Monday, April 15, 2024

ಒಂದು ಬಿಂದು

ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು.  ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು!

ಈ ಅರಿವು ಮೂಡಿದ್ದು ಇತ್ತೀಚೆಗೆ, ನಾನು ಸಮುದ್ರದ ತಟದಲ್ಲಿ ನಿರಂತರವಾಗಿ ಕಾಲಿಗೆ ಬಂದು ರಾಚುತ್ತಿದ್ದ ಅಲೆಗಳ ಮಡಿಲಿನಿಂದ, ಬೊಗಸೆಯಲ್ಲಿ ನೀರನ್ನು ಮೊಗೆದು, ಸೂರ್ಯನಿಗಭಿಮುಖವಾಗಿ ವಿಸರ್ಜಿಸುತ್ತಿರುವಾಗ, ಕೊನೆಯಲ್ಲಿ ಉಳಿದ ಹನಿಗಳು ತಮ್ಮೊಳಗಿನ ಹೊಸದೊಂದು ಪ್ರಪಂಚವನ್ನೇ ತೋಡಿಕೊಂಡವು.

ಅಬ್ಬಾ! ಈ ಒಂದೊಂದು ಹನಿಯೂ ತನ್ನೊಳಗೆ ಅಪಾರವಾದ ಸಾಗರವನ್ನೇ ಹೊತ್ತಿಕೊಂಡಿದೆಯಲ್ಲಾ! ಸಣ್ಣ ಗಾಳಿಗೆ ಅದುರಿ ಹೋಗುವಂತೆ ಇರುವ ಹನಿಯ ಅಂತರಾಳದಲ್ಲಿ ಯಾವ ದರ್ಪವೂ ಕಾಣಲಿಲ್ಲ. ಆದರೆ, ಹತ್ತಿರದಲ್ಲೇ ಮೊರೆಯುತ್ತಿದ್ದ ಮಾತೃ ಹೃದಯದಿಂದ ದೂರವಾಗಿದ್ದಕ್ಕೆ ಅದರಲ್ಲಿ ಅಳುಕು ಮೂಡಿದಂತೆ ಕಾಣಿಸಿತು. ತನ್ನ ಮೇಲೆ ಬಿದ್ದ ಸೂರ್ಯನ ಕಿರಣಗಳ ದೆಸೆಯಿಂದ ಈ ಹನಿಗಳಿಗೂ ಕಣ್ಣಿರುವಂತೆ ಗೋಚರಿಸಿತು.

ಹೀಗೆ, ಮಹಾ ನೀರಿನಿಂದ ಬೇರೆಯಾಗಿ ಮರಳನ್ನು ಸೇರಿಯೋ, ಅಥವಾ ಹವೆಯಲ್ಲಿಯೇ ಲೀನವಾಗಿ ಮತ್ತೊಮ್ಮೆ ಮೋಡವಾಗಿ-ಮಳೆಯಾಗಿ ಇಳೆಯನ್ನು ಸೇರುವ ತವಕ ನೀರಿನ ಪ್ರತಿ ಹನಿಹನಿಯಲ್ಲಿಯೂ ಇರುವುದು ಸಹಜವೇ ಹೌದು.  ಆದರೆ, ಈ ಮಹಾ ನೀರಿನಿಂದ ಪ್ರತ್ಯೇಕಗೊಂಡ, ಆ ಸಣ್ಣ ಹನಿ, ಕೊಂಚ ಮಟ್ಟಿಗೆ ಹೆದರಿಕೊಂಡಿದ್ದಾದರೂ ಏಕಿರಬಹುದು? ನೀರು ಎಂದರೆ ಒಂದು ರೀತಿಯ ಶಕ್ತಿ, ಈ ಅಗಾಧವಾದ ಶಕ್ತಿಯಿಂದ ಬೇರ್ಪಟ್ಟು, ಮತ್ತೆ ಅದನ್ನು ಸೇರುವ ಹೊತ್ತಿಗೆ ಅದೆಷ್ಟು ಜನ್ಮಗಳನ್ನು ತಳೆದು, ರೂಪಗಳಲ್ಲಿ ಲೀನವಾಗಿ, ಕಾಡು-ಮೇಡುಗಳನ್ನು ತಿರುಗಿ, ಅನುಭವಿಸಬಾರದ್ದೆನ್ನೆಲ್ಲ ಅನುಭವಿಸಿ ಮತ್ತೆ ಸಮುದ್ರವನ್ನು ಸೇರುವುದು ಎಂದೋ, ಏನೋ, ಹೇಗೆಯೋ... ಎಂಬ ಆತಂಕದಿಂದ ಇರಬಹುದೇ?

ಈ ಒಂದೊಂದು ನೀರಿನ ಬಿಂದುವೂ ಒಂದೊಂದು ಆತ್ಮದ ಹಾಗೆ. ಅದು ಪ್ರತಿ ಜನ್ಮಕ್ಕೊಮ್ಮೆ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗಿ, ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಸೇರಿಕೊಂಡು, ಎಲ್ಲಿಯೂ ಸಮಾಧಾನಿಯಾಗಿರದೇ, ಮತ್ತೆ ಅಗಾಧವಾದ ಕಡಲನ್ನು ಸೇರುವ ತವಕದಲ್ಲಿಯೇ ಬಿರುಗು ಕಣ್ಣನ್ನು ಬಿಟ್ಟಂತೆ ಇರುವ ಅತಂತ್ರ ಜೀವಿ! ಪ್ರತಿಯೊಂದು ಹನಿಯಲ್ಲಿಯೂ ಜೀವವಿದೆ, ಸಾಗರದ ಅಷ್ಟೂ ನೀರಿನ ಸತ್ವವನ್ನು ಒಂದೇ ಒಂದು ಬಿಂದುವಿನಲ್ಲಿ ಹಿಡಿದಿಟ್ಟುರುವ ಹಾಗೆ, ಇದರಲ್ಲಿ ಎಲ್ಲ ಗುಣಗಳೂ ಇವೆ.

ನೀರಿನಿಂದ ಬೇರ್ಪಟ್ಟ ಈ ಹನಿಗಳು, ತಮ್ಮ ಪಯಣದುದ್ದಕ್ಕೂ ಒಂದೇ ರೀತಿ ಇರುತ್ತವೆ ಎಂದೇನೂ ಹೇಳಲಾಗದು. ಕೆಲವು ಅಲ್ಲಿಯೇ ಬಿದ್ದು ಮತ್ತೆ ಸಾಗರವನ್ನು ಸೇರಿದರೆ, ಇನ್ನು ಕೆಲವು ಹಲವಾರು ಜನ್ಮಗಳನ್ನು ತಳೆದ ಮೇಲೂ, ಹಿಂತಿರುಗಲು ಒದ್ದಾಡುವ ಹಪಾಹಪಿಗಳಾಗೇ ಇನ್ನೂ ಕಂಡು ಬರುತ್ತವೆ.

***

ತಿಳಿಯಾದ ಕೊಳದಲ್ಲಿ ಕಲ್ಲೊಂದನ್ನು ಹಾಕಿದರೆ, ವೃತ್ತಾಕಾರಗಳಲ್ಲಿ ಸಣ್ಣ ಅಲೆಗಳು ಎದ್ದು, ಅದೆಷ್ಟು ಬೇಗ ದಡವನ್ನು ಸೇರಿಯೇವೋ ಎಂದು ದಾವಂತದಲ್ಲಿ ಹರಡುವುದನ್ನು ನೀವು ನೋಡಿರಬಹುದು. ಆದರೆ, ಸಮುದ್ರ, ಅಥವಾ ಮಹಾಸಾಗರದ ನೀರಿನಲ್ಲಿ ಕಲ್ಲೊಂದನ್ನು ಹಾಕಿ, ಅದು ಯಾವ ರೀತಿಯ ಕಂಪನ/ತಲ್ಲಣಗಳನ್ನು ಅಲೆಯಾಕಾರದಲ್ಲಿ ಮೂಡಿಸುತ್ತದೆ ಎಂದು ಯೋಚನೆ ಮಾಡಬೇಕಾಗುತ್ತದೆ. ಸಮುದ್ರದಲ್ಲಿ ಹಾಕಿದ ಕಲ್ಲು, ಅಗಾಧವಾದ ಸಾಗರದ ಆಂತರ್ಯದಲ್ಲಿ ಅಲ್ಲೋಲ ಕಲ್ಲೋಲಗಳನ್ನು ಉಂಟು ಮಾಡುವುದರಲ್ಲಿ ಸೋತು ಹೋಗುತ್ತದೆ.

Image Source: https://www.usgs.gov/media/images/all-earths-water-a-single-sphere

ಈ ಪೃಥ್ವಿಯ ಬಹುಭಾಗ (71%) ನೀರಿನಿಂದಲೇ ಮುಚ್ಚಿಕೊಂಡಿದೆಯಂತೆ. ಉಳಿದ ಗ್ರಹಗಳಿಗೆ ಹೋಲಿಸಿದಾಗ ಭೂಮಿಯ ಮೇಲಿನ ನೀರಿನಿಂದಲೇ ಅದಕ್ಕೊಂದು ಶಕ್ತಿ ಮತ್ತು ಚೈತನ್ಯ ಬಂದದ್ದಲ್ಲವೇ?

ನನ್ನ ಪ್ರಕಾರ, ಪಂಚಭೂತಗಳಲ್ಲಿ ನೀರಿಗೆ ಹೆಚ್ಚಿನ ಮಹತ್ವ ಇರಬೇಕು. ಇನ್ನುಳಿದ ಗಾಳಿ, ಅಗ್ನಿ, ಆಕಾಶ, ಮತ್ತು ಭೂಮಿಯ ಸಣ್ಣ ಸಣ್ಣ ತುಂಡುಗಳಲ್ಲಿನ ಮಹತ್ವ ಈ ಒಂದು ನೀರಿನಷ್ಟು ಇರಲಾರದು. ಗಾಳಿ ಎಲ್ಲ ಕಡೆಗೂ ಒಂದೇ ರೀತಿ ಇರಬೇಕೆಂದೇನೂ ಇಲ್ಲ. ಬೆಂಕಿ ಎಲ್ಲ ಕಡೆಗೂ ಒಂದೇ ರೀತಿ ಕಂಡರೂ, ಅದು ನೀರಿನ ಹನಿಯಂತೆ ಪಯಣಿಸಲಾರದು. ಇನ್ನು ಆಕಾಶ ಅನಂತವೂ, ಅಪರಿಮಿತವೂ ಆಗಿರುವುದಾದರೂ, ಅದನ್ನು ಚಿಕ್ಕ ಹನಿಯ ಗಾತ್ರದಲ್ಲಿ ನಾವೆಂದೂ ಊಹಿಸಿಕೊಳ್ಳಲಾರೆವು. ನಿಜವಾಗಿಯೂ ನಿಮಗೆ ಸಮುದ್ರದ ಶಕ್ತಿ ಎಲ್ಲವೂ ಅಲ್ಲಿನ ಒಂದೊಂದು ಹನಿಯಲ್ಲಿಯೂ ಸಮನಾಗಿ ಹಂಚಿಕೊಂಡಿದೆ ಎಂದರೆ ನಂಬಲಿಕ್ಕೆ ಅಸಾಧ್ಯವಾದರೂ, ಅದು ನಿಜವೇ!

***

ಕೊಳದ ನೀರಿಗೂ, ಕೆರೆಯ ನೀರಿಗೂ, ಸರೋವರದ ನೀರಿಗೂ, ದೊಡ್ಡ ಜಲಾಶಯಗಳಲ್ಲಿ ಶೇಖರಣೆಗೊಂಡ ನೀರಿಗೂ, ಪುಷ್ಕರಣಿಯಲ್ಲಿ ಸಿಕ್ಕಿಕೊಂಡ ನೀರಿಗೂ, ತಮ್ಮ ತಮ್ಮದೇ ಆದ ಒಂದು ನಿಲುವು, ಅಥವಾ ಮನೋಭಾವ (attitude) ಇದೆ. ಹಾಗೆಯೇ, ಸಮುದ್ರ, ಸಾಗರ, ಮಹಾಸಾಗರದ ನೀರುಗಳಿಗೂ ಕೂಡ ತಕ್ಕನಾದ ಮನೋವೃತ್ತಿ ಇರಲೇ ಬೇಕು. ಈ ನೀರುಗಳ ಸಾರವೇ ಸಂಪೂರ್ಣವಾಗಿ ಒಂದು ನೀರಿನ ಬಿಂದುವಿಗೂ ಅಳವಡಿಸಲ್ಪಡುತ್ತದೆ. ಎಂತಲೇ, ಕೆರೆಯ ನೀರಿಗೂ, ಸಮುದ್ರದ ನೀರಿಗೂ ಅಜಗಜಾಂತರ ವ್ಯತ್ಯಾಸವಿರುವುದು. ಈ ಎಲ್ಲ ನೀರಿನ "ಹಳ್ಳ" (waterhole) ಗಳೂ ಒಂದೇ ಕಡೆ ಸಂಗ್ರಹಿತವಾಗಿದ್ದರೆ, ನದಿ-ಉಪನದಿಗಳೆಲ್ಲಾ ಸದಾ ಹರಿಯುವವೇ. ಈ ಎಲ್ಲದರ ಮೂಲ, ಮಳೆ... ಅಥವಾ ಆವಿ.  ನಿಮಗೆ ಎಲ್ಲೇ ಒಂದು ನೀರಿನ ಬಿಂದು ಕಂಡು ಬಂದರೆ, ಅದರ ಮೂಲಧರ್ಮ ಮಹಾಸಾಗರವನ್ನು ಸೇರುವುದು, ಅದನ್ನೆಂದೂ ಅದು ಮರೆಯುವುದಿಲ್ಲ, ತನ್ನತನವನ್ನು ಎಂದೂ ತೊರೆಯುವುದೂ ಇಲ್ಲ!

ಹೇಗೋ, ಒಂದು ಹನಿ ನೀರಿನಿಂದ, ಈ ಎಲ್ಲ ಆಲೋಚನೆಗಳೂ ಪುಂಖಾನುಪುಂಕವಾಗಿ ಹೊರಹೊಮ್ಮಿ ಬಂದವು. ಈ ಬಿಂದುವಿನ ಆತ್ಮಾವಲೋಕನದಿಂದ ನಮ್ಮ ಆತ್ಮಗಳ ಅವಲೋಕನವೂ ಆದಂತಾಯಿತು. ಅದಕ್ಕೆಂದೇ ಇರಬೇಕು, ಎಲ್ಲರಲ್ಲೂ ಸದಾ, ಸದಾ ಸಪ್ತ ಸಾಗರದಾಚೆಯ ಲೋಕದ ತುಡಿತ ಎಂದಿಗೂ ಜಾಗೃತವಾಗೇ ಇರುತ್ತದೆ!

No comments: