ನಿಮ್ standard ನಿಮಗೆ, ನಮ್ standard ನಮಿಗೆ
ಸಾರ್, ನೀವಾದ್ರೂ ಒಂದಿಷ್ಟ್ ಸಹಾಯಾ ಮಾಡ್ತೀರಾ? ನಾನು ನಮ್ ದೇಶದಲ್ಲಿರೋ ಕಂಪನಿಗಳ ಬಗ್ಗೆ, ಶಾಲೆಗಳ ಬಗ್ಗೆ ಅವರ ವೆಬ್ಸೈಟ್ನಲ್ಲಿ ಓದಿದ ಹಾಗೆಲ್ಲ ಎಲ್ರೂ ’State of the art', 'Best in class', 'Best of the breed' ಮುಂತಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನ ಹೇಳ್ಕೋತಾರಲ್ಲ, ಇವುಗಳನ್ನೆಲ್ಲ ಅದರ ಫೇಸ್ ವ್ಯಾಲ್ಯೂ ಅಂತ ತೆಗೊಂಡ್ರೆ ಹೇಗೆ? ತೆಗೊಳ್ಳೋ ಬೇಡವೋ ಅನ್ನೋ ಸಂಕಷ್ಟ ನನ್ನದು.
State of the art - ಅಂತ ಇವ್ರಿಗೆಲ್ಲ ಯಾರು ಬಿರ್ದು ಕೊಟ್ಟೋರು? ನನ್ನ ತಲೇಲೀ ಬರೀ ಪ್ರಶ್ನೆಗಳೇ ತುಂಬಿ ಬರ್ತವೆ ನೋಡಿ - ಭಾರತದ ಕಂಪ್ನಿಗಳು-ಶಾಲೆಗಳೆಲ್ಲ ಸ್ಟೇಟ್ ಆಫ್ ದಿ ಆರ್ಟ್ ಆದ್ರೆ, ಭಾರತ ಯಾಕೆ ಇನ್ನೂ ಬಿದ್ದು ಕೊಳೀತಾನೇ ಇರೋದೂ ಅಂತ?
ನನ್ ಸ್ನೇಹಿತ್ರ ಹತ್ರ ಹೇಳಿದ್ರೆ ನಿನಗೆ ತಲೆ ಸಮ ಇದೆಯಾ ಅಂತ ನಂಗೇ ಬೈತಾರೆ! ಅದ್ಯಾವ್ದೋ ISO ಅಂತ ಸ್ಟ್ಯಾಂಡರ್ಡ್ ಹೇಳಿ ತಲೆ ತಿಂತಾರೆ. ISO-CMM ಅವೆಲ್ಲಾ ನಮ್ ದೇಶದ ಸ್ಟ್ಯಾಂಡರ್ಡುಗಳಲ್ಲ ಕಣ್ರೋ, ನಮಿಗೆ ನಮ್ ದೇಶದ ಸ್ಟ್ಯಾಂಡರ್ಡೇ ಚೆಂದ, ಆ ಅಳತೇ ಕೋಲಿನಲ್ಲಿ ಅಳೆಯೋದೇನಾದ್ರೂ ಇದ್ರೆ ಹೇಳ್ರಿ ಅಂತಂದ್ರೆ ಬೆಬ್ಬೆಬ್ಬೆ ಅಂತಾರೆ. ನಮ್ಮನ್ನ ಅಳೆಯೋದಿಕೆ ಮಂದೀ ಕೋಲ್ಯಾಕೆ? ಮಂದೀ ಕೋಲಿನ್ಯಾಗ್ ನಮ್ಮನ್ ಅಳಕೊಂಡು ನಾವು ಯಾರನ್ನ ಹೆಂಗ್ ಕಂಪೇರ್ ಮಾಡೋದು ಅಂತ ಯೋಚ್ಸೀ ಯೋಚ್ಸೀ ತಲೆ ನುಣ್ಣಗಾತೇ ಹೊರತು ಅವರಪ್ಪನಾಣೆ ಇವತ್ತಿಗೂ ಉತ್ರಾ ಹೋಳೆದಿಲ್ಲಾ ನೋಡ್ರಿ.
ನಮ್ ದೇಶದಾಗೋ ನೂರು ಕೋಟಿ ಭರ್ತಿ ಜನಾ ಸಾರ್. ನೂರು ಕೋಟಿ ಜನಕ್ಕೆ ಸಾವಿರ ಕೋಟಿ ಮನಸು ಕೊಟ್ಟಾನೆ ಆ ದೇವ್ರು. ಅಂತರದಾಗೆ ನಾನು ಅದೆಲ್ಲೋ ಕುತಗಂಡು ಈ ಇಂಟರ್ನೆಟ್ಟು ಅನ್ನೋ ಪ್ರಪಂಚದೊಳಗಿಂದ ಇಣಕಿ ಹಾಕಿ ನೋಡಿದ್ರೆ ಈ ವೆಬ್ಸೈಟ್ಗಳನ್ನ ಬರೆಯೋರು ಬರೆಸೋರಿಗೆ ಒಂದಿಷ್ಟು ಕಾಮನ್ ಸೆನ್ಸ್ ಬ್ಯಾಡಾ? ತಮಿಗೆ ಏನೇನು ಬೇಕೋ ಅವನ್ನೆಲ್ಲ ಬರಕಂಡವರೆ ಅದರ ಪ್ರಕಾರ ಎಲ್ಲರ ಶಾಲೀನೂ ಬೆಸ್ಟ್ ರೀ. ಎಲ್ಲರ ಹತ್ರನೂ ’ದ ಬೆಸ್ಟ್’ ಟೀಚರ್ಸ್ ಇದಾರ್ ರೀ. ಎಲ್ಲಾ ಕಂಪನೀ ಒಳಗೂ ’ದ ಬೆಸ್ಟ್’ ಎಂಪ್ಲಾಯೀಸ್ ಇರೋರ್ ರೀ. ಹಿಂಗೆಲ್ಲಾ ಅಂದೂ ಅಂದೂ (ಬರೆದೂ ಬರೆದೂ) ಮೂಗಿಗೆ ತುಪ್ಪಾ ಸವರೋದ್ರಲ್ಲಿ ಶ್ಯಾಣ್ಯಾರ್ ನೋಡ್ರಿ ನಮ್ ಜನ. ನನ್ ಕೇಳಿದ್ರೆ ಈ ವೆಬ್ಸೈಟ್ಗಳ ಕಂಟೆಂಟ್ ಸ್ಕ್ರೂಟಿನಿ ಮಾಡೋಕ್ ಒಂದಿಷ್ಟ್ ಜನ ಇರಬೇಕ್ರಿ ಅಪ್ಪಾ. ಹಂಗೇನಾರಾ ಸುಳ್ಳೂ-ಪಳ್ಳೂ ಬರಕೊಂಡೋರನ್ನ ಇರಾಕ್-ಇರಾನ್ನ್ಯಾಗೆ ಹೊಡೆದು ಕೊಂದಂಗೆ ಕಲ್ನ್ಯಾಗ್ ಹೊಡೀಬಕು ಅಂತೀನಿ.
ಯಾರ್ ಹತ್ರ ದ ಬೆಸ್ಟ್ ಪ್ರಾಸೆಸ್ಸ್ ಇದಾವ್ರೀ? ಮನ್ಷಾ ಆದೋನು ಭೂಮಿಯಿಂದ ಚಂದ್ರಂಗೆ ರಾಕೇಟ್ ಕಳ್ಸಿ ಆರಾಮಾಗಿ ವಾಪಾಸ್ ತರಸೋದನ್ನ ಬಲ್ಲ, ಆದ್ರೆ ನೆಟ್ಟಗೆ ಸಾಫ್ಟ್ವೇರ್ ಡೆವಲಪ್ ಮಾಡೋದ್ ಕಲೀಲಿಲ್ಲ ಅಂತೀನಿ. ಎಲ್ಲೆಲ್ಲಿ ಕೋಡ್ ಮಾಡ್ತಾರೋ ಅಲ್ಲಲ್ಲಿ ಬಗ್ಗಳು ಇರ್ತಾವೆ, ಎಲ್ಲೆಲ್ಲಿ ಬಗ್ಗಳು ಇರ್ತಾವೋ ಅಲ್ಲಲ್ಲಿ ಬ್ರೇಕ್ಗಳು ಇರ್ತಾವೆ. ಇವೆಲ್ಲ ಮನುಜಕುಲ ಅನ್ನೋದು ತಮ್ಮ ಜಾಬ್ ಸೆಕ್ಯೂರಿಟಿಗೆ ಮಾಡಿಕೊಂಡಿರೋ ಒಂದು ವ್ಯವಸ್ಥೆ ಅನ್ಸೋಲ್ಲ? ನನ್ ಕೇಳಿದ್ರೆ ನೆಟ್ಟಗೆ ಒಂದು ತುಣುಕು ಕೋಡ್ ಬರೀದಿರೋ ಜನಕ್ಕೆ ಇನ್ನೇನು ಬಂದೀತು? ಇವತ್ತೇನಾದ್ರೂ ಇದೇ ಜನ ಪಿರಮಿಡ್ಡುಗಳನ್ನ ಕಟ್ಟಿದ್ರೆ ಇಷ್ಟೊತ್ತಿನ ಮಳೀಗೆ ಆ ಸೂರು ಸೋರಿ ಹೋಗ್ತಿತ್ತೋ ಏನೋ ಯಾರಿಗ್ ಗೊತ್ತು?
ನಂಗ್ ಗೊತ್ತು ನಾನೊಬ್ಬ ಹುಂಬಾ ಅಂತಂದು. ಎಲ್ರೂ ಒಳ್ಳೊಳ್ಳೇ ಪೊಗದಸ್ತಾದ ವೆಬ್ಸೈಟುಗಳನ್ನ ಕಟ್ಟಿಕೊಂಡು ಅದು ಹೇಗಿದೆಯೋ ಹಾಗೇ ನಾವಿದ್ದೇವೆ ಅಂತ ನಂಬಿಸೊದಕ್ಕೆ ಹೋಗ್ತಿದ್ದಾರೆ ಆದ್ರೆ ನಾನು ಅದನ್ನೆಲ್ಲ ನಂಬೋಲ್ಲ ಅಂತ. ಚರ್ಮದ ಕೆಳಗೆ ಅದೆಷ್ಟರ ಮಟ್ಟಿಗೆ ಇವರಿವರ ತರ್ಕ ಇಳಿದಿದೆ ಅಂತ ಕೆರೆದು ನೋಡಬೇಕು ಅನ್ಸುತ್ತೆ, ಆದ್ರೆ ಏನ್ ಮಾಡ್ಲಿ ವೆಬ್ ಸೈಟಿಗೆ ಚರ್ಮಾ ಅನ್ನೋದೇ ಇಲ್ವೇ? ಚರ್ಮ ಅಂತಿಲ್ಲದ ವೆಬ್ಸೈಟಿನ ಮೂಲ್ಕ ಜನರನ್ನ ನಂಬಿಸಿ ಆಕರ್ಷಿಸಿ ಬಿಸಿನೆಸ್ಸು ಮಾಡೋ ಇವರಿಗೆಲ್ಲ ನನ್ನಂಥ ದಡ್ರು ಗಿರಾಕಿಗಳ್ಯಾಕ್ ಆಗ್ಬೇಕು. ಈ ಬುದ್ಧಿವಂತ ಕಂಪ್ನಿಗಳಿಗೆ ಶಾಲೆಗಳಿಗೆ ಬುದ್ಧಿವಂತ ಕಷ್ಟಮರುಗಳೇ ಇರ್ಲಿ, ನಮ್ಮಂತ ದಡ್ಡರೆಲ್ಲ ಇನ್ಯಾವ್ದೋ ಮೂಲೆ ಸೇರ್ಲಿ ಏನಂತೀರಿ?
ನಿಮ್ standard ಏನೋ ಎಂತೋ, ನಮ್ದಂತೂ ಫೈವ್ ಸ್ಟಾರೂ ಅಲ್ಲ, ಸ್ಟೇಟ್ ಆಫ್ ದಿ ಆರ್ಟ್ ಇರ್ಲಿ ಕಾಮರ್ಸೂ ಅಲ್ಲ. ಅದಿರ್ಲಿ ಈ best of the class ಅನ್ನೋದಕ್ಕೆ state of the science ಅನ್ನೋದನ್ನ ಬಿಟ್ಟು art ಅಂತ ಯಾಕ್ ಅಂತಾರೆ? ನಾವು ಯಾವ್ದೂ ಜರ್ಮನ್ನೂ-ಜಪಾನರ ISO ಗೂ ತಲೆ ತೂಗೋಲ್ಲ. ನಮಿಗೆ ಬದುಕನ್ನ ಕಲ್ಸೋ ಪಾಠಗಳನ್ನ ಹೇಳ್ಕೊಡೋ ಬೇಸಿಕ್ ಎಜುಕೇಶನ್ ಇರ್ಲಿ ಅಂತ ಗುರುಕುಲದ ಕಥೆ ಹೇಳ್ತಿಲ್ಲ ನಾನು, ಇದ್ದಿದ್ದರಲ್ಲಿ ತಮ್ಮ ತಮ್ಮ ವೆಬ್ಸೈಟುಗಳಲ್ಲಿ ’ನಮ್ ಎಂಪ್ಲಾಯಿಗಳು ಹಂಗೆ-ಹಿಂಗೆ’ ಅಂತ ನಿಜವನ್ನಾದ್ರೂ ಹೇಳ್ಲಿ ಅಂತ ಅಷ್ಟೇ. ಕಪ್ಪೆಗಳನ್ನ ತಕ್ಕಡಿಯಲ್ಲಿಟ್ಟು ತೂಕಾ ಮಾಡೋರ್ ಹಾಗೆ ಎಂಪ್ಲಾಯಿಗಳನ್ನ ಹೈರು-ಫೈರು ಮಾಡೋ ಕಂಪನಿಗಳಲ್ಲಿ ಬಿಸಿನೆಸ್ಸು ಪ್ರಾಸೆಸ್ಸುಗಳು ಹೇಗೆ ನೆಲೆ ನಿಲ್ಲುತ್ವೆ? ಎಲ್ಲಿ ಬಿಸಿನೆಸ್ಸ್ ನೆಟ್ಟಗೆ ಗೊತ್ತಿರಲ್ವೋ ಅಲ್ಲಿ ತುಂಬಿ ತುಳುಕೋ ಟೆಕ್ನಾಲಜಿ ತಗೊಂಡು ಯಾವನ್ ಉದ್ದಾರಾಗಿದಾನೆ ನೀವೇ ಹೇಳಿ.