Friday, September 04, 2009

ಮತ್ತೆ ಅವನ ದರ್ಶನವಾಯ್ತು...

ನನ್ನ ಪಾಡಿಗೆ ನಾನು ಸುಮ್ಮನೇ ಒಂದು ಮುಂಜಾನೆ ಕೆಲಸಕ್ಕೆ ಹೊರಟಿರೋ ಹೊತ್ತಿಗೆ ಸುತ್ತಲಿನ ಮರಗಳು ಕುಲಕಿದಂತಾಗಿ ಅವುಗಳತ್ತ ನೋಡಿದೆ ಯಾವೊಂದು ವಿಶೇಷವೂ ಕಾಣಲಿಲ್ಲ, ಆದರೆ ಮರಗಳ ಎಲೆಗಳು ಅಲುಗಾಡುವಿಕೆಯಲ್ಲಿ ಏನೋ ಒಂದು ರೀತಿಯ ಹೊಸತನವಿದ್ದಂತೆ ತೋರಿತು. ಸುಮ್ಮನೇ ಹೀಗೇ ಇರಬಹುದು ಎಂದು ನನ್ನ ಪಾಡಿಗೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗಲೂ ಯಾರೋ ಆಹ್ವಾನಿಸದ ಅತಿಥಿಯೊಬ್ಬರು ನನ್ನ ಜೊತೆಗೆ ಕಾರಿನಲ್ಲಿ ಬರುತ್ತಿದ್ದಾರೆ ಎನ್ನಿಸಿದಾಗಲಂತೂ ಮೈ ನಡುಗತೊಡಗಿತು. ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ.

ಮುಂದೆ ಸ್ವಲ್ಪ ದೂರಗಳ ದಾರಿ ಸವೆಸಿದಂತೆ ಮರಗಿಡಗಳ ನಡುವೆ ಸೂರ್ಯ ಕಿರಣಗಳು ತೂರಿಬರಲು ಹರಸಾಹಸ ಮಾಡುತ್ತಿದ್ದವು. ಸೂರ್ಯನ ಬೆಳಕೂ ಕೂಡ ಮಂದಗತಿಯನ್ನು ತಲುಪಿತ್ತು. ಮುಂಜಾನೆ ಚುರುಕಾದ ಕಿರಣಗಳು ಮಲಗಿದವನ್ನೆಲ್ಲ ಬಡಿದೆಬ್ಬಿಸುವುದರ ಬದಲು ತಮ್ಮ ಮಂದ ಬೆಳಕಿನಲ್ಲೂ ಎದ್ದವರ ಕಣ್ಣನ್ನು ಕುಕ್ಕುತ್ತಿದ್ದವೇ ವಿನಾ ಮಲಗಿದವರ ಹತ್ತಿರ ಕೂಡಾ ಸುಳಿಯುತ್ತಿರಲಿಲ್ಲ. ಇದು ಸಾಲದು ಎಂಬಂತೆ ವಾತಾವರಣದ ಉಷ್ಣತೆಯೂ ಸ್ವಲ್ಪ ಸ್ವಲ್ಪ ಕಡಿಮೆಯಾದಂತಾಗಿ ಮಲಗಿದವರು ಕಂಬಳಿ-ಕೌದಿಯನ್ನು ಈಗಾಗಲೇ ಹುಡುಕಿಕೊಂಡು ಹೋಗುವುದು ಅನಿವಾರ್ಯವೆನ್ನಿಸಿರಬಹುದಾದದ್ದು ಜನರಲ್ಲಿ ಲವಲವಿಕೆಯನ್ನು ಮೂಡಿಸುವಲ್ಲಿ ಯಾವ ಉತ್ಸಾಹವನ್ನೂ ಕೂಡಿಹಾಕುತ್ತಿರಲಿಲ್ಲ. ಆದರೂ ನಾನು ದಾರಿ ಸವೆಸಿದಂತೆಲ್ಲಾ ಇಂದು ವಿಶೇಷವಾದ ಏನೋ ಒಂದು ಬದಲಾವಣೆ ಇದೆ ಎಂದು ಬಲವಾಗಿ ಅನ್ನಿಸುತ್ತಿದ್ದುದಂತೂ ನಿಜ.

ನನ್ನ ಹಿಂದೆ ಮುಂದೆ ಇದ್ದ ಕಾರುಗಳತ್ತ ಕಣ್ಣು ಹಾಯಿಸಿದೆ, ಅವರೆಲ್ಲರ ಅರ್ಧ ಮುಖಗಳು ಬೆಳಕಿನಲ್ಲಿ ಇನ್ನರ್ಧ ಮುಖಗಳು ನೆರಳಿನಲ್ಲಿ ಕಾಣಿಸುವಂತೆ ಎದುರಿನ ಸನ್ ಸ್ಕ್ರೀನ್ ನಿರ್ದೇಶಿಸುತ್ತಿತ್ತು. ಕಪ್ಪು ಕನ್ನಡಕ ಧರಿಸಿದ್ದ ಅವರೆಲ್ಲರೂ ಈ ಬೆಳಕು-ಕತ್ತಲಿನ ಬದಲಾವಣೆಗಳಿಗೆ ಹೆಣಗುವವರು ಯಾರು ಎಂದು ತಮ್ಮ ಸವಾಲನ್ನು ಯಾವತ್ತೋ ಬಿಟ್ಟಂತಿತ್ತು. ರಸ್ತೆಯ ಬದಿಯ ಮನೆಯ ಚಿಮಣಿಯ ಪಕ್ಕದಲ್ಲಿದ್ದ ಹೊಗೆ ಕೊಳವೆಯಲ್ಲಿ ಗ್ಯಾಸ್ ಹೀಟರ್ ಉರಿಯುತ್ತಿರುವುದರ ಪ್ರತೀಕವಾಗಿ ಕಪ್ಪು-ಕಂದು ಮಿಶ್ರಿತ ಹೊಗೆ ನಿಧಾನವಾಗಿ ವಾತಾವರಣದಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುತ್ತಿತ್ತು. ಹಾಗೆ ಸ್ಥಾಪಿಸಿದ ಅಸ್ಥಿತ್ವ ಮರುಕ್ಷಣವೇ ಮಾಯವಾಗುವ ಹಾಗೆ ಕಂಡು ಇವು ಎಲ್ಲ ಎಷ್ಟೊಂದು ಕ್ಷಣಿಕ ಎನ್ನಿಸುವಂತಾಯಿತು. ಇಷ್ಟೊತ್ತಿಗಾಗಲೇ ಹಬ್ಬಿ, ಹರಡಿ ಹಾಗೂ ಕದಡಿ ಹೋದ ಹೊಗೆ ಶುಭ್ರ ವಾತಾವರಣದಲ್ಲಿ ಮಂದವಾದ ಸೂರ್ಯನ ಕಿರಣಗಳ ದಯೆಯಿಂದ ಗೋಧೂಳಿಯ ತಿಳಿ ಪದರನ್ನು ಕಣ್ಣ ಮುಂದೆ ನಿರ್ಮಿಸುವಲ್ಲಿ ಹೆಣಗುತ್ತಿತ್ತು. ಹೀಗೇ ಏನೇನೇನೋ ಆಲೋಚನೆಗಳ ನಡುವೆಯೂ ಇಂದು ಅದೇನೋ ವಿಶೇಷವಿದೆ ಎನ್ನುವ ನನ್ನ ಭಾವನೆಗಳು ಬಲವಾಗುತ್ತಲೇ ಹೋದವು.

ನಡುವೆ ಬೇಕು ಎಂದರೂ ನಿಲ್ಲದ ಪಯಣ, ರಸ್ತೆಯಲ್ಲಿ ಇಳಿದ ಮೇಲೆ ಎಲ್ಲರಂತಿರಲೇ ಬೇಕಲ್ಲ, ನಾನೂ ಮುನ್ನಡೆದೆ. ನಮ್ಮ ಮನೆಯಿಂದ ಸರಿಯಾಗಿ ಆರು ಪಾಯಿಂಟ್ ಒಂದು ಮೈಲು ದೂರದಲ್ಲಿ ಕೊನೆಯಾಗುವ ಪ್ಲೆಸೆಂಟ್ ವ್ಯಾಲಿ ವೇ ಅಂತ್ಯದಲ್ಲಿ ಆರಂಭವಾಗುವ ಓಕ್‌ಡೇಲ್ ಅವೆನ್ಯೂನಲ್ಲಿ ಒಂದಿಷ್ಟು ಓಕ್ ಮರಗಳ ನಡುವೆ ದಾರಿಯಲ್ಲಿ ಬಂದಿದ್ದವನ್ನೆಲ್ಲ ಇರಿದು ಬಿಡುತ್ತೇವೆ ಎನ್ನುವ ಇರಾದೆಯಲ್ಲಿ ಬಲಿಯುತ್ತಿದ್ದ ಕಿರಣಗಳು ನನ್ನ ಕಣ್ಣುಗಳನ್ನು ಚುಚ್ಚಿದಾಗಲೇ ಈ ಅಪರೂಪದ ಅತಿಥಿ ಯಾರು ಎಂದು ನನಗೆ ಅರ್ಥವಾದದ್ದು! ಆ ಅತಿಥಿಯೇ ಫಾಲ್ (Fall) ದಿನ, ಮುಂಬರುವ ಛಳಿಗಾಲದ ಮುನ್ಸೂಚಕ, ಚಿಗುರಿ ಬಲಿತು ಮುಂದೆ ಬೆಳೆಯ ಬೇಕಾದ ಎಲೆಗಳಿಗೂ ಕರುಣೆ ತೋರದೆ ಎಲ್ಲವನ್ನೂ ಕೆಳಗೆ ಇಳಿಸುವವ, ಹಸಿರು-ಹಳದಿಯನ್ನು ಕೆಂಪಗಾಗಿಸುವವ, ಮರ-ಗಿಡಗಳ ಮೂಗು ಮುಸುಡಿಯನ್ನು ನೋಡದೆ ಬೆತ್ತಲಾಗಿಸುವವ, ರೀಸೈಕಲ್ ಪರಮಗುರು, ಎಂಥಾ ಮರವನ್ನು ನಡುಗಿಸುವವ, ಗಾಳಿಯಲ್ಲಿನ ತೇವವನ್ನು ತಿಂದು ತೇಗಿ ಬಿಡುವವ. ನಮ್ಮಂಥ ಹುಲು ಮಾನವರ ಕಥೆ ಹಾಗಿರಲಿ ಉರಿವ ಸೂರ್ಯನಿಗೂ ಸರಿಯಾಗಿ ಕೆಲಸ ಮಾಡಲು ಬಿಡದೆ ಅವನ ದಿನಗಳನ್ನೆಲ್ಲ ಮೊಟಕು ಹಾಕಿ ಬಿಡುವವ.

ಫಾಲ್ ದಿನ ಎಂದರೆ ಹೊಸತನವನ್ನು ಸ್ವಲ್ಪ ನಿಧಾನವಾಗಿಯೇ ತರುವ ಸಂಭ್ರಮದ ಆಶಾವಾದಿಯೇ ಎಂದು ನನ್ನನ್ನು ನಾನು ಸಂತೈಸಿಕೊಂಡಿದ್ದೇನೆ. ಅಥವಾ ಬಿಸಿಯಾಗಿದ್ದನ್ನು ತಂಪಾಗಿಸಿ ನಮ್ಮವರ ಮನ-ಮನೆಗಳಲ್ಲಿ ಡಿಪ್ರೆಷ್ಷನ್ನನ್ನು ಉಂಟು ಮಾಡುವ ನಿರಾಶಾವಾದಿಯೇ ಎಂದು ನಿಟ್ಟುಸಿರಿಟ್ಟಿದ್ದೇನೆ. ಬೇಸಿಗೆ ಮತ್ತು ಛಳಿಗಾಲಗಳ ನಡುವೆ ಬಂದು ಹೋಗುವ ಇವನ ಹೂಟವೇನು? ತರಗಲೆಗಳನ್ನೆಲ್ಲ ಸುತ್ತಿ ಎಲ್ಲಿಂದ ಎಲ್ಲಿಗೋ ಎಸೆಯುವ ಇವನ ಆಟವೇನು? ಬದುಕನ್ನು ಬಯಲಾಗಿಸಿ ನೋಡುವ ಇವನ ಮಾಟವೇನು?

ಇನ್ನೂ ಇಪ್ಪತ್ತು ದಿನಗಳಾದರೂ ಇವೆ ಅಧಿಕೃತವಾಗಿ ಸಮ್ಮರ್ ಮುಗಿಯಲು ಎಂದರೆ ಅಭ್ಯಾಗತ ಅತಿಥಿ ಈಗಾಗಲೇ ಬಂದು ಒಕ್ಕರಿಸಿದ್ದಾನೆ. ಬೆಳ್ಳಂಬೆಳಗ್ಗೆ ವಾತಾವರಣದ ಉಷ್ಣತೆಯನ್ನು ನಲವತ್ತೈದು ಡಿಗ್ರಿ ಫ್ಯಾರನ್‌ಹೈಟ್ ಮಟ್ಟಕ್ಕೆ ಇಳಿಸಿ ಸಂತಸ ಪಡುತ್ತಾನೆ. ಇದ್ದ ಒಂದೆರಡು ದಿನಗಳನ್ನಾದರೂ ಹಾಯಾಗಿ ಡೆಕ್ ಮೇಲೆ ಕಳೆಯೋಣವೆಂದರೆ ಈತ ವರುಣನೊಂದಿಗೆ ಬಿನ್ನಾಣದ ಸ್ನೇಹವನ್ನೂ ಬೆಳೆಸಿ ವರ್ಷಧಾರೆಯನ್ನು ಸುರಿಸುತ್ತಾನೆ. ಬೇಡಾ-ಬೇಡಾ ಎಂದರೂ ಬೇಡದ್ದನ್ನೇ ಮಾಡದ ಹಠ ಹಿಡಿದ ಪೋರನಂತೆ, ಇಂದು ಏನಾದರೂ ಸಿಕ್ಕಿದ್ದು ಸಿಕ್ಕಲಿ ಎನ್ನುವ ಚೋರನಂತೆ ಇವನ ಮನ. ಇವನ ಸ್ನೇಹವನ್ನು ಬೆಳೆಸದಿದ್ದರೆ ಬೇರೆ ದಾರಿಯೇನಿದೆ? ಇವನಿಗೆ ಸಲಾಮು ಹೊಡೆದು ಸಹಕರಿಸುತ್ತಿದ್ದ ಹಾಗೆ ಇವನ ಅಣ್ಣ ವಿಂಟರ್ ಬರುತ್ತಾನೆ - ಇವರೆಲ್ಲರ ಅಟ್ಟ ಹಾಸಕ್ಕೆ ಸಿಕ್ಕಿ ನೆರೆಹೊರೆ ಮರುಗುವುದರೊಳಗೆ ಮತ್ತೆ ನಂತರ ಸ್ಪ್ರಿಂಗ್ ಬಂದು ಸೂರ್ಯನ ಮಾಮೂಲಿ ಡ್ಯೂಟಿ ಆರಂಭವಾಗುವಾಗ ಇನ್ನು ಯಾವ ಕಾಲವಿದೆಯೋ ಅದೆಷ್ಟು ದೂರವೋ ಎಂದು ಎಣಿಸುತ್ತಿರುವ ಹೊತ್ತಿಗೆ ಯಾವಾಗಲೂ ಒಂದೇ ಮುಖವನ್ನು ಹೊತ್ತಿಕೊಂಡ ಆಫೀಸಿನ ಬಿರುಸು ಡ್ರೈವ್ ವೇ ಎದುರಿಗೆ ಸಿಕ್ಕು ಮತ್ತಿನ್ಯಾವುದೋ ಆಲೋಚನೆಯಲ್ಲಿ ಮನಸ್ಸು ತೊಡಗಿಕೊಳ್ಳುತ್ತದೆ. ಹೀಗೆ ಆಫೀಸ್ ಹೊಕ್ಕು ಮತ್ತೆ ಹೊರಬರುವವರೆಗೆ ಈ ಅತಿಥಿಗಳು ನನ್ನನ್ನು ಅಷ್ಟೊಂದು ಕಾಡೋದಿಲ್ಲವೆನ್ನುವುದು ನಿಜ.

Sunday, August 30, 2009

ನಾವೂ ನಮ್ಮ ವೆಕೇಷನ್ನೂ...

ನಮ್ಮ ಆಫೀಸಿನಲ್ಲಿ ಸಮ್ಮರ್ ಬಂತೆಂದರೆ ವೆಕೇಷನ್ನುಗಳ ಅಧಿಕೃತ ಆರಂಭವೆಂದೇ ಅರ್ಥ. ಮಾರ್ಚ್‌ಗೆ ಆರಂಭವಾಗುವ ಸ್ಪ್ರಿಂಗ್ ತನ್ನ ಆಗಮನದ ಜೊತೆಗೆ ಒಂದಿಷ್ಟು ಚಿಗುರುಗಳಲ್ಲಿ ಹುರುಪನ್ನು ಮೂಡಿಸುತ್ತದೆಯೇ ವಿನಾ ವಾತಾವರಣದ ಉಷ್ಣತೆ ಎಪ್ಪತ್ತು ಡಿಗ್ರಿ (ಫ್ಯಾರನ್‌ಹೈಟ್) ಮೇಲೆ ಏರಿ ಸುಯ್ ಎಂದು ತೀಡುವ ಮೃದುವಾದ ಗಾಳಿಯಿಂದ ರೋಮಾಂಚನವಾಗುವುದರಿಂದ ಹಿಡಿದು ಸಾಕಪ್ಪಾ ಸಾಕು ಈ ಬಿಸಿಲು ಎನ್ನುವಷ್ಟರಲ್ಲಿ ಸಮ್ಮರ್ ಹೋಗೇ ಬಿಟ್ಟಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಶಾಲೆಗಳಿಗೆ ರಜೆ, ಪೋಷಕರು ತಮ್ಮ ಮಕ್ಕಳನ್ನು ವರ್ಷಾವಧಿ ವೆಕೇಷನ್ನುಗಳಿಗೆ ಕೊಂಡೊಯ್ಯುವುದು ಕುಟುಂಬ ರೂಢಿ.

ನಾನು ನ್ಯೂ ಜೆರ್ಸಿಯಲ್ಲಿ ನೋಡಿರೋ ಹಾಗೆ ಅನಫಿಷಿಯಲ್ ಸಮ್ಮರ್ ಎಂದರೆ ಮೇ ತಿಂಗಳ ಕೊನೆಯಲ್ಲಿ ಬರುವ ಮೆಮೋರಿಯಲ್ ಡೇ ವೀಕ್ ಎಂಡ್ ನಿಂದ ಆರಂಭವಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ ಲೇಬರ್ ಡೇ ವರೆಗೆ. ಜೂನ್-ಜುಲೈ-ಆಗಷ್ಟ್ ಇವೇ ಮೂರು ತಿಂಗಳು, ಅದೇನು ಕಡಿದು ಹಾಕುತ್ತೀರೋ ಬಿಡುತ್ತೀರೋ, ಇವೇ ವರ್ಷದ ಉಳಿದ ಒಂಭತ್ತು ತಿಂಗಳನ್ನು ಸಹಿಸಿಕೊಳ್ಳುವಂತೆ, ಪ್ರತಿ ಸಮ್ಮರ್‌ನಲ್ಲಿ ಹೊಸದೇನನ್ನೋ ಸೃಷ್ಟಿಸುವಂತೆ ನಮ್ಮನ್ನೆಲ್ಲ ಕಟ್ಟಿ ಹಾಕಿರೋದು.

ಸಾಗರದ ಎಲ್.ಬಿ. ಕಾಲೇಜಿನಲ್ಲಿ ಓದಿಕೊಂಡಿರುವಾಗ ಇದ್ದಿಲು ಒಲೆಗೆ ಬೆಂಕಿ ತಗಲಿಸಿ ಹೊಟ್ಟೆ ತುಂಬಿಕೊಂಡ ಕರ್ಮ ಇನ್ನೂ ಮುಗಿದಿಲ್ಲವೇನೋ ಅನ್ನೋ ಹಾಗೆ ನಮ್ಮನೆ ಡೆಕ್ ನಲ್ಲಿ ಇರುವ ಕಲ್ಲಿದ್ದಲು ಗ್ರಿಲ್‌ ಏಪ್ರಿಲ್ ಅಂಚಿನಲ್ಲಿ ಬೇಸ್‌ಮೆಂಟ್ ನಿಂದ ಡೆಕ್‌ ಮೇಲೆ ಬಂದು ಇದ್ದಿಲಿಗೂ ನನಗೂ ಇರುವ ಋಣವನ್ನು ನೆನಪಿಸಿಕೊಡುತ್ತದೆ. ’ವೆಜಿಟೇರಿಯುನ್ನ್ ಜನ ನೀವೇನು ಗ್ರಿಲ್ ಮಾಡ್ತೀರಿ?’ ಎನ್ನೋರು ವಿಸ್ಮಿತರಾಗುವ ಹಾಗೆ ನನ್ನ ವೆಜಿಟೇರಿಯನ್ನ್ ಗ್ರಿಲ್ಲಿಂಗ್ ಪುರಾಣವನ್ನೆಲ್ಲ ಹೊರಗೆ ತೆಗೆದಿಡುತ್ತೇನೆ. ಈ ಕಲ್ಲಿದ್ದಲು ಶಾಖ ಎಷ್ಟು ಜೋರು ಅಂದ್ರೆ ಸರಿಯಾಗಿ ಮ್ಯಾನೇಜ್ ಮಾಡಿದ್ರೆ ಒಂದು ದಿನದ ಊಟ-ವ್ಯವಸ್ಥೆಯನ್ನು ಈ ಗ್ರಿಲ್ ಒಲೆಯಲ್ಲೇ ಮಾಡಿಬಿಡಬಹುದು. ಅಮೇರಿಕನ್ ಊಟದ ಪದ್ಧತಿಯ ಹಾಗೆ ನಾವು ಒಂದಿಷ್ಟು ವೆಜಿಟೇರಿಯನ್ ಪ್ಯಾಟ್ಟಿಗಳು, ಉಪ್ಪು-ಹುಳಿ-ಖಾರ ಸವರಿದ ಗೊಂಜೋಳ, ಸ್ಕಿವರ್‌ಗೆ ಪೋಣಿಸಿದ ಥರಥರ ತರಕಾರಿಗಳು, ಚಿಪ್ಸ್ ಮುಳುಗಿಸಿ ತಿನ್ನಲಿಕ್ಕೆ ಮಾವಿನ ಹಣ್ಣಿನ ಚಟ್ನಿ (ಸಾಲ್ಸಾ), ಸವತೆಕಾಯಿ ತುಂಡುಗಳು, ಮಾವಿನ ಹಣ್ಣು, ಮನೆಯಲ್ಲೇ ಮಾಡಿದ ಲಿಂಬೆ ಪಾನಕ (ಲೆಮನೇಡ್), ಹಲವು ಥರದ ಬ್ರೆಡ್ಡು, ಕೆಚಪ್, ಸುಟ್ಟ ಈರುಳ್ಳಿ, ರೆಡ್ ವೈನ್ ಮೊದಲಾದವುಗಳನ್ನು ನಮ್ಮ ಬ್ಯಾಕ್ ಯಾರ್ಡ್‌ನಲ್ಲಿ ಹರಡಿಕೊಂಡು ವರ್ಷದ ಒಂದಿಷ್ಟು ದಿನಗಳು ಮನೆಯಲ್ಲೇ "ಪಿಕ್‌ನಿಕ್" ಮಾಡೋದು ರೂಢಿ. ಇವುಗಳ ಜೊತೆಗೆ ಮೆಣಸಿನ ಕಾಯಿ ಬೋಂಡಾ, ಆಲೂಗಡ್ಡೆ ಬಜ್ಜಿ ಹಾಗೂ ಪನ್ಕೋಡಾ ಸೇರಿಕೊಂಡು ನಮ್ಮ ಸಮ್ಮರ್ ಪಾರ್ಟಿಗಳನ್ನು ಯಶಸ್ವಿಯಾಗಿ ಮಾಡಿಬಿಡುತ್ತವೆ. ಸ್ವಿಚ್ ಒತ್ತಿ ಗ್ಯಾಸ್ ಗ್ರಿಲ್ ಮೇಲೆ ಒಂದೇ ಕ್ಷಣದಲ್ಲಿ ಬರ್ಗರ್‌ಗಳನ್ನು ಮಾಡುವುದಕ್ಕಿಂತ ಕಲ್ಲಿದ್ದಲ ಗ್ರಿಲ್ ಹೊತ್ತಿಸಿ ಅದಕ್ಕೆ ಗಾಳಿ ಬೀಸಿ ನಿಧಾನವಾಗಿ ಹೊತ್ತಿ ಉರಿಯುವ ಬೆಂಕಿಯಲ್ಲಿ ದಿನದ ಒಂದೆರಡು ಘಂಟೆ ಹೊರಗಿರುವುದು ಸುಖ ತರುತ್ತದೆ. ನಮ್ಮ ಅತಿಥಿಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಹುಟ್ಟುತ್ತದೆ.

ಆದರೆ ಇವು ಯಾವುದೂ ನಮ್ಮ ವೇಕೇಷನ್ನ್ ಅಲ್ಲವೇ ಅಲ್ಲ. ಬಾರ್ ಬೇ ಕ್ಯೂ ಏನಿದ್ದರೂ ವಾರಾಂತ್ಯದಲ್ಲಿ ನಾವು ಮನೆಯಿಂದ ಹೊರಗಿರುವ ಪ್ರಯತ್ನವಷ್ಟೇ. ಇನ್ನು ಎಲ್ಲರಂತೆ ಪಡೆದುಕೊಳ್ಳುವ ನಮ್ಮ ವೆಕೇಶನ್ನ್ ದಿನಗಳು ಎಲ್ಲಿಗೆ ಹೋಗುತ್ತವೆ, ಹೋಗಿಬಿಟ್ಟವು. ವರ್ಷಕ್ಕೆ ಒಂದೋ ಎರಡೋ ಬಾರಿ ಸಮುದ್ರ ಇನ್ನೂ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವ ಹಾಗೆ ಬೀಚ್‌ಗೆ ಹೋಗುವುದು ವೇಕೇಷನ್ನ್ ಅಲ್ಲ. ಮುಂದಿನ ವರ್ಷ ನೋಡೋಣ ಎನ್ನುತ್ತಲೇ ಮುಂದೆ ತಳ್ಳುತ್ತ ಬಂದ ಡಿಸ್ನಿ ವರ್ಲ್ಡ್ ಮತ್ತು ಇತರ ಸ್ಥಳೀಯ ಆಕರ್ಷಣೆಗಳು ಇನ್ನೂ ಪುಸ್ತಕದ ಗಂಟಾಗೇ ಉಳಿದಿವೆ. ನಮ್ಮ ಮನೆಯಿಂದ ಕೇವಲ ಐವತ್ತೇ ಮೈಲು ದೂರದ ನ್ಯೂ ಯಾರ್ಕ್ ನಗರವನ್ನು ನೋಡೋದು ಯಾವಾಗಲೋ ಒಂದು ಬಾರಿ, ’ಯಾರು ಹೋಗುತ್ತಾರೆ ಅಲ್ಲಿಗೆ, ಹಳ್ಳ-ಕೊಳ್ಳವನ್ನು ದಾಟಿ’ ಎನ್ನುವ ಉದಾಸೀನ ಗೆದ್ದು ಬಿಡುತ್ತದೆ. ಅಮೇರಿಕದ ನಮ್ಮ ಬದುಕಿನಲ್ಲಿ ಆಫೀಸಿನ ಕೆಲಸ, ಕಾರ್ಯ ಹಾಗೂ ಅದರ ಸಂಬಂಧಿ ಯೋಚನೆಗಳನ್ನು ತೆಗೆದು ಹಾಕಿ ಬಿಟ್ಟರೆ ನಮ್ಮದು ಎಂದು ಉಳಿಯುವ ಭಾಗ ಬಹಳ ಕಡಿಮೆಯೇ ಎನ್ನಿಸಿ ಒಮ್ಮೆ ಭಯವಾಗುತ್ತದೆ.

ಹಿಂದೆ ಮದ್ರಾಸಿನಲ್ಲಿ ಕೆಲಸ ಮಾಡುವಾಗ ವಾರಕ್ಕೆರಡು ಮತ್ತು ತಿಂಗಳಿಗೆರಡು ಸಿಗುವ ರಜೆಗಳನ್ನು ಒಟ್ಟು ಪೋಣಿಸಿಕೊಂಡು ವಾರಗಟ್ಟಲೆ ಕರ್ನಾಟಕದಲ್ಲಿ ತಿರುಗಾಡಿದರೂ ಇನ್ನೂ ಮುಗಿಯದ ಕೆಲಸಗಳು ಹವ್ಯಾಸಗಳು ಅದೆಷ್ಟೋ ಇದ್ದವು. ಇನ್ನೂ ತಂತ್ರಜ್ಞಾನ ಇಷ್ಟು ಮುಂದುವರಿಯದೆ ನಮ್ಮ ನಮ್ಮ ನಡುವೆ ಅಗಾಧ ದೂರಗಳಿದ್ದರೂ ಭೇಟಿಯಾಗಿ, ಮಾತನಾಡಿ, ಮುಟ್ಟಿ, ಹರಟಿ, ಹಾಡಿ, ಜಗಳವಾಡಿ ಮತ್ತೆ ಒಂದು ಗೂಡಿ, ಕುಣಿದು ಕುಪ್ಪಳಿಸುವ ಅನೇಕ ಚಟುವಟಿಕೆಗಳ ತುಡಿತವಿತ್ತು. ಬೇಕಾದಷ್ಟು ನೆಪಗಳಿದ್ದವು, ನೆನಪುಗಳಿದ್ದವು. ಸಾಕಷ್ಟು ಸಂಖ್ಯೆಯ ಗುರುತು-ಪರಿಚಯದವರಿದ್ದರು, ಸಂಬಂಧಿಗಳಿದ್ದರು. ತಿರುಗಲು ದೇವಸ್ಥಾನಗಳಿದ್ದವು, ಮರುಗುವ ಮನಸ್ಸಿತ್ತು. ಎಷ್ಟಿದ್ದರೂ ಸಾಲದು ಇನ್ನೂ ಬೇಕು ಎನ್ನುವ ತುಡಿತವಿತ್ತು. ಸಾಹಿತ್ಯವಿತ್ತು, ಸಂಗೀತವಿತ್ತು, ಸಿನಿಮಾಗಳಿದ್ದವು, ಪುಸ್ತಕಗಳಿದ್ದವು, ನಿಯತಕಾಲಿಕಗಳಿದ್ದವು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಮಾರ್ಗದಲ್ಲಿ ಓದಿ ಮುಗಿಸಿದ ಅದೆಷ್ಟೋ ಲಂಕೇಶ್, ಸುಧಾ, ತರಂಗ, ಮಯೂರ, ಉತ್ಥಾನ, ಮಲ್ಲಿಗೆ, ಪ್ರಜಾಮತದ ವಾಹಿನಿಗಳಿದ್ದವು. ಊರಿಗೊಂದಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬೇಂದ್ರೆ, ಭೈರಪ್ಪ, ತರಾಸು, ಕಾರಂತ, ಮಾಸ್ತಿ, ಕುವೆಂಪು ಮೊದಲಾದ ಸ್ನೇಹಿತರ ಅನುಭವಗಳು ಅನಂತವಾಗಿ ಹಾಗೂ ಪುಕ್ಕಟೆಯಾಗಿ ಸಿಗುತ್ತಿದ್ದವು. ಇಂತಹ ಅಪರಿಮಿತ ಅನುಭವಗಳನ್ನು ಪಠಿಸಿ-ಪ್ರವಚಿಸಿದ ಘಟಾನುಗಟಿಗಳ ಸಾರ ಸುಲಭವಾಗಿ ಸಿಗುತ್ತಿತ್ತು. ಹಲವಾರು ತತ್ವಗಳು ಸಿಗುತ್ತಿದ್ದವು - ಒಂದು ರೀತಿ ಬಯಲಿನಲ್ಲಿ ಮೇಯುವ ದನಕ್ಕೆ ಸಿಗುವ ಅವಕಾಶದ ಹಾಗೆ, ಅಂತಹ ಅಗಾಧವಾದ ಅನೇಕಾನೇಕ ಬಯಲುಗಳು ಮೇಯಲಿದ್ದವು.

ಇವೆಲ್ಲದರ ಬಗ್ಗೆ ಈಗ ಬರೀತಾ ಹೋದರೆ ಅದು ಸವಿ ನೆನಪಾಗುತ್ತದೆ, ಅದರ ಮರುಘಳಿಗೆ ಅದು ನಾಸ್ಟಾಲ್ಜಿಯಾವಾಗಿ ಕಾಣುತ್ತದೆ. ಆದರೆ ಈವರೆಗೆ ಒಂದು ವಿಷಯವಂತೂ ಸತ್ಯ - ನಾವು, ನಮ್ಮ ವೇಕೇಷನ್ನುಗಳು, ನಮ್ಮ ದುಡಿಮೆ-ಇಡುಗಂಟು ಇವೆಲ್ಲದರ ಸಾಕ್ಷಾತ್ಕಾರ ಈ ಮೇಲಿನ ನಾಸ್ಟಾಲ್ಜಿಯಾದೊಂದಿಗೆ ಮಾತ್ರವೇ. ಅದನ್ನು ಹೊರತು ಪಡಿಸಿ, ಅಮೇರಿಕದಲ್ಲಿ ನಮ್ಮ ವೇಕೇಷನ್ನುಗಳಿಗೆ ಪೂರ್ಣ ಅರ್ಥ ಬಂದಿದ್ದಿಲ್ಲ, ನಮ್ಮ ಅರ್ಥ ಪರಿಸ್ಥಿತಿ ಪರಿಪೂರ್ಣವಾದದ್ದಿಲ್ಲ. ನಿಜವಾಗಿಯೂ ನಮ್ಮತನವನ್ನು ಕಲಕಿ ನೋಡುವ ವೆಕೇಷನ್ನುಗಳು ಕೆಲವು ಪುಣ್ಯಾತ್ಮರಿಗೆ ವರ್ಷಕ್ಕೊಮ್ಮೆ ಬರುತ್ತವೆ, ಇನ್ನು ಕೆಲವು ನಮ್ಮಂಥವರಿಗೆ ಮೂರು-ನಾಲ್ಕು ವರ್ಷಕ್ಕೊಮ್ಮೆ ಕೂಡಿ ಬರುತ್ತದೆ. ಬರೀ ವಿದೇಶ ಪ್ರಯಾಣದ ಯೋಗವೊಂದಿದ್ದರೆ ಸಾಲದು, ಮತ್ತೆ ಮರಳಿ ಸ್ವದೇಶವನ್ನು ಆಗಾಗ್ಗೆ ನೋಡುವ ಯೋಗವೂ ಇರಬೇಕು ಎನ್ನುವ ಆಲೋಚನೆ ಬಂದಿದ್ದು ಇತ್ತೀಚೆಗೆ ಮಾತ್ರ.

ಹಿಂದೆ ಎರಡು ಭುಜಗಳಿದ್ದ ಮನಕ್ಕೆ ಇಂದು ಎಂಟು ರೆಕ್ಕೆಗಳಿವೆ, ಎಲ್ಲಿಗಾದರೂ ಹೋಗಬೇಕು ಬರಬೇಕು ಎಂದರೆ ಅದರ ಮುಂದಿನ ತಯಾರಿ ಮತ್ತು ಅದರ ನಂತರದ ಚಿಂತೆಗಳು ಅನಿವಾರ್ಯವಾಗುತ್ತವೆ. ಹಣ ಹೆದರಿಕೆ ಎರಡೂ ಒಂದೇ ನಾಣ್ಯದ ಮುಖಗಳ ಹಾಗೆ ಒಂದನ್ನೊಂದು ಅನುಸರಿಸಿಕೊಂಡು ಬಂದಿವೆ - ಹಿಂದೆ ಹೆಗ್ಗೋಡಿನಿಂದ ಸಾಗರಕ್ಕೆ ನಿನಾಸಂ ನಾಟಕ ಮುಗಿಸಿ ನಡೆದುಕೊಂಡು ಬಂದಾಗ ಕತ್ತಲಿನ ದಾರಿಯಲ್ಲಿ ಹಾವಿದ್ದರೆ ಎನ್ನುವ ಹೆದರಿಕೆ ಇರಲಿಲ್ಲ, ಇಂದು ಕಾರಿನಲ್ಲಿ ಬೆಚ್ಚಗೆ ಕುಳಿತು ರಾತ್ರಿ ಡ್ರೈವ್ ಮಾಡುತ್ತಿದ್ದರೆ ರಸ್ತೆಯ ನಡುವೆ ಜಿಂಕೆಗಳು ಬಂದರೆ ಎಂದು ಕಂಪನ ಶುರುವಾಗುತ್ತದೆ.

ವರ್ಷವಿಡೀ ದುಡಿದು ಇರುವ ಮೂರು ನಾಲ್ಕು ವಾರಗಳನ್ನು ಒಟ್ಟುಗೂಡಿಸಿ ಕೆಲವು ವರ್ಷಗಳಿಗೊಮ್ಮೆ ಮಾಡುವ ಸ್ವದೇಶ ಪ್ರಯಾಣ ತರುವ ಸುಖಕ್ಕಿಂತ ಹೆಚ್ಚು ಕೆಲಸವಾಗುತ್ತದೆ, ವೆಕೇಷನ್ನಿನ್ನಲ್ಲಿ ಎಲ್ಲರೂ ಎಣಿಸಿ ಖರ್ಚು ಮಾಡುವುದಕ್ಕಿಂತ ಹೆಚ್ಚೇ ಕಾಸು ಕಳಚಿ ಹೋಗುತ್ತದೆ. ನಮ್ಮನ್ನು ಭೇಟಿಯಾಗುವವರ ಅನೇಕಾನೇಕ ಮುಖಗಳು ಅವುಗಳ ಹಿಂದಿನ ಕಥನವನ್ನು ಮನಸ್ಸಿನಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ನೆನಪಿನಲ್ಲಿರುವ ಹಾಗಿನ ಎಷ್ಟೋ ವ್ಯಕ್ತಿಗಳು ಇನ್ನೂ ಹರೆಯದವರಾಗಿರದೆ ಮುದುಕುರಾಗಿರುವುದನ್ನು ಅಪ್‌ಡೇಟ್ ಮಾಡಿಕೊಳ್ಳಲು ವಿದುಳು ಹೆಣಗುತ್ತದೆ. ಇತ್ತೀಚೆಗೆ ಕೇಳಿರದ ಅನೇಕ ಪದ-ವಾಕ್ಯಗಳ ಬಳಕೆ ಬೆಚ್ಚಿ ಬೀಳಿಸುತ್ತದೆ. ಅಲ್ಲಲ್ಲಿ ಕೇಳಿಬರುವ ಸಿನಿಮಾ ಹಾಡುಗಳು ಹೊಸದಾಗೇ ಉಳಿಯುತ್ತವೆ. ಹುಟ್ಟಿದ ಹೊಸಬರು, ಸತ್ತ ಹಳೆಯವರನ್ನು ಕುಟುಂಬಗಳ ಹಿನ್ನೆಲೆಯಲ್ಲಿ ತಾಳೆ ಹಾಕಿಕೊಳ್ಳುವುದು ಮುಗಿಯದ ಲೆಕ್ಕವಾಗುತ್ತದೆ.

’ನಾಲ್ಕು ವಾರ ವೆಕೆಷೆನ್ನಾ...’ ಎಂದು ಕೇಳಿ ಬರುವ ಉದ್ಗಾರಗಳಿಗೆ ಉತ್ತರವಾಗಿ ’ನಮ್ಮ ವೆಕೇಷನ್ನುಗಳ ಹಣೆಬರಹ ಇವರಿಗೇನು ಗೊತ್ತು!’ ಎನ್ನುವ ಹೇಳಿಕೆ ಮನದಲ್ಲೇ ಉಳಿದುಬಿಡುತದೆ. ವೆಕೇಷನ್ನಿಗೆ ಹೋಗುವುದಕ್ಕಿಂತ ಮೊದಲು ಹಾಗೂ ವೆಕೇಷನ್ನಿಂದ ಬಂದ ನಂತರ ಕೆಲಸಗಳು ಮಾತ್ರ ಅತಿಯಾಗಿ ಹೋಗುತ್ತವೆ. ಪ್ರತಿವರ್ಷ ಹೀಗೆ ಹೋಗಬೇಕು ಎನ್ನುವ ಆಸೆ, ಆಸೆಯಾಗಿಯೇ ಉಳಿದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಮೂರು-ನಾಲ್ಕು ವರ್ಷಗಳಿಗೊಮ್ಮೆಯಾಗಿ ಬಿಡುತ್ತದೆ.

Sunday, August 16, 2009

ಕೇವಲ 62 ವರ್ಷದ ಸ್ವಾತ್ಯಂತ್ರ್ಯ

ನಿನ್ನೆ ಸ್ವಾತಂತ್ರ್ಯೋತ್ಸವಗಳನ್ನು ಟಿವಿಯಲ್ಲಿ ನೋಡ್ತಾ ಇದ್ದಾಗ, ವರದಿಗಳನ್ನು ಓದ್ತಾ ಇದ್ದಾಗ ನಮ್ಮದು ಕೇವಲ 62 ವರ್ಷದ ಸ್ವಾತ್ಯಂತ್ರ್ಯ ಅಷ್ಟೇ ಅಂತ ಅನ್ಸಿದ್ದು ವಿಶೇಷ. ಈ ಹಿಂದೆ ನನಗೆ ನೆನಪಿರೋ ಹಾಗೆ ನಮ್ಮ ಹೈ ಸ್ಕೂಲು ದಿನಗಳಿಂದ ಹಿಡಿದು ನಲವತ್ತು, ಐವತ್ತು, ಅರವತ್ತು ವರ್ಷಗಳ ಆಚರಣೆಗಳನ್ನು ಮಾಡಿ-ನೋಡಿದ್ದರೂ ಈಗ ಅನ್ನಿಸ್ತಿರೋ ಹಾಗೆ ನಮ್ಮ ದೇಶ ಬ್ರಿಟೀಷರಿಂದ ಸ್ವಾತ್ರಂತ್ರ್ಯ ಪಡೆದದ್ದು ರಿಲೇಟಿ‌ವ್ ಆಗಿ ಇತ್ತೀಚೆಗೆ ಅನ್ನೋ ಭಾವನೆ ಬಲವಾಗ್ತಿದೆ.

ಈ ಆರು ದಶಕಗಳ ಸ್ವಾತಂತ್ರ್ಯದಲ್ಲಿ ನನಗೆ ಗೊತ್ತಿರೋ ಹಾಗೆ ಎರಡು-ಮೂರು ದಶಕಗಳನ್ನು ಚೆನ್ನಾಗಿ ಗಮನಿಸಿದರೆ, ಅದರಲ್ಲೂ ನಮ್ಮ ವಯಸ್ಸಿನವರಿಗೆ ಅನ್ವಯವಾಗುವ ಎಂಭತ್ತು ಹಾಗೂ ತೊಂಭತ್ತರ ದಶಕಗಳಲ್ಲಿ ಭಾರತ ಬಹಳಷ್ಟು ಬೆಳೆದಿದೆ. ತದನಂತರ ಎರಡು ಸಾವಿರದ ದಶಕದಲ್ಲಂತೂ ಎಲ್ಲಾ ಬೆಳವಣಿಗೆಗಳು ಮುಗಿಲು ಮುಟ್ಟಿದವು ಎಂದೇ ಹೇಳಬೇಕು. ನಾವು ಪಾಕಿಸ್ತಾನದವರ ಹಾಗೆ ಸ್ವಾತಂತ್ರ್ಯ ಸಿಕ್ಕ ಮೊದಲನೇ ದಿನದಿಂದ ವಿದೇಶಿಯರಿಗೆ ನಮ್ಮ ಮಾರ್ಕೆಟ್ಟುಗಳನ್ನು ತೆರೆದುಕೊಳ್ಳಲಿಲ್ಲ, ಎಂಭತ್ತು ಹಾಗು ತೊಂಭತ್ತರ ದಶಕದ ಅಂತ್ಯದವರೆಗೂ ಎಲ್ಲವೂ ಸರ್ಕಾರೀ ಸ್ವಾಧೀನದಲ್ಲೇ ಇತ್ತು. ಇಂದಿಗೂ ಸಹ ಬೇಕಾದಷ್ಟು ರಂಗಗಳಲ್ಲಿ ಸರ್ಕಾರಿ ಹಿಡಿತವಿದೆ. ನಮ್ಮ ದೇಶಕ್ಕೆ ವಿದೇಶಿ ಸರಕುಗಳು ನಿಧಾನವಾಗಿ ಬಂದವು. ರಕ್ಷಣಾ ತಂತ್ರಜ್ಞಾನವೇನೋ ಮೊದಲೇ ತೆರೆದುಕೊಂಡಿತು, ಆದರೆ ಮಿಕ್ಕವು ತಡವಾಗಿದ್ದಂತೂ ನಿಜ.

ಈ ಜಾಗತೀಕರಣ ಅನ್ನೋ ನಾಣ್ಯಕ್ಕೆ ಎರಡು ಮುಖಗಳಿದ್ದರೆ, ಅದರಲ್ಲಿ ಮೊದಲನೆಯದು ಒಂದು ದೇಶದ ಒಳಗಿನಿಂದ ಹೊರಹೋಗುವುದನ್ನು ಪ್ರತಿಬಿಂಬಿಸಿದರೆ ಮತ್ತೊಂದು ಹೊರದೇಶಗಳಿಂದ ಒಳಬರುವುದನ್ನು ಪ್ರತಿನಿಧಿಸುತ್ತದೆ. ಈ ಒಳ-ಹೊರ ಹೋಗುವುದನ್ನು ಯಾವುದೇ ವಿಚಾರಕ್ಕೂ ಅಳವಡಿಸಬಹುದು - ಆಮದು/ರಫ್ತು, ಸಂಸ್ಕೃತಿ, ಭಾಷೆ, ತಂತ್ರಜ್ಞಾನ, ವಿನ್ಯಾಸ, ವಿದ್ಯೆ, ಆಚಾರ-ವಿಚಾರ, ಇತ್ಯಾದಿ. ಸರಿ, ನಮಗೇನೋ ಇಂಗ್ಲೀಷರಿಂದ ಸ್ವಾತ್ರಂತ್ರ್ಯ ಸಿಕ್ಕಿತು, ಆದರೆ ಇವತ್ತಿನವರೆಗೂ ಉಳಿದ ದೇಶಗಳಲ್ಲಿ ಇಂಗ್ಲೀಷರ ಸಂತಂತಿ ಅಳಿದುಳಿದ ಹಾಗೆ ಭಾರತದಲ್ಲಿ ಏಕೆ ಮುಂದುವರೆಯಲಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಯಾವಾಗಲೂ ಛಳಿಯೆಂದು ಒದ್ದಾಡುವ ಯುರೋಪಿಯನ್ನರಿಗೆ ಭಾರತದಂತಹ ದೇಶದಲ್ಲಿ ಬೇಕಾದಷ್ಟು ಹವಾಮಾನದ ವೇರಿಯೇಷನ್ನುಗಳಿರುವಂಥ ಪ್ರದೇಶಗಳಿರುವಾಗ ನಮ್ಮಲ್ಲಿ ಎರಡನೇ ಮೂರನೇ ಜನರೇಷನ್ನ್ ಭಾರತೇತರ ಮೂಲದ ಜನರು ಏಕೆ ನೆಲಸದಿದ್ದಿರಬಹುದು? ಅದೇ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಹೆಚ್ಚು ಹೆಚ್ಚು ಯುರೋಪ್ ಪ್ರಭಾವವನ್ನು ಇವತ್ತಿನವರೆಗೂ ನಾವು ಕಾಣಬಹುದು. ಏಕೆ ಹೀಗೆ?

ಭಾರತದ ನೆಲವನ್ನು ಶತಮಾನಗಳ ಕಾಲ ಆಳಿದ ಯುರೋಪಿಯನ್ನರ ಪ್ರಭಾವ ನಮ್ಮಲ್ಲಿ ಇವತ್ತಿಗೂ ಬಹಳ ದೊಡ್ಡದು. ಒಳ್ಳೆಯದು ಕೆಟ್ಟದ್ದು ಎಂದು ಆಲೋಚಿಸುವುದನ್ನು ಆಬ್ಜೆಕ್ಟಿವ್ ಆಗಿ ಮಾಡಬೇಕಾಗುತ್ತದೆ. ನಮ್ಮಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು, ಸ್ಥಳೀಯ ರಾಜ ಪರಂಪರೆಗಳನ್ನು ಒಡೆದು-ಒಂದುಗೂಡಿಸಿ ಆಳಿ ಒಂದು ಭಾರತ ದೇಶವಾಯಿತು. ಜೊತೆಗೆ ರೇಲ್ ರೋಡ್, ಅಂಚೆ ವ್ಯವಸ್ಥೆ, ಆಂಗ್ಲ ವಿದ್ಯಾಭ್ಯಾಸ, ವಸ್ತ್ರ ವಿನ್ಯಾಸಗಳು, ಕೇಶ ಶೈಲಿ, ಮತ ಪಂಗಡಗಳು, ಆಹಾರ-ವಿಚಾರಗಳು, ಪಾನೀಯಗಳು, ಹೂವುಗಳು, ತರಕಾರಿಗಳು, ವಿಷಯ-ವಸ್ತುವನ್ನೊಂದನ್ನು ಬೇರೆ-ಬೇರೆ ರೀತಿಯಲ್ಲಿ ನೋಡುವ ದೃಷ್ಟಿಕೋನ... ಹೀಗೆ ಪಟ್ಟಿ ಮುಂದುವರೆಯುತ್ತದೆ. ಇವೆಲ್ಲ ನಮ್ಮನ್ನು ಆಳಿದವರು ನಮಗೆ ನೀಡಿದ ಬಳುವಳಿ. ಇಂತಹ ಬಳುವಳಿಗಳು ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ತಲೆಮಾರುಗಳು ಮುಂದುವರೆದ ಹಾಗೆ ಅವುಗಳು ಒಂದೊಂದೇ ವಿಶೇಷ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಯಾವುದು ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ಒಂದು ಭಾಷೆಯಾಗಿ ಯಾವುದು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ ನಮ್ಮನ್ನು ಒಂದುಗೂಡಿಸಿರಲಿಲ್ಲವೋ ಆ ಕೆಲಸವನ್ನು ಇಂಗ್ಲೀಷ್ ಮಾಡಿತು. ತಲೆ ತಲೆಮಾರುಗಳ ತರುವಾಯ ಯಾವ ವ್ಯವಹಾರ-ವಾಣಿಜ್ಯ ನಮ್ಮಲ್ಲಿ ಉಳಿದು-ಬೆಳೆದುಕೊಂಡು ಬಂದಿತ್ತೋ ಅದರ ಸ್ಥಳದಲ್ಲಿ ಇಂಗ್ಲೀಷ್ ಮೂಲದ ಬಿಸಿನೆಸ್ಸ್ ಪ್ರಾಸೆಸ್ಸುಗಳು ಬಂದವು. ಈ ಜಗತ್ತಿನಲ್ಲಿ ಯಾರು-ಏನು-ಎಲ್ಲೆಲ್ಲಿ-ಹೇಗೆ ಎನ್ನುವ ನಿರ್ಧಾರಗಳು ನಿಲುವುಗಳು ಬದಲುಗೊಂಡವು. ಜಗತ್ತು ಚಿಕ್ಕದಾಯಿತು, ಮನುಷ್ಯ ಪರಂಪರೆಗಳು ಮೊದಲಿಗಿಂತ ಹತ್ತಿರ ಬಂದವು.

ನಮ್ಮ ಸಾವಿರಾರು ವರ್ಷಗಳ ಪರಂಪರೆಯ ಮುಂದೆ ಈ ಸ್ವಾತಂತ್ರ್ಯೋತ್ತರ ಆರು ದಶಕಗಳು ಸಂಖ್ಯೆಯಲ್ಲಿ ಬಹಳ ದೊಡ್ಡವೇನು ಅಲ್ಲ, ಆದರೆ ಈ ಆರು ದಶಕಗಳಲ್ಲಿ ಆದ ದೇಶದ ಬೆಳವಣಿಗೆ ಹಾಗೂ ಪ್ರಗತಿ ಗಣನೀಯ. ನಮಗೆ ನಮ್ಮ ಮೂಲಭೂತ ಸಮಸ್ಯೆಗಳು ಎಂದಿಗೂ ಇರುವಂಥವೇ ಎನ್ನಿಸುವಂತಾಗಿದೆ, ನಮ್ಮ ದೇಶದಲ್ಲಿ ನೂರಕ್ಕೆ ಐವತ್ತು ಮಂದಿಗೆ ತಮ್ಮ ಹೆಸರನ್ನು ಬರೆಯಲು ಬಾರದು ಎನ್ನುವುದರಲ್ಲಿ ಬದಲಾವಣೆಯನ್ನು ಕಾಣಲು ಇನ್ನೂ ಬಹಳ ವರ್ಷಗಳೇ ಬೇಕಾಗುತ್ತವೆ, ನಮ್ಮವರಿಗೆಲ್ಲ ಸ್ವಚ್ಛ ಕುಡಿಯುವ ನೀರಿನ ಅಗತ್ಯ ಯಾವತ್ತಿನಿಂದ ಇದ್ದರೂ ಅದನ್ನು ಪೂರೈಸುವುದು ಇನ್ನೂ ಪ್ರಯತ್ನವಾಗಿಯೇ ಉಳಿಯುತ್ತದೆ, ಕೋಟ್ಯಾಂತರ ಜನರು ಕೆಲಸ ಮಾಡಬಲ್ಲವರಾದರೂ, ಕೆಲಸವಿಲ್ಲದವರಾಗುತ್ತಾರೆ. ಜನರಿಂದ ಜನರಿಗಾಗಿ ಬೇಕಾಗುವ ಕೆಲಸ ಹುಟ್ಟಿ ಇಂಡಸ್ಟ್ರಿಗಳು ಬೆಳೆಯದೇ ಹೋಗಿ, ಅಗತ್ಯದ ಕೆಲಸ ಕಾರ್ಯಗಳಲ್ಲಿ ಚಿಕ್ಕ ಮಕ್ಕಳ ಬಳಕೆಯಾಗುತ್ತದೆ. ವೃತ್ತಿ ಶಿಕ್ಷಣ ಸಂಬಂಧಿ ನಿಲುವು ಹೆಚ್ಚಾಗದೇ ಒಂದು ವಿದ್ಯೆ, ಬಿಸಿನೆಸ್ಸನ್ನು ತಮ್ಮದೆನ್ನಿಸಿಕೊಳ್ಳದೇ ಎಲ್ಲರಿಗೂ ಎಲ್ಲವೂ ಗೊತ್ತು ಆದರೆ ಯಾರೂ ಪರಿಣಿತರಿಲ್ಲವೆನ್ನುವಂತಾಗುತ್ತದೆ.

ನನ್ನಂಥವರಿಗೆ ಆರು ದಶಕಗಳ ಸ್ವಾತಂತ್ರ್ಯದ ಸವಿಯುಂಡ ಒಂದು ದೇಶದ ಹಿನ್ನೆಲೆಯಿದೆ, ಜೊತೆಗೆ ೨೩ ದಶಕಗಳ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಮತ್ತೊಂದು ದೇಶದ ಸದರಿ ಆಗು-ಹೋಗುಗಳ ಅರಿವಿದೆ. ತಂತ್ರಜ್ಞಾನ-ಸಂವಹನ ರಂಗದಲ್ಲಿ ಇತ್ತೀಚೆಗೆ ಕ್ರಾಂತಿಯಾದದ್ದನ್ನು ನಾವು ಕಣ್ಣಾರೆ ಕಂಡು ಅನುಭವಿಸಿದ್ದೇವೆ. ಇನ್ನೂ ಎರಡು ದಶಕಗಳ ಬಳಕೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಜನರ ಅಂತರ್ಜಾಲದ ಸೂಪರ್ ಹೈವೇ ಹಾಗೂ ನೂರಾರು ವರ್ಷಗಳ ಹಿಂದೆ ಯಾರೋ ತೆರೆದಿಟ್ಟ ದಾರಿಗಳಿರುವಾಗ ಮುಂದೆ ಇವೆಲ್ಲ ಮುಂದೆ ಹೇಗೆ ಎನ್ನುವ ಕುತೂಹಲ ಎಂದಿಗಿಂತಲೂ ಇನ್ನೂ ಬಲವಾಗಬಹುದು.

ನಮ್ಮಲ್ಲಿ ಸಮಸ್ಯೆಗಳು ಹೆಚ್ಚು ಎಂದು ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ಹೆಚ್ಚು ಜನಸಂಖ್ಯೆಯೇ ಎಲ್ಲದಕ್ಕೂ ಕಾರಣ ಎಂದು ದೂರಿ ಫಲವಿಲ್ಲ. ಇವೆಲ್ಲ ನಮ್ಮತನದಲ್ಲಿ ಅವಿಭಾಜ್ಯವಾಗಿ ಸೇರಿಹೋಗಿವೆ. ನಮ್ಮ ದೇಶವನ್ನು ಅಮೇರಿಕದಷ್ಟು ಉದ್ದ-ಅಗಲವಾಗಿ ಹಿಗ್ಗಿಸಲಾಗದು. ನಮ್ಮಲ್ಲಿ ಅಮೇರಿಕದ ಸವಲತ್ತು-ಸಂಪನ್ಮೂಲಗಳನ್ನು ಒಂದೇ ದಿನದಲ್ಲಿ ಸೃಷ್ಟಿಸಲಾಗದು. ನಮ್ಮ ಮೂಲಭೂತ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿರ್ಮೂಲನ ಮಾಡಲಾಗದು. ಇವುಗಳಿಗೆಲ್ಲ ಉತ್ತರ ಬಹಳ ದೂರದ ಪ್ರಯಾಣ ಹಾಗೂ ಅಂತಹ ಅಪರಿಮಿತ ಪ್ರಯಾಣದಲ್ಲಿ ದೊರಕುವ ಯಶಸ್ಸಿನ ಮೈಲುಗಳು ಈ ಸಮಸ್ಯೆಗಳಿಗೆ ಉತ್ತರಗಳು. ಇನ್ನೂ ನೂರು-ಇನ್ನೂರು ವರ್ಷಗಳಲ್ಲಾದರೂ ನಾವು ಪ್ರಭಲರಾಗುತ್ತೇವೆ. ನಮ್ಮ ಸಂಖ್ಯೆ ನಮ್ಮ ಶಕ್ತಿಯಾಗುತ್ತದೆ. ನಾವು ಎಲ್ಲರಿಗಿಂತ ಮುಂದಿರುತ್ತೇವೆ.

ಇವು ಬರೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡೋ ವಿಷ್ ಆಗಲೀ ವಿಷ್‌ಫುಲ್ ಆಲೋಚನೆಗಳಾಗಲೀ ಆಗದೇ ಆದಷ್ಟು ಬೇಗ ನಿಜವಾಗುವುದನ್ನು ನಮ್ಮ ತಲೆಮಾರು ನೋಡಿದ್ದರೆ ಎಷ್ಟೊಂದು ಚೆನ್ನಿತ್ತು ಅನ್ನಿಸೋದಿಲ್ಲವೇ?

Friday, August 14, 2009

ಕಷ್ಟಗಳು, ಉಳಿತಾಯ ಹಾಗೂ ಮೋಕ್ಷ

’ಬಹಳ ಕಷ್ಟಾ ಸ್ವಾಮಿ, ಇತ್ತೀಚೆಗೆ’. ಅನ್ನೋ ಮಾತು ಆಗಾಗ್ಗೆ ಕೇಳಿ ಬರ್ತಾನೇ ಇರುತ್ತೆ. ಕೆಲಸ ಕಳೆದುಕೊಂಡವರ ಬಗ್ಗೆ, ಮನೆಗಳ ಬೆಲೆ ಕುಸಿದು ಮಾರಲೂ ಆಗದೇ ಅವುಗಳ ಸಾಲವನ್ನು ಕಟ್ಟಲೂ ಆಗದೇ ಕೊರಗುವವರ ಬಗ್ಗೆ, ಒಂದೇ ಮನೆಯಲ್ಲಿ ಇತ್ತೀಚೆಗಷ್ಟೇ ಕಾಲೇಜು ಮುಗಿಸಿದ ಕೆಲಸ ಹುಡುಕುತ್ತಿರುವ ಮಕ್ಕಳ ಜೊತೆಗೆ ಪೋಷಕರೂ ಕೆಲಸ ಹುಡುಕುತ್ತಿರುವುದರ ಬಗ್ಗೆ, ಇನ್ನೇನು ನಿವೃತ್ತರಾಗಬೇಕು ಎನ್ನುಕೊಳ್ಳುವವರು ಮತ್ತಿನ್ನೊಂದಿಷ್ಟು ವರ್ಷಗಳ ಕಾಲ ಕೆಲಸ ಮಾಡಲೇ ಬೇಕು ಎನ್ನುವುದರ ಬಗ್ಗೆ ಹೀಗೆ ಹಲವಾರು ವರದಿಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಬಡತನದಲ್ಲಿ ಹುಟ್ಟಿ ಬೆಳೆದವರಿಗೆ ಮುಂದೆ ಅವರು ಯಾವುದೇ ಸ್ಟೇಟಸ್‌ನಲ್ಲಿದ್ದರೂ ಅವರ ಸರ್ವೈವಲ್ ತಂತ್ರಗಳು ಯಾವಾಗಲೂ ಜೀವಂತವಾಗಿಯೇ ಇರುತ್ತವೆ ಎಂದು ಹೇಳಬೇಕು. ಒಮ್ಮೆ ಬಡತನದಲ್ಲಿ ಸಿಕ್ಕಿಕೊಂಡರೆ ಅದರ ಪರಿಣಾಮಗಳು ಒಂಥರಾ ರಕ್ತದಲ್ಲಿರುವ ಯಾವುದೇ ಖಾಯಿಲೆಯ ವೈರಾಣುಗಳ ಹಾಗೆ ಯಾವತ್ತೂ ಜೀವಂತವಾಗೇ ಉಳಿದು ಕಷ್ಟದ ಪರಿಸ್ಥಿತಿಯಲ್ಲಿ ಹಳೆಯ ಇನ್‌ಸ್ಟಿಂಕ್ಸ್ ಎಲ್ಲ ಕೆಲಸ ಮಾಡಲು ಆರಂಭಿಸುತ್ತವೆ. ಅದೇ ಹುಟ್ಟಿದಂದಿನಿಂದ ಬಡತನವನ್ನು ಕಾಣದೇ ಇದ್ದವರ ಮೊದಲ ಬಡತನದ ಬವಣೆ ಬಲುಕಷ್ಟ.

ನಮ್ಮ ಪಕ್ಕದ ಮನೆಯವರು ಈ ಹತ್ತು ವರ್ಷಗಳಿಂದಲೂ ಪ್ರತಿನಿತ್ಯ ತಮ್ಮ ಮನೆಯ ಸುತ್ತಲೂ ಕನಿಷ್ಠ ಇಪ್ಪತ್ತು ವಿದ್ಯುತ್ ದೀಪಗಳನ್ನು ಉರಿಸುತ್ತಿದ್ದರು - ಗರಾಜ್ ಲೈಟ್‌ಗಳು, ಎದುರು ಲಾನ್‌ನಲ್ಲಿರುವ ಮರಗಳಿಗೆ ಫೋಕಸ್ ಲೈಟ್‌ಗಳು, ಮನೆಯ ಮುಂದಿನ ಬಾಗಿಲಿಗೆ, ಡ್ರೈವ್‍ ವೇ ಅಕ್ಕಪಕ್ಕದಲ್ಲಿ ಇತ್ಯಾದಿ. ಈ ಲೈಟುಗಳೆಲ್ಲ ಅಟೋಮ್ಯಾಟಿಕ್ ಆಗಿ ರಾತ್ರಿ ಪೂರ್ತಿ ಉರಿದು ಬೆಳಿಗ್ಗೆ ಆರಿಹೋಗುತ್ತಿದ್ದವು, ಅದೇ ನಮ್ಮ ಮನೆಯಲ್ಲಿ ದಿನಕ್ಕೆ ಕೆಲವು ಘಂಟೆಗಳು ಮಾತ್ರ ಮುಂದಿನ ಬಾಗಿಲಿನ ಎರಡು ಎನರ್ಜಿ ಎಫಿಷಿಯಂಟ್ ಬಲ್ಬ್‌ಗಳು ಉರಿಯುತ್ತಿದ್ದವು. ಹೋದ ವರ್ಷದ ಕೊನೆಯಲ್ಲಿ ಇದ್ದಕ್ಕಿದ್ದ ಹಾಗೆ ನಮ್ಮ ಇಲೆಕ್ಟ್ರಿಕ್ ಬಿಲ್ ಡಬಲ್ ಆಯಿತು, ನಾನೂ ಗಾಬರಿಗೊಂಡು ಒಂದಿಬ್ಬರನ್ನು ಕೇಳಿ ತಿಳಿದಾಗ ಅವರದ್ದೂ ಅದೇ ಪರಿಸ್ಥಿತಿ. ಹಾಗಾದ ಮರುದಿನವೇ ಪಕ್ಕದ ಮನೆಯ ಲೈಟುಗಳು ಎಲ್ಲವೂ ನಿಂತು ಹೋದವು, ಅವರು ಮನೆಯಲ್ಲಿದ್ದ ದಿನಗಳು ಮಾತ್ರ ಮುಂದಿನ ಬಾಗಿಲಿಗೆ ಒಂದು ಎನರ್ಜಿ ಎಫಿಷಿಯಂಟ್ ಲೈಟ್ ಬಲ್ಬ್ ಉರಿಯತೊಡಗಿತು. ಕೇವಲ ಎಲೆಕ್ಟ್ರಿಕ್ ಬಿಲ್ ವಿಚಾರವೊಂದೇ ಅಲ್ಲ, ಅವರ ಖರ್ಚು-ವೆಚ್ಚ ಜೀವನ ಶೈಲಿಯಲ್ಲೂ ಬದಲಾವಣೆಗಳು ಗೋಚರಿಸತೊಡಗಿದವು: ನ್ಯೂಸ್ ಪೇಪರ್ ಸಬ್‌ಸ್ಕ್ರಿಫ್ಷನ್ ನಿಂತು ಹೋಗುವುದು, ವರ್ಷದ ವೆಕೇಷನ್ನ್ ಕ್ಯಾನ್ಸಲ್ ಆಗುವುದು, ಮುಂತಾಗಿ.

ಒಂದು ವಸ್ತು ನಮ್ಮದೋ ಅಲ್ಲವೋ ಎಲ್ಲ ಕಡೆ ಕನ್ಸರ್‌ವೇಟಿವ್ ಆಗಿರುವುದು ಒಂದು ಬಗೆ - ಉದಾಹರಣೆಗೆ ನಮ್ಮ ಆಫೀಸಿನಲ್ಲಿ ನಾವು ಪ್ರಿಂಟ್ ಮಾಡುವ ಪ್ರತಿಯೊಂದು ಡಾಕ್ಯುಮೆಂಟ್ ಜೊತೆಗೆ ನಮ್ಮ ಹೆಸರಿನ ಕವರ್ ಪೇಜ್ ಅನ್ನು ನಾನು ಸಾಧ್ಯವಾದಷ್ಟು ಬಳಸುತ್ತೇನೆ, ಅದರ ಖಾಲಿ ಇರುವ ಮತ್ತೊಂದು ಪುಟದಲ್ಲಿ ಏನಾದರೂ ನೋಟ್ಸ್ ಮಾಡುವುದಕ್ಕೋ ಅಥವಾ ಚಿಕ್ಕದಾಗಿ ಕತ್ತರಿಸಿಕೊಂಡು ’ಪೋಸ್ಟ್ ಇಟ್’ ನೋಟ್ಸ್ ಥರವೋ, ಅಥವಾ ಇನ್ನೊಂದು ರೀತಿ. ಇನ್ನುಳಿದವರು ಆ ಕವರ್ ಪುಟವನ್ನು ಟ್ಯ್ರಾಷ್ ಮಾಡಬಹುದು, ಅಥವಾ ರಿಸೈಕಲ್ ಮಾಡಬಹುದು, ಹೀಗೆ ಅವರವರ ಬುದ್ಧಿಗೆ ತಕ್ಕಂತೆ ಆ ಕವರ್ ಪೇಜ್ ಬಳಕೆಗೊಳ್ಳುತ್ತೆ. ಇಲ್ಲಿ ಒಂದೇ ಸರಿಯುತ್ತರವೆಂಬುದೇನೂ ಇಲ್ಲ, ಆ ಪುಟವನ್ನು ಹೇಗೆ ಬಳಸಬೇಕು ಎನ್ನುವುದಕ್ಕೆ ಹಲವಾರು ಸರಿ ಉತ್ತರಗಳಿವೆ. ನನ್ನ ನಿಲುವಿನಲ್ಲಿ ಅಥವಾ ನಾನು ಹೇಗೆ ಆ ಕವರ್ ಪುಟವನ್ನು ಬಳಸುತ್ತೇನೆ ಎಂಬುದರಲ್ಲಿ ಯಾವುದೇ ಬದಲಾವಣೆಗಳೂ ಆಗಲಾರವು, ಅದು ಎಕಾನಮಿಯನ್ನೂ ಆದರಿಸಿಲ್ಲ, ಅದಕ್ಕೆ ನೇರವಾಗಿ ನಾನು ಹಣಕೊಡುವುದೂ ಇಲ್ಲ. ಇದು ಹೇಗೆ ನನ್ನ ನಿಲುವೋ ಉಳಿದವರದೂ ಹಾಗೆ, ಅಷ್ಟೇ.

ಇನ್ನು ಕಷ್ಟದ ಮಾತಿಗೆ ಬರೋಣ, ಅವರವರ ಕಷ್ಟ ಅವರಿಗೆ ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ. ಆದರೆ ಕಷ್ಟಗಳು, ಸಾಂಸಾರಿಕ ಜಂಜಾಟಗಳು, ನಮಗೊದಗುವ ಅನೇಕ ತೊಂದರೆಗಳನ್ನು ಹಲವಾರು ರೀತಿಯಲ್ಲಿ ನೋಡಬಹುದು. ಅವುಗಳ ತುಲನಾತ್ಮಕ ಅರಿವು ನಮ್ಮನ್ನು ಎಷ್ಟೋ ಸಾರಿ ’ಸದ್ಯ, ನಮಗೆ ಹಾಗಾಗದಿದ್ದರೆ ಸಾಕು!’ ಎನ್ನುವ ಮನೋಭಾವನೆಯಿಂದ ಆ ಮಟ್ಟಿಗೆ ಸಮಾಧಾನ ಹುಟ್ಟಬಹುದು. ದೈಹಿಕ ಕೆಲಸಗಳಿಂದ ಸ್ನಾಯುಗಳು ಬಲಗೊಳ್ಳುವ ಹಾಗೆ ಈ ಸಂಕಷ್ಟಗಳ ಪರಂಪರೆ ಮನಸ್ಸನ್ನು ಗಟ್ಟಿಗೊಳಿಸಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಜಂಜಾಟಗಳಲ್ಲಿ ಬಳಲಿ, ತೊಳಲಿ, ಬಗ್ಗಿ, ಬಾಗಿ, ನೊಂದು, ನಲಿದು ಮುಂದೆ ಇವೆಲ್ಲದರ ದೆಸೆಯಿಂದ ಲಕ್ಷಾಂತರ ಜನ್ಮಗಳಲ್ಲಿ ಮೋಕ್ಷ ಸಿಗಬಹುದು.

ನಮಗೆಲ್ಲ ಕಷ್ಟದ ಬಗ್ಗೆ ಏನು ಗೊತ್ತಿದೆ? ಮನೆಯಲ್ಲಿ ಮೂರೋ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎನ್ನುವ ಪೋಷಕರ ನಡುವೆ, ಹುಟ್ಟಿದಂದಿನಿಂದ ವಿಕಲಾಂಗರಾಗಿ ಬೆಳೆಯುವ ಮಕ್ಕಳನ್ನು ಪೋಷಿಸುವ ತಂದೆ-ತಾಯಿಗಳ ನಡುವೆ, ಇಂದಿದ್ದರೆ ನಾಳೆ ಬೆಳಿಗ್ಗೆ ತಿನ್ನುವುದಕ್ಕಿಲ್ಲ ಎನ್ನುವವರ ನಡುವೆ, ಯಾವಾಗಲೂ ಒಂದಲ್ಲ ಒಂದು ಖಾಯಿಲೆಯಿಂದ ನರಳುತ್ತಿರುವ ಕುಟುಂಬದ ಸದಸ್ಯರ ಜೊತೆ ತಮ್ಮ ದಿನಚರಿಯನ್ನು ಕಂಡುಕೊಳ್ಳುವವರ ನಡುವೆ, ಇದ್ದ ಮಕ್ಕಳಲ್ಲಿ ಕೆಲವರನ್ನು ದುರಂತಗಳಲ್ಲಿ ಕಳೆದುಕೊಂಡು ಜೀವನ ಪರ್ಯಂತ ನರಳುವವರ ನಡುವೆ, ಆಫೀಸಿನ ಕೆಲಸ ಮನೆಯಲ್ಲಿನ ಕೆಲಸಗಳ ಜೊತೆಗೆ ತಮ್ಮ ಕುಟುಂಬದ ಹಿರಿಯರನ್ನು ಪೋಷಿಸಿಕೊಂಡು ಹೋಗುವವರ ನಡುವೆ, ತಮ್ಮ ಪ್ರೈಮರಿ ರೆಸಿಡೆನ್ಸ್ ಅಥವಾ ತಮ್ಮ ಜೀವನದ ಇಡುಗಂಟನ್ನು ಕಳೆದುಕೊಂಡವರ ನಡುವೆ...ಹೀಗೆ ಈ ಪಟ್ಟಿ ಮುಂದುವರೆಯುತ್ತದೆ. ಪ್ರತಿಯೊಬ್ಬರ ಕಷ್ಟದ ಅರಿವು ಹಾಗೂ ಅವರ ಅನುಭವ ಸಾಪೇಕ್ಷವಾದುದು. ನಮ್ಮ ಕಷ್ಟ ದೊಡ್ಡದು ಎಂದೆನಿಸಿದ ಮರು ಕ್ಷಣವೇ ಮತ್ತೊಬ್ಬರ ಇನ್ನೂ ಹೆಚ್ಚಿನ ಕಷ್ಟದ ಸ್ಥಿತಿಯನ್ನು ಕೇಳಿದಾಗ ಸಮಾಧಾನವಾಗುತ್ತದೆ. ಹೀಗೆ ಆದಾಗಲೆಲ್ಲ ’ಸದ್ಯ ನಮಗೆ ಆ ಪರಿಸ್ಥಿತಿ ಬರಲಿಲ್ಲವಲ್ಲ’ ಎನ್ನುವ ದನಿಯೂ ಹುಟ್ಟುತ್ತದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕ್ಷಣದಲ್ಲಿ ’ದೇವರ ದಯೆ’ ಅಥವಾ ’ದೇವರು ದೊಡ್ಡವನು’ ಭಾವನೆಯೂ ಉದ್ಭವಿಸುತ್ತದೆ.

Sunday, July 19, 2009

3 ಪ್ರಶ್ನೆಗಳನ್ನುತ್ತರಿಸಿ, ನಿವೃತ್ತರಾಗಿ!

ಇದೇನಪ್ಪಾ, ಇತ್ತೀಚೆಗಷ್ಟೇ ಟೆಕ್ನಾಲಜಿ ಜ್ವರದಲ್ಲಿ ಬೆಂದು ಬಳಲಾಡುತ್ತಿರುವ ನಮ್ಮಂಥವರಿಗೆ ’ಅಂತರಂಗ’ದಲ್ಲಿ ನಿವೃತ್ತಿಯ ಬಗ್ಗೆ ಕಿವಿಮಾತೇ ಎಂದು ಹುಬ್ಬೇರಿಸಬೇಡಿ, ಮುಂದೆ ಓದಿ ನೋಡಿ. ಇತ್ತೀಚೆಗೆ ಒಂದಿಷ್ಟು ಕಮ್ಮ್ಯೂನಿಟಿ ಸೇವೆಯ ಹೆಸರಿನಲ್ಲಿ ನನಗೆ ಸೀನಿಯರ್ ಸಿಟಿಜನ್‌ಗಳ ಸೇವೆ ಮಾಡೋ ಭಾಗ್ಯ ಒದಗಿತ್ತು, ಈ ಸಂದರ್ಭದಲ್ಲಿ ಕಮ್ಯೂನಿಟಿ ಸೇವೆ ಮಾಡುತ್ತಲೇ ನಾನು ಮುಂದೆ ನಿವೃತ್ತನಾಗಿ ಇದೇ ಅವಸ್ಥೆಗೆ ಬಂದರೆ ಹೇಗಿರಬಹುದು ಎಂದು ಯೋಚಿಸಿ ಸ್ವಲ್ಪ ರಿಸರ್ಚ್ ಮಾಡಿ ನೋಡಲಾಗಿ ಹಲವಾರು ಅಂಶಗಳು ಹೊರಬಂದವು, ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಈ ಎಕಾನಮಿಯಲ್ಲಿ ನಿವೃತ್ತರಾಗೋ ಮಾತೇ ಬರೋದಿಲ್ಲ, ಆ ಮಾತು ಬಿಡಿ. ಮುಂದೆಯಾದರೂ ಸುಧಾರಿಸೀತು, ಇಲ್ಲವೆಂದಾದರೆ ನಮ್ಮಂಥವರ ಕಷ್ಟ ಯಾರಿಗೂ ಬೇಡ. ಎಷ್ಟೋ ಜನ ರಿಟೈರ್‌ಮೆಂಟ್ ಬದುಕಿಗೆ ಪ್ಲಾನ್ ಮಾಡೋದೇ ಇಲ್ಲ. ರಿಟೈರ್‌ಮೆಂಟ್ ಬದುಕಿನಲ್ಲಿ ಹಣ, ಹೊಣೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಆರೋಗ್ಯದ ಜೊತೆಗೆ ಇಷ್ಟೆಲ್ಲ ದಿನಗಳಲ್ಲಿ ವ್ಯಸ್ತರಾಗಿ ಕೆಲಸ ಮಾಡಿ ಕರ್ಮಜೀವನವನ್ನು ತೇಯ್ದ ನಮಗೆ ಮುಂದೆ ಕಾಲ ಕಳೆಯೋದಕ್ಕೆ ಏನು ಬೇಕು ಏನು ಬೇಡ ಅನ್ನೋದರ ತೀರ್ಮಾನವೂ ಬಹಳ ಮುಖ್ಯ.

ಸರಿ, ಈಗ ಮುತ್ತಿನಂತಹ ಮೂರು ಪ್ರಶ್ನೆಗಳಿಗೆ ಬರೋಣ:
೧. ಯಾವ ವಯಸ್ಸಿನಲ್ಲಿ ನಿವೃತ್ತರಾಗುತ್ತೀರಿ ಹಾಗೂ ನಿಮಗೆ ಬೇಕಾದ ಹಣದ ಮೊತ್ತವೆಷ್ಟು?
೨. ರಿಟೈರ್ ಆದ ನಂತರ ಹೇಗೆ ಸಮಯವನ್ನು ವ್ಯಯಿಸುತ್ತೀರಿ, ಯಾವ ಯಾವ ಹವ್ಯಾಸಗಳನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸಿಕೊಳ್ಳುತ್ತೀರಿ?
೩. ನಿಮ್ಮ ಕಾಲಾನಂತರ ಯಾರು ಯಾರಿಗೆ ಏನನ್ನು ಬಿಟ್ಟು ಹೋಗುತ್ತೀರಿ?


ಈ ಮೂರು ಪ್ರಶ್ನೆಗಳನ್ನು ವಿಸ್ತರಿಸುವುದಕ್ಕೆ ಮೊದಲು "ILI ಪಾಷಾಣ"ಕ್ಕೆ ಬರೋಣ, ಏನು ಇಲಿ ಪಾಷಾಣ ಇದು ಎಂದು ಬೆರಗಾದಿರೋ, ಸುಲಭವಾಗಿ ನೆನಪಿಗೆ ಬರುವಂತೆ ಸುಮ್ಮನೆ ಒಂದು ಉಪಮೆಯ ಸೃಷ್ಟಿ ಅಷ್ಟೇ:
I: investment risk
L: longevity risk
I: inflation risk


ಈ ಮೇಲೆ ಹೇಳಿದ ಮೂರು ರಿಸ್ಕ್‌ಗಳೇ ಪಾಷಾಣವಿದ್ದ ಹಾಗೆ. ಪ್ರತಿಯೊಬ್ಬರೂ ತಾವು ನಿವೃತ್ತರಾಗಲು ತಯಾರಾಗುತ್ತ ಇದ್ದ ಹಾಗೆ, ಇಪ್ಪತ್ತರ ಹರೆಯದಿಂದ ಎಪ್ಪತ್ತರವರೆಗೆ ಈ ಮೂರು ರಿಸ್ಕ್‌ಗಳ ಬಗ್ಗೆ ನಿರಂತರವಾಗಿ ಯೋಚಿಸುತ್ತಲೇ ಇರಬೇಕಾಗುತ್ತದೆ. Investment risk ನಲ್ಲಿ ನೀವು ಹೂಡಿದ ಹಣ ನೀವು ರಿಟೈರ್ ಆಗುವ ಹೊತ್ತಿಗೆ ಯಾವುದೋ ಒಂದು ರಿಸೆಷ್ಷನ್ನೋ ಇಲ್ಲಾ ಡಿಪ್ರೆಷ್ಷನ್ನ್ ಚಕ್ರದಲ್ಲಿ ಸಿಕ್ಕು ನರಳುತ್ತಿರಬಹುದು. Longevity risk ಅಂದರೆ ನೀವು ಎಂಭತ್ತು ವರ್ಷ ಬದುಕುತ್ತೀರಿ ಎಂದು ಅದಕ್ಕೆ ತಕ್ಕಂತೆ ಹಣ ಹೂಡಿ ಕೂಡಿ ಹಾಕಿ ಮುಂದೆ ಇಳಿ ವಯಸ್ಸಿನಲ್ಲಿ ನೀವು ತೊಂಭತ್ತು ಆದರೂ ಗೊಟಕ್ ಎನ್ನದೇ ಇರಬಹುದು. Inflation risk ನಲ್ಲಿ ಈಗ ಎರಡು ರುಪಾಯಿ ಅಥವಾ ಡಾಲರ್‌ಗೆ ಸಿಗಬಹುದಾದ ಪದಾರ್ಥ ಮುಂದೆ ಇಪ್ಪತ್ತು ರುಪಾಯಿ ಅಥವಾ ಡಾಲರ್ ಗಿಂತಲೂ ದುಬಾರಿಯಾಗುವುದು.

ಮೊದಲನೆಯ ಪ್ರಶ್ನೆ: ಹೂಡಿಕೆಯ ಹಣಕ್ಕೆ ಅಂಟಿಕೊಂಡ ತೊಂದರೆಗಳು ಯಾವು ಯಾವು? ಇಂಟರ್‌ನೆಟ್ ನಲ್ಲಿ ಹುಡುಕಿದರೆ ಬೇಕಾದಷ್ಟು ರಿಟೈರ್‌ಮೆಂಟ್ ಕ್ಯಾಲ್ಕುಲೇಟರುಗಳು ಸಿಗುತ್ತವೆ, ನಿಮ್ಮ ಈಗಿನ ಆದಾಯ ಹಾಗೂ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತ ಜೀವನಕ್ಕೆ ಎಷ್ಟು ಬೇಕು ಎಂದು ಅಂದಾಜು ಹಾಕುವುದಕ್ಕೆ. ಅಲ್ಲದೇ, ನಿವೃತ್ತ ಜೀವನದ ಪ್ರತಿವರ್ಷದ ಖರ್ಚಿಗೆ ಎಷ್ಟು ಬೇಕಾಗುತ್ತದೆ ಎನ್ನುವುದರ ಜೊತೆಗೆ ಇಂತಿಷ್ಟು ಹಣದಲ್ಲಿ ಕೇವಲ 4 ಅಥವಾ 5% ಹಣವನ್ನು ಮಾತ್ರ ತೆಗೆಯುವಂತೆ ಬೇಕಾಗುವ ಇಡುಗಂಟನ್ನು ರೂಪಿಸುವ ತಯಾರಿ ಹಾಗು 5% ನ ಮಿತಿಯಲ್ಲಿರುವಂತೆ ಒಂದು ಮೂಲಮಂತ್ರವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಎರಡನೆಯ ಪ್ರಶ್ನೆ: ಸರಿ, ಕಷ್ಟದ ಜೀವನವನ್ನು ಸವೆಸಿ ನಿವೃತ್ತರೇನೋ ಆದಿರಿ, ಮುಂದೆ ಏನು? ದಿನಾ ಕೆಲಸ ಕೆಲಸ ಎಂದು ಗೋಗರೆದು ಹತ್ತಿರ ಬಂದ ಹವ್ಯಾಸಗಳು, ಅವಕಾಶಗಳು ಹಾಗೂ ಕನಸುಗಳನ್ನೆಲ್ಲ ದೂರ ತಳ್ಳಿಕೊಂಡು ಮೂರು ನಾಲ್ಕು ದಶಗಳನ್ನು ದೂರ ತಳ್ಳಿದ ನಂತರ ಒಂದು ದಿನ ದಿಢೀರ್ ಎಂದು ಹಳೆಯ ಹವ್ಯಾಸಗಳಿಗೆ ಅಂಟಿಕೊಳ್ಳುತ್ತೇನೆ ಎನ್ನುವುದು ಹುಡುಗಾಟಿಕೆಯೇ ಸರಿ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ, ದೇಹಸ್ಥಿತಿ ನೆಟ್ಟಗಿರಬೇಕು. ಓದುವುದಕ್ಕೆ, ಬರೆಯುವುದಕ್ಕೆ, ತಿರುಗಾಡುವುದಕ್ಕೆ, ಆಡುವುದಕ್ಕೆ ಸಮಯ ಒಂದಿದ್ದರೆ ಸಾಲದು - ಹಣ ಬೇಕು ಹಾಗೂ ದೇಹದಲ್ಲಿ ಬಲಬೇಕು ಜೊತೆಗೆ ಎಲ್ಲವೂ ಸುಸ್ಥಿತಿಯಲ್ಲಿರಬೇಕು. ಸುಮ್ಮನೆ ಒಂದು ನಿಮಿಷ ಕಣ್ಣು ಮುಚ್ಚಿ ನೀವು ನಿವೃತ್ತರಾದ ಹಾಗೆ ಊಹಿಸಿಕೊಳ್ಳಿ: ಮನೆ ಇದೆ, ಸಾಲವೆಲ್ಲ ತೀರಿದೆ, ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಸುಂದರವಾದ ಬೇಸಿಗೆಯ ದಿನ, ಊಟ ತಿಂಡಿ ಮನೆ ಕೆಲಸ ಎಲ್ಲವೂ ಆಗಿ ನಿಮ್ಮ ಬಳಿ ಐದರಿಂದ ಎಂಟು ಘಂಟೆ ಖಾಲಿ/ಫ್ರೀ ಇದೆ - ಏನು ಮಾಡುತ್ತೀರಿ? ನಿಮ್ಮ ಸ್ನೇಹಿತರು ಯಾರು, ನಿಮ್ಮ ಹವ್ಯಾಸಗಳೇನು, ನಿಮಗೇನು ಇಷ್ಟ, ನಿಮಗೇನು ಕಷ್ಟ, ನಿಮಗೇನು ಬೇಕು, ಎಲ್ಲಿ ಹೋಗುತ್ತೀರಿ, ಹೇಗೆ ಹೋಗುತ್ತೀರಿ, ಇತ್ಯಾದಿ. ಹೆದರಿಕೆಯಾಯಿತೇ? ಅಥವಾ ಸಂತೋಷವಾಯಿತೇ? ಈ ಒಂದು ನಿಮಿಷದ ನಿವೃತ್ತ ಬದುಕಿನ ಪಯಣದ ಬಗ್ಗೆ ಏನೆನ್ನೆಸಿತು?

ಮೂರನೆಯ ಪ್ರಶ್ನೆ: ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದೋರು ಈ ಕಾಲದವರಂತೂ ಖಂಡಿತ ಅಲ್ಲ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಎನ್ನೋದೂ ಪೂರ್ತಿ ನಿಜವಲ್ಲ - ಎಂದು ವಾದ ಮಾಡೋ ಸಮಯವಿದಲ್ಲ. ನೀವು ಇಷ್ಟು ವರ್ಷ ಇದ್ದು ಅದೇನೇನೋ ಮಾಡಿ ಹೋಗುವಾಗ ನಿಮ್ಮನ್ನು ಆಧರಿಸಿಕೊಂಡವರಿಗೆ ಸ್ವಲ್ಪವನ್ನೂ ಬಿಟ್ಟು ಹೋಗೋದಿಲ್ಲವೇನು? ಮುಂದೆ ನಿಮ್ಮ ರಿಟೈರ್ ಮೆಂಟ್ ಅಕೌಂಟಿನಲ್ಲಿ ಪ್ರತಿವರ್ಷ 4 ರಿಂದ 5 % ಹಣವನ್ನು ತೆಗೆದು ಜೀವನ ನಡೆಸುತ್ತೀರಲ್ಲ, ನಿಮ್ಮ ನಂತರ ಅದರ ಬಂಡವಾಳ ಅಥವಾ ಮೂಲಧನ ಯಾರಿಗೆ ಸಿಗಬೇಕು? ಅದರಲ್ಲಿ ಟ್ಯಾಕ್ಸ್‌ನ ಪಾಲು ಎಷ್ಟು? ಯಾವ ಯಾವ ಬೆನಿಫಿಷಿಯರಿಗೆ ಎಷ್ಟು ಹಣ/ವರಮಾನ/ಆಸ್ತಿ ಇತ್ಯಾದಿಗಳನ್ನು ಯಾವ ರೂಪದಲ್ಲಿ ಬಿಟ್ಟು ಹೋಗುತ್ತೀರಿ ಎನ್ನುವುದಕ್ಕೂ ಬಹಳ ಯೋಚಿಸಬೇಕಾಗುತ್ತದೆ, ಒಳ್ಳೆಯ ಪ್ಲಾನ್ ಅಥವಾ ಸಿದ್ಧತೆ ಬೇಕಾಗುತ್ತದೆ.

***

ಈಗೆನ್ನನ್ನಿಸಿತು? ಮೊದಲು ಯಾವುದಾದರು ಕಮ್ಯೂನಿಟಿ ಸೆಂಟರಿನಲ್ಲಿ ಸೀನಿಯರ್ ಸಿಟಿಜನ್ ಸೇವೆಗೆ ವಾಲೆಂಟಿಯರ್ ಆಗಿ. ನಿಮ್ಮ ನಿವೃತ್ತ ಜೀವನದ ಮುಂಬರುವ ದಿನಗಳನ್ನು ನೀವೇ ತ್ರೀ ಡೀ ಕಲರ್ ಚಿತ್ರಗಳಲ್ಲಿ ನೋಡಿ. ಅವರ ಸ್ಥಾನದಲ್ಲಿ ನಿಮ್ಮನ್ನು ಗುರುತಿಸಿಕೊಂಡು ಈಗಿನ ಕಾದಾಟ/ಬಡಿದಾಟಗಳನ್ನು ಕಡಿಮೆ ಮಾಡಿ ILI ಪಾಷಾಣದ ಬಗ್ಗೆ ಕೊರಗಿ.

ನಾನು ಯಾವಾಗಲೂ ಬರೆಯೋ ಹಾಗೆ ಅಥವಾ ಹೇಳೋ ಹಾಗೆ ಬದುಕು ಬಹಳ ದೊಡ್ಡದು - ಮೈ ತುಂಬ ಸುಕ್ಕುಗಳನ್ನು ಕಟ್ಟಿಕೊಂಡು ಹುಟ್ಟಿ ಬಂದ ನಾವು ಸುಕ್ಕು ಸುಕ್ಕಾಗೇ ಸಾಯೋದು, ಪ್ರಾಣಿ ಸಂಕುಲದಲ್ಲಿ ಮಾನವರು ಈಗ ತಾನೆ ಹುಟ್ಟಿದ ಅಸಹಾಯಕ ಮಕ್ಕಳಿಂದ ಹಿಡಿದು ಅಸಹಾಯಕ ವೃದ್ದಾಪ್ಯದ ಅವಸ್ಥೆಯವರೆಗೆ ಅನುಭವಿಸೋದು ಬಹಳಷ್ಟಿದೆ. ಮಿದುಳು ಘಂಟೆಗೆ ನೂರು ಮೈಲಿ ವೇಗದಲ್ಲಿ ಓಡಿದರೂ ಮೈ ಬಗ್ಗೋದಿಲ್ಲ. ಮುವತ್ತರ ನಂತರ ಒಂದೊಂದೇ ಕೀಲುಗಳೂ ಕಿರುಗುಟ್ಟುವುದು ಸಾಮಾನ್ಯ. ಅಟೋಮೊಬೈಲನ್ನು ಆಗಾಗ್ಗೆ ಸರ್ವಿಸ್ ಮಾಡಿಸೋ ಹಾಗೆ ನಮ್ಮ ದೇಹಕ್ಕೂ ನಿರಂತರ ಸರ್ವಿಸ್/ಸೇವೆ ಅಗತ್ಯ. ಮಕ್ಕಳಿಂದ ಮುದುಕರ ಅವಸ್ಥೆಯಲ್ಲಿ ಅಗತ್ಯಗಳು ಬೇರೆ ಬೇರೆ. ಧೀರ್ಘ ಆಯುಷ್ಯ ಅನ್ನೋದು ದೊಡ್ಡದು, ಆದರೆ ಅಲ್ಲಿಯವರೆಗೆ ಹೋಗಿ ಸಸ್ಟೈನ್ ಆಗೋದು ಇನ್ನೂ ದೊಡ್ಡದು.

Saturday, July 04, 2009

ಯೋಗ-ಮೆಡಿಟೇಷನ್ನುಗಳು ನಮಗಲ್ಲ ಸಾರ್

ನೀವು ಭಾರತದಲ್ಲೇ ಇರಲಿ ಅಥವಾ ವಿದೇಶದಲ್ಲೇ ಇರಲಿ, ಯೋಗ-ಮೆಡಿಟೇಶನ್ನುಗಳ ಬಗ್ಗೆ ಬೇಕಾದಷ್ಟು ಕೇಳಿ-ನೋಡಿಯೂ ಆಯಾ ವಿಧಿ ವಿಧಾನಗಳನ್ನು ಇವತ್ತಲ್ಲ ನಾಳೆ ನೋಡಿಕೊಂಡರೆ ಆಯಿತು, ಸಮಯ ಸಿಕ್ಕಾಗ ಕಲಿತುಕೊಂಡರೆ ಆಯಿತು ಎಂದು ನಿಮ್ಮಷ್ಟಕ್ಕೆ ನೀವೇ ಶಪಥ ಮಾಡಿಕೊಂಡಿದ್ದರೆ ನೀವು ನಮ್ಮ ಗುಂಪಿಗೆ ಸೇರಿಕೊಳ್ಳುತ್ತೀರಿ. ಶಾಲಾ ಕಾಲೇಜಿಗೆ ಹೋಗೋವಾಗ ಯಾರಿಗಿದೆ ಟೈಮು? ಮುಂದೆ ಮದುವೆ-ಮುಂಜಿ ಆದ ಮೇಲೆ ನೋಡೋಣ ಎಂದು ಮುಂದು ದೂಡಿದಿರೋ ನಮ್ಮವರ ಸರ್ಕಲ್ಲಿಗೆ ಇನ್ನೂ ಹತ್ತಿರವಾಗುತ್ತೀರಿ. ಕೈ ತುಂಬಾ ಸಂಬಳ ಬರುವ ಕೆಲಸ, ಮನೆಗೆ ಬಂದ ಕೂಡಲೆ ನೆಮ್ಮದಿಯ ಜೊತೆಗೆ ಅದು-ಇದು ಮಾಡುವ ಹೋಮ್ ವರ್ಕು ಇವೆಲ್ಲವೂ ಸೇರಿ ಮುಂದೆ ರಿಟೈರ್ ಆದ ಮೇಲೆ ನೋಡೋಣವೆಂದು ಮುಂದೆ ದೂಡುತ್ತಲೇ ಬಂದಿದ್ದೀರೋ ನೀವು ನಮ್ಮವರೆ ಆಗಿಬಿಟ್ಟಿರಿ!

ನಮ್ಮ ಆಫೀಸಿನಲ್ಲಿ ಕೆಲವು ’ಯೋಗಾಭ್ಯಾಸ ಮಾಡುವುದು’ ಎನ್ನುವುದನ್ನು ತಮ್ಮ ಹವ್ಯಾಸಗಳಲ್ಲಿ ಸೇರಿಸಿಕೊಂಡಿದ್ದಾರೆ ಹಾಗೂ ದಶಕಗಳ ಯೋಗಾಭ್ಯಾಸದ ಫಲವನ್ನು ಮೈಗೂಡಿಸಿಕೊಂಡು ಎಲ್ಲರ ಎದುರು ಖುಷಿಯಾಗಿ ಹಂಚಿಕೊಳ್ಳುತ್ತಾರೆ. ಇಂಗ್ಲೀಷ್ ಲೇಖಕರ ಪುಸ್ತಕಗಲ್ಲಿ ’ಓಂ’ ಸೇರಿಕೊಂಡಿದ್ದು ಕಾಣುತ್ತೆ, Hannah Montanna ಸ್ಕ್ರಿಪ್ಟ್‌ನಲ್ಲೂ ಕೂಡ ’ಓಂ’ ಬಳಕೆ ಕಂಡು ಬರುತ್ತೆ ಆದರೆ ನಾನು ಮಾತ್ರ ಇವುಗಳೆಲ್ಲದರಿಂದ ದೂರವೇ ಇದ್ದ ಹಾಗೆ ಕಂಡುಬರುತ್ತೇನೆ. ಮೆಡಿಟೇಷನ್ನೂ ಮತ್ತೊಂದೂ ಎನ್ನುವ ಅಭ್ಯಾಸ ಅಥವಾ ಆಚರಣೆ ವ್ಯಸ್ತ ಜೀವನದ ಭಾಗವಾಗಿ ಹೋಗುವುದಾದರೂ ಹೇಗೆ? ದಿನದುದ್ದಕ್ಕೂ ಬಿಡುವಿಲ್ಲದಿರುವ ಮಿಲ್ಲಿನಲ್ಲಿ ತಿರುಗುವ ಚಕ್ರಗಳ ಹಾಗಿನ ಜೀವನ ಶೈಲಿಯಲ್ಲಿ ’ಒಮ್ಮೆ ನಿಂತು ನೋಡಿ’ ಎಂದು ಹೇಳುವುದಾರೂ ಹೇಗೆ?

ಸಮುದ್ರ-ಸಾಗರದ ತಳವನ್ನು ಶೋಧಿಸುವವರು ನಭದಲ್ಲಿ ಆಕಾಶ ನೌಕೆಗಳನ್ನು ಉಪಗ್ರಹಗಳನ್ನು ಬಳಸುತ್ತಾರಂತೆ, ನಮ್ಮದರ ಬುಡನೋಡಿಕೊಳ್ಳಲು ರ್ಯಾಡಿಕಲ್ಲಾಗಿ ಅದರ ವಿರುದ್ಧ ತುದಿಯನ್ನು ಮುಟ್ಟಿಯಾದರೂ ಕಂಡುಕೊಳ್ಳಬೇಕು ಎಂದುಕೊಂಡರೆ ಆ ತುದಿಯೂ ಇಲ್ಲ ಈ ತುದಿಯೂ ಇಲ್ಲ ಎನ್ನುವ ತ್ರಿಶಂಕುವಿನ ಸ್ಥಿತಿ-ಗತಿಯಲ್ಲಿ ಯಾವುದನ್ನು ಯಾವ ದಿಕ್ಕಿನಲ್ಲಿ ಎಲ್ಲಿ ಹುಡುಕಿಕೊಳ್ಳೋದು ನೀವೇ ಹೇಳಿ.

ಪ್ರತಿಯೊ೦ದಕ್ಕೂ ಒಂದು ಮೊದಲಿದೆ, ಆ ಮೊದಲನ್ನು ಹುಡುಕಬೇಕು. ಪ್ರತಿಯೊಂದಕ್ಕೂ ಒಂದು ಗತಿಯಿದೆ ಅದನ್ನು ಅನುಸರಿಸಬೇಕು. ಹಾಗೇ ಪ್ರತಿಯೊಂದರ ಆಳ-ವಿಸ್ತಾರವನ್ನೂ ಕಂಡುಕೊಳ್ಳಬೇಕು ಎನ್ನುವುದು ಈ ಹೊತ್ತಿನ ತತ್ವ. ಯೋಗ-ಧ್ಯಾನ ಮೊದಲಾದವೂ ನಮಗೆ ಪರಂಪರಾನುಗತ, ಅದನ್ನು ಹಿಂದೆ ಕಲಿಯುತ್ತಿರುವಾಗಲೀ ಮತ್ತು ಮರೆತು ಹೋಗುತ್ತಿರುವಾಗಲೀ ಎಲ್ಲೂ ಅದರ ಮೂಲವನ್ನು ಶೋಧಿಸಿದ್ದಂತೂ ಇಲ್ಲ. ಈಗ ಎಲ್ಲ ಆಗಿ ಮಿಂಚಿ ಹೋದ ಮೇಲೆ, Lotus = ಪದ್ಮ, Position = ಆಸನ, ಎಂದು ’ಪದ್ಮಾಸನ’ವನ್ನು ಕಲಿಯೋದೆ? ಇಲ್ಲಿಯವರು ಕೆರೆಯನ್ನಾಗಲೀ, ಕೆರೆಯಲ್ಲಿನ ಕಮಲವನ್ನಾಗಲೀ, ನೀರಿನಡಿಯಲ್ಲಿ ಒಂದಕ್ಕೊಂದು ಹೆಣಿಕೆ ಹಾಕಿಕೊಂಡ ಬೇರು-ಕಾಂಡಗಳನ್ನಾಗಲೀ ನೋಡದೇ ಹೋದರೂ ಪದ್ಮಾಸನವನ್ನೂ ಕಲಿತರು, ಅದನ್ನು ರೂಢಿಸಿ-ಸಾಧಿಸಿಕೊಂಡು ಎಲ್ಲರಿಗೂ ಸಾರುವಂತಾದರು. ಕೆರೆಯ ನೀರಿನಲ್ಲಿನ ಕಮಲದ ಹಾಗೆ ನೀರಿನಲ್ಲಿದ್ದೂ ನೀರನ್ನು ರೆಸಿಸ್ಟ್ ಮಾಡುವ ದೃಷ್ಟಿಕೋನದ ಸ್ಥಿತಪ್ರಜ್ಞತೆಯನ್ನು ಮನಗಂಡರು. ನಾವು ಶತಮಾನಗಳಿಂದ ’ಕೆರೆಯ ನೀರನು ಕೆರೆಗೆ ಚೆಲ್ಲುತ್ತ’ ಬಂದರೂ ಬಹಳಷ್ಟು ಜನ ’ಏಕೆ ಹಾಗೆ?’ ಎಂದು ಪ್ರಶ್ನಿಸಿಕೊಂಡು ಉದ್ಧಾರವಾದದ್ದು ಕಡಿಮೆ ಎನ್ನುವುದು ನನ್ನ ಅಂಬೋಣ.

ನಮ್ಮ ಸಂಸ್ಕೃತಿ ದೊಡ್ಡದು, ನಮ್ಮ ಭಾಷೆ ದೊಡ್ಡದು ಎನ್ನುವವರಿಗೆ ಅದನ್ನು ಉಳಿಸಲಿಕ್ಕೆ ಏಕೆ ಹೆಣಗುತ್ತಿದ್ದೀರಿ? ಎಂದು ಪ್ರಶ್ನೆ ಹಾಕಿ ಉತ್ತರವನ್ನು ಕಾಯ್ದು ನೋಡಿ. ಭಾಷೆ, ಸಂಸ್ಕೃತಿ, ಧರ್ಮವನ್ನು ಪೋಷಿಸಬೇಕೆ ಅಥವಾ ಅದು ಗಟ್ಟಿಯಿದ್ದರೆ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ, ಉಳಿಯುತ್ತದೆ ಎನ್ನುವುದು ಈ ಹೊತ್ತಿನ ಜಿಜ್ಞಾಸೆ. ತಮ್ಮ ಧರ್ಮ ದೊಡ್ಡದು ಎಂದು ಕೋಟ್ಯಾಂತರ ರೂಪಾಯಿಗಳ ವ್ಯವಹಾರವನ್ನು ನಡೆಸುವ ಲೋಕಿಗರು ತಮ್ಮ ಧರ್ಮವನ್ನು ನಿಜವಾಗಿಯೂ ಹರಡುತ್ತಿದ್ದಾರೆಯೇ? ಅದಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ತಮ್ಮ ಧರ್ಮ ವಿಸ್ತಾರವಾದುದು ಎಂದು ಅದನ್ನು ಪರಿಗಣಿಸುವ ಹೊತ್ತಿಗೇ ಅದನ್ನು ಕಡೆಗಣಿಸುವ ವಿಚಾರವಂತರು ತಮ್ಮತನವನ್ನು ಉಳಿಸಿಕೊಳ್ಳುತ್ತಿದ್ದಾರೆಯೇ? ಈ ಉಳಿಸಿಕೊಳ್ಳುವ, ಬಳಸಿಕೊಳ್ಳುವ, ಹರಡುವ, ಹಾರಿಸಿಕೊಂಡು ಹೋಗುವ ಪರಿಪಾಟಿಕೆ ಇವತ್ತು ನಿನ್ನೆಯದಲ್ಲ ಆದರೆ ಕೆಲವು ಬೆಳೆದಂತೆ ಕಾಣಿಸುತ್ತದೆ, ಇನ್ನು ಕೆಲವು ವಿನಾಶದ ಹಾದಿ ಹಿಡಿದಂತೆ ತೋರುತ್ತದೆ. ನೂರು-ಸಾವಿರ-ಹತ್ತು ಸಾವಿರ ವರ್ಷಗಳಲ್ಲಿ ಹುಟ್ಟಿ-ಬೆಳೆದು-ಬಂದು ಹೋಗುವ ಈ ಪರಿಕಲ್ಪನೆ, ವ್ಯತಿರಿಕ್ತತೆಗಳನ್ನು ನಾವು ಹುಲುಮಾನವರು ಗಮನಿಸಬೇಕೋ, ನಮ್ಮದು-ನಮ್ಮತನವನ್ನು ತೋರಬೇಕೋ ಅಥವಾ ನಿರ್ವಿಣ್ಣರಾಗಿ ಸುಮ್ಮನಿರಬೇಕೋ?

Procrastination, ಸದಾ ಮುಂದೂಡಿಕೊಂಡು ಇವತ್ತಲ್ಲ ನಾಳೆ ಎನ್ನುವ ಧೋರಣೆಯನ್ನು ಯೋಗ-ಧ್ಯಾನಗಳಿಗೂ ಅನ್ವಯಿಸಿಕೊಂಡು ಬಂದಿರುವ ನಮ್ಮ ಗುಂಪಿಗೆ ಇತ್ತೀಚೆಗಷ್ಟೇ ಸೇರಿದ ನಮ್ಮಂಥ ಎಷ್ಟೋ ಜನರ ಕಿವಿ ಮಾತು - ಇವತ್ತು ಇಲ್ಲಿ ಆಗದಿದ್ದುದು ಮುಂದೆ ಆದೀತು ಎನ್ನುವ ಸತ್ಯವಂತೂ ಅಲ್ಲ. ಕೈ ಕಾಲು ಗಟ್ಟಿ ಇರುವ ಈ ಸಮಯದಲ್ಲಿ ಅನುಸರಿಸಿ, ಅಭ್ಯಾಸ ಮಾಡಿಕೊಳ್ಳದ ಕ್ರಿಯೆ ಅಥವಾ ಕರ್ಮ ಮುಂದೆ ಇಳಿ ವಯಸ್ಸಿನಲ್ಲಿ ಸಾಧಿಸಿಕೊಳ್ಳಲು ಸಾಧ್ಯ ಎನ್ನುವುದಕ್ಕೆ ಏನು ಆಧಾರ? ಈಗ ಮಾಡಿ ಮುಂದೆ ಅದರ ಫಲವ ನೋಡಿ! ಮುಂದಿನ ಜನ್ಮದ ಬಂಧನದಲ್ಲಿರಲಿ ಇಲ್ಲದಿರಲಿ ಈಗ (Now) ಎನ್ನುವುದು ನಿಮಗೆ ಸೇರಿದ್ದು, ಮುಂದೆ (Later) ಎನ್ನುವುದು ನಿಮ್ಮ ಹತೋಟಿಯಲ್ಲಿರುವುದೋ ಇಲ್ಲವೋ ಯಾರು ತಾನೆ ಬಲ್ಲರು?

Monday, June 15, 2009

ಮ್ಯಾನೆಜ್‌ಮೆಂಟ್ ಕೆಲ್ಸಾ, ಬೇಡಾ ಸ್ವಾಮಿ...

ಮ್ಯಾನೇಜ್‌ಮೆಂಟ್ ಕೆಲ್ಸಕ್ಕಿಂತ ಅಸ್ಸೋಸಿಯೇಟ್ ಕೆಲ್ಸಾನೇ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಿದ್ದು ಇತ್ತೀಚೆಗೆ. ನಮಗೆ ಸಿಗೋ ಸವಲತ್ತುಗಳಲ್ಲೊಂದಾಗಿ ಪ್ಲೆಕ್ಸ್ ಟೈಮ್ - ಬೆಳಿಗ್ಗೆ ಇಂಥಾ ಟೈಮಿಗೆ ನಿಗದಿಯಾಗಿ ಬರಬೇಕು ಅಂತೇನೂ ಇಲ್ಲ ಹಾಗೇ ಸಂಜೆ ಎಷ್ಟು ಹೊತ್ತಿನವರೆಗೆ ಬೇಕಾದ್ರೂ ಕೆಲ್ಸ ಇರುತ್ತೆ. ಜೊತೆಗೆ ನಮ್ಮ ಟೈಮ್‌ಶೀಟ್‌ಗಳು ಹಗಲು ಹೊತ್ತಿನಲ್ಲೇ ಸುಳ್ಳು ಹೇಳೋ ಹಾಗೆ ವಾರಕ್ಕೆ ಕೇವಲ ನಲವತ್ತು ಘಂಟೆಗಳ ಕೆಲಸವನ್ನು ದಾಖಲೆ ಮಾಡಿಕೊಂಡು ಒಟ್ಟು ಸಂಬಳವನ್ನು ತೆಗೆದುಕೊಂಡರೂ ಅದಕ್ಕಿಂತ ಹೆಚ್ಚು ಮಾಡಿದ ಕೆಲಸಕ್ಕೆ ಯಾವ ಸಂಭಾವನೆ ಸಿಗದೇ ಹೋದರೂ ಸರಿ ಅದು ರಿಜಿಸ್ಟರಿನಲ್ಲಿ ದಾಖಲೂ ಆಗದ ಪರಿಸ್ಥಿತಿ. ನಾವು ವಾರಕ್ಕೆ ಮಾಡುವ ಐವತ್ತೋ, ಐವತ್ತೈದೋ ಘಂಟೆಗಳಿಂದ ನಮ್ಮ ನಮ್ಮ ಸಂಬಳವನ್ನು ಭಾಗಿಸಿ ನೋಡಿದರೆ ನಮ್ಮ ಘಂಟೆಯ ’ಕೂಲಿ’ ಕಡಿಮೆ. ಇನ್ನು ವರ್ಷದ ಕೊನೆಯಲ್ಲಿ ಸಿಗೋ ಬೋನಸ್ಸು ಅದು ಯಾವ್ಯಾವುದೋ ಈಕ್ವೇಷನ್ನುಗಳಿಂದ ಹೊರಬರುವ ಮೊತ್ತದ ಪರಿಣಾಮ ನಮ್ಮ ಸಂಬಳದ ಒಂದು ಭಾಗವೇ ಅದು ಆದರೆ ಕೊಡುವ ರೀತಿ ಬೇರೆ ಎನ್ನುವ ತರ್ಕ.

ಎಂಬಿಎ, ಎಂ.ಎಸ್ ಮುಂತಾದ ಡಿಗ್ರಿಗಳಿಂದ ಅಲಂಕೃತಗೊಂಡ ನಮ್ಮ ರೆಸ್ಯೂಮೆಗಳಿಗೆ ಈ ಮಾರ್ಕೆಟ್ ಪ್ಲೇಸ್‌‍ನಲ್ಲಿ ಕಡಿಮೆ ಬೇಡಿಕೆ, ಅದೇ ಒಂದು ಸ್ಕಿಲ್ಲ್‌ನಲ್ಲಿ ಸ್ಪೆಷಲೈಜ್ಡ್ ಇರೋ ಅಂತ ಒಬ್ಬ ಅಸೋಸಿಯೇಟ್ ಕೆಲ್ಸಕ್ಕೆ ಹೆಚ್ಚಿನ ಡಿಮ್ಯಾಂಡ್. ಅವರ ಘಂಟೆಯ ಸಂಬಳ ಜೊತೆಗೆ ಹೆಚ್ಚು ಕೆಲಸ ಮಾಡಿದ್ದಕ್ಕೆ ಸಿಗೋ ಓವರ್ ಟೈಮ್ ಹಾಗೂ ಜಾಬ್ ಸೆಕ್ಯುರಿಟಿ ಇವನ್ನೆಲ್ಲ ಲೆಕ್ಕ ಹಾಕಿಕೊಂಡರೆ ಅವರದ್ದೇ ಕೆಲ್ಸ ನಾವೂ ಮಾಡಿಕೊಂಡಿರಬಾರದೇಕೆ, ಅನ್ನಿಸೋದಿಲ್ಲವೇ?

’ಲಂಚ್ ಬ್ರೇಕ್ ಆರೋಗ್ಯಕ್ಕೆ ಒಳ್ಳೆಯದು’ ಎಂದು ಬರೆದುಕೊಂಡಿರೋ ಎಷ್ಟೋ ಆರ್ಟಿಕಲ್ಲುಗಳನ್ನು ನನ್ನಂಥವರು ಓದಿಯೂ ಶೇಕಡಾ ತೊಂಭತ್ತು ಸಮಯ ನನ್ನ ಮಧ್ಯಾಹ್ನದ ಊಟವನ್ನು ಕಾಲ್ ಹಾಗೂ ಮೀಟಿಂಗ್‌ಗಳ ನಡುವೆ ಐದರಿಂದ ಹತ್ತು ನಿಮಿಷದಲ್ಲಿ ಲಗುಬಗೆಯಿಂದ ತುಂಬಿಸಿಕೊಂಡು ಊಟ ಮಾಡಿದ ಹಾಗೆ ಮಾಡೋದು ದಿನನಿತ್ಯದ ಕಾಯಕಗಳಲ್ಲೊಂದು. ಬೆಳಿಗ್ಗೆ ಸೂರ್ಯನಿಗೆ ಪೈಪೋಟಿಮಾಡೋ ಹಾಗೆ ರಸ್ತೆಯಲ್ಲಿ ಸಿಗೋ ಸ್ಲೋ ಡ್ರೈವರುಗಳನ್ನೆಲ್ಲ ಬೈದುಕೊಂಡು, ಅದರ ನಡುವೆ ತಿಂಡಿ ತಿಂದ ಹಾಗೆ ಮಾಡಿ ಕಾಫಿ ಕುಡಿದ ಹಾಗೆ ಮಾಡಿ ಆದಷ್ಟು ಬೇಗ ಆಫೀಸಿಗೆ ಬಂದರೂ ಅದ್ಯಾವುದೋ ಅವ್ಯಕ್ತ ಬಂಧನದ ಪ್ರಯುಕ್ತ ಎಲ್ಲರೂ ಹೋದ ಮೇಲೆ ಹೋಗುವ ಹಾಗೆ ಆಫೀಸಿನಲ್ಲೇ ಕೊಳೆಯುವ ಯಾತನೆ. ಸಮ್ಮರ್ರ್ ಬರುತ್ತಿದ್ದ ಹಾಗೆ ಎಲ್ಲರೂ ವೆಕೇಷನ್ನುಗಳನ್ನು ಅದಾಗಲೇ ಪ್ಲಾನ್ ಮಾಡಿಕೊಂಡು ಅಲ್ಲಲ್ಲಿ ವಾರ-ದಿನಗಳನ್ನು ಆಫ್ ಮಾಡಿಕೊಂಡು ಸಂತೋಷಪಡುತ್ತಿದ್ದರೆ ನಾವು ಆಫ್ ಇದ್ದ ದಿನಗಳಲ್ಲೂ ಅಲ್ಲಲ್ಲಿ ನಮಗೆ ಅಂಟಿಕೊಂಡ ರೋಗಗಳ ಹಾಗಿನ ಕಾಲ್ (ಕಾನ್ಪರೆನ್ಸ್ ಕಾಲ್) ಗಳು. ಒಬ್ಬ ಪೈನಾನ್ಸಿಯಲ್ ಆಡ್ವೈಸರ್‌ನಿಂದ ಹಿಡಿದು, ಡಾಕ್ಟರ್, ಡೆಂಟಿಸ್ಟ್ ಮೊದಲಾದವರನ್ನು ಕಂಡೋ ಮಾತನಾಡಿಸಲಾಗದ ಬಂಧನ. ಪೋಸ್ಟ್ ಆಫೀಸ್, ಡ್ರಾಮಾ, ರಿಕ್ರಿಯೇಷೇನ್ ಮೊದಲಾದವುಗಳಿಗೆ ಹೋಗದ ಹಾಗೆ ಕಟ್ಟು ಹಾಕುವ ಕೆಲಸದ ಸಂಬಂಧದ ಅವ್ಯಕ್ತ ಸಂಕೋಲೆ. ಮತ್ತೆ ಸಂಜೆಯ ಹೊತ್ತಿಗೆ ಮುಖ ಒಣಗಿಸಿಕೊಂಡು ಬಂದು ಮನೆಯಲ್ಲಿ ಊಟ ಮಾಡಿದ ಹಾಗೆ ಮಾಡಿ ದಿನದ ಒಂದೋ ಎರಡೋ ಬದುಕಿನ ಸ್ವರಗಳಿಗೆ ಒಂದಿಷ್ಟು ಗಾಳಿ ಊದಿ ನಿದ್ರೆಗೆ ಶರಣು ಹೋಗುವ ಕರ್ಮ ಜೀವನ.

ಈ ಸೆಲ್ಫ್ ಸೆಟ್ ಗೋಲ್‌ಗಳಿಗೆ ಒಂದಿಷ್ಟು ಕಡಿವಾಣ ಹಾಕಬೇಕು. ಮ್ಯಾನೇಜ್‌ಮೆಂಟ್ ಕೆಲ್ಸದಲ್ಲಿದ್ದರೂ ಅಸೋಸಿಯೇಟ್ ಬದುಕಿದ ಹಾಗೆ ಬದುಕಬೇಕು. ದಿನದ ಘಂಟೆಗಳನ್ನು ನಿಗದಿಯಂತೆ ಪ್ಲಾನ್ ಮಾಡಿಕೊಂಡು ನಾವು ಸೇರಿಕೊಳ್ಳಲಾಗದ ಮೀಟಿಂಗ್‌ಗಳಿಗೆ ’ಕ್ಷಮಿಸಿ’ ಎನ್ನಬೇಕು. ನಾವು ಪ್ರತೀವಾರಕ್ಕೆ ಹತ್ತು ಹತ್ತು ಘಂಟೆ ಕೆಲಸ ಮಾಡಿಯೂ ನಮಗಿಂತ ಕಡಿಮೆ ಕೆಲಸ ಮಾಡುವ ನಮ್ಮ ಓರಗೆಯವರ ಸಂಬಳ/ಆದಾಯಕ್ಕೆ ನಮ್ಮನ್ನು ಹೊಂದಿಸಿಕೊಂಡು ಆಫೀಸಿನಲ್ಲಿ ಎಂಟು-ಒಂಭತ್ತು ಘಂಟೆಗಳಿಗಿಂತ ಹೆಚ್ಚು ಕೆಲಸವನ್ನು ಮಾಡದೇ ಉಳಿದದ್ದನ್ನು ಪರ್ಸನಲ್ ವಿಷಯಗಳಿಗೆ ವಿನಿಯೋಗಿಸಬೇಕು. ಕಾಯಿದೆ/ಕಾನೂನು ಎಂದು ಮಾತನಾಡುವ ನಮ್ಮ ಮೇಲಾಧಿಕಾರಿಗಳಿಗೆ ಅವರ ರೀತಿಯಲ್ಲೇ ಮಾತನಾಡುತ್ತಾ ಅವರ ಕಾನೂನು ಕಟ್ಟಳೆಗಳಲ್ಲೇ ಅವರನ್ನು ನಿಯಂತ್ರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಲಂಚ್ ಟೈಮ್‌ಗೆ ಡೆಸ್ಕ್ ಬಿಟ್ಟು ಎದ್ದು ಎಲ್ಲಾದರೂ ದೂರ ಹೋಗಿಬಿಡಬೇಕು. ಇ-ಮೇಲ್, ವಾಯ್ಸ್ ಮೇಲ್ ಹಾಗೂ ಇನ್ಸ್ಟಂಟ್ ಮೆಸ್ಸೇಜುಗಳನ್ನು ಸಂಬಾಳಿಸಬೇಕು. ಇನ್ ಬಾಕ್ಸ್ ನಲ್ಲಿರುವ ಮೆಸ್ಸೇಜುಗಳನ್ನೆಲ್ಲ ಓದಿಯೇ ತೀರುತ್ತೇನೆ, ಫೋನ್ ನಲ್ಲಿ ಬ್ಲಿಂಕ್ ಆಗುವ ಲೈಟ್ ಬೆನ್ನನ್ನು ಹತ್ತಿ ಎಲ್ಲ ವಾಯ್ಸ್ ಮೇಲ್ ಗಳಿಗೂ ಉತ್ತರವನ್ನು ತತ್ ತಕ್ಷಣ ಕೊಡುತ್ತೇನೆ ಎನ್ನುವ ರೂಢಿಯನ್ನು ಬಿಟ್ಟು ಬಿಡಬೇಕು. ಪ್ರಪಂಚದ ಎಲ್ಲ ಸಮಸ್ಯೆಗಳನ್ನು ನಾವು ನಾವೇ ಪರಿಹರಿಸಿಕೊಂಡು ನಮ್ಮ ಬಾಸ್‌ಗಳ ಕೆಲಸವನ್ನು ಸುಲಭ ಮಾಡುವ ಬದಲು ಅವಾಗಾವಾಗ ಒಂದಿಷ್ಟು ಸಮಸ್ಯೆಗಳನ್ನು ಅವರ ಅವಗಾಹನೆಗೆ ಬಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಂಜೆ ಇಷ್ಟು ಹೊತ್ತಿಗೆ ಹೊರಟು ತೀರುತ್ತೇನೆ ಎನ್ನುವ ಸಂಕಲ್ಪವನ್ನು ಮಾಡಿಕೊಂಡು ಆಗ ಮನೆಗೆ ಬಂದು ಆಫೀಸನ್ನು ಆಫೀಸಿನಲ್ಲೇ ಬಿಟ್ಟು ’ಮನುಷ್ಯ’ನಾಗಬೇಕು. ಎಲ್ಲವೂ ಇಂದಿನ ಕೆಲಸವೇ ಎನ್ನುವ ಧಾರಾಳತನವನ್ನು ಮೈವೆತ್ತಬೇಕು.

ನನ್ನ ಸಹೋದ್ಯೋಗಿಯೊಬ್ಬಳು ಹಲವು ವರ್ಷಗಳ ಹಿಂದೆ ನಿವೃತ್ತಳಾಗುವಾಗ ಒಂದು ಮಾತನ್ನು ಹೇಳಿದ್ದಳು, ’ಈ ಕಂಪನಿ ನೀನು ಹುಟ್ಟುವುದಕ್ಕಿಂದ ಮೊದಲೂ ಇತ್ತು, ನೀನು ಸತ್ತ ಮೇಲೆಯೂ ಇರುತ್ತೆ. ನಿನ್ನ ಸಮಯದ ಹೆಚ್ಚು ಪಾಲನ್ನು ನಿನ್ನ ಕುಟುಂಬದವರ ಜೊತೆ ಕಳೆಯೋದಕ್ಕೆ ಪ್ರಯತ್ನಿಸು’. ನಾವು ಮುಂದೂಡುವ ನಮ್ಮ ವೆಕೇಷನ್ನುಗಳಾಗಲೀ, ನಾವು ದಿನನಿತ್ಯ ತಿನ್ನುವ ಹಾಗೆ ಮಾಡಿ ತಿಂದ ತಿಂಡಿ-ಊಟಗಳಾಗಲಿ, ನಾವು ಕಳೆದುಕೊಳ್ಳುವ ಅನೇಕ ಸಾಮಾಜಿಕ ಚಟುವಟಿಕೆಗಳಾಗಲೀ, ಅದೆಲ್ಲೋ ಬಿದ್ದು ತುಕ್ಕು ಹಿಡಿಯುತ್ತಿರುವ ನಮ್ಮ ಹವ್ಯಾಸಗಳಾಗಲೀ ಯಾವುದೂ ಲಾಂಗ್ ಟರ್ಮ್‌ನಲ್ಲಿ ಖಂಡಿತ ಒಳ್ಳೆಯದನ್ನು ಮಾಡಲಾರವು. ನಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ನಾವು ದಿನ ನಿತ್ಯ ಮಾಡುವ ಆಫೀಸಿನ ಕೆಲಸದಷ್ಟೇ ಉಳಿದವುಗಳಿಗೂ ಪ್ರಾಮುಖ್ಯತೆಯನ್ನು ಕೊಡಬೇಕು ಎಂದುಕೊಂಡು ಎಲ್ಲವನ್ನು ಮೊದಲೇ ಯೋಚಿಸಿ ಒಂದು ’ಪ್ಲಾನ್’ ಅನ್ನು ತಯಾರಿಸಿದ್ದೇ ಆದರೆ ಅದರಿಂದ ಬಹಳಷ್ಟು ಅನುಕೂಲಗಳಿವೆ. ನಮ್ಮ ಬಾಸ್‌ನ ಸೀಕ್ರೆಟ್ ಒಂದಿದೆ, ವರ್ಷದ ಹೆಚ್ಚಿನ ವೇಕೇಷನ್ನುಗಳನ್ನು ಎಲ್ಲರಿಗಿಂತ ಮೊದಲೇ ಅಲ್ಲಲ್ಲಿ ನಿಗದಿ ಪಡಿಸಿ ಆಯಾ ದಿನಗಳನ್ನು ನಿಯೋಜಿತವಾಗಿ ಆಫ್ ತೆಗೆದುಕೊಳ್ಳುವುದು - ಹೀಗೆ ಮಾಡುವುದರಿಂದ ಅನೇಕ ಅನುಕೂಲಗಳನ್ನು ನಾನು ಅವರ ಮೂಲಕ ಈಗಾಗಲೇ ಕಂಡುಕೊಂಡಿದ್ದೇನೆ.

ಸರಿ, ಇಷ್ಟೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಇನ್ನೂ ಏಕೆ ನಾನು ಈ ಪ್ಲಾನ್ ಅನ್ನು ಕಾರ್ಯಗತಗೊಳಿಸಿಕೊಂಡಿಲ್ಲ ಅನ್ನೋ ಪ್ರಶ್ನೆ ಸಹಜ. ನಮ್ಮ ಬದುಕೇ ಬೇರೆ ಅಲ್ಲವೇ, ಈ ವರ್ಷದ ಕೊನೆಯಲ್ಲಿ ಬರೋ ಇಂಡಿಯಾ ಟ್ರಿಪ್ಪಿಗೆ ನಮ್ಮ ವೆಕೇಷನ್ನ್ ದಿನಗಳನ್ನು ಕೂಡಿ ಹಾಕಿ ಒಟ್ಟಿಗೆ ಮೂರು ಅಥವಾ ನಾಲ್ಕು ವಾರಗಳನ್ನು ತೆಗೆದುಕೊಳ್ಳೋ ಅಗತ್ಯವಿರೋದರಿಂದ ವರ್ಷವಿಡೀ ವೆಕೇಷನ್ನುಗಳು ಸಂಭವಿಸೋದೇ ಇಲ್ಲ! ಇನ್ನು ಎಷ್ಟೋ ಕಷ್ಟ ಪಟ್ಟು, ಎದ್ದೂ-ಬಿದ್ದು ಹೋಗಿ ಬರೋ ಇಂಡಿಯಾ ಟ್ರಿಪ್ಪ್ ಅನ್ನು ವೆಕೇಷನ್ನು ಎಂದು ಕರೆಯಬೇಕೇ ಬೇಡವೇ ಅನ್ನೋದು ಒಳ್ಳೆಯ ಪ್ರಶ್ನೆಯಾಗೇ ಉಳಿಯುತ್ತದೆ. ಈ ದ್ವಂದ್ವಗಳಿಗೆಲ್ಲ ಒಂದೇ ಉತ್ತರ, ಒಂದೇ ದಾರಿ - ಮ್ಯಾನೇಜ್‌ಮೆಂಟ್ ಕೆಲಸದಲ್ಲಿ ಅಸೋಸಿಯೇಟ್ ತನವನ್ನು ಗುರುತಿಸಿಕೊಂಡು ನಮ್ಮಷ್ಟಕ್ಕೆ ನಮ್ಮದೊಂದು ಟೈಮ್‌ಟೇಬಲ್, ಅಜೆಂಡಾವನ್ನು ಪ್ರಸ್ತುತಪಡಿಸಿಕೊಂಡು ನಿಯಮಿತವಾಗಿ ಹೀಗೇ ಹೀಗೇ ಎಂದು ಬದುಕುವ ಗುರಿ.

Saturday, June 06, 2009

ಒಂದು ನೆಗಡಿಯ ಕಥೆ

You have to experience bad health to appreciate the good health - ಅಂತ ಅನ್ಸಿದ್ದು ಇತ್ತೀಚೆಗೆ. ಏನಿಲ್ಲ, ವರ್ಷದ ಏಳೆಂಟು ತಿಂಗಳು ಕೆಟ್ಟ ಛಳಿಯಲ್ಲಿ ನೊಂದು ಸ್ಪ್ರಿಂಗ್ ಬರಲಿ ಎಂದು ಪ್ರಾರ್ಥಿಸಿದ್ದೇ ಬಂತು, ಹಾಗೆ ಬಂದ ಸ್ಪ್ರಿಂಗ್ ತನ್ನ ಜೊತೆಗೆ ಅಲರ್ಜಿಗಳ ಹಿಂಡನ್ನೂ ತಂತು.

ನನಗೆ ಬರೋ ದೊಡ್ಡ ರೋಗವೆಂದರೆ ನೆಗಡಿ ಒಂದೇ. ನೆಗಡಿಯಂಥಾ ರೋಗವಿಲ್ಲ, ಬುಗುಡಿಯಂಥಾ ಒಡವೆ ಇಲ್ಲ ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ. ನನಗಾಗೋ ನೆಗಡಿಯ ಅನುಭವದ ಹತ್ತಿರದ ಉಪಮೆ ಎಂದರೆ ಹನಿ ನೀರಾವರಿ - ಎರಡೂ ಮೂಗಿನ ಹೊರಳೆಗಳಿಂದಲೂ ಸದಾ ಕಾಲ ಹನಿಗಳು ತೊಟ್ಟಿಕ್ಕೋದೇ ಬಂತು. ಆ ಶೀತದ ಭರಾಟೆ ಎಷ್ಟು ಎಂದರೆ ಯಾವ ಕ್ಲೀನೆಕ್ಸು ಟಿಶ್ಶ್ಯುಗಳೂ ಕಟ್ಟಿ ಹಾಕದ ಹಾಗೆ ನೀರಿನ ಅಬ್ಬರ ಮುಂದುವರೆಯುತ್ತಲೇ ಇರುತ್ತದೆ, ಈ ಲಿಂಗಮಕ್ಕಿಯ ಫ್ಲಡ್‌ಗೇಟ್‌ಗಳನ್ನು ತೆರೆದಾಗ ನೀರು ಒಂದೇ ಸಮನೆ ಹೊರಹೋಗುತ್ತಲ್ಲ ಹಾಗೆ (ಸದ್ಯ ಅಷ್ಟೊಂದು ಪ್ರಮಾಣ ನೀರು ಬರೋಲ್ಲವಲ್ಲ, ಅಷ್ಟೇ ಸಾಕು). ನಾನೋ ಹಳೆ ಕಾಲದವನು, ಈ ಟಿಶ್ಶು ಪೇಪರುಗಳಿಂದಾಗೋ ಕರ್ಮವಲ್ಲವೆಂದುಕೊಂಡು ಆಫೀಸಿಗೆ ಒಂದೆರಡು ಹ್ಯಾಂಡ್ ಟವಲ್ಲುಗಳನ್ನೇ ಹಿಡಿದುಕೊಂಡು ಬಂದವನು (ಹ್ಯಾಂಡ್ ಕರ್ಚೀಪ್‌ಗಳು ನಮ್ಮ ಮನೆಯಲ್ಲಿ ಹುಡುಕಿದರೂ ಸಿಗದ ಹಾಗಿನ ವಸ್ತುಗಳಾಗಿವೆ, ಅದು ಬೇರೆ ವಿಷಯ). ನಾನು ಕೆಮ್ಮಿ, ಸೀನಿ, ಕ್ಯಾಕರಿಸುವ ಕಷ್ಟವನ್ನು ನೋಡಿ ಆಫೀಸಿನಲ್ಲಿ ಅಕ್ಕಪಕ್ಕದವರಿಗೆ ಮನವರಿಕೆಯಾದ ಮೇಲೆ ಅವರಾದರೂ ನನ್ನ ಟವೆಲ್ ಪ್ರಯೋಗವನ್ನು ನೋಡಿ ಏನು ತಾನೇ ಅಂದುಕೊಂಡಾರು? ಹಾಗಂದುಕೊಂಡರೂ ಅದು ಅವರ ಕಷ್ಟ ನನಗೇನಾಗಬೇಕು ಅದರಿಂದ?

So, I have two options: ಆಪ್ಷನ್ ಒಂದು, ಡೀಲ್ ವಿಥ್ ದ ನೆಗಡಿ - ಒಂದು ವಾರ, ಏಳು ದಿನ, ಅದರ ಟೈಮ್ ತೆಗೊಳ್ಳುತ್ತೆ ಆಮೇಲೆ ಸರಿ ಆಗುತ್ತೆ. ಆಪ್ಷನ್ ಎರಡು ಅಲೋಪಥಿಕ್ ಮೆಡಿಕೇಶನ್ನ್‌ಗಳಿಗೆ ಶರಣು ಹೋಗೋದು - ಬೇಕಾದಷ್ಟಿವೆ, ನಿಮ್ಮ ಮೂಗನ್ನು ಮುಂಗಾರು ಮಳೆಯ ಅಂಗಳದಿಂದ ಅಗ್ಗಿಷ್ಟಿಕೆಯ ಸುಡುಬೆಂಕಿಯಷ್ಟು ಪ್ರಭಲವಾಗಿ ಉರಿಯುವ ಹಾಗೆ ರಾತ್ರೋ ರಾತ್ರಿ ಬದಲಾಯಿಸಬಲ್ಲ ಘಟಾನುಘಟಿ ಮೆಡಿಕೇಶನ್ನುಗಳಿವೆ, ಒಂದಿಷ್ಟು ಭಾರತೀಯ ಮೇಡ್, ಮತ್ತೊಂದಿಷ್ಟು ಅಮೇರಿಕನ್. ಆದರೆ ಆಪ್ಷನ್ನ್ ಎರಡರಲ್ಲಿ ಬೇಕಾದಷ್ಟು ಸೈಡ್ ಎಫೆಕ್ಟ್‌ಗಳಿವೆ. ಈ ಒಂದು ಹಾಗೂ ಎರಡು ಆಪ್ಷನ್ನುಗಳಲ್ಲಿ ಅವುಗಳದ್ದೇ ವೇರಿಯೇಷನ್ನುಗಳನ್ನೂ ಮಾಡಬಹುದು - ಒಂಥರಾ ಮಿಕ್ಸ್ಡ್ ರಿಯಾಕ್ಷನ್ನ್ ಥರ ಅದರ ಎಫೆಕ್ಟೂ ಇರುತ್ತೆ!

ನೆಗಡಿ ಬಂದರೆ ಜೊತೆಗೆ ಅದರ ಸಂಸಾರವೇ ಬರುತ್ತದೆ: ಮೊದಲು ಹನಿ ನೀರಾವರಿಯಿಂದ ಶುರುವಾದ ನೀರು ಮುಂದು ಮೂಗಿನಲ್ಲಿ ಗೊಣ್ಣೆ ಬದಲಾಗಿ, ಅದು ಮುಂದ ಬಿಳಿ-ಹಳದಿ ಬಣ್ಣದ ಹಿಕ್ಕೆಯಾಗಿ ಒಂದು ವಾರದಲ್ಲಿ ಪರಿವರ್ತಿತಗೊಳ್ಳುವ ಹಂತ. ಈ ಮಧ್ಯೆ ಒಂದಿಷ್ಟು ದಿನ ಗಂಟಲಿನಲ್ಲಿ ಸಿಕ್ಕು ಬಾಯಿಯಿಂದ ಬಂದರೆ ಕಫ, ಮೂಗಿನಲ್ಲೇ ಶೀಟಿ ಬಿಸಾಡಿದರೆ ಗೊಣ್ಣೆ ಎನ್ನುವ ಬಹು ರೂಪದ ಸಂಭ್ರಮ. ಮುಂದೆ ಸರಳ ಕೆಮ್ಮು, ಒಣ ಕೆಮ್ಮು ಮೊದಲಾದ ಗಂಟಲಲ್ಲಿ ’ಕಿಚ್-ಕಿಚ್’ ಹಂತ. ಈ ಕೆಮ್ಮು ದಿನದ ಬೇರೆ ಬೇರೆ ಹೊತ್ತಿನಲ್ಲಿ ಬೇರೆ ಬೇರೆ ಲೆವೆಲ್ ಮುಟ್ಟುವುದು. ಇವೆಲ್ಲವೂ ಇರುವಂತೆಯೇ ನೀವು ಮಾತನಾಡಿದ್ದು ಒಂದು, ಇನ್ನೊಬ್ಬರಿಗೆ ಕೇಳುವುದು ಇನ್ನೊಂದು ಎನ್ನುವ ಹಾಸ್ಯ - ನೀವು ’ನಾನು’ ಎಂದರೆ, ಅದು ಕೇಳಿದವರಿಗೆ ’ಮಾನು’ ಆಗುವುದು. ಈ ಮೂಗಿನ ಮ್ಯಾನೇಜ್‌ಮೆಂಟ್ ಬಹಳ ದೊಡ್ಡದೇ, ನಿಮಗೆ ಗೊತ್ತಿಲ್ಲ ಅದರ ಸಹವಾಸ. ಎಂಥೆಂಥ ಅತಿರಥ ಮಹಾರಥರೂ ತಮ್ಮ ತಮ್ಮ ಮೂಗಿಗೆ ಕೈ ಹಾಕಿಕೊಳ್ಳುವುದನ್ನು ನೀವು ನೋಡಿಲ್ಲ? ಈ nose pick ಎನ್ನುವುದು ಆಪಲ್ ಪಿಕ್, ಸ್ಟ್ರಾ ಬೆರಿ ಪಿಕ್ ಎನ್ನುವ ಹಾಗೆ ಸೀಜನಲ್ ಅಂತೂ ಅಲ್ಲ ಜೊತೆಗೆ ಮೂಗು ಪಿಕ್ ಮಾಡಿದಾಗಿನ ಔಟ್‌ಪುಟ್ ಆಯಾ ಮೂಗಿನ ಓನರುಗಳಿಂದ ಹಿಡಿದು ಬೇರೆ ಯಾರಿಗೂ ಬೇಡವಾದ ಪ್ರಾಡಕ್ಟು. ಅದನ್ನು ಒಂದು ಕಡೆ ಟ್ರ್ಯಾಷ್ ಅನ್ನುವಷ್ಟು ದೊಡ್ಡದೂ ಅಲ್ಲದೇ ಮತ್ತೊಂದು ಕಡೆ ಲಿಟ್ಟರ್ ಎಂದು ದೂಷಿಸಲೂ ಬಾರದ್ದನ್ನು ಎಲ್ಲಿ ಬೇಕಾದಲ್ಲಿ ಬಿಸಾಡಲೂ ಬಹುದು. ನಮ್ಮ ಮನೆಯ ಮಕ್ಕಳೂ ಸೇರಿ ಇನ್ನು ಕೆಲವರು ಅದನ್ನು ತಿಂದು ರೀ ಸೈಕಲ್ ಮಾಡುವುದೂ ಕಣ್ಣಿಗೆ ಬಿದ್ದಿದೆ.

ಅವರವರ ಕರ್ಮಕ್ಕನ್ನುಸಾರವಾಗಿ ಯಾರ್ಯಾರೋ ಏನೇನೋ ರೋಗರುಜಿನಗಳಿಗೆ ತುತ್ತಾಗುವುದಿದೆ. ಎಲ್ಲರಿಗೂ ಅವರವರ ರೋಗವೇ ದೊಡ್ಡದು ಹಾಗೇ ಅದರದ್ದೇ ಸಂಭ್ರಮ ಅನ್ನೋ ಹಾಗೆ ನನಗೆ ಈ ಹೊತ್ತಿನಲ್ಲಿ ಈ ನೆಗಡಿಯ ವಿಚಾರ. ಅದನ್ನು ಫ್ಲೂ ಮತ್ತೊಂದು ಇನ್ನೊಂದು ಎಂದು ಯಾರು ಏನು ಬೇಕಾದರೂ ಕರೆದುಕೊಂಡರೂ ನನಗಂತೂ ಅದು ಪ್ರತಿವರ್ಷದ ಸ್ಪ್ರಿಂಗ್ ತರುವ ಬಳುವಳಿ. ಛಳಿಯಲ್ಲಂತೂ ಒಳಗೆ ಸೇರಿಕೊಂಡಿದ್ದೇ ಬಂತು ಇನ್ನು ಬೇಸಿಗೆಯಲ್ಲಾದರೂ ಹೊರಗೆ ತಿರುಗಾಡಬೇಕು, ಬದಲಿಗೆ ಮನೆಯಲ್ಲೇ ಏರ್ ಪ್ಯೂರಿಪೈಯರ್ರ್ ಇಟ್ಟುಕೊಂಡು ಒಳ್ಳೆಯ ಗಾಳಿಯನ್ನು ಮಾತ್ರ ಉಸಿರಾಡಿ ಬಿಟ್ಟರೇನು ಬಂತು ಎನ್ನುವುದು ಈ ಹೊತ್ತಿನ ತತ್ವ.

Wednesday, May 06, 2009

ಬೆಂಗಳೂರ್ ಹೋಯ್ತು ಬಫೆಲೋ ಬಂತು - ಡುಂ! ಡುಂ!

’ಲೋ, ಒಳ್ಳೇ ನಾಯ್ಕನನ್ನೇ ಆರ್ಸಿಕೊಂಡಿದ್ದೀರಿ ಕಣ್ರೋ!’ ಎಂದಿದ್ದು ಇನ್ಯಾರು ಅಲ್ಲ - ನಮ್ ಸುಬ್ಬ.
ಸುಮ್ನೇ ಕುಶಾಲಕ್ಕೆ ’ಹೆಂಗಿದ್ಯೋ?’ ಅಂತ ಫೋನ್ ಕಾಲ್ ಮಾಡಿದ್ರೆ ತಗಳಾಪ್ಪಾ ಪೂರ್ತಿ ರಾಮಾಯ್ಣನೇ ಶುರು ಹಚ್ಚಿಕೊಂಬಿಟ್ನಲ್ಲಾ!

ಮತ್ತೆ ಮುಂದುವರೆಸುತ್ತಾ, ’...ಬೆಂಗ್ಳೂರಿಗೂ ಬಫೆಲೋಗೂ ಎಲ್ಲಿಯ ಹೋಲಿಕೆ ಹೊಂದಾಣಿಕೆ, ಏನೋ ಕರಿಯರ ನಾಯ್ಕ ಅಂತ ಸುಮ್ನೇ ಇದ್ದಿದ್ದಕ್ಕೆ ಸಪೋರ್ಟ್ ಮಾಡಿದ್ದಕ್ಕೆ ತಂದ್ನಲ್ಲಪ್ಪಾ ಕಾಣಿ. ಒಂದಿಷ್ಟ್ ಜನ ಅವ್ನನ್ನ ಮುಸ್ಲಿಮ್ ಅಂತಾರೆ, ಒಂದಿಷ್ಟ್ ಜನ ಅವನನ್ನ ಬಿಳಿಯ ಅಂತಾರೆ, ಒಂದಿಷ್ಟು ಜನ ಅವನೇ ದೇವ್ರು ಅಂತ ಕೊಂಡಾಡ್ತಾರೆ, ಒಳ್ಳೇ ಬ್ರೂಸ್ ಆಲ್‌ಮೈಟ್ ಕಥೆ ಆಯ್ತು ನೋಡು!’ ಎಂದು ಸುಮ್ಮನಾದ.

’ಯಾರೋ ಮುಸ್ಲೀಮ್, ಅವನೋ ಚರ್ಚಿಗೆ ಹೋಗೋ ಒಳ್ಳೇ ಕ್ರಿಶ್ಚಿಯನ್ನ್ ಅಲ್ವೇ?’ ಎನ್ನೋ ಪ್ರಶ್ನೆಯನ್ನ ತಾಳಲಾರದೆ ತಾಳಿಕೊಂಡು,
’ಲೋ, ಹುಸೇನ್ ಅಂತ ಮಿಡ್ಲ್ ನೇಮ್ ಇಟ್ಟುಕೊಂಡು ಮಿಡ್ಲ್ ಈಸ್ಟ್ ನಲ್ಲಿ ಪಾಪ್ಯುಲ್ಲರ್ ಅಗೀರೊ ಬರಾಕ್ ಅಂದ್ರೆ ಏನ್ ಅಂತ ತಿಳುಕೊಂಡಿದೀಯಾ? ಬರಾಕ್‍ಗೆ ಬಹು ಪರಾಕ್! ಹಹ್ಹಹ್ಹ...’ ಎಂದು ದೊಡ್ಡದಾಗಿ ನಗಾಡಿದ.

’ಹ್ಞೂ, ಅದಿರ್ಲಿ, ಬೆಂಗ್ಳೂರಿನವರು ಏನಂತಾರೆ?’

’ಬೆಂಗ್ಳೂರಿಗೂ ಬಫೆಲ್ಲೋಗೂ ಏನು ತಾಳೆ ಗುರುವೇ? ವರ್ಷದ ಆರು ತಿಂಗಳು ಆರು ಅಡಿ ಸ್ನೋನಲ್ಲಿ ಮುಚ್ಚಿರೋ ನಗರಕ್ಕೂ ಸೌತ್ ಇಂಡಿಯನ್ ಸ್ವರ್ಗಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಈ ನನ್ ಮಕ್ಳು ನಮ್ಮಲ್ಲಿನ ರಸವನ್ನೆಲ್ಲ ಹೀರಿಕೊಂಡು ಈಗ ಸಿಪ್ಪೆ ಬಿಸಾಡಿದ ಹಾಗಾಯ್ತು. ನನ್ ಕೇಳಿದ್ರೆ ಔಟ್‌ಸೋರ್ಸಿಂಗ್ ವಿರುದ್ಧ ತಿರುಗಿ ಬಿದ್ದಿರೋ ಅಮೇರಿಕನ್ಸ್ ನೀತಿ ವಿರೋಧಿಸಿ ದೊಡ್ಡ ರ್ಯಾಲಿ ಆಗಬೇಕು. ಏನ್ ಆದ್ರೆ ಏನಂತೆ, ಇವೆಲ್ಲ ಕ್ವಾಣನ ಮುಂದೆ ಕಿನ್ನರಿ ಬಾರಿಸಿದಂಗೇ ಸೈ’.

’ಅಂದ ಹಾಗೆ, ನ್ಯೂ ಯಾರ್ಕ್ ರಾಜ್ಯದ ಬಫೆಲ್ಲೋಗೂ ಕಾಡು ಎಮ್ಮೆಗೂ ವ್ಯತ್ಯಾಸವಿದೆ ಗೊತ್ತಲ್ವಾ? ನಮ್ ನ್ಯೂಸ್ ಪೇಪರ್ರ್‌ಗಳು ಎಮ್ಮೆ-ಕ್ವಾಣ ಅಂತ ಬರೆಯೋಕ್ ಮುನ್ನ ಸ್ವಲ್ಪ ಯೋಚಿಸ್ಲಿ ಅಂತ ಹೇಳ್ದೆ ಅಷ್ಟೇ...’

’ಏನಾದ್ರೂ ಹಾಳಾಗ್ ಹೋಗ್ಲಿ ಬಿಡು, ಈಗಿನ ಕಾಲ್ದಲ್ಲಿ ನ್ಯೂಸ್ ಪೇಪರ್ ಓದೋರ್ ಯಾರು? ಎಲ್ಲರೂ ದಿವಾಳಿ ಆಗ್ಲಿ, ಅಡ್ವರ್‌ಟೈಸ್ ರೆವಿನ್ಯೂ ನಂಬಿಕೊಂಡಿರೋ ನ್ಯೂ ಯಾರ್ಕ್ ಟೈಮ್ಸ್ ಬಂಡವಾಳವೇ ಅಲುಗಾಡ್ತಾ ಇರುವಾಗ ಇನ್ನು ರೀಜನಲ್ಲ್ ನ್ಯೂಸ್ ಪ್ರಿಂಟ್‌ಗಳ ಕಥೆ ದೇವ್ರೆ ಕಾಪಾಡ್‌ಬೇಕು.’

’ಮತ್ತೇನಾದ್ರೂ ಇದೆಯಾ? I got to go' ಎಂದೆ.

’ಏನೂ ಇಲ್ಲ, ಬೆಂಗ್ಳೂರ್ ಹೋಯ್ತು, ಬಫೆಲ್ಲೋ ಬಂತು, ಡುಂ, ಡುಂ!’ ಎಂದ, ಕಾಲ್ ಕತ್ತರಿಸಿದೆ.

Thursday, April 30, 2009

ವರ್ಚುವಲ್ಲ್ ಪ್ರಪಂಚದ ಲೀಲೆ

ನನಗೆ ಅವಾಗಾವಾಗ ’ನೀವು ಆರ್ಕುಟ್‌ನಲ್ಲಿದ್ದೀರಾ?’, ’ಟ್ವಿಟ್ಟರ್ರ್ ನಲ್ಲಿದ್ದೀರಾ?’ ಮುಂತಾಗಿ ಪ್ರಶ್ನೆಗಳು ಬರ್ತಾನೇ ಇರ್ತವೆ. ನಾನು ಅಂತಹ ಪ್ರಶ್ನೆಗಳಿಗೆ ’ಟು ಡು ವಾಟ್?’ ಅನ್ನೋ ಮತ್ತೊಂದು ಪ್ರಶ್ನೆ ಎಸೆದು ಉತ್ರ ಕೊಡ್ತೀನಿ. ನನಗೆ ಸಿಗೋ ಎಲ್ಲ ಉತ್ತರ ಅಥವಾ ಸಮಜಾಯಿಷಿಗಳೂ ಇವೆಲ್ಲಾ ಸೋಷಿಯಲ್ಲ್ ನೆಟ್‌ವರ್ಕಿಂಗ್ ಸೈಟ್‌ಗಳು, ಅಲ್ಲಿಗೆ ಬಂದೂ ಹೋಗಿ ಮಾಡೋದ್ರಿಂದ ನಿಮ್ಮ ನಿಮ್ಮ ನೆಟ್‌ವರ್ಕ್ ಅಭಿವೃದ್ಧಿ ಆಗುತ್ತೆ ಅನ್ನೋ ರೀತಿ ಇರುತ್ವೆ. ನಾನಂತೀನಿ, ’ನಮ್ಮ ಸುತ್ ಮುತ್ಲು ಇರೋರ ಜೊತೆ ಬೆರೆತುಕೊಂಡಿರೋದೇ ದೊಡ್ಡ ಸವಾಲಾಗಿದೆ ಇನ್ನು ಈ ವರ್ಚುವಲ್ ಪ್ರಪಂಚದವರ ಜೊತೆ ಏಗೋದು ಯಾರೂ ಅಂತ?’

ನೀವೇ ಯೋಚ್ನೆ ಮಾಡಿ, ಎಷ್ಟೊಂದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಿವೆ ಅಂತಾ - ಆರ್ಕುಟ್ಟು, ಫೇಸ್‌ಬುಕ್, ಮೈಸ್ಪೇಸ್, ಟ್ವಿಟ್ಟರ್ ಮುಂತಾಗಿ. ಇವುಗಳಿಗೆಲ್ಲ ಒಂದೊಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡಿರಬೇಕು, ಅವಕ್ಕೆಲ್ಲ ಒಂದೊಂದು ಯೂಸರ್ ಐಡಿ ಪಾಸ್‌ವರ್ಡ್. ಜೊತೆಗೆ ಅಲ್ಲಿ ಬಂದು ಹೋಗೋರ ಜೊತೆಯಲ್ಲ ಸಂಭಾಷಣೆ ಮಾಡುತ್ತಾ ಇರೋದಕ್ಕೆ ಟೈಮಾದ್ರೂ ಯಾರ ಹತ್ರ ಇದೆ ಅನ್ಸೋಲ್ವ? ನಾನು ತಮಾಷೆಯಾಗಿ ಹೇಳೋದೇನು ಅಂದ್ರೆ, ಒಂದಲ್ಲ ಒಂದು ದಿನ ಈ ಸೈಟುಗಳೆಲ್ಲ ಗೂಗಲ್ಲೋ, ಮೈಕ್ರೋಸಾಫ್ಟ್‌ನವರೋ ಮರ್ಜ್ ಮಾಡೋ ಕಾಲ ಬರುತ್ತೆ, ಆಗ ನಾನು ಒಂದೇ ಒಂದು ಅಕೌಂಟ್ ಓಪನ್ ಮಾಡಿಕೊಂಡಿರ್ತೀನಿ ಅಂತ.

ಇನ್ನೂ ಮುವತ್ತರ ಹರೆಯದಲ್ಲಿದ್ದುಕೊಂಡೇ ನಾನು ಇಷ್ಟೊಂದು ಔಟ್‌ಡೇಟೆಡ್ ಆಗಿ ಹೋದ್ತಾ ಅನ್ನೋ ಹೆದರಿಕೆ ಒಂದು ಕಡೆ. ಛೇ, ಪ್ರಪಂಚದ ಆರು ಬಿಲಿಯನ್ ಜನರಲ್ಲಿ ಕನಿಷ್ಠ ಮೂರು ಬಿಲಿಯನ್ನ್ ಜನರಾದ್ರೂ ಇನ್ನೂ ಫೋನಿನ ಡಯಲ್ ಟೋನ್ ಕೇಳದೇ ಇರೋ ಪರಿಸ್ಥಿತಿ ಇರೋವಂತ ಸಮಯದಲ್ಲಿ ನನ್ನಂಥವರು ಔಟ್‌ಡೇಟೆಡ್ ಅಗೋದಾದ್ರೂ ಹೇಗೆ ಅನ್ನೋ ಸಮಾಧಾನ ಜೊತೆಗೆ. ಇ-ಮೇಲ್, ಫೋನ್ ಹಾಗೂ ಮುಖತಃ ಭೇಟಿ ಮಾಡುವ ಸಂದರ್ಭಗಳಲ್ಲಿ ನಾವು ನಮ್ಮನ್ನು ಚೆನ್ನಾಗಿ ತೊಡಗಿಸಿಕೊಂಡ್ರೆ ಸಾಕು ಸಂಬಂಧಗಳು ಬೆಳೆಯೋದಕ್ಕೆ, ಇವಿಷ್ಟರ ಜೊತೆಗೆ ಅಲ್ಲಿ-ಇಲ್ಲಿ ವೆಬ್ ಸೈಟ್‌ಗಳಲ್ಲಿ ಹೋಗಿ ’ಇಂದು ನಾನು ಇಂಥಾ ತಿಂಡಿ ತಿಂದೆ’, ’ಅವನು ಅಲ್ಲಿ ಅಷ್ಟೊಂದು ರನ್ ಹೊಡೆದ’ ಅಂತೆಲ್ಲ ’ವಾಲ್’ ಮೇಲೆ ಬರೆದುಕೊಳ್ಳೋದ್ರಿಂದ ಏನ್ ಪ್ರಯೋಜನ ಅಂತ ನನಗಿನ್ನೂ ಕನ್ವಿನ್ಸ್ ಆಗಿಲ್ಲ ನೋಡಿ.

ನಾನು ಹಳೇ ಕಾಲದವನು ಆಗೋ ಕಾಲ ಹತ್ರ ಬರ್ತಾ ಇದೆ, ಅಂತ ನೀವೆಲ್ಲ ನಗಬಹುದು. ನನ್ನ ಪ್ರಕಾರ, ಕೈಯಲ್ಲಿರೋ ಐದು ಸಾವಿರ ಡಾಲರ್ ವಾಚಾಗ್ಲಿ ಅಥ್ವಾ ಬೆಂಗಳೂರಿನಲ್ಲಿ ಐವತ್ತು ರೂಪಾಯಿಗೆ ಸಿಗೋ ವಾಚಾಗ್ಲಿ ಮುಖ್ಯವಲ್ಲ್ - ಸಮಯವನ್ನ ಚೆನ್ನಾಗಿ ಬಳಸೋರು, ಅವರ ಕೈಯಲ್ಲಿ ಯಾವ ವಾಚ್ ಇದ್ರೂ ಇಲ್ದೇ ಇದ್ರೂ, ಸಮಯದ ಉಪಯೋಗವನ್ನು ಚೆನ್ನಾಗಿ ಮಾಡಿಕೊಳ್ತಾರೆ. ಅದೂ ಅಲ್ದೇ, ಈ ಸಂಬಂಧಗಳು ಅನ್ನೋದೆಲ್ಲ, ತೋಟದಲ್ಲಿ ಒಂದು ಗಿಡ ನೆಟ್ಟ ಹಾಗೆ, ಅವುಗಳನ್ನು ಚೆನ್ನಾಗಿ ಬೆಳೆಸಿ, ಪೋಷಿಸದೇ ಹೋದ್ರೇ ಸತ್ತೇ ಹೋಗ್ತಾವೆ. ಹಾಗಿರಬೇಕಾದ್ರೆ, ನನ್ನ ಸುತ್ತು ಮುತ್ಲೂ ಇರೋ ಸಂಬಂಧಗಳನ್ನು ನಾನು ಆತುಕೊಳ್ಳಲೋ ಅಥ್ವಾ ಜೊತೆಗೆ ಒಂದಿಷ್ಟು ವರ್ಚುವಲ್ಲ್ ಪ್ರಪಂಚದ ಲಿಂಕುಗಳನ್ನೂ ಪೋಣಿಸಿಕೊಳ್ಳಲೋ? ಅನ್ನೋ ಸಂಧಿಗ್ಧ ಬೇರೆ.

ಇಂಟರ್‌ನೆಟ್ ಈಗ ತಾನೆ ಕಣ್ಣು ತೆರೀತಾ ಇದೆ, ಕೇವಲ ಒಂದೂವರೆ ದಶಕದಷ್ಟು ಹಳೆಯದಾದ ಈ ತಂತ್ರಜ್ಞಾನಕ್ಕೆ ಇನ್ನೂ ದೊಡ್ಡ ಭವಿಷ್ಯವಿದೆ. ಈ ಇಂಟರ್‌ನೆಂಟ್ ಸೈಟ್‌ಗಳು ನಮ್ಮೂರಿನ ಪಬ್ಲಿಕ್ ಲೈಬ್ರರಿಗಳಾಗೋ ಮುನ್ನ ಬಹಳಷ್ಟು ಬೆಳವಣಿಗೆ ಖಂಡಿತ ಇದೆ. ನಾವೆಲ್ಲ ಮುದುಕರಾಗೋಷ್ಟೋತ್ತಿಗೆ ಇನ್ನೂ ಏನೇನು ಬದಲಾವಣೆಗಳು ಬಂದು ಹೋಗ್ತಾವೋ ಕಾಣೆ. ನಮ್ಮ ಸುತ್ತು ಮುತ್ಲೂ ಇರೋ ಖಾಲಿ ಜಾಗಗಳ್ಳಲ್ಲಿ - ಅಂದ್ರೆ ಅದು ರೆಫ್ರಿಜರೇಟರ್ರಿನ ಸೈಡ್ ಆಗಿರಬಹುದು, ಆಥವಾ ಅಟ್ಟದ ಮೇಲಿನಿಂದ ಇಳಿಯುವಾಗ ಸಿಗೋ ಗೋಡೆ ಮೇಲಿನ ಖಾಲಿ ಜಾಗವಾಗಬಹುದು, ಅಥವಾ ಕಾರಿನ ವಿಂಡ್‌ಶೀಲ್ಡ್ ಇನ್ನು ಮುಂತಾದ ಫ್ಲಾಟ್ ಜಾಗಗಳು ಫ್ಲಾಟ್‌ಸ್ಕ್ರೀನ್ ಆಗಿ ಮಾರ್ಪಾಡಾಗೋ ಕಾಲ ದೂರವಿಲ್ಲ. ವರ್ಚುವಲ್ಲ್ ಆಗಲಿ ರಿಯಲ್ ಆಗಲಿ ಈ ಪ್ರಪಂಚ ಇಷ್ಟೇ, ಯಾವಾಗ್ಲೂ ಬೆಳಿತಾನೇ ಇರುತ್ತೆ. ಇವುಗಳಿಗೆಲ್ಲ ಸ್ಪಂದಿಸೋದಕ್ಕೆ, ಇವುಗಳ ಜೊತೆ ಏಗೋದಕ್ಕೆ ಸಮಯ ಮಾತ್ರ ಸಿಗೋದಿಲ್ಲ ಅಷ್ಟೇ.

Monday, April 13, 2009

ನಿಂತ ಮೇಲೆ ಹಾಸ್ಯ!

ಹತ್ತನೇ ಕ್ಲಾಸ್ ವರೆಗೆ ಕನ್ನಡ ಮೀಡಿಯಮ್‌ನಲ್ಲಿ ಓದಿರೋ ನನ್ನಂಥವರಿಗೆ Stand-up comedy ಅನ್ನೋದನ್ನ ಕನ್ನಡಕ್ಕೆ ಭಾಷಾಂತರ ಮಾಡಿ ಅಂದ್ರೆ, ಅದನ್ನ ’ನಿಂತ-ಮೇಲೆ ಹಾಸ್ಯ!’ ಅಂತ ಮಾಡಿಬಿಡ್ತೀನೇನೋ ಅನ್ನೋದು ನನ್ನ ಹೆದರಿಕೆ. ಉದಯ ಟಿವಿಯಲ್ಲಿ ಬರ್ತಾ ಇದ್ದ ನಗೆ ಸಖತ್ ಸವಾಲನ್ನು ನೋಡಿದಾಗಲೆಲ್ಲ ನಮ್ಮ ಜನರಿಗೆ ಹಾಸ್ಯದ ಚುರುಕು ಇತ್ತೀಚೆಗೆ ಬಹಳ ತಾಗಿದೆ ಅನ್ನಿಸ್ತಾ ಇತ್ತು, ಆದ್ರೆ ಜೊತೆಯಲ್ಲಿ ಇನ್ನೂ ಅವರಿವರು ಬಾವಿಗಳಲ್ಲಿ ಬೀಳಿಸ್ಕೊಂಡಿರೋ ವಾಚ್‌ಗಳಿಗೆ ಕೀಲಿ ಕೊಡೋದರಲ್ಲೇ ನಮ್ಮ ಜೋಕ್ ಮಾರರು ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟ ಹಾಗೆ ಕಾಣಿಸ್ತಾನೂ ಇತ್ತು.

ಕಾಮಿಡಿ-ಹಾಸ್ಯ-ತಮಾಷೆ-ನಗೆ ಅಂತ ಹುಡುಕ್ತಾ ಹೋದ್ರೆ ಎಷ್ಟು ಜನ ತಮ್ಮ ಒರಿಜಿನಲ್ ಕಂಟೆಂಟ್ ಅನ್ನ ತಮ್ಮ ಒರಿಜಿನಲ್ ಶೈಲಿಯಲ್ಲಿ ಪ್ರದರ್ಶನ ನೀಡಿ ಪ್ರಖ್ಯಾತರಾಗಿದ್ದಾರೆ, ಅದರಲ್ಲಿ ಕನ್ನಡಿಗರ ಪಾಲು ಎಷ್ಟು ಅಂತ ಅನ್ನೋದು ದೊಡ್ಡ ಸವಾಲೇ ಸರಿ. ನನ್ನ ಮಟ್ಟಿಗೆ ಅಮೇರಿಕದ ಜಾರ್ಜ್ ಕಾರ್ಲಿನ್ ಕಾಮಿಡಿ ಬಹಳ ಹೆಚ್ಚಿನ ಮಟ್ಟದ್ದು ಅನ್ನಿಸ್ತು. ನನ್ನ ಸಹೋದ್ಯೋಗಿಯೊಬ್ಬನನ್ನ ನಿನಗ್ಯಾವ ಕಾಮಿಕ್ಕುಗಳು ಇಷ್ಟ ಅಂತ ಪ್ರಶ್ನೆ ಕೇಳಿದ್ರೆ ಜೆರ್ರಿ ಸೈನ್‌ಫೆಲ್ಡ್ ಅಂದ. ಯಾಕೆ ಅಂದ್ರೆ, ಸೈನ್‌ಫೆಲ್ಡ್ ಜನರ ಬದುಕಿನ ಸೂಕ್ಷ್ಮಗಳನ್ನು ಹಾಸ್ಯವಾಗಿ ಜನರ ಜೊತೆಗೆ ಅಶ್ಲೀಲತೆಯ ಸೋಗಿಲ್ಲದೆ ಹಂಚಿಕೊಂಡವರಲ್ಲಿ ನಿಸ್ಸೀಮ ಎಂದು ತನ್ನ ನಿಲುವನ್ನ ನನ್ನ ಸಹೋದ್ಯೋಗಿ ಹಂಚಿಕೊಂಡ. ನನಗೆ ಆಗ್ಲೇ ಅನ್ಸಿದ್ದು, ಕಾಮಿಡಿ ಅಂದ್ರೆ, ಹೊಲಸು ಭಾಷೆಯ ಬಳಕೆ ಅಥವಾ ದುರ್ಬಳಕೆ ಇರ್ಲೇ ಬೇಕು ಅಂತೇನು ಇಲ್ಲ ಅಂತ.

***

ಯಾರಾದ್ರೂ ಹೊಸದಾಗಿ ಪರಿಚಯವಾದವರು ನನ್ನನ್ನ ಕೇಳೋ ಹಾಗೆ, ’...ಎಲ್ಲಾ ಸೆಟ್ಲ್ ಆಗಿರಬೇಕು ನೀವು ಹಾಗಾದ್ರೆ...’ ಇಲ್ಲಿ ಬಂದು ಇಷ್ಟು ವರ್ಷ ಅದ್ರೂ ಎಲ್ಲೂ ನಾವು ನೆಲೆ ನಿಂತೇ ಇಲ್ಲಾ - ಇನ್ನು ನಿಲ್ಲದ ಮೇಲೆ ಎಲ್ಲಿ ಹಾಸ್ಯ ಅಂತ ಅನ್ನೋ ಪ್ರಶ್ನೆ ಸಹಜವಾಗಿ ಬರುತ್ತೆ. ಅದಕ್ಕೆ ವಿರುದ್ಧವಾಗಿ ಕವಿವಾಣಿ ಬೇರೆ ಅದೇಶ ಕೊಟ್ಟಿದೆ - ’...ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು...’ಎಂದು...ಹೀಗೆ ತಿರುಗಾಡ್ತಾ ಇರೋ ಜೀವನಕ್ಕೇನೇ ಹೆಚ್ಚು ಹೆಚ್ಚು ಐಡಿಯಾಗಳು ಬರೋದು (ಹಾಸ್ಯದ ರೂಪದಲ್ಲಿ) ಅಂತ ಕಾಣ್ಸುತ್ತೆ, ಉದಾಹರಣೆಗೆ ಏರ್‌ಪೋರ್ಟಿನಲ್ಲಿ TSA (Transportation Security Administration) ಅವರನ್ನು Thousands Standing Around! ಅಲ್ಲಿ ಲೈನಿನಲ್ಲಿ ನಿಂತಿರುವ ಜನಸಮೂಹ ಕಿಚಾಯಿಸಬಹುದು.

***

ಹಾಸ್ಯದ ಮೇಲೆ ಮತ್ತೆ ತಮಾಷೆಯಾಗಿ ಬರೀತಾನೇ ಇರ್ತೀನಿ, ಕೊನೇಪಕ್ಷ ’ಅಂತರಂಗ’ ಅಂದ್ರೆ ಅಳುಮುಂಜಿ ಐಡಿಯಾಗಳ ಆಗರ ಮುಖ ಮುದುಡಿಕೊಳ್ಳುವವರನ್ನ ಸಂತೈಸೋಕಾದ್ರೂ. ಇನ್ನು ಕೆಲವರಿಗೆ ಬ್ಲಾಗ್‌ ನಿಂದ ಜೀವನ ದರ್ಶನ ಸಿಗಬೇಕು ಅಂತ ಸಂಕಲ್ಪ ಇದ್ರೆ ಅವರು ತಮ್ಮ ಬಿಸಿನೆಸ್ಸನ್ನ ಬೇರೆ ಎಲ್ಲಾದ್ರೂ ತೊಗೊಂಡು ಹೋಗ್ಲಿ, ಏನಂತೀರಿ?

Sunday, April 05, 2009

ಸಗಣಿಯೊಳಗಿನ ಹುಳಗಳೂ ಬಾವಿ ಕಪ್ಪೆಗಳೂ...



























ಮಾರ್ಚ್ ೨೯ ರ ವಿ.ಕ.ದಲ್ಲಿ ’ಜನಗಳ ಮನ’ದಲ್ಲಿ ರವಿ ರೆಡ್ಡಿ ಹಾಗೂ ಜಗದೀಶ್ ರಾವ್ ಕಲ್ಮನೆಯವರ ಬಗ್ಗೆ ಓದಿ ಹೀಗನಿಸಿದ್ದು ನಿಜ.

ಹ್ಞೂ, ’ಇಂಥವರ ಬಗ್ಗೆ ಎರಡು ಸಾಲು ಬರೆದರೂ ಜಾಗ ವೇಷ್ಟು’ ಎಂದಿದ್ದಾರಲ್ಲವೇ? ಜೊತೆಗೆ, ’...ಬೆಂಗಳೂರು ಸುಧಾರಣೆಯಾಗಬೇಕಿದೆ.’ ಎನ್ನುವ ಕುಹಕ ಅಲ್ಲ, ನಿಜ ಸ್ಥಿತಿ ಬೇರೆ ಕೇಡಿಗೆ.

***

’ನಾವು ಭಾರತೀಯರೂ, ಒಹೋಯ್!’ ಎಂದು ಮೊನ್ನೆ ಮೊನ್ನೆ ತಾನೆ ಅಶ್ವಥ್ ಕೂಗಿ ಹೋಗಿದ್ದರಲ್ಲವೇ? ಸಗಣಿಯೊಳಗಿನ ಹುಳುಗಳಿಗೆ ಅದೇ ಪ್ರಪಂಚ, ಒಂದು ವೇಳೆ ಅವುಗಳನ್ನೇನಾದರೂ ಯಾರಾದರೂ ಎತ್ತಿ ಹೊರಗೆ ಬಿಟ್ಟರೂ ಮತ್ತೆ ಸಗಣಿಯೊಳಗೆ ಸಿಗುವ ಸುಖಕ್ಕೆ ಜೋತು ಬೀಳುವ ಜಾತಿ. ಹಾಗೇ ಬಾವಿ ಕಪ್ಪೆಗಳೂ ಕೂಡ, ತಮ್ಮದೇ ಪ್ರಪಂಚದಲ್ಲಿ ತಾವೇ ದೊಡ್ಡವರು ಎಂದುಕೊಂಡ ಹಾಗೆ.

ಇವೇ ಅತಿರಥ-ಮಹಾರಥರು ಅಮೇರಿಕದ ಸಮ್ಮೇಳನಗಳಿಗೆ ಬಂದಾಗ ಬಾಲ ಮುದುರಿಕೊಂಡು ತಮಗೆ ತೋಚಿದ್ದನ್ನ ಬರೀತಾರೇ ವಿನಾ ಯಾರೊಬ್ಬರ ಹೆಸರಿಗೂ ಮಸಿ ಬಳಿಯುವ ಕಾಯಕಕ್ಕಂತೂ ಕೈಗೂಡಿದ್ದನ್ನ ನಾನು ನೋಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಅಮೇರಿಕದಲ್ಲಿ ಇನ್ನೂ ಮುಗಿಯದೇ ಇದ್ದ ’ಬಾಲ್ಟಿಮೋರ್ ಸಮ್ಮೇಳನ’ವನ್ನು ಈಗಾಗಲೇ ಮುಗಿದು ಹೋಯಿತು ಎಂದು ವರದಿಯನ್ನು ಹೊರಗೆ ಹಾಕಿದ್ದಕ್ಕೂ ಒಂದು ಅಪಾಲಜಿ ಇವುಗಳ ಮುಸುಡಿಯಿಂದ ಹೊರಡಲ್ಲ. ಇದ್ದ ಬದ್ದ ಸುದ್ದಿಗೆ ಒಂದಿಷ್ಟು ಕಣ್ಣೊರೆಸುವ ಚಾಕಚಕ್ಯತೆಯನ್ನು ಮುಟ್ಟಿಸಿ ಸುಳ್ಳಿನ ಮೇಲೆ ನೂರೆಂಟು ಸುಳ್ಳನ್ನು ಹೇಳೋ ಪದ್ಧತಿಯೂ ಇನ್ನೂ ನಿಂತ ಹಾಗಿಲ್ಲ.

***

’ಮೌಲ್ಯ’ವೆಂದರೇನು ಎಂದು ತಿಳಿದು ಅದನ್ನು ಪಚನ ಮಾಡಿಕೊಳ್ಳಲು ಇನ್ನೂ ಒಂದೈದು ಸಾವಿರ ವರ್ಷಗಳಾಗಬೇಕು ನಮಗೆ. ಇನ್ನು ಮೌಲ್ಯವನ್ನು ಆಧರಿಸಿದ ರಾಜಕಾರಣವೆಂದರೇನದು? ನಾವೆಲ್ಲ ಕುರಿಗಳು ಎಂದು ಕವಿಗಳು ಆಡಿ ಅಣಗಿಸಲಿಲ್ಲವೇ? ಅಂಥ ಕುರಿಗಳ ಮಂದೆಗೆ ಅಮೇರಿಕದೊಂದಿಷ್ಟು ಜನ ಪಾಪ ಏನೋ ಸಹಾಯವಾಗಲಿ ಎಂದು ಮನೆ-ಮಠ ಬಿಟ್ಟು, ಇರುವ ರಜಾ ವಜಾ ಮಾಡಿಕೊಂಡು, ಕೈಯಲ್ಲಿನ ಕಾಸು ಕರಗುವ ವರೆಗೂ ಪ್ರಯತ್ನ ಮಾಡುವ ಗೋಜಿಗಾದರೂ ಹೋಗುತ್ತಾರಲ್ಲ ಅದೇ ಮುಖ್ಯ.

ಐವತ್ತು ವರ್ಷಗಳಿಂದ ಚಲಾವಣೆಯಲ್ಲಿದ್ದ ಸಂವಿಧಾನ ಬದ್ಧ ’ಬಾವುಟ ಹಾರಿಸುವ ಕಾಯಿದೆ’ಯನ್ನು ಮುರಿದು ನಮ್ಮ ದೇಶದ ಬಾವುಟವನ್ನು ನಾವು ನಮ್ಮ ಮನೆ ಮುಂದೆ ಹಾರಿಸಿದರೆ ತಪ್ಪೇ? ಎಂದು ಸಾಧಿಸಿಕೊಂಡಿದ್ದು ನಮ್ಮಂಥ ಒಬ್ಬ ಅನಿವಾಸಿಯೇ.
ಅಮೇರಿಕದಲ್ಲಿ ಓದಿಕೊಂಡು, ಸದನದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಮುಂದೆ ಒಬ್ಬ ಪ್ರತಿಭಾವಂತ ಮುಖ್ಯಮಂತ್ರಿ ಎಂದು ಎಸ್. ಎಮ್. ಕೃಷ್ಣ ಹೆಸರು ತೆಗೆದುಕೊಳ್ಳಲಿಲ್ಲವೇ?

***

ಇಂಥವರ ಬಗ್ಗೆ ಬರೀ ಬೇಡ್ರಿ, ನಿಮ್ಮ ಮೂರುಕಾಸ್ ಪತ್ರಿಕೆಯಲ್ಲಿ, ಯಾರ್ ಕೇರ್ ಮಾಡ್ತಾರೆ? ಹಾಗೆ ಬರೆಯದೇ ಉಳಿದ ಜಾಗೆಯಲ್ಲಿ ಅವೇ-ಅವೇ ಪ್ರಭೃತಿಗಳ ದರ್ಶನ ಮಾಡಿಸಿಕೊಂಡು ಸುಖವಾಗಿರಿ. ಲಂಚ, ಭ್ರಷ್ಟಾಚಾರ ಅನ್ನೋದು ಹಾಡು ಹಗಲಿನ ದಂದೆಯಾಗಿದ್ದರೂ ಅದನ್ನು ಇದ್ದ ಹಾಗೆ ಬರೆದು ವರ್ಷಕ್ಕೊಬ್ಬ ಪುಂಡು ರಾಜಕಾರಣಿಯನ್ನಾದರೂ ಜೈಲಿಗೆ ಸೇರಿಸಿದ್ದೇ ನಿಜವಾಗಿದ್ದರೆ ಪತ್ರಿಕೆ ಪಾವನವಾಗುತ್ತಿತ್ತು, ಹಾಗಾಗೋದಿಲ್ಲ ಎಂದ ಮೇಲೆ ತಿಪ್ಪೇ ಸಾರಿಸಿಕೊಂಡೇ ಬಿದ್ದಿರಿ.

ಹೆಂಡ-ಸೀರೆ ಹಂಚಿ ಮತ ತೆಗೆದುಕೊಳ್ಳೋ ನಿಮ್ಮ ದೊರೆಗಳ ಪಾದ ನೆಕ್ಕೊಂಡು ಬಿದ್ದಿರಿ, ಇವತ್ತಲ್ಲ ನಾಳೆ ನಿಮಗೂ ಬೆಳಕಿನ ದರ್ಶನವಾದೀತು. ಬಡವರನ್ನ ದೋಚಿ ಸುಲಿಗೆ ಮಾಡಿ ಜಾತಿ ರಾಜಕಾರಣ ಮಾಡೋರು ನಿಮಗೆಲ್ಲ ಆದರ್ಶವಾಗಲಿ.

ದೇಶ ಬಿಟ್ಟು ಭಾಷೆ ಬಿಟ್ಟು, ಎಲ್ಲರಿಗಿಂತ ಹೆಚ್ಚು ಕೊರಗಿಕೊಂಡು, ಮನಸಲ್ಲಿ ಅಪ್ಪಟ ಮಾನವನಾಗಿ ಬೆಳೆಯೋ ಆಲೋಚನೆಗಳಿಗೆ ದಿನೇದಿನೇ ನೀರು ಕುಡಿಸುತ್ತಾ ಒಂದು ಕಡೆ ಬೇಡವೆಂದರೂ ದೂರ ಹೋಗುವ ಭಾರತೀಯತೆಯನ್ನು ಮತ್ತೊಂದು ಕಡೆ ಗಟ್ಟಿಯಾಗಿ ಅಪ್ಪಿಕೊಂಡೇ ನಾವು ನಿಟ್ಟುಸಿರು ಬಿಡ್ತೀವಿ, ಅವು ನಿಮಗೆಲ್ಲ ಖಂಡಿತ (ಈ ಜನುಮದಲ್ಲಿ) ಅರ್ಥ ಆಗಲ್ಲ ಬಿಡಿ.

Sunday, March 22, 2009

ಸ್ಪ್ರಿಂಗ್ ಬಂತು ಸ್ಪ್ರಿಂಗು

ಮೊನ್ನೆ ಇಲ್ಲೆಲ್ಲಾ ಸ್ಪ್ರಿಂಗ್ ಆರಂಭವಾದ ದಿನ. ಇವತ್ತಾದರೂ ಪರಿಸ್ಥಿತಿ ಹೇಗಿದೆ ನೋಡೋಣ ಎಂದು ಪ್ಯಾಟಿಯೋದಿಂದ ಹೊರಗೆ ನೋಡಿದರೆ ಅಂತಾ ಏನೂ ವಿಶೇಷ ಕಾಣಿಸ್ಲಿಲ್ಲ. ಮರ-ಗಿಡಗಳೆಲ್ಲ ಅವೇ ಗ್ರೇ ಸ್ಕೇಲ್ ಪೇಂಟಿಂಗ್‌ನಲ್ಲಿ ನಿಂತ ಹಾಗೆ ಒಂದಿನಿತೂ ಅಲುಗಾಡದೆ ನಿಂತಿದ್ದವು. ಡೆಕ್ ಮೇಲೆ ಅಮ್ಮ ಚಪಾತಿ ಮಣೆಯ ಮೇಲೆ ಹಿಟ್ಟು ಸವರಿಕೊಳ್ಳೋ ಹಾಗೆ ಒಂದು ಪದರು ಸ್ನೋ ಬಿದ್ದಿತ್ತು. ಹೊರಗಡೆ ಇರೋ ಥರ್ಮಾ ಮೀಟರ್‌ನ ಮುಳ್ಳು ಕೆಟ್ಟು ಹೋಗಿರುವ ಗಡಿಯಾರದಲ್ಲಿ ಮುಳ್ಳುಗಳು ನಿರ್ಜೀವವಾಗಿ ಬಿದ್ದ ಹಾಗೆ ಮುವತ್ತು ಡಿಗ್ರಿಯ (ಫ್ಯಾರನ್‌ಹೈಟ್) ಬಲಮಗ್ಗುಲಿಗೆ ಸತ್ತು ಬಿದ್ದ ಹಾಗಿತ್ತು.

ಈ ಸ್ಪ್ರಿಂಗ್ ನದೇ ವಿಶೇಷ, ಇಲ್ಲಿ ಅದೆಷ್ಟು ವರ್ಷ ಇದ್ದರೂ ನಮಗಿನ್ನೂ ಚರ್ಮದಿಂದ ಕೆಳಗೆ ಇಳಿಯೋದೇ ಇಲ್ಲ. ಸ್ಪ್ರಿಂಗ್‌ಗೆ ಕನ್ನಡದಲ್ಲಿ ಏನಂತಾರೆ ಎಂದು ಡಿಕ್ಷನರಿಯನ್ನು ನೋಡಿದರೆ ಅಲ್ಲೂ ನಿರಾಶೆ ಕಾದಿತ್ತು. ಇವರೋ ವರ್ಷವನ್ನು ಸಮನಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ಪ್ರಿಂಗು, ಸಮ್ಮರ್ರು, ಫಾಲ್ ಹಾಗೂ ವಿಂಟರ್ ಎಂದು ಕರೆದರು. ಆದರೆ ನಮ್ಮ ಚೈತ್ರ, ವೈಶಾಖ ಮಾಸಗಳಾಗಲೀ ವಸಂತ ಋತುವಾಗಲಿ ವರ್ಷವನ್ನು ನೋಡುವ ರೀತಿಯೇ ಬೇರೆ. ಅಲ್ಲದೆ ನಮ್ಮ ಕಡೆಗೆಲ್ಲ ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ಎಂದು ಮಾತನಾಡಿಕೊಂಡಿದ್ದನ್ನು ಕೇಳಿದ್ದೆನೆಯೇ ವಿನಾ ಈ ಸ್ಪ್ರಿಂಗ್ ಬಗ್ಗೆ ಕೇಳಿಲ್ಲ. ಇದನ್ನು ಸುಗ್ಗಿ ಅನ್ನೋಣವೇ, ಸಂಕ್ರಮಣ ಅನ್ನೋಣವೇ, ಯುಗಾದಿ ಅನ್ನೋಣವೇ, ಅಥವಾ ಬಾಯ್ತುಂಬ ಸ್ಪ್ರಿಂಗ್ ಎಂದು ಸುಮ್ಮನಿದ್ದು ಬಿಡೋಣವೆ.

ಇಲ್ಲಿ ಮಂಜಿನ ಹನಿಗಳದೊಂದು ಮತ್ತೊಂದು ವಿಶೇಷ, ಹಗುರವಾಗಿ ನೆಲದ ಮೇಲೆಲ್ಲಾ ಹರಡಿ ಹೂ-ಎಲೆಗಳನ್ನು ಸ್ಪರ್ಶಿಸಿ ಅವುಗಳನ್ನು ತೇವವಾಗಿಡುವುದರ ಬದಲು ಇಳಿಯುವ ಉಷ್ಣತೆಯ ದೋಸ್ತಿಗೆ ಕಟ್ಟುಬಿದ್ದು ಅವೂ ಘನೀಭವಿಸತೊಡಗಿವೆ. ಡಿಸೆಂಬರ್ ಇಪ್ಪತ್ತೊಂದರಿಂದಲೇ ಮೆಜಾರಿಟಿಗೆ ಬಂದ ಸೂರ್ಯನ ಕಿರಣಗಳು ಈಗಾಗಲೇ ತಮ್ಮ ಮಧ್ಯ ವಯಸ್ಸನ್ನು ತಲುಪಿ ಮುದುಕರಂತೆ ಕಂಡು ಬರುತ್ತಿವೆ, ಇನ್ನೇನು ಜೂನ್ ಇಪ್ಪತ್ತೊಂದು ಬರುವಷ್ಟರೊಳಗೆ ಸತ್ತೇ ಹೋದಾವೇನೋ ಎನ್ನೋ ಹಾಗೆ.

ಛಳಿಯಲ್ಲಿ ಇದ್ದು ಬಂದವರಿಗೆ ಬೇಸಿಗೆಯ ಆಸೆ, ಬೇಸಿಗೆಯಲ್ಲಿ ಒಂದೇ ಒಂದಿಷ್ಟು ಬಿಸಿಲಲ್ಲಿ ಬಸವಳಿದು ಹೋದರೂ ತಂಪಾಗಿರಬಾರದೇ ಎನ್ನುವ ತವಕ. ಏನೇ ಅಂದರೂ ಶೇಕ್ಸ್‌ಪಿಯರ್ ಅಂಥವರು - shall I compare thee to a summers day! ಎಂದು ಏಕೆ ಬರೆದರು ಎಂದು ಅನುಭವಿಸಲು ಅಂತಹ ವಾತಾವರಣದಲ್ಲೇ ಇರಬೇಕು ಎನ್ನುವುದು ನನ್ನ ಅಭಿಮತ. ಮಳೆಯಲ್ಲಿ ನೆಂದವರ ಬವಣೆಯನ್ನು ಅರಿಯಲು ಓದುಗರು ಮಳೆಯಲ್ಲಿ ನೆನೆದು ನೋಡಬೇಕಾಗೇನೂ ಇಲ್ಲ, ಆದರೆ ವರ್ಷದ ಎಂಟು ತಿಂಗಳು ಶೀತ ವಾತಾವರಣವನ್ನು ಅನುಭವಿಸಿ ಇರುವ ಒಂದೋ ಎರಡೋ ತಿಂಗಳ ಬೇಸಿಗೆಯ ಸುಖದಲ್ಲಿ ಚಿಗುರುವ ಕವಿಯ ಕಲ್ಪನೆಗಳು ನಮ್ಮ ದಕ್ಷಿಣ ಭಾರತದ ಸುಡು ಬಿಸಿಲಿನಲ್ಲಿ ಹುಟ್ಟಿ ಬೆಳೆದು ಓದಿದವರಿಗೇನು ಗೊತ್ತು?

ನಮಗಿಲ್ಲಿ ಕ್ಯಾಲೆಂಡರಿನಲ್ಲಿ ಹೇಳಿ ಕೊಟ್ಟಂತೆ ಸ್ಪ್ರಿಂಗ್ ಬರುತ್ತದೆ. ಅವಾಗಾವಾಗ ಅಮ್ಮ ನೆನಪಿಸುತ್ತಲೇ ಇರುತ್ತಾಳೆ, ಈ ತಿಂಗಳು ಇಪ್ಪತ್ತೇಳಕ್ಕೆ ಯುಗಾದಿ ಹಬ್ಬ ಇದೆ, ನೀವೂ ಮಾಡಿ ಎಂದು. ನಮಗಿಲ್ಲಿ ಎಳ್ಳೂ-ಬೆಲ್ಲ ಬರಲಿಲ್ಲ, ಮುಂದೆ ಬೇವೂ-ಬೆಲ್ಲವೂ ಇರೋದಿಲ್ಲ. ಇಲ್ಲಿ ನಮಗೆ ಹೊಂಗೆ ಹೂವ ತೊಂಗಲು ಕಣ್ಣಿಗೆ ಕಾಣೋದಿಲ್ಲ, ಯಾವುದೋ ಭಾಷೆಯಲ್ಲಿ ಅದೇನೆಂದೋ ಕರೆಯುವ ಒಂದಿಷ್ಟು ಮರಗಿಡಗಳು ದಾರಿ ಉದ್ದಕ್ಕೂ ಕಾಣ ಸಿಗುತ್ತವೆ, ತಮ್ಮ ಸುತ್ತ ಮುತ್ತಲೂ ಬಣ್ಣದೋಕುಳಿಯನ್ನು ಹರಡಿಕೊಳ್ಳುತ್ತವೆ. ಮಾವಿನೆಲೆಗಳಾಗಲೀ, ಚಿಗುರುಗಳಾಗಲೀ ನೋಡದೇ ಎಷ್ಟೋ ವರ್ಷಗಳೇ ಕಳೆದವೇನೋ, ಅವುಗಳ ಬದಲಿಗೆ ನಮ್ಮ ಮನೆಯ ಬಾಗಿಲಿಗೆ ಯಾವತ್ತೂ ಹಸಿರನ್ನು ತರುವ ಪ್ಲಾಸ್ಟಿಕ್ ಎಲೆಗಳನ್ನು ಪೋಣಿಸಿದ ಸರವೊಂದನ್ನು ನೇತು ಹಾಕಿದ್ದಾಗಿದೆ. ಸಂವತ್ಸರಗಳು ಕೆಲವೇ ಕೆಲವು ನೆನಪಿವೆ. ಆರು ಋತುಗಳನ್ನು ನೆನಪಿಸಿಕೊಳ್ಳಲು ಕನಿಷ್ಠ ಆರು ನಿಮಿಷವಾದರೂ ಬೇಕು, ಚೈತ್ರ-ವೈಶಾಖರನ್ನು ಎಡಬಿಡದೆ ಕಲಿತದ್ದರಿಂದಾಗಿ ಇನ್ನೂ ಸ್ಮೃತಿಪಠಲದಲ್ಲೇ ಇವೆ. ಅಶ್ವಿನಿ-ಭರಣಿ-ಕೃತ್ತಿಕಾ-ರೋಹಿಣಿಯರು ಒಮ್ಮೊಮ್ಮೆ ಪೂರ್ಣ ನೆನಪಿಗೆ ಬರುತ್ತಾರೆ, ಮತ್ತೆ ಇಲ್ಲ. ಯಾವ ಮಳೆ ನಕ್ಷತ್ರ ಯಾವ ತಿಂಗಳಲ್ಲಿ ಎನ್ನುವುದು ನೆನಪಿಗೆ ಗುಡ್ ಬೈ ಹೇಳಿ ಬಹಳ ವರ್ಷಗಳೇ ಆಗಿವೆ. ಯಾವ ಹುಣ್ಣಿಮೆಗೆ ಏನೇನು ವಿಶೇಷ ಎನ್ನುವುದು ಈಗ ಇತಿಹಾಸವಷ್ಟೇ.

ನಮಗಲ್ಲಾದರೆ ಯುಗಾದಿ ಒಂದು ಸಮೂಹದಾಚರಣೆಯಾಗುತ್ತಿತ್ತು. ಒಂದೆರಡು ಬೇವು-ಮಾವಿನ ಮರಗಳನ್ನು ಹತ್ತಿಳಿದು ಎಲೆಗಳನ್ನು ಕಿತ್ತು ತರುತ್ತಿದ್ದೆವು. ಅದೇ ದಿನ ಸಂಜೆಯೋ ಮರುದಿನವೋ ಕಂಡೂ ಕಾಣದ ಚಂದ್ರನ ಗೆರೆಯನ್ನು ತವಕದಿಂದ ಹುಡುಕುತ್ತಿದ್ದೆವು. ನಾವು ತಿಂದು ಹಂಚುವ ಬೇವು-ಬೆಲ್ಲದ ಪ್ರತೀಕ ಬಹಳ ದೊಡ್ಡದಿತ್ತು. ಇಲ್ಲಿ ಸ್ಪ್ರಿಂಗ್ ಬಂದರೆ it's just another day, ಅದೇ ರೀತಿ ಉಳಿದ ದಿನಗಳೂ ಬಂದು ಹೋಗುತ್ತವೆ. ಹಾಗೆ ಬಂದು ಹೋಗುವ ಕಾಲ(ಮಾನ)ಕ್ಕೆ ನಾವು ಒಂದಿಷ್ಟು ಪ್ರತಿರೋಧ ಒಡ್ಡಿದಂತೆ ಮಾಡುತ್ತೇವಾದರೂ ಅಂತಹ ಪ್ರತಿರೋಧದ ಧ್ವನಿಯೂ ನಮ್ಮಲ್ಲೇ ಹುಟ್ಟಿ ಅಲ್ಲೇ ಮುದುರಿಕೊಳ್ಳುವುದು ಈ ಸ್ಪ್ರಿಂಗ್ ಬಂದು ಹೋದಷ್ಟೇ ಸಹಜವಾಗಿ ಹೋಗುತ್ತದೆ.

Friday, March 20, 2009

ನಮ್ಮೂರ ರಸ್ತೆ ಹಾಗೂ ಜನರ ಮನಸ್ಥಿತಿ

"Roads are horrible in India...don't know why people don't realize that and do something about it..." ಎನ್ನೋ ಕಾಮೆಂಟ್ ಅನ್ನು ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಹೇಳೋದನ್ನ ಕೇಳಿದ್ದೇನೆ. ನಮ್ಮ ಭಾರತದ ರಸ್ತೆಗಳೇ ಹಾಗೆ...which ever the road you take it is always a treacherous journey! ಶ್ರೀಮಂತ ದೇಶದ ಜನರಿಗೆ ತೃತೀಯ ಜಗತ್ತಿನ ಅರಿವಾಗುವುದು ಕಷ್ಟ ಸಾಧ್ಯವೂ ಹೌದು. ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಂಚ, ವಂಚನೆ, ಭ್ರಷ್ಟಾಚಾರ, ಹಿಂಸೆ, ಅನಕ್ಷರತೆ ಮೊದಲಾದವುಗಳನ್ನು ಬೇಕಾದಷ್ಟು ರೀತಿಯಲ್ಲಿ ಪ್ರಶ್ನಿಸಿಕೊಳ್ಳಬಹುದು.

ಒಂದು ದೇಶದ ಉನ್ನತಿ ಆ ದೇಶದಲ್ಲಿ ದೊರೆಯುವ ಸಂಪನ್ಮೂಲ ಹಾಗೂ ಆ ದೇಶದ ಜನರ ಅರಿವಿನ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆ ಮಾಡಬಹುದು ಅನ್ನೋ ತಂತ್ರಜ್ಞಾನಕ್ಕೂ ಸಹ ಸರಿಯಾದ ಸಲಕರಣೆ ಪರಿಕರಗಳು ಇದ್ದರೆ ಮಾತ್ರ ಆ ತಂತ್ರಜ್ಞಾನವನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಂದು ದೇಶದ ಹವಾಮಾನ ಕೂಡ ಅಲ್ಲಿನ ರಸ್ತೆಗಳ ವಿನ್ಯಾಸ, ಅಗಲ ಹಾಗೂ ಕ್ವಾಲಿಟಿಗಳನ್ನು ನಿರ್ಧರಿಸಬಲ್ಲದು ಎನ್ನುವ ವಿಷಯ ಇತ್ತೀಚೆಗಷ್ಟೇ ಮನಸಿಗೆ ಬಂದಿದ್ದು. ಭೂ ವಿಸ್ತಾರದಲ್ಲಿ ಹೆಚ್ಚಾಗಿಯೂ ಜನ ಸಂಖ್ಯೆಯಲ್ಲಿ ಕಡಿಮೆಯೂ ಇರುವ ದೇಶಗಳ ಸವಾಲಿಗೂ ಅಧಿಕ ಜನಸಂಖ್ಯೆಯ ಸಣ್ಣ ದೇಶಗಳ ಸವಾಲಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ನಾವಿರುವ ರಾಜ್ಯವನ್ನೇ ತೆಗೆದುಕೊಳ್ಳೋಣ, ನ್ಯೂ ಜೆರ್ಸಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಛಳಿಗಾಲದಲ್ಲಿ ಒಮ್ಮೊಮ್ಮೆ ಒಂದು ಅಡಿಗಿಂತಲೂ ಹೆಚ್ಚು ಸ್ನೋ ಬೀಳುವುದೂ, ವರ್ಷದಲ್ಲಿ ಕೊನೇ ಪಕ್ಷ ನಾಲ್ಕು ತಿಂಗಳಾದರೂ ಭಯಂಕರ ಛಳಿಯ ವಾತಾವರಣ ಇರೋದು ನಿಜ. ಸ್ನೋ ಬಿದ್ದಾಗ ಅಥವಾ ಛಳಿಯಲ್ಲಿ ಹೆಪ್ಪುಗಟ್ಟಿದ ಹಿಮವನ್ನು ರಸ್ತೆಯ ಬದಿಗೊತ್ತಿ ವಾಹನಾಳಿಗೆ ದಾರಿ ಮಾಡಿಕೊಡಲು ರಾಜ್ಯ/ಪಟ್ಟಣಗಳ ಬೊಕ್ಕಸದಿಂದ ವರ್ಷಕ್ಕಿಷ್ಟು ಎಂದು ಹಣ ತೆಗೆದಿಡಲಾಗುತ್ತದೆ. ದೊಡ್ಡ ಹೈವೆಗಳಲ್ಲಿ ರಸ್ತೆಯ ಪಕ್ಕಕ್ಕೆ ಒಂದು ಲೇನ್ ಅಗಲಕ್ಕಿಂತಲೂ ಹೆಚ್ಚು ಅಗಲವಾದ ಶೋಲ್ಡರುಗಳಿರುತ್ತವೆ. ಇನ್ನು ಅಷ್ಟು ಅಗಲವಲ್ಲದ ಶೋಲ್ಡರ್ ಇರುವ ಎರಡು ಲೇನ್ ರಸ್ತೆಗಳು ವಿಂಟರ್‌ನಲ್ಲಿ ಒಂದು ಲೇನ್ ರಸ್ತೆಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಜನರ ಹಾಗೂ ಅವರ ಅಟೋಮೊಬೈಲುಗಳ ಸಂಬಂಧ ಅಧಿಕ. ಇಲ್ಲಿ ತಲಾ ಒಂದೊಂದು ಕಾರು ಎನ್ನುವುದು ನಿತ್ಯೋಪಯೋಗಿ ವಸ್ತುವೇ ಹೊರತು ಲಕ್ಷುರಿಯಂತೂ ಅಲ್ಲ. ಪ್ರತಿಯೊಬ್ಬರೂ ಸಣ್ಣ ಪುಟ್ಟ ದೂರಗಳಿಂದ ಹಿಡಿದು ನೂರಾರು ಮೈಲುಗಳ ಪ್ರಯಾಣಕ್ಕೂ ತಮ್ಮ ಕಾರುಗಳನ್ನೇ ನಂಬಿರುವ ಪರಿಸ್ಥಿತಿ. ಹೀಗಿರುವಾಗ ಕೆಟ್ಟ ರಸ್ತೆಗಳು ಹೇಗೆ ತಾನೇ ಹುಟ್ಟ ಬಲ್ಲವು. ಒಂದು ವೇಳೆ ಒಳ್ಳೆಯ ರಸ್ತೆ ಕೆಟ್ಟ ರಸ್ತೆಯಾಗಿ ಪರಿವರ್ತನೆಗೊಂಡರೂ (ಹೊಂಡ, ಗುಂಡಿ, ಬಿರುಕು, ಗಲೀಜು ಮುಂತಾದವುಗಳಿಂದ) ಇಲ್ಲಿನ ಜನರು ಸ್ಥಳೀಯ ಆಡಳಿತವನ್ನು ಕೇಳುವ ವ್ಯವಸ್ಥೆ ಇದೆ, ಅದಕ್ಕಿಂತ ಮೊದಲು ಹಾಗಿರುವ ರಸ್ತೆಗಳನ್ನು ತುರಂತ ರಿಪೇರಿ ಮಾಡುವ ವ್ಯವಸ್ಥೆ ಇದೆ, ಅಲ್ಲದೆ ಪ್ರತಿಯೊಂದು ರಸ್ತೆಯನ್ನು ಮೇಂಟೈನ್ ಮಾಡುವ ಪದ್ಧತಿ ಅಥವಾ ವ್ಯವಸ್ಥೆ ಇದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ತಮ್ಮ ನೆರೆಹೊರೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವಲ್ಲಿ ಶ್ರಮಿಸುತ್ತವೆ.

ಭಾರತದಲ್ಲಿ ಹೈವೇಗಳಿಂದ ಹಿಡಿದು ಸ್ಥಳೀಯ ರಸ್ತೆಗಳಲ್ಲಿ ಲೇನ್‌ಗಳು ಹೊಸತು. ರಸ್ತೆಯ ಮೇಲೆ ಬಿಳಿಯ ಪಟ್ಟೆಗಳನ್ನು ಉದ್ದಾನುದ್ದ ಎಳೆದು ಅವನ್ನು ಮೇಂಟೇನ್ ಮಾಡುವುದಕ್ಕೆ ತೊಡಗಿಸಬೇಕಾದ ಹಣ, ಹಾಗೆ ಮಾಡುವುದರ ಹಿಂದಿನ ಟೆಕ್ನಾಲಜಿ, ಜನರ ತಿಳುವಳಿಕೆ ಮೊದಲಾದವುಗಳು ಇನ್ನೂ ಹೊಸತು. ಎಲ್ಲದಕ್ಕಿಂತ ಮುಖ್ಯವಾಗಿ ಜನರಿಗೆ ಅರಿವು ಅಥವಾ ತಿಳುವಳಿಕೆ ಇಲ್ಲದಿರುವುದು ಗೊತ್ತಾಗುತ್ತದೆ. ನಾನು ನೋಡಿದ ಕನ್ನಡ ಸಿನಿಮಾಗಳಲ್ಲಿ ತೋರಿಸುವ ಈ ರಸ್ತೆಗಳಲ್ಲಿ ಜನರು ಕಾರು/ಜೀಪು ಓಡಿಸಿಕೊಂಡು ಹೋಗುವುದನ್ನು ನೋಡಿದರೆ ಅಲ್ಲಿ ಯಾರೂ ತೆಪ್ಪಗೆ ತಮ್ಮ ಲೇನ್ ನಲ್ಲಿ ಹೋಗೋದಿಲ್ಲ. ಜನನಿಬಿಡ ರಸ್ತೆಗಳಿಂದ ಹಿಡಿದು ಖಾಲೀ ರಸ್ತೆಗಳವರೆಗೆ ಎರೆಡೆರೆಡು ಲೇನ್‌ಗಳ ನಡುವೆ ಕಾರು ಓಡಿಸಿಕೊಂಡು ಹೋಗುವುದು ಒಂದು ರೀತಿಯ ಶೋಕಿ ಅಥವಾ ಅಜ್ಞಾನ. ಜೊತೆಗೆ ಪಾರ್ಕಿಂಗ್ ಮಾಡುವಲ್ಲಿಯೂ ಸಹ ಎರೆಡೆರಡು ಕಾರು ಪಾರ್ಕ್ ಮಾಡಬಹುದಾದ ಸ್ಥಳಗಳಲ್ಲಿ ಒಂದು ಕಾರನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಿ ಹೋಗುವುದಾಗಲೀ, ಟ್ರಾಫಿಕ್ ನಿಯಮ ಹಾಗೂ ಉಲ್ಲಂಘಿಸುವುದನ್ನೆಲ್ಲ ಆದರ್ಶವಾಗಿ ತೋರಿಸುವ ವ್ಯವಸ್ಥೆ ಇದೆ. ತಪ್ಪು ಮಾಡೋದು ಸಹಜ ಎಂದು ಒಪ್ಪೋ ಮನಸ್ಸಿಗೆ ಅದಕ್ಕೆ ತಕ್ಕ ಶಿಕ್ಷೆಯೂ ಸಹಜ ಎಂದು ಏಕೆ ಹೊಳೆಯೋದಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ವಿದ್ಯಾಭ್ಯಾಸ ಹಾಗೂ ಅರಿವು ಹೆಚ್ಚಿದಂತೆ ಜನರ ನಡವಳಿಕೆಗಳಲ್ಲಿ ಬದಲಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ.

ಸಂಪನ್ಮೂಲಗಳು ಇರಲಿ ಇಲ್ಲದಿರಲಿ, ಇದ್ದುದ್ದನ್ನು ಚೆನ್ನಾಗಿ ನೋಡಿಕೊಂಡು ಹೋಗುವ ಮನಸ್ಥಿತಿ ಮುಖ್ಯ. ಬಡದೇಶಗಳಲ್ಲಿ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಅದನ್ನು ಉಳಿಸಿಕೊಂಡು ಹೋಗಲು ಕಷ್ಟವಾಗಬಹುದು, ಆದರೆ ಎಲ್ಲಿಯವರೆಗೂ ಜನರು ಹಾಗೂ ಜನರ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಕೇವಲ ಸಂಪನ್ಮೂಲಗಳೊಂದೇ ಏನೂ ಮಾಡಲಾರವು. ಸಾವಿರಾರು ವರ್ಷಗಳಲ್ಲಿ ಬದಲಾಗದ ಜನರ ಅರಿವು ಇನ್ನು ನೂರಿನ್ನೂರು ವರ್ಷಗಳಲ್ಲಿ ಬದಲಾದೀತು ಎನ್ನುವುದಕ್ಕೇನು ಆಧಾರ ಅಥವಾ ಗ್ಯಾರಂಟಿ?

Thursday, March 19, 2009

ಮೂರುಗಾಲಿ ಆಟಿಕೆ

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!

ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.

ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.

ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.