆ, ನ್ಯಾಯವಾಗಿ ಬದುಕುವರಿಗೆ ಕಾರಣಗಳು ಬೇಕಿಲ್ಲ.

***

ನಿಮ್ಮ ಮುಂದೆ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವವರು ನಿಮ್ಮಲ್ಲಿ ಅದ್ಯಾವ ತುಡಿತ-ತಲ್ಲಣಗಳನ್ನು ರೂಪಿಸುತ್ತಾರೆಯೋ ಗೊತ್ತಿಲ್ಲ. ಆದರೆ, ಇಂದು ನನ್ನ ಮುಂದೆ, ಮಿತಿಗೆ ತಕ್ಕಂತೆ ಒಂದು ಅರ್ಧ-ಮುಕ್ಕಾಲು ಮೈಲು ದೂರ ಡ್ರೈವ್ ಮಾಡಿಕೊಂಡು ಹೋದ ಮನುಷ್ಯ ನನಗೊಬ್ಬ ಹೀರೋ ಆಗಿ ಕಂಡು ಬಂದ. ಇಂಥ ನಗಣ್ಯ (unsung) ಹೀರೋಗಳನ್ನು ನಾವು ಗೌರವಿಸುವುದನ್ನು ಮೈಗೂಡಿಸಿಕೊಳ್ಳಲು ಕಲಿಯದಿದ್ದರೆ, ಸಮಾಜದಲ್ಲಿ ನ್ಯಾಯ-ನೀತಿಯಿಂದ ನಡೆಯುತ್ತೇವೆ ಎಂದು ಜೀವನವನ್ನೇ ಮುಡಿಪಾಗಿಟ್ಟಿರುವವರನ್ನು ಗೌರವಿಸುವುದನ್ನು ಕಲಿಯುವುದು ಯಾವಾಗ?

Saturday, February 10, 2024

3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!

ಇದೇನಪ್ಪಾ, ಇತ್ತೀಚೆಗಷ್ಟೇ ಟೆಕ್ನಾಲಜಿ ಜ್ವರದಲ್ಲಿ ಬೆಂದು ಬಳಲಾಡುತ್ತಿರುವ ನಮ್ಮಂಥವರಿಗೆ ದಿಢೀರನೇ ನಿವೃತ್ತಿಯ ಬಗ್ಗೆ ಕಿವಿಮಾತೇ ಎಂದು ಹುಬ್ಬೇರಿಸಬೇಡಿ, ಮುಂದೆ ಓದಿ ನೋಡಿ. ಇತ್ತೀಚೆಗೆ ಒಂದಿಷ್ಟು ಕಮ್ಮ್ಯೂನಿಟಿ ಸೇವೆಯ ಹೆಸರಿನಲ್ಲಿ ನನಗೆ ಸೀನಿಯರ್ ಸಿಟಿಜನ್‌ಗಳ ಸೇವೆ ಮಾಡೋ ಭಾಗ್ಯ ಒದಗಿತ್ತು, ಈ ಸಂದರ್ಭದಲ್ಲಿ ಕಮ್ಯೂನಿಟಿ ಸೇವೆ ಮಾಡುತ್ತಲೇ ನಾನು ಮುಂದೆ ನಿವೃತ್ತನಾಗಿ ಇದೇ ಅವಸ್ಥೆಗೆ ಬಂದರೆ ಹೇಗಿರಬಹುದು ಎಂದು ಯೋಚಿಸಿ ಸ್ವಲ್ಪ ರಿಸರ್ಚ್ ಮಾಡಿ ನೋಡಲಾಗಿ ಹಲವಾರು ಅಂಶಗಳು ಹೊರಬಂದವು, ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಈ ಎಕಾನಮಿಯಲ್ಲಿ ನಿವೃತ್ತರಾಗೋ ಮಾತೇ ಬರೋದಿಲ್ಲ, ಆ ಮಾತು ಬಿಡಿ. ಮುಂದೆಯಾದರೂ ಸುಧಾರಿಸೀತು, ಇಲ್ಲವೆಂದಾದರೆ ನಮ್ಮಂಥವರ ಕಷ್ಟ ಯಾರಿಗೂ ಬೇಡ. ಎಷ್ಟೋ ಜನ ರಿಟೈರ್‌ಮೆಂಟ್ ಬದುಕಿಗೆ ಪ್ಲಾನ್ ಮಾಡೋದೇ ಇಲ್ಲ. ರಿಟೈರ್‌ಮೆಂಟ್ ಬದುಕಿನಲ್ಲಿ ಹಣ, ಹೊಣೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಆರೋಗ್ಯದ ಜೊತೆಗೆ ಇಷ್ಟೆಲ್ಲ ದಿನಗಳಲ್ಲಿ ವ್ಯಸ್ತರಾಗಿ ಕೆಲಸ ಮಾಡಿ ಕರ್ಮಜೀವನವನ್ನು ತೇಯ್ದ ನಮಗೆ ಮುಂದೆ ಕಾಲ ಕಳೆಯೋದಕ್ಕೆ ಏನು ಬೇಕು ಏನು ಬೇಡ ಅನ್ನೋದರ ತೀರ್ಮಾನವೂ ಬಹಳ ಮುಖ್ಯ.  ಹಣವನ್ನಾದರೂ ಉಳಿಸಬಹುದು, ಗಳಿಸಬಹುದು, ಬೆಳೆಸಬಹುದು. ಆದರೆ, ಒಮ್ಮೆ ಹದಗೆಟ್ಟ ಆರೋಗ್ಯವನ್ನು ಹದ್ದುಬಸ್ತಿಗೆ ತರುವುದು ಭಗೀರಥ ಪ್ರಯತ್ನವೇ ಆಗಬಹುದು. ಎಲ್ಲಕ್ಕಿಂತ ಮುಖ್ಯ ಕೈಕಾಲು ಗಟ್ಟಿ ಇರಬೇಕು, ದೃಢವಾದ ಮನಸ್ಸಿಗೆ ಬೆಂಬಲ ನೀಡುವ ತಕ್ಕ ಮಟ್ಟಿನ ಶರೀರ ಬೇಕೇ ಬೇಕು. ಇದ್ದಕ್ಕಾಗಿ ಒಂದಿಷ್ಟು ಕಾಲ ವ್ಯಾಯಾಮ, ಯೋಗ, ಮೊದಲಾದ ದೈಹಿಕ ದಂಡನೆ ಜೊತೆ ಜೊತೆಗೆ ಮಾನಸಿಕ ಸ್ಥಿತಿಯ ಸ್ಥಿಮಿತಕ್ಕೆ ಧ್ಯಾನವೂ ಬೇಕಾಗುತ್ತದೆ.

***

ಸರಿ, ಈಗ ಮುತ್ತಿನಂತಹ ಮೂರು ಪ್ರಶ್ನೆಗಳಿಗೆ ಬರೋಣ:

೧. ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಹಾಗೂ ನಿಮಗೆ ಬೇಕಾದ ಹಣದ ಮೊತ್ತವೆಷ್ಟು?

೨. ರಿಟೈರ್ ಆದ ನಂತರ ಹೇಗೆ ಸಮಯವನ್ನು ವ್ಯಯಿಸುತ್ತೀರಿ, ಯಾವ ಯಾವ ಹವ್ಯಾಸಗಳನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸಿಕೊಳ್ಳುತ್ತೀರಿ?

೩. ನಿಮ್ಮ ಕಾಲಾನಂತರ ಯಾರು ಯಾರಿಗೆ ಏನನ್ನು ಬಿಟ್ಟು ಹೋಗುತ್ತೀರಿ?

ಈ ಮೂರು ಪ್ರಶ್ನೆಗಳನ್ನು ವಿಸ್ತರಿಸುವುದಕ್ಕೆ ಮೊದಲು "ILI ಪಾಷಾಣ"ಗಳ ವಿಷಯಕ್ಕೆ ಬರೋಣ. ಏನು, ಇಲಿ ಪಾಷಾಣ ಇದು?! ಎಂದು ಬೆರಗಾದಿರೋ, ಸುಲಭವಾಗಿ ನೆನಪಿಗೆ ಬರುವಂತೆ ಸುಮ್ಮನೆ ಒಂದು ಉಪಮೆಯ ಸೃಷ್ಟಿ ಅಷ್ಟೇ:

I: Investment risk

L: Longevity risk

I: Inflation risk

ಈ ಮೇಲೆ ಹೇಳಿದ ಮೂರು ರಿಸ್ಕ್‌ಗಳೇ ಪಾಷಾಣವಿದ್ದ ಹಾಗೆ. ಪ್ರತಿಯೊಬ್ಬರೂ ತಾವು ನಿವೃತ್ತರಾಗಲು ತಯಾರಾಗುತ್ತ ಇದ್ದ ಹಾಗೆ, ಇಪ್ಪತ್ತರ ಹರೆಯದಿಂದ ಎಪ್ಪತ್ತರವರೆಗೆ ಈ ಮೂರು ರಿಸ್ಕ್‌ಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಲೇ ಇರಬೇಕಾಗುತ್ತದೆ. Investment risk ನಲ್ಲಿ ನೀವು ಹೂಡಿದ ಹಣ ನೀವು ರಿಟೈರ್ ಆಗುವ ಹೊತ್ತಿಗೆ ಯಾವುದೋ ಒಂದು ರಿಸೆಷ್ಷನ್ನೋ ಇಲ್ಲಾ ಡಿಪ್ರೆಷ್ಷನ್ನ್ ಚಕ್ರದಲ್ಲಿ ಸಿಕ್ಕು ನರಳುತ್ತಿರಬಹುದು. Longevity risk ಅಂದರೆ ನೀವು ಎಂಭತ್ತು ವರ್ಷ ಬದುಕುತ್ತೀರಿ ಎಂದು ಅದಕ್ಕೆ ತಕ್ಕಂತೆ ಹಣ ಹೂಡಿ ಕೂಡಿ ಹಾಕಿ ಮುಂದೆ ಇಳಿ ವಯಸ್ಸಿನಲ್ಲಿ ನೀವು ತೊಂಭತ್ತು ಆದರೂ ಗೊಟಕ್ ಎನ್ನದೇ ಇರಬಹುದು. Inflation risk ನಲ್ಲಿ ಈಗ ಎರಡು ರುಪಾಯಿ ಅಥವಾ ಡಾಲರ್‌ಗೆ ಸಿಗಬಹುದಾದ ಪದಾರ್ಥ ಮುಂದೆ ಇಪ್ಪತ್ತು ರುಪಾಯಿ ಅಥವಾ ಇಪ್ಪತ್ತು ಡಾಲರ್  ಗಿಂತಲೂ ದುಬಾರಿಯಾಗಬಹುದು.

ಮೊದಲನೆಯ ಪ್ರಶ್ನೆ: ಹೂಡಿಕೆಯ ಹಣಕ್ಕೆ ಅಂಟಿಕೊಂಡ ತೊಂದರೆಗಳು ಯಾವು ಯಾವು? ಇಂಟರ್‌ನೆಟ್ ನಲ್ಲಿ ಹುಡುಕಿದರೆ ಬೇಕಾದಷ್ಟು ರಿಟೈರ್‌ಮೆಂಟ್ ಕ್ಯಾಲ್ಕುಲೇಟರುಗಳು ಸಿಗುತ್ತವೆ, ನಿಮ್ಮ ಈಗಿನ ಆದಾಯ ಹಾಗೂ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ಜೀವನಕ್ಕೆ ಎಷ್ಟು ಬೇಕು ಎಂದು ಅಂದಾಜು ಹಾಕುವುದಕ್ಕೆ. ಅಲ್ಲದೇ, ನಿವೃತ್ತ ಜೀವನದ ಪ್ರತಿವರ್ಷದ ಖರ್ಚಿಗೆ ಎಷ್ಟು ಬೇಕಾಗುತ್ತದೆ ಎನ್ನುವುದರ ಜೊತೆಗೆ ಇಂತಿಷ್ಟು ಹಣದಲ್ಲಿ ಕೇವಲ 4 ಅಥವಾ 5% ಹಣವನ್ನು ಮಾತ್ರ ತೆಗೆಯುವಂತೆ ಬೇಕಾಗುವ ಇಡುಗಂಟನ್ನು ರೂಪಿಸುವ ತಯಾರಿ ಹಾಗು 5% ನ ಮಿತಿಯಲ್ಲಿರುವಂತೆ ಒಂದು ಮೂಲಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಎರಡನೆಯ ಪ್ರಶ್ನೆ: ಸರಿ, ಕಷ್ಟದ ಜೀವನವನ್ನು ಸವೆಸಿ ನಿವೃತ್ತರೇನೋ ಆದಿರಿ, ಮುಂದೆ ಏನು? ದಿನಾ ಕೆಲಸ ಕೆಲಸ ಎಂದು ಗೋಗರೆದು ಹತ್ತಿರ ಬಂದ ಹವ್ಯಾಸಗಳು, ಅವಕಾಶಗಳು ಹಾಗೂ ಕನಸುಗಳನ್ನೆಲ್ಲ ದೂರ ತಳ್ಳಿಕೊಂಡು ಮೂರು ನಾಲ್ಕು ದಶಗಳನ್ನು ದೂರ ತಳ್ಳಿದ ನಂತರ ಒಂದು ದಿನ ದಿಢೀರ್ ಎಂದು ಹಳೆಯ ಹವ್ಯಾಸಗಳಿಗೆ ಅಂಟಿಕೊಳ್ಳುತ್ತೇನೆ ಎನ್ನುವುದು ಹುಡುಗಾಟಿಕೆಯೇ ಸರಿ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ, ದೇಹಸ್ಥಿತಿ ನೆಟ್ಟಗಿರಬೇಕು. ಓದುವುದಕ್ಕೆ, ಬರೆಯುವುದಕ್ಕೆ, ತಿರುಗಾಡುವುದಕ್ಕೆ, ಆಡುವುದಕ್ಕೆ ಸಮಯ ಒಂದಿದ್ದರೆ ಸಾಲದು - ಹಣ ಬೇಕು ಹಾಗೂ ದೇಹದಲ್ಲಿ ಬಲಬೇಕು ಜೊತೆಗೆ ಎಲ್ಲವೂ ಸುಸ್ಥಿತಿಯಲ್ಲಿರಬೇಕು. ಸುಮ್ಮನೆ ಒಂದು ನಿಮಿಷ ಕಣ್ಣು ಮುಚ್ಚಿ ನೀವು ನಿವೃತ್ತರಾದ ಹಾಗೆ ಊಹಿಸಿಕೊಳ್ಳಿ: ಮನೆ ಇದೆ, ಸಾಲವೆಲ್ಲ ತೀರಿದೆ, ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಸುಂದರವಾದ ಬೇಸಿಗೆಯ ದಿನ, ಊಟ ತಿಂಡಿ ಮನೆ ಕೆಲಸ ಎಲ್ಲವೂ ಆಗಿ ನಿಮ್ಮ ಬಳಿ ಐದರಿಂದ ಎಂಟು ಘಂಟೆ ಖಾಲಿ/ಫ್ರೀ ಇದೆ - ಏನು ಮಾಡುತ್ತೀರಿ? ನಿಮ್ಮ ಸ್ನೇಹಿತರು ಯಾರು, ನಿಮ್ಮ ಹವ್ಯಾಸಗಳೇನು, ನಿಮಗೇನು ಇಷ್ಟ, ನಿಮಗೇನು ಕಷ್ಟ, ನಿಮಗೇನು ಬೇಕು, ಎಲ್ಲಿ ಹೋಗುತ್ತೀರಿ, ಹೇಗೆ ಹೋಗುತ್ತೀರಿ, ಇತ್ಯಾದಿ. ಹೆದರಿಕೆಯಾಯಿತೇ? ಅಥವಾ ಸಂತೋಷವಾಯಿತೇ? ಈ ಒಂದು ನಿಮಿಷದ ನಿವೃತ್ತ ಬದುಕಿನ ಪಯಣದ ಬಗ್ಗೆ ಏನೆನ್ನೆಸಿತು?

ಮೂರನೆಯ ಪ್ರಶ್ನೆ: ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದೋರು ಈ ಕಾಲದವರಂತೂ ಖಂಡಿತ ಅಲ್ಲ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎನ್ನೋದೂ ಪೂರ್ತಿ ನಿಜವಲ್ಲ - ಎಂದು ವಾದ ಮಾಡೋ ಸಮಯವಿದಲ್ಲ. ನೀವು ಇಷ್ಟು ವರ್ಷ ಇದ್ದು ಅದೇನೇನೋ ಮಾಡಿ ಹೋಗುವಾಗ ನಿಮ್ಮನ್ನು ಆಧರಿಸಿಕೊಂಡವರಿಗೆ ಸ್ವಲ್ಪವನ್ನೂ ಬಿಟ್ಟು ಹೋಗೋದಿಲ್ಲವೇನು? ಮುಂದೆ ನಿಮ್ಮ ರಿಟೈರ್ ಮೆಂಟ್ ಅಕೌಂಟಿನಲ್ಲಿ ಪ್ರತಿವರ್ಷ 4 ರಿಂದ 5 % ಹಣವನ್ನು ತೆಗೆದು ಜೀವನ ನಡೆಸುತ್ತೀರಲ್ಲ, ನಿಮ್ಮ ನಂತರ ಅದರ ಬಂಡವಾಳ ಅಥವಾ ಮೂಲಧನ ಯಾರಿಗೆ ಸಿಗಬೇಕು? ಅದರಲ್ಲಿ ಟ್ಯಾಕ್ಸ್‌ನ ಪಾಲು ಎಷ್ಟು? ಯಾವ ಯಾವ ಬೆನಿಫಿಷಿಯರಿಗೆ ಎಷ್ಟು ಹಣ/ವರಮಾನ/ಆಸ್ತಿ ಇತ್ಯಾದಿಗಳನ್ನು ಯಾವ ರೂಪದಲ್ಲಿ ಬಿಟ್ಟು ಹೋಗುತ್ತೀರಿ ಎನ್ನುವುದಕ್ಕೂ ಬಹಳ ಯೋಚಿಸಬೇಕಾಗುತ್ತದೆ. ಅದಕ್ಕೆ ತಕ್ಕ ಒಳ್ಳೆಯ ಪ್ಲಾನ್ ಅಥವಾ ಸಿದ್ಧತೆ ಬೇಕಾಗುತ್ತದೆ. ಇದರಿಂದ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ, ಅವರವರ ಉಯಿಲು (ಮರಣ ಶಾಸನ ಪತ್ರ, ಅಥವಾ will) ಇರಬೇಕಾದ ಅಗತ್ಯವಿದೆ.

***

ಈಗೆನ್ನನ್ನಿಸಿತು? ಮೊದಲು ಯಾವುದಾದರು ಒಂದು ಕಮ್ಯೂನಿಟಿ ಸೆಂಟರಿನಲ್ಲಿ ಸೀನಿಯರ್ ಸಿಟಿಜನ್ ಸೇವೆಗೆ ವಾಲೆಂಟಿಯರ್ ಆಗಿ. ನಿಮ್ಮ ನಿವೃತ್ತ ಜೀವನದ ಮುಂಬರುವ ದಿನಗಳನ್ನು ನೀವೇ ತ್ರೀ ಡೀ ಕಲರ್ ಚಿತ್ರಗಳಲ್ಲಿ ನೋಡಿ. ಅವರ ಸ್ಥಾನದಲ್ಲಿ ನಿಮ್ಮನ್ನು ಗುರುತಿಸಿಕೊಂಡು, ಈಗಿನ ಕಾದಾಟ/ಬಡಿದಾಟಗಳನ್ನು ಕಡಿಮೆ ಮಾಡಿ, ಮುಂದಿನ ಜೀವನದ ILI ಪಾಷಾಣದ ಬಗ್ಗೆ ಸ್ವಲ್ಪ ಚಿಂತಿಸಿ.

ನಾನು ಯಾವಾಗಲೂ ಬರೆಯೋ ಹಾಗೆ ಅಥವಾ ಹೇಳೋ ಹಾಗೆ ಬದುಕು ಬಹಳ ದೊಡ್ಡದು - ಮೈ ತುಂಬ ಸುಕ್ಕುಗಳನ್ನು ಕಟ್ಟಿಕೊಂಡು ಹುಟ್ಟಿ ಬಂದ ನಾವು ಸುಕ್ಕು ಸುಕ್ಕಾಗೇ ಸಾಯೋದು, ಪ್ರಾಣಿ ಸಂಕುಲದಲ್ಲಿ ಮಾನವರು ಈಗ ತಾನೆ ಹುಟ್ಟಿದ ಅಸಹಾಯಕ ಮಕ್ಕಳಿಂದ ಹಿಡಿದು ಅಸಹಾಯಕ ವೃದ್ದಾಪ್ಯದ ಅವಸ್ಥೆಯವರೆಗೆ ಅನುಭವಿಸೋದು ಬಹಳಷ್ಟಿದೆ. ಮಿದುಳು ಘಂಟೆಗೆ ನೂರು ಮೈಲಿ ವೇಗದಲ್ಲಿ ಓಡಿದರೂ ಮೈ ಬಗ್ಗೋದಿಲ್ಲ. ಮುವತ್ತರ ನಂತರ ಒಂದೊಂದೇ ಕೀಲುಗಳೂ ಕಿರುಗುಟ್ಟುವುದು ಸಾಮಾನ್ಯ. ಅಟೋಮೊಬೈಲನ್ನು ಆಗಾಗ್ಗೆ ಸರ್ವಿಸ್ ಮಾಡಿಸೋ ಹಾಗೆ ನಮ್ಮ ದೇಹಕ್ಕೂ ನಿರಂತರ ಸರ್ವಿಸ್/ಸೇವೆ ಅಗತ್ಯ. ಮಕ್ಕಳಿಂದ ಮುದುಕರ ಅನೇಕ ಅವಸ್ಥೆಯಲ್ಲಿ ಆಯಾ ಅಗತ್ಯಗಳು ಬೇರೆ ಬೇರೆ. ಧೀರ್ಘ ಆಯುಷ್ಯ ಅನ್ನೋದು ದೊಡ್ಡದು, ಆದರೆ ಅಲ್ಲಿಯವರೆಗೆ ಹೋಗಿ ಸಸ್ಟೈನ್ ಆಗಿ ನೆಮ್ಮದಿಯ ಜೀವನ ನಡೆಸುವುದು ಇನ್ನೂ ದೊಡ್ಡದು!

Thursday, February 08, 2024

ನಮ್ಮ ನಡವಳಿಕೆಗಳು

ಕೋವಿಡ್ ಮುಗಿದ ನಂತರ ನಮ್ಮ ಡ್ರೈವಿಂಗ್ ಹ್ಯಾಬಿಟ್‌ನಲ್ಲಿ ಬಹಳ ವ್ಯತ್ಯಾಸವಾಗಿದೆ ಅನ್ನಿಸಿದ್ದು ಇದೇ ಮೊದಲ ಸಲ ಏನಲ್ಲ.

ಕೋವಿಡ್ ಲಾಕ್‌ಡೌನ್ ಆಗೋದಕ್ಕೆ ಮುಂಚೆಲ್ಲ ನಾವು ನಮ್ಮ ನಮ್ಮ ಕಾರುಗಳನ್ನ ಹೆಚ್ಚಾಗಿ ಬಳಸ್ತಾ ಇದ್ವಿ.  ಆಫ಼ೀಸಿಗೆ ಹೋಗಿ ಬರೋದರ ಜೊತೆಗೆ, ಶಾಪಿಂಗ್, ರಿಕ್ರಿಯೇಷನ್ ಜೊತೆಗೆ ಅಪರೂಪಕ್ಕೊಮ್ಮೆ ಊಟಕ್ಕೆ ಹೊರಗಡೆ ಹೋಗಿ ಬರ್ತಾ ಇರೋದ್ಲಿಂದಾದ್ರೂ ನಮ್ಮ ಕಾರುಗಳು ಹೆಚ್ಚು ಓಡುತ್ತಿದ್ದವು. ನಮಗೆ ಆಫ಼ೀಸಿನ ಹೊರಗಿನ ಊರಿನ ಒಂದಿಷ್ಟು ದರ್ಶನವಾದರೂ ಆಗ್ತಿತ್ತು.

ಕೋವಿಡ್ ಬಂದ ಮೇಲೆ ನಮ್ಮ ನಮ್ಮ ನಡವಳಿಕೆ ಮೇಲೆ ಅಗಾಧವಾದ ಪರಿಣಾಮ ಬೀರುವಷ್ಟರ ಮಟ್ಟಿಗೆ ಬದಲಾವಣೆಗಳಾಗಿವೆ. ಉದಾಹರಣೆಗೆ, ನಾವು ಮೊದಲಿನ ಹಾಗೆ ಏರ್‌ಪೋರ್ಟಿನಿಂದ ಜನರನ್ನು ಪಿಕ್‌ಅಪ್ ಮಾಡೋದಿಲ್ಲ, ಏರ್‌ಪೋರ್ಟ್‌ನಿಂದ ಜನರು, ಬದಲಿಗೆ ಊಬರ್ ಅಥವಾ ಲಿಫ಼್ಟ್ ಸರ್ವೀಸುಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ನಾವು ದಿನಸಿ ಸಾಮಾನುಗಳ ಶಾಪಿಂಗ್‌ಗೋಸ್ಕರ ಮನೆ ಬಿಟ್ಟು ಹೋಗದೇ ಮೂರು ವರ್ಷಗಳಾಗಿ ಹೋದವು ಎನ್ನಬಹುದು. ಇಂಡಿಯನ್ ಸ್ಟೋರ್ ಮತ್ತು ಅಮೇರಿಕನ್ ಸ್ಟೋರ್‌ಗಳೆಲ್ಲವೂ ಸಹ ಹೋಮ್‌ ಡೆಲಿವರಿಯನ್ನು ಶುರು ಮಾಡಿಕೊಂಡ ಬಳಿಕ, ನಮ್ಮ ಆರ್ಡರುಗಳನ್ನು ಫ಼ೋನ್ ಮೂಲಕ ಮಾಡಿದರೆ ಸಾಕು, ಕೆಲವೊಮ್ಮೆ ಅದೇ ದಿನ ಸಂಜೆಯೇ ಮನೆಯ ಬಾಗಿಲಿಗೆ ಬಂದು ಅವರು ಸಾಮಾನುಗಳನ್ನು ತಲಿಪಿಸಿದ್ದೂ ಇದೆ. ಉದಾಹರಣೆಗೆ, ಕಳೆದ ಶುಕ್ರವಾರ ಮಧ್ಯಾಹ್ನ ಕಳುಹಿಸಿದ ಆರ್ಡರ್ ಶನಿವಾರ ಬೆಳಗ್ಗೆಯ ಹೊತ್ತಿಗೆ ಎಲ್ಲಾ ಬಂದು ಸೇರಿ ಆಗಿತ್ತು.

ಇನ್ನು, ಈ ಹಣದುಬ್ಬರದ ದೆಸೆಯಿಂದ ಮಧ್ಯಮ ವರ್ಗದ ಅನೇಕ ಕುಟುಂಬಗಳು ಹೊರಗಡೆ ಹೋಗಿ ಊಟ ಮಾಡುವುದನ್ನು ಕಡಿಮೆ ಮಾಡಿರಬಹುದು. ಕಳೆದ ಎರಡು ಮೂರು ವರ್ಷಗಳಲ್ಲಿ ಟೇಕ್‌ಔಟ್ ಆರ್ಡರುಗಳು ಹೆಚ್ಚಿದಂತೆ ಅಂಗಡಿ-ಹೋಟೆಲುಗಳಲ್ಲಿ ಹೋಗಿ ಸಮಯವನ್ನು ಕಳೆಯುವವರ ಸಂಖ್ಯೆ ಕಡಿಮೆ ಆಗಿದೆ. ಇನ್ನು ಆಫ಼ೀಸಿಗೆ ಹೋಗಿ ಬರುವವರ ಸಂಖ್ಯೆಯೂ ಏನು ಹೆಚ್ಚಿಲ್ಲ. ಮೊದಲಿನ ಹಾಗೆ ವಾರಕ್ಕೆ ಐದು ದಿನವೂ ಆಫ಼ೀಸಿಗೆ ಹೋಗಿ ಬರುವ ಸ್ಥಿತಿ ಮರುಕಳಿಸುವ ಸಾಧ್ಯತೆ ಕಡಿಮೆ.

***

ನಮ್ಮ ಆಫ಼ೀಸಿನಲ್ಲಿ ಒಬ್ಬ ಚೈನೀಸ್ ಮೂಲದ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದೆ. ಅವನೋ, ವರ್ಷಕ್ಕೆ ಎರಡು, ಹೆಚ್ಚೆಂದರೆ ಮೂರು ಸರ್ತಿ ಆಫ಼ೀಸಿಗೆ ಬಂದರೆ ಅದೇ ದೊಡ್ಡದು. "ನಾನು ಟೆಕ್ನಿಕಲ್ ವರ್ಕರ್, ನನಗೆ ಇಂಟರ್ನೆಟ್ ಕನೆಕ್ಟ್ ಆಗಿರುವ ಲ್ಯಾಪ್‌ಟಾಪ್ ಒಂದಿದ್ದರೆ, ನಾನು ಎಲ್ಲಿಂದ ಬೇಕಾದರೂ ಕೆಲಸ ಮಾಡಬಲ್ಲೆ! ನಾನು ಇಲ್ಲಿಗೆ ಬಂದರೆ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ" ಎಂದು ಜಂಭದಿಂದ ಹೇಳಿಕೊಳ್ಳುತ್ತಿದ್ದ. ನಾನು, ಮನದಲ್ಲಿಯೇ, "ಇಂಥವರಿಂದಲೇ ಇರಬೇಕು, ನಮ್ಮ ಆಫ಼ೀಸಿನಲ್ಲಿ ಯಾರೂ ಯು.ಎಸ್. ನಿಂದ ಹೊರಗಡೆ ಕಂಪನಿ ಕಂಪ್ಯೂಟರ್ ಮತ್ತು ಫ಼ೋನುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ, ಎಂದು ಆರ್ಡರ್ ಹೊರಡಿಸಿರೋದು" ಎಂದುಕೊಂಡೆ. ಅವನ ಜೊತೆ ಮಾತನಾಡುತ್ತಾ ಒಂದು ವಿಷಯ ಯೋಚಿಸುವಂತಾಯ್ತು, ಅವನು ಅಮೇರಿಕದಲ್ಲಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಇದ್ದರೂ, ಯಾವ ವಿಚಾರದಲ್ಲೂ ಅವನು ಅಮೇರಿಕನ್ ಆಗಲಿಕ್ಕೆ ಹೇಗೆ ಸಾಧ್ಯ?

ಅವನು ಇಲ್ಲಿ ಇಷ್ಟು ವರ್ಷ ಇದ್ದರೂ, ಅವನ ಇಂಗ್ಲೀಷ್ ಬಳಕೆ ಅಷ್ಟಕ್ಕಷ್ಟೇ. ನಮ್ಮ ಸಂಭಾಷಣೆಯಲ್ಲಿ, ನಾನು ಹೇಳಿದ, "Better get your ducks in a row!" ಎಂಬ ಮಾತಿಗೆ ಅವನು ಕಕ್ಕಾಬಿಕ್ಕಿಯಾಗಿ, ಹಾಗಂದ್ರೆ? ಎಂದು ಕೇಳಿದ... ಅದಕ್ಕೆ ನಾನು, "Make proper plans, get things ready!" ಎಂದು ಸಮಜಾಯಿಷಿ ಹೇಳಿ ಅವನನ್ನು ಸಮಾಧಾನ ಪಡಿಸುವಂತಾಯ್ತು!

ಅವನು ಮೊದಲೇ ಶತಮೊಂಡ, ಈಗಂತೂ ಮುನಿಸಿಕೊಂಡಿದ್ದಾನೆ ಎನ್ನುವಂತೆ, ಸುಮಾರು ಕಾಲು ಶತಮಾನಕ್ಕೂ ಹೆಚ್ಚು ಅಮೇರಿಕದಲ್ಲಿ ಕಳೆದಿದ್ದರೂ, ಅಮೇರಿಕನ್ ವ್ಯವಸ್ಥೆಯಲ್ಲಿ ಆ ವ್ಯಕ್ತಿ ನೇರವಾಗಿ ಪಾಲ್ಗೊಂಡಿದ್ದಂತೆ ಕಾಣಿಸಲಿಲ್ಲ. ತಮ್ಮ ಉಡುಗೆ-ತೊಡುಗೆಯಿಂದ ಹಿಡಿದು, ತಾವು ಶಾಪ್ ಮಾಡುವ ಅಂಗಡಿಗಳು ಎಲ್ಲವೂ ಚೈನೀಸ್ ಮಯವಾಗಿದ್ದರೆ, ತಾವು ಮಾತನಾಡುವ ಭಾಷೆ ಚೈನೀಸ್ ಆಗಿದ್ದು, ತಮ್ಮ ಫ಼ೋನಿನಲ್ಲಿರುವ ನೂರಕ್ಕೆ ತೊಂಬತ್ತರಷ್ಟು ಜನರು ಚೈನೀಸ್ ಆಗಿದ್ದರೆ, ಇಂತಹವರು ಅದು ಯಾವ ರೀತಿಯಲ್ಲಿ "ಅಮೇರಿಕನ್" ಆಗಲಿಕ್ಕೆ ಸಾಧ್ಯ?

ಇಂಥವರಿಗೆ ಆಫ಼ೀಸಿಗೆ ಬರಲು ಕಷ್ಟವಾಗದೇ ಇನ್ನೇನು? (ಹೀಗೇ ಬಂದ ಮತ್ತೊಂದು ಮಾಹಿತಿಯ ಪ್ರಕಾರ, ಈ ಚೈನೀಸ್ ದಂಪತಿಗಳು ಒಂದು ಅಮೇಜ಼ಾನ್ ಸ್ಟೋರ್ ಅನ್ನೂ ಕೂಡ ನಡೆಸಿಕೊಂಡು ಅದರಲ್ಲಿ ಮರ್ಚಂಟೈಸ್ ಅನ್ನು ಮಾರುತ್ತಿದ್ದಾರಂತೆ.)  ತಮ್ಮ ಸುತ್ತಮುತ್ತಲೂ ಅಂತದೇ ನೆರೆಹೊರೆ, ಎಲ್ಲೂ ಡ್ರೈವ್ ಮಾಡಲಾಗದ, ಮಾಡಲು ಅಗತ್ಯವಿಲ್ಲದ ವ್ಯವಸ್ಥೆ. ಮನೆಯಲ್ಲಿ ಕುಳಿತಲ್ಲಿಂದಲೇ ಕೆಲಸ - ಒಂದಲ್ಲದಿದ್ದರೆ ಎರಡು. ಫ಼ೋನ್ ತಿರುಗಿಸಿದರೆ ಅಗಾಧವಾದ ಮತ್ತು ಅಪರಿಮಿತವಾದ (ಚೈನೀಸ್) ಮನರಂಜನೆ ಸಿಗುವ ವ್ಯವಸ್ಥೆ. ಹೀಗಿರುವಾಗ ಯಾರು ಅಮೇರಿಕನ್ನರು, ಯಾರು ಅಲ್ಲ... ಎಂದು ಕೇಳಿಕೊಳ್ಳಬೇಕಾದ ಅನಿವಾರ್ಯತೆ!

ಈ ಉದಾಹರಣೆ ನಮಗೂ ಅನ್ವಯವಾದೀತು... ನಾವು ಭಾರತೀಯ ಊಟ-ತಿಂಡಿಯನ್ನು ಸವಿದು, ಭಾರತೀಯ ನ್ಯೂಸ್, ಟಿವಿ, ಮನರಂಜನೆಯ ಮಾಧ್ಯಮಗಳನ್ನು ಅನುಸರಿಸಿ, ಭಾರತೀಯರ ನಡುವೆಯೇ ಹೊಂದಾಣಿಕೊಂಡು ಬೆಳೆಯುವುದಾದರೆ... ನಮಗೆ ಬೇಕಾದ ಪದಾರ್ಥಗಳೆಲ್ಲವೂ ಮನೆಗೆ ಬಂದು ಬೀಳುವ ವ್ಯವಸ್ಥ ಇದ್ದರೆ... ದೇವಸ್ಥಾನ, ಕನ್ನಡ ಸಂಘ ಮತ್ತು ಇಂಡಿಯನ್  ಸಂಬಂಧಿತ ಕಾರ್ಯಕ್ರಮಗಳಿಗೆ ಮಾತ್ರ ಹೋಗಿ ಬರುವಂತಾದರೆ... ನಾವು ಅಮೇರಿಕದಲ್ಲೇ ಏಕಿರಬೇಕು? ಅಮೇರಿಕದಲ್ಲೇ ಯಾಕಾದರೂ ಇರಬೇಕು?

***

ಒಂದು ಸಮಾಜ, ದೇಶದ ಮೇಲಿನ ಅವಲಂಬನೆ ನಮ್ಮ ದೈನಂದಿನ ಅಗತ್ಯಗಳನ್ನೂ ಮೀರಿದ್ದಾಗಿರುತ್ತದೆ. ಅದು ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕ ಅಗತ್ಯಗಳನ್ನೂ ಒಳಗೊಂಡಿರುತ್ತದೆ. ಇದೇ ಅಮೇರಿಕನ್ ಸಂಬಳವನ್ನು ಬೇರೆ ಯಾವುದೋ ದೇಶದಲ್ಲಿ ಕುಳಿತುಕೊಂಡು ತೆಗೆದುಕೊಳ್ಳುವುದು ನಿಜವಾದರೆ, ಅಲ್ಲಿಗೆ ಸುಮ್ಮನೇ ಹೋಗಲಾಗುತ್ತದೆಯೇ? ನಮ್ಮ ಹಾಗೆ ಬೇರೆ ದೇಶಗಳಿಂದ ಬಂದು ಇಲ್ಲಿ ನೆಲೆಯನ್ನು ಕಂಡುಕೊಂಡವರು, ನಾವು ಯಾವಾಗಲೂ ಒಂದು ದ್ವಂದ್ವದಲ್ಲಿಯೇ ಇರುತ್ತೇವೆ. ಒಂದಿಪ್ಪತ್ತು ವರ್ಷಗಳಾದ ನಂತರ, ಅಲ್ಲಿನ ಬೇರುಗಳು ನಿಧಾನವಾಗಿ ಕಣ್ಮರೆಯಾಗುತ್ತ ಬಂದ ಹಾಗೆ, ನಾವು ಹೆಚ್ಚು ಹೆಚ್ಚು ಇಲ್ಲಿಯವರೇ ಆಗಿ ಹೋಗುತ್ತೇವೆ. ಇಲ್ಲೇ ಹುಟ್ಟಿ-ಬೆಳೆದ ನಮ್ಮ ಮಕ್ಕಳು ನಮ್ಮ ಹಾಗಂತೂ ಅಲ್ಲ... ಅವರಿಗೆ ನಮ್ಮ ಸಂಸ್ಕೃತಿಯ ಧೋರಣೆ ಏನೇ ಇದ್ದರೂ ಅದು ಕಡಿಮೆಯೇ... ಇಲ್ಲೇ ಬೆಳೆದು ಕಲಿತು, ಮುಂದೆ ಹೋಗುವ ಅವರಿಗೆ ಇಲ್ಲಿಯ ಸಂಸ್ಕೃತಿಯೇ ಮುಖ್ಯ.

ಇಲ್ಲಿ ಹುಟ್ಟಿ-ಬೆಳೆಯದಿದ್ದರೇನಂತೆ? ಇಲ್ಲೇ ದುಡಿದು, ಇಲ್ಲಿನ ವ್ಯವಸ್ಥೆಯಲ್ಲಿ ಟ್ಯಾಕ್ಸ್ ಕಟ್ಟಿ ಬದುಕುತ್ತಿಲ್ಲವೇನು? ಹಾಗಿದ್ದ ಮೇಲೆ, ನಾವು ಕಟ್ಟಿದ ಟ್ಯಾಕ್ಸ್‌ನ ಒಂದೊಂದು ಡಾಲರ್ ಮತ್ತು ಅದು ಎಲ್ಲಿ, ಹೇಗೆ ವಿನಿಯೋಗ ಆಗುತ್ತಿದೆ ಎನ್ನುವುದರಲ್ಲಿ ನಾವು ಪರೋಕ್ಷವಾಗಿ ಫಲಾನುಭವಿಗಳಾಗಿದ್ದೇವಲ್ಲವೇ? ಈ ಟ್ಯಾಕ್ಸ್‌ನಿಂದ ಉಳಿದ ಹಣ, ಮುಂದೊಂದು ದಿನ ಯುಕ್ರೇನ್‌ ಅನ್ನು ರಷ್ಯಾದಿಂದ ಸಂರಕ್ಷಿಸುವ ಹಣವಾಗಿ, ಅಥವಾ ಇಸ್ರೇಲ್‌ನಲ್ಲಿ ಸಿಡಿಯುವ ಮದ್ದುಗುಂಡುಗಳ ತಲೆಯಾಗಿ  ಬಳಕೆ ಆದೀತೆಂದು ಯಾರು ಕಂಡವರು? ಬರೀ ಟ್ಯಾಕ್ಸ್ ಕಟ್ಟಿದರೆ ಸಾಕೇ? ಅದು ಹೇಗೆ ವಿನಿಯೋಗವಾಗಬೇಕು ಅಥವಾ ಬೇಡ ಎನ್ನುವುದರಲ್ಲಾದರೂ ನಮ್ಮ ಅನಿಸಿಕೆಯನ್ನು ನಾವು ವ್ಯಕ್ತಪಡಿಸಿಕೊಳ್ಳಲಿಲ್ಲವೆಂದರೆ?

***

ಅಮೇರಿಕದ ಮುಖ್ಯ ವ್ಯಾಲ್ಯೂಗಳಲ್ಲಿ ಒಂದು ಫ಼್ರೀಡಮ್! ಇದನ್ನು ಸ್ವತಂತ್ರ, ಸ್ವಾಯುತ್ತತೆ, ಬಿಡುಗಡೆ, ಆಯ್ಕೆ ಮುಂತಾದ ಪರ್ಯಾಯ ಪದಗಳನ್ನು ಬಳಸಿ ಹೇಳಿದರೂ ಕೂಡಾ, ಇಲ್ಲಿನ ಫ಼್ರೀಡಮ್‌ಗೂ ಮತ್ತು ಉಳಿದ ದೇಶಗಳ ಫ಼್ರೀಡಮ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಉದಾಹರಣೆಗೆ, ನಾವು ಇಲ್ಲಿ ಅಮೇರಿಕನ್ ಪ್ರೆಸಿಡೆಂಟ್‌ಗಳನ್ನು ಕುರಿತು ಸಾರ್ವಜನಿಕವಾಗಿ ಜೋಕ್ ಮಾಡಿಕೊಂಡು ಕಾಮೆಡಿ ಶೋಗಳಲ್ಲಿ ನಗುವ ಹಾಗೆ, ಅನೇಕ ಪ್ರಜಾಪ್ರಭುತ್ವ ಇರುವ ದೇಶಗಳಲ್ಲಿ  ಮಾಡಲಾಗದು. ಕೋವಿಡ್ ಬಂದು ಎಲ್ಲ ದೇಶಗಳೂ ಖಡಾಖಂಡಿತ ಲಾಕ್‌ಡೌನ್‌ಗಳನ್ನು ಘೋಷಿಸಿ, ಕೆಲವು ದೇಶಗಳಲ್ಲಿ ರಸ್ತೆಯ ಮೇಲೆ ವಾಹನಗಳ ಓಡಾಟವನ್ನು ನಿರ್ಬಂಧಗೊಳಿಸಿದಾಗಲೂ, ಅಮೇರಿಕದಲ್ಲಿ ನಮ್ಮ ’ಫ಼್ರೀಡಮ್’ಗೆ ಯಾವ ಕುಂದುಕೊರತೆಯೂ ಆಗಲಿಲ್ಲ. ಒಂದು ದೇಶದಲ್ಲಿ ಬದುಕಿ, ಅಲ್ಲಿನ ನೀರು ಕುಡಿದು, ಅಲ್ಲಿನ ಅನ್ನವನ್ನು ತಿಂದ ಮೇಲೆ ಅಲ್ಲಿನ ದೇಶದ ಮೇಲೆ ಒಂದು ರೀತಿಯ ನಿಷ್ಠೆ, ಭಕ್ತಿ ಹಾಗೂ ನಿಯತ್ತು ಬರಲೇ ಬೇಕಾಗುತ್ತದೆ. ಒಂದು ವೇಳೆ ಅದು ಹಾಗಿಲ್ಲವೆಂದರೆ, ನಮ್ಮದೆಲ್ಲ ಬರೀ ಪಾಸ್‌ಪೋರ್ಟುಗಳನ್ನು ಹೊಂದಿದ, ಎದೆಕರಗದ ದೇಶಭಕ್ತಿಯ ನೋವಿರದ ನಾಗರಿಕತೆ ಆಗಿ ಹೋಗುತ್ತದೆ.

ನಾವು, ಹೆಚ್ಚಿನವರಾಗಿ, ಇಲ್ಲಿ ಇಂಜಿನಿಯರ್ ಮತ್ತು ಡಾಕ್ಟರುಗಳಾಗಿ ಬಂದೆವು, ಕೆಲಸ ಮಾಡತೊಡಗಿದೆವು. ಆದರೆ, ಇಲ್ಲೇ ಹುಟ್ಟಿ ಬೆಳೆದ ನಮ್ಮ ಮಕ್ಕಳು ಇಲ್ಲಿನ ಸೈನ್ಯವನ್ನು ಸೇರಿ ದೇಶಸೇವೆ ಮಾಡುವುದನ್ನು ನಾವು ಸುಲಭವಾಗಿ ಸಹಿಸಲಾರೆವು. ಇಲ್ಲಿನ ಸ್ಥಳೀಯ ಕಮ್ಯೂನಿಟಿ ಸರ್ವಿಸುಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಲ್ಲಿ ಹಿಂದೇಟು ಹಾಕುವುದರ ಜೊತೆಜೊತೆಗೆ ನಮ್ಮ ಮಕ್ಕಳನ್ನೂ ಆ ನಿಟ್ಟಿನಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಲಾರೆವು. ಇಲ್ಲಿನ ಬ್ಲೂ ಕಾಲರ್ ಸೇವೆ, ಸರ್ವೀಸುಗಳು ನಮಗಲ್ಲ. ಬಿಳಿ ಕಾಲರ್ ಸೇವೆ ಸರ್ವೀಸುಗಳಲ್ಲಿ ಕೈ ತುಂಬ ದುಡಿದು, ಯಶಸ್ವಿ ಜೀವನವನ್ನು ಸಾಗಿಸಿದರೆ ಸಾಕು, ಅಷ್ಟೇ!

ನಮ್ಮ ಪಕ್ಕದ ಮನೆಯಲ್ಲಿ ಇರೋರೇ ನಮಗೆ ಗೊತ್ತಿಲ್ಲದಿರುವಾಗ ಇನ್ನು ಈ ದೇಶ-ಪ್ರಪಂಚಗಳನ್ನು ಹೇಗೆ ತಿಳಿದುಕೊಂಡಾದರೂ ಏನು ಪ್ರಯೋಜನ? ಅದೆಲ್ಲ ಬೇಡ, ಇಂಟರ್ನೆಟ್ ಕನೆಕ್ಟ್ ಆಗಿರುವ ಲ್ಯಾಪ್‌ಟಾಪ್ ಒಂದನ್ನು ಕಟ್ಟಿಕೊಂಡು ಯಾವುದಾದರೊಂದು ದ್ವೀಪದಲ್ಲಿದ್ದರೂ ಸಾಕಲ್ಲ? ಅಮೇರಿಕದಲ್ಲೇ ಏಕಿರಬೇಕು?

Sunday, February 04, 2024

ಸ್ಥಳಾಂತರ

ಒಂದು ಶುಭ್ರವಾದ ಮಧ್ಯಾಹ್ನ ಎಲ್ಲರೂ ಸುಧಾ ಹೋಟ್ಲು ಸರ್ಕಲ್ ಹತ್ರ ಸೇರಿದ್ರು. ಅದು ಸರ್ಕಲ್ ಅಂದ್ರೆ ನಾಲ್ಕು ರಸ್ತೆ ಕೂಡೋ ಜಾಗಾನೇ ಅಂತ ಆಗಬೇಕಿಲ್ಲ.  ಅದೊಂದು ಸಣ್ಣ ವ್ಯಾಪಾರದ ಸ್ಥಳ. ಒಂದು ಮುಖ್ಯ ರಸ್ತೆ, ಅದಕ್ಕೆ ಲಂಭವಾಗಿ ಹೊರಟಿರೋ ಮತ್ತೊಂದು ರಸ್ತೆ ಅನ್ನಬೇಕು ಅಷ್ಟೇ. ಈ ಊರಿನ ಮುಖ್ಯವಾದ ಸ್ಥಳಕ್ಕೆ ಯಾವ ಒಬ್ಬ ಮಹಾತ್ಮರ ಹೆಸರೂ ಇನ್ನೂ ಯಾರೂ ಏಕೆ ಇಟ್ಟಿಲ್ಲ ಅನ್ನೋದು ಒಳ್ಳೆಯ ಪ್ರಶ್ನೆ.

ಹೀಗಿರೋ ಸ್ಥಳ, ಬೆಳಿಗ್ಗೆ ಮತ್ತು ಸಂಜೆ ಹೂವು ತರಕಾರಿ ಮಾರೋ ಜನರಿಂದ ಮತ್ತು ಅವನ್ನು ಖರೀದಿ ಮಾಡೋ ಗ್ರಾಹಕರಿಂದ ಒಂದು ರೀತಿ ಗಿಜುಗುಟ್ಟುತ್ತಾ ಇರೋದನ್ನ ಬಿಟ್ರೆ, ಮಧ್ಯಾಹ್ನ ಊಟದ ಸಮಯವೊಂದನ್ನು ಬಿಟ್ಟು ಉಳಿದೆಲ್ಲ ಸಮಯ ತಣ್ಣಗೇ ಇರೋದು ಅಂತ ಹೇಳ್‌ಬಹುದು.

ಈ ಮೂರು ರಸ್ತೆಗಳು ಕೂಡುವಂತ ಸ್ಥಳದಲ್ಲಿ ಇರೋದು ಸುಧಾ ಹೋಟ್ಲು. ಘಟ್ಟದ ಕೆಳಗಿಂದ ದಶಕಗಳ ಹಿಂದೆ ಬಂದು, ಈ ಊರಿನಲ್ಲಿ ನೆಲೆನಿಂತ ಒಂದು ಸಣ್ಣ ಭಟ್ಟರ ಹೋಟೆಲ್. ಅಂದು ಅವರ ಹಿರಿಯ ಮಗಳ ಹೆಸರಿನಿಂದ ಆರಂಭವಾಗಿದ್ದು, ಇವತ್ತಿಗೂ ಇನ್ನೂ ಮುಂದುವರೆಯುತ್ತಿದೆ. ಭಟ್ಟರು ಕಾಲವಾಗಿ ಅದೆಷ್ಟೋ ವರ್ಷಗಳು ಸಂದಿವೆ. ಅವರ ಹೆಂಡತಿ ಇನ್ನೂ ತಮ್ಮ ಎಂಬತ್ತರ ಪ್ರಾಯದಲ್ಲಿ ಇದ್ದರೂ, ಆಗಾಗ್ಗೆ ಹೋಟೆಲ್ ಹಿಂದೆ ಮುಂದೆ ಸುಳಿಯುತ್ತಾರಾದರೂ, ಅವರು ಹಾಕಿಕೊಟ್ಟ ರೆಸಿಪಿ ಅಲ್ಲಿನ ಜನರ ಬಾಯಿ ರುಚಿಯಲ್ಲಿ ಗಾಢವಾಗಿ ನಿಂತು ಬಿಟ್ಟಿದೆ.

ದಿನ ಬೆಳಗ್ಗೆ ತಿಂಡಿಗೆ ಜನ ಅಷ್ಟೊಂದು ಬರ್ತಿರಲಿಲ್ಲ, ಆದ್ರೆ, ಮಧ್ಯಾಹ್ನ ಊಟದ ಹೊತ್ತಿಗೆ ಮಾತ್ರ ಜನ ದಂಡಿಯಾಗಿ ಅದೆಲ್ಲೆಲ್ಲಿಂದಲೋ ಬರೋರು. ಅಮ್ಮನ ಕೈ ರುಚಿ - ಅಂತಲೇ ಫ಼ೇಮಸ್ಸಾಗಿರೋ ಘಮಘಮಿಸೋ ಉಪ್ಪಿಟ್ಟು, ಚಿತ್ರಾನ್ನ, ಪುಳಿಯೋಗರೆ, ಅನ್ನ-ಸಾಂಬಾರ್ ಜೊತೆ ಜೊತೆಗೆ ಕೀರು-ಪಾಯಸ ಅಂತಾ ಏನಾದ್ರೂ ಸಿಹಿ ಪ್ರತಿದಿನ ಸಿಕ್ಕೇ ಸಿಗೋದು. ಈ ಬೆಲೆ ಏರಿಕೆ ದಿನಗಳಲ್ಲಿ ಕಡಿಮೆ ಬೆಲೆಗೆ ಪುಷ್ಕಳ ಭೋಜನ ಅನ್ನೋ ಮನೆ ಮಾತಿನ ಹಿನ್ನೆಲೆಯಲ್ಲಿ ನಮ್ಮೂರಿಗೆ ಬಂದೋರೆಲ್ಲ ಸುಧಾ ಹೋಟ್ಲಲ್ಲೇ ಊಟ ಮಾಡೋದಕ್ಕೆ ಖಾಯಸ್ ಮಾಡ್ತಿದ್ರು ಅನ್ನಬಹುದು.

ಎಲ್ಲರ ಬಾಯಲ್ಲಿ "ಸುಧಾ ಹೋಟ್ಲು" ಅಂತ ಇದ್ದುದ್ದಕ್ಕೆ, ಭಟ್ಟರ ಮಗ "ಹೋಟೇಲ್ ಸುಧಾ" ಎಂದು ಇಂಗ್ಲೀಷಿನಲ್ಲಿ ಬರೆಸಿ ದಪ್ಪ ಅಕ್ಷರಗಳಲ್ಲಿ ಬೋರ್ಡು ಹಾಕಿದ ದಿನವೇ ನಮ್ಮೂರಿಗೆ ಆಧುನಿಕತೆ ಬಂದಿದ್ದೂ ಅಂತ ಅನ್ಸುತ್ತೆ. ಯಾರು ಏನ್ ಬೇಕಾದ್ರೂ ಬೋರ್ಡ್ ಹಾಕ್ಕೊಳ್ಳಿ, ಜನ್ರ ಬಾಯಲ್ಲಿ ಅದು ಸುಧಾ ಹೋಟ್ಲು, ಕೆಲವೊಮ್ಮೆ ಓಟ್ಲು ಆಗಿದ್ದು, ಮತ್ತೆ ಹಾಗೇ ಎಲ್ಲ ಕಡೆಗೂ ಹೇಳಿ-ಕೇಳೀ ಬರ್ತಾ ಇದ್ದದ್ದು ನಮ್ಮೂರಿನ ಒಂದು ಅಂಗವಾಗಿದ್ದಂತೂ ನಿಜ.

ಕಾಲ ಕ್ರಮೇಣ ಎಲ್ಲರೂ ಎಲ್ಲ ಕಡೆಗಳಲ್ಲಿ ವಲಸೆ ಹೋಗಿ ನೆಲೆ ನಿಂತ ಮೇಲೆ, ಭಟ್ಟರ ಕೊನೇ ಮಗ ಕೊಟ್ರೇಶಿ ಹೋಟ್ಲನ್ನ ಇನ್ನೂ ನಡೆಸಿಕೊಂಡು ಬರ್ತಾ ಇರೋದನ್ನ ಎಂಬತ್ತರ ಗಡಿ ದಾಟಿ ನಿಂತು, ಟೊಂಕ ಬಗ್ಗಿದ್ದರೂ ಮೈ ಬಗ್ಗದೇ ಇನ್ನೂ ಗಟ್ಟಿಯಾಗೇ ಇರೋ ಅಮ್ಮ, ಇವತ್ತಿಗೂ ತನ್ನ ಕೈ ರುಚಿ ಹೋಟೆಲಿನ ಗ್ರಾಹಕರಿಗೆ ತಪ್ಪದಂತೆ ಜತನದಿಂದ ನೋಡಿಕೊಂಡಿರುವುದು ನಮ್ಮೂರಿನ ಮೂರು ತಲೆಮಾರುಗಳ ಬಾಯಿ ರುಚಿ ಆಗಿ ಹೋಗಿದೆ ಎನ್ನಬಹುದು.

***

ಬಾಯಲ್ಲಿ ಮುಂಡು ಬೀಡಿ ಇಟ್ಟುಕೊಂಡು, ಮುಂಡಾಸ ಕಟ್ಟಿಕೊಂಡು ಅಡ್ಡಪಂಚೆಯನ್ನು ಗಂಟು ಹಾಕಿ ಗಟ್ಟಿಗೊಳಿಸಿದ ದಾಂಡಿಗರು ಓಡಾಡುವ ನಮ್ಮೂರಿನ ಬೀದಿಗಳಲ್ಲಿ ಕ್ರಮೇಣ ಪ್ಯಾಂಟು-ಶರಟುಗಳು ಓಡಾಡಲಾರಂಭಿಸಿದವು. ಅದೆಲ್ಲೋ ಒಂದು ಫ಼್ಯಾಕ್ಟರಿ ತೆಗೆದರು ಎನ್ನುವ ಹೆಸರಿನಲ್ಲಿಯೋ, ಅಥವಾ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿ ಹಾದು ಹೋಗುವ ಹೆದ್ದಾರಿಯ ದೆಸೆಯಿಂದ ನಮ್ಮೂರಿನಲ್ಲಿ ಆಗಂತುಕರ ಮತ್ತು ಅಪರಿಚಿತರ ಲವಲವಿಕೆಗಳು ಜೋರಾಗತೊಡಗಿದವು. ಊರಿಗೆ ನಾಲ್ಕು ಲ್ಯಾಂಡ್ ಲೈನುಗಳ ದೂರವಾಣಿ ಇದ್ದಂತಹ ಊರಿನಲ್ಲಿ ದಿಢೀರನೆ ಎಲ್ಲೆಂದರಲ್ಲಿ ಜಂಗಮವಾಣಿಗಳು ಬಂದವೆಂದರೆ? ಅವೇ ರಸ್ತೆಗಳು, ಅವು-ಅವೇ ಊರುಗಳು. ಆದರೆ, ಜನರು ನಿಂತಲ್ಲಿ ನಿಲ್ಲಲಾರರಾದರು. ಹೆಚ್ಚು ಹೆಚ್ಚು ಓಡಾಡುವುದೇ ಉದ್ದೇಶವೆಂಬಂತೆ ಎಲ್ಲರೂ ಎಲ್ಲ ಕಡೆಗೂ ಎಲ್ಲ ಕಾಲಗಳಲ್ಲಿ ಹರಡಿಕೊಳ್ಳುತ್ತಾ ಹೋದರು. ಒಂದು ಕಾಲದಲ್ಲಿ ದುಡ್ಡು ತೆಗೆದುಕೊಂಡು ಊಟ ಕೊಡುವ ಹೋಟೆಲಿನವರೂ ಸಹ, ತಮ್ಮಲ್ಲಿ ಬಂದು ತಿಂದು ಹೋಗುತ್ತಿದ್ದವರನ್ನು ತಮ್ಮ ಮನೆಯವರಂತೆಯೇ ವಿಚಾರಿಸಿಕೊಂಡು, ಅವರ ಹಿಂದು-ಮುಂದುಗಳನ್ನು ಅರಿತುಕೊಂಡಿರುತ್ತಿದ್ದರು. ಸುಧಾ ಹೋಟ್ಲು ಎನ್ನುವ ವೇದಿಕೆಯೊಂದರಲ್ಲೇ ಅನೇಕ ಆಗು-ಹೋಗುಗಳ ಬಗ್ಗೆ ವ್ಯಾಖ್ಯಾನಿಸಲಾಗುತ್ತಿತ್ತು. ಇನ್ನು ಊರಿನಲ್ಲಿದ್ದ ಸೆಲೂನುಗಳೂ, ಬೀಡಾ ಅಂಗಡಿಗಳೂ, ಕಿರಾಣಿ ಗುರಾಣಗಳೂ, ಹಿಟ್ಟಿನ ಮಿಲ್ಲುಗಳೂ ಇನ್ನೆಲ್ಲವನ್ನೂ ಒಟ್ಟು ಹಾಕಿ ನೋಡಿದರೆ, ಯಾವೊಂದು ಸಂವಹನದ ಸಮರ್ಪಕ ವ್ಯವಸ್ಥೆಯಿಲ್ಲದಿದ್ದರೂ ಎಲ್ಲವೂ ಸಮರ್ಪಕವಾಗೇ ನಡೆದುಕೊಂಡು ಹೋಗುತ್ತಿತ್ತು. ಊರಿರುವಲ್ಲಿ ಪೋಸ್ಟ್ ಆಫ಼ೀಸು ಇರುವಷ್ಟೇ ಸಹಜವಾಗಿ ಒಮ್ಮೊಮ್ಮೆ ಹೊಡೆದಾಟಗಳೂ, ರೋಧನಗಳೂ, ಒ.ಸಿ. ನಂಬರುಗಳ ಎಕ್ಸ್ ಚೇಂಜುಗಳೂ, ಚುನಾವಣಾ ಪ್ರಣಾಳಿಕೆ ಮತ್ತು ಷಡ್ಯಂತ್ರಗಳೂ ಮೊದಲಾಗಿ ಎಲ್ಲವೂ ಇಂತಹ ಪಬ್ಲಿಕ್ ಸ್ಥಳಗಳಲ್ಲೇ ನಡೆಯುತ್ತಿದ್ದವೆಂದರೆ?

ಈ ಸಂಬಂಧವಾಗೇ ನಮ್ಮ ಹಿರಿಯರು ಹೇಳಿದ್ದಿರಬಹುದು - ನಾಲ್ಕು ಜನ ನಂಬುವಂತೆ ಬದುಕು ಮಗಾ! ಎಂಬುದಾಗಿ.

***

ಇತ್ತೀಚೆಗಂತೂ ನಮ್ಮೂರಿನ ರಸ್ತೆಗಳಲ್ಲಿ ಹೊರಗಿನವರದೇ ಆಟಾಟೋಪ. ಮಿರಿಮಿರಿ ಮಿಂಚುವ ಕಾರಿನಿಂದ ಇಳಿದು ರಸ್ತೆಗೆ ಓಡುವ ಮಕ್ಕಳಿಗೆ ಅವರ ಹಿಂದೆ ಮುಂದೆ ಯಾವ ವಾಹನಗಳು ಬಂದರೂ ಕಾಣವು. ಇಂತಹ ಮಕ್ಕಳನ್ನೇ ತಮ್ಮ ವೃತ್ತದ ಕೇಂದ್ರದಲ್ಲಿಟ್ಟುಕೊಂಡು ಸುತ್ತುವ ಪೋಷಕರಿಗೆ ಯಾವಾಗಲೂ ಅವುಗಳ ಸುತ್ತ ಸುತ್ತುವುದೇ ಕಾಯಕವಾಗಿ ಪರಿಣಮಿಸಿದೆ. ಗ್ರಾಹಕರ ಸಂತುಷ್ಟಿಯೇ ನಮ್ಮ ಖುಷಿ, ಎಂದು, ಒಂದಕ್ಕೆರಡು ರೇಟ್ ಹಾಕಿ ಸಾಮಾನ್ಯ ಗೃಹಬಳಕೆ ವಸ್ತುಗಳನ್ನೇ ಬಿಂಕ ಬಿನ್ನಾಣದಿಂದ ಮಾರಾಟ ಮಾಡುವ ಅಂಗಡಿಯ ಹುಡುಗಿಯರು ಊರಿನ ಸೇಲ್ಸ್ ಅನ್ನು ಅದ್ಯಾವಾಗಲೋ ಹೆಚ್ಚಿಸಿಯಾಗಿದೆ. ಅದೇನೇ ಆಗಲಿ, ಬಿಡಲಿ ಇವತ್ತಿಗೂ ಸುಧಾ ಹೋಟ್ಲಿಗೆ ಹೋಗುವ ಗ್ರಾಹಕರ ಸಂಖ್ಯೆಯಲ್ಲಾಗಲೀ, ಆ ಹೋಟೆಲಿನ ಆಯ-ವ್ಯಯದಲ್ಲಾಗಲೀ ಯಾವ ವ್ಯತ್ಯಾಸವೂ ಆದಂತಿಲ್ಲ... ಎಂದುಕೊಳ್ಳುವ ಹೊತ್ತಿಗೆ...

ಒಂದು ದಿನ ಒಳ್ಳೆಯ ನಾಜೂಕಾದ ಬಟ್ಟೆ ಧರಿಸಿದ ಯುವಕರು ದಿಢೀರನೇ ಕಾರಿನಲ್ಲಿ ಬಂದರು. ಆ ಮೂರು ರಸ್ತೆಗಳು ಕೂಡುವ ಕೇಂದ್ರದಲ್ಲಿ, ಸುಧಾ ಹೋಟ್ಲು ಇರುವ ಮೂಲೆಯಲ್ಲಿ ಹೊಸ ಬೈಕ್ ಶೋ ರೂಮ್ ಒಂದು ಆರಂಭವಾಗುವ ಸೂಚನೆಗಳನ್ನು ನೀಡಿ, ತಣ್ಣಗಿದ್ದ ಊರಿನಲ್ಲಿ, ಹೊಸ ಕಲರವವನ್ನು ಹುಟ್ಟು ಹಾಕುವ ಹಾಗೆ, ನೀರಿನಲ್ಲಿ ಕಲ್ಲು ಎಸೆದು ಹೋದಂತೆ ಮಾಡಿ ಹೋದರು.

ಶೋ ರೂಮ್ ತೆರೆದ ಮೊದಲ ವಾರ ಬೈಕ್ ಶೋ ರೂಮಿಗೆ ಬರುವ ಗ್ರಾಹಕರನ್ನು, ಲಲನೆಯರು ಹೂವಿನ ಪಕಳೆಗಳನ್ನು ಅವರು ನಡೆದು ಬರುವ ದಾರಿಯಲ್ಲಿ ಎರಚಿ ಸ್ವಾಗತಿಸುತ್ತಾರಂತೆ ಎನ್ನುವ ಸುದ್ದಿ ನಮ್ಮೂರಿನಲ್ಲಿ ಸದ್ದು ಮಾಡತೊಡಗಿತು. ಆದರೆ, ಒಂದು ಕಡೆ ಚಂಬಣ್ಣನವರ ಕಿರಾಣಿ ಅಂಗಡಿ, ಅದರ ಪಕ್ಕ ರಾಜೂ ಇಟ್ಟಿರುವ ಇಸ್ತ್ರಿ ಅಂಗಡಿ, ಅದರ ಪಕ್ಕದಲ್ಲಿ ಸೇಟ್ ಇಟ್ಟುಕೊಂಡ ಸೆಲೂನನ್ನು ಬಿಟ್ಟರೆ,. ಆ ಸರ್ಕಲ್‌ನಲ್ಲಿ ಇದ್ದದ್ದು ಸುಧಾ ಹೋಟ್ಲು ಮಾತ್ರವೇ! ಈ ಬೈಕ್ ಶೋ ರೋಮ್ ಅನ್ನು ಕಟ್ಟಲು, ಬೆಳೆಸಲು ಯಾವುದನ್ನ ಆಹುತಿ ತೆಗೆದುಕೊಳ್ಳುತ್ತಾರೋ ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಯಿತು.

ಬೆಳೆಯುವ ಊರಿಗೆ ಬೈಕುಗಳು ಬೇಕು ನಿಜ... ಆದರೆ, ಕಿರಾಣಿ ಅಂಗಡಿ, ಇಸ್ತ್ರಿ ಅಂಗಡಿ, ಕಟಿಂಗ್ ಶಾಪು ಮತ್ತು ಎಲ್ಲರ ನೆಚ್ಚಿನ ಹೋಟೆಲ್ಲು... ಯಾರು ಯಾರಿಗೆ ಬೇಕು  ಯಾರು ಯಾರಿಗೆ ಬೇಡ? ಹೀಗಿರುವಾಗ ಆ ಒಂದು ಕರಾಳ ದಿನವೂ ಬಂದೇ ಬಿಟ್ಟಿತು.

ಸುಮಾರು ಐದಾರು ಕಾರುಗಳಲ್ಲಿ ಬಂದಿಳಿದ ದಾಂಡಿಗರು, ಹೊಟೇಲಿನ ಕಡೆಗೆ ಧಾವಿಸಿದರು. ಇವರೆಲ್ಲ ಗುಂಪಾಗಿ ಒಟ್ಟಿಗೆ ಬಂದ ರಭಸವನ್ನು ಕಂಡು, ಗಲ್ಲಾ ಪೆಟ್ಟಿಗೆ ಮುಂದೆ ಕುಳಿತಿದ್ದ ಕೊಟ್ರೇಶಿ, ’ಪರವಾಗಿಲ್ಲ ಇವತ್ತು ಜನ ಮುಂಜಾನೆ ಹನ್ನೊಂದೂವರೆಗೇ ಊಟಕ್ಕೆ ಬರೋಕೆ ಶುರು ಮಾಡಿದ್ದಾರೆ...’ ಎಂದು ಕಣ್ಣರಳಿಸಿ ನೋಡುತ್ತಿರುವ ಹೊತ್ತಿಗೆ ಅದೇನೇನೋ ಮಾತುಗಳು ಕೇಳ ತೊಡಗಿದವು. ಬಂದ ದಾಂಢಿಗರು ಗಡ್ಡ ಧಾರಿಗಳು, ಅದೆಲ್ಲೋ ದೂರದ ಪಂಜಾಬಿನ ಲೂಧಿಯಾನದವರಂತೆ... ಅವರಲ್ಲಿ ಕೆಲವರು ದಷ್ಟಪುಷ್ಟರೂ, ಕೈಗೆ ವಿಷ್ಣುವರ್ಧನ್ ಬಳೆ ಧರಿಸಿದವರೂ ಇದ್ದರು. ಇಂಗ್ಲೀಷು, ಹಿಂದಿಗಳಲ್ಲಿ ಮಾತನಾಡುತ್ತಿದ್ದ ಜನರು ಹೋಟೇಲಿನಲ್ಲಿ ಒಮ್ಮೆಲೇ ಕೋಲಾಹಲ ನಡೆಸತೊಡಗಿದರು. ಅವರ ಮಾತಿನ ಸಾರಾಂಶದಂತೆ ಸುಧಾ ಹೋಟ್ಲು ಜಾಗದ ಸಮೇತ ಮಾರಾಟವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೈಕ್ ಶೋ ರೂಮ್ ಆಗಿ ಪರಿವರ್ತನೆಗೊಳ್ಳಲಿದೆ. ಈ ಆಸ್ತಿಯ ವ್ಯಾಪಾರವನ್ನೆಲ್ಲ ಕೊಟ್ರೇಶಿಯ ಅಣ್ಣ, ಆನಂದನೇ ಬೆಂಗಳೂರಿನಲ್ಲಿ ಕುಳಿತು ಮಾಡಿದ್ದಾನಂತೆ. ಅವನ ಹೆಂಡತಿಗೂ ಕೊಟ್ರೇಶಿಗೂ ಅಷ್ಟಾಗಿ ಆಗಿ ಬರದಿದ್ದರಿಂದ ಅಣ್ಣ ತಮ್ಮಂದಿರಲ್ಲಿ ಯಾವೊಂದು ಬಾಂಧವ್ಯವೂ ಉಳಿಯದೇ, ಕೊಟ್ರೇಶಿ ಈ ರೀತಿ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಸ್ಥಿತಿ ಬಂದೊದಗಿತಂತೆ.

ಈ ದಾಂಡಿಗರೆಲ್ಲ ಬಂದು ಬೆಂಚು-ಮೇಜುಗಳನ್ನು ಎಳೆದಾಡಿ ಒಂದು ಕಡೆಗೆ ಗುಂಪು ಹಾಕುವ ಹೊತ್ತಿಗೆ ಅಲ್ಲಿ ಕಣ್ಣೀರಿಡುವ ದೃಶ್ಯ ಭಟ್ಟರ ಹೆಂಡತಿಯದು...’ನಾನು ಸಾಯುವ ಮುಂಚೆ ಇಂತದ್ದನ್ನು ನೋಡಬೇಕಿತ್ತಾ? ದೇವರೇ, ನನ್ನನ್ಯಾಕೆ ಇನ್ನೂ ಜೀವಂತವಾಗಿಟ್ಟಿದ್ದೀಯ?’ ಎಂದು ಪ್ರಲಾಪಿಸಿ ಆರ್ತತೆಯಲ್ಲೂ ಇರುವಿಕೆಯನ್ನು ದೂರಿ, ಸುತ್ತಲಿನವರಿಂದ ಸಂತಾಪವನ್ನು ಗಳಿಸಿಕೊಳ್ಳುವುದರಲ್ಲೇನೋ ಶಕ್ತಳಾದ ಹೆಂಗಸು, ತನ್ನ ಹೋಟಲನ್ನು ಉಳಿಸಿಕೊಳ್ಳಲು ಅಸಹಾಯಕಳಾಗೇ ಕಂಡಳು.

ಹೋಟೆಲಿನ ನೈಋತ್ಯ ಮೂಲೆಯಲ್ಲಿ ಇನ್ನೂ ಈಗಷ್ಟೆ ಕತ್ತರಿಸಿಟ್ಟ ಕೊತ್ತುಬರಿ ಸೊಪ್ಪು ಮತ್ತು ಸಬ್ಸಿಗೆ ಸೊಪ್ಪುಗಳು ಚಟ್ಟಂಬಡೆಯಾಗಿ ಹೊರಬರುವ ಹುನ್ನಾರದಲ್ಲಿ ಕಲಿಸಿದ ಹಿಟ್ಟಿನೊಂದಿಗೆ ಒಡನಾಟವನ್ನು ಬೆಳೆಸುವ ಆಲೋಚನೆಯಲ್ಲಿದ್ದವು. ಗ್ಯಾಸ್ ಒಲೆಯ ಮೇಲೆ ದೊಡ್ಡ ಬಾಂಡಲೆಯೊಂದು ತನ್ನ ಹಿನ್ನೆಲೆಯನ್ನು ಕೆನ್ನಾಲಗೆಗಳಿಗೆ ಒಡ್ಡಿಕೊಂಡಿದ್ದರೂ ಶಾಂತ ಚಿತ್ತನಾಗಿ ತನ್ನೊಳಗೆ ಹುದುಕಿಕೊಂಡಿದ್ದ ಎಣ್ಣೆಯೊಳಗೆ ಒಂದು ಗುಳ್ಳೆಯೂ ಬಾರದಂತೆ ನೋಡಿಕೊಂಡಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಒಕ್ಕರಿಸುವ ಹಸಿದ ಗ್ರಾಹಕರ ದಣಿವಾರಿಸಲು ಎಲ್ಲ ಸ್ಟೀಲಿನ ನೀರಿನ ಜಗ್ಗುಗಳೂ ತಮ್ಮೊಳಗೆ ತುಂಬಿಕೊಂಡಿದ್ದ ನೀರಿನ ಅಂತರಂಗದ ಶಕ್ತಿಯ ಫಲದಿಂದ ತಮ್ಮ ಹೊರ ಮೇಲ್ಮೈಯಲ್ಲಿಯೂ ಸಣ್ಣ ನೀರಿನ ಹನಿಗಳನ್ನು ಪ್ರಚುರ ಪಡಿಸತೊಡಗಿದ್ದವು.  ಮೇಲೆ ಇದ್ದ ಕರಿ ಬಣ್ಣದ ಮಂಗಳೂರು ಹಂಚಿನ ಸೂರಿನ ನಡುವೆ ಒಂದೇ ಒಂದು ಅಡ್ಡ ಪಟ್ಟಿಯ ಸಹವಾಸಕ್ಕೆ ಅಂಟಿಕೊಂಡಿದ್ದ ಫ಼್ಯಾನು, ತಾನು ನಿಧಾನವಾಗಿ ತಿರುಗುತ್ತ, ಗಾಳಿ ಬೀಸುವುದಿರಲಿ, ತನ್ನ ಸುತ್ತಲಿನ ಜೇಡರ ಬಲೆಗಳಿಗೆ, ’ಹತ್ತಿರ ಬಂದೀರಿ ಜೋಕೆ!’ ಎಂದು ಸೂಚನೆ ನೀಡುತ್ತಿದ್ದಂತಿತ್ತು.

ಹೊಟ್ಟೆ, ಮೈ-ಕೈ ತುಂಬಿ ಕೊಂಡ ದಾಂಡಿಗರಿಗೆ ಹಸಿದವರ ಸಂಕಟಗಳು ಅರ್ಥವಾಗುವುದಾದರೂ ಹೇಗೆ? 'ಇವತ್ತಿನಿಂದ ಹೋಟೆಲ್ ಬಂದ್!' ಎಂದು ದೊಡ್ಡ ದರ್ಪದ ಧ್ವನಿಯಲ್ಲಿ ಹೇಳಿ ಬಿಟ್ಟರೆ ಸಾಕೆ? ಒಂದು ಊರಿನ ಹೃದಯ ಭಾಗದಲ್ಲಿ ಮೂರು ತಲೆಮಾರುಗಳಿಂದ ಜನರನ್ನು ಸಂತೈಸಿಕೊಂಡು ಬಂದ ಅನ್ನಪೂರ್ಣೇಶ್ವರಿಯ ಅಪರಾವತಾರ ಸುಧಾ ಹೋಟೇಲಿನ ಆಂತರ್ಯದ ಆಳ ಕೇವಲ ಇಷ್ಟೆಯೇ?

ಈಗಾಗಲೇ ಮಧ್ಯಾಹ್ನದ ಊಟದ ಹೊತ್ತಾಗುತ್ತಿದ್ದರಿಂದ, ಕೊಟ್ರೇಶಿ ತನ್ನ ಹರುಕು ಮುರುಕು ಹಿಂದಿಯಲ್ಲಿ ಒಳ ನುಗ್ಗಿದ ದಾಂಡಿಗರಿಗೆ ಒಂದೆರಡು ಗಂಟೆ ಸಮಯಾವಕಾಶಕ್ಕಾಗಿ ಕಾಡಿ ಬೇಡಿದ ಮೇಲೆ, ಅವರು ಒಪ್ಪಿಕೊಂಡರು. ಬಂದ ಜನರೆಲ್ಲ ಮುಗಿ ಬಿದ್ದು ಊಟ ಮಾಡುವುದರ ಜೊತೆಗೆ, ಇನ್ನು ನಾಳೆಯಿಂದ ಎಲ್ಲಿಗೆ ಹೋಗೋದು ಎಂದು ಯೋಚಿಸ ತೊಡಗಿದರು. ಸರ್ಕಲ್ಲಿನಲ್ಲಿ ಹೊಸದಾಗಿ ಸಂಜೆಗೆ ಸೇರಿಕೊಂಡ ಪಾನೀಪೂರಿ ತಳ್ಳುಗಾಡಿಗಳಿಂದ ಎಂದಾದರೂ ಹೊಟ್ಟೆ ತುಂಬುವುದುಂಟೇ? ಒಂದು ವೇಳೆ ಹೊಟ್ಟೆ ತುಂಬಿದರೂ, ಅಮ್ಮನ ಕೈ ರುಚಿಯ ಅಡುಗೆ ಎಂದಾದರೂ ಸಿಗುವುದೇ? "ಛೇ, ಈ ಊರಿಗೆ ಈ ರೀತಿ ಕಲಿಗಾಲ ಬರಬಾರದಿತ್ತಪ್ಪಾ...’ ಎಂದು ಎಲ್ಲರೂ ಮಮ್ಮಲ ಮರುಗುವವರೇ!

***

ಇನ್ನೇನು ಮಧ್ಯಾಹ್ನದ ಊಟವಾದರೂ ಬಂದ ಜನ ಹೋಗಲೊಲ್ಲರು. ಇಷ್ಟರಲ್ಲೇ ಒಂದಿಷ್ಟು ಮಂದಿ ಊರಿನ ಹಿರಿಯರಾದ ಜರ್ಮಲೆ ಚಂದ್ರಣ್ಣನವರನ್ನು ಕರೆತಂದರು. ಕೊಟ್ರೇಶಿ ತನ್ನ ಪೋನಿನಿಂದ ತನ್ನ ಅಣ್ಣ ಆನಂದನಿಗೆ ಡಯಲ್ ಮಾಡಿ, ಚಂದ್ರಣ್ಣನಿಗೆ ಫೋನು ಕೊಟ್ಟ. ಚಂದ್ರಣ್ಣ ಅದ್ಯಾವ ಕಾರಣಕ್ಕೆ ಸ್ಫೀಕರಿನಲ್ಲಿ ಹಾಕಿದರೋ ಗೊತ್ತಿಲ್ಲ,... ಆ ಕಡೆಯಿಂದ ಆನಂದ, "ಚಂದ್ರಣ್ಣಾ... ನೀವು ಊರಿಗೆ ದೊಡ್ಡ ಮನುಷ್ಯರು... ನಾನು ನಿಮ್ಮ ಉಸಾಬರಿಗೆ ಬರಲ್ಲ... ನಿಮ್ಮ ಮೇಲಿನ ಗೌರವದಿಂದ ಹೇಳ್ತೀನಿ, ನಾನು ನನ್ನ ಹೆಸರಿನಲ್ಲಿರೋ ಪ್ರಾಪರ್ಟಿ ಯಾರಿಗಾದ್ರೂ ಮಾರ್ತೀನಿ, ಹೆಂಗಾದರೂ ಇರ್ತೀನಿ... ನಿಮ್ಮ ಕೆಲ್ಸ ನೀವ್ ನೋಡೋದು ಒಳ್ಳೇದು..." ಎಂದು, ಚಂದ್ರಣ್ಣನ ಮಾತೂ ಕೇಳದೇ ಆ ಕಡೆ ಫ಼ೋನು ಇಟ್ಟುಬಿಟ್ಟ. ಕೆಟ್ಟು ಪಟ್ಟಣ ಸೇರು ಅಂತಾರೆ ನಿಜ. ಆದರೆ, ಒಳ್ಳೆಯವನಾಗೇ ಇದ್ದ ಆನಂದನಿಗೆ ಈ ನಮನಿ ದಾರ್ಷ್ಯ ಬರಬಾರದಾಗಿತ್ತು... ಎಂದು ಎಲ್ಲರೂ ಅಂದುಕೊಳ್ಳುವ ಹೊತ್ತಿಗೆ, ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡ ಮನಸ್ಥಿತಿ ಚಂದ್ರಣ್ಣನದಾಗಿತ್ತು. ಅವರ ಮುಂದೆ ಆಟಾಡಿಕೊಂಡು ಬೆಳೆದು, ದೂರದ ಬೆಂಗಳೂರಿನ ನೀರು ಕುಡಿದ ಆನಂದನೇ ಇಷ್ಟು ಮಾಡಿರುವಾಗ ಸುತ್ತಲಿನ ಹತ್ತು ಕೆರೆಗಳಿಂದ ನೀರು ಕುಡಿದ ಚಂದ್ರಣ್ಣ ಸುಮ್ಮನೆ ಇರುವುದಾದರೂ ಹೇಗೆ?!

ಊರಿಗೆ ಹಿರೀ ಜನ ಅಂತ ಇರ್ತಾರಲ್ಲ, ಅವ್ರದ್ದೂ ಒಂದು ಮಾತು ಅಂತ ಇರತ್ತೆ ಊರಲ್ಲಿ. ತಕ್ಷಣ ಚಂದ್ರಣ್ಣ, ಹತ್ತಿರದ ಪೋಲೀಸ್ ಸ್ಟೇಷನ್ನಿಗೆ ಫ಼ೋನ್‌ ಮಾಡಿ, ದಫ಼ೇದಾರರ ಹತ್ರ ಅವರ ಸಾಹೇಬ್ರು ಜೊತೆ ತಕ್ಷಣ ಬರಬೇಕು ಎಂದು ತಾಕೀತು ಮಾಡಿದರು. ನಂತರ ಅಲ್ಲಿಗೆ ದೌಡಾಯಿಸಿದ ಪೋಲೀಸರಿಗೆ, ’ನಾನು ಹೇಳುವವರೆಗೂ ಇಲ್ಲೇನೂ ಕದಲದಂತೆ ನೋಡಿಕೊಳ್ಳಿ’ ಎಂದು ಹುಕುಂ ಹಾಕಿ ಹೊರಟು ಹೋದರು.

***

ಒಂದು ರೀತಿ ಚಲನ ಚಿತ್ರ ನೋಡಿದ ರೀತಿಯಲ್ಲಿ, ಬೈಕ್ ಶೋ ರೂಮ್ ಆರಂಭವಾಗುವ ಸೂಚನಾ ಫಲಕಗಳೂ, ಬ್ಯಾನರ್‌ಗಳೂ, ಕಲರ್ ಪೇಪರ್‌ಗಳೂ ಇದ್ದಕ್ಕಿದ್ದ ಹಾಗೆ ಸದ್ದಡಗಿದಂತೆ ನಿಶ್ಶಬ್ಧಗೊಂಡವು. ಊರಿನ ಮಂಡಲ ಪ್ರಧಾನರೂ, ಹಲವು ರಾಜಕೀಯ ಮುಖಂಡರೂ, ಹೋಟೇಲಿನ ಮುಂದೆ ನಿಂತು ಹಿಂದಿಯಲ್ಲಿ, ಬಂದಿದ್ದ ದಾಂಡಿಗರಿಗೆ ಹುಕುಂ ಕೊಡಲು, ಅವರೆಲ್ಲ ಯಾವುದೋ ದೊಡ್ಡ ಕೋರ್ಟಿನಿಂದ ಸ್ಟೇ ಆರ್ಡರು ಬಂದಂತೆ ಸ್ತಬ್ಧವಾಗಿ, ಬಂದ ದಾರಿಗೆ ಹಿಂತಿರುಗಿದರು. ಊರಿನ ಆಸ್ತಿಯ ಒಂದು ಭಾಗವಾಗಿರುವ ಸುಧಾ ಹೋಟಲ್ಲನ್ನು ಸ್ಥಳಾಂತರ ಮತ್ತು ಸ್ಥಳ ಪಲ್ಲಟಗೊಳಿಸಲು ಯಾರೂ ಅಕ್ಕಪಕ್ಕದವರು ಒಪ್ಪದಿದ್ದರಿಂದ ಈಗಾಗಲೇ ಕೊನೇ ಹಂತದವರೆಗೆ ಬಂದ ಆಸ್ತಿಯ ಲೇವಾದೇವಿಯನ್ನು ರದ್ದುಗೊಳಿಸಿದಂತೆ ಪಂಚಾಯತಿಯವರು ಪರವಾನಗಿ ಹೊಡಿಸಿದರು. ಯಾರು ಏನೇ ಅಂದರೂ ಪಟ್ಟಣ ಪಂಚಾಯಿತಿಯ ಅನುಮತಿ ಇಲ್ಲದೇ ಯಾವ ಮಾರಾಟವೂ ಇತ್ಯರ್ಥಗೊಳ್ಳದ್ದರಿಂದ ಎಲ್ಲರೂ ನಿರುಮ್ಮಳರಾಗುವಂತಾಯಿತು.

ಕೊಟ್ರೇಶಿ ತನ್ನ ಕಾಯಕವನ್ನು ಹಾಗೇ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ... ಆದರೆ, ಇವತ್ತಿನವರೆಗೂ ಆನಂದನ ಪತ್ತೆ ಯಾರಿಗೂ ನಮ್ಮೂರಿನ ಸುತ್ತುಮುತ್ತಲೂ ಎಲ್ಲೂ ಆದಂತಿಲ್ಲ! ಅಮ್ಮ ಕಾಲದಲ್ಲಿ ಲೀನವಾಗೇನೋ ಇದ್ದಾರೆ, ಆದರೆ ಅಮ್ಮನ ಕೈ ರುಚಿ ಈಗ ಮುಂದಿನ ತಲೆಮಾರನ್ನೂ ತಬ್ಬಿಕೊಳ್ಳುತ್ತಿದೆಯಂತೆ.

Friday, February 02, 2024

ಟಗರು ಪಲ್ಯ: ಚಿತ್ರದ ಬಗ್ಗೆ ಅನಿಸಿಕೆ

ಹಳ್ಳಿಯ ಸೊಗಡಿರುವ ಸಿನಿಮಾ ಎಂದು ತಕ್ಷಣವೇ ಗೊತ್ತಾಗುವಷ್ಟು ಗಾಢತೆ ಈ ಸಿನಿಮಾದಲ್ಲಿದೆ.  ಹಳ್ಳಿಯ ಕುರಿತ ಸಿನಿಮಾಗಳಿಗೆ "ಕೋಳಿ ಎಸ್ರು" ಎನ್ನುವ ಹೆಸರು ಇದ್ದಾಗ ಅದು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ, ಇತ್ತ ಪೂರ್ಣವಾಗಿ ಇಂಗ್ಲೀಷೂ ಅಲ್ಲದ, ಅತ್ತ ಕನ್ನಡವೂ ಅಲ್ಲದ - ಟಗರು ಪಲ್ಯ - ಎನ್ನುವ ಹೆಸರು ಅದೇಕೋ ಅಷ್ಟೊಂದು ಸೂಕ್ತ ಎನಿಸುವುದಿಲ್ಲ. ಮಟನ್ ಚಾಪ್ಸ್ ಅನ್ನೋದನ್ನ ನೇರವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ ಹಾಗಿದೆ. ತರಕಾರಿ ಪಲ್ಯಕ್ಕೆ ಹೊಂದಿಕೊಳ್ಳುವ ಹಾಗೆ, ಕುರಿ-ಕೋಳಿಗಳು ಹೊಂದಿಕೊಳ್ಳಬಹುದೇನೋ, ಆದರೆ ಟಗರು ಪದ ಹೊಂದಿಕೊಳ್ಳುವುದು ಅಸಹಜವಾಗಿ ಕಂಡುಬರುತ್ತದೆ.



ಒಂದು ಹಳ್ಳಿಯ ಮನೆ, ಮನೆಯ ಮುಂದಿನ ಕಟ್ಟೆಯ ಸುತ್ತ ನಡೆಯುವ ಒಂದೆರಡು ದೃಶ್ಯಗಳನ್ನು ಬಿಟ್ಟರೆ, ಉಳಿದ ಕಥೆ ಒಂದೇ ಒಂದು ಹೊರಾಂಗಣದಲ್ಲಿ ನಡೆಯುತ್ತದೆ. ಮಿತವಾದ ಪಾತ್ರಧಾರಿಗಳು. ಅದರಲೂ ಕಥಾ ನಾಯಕಿ ಮತ್ತು ನಾಯಕ ಇಬ್ಬರೂ ಹೊಸಬರು. ಇದುವರೆಗೆ ಹಾಸ್ಯಭರಿತ ಪಾತ್ರದಲ್ಲಿ ಸಹ ಕಲಾವಿದನಾಗಿದ್ದ ನಾಗಭೂಷಣ್ ಅವರು ಇಲ್ಲಿ ನಾಯಕನಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲಿಯೂ ಅವರು ಆ ಸ್ಥಳೀಯ ಭಾಷೆಯ ಸೂಕ್ಷ್ಮತೆಯನ್ನು ಗಮನಿಸಿ ಅದರಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಸಿನಿಮಾದ ಚಿತ್ರಕತೆಯನ್ನು ಬರೆಯುವುದು, ಅದನ್ನ ಮನನ ಮಾಡಿಕೊಂಡು ಅಲ್ಲಿನ ನೇಟಿವ್ ಭಾಷೆಗೆ ನ್ಯಾಯ ಒದಗಿಸಿ, ಜೊತೆಗೆ ತಮ್ಮ ಭಾವನೆಗಳನ್ನೂ ಪ್ರಕಟಿಸುವುದು ಅಷ್ಟೊಂದು ಸುಲಭದ ವಿಷಯವಲ್ಲ. ಈ ನಿಟ್ಟಿನಲ್ಲಿ ನಾಗಭೂಷಣ್ ಅವರ ಪಾತ್ರ ಸರಳ ಮತ್ತು ಭಿನ್ನವಾಗಿ ನೆನಪಿನಲ್ಲುಳಿಯುತ್ತದೆ.

ಕಥಾನಾಯಕಿ, ಅಮೃತಾಪ್ರೇಮ್ ಮೊದ ಮೊದಲು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆಯದಿದ್ದರೂ, ಅಂತಿಮ ಹಂತದಲ್ಲಿ ಅವರು ಈ ಚಿತ್ರದಲ್ಲಿ ನಟಿಸಲು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ. ಹೊರಾಂಗಣದಲ್ಲಿ, ಅದೂ ತಮ್ಮ ಮೊದಲ ಚಿತ್ರದಲ್ಲಿ ಭಾಷೆ-ಭಾವನೆಗಳ ಅಭಿವ್ಯಕ್ತಿಯ ಮೂಲಕ ಎಲ್ಲರ ಕಣ್ಣಂಚಿನಲ್ಲಿ ನೀರೂರುವ ಸಾಹಸವನ್ನು ನಿರ್ದೇಶಕ ಉಮೇಶ್ ಅವರು ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಹಾವ-ಭಾವಗಳಿಂದ ಇಷ್ಟವಾಗುವ ಅಮೃತಾ, ಇನ್ನೂ ನಟನೆಯಲ್ಲಿ ಚೆನ್ನಾಗಿ ಪಳಗಬೇಕು, ಆದರೆ ಈ ಚಿತ್ರ ಅವರಿಗೊಂದು ಸವಾಲಾಗಿದ್ದು, ಆ ಸವಾಲಿನಲ್ಲಿ ಗೆದ್ದಿದ್ದಾರೆ ಎನ್ನಬಹುದು.

ರಂಗಾಯಣ ರಘು ಮತ್ತು ತಾರಾ ಅವರ ಪಾತ್ರ ಮತ್ತು ಅಭಿನಯದ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಇಲ್ಲ. ಇಬ್ಬರೂ ನುರಿತ ಕಲಾವಿದರು, ತಮಗೆ ಪಾತ್ರ ಮತ್ತು ಜವಾಬ್ದಾರಿಯನ್ನು ನಿರೀಕ್ಷೆಗಿಂತಲೂ ಹೆಚ್ಚು ಚೆನ್ನಾಗಿ ನಡೆಸಿಕೊಟ್ಟಿದ್ದಾರೆ. ಚಿತ್ರದಲ್ಲಿ ಸ್ವಲ್ಪವೂ ಸಾಮಾನ್ಯ ಜ್ಞಾನವಿರದಂತೆ ಚಿತ್ರಿಸಿದ ವಾಸುಕಿ ವೈಭವ್ ಅವರ ಟೆಕ್ಕಿ ಪಾತ್ರ ಕಿರಿಕಿರಿ ಮಾಡುತ್ತದೆ. ಕುರಿ ಹಿಕ್ಕೆಗೂ ಕಡಲೇಬೀಜಕ್ಕೂ ವ್ಯತ್ಯಾಸಗೊತ್ತಿರದ ಟೆಕ್ಕಿಗಳನ್ನು ತೋರಿಸುವ ನಿರ್ದೇಶಕರಿಗೆ, ಟೆಕ್ಕಿಗಳ ಮೇಲೆ ಹಗೆ ತೀರಿಸಿಕೊಂಡಂತಾಗಿರಬೇಕು. ಇನ್ನು, ಸಂಗೀತ ನೀಡುವ ವಾಸುಕಿ ಅವರನ್ನು ಒತ್ತಾಯಪೂರ್ವಕವಾಗಿ ನಟನೆಗೆ ದೂಡಿದ್ದಾರೆನೋ ಎಂಬ ಸಂಶಯವೂ ಮೂಡುತ್ತದೆ.

ಟೈಟಲ್ ಸಾಂಗ್‌ನಲ್ಲಿ ಅನಗತ್ಯವಾಗಿ "ಟಗರುಪಲ್ಯ"ವನ್ನು ತುರುಕಿರದಿದ್ದರೆ, ಒಂದು ಹಳ್ಳಿಯಗಾಥೆಯಾಗಿ ನೆನಪಿನಲ್ಲುಳಿಯುತ್ತಿತ್ತೇನೋ. ಆದರೆ, ಚಿತ್ರದುದ್ದಕ್ಕೂ ಸಂಗೀತ ಎಷ್ಟು ಪೇಲವವಾಗಿದೆಯೋ, ಹಾಡುಗಳೂ ಹಾಗೇ ಇವೆ. ಒಂದೇ ಸ್ಥಳದಲ್ಲಿ ನಡೆದದ್ದನ್ನು ಚಿತ್ರೀಕರಿಸಲು ಛಾಯಾಗ್ರಾಹಕರೇನು ಹೆಚ್ಚು ಕಷ್ಟಪಟ್ಟಂತಿಲ್ಲ, ಇದ್ದುದರಲ್ಲಿ ತಮಗೆ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದು. ಇನ್ನು ಪೋಷಕ ಪಾತ್ರಗಳಲ್ಲಿ ಬಿರಾದಾರ್ ನಟನೆ ಎದ್ದು ಕಾಣುತ್ತದೆ. ತಮಗೆ ಸಹಜವಲ್ಲದ ಭಾಷೆಯಲ್ಲೂ ಪರಿಪಕ್ವತೆಯನ್ನು ಕಂಡು, ದೊಡ್ಡಪ್ಪನಾಗಿ ನಟಿಸುವ ಅವರ ನಿಲುವು ಇಷ್ಟವಾಗುತ್ತದೆ.  ಇನ್ನು ಹಾಸ್ಯದ ಹೆಸರಿನಲ್ಲಿ ಹೆಂಡ, ಹೆಂಡದ ಮತ್ತಿನಲ್ಲಿ ಹಾಸ್ಯ ಸ್ವಲ್ಪ ಅತಿ ಎನ್ನಿಸಿದರೂ, ಇಂದಿನ ಗ್ರಾಮೀಣ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸರಿಯಾಗಿವೆ. ಪೂಜಾರಪ್ಪನ ಪಾತ್ರ, ಬೆಂಗಳೂರಿನ ಸಂಬಂಧಿಕರ ಪಾತ್ರಗಳು, ಸ್ಥಳೀಯ ರೈತಾಪಿ ವರ್ಗದ ಭಕ್ತರ ಪಾತ್ರಗಳು ಎಲ್ಲವೂ ಚೆನ್ನಾಗಿ ಹೊಂದಿಕೊಂಡಿವೆ.

ಕಡಿಮೆ ಬಜೆಟ್ಟಿನಲ್ಲಿ ಮಾಡಿ ಸಂಪೂರ್ಣ ಚಿತ್ರವನ್ನು ನಿರ್ಮಿಸಿದ ತಂಡ, ಈ ಚಿತ್ರ ಬಿಡುಗಡೆಯಾಗಿ ಕರ್ನಾಟಕದುದ್ದಗಲಕ್ಕೂ ಎಲ್ಲ ಕಡೆ ನಡೆಯುತ್ತದೆ ಎಂದು ಅಂದುಕೊಂಡರೆ ಕಷ್ಟ. ಇದು, ಗ್ರಾಮೀಣ ಸೊಗಡಿನ ಚಿತ್ರ. ಅದರಲ್ಲೂ ಒಂದು ತಾಲೂಕಿನ ಭಾಷೆ, ಅದರ ಕ್ಲಿಷ್ಟತೆಯನ್ನು ಅರಗಿಸಿಕೊಂಡಿರುವುದರಿಂದ ಆ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗುವುದೇನೋ ಎನ್ನುವ ಅನುಮಾನ ಮೂಡುತ್ತದೆ. ಹಾಗೆಯೇ, ಬಿಡುಗಡೆಯಾಗಿ, ಒಂದು ವಾರದಲ್ಲೇ ಮೂಡಿಮರೆಯಾಗುವ ಚಿತ್ರಕ್ಕೆ ಇಷ್ಟೊಂದು ಕಷ್ಟಪಡಬೇಕಿತ್ತೇನೋ ಎಂದು ಬೇಸರವೂ ಆಗುತ್ತದೆ. ಈ ಚಿತ್ರವನ್ನು ನಾಟವನ್ನಾಗಿ ಮಾಡಿ ಸಂಬಂಧಪಟ್ಟ ಗ್ರಾಮೀಣ ಭಾಗಗಳಲ್ಲಿ ಪ್ರದರ್ಶಿಸಿದ್ದರೆ ಹೇಗಿರುತ್ತಿತ್ತು, ಅದರಿಂದ ಹೆಚ್ಚಿನ ಪರಿಣಾಮವೇನಾದರೂ ಆಗುತ್ತಿತ್ತೇನೋ ಎಂದು ಯೋಚಿಸಬಹುದು.

ಮುಖ್ಯವಾಗಿ ಕಥೆ ಸಾರುವ ಸಂದೇಶ ಸರಳವಾದುದು. ಹಾಗಿದ್ದಾಗ, ಈ ಚಿತ್ರದ ಸ್ವಾರಸ್ಯ ಮತ್ತು ಶಕ್ತಿ ಎಲ್ಲವೂ ಚಿತ್ರಕತೆ ಮತ್ತು ಅದರ ಭಾಷ್ಯದಲ್ಲಿಯೇ ಇದೆ ಎಂದರೆ ತಪ್ಪಾಗಲಾರದು. ಸದಾ ತಮಗೆ ಗೊತ್ತಿರದ ಸುಖದ ಸಂಪತ್ತಿನ ಮರೀಚಿಕೆಯನ್ನು ಅರಸಿ, ತಮಗೆ ಗೊತ್ತಿರದ ದೂರದ ಬೆಂಗಳೂರಿನ ಗಂಡುಗಳೇ ಬೇಕು ಎಂದು ಪೋಷಕರಿಗೆ ಗಂಟುಬೀಳುವ ಮದುವೆಗೆ ಬಂದ ಹೆಣ್ಣುಮಕ್ಕಳು ಈ ಚಿತ್ರದ ದೆಸೆಯಿಂದಲಾದರೂ ಒಂದಿಷ್ಟು ಪಾಠಗಳನ್ನು ಕಲಿತರೆ ಒಳ್ಳೆಯದು. ತಮ್ಮ ನೆರೆಹೊರೆಯಲ್ಲಿ ತಮ್ಮ ನಿಲುವು-ಅಂತಸ್ತಿಗೆ ತಕ್ಕಂತೆ ಇರುವುದನ್ನು ಆಯ್ದುಕೊಳ್ಳುವುದರ ಮೂಲಕ ಸಹಜವಾಗಿ ಬದುಕಬೇಕು ಎನ್ನುವುದು ಈ ಚಿತ್ರದ ಆಶಯ. ಚಿತ್ರದ ಕೊನೆಯಲ್ಲಿ ಬರುವ ಮಾತು, "...ನೋಡಿ ಮಾಡಿ ಹೆಣ್ ಕೊಡಿ, ಸಂಬಧಗಳಿಗೆ ಬೆಲೆ ಕೊಡಿ..." ಎನ್ನುವುದು ಅಕ್ಷರಶಃ ಸತ್ಯವಾದುದು. ಚಿತ್ರದ ಕೊನೆಯಲ್ಲಿ ತೋರಿಸುವ ಕಲಾವಿದರ ಕುಟುಂಬಗಳ ಗ್ರೂಪ್ ಫ಼ೋಟೋಗಳು, ಹಿನ್ನೆಲೆಯ ಹಾಡಿನ ಆಶಯ ಕುಟುಂಬ ಪ್ರೇಮವನ್ನು ಎತ್ತಿ ತೋರುತ್ತದೆ, ಹಾಗೂ ಕುಟುಂಬಗಳ ಅಗತ್ಯವನ್ನು ಎತ್ತಿ ಹಿಡಿಯುತ್ತವೆ.  ಇಂದಿನ ಒಬ್ಬಂಟಿ ತನದ ಏಕತಾನದ ಪ್ರಪಂಚದಲ್ಲಿ ತಮ್ಮನ್ನು ತಾವೇ ಕಳೆದುಕೊಂಡಿರುವ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಹಾಡು ಛಾಟಿಯ ಏಟಿನಂತೆ ಹೊಡೆಯಬಲ್ಲದು ಕೂಡ.

ಇನ್ನು ಚಿತ್ರ ನಿರ್ಮಾಪಕ ಡಾಲಿ ಧನಂಜಯ ಅವರು ಸಾಹಸ ಪ್ರಧಾನ ಚಿತ್ರಗಳಲ್ಲಿ ಹೀರೋ ಆಗಿ ಮಿಂಚಿ-ಮೆರೆಯುವ ಜೊತೆಗೇ ಈ ಗ್ರಾಮೀಣ ಕನ್ನಡ ಚಿತ್ರಕಥನಕ್ಕೆ ಪೋಷಣೆಯನ್ನು ನೀಡಿರುವುದು ಬಹಳ ದೊಡ್ಡ ವಿಚಾರ. ಈ ಕತೆಯನ್ನು ತೆರೆಯ ಮೇಲೆ ತಂದಿರುವುದರ ಮೂಲಕ, ಕನ್ನಡದಲ್ಲಿ ಒಂದು  ಕುಟುಂಬ ಪ್ರಧಾನ ಚಿತ್ರವನ್ನು ಬೆಂಬಲಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಜೊತೆಗೆ ಅವರು ಚಿತ್ರದ ಹಾಡುಗಳ ರಚನೆಯಲ್ಲೂ ತೊಡಗಿಕೊಂಡಿರುವುದು ಅವರೊಳಗಿನ ಕಲಾವಿದನ ಮನಸ್ಸಿನ ಸಂವೇದನೆಗಳಿಗೆ ಹಿಡಿದ ಕನ್ನಡಿಯಂತಿದೆ. ಹೀಗೆ ಒಂದೇ ದಿನದ ಕತೆಯನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ, ಅನೇಕ ಚಿತ್ರ ಮತ್ತು ಚಿತ್ರಣಗಳನ್ನು ಕಣ್ಣಿಗೆ ಕಟ್ಟಿ, ಹಳ್ಳಿಯ ನೇಟಿವ್ ಭಾಷೆಯ ಮಜಬೂತಾದ ಊಟವನ್ನು ಉಣಿಸಿ,  "...ಸಂಬಂಧ ಅನ್ನೋದು ದೊಡ್ದು ಕಣಾ..." ಎನ್ನುತ್ತಲೇ ಚಿತ್ರ ಕೊನೆಯಾಗುತ್ತದೆ.

Wednesday, January 31, 2024

ಕಾಡುವ ಹಾಡು: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಕಾಡುವ ಹಾಡು: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ (ಅನಂತ ಪ್ರಣಯ)

ಕವಿ: ದ.ರಾ. ಬೇಂದ್ರೆ

ಚಿತ್ರ: ಶರಪಂಜರ

ನಿರ್ದೇಶಕ: ಕಣಗಾಲ್ ಪುಟ್ಟಣ್ಣ

ಸಂಗೀತ: ವಿಜಯ ಭಾಸ್ಕರ್

ಗಾಯಕರು: ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ

ನಟನೆ: ಗಂಗಾಧರ್, ಕಲ್ಪನ

ಚಿತ್ರ ಬಿಡುಗಡೆಯಾದ ವರ್ಷ: 1971

ಚಿತ್ರಕತೆ, ಕಾದಂಬರಿ: ತ್ರಿವೇಣಿ

ಶರಪಂಜರ, ಕನ್ನಡದ ಒಂದು ಶ್ರೇಷ್ಠ ಸಿನಿಮಾಗಳಲ್ಲೊಂದು. ಕತೆ, ನಟ, ನಟಿ, ನಿರ್ದೇಶಕ, ಸಹ ನಟರು ಹೀಗೆ ಎಲ್ಲ ಕಾರಣಗಳಿಂದಲೂ ಮನಸ್ಸಿಗೆ ಹತ್ತಿರವಾಗುವ ಈ ಸಿನಿಮಾ, ಇದರ ಪ್ರತಿಯೊಂದು ಹಾಡುಗಳೂ ಕೂಡ ಕನ್ನಡಿಗರ ಮನದಲ್ಲಿ ಇಂದಿಗೂ ಗುನುಗುವಷ್ಟರ ಮಟ್ಟಿಗೆ ಪ್ರಸಿದ್ದಿಯನ್ನು ಪಡೆದಿವೆ. ಈ ಚಿತ್ರದಲ್ಲಿ ವಿಜಯ್ ಭಾಸ್ಕರ್ ಅವರ ಸಂಗೀತ, ಮತ್ತು ಪಿ.ಬಿ. ಶ್ರೀನಿವಾಸ್-ಪಿ. ಸುಶೀಲ ಅವರ ಗಾಯನವನ್ನು ನಾವು ಮರೆಯಲು ಸಾಧ್ಯವೇ ಇಲ್ಲ.

ಈ ವಿವರಣೆಯನ್ನು ಓದಿದ ಮೇಲೆ, ಕೇವಲ ಮೂರು ನಿಮಿಷ 33 ಸೆಕೆಂಡುಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲು ಆಗ ಅವರಿಗೆ ಅದೆಷ್ಟು ಕಷ್ಟವಾಗಿದ್ದಿರಬಹುದು ಎಂದು ಊಹಿಸಬಹುದು.


ಅನಂತ ಪ್ರಣಯ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ 

ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಜಿಸಿ ನಗೆಯಲಿ ಮೀಸುತಿದೆ|


ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು

ತಾನೇ ಸವಿಯನು ಸವಿಯುತಿದೆ|


ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸೆಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ

ಮರುಕದ ಧಾರೆಯ ಮಸೆಯಿಸಿತು|


ಅಕ್ಷಿನಿಮೀಲನ ಮಾಡದೆ ನಕ್ಷತ್ರದ

ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರದಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ|

****

ಹಾಡಿನ ಆರಂಭದಲ್ಲಿ ಸೂರ್ಯಾಸ್ತಮಾನದ ಚಿತ್ರಣ, ನಾಯಕಿ ಮತ್ತು ನಾಯಕ ಒಂದು ಬೆಟ್ಟದ ತುದಿಯಲ್ಲಿ ಕುಳಿತು ಮುಳುಗುತ್ತಿರುವ ಸೂರ್ಯನತ್ತ ಕೈ ಚಾಚಿಕೊಂಡು ಹಾಡುವರು:

"ಓಹೋಹೋ....ಓ ಓ ಓ..."

"ಆಹ ಹಹಾ...... ಆ ಆ ಆ..."


ಉತ್ತರಧ್ರುವದಿಂ ದಕ್ಷಿಣಧ್ರುವಕೂ ಚುಂಬಕ ಗಾಳಿಯು ಬೀಸುತಿದೆ

ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ!

ಹೀಗೇ ಹೇಳುತ್ತಾ ನಾಯಕಿ ತನ್ನ ಕೈಯನ್ನು ಅಲೆಗಳೋಪಾದಿಯಲ್ಲಿ ಆಡಿಸುತ್ತಾಳೆ. ಈ ಮೂರು ನಿಮಿಷಗಳ ಹಾಡಿನ ಚಿತ್ರಣವನ್ನು ಯಾವ ಯಾವ ರೀತಿಯಲ್ಲಿ ಮಾಡಬಹುದಿತ್ತು ಎನ್ನುವುದನ್ನು ತಂತ್ರಜ್ಞ್ನರಿಗೆ ಬಿಟ್ಟರೆ, ಐವತ್ತು ವರ್ಷಗಳಿಗಿಂತ ಮೊದಲು ತಮ್ಮಲ್ಲಿರುವ ಕ್ಯಾಮರಾಗಳನ್ನು ಬಳಸಿ ಒಂದು ಸುಂದರವಾದ ರಸಕಾವ್ಯವನ್ನು ಕಟ್ಟಲು ಪ್ರಯತ್ನಿಸಿದ್ದಾರೆ ಎನ್ನಬಹುದು. ಸೂರ್ಯಾಸ್ತಮಾನದಿಂದ ಆರಂಭವಾಗಿ ಸೂರ್ಯಾಸ್ತಮಾನದಲ್ಲಿ ಕೊನೆಯಾಗುವ ಹಾಡು, ತನ್ನೊಡಲಾಳದಲ್ಲಿ ಅದೇನೋ ರಹಸ್ಯವನ್ನು ಬಚ್ಚಿಟ್ಟುಕೊಂಡ ಅನುಭವವಾಗುತ್ತದೆ!


"ಅನಂತ ಪ್ರಣಯ"ದ ಈ ಎರಡು ಸಾಲುಗಳಲ್ಲಿ ಕವಿ, ಸೂರ್ಯಮಂಡಲ, ಭೂಮಿ, ಸೌರವ್ಯೂಹ ಇವೆಲ್ಲದರ ಆಂತರಿಕ ಸತ್ಯವಾದ ಚುಂಬಕತೆ (magnetism) ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಪ್ರಣಯ ಎಂದುಕೊಳ್ಳಬಹುದು, ಆಕರ್ಷಣೆ ಎಂದು ಕೂಡ ಅಂದುಕೊಳ್ಳಬಹುದು. ಆದರೆ, ಚುಂಬಕತೆಯಲ್ಲಿ ಪರಸ್ಪರ ವಿರುದ್ಧ ಧ್ರುವಗಳು ಆಕರ್ಷಣೆಗೊಳಗಾಗುವುದು ಎಂದಿಗೂ ಸತ್ಯವಾದ ಅಂಶ. ಆದರೆ, ಈ ವೈಜ್ಞಾನಿಕ ಸತ್ಯವನ್ನ ಕವಿ ತನ್ನದೇ ಆದ ದಾರ್ಶನಿಕತೆಗೆ ಒಳಪಡಿಸಿ, ಸುಂದರವಾದ ಅನೇಕ ಉಪಮೆ-ಉಪಮಾನಗಳೊಂದಿಗೆ ಪ್ರಸ್ತುತ ಪಡಿಸುವುದೇ ಅನಂತ ಪ್ರಣಯ. ಈ ವ್ಯವಸ್ಥಿತವಾದ ಕಥನವನ್ನ ಅಷ್ಟೇ ಸುಂದರವಾಗಿ ಕಲ್ಪಿಸಿಕೊಂಡು ಚಿತ್ರದಲ್ಲಿ ಮೂಡಿಸಿರುವ ಹಿರಿಮೆ ನಟ-ನಟಿ-ನಿರ್ದೇಶಕರದ್ದು.  ಮೂಲ ಭಾವಗೀತೆಗೆ ಎಲ್ಲಿಯೂ ಚ್ಯುತಿ ಬರದೆ, ಕಷ್ಟವಾದ ಸಾಹಿತ್ಯವನ್ನ ಮನದಟ್ಟು ಮಾಡಿಕೊಂಡು ಹಾಡಿದ ಹಿರಿಮೆ ಗಾಯಕರದ್ದು.

ಭೂಮಿ ಮತ್ತು ಭೂಮಂಡಲ ವ್ಯವಸ್ಥೆಯಲ್ಲಿ ಕೇವಲ ಸೂರ್ಯನೊಬ್ಬನಷ್ಟೇ ಅಲ್ಲ, ಅಲ್ಲಿ ಚಂದ್ರನ ಪಾತ್ರವೂ ಇದೆ. ಭೂಮಿ-ಸೂರ್ಯ-ಚಂದ್ರರ ನಡುವೆ ಇರುವ ಬಾಂಧ್ಯವದ ಹಂಬಲವೇ ಮುಂದಿನ ಸಾಲು. 

ಸೂರ್ಯನ ಬಿಂಬಕೆ ಚಂದ್ರನ ಬಿಂಬವು ಎನ್ನುವಲ್ಲಿ ಚಂದ್ರನಿಗೆ ಸ್ವಯಂ ಪ್ರಕಾಶವಿಲ್ಲ ಚಂದ್ರನೇನೋ ಬಿಂಬಿಯಾಗಿದ್ದಾನೆ, ಆದರೂ ಸೂರ್ಯನನ್ನು ಬಿಂಬವೆಂದೇಕೆ ಕರೆದರು? ಇರಲಿ, ಇವರಿಬ್ಬರ ಬಿಂಬಗಳು ಒಬ್ಬರನೊಬ್ಬರು ರಂಬಿಸಿ (ರಮಿಸಿ, ಸಮಾಧಾನ ಪಡಿಸಿ, ಸಂತೈಸಿ) ನಗೆಯಲಿ ಮೀಸುತಿದೆ (ಸ್ನಾನ ಮಾಡಿಸು, ಮುಳುಗೇಳಿಸು).

ಸೂರ್ಯ-ಭೂಮಿಯರ ನಡುವಿನ ಅವಿನಾಭಾವ ಸಂಬಂಧ ಎಂದಿಗೂ ಇರುವುದೇ, ಆದರೆ, ಭೂಮಿಯ ಮೇಲಿನ ಚಂದ್ರನ ಹಂಬಲ ಹೇಗೆ ವಿಶೇಷವಾದದ್ದು, ಎನ್ನುವುದನ್ನು ಮುಂದಿನ ಸಾಲಿನಲ್ಲಿ ಕವಿ ವಿವರಿಸಿದ್ದಾರೆ:

ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು ತಾನೇ ಸವಿಯನು ಸವಿಯುತಿದೆ.

ಭೂರಂಗಕೆ, ಅಭಿಸಾರಕೆ (ಪ್ರಿಯರ ಭೇಟಿಗಾಗಿ ಸಂಕೇತ ಸ್ಥಾನಕ್ಕೆ ಹೋಗುವ ಕ್ರಿಯೆ) ಕರೆಯುತ ತಿಂಗಳು (ಚಂದ್ರ), ತಿಂಗಳು ನವೆಯುತ್ತಾನೆ (ಕ್ಷೀಣಿಸುತ್ತಾನೆ ಮತ್ತೆ ಮೈ ತುಂಬಿಕೊಳ್ಳುತ್ತಾನೆ). ತಾನು ಮೈ ತುಂಬಿಕೊಂಡಾಗ ತನ್ನನ್ನು ಭೂಮಿ ಸೇರಬಹುದು ಎಂದು ಆಸೆಯನ್ನು ತಿಂಗಳ ಬೆಳಕಿನ ಮೂಲಕ ವ್ಯಕ್ತಪಡಿಸುತ್ತಾನೆ. ಈ ರೀತಿಯಾದ ನವಿರಾದ ಆಲೋಚನೆಗಳನ್ನ ಪ್ರತಿ ತಿಂಗಳು ತುಂಬುತ, ತುಳುಕುತ, ತೀರುತ ತನ್ನೊಳಗೆ ತಾನೇ ಸವಿಯನ್ನು ಸವಿಯುತ್ತಿದ್ದಾನೆ. ತುಳುಕುವುದು ಎಂದರೆ, ಬಿಂದಿಗೆಯಲ್ಲಿರುವ ನೀರು ತುಳುಕುವ ಹಾಗೆ, ಈ ಚಂದ್ರನ ವರ್ತನೆಯಿಂದ (ಕ್ಷೀಣಿಸುವುದು ಮತ್ತು ಮೈ ತುಂಬಿಕೊಳ್ಳುವುದು), ಭೂಮಿಯ ಮೇಲಿನ ನೀರಿನಲ್ಲಿ ಅಲೆಗಳು ತುಂಬಿ ತುಳುಕುವ ಹಾಗಿರಬಹುದು.

ಚಂದ್ರನ ಪರಿಸ್ಥಿತಿ ತಿಂಗಳಿಗೊಮ್ಮೆ ಹೀಗಿರುವಾಗ, ಭೂಮಿಯ ಪರಿಸ್ಥಿತಿ ಹೇಗಿರಬಹುದು ನೋಡಿ (ಭೂಮಿಯ ಸಂಬಂಧ ಸೂರ್ಯನ ಜೊತೆಯೂ ಇದೆ ಎನ್ನುವುದು ನೆನಪಿನಲ್ಲಿರಲಿ):

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ ಮರುಕದ ಧಾರೆಯ ಮಸೆಯಿಸಿತು.

ಭೂಮಿಯ ಚಲನೆಯಲ್ಲಿ ಏನು ವ್ಯತ್ಯಾಸ. ಚಂದ್ರನಂತೆ ಭೂಮಿ ತಿಂಗಳಿಗೆರಡು ಬಾರಿ ಬದಲಾಗಲಾರಳು.  ಭೂಮಿಯ ಚಲನೆಯಿಂದಾಗಿ ಆರು ಋತುಗಳು ನಿರ್ಮಾಣಗೊಳ್ಳುತ್ತವೆ - ವಸಂತ, ಗ್ರೀಷ್ಮ, ವರ್ಷ, ಶರತಿ, ಹೇಮಂತ್ , ಮತ್ತು ಶಿಶಿರ.

ಭೂಮಿಯ ಮೇಲಿನ ವನ - ಭೂವನ, ಕುಸುಮಿಸಿ, ಹೂವಾಗಿ ಅರಳಿ, ಪುಲಕಿಸಿ, ಪುಲಕಗೊಂಡು, ಮರಳಿಸಿ - ಹೀಗೆ ಕೋಟ್ಯಾಂತರ ವರ್ಷಗಳಿಂದ ಈ ಪ್ರಕ್ರಿಯೆ ನಡೆದಿದೆ. ಇಲ್ಲಿ ಹೊಸೆಯಿಸಿ, ಎಂದರೆ ಹೊಸತನ ಪಡೆದು ಎಂದೂ, ತಮ್ಮೊಳಗೊಂದಾಗಿ ಹೊಸೆದು-ಬೆಸೆದುಕೊಂಡೂ ಎಂದೂ ಅರ್ಥ ಮಾಡಿಕೊಳ್ಳಬಹುದು. ಭೂಮಿಯ ಮೇಲಿನ ಈ ಬದಲಾವಣೆ ಎಲ್ಲವೂ ಸೂರ್ಯನ ಕಿರಣಗಳ ದಯೆಯಿಂದ ಆದದ್ದು. ಭೂಮಿ, ಸೂರ್ಯನಿಂದ ಎಷ್ಟು ದೂರದಲ್ಲಿ, ಯಾವ ಕೋನದಲ್ಲಿ ತಿರುಗುತ್ತಿದ್ದಾಳೆ ಎನ್ನುವುದರ ಮೇಲೆ ಇಲ್ಲಿನ ಎಲ್ಲ ಋತುಮಾನಗಳು ಆಗುವುದಲ್ಲವೇ?

ಆದರೆ, ಈ ಭೂಮಿಯ ಈ ಮಹತ್ತರವಾದ ಬದಲಾವಣೆಗೆ ಸೂರ್ಯನ ಅನಿಸಿಕೆ ಏನಿರಬಹುದು? ಮಿತ್ರನ (ಸೂರ್ಯ) ಮೈತ್ರಿಯ (ಕೂಡುವಿಕೆ, ಬಂಧನ), ಒಸಗೆ (ಸಂದೇಶ) ಮಸಗದಿದೆ (ಇನ್ನೂ ಕಳೆಗುಂದದಿರುವುದು), ಮರುಕದ (ಕರುಣೆಯ) ಧಾರೆಯನ್ನ (ನೀರು ಸುರಿಯುವುದು, ನೀರು ಎರೆದು ಕೊಡುವ ದಾನ, ಮದುವೆಯ ಒಂದು ವಿಧಿ) ಮಸೆಯಿಸಿತು (ಕಳೆಗುಂದದೇ ಇನ್ನೂ ಹೆಚ್ಚಾಗುತ್ತಲೇ ಇರುವುದು).

ಒಂದೊಂದು ಪದವನ್ನೂ ಸಹ ವ್ಯವಸ್ಥಿತವಾಗಿ ಪೋಣಿಸಿ ಒಂದು ಪ್ರಣಯದ ಎರಡು ಮುಖಗಳನ್ನು ಸಂಪೂರ್ಣವಾಗಿ ಚಿತ್ರಿಸಿಕೊಡುವ ಕವಿಯ ಜಾಣತನವನ್ನು ಇಲ್ಲಿ ಗುರುತಿಸಬಹುದು.

ಬೇಂದ್ರೆಯವರ ಒಂದು ಉಪಮೆ - ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು, ಹಕ್ಕಿಗಳಾ ಹಾಡು - ಇದನ್ನು ಮೂಡಲ ಮನೆಯ ಪದ್ಯವನ್ನು ಓದಿದವರಿಗೆ ನೆನಪಿರುತ್ತದೆ. ಈ ರೀತಿಯ ಉಪಮೆಯು, ಕನ್ನಡವನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿಯೂ ನೋಡಲು, ಕೇಳಲು ಸಿಗಲಾರದು ಎನ್ನುವುದು ನನ್ನ ನಂಬಿಕೆ. ಅಂತಹದೇ ಇನ್ನೊಂದು ಉಪಮೆ ಮುಂದಿನ ಚರಣದಲ್ಲಿ ನೋಡಿ:

ಅಕ್ಷಿನಿಮೀಲನ ಮಾಡದ ನಕ್ಷತ್ರದ ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರನಲಿ ಇಂದಿಗು ಮಿಲನದ ಚಿಹ್ನವು ತೋರದಿದೆ.

ಅಕ್ಷಿ ನಿಮೀಲನ ಮಾಡದ ನಕ್ಷತ್ರದ ಗಣ, ಅಕ್ಷಿ ನಿಮೀಲನ ಎಂದರೆ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿರುವುದು, ಎವೆಯಿಕ್ಕಿ ನೋಡುವುದು, ಆದರೆ, ನಡುವೆ ರೆಪ್ಪೆಗಳು ಪಟಪಟನೆ ಹೊಡೆದುಕೊಳ್ಳುವ ಹಾಗೆ, ನಕ್ಷತ್ರಗಳನ್ನ ನೋಡಿದ ಕವಿಗೆ ಹೀಗನ್ನಿಸಿತು. ಈ ಅನಂತ ಪ್ರಣಯದಲ್ಲಿ ಕೇವಲ ಭೂಮಿ, ಚಂದ್ರ, ಸೂರ್ಯರನ್ನು ಮಾತ್ರ ಉಲ್ಲೇಖಿಸಿದರೆ ಸಾಕೆ? ನಕ್ಷತ್ರಗಳೂ, ನಕ್ಷತ್ರಪುಂಜಗಳೂ ಬೇಕಲ್ಲ? ಅವುಗಳ ಗತಿಯೇನು? ಅವುಗಳ ಕತೆ ಏನು?

ಈ ಅನಂತ ಪ್ರಣಯಕ್ಕೆ ಸಾಕ್ಷಿಯಾಗಿ ದೇವತೆಗಳ ಗಣಗಳು ನಕ್ಷತ್ರಗಳಾಗಿ ತೋರುತ್ತಿರಬಹುದು. ಮಾಡದ (ಮಾಡದೇ ಇರುವ, ಮಾಡ ಎಂದರೆ ಛಾವಣಿ, ಛಾವಣಿ ಮೇಲಿರುವ) ನಕ್ಷತ್ರಗಳ ಗಣ (ಗುಂಪು) ಗಗನದಿ ಹಾರದಿದೆ (ಹಾರುತ್ತಿವೆ, ಹಾರದೆ ಇವೆ, ಹೂವಿನ ಹಾರದಂತೆ ತೋರುತ್ತಿವೆ). ಹೀಗೆ ಒಂದೊಂದು ಪದದಲ್ಲಿ ಎರಡೆರಡು ಅರ್ಥಗಳು ಬರುವಂತೆ ಇರುವ ಬಿಗಿಯಾದ ಹೆಣಿಗೆ ಇದು.  ಹೀಗಿರುವಾಗ ಬಿದಿಗೆಯ ಬಿಂಬ (ಚಂದ್ರನ ಸಣ್ಣ ಗೆರೆ, ಆದರೆ ಬಿದಿಗೆಯ ಚಂದ್ರ ಮುಂದೆ ದೊಡ್ಡದಾಗಿ ಬೆಳೆಯುವ ಆಸೆಯನ್ನು ಇಟ್ಟುಕೊಂಡವನು), ಇಂದಿಗೂ ತನ್ನ ಆಸೆಯನ್ನು ಜೀವಂತವಾಗಿ ಇಟ್ಟುಕೊಂಡವನು. ಈ ಬಿದಿಗೆಯ ಚಂದ್ರನ ಬಿಂಬ ಮಿಲನದ ಚಿಹ್ನೆ (ಸೂಚನೆ) ಯಾಗಿ ತೋರುತ್ತಿದೆ.

ಹೀಗೆ ಭೂಮಿ-ಚಂದ್ರ-ಸೂರ್ಯ-ನಕ್ಷತ್ರ ಗಣಗಳ ಸಮೇತ ನಡೆಯುತ್ತಿರುವ ಈ ನಿರಂತರ ಬದಲಾವಣೆಯೇ ಕವಿಯ ಕಲ್ಪನೆಯಲ್ಲಿ ಅನಂತ ಪ್ರಣಯವಾಗಿ ಕಂಡುಬಂದಿರುವುದು. ಪದದಿಂದ ಪದಕ್ಕೆ, ಅನೇಕ ಉಪಮೆ-ಉಪಮಾನಗಳ ಸಹಾಯದಿಂದ ಪರಿಸರದಲ್ಲಿನ ದೈನಿಕ-ಮಾಸಿಕ ಬದಲಾವಣೆಗಳನ್ನು ಎಷ್ಟು ಸೂಕ್ಷ್ಮವಾಗಿ ಸೆರೆಹಿಡಿದ್ದಾರೆಂದರೆ, ಈ ಕವನವನ್ನು ಮತ್ತೆ ಮತ್ತೆ ಓದಿದಂತೆಲ್ಲ ಹೆಚ್ಚು ಹೆಚ್ಚು ಕೋನಗಳಿಂದ ಅರ್ಥವಾಗುವುದು.

ಈ ಹಾಡನ್ನುಇಲ್ಲಿ ನೋಡಬಹುದು.

Sunday, January 14, 2024

ಸ್ವಾತಿ ಮುತ್ತಿನ ಮಳೆ ಹನಿಯೇ

ನಿನ್ನೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ನೋಡೋ ಅವಕಾಶ ಸಿಕ್ಕಿತು. ನಿಧಾನವಾಗಿ ಓಡುವ ಸಿನಿಮಾ, ಕೊನೆಯಲ್ಲಿ ದುರಂತದಲ್ಲಿ ಕೊನೆಗೊಳ್ಳುವ ಎಲ್ಲ ಮುನ್ನೆಚ್ಚರಿಕೆಗಳು ಸಿಕ್ಕಿದ್ದರೂ, ರಾಜ್ ಬಿ. ಶೆಟ್ಟಿಯಲ್ಲಿ ಒಬ್ಬ ಸಿನಿಮಾ ಕಥಾವಸ್ತುವನ್ನು ಸೂಕ್ಷ್ಮವಾಗಿ ಹೆಣೆಯುವ ಕಸಬುಗಾರಿಕೆಯ ಬರಹಗಾರನನ್ನು ಗುರುತಿಸುವ ನಾನು, ಒಂದು ಸುಂದರವಾದ ಕಥಾ ಹಂದರವನ್ನು ನಿರೀಕ್ಷೆಯಲ್ಲಿಟ್ಟುಕೊಂಡಿದ್ದೆ. ಆ ನಿರೀಕ್ಷೆ ಹುಸಿಯಾಗದಂತೆ ಆದದ್ದು ಈ ಸಿನಿಮಾದ ಹೆಚ್ಚುಗಾರಿಕೆ ಮತ್ತು ಅದರ ಗೆಲುವು ಕೂಡ.

ಕೋಟ್ಯಾಂತರ ರೂಪಾಯಿಗಳನ್ನು ಸುರಿದು ಒಂದು ಭವ್ಯವಾದ ಕಥನವನ್ನು ಹೆಣೆದು ಮೇಲೆದ್ದು ಬಂದು ಗೆದ್ದ ಚಿತ್ರಗಳು ಎಷ್ಟೋ, ಸೋತವುಗಳು ಕೂಡ ಅಷ್ಟೇ. ಈ ಎಲ್ಲ ವ್ಯಾವಹಾರಿಕ ಚಿತ್ರ ಪ್ರಪಂಚದಲ್ಲಿ ಅದೊಂದು ದುಡಿಮೆಯ ಮೂಲವಾಗಿ ಗೆದ್ದಾಗ ನಿರ್ಮಾತೃಗಳನ್ನು ಎತ್ತಿಕೊಂಡಾಡುವಷ್ಟೇ ಸಹಜವಾಗಿ, ಬಿದ್ದಾಗ ಹಣ ಹಾಕಿದವರು ಎಲ್ಲವನ್ನು ಕಳೆದುಕೊಳ್ಳುವುದು ಮಾಮೂಲು. ಆದರೆ, ಈ ಸಣ್ಣ ಬಜೆಟ್ಟಿನ ಚಿತ್ರಗಳಲ್ಲಿ ಹಾಗಲ್ಲ. ಇಲ್ಲಿ ಸೋಲು-ಗೆಲುವು, ಹಣ ಮಾಡಬೇಕು ಎನ್ನುವುದಕ್ಕಿಂತ ಮುಖ್ಯವಾಗಿ ನಿರ್ಮಾತೃಗಳಿಗೆ, ತಮ್ಮ ಮನದಾಳದಲ್ಲಿ ಸೂಕ್ಷ್ಮವಾಗಿ ಹುಟ್ಟಿ, ಕತೆಯಾಗಿ ಬೆಳೆದ ಕತೆಗಳ ಮುಖೇನ, ಒಂದು ಸಂದೇಶವನ್ನು ಸಾರುವುದು ಅವುಗಳ ಧ್ಯೇಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ, ಈ ಚಿತ್ರ, ರಾಜ್ ಶೆಟ್ಟಿ ಅವರ ಮನದ ಮೂಸೆಯಲ್ಲಿ ಕುದಿದ ಬಂಗಾರದಿಂದ ಮಾಡಿದ ಒಂದು ಸುಂದರವಾದ ಆಭರಣದಂತೆ ಕಂಡು ಬರುತ್ತದೆ.

ಈ ಚಿತ್ರದಲ್ಲಿ ಎಲ್ಲವೂ ನಿಧಾನವೇ. ಕಥಾನಾಯಕಿ ಪ್ರೇರಣ, ಅವಳ ನಡೆ-ನುಡಿ, ಆಡಿದರೆ ದುಡ್ಡು ಖರ್ಚಾಗುವುದೇನೋ ಎನ್ನುವಷ್ಟು ಕಡಿಮೆ ಮಾತುಗಳು. ಹಿನ್ನೆಲೆಯಲ್ಲಿ ಒಂದೇ ಒಂದು ಗುಂಗಿನ ಸಂಗೀತ, ಇವೆಲ್ಲವೂ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಲ್ಲದು. ನಮ್ಮ ವೃತ್ತಿ ಜೀವನದ ಏಳು-ಬೀಳುಗಳು ನಮ್ಮನ್ನು ಪ್ರಬುದ್ಧತೆಯ ವಿಭಿನ್ನ ನೆಲೆಗೆ ಕೊಂಡೊಯ್ಯುವ ಹಲವು ಅಂಶಗಳನ್ನು ಅಭಿವ್ಯಕ್ತಪಡಿಸುವಲ್ಲಿ, ನಾಯಕಿಯದ್ದು ಸಹಜವಾದ ಅಭಿನಯ. ತಮ್ಮ ಇಂಟ್ರೋಶಾಟ್ ಒಂದರಲ್ಲಿಯೇ, ’ಬುಲೆಟ್‌ನಲ್ಲಿ ಬಂದ ಪೇಶೆಂಟ್’ ಆಗಿ ರಾಜ್ ಅವರು ಚಿತ್ರದೊಳಗೆ ತಾವೇ ಒಂದಾಗಿ ಹೋಗಿದ್ದಾರೆ ಎನ್ನುವಷ್ಟು ತನ್ಮಯತೆಯನ್ನು ಪ್ರದರ್ಶಿಸಿದ್ದಾರೆ.

ಒಂದು ಮೊಟ್ಟೆಯ ಕಥೆಯಲ್ಲಿ ನೀವು ರಾಜ್ ಅವರನ್ನು ನೋಡಿದ್ದರೆ, ಇಲ್ಲಿ ಮತ್ತೆ ಆ ವ್ಯಕ್ತಿತ್ವವನ್ನು ಸಮತೋಲಿಸಿಕೊಳ್ಳಬಹುದು. ಚಿತ್ರದಲ್ಲಿ ನಾಯಕನ ಹೆಸರೇ, ಅನಿಕೇತ್, ಮನೆ ಇಲ್ಲದವ... ಅದೂ ಕೂಡ ಈ ಸಂದರ್ಭಕ್ಕೆ ಆತನಿಟ್ಟುಕೊಂಡ ಹೆಸರು ಎಂದು ಗೊತ್ತಾಗುತ್ತದೆ.

ಚಿತ್ರದುದ್ದಕ್ಕೂ ಅನೇಕ ರೂಪಕಗಳಿವೆ, ವಿಡಂಬನೆಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಅಷ್ಟೇ. ಕಸದಂತೆ ದಿನವಿಡೀ ಹೂವು ಉದುರಿಸುವ ನಂದಿಬಟ್ಟಲು ಗಿಡ, ಅದರೆ ಬಗ್ಗೆ ನಿಮ್ಮಇರುವ ನಿಮ್ಮ ಮನದೊಳಗಿನ ಪ್ರತಿಮೆಯನ್ನು ಈ ಸಿನಿಮಾ ಬದಲಾಯಿಸಬಲ್ಲದು. ಹಾಗೆಯೇ, ಹಾಲು ಹಾಕದ ಚಹಾ, ಬೀದಿ ನಾಯಿ ಹೇಗೆ ಸಾಯುತ್ತದೆ ಎನ್ನುವುದು, ಒಂದು ಕೊಳ/ಕೆರೆ ದಿನದ ವಿವಿಧ ಸಮಯದಲ್ಲಿ ಹೇಗಿರುತ್ತದೆ ಎನ್ನುವುದರ ಮೂಲಕ ನಿಮ್ಮ ಚಿಂತನಶೀಲತೆಗೆ ಇಲ್ಲಿ ಹಲವಾರು ವಸ್ತುಗಳು ಸಿಗುವುದಂತೂ ನಿಜ. ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ಬದುಕಿನ ಆಯಾ ಸಂದರ್ಭಕ್ಕೆ ಇರುವ ಕಷ್ಟದ ಸನ್ನಿವೇಶಗಳನ್ನ ವಾಷಿಂಗ್‌ಮೇಷೀನ್‌ನಲ್ಲಿ ಕೊಳೆ ಬಟ್ಟೆಗಳು ತಿರುವುದರ ಮೂಲಕವೂ ಒಂದು ಸಂದೇಶವನ್ನು ಹೇಗೆ ಹೇಳಬಹುದು ಎನ್ನುವುದು ಸಿನಿಮಾವನ್ನು ಹೇಗೆ ಮಾಡಬಹುದು ಎಂದು ಹಲವು ವಿದ್ಯಾರ್ಥಿಗಳಿಗೆ ಒಂದು ಡಾಕ್ಯುಮೆಂಟ್ ಕೂಡ ಆಗಬಲ್ಲದು.

ಸಿನಿಮಾದಲ್ಲಿ ಅಲ್ಲಲ್ಲಿ ಹೆಣ್ಣೆದ ಸಣ್ಣಪುಟ್ಟ ತಿರುವುಗಳು ಊಟಿಯ ಹೊರಾಂಗಣ ಚಿತ್ರೀಕರಣದಷ್ಟೇ ಸಹಜವಾಗಿ ನಿಮ್ಮನ್ನು ಕಾಡುತ್ತವೆ. ಸಿನಿಮಾದ ಎಲ್ಲ ಪಾತ್ರಗಳೂ ನಿಮ್ಮನ್ನು ಚಿಂತನೆಯ ಒರೆಗೆ ಹಚ್ಚುತ್ತವೆ ಎಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಪಾತ್ರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೆಂದರೆ, "ಅವನೇ ಶ್ರೀಮನ್ ನಾರಾಯಣ" ಚಿತ್ರದಲ್ಲಿ ಅಭೀರರ ದೊರೆಯಾಗಿ ಕಠೋರ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಬಾಲಾಜಿ ಮನೋಹರ್, ಈ ಚಿತ್ರದಲ್ಲಿ ಒಂದು ಹಾಸ್‌ಪಿಸ್ ಸೆಂಟರಿನ ಮುಖ್ಯ ಡಾಕ್ಟರ್‌ ಆಗಿ, ಪೇಷಂಟ್‌ಗಳಿಗೆ ಮಾದಕ ದ್ರವ್ಯಗಳ ದಾಸರಾಗುವಂತೆ ಮಾಡದಿರುವುದು ಸರಿ ಎಂಬ ನಿಲುವಿನಿಂದ ತಮ್ಮ ಬಿಗಿ ನಟನೆಯಿಂದ ಅವರಲ್ಲಿನ ಕಲಾವಿದನಿಗೆ ನ್ಯಾಯ ಒದಗಿಸಿದ್ದಾರೆ.

***

ಇತ್ತೀಚಿನ ನೂರು-ಸಾವಿರ ಕೋಟಿ ವ್ಯವಹಾರದ ಉದ್ಯಮದ ಬೆಂಬಲದಲ್ಲಿ ಹುಟ್ಟಿ ಮೂಡಿಬರುವ ಚಿತ್ರಗಳು ತಾಂತ್ರಿಕತೆ, ಸೆಟ್ ಮತ್ತು ವಿಜೃಂಬಣೆಯಲ್ಲಿ ಎಲ್ಲರ ಗಮನ ಸೆಳೆಯಬಲ್ಲವು. ಉದಾಹರಣೆಗೆ, ಕೆಜಿಎಫ಼್ ಚಿತ್ರದಲ್ಲಿ ಉಪಯೋಗಿಸುವ ಸುತ್ತಿಗೆ, ಚೈನು, ಧೂಳು ಮತ್ತಿತರ ವಸ್ತುಗಳು ಒಂದು ವ್ಯವಸ್ಥಿತವಾದ ಕ್ಯಾಮೆರಾ ಕಣ್ಣಿನಲ್ಲಿ ಅದ್ಭುತವಾಗಿ ಹೊರಹೊಮ್ಮ ಬಲ್ಲವು. ಆದರೆ, ಈ ಗ್ರ್ಯಾಂಡ್ ಕಥಾನಾಯಕರಂತೆ ಅದ್ಯಾವ ಅಗಮ್ಯವಾದ ಶಕ್ತಿಯನ್ನೂ ಹೊಂದಿರದ ಒಬ್ಬ ಸಾಮಾನ್ಯ ಮನುಷ್ಯನ ಚಿತ್ರದಲ್ಲಿ ತನ್ಮಯತೆಯನ್ನು ಕಾಣುವ ನಿರೂಪಣೆಯನ್ನು ಮಾಡಿ ನೂರು ನಿಮಿಷಗಳ ಕಮರ್ಶಿಯಲ್ ಸಿನಿಮಾದಲ್ಲೂ ಕಲಾತ್ಮಕತೆಯನ್ನು ಕಾಣುವುದು ಬಹಳ ಕಷ್ಟ.

ನೀವು ತರಾಸು ಅವರ ಕಾದಂಬರಿ ಆಧಾರಿತ "ಬೆಂಕಿಯಬಲೆ" ಸಿನಿಮಾವನ್ನು ನೋಡಿದ್ದರೆ, ಅಲ್ಲಿ ಅನಂತ್‌ನಾಗ್, ಲಕ್ಷ್ಮಿ, ಅಶ್ವಥ್, ತೂಗುದೀಪ ಶ್ರೀನಿವಾಸ್ ಅವರ ಪಾತ್ರಗಳ ಸಂವೇದನಾಶೀಲತೆಯನ್ನು ಅರ್ಥಮಾಡಿಕೊಂಡಿದ್ದರೆ, ರಾಜ್ ಬಿ. ಶೆಟ್ಟಿಯ ಈ ಸಿನಿಮಾ ನಿಮಗೆ ಇಷ್ಟವಾಗುತ್ತದೆ.

ಇದು ನನ್ನ ಅನಿಸಿಕೆ. ಹೆಚ್ಚಿನ ವಿವರಗಳಿಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ವಿಮರ್ಶೆಯನ್ನು ನೋಡಿ.

Thursday, November 30, 2023

ಸುಖ-ದುಃಖ

ಬಾಳಿನಲ್ಲಿ ಬರೋ ಸಂತೋಷದ ಕ್ಷಣಗಳೇ ಒಂದು ರೀತಿಯಲ್ಲಿ ಸೂಕ್ಷ್ಮವಾದವುಗಳು. ಈ ಸಂತೋಷವನ್ನ ಸುಖ, ಹರ್ಷ, ನಲಿವು, ಉಲ್ಲಾಸ, ಹಿಗ್ಗು, ಖುಷಿ, ಮೋಜು, ವಿನೋದ... ಮೊದಲಾದ ಸಮಾನಾರ್ಥಕ ಪದಗಳನ್ನು ಉಪಯೋಗಿಸಿ ಕರೆದರೂ ಅದೊಂದು ಅಗಮ್ಯವಾದ ಲೋಕವಾಗೇ ಉಳಿದುಬಿಡುತ್ತದೆ. ಸುಖದಲ್ಲಿ, ಕಷ್ಟ, ಕಾರ್ಪಣ್ಯ, ದುಃಖ, ನೋವುಗಳಿಲ್ಲ ಅನ್ನೋದರ ಜೊತೆಗೆ ಸುಖವೆಂದೂ ದಂಡಿಯಾಗಿ ಬುಟ್ಟಿಯಲ್ಲಿ ಮೊಗೆಯುವಷ್ಟು ಸಿಗುವುದಂತೂ ಅಲ್ಲವೇ ಅಲ್ಲ. ಅದು ಮಳೆಯ ದಿನಗಳಲ್ಲಿ ಬರುವ ಕೋಲ್ಮಿಂಚಿನ ಹಾಗೆ, ಹೀಗೆ ಬಂದು ಹಾಗೆ ಹೋಗುವುದು. ಎಷ್ಟೋ ಸಮಯ ಗೊತ್ತಾಗುವುದೂ ಇಲ್ಲ. ಅದರಲ್ಲಿಯೂ ಮೋಡ ಕವಿದ ಆಕಾಶವಿದ್ದರೆ ಮುಗಿದೇ ಹೋಯಿತು, ದೂರದಲ್ಲೆಲ್ಲೋ ಮಿಂಚಿ ಮಾಯವಾಗುವ ಮಾಯಾಂಗನೆಯ ಹಾಗೆ, ಅದು ಇದ್ದೂ ಇರಲೊಲ್ಲದು.


ಈ ಕಾರಣಗಳಿಂದಲೇ ಇರಬೇಕು, ಇಂಗ್ಲೀಷಿನವರು, ಚೆನ್ನಾಗಿರುವುದಕ್ಕೆ awesome ಎಂದು ಹೇಳೋದು... ಅದರಲ್ಲಿ "some" ಅಡಕವಾಗಿದೆ. ಅದೇ, ಮನಸ್ಸಿಗೆ ಅಹಿತವಾದ ವಿಷಯಗಳಿಗೆ, awful ಎಂದು ಹೇಳುವಾಗ, ಅದು ಯಾವಾಗಲೂ "full" ಆಗಿಯೇ ತೋರೋದು! ಸುಖ-ಸಂತೋಷಗಳು ಹಿತಮಿತವಾಗಿಯೂ, ಕಷ್ಟ-ಕಾರ್ಪಣ್ಯಗಳು ದಂಡಿ ದಂಡಿಯಾಗಿಯೂ ಬರುತ್ತವೆ ಎಂದು ಒಂದೊಂದು ಪದದಲ್ಲಿಯೇ ಹೇಳುವ ಅವರ ಜಾಣ್ಮೆಯನ್ನು ಮೆಚ್ಚಬೇಕಾದ್ದೆ!


ಯಾರು ಯಾರಿಗೋ ಯಾವುದೋ ಕಾರಣಗಳಿಗೆ ಖುಷಿಯಾಗುವುದುಂಟು. ಇಡೀ ದಿನ ದಣಿದ ತಾಯಿಯ ದಣಿವು ತನ್ನ ಮಗುವಿನ ಒಂದು ಕಿರುನಗೆಯನ್ನು ನೆನಪಿಸಿಕೊಳ್ಳುವುದರ ಮೂಲಕವೇ ಮರೆಯಾಗಬಲ್ಲದು. ಸಂಜೆ ಒಮ್ಮೊಮ್ಮೆ ಒಂದು ಒಳ್ಳೆಯ ಚಹಾ ಕುಡಿದಾಗ, ಮಲೆನಾಡಿನ ಮಳೆ ಮತ್ತು ಚಳಿ ಪ್ರಕೃತಿಯಲ್ಲಿ ಮುಂಜಾನೆ ಒಂದು ಮಜಬೂತಾದ ಫ಼ಿಲ್ಟರ್ ಕಾಫ಼ಿ ಕುಡಿದಾಗ, ಬೇಸಿಗೆಯ ಬಿಸಿಲಿನ ಬಳಲಿಕೆಯಲ್ಲಿ ಒಂದು ಶುಂಠಿ ಹಾಕಿದ ಮಜ್ಜಿಗೆ ಕುಡಿದಾಗ - ಈ ಕಿರು ಸಂತೋಷ ಸುಖವಾಗಿ ಪ್ರಕಟವಾಗುವುದುಂಟು. ಹೀಗಿರುವಾಗ ಸುಖವೆನ್ನುವುದು ದಂಡಿ ದಂಡಿಯಾಗಿ ಸಿಗಬೇಕೆಂದೇನೂ ಇಲ್ಲ... ಬಳಲಿದ ಮನಸ್ಸಿಗೆ ಹಿತವಾಗುವುದಕ್ಕೆ ಚಿಕ್ಕ ಲೋಟದಲ್ಲಿ ಸಿಗುವ ಪಾನೀಯ ಸಾಕಾಗುವುದರಿಂದ, ನಿಮಗೆ ಬಕೇಟುಗಟ್ಟಲೆ ಎಂದೂ ಕಾಫ಼ಿಯನ್ನು ಕುಡಿಯಬೇಕೆನ್ನಿಸುವುದಿಲ್ಲ. ನಾವು ಚಿಕ್ಕವರಿದ್ದಾಗ ಭದ್ರಾವತಿಯ ಸಕ್ಕರೆ ಕಾರ್ಖಾನೆಯನ್ನು ನೋಡಲು ಹೋಗಿದ್ದೆವು. ಶಾಲಾ ಮಕ್ಕಳಿಗೆ ಪ್ರವಾಸದ ಕೊನೆಯಲ್ಲಿ ಒಂದು ಮೂಟೆ ಸಕ್ಕರೆಯನ್ನು ತೋರಿಸಿ, ಯಾರು ಎಷ್ಟು ಬೇಕಾದರೂ ತಿನ್ನಬಹುದು ಎಂದು ಹೇಳಿದಾಗ ನಾವ್ಯಾರೂ ಒಂದು ಚಿಟುಕೆಯಷ್ಟು ಕೂಡ ಸಕ್ಕರೆಯನ್ನು ತಿನ್ನದಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. ದಂಡಿಯಾಗಿ ಸಿಗುವುದೆಲ್ಲವೂ ಸುಖವಲ್ಲ, ಜೊತೆಗೆ ಯಥೇಚ್ಛವಾಗಿ ದೊರಕುವುದು ಸುಖವನ್ನು ಕಸಿದುಕೊಳ್ಳಲೂಬಹುದು. ಊಟ-ತಿಂಡಿಗಳು ಬಹಳ ಇಷ್ಟ ಎಂದು ಹೊಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡವರು, ಸಮಯ ಸರಿದಂತೆಲ್ಲ, ಊಟ-ತಿಂಡಿಯ ಬಗೆಗಿನ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳುವ ಹಾಗೆ.


ನನ್ನ ಪ್ರಕಾರ, ಎಲ್ಲಿದೆ ಸುಖ? ಎಂದು ಅರಸಿಕೊಂಡು ಹೋಗುವುದೇ ತಪ್ಪು. ಸುಖ-ಸಂತೋಷ ನಮ್ಮ ಒಳಗಿದೆ, ನಮ್ಮ ಹೊರಗಿದೆ, ಮುಖ್ಯ ಅದು ನಾವಿರುವಲ್ಲೇ ಇದೆ. ಆಧ್ಯಾತ್ಮಿಕ ಚಿಂತನಶೀಲರು, ನಿಮ್ಮ ಒಳಗಡೆ ಗಮನಕೊಡಿ, ಅದರಲ್ಲಿ ಅಂತರ್ಧಾನದ ಸುಖವಿದೆ ಎಂದಾರು. ಕವಿಗಳು, ನಿಮ್ಮ ಸುತ್ತಮುತ್ತಲಿನ ಪ್ರಕೃತಿಯ ಆರಾಧನೆಯಲ್ಲಿದೆ ಸುಖ ಎಂದಾರು. ತನ್ನ ಮನಸ್ಸನ್ನು ತನ್ನೊಳಗೇ ಕೇಂದ್ರೀಕರಿಸಿ ಹತೋಟಿಯಲ್ಲಿಡಲು ಪ್ರಯತ್ನಿಸುವ ಯೋಗಿಗೆ, ಪಕ್ಕದ ಮರದ ಮೇಲೆ ಕುಳಿತು ವಸಂತನ ಆಗಮನವನ್ನು ಸಾರುವ ಕೋಗಿಲೆಯ ಸಂದೇಶ ಕಿರಿಕಿರಿ ತರಿಸಲಿಕ್ಕೂ ಸಾಕು. ಅದೇ ಬಾಹ್ಯ ಪ್ರಕೃತಿಗೆ ತನ್ನನ್ನು ತಾನು ಒಡ್ಡಿಕೊಂಡು ಹೊಸತೇನನ್ನೋ ನಿರೀಕ್ಷಿಸುತ್ತಿರುವ ಕವಿ ಮನಸ್ಸಿಗೆ ಕ್ರೌಂಚ ಪಕ್ಷಿಗಳ ಕಲರವವೂ ಮುದ ತರಬಹುದು. ಅವರವರ ಭಾವನೆ-ಭಕ್ತಿ ಮತ್ತು ಶ್ರದ್ಧೆಗೆ ಸಂಬಂಧಿಸಿದಂತೆ ಸುಖ ಎಲ್ಲ ಕಡೆಯೂ ಇದೆ... ಆದರೆ ಅದು ದಂಡಿಯಾಗಿ ಸಿಗುವ ಸರಕು-ಸಾಮಗ್ರಿಯಾಗಂತೂ ಅಲ್ಲವೇ ಅಲ್ಲ.


***

ಸುಖ ಮನಸ್ಸಿಗೆ ಸಂಬಂಧಿಸಿದ್ದಾದರೂ, ಅದರ ಮೂಲ ಹೃದಯದಲ್ಲಿದೆ ಎನ್ನಬಹುದೇ? ಸುಖದ ನಿರೀಕ್ಷೆ ಒಂದು ರೀತಿಯಲ್ಲಿ ತಪ್ಪು. ಮುಂದಿನ ಸುಖದ ಕ್ಷಣ ಹೀಗೇ ಇದ್ದೀತು ಎಂದು ಮೊದಲೇ ಊಹಿಸಿಕೊಳ್ಳುವುದಾದರೂ ಹೇಗೆ? ಸುಖ-ಸಂತೋಷದ ವಿಷಯಕ್ಕೆ ಬಂದಾಗ ಬಡವ-ಬಲ್ಲಿದನೆಂಬ ಬೇಧ-ಭಾವ ಏನಾದರೂ ಇರಬಹುದೇ? ಅತಿ ಶ್ರೀಮಂತರಿಗೆ ಹೆಚ್ಚಿನ ಸಂತೋಷ ಸಿಗುವುದು ನಿಜವೇ? ಹಾಗಿಲ್ಲವಾದರೆ, ಜನ ತಮ್ಮ ಹಂಗುಗಳನ್ನು ತೊರೆದು ಸದಾಕಾಲ ಶ್ರೀಮಂತರಾಗುವ, ಇನ್ನೂ ಹೆಚ್ಚು ಹೆಚ್ಚು ಸಂಪಾದಿಸಿ, ಕೂಡಿಡುವ ಕನಸನ್ನು ಕಾಣುವುದಾದರೂ ಏಕೆ? ಬಡವರ ಸಂತೋಷಗಳಿಗೂ, ಉಳ್ಳವರ ಸಂತೋಷಗಳಿಗೂ ಏನು ವ್ಯತ್ಯಾಸ? ಸುಖ ಎನ್ನುವುದು ನಮ್ಮೊಳಗಿದೆಯೋ, ನಮ್ಮ ಹೊರಗಿದೆಯೋ? ಸುಖ ಎನ್ನುವುದು ವ್ಯಕ್ತಿಗತವೋ, ಅಥವಾ ಒಂದು ನೆರೆಹೊರೆಗೆ ಸಂಬಂಧಿಸಿದ ವಿಷಯವೋ? ಸುಖವನ್ನು ಅಳೆಯುವುದಾದರೂ ಹೇಗೆ? ಇಂತಿಷ್ಟು ದಿನ ಈ ಕೆಲಸವನ್ನು ಮಾಡಿದರೆ ಇಂತಿಷ್ಟು ಸುಖ ಎಂಬ ನಿಯಮವೇನಾದರೂ ಇದೆಯೇ?


***

ಬೆಂಗಳೂರಿನಿಂದ ನೆಲಮಂಗಲದ ಕಡೆಗೆ ಹೋಗುವ ದಾರಿಯಲ್ಲಿ, ಬೆಂಗಳೂರು ನಗರ ಮುಗಿಯುವ ಸರಹದ್ದಿನಲ್ಲಿ ಅದೆಷ್ಟೋ ನಿರ್ಗತಿಕ ಕುಟುಂಬಗಳು ಬಯಲುಗಳಲ್ಲಿ ಗುಡಿಸಲು ಅಲ್ಲದ ಡೇರೆಗಳಲ್ಲಿ ಬದುಕುವುದನ್ನು ನೋಡಬಹುದು. ಇಲ್ಲಿ ಬದುಕುವ ಕುಟುಂಬದ ಸದಸ್ಯರುಗಳಿಗೆ ಆಯಾ ಹಂಗಾಮಿ ವಸತಿ ಸೌಕರ್ಯವೇ ಸುಖವನ್ನು ತಂದುಕೊಟ್ಟೀತು. ಹಾಗಂತ, ಲೀಲಾ ಪ್ಯಾಲೇಸಿನಲ್ಲಿ ದಿನದ ಬಾಡಿಗೆಯಾಗಿ ಲಕ್ಷಾಂತರ ರುಪಾಯಿಯನ್ನು ಸುರಿವ ಶ್ರೀಮಂತರಿಗೆ ಸುಖವಿಲ್ಲ ಎಂದು ಹೇಳಲಾಗದು. ಹಾಗಿದ್ದ ಮೇಲೆ, ಸುಖ ಎನ್ನುವುದು ಅವರವರ ಮಾನಸಿಕ, ಸಾಮಾಜಿಕ, ಶಾರೀರಿಕ ಮೌಲ್ಯಗಳ ಮೇಲೆ ನಿಂತಿದೆ ಎನ್ನಬಹುದೇ? ಬಯಲಿನ ಗುಡಿಸಲಲ್ಲಿರುವ ವ್ಯಕ್ತಿಯ ಸೌಕರ್ಯಗಳನ್ನು ಲೀಲಾ ಪ್ಯಾಲೇಸಿನಲ್ಲಿರುವ ವ್ಯಕ್ತಿಯ ಸೌಕರ್ಯಕ್ಕೆ ಅದಲು ಬದಲು ಮಾಡಿದಾಗ ಇಬ್ಬರಿಗೂ ಅವರವರ ಸುಖ ದೂರವಾಗಬಹುದು. ಅದೇ ಪ್ರಪಂಚದಲ್ಲಿ ಒಂದಿಷ್ಟು ದಿನ ಇರಲಾಗಿ ಪ್ರತಿಯೊಬ್ಬನೂ ಅದಕ್ಕೆ ಹೊಂದಿಕೊಂಡು ಹೋಗಬಹುದು.


ಗಾಜ಼ಾ ಗಡಿಯಲ್ಲಿ ನಡೆದ ಯುದ್ಧದಿಂದಾಗಿ ಅದೆಷ್ಟೋ ಕುಟುಂಬಗಳು ರಾತ್ರೋರಾತ್ರಿ ತಮ್ಮ ತಮ್ಮ ನೆರೆಹೊರೆಯನ್ನು ಬಿಟ್ಟು ಕದಲಬೇಕಾದಾಗ, ಅವರವರ ಸುಖ-ಸಂಭ್ರಮಗಳು ಸಂಘರ್ಷದಲ್ಲಿ ಕೊಚ್ಚಿಹೋದವು. ಒಂದು ವಟಾರದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದ ಕುಟುಂಬಗಳು ಕೇವಲ ನಿರ್ಗತಿಕರಾಗಷ್ಟೇ ಅಲ್ಲ, ಅವರ ನೆಲೆಯನ್ನು ಕಳೆದುಕೊಂಡರೂ ಕೂಡ. ಆದರೆ, ಹೊಸ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಕ್ಕಳು ತಮ್ಮ ಆಟದ ಸುಖವನ್ನು ಅನುಭವಿಸುವುದರಲ್ಲಿ ನಿರತರಾದಂತೆ ತೋರಿತು. ಸುಖದ ಪರಿಭ್ರಮೆಗೆ ನಾವೊಂದು ಪರಿಧಿಯನ್ನು ಹಾಕಿಕೊಂಡಿರುತ್ತೇವೆ. ಕೊನೆಮೊದಲಿಲ್ಲದ ಆ ಪರಿಧಿ, ಒಂದೇ ಒಂದು ಸಂಘರ್ಷದ ಸಂಕಟಕ್ಕೆ ಚೂರುಚೂರಾಗಿ ಹೋಗುವುದಾದರೆ, ಮನುಕುಲ ಸಂಘರ್ಷವನ್ನು ಹುಟ್ಟುಹಾಕುವುದಾದರೂ ಏಕೆ ಎನಿಸೊಲ್ಲವೇ? ಇಂದಿನ ತಲೆಮಾರಿನ ಜೊತೆಜೊತೆಗೆ ಇನ್ನೆರೆಡು ತಲೆಮಾರುಗಳು ಅನುಭವಿಸಿ ತಮ್ಮದೆಲ್ಲವನ್ನೂ ಕಳೆದುಕೊಳ್ಳುವ ಈ ಸಂಘರ್ಷದ ಫಲಿತಾಂಶವಾದರೂ ಏನು? ಕೈಯಲ್ಲಿ ಬಂದೂಕು ಹಿಡಿದು ಹೋರಾಡುವ (ಉಗ್ರ) ತರುಣರಿಗೆ ಈ ಸರಳ ಸಂದೇಶವೇಕೆ ಅರ್ಥವಾಗುವುದಿಲ್ಲ? ಹುಟ್ಟಿ-ಸಾಯುವ ಹಲವು ವರ್ಷಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ನಾಲ್ಕು ಅವಸ್ಥೆಗಳಲ್ಲಿ ನಾವು ಏನನ್ನಾದರೂ ಬದಲಾಯಿಸುತ್ತೇವೆ ಎಂದುಕೊಳ್ಳುವುದೇ ತಪ್ಪಲ್ಲವೇನು? ಅಕಸ್ಮಾತ್ ಬದಲಾವಣೆಯೇ ಆಗುವುದು ಎಂದಾದಲ್ಲಿ, What difference does it make? ಎಂದು ಕೇಳಬೇಕೆನಿಸುತ್ತದೆ.


ಸೂರ್ಯನು ಮುಳುಗದ ಸಾಮ್ರಾಜ್ಯವಾಗಿ ಇಂಗ್ಲೀಷ್ ಸಾಮ್ರಾಜ್ಯ ಬೆಳೆಯಿತು ಮತ್ತೆ ಕಳೆದುಹೋಯಿತು. ತಮ್ಮದೇ ಆದ ತಂತ್ರವನ್ನು ಜಗದೆಲ್ಲೆಡೆ ಸಾರುತ್ತೇವೆಂದು ಮಾವೋವಾದಿಗಳು, ಸಮತಾವಾದಿಗಳು ಹೋರಾಡುತ್ತಲೇ ಪ್ರಾಣಬಿಟ್ಟರು. ತಮ್ಮದೇ ಮತ ದೊಡ್ಡದು, ತಮ್ಮ ಧರ್ಮವೇ ನಿಜವಾದ ವಿಶ್ವ ಧರ್ಮವೆಂದು ಎಂದೋ ಘಟಿಸಿ ಆಗಿ ಹೋದ ಪ್ರವಾದಿಗಳ ಹೆಸರಿನಲ್ಲಿ ಕಾಡು-ಮೇಡು, ಗುಡ್ಡ-ಬೆಟ್ಟ, ನದಿ-ದ್ವೀಪಗಳನ್ನೆಲ್ಲ ಗುಡ್ಡೆ ಹಾಕಿ ತಮ್ಮ ಮತವನ್ನು ಸ್ಠಾಪಿಸಿಕೊಂಡರು, So what? ಯೂರೋಪಿನ ಸ್ಪೇನ್ ದೇಶದ ಮೂಲೆಯಲ್ಲಿ ಒಂದು ಕರ್ಚೀಫ಼ಿನ ಅಗಲದಷ್ಟು ಹರಡಿಕೊಂಡು ತನ್ನ ಅಸ್ತಿತ್ವವನ್ನೇ ಇನ್ನೂ ಸರಿಯಾಗಿ ಕಂಡುಕೊಳ್ಳದ ಪೋರ್ಚುಗೀಸರು ದೂರದ ದಕ್ಷಿಣ ಅಮೇರಿಕದ ಅರ್ಧ ಭಾಗದಷ್ಟು ದೊಡ್ಡದಾದ ಬ್ರೆಜಿಲ್ ದೇಶದ ಮೇಲೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ದಬ್ಬಾಳಿಕೆಯನ್ನು ಹೇರಲೇಬೇಕಿತ್ತೇನು? ಹಾಗಿಲ್ಲದಿದ್ದರೆ ಅವರೇನು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಸಾಯುತ್ತಿದ್ದರೇನು? ಈ ಮಾನವನ ಕ್ಷುಲ್ಲಕ ತಂತ್ರಗಳನ್ನು ಒಂದೇ ಒಂದು ಮಾತಿನಲ್ಲಿ ಹೇಳುವುದಾದರೆ, ಹುಟ್ಟಿ ಹೋರಾಡುತ್ತಲೇ ಹತನಾಗುವ ಹುಲುಮಾನವನಿಗೆ ಸುಖವೆನ್ನುವ ಅದ್ಯಾವ ಮರೀಚಿಕೆಯ ಹಂಬಲವಿದ್ದಿರಬಹುದು?


ತನ್ನ ಸುಖದ ಚೌಕಟ್ಟಿಗೆ ಒಳಪಡದಿರುವುದು ಅಸುಖ ಎಂದುಕೊಳ್ಳುವುದೇ ತಪ್ಪು. ಚೀನಾ ದೇಶದ ಜನರಿಗೆ ಹಾವು-ಹಲ್ಲಿ-ಸರೀಸೃಪಗಳನ್ನು ತಿಂದು ತೇಗುವ ಬಯಕೆ, ಅವರು ಮಾಡಿಕೊಳ್ಳಲಿ. ದೂರದ ಆಸ್ಟ್ರೇಲಿಯ ದೇಶವಾಸಿಗಳು ಕಾಂಗರೂ ಪ್ರಾಣಿಯನ್ನು ತಿಂದು ಆನಂದಿಸಲಿ, ಅದು ಅವರ ಪರಿಸರ ಕೊಟ್ಟ ಬಳುವಳಿ. ಇನ್ನೆಲ್ಲೋ ಮೆಕ್ಸಿಕೋ ದೇಶದಲ್ಲಿ ಕೆಲವರು ಜಿರಲೆಗಳನ್ನು ತಿಂಡಿಯಾಗಿ ತಿನ್ನಲಿ. ಮಂಗೋಲಿಯಾ, ಕಜಾಕ್‌ಸ್ತಾನ್‌ದವರು ಕುದುರೆ ಮಾಂಸವನ್ನು ತಿನ್ನವಂತೆ, ತೈವಾನ್-ವಿಯೆಟ್ನಾಮ್ ದೇಶವಾಸಿಗಳು ನಾಯಿ-ಬೆಕ್ಕುಗಳನ್ನು ತಿನ್ನಲಿ - ಅದರಲ್ಲಿ ಅವರವರ ಸಂತೋಷ ಆಯಾ ದೇಶವಾಸಿಗಳ ಅಗತ್ಯ-ಅನುಕೂಲಗಳನ್ನು ಹೊಂದಿಕೊಂಡಿದೆ. ಇದನ್ನೇ ದೊಡ್ಡ ಕಾನೂನನ್ನಾಗಿ ಮಾಡಿ ಎಲ್ಲರೂ ನಮ್ಮ ಪಾಕಶಾಸ್ತ್ರವನ್ನೇ ಬಳಸಿ, ನಮ್ಮ ಅಡುಗೆಯ ವಿಧಾನವೇ ವಿಶೇಷವಾದುದು ಎಂದು ತಮಟೆ ಸಾರಿಸಿಕೊಂಡರೆ? ಒಂದು ಹೆಜ್ಜೆ ಮುಂದೆ ಹೋಗಿ ಅದನ್ನೇ ಇನ್ನೊಬ್ಬರ ಮೇಲೆ ಹೇರಿಬಿಟ್ಟರೆ? ಭೂಮಿಯ ಸಮಭಾಜಕ ವೃತ್ತದ ಆಸುಪಾಸಿನಲ್ಲಿ ದಿನವಿಡೀ ಉರಿಬಿಸಿಲಿನಲ್ಲಿ ಬದುಕುವವರಿಗೂ ಉತ್ತರ-ದಕ್ಷಿಣ ಧೃವ ಪ್ರದೇಶಗಳ ಹತ್ತಿರ ಬದುಕುವ ಜನರ ಆಗು-ಹೋಗು, ಆಚಾರ-ವಿಚಾರ, ಉಡುಗೆ-ತೊಡುಗೆ, ಊಟ-ವಿಶೇಷಗಳಲ್ಲಿ ವ್ಯತ್ಯಾಸಗಳಿರುವುದು ಸಹಜವೇ. ಸಮುದ್ರಕ್ಕೆ ಹತ್ತಿರವಾದವನಿಗೆ ನದೀ ಮೂಲವನ್ನು ಅರಸಿ ಹೋಗುವ ಅಗತ್ಯವಿಲ್ಲ, ನೀರು- ನದಿಗಳು ಅವನಿದ್ದಲ್ಲೇ ಬರುವುದು ಸಹಜ. ಅಂತೆಯೇ, ಗುಡ್ಡ-ಗವಿಗಳಲ್ಲಿ ಬದುಕುವ ಮಾನವನಿಗೆ, ಮಿತವಾಗಿ ದೊರಕುವ ನೀರೊಂದು ಅಗತ್ಯದ ವಸ್ತುವಷ್ಟೇ. ಹಾಗಾಗಿ ಸುಖ-ಸಮೃದ್ಧಿ ಎನ್ನುವುದು ಅವರವರ ಸ್ಥಳವನ್ನು ಅವಲಂಬಿಸಿದೆ ಎಂದಾಯ್ತು!


***

ಸುಖವೆನ್ನುವ ಪರಮಾರ್ಥವನ್ನು ಅರಸಿಕೊಂಡು ಹೋಗಬೇಕಾದ ಅಗತ್ಯ ಯಾರಿಗೂ ಇಲ್ಲ. ತನ್ನೊಳಗೆ ಮತ್ತು ಹೊರಗೆ ಸಿಗುವ ಆ ಸುಖಮಯ ಕ್ಷಣಗಳನ್ನು ಅನುಭವಿಸುವ ರಸಾನುಭೂತಿಯನ್ನು ಅರ್ಥಮಾಡಿಕೊಳ್ಳಬೇಕಷ್ಟೇ. ಹೇರಳವಾದ ಕತ್ತಲಿದ್ದಲ್ಲಿ ಒಂದು ಚಿಕ್ಕ ಹಣತೆ ತನ್ನ ಪ್ರಕಾಶವನ್ನು ಚೆಲ್ಲುವ ಹಾಗೆ, ಕತ್ತಲಿನಿಂದ ಕತ್ತಲಿಗೆ ಸೇರುವ ಈ ಬದುಕು ಅಂತಹ ಹಣತೆಗಳ ಬೆಳಕನ್ನು ನಂಬಬೇಕಾಗುವುದು ತಾರ್ಕಿಕವಾದದ್ದು. ಸುಖವನ್ನು ಹುಡುಕದೇ ತನ್ನೊಳಗೆ ಹುದುಗಿದ ಭಾವನೆಗಳನ್ನು ಜಾಲಾಡುತ್ತಾ ಹೋದ ಹಾಗೆ ಸುಖ ಕಾಣುವುದು ಖಂಡಿತ, ಎನ್ನುವುದು ಈ ಹೊತ್ತಿನ ತತ್ವ!

Friday, February 25, 2022

ಕಾಡುವ ಹಾಡು: ಕಾಣದ ಕಡಲಿಗೆ

ಹಾಡು: ಕಾಣದ ಕಡಲಿಗೆ

ಕವಿ: ಜಿ. ಎಸ್. ಶಿವರುದ್ರಪ್ಪ, ಚೆಲುವು-ಒಲವು ಕವನ ಸಂಕಲನ (1951-52)

ಕವನದ ಶೀರ್ಷಿಕೆ: ತೊರೆಯ ಹಂಬಲ

ಗಾಯನ ಮತ್ತು ಸಂಗೀತ ಸಂಯೋಜನೆ: ಸಿ. ಅಶ್ವಥ್

ಈ ಹಾಡು ಕನ್ನಡಿಗರಿಗೆ ಬಹಳ ವಿಶೇಷವಾದ ಮೆಲೋಡಿಗಳಲ್ಲೊಂದು.  ಭಾವಗೀತೆಗಳ ಯಾದಿಯಲ್ಲಿ ಒಂದು ರೀತಿಯ ತನ್ಮಯತೆ ಮತ್ತು ತನ್ನದೇ ಆದ ಗಾಢತೆಯನ್ನು ಒಳಗೊಂಡಿರುವ ಈ ಕವನವನ್ನು ಸಿ. ಅಶ್ವಥ್ ಅವರು ಮನೋಜ್ಞವಾಗಿ ಹಾಡಿದ್ದಾರೆ.  ಹಾಡಿನುದ್ದಕ್ಕೂ ಬಳಸಿರುವ ಇನ್ಸ್ಟ್ರುಮೆಂಟ್‌ಗಳು ಒಂದಕ್ಕಿಂದ ಒಂದರಂತೆ ತಮ್ಮ ಕರ್ತವ್ಯವನ್ನು ನಿಭಾಯಿಸಿ ಕೇಳುಗರ ಮನಸ್ಸನ್ನ ಸೂರೆಗೊಂಡಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!

ಹಾಡಿನ ಉದ್ದಕ್ಕೂ "ಕಾಣದ ಕಡಲಿನ" ಮಹತ್ವವನ್ನು first person ಉದ್ದೇಶದಲ್ಲಿ ವಿವರಿಸಿರುವುದರಿಂದ ಈ ಹಾಡಿನ ಮೂಲ ವ್ಯಕ್ತಿಯನ್ನಾಗಿ ನಾವು "ತೊರೆ" ಯನ್ನು ಕಾಣಬಹುದು. ಕಡಲಿನ ಒಂದು ಭಾಗವಾಗಿ ಕಡಲನ್ನು ಸೇರುವ ತವಕದಲ್ಲಿರುವ ಈ ಮಹಾ ಹಂಬಲದ ಸೂಕ್ಷ್ಮ "ನೀರಿಗೆ" ಅಲ್ಲದೇ ಮತ್ತಿನ್ಯಾರಿಗೆ ಬರಬೇಕು.  ಈ ಲೇಖನದ ಉದ್ದಕ್ಕೂ "ತೊರೆ" ಅನ್ನು ಕುರಿತೇ ಮಾತನಾಡೋಣ.

***

ಒಂದು ರೀತಿ ಪಂಚಮಿ ಹಬ್ಬದ ಜೋಕಾಲಿಯಂತೆ ತೂಗುವ ಕೊಳಲಿನ ಗಾನದೊಂದಿಗೆ ಆರಂಭವಾಗುವ ಈ ಹಾಡಿಗೆ, ಕೇವಲ ಹತ್ತು ಸೆಂಕೆಂಡುಗಳಲ್ಲಿ ನೂರು ವಯಲಿನ್‌ಗಳು ತಮ್ಮ ಮೊರೆತವನ್ನು ಪ್ರಚುರ ಪಡಿಸುವುದರ ಮೂಲಕ ತಮ್ಮ ಇರುವಿಕೆಯನ್ನು ತೋರ್ಪಡಿಸುವುದರ ಜೊತೆಗೆ ಜರಡಿಯಲ್ಲಿ ಜೊಳ್ಳನ್ನು ಕೆಳಗೆ ತೂರಿ ಕೇವಲ ಗಟ್ಟಿಯಾದುದನ್ನು ಮಾತ್ರ ಮೇಲೆ ಇರಿಸಿಕೊಳ್ಳುವ ಹಾಗೆ ನಮ್ಮ ಮನಸ್ಸನ್ನು ಮುಂದಿನ ಸವಾಲಿಗೆ ತಯಾರು ಮಾಡಲು ಪ್ರಯತ್ನಿಸುತ್ತವೆ. ಈ ಹತ್ತು ಸೆಕೆಂಡುಗಳ ವಯಲಿನ್ ಸಹವಾಸದ ನಂತರ ಮತ್ತೆ ಸಮಾಧಾನದ ದನಿಯಲ್ಲಿ ಕೊಳಲು ಪ್ರತ್ಯಕ್ಷವಾಗುತ್ತಿದ್ದಂತೆ ಹಾಡು ಆರಂಭವಾಗುತ್ತದೆ.

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ 

ಕಾಣದ ಕಡಲಿಗೆ ಹಂಬಲಿಸಿದೆ ಮನ ||

ಅಶ್ವಥ್ ಅವರ ಧ್ವನಿ ಎಂದಿಗಿಂತಲೂ ಗಂಭೀರವಾಗಿ, ಕಾಣದ ಕಡಲನ್ನು ಒತ್ತರಿಸಿ ಹೇಳುವಾಗ, ಅವರ ಹಾಡಿನ ಭಾವದಲ್ಲಿ ಇದು ಯಾರು ಹಾಕಿರಬಹುದಾದ ಪ್ರಶ್ನೆ ಎನ್ನುವುದು ವ್ಯಕ್ತವಾಗುತ್ತದೆ.  ಕಡಲನ್ನು ಕೂಡಬಹುದಾದ "ನೀರು" ಅಥವಾ ನೀರಿನ ವಿಶೇಷ ರೂಪ ಈ ಪ್ರಶ್ನೆಗಳನ್ನು ಕೇಳುತ್ತಿದೆ ಎಂದು ಮೇಲ್ಮೈಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ.  ಆದರೆ, ಆಂತರ್ಯದಲ್ಲಿ ಒಂದು ರೀತಿಯ ಗಾಢವಾದ ಏಕತಾನತೆ, ಜೊತೆಗೆ ಆಂತರ್ಯವನ್ನು ಕಲಕುವ ದುಃಖದ ಅರಿವೂ ಎದುರುಗೊಳ್ಳುತ್ತದೆ.

ಪಲ್ಲವಿ ಮುಗಿಯುತ್ತಿದ್ದ ಹಾಗೆ ನಮ್ಮ ಕೆಲಸ ಈಗಷ್ಟೇ ಶುರುವಾಗಿದೆ, ಎಂದು ಮತ್ತೆ ವಯಲಿನ್‌ಗಳು ಮೊರೆಯಿಟ್ಟು ಶಾಂತವಾದ ವೇಣುವಾದನವನ್ನು ಬದಿಗೊತ್ತುತ್ತವೆ.  ಒಂದು ಶಾಂತವಾದ ವೇಣುವಾದನವನ್ನು ಸಂಬಾಳಿಸಲು ಅದೆಷ್ಟು ವಯಲಿನ್‍ಗಳು ಸಾಂಗತ್ಯದಲ್ಲಿ ದುಡಿಯಬೇಕು ನೋಡಿ!  ಹೀಗೆ ಕೊಳಲು ಸಮಾಧಾನ ಪಡಿಸುವ ವಯಲಿನ್‌ಗಳ ಮೊರೆತಕ್ಕೆ ಮುಂದೆ ವೀಣಾವಾದನವು ಸೇರಿಕೊಳ್ಳುವ ಹೊತ್ತಿನಲ್ಲಿ, ಅಂತರಂಗದ ಪ್ರಶ್ನೆಗಳನ್ನು ಬಾಹಿರ ಪಡಿಸಿದ "ತೊರೆ" ತನ್ನನ್ನು ತಾನೇ ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಕಾಣದ ಕಡಲಿನ ಮೊರೆತ ಒಂದು ಜೋಗುಳವಾಗಬಲ್ಲದೇ? ಇಲ್ಲಿ ಕಡಲಿಗೆ ಮೊರೆತವಿರುವುದನ್ನು ಎಷ್ಟು ದೃಷ್ಟೀಕರಣ ಮಾಡಲಾಗಿದೆಯೋ ಅಷ್ಟೇ ವಿಶೇಷವಾಗಿ "ನೀರಿನ" ಭಾವನೆಯನ್ನು ಒಂದು ಮಗುವಿನ ಮುಗ್ಧತೆಗೆ ಹೋಲಿಸಲಾಗಿದೆ.  ಈ ಜೋಗುಳ "ತೊರೆಯ" ಕಲ್ಪನೆಯಾದರೂ ಅದು ಅದರ ನೇರ ಕಿವಿಗೆ ಬಿದ್ದಿರದೆ ಒಳಗಿವಿಗೆ ಕೇಳುತ್ತಿರುವುದು ವಿಶೇಷ.  ಇಂತಹ ವಿಶೇಷ ಕಲ್ಪನೆಗಳನ್ನು ಹೆಣೆಯಬಲ್ಲ "ತೊರೆ" ತನ್ನ ಕಲ್ಪನೆಯು ಕಡಲನ್ನು ಚಿತ್ರಿಸಿ, ಚಿಂತಿಸಿ ಸುಯ್ಯುತಿರುವುದರ ಬಗ್ಗೆಯೂ ಆಲೋಚಿಸಿಸುವುದನ್ನು ನಾವು ಕಾಣಬಹುದು. (ಸುಯ್ಯುವುದು = ಉಸಿರಾಡುವ, ನಿಟ್ಟುಸಿರಿಡುವ, air of breath, sigh).

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ನನ್ನ ಕಲ್ಪನೆಯು ತನ್ನ ಕಡಲನೆ 

ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 

"ತೊರೆ"ಯ ಸ್ಯುಯ್ಯುತ್ತಿರುವ ಕಲ್ಪನೆಯ ಕಡಲು - ಹೀಗಿರಬಹುದು, ಹಾಗಿರಬಹುದು ಎಂದು ಊಹಿಸಿಕೊಳ್ಳುತ್ತಲೇ, ಅದು ಎಲ್ಲಿರುವುದೋ, ಎಂತಿರುವುದೋ ಎಂದು ಆಶ್ಚರ್ಯವನ್ನು ಹೊರಹಾಕುತ್ತಾ ಮತ್ತೆ ಮೊದಲಿನ ಪ್ರಶ್ನೆಗಳಾದ "ಕಾಣಬಲ್ಲೆನೆ, ಕೂಡಬಲ್ಲೆನೆ ಒಂದು ದಿನ?!" ಎಂದು ತನ್ನ ಹಂಬಲಿಕೆಯನ್ನು ಮುಂದುವರೆಸುತ್ತದೆ.

ಎಲ್ಲಿರುವುದೋ ಅದು ಎಂತಿರುವುದೋ ಅದು 

ನೋಡಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ ॥೧॥

ಕಾಣದ ಕಡಲಿಗೆ ಹಂಬಲಿಸಿದೆ ಮನ.

ಈ ಮೇಲಿನ ಪ್ಯಾರಾದ ಉದ್ದಕ್ಕೂ ಕೇವಲ ಹಿನ್ನೆಲೆಯಲ್ಲಿ ತೊಟ್ಟಿಲನ್ನು ತೂಗಿ ಮಗುವನ್ನು ನಿದ್ರೆ ಮಾಡಿಸುವ ತಾಯಿಯ ಸೂಕ್ಷ್ಮ ಕೋಮಲತೆಯ ಸಂಗೀತವಾಗಿದ್ದ ವಯಲಿನ್‌ಗಳು, ಮತ್ತೆ ಜೀವ ತಳೆದು ಮೇಲಿನ ಕಲ್ಪನೆಗಳಿಗೆ, ಊಹಾಪೋಹಗಳಿಗೆ ದನಿಯಾಗುವ ಹಾಗೆ ಒಂದು ಗಂಭೀರತೆಯನ್ನು ತಂದುಕೊಡುತ್ತವೆ. ಇನ್ನೇನು ಕೊಳಲು ತನ್ನನ್ನು ಈ ಗೊಂದಲದಲ್ಲಿ ತನ್ನನ್ನು ಎಲ್ಲೋ ಕಳೆದುಕೊಂಡು ಬಿಟ್ಟಿತಲ್ಲವೇ ಎಂದು ಯೋಚಿಸುತ್ತಿದ್ದ ಹಾಗೆ, ಸಮಾಧಾನದ ಕೊಳಲು ತುಸು ಉನ್ಮತ್ತತೆಯಿಂದ ತನ್ನ ಇರುವನ್ನು ಪ್ರಕಟಿಸುತ್ತದೆ.

ಇಲ್ಲಿಂದ ಮುಂದೆ, ಮೊದಲಿನ ತವಕ, ಉನ್ಮಾದವಾಗಿ ಪ್ರಕಟಗೊಳ್ಳುತ್ತಾ ಅನೇಕ ಕಡಲಿನ ರೂಪಕಗಳನ್ನು ಮನಸ್ಸಿಗೆ ತಂದುಕೊಳ್ಳುತ್ತದೆ. ಸಾವಿರ ಹೊಳೆಗಳು ತುಂಬಿ ಹರಿದರೂ ಅದು ಒಂದೇ ಸಮನಾಗಿರುವುದಾದರೂ ಹೇಗೆ? ಸುನೀಲವಾದ, ವಿಸ್ತಾರವಾದ, ತರಂಗಗಳಿಂದ ಶೂಭಿತಗೊಂಡ ಗಂಭೀರವಾಗಿರುವ ಅಂಬುಧಿ! ಮುನ್ನೀರಂತೆ, ಅಪಾರವಂತೆ.... ಹೀಗೆ ಅನೇಕ ರೂಪಕಗಳು ಮನದಲ್ಲಿ ಮೂಡುತ್ತಾ ಹೋಗುವುದರ ಜೊತೆಜೊತೆಗೆ ಮತ್ತೆ ಅವೇ ಪ್ರಶ್ನೆಗಳು ಎದುರಾಗುತ್ತವೆ. ಈ ವರೆಗೆ, ಕಾಣಬಲ್ಲೆನೆ ಒಂದು ದಿನ ಎಂದು ಯಾವ ಗರ್ವವಿಲ್ಲದೇ, ವಿನಮ್ರವಾಗಿ ಕೇಳುತ್ತಿದ್ದ ಪ್ರಶ್ನೆಗಳು ಸ್ವಲ್ಪ ಮುಂದೆ ಹೋಗಿ ಬಹಳ ವಿಸ್ತಾರವಾಗಿರುವ ಗಂಭೀರವಾಗಿರುವುದನ್ನು ಚಿತ್ರಿಸಿಕೊಂಡು ಒಂದು ರೂಪಕೊಟ್ಟುಕೊಳ್ಳುವುದರ ಜೊತೆಗೆ "ಅದರೊಳು ಕರಗಲಾರೆನೆ ಒಂದು ದಿನ!" ಎನ್ನುವ ಮಟ್ಟಿಗೆ, ನಾವು ಮೊದಲೇ ಊಹಿಸಿದಂತೆ ಇದು ನೀರಿನದೇ ಪ್ರಶ್ನೆ ಎಂದು ನಿಶ್ಚಿತವಾಗುತ್ತದೆ.

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸುನೀಲ ವಿಸ್ತರ ತರಂಗ ಶೋಭಿತ 

ಗಂಭೀರಾಂಬುಧಿ ತಾನಂತೆ 

ಮುನ್ನೀರಂತೆ, ಅಪಾರವಂತೆ,

ಕಾಣಬಲ್ಲೆನೆ ಒಂದು ದಿನ 

ಅದರೊಳು ಕರಗಲಾರೆನೆ ಒಂದು ದಿನ  ॥೨॥


ಕಾಣದ ಕಡಲಿಗೆ ಹಂಬಲಿಸಿದೆ ಮನ.

ಈ ಪ್ಯಾರಾ ಮುಗಿಯುವಷ್ಟರಲ್ಲಿ, ಮೊರೆಯುವ ವಯಲಿನ್‌ಗಳು ಒಂದು ರೀತಿಯ ಸಮಾಧಾನವನ್ನು ಮೈವೆತ್ತಿಕೊಂಡು, ಮುಂದಿನ ಮುಂದಿನ ಸಾಲುಗಳಲ್ಲಿ "ತೊರೆಯ" ರೋಧನೆ ಇನ್ನಷ್ಟು ಗಾಢವಾಗುವುದನ್ನು ದುಃಖದ ಜೊತೆಗೆ ಕರುಣಾರಸವನ್ನು ಸ್ಫುರಿಸುವುದರ ಮೂಲಕ ಸೂಕ್ಷ್ಮವಾಗಿ ತಿಳಿಸುತ್ತವೆ.  "ನಾನು ಈಗಾಗಲೇ ಹೇಳಿರಲಿಲ್ಲ, ಹೀಗಾಗುತ್ತದೆ ಎಂದು?!" ಎನ್ನುವ ಧ್ವನಿ ವಯಲಿನ್ ನಂತರ ಬರುವ ಕೊಳಲಿನದು.

ಇಲ್ಲಿ "ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು..." ಎಂದಾಗ ಟಟಟಟಟ ಎಂದು ಸಮಯೋಚಿತವಾಗಿ ಕಡ್ಡಿಯ ಬಡಿತ ಕೇಳುತ್ತದೆ.  ಎರಡನೇ ಬಾರಿ ಇದೇ ಸಾಲನ್ನು ಹಾಡಿದಾಗ "ನೀನು ಹೇಳುತ್ತಿರುವುದು ಸರಿ..." ಎಂದು ತಲೆದೂಗಿಸಿ ಮಧ್ಯದಲ್ಲಿ ವಯಲಿನ್‌ಗಳು ಗಾಯಕನ ಧ್ವನಿಯ ಜೊತೆಗೆ ಸಾತ್ ನೀಡುತ್ತವೆ.

ಇಲ್ಲಿ ಜಟಿಲ ಕಾನನದ ಕುಟಿಲ ಪಥಗಳಲ್ಲಿ ಹರಿಯುವ ದಕ್ಷಿಣ ಭಾರತದ ಯಾವುದೇ ತೊರೆಗಳನ್ನಾದರೂ ನಾವು ಊಹಿಸಿಕೊಳ್ಳಬಹುದು.  ಆದರೆ, ಉತ್ತರದ ಗಂಗಾ-ಯಮುನಾ ನದಿಗಳ ಹರಿವು, ಆಳ ಮತ್ತು ವಿಸ್ತಾರಗಳೇ ಬೇರೆ.  ನಮ್ಮ ದಕ್ಷಿಣ ಭಾರತದ ನದಿಗಳು ಕಾನನದ ಕುಟಿಲ ಪಥಗಳಲ್ಲಿ ಸಣ್ಣ ತೊರೆಯಾಗಿ ಹರಿಯುವುದನ್ನು ನಾವು ಊಹಿಸಿದ ಹಾಗೆ, ವರ್ಷವಿಡೀ ತುಂಬ ನೀರಿನಿಂದ ಗಂಭೀರವಾಗಿ ಹರಿಯುವ ಗಂಗಾನದಿಯನ್ನು ನೀವು ನೋಡಿರದಿದ್ದರೆ ನಿಮ್ಮ ಊಹೆಗೂ ನಿಲುಕದ ಕಲ್ಪನೆ ಅದು.  ಇಲ್ಲಿ "ತೊರೆ"ಯ ವಿನಮ್ರತೆಯ ಜೊತೆಜೊತೆಗೆ ಅದರ ಬಗೆಗಿನ ಸ್ವಾಭಾವಿಕವಾದ ಅರಿವು ಕೂಡ ಸ್ಪಷ್ಠವಾಗುತ್ತದೆ.  ಹೀಗಿರುವ ನಾನು, ಹಾಗಾಗಬಲ್ಲೆನೇ? ಎನ್ನುವ ಪ್ರಶ್ನೆ ಈ ಕೆಳಗಿನ ಸಾಲುಗಳಲ್ಲಿ ವಿಶೇಷವಾಗಿ ಮೂಡಿ ಬಂದಿದೆ.  ಎಂದಿಗಾದರೂ ನನ್ನ ಗುರಿಯನ್ನು ತಲುಪಬಲ್ಲೆನೇ? ಕಡಲ ನೀಲಿಯೊಳಗೆ ಒಂದಾಗ ಬಲ್ಲೆನೇ? ಅದರೊಳಗೆ ಕರಗಬಹುದೇ? ಎನ್ನುವ ಸೂಕ್ಷ್ಮ ಪ್ರಶ್ನೆಗಳನ್ನು "ನೀರು" ಅಭಿವ್ಯಕ್ತಗೊಳಿಸುತ್ತಾ ಹೋಗುತ್ತದೆ.  ಸೇರುವುದು ಮತ್ತು ಕರಗುವುದರಲ್ಲಿ ಬಹಳ ವ್ಯತ್ಯಾಸವಿದೆ.  ನೀರಿನಲ್ಲಿ ಉಪ್ಪು ಅಥವಾ ಸಕ್ಕರೆ ಕರಗುತ್ತದೆ, ಆದರೆ ಮರಳು ಸೇರುತ್ತದೆ.  ಕಡಲಿನ ಕಣಕಣಗಳಲ್ಲಿ ತನ್ನನ್ನು ತಾನು ಅಡಕಗೊಳಿಸುವಿಕೆಯನ್ನು "ಕರಗುವುದು" ಎಂದು ಕರೆಯುವುದಾದರೆ, ಕಡಲಿರುವಲ್ಲಿ ಹೋಗುವುದನ್ನು "ಸೇರುವುದು" ಎನ್ನಬಹುದು.

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು 

ಎಂದಿಗಾದರು, ಎಂದಿಗಾದರು, ಎಂದಿಗಾದರೂ 

ಕಾಣದ ಕಡಲನು ಸೇರಬಲ್ಲೆನೇನು

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು

ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು

ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೆ ನಾನು 

ಕರಗಬಹುದೆ ನಾನು, ಕರಗಬಹುದೆ ನಾನು  ॥೩॥

ಕೊನೆಗೆ ಮೂರು ಬಾರಿ "ಕರಗಬಹುದೆ ನಾನು" ಎನ್ನುವುದನ್ನು ಮೂರು ರೀತಿಯ ಭಾವನೆಗಳಲ್ಲಿ ಹಾಡಿರುವುದನ್ನು ನೀವು ಗಮನಿಸಬಹುದು.

ಈ "ತೊರೆ"ಯ ತುಮುಲವನ್ನು ಕೇಳಿದಾಗ, ತಾನು ಈಗಾಗಲೇ ಆ "ಮಹಾನೀರಿನ" ತಾನೂ ಒಂದು ಭಾಗವಾಗಿದ್ದೇನೆ ಎಂದು ಗೊತ್ತಿಲ್ಲವಲ್ಲ ಎಂದು ಸೋಜಿಗವಾಗುತ್ತದೆ.  ಆ ಮಹಾ ನೀರನ್ನು ತಲುಪುವುದೇ ಗುರಿ ಎಂದು ತೋರಿಸಿಕೊಟ್ಟವರು ಯಾರು? ಆ ಮಹಾನೀರಿನ ಕುರಿತ ಕಲ್ಪನೆಗಳು, ರೂಪಕಗಳು ಇದರ ಮನಸ್ಸಿನಲ್ಲಿ ಹೇಗೆ ಹುಟ್ಟಿದವು?

"ಕಾಣದ ಕಡಲಿಗೆ..." ಹಾಡನ್ನು ನಾವು ಯಾವ ಸಂದರ್ಭದಲ್ಲಿ ಕೇಳಲು ಬಯಸುತ್ತೇವೆ, ಅಥವಾ ಯಾವ ಸಂದರ್ಭದಲ್ಲಿ ಈ ಹಾಡಿನ ಹಿನ್ನೆಲೆ ಬಹಳ ಉಚಿತ ಅಥವಾ ತಕ್ಕುದಾದುದು (apt) ಎನ್ನಿಸುತ್ತದೆ?

1951ರಲ್ಲಿ ಶಿವರುದ್ರಪ್ಪನವರು ಒಂದು "ತೊರೆಯ ಹಂಬಲ"ವನ್ನು ಎಷ್ಟು ಸರಳವಾದ ಪದಗಳಲ್ಲಿ ಎಷ್ಟು ಆಳವಾಗಿ ಚಿತ್ರಿಸಿದ್ದಾರೆನಿಸಿ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತದೆ. 1926ರಲ್ಲಿ ಜನಿಸಿದ ಶಿವರುದ್ರಪ್ಪನವರಿಗೆ ಇಪ್ಪತ್ತೈದು ವರ್ಷವಾಗುವಷ್ಟರಲ್ಲಿ ಅದೆಂತಾ ಪ್ರಬುದ್ಧತೆ ಬೆಳೆದಿರಬಹುದು! ಒಬ್ಬ ಕವಿಯಾಗಿ ಸೂಕ್ಷ್ಮ ಸಂವೇದನೆಗಳನ್ನಷ್ಟೇ ಅಲ್ಲದೇ ಒಂದು ಮುಗ್ಧ ತೊರೆಯ ಹಂಬಲದ ಮುಖೇನ ಬಹಳ ದೊಡ್ಡ ಅರಿವನ್ನು ಈ ಕವನದಲ್ಲಿ ತೋರಿಸಿಕೊಟ್ಟಿದ್ದಾರೆ.  ಹುಟ್ಟಿದೆಲ್ಲ ತೊರೆಗಳೂ ಆ ಮಹಾಸಾಗರದ ಅಂಶವೇ.  ಎಲ್ಲ ತೊರೆಗಳೂ ಸಾಗರ ಮುಖಿಯಾಗಿ ಹರಿವ ಹಂಬಲವುಳ್ಳವುಗಳಾದರೂ, end is more important than the means ಎನ್ನುವಂತೆ ಕಾಣದ ಕಡಲಿನ ಕಡೆಗೆ ಹರಿಯುವವೇ.  ಒಮ್ಮೆ ಹರಿದು ಕಡಲನ್ನು ಸೇರಿದ ಮಾತ್ರಕ್ಕೆ ಅದು ಕೊನೆ ಎಂದು ಈ ಮುಗ್ಧ ತೊರೆಗಳು ಅಂದುಕೊಳ್ಳದಿದ್ದರೆ ಸಾಕು. ಅದು ಪ್ರತಿಯೊಂದರ ಕೊನೆಯೂ ಮತ್ತೊಂದರ ಹುಟ್ಟು ಎನ್ನುವಂತೆ, ಮತ್ತೆ ಕಡಲು ಆವಿಯಾಗಿ, ಮೋಡವಾಗಿ, ನೀರಾಗಿ ಹರಿದು ಮತ್ತೆ ಸೇರುತ್ತಲೇ ಇರಬೇಕು, ಎನ್ನುವ ಸಮಾಧಾನ ಈಗಷ್ಟೇ ಕಣ್ಣು ಬಿಟ್ಟು ಹುಟ್ಟಿ ಹರಿಯುತ್ತಿರುವ ತೊರೆಯ ಆಶಯವನ್ನು ಯಾವ ಕಾರಣಕ್ಕೂ ಬಗ್ಗು ಬಡಿಯಲಾರದು.  ಹರಿಯುವುದು ತೊರೆಯ ಸಹಜ ಧರ್ಮ, ಜೊತೆಯಲ್ಲಿ ಅಗಾಧವಾದ ಹಂಬಲವನ್ನು ಹೊತ್ತು ಸಾಗುತ್ತಿರುವುದು ಈ ತೊರೆಯ ವಿಶೇಷವಷ್ಟೇ!

ಈ ಹಾಡನ್ನು ಇಲ್ಲಿ ಕೇಳಬಹುದು.


Thursday, February 10, 2022

ಇದು ನನ್ನ ದೇಶ

ಇದು ನನ್ನ ದೇಶ ಇದು ನನ್ನ ದೇಶ

ಎಂದು ಯಾವುದನ್ನು ನಂಬಿ ಬೆಳೆದಿದ್ದೆವೋ

ಎಲ್ಲಿ ನಮ್ಮತನವೇ ದುಂಬಿಯಾಗಿ ಹಾರಿದ್ದೆವೋ

ಇಂದು ಅದು ನಮ್ಮದಲ್ಲ, ನಮ್ಮದಾಗಿಲ್ಲ|


ಎಲ್ಲಿ ರಾಜಕೀಯ ಪೋಷಿತ ಷಡ್ಯಂತ್ರಗಳು ಮನೆಮಾಡಿವೆಯೋ

ಎಲ್ಲಿ ವಿದ್ಯೆ ಹೆಚ್ಚಿದಂತೆ ಮಂತಾಂಧರು ಹೆಚ್ಚುತ್ತಿದ್ದಾರೆಯೋ

ಎಲ್ಲಿ ನಮ್ಮ ಒಳಜಗಳವೇ ಮನೆಯ ಕಿಚ್ಚಾಗಿ ಹೊತ್ತಿದೆಯೋ

ಇಂದು ಅದು ನಮ್ಮದಲ್ಲ, ನಮ್ಮದಾಗಿಲ್ಲ|


ಪ್ರತಿದಿನವೂ ಪ್ರವಾಹವಾಗೋ ಮಾಧ್ಯಮಗಳ ಏರು ಪೇರಿಗೆ

ಈಗಾಗಲೇ ನಾವೆಲ್ಲ ಈಸುತ್ತ ಹಪಿಹಪಿತರಾಗಿದ್ದೇವೆ

ಒಂದೆಡೆ ದಿನವೂ ಸಾಯುವವರಿಗೆ ಅಳುವವರಾರಿಲ್ಲ ಎನ್ನುವ ಮಹಾಮಾರಿ

ಮತ್ತೊಂದೆಡೆ ವಿಶ್ವದ ಸಾರ್ಮಭೌಮತ್ವವನ್ನು ತಮ್ಮದನ್ನಾಗಿಸುವ ದಳ್ಳುರಿ|


ಎಪ್ಪತ್ತೈದು ವರ್ಷಗಳಲ್ಲಿ ಇರದ ವ್ಯಕ್ತಿ ಸ್ವಾತಂತ್ರ್ಯ ಇಂದು ದೊಡ್ಡದು

ಅವರವರಿಗೆ ಮನುಷ್ಯತ್ವಕ್ಕಿಂತ ಅವರ ಜಾತಿ-ಮತ ದೊಡ್ಡದು

ದೇಶ ಮೊದಲು ಎಂದು ದೇಶಕ್ಕಾಗಿ ಪ್ರಾಣ ಬಿಟ್ಟವರ ಮಕ್ಕಳು ಮೊಮ್ಮಕ್ಕಳು

ದೇಶ ತಮಗೇನು ಮಾಡಿದೆ ಎಂದು ಕೇಳಿ ಕೀಳುವರು ತಾಯ ಕರುಳು|


ಇಂದು ಯಾವ ಮುತ್ಸದ್ದಿಯೂ ಉತ್ತರ ಕೊಡಲಾರದ ಸಮಸ್ಯೆಗಳಿವೆ

ತಮ್ಮ ಹಕ್ಕು ತಮ್ಮ ನ್ಯಾಯದ ಬಗ್ಗೆ ಎಲ್ಲರ ಒಲವು ಆಶಯಗಳಿವೆ

ಎಲ್ಲರೂ ತಮ್ಮ ಒಳಿತನ್ನೇ ಯೋಚಿಸಿದರೆ ಮತ್ತೇಕೆ ಅಳಲು

ಜನರಿಗೆ ಕೊಂಚವೂ ಸಮಾಧಾನವಿಲ್ಲ ಕಾಯಲು|


ಇದು ನನ್ನ ದೇಶ ಇದು ನನ್ನ ದೇಶ

ಎಂದು ತಿರಂಗವನ್ನು ಎತ್ತರದಲ್ಲಿ ಕಟ್ಟಿ ನೋಡಿದ್ದೆವೋ

ಅಂದು ಯಾವ ಕಟ್ಟಳೆಯೂ ಇಲ್ಲದ ಹಾಡು ಹಾಡಿದ್ದೆವೋ

ಇಂದು ಅದು ನಮ್ಮದಲ್ಲ, ನಮ್ಮದಾಗಿಲ್ಲ|


ಅಲ್ಲಿಂದ ಇಲ್ಲಿಗೆ ಬಂದು ಇಲ್ಲಿಯೂ ಇಲ್ಲಿಯವರಾಗದ

ಅಲ್ಲಿಗೆ ಹೋಗದೆಯೇ ಅಲ್ಲಿಯವರೂ ಆಗದ

ದೂರದಲ್ಲಿ ಕಂಡ ಮರೀಚಿಕೆಗೆ ಮರುಗುವ ಮೃಗ

ಅವರವರ ಮೂಗಿನ ನೇರಕ್ಕೆ ಮಾತನಾಡುವ ವರ್ಗ|


ಹಿಗ್ಗಲಿಲ್ಲ ದೇಶ, ಭಾಷೆ, ವಿಶ್ವಗಳು ನಮ್ಮ ಬೆಳವಣಿಗೆಯಿಂದ

ಬಗ್ಗಲಿಲ್ಲ ಹಿಂದೆ ಕಲಿತ ಇತಿಹಾಸದ ಪಾಠಗಳಿಂದ

ಆಳಿಕೊಳ್ಳಲು ಬರದ ನಾವು ಅಳಿಸಿಕೊಳ್ಳುವುದರಲ್ಲಿ ಮುಂದು

ಮುಂದೆ ಬರಬೇಕೆನ್ನುವ ರಾಷ್ಠ್ರದ ಬೆನ್ನುಲುಬೇ ಹಿಂದು|