Sunday, July 06, 2008

ಕರಿಹೈದನ ಬರ್ಡನ್ನು

’ಏ, ಸೇರ್ಸಿಕೊಳ್ಳೋಲ್ಲ ಹೋಗೋ’
ಎಂದು ಕಂದು ತಂಡದವರು ಬೈದು ತಳ್ಳಿದಾಗಲೇ ಕರಿಹೈದನಿಗೆ ತಾನು ತನ್ನ ಹಳೆಯ ತಂಡವನ್ನು ಬಿಟ್ಟು ಬಂದು ಪೇಚಿಗೆ ಸಿಕ್ಕಿಕೊಂಡಿದ್ದು ತನ್ನ ಮೇಲೆಯೇ ಅಸಹ್ಯವನ್ನು ಮೂಡಿಸತೊಡಗಿತು.

’ಇಲ್ರೋ ನಾನು ಅದೇನೇನೋ ಹೊಸ ಹೊಸ ವರಸೆಗಳನ್ನ ಕಲಿತಿದೀನಿ, ನನ್ನನ್ನೂ ಆಟಕ್ಕ್ ಸೇರಿಸ್‌ಕೊಂಡು ನೋಡ್ರಿ, ಒಂದು ಚಾನ್ಸ್ ಕೊಡ್ರಿ...’ ಎಂದಿದ್ದನ್ನ ಕಂದು ತಂಡದವರು ಯಾರೂ ಅಷ್ಟೊಂದು ಹಚ್ಚಿಕೊಂಡಂತೆ ಅನ್ನಿಸಲೇ ಇಲ್ಲ, ಜೊತೆಗೆ ಕಂದು ತಂಡದಲ್ಲಿ ಇತ್ತೀಚೆಗೆ ಸೇರಿಸಿಕೊಂಡ ಹೊಸ ಹುರುಪಿನ ಆಟಗಾರರೆಲ್ಲ ಒಳ್ಳೇ ತರಬೇತಿ ಪಡೆದು ಕರಿಹೈದ ಆ ತಂಡವನ್ನು ಬಿಡುವಾಗ ಏನೇನು ಇರಲಿಲ್ಲ ಏನೇನು ಇದ್ದಿದ್ದರೆ ಚೆನ್ನಿತ್ತು ಎಂದು ಹಲಬುತ್ತಿದ್ದನೋ ಅದೆಲ್ಲವೂ ಅಲ್ಲಿ ಮೇಳೈಸಿದಂತಿತ್ತು.

ಯಾವ ಯಾವ ಬಗೆಗಳಿವೆ - ದೈನ್ಯದಿಂದ ಬೇಡಿಕೊಂಡಿದ್ದಾಯಿತು, ಹೊಸ ಉಪಾಯಗಳನ್ನು ಹೇಳಿಕೊಡುತ್ತೇನೆ ಎಂದು ಮೂಗಿನ ಮೇಲೆ ತುಪ್ಪ ಸವರಿದ್ದಾಯಿತು, ಇನ್ನು ಹೆದರಿಸುವುದೊಂದೇ ಬಾಕಿ ಎಂದು ಅನ್ನಿಸಿದ್ದೇ ತಡ, ಕರಿಹೈದ,
’ನೋಡ್ರೋ, ನನ್ನನ್ನೇನಾದ್ರೂ ಆಟಕ್ಕೆ ಸೇರಿಸಿಕೊಳ್ಳದೇ ಹೋದ್ರೆ you don't know what you are missing!' ಎಂದು ಬ್ರಹ್ಮಾಸ್ತ್ರವನ್ನು ಎಸೆದಷ್ಟೇ ಸುಖವಾಗಿ ಕಣ್ಣುಗಳನ್ನು ಇನ್ನೂ ದೊಡ್ಡದಾಗಿ ತೆರೆದು ನಿರೀಕ್ಷೆಯಲ್ಲಿ ಒಂದು ಕ್ಷಣದ ಮೌನವನ್ನು ಸಹಿಸಿಕೊಂಡ.

ಕಂದು ತಂಡದ ಆಟಗಾರರು ಇವನು ಹೇಳಿದ ಮಾತಿಗೆ ಒಂದು ಕ್ಷಣ ಸ್ತಂಭೀಭೂತರಾದರು, ಅವರ ಆಟದ ವರಸೆಗಳು ’ಲಂಡನ್-ಲಂಡನ್’ ಆಟದಲ್ಲಿ ಆಟಗಾರರು ಕಿಂಚಿತ್ತೂ ಅಲುಗಾಡದೇ ನಿಲ್ಲುತ್ತಿದ್ದರಲ್ಲ ಹಾಗಾದರು, ಆದರೆ ಕರಿಹೈದನ ಮೋಡಿಗೆ ಯಾರೂ ಬಿದ್ದಂತೆ ಕಾಣಲಿಲ್ಲ, ಇವನು ಹೇಳಿದ ಮಾತನ್ನು ಕೊಡಗಿಕೊಂಡು ಕಂದು ತಂಡ ಮತ್ತೆ ತಮ್ಮ ತಮ್ಮ ವರಸೆಗಳನ್ನು ಬದಲಾಯಿಸಿ ತಮ್ಮ ತಮ್ಮ ಆಟಗಳಲ್ಲಿ ಲೀನವಾದರು, ಕರಿ ಹೈದನ ಮೌನ ಅವನ ಹೊಟ್ಟೆಯೊಳಗೆ ಕಲಸುತ್ತ ಅದು ಇದ್ದಲ್ಲೇ ಹಸಿವಾದ ಹೊಟ್ಟೆಯಂತೆ ಕುರ್ ಕುರ್ ಸದ್ದು ಮಾಡಿ ಸುಮ್ಮನಾಯಿತು.

ಬಿಳಿತಂಡವನ್ನು ಬಂದು ಸೇರಿ ಅದರಲ್ಲಿದ್ದನ್ನು ಇವನಿಗೆ ತೋಚಿದಷ್ಟು ಅನುಭವಿಸಿ ಈಗ ನಡುನಡುವೆಯೇ ಕೈ ಬಿಟ್ಟು ಹಳೆಯ ಕಂದು ತಂಡವನ್ನು ಸೇರುತ್ತೇನೆ ಎನ್ನುವ ಕರಿಹೈದನ ವರಸೆಯನ್ನು ಅವನ ಸ್ನೇಹಿತರು ಹಗಲೂರಾತ್ರಿ ಆಡಿಕೊಂಡು ನಗುತ್ತಾರೆ. ಆಗಾಗ್ಗೆ, ’ಮುಠ್ಠಾಳ’ ಎಂದು ಗುನಗಾನ ಮಾಡುತ್ತಾರೆ. ’ಇಲ್ಲಿರಲಾರದವನು ಅಲ್ಲಿ ಹೋಗಿ ಮಾಡಿ ಕಡಿಯುವುದೇನು’ ಎಂದು ಛೇಡಿಸುತ್ತಾರೆ. ’ಹಸಿವೋ ಸಮೃದ್ಧಿಯೋ ನಮ್ಮದು ನಮಗೆ ಚೆಂದ’ ಎಂದು ಕರಿಹೈದ ಯಾವುದೋ ಕಾಡಕವಿಯ ಪಂಕ್ತಿಗಳನ್ನು ಅರಹುತ್ತಾ ಇಂದಲ್ಲ ನಾಳೆ ಕಂದು ತಂಡವನ್ನು ಸೇರಿಯೇ ಸೇರೇನು ಎಂದು ಕನಸು ಕಾಣುವುದನ್ನು ಮಾತ್ರ ಬಿಡಲೊಲ್ಲ.

ಕರಿಹೈದ ಮೊದಲು ಕಂದುತಂಡವನ್ನು ಬಿಟ್ಟು ಬಿಳಿತಂಡವನ್ನು ಸೇರಿಕೊಂಡಾಗ ಆತನಿಗೆ ಹೀಗೊಂದು ದಿನ ಬವಣೆಯನ್ನು ಅನುಭವಿಸಬಹುದು ಎಂದೆನಿಸಿರಲಿಲ್ಲ. ಹೀಗೆ ತಂಡಗಳನ್ನು ಬದಲಾಯಿಸಿದವರು ಯಾರೂ ಮತ್ತೆ ಪುನಃ ಪಕ್ಷಾಂತರ ಮಾಡುವುದು ಕಡಿಮೆಯಾದರೂ ಹಾಗೆ ಅಂದಿನ ಲೆಕ್ಕದಲ್ಲಿ ಸಿಕ್ಕ ಹಾಗೆ ಒಳಿತು-ಕೆಡಕುಗಳನ್ನು ಯಾರೂ ವಿವರಿಸಿ ಹೇಳಿದ್ದಂತೂ ಇಲ್ಲ. ಕರಿಹೈದ ಬೇಕಾದಷ್ಟು ತೊಳಲಾಡುತ್ತಾನೆ - ಒಮ್ಮೆ ದ್ರಾಕ್ಷಿ ಸಿಗದ ನರಿಯ ಹಾಗೆ ಆ ಹುಳಿ ದ್ರಾಕ್ಷಿ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂದು ಹೂಂಕರಿಸುತ್ತಾನೆ, ಮತ್ತೊಮ್ಮೆ ಕಂದು ತಂಡದಲ್ಲಿ ಆಡಿಬೆಳೆದು ಓಡಿಯಾಡಿದ ಹಾಗೆ ನೆನಪಿಸಿಕೊಂಡು ನಾಸ್ಟಾಲ್ಜಿಯಾವನ್ನು ಹೊಗಳುವುದೇ ಬದುಕು ಎಂದುಕೊಳ್ಳುತ್ತಾನೆ.

ಹೆಚ್ಚಾಗಿ ವಿಷಾದ ಆವರಿಸುತ್ತದೆ, ಅದರ ಬೆಳಕಿನ ನೆರಳಿನ ಬೆನ್ನಿಗೆ ಹೊಸ ತತ್ವಗಳು ಮೂಡಿಬರುವಂತೆ ಕಾಣಿಸುತ್ತದೆ - ’ಯಾವ ತಂಡದಲ್ಲಿದ್ದು ಆಡಿದರೇನು, ವಿಶ್ವವೇ ಒಂದು ತಂಡ. ಆ ತಂಡ-ಈ ತಂಡ ಇವೆಲ್ಲ ಬರೀ ಕಾಗದ ಪತ್ರಗಳ ಮೇಲಿನ ಒಡಂಬಡಿಕೆ ಮಾತ್ರ, ಅವರವರ ಹೃದಯದಲ್ಲೇನಿದೆ ಅದು ಮುಖ್ಯ. ಬಿಳಿ ತಂಡದಲ್ಲಿದ್ದುಕೊಂಡೇ ಕಂದು ತಂಡಕ್ಕೆ ಸಪ್ಪೋರ್ಟ್ ಮಾಡಲಾಗದೇನು, ಹೊರಗಿನಿಂದ ಅವರವರ ಬೆಂಬಲವನ್ನು ಯಾರೂ ಸೂಚಿಸಬಹುದಲ್ಲ. ಈ ಆಟಗಳೇ ಹೀಗೆ - ಇದರ ಹಿಂದಿನ ಸಂಸ್ಕೃತಿ, ರಾಜಕೀಯ, ಧರ್ಮ ಇವೆಲ್ಲ ಒಂದೇ ಎಲ್ಲಿದ್ದರೂ ಹೇಗಿದ್ದರೂ!’

ಹೀಗೆ ಹಲವಾರು ತತ್ವಗಳು ಮೈತಳೆತಳೆದು ಅವುಗಳು ತಮ್ಮಷ್ಟಕ್ಕೆ ತಾವು ಒಂದಕ್ಕೊಂದು ತೀಡಿಕೊಂಡು ಕಾಡಿಕೊಂಡು ಗಡುಸಾದ ಕಪ್ಪಗಿನ ಕಲ್ಲಿದ್ದಿಲು ಕೆಂಪಾಗಿ ಬೆಂಕಿಯಾಗಿ ನಿಗಿನಿಗಿ ಕೆಂಡವಾಗಿ ಕೊನೆಗೆ ಹಗುರವಾದ ಬಿಳಿಯ ಬೂದಿಯಾಗುವಲ್ಲಿಯವರೆಗಿನ ರೂಪಾಂತರವನ್ನು ಪಡೆದುಕೊಳ್ಳುತ್ತವೆ. ಅಲ್ಲಲ್ಲಿ ಕಿಡಿಗಳೋ ಅಥವಾ ಬೆಂಕಿ ಇರುವ ತಾವೋ ತಾವಿದ್ದ ಕಡೆ ಮೊದಲು ಸುಡುವಂತೆ ಹೊಸ ತತ್ವಗಳ ಚುರುಕು ಅದೆಷ್ಟರ ಮಟ್ಟಿಗೆ ಏರುತ್ತದೆ ಎಂದರೆ ಪಕ್ಕದಲ್ಲಿನ ಏರ್‌ಕಂಡೀಷನರ್ ಬೀಸುವ ತಂಗಾಳಿಯೂ ತನ್ನ ತಂಪನ್ನು ಈ ಬಿಸಿಯಲ್ಲಿ ಕಳೆದುಕೊಳ್ಳುತ್ತದೆ.

ಕ್ಯಾನ್ಸರ್ ರೋಗಿ ತನ್ನ ಕ್ಯಾನ್ಸರ್ ಅನ್ನು ಒಪ್ಪಿಕೊಂಡು ಸಮಾಧಾನಿಯಾಗುವ ಮೊದಲು ಬೇಕಾದಷ್ಟು ಕಿರಿಚಾಡಿ ಕೂಗಾಡಿ ಅವರಿವರಿಗೆಲ್ಲ ಬೈದು ದೇವರನ್ನೂ ಸೇರಿಸಿಕೊಂಡು ಮತ್ತೆ ಸಂತನ ಮನಸ್ಥಿತಿಯನ್ನು ತಂದುಕೊಳ್ಳುವಂತೆ ಕರಿಹೈದ ಕಂದು ತಂಡದವರನ್ನು ಕುರಿತು ಸಹಸ್ರನಾಮ ಶುರುಮಾಡಿ ಸುಮ್ಮನಾಗುತ್ತಾನೆ:
’ಯಾರಿಗ್ ಬೇಕ್ ಹೋಗಿ ನಿಮ್ಮ ತಂಡದಲ್ಲಿ ಆಡೋ ಭಾಗ್ಯ. ನೀವೋ ನಿಮ್ಮ ಪ್ರಾಸೆಸ್ಸೋ ನಿಮ್ಮ ರೂಲ್ಸ್-ರೆಗ್ಯುಲೇಷನ್ನುಗಳೋ ಎಲ್ಲವೂ ಸಾಯ್ಲಿ! ನನ್ನಂತಹವರ ಯೋಗ್ಯತೆಯನ್ನು ಇವತ್ತಿಗೂ ಕಂಡು ಮಣೆಹಾಕದ ನಿಮ್ಮ ಸಂಸ್ಕೃತಿಗಿಷ್ಟು ಧಿಕ್ಕಾರವಿರಲಿ. ನನ್ನಂತೋರುನ್ನ ಸೇರಿಸಿಕೊಳ್ದೇ ಅದು ಹೆಂಗ್ ಆಡ್ತೀರೋ ಆಡ್ರಿ ನೋಡೇ ಬಿಡ್ತೀನಿ. ನಿಮ್ಮಲ್ಲಿನ ಕೆಟ್ಟ ಪರಂಪರೆಯೇ ಸಾಕು ನಿಮ್ಮವರ ಕಾಲುಗಳನ್ನು ಎಳೆದೆಳೆದು ನೀವಿದ್ದಲ್ಲೇ ನಿಮ್ಮನ್ನು ಕೂರಿಸಲು, ನೀವು ಮುಂದೆ ಬರುವ ಸಾಧ್ಯತೆಯೇ ಇಲ್ಲ - ಎಂದಿಗೂ ಯಾವತ್ತೂ. ಎಲ್ರೂ ಹಾಳಾಗ್ ಹೋಗಿ...’

ಕರಿಹೈದನ ಆಕ್ರಂದನ ಮುಗಿಲು ಮುಟ್ಟುತ್ತೆ. ನಂತರ ಧೀರ್ಘ ಸಮಾಧಾನ ಮೂಡುತ್ತೆ. ಕರಿಹೈದ ಸಂತನಂತೂ ಆಗೋದಿಲ್ಲ, ತನ್ನ ಬಿಳಿತಂಡದವರ ಜೊತೆ ಸರಿಯಾಗಿ ಮನಸಿಟ್ಟು ಆಡಲೊಲ್ಲ, ಹಳೆಯ ಕಂದುತಂಡದವರ ನೆನಪನ್ನು ಬದಿಗಿಟ್ಟು ಮುಂದಿನ ದಾರಿಯನ್ನು ಮಾತ್ರ ನೋಡೋದಿಲ್ಲ. ಹಲವಾರು ಲೇನುಗಳು ಇರುವ ನುಣುಪಾದ ರಸ್ತೆಯ ಮೇಲೆ ನಾಗಾಲೋಟದಿಂದೋಡುವ ದೊಡ್ಡ ಕಾರಿರುವ ಕರಿಹೈದ ಮುಂದಿನ ಅಗಲವಾದ ವಿಂಡ್‌ಶೀಲ್ಡನ್ನು ನೋಡಿ ತಾನು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುವ ನಡುನಡುವೆ ಚಿಕ್ಕದಾದ ಹಾಗೂ ಚೊಕ್ಕದಾದ ರಿಯರ್ ವ್ಯೂ ಮಿರರ್ ಅನ್ನು ಅಗತ್ಯಕ್ಕಿಂತ ಹೆಚ್ಚಾಗಿ ನೋಡಿಕೊಂಡಿರುವುದನ್ನು ಕಂಡ ಕರಿಹೈದನ ಸ್ನೇಹಿತರು ಕರಿಹೈದನ ಮನಸ್ಸಿನಲ್ಲಿರುವುದನ್ನು ಗೊತ್ತು ಮಾಡಿಕೊಂಡವರಂತೆ ಅವರೊಳಗೇ ಹಲ್ಲುಕಿರಿದುಕೊಂಡಿರುವುದನ್ನು ನೆನೆಸಿಕೊಂಡು ಕರಿಹೈದನ ಮನಸ್ಸು ಮತ್ತಷ್ಟು ಪಿಚ್ಚಾಗುತ್ತದೆ.

5 comments:

Keshav Kulkarni said...

ಸತೀಶ್,
ಅನಿವಾಸಿ ಭಾರತೀಯರ ತೊಳಲಾಟವನ್ನು ತುಂಬ ಚೆನ್ನಾಗಿ ಬರೆದಿದ್ದೀರಿ. ಇಲ್ಲಿಯೂ ಸಲ್ಲದ ಅಲ್ಲಿಯೂ ಸಲ್ಲದ ತ್ರಿಶಂಕುಗಳು ನಾವೆಲ್ಲ. ಇಲ್ಲಿಯವರ ಹಾಗೆ ಬಾಳಲಾಗದೆ, ನಮ್ಮವರೊಡನೆ ಮತ್ತೆ ಬದುಕಲಾಗದೆ ಸದಾ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗುತ್ತಿದೆ.
ಕೇಶವ

Anonymous said...

visiting you after a long time..

three words..mid life crisis:) or is it two?

any way..list madideera yavattadru..pros and cons.. I think just focusing on pros of where you live can make us all very happy people:)

Just embrace US citizenship..

may be just a gender thing..it's easy for me to say.. I am just a materialistic woman who loves corporate america:)

-S

sunaath said...

ಕರಿಹೈದನ ತುಮುಲ ಚೆನ್ನಾಗಿ ವ್ಯಕ್ತವಾಗಿದೆ. ಆದರೆ ಇದಕ್ಕೊಂದು ಸಮಾಧಾನವಿಲ್ಲವೆ?

ಕನಸು said...

wonderful

ಒಂದು ಸಮುದಾಯದ ತೊಳಲಾಟ ಮನ ಮುಟ್ಟುವಂತೆ ತೆರೆದುಕೊಂಡಿದೆ. ತುಂಬಾ ಕಾಡುವ ಬರಹ ಶೈಲಿ ನಿಮ್ಮದು...

Satish said...

ಕೇಶವ್,
ನಿಮ್ಮ ಬ್ಲಾಗ್‌ನಲ್ಲಿ ’ಸತೀಶ್ ಬರಹ’ದಲ್ಲಿ ಇದನ್ನು ಸೇರಿಸಿದ್ದಕ್ಕೆ ಧನ್ಯವಾದಗಳು, ರಿವರ್ಸ್ ಮೈಗ್ರೇಶನ್ನ್ ಬಗ್ಗೆ ಓದುತ್ತಾ ತಲೆಕೆರೆದುಕೊಳ್ಳುತ್ತಾ ಇದ್ದ ಹಾಗೆ ಅಲ್ಲಿನ ಸವಾಲುಗಳು ದುತ್ತನೆ ಪ್ರತ್ಯಕ್ಷವಾದ ಗುಂಗಿನಲ್ಲಿ ಬರೆದ ಬರಹ ಇದು, ಹೆಚ್ಚು ಸಮಯವನ್ನು ವ್ಯಯಿಸದೇ ಹೇಳಬೇಕಾದುದನ್ನು ನೇರವಾಗಿ ಹೇಳಿರುವ ಪ್ರಯತ್ನವಷ್ಟೆ.

ಅನಾಮಧೇಯರೇ,
(ಮಧ್ಯ-ದಕ್ಷಿಣ ನ್ಯೂ ಜರ್ಸಿಯಲ್ಲಿ ನನಗೆ ಪರಿಯಚವಿರುವ ಕನ್ನಡ ಮಹಿಳೆಯರು ಹೆಚ್ಚು ಜನರಿಲ್ಲ! :-)
ಇದು ಮಿಡ್ ಲೈಫ್ ಕ್ರೈಸಿಸ್ ಅಂತೂ ಅಲ್ಲ - ಅಥವಾ ಇದು ಅಮೇರಿಕನ್ ಬದುಕಿನ ಮಿಡ್ ಲೈಫ್ ಕ್ರೈಸಿಸ್ ಆದರೆ ಅದು ಇನ್ನೂ ಚಿಂತಾಜನಕ - ಇಲ್ಲಿ ಇನ್ನೂ ಹತ್ತು-ಹನ್ನೆರೆಡು ವರ್ಷ ಇರೋರು ಯಾರು?
ಆಮೇಲೆ - ಮಿಡ್ ಲೈಫ್ ಕ್ರೈಸಿಸ್ ಬಂದಾಗ - ಟರ್ನ್‌ಪೈಕ್ ನಲ್ಲಿ ಸ್ಪೋರ್ಟ್ಸ್ ಕಾರ್ ಓಡಿಸಿಕೊಂಡು ಹೋಗೋಣ ಅಂತ ಇದ್ದೆ!
ಥ್ಯಾಂಕ್ಸ್ ಫಾರ್ ದ ಫೀಡ್‌ಬ್ಯಾಕ್.

ಸುನಾಥ್,
ಧನ್ಯವಾದಗಳು - ಸಮಾಧಾನ ಇದೆ, ಆದರೆ ಆಪ್ಷನ್ನುಗಳನ್ನು ಎಲ್ಲ ರೀತಿಯಿಂದ ನೋಡಬೇಕಾದಾಗ ಈ ರೀತಿಯ ಸಂದಿಗ್ಧಗಳು ಸಹಜ, ನನ್ನ ಅನಿಸಿಕೆ

ಕನಸು,
ಧನ್ಯವಾದಗಳು, ಹೀಗೆ ಭೇಟಿ ಕೊಡುತ್ತಿರಿ.